ಖುದಾ
ಜಗದ ನೆತ್ತಿಯಲ್ಲಿ
ಪಸೆಯೊಡೆದ ಹೂವು
ಬಾಡುತ್ತದೆ
ಮೊಳೆಯುವ ಮುನ್ನವೇ
ಗಾಂಧಿ ಕನಸಂತೆ;
ಪ್ರಾಯದ ಮರವೊಂದು
ನಡುರಾತ್ರಿಯಲಿ
ದೊಪ್ಪನೆ ಬೀಳುತ್ತದೆ
ಮೊಡಕೆ ಎದೆ ಚಾಚಿ.
‘ಕೊಡಲಿ’
ಮೊಣಕಾಲು ಊರುತ್ತದೆ
ಶರಣಾಗತಿಯಲ್ಲ
ಗೆದ್ದು ಬೀಗಿದ ಸಂತಸಕ್ಕೆ.
ಯಾರದೋ ತೆವಲಿಗೆ
ಉಸಿರು ಚೆಲ್ಲುವ ಅವರು
ಬೆರೆಯುತ್ತಾರೆ
ಮಸಣದ ಬೆಂಕಿಯಲಿ
ಕಿರು ಬೆರಳು; ಬಿಕ್ಕುತ್ತವೆ
ನಡು ರಸ್ತೆಯಲಿ ನಿಂತು.
ಓ ಖುದಾ..!
ಶತಮಾನ ದಾಟಿದೆ
ಸಂವತ್ಸರ ಉರುಳಿದೆ
ನಿನ್ನಲ್ಲೊಂದು ದುವಾ
ಈಗಲಾದರೂ ಅರುಹು
ಇದು…
ಬುದ್ಧ-ಬಸವ-ಗಾಂಧಿಯ
ಪರಮ ನೆಲವೆಂದು..!!
ಶಿವರಾಜ ಅರಳಿ ಹುಟ್ಟಿದ್ದು ಹಾವೇರಿ ಜಿಲ್ಲೆಯ ಮೇಲ್ಮರಿ ಗ್ರಾಮದಲ್ಲಿ.
ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು ಪ್ರವೃತ್ತಿಯಲ್ಲಿ ಸಾಹಿತ್ಯದ ವಿದ್ಯಾರ್ಥಿ.
ಬೆವರ ಹನಿಗಳು(೨೦೨೩), ಬರಡಾದ ಬಾನಂಗಳ(೨೦೨೪), ಕಣ್ಣ ಬಾನಲ್ಲಿ ಬೆಂಕಿಯ ಚಿತ್ರ(೨೦೨೫) ಹಾಗೂ ಪೋಲಿ ಚಿಟ್ಟೆಯ ಅಸಲಿ ಕಥೆ(೨೦೨೬) ಎಂಬ ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಇವರಿಗೆ ಬೆಟಗೇರಿ ಕೃಷ್ಣಶರ್ಮ ಕಾವ್ಯ ಬಹುಮಾನ, ಡಿ ಎಸ್. ಕಕಿ೯ ಯುವ ಕಾವ್ಯ ಪ್ರಶಸ್ತಿ, ಆಜೂರ ಪುಸ್ತಕ ಪ್ರಶಸ್ತಿ ಹಾಗೂ ಶಿಭಾ ಕಾವ್ಯ ಪುರಸ್ಕಾರ ಲಭಿಸಿದೆ.
ಸದ್ಯ ಇವರು ಕನಾ೯ಟಕ ಸಾಹಿತ್ಯ ಅಕಾಡೆಮಿಯ ಚಕೋರದ ಬೆಳಗಾವಿ ಜಿಲ್ಲಾ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


