Advertisement
ನಾ ದಿವಾಕರ ಬರೆದ ಈ ದಿನದ ಕವಿತೆ

ನಾ ದಿವಾಕರ ಬರೆದ ಈ ದಿನದ ಕವಿತೆ

ಇನ್ನೆಷ್ಟು ದಿನ ಹೀಗೆ…

ನಾನೂ ನಿಮ್ಮೊಳಗೊಬ್ಬ
ಒಪ್ಪುವಿರಾದರೆ,
ಒಳಬರುವೆ ಅಪ್ಪುವಿರಾ
ಬಾಹುಗಳೆನ್ನದೇ
ಹೆಗಲು
ಬಾಗಿದೆಯಷ್ಟೇ
ಋಣಭಾರ
ಎಣಿಸದಿರಿ ಶ್ರಮ ಫಲ
ಹೊತ್ತುದೇನೆಂದಿರಾ
ಹಿತ್ತಲ ಬದಿ ಕಣ್ಣಾಡಿಸಿ
ಖಾಲಿಯಾಗಿದೆ ;

ನನ್ನಜ್ಜನೂ ಹೀಗೇ
ನಿಮ್ಮಜ್ಜನ ಕಾಲ
ನಿತ್ಯ ಕಾಯಕ ಎಸೆದ ಕಡ್ಡಿ
ತ್ಯಜಿಸಿದುದೆಲ್ಲವೂ, ಅದೋ
ಅಲ್ಲಿತ್ತು ತಿಪ್ಪೆ ಈಗಿಲ್ಲ ಬಿಡಿ
ಧೂಪ ದೀಪದ ಮಳಿಗೆ
ಅವನ ಹೆಗಲಿನಲಿ
ಬೆವರೂ ಜಾರುತಿತ್ತಂತೆ
ಇಳಿಜಾರು ಬಂಡೆಯಂತೆ ;

ನನ್ನಪ್ಪನ ಮಾತು ಬಿಡಿ
ಮುಂದುವರೆದ ಭಾಗ
ನಿಮ್ಮಜ್ಜನ ಪಟ ನೋಡಿ
ಜರಿ ಪೇಟ ಕೊರಳ ಚಿನ್ನ
ಹುರಿ ಮೀಸೆ ಗತ್ತು ಗಮ್ಮತ್ತು
ಹಮ್ಮು ಬಿಮ್ಮು ಏನೆಲ್ಲಾ
ಇತಿಹಾಸ ಎನ್ನುವಿರಾ
ಈಗ ಅಗೆಯುತ್ತಿದ್ದೇವೆ
ಮೂಳೆ ತುಂಡುಗಳೆಲ್ಲಾ
ಒಂದೇ ಬಣ್ಣ !

ಕಾರುಣ್ಯದ ಹಸಿವಿಲ್ಲ
ಔದಾರ್ಯದ ಹಂಗೇಕೆ
ನವಿರು ನುಡಿ ನಾರುಮಡಿ
ತೆರೆಮರೆಯಲದೇನು ನಾತ
ಗ್ರಹಿಸಬಲ್ಲೆವು ಸ್ವಾಮಿ
ಭುಜ ಜಗ್ಗಿದೆ ಜಗ್ಗದ
ಗುಂಡಿಗೆಯೂ ಇದೆ
ಬೆವರಿನೊಡೆಯರು
ನೆತ್ತರಿನಾಳುಗಳಲ್ಲ !

ಎದೆ ಸೀಳುವ ಯುಗ
ಅಕ್ಷರಗಳೆಲ್ಲೆನುವಿರಾ
ನುಂಗಿದ ವೇದನೆಗಳಲಿವೆ
ಕೋಟಿ ಕೋಟಿ
ಪಾದಗಳಿವೆ ಸ್ವಾಮಿ
ಎಷ್ಟೆಂದು ತೊಳೆಯುವಿರಿ
ಪಾಪ ನಿಮ್ಮೊಳಗಿದೆ
ಗಂಗೆಯೇ ಮಲಿನ
ನಿಮ್ಮದೇನುಂಟಲ್ಲಿ !

ಗಾಂಧಿ ಆಯಿತು
ಲೋಹಿಯಾ ಮಾರ್ಕ್ಸ್
ಅಂಬೇಡ್ಕರ್
ಅವಿಸಿಬಿಟ್ಟಿರಿ ಗಾಜು
ಸಿಮೆಂಟು ಶಿಲೆಗಳಲ್ಲಿ
ಹಾರ-ತುರಾಯಿಗಳ ನಡುವೆ
ಇನ್ನೆಷ್ಟು ಪಠಿಸುವಿರಿ
ತತ್ವಸಮಾಧಿಯ ಮೇಲೆ
ಮುಕ್ತರಾಗಲಿ ಬಿಡಿ
ಹರಿದಾಡಲಿ ಚಿಂತನೆಗಳು ;

ಬಗೆದಿರಲ್ಲವೇ ಎದೆ
ನೂರೆಂಟು ಮಾತೇಕೆ
ನರಗಂಟುಗಳಲಿ ನೋಡಿ
ಬೀಜಗಳು ಮೊಳೆಯುತಿವೆ
ಬೇರು ನೆಲೆಗಾಣುತಿದೆ
ಚಿವುಟಲಾರಿರಿ ಕುಡಿಯ
ಎಲ್ಲರಿಹರಿಲ್ಲಿ ಆಳದಲಿ
ಕಳಚಿಬಿಡಿ ವ್ಯಸನ
ಇನ್ನಿರದಿಲ್ಲಿ ಮಸಣ!

About The Author

ನಾ ದಿವಾಕರ್

ನಾ ದಿವಾಕರ, ಮೂಲತಃ ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಕೆನರಾ ಬ್ಯಾಂಕಿನಲ್ಲಿ 35 ವರ್ಷದ ಸೇವೆಯ ಬಳಿಕ 2019ರ ಜನವರಿಯಲ್ಲಿ ಸ್ವಯಂ ನಿವೃತ್ತಿ. ಲೇಖನ ಬರಹ, ಅನುವಾದ ಮತ್ತು ಕವಿತೆ ರಚನೆ ಹವ್ಯಾಸ.  ಇವರು ಬರೆದ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದ್ದು, ಪ್ರಥಮ ಕವನ ಸಂಕಲನ ಅಚ್ಚಿನಲ್ಲಿದೆ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ