Advertisement
ನೀನು ಬೆಳೆದರೆ ನಾನು ಬೆಳೆವೆನು: ಚಿತ್ರಾ ವೆಂಕಟರಾಜು ಸರಣಿ

ನೀನು ಬೆಳೆದರೆ ನಾನು ಬೆಳೆವೆನು: ಚಿತ್ರಾ ವೆಂಕಟರಾಜು ಸರಣಿ

ಎಷ್ಟು ಸಲ ಪ್ರವೇಶ ಕೊಡಬಾರದ ಸೀನ್‌ಗಳಲ್ಲಿ ತಪ್ಪಿ ಪ್ರವೇಶ ಕೊಟ್ಟಿರುತ್ತೇವೆ, ಆಡಲೇಬೇಕಾದ ಮಾತನ್ನು ಆಡದೇ ಉಳಿದಿದ್ದೇವೆ. ಆಡಬಾರದಿದ್ದ ಸಂಭಾಷಣೆಗಳನ್ನು ಸುಲಭವಾಗಿ ಆಡಿಬಿಟ್ಟಿರುತ್ತೇವೆ. ಏನೇ ಮಾಡಲಿ ಒಮ್ಮೆ ಆ ನಾಟಕ ಮುಗಿದ ಮೇಲೆ ಮುಗಿಯಿತು… ಒಮ್ಮೆ ಪ್ರದರ್ಶನ ಮುಗಿದ ಮೇಲೆ ಮತ್ತೆ ಆ ದೃಶ್ಯದಲ್ಲಿ ನಮ್ಮ ಎಂಟ್ರಿ ಇಲ್ಲ. ಮತ್ತೆ ಬೇರೆಯದೇ ನಾಟಕದಲ್ಲಿ ಬೇರೆಯದೇ ಪಾತ್ರ! ನಾಟಕದ ಮಜಾ ಎಂದರೆ ಬದುಕಿಗಿಲ್ಲದ ಮರು ಪ್ರದರ್ಶನದ ಅವಕಾಶ ನಾಟಕದಲ್ಲಿದೆ. ಎಲ್ಲ ನಟರೂ ಒಪ್ಪಿದರೆ ಮತ್ತೆ ಅದೇ ನಾಟಕವನ್ನು ಆಡಬಹುದು. ಬೇಕಿದ್ದರೆ ಬೇರೆ ರೀತಿಯಲ್ಲಿ. ಆದರೆ, ಪ್ರತಿ ಬಾರಿಯೂ ಹೊಸದಾಗಿ ಅಭಿನಯಿಸಬೇಕು. ಕೊನೆಯ ದೃಶ್ಯದಲ್ಲಿ ಆಗುವ ಅವಘಡಗಳು ಗೊತ್ತಿದ್ದರೂ ಮೊದಲ ದೃಶ್ಯಗಳಲ್ಲಿ ಪಾತ್ರ ಖುಶಿಯಾಗಿಯೇ ಇರಬೇಕು!
ಚಿತ್ರಾ
ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

ನಟ ಮತ್ತು ಪಾತ್ರದ ಸಂಬಂಧ ಬಹಳ ಸಂಕೀರ್ಣವಾದದ್ದು.  ನಟ ಪಾತ್ರಕ್ಕೆ ತಯಾರಾಗಬೇಕೇ ಹೊರತು ಪಾತ್ರವನ್ನೇ ನಟನ ವ್ಯಕ್ತಿತ್ವಕ್ಕೆ ಬಗ್ಗಿಸಿಕೊಳ್ಳಬಾರದು ಎಂದು ಹೇಳುತ್ತಾರೆ.  ತಂಡವೊಂದು ಹೊಸ ನಾಟಕವನ್ನು ತೆಗೆದುಕೊಂಡಾಗ ಮೊದಲು ಅದನ್ನು ಓದುತ್ತಾರೆ. ಮೊದಲು ನಿರ್ದೇಶಕರು, ನಂತರ ತಂಡದ ಎಲ್ಲರೂ ನಾಟಕವನ್ನು ಓದುತ್ತಾರೆ. ನಾಟಕ ಓದಿನ ಹಂತದಲ್ಲಿದ್ದಾಗಲೇ ನಟನಿಗೆ ತನಗೆ ಯಾವ ಪಾತ್ರ ಸಿಗಬಹುದು ಎಂಬ ಅಂದಾಜು ಸಿಕ್ಕಿರುತ್ತದೆ. ಪ್ರತಿಯೊಂದು ಬಾರಿ ನಾಟಕ ಓದುವಾಗಲೂ ತಮಗೆ ಇಷ್ಟವಾದ ಪಾತ್ರ ಸಿಗಲಿ ಎಂಬ ಆಸೆ ಹೆಚ್ಚಾಗುತ್ತಿರುತ್ತದೆ. ಕೊನೆಗೆ ಆ ದಿನ ಬಂದೇಬಿಡುತ್ತದೆ. ನಿರ್ದೇಶಕರು ಪಾತ್ರ ಹಂಚಿಕೆಯನ್ನು ತಂಡದವರಿಗೆ ಹೇಳುವ ದಿನ! ಎಲ್ಲರಿಗೂ ಒಂದು ರೀತಿಯ ಆತಂಕ.  ತಮಗೆ ಬೇಕಾದ ಪಾತ್ರ ಸಿಗದಿದ್ದಾಗ ಆಗುವ ಬೇಸರ ಅನುಭವಿಸಿದವರಿಗೇ ಗೊತ್ತು. ಆದರೆ ತಾನು ಅಭಿನಯಿಸಲು ಬಯಸಿದ ಪಾತ್ರ ಸಿಕ್ಕಿದ ನಟ/ನಟಿಗೆ ಅದು ಹೊಸ ಆರಂಭ. ಮತ್ತೊಂದು ಜೀವದ ಅನುಭವಕ್ಕೆ ಕೊಟ್ಟುಕೊಳ್ಳಲು ಸಿದ್ಧವಾಗುವ ಸಮಯ.  ಇರುವ ಒಂದು ಜೀವನದಲ್ಲೆ ಹಲವಾರು ಜೀವನಗಳನ್ನು ಸ್ವಲ್ಪ ಅವಧಿಗಾದರೂ ಬದುಕುವ ಅವಕಾಶ ಸಿಗುವುದು ನಟನಿಗೆ ಮಾತ್ರ. ನಟನೊಬ್ಬನ ಜೀವನಾನುಭವ ತನ್ನ ಜೀವನದ್ದು ಮಾತ್ರ ಆಗುವುದಿಲ್ಲ ಬದಲಿಗೆ ತಾನು ಮಾಡಿದ ಪಾತ್ರಗಳ ಅನುಭವವೂ ಅದರಲ್ಲಿ ಸೇರಿಹೋಗಿರುತ್ತದೆ. ಪಾತ್ರದ ಕೆಲವು ಅಂಶಗಳು ಶಾಶ್ವತವಾಗಿ ನಟನ ವ್ಯಕ್ತಿತ್ವದ ಭಾಗ ಆಗುವುದು ಒಂದು ಸೋಜಿಗವೇ! ಕವಿಯೊಬ್ಬರ ಕೆಲವು ಕವಿತೆಗಳು ಮಾತ್ರ ನಮ್ಮನ್ನು ಕಾಡುವ ಹಾಗೆ ನಟನ ಜೀವನದಲ್ಲೂ ಕೆಲವು ಪಾತ್ರಗಳು ನೆನಪಿನಲ್ಲುಳಿಯುವಂತೆ ಮಾಡುತ್ತದೆ.

ನಾನು ಅಭಿನಯಿಸಿದ ಅಂತಹ ಒಂದು ಪಾತ್ರ ಗಿರೀಶ್‌ ಕಾರ್ನಾಡರ ‘ಅಗ್ನಿ ಮತ್ತು ಮಳೆʼ ಯ ವಿಶಾಖಾ. ಮಂಡ್ಯ ರಮೇಶ್‌ ಅವರ  ನಟನ, ಮೈಸೂರು ತಂಡಕ್ಕೆ ಅವರೇ ನಿರ್ದೇಶಿಸಿದ ನಾಟಕ.  ವೃತ್ತಿಪರ ತಂಡಗಳಲ್ಲಿ ಒಂದು ನಾಟಕದ ತಾಲೀಮು ಆರಂಭವಾದರೆ ಒಮ್ಮೆಗೆ ಪ್ರದರ್ಶನಗಳು ಆಗುತ್ತಿರುತ್ತವೆ. ಹವ್ಯಾಸಿ ತಂಡಗಳಲ್ಲಿ ಹತ್ತಾರು ಪ್ರದರ್ಶನಗಳಾಗುವುದು ಕಷ್ಟ.  ನಟನ ತಂಡ ಪ್ರಾರಂಭವಾಗುವ ಕಾಲದಲ್ಲಿ ಇತ್ತ ವೃತ್ತಿಪರವೂ ಅಲ್ಲದ ಇತ್ತ ಹವ್ಯಾಸಿ ತಂಡವೂ ಅಲ್ಲದ ತಂಡದಂತೆ ಕೆಲಸ ಮಾಡಿದೆವು. ಕೆಲಸದಲ್ಲಿ ವೃತ್ತಿಪರತೆ ಇದ್ದು ಹವ್ಯಾಸಿಗಳ ತಾಜಾತನ ಆ ತಂಡಲ್ಲಿತ್ತು. ಚಾಮರಾಜನಗರದಿಂದ ನಾನು ಪ್ರತಿದಿನ, ಮೈಸೂರಿಗೆ ತಾಲೀಮಿಗೆ ಬರುತ್ತಿದ್ದೆ. ಪಾಂಡವಪುರದಿಂದ ಮೂರ್ನಾಲ್ಕು ಕಲಾವಿದರು ಬರುತ್ತಿದ್ದರು. ನಟನದ ಬೇಸಿಗೆ ಶಿಬಿರದಲ್ಲಿ ಈ ಹಿಂದೆ ಭಾಗವಹಿಸಿದ್ದ ಮಕ್ಕಳು ಮೊದಲ ಬಾರಿಗೆ ದೊಡ್ಡವರೊಂದಿಗೆ ಅಭಿನಯಿಸುತ್ತಿದ್ದರು. ಎಲ್ಲಾ ರೀತಿಯ ಹಿನ್ನೆಲೆಯಿಂದ ಬಂದ ಜನಗಳಿಂದ ತಂಡ ಬಹಳ ಉಲ್ಲಾಸದಿಂದ ಕೂಡಿರುತ್ತಿತ್ತು.

ಕನ್ನಡ ನಾಟಕಗಳಲ್ಲೇ ಬಹಳ ಗಟ್ಟಿಯಾದ ಮಹಿಳಾ  ಪಾತ್ರ “ಅಗ್ನಿ ಮ್ತತು ಮಳೆ” ನಾಟಕದ ವಿಶಾಖಾ. ಕಗ್ಗತ್ತಲ ಗುಹೆಯೊಂದರಲ್ಲಿ ಉರಿಯುತ್ತಲೇ ಇರುವ ಬೆಂಕಿ. “ಅಗ್ನಿ ಮತ್ತು ಮಳೆ” ಯಲ್ಲಿ ವಿಶಾಖ ಪರಾವಸುವಿನ ಹೆಂಡತಿ. ಪರಾವಸು ತನ್ನ ಹೆಂಡತಿ, ತಮ್ಮ ಅರವಸು, ತಂದೆ ರೈಭ್ಯನನ್ನು ಬಿಟ್ಟು ಯಜ್ಞ ಅಧ್ವರ್ಯುವಾಗಿ ಹೋಗುತ್ತಾನೆ. ವಿಶಾಖೆ ಯವಕ್ರೀತ ಪ್ರೇಮಿಸುತ್ತಿರುತ್ತಾರೆ. ಆದರೆ ಯವಕ್ರೀತ, ಬ್ರಹ್ಮಜ್ಞಾನ ವನ್ನು ಪಡೆಯಲು ತಪಸ್ಸಿಗೆ ಹೋಗುತ್ತಾನೆ. ಇತ್ತ ಪರಾವಸುವಿನೊಡನೆ ವಿಶಾಖೆಯ ಮದುವೆಯಾಗುತ್ತದೆ. ಅಧಿಕಾರ, ರಾಜಕಾರಣ, ಕಾಮ, ಪ್ರೀತಿ, ದ್ವೇಷ, ಈರ್ಷ್ಯೆಗಳ ಮಧ್ಯೆ ಏಕಾಂಗಿಯಾಗಿ ಬದುಕುತ್ತಾಳೆ.

ವಿಶಾಖಾ ಪಾತ್ರದ ಪ್ರಯಾಣ ಅನೇಕ ಕಾರಣಗಳಿಗೆ ನೆನಪಿನಲ್ಲುಳಿಯುವಂಥದ್ದು. ಈ ನಾಟಕವನ್ನು ಮೊದಲು ಅಭಿನಯಿಸಿದಾಗ ನಾನು ಮೈಸೂರಿನಲ್ಲಿ ಬಿ.ಎ. ಓದುತ್ತಿದ್ದೆ. ಮೊದಲ ಎರಡು ಪ್ರದರ್ಶನಗಳಾಯಿತು. ನಂತರ ಬೇರೆ ಬೇರೆ ಊರುಗಳಲ್ಲಿ ನಾಟಕ ನಿಗದಿಯಾದಾಗ ಒಂದೆರಡು ದಿನ ಮತ್ತೆ ಅಭ್ಯಾಸ ಮಾಡಿ ನಾಟಕ ಮಾಡುತ್ತಿದ್ದೆವು. ಮೈಸೂರು,  ಚಾಮರಾಜನಗರ, ಪಾಂಡವಪುರ, ಬೆಂಗಳೂರು, ಬಳ್ಳಾರಿ, ಬೆಳಗಾವಿ, ಶಹಪುರ, ಮುದ್ರಾಡಿ, ಬೈಂದೂರು, ಮಂಗಳೂರು, ವಿಜಯವಾಡ, ಮುಂಬೈ, ದೆಹಲಿ, ಕಲ್ಕತ್ತಾ, ಹೀಗೆ ದೇಶದ ಹಲವು ಕಡೆ ಕನ್ನಡ, ಕನ್ನಡೇತರ ಪ್ರೇಕ್ಷಕರ ಮುಂದೆ ನಾಟಕ ಮಾಡಿದ್ದು ಬೇರೆಯದೇ ಅನುಭವ. ನಾಟಕದ ಮೊದಲನೆ ಪ್ರದರ್ಶನದಿಂದ ಸುಮಾರು  ಹತ್ತು ವರ್ಷ ಈ ನಾಟಕವನ್ನು ಅಭಿನಯಿಸಿದೆವು. ಈ ಹತ್ತು ವರ್ಷಗಳಲ್ಲಿ ನನ್ನ ಬದುಕಿನಲ್ಲಿ ಅನೇಕ ಬದಲಾವಣೆಗಳಾದವು. ನನಗೆ ನೌಕರಿ ಸಿಕ್ಕಿತು, ಮೈಸೂರಿನಿಂದ ಧಾರವಾಡಕ್ಕೆ ಹೋದೆ. ಮದುವೆಯಾಯಿತು. ಏನೇ ಬದಲಾದರೂ ನಾಟಕ ನಿಗದಿಯಾದಾಗ ಆಯಾ ಊರಿಗೆ ಹೋಗಿ ನಾಟಕ ಮಾಡಿ ಬರುತ್ತಿದ್ದೆ. ತಂಡದ ಮತ್ತೂ ಕೆಲವರು ಹೀಗೆಯೇ ಪ್ರದರ್ಶನಕ್ಕೆ ಬರುತ್ತಿದ್ದರು. ಆ ಹತ್ತೂ ವರ್ಷಗಳೂ ವಿಶಾಖಾ ಪಾತ್ರ ನನ್ನೊಳಗೆ ಇದ್ದೇ ಇರುತ್ತಿತ್ತು.  ಹತ್ತು ವರ್ಷಗಳಲ್ಲಿನ ಜೀವನಾನುಭವ ಪಾತ್ರವನ್ನು ನೋಡುವ ಕ್ರಮವನ್ನು ಬದಲಿಸುತ್ತಿತ್ತು. ಧಾರವಾಡಕ್ಕೆ ಹೋದ ಮೇಲೆ ಪ್ರತಿದಿನ ಕೇಳುತ್ತಿದ್ದ  ಧಾರವಾಡದ ಭಾಷೆ ‘ಅಗ್ನಿ ಮತ್ತು ಮಳೆʼ ಯ ಕಾರ್ನಾಡರ ಭಾಷೆಗೆ ಇನ್ನೂ ಹತ್ತಿರವಾಗುವ ಹಾಗೆ ಮಾಡಿತು. ಎಲ್ಲರೂ ಉಡುವ ಸೀರೆಯ ಮಾದರಿಯಲ್ಲೇ ವಿಶಾಖಾ ಪಾತ್ರಕ್ಕೆ ಸೀರೆ ಉಡುತ್ತಿದ್ದೆ. ಧಾರವಾಡದಲ್ಲಿದ್ದಾಗ ‘ಯಾಕೆ ಕಚ್ಚೆ ಸೀರೆ ಉಡಬಾರದು?ʼ ಎನಿಸಿ ಪಾತ್ರದ ವಸ್ತ್ರವಿನ್ಯಾಸವೇ ಬೇರೆಯದಾಯಿತು. ಅದರಿಂದ ಪಾತ್ರದ ನಿಲುವೂ ಬದಲಾಯಿತು. ಒಂದು ಪ್ರದರ್ಶನಕ್ಕಿಂತ ಮತ್ತೊಂದು ಪ್ರದರ್ಶನಕ್ಕೆ ಬಹಳ ದಿನಗಳ ಅಂತರವಿದ್ದುದರಿಂದ ಕೆಲವು ಸಮಯ ಬಿಟ್ಟು ಮತ್ತೆ ಪಾತ್ರ ಮಾಡಿದಾಗ ಬೇರೆಯದೇ ಸುಳಿವುಗಳು ಕಾಣುತ್ತಿತ್ತು. ಒಂದು ಪ್ರದರ್ಶನಕ್ಕಿಂತ ಮತ್ತೊಂದು ಪ್ರದರ್ಶನದ ಮಧ್ಯೆ ಸಮಯ ಇದ್ದುದರಿಂದ ನಾನು ನೋಡುತ್ತಿದ್ದ ನಾಟಕಗಳು, ನನ್ನ ಓದು, ಎಲ್ಲವೂ  ನನಗೇ ತಿಳಿಯದಂತೆ ವಿಶಾಖಾ ಪಾತ್ರಪೋಷಣೆಗೆ ಬೇರೆ ಬೇರೆ ದೃಷ್ಟಿಕೋನವನ್ನು ನೀಡುತ್ತಿತ್ತು. ಮೊದಲ ಪ್ರದರ್ಶನದಲ್ಲಿ ಮುಖ್ಯವಲ್ಲ ಎನಿಸಿದ ಕೆಲವು ಸಾಲುಗಳು ಬರುಬರುತ್ತಾ ಎಷ್ಟು ಮುಖ್ಯ ಎನಿಸುತ್ತಿತ್ತು. ಒಟ್ಟಾರೆ ಬದುಕು – ನಾಟಕ ಒಂದಕ್ಕೊಂದು ಜತೆಜತೆಯಾಗಿ ಹೋಗುತ್ತಿದ್ದವು.

ವಿಚಿತ್ರವೆಂದರೆ ನಾಟಕ ಅದು ಯಾವುದೇ ಇರಲಿ ಅದನ್ನು ಮೊದಲ ಬಾರಿ ಅಭಿನಯಿಸುವಾಗ ಅದನ್ನುಅರ್ಥಮಾಡಿಕೊಂಡು ಎಷ್ಟೆಲ್ಲಾ ಓದಿಕೊಂಡು ಅ‍ಭ್ಯಾಸ ಮಾಡಿರುತ್ತೇವೆ. ಆದರೆ ಕೆಲವು ವರ್ಷಗಳು ಬಿಟ್ಟು ಅದನ್ನು ನೆನಪಿಸಿಕೊಂಡಾಗಲೂ ‘ಕೆಲವು ಸಾಲುಗಳನ್ನು ಇನ್ನೂ ಸೂಕ್ಷ್ಮ ಮಾಡಬಹುದಿತ್ತು. ಕೆಲವು ಸಾಲುಗಳನ್ನು ಇನ್ನೂ ಬೇರೆಯದಾಗಿ ಹೇಳಬಹುದಿತ್ತುʼ ಎನಿಸುತ್ತದೆ. ಸುಲಭವಾಗಿ ‘ನಾಟಕʼ, ‘ನಾಟಕʼ ಅಂತ ಕರೆಯುವೆ ಅಷ್ಟೇ. ಆದರೆ ಅದು  ಬದುಕಿಗಿಂತ ಬೇರೆಯದಲ್ಲ.   ಬದುಕು ಹೇಗೆ ಮುಂದೆ ಚಲಿಸುತ್ತದೆಯೋ, ರಂಗಸ್ಥಳವೂ ಹಾಗೆ!  ಎಷ್ಟು ಸಲ ಪ್ರವೇಶ ಕೊಡಬಾರದ ಸೀನ್‌ಗಳಲ್ಲಿ ತಪ್ಪಿ ಪ್ರವೇಶ ಕೊಟ್ಟಿರುತ್ತೇವೆ, ಆಡಲೇಬೇಕಾದ ಮಾತನ್ನು ಆಡದೇ ಉಳಿದಿದ್ದೇವೆ. ಆಡಬಾರದಿದ್ದ ಸಂಭಾಷಣೆಗಳನ್ನು ಸುಲಭವಾಗಿ ಆಡಿಬಿಟ್ಟಿರುತ್ತೇವೆ. ಏನೇ ಮಾಡಲಿ ಒಮ್ಮೆ ಆ ನಾಟಕ ಮುಗಿದ ಮೇಲೆ ಮುಗಿಯಿತು… ಒಮ್ಮೆ ಪ್ರದರ್ಶನ ಮುಗಿದ ಮೇಲೆ ಮತ್ತೆ ಆ ದೃಶ್ಯದಲ್ಲಿ ನಮ್ಮ ಎಂಟ್ರಿ ಇಲ್ಲ. ಮತ್ತೆ ಬೇರೆಯದೇ ನಾಟಕದಲ್ಲಿ ಬೇರೆಯದೇ ಪಾತ್ರ! ನಾಟಕದ ಮಜಾ ಎಂದರೆ ಬದುಕಿಗಿಲ್ಲದ ಮರು ಪ್ರದರ್ಶನದ ಅವಕಾಶ ನಾಟಕದಲ್ಲಿದೆ. ಎಲ್ಲ ನಟರೂ ಒಪ್ಪಿದರೆ ಮತ್ತೆ ಅದೇ ನಾಟಕವನ್ನು ಆಡಬಹುದು. ಬೇಕಿದ್ದರೆ ಬೇರೆ ರೀತಿಯಲ್ಲಿ. ಆದರೆ, ಪ್ರತಿ ಬಾರಿಯೂ ಹೊಸದಾಗಿ ಅಭಿನಯಿಸಬೇಕು. ಕೊನೆಯ ದೃಶ್ಯದಲ್ಲಿ ಆಗುವ ಅವಘಡಗಳು ಗೊತ್ತಿದ್ದರೂ ಮೊದಲ ದೃಶ್ಯಗಳಲ್ಲಿ ಪಾತ್ರ ಖುಶಿಯಾಗಿಯೇ ಇರಬೇಕು! ನಾಟಕದ ದೃಶ್ಯಗಳು ಬದುಕಿನ ಭಾಗವೇ ಆಗಿಹೋಗುವ ವಿಸ್ಮಯ ಇದು. ಕೆಲವು ಪಾತ್ರಗಳು ಕಳೆದು ಹೋದ ನಮ್ಮ ಹಳೆಯ ಗೆಳೆಯರಂತೆ ನಮ್ಮ ಮನಸ್ಸಿನಲ್ಲಿ ಉಳಿದುಬಿಡುತ್ತವೆ. ಇದು ನಮ್ಮದೇ ಬಹಳ ಹಳೆಯ ಫೋಟೋ ನೋಡಿಕೊಂಡಂತೆ. ಪಾತ್ರದ ಕನ್ನಡಿಯಲ್ಲಿ ನಮಗೆ ನಮ್ಮದೇ ಚಹರೆ ಕಾಣಿಸುತ್ತದೆ. ನಾಟಕಕಾರ ಹೆನ್ರಿಕ್‌ ಇಬ್ಸನ್‌ ಒಂದು ಪಾರ್ಟಿ ಮುಗಿಸಿಕೊಂಡು ಬಂದು ತನ್ನ ಹೆಂಡತಿಗೆ ಹೇಳಿದನಂತೆ ‘ನನ್ನ ಪಕ್ಕದಲ್ಲಿ ಕುಳಿತವಳ ಕೈ ಬೆರಳುಗಳು ನೋರಾ ಹೆಲ್ಮರ್‌ನ ಕೈ ಬೆರಳುಗಳಂತಿತ್ತುʼ ಎಂದು. ನೋರಾ ಹೆಲ್ಮರ್‌ ಅವನು ಬರೆದ ‘ಡಾಲ್ಸ್‌ ಹೌಸ್‌ʼ ನಾಟಕದ ಮುಖ್ಯ ಪಾತ್ರ. ಅವನಿಗೆ ತಾನು ಸೃಷ್ಟಿಸಿದ ಆ ಪಾತ್ರ ಎಷ್ಟು ನಿಜವಾಗಿರಬಹುದು. ಕೊನೆಗೂ ನಟನ ತಯಾರಿಯೆಲ್ಲಾ ಆ ನಿಜವನ್ನು ತಲುಪುವ ದಾರಿಯೇ… ನಾಟಕಕಾರ ಏಕಾಂತದಲ್ಲಿ ಅದನ್ನು ಬರೆತ್ತಾನೆ. ಅವನ ಕಲ್ಪನೆಯಲ್ಲಿ ಮಾತ್ರ ಅದು ನಿಜವಾಗಿರುತ್ತದೆ. ಆದರೆ ನಟ ತನ್ನ ಮೈ ಮನಸ್ಸುಗಳಲ್ಲಿ ಪಾತ್ರವನ್ನು ಕಾಣಿಸಬೇಕು. ಖಾಲಿ ರಂಗಸ್ಥಳದಲ್ಲಿ ತಾನು ಅದನ್ನು ಭಾವಿಸಿಕೊಂಡು ಪ್ರೇಕ್ಷರಿಗೂ ಅದರ ಅನುಭವ ನೀಡಬೇಕು. ತಯಾರಿಯೇನಿದ್ದರೂ ಅದೆಲ್ಲಾ ಆಗುವುದಕ್ಕೆ ನಮ್ಮ ಮೈಮನಸುಗಳನ್ನು ಬಿಟ್ಟುಕೊಳ್ಳುವುದು ಮಾತ್ರ.

About The Author

ಚಿತ್ರಾ ವೆಂಕಟರಾಜು

ಚಿತ್ರಾ ವೆಂಕಟರಾಜು, ಚಾಮರಾಜನಗರದವರು. ನಟಿ. ಕಳೆದ ೧೮ ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ರಂಗಶಿಕ್ಷಣಶಿಕ್ಷಕಿಯಾಗಿಕೆಲಸ ನಿರ್ವಹಿಸುತ್ತಿದ್ದಾರೆ. ನೀನಾಸಮ್ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಚಾಮರಾಜನಗರದಶಾಂತಲಾ ಕಲಾವಿದರುʼ ತಂಡದಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಲಾಶಿಕ್ಷಣ, ಸಾಹಿತ್ಯ, ಸಂಗೀತ, ನೃತ್ಯ, ಸಿನೆಮಾದಲ್ಲಿ ಆಸಕ್ತಿ. ಇವರು ಅಭಿನಯಿಸಿದ ಅಮೃತಾ ಪ್ರೀತಂ ಅವರ ಬದುಕನ್ನು ಆಧರಿಸಿದ ಏಕವ್ಯಕ್ತಿ ರಂಗಪ್ರಯೋಗ “ಮೈ ತೆನ್ನು ಫಿರ್ಮಿಲಾಂಗಿ" ಹಲವಾರು ಪ್ರದರ್ಶನಗಳನ್ನು ಕಂಡಿದೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ