Advertisement
ಭಾವವಿರೇಚನಗೊಳಿಸುವ ದೃಶ್ಯಕಾವ್ಯ ‘ಬಂಧಮುಕ್ತ’: ಡಾ. ಪ್ರಭು ಗಂಜಿಹಾಳ ಬರಹ

ಭಾವವಿರೇಚನಗೊಳಿಸುವ ದೃಶ್ಯಕಾವ್ಯ ‘ಬಂಧಮುಕ್ತ’: ಡಾ. ಪ್ರಭು ಗಂಜಿಹಾಳ ಬರಹ

`ಬಂಧಮುಕ್ತ’ ಚಿತ್ರ ಇಂದಿನ ಕಾಲಘಟ್ಟದಲ್ಲಿ ಯಾಕೆ ವಿಶೇಷವಾದದ್ದು ಎಂಬುದರ ಕುರಿತು ವಿವರಿಸುವುದಾದರೆ; ಮೊದಲನೇಯದಾಗಿ ಈ ಚಿತ್ರದ ಶೀರ್ಷಿಕೆಯೇ ಒಂದು ಸಕಾರಾತ್ಮಕ ಸಂದೇಶ ನೀಡುವಂತಹದು. ಮನುಷ್ಯ ಹುಟ್ಟಿನಿಂದ ಸಾವಿನವರೆಗೆ ಯಾವುದಾದರೊಂದು ಹಿಡಿತಕ್ಕೆ ಸಿಲುಕಿ ಅದರಿಂದ ಹೊರ ಬರಲು ಹೆಣಗಾಡುತ್ತಿರುತ್ತಾನೆ. ಸಾವು ಮಾತ್ರ ಮನುಷ್ಯನ ನಿಜವಾದ ಬಿಡುಗಡೆ ಎಂದು ಹೇಳಬಹುದಾದರೂ ಸಾವಿಗೂ ಮುನ್ನವೇ ಬಂಧನಗಳಿಂದ ಮುಕ್ತವಾಗುವ ಮನಸ್ಥಿತಿಯೇ ಬಿಡುಗಡೆಯ ಮಾರ್ಗ ಎಂದು ವಾಖ್ಯಾನಿಸಬಹುದು. ಇದು ಮನೋವಿಜ್ಞಾನ ಮತ್ತು ಆಧ್ಯಾತ್ಮಿಕ ತತ್ವವನ್ನು ತಿಳಿಸುವ ವಿಚಾರ.
ಕುಮಾರ ಬೇಂದ್ರೆ ನಿರ್ದೇಶನದ “ಬಂಧಮುಕ್ತ” ಸಿನಿಮಾದ ಕುರಿತು ಡಾ. ಪ್ರಭು ಗಂಜಿಹಾಳ ಬರಹ

ಸದಭಿರುಚಿಯ ಚಿತ್ರಗಳಿಗಿರುವ ಸಾಮಾಜಿಕ ಜವಾಬ್ದಾರಿಯ ಒಳನೋಟ

ಕನ್ನಡ ಸಾಹಿತ್ಯ ಪರಂಪರೆ ಎಷ್ಟು ಶ್ರೀಮಂತವಾಗಿದೆಯೋ ಕನ್ನಡದ ಸದಭಿರುಚಿಯ ಚಲನಚಿತ್ರಗಳ ಪರಂಪರೆಯೂ ಅಷ್ಟೇ ಸಮೃದ್ಧವಾಗಿ ಬೆಳೆದಿದೆ. ಅರವತ್ತು-ಎಪ್ಪತ್ತರ ದಶಕದ ಕಾಲದಿಂದ ಈವರೆಗೂ ಸದಭಿರುಚಿಯ ಸಿನಿಮಾಗಳ ಪರಂಪರೆ ಬೆಳೆಯುತ್ತ ಬೇರೆ ಬೇರೆ ಪಲ್ಲಟಗಳನ್ನು ಕಾಣುತ್ತ ಬಂದಿದ್ದು ಈಗ ಅದರ ಸ್ವರೂಪ ಮತ್ತೊಂದು ಆಯಾಮವನ್ನು ಪಡೆಯುತ್ತಿದೆ. ಇದನ್ನು ಈ ಕಾಲಘಟ್ಟದ ಚಿತ್ರವೊಂದರ ಉದಾಹರಣೆಯೊಂದಿಗೆ ತುಲನೆ ಮಾಡಬಹುದು.

(ಕುಮಾರ ಬೇಂದ್ರೆ)

ಈ ಪೀಠಿಕೆಯ ಉದ್ದೇಶ ಇಷ್ಟೇ, ಈಗಷ್ಟೇ ತೆರೆಗೆ ಬರಲು ಸಿದ್ಧವಾಗಿರುವ, ಲೇಖಕರಾದ ಪ್ರೊ. ಶಿವಪುತ್ರಪ್ಪ ಆಶಿ ಅವರ ಸಾಹಿತ್ಯ ಕೃತಿ ಆಧಾರಿತ ಹಾಗೂ ಪತ್ರಕರ್ತ, ಲೇಖಕ ಕುಮಾರ ಬೇಂದ್ರೆ ನಿರ್ದೇಶನದ ಸದಭಿರುಚಿಯ ಚಲನಚಿತ್ರ `ಬಂಧಮುಕ್ತ’ ಚಿತ್ರದ ವಿಶೇಷತೆಗಳನ್ನು ತಿಳಿಸುವುದು. ಕನ್ನಡ ಸಿನಿಮಾ ಚರಿತ್ರೆಯಲ್ಲಿ ಈಗಾಗಲೇ ಹತ್ತಾರು ಬಗೆಯ ಮಾದರಿಗಳು, ನೂರಾರು ಪ್ರಯೋಗಗಳು ಆಗಿ ಹೋಗಿರುವುದು ಸಾಮಾನ್ಯ. ಆದರೆ ಈ ಪ್ರಯೋಗಕ್ಕೆ ಕೊನೆ ಇಲ್ಲ ಎಂಬುದಕ್ಕೆ ಕನ್ನಡದಲ್ಲಿ ಇತ್ತೀಚಿನ ಕಾಲಘಟ್ಟದಲ್ಲಿ ಬಂದಿರುವ ಹಲವು ಚಿತ್ರಗಳೇ ನಿದರ್ಶನ. ಇದರಲ್ಲಿ ಸಾಮಾಜಿಕ ಕಾಳಜಿಯ ವಿಶೇಷ ಗುಣವುಳ್ಳ ಚಿತ್ರ `ಬಂಧಮುಕ್ತ’ ಅತ್ಯಂತ ವಿಶಿಷ್ಟವಾದುದು. ಇದರ ಕತೆ, ಚಿತ್ರಕತೆ ಮತ್ತು ಚಿತ್ರದುದ್ದಕ್ಕೂ ಪ್ರೇಕ್ಷಕನ ಎದೆಗೆ ನಾಟುವಂತಹ ಹೃದ್ಯವಾದ ಸಂಭಾಷಣೆ, ಕಲಾವಿದರ ಸಹಜ, ಗಂಭೀರ ಅಭಿನಯ ಈ ಪರಂಪರೆಯ ಚಿತ್ರಗಳ ಬಗೆಗಿನ ಒಂದು ತಾಜಾ ಉದಾಹರಣೆ!

ನಾವು ಈ ಚಿತ್ರವನ್ನು ಯಾಕಾಗಿ ನೋಡಬೇಕು? ಎಂಬ ಪ್ರಶ್ನೆ ಮೂಡಿದರೆ, `ಇಂತಹ ಸಿನಿಮಾಗಳನ್ನು ನೋಡಲೇಬೇಕು’ ಎಂಬ ಸಂದೇಶ ನೀಡಿರುವ ಹಿರಿಯ ನಿರ್ದೇಶಕರಾದ ಗಿರೀಶ ಕಾಸರವಳ್ಳಿ ಅವರ ಮಾತು ಇದಕ್ಕೆ ಉತ್ತರವಾಗುತ್ತದೆ. ಇತ್ತೀಚೆಗೆ `ಬಂಧಮುಕ್ತ’ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಅವರು ಮಾತನಾಡುವಾಗ, ಹಿಂಸೆ ಮತ್ತು ಕ್ರೌರ್ಯಗಳೇ ಇಂದು ಬಹುತೇಕ ಚಿತ್ರಗಳಲ್ಲಿ ಮಾರಾಟವಾಗುವ ಸರುಕು ಆಗಿರುವಾಗ, ಸಾಮಾಜಿಕ ಸ್ವಾಸ್ಥ್ಯದ ಉದ್ದೇಶ ಹೊಂದಿರುವ ಮತ್ತು ಒಳ್ಳೆಯ ಅಭಿರುಚಿ ಸೃಷ್ಟಿಸುವ `ಬಂಧಮುಕ್ತ’ದಂತಹ ಚಿತ್ರಗಳು ಬಹುಸಂಖ್ಯೆಯಲ್ಲಿ ಬಂದರೆ ಸಮಾಜದ ಮೇಲೆ ಅದರ ಪರಿಣಾಮ ಹೇಗಿರುತ್ತದೆ ಎಂಬುದರ ಬಗ್ಗೆ ಎಲ್ಲರೂ ಯೋಚಿಸಬೇಕಿದೆ ಎಂದು ಸಲಹೆ ನೀಡಿದರು. ಇದು ಗಮನಾರ್ಹ ವಿಚಾರ. ಯಾಕೆಂದರೆ ಸಿನಿಮಾ ಎಂಬದು ಅತ್ಯಂತ ಪ್ರಭಾವಶಾಲಿ ಮಾಧ್ಯಮ. ಇದರ ಮೂಲಕ ನಾವು ಏನನ್ನು ಬಿತ್ತುತ್ತೇವೋ ಅದೇ ಹತ್ತು ಪಟ್ಟು ಬೆಳೆಯುತ್ತದೆ. ಮನರಂಜನೆ ಹೆಸರಿನಲ್ಲಿ ಕ್ರೌರ್ಯ, ಹಿಂಸೆ, ಅಸಂಬದ್ಧ, ಅಶ್ಲೀಲ, ತರ್ಕವಿಲ್ಲದ ಚಿತ್ರಗಳೇ ರಾರಾಜಿಸುತ್ತ ಇಂದು ಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿರುವುದು ದುರಂತ. ಇವುಗಳ ನಡುವೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಂತಹ ಚಿತ್ರಗಳೂ ಬರುತ್ತಿವೆ ಎಂಬುದಕ್ಕೆ `ಬಂಧಮುಕ್ತ’ ಪ್ರಸ್ತುತ ಉದಾಹರಣೆ. ಆದರೆ ಇಂತಹ ಉತ್ತಮ ಅಭಿರುಚಿಯ ಚಿತ್ರಗಳಿಗೆ ಕನ್ನಡ ಚಿತ್ರೋದ್ಯಮದಲ್ಲಿ ನೆಲೆಯೇ ಇಲ್ಲದಾಗಿರುವುದು ವಿಷಾದನೀಯ. ಆದ್ದರಿಂದ ಕನ್ನಡಿಗರು ಮಾತ್ರವಲ್ಲ ಕನ್ನಡ ಚಿತ್ರೋದ್ಯಮದವರೂ ಇಂತಹ ಒಳ್ಳೆಯ ಉದ್ದೇಶದ ಚಿತ್ರಗಳನ್ನು ಬೆಂಬಲಿಸಬೇಕು. ಅವನ್ನು ಪ್ರಚಾರಪಡಿಸಬೇಕು ಎಂಬ ವಿಚಾರ ಹೇಳಿ, ಈ ಕುರಿತು ಗಿರೀಶ ಕಾಸರವಳ್ಳಿ ಅವರು ಗಮನ ಸೆಳೆದರು.

ಇನ್ನು `ಬಂಧಮುಕ್ತ’ ಚಿತ್ರ ಇಂದಿನ ಕಾಲಘಟ್ಟದಲ್ಲಿ ಯಾಕೆ ವಿಶೇಷವಾದದ್ದು ಎಂಬುದರ ಕುರಿತು ವಿವರಿಸುವುದಾದರೆ; ಮೊದಲನೇಯದಾಗಿ ಈ ಚಿತ್ರದ ಶೀರ್ಷಿಕೆಯೇ ಒಂದು ಸಕಾರಾತ್ಮಕ ಸಂದೇಶ ನೀಡುವಂತಹದು. ಮನುಷ್ಯ ಹುಟ್ಟಿನಿಂದ ಸಾವಿನವರೆಗೆ ಯಾವುದಾದರೊಂದು ಹಿಡಿತಕ್ಕೆ ಸಿಲುಕಿ ಅದರಿಂದ ಹೊರ ಬರಲು ಹೆಣಗಾಡುತ್ತಿರುತ್ತಾನೆ. ಸಾವು ಮಾತ್ರ ಮನುಷ್ಯನ ನಿಜವಾದ ಬಿಡುಗಡೆ ಎಂದು ಹೇಳಬಹುದಾದರೂ ಸಾವಿಗೂ ಮುನ್ನವೇ ಬಂಧನಗಳಿಂದ ಮುಕ್ತವಾಗುವ ಮನಸ್ಥಿತಿಯೇ ಬಿಡುಗಡೆಯ ಮಾರ್ಗ ಎಂದು ವಾಖ್ಯಾನಿಸಬಹುದು. ಇದು ಮನೋವಿಜ್ಞಾನ ಮತ್ತು ಆಧ್ಯಾತ್ಮಿಕ ತತ್ವವನ್ನು ತಿಳಿಸುವ ವಿಚಾರ. ಆದರೆ ಜೀವಿತವಾಗಿ ಸಮಾಜದಲ್ಲಿದ್ದೂ ಎಲ್ಲ ಬಂಧನಗಳಿಂದ ಬಿಡಿಸಿಕೊಂಡು ಮುಕ್ತವಾಗುವ ಮಾರ್ಗವೊಂದಿದೆ. ಅದುವೇ ಪರೋಪಕಾರಿ ಸೇವಾ ಕಾರ್ಯದ ಮಾರ್ಗ. ಸ್ವಾರ್ಥ ಮತ್ತು ಅರ್ಥಹೀನ ವ್ಯಾಮೋಹಗಳಿಂದ ತನ್ನ ಬದುಕನ್ನು ಮುಕ್ತಗೊಳಿಸಿಕೊಂಡು ಬಡವರ ಕಲ್ಯಾಣಕ್ಕಾಗಿ ಜೀವಿತಾವಧಿ ಸವೆಸುವ ನಿರ್ಧಾರ ತೆಗೆದುಕೊಳ್ಳುವ ಈ ಚಿತ್ರದ ಕಥಾನಾಯಕಿ ಪಲ್ಲವಿ ಯಾವ ಸಾತ್ವಿಕ ಆಧ್ಯಾತ್ಮಿಕ, ಆದರ್ಶ ಜೀವಿಗಳಿಗಿಂತ ಕಡಿಮೆಯಾದ ವ್ಯಕ್ತಿತ್ವದವಳಲ್ಲ. ಅವಳಲ್ಲಿ ಈ ಗುಣ ಪ್ರಾಪ್ತವಾಗಲು ಅವಳು ಬೆಳೆದು ಬಂದ ಬಡತನದ ಪರಿಸರ ಮತ್ತು ಅವಳ ತಂದೆ ತಾಯಿ ಕಾರಣ. ತನ್ನ ಮಗಳು ವೈದ್ಯಳಾಗಿ ಬಡವರ ಆರೋಗ್ಯ ಸೇವೆ ಮಾಡಬೇಕೆಂಬುದು ಪಲ್ಲವಿಯ ಅಪ್ಪ ರಾಮಣ್ಣನ ಕನಸಾಗಿರುತ್ತದಾದರೂ, ಒಂದು ಹೊತ್ತಿನ ಊಟಕ್ಕಾಗಿ ದೇಹ ದಣಿಸಿ ದುಡಿದು ಬದುಕು ಸಾಗಿಸಬೇಕಿರುವಾಗ, ಇನ್ನು ಲಕ್ಷಾಂತರ ರೂಪಾಯಿ ವ್ಯಯಿಸಿ ಮಗಳಿಗೆ ವೈದ್ಯಕೀಯ ಶಿಕ್ಷಣ ಕೊಡಿಸುವುದಾದರೂ ಹೇಗೆ ಎಂಬುದು ಅವನಮುಂದಿರುವ ಬಹುದೊಡ್ಡ ಪ್ರಶ್ನೆ. ಸರಿ, ಅವಳು ಹೇಗೆ ವೈದ್ಯಕೀಯ ಶಿಕ್ಷಣ ಪಡೆದಳು ಎಂಬುದಕ್ಕೆ ಚಿತ್ರದ ಕತೆಯೇ ಉತ್ತರಿಸುತ್ತದೆ. ಆದರೆ ಇದೇ ಕಾಲಕ್ಕೆ ಅವಳ ವಿವಾಹವೂ ಆಗಿ, ವೈಭೋಗ ತುಂಬಿದ ಮನೆಯೊಂದನ್ನು ಸೇರಿದಾಗ, ಆ ಮನೆಯೇ ಪಂಜರ, ಅವಳನ್ನು ಪ್ರೀತಿಸಿ ಮದುವೆಯಾದ ಗಂಡನೇ ಕಾವಲುಗಾರನಾದಾಗ ಅವಳಲ್ಲಿನ ಸೇವೆಯ ಸಾಮಾಜಿಕ ಪ್ರಜ್ಞೆಯ ತುಡಿತಕ್ಕೆ ಬಹುದೊಡ್ಡ ಅಡ್ಡಿಯಾಗುತ್ತದೆ. ಬದುಕು ಯಾವುದನ್ನು ಬಯಸಿ ಅರಸಿ ಹೋಗಿತ್ತೋ ಅದೇ ಬಂಧನವಾಗಿ ಆ ಬಂಧನದಿಂದ ಬಿಡುಗಡೆಯಾಗುವುದು ಅನಿವಾರ್ಯವಾದಾಗ, ಅವಳು ತೆಗೆದುಕೊಂಡ ನಿರ್ಧಾರ ಯಾವುದು ಎಂಬುದನ್ನು ಚಿತ್ರ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ.

ಈ ಹಂತದಲ್ಲಿ ಪಲ್ಲವಿಯ ಗೃಬಂಧನ ಸಮಾಜದ ಎಲ್ಲ ಮಹಿಳೆಯರ ಬಂಧನವಾಗಿ ಗೋಚರಿಸಬಹುದು. `ಹೌದು ಅವಳಿಗೆ ಆ ಬಂಧನದಿಂದ ಬಿಡುಗಡೆಯಾಗಲೇ ಬೇಕು’ ಎಂಬ ಆಶಯ ಎಲ್ಲ ಮಹಿಳೆಯರ ಮನೋಭಿಲಾಷೆ ಆಗಬಹುದು. ಯಾಕೆಂದರೆ ಇಲ್ಲಿರುವ `ಪಲ್ಲವಿ’ ಸಮಾಜದ ಎಲ್ಲ ಹೆಣ್ಣುಮಕ್ಕಳ ‘ಬಿಂಬ’ವಾಗಿದ್ದಾಳೆ. ಈ ಹಿನ್ನೆಯಲ್ಲಿ ಈ ಕತೆಯು ಮಹಿಳೆಯರನ್ನು ಭಾವುಕಗೊಳಿಸಿ, ಎದೆಗೆ ನಾಟುತ್ತದೆ. ಕೆಲವು ಸನ್ನಿವೇಷಗಳು ಪ್ರೇಕ್ಷಕನಿಗೆ ಅರಿವಿಲ್ಲದಂತೆ ಕಣ್ಣುಗಳನ್ನು ಒದ್ದೆಯಾಗುತ್ತವೆ. ಇದು ಈ ಚಿತ್ರದ ಗುಣಾತ್ಮಕ ಅಂಶ. ಇದಕ್ಕೂ ಮಿಗಿಲಾದದ್ದು ಕತೆಯ ಕೊನೆಯಲ್ಲಿ ಪಲ್ಲವಿ ಮಹಾತ್ಯಾಗಿಯಾಗಿ ನಿಲ್ಲುವುದು! ಬಂಧನದಿಂದ ಬಿಡುಗಡೆ ದೊರೆತು ಸೇವೆಗೆ ಮಾರ್ಗವೂ ಸಿಕ್ಕಿತು ಅಂದುಕೊಳ್ಳೋಣ. ಆದರೆ ಅವಳ ದಾಂಪತ್ಯ ಒಡೆದ ಕನ್ನಡಿಯಾದಾಗ, ಅವಳಿಗೆ ಬಾಳು ಕೊಡಲು ಮುಂದೆ ಬರುವ ಅವಳ ಹಿರಿಯ ವೈದ್ಯ ಸೂರ್ಯಕುಮಾರನ ಅಂತಃಕರಣ, ನಿಷ್ಕಲ್ಮಷ ಪ್ರೀತಿಯನ್ನೂ ಅವಳು ನಿರಾಕರಿಸುವಾಗ ಅವಳಲ್ಲಿರುವ ಬಡವರ ಸೇವೆಯ ತುಡಿತ ಎಂತಹದು ಎಂಬುದರ ವಿರಾಟ ದರ್ಶನವಾಗುತ್ತದೆ. ಮದುವೆ ಎಂಬ ಶುದ್ಧ ಪಾರಂಪರಿಕ ಭಾವನೆಗೆ ಬದುಕಿನಲ್ಲಿರುವುದು ಒಂದೇ ಅವಕಾಶ. ಅದನ್ನು ಕಳೆದುಕೊಂಡ ಮೇಲೆ ಗಂಡು-ಹೆಣ್ಣು ಒಡೆದ ಕನ್ನಡಿಗೆ ಸಮ ಎಂಬ ಅರ್ಥಸೂಕ್ಷ್ಮವನ್ನು ಧಾರಣ ಮಾಡುವ ಪಲ್ಲವಿಯ ವ್ಯಕ್ತಿತ್ವ ಆಧುನಿಕ ಮಹಿಳೆಯರಿಗೆ ಮಾದರಿಯಾಗುವಂತಹದು. ಈ ಚಿತ್ರ ನೋಡಿ ಚಿತ್ರಮಂದಿರದಿಂದ ಹೊರಗೆ ಬಂದರೂ ಈ ಅಂಶಗಳು ಮತ್ತೆ ಮತ್ತೆ ಕಾಡುವಂತಹವು. ಇದು `ಬಂಧಮುಕ್ತ’ ಚಿತ್ರದ ಶಕ್ತಿ.

ಇನ್ನು ಚಿತ್ರದ ತಾಂತ್ರಿಕ ಗುಣಮಟ್ಟದ ವಿಚಾರಕ್ಕೆ ಬಂದರೆ, ಪ್ಯಾನ್ ಇಂಡಿಯಾ ಮಾದರಿಯ ಚಿತ್ರಗಳ ಗುಣಮಟ್ಟಕ್ಕೆ ಸಮನಾಗಿ `ಬಂಧಮುಕ್ತ’ ಕಡಿಮೆಯೇನಿಲ್ಲ. ಚಿತ್ರಿಕೆಯಿಂದ ಚಿತ್ರಿಕೆಗೆ, ದೃಶ್ಯದಿಂದ ದೃಶ್ಯಕ್ಕೆ ಚಾಕಚಕ್ಯತೆ, ಸನ್ನಿವೇಷಕ್ಕೆ ಪೂರಕವಾದ ನೆರಳು ಬೆಳಕು ಮತ್ತು ಶಬ್ದ ವಿನ್ಯಾಸ, ಎಲ್ಲೂ ಬೇಸರ ತರಿಸದ ಚಿತ್ರಕತೆಯ ಹರಿವು, ತಮ್ಮ ತಮ್ಮ ಪಾತ್ರಗಳನ್ನು ಅನುಭವಿಸಿ ಅತ್ಯಂತ ಸಹಜವಾಗಿ ಅಭಿನಯಿಸಿದ ಪಾತ್ರಗಳು, ಜೀವಕ್ಕೆ ತಂಪು ನೀಡುವ ಮಧುರವಾದ ಎರಡು ಹಾಡುಗಳು ಮತ್ತು ಅರ್ಥಪೂರ್ಣವಾದ ಹಿನ್ನೆಲೆ ಸಂಗೀತ ಇವೆಲ್ಲ ಚಿತ್ರದ ಉದ್ದೇಶವನ್ನು ಯಶಸ್ವಿಗೊಳಿಸಿವೆ. ನಿರ್ದೇಶಕರಿಗೆ ತಾನು ಏನನ್ನು ಹೇಳಲು ಹೊರಟಿದ್ದೇನೆ ಎಂಬುದರ ಸ್ಪಷ್ಟತೆ ಇದೆ. ಹಾಗಾಗಿ ಕತೆ, ಸಂಭಾಷಣೆ, ಸಂಗೀತ, ಪಾತ್ರ ಮತ್ತು ಇತರ ವಿನ್ಯಾಸಗಳನ್ನು ಸಮರ್ಪಕವಾಗಿ ದುಡಿಸಿಕೊಂಡಿದ್ದಾರೆ. ಕಥಾನಾಯಕಿ ಪಲ್ಲವಿಯ ಪಾತ್ರ ನಿರ್ವಹಿಸಿದ ಕಲಾವಿದೆ ಐಶ್ವರ್ಯ ನಾಗರಾಜ ಅವರ ಅಭಿನಯವಂತೂ ವರ್ಣಿಸಲಸಾಧ್ಯ! ಅವಳ ಗಾಂಭಿರ್ಯ, ಮೊನಚಾದ ಮಾತುಗಳು, ಅವಳ ಮುಖದಲ್ಲಿನ ನೈತಿಕ ಪ್ರಜ್ಞೆ, ಹಸಿದಿದ್ದರೂ ಮುಕ್ಕಾಗದ ಸ್ವಾಭಿಮಾನ, ಗಂಡನ ಬಳಿ ಕೋಟಿ ಹಣವಿದ್ದರೂ ಧಿಕ್ಕರಿಸಿ ಬಡವರ ಪರ ಮಿಡಿಯುವ ಗುಣ ಎಂತಹ ಕಲ್ಲು ಹೃದಯವನ್ನೂ ಕರಗಿಸಬಲ್ಲಂತಹವು! ನಿರ್ದೇಶಕ ಕುಮಾರ ಬೇಂದ್ರೆ ಅವರು ಇದೊಂದು ಪಾತ್ರದ ಮೂಲಕವೇ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವುದರಲ್ಲಿ ಸಂದೇಹವೇ ಇಲ್ಲ.

ಯುದ್ಧಗಳ ಆರ್ಭಟದ ನಡುವೆಯೂ ಶಾಂತಿಯನ್ನು ಧ್ಯಾನಿಸುವ ಮನಸ್ಸುಳ್ಳವರು, ಸಾವು ಕಣ್ಣೆದುರೇ ಬಂದಿದ್ದರೂ ಸ್ವಾಭಿಮಾನ ಕಳೆದುಕೊಳ್ಳಲು ಮನಸ್ಸಿಲ್ಲದವರು, ಹೊನ್ನ ಮಳೆ ಸುರಿಯುತ್ತಿರುವಾಗಲೂ ಬಡವರ ಅನ್ನದ ಬಗ್ಗೆ ಯೋಚಿಸುವ ಹೃದಯವೈಶಾಲ್ಯರು ನೋಡಲೇಬೇಕಾದ ಕನ್ನಡ ಅತ್ಯದ್ಭುತ ಚಿತ್ರವಿದು. ಲೇಖಕರಾದ ಶಿಪುತ್ರಪ್ಪ ಆಶಿ ಅವರ ಕಥಾಸಾಹಿತ್ಯದ ಕೃತಿಯನ್ನು ಆಧರಿಸಿ, ಕುಮಾರ ಬೇಂದ್ರೆ ಅವರು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರ ಒಂದು ಒಳ್ಳೆಯ ಕಾದಂಬರಿ ಓದುವ ಅನುಭವಕ್ಕಿಂತಲೂ ಮಿಗಿಲಾದ ಆನಂದ ನೀಡುವುದರಲ್ಲಿ ಸಂಶಯವಿಲ್ಲ. ಕುಟುಂಬ ಸಮೇತ ಕುಳಿತು ನೋಡಬಹುದಾದ ಚಿತ್ರಗಳು ಬರುತ್ತಿದ್ದ ಒಂದು ಕಾಲಘಟ್ಟದ ಆದರ್ಶ ಮತ್ತು ದೃಶ್ಯಶೀಲವನ್ನು ಈ ಚಿತ್ರದಲ್ಲಿ ನಿರ್ದೇಶಕರು ಕಾಪಾಡಿಕೊಂಡಿದ್ದಾರೆ. ಈ ಚಿತ್ರವು ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಳ್ಳಲು ಅಣಿಯಾಗಿದ್ದು, ಸದ್ಯದಲ್ಲಿಯೇ ನೆರವೇರಲಿರುವ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಭಾಗವಹಿಸಿದೆ. ಇಂತಹ ಚಿತ್ರಗಳೇ ಚಲನಚಿತ್ರೋತ್ಸವಗಳ ಜೀವಾಳ ಎಂದು ಹೇಳಬಹುದು.

ಶಿವಪುತ್ರಪ್ಪ ಆಶಿ ಅವರು ಈ ಚಿತ್ರದ ನಿರ್ಮಾಪಕರು. ವಿಘ್ನೇಶ ಛಾಯಾಗ್ರಹಣ, ಸತ್ಯಜಿತ್ ಸಂಕಲನ, ಬಹುರೂಪಿ ಹಿನ್ನೆಲೆ ಸಂಗೀತ, ಶ್ರೀರಾಮ್ ಶಬ್ದವಿನ್ಯಾಸ, ಸಿದ್ದೇಶ್ವರ ಕಟಕೋಳ ಹಾಡುಗಳ ಸಂಯೋಜನೆ, ರಾಧಿಕಾ ಕುಲಕರ್ಣಿ ಗಾಯನ ನೀಡಿದ್ದು, ಪಾತ್ರವರ್ಗದಲ್ಲಿ `ಯಜಮಾನ’ ಧಾರಾವಾಹಿ ಖ್ಯಾತಿಯ ಐಶ್ವರ್ಯ ನಾಗರಾಜ, ಸನತ್ ಎಸ್, ರಿತಿಕಾ ಯಲ್ಲಪ್ಪ, ಮಂಜುನಾಥ ಪಾಟೀಲ, ಸಂತೋಷ ಬೆಂಗೇರಿ, ಶಾಂತಾ ಆಚಾರ್ಯ, ಪ್ರೇಮಾ ನಡುವಿನಮನಿ, ಆನಂದ ಮಂಟೂರ ಮುಂತಾದವರು ಅಭಿನಯಿಸಿದ್ದಾರೆ.

About The Author

ಡಾ. ಪ್ರಭು ಗಂಜಿಹಾಳ

ಡಾ.ಪ್ರಭು ಗಂಜಿಹಾಳ  ಇಲಕಲ್ ತಾಲೂಕಿನ ಗುಡೂರ ಗ್ರಾಮದವರು. ಕಥೆ, ಹನಿಗವನ ಸಂಕಲನ ಸೇರಿದಂತೆ 7 ಸ್ವತಂತ್ರ ಕೃತಿಗಳು ಪ್ರಕಟವಾಗಿದ್ದು, ಮದ್ರಾಸ್ ಕನ್ನಡಿಗರ ಮಾಸ ಪತ್ರಿಕೆ 'ಲಹರಿ 'ಉಪ ಸಂಪಾದಕರಾಗಿ 3 ವರ್ಷ ಕಾರ್ಯ ನಿರ್ವಹಿಸಿದ್ದಾರೆ. ರಂಗಭೂಮಿ ಚಲನಚಿತ್ರ ರಂಗ ಕುರಿತು ಕವಿವಿಯಿಂದ 2004 ರಲ್ಲಿ ಡಾ.ಶಾಂತಾ ಸಣ್ಣೆಲ್ಲಪ್ಪನವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಚಿತ್ರರಂಗದಲ್ಲಿ 1986 ರಿಂದಲೇ ಶಂಕರ ಸುಗತೆ ಅವರ ಕಾಡಿನ ಹಕ್ಕಿ ಚಿತ್ರದ ಮೂಲಕ ವಸ್ತ್ರವಿನ್ಯಾಸಕರಾಗಿ, ಕಲಾವಿದರಾಗಿ ಸೇರಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸುಮಾರು 45ಕ್ಕೂ ಮಿಕ್ಕ ಚಲನಚಿತ್ರಗಳು, ಕಿರುಚಿತ್ರಗಳು, ಆಲ್ಬಂ ಸಾಂಗ್ ಗಳ PRO/ಪತ್ರಿಕಾಸಂಪರ್ಕ/ಪ್ರಚಾರಕಲೆಯನ್ನು ಡಾ.ವೀರೇಶ ಹಂಡಿಗಿಯವರ ಜೊತೆ ಕಾರ್ಯನಿರ್ವಹಿಸಿದ್ದಾರೆ.

1 Comment

  1. Anjana Yatanoor

    Idu nannade kathe ennuvante bhasavayitu. Nikakku aneka hennu makkala katheyidu. Mane mandiyella nodale bekadantaha chitra. Inthaha chitra nirmanakke karanaraadavarellarigu hrutpoorvaka abhinandanegalu.

    Reply

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ