Advertisement
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು: ಸುವರ್ಣ ಚೆಳ್ಳೂರು ಸರಣಿ

ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು: ಸುವರ್ಣ ಚೆಳ್ಳೂರು ಸರಣಿ

ಆಕಾಶದಾಗಿನ ಸಾಲು ಚುಕ್ಕಿ ನೋಡಿ ನಾನು ನಿದ್ದಿಗೆ ಜಾರಿದೆ.‌ ಮುಂಜೆನೆದ್ದಾಗ ಹೊಲದಾಗ ಮಂಜುಮಂಜಾಗಿತ್ತು, ಬೆಳ್ಳಕ್ಕಿ ಅದಾಗಲೇ ಎದ್ದು ಹೊಲದಾಗ ಹಾರಾಡಿಕ್ಯಂತ ಹೊಲದಿಂದ ಹೊಲಕ್ಕ ಹೊಂಟಿದ್ವು. ನಾನು ಮತ್ತ ಲಕ್ಷ್ಮಮ್ಮತ್ತಿ ಎದ್ದು ಮನಿ ದಾರಿ ಹಿಡದ್ವಿ. ಬೆಳಗಾ ಮುಂಜೇಲೆ ಹೊಲದ ದಾರಿ ಅದೊಂಥರಾ ಯಾವುದೊ ಚಿತ್ರ ಕಂಡಂಗ ಕಾಣತಿತ್ತು, ಆಕಡೆ ಇಕಡೆ ಹಸರು, ಅಲ್ಲಲ್ಲಿ ಹೊಲದಾಗಿದ್ದ ಒಂಟಿಮರ ಅದಕ್ಕಿದ್ದ ಮುಳ್ಳುಗಳು, ಹೊಲದಗುಂಟ ಹರಿತಿದ್ದ ಸಣ್ಣ ಕಾಲುವೆ ಅದರ ದಂಡಿಗಿದ್ದ ಸಮುದ್ರ ಬಾಳೆ ಹೂವು, ಸರ್ಕಾರ್ ಕಳ್ಳಿ ಇವೆಲ್ಲಾ ಆ ಹೊಲದ ಹಾದಿಗೆ ಬಿಡಿಸಿರೊ ಚಿತ್ರಗಳಿದ್ದಂಗ ಇದ್ವು.
ಸುವರ್ಣ
ಚೆಳ್ಳೂರು ಬರೆಯುವ “ಆಕಿ” ಸರಣಿಯ ಹತ್ತನೆಯ ಬರಹ

‘ನೋಡ್ ಶಿವು ಇದಕಾ ನಾವು ನಮ್ಮ ಬದುಕನ್ನ ಮತ್ತ ನಮ್ಮ ಕತಿಗಳನ್ನ ನಾವಾ ಬರೀಬೊಕು ನೋಡವಾ!’ ಅಂತ ಹೇಳಿ ನಿದ್ದಿಗೆ ಜಾರಿದ್ಲು. ಆಕಾಶ ನೋಡ್ತಾ ನೋಡ್ತಾ, ಅತ್ತಿ ಹೇಳಿದ್ದು ಮತ್ತ ಆ ಬ್ಯಾಟಿ ಬಸಮ್ಮನ ಕತಿ ಕೇಳಿದಾಗ ನನಗ ಸಾಲಿಯೊಳಾಗ ಟೀಟರ್ ಹೇಳಿದ್ದು ನೆನಪಾತು;

“One is not born, but rather becomes a woman”.

ಆಕಾಶದಾಗಿನ ಸಾಲು ಚುಕ್ಕಿ ನೋಡಿ ನಾನು ನಿದ್ದಿಗೆ ಜಾರಿದೆ.‌ ಮುಂಜೆನೆದ್ದಾಗ ಹೊಲದಾಗ ಮಂಜುಮಂಜಾಗಿತ್ತು, ಬೆಳ್ಳಕ್ಕಿ ಅದಾಗಲೇ ಎದ್ದು ಹೊಲದಾಗ ಹಾರಾಡಿಕ್ಯಂತ ಹೊಲದಿಂದ ಹೊಲಕ್ಕ ಹೊಂಟಿದ್ವು. ನಾನು ಮತ್ತ ಲಕ್ಷ್ಮಮ್ಮತ್ತಿ ಎದ್ದು ಮನಿ ದಾರಿ ಹಿಡದ್ವಿ. ಬೆಳಗಾ ಮುಂಜೇಲೆ ಹೊಲದ ದಾರಿ ಅದೊಂಥರಾ ಯಾವುದೊ ಚಿತ್ರ ಕಂಡಂಗ ಕಾಣತಿತ್ತು, ಆಕಡೆ ಇಕಡೆ ಹಸರು, ಅಲ್ಲಲ್ಲಿ ಹೊಲದಾಗಿದ್ದ ಒಂಟಿಮರ ಅದಕ್ಕಿದ್ದ ಮುಳ್ಳುಗಳು, ಹೊಲದಗುಂಟ ಹರಿತಿದ್ದ ಸಣ್ಣ ಕಾಲುವೆ ಅದರ ದಂಡಿಗಿದ್ದ ಸಮುದ್ರ ಬಾಳೆ ಹೂವು, ಸರ್ಕಾರ್ ಕಳ್ಳಿ ಇವೆಲ್ಲಾ ಆ ಹೊಲದ ಹಾದಿಗೆ ಬಿಡಿಸಿರೊ ಚಿತ್ರಗಳಿದ್ದಂಗ ಇದ್ವು.

ಅತ್ತಿ ನಾನು ಮನಿ ತಲುಪುವಷ್ಟೊತ್ತಿಗೆ ಮನಿಯೊಳಾಗ ಅವ್ವ ಅದಾಗಲೇ ಒಂದು ಪುಟ್ಟಿ ರೊಟ್ಟಿ ಮಾಡಿ, ಅದರಾಕ ಕೋಳಿಜುಟ್ಟಿನ ಪಲ್ಯ ಮಾಡಿ ಕುಂತಿದ್ಲು. ನನ್ನ ಕಂಡಿದ್ದೆ

‘ಅಲಲೇ ಶಿವು…. ಸಾಲಿ ಮೂಲಿ ಖಬುರಿಲ್ಲನು ನಿನಗ, ಮೈ ತೊಕಂಡು ರೊಟ್ಟಿ ತಿಂದು ಹೋಗು ಬಡಾssನʼ ಅಂತ ಆಕಿ ರಾಗ ಸುರುವಾತು. ನಾ ರೆಡಿ ಆಗಿ ಸಾಲಿ ದಾರಿ ಹಿಡದೆ.

ಅವತ್ತು ಸಾಲಿಗೆ ಹೋಗಿ ಕುಂತಾಗ ಬೋರ್ಡಿನ ಮ್ಯಾಗ ಸರಸ್ವತಿ ಮಿಸ್ ಒಂದು ಹುಡುಗಿ ಚಿತ್ರ ಬಿಡಿಸಿದ್ರು, ನೋಡಾಕ ಚಂದಿತ್ತು. ಕ್ಲಾಸಾನ್ಯಾಗೆಲ್ಲಾರು ಆ ಚಿತ್ರ ನೋಡಿ ಒಳಗೊಳಗ ಅದರ ಬಗ್ಗೆ ಮಾತಾಡಾಕ ಸುರು ಮಾಡಿದ್ವಿ. ಮೇಡಂ ನಮ್ಮೆಲ್ಲಾರ್ನೂ ಒಮ್ಮೆ ದಿಟ್ಟಿಸಿ ನೋಡಿ

‘ನಿವೆಲ್ಲಾ ಆ ಹೆಣ್ಣಿನ ಚಿತ್ರ ನೋಡಾಕತಿರಲಾ, ನಾ ಒಂದು ಸಣ್ಣ ಪ್ರಶ್ನೆ ಕೇಳ್ತೀನಿ. ಅದಕ್ಕ ನೀವೆಲ್ಲಾರೂ ನಿಮಗನ್ನಿಸಿದ್ದನ್ನ ಹೇಳಬೇಕು’

ಮೇಡಂ ಹೇಳಿದ ಮಾತಿಗೆ ಎಲ್ಲಾರು ಒಂದೇ ಸ್ವರದಲ್ಲಿ

‘ಆಯ್ತು ಮಿಸ್…’ ಅಂದ್ವಿ ಆಗ ಅವರು ಮುಗುಳ್ನಕ್ಕು

‘ನೀವೀಗ ಈ ಹೆಣ್ಣಿನ ಚಿತ್ರ ನೋಡಾಕತಿರಿ, ಅಲ್ವಾ ಹಂಗಿದ್ರೆ ಹೆಣ್ಣು ಅಂದ್ರೆ ಏನು?’

ಮಿಸ್ ಕೇಳಿದ ಪ್ರಶ್ನೆಗೆ ಕ್ಲಾಸೆಲ್ಲಾ ಶಾಂತ ಆಯ್ತು.

ನನಗ್ಯಾವಾಗಲೂ ತಲೆ ಸುತ್ತ ಗುಂಯ್ ಗುಟ್ಟುತಿದ್ದ ಆಕಿ ಮತ್ತೆ ಕಾಡಾಕ ಸುರು ಮಾಡಿದ್ಲು, ಹೌದಲಾ ನಾವು ಇಷ್ಟೆಲ್ಲಾ ಹೆಣ್ಮಕ್ಕಳ ಬಗ್ಗೆ ಮಾತಾಡ್ತೀವಿ, ಕತಿ ಕೇಳ್ತೀವಿ ಹೆಣ್ಣು ಅಂದ್ರ ಏನಂತಾನ ನಮಗ್ ಗೊತ್ತಿಲ್ಲಲಾ ಅನ್ನಿಸ್ತು. ಅದಕ್ ಉತ್ತರಾನೂ ಸಿಗದೆ ಸುಮ್ಮನೆ ಕುಂತೆ, ಆದ್ರ ಹೆಣ್ಣು ಅಂದ ತಕ್ಷಣ ನಂಗ್ ನೆನಪಾಗಿದ್ದೆ ಅವ್ವ, ಅತ್ತಿ, ಜೂನಿ ಬೀರಮ್ಮ, ಬ್ಯಾಟಿ ಬಸಮ್ಮ ಮತ್ತ ನಮ್ಮೂರಾಗಿನ ಹೆಣಮಕ್ಕಳು. ಅದನ್ನ ಮಿಸ್‌ಗೆ ಹೇಳಿದ್ರ ಬೈತಾರೇನೊ ಅಂತ ಸುಮ್ಮ್ ಕುಂತೆ.

ಸರಸ್ವತಿ ಮಿಸ್ ಪ್ರಶ್ನೆ ಕೇಳಿ ಎಲ್ಲಾರೂ ಸುಮ್ಮನಿರೋದನ್ನ ಗಮನಿಸಿ ‘ನೋಡ್ರಿ ನಾವು ದಿನಾ ನಮ್ಮ ಸುತ್ತ ಮುತ್ತ ಎಷ್ಟು ಹೆಣ್ಮಕ್ಕಳನ್ನ ನೋಡ್ತೀವಿ, ಅವರ ಬದುಕನ್ನ ಕಾಣ್ತೀವಿ. ಇದೇ ನಿಮ್ಮದೆ ಊರಲ್ಲಿ ನಿಮ್ಮದೇ ಮನೆಯಲ್ಲಿ ಹೆಣ್ಮಕ್ಕಳಿದಾರೆ, ಅವ್ವ, ಅಕ್ಕಾ, ತಂಗಿ, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ, ನಾದಿನಿ, ಸೊಸೆ ಹಲವಾರು ರೂಪಗಳಲ್ಲಿ ಹೆಣ್ಣನ್ನ ನೋಡ್ತಿವಿ. ಹೆಣ್ಣನ್ನ ದೇವರಿಗೆ ಹೊಲಸ್ತಿವಿ, ಅವಳು ಕರುಣಾಮಯಿ, ಸಹನಾಮಯಿ, ಲಕ್ಷ್ಮೀ, ಗೌರಿ, ಸರಸ್ವತಿ ಹಿಂಗೆಲ್ಲಾ ಹಲವಾರು ನಾಮಪದಗಳನ್ನ ಬಳಸ್ತಿವಿ. ಇವತ್ತಿನ ಕ್ಲಾಸಲ್ಲಿ ಈ ತರದ ಪ್ರಶ್ನೆಗಳನ್ನ ಕೇಳ್ತಾ ಹೆಣ್ಣಿನ ಬಗ್ಗೆ ಬರದಿರೊ ಸೀಮನ್ ದಿ ಬೊವಾ ಅವರ ಬರಹವನ್ನ ನಿಮ್ಮ ಜೊತೆ ಚರ್ಚೆ ಮಾಡ್ತೀನಿ. ಮೊದಲನೇದಾಗಿ ಇವರು ಯಾರು ಅಂತ ತಿಳ್ಕೊಳ್ಳೊಣ‌. ಇವರು ಫ್ರೆಂಚ್ ನ ಪ್ರಖ್ಯಾತ ಬರಹಗಾರ್ತಿ, ಇವರು ಹುಟ್ಟಿದ್ದು ಪ್ಯಾರಿಸ್‌ನಲ್ಲಿ, ಇವರನ್ನ‌ ಸ್ತ್ರೀವಾದದ ಚಿಂತಕಿ ಅಂತ ಗುರುತಸ್ತಾರೆ. ಚರಿತ್ರೆಗಳು ಮತ್ತೆ ಅಸ್ತಿತ್ವದ ಆಧಾರದ ಮೇಲೆ ಹೇಗೆ ಮಹಿಳೆಯರು ಶೋಷಿತರಾಗಿದಾರೆ  ಅನ್ನೊ ಸಿದ್ಧಾಂತವನ್ನ ಇವರು ಬರಹಗಳಲ್ಲಿ ಕಟ್ಟೊಕೆ ಪ್ರಯತ್ನ ಪಟ್ಟಿದಾರೆ.

ಇವರು ಬರದಿರೊ ದಿ ಸೆಕೆಂಡ್ ಸೆಕ್ಸ್ ಅನ್ನೊ ಬರಹ ಮಹಿಳಾ ಚಿಂತನೆಗಳಿಗೆ ಒಂದು ಮೈಲಿಗಲ್ಲು ಇದ್ದಂತೆ. 1949 ರಲ್ಲಿ ಈ ಪುಸ್ತಕ ಬರಿತಾರೆ. ಈ ಬರಹದಲ್ಲಿ ಅವರು ಹೇಗೆ ಮಹಿಳೆಯರು ಐತಿಹಾಸಿಕವಾಗಿ, ಸಾಮಾಜಿಕವಾಗಿ ಪುರುಷರಿಗೆ ಹೋಲಿಸಿದಾಗ ಇತರ ಅಥವಾ ಅವರಿಗಿಂತ ಕಡಿಮೆ ಅನ್ನೋದನ್ನ ಯಾವ ರೀತಿ ವ್ಯಾಖ್ಯಾನ ಮಾಡಲಾಗಿದೆ ಅನ್ನೋದನ್ನ ಚರ್ಚೆ ಮಾಡ್ತಾರೆ. ಯಾವ ರೀತಿ ಹೆಣ್ಣು ಅನ್ನುವ ಚಿಂತನೆ ಬೆಳದು ಬಂದಿದೆ ಅದನ್ನ ಸಮಾಜ ಯಾವ ರೀತಿಯಾಗಿ ವ್ಯವಸ್ಥಿತವಾಗಿ ಕಟ್ಟುತ್ತಾ ಬಂದಿದೀವಿ ಅಂತ ವಿಶ್ಲೇಷಣೆ ಮಾಡ್ತಾರೆ. ನಾ ಈ ಹಿಂದಿನ ಕ್ಲಾಸಲ್ಲಿ ಒಂದು ಸಾಲು ಹೇಳಿದ್ದೆ “One is not born, but rather becomes a woman” ಇದನ್ನ ಹೇಳಿದ್ದು ಇವರೇ. ಈ ಸಾಲುಗಳ ಮೂಲಕ ಸೀಮನ್ ದಿ ಬೊವಾ ಅವರು ಹೆಣ್ಣಿನ ಸುತ್ತ ಕಟ್ಟಿರೊ ಸಾಮಾಜಿಕ, ಐತಿಹಾಸಿಕ ಕಟ್ಟುಪಾಡುಗಳು ಹೇಗೆ ಅವಳನ್ನ ಹೆಣ್ಣಾಗಿ ಮಾರ್ಪಾಡು ಮಾಡ್ತಿವೆ ಅನ್ನೋದನ್ನ ಬರಿತಾಳೆ. ಆಗಿನ ಕಾಲದಲ್ಲಿ ಈ ತರದ ವಿಚಾರಗಳ ಬಗ್ಗೆ ತುಂಬಾ ನೇರವಾಗಿ ಹಾಗೆನೆ ಮುಂದೆ ಹಲವಾರು ಬರಹಗಾರರು, ಓದುಗರನ್ನ ಇವರ ಬರಹಗಳು ಚಿಂತನೆಗೆ ಹಚ್ಚುತ್ತೆ. ನೋಡಿ ಮಕ್ಕಳಾ ಹೆಣ್ಣು ಹುಟ್ಟೋದಿಲ್ಲ ಅವಳು ಹೆಣ್ಣಾಗಿ ಮಾರ್ಪಾಡಾಗ್ತಾಳೆ. ನಾವು ನೀವೆಲ್ಲ ಸುತ್ತ ಮುತ್ತ ಅಥವಾ ಮನೇಲಿ ನೋಡೊ ಹಾಗೆ ಅದೆಷ್ಟೊ ಹೆಣ್ಮಕ್ಕಳು ಕಾಣದಿರೊ ಸಂಕೋಲೆಗಳಲ್ಲೆ ಅವರದಲ್ಲದ ಬದುಕನ್ನ ಬದುಕ್ತಾ ಇರ್ತಾರೆ, ಇನ್ನೊಂದಿಷ್ಟು ಜನ ಗಟ್ಟಿಗಿತ್ತಿಯರ ಹಾಗೆ ಬದುಕ್ತಾರೆ, ನಮ್ಮ ಬದುಕನ್ನ ಅರ್ಥ ಮಾಡಿಕೊಳ್ಳೋಕೆ ಶಿಕ್ಷಣ ಕೂಡ ಬೇಕು ಅಂತ ಸೀಮನ್ ದಿ ಬೊವಾ ಅವರು ಹೇಳ್ತಾರೆ. ಈ ಶಿಕ್ಷಣ, ಸ್ತ್ರೀ, ಇದನ್ನೆಲ್ಲಾ ಓದುವಾಗ ನನಗೊಂದು ಕವಿತೆ ನೆನಪಾಯ್ತು ಅದನ್ನ ವಾಚಿಸಿ ಇವತ್ತಿನ ತರಗತಿ ಮುಗಿಸೋಣ.

‘Because I am a Girl I must study’: Kamala Bhasin

ಯಾಕಂದ್ರ ನಾ ಹುಡುಗಿ ಅದಕಾ ಓದಬೋಕು

ಅಪ್ಪ ಮಗಳಿಗೆ ಕೇಳಿದ –
ಓದ್ಬೇಕು? ನೀ ಯಾಕ ಓದ್ತಿ?
ಹುಡುಗಿ!
ಓದೊಕಂತಾನ ಭಾಳ
ಗಂಡಮಕ್ಕಳದಾರ ನನಗ
ನೀ ಯಾಕ ಓದ್ತಿ?

ಮಗಳು ಅಪ್ಪನಿಗೆ ಹೇಳಿದಳು –
ನೀ ಇಷ್ಟು ಕೇಳ್ತಿಯಂದ್ರ ಹೇಳ್ತಿನಿ ಕೇಳು,
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು.

ಭಾಳ ಹಿಂದಿನಿಂದ ಹೊಸಕಿ ಹೂತಿರೊ
ಅವಕಾಶಗಳಿಗಾಗಿ, ನಾ ಓದ್ಬೇಕು.
ನನ್ನ ಕನಸುಗಳಿಗೆ ರೆಕ್ಕೆ ಕಟ್ಟಿ
ಹಾರಿ ಬಿಡಾಕ‌, ನಾ ಓದ್ಬೇಕು.
ಅರಿವು ಹೊಸ ಬೆಳಕಿನ ಸೆಲೆ,
ಅದು ಪಡಿಬೇಕಂದ್ರನಾ ಓದ್ಬೇಕು.
ನಾ ಎದುರಿಸಬೆಕಾದ ಯುದ್ಧಗಳಿಗಾಗಿ
ನಾ ಓದ್ಲೇ ಬೇಕು.
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು.

ಬಡತನ ಕಳಚಾಕ, ನಾ ಓದ್ಬೇಕು.
ಸ್ವಾತಂತ್ರ್ಯ ಗೆಲ್ಲಾಕ, ನಾ ಓದ್ಬೇಕು.
ಒತ್ತಡ ಮೆಟ್ಟಿ ನಿಲ್ಲಾಕ, ನಾ ಓದ್ಬೇಕು.
ಪ್ರೇರಣೆಗಳನ್ನ ಹುಡುಕಾಕ, ನಾ ಓದ್ಬೇಕು

ಹಿಂಸೆಗಳನ್ನ ತುಳಿಯಾಕ, ನಾ ಓದ್ಬೇಕು
ನನ್ನ ಮೌನ ಮುರಿಯಾಕ, ನಾ ಓದ್ಬೇಕು.
ಪುರುಷ ಪ್ರಧಾನತೆ ಮುಂದ ನಿಲ್ಲಾಕ, ನಾ ಓದ್ಬೇಕು.
ಮೇಲು ಕೀಳುಗಳ ಗೆರೆ ಅಳಸಾಕ, ನಾ ಓದ್ಬೇಕು.
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು

ಹೆಸರಿಗಷ್ಟೆ ಇರುವ ‘ನ್ಯಾಯ’ಗಳನ್ನ
ಮತ್ತೆ ರೂಪಿಸಾಕ ನಾ ಓದ್ಬೇಕು.
ನಾ ನಂಬುವಂತ ನಂಬಿಕೆಗಳ
ಅಚ್ಚೊತ್ತಿಸಾಕ, ನಾ ಓದ್ಬೇಕು
ಶತಮಾನಗಳಿಂದ ಹಿಡಿದಿರುವ
ಧೂಳನ್ನ ಗೂಡಿಸಾಕ, ನಾ ಓದ್ಬೇಕು
ಸವಾಲುಗಳನ್ನ ಎದುರುಗೊಳ್ಳಾಕ, ನಾ ಓದ್ಬೇಕು
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು.

ತಪ್ಪುಗಳಿಂದ ಸರಿಗಳನ್ನ ತಿಳಿಯಾಕ, ನಾ ಓದ್ಬೇಕು.
ಗಟ್ಟಿಯಾಗಿ ನಿಲ್ಲುವ ಧ್ವನಿಗಳನ್ನ ಹುಡುಕಾಕ,
ನಾ ಓದ್ಬೇಕು.
ಸ್ತ್ರೀಯರ ಹಾಡುಗಳನ್ನ ಬರಿಯಾಕ, ನಾ ಓದ್ಬೇಕು.
ಹುಡುಗಿಯರಿಗೇ ಇರುವ ಲೋಕವನ್ನ ಕಟ್ಟಾಕ,
ನಾ ಓದ್ಬೇಕು.

ಇದನ್ನ ಹೇಳಿ ಸರಸ್ವತಿ ಮಿಸ್ ಕ್ಲಾಸಿಂದ ಹೊರಗ್ ಹೋದ್ರು, ಅವರ ಪಾಠ, ಸೀಮನ್ ದಿ ಬೊವಾ, ಹೆಣ್ಣು, ಹುಡುಗಿ ಅವ್ವ ಅತ್ತಿ ಇವರೆಲ್ಲರ ಚಿತ್ರಗಳೂ ಮತ್ತೆ ಮತ್ತೆ ತಲಿ ತುಂಬಿಕೊಂಡು ಮತ್ತದೇ ಪ್ರಶ್ನೆ ಕಾಡತೊಡಗಿತು

ಆಕಿ ಅಂದ್ರೆ?!

About The Author

ಸುವರ್ಣ ಚೆಳ್ಳೂರು

ಸುವರ್ಣ ಚೆಳ್ಳೂರು  ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಚಳ್ಳೂರಿನವರು. ಈಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಂಶೋಧನಾ ವಿದ್ಯಾರ್ಥಿ. ಕಲೆ ಸಾಹಿತ್ಯ ಫೋಟೊಗ್ರಫಿ ಮುಖ್ಯ ಆಸಕ್ತಿಗಳು. ಇವರ 'ಕಂಬದ ಹಕ್ಕಿ' ಕಥೆಗೆ  'ಸಂಗಾತ ಕಥಾ ಪುರಸ್ಕಾರ ' (2021), 'ಕನಕಾಂಬರ' ಕಥೆಗೆ ಧಾರವಾಡದ ವಿದ್ಯಾವರ್ಧಕ ಸಂಘದಿಂದ 'ಶ್ರೀಮತಿ ಶಾಂತಾದೇವಿ ಕಣವಿ ಕಥಾ ಪುರಸ್ಕಾರ' ದೊರಕಿದೆ (2022). 'ಕನಕಾಂಬರ' ಹಾಗೂ ‘ಮಾರ್ನಾಮಿ’ ಸಣ್ಣ ಕಥೆಗಳು ToTo Funds the Arts' India ಅವರು ಕೊಡುವ ಕನ್ನಡ ಸೃಜನಶೀಲ ಬರವಣಿಗೆ (Kannada Creative writing) ವಿಭಾಗದಲ್ಲಿ 2023 ಮತ್ತು 2025 ರಲ್ಲಿ ಅಂತಿಮ ಹಂತಕ್ಕೆ (Short List) ಆಯ್ಕೆ ಆಗಿದೆ. ಇವರ ಬರಹಗಳು ಕೆಲವು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ