ಒಂದೇ ಒಂದು ಭಂಡ ಧೈರ್ಯ ಇತ್ತು ನೋಡಿ. ಅದು ಈಗ ಮುನ್ನೆಲೆಗೆ ಜಿಗಿಯಿತು. ಕೂಡಲೇ ನನ್ನ ಆರನೇ ಸೆನ್ಸ್ ಜಾಗೃತ ಆಯಿತು. ನನ್ನ ಅರಿವಿಗೆ ಬಂದಿದ್ದ ಬೇವಿಗೆ ಸಂಬಂಧಪಟ್ಟ ಲೇಖನಗಳು, ಅವುಗಳ ಬಗ್ಗೆ ಇದ್ದ ನಂಬಿಕೆಗಳು, ನಮ್ಮ ಪೂರ್ವಜರು ಬೇವನ್ನು ಉಪಯೋಗಿಸುತ್ತಿದ್ದ ರೀತಿ ರಿವಾಜು ಎಲ್ಲವೂ ತಲೆಯಲ್ಲಿ ಒಂದರ ಹಿಂದೆ ಒಂದು ಬಂದು ಕ್ಯೂ ನಿಂತವು. ಮಲ್ಲಯ್ಯನ ಕಡೆ ನೋಡಿದೆ. ಅವನ ಮುಖದಲ್ಲಿ ಒಂದು ರೀತಿಯ ವಿಚಿತ್ರ ಕಳೆ ಕಾಣಿಸಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತೆಂಟನೆಯ ಕಂತು
ಇದು ಕಳೆದ ಎಪಿಸೋಡ್‌ನ ಕೊನೆಯ ಭಾಗ…
ಯಾಕೆ ಸಾಮಿ ಹೇಳದೇ ಕೇಳದೆ ತೀರ್ಮಾನ ತಗೋತೀರಿ? ನಮ್ಮವನೇ ಒಬ್ಬ ಒಳ್ಳೆ ಮರಾಗೆಲಸದವನು ಇದ್ದ……..” ಅಂದ ಮಲ್ಲಯ್ಯ.
“ಅಯ್ಯೋ ನೀನು ಮೊದಲೇ ಹೇಳೋದು ಬೇಡವೇನಯ್ಯಾ? ಯಾವುದೇ ಮಾಡಿದರೂ ಒಂದು ಇಟ್ಟಿರ್ತಿಯಾ…….” ಅಂತ ರೇಗಿದೆ. ಕೋಪದಲ್ಲಿ ಎದ್ದು ಶೆಡ್ ಹಿಂದೆ ಹೋದ!
ಮಾರನೇ ದಿವಸ ಮರ ಹೊತ್ತ ಮಿನಿ ಲಾರಿ ಜತೆ ನಾನೂ ಸೈಟ್ ಹತ್ತಿರ ಹೋದೆ. ಮಲ್ಲಯ್ಯ ಅಲ್ಲೇ ಇದ್ದ. ಮರ ನೋಡಿದ. ನನ್ನನ್ನು ನೋಡಿದ. ಇದು ಎರಡು ಮೂರು ಸಲ ರಿಪೀಟ್ ಆಯ್ತು. ಅವನ ಮೂಗಿನ ಹೊರಳೆಗಳು ಅರಳಿದವು. ಕಷ್ಟಪಟ್ಟು ಎಮೋಷನ್ಸ್ ತಡೆದುಕೊಳ್ತಾ ಇದ್ದಾನೆ ಅನಿಸಿತು. ಅರ್ಧ ನಿಮಿಷದ ನಂತರ ಮಲ್ಲಯ್ಯ ಸ್ಫೋಟಗೊಂಡ!
“ಸೋ ಮೀ… ಯಾವ ಜನ ನೀವು……?” ಅಂದ! ಅದುವರೆವಿಗೆ ನನ್ನ ಬಾಹ್ಯ ನೋಟದಲ್ಲಿ ನಾನು ಯಾವ ಜನ ಅಂತ ಗೊತ್ತಾಗದ ಹಾಗೆ ಇತ್ತು. ದೇವರ ಕುಂಕುಮ, ಅಕ್ಷತೆ, ವಿಭೂತಿ, ಮುದ್ರೆ, ಕಿವಿಗೆ ಕಣಿಗಳೇ, ಜರತಾರಿ ಪಂಚೆ, ಕಚ್ಚೆ, ದಟ್ಟಿ, ಮುಂಡಾಸು…… ಮೊದಲಾದ ಯಾವ ಅಲಂಕಾರ ಇರಲಿಲ್ಲ. ಆಗಾಗ ನಿಕೋಟಿನ್ ಸೇವನೆ ಇತ್ತಾದರೂ ಅದರಿಂದ ನಾನು ಯಾವ ಜನ ಎಂದು ತಿಳಿಯುವ ಸಣ್ಣ ಗುರುತು ಸಹ ಇರಲಿಲ್ಲ. ಎಲ್ಲರೂ ಇವ ನಮ್ಮವ ಇವ ನಮ್ಮವ
ಇವ ನಮ್ಮವ ಎಂದೇ ತಿಳಿದಿದ್ದರು…!
ಹಾಗೆ ನೋಡಿದರೆ ನಾನು ರಿಟೈರ್ ಆಗುವ ಒಂದೇ ಒಂದುವಾರ ಮೊದಲು ಅದ್ಯಾರೋ ಹರಸಾಹಸ ಪಟ್ಟು ನಾನು ಯಾವಪೈಕಿ ಅಂತ ಕಂಡುಹಿಡಿದ್ದಿದ್ದರಂತೆ……! ಕಂಡು ಹಿಡಿದವರು ಒಂದು ಇಪ್ಪತ್ತು ವರ್ಷ ಮೊದಲೇ ಈ ಸಾಹಸ ಪಟ್ಟಿದ್ದರೆ, ನಮ್ಮ ಕಮ್ಯೂನಿಟಿಗೆ ಒಬ್ಬ ಒಳ್ಳೇ ಕೆಲಸಗಾರ ಸಿಗ್ತಾ ಇದ್ದ ಅಂತ ಅವಲತ್ತುಕೊಂಡಿದ್ದರಂತೆ. ಹೀಗಿರಬೇಕಾದರೆ ಇನ್ನು ಮಲ್ಲಯ್ಯನಿಗೆ ನಾನು ಯಾರು ಅಂತ ತಿಳಿದಿರಲು ಹೇಗೆ ಸಾಧ್ಯ?
ಈಗ ಮುಂದಕ್ಕೆ…
ನಾನು ಯಾವ ಜನ ಎನ್ನುವುದನ್ನು ಕಟ್ಟಿಕೊಂಡು ಮಲ್ಲಯ್ಯನಿಗೆ ಏನಾಗಬೇಕು ಎಂದು ಆ ಯೋಚನೆಯಿಂದ ಹೊರಬಂದೆ. ಅವನ ಸಂಶಯಕ್ಕೆ ಕಾರಣ ಏನಿರಬೇಕು ಎಂದು ಕೇಳಿದೆ…
“ಅಲ್ಲಾ ಒಂದೂ ನಿಮ್ಮವರು ಮಾಡಿದ ಹಾಗೇ ಯಾವುದನ್ನೂ ನೀವು ಮಾಡ್ತಿಲ್ಲ. ಗುದ್ದಲಿ ಪೂಜೆ ನೀನೇ ಮಾಡ್ಕೋ ಅಂದ್ರಿ, ಬಾಗಿಲು ಇಡಬೇಕಾದರೆ ಐನೋರು ಇಲ್ಲ, ಲಿಂಟಲು ಹಾಕಬೇಕಾದರೆ ಸಹ ಒಂದು ಊದುಬತ್ತಿ ಇಲ್ಲ, ಒಂದು ಕರ್ಪೂರ ಒಂದು ಮಂಗಳಾರತಿ ಸಹ ಇಲ್ಲ… ಈಗ ಬಾಗಿಲು ನೋಡಿದರೆ ಹೀಗೇ…..” ಅಂತ ಒಂದು ಉದ್ದಾನೆ ಪಟ್ಟಿ ಹರಡಿದ.
ಅವನ ತಲೇಲಿ ಏನೋ ದೊಡ್ಡ ಹುಳ ಸೇರಿದೆ ಅನಿಸಿತು. ಅದನ್ನ ಅವನ ಬಾಯಿಂದನೆ ಹೊರಡಿಸಬೇಕು ತಾನೇ?
ಎಲ್ಲರೂ ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದು ತಿಳಿದಿರಬೇಕಾದರೆ ಹೆಚ್ಚು ಸುಖ ಮತ್ತು ಹೆಚ್ಚು ಸ್ನೇಹಿತರು ಎನ್ನುವುದು ಅನುಭವ ಆಗಿತ್ತು. ತಮ್ಮನ್ನು ತಾವೇ ಐಡೆಂಟಿ ಫೈ ಮಾಡಿಕೊಂಡರೆ ಅವರು ಕೆಲವು ಗುಂಪಿಗೆ ಮಾತ್ರ ಸೀಮಿತ ಎಂದೂ ಗೊತ್ತಾಗಿತ್ತು. ಈಗ ನನ್ನ ಗುರುತು ಗೊತ್ತಾಗಿ ನನ್ನ ಇಷ್ಟು ವರ್ಷಗಳ ಹೆಚ್ಚುಗಾರಿಕೆ ಉಲ್ಟಾ ಹೊಡೆಯುತ್ತಾ ಅಂತ ಒಂದು ಸೆಕೆಂಡ್ ಪಾಸಿಂಗ್ ಥಾಟ್ಸ್ ಬಂತಾ? ಅದನ್ನು ಪಕ್ಕಕ್ಕೆ ಬ್ರಷ್ ಮಾಡಿದೆ!
“ಹೇಳು ಮಲ್ಲಯ್ಯ ನಿನ್ನ ಈ ಸಂಶಯಕ್ಕೆ ಕಾರಣವೇನು…” ಅಂತ ಕೊಂಚ ನಾಟಕೀಯವಾಗಿ ಕೇಳಿದೆ.
“ಹೇಳು ಮಲ್ಲಯ್ಯ, ನಾನು ಯಾವ ರೀತಿ ಕಾಣಿಸ್ತಿನಿ ನಿನ್ನ ಕಣ್ಣಿಗೆ….?” ಅಂದೆ, ದನಿಯಲ್ಲಿ ಕೊಂಚ ತಮಾಷೆ ಇತ್ತು.
“ಸಾಮಿ ಈಡಿಗೆ ಸಿಗ್ತಾ ಇಲ್ರ ನೀವು…” ಅಂದ. ಈಡಿಗೆ ಅಂದರೆ ಬ್ಯಾಟ್‌ಗೆ ಸಿಗದ ಬಾಲು ಅಂತ ಅರ್ಥ. ಅಂದರೆ ಆಚೆ ಈಚೆ ನುಸುಳಿ ಬ್ಯಾಟ್‌ನಿಂದ ತಪ್ಪಿಸಿಕೊಂಡು ಬಾಲು ಹೋಗುತ್ತೆ ಅಂತ. ನೀವು ಕ್ರಿಕೆಟ್ ಆಡಿದ್ದರೆ, ನೋಡಿದ್ದರೆ ಕೇಳಿದ್ದರೆ ನಿಮಗೆ ಇದು ತುಂಬಾ ಚೆನ್ನಾಗಿ ಮನದಟ್ಟು ಆಗಿರುತ್ತೆ! ನೀವು ಕ್ರಿಕೆಟ್ ಆಡಿಲ್ಲ ಅಂದರೂ ನೋಡಿ ಇರ್ತೀರಿ ಮತ್ತು ನಿಮಗೆ ಅರ್ಥ ಆಗಿದೆ. ಮಲ್ಲಯ್ಯನ ಎದೆ ಒಳಗೇನಿದೆ ಎಂದು ತಿಳಿಯುವ ಉಮೇದು ಹೆಚ್ಚಿತ್ತು. ಅವನನ್ನು ಮತ್ತೆ ಹುರಿದುಂಬಿಸಿದೆ…
“ನಿಮ್ಮ ಮಾತು ಕತೆ ನೋಡಿದ್ರೆ ಬ್ರಾಮಿನ್ಸ್ ತರ, ನೀವು ನಡಕೊಳ್ಳೋದು ನೋಡಿದ್ರೆ ಪಾಕಿಸ್ತಾನದವರ ಹಾಗೇ…” ಅಂದ! ಆಕ್ಚುಯಲ್ಲಾಗಿ ಅವನು ಪಾಕಿಸ್ತಾನದವರ ಹಾಗೆ ಅಂತ ಹೇಳಲಿಲ್ಲ, ಅದಕ್ಕೆ ಸಮಾನವಾದ ಒಂದು ಪರ್ಯಾಯ ಪದ ಉಪಯೋಗಿಸಿದ್ದು. ಅದು ಎಲ್ಲರಿಗೂ ಗೊತ್ತು. ಆ ಪದ ಸದ್ಯಕ್ಕೆ ನಾನೇ ಹಾಕಿಕೊಂಡಿರುವ ನಿಯಮಗಳ ಪ್ರಕಾರ ನಾನು ಬಳಸುವಂತಿಲ್ಲ!
“ಸರಿ ಹಾಗೇ ಅಂದ್ಕೊ ಎರಡೂ ಮಿಕ್ಸ್… ನಮ್ದು…”
“ನಾನು ನಿಮ್ಮನ್ನ ಯಾವ ಜನ ಅಂತ ಕೇಳಿದ್ದು ನೀವು ಬಾಗಿಲು ಮಾಡಿಸಿದ ರೀತಿಗೆ… ಇದು ಯಾವ ಮರ ಅಂತ ಗೊತ್ರಾ…..”
ಅದುವರೆಗೂ ಬಾಗಿಲು ಯಾವ ಮರದ್ದು ಅಂತ ಯೋಚನೆ ಸಹ ತಲೆಗೆ ಬಂದಿರಲಿಲ್ಲ. ನಮ್ಮ ಕಾರ್ಪೆಂಟರ್ ಕೂಡ ಅದನ್ನ ಹೇಳಿರಲಿಲ್ಲ. ಈಗ ಯಾವುದೋ ಹೊಸಾ ಪ್ರಾಬ್ಲಂ ಹುಟ್ಟು ಹಾಕ್ತಾ ಇದಾನೆ ಇವನು ಅನಿಸಿಬಿಡ್ತಾ?
“ಯಾವ ಮರ ಆದರೇನು? ಮನೆಗೆ ಬಾಗಿಲು ಕಿಟಕಿ ಇರಬೇಕು, ಅದು ಇದೆ ಅಷ್ಟೇ? ಇಂತಹ ಮರವೇ ಆಗಬೇಕು ಅಂತ ಯಾವುದಾದರೂ ಕಾನೂನು ಇದೆಯಾ….?” ಅಂದೆ, ನನಗೂ ಮಾತಿನ ಹುರುಪು ಹುಟ್ಟಿತ್ತು.
“ನೋಡಿ ಸಾಮಿ ಹೀಗೆಲ್ಲಾ ಉಲ್ಟಾ ಹೊಡಿಬೇಡಿ. ಸಾವಿರಾರು ವರ್ಷದಿಂದ ಮನೆ ಕಟ್ಟಿಕೊಂಡು ಬರ್ತಾ ಇದಾರೆ. ಅವರೆಲ್ಲಾ ಇಂತಹ ಮರ ಅಂತ ಡಿಸೈಡ್ ಮಾಡಿದ್ದಾರೆ. ಅದಕ್ಕೇನು ಕಾನೂನು ಮಾಡಬೇಕಾ….”
ಇವತ್ತು ಇವನು ಮಾತಿನಲ್ಲಿ ಸೋಲಬಾರದು ಅಂತ ಡಿಸೈಡ್ ಮಾಡಿದ್ದಾನೆ ಅನ್ನಿಸಿತು. ಅವನ ಲಾಜಿಕ್ ಅವನಿಗೇ ಬ್ಯುಮಾರಾಂಗ್ ಮಾಡಿದರೆ ಹೇಗೆ? ಈ ತರಹದ ಪ್ರಶ್ನೆ ಬಂದರೆ ನನ್ನ ಬುದ್ಧಿ ಎಲ್ಲೆಲ್ಲೋ ಓಡಿ ಎದುರಿನವರ ನಾಲಿಗೆ ಕಟ್ಟು ಹಾಕುತ್ತೆ ಅನ್ನುವುದು ಅನುಭವಕ್ಕೆ ಬಂದಿತ್ತು. ಸರಿ ಒಂದು ಡೈಲಾಗ್ ಹೊಡೆದೆ.
“ಸರಿ, ಇವನೇ. ಈ ಬಾಗಿಲು ಮಾಡಿದೋರ್ ಇದನ್ನ ನೋಡಿಲ್ಲ ಅಂತಿಯಾ…. ಅವರೂ ಎಲ್ಲಾ ನೋಡೇ ಮಾಡಿರೋದು…..”
“ಇದು ಯಾವ ಮರ ಅಂತ ಗೊತ್ತಿದ್ದರೆ ನೀವು ಹೀಂಗೆ ಮಾತಾಡ್ತಾ ಇರ್ಲಿಲ್ಲ……” ಅಂದ.
ಮಾತು ಅಲ್ಲಿಗೆ ಮುಗಿಸಬಾರದು ಅನ್ನುವ ಹಟ ನನ್ನಲ್ಲಿ ಹುಟ್ಟಿತ್ತಾ? ಅದು ನನಗೆ ತಿಳಿಯದು. ಮಾತು ಮುಂದುವರೆಸಿದೆ..
“ಯಾವ ಮರ ಅದು…?”
“ಅದು ಬೇವಿನ ಮರ ನಿಮ್ಮೊರ್‌ರು ಯಾರೂ ಅದರ ಹತ್ರವೂ ಹೋಗೋಲ್ಲ….” ಅಂದ. ಅಂದನಾ ಸಿಕ್ಕಿ ಹಾಕಿಕೊಂಡ!
ನಮ್ಮ ಪ್ರಾಚೀನ ಪದ್ಧತಿಯಿಂದ ಹಿಡಿದು ನಿನ್ನೆವರೆಗೆ ಬೇವಿನ ಮರ ನಮಗೆ ಹೇಗೆ ಪೂಜೆ ಪುನಸ್ಕಾರ ಔಷಧಿ ಪಾಷಧಿ ಮಂತ್ರ ಮಾಟ.. ಇದಕ್ಕೆಲ್ಲ ಉಪಯೋಗಕ್ಕೆ ಬರ್ತಿದೆ ಅಂತ ಕಲಿತದ್ದು ಕಲಿಯದೇ ಇದ್ದದ್ದು, ಕದ್ದದ್ದು ಹುಟ್ಟಿಸಿದ್ದ ಕತೆ ಇವೆಲ್ಲಾ ಸೇರಿಸಿ ಕೊರೆದು ಹಾಕಿಬಿಟ್ಟೆ!
ಒಂದೂವರೆ ಗಂಟೆಯ ಕೊರೆತ ಅವನ ಮೇಲೆ ಏನು ಎಫೆಕ್ಟ್ ಮಾಡಿದೆ ಅಂತ ಅವನ ಮುಖ ನೋಡಿದೆ. ಎರಡನೇ ಕ್ಲಾಸಿನ ಮಗೂಗೆ ಪಟ್ಟಾಗಿ ಕೂಡಿಸಿ ಎಮ್ಮೆಸ್ಸಿ ಕ್ಯಾಲ್ಕುಲಸ್ ಹೇಳಿದ ಹಾಗಿತ್ತು. ಪೆಚ್ಚು ಹೊಡೆದಿದ್ದ. ಕಣ್ಣು ತೇಲು ಗಣ್ಣು ಮೇಲು ಗಣ್ಣು ಆಗಿತ್ತು. ಇನ್ನು ಒಂದೇ ನಿಮಿಷ ನಾನು ಮಾತು ಮುಂದುವರೆಸಿದ್ದರೆ ಅಲ್ಲೇ ಬಿದ್ದು ವಿಲವಿಲ ಅಂತ ಒದ್ದಾಡಿ ಕೋಮಾಗೆ ಹೋಗಿ ಬಿಡ್ತಾ ಇದ್ದ ಅನಿಸಿಬಿಡ್ತು! ಮಾತಿಗೆ ಪೂರ್ಣ ವಿರಾಮ ಹಾಕಿದೆ. ಅವನು ಸುಧಾರಿಸಿಕೊಳ್ಳಲಿ ಅಂತ ಬಿಟ್ಟೆ. ಇದು ಮಾರನೇ ದಿವಸ ಮುಂದುವರೆಯಿತು. ಅವನ ತಲೆಯಲ್ಲಿ ಇಡೀ ದಿನದ ಸಿದ್ಧತೆ ಎದ್ದು ಕಂಡಿತು. ಇಡೀ ರಾತ್ರಿ ಇದರ ಬಗ್ಗೆ ಯೋಚನೆ ಮಾಡಿದ್ದಾನೆ ಅನಿಸಿತು. ಅವನೇ ಮಾತಿಗೆ ಧುಮುಕಿದ.
“ಬೇವಿನ ಮರದ, ಅದರ ಹತ್ರನಿಮ್ಮೊರ್‌ರು ಯಾರೂ ಹೋಗೋಲ್ಲ….” ತಲೆ ಆಡಿಸಿದೆ.
“ದೆವ್ವ ಮೆಟ್ಟಿರುತ್ತಲ್ವ? ದೆವ್ವ ಓಡಿಸಾಕೆ ಬೇವಿನ ಮರದ ರೆಂಬೆಲೇ ಬಡಿಯೋದೂ….” ಈಗಲೂ ತಲೆ ಆಡಿಸಿದೆ.
ನಾನು ಸುಮ್ಮನೆ ತಲೆ ಆಡಿಸ್ತಾ ಇದೀನಿ, ಅವನು ಹೇಳಿದ್ದಕ್ಕೆ ನಾನು ಒಪ್ತ ಇದೀನಿ ಅನ್ನುವ ನಂಬಿಕೆ ಅವನಲ್ಲಿ ಹುಟ್ಟಿತು ಅಂತ ಕಾಣ್ಸುತ್ತೆ. ಬೇವಿನಸೊಪ್ಪು ಹೊಗೆ ಹಾಕಿ ದೆವ್ವ ಓಡಿಸಿದ ಕತೆ ಹೇಳಿದ. ಅವನ ಮಾತು ನನ್ನ ಮೇಲೆ ಯಾವ ಎಫೆಕ್ಟ್ ಪ್ರಭಾವ ಮಾಡಿರಬಹುದು ಅಂತ ಒಂದು ಸೆಕೆಂಡ್ ಕಾದ. ಇದು ನಲವತ್ತು ವರ್ಷದ ಹಿಂದಿನ ಕತೆ. ಮೊಬೈಲು, ಅದರಲ್ಲಿ ಎನ್ಸೈಕ್ಲೋಪೀಡಿಯಾ, ವಿಕಿ ಪೀಡಿಯ ಇವೆಲ್ಲದರ ಕಲ್ಪನೆ ಸಹ ಇಲ್ಲದೇ ಇದ್ದ ಕಾಲ. ಎನ್ಸೈಕ್ಲೋಪೀಡಿಯಾ ಇತ್ತು, ಆದರೆ ಯಾರೂ ಅದನ್ನ ತಲೆ ಮೇಲೆ ಹೊತ್ತು ಒಯ್ತಾ ಇರಲಿಲ್ಲ! ಬೇವಿನ ಮರ ಅಂತ ಗೂಗಲ್ ಸರ್ಚ್ ಹಾಕಿ ಅದರ ಬಗ್ಗೆ ಸಂಪೂರ್ಣ ವಿವರ ತಿಳಿಯುವ ಯಾವ ಹಾದಿಯೂ ಇರದಿದ್ದ ಕಾಲ. ಹೀಗಾಗಿ ನಾನು ಇಮೀಡಿಯೇಟ್ ಆಗಿ ಬೇವಿನ ಮರದ ಬಗ್ಗೆ ಮಾಹಿತಿ ಕಲೆಹಾಕುವಷ್ಟು ಮೂಲ ಸೌಲಭ್ಯ ಇಲ್ಲದವ ಮತ್ತು ಏನಿದ್ದರೂ ನನ್ನ ತಲೆಯಲ್ಲಿ ತುಂಬಿದ್ದ ಕಸದೊಂದಿಗೆ ಮಾತ್ರ ಮಲ್ಲಯ್ಯನಿಗೆ ಸ್ಟಾಪ್ ಎಂದು ಹೇಳಬಹುದಿತ್ತು!
ನನಗೋ ಮಂತ್ರ, ತಂತ್ರ, ಸಂಧ್ಯಾವಂದನೆ, ಸಂಸ್ಕೃತ, ಪೂಜ್ ಪೂಜೇ ಮಂತ್ರ ಶ್ಲೋಕ ಇವು ಯಾವುದರ ಸಂಸ್ಕೃತಿಯೂ ಇಲ್ಲದವ. ಇವುಗಳ ಅನುಪಸ್ಥಿತಿ ಮೊದಲ ಬಾರಿಗೆ ನನಗೆ ಗೋಚರಿಸಿತು. ಮೊದಲಿಂದ ಹಿರಿಯರು ಅಪ್ಪ ಅಮ್ಮ ಹೇಳಿದ ಹಾಗೆ ಕೇಳಿಕೊಂಡು ಪೂಜೆ ಪುನಸ್ಕಾರ ಮಾಡಿಕೊಂಡು ಬಂದಿದ್ದರೆ ಬೇವಿನ ಮರದ ಬಗ್ಗೆ ಎಷ್ಟೊಂದು ವಿಷಯ ತಿಳಿದಿರಬಹುದಿತ್ತು ಅನಿಸಬೇಕೇ? ಇದೊಂದು ದೊಡ್ಡ ಡ್ರಾ ಬ್ಯಾಕ್ ಅನಿಸಿತು. ಇಂತಹ ಸಮಯದಲ್ಲೇ ನಿಮಗೆ ಶಾಕ್ ಆಗುವಂತಹ ಪ್ರಸಂಗದಲ್ಲೂ ಒಂದು ಕೋಲ್ಮಿಂಚು ಹೊಡೆಯುತ್ತೇ… ಕೋಲ್ಮಿಂಚು ಈಗ ಹೊಡೆಯಿತಾ…?
ಎಲ್ಲರಲ್ಲೂ ಒಂದು ಭಂಡದೈರ್ಯಇರುತ್ತಾ….
ಆದರೆ ಒಂದೇ ಒಂದು ಭಂಡ ಧೈರ್ಯ ಇತ್ತು ನೋಡಿ. ಅದು ಈಗ ಮುನ್ನೆಲೆಗೆ ಜಿಗಿಯಿತು. ಕೂಡಲೇ ನನ್ನ ಆರನೇ ಸೆನ್ಸ್ ಜಾಗೃತ ಆಯಿತು. ನನ್ನ ಅರಿವಿಗೆ ಬಂದಿದ್ದ ಬೇವಿಗೆ ಸಂಬಂಧಪಟ್ಟ ಲೇಖನಗಳು, ಅವುಗಳ ಬಗ್ಗೆ ಇದ್ದ ನಂಬಿಕೆಗಳು, ನಮ್ಮ ಪೂರ್ವಜರು ಬೇವನ್ನು ಉಪಯೋಗಿಸುತ್ತಿದ್ದ ರೀತಿ ರಿವಾಜು ಎಲ್ಲವೂ ತಲೆಯಲ್ಲಿ ಒಂದರ ಹಿಂದೆ ಒಂದು ಬಂದು ಕ್ಯೂ ನಿಂತವು. ಮಲ್ಲಯ್ಯನ ಕಡೆ ನೋಡಿದೆ. ಅವನ ಮುಖದಲ್ಲಿ ಒಂದು ರೀತಿಯ ವಿಚಿತ್ರ ಕಳೆ ಕಾಣಿಸಿತು. ಆ ಕಳೆ ಹೇಗಿತ್ತು ಅಂದರೆ ರಾಜ್ಯ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮುಂದೆ ಮಾತನಾಡಲು ಆಗದ ಹಾಗೆ ಒಂದು ಬಿಗಿ ಪಟ್ಟು ಹಾಕಿದ ಮುಖ್ಯ ಮಂತ್ರಿಯ ಮುಖದ ಹೋಲಿಕೆ ಕಾಣಿಸಿತು. ಮುಖ್ಯಮಂತ್ರಿ ಮುಖದ ಮೇಲಿನ ಉಡಾಫೆ, ವ್ಯಂಗ್ಯ ಆಹಾ ನಿನ್ನ ಸೋಲಿಸಿ ಕೆಡವಿಬಿಟ್ಟೆ ಆಹಾಹಾ ಎಂದು ಕೆಚ್ಚಿನಿಂದ ತೊಡೆ ತಟ್ಟಿ ಕೆನೆದ ಹಾಗಿತ್ತು. ಒಂದು ನಿಮಿಷ ಅವನ ವಿಜಯೋತ್ಸವ ನಡೆಯಲಿ ಎಂದು ಕಾದೆ.
“ಮಲ್ಲಯ್ಯ, ದೆವ್ವ ಬಿಡಿಸೋಕೆ ಬೇವಿನ ಬರಲಿನಿಂದ, ಸೊಪ್ಪಿನಿಂದ, ಅದರ ದಬ್ಬೆಯಿಂದ ಬಾರಿಸ್ತಾರೆ ಗೊತ್ತಾ… ದೆವ್ವ ಹೆದರಿ ಕುಯ್ಯೊ ಮರೋ ಅಂತ ಓಡಿಹೋಗುತ್ತೆ ಗೊತ್ತಾ?….”
ಅವನಿಗೆ ಕೊಂಚ ಕನ್ಫ್ಯೂಸ್ ಆಗಿತ್ತು. ನಾನು ಏನು ಹೇಳೋದಕ್ಕೆ ಹೊರಟಿದ್ದೀನಿ ಅಂತ ಗೊತ್ತಾಗದೆ ಗಲಿಬಿಲಿ ಗೊಂಡಿದ್ದ. ನಾನು ಕಂಟಿನ್ಯೂಯಿಸಿದೆ…
“ಅಮ್ಮ ಬಂದು ಹೋದಮೇಲೆ ಬೇವಿನ ಸೊಪ್ಪಿನ ನೀರು ಹಾಕಿ ಸ್ನಾನ ಮಾಡಿಸ್ತಾರೆ. ಕಜ್ಜಿ ಬಂದರೆ ಬೇವಿನಸೊಪ್ಪು ರುಬ್ಬಿ ಅದರ ಪೇಸ್ಟ್ ಮೈಗೆಲ್ಲಾ ಬಳಿತಾರೆ…..”
ಅವನಿಗೆ ಕನ್ಫ್ಯೂಸ್ ಹೆಚ್ಚಿತು. ಈಗ ಮೊಳೆ ಹೊಡಿಬೇಕು ಅನ್ನಿಸಿತಾ.. ತಲೆಯಲ್ಲಿ ಕ್ಯೂ ನಿಂತ ಮಾತುಗಳು ಸಲೀಸಾಗಿ ಒಂದೊಂದೇ ಆಚೆ ಬಂದವು!
“ಬೇವು ಅಂದರೆ ಏನು ಅಂತ ಅಂದುಕೊಂಡಿದ್ದಿಯಾ… ನಮ್ಮ ಪುರಾಣದಲ್ಲಿ ಏನು ಹೇಳಿದೆ ಅಂದರೆ ಅಮೃತವನ್ನು ಗರುಡನು ಸ್ವರ್ಗಕ್ಕೆ ಕೊಂಡೊಯ್ಯುತ್ತಿದ್ದಾಗ ಕೆಲವು ಹನಿಗಳು ಭೂಮಿಗೆ ಬಿದ್ದವಂತೆ, ಹಾಗೆ ಬಿದ್ದ ಹನಿಗಳಿಂದ ಬೇವು ಸಸಿ ಹುಟ್ಟಿಕೊಂಡಿತು. ಅದು ಬೆಳೆದು ಹೆಮ್ಮರ ಆಯಿತು. ಅದರೊಳಗೆ ಜಗತ್ತಿನ ಎಲ್ಲಾ ಪಕ್ಷಿ ಸಂಕುಲಗಳು ಆಶ್ರಯ ಪಡೆದವು. ಎಷ್ಟೋ ಪೀಳಿಗೆ ಅದರಲ್ಲೇ ಬೆಳೆಯಿತು ಗೊತ್ತಾ… ಅದಕ್ಕೋಸ್ಕರ ಬೇವು ಅಂದರೆ ನಮಗೆ ತುಂಬಾ ಶ್ರೇಷ್ಠ ಮತ್ತು ಅದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ….” ಮಲ್ಲಯ್ಯ ಇದನ್ನು ಆಂಟಿಸಿಪೆಟ್ ಮಾಡಿರಲಿಲ್ಲ! ಕಣ್ಣು ಬಾಯಿ ಅಗಲಕ್ಕೆ ತೆರೆದು ನಾನು ಹೇಳಿದ್ದನ್ನು ಡೈಜೆಸ್ಟ್ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದ.
ಈಗ ನನ್ನ ಧಾಟಿ ಕೊಂಚ ಬದಲಾಯಿಸಿದೆ. ಹೀಗೆ… ಬೇವು ಭಾರತೀಯ ಸಂಸ್ಕೃತಿಯಲ್ಲಿ ಬಹಳ ಮಹತ್ವದ ಸ್ಥಾನವನ್ನು ಪಡೆದಿದೆ. ಅದರ ಪೌರಾಣಿಕ ಮಹತ್ವ ಹೀಗಿದೆ:
* ದೈವಿಕ ಮೂಲ: ಹಿಂದೂ ಪುರಾಣಗಳ ಪ್ರಕಾರ, ಬೇವು ದೈವಿಕ ಮೂಲವನ್ನು ಹೊಂದಿದೆ. …
ಮಲ್ಲಯ್ಯನ ಕಣ್ಣು ದೊಡ್ಡದಾಯಿತು. ಬಾಯಿ ಇನ್ನೂ ತೆರೆಯಿತು.
“ಒಂದು ದೇವತೆ ಹೆಸರು ಗೊತ್ತಾ ಹಿಮಾದೇವಿ ಅಂತ… ಅವಳನ್ನು ಶೀತಲ ದೇವಿ ಅಂತ ನಾರ್ತ್ ನವರು ಕೂಗ್ತಾರೆ. ಯಾಕೆ ಗೊತ್ತಾ? ಆಕೆ ಶೀತಕ್ಕೆ ದೇವತೆ. ಶೀತ ಅಂದರೆ ಗೊತ್ತಾ ಮಕ್ಕಳಿಗೆ ಕೆಮ್ಮು ನೆಗಡಿ ಬರುತ್ತಲ್ಲಾ ಅದು….
ಮಲ್ಲಯ್ಯನ ಕಣ್ಣು ಚಿಕ್ಕದು ಆಗ್ತಾ ಇದೆ ಅಂತ ಅನಿಸಿತು. ನಾನು ಮುಂದುವರೆಸಿದೆ…
“ಶೀತಲ ದೇವಿ ಸಿಡುಬು ರೀತಿ ರೋಗದಿಂದ ಜನರನ್ನು ಪ್ರೊಟೆಕ್ಟ್ ಮಾಡುತ್ತೆ ಅನ್ನುವ ನಂಬಿಕೆ. ನಾರ್ತ್‌ನಲ್ಲಿ ಬೇವಿನ ಮರದ ಕೆಳಗೆ ಒಂದು ಕಲ್ಲುಗುಂಡು ಇಟ್ಟು ಪೂಜೆ ಮಾಡ್ತಾರೆ. ಅದು ಶೀತಲ ದೇವಿ ಅಂತ ಅವರ ನಂಬಿಕೆ…..
ಹೀಗೆ ಪುರಾಣ ಪುಣ್ಯ ಶ್ರವಣ ಆಗ್ತಾ ಆಗ್ತಾ ಮಲ್ಲಯ್ಯ ನಾರ್ಮಲ್ ಆದ ಅನ್ನಿಸ್ತಾ..
ನನ್ನ ಡೈಲಾಗು ಪೂರ್ತಿ ಮಾಡಬೇಕಿತ್ತಲ್ಲಾ….
“ಬೇವಿನ ಮರ ಅಂದರೆ ಶ್ರೀ ಕೃಷ್ಣನ ಸ್ವರೂಪ ಅಂತ ಹೇಳ್ತಾರೆ. ದೇವರು ಅಂದರೆ ನಮ್ಮನ್ನ ಕಾಪಾಡಬೇಕು ತಾನೇ? ಹಾಗೇನೇ ಈ ಮರ ನಮ್ಮನ್ನ ಕಾಪಾಡುತ್ತೆ ಅಂತ ನಂಬಿಕೆ.. ಹಬ್ಬ ಹರಿದಿನಗಳಲ್ಲಿ ಮತ್ತು ಶುಭ ಕಾರ್ಯಗಳಲ್ಲಿ ಬೇವಿನ ಎಲೆಗಳನ್ನು ಬಳಸಲಾಗುತ್ತದೆ. ಮನೆಯ ಬಾಗಿಲಿಗೆ ಬೇವಿನ ತೋರಣವನ್ನು ಕಟ್ಟುವುದು ವಾಡಿಕೆ….
ಮಲ್ಲಯ್ಯ ನಾರ್ಮಲ್ ಸ್ಟೇಜ್‌ಗೆ ಬಂದಿದ್ದ. ಅವನ ಮನಸಿಗೆ ಮತ್ತೆ ಭಯ ಗೊಂದಲ ಹುಟ್ಟಿಸಿ ಅವನನ್ನು ತಬ್ಬಿಬ್ಬು ಮಾಡಬಾರದು ಅಂತ ವಿವೇಕ ಬುದ್ಧಿ ಹೇಳಿತು. ಕಾಂಕ್ಲೂಡಿಂಗ್ (concluding) ಟಚ್ ಕೊಡಬೇಕು ತಾನೇ…
“ಮಲ್ಲಯ್ಯ ಉಗಾದಿ ದಿವಸ ಬೇವು ಬೆಲ್ಲ ತಿ ನ್ನುತ್ತೀಯಲ್ಲಾ ಆ ಹೂವು ಈ ಬೇವಿನ ಮರದ್ದೇಯಾ….. ಅಂದೆ .
ಮಲ್ಲಯ್ಯ ಒಂದು ಶಾಕ್‌ನಿಂದ ಹೊರಗೆ ಬಂದಿದ್ದ. ಆದರೆ ಇನ್ನೂ ತನ್ನ ವಾದ ಮತ್ತು ಹಟ ಹಾಗೇ ಹಿಡಿದಿದ್ದ.
“ಅಲ್ಲಾ ಸಾಮಿ ಬೇವಿನಮರ ಅಂದರೆ ದೇವರು ಅಂತ ಹೇಳಿದಿರಿ……”
“ಹೌದು, ಅದು ದೇವರ ಸ್ವರೂಪ….”ಅಂದೆ.
“ಮತ್ತೆ ಅದನ್ನ ಪೂಜೆ ಮಾಡ್ತೀರಾ ತಾನೇ…..?’
ಮಲ್ಲಯ್ಯ ಇನ್ನೆಲ್ಲೋ ಎಳೆಯುತ್ತಾ ಇದಾನೆ ಅಂತ ನಿಮ್ಮ ಮನಸ್ಸಿಗೆ ಬರ್ತಾ ಇದೆ ತಾನೇ? ನನಗೂ ಅದೇ ಆಗ ನಲವತ್ತು ವರ್ಷಗಳ ಹಿಂದೆ ಅನಿಸಿದ್ದು! ಬುದ್ಧಿವಂತರು ಯಾವಾಗಲೂ ಒಂದೇ ತರಹ ಯೋಚಿಸುತ್ತಾರೆ ಅಂತ ಹೇಳುತ್ತಾರೆ. ಹಾಗಾಗಿ ಈಗ ನಾನು ನಿಮಗೆ ಸಮ!
ಮಲ್ಲಯ್ಯ ಅದೇನು ಹೇಳುತ್ತಾನೆ, ಅದನ್ನು ಕೇಳಿ ಬಿಡೋಣ ಅನಿಸಿತು.
“ಹೌದು ಅದನ್ನ ಪೂಜೆ ಮಾಡ್ತಾರೆ. ನಮ್ಮ ಮನೇಲಿ ನನ್ನ ಹೆಂಡ್ತಿ ಪೂಜೆ ಮಾಡ್ತಾರೆ…..” ಅಂದೆ.
“ಹಾಗಿದ್ರೆ ನಿಮ್ಮವರು ಈ ಬಾಗಿಲು ಒಪ್ಪೊಲ್ಲ ಬಿಡಿ….” ಅಂದ, ಅವನ ಮಾತಿನಲ್ಲಿ ವಿಶ್ವಾಸ ತುಂಬಿ ತುಳುಕುತ್ತಾ ಇದೆ ಅನಿಸಿತು. ಅವನ ತಲೆಯಲ್ಲಿ ಇರೋದನ್ನು ಆಚೆ ಬರಿಸಿ ಈಗಲೇ ಅದಕ್ಕೆ ತಕ್ಕ ಬಂದೋ ಬಸ್ತ್ ಮಾಡಿಬಿಡಬೇಕು ಅನಿಸಿತು. ಹೆಂಡತಿ ತಲೆಯಲ್ಲಿ ಇವನು ಏನಾದರೂ ತುಂಬಿ ಅವಳೂ ಈ ಬಾಗಿಲು ಬೇಡ ಅಂದರೆ.. ಅದಕ್ಕೆ ಕಾಸು ಹೇಗೆ ಹೊಂದಿಸೋದೂ? ಇದು ನನ್ನ ಮನಸಿಗೆ ಆ ಕ್ಷಣ ಹೊಳೆದದ್ದು. ಅವನ ಮನಸು ತೆರೆಸಬೇಕು ತಾನೇ?
“ಹೌದಲ್ಲವಾ ಮಲ್ಲಯ್ಯ? ಅವರು ಒಪ್ಪ ಬೇಕಲ್ವಾ, ಅವರು ಒಪ್ಪದಿದ್ರೆ ಬೇರೇನೆ ಮಾಡಿಸಬೇಕಲ್ಲಾ…..” ಅಂತ ಹೇಳ್ತಾ ಜೇಬಿನಿಂದ ಪ್ಯಾಕೆಟ್ ತೆಗೆದೆ. ತಗೋ ಅಂತ ಎದುರು ಹಿಡಿದೆ. ಮ್ಯಾಚಸ್ ಕೊಡು ಅಂದೆ. ಒಂದು ತೆಗೆದು ಬಾಯಿಗಿಟ್ಟು ಕಡ್ಡಿ ಗೀರಿದ, ನನಗೂ ಅಂಟಿಸಿದ. ಇದು ಒಂದು ಟೆಕ್ನಿಕ್ ನಾನೇ ಕಂಡು ಹಿಡಿದಿದ್ದೆ. ಏನಾದರೂ ಸಮಸ್ಯೆ ಹುಟ್ಟಿದರೆ ಓವರ್ ಏ ಸ್ಮೋಕ್ ಬಗೆಹರಿಸುವ ವಿಧಾನ ಅದು. ನೂರಕ್ಕೆ ತೊಂಬತ್ತು ಪ್ಲಸ್ ಒಂಬತ್ತು ಸಲ ಇದು ಸಕ್ಸಸ್ ಆಗುತ್ತೆ, ಇದೂ ಸಹ ನನ್ನ ಅನುಭವ! ಇಟ್ ವರ್ಕಡ್ ನೌ….!
ಮಲ್ಲಯ್ಯ ದೀರ್ಘವಾಗಿ ಹೊಗೆ ಒಳಗೆ ಎಳೆದು ಆಚೆ ಬಿಟ್ಟ.
“ಹೇಳು ಅದೇನು ಪ್ರಾಬ್ಲಂ ಬೇವಿನ ಮರದಲ್ಲಿ ನೀನು ಕಂಡು ಹಿಡಿದದ್ದು……” ಅಂದೆ.
“ಅಲ್ಲಾ ಸಾಮಿ ಅದು ದೇವರು ಅಂತೀರಿ. ದಿನಾ ದೇವರ ಮೇಲೆ ಕಾಲಿಟ್ಟು ನಡೀತೀರಾ…..” ಅಂದ.
“ದೇವರ ಮೇಲೆ ಎಲ್ಲಿ ನಡೀತೀವಿ? ಅದರ ಕೆಳಗೆ ನಾವು ನಡೆಯೋದು…..”
ಮಲ್ಲಯ್ಯ ನಕ್ಕನಾ? ಅವನ ಬಾಯಿ ಕೊಂಕಿದ ಹಾಗೆ ಕಾಣಿಸಿತು.
“ಹೊಸಿಲು? ಅದೇನು ತಲೆ ಮೇಲಿರುತ್ತಾ….”
ಅವನ ಯೋಚನೆ ತಿಳೀತಾ? “ಮುಂಬಾಗಿಲು ಬಿಟ್ಟು ಬೇರೆ ಎಲ್ಲೂ ಹೊಸಿಲು ಮಡಗಲ್ಲ, ಅದೇ ಲೇಟೆಸ್ಟ್ ಫ್ಯಾಶನ್…” ಅಂದೆ.
“ಸರಿ ಬಿಡಿ ನಾನೂ ಅದನ್ನೇ ಹೇಳೋಣ ಅಂತಿದ್ದೆ….” ಅಂದ. ಅವನು ಪೂರ್ತಿ ಮನಸು ಬಿಚ್ಚಿಲ್ಲ ಇನ್ನೂ ಏನೋ ಅವನ ಬುರುಡೆ ಒಳಗೆ ಇದೆ ಅನಿಸಿತು. ಅದನ್ನ ಹೇಗೆ ಆಚೆ ಬರಿಸೋದು?
ಮತ್ತೆ ಪ್ಯಾಕೆಟ್ ಮುಂದೆ ಇಟ್ಟೆ. ಎರಡೋ ಮೂರೋ ಖಾಲಿ ಆಯಿತು. ತಲೆಯಿಂದ ಅವನ ಪ್ಲಾನು ಆಚೆ ಬರಲಿಲ್ಲ. ಬಟವಾಡೆಗೆ ಇನ್ನೂ ಮೂರು ದಿವಸ ಇದೆ. ಅಷ್ಟರಲ್ಲಿ ಇವನ ಬಾಯಿ ಬಿಡಿಸಿದರೆ ಆಯ್ತು ಅಂತ ಅವತ್ತು ಬಿಟ್ಟೆ. ಎರಡು ದಿವಸ ಇದೇ ತಲೆ ತಿಂದು ಬಿಡ್ತಾ? ಹೆಂಗಸರು ಇಂತಹ ವಿಷಯದಲ್ಲಿ ಅದೂ ಜೀವಮಾನದಲ್ಲಿ ಒಂದೇ ಒಂದು ಸಲ ಕಟ್ಟುವ ಮನೆಗಳಲ್ಲಿ ಯಾವುದೋ ಒಂದು ಅನಿಷ್ಟ ಇರುವುದು ಒಪ್ಪೇ ಒಪ್ಪುತ್ತಾರೆ ಎನ್ನುವ ನಂಬಿಕೆ ಯಾವ ಗಂಡು ಮುಂಡೆದಕ್ಕೂ ಇಲ್ಲ ಅಂತ ಹೇಳುವ ಧೈರ್ಯ ಇಲ್ಲ ಎನ್ನುವುದು ನನ್ನ ಅನಿಸಿಕೆ. ಎರಡನೇ ದಿವಸದ ಸಂಜೆ ಇದಕ್ಕೂ ಒಂದು ಉಪಾಯ ಸಿಕ್ತು. ಅದಾಗಿದ್ದು ಹೀಗೆ..
ನಮ್ಮ ಫ್ಯಾಕ್ಟರಿಯಲ್ಲಿ ಮಿಲಿಟ್ರಿಯಲ್ಲಿ ಕೆಲಸ ಮಾಡಿದ್ದವರು ತುಂಬಾ ಜನ ಇದ್ದರು ಅಂತ ಹೇಳಿದ್ದೆ ನೆನಪಿದೆ ತಾನೇ? ಅವರಿಗೆ ರಂ ಅನ್ನುವ ಹಾಟ್ ಡ್ರಿಂಕ್ಸ್ ಅನ್ನು ತಿಂಗಳಿಗೆ ಅದೆಷ್ಟೋ ಬಾಟಲು ರೇಶನ್ ಅಂತ ಕೊಡುತ್ತಿದ್ದರು. ಅದೂ ಕಡಿಮೆ ಬೆಲೆಗೆ. ಸುಮಾರು ಜನ ಅವರ ಬಳಿ ಕೊಳ್ಳುತ್ತಿದ್ದರು. ಹೀಗೆ ವಿನಿಮಯ ಆಗುವ ಸಮಯದಲ್ಲಿ ನಾನಿದ್ದೆ. ಒಬ್ಬ ಕೋಲಿಗು ತಮಾಶೆಗೆ ಸಾರ್‌ಗೆ ಒಂದು ಕೊಡ್ರೋ ಅಂತ ತಮಾಷೆ ಮಾಡಿದ, ನನಗೆ ಅಭ್ಯಾಸ ಇಲ್ಲ ಅಂತ ಗೊತ್ತಿದ್ದೂ. ಹೀಗೆ ಒಂದು ದೊಡ್ಡ ಬಾಟಲು ಕೈಗೆ ಬಂತಾ? ಇದನ್ನು ಮನೆಗೆ ಒಯ್ದು ಯಾವುದಾದರೂ ಬುದ್ಧಿವಂತ ಹಗಲು ಕಂಡ ಬಾವಿಯಲ್ಲಿ ಬೀಳುತ್ತಾನೆಯೇ? ಬುದ್ಧಿವಂತ ಏನು ಮಾಡಿದ ಅಂದರೆ ಸೀದಾ ಮಲ್ಲಯ್ಯನ ಕಣ್ಣಿಗೆ ಈ ಬಾಟಲು ಕಾಣುವಂತೆ ಇಟ್ಟೆ. ಹಿಂದೆ ನಿಂತ ಮಾತು ಕಂಟಿನ್ಯೂ ಮಾಡಿದೆ.
“ಸುಮಾರು ಮೇಸ್ತ್ರಿ ಕೆಲಸ ಮಾಡಿದ್ದೀಯಾ ಅಲ್ವಾ ಮಲ್ಲಯ್ಯ…..?”
“ಸಾಮಿ ನಿಮ್ಮದು ಹದಿನಾರನೆದು …..” ಅಂದ.
“ಎಲ್ಲಾ ಮನೆಯವರೂ ನಿನ್ನ ಕೆಲಸ ತುಂಬಾ ಲೈಕ್ ಮಾಡ್ತಾ ಇದ್ರಾ…”
“ಸಾಮಿ ಇದೇನು ಹಿಂಗೆ ಕೇಳ್ತಿರಿ…? ಕೆಲವು ಸಲ ಗಂಡಸರು ಕೈಯಲ್ಲಿ ಕಾಸಿಲ್ಲ ಅಂತ ಏನೇನೋ ಕೆಲಸ ಬೇಡ ಅಂತ ಬಿಟ್ ಬಿಡೋರ? ನಾನು ಅವರ ಎಂಗಸೀರಿಗೆ ಹೇಳಿ ಇದು ಆಗ ಬೆಕ್ರಾ… ಅಂತ ಹೇಳಿ ಅವರು ಗಂಡಂಗೆ ಹೇಳಿ ಮಾಡಿಸ್ತಿದ್ರು…..”
ಸರಿ ಈ ನನ್ನಮಗ ನನ್ನಾಕೆ ಎದುರಿಗೆ ಬೇವಿನ ಮರದ ವಿಷಯ ಯಾವಾಗಲಾದರೂ ತಿಕ್ಕಲು ತಿರುಗಿದಾಗ ತೆಗೀತಾನೆ ಅನ್ನುವ ಸಂಶಯ ಹುಟ್ಟಬೇಕೆ? ಇದರ ನಿವಾರಣೆ ಹೇಗೆ?
ಸರಕ್ ಅಂತ ಒಂದು ಐಡಿಯಾ ಮಿಂಚಬೇಕೇ?
“ಮಲ್ಲಯ್ಯ ತಗೋ ಇದು ನಿನಗೆ ಅಂತ ತಂದೆ. ತಗೋ ಇದು…”
ಅವನ ಮುಖ ಸೆವೆನ್ಟಿ ಎಂ ಎಂ ಸ್ಕ್ರೀನ್ ಅಷ್ಟು ಅಗಲ ಆಯ್ತು. ಕಣ್ಣು ಮುಚ್ಚಿಕೊಂಡು ಸಂತೋಷವನ್ನು ಅನುಭವಿಸುತ್ತಾ ಇದ್ದ.
“ಅಮ್ಮಾವ್ರ ಎದುರು ಐಡಿಯಾ ಹೇಗೆ ಕೊಡ್ತೀರಾ..”
“ತುಂಬಾ ಸುಲಭ ಸಾಮಿ. ಬಾಗಿಲು ಎಲ್ಲೋ ಇಡಬೇಕು ಕಿಟಕಿ ಎಲ್ಲೋ ಇಡಬೇಕು ಒಗೆಯೋ ಬಂಡೆ ಎಲ್ಲೋ ಮಡಗಬೇಕು ಅಂತ ಗಂಡಸು ನಮಗೆ ಹೇಳಿರುತ್ತೆ ಅನ್ನಿ. ಅಮ್ಮೋರು ಬಿಲ್ಡಿಂಗ್ ನೋಡಕ್ಕೆ ಅಂತ ಅವರ ಫ್ರೆಂಡ್ಸ್ ಜತೆ ಬರ್ತಾರೆ ನೋಡಿ ಆಗ ಗಾರೆ ಮೇಸ್ತ್ರಿನೂ ನಾನೂ ಮಾತಾಡೋದು. ಓಗೆಯೋ ಬಂಡೆ ಇಲ್ಲಿ ಮಡಗಿದ್ರೆ ಚೆನ್ನ, ಆದರೆ ಓನರ್‌ಗೆ ಇಲ್ಲಿ ಚೆನ್ನ ಅಂತೆ ಅಂತ ಅವರ ಐಡಿಯ ಉಲ್ಟಾ ಹೊಡೆಯೋದು……” ಹೀಗೆ ಮೈಮರೆತು ಕತೆ ಬಿಡ್ತಾ ಇದ್ದನಾ? ಮಧ್ಯೆ ಥಿ ಮೋಸ್ಟ್ ಇಂಪಾರ್ಟೆಂಟ್ ಪ್ರಶ್ನೇ ತೂರಿಸಿದೆ..
“ಬೇವಿನಮರದ ಬಾಗಿಲು ಅದು ಹೇಗೆ ಹೇಳ್ತಿಯಾ…”
ಮಾತಿನಲ್ಲಿ ಮುಳುಗಿದ್ದ ಅಂತ ಹೇಳಿದ್ದೆ ತಾನೇ ಮೂಡಿನಲ್ಲಿ ಬಾಯಿ ಬಿಟ್ಟ.
“ಮೊದಲು ದೇವರು ಮೆಚ್ಚುಲ್ಲ ದಿನಾ ಯಾರ ಯಾರದ್ದೋ ಕಾಲಲ್ಲಿ ತುಳಿಸಿಕೊಳ್ಳೋದು ಅನ್ನೋದು. ಅದಾದಮೇಲೆ ಮುಟ್ಟು ಮೈಲಿಗೆ ಸೂತಕ ಪಾತಕ ಇರೋ ಮನೇಲಿ ದೇವರ ಮರ ಇದ್ದರೆ ವಂಶ ಬೆಳೆಯಾಕಿಲ್ಲ ಅಂತ……” ಇದ್ದಕ್ಕಿದ್ದ ಹಾಗೆ ಕಣ್ಣು ತೆರೆದ ಮತ್ತು ಮಾತು ತಟಕ್ ಅಂತ ನಿಂತಿತು!
“ಸಾಮೀ, ಹಿಂಗಾ ಮೋಸ ಮಾಡೋದೂ….” ಅಂತ ಪೆಚ್ಚು ಪೆಚ್ಚಾಗಿ ನಕ್ಕ. ಎಸ್ಸೆಲ್ಸಿ ಫೇಲಾಗಿರೂ ವಿದ್ಯಾಮಂತ್ರಿ ಇಂಗ್ಲೀಷ್‌ನಲ್ಲಿ ಮಾತಾಡಿ ಸಿಕ್ಕಿಕೊಂಡವನ ಮುಸುಡಿ ಹೇಗಿರುತ್ತೋ ಹಾಗಿತ್ತು ಅವನ ಮುಸುಡಿ!
ಮುಂದೆ ಬಾಗಿಲು ಜೋಡಿಸುವ ಮುನ್ನ ಈ ಪ್ರಾಬ್ಲಂ ಹೇಗೆ ಸಾಲ್ವ್ ಮಾಡಿದೆ ಮತ್ತು ಈ ಬಾಗಿಲಿಗೆ ಪೇಟೆಂಟ್ ಮಾಡಿಸದೇ ಹೇಗೆ ಕೋಟಿ ಕೋಟಿ ಕಳೆದುಕೊಂಡೆ ಎನ್ನುವುದು ಈಗ ಮರೆತರೂ ಮರೆಯಲಾಗದ ಕಥೆ! ಅದು ಮುಂದಿನ ಎಪಿಸೋಡ್‌ನಲ್ಲಿ. ಅಲ್ಲಿಗಂಟ ಟೇಕ್ ಕೇರ್…!
ಮುಂದುವರೆಯುತ್ತದೆ…

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
ಮಲ್ಲಯ್ಯನಿಗೆ ಹೆಂಗಾರ ಕಾಣ್ಲಿ, ನನಗಂತೂ ಗೋಪಾಲಕೃಷ್ಣ ಅವರು ರತ್ನಾಕರವರ್ಣಿಯ ಹಾಗೆ ಕಾಣಿಸ್ತಾರೆ. ಹಳೆಯ ಬೆಂಗಳೂರಿನ ಕಥೆಗಳೆಂಬ ರತ್ನಗಳ ಆಕರ ಈ ಸರಣಿಯಲ್ಲಿ ಇದೆ ತಾನೆ? ಈ ಎಲ್ಲಾ ‘ಸತ್ಯಕಥೆ’ಗಳನ್ನು ವರುಣಿಸಿರುವ ಬಗೆ ಅದ್ಭುತ ಮತ್ತು ಆಪ್ತ ಅಲ್ಲವೆ? ಆದ್ದರಿಂದ ಗೋಪಾಲಕೃಷ್ಣ ಅವರು ರತ್ನಾಕರವರ್ಣಿ. ಆತನದು ‘ಭರತೇಶ ವೈಭವ’ವಾದರೆ ಗೋಪಾಲಕೃಷ್ಣ ಅವರದು ‘ಬೆಂಗಳೂರು ವೈಭವ’, ಭರಪೂರ ವೈಭವ!
ಈ ಎಲ್ಲ ಲೇಖನಗಳ ಸಂಗ್ರಹವು ಪುಸ್ತಕ ರೂಪದಲ್ಲಿ ಹೊರಬರಲಿ. ಆ ಉದ್ಗ್ರಂಥವು ಕನ್ನಡ ಸಾಹಿತ್ಯದ ಇತಿಹಾಸದಲ್ಲಿ, ಬೆಂಗಳೂರಿನ ಇತಿಹಾಸದ ಬಗ್ಗೆ, ಅತಿ ವಿಶಿಷ್ಟ, ಅತಿ ವಿಸ್ತಾರ, ಅತ್ಯಾಪ್ತ ಲಲಿತ ಪ್ರಬಂಧ ಗ್ರಂಥವಾಗುವುದರಲ್ಲಿ ಸಂಶಯವಿಲ್ಲ.
– ಎಚ್. ಆನಂದರಾಮ ಶಾಸ್ತ್ರೀ
ಹೆಂಗೆ ತಾನೇ ನನ್ನ ಕೃತಜ್ಞತೆ ತಿಳಿಸಲಿ?ಧನ್ಯವಾದಗಳು, ಶ್ರೀ ಆನಂದರಾಮ ಶಾಸ್ತ್ರೀ ಅವರೇ
ಮೇಲಿನ ನನ್ನ ಪ್ರತಿಕ್ರಿಯೆಯಲ್ಲಿ, ‘ವರುಣಿಸಿರುವ’ ಎಂಬ ಪದವನ್ನು ‘ವರ್ಣಿಸಿರುವ’ ಎಂದು ಓದಿಕೊಳ್ಳಿ.
– ಎಚ್. ಆನಂದರಾಮ ಶಾಸ್ತ್ರೀ
ಶ್ರೀ ಆನಂದ ರಾಮ ಶಾಸ್ತ್ರೀ ಅವರೇ ನಮಸ್ಕಾರ. ವರುಣಿಸು ವರ್ಣಿಸು ಮಾಡಿ ಕೊಂಡೆ……!