Advertisement
ಸತ್ಯ-ಮಿಥ್ಯಗಳ ಲೋಕವಿದು!: ಡಾ. ವಿನತೆ ಶರ್ಮಾ ಅಂಕಣ

ಸತ್ಯ-ಮಿಥ್ಯಗಳ ಲೋಕವಿದು!: ಡಾ. ವಿನತೆ ಶರ್ಮಾ ಅಂಕಣ

ವಿಮಾನ ಡಿಕ್ಕಿ ಹೊಡೆದ ಆಸ್ಪತ್ರೆ, ಮೆಡಿಕಲ್ ಕಾಲೇಜು ಹಾಸ್ಟೆಲ್‌ನಲ್ಲಿದ್ದ ಕೆಲವರು ಏನಾಗುತ್ತಿದೆ ಎಂದು ಕೇಳುತ್ತಾ ಆ ಪ್ರಶ್ನೆಗೊಂದು ಕೊನೆ ಚುಕ್ಕೆ ಇಡದೆಯೆ ಹೋಗಿದ್ದಾರೆ. ರೆಸ್ಟ್ ಇನ್ ಪೀಸ್. ಆತ್ಮಕ್ಕೆ ಶಾಂತಿ ಸಿಗಲಿ. ಕಣ್ಣೀರು, ದಿಗ್ಭ್ರಮೆ, ಪುಂಖಾನುಪುಂಖ ಪ್ರಶ್ನೆಗಳು, ಎಲ್ಲರೂ ಹುಡುಕುತ್ತಿರುವ ಉತ್ತರಗಳ ಸಾಗರ ಅಪ್ಪಳಿಸಿದೆ. ಅದ್ಯಾವುದೊ ಕರುಣಾಳು ಬೆಳಕು ಒಬ್ಬನೇ ಒಬ್ಬ ಪ್ರಯಾಣಿಕನನ್ನು ಕೈಹಿಡಿದು ನಡೆಸಿ ಕಾಪಾಡಿದೆ. ಅವನ ಕಥೆ ಅಪನಂಬಿಕೆಗಳ ಲೋಕದಲ್ಲಿ ಉಳಿದ ಒಂದೇ ಒಂದು ಹುಲ್ಲುಕಡ್ಡಿ ಸತ್ಯವಾಗಿದೆ. ಇದೇನಿದು ಮಿಥ್ಯ-ಸತ್ಯಗಳ ಲೋಕವಿದು!
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಪ್ರಿಯ ಓದುಗರೆ,

ದುಃಖದ ದಿನಗಳಿವು. ಮೊನ್ನೆಯಷ್ಟೆ ನಡೆದ ಅಹಮದಾಬಾದಿನ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ೨೪೧ ಪ್ರಯಾಣಿಕರು ಸತ್ತಿದ್ದಾರೆ. ವಿಮಾನ ಡಿಕ್ಕಿ ಹೊಡೆದ ಆಸ್ಪತ್ರೆ, ಮೆಡಿಕಲ್ ಕಾಲೇಜು ಹಾಸ್ಟೆಲ್‌ನಲ್ಲಿದ್ದ ಕೆಲವರು ಏನಾಗುತ್ತಿದೆ ಎಂದು ಕೇಳುತ್ತಾ ಆ ಪ್ರಶ್ನೆಗೊಂದು ಕೊನೆ ಚುಕ್ಕೆ ಇಡದೆಯೆ ಹೋಗಿದ್ದಾರೆ. ರೆಸ್ಟ್ ಇನ್ ಪೀಸ್. ಆತ್ಮಕ್ಕೆ ಶಾಂತಿ ಸಿಗಲಿ. ಕಣ್ಣೀರು, ದಿಗ್ಭ್ರಮೆ, ಪುಂಖಾನುಪುಂಖ ಪ್ರಶ್ನೆಗಳು, ಎಲ್ಲರೂ ಹುಡುಕುತ್ತಿರುವ ಉತ್ತರಗಳ ಸಾಗರ ಅಪ್ಪಳಿಸಿದೆ. ಅದ್ಯಾವುದೊ ಕರುಣಾಳು ಬೆಳಕು ಒಬ್ಬನೇ ಒಬ್ಬ ಪ್ರಯಾಣಿಕನನ್ನು ಕೈಹಿಡಿದು ನಡೆಸಿ ಕಾಪಾಡಿದೆ. ಅವನ ಕಥೆ ಅಪನಂಬಿಕೆಗಳ ಲೋಕದಲ್ಲಿ ಉಳಿದ ಒಂದೇ ಒಂದು ಹುಲ್ಲುಕಡ್ಡಿ ಸತ್ಯವಾಗಿದೆ. ಇದೇನಿದು ಮಿಥ್ಯ-ಸತ್ಯಗಳ ಲೋಕವಿದು!

ಇನ್ನೊಂದು ಮಿಥ್ಯ-ಸತ್ಯಗಳ ಕಥೆ ದೂರದ ಲಾಸ್ ಏಂಜಲೀಸ್ ಊರಿನಲ್ಲೂ ನಡೆದಿದೆ. ಸರಿಯಾದ ಗುರುತುಪತ್ರ ದಾಖಲೆಗಳಿಲ್ಲದ ವಲಸಿಗರನ್ನು ಗಡೀಪಾರು ಮಾಡುವುದಾಗಿ ಹೇಳಿದ್ದ ಅಮೆರಿಕೆಯ ಅಧ್ಯಕ್ಷ ಟ್ರಂಪ್ ಅವರ ನಡೆಯನ್ನು ಒಪ್ಪದ ಸಾವಿರಾರು ಜನರು ಗೌರವದಿಂದ ಶಾಂತಿಯಿಂದ ಪ್ರತಿರೋಧ ಒಡ್ಡಿದ್ದು ಈಗ ಅಪರಾಧವಾಗಿದೆ. ಕಳೆದ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ಅಧ್ಯಕ್ಷರು ತಮ್ಮ ಚುನಾವಣಾ ಪ್ರಚಾರದಲ್ಲಿ ಹೇಳಿದ್ದು ಅಮೆರಿಕೆಗೆ ವಲಸಿಗರು ಬಂದೂಬಂದು ಅವರಿಂದ ತಮ್ಮ ದೇಶದಲ್ಲಿ ಅಪರಾಧಗಳು ಹೆಚ್ಚಾಗಿವೆ. ಅವರಿಂದ ದೇಶದ ಭದ್ರತೆಗೆ, ಸಾರ್ವಜನಿಕ ಹಿತಕ್ಕೆ ಕುತ್ತಾಗಿದೆ. ಅವರಲ್ಲಿ ಯಾರ್ಯಾರಿಗೆ ಸರಿಯಾದ ಇಮಿಗ್ರೇಷನ್ ದಾಖಲೆಗಳಿಲ್ಲವೊ ಅವರೆಲ್ಲಾ ವಾಪಾಸ್ ಹೋಗುವುದೇ ಸರಿ. ಇಲ್ಲವಾದರೆ ಅವರನ್ನು ಕಂಡುಹಿಡಿದು ಬಂಧಿಸಿ ಗಡೀಪಾರು ಮಾಡುತ್ತೀವಿ ಎಂದು ಟ್ರಂಪ್ ಅವರು ಗುಡುಗಿದ್ದು ಯಾಕೋ ಸರಿಯಾಗಲಿಲ್ಲ.

ಇವರೇ ಅಲ್ಲವೇ ವಿಶ್ವಮಟ್ಟದಲ್ಲಿ ತಾವೊಬ್ಬ ಶಾಂತಿದೂತ ಎಂದು ಹೇಳಿಕೊಳ್ಳುತ್ತಿರುವುದು. ಕಳೆದ ಮೇ ತಿಂಗಳೆಲ್ಲಾ ಟ್ರಂಪ್ ಮಹಾಶಯ ಭಾರತ-ಪಾಕಿಸ್ತಾನಗಳ ಮಧ್ಯೆ ವೈಮನಸ್ಯವುಂಟಾದಾಗ ತಾನು ಮಧ್ಯೆ ಪ್ರವೇಶಿಸಿ ಶಾಂತಿಸಂಧಾನ ನಡೆಸಿ ಮುಂದಾಗಲಿದ್ದ ರಕ್ತಪಾತವನ್ನು ತಡೆದು ಶಾಂತಿ ತಂದಿದ್ದೀನಿ ಎಂದಿದ್ದರು. ನಂತರ ರಷ್ಯಾದ ಅಧ್ಯಕ್ಷರಿಗೆ ಬುದ್ಧಿವಾದ ಹೇಳುತ್ತಿದ್ದೀನಿ, ಶಾಂತಿಯ ದಾರಿ ತೋರಿಸುತ್ತಿದ್ದೀನಿ ಅಂದರು. ಪ್ರಪಂಚದ ಸುತ್ತೆಲ್ಲಾ ತಾನು ಎಲ್ಲರ ಕಲಹಗಳನ್ನು ವಿಚಾರಿಸಿ ಅವನ್ನು ನಿವಾರಿಸುತ್ತಿದ್ದೀನಿ ಅನ್ನುತ್ತಾ ನೋಬೆಲ್ ಶಾಂತಿ ಪಾರಿತೋಷಕದ ಕಡೆ ಕಣ್ಣು ಮಿಟುಕಿಸುತ್ತಿದ್ದರು. ಈಗ ನೋಡಿದರೆ LA ದಲ್ಲಿ ತಮ್ಮ ಪ್ರತಿರೋಧ ತೋರಿಸುತ್ತಿದ್ದವರಿಗೆ ಶಿಕ್ಷೆ ಕೊಡಲು ನ್ಯಾಷನಲ್ ಗಾರ್ಡ್ಸ್ ಗಳನ್ನು ಕಳಿಸಿದ್ದಾರೆ. ಮೆರೀನ್‌ಗಳೂ ಬರಲಿದ್ದಾರೆ. ಸಾರ್ವಜನಿಕರಿಗೆ ಥಳಿಸಿ ಬಂಧಿಸಿ ಜೈಲಿಗೆ ಕಳಿಸಲು. ಎಲ್ಲರ ಶಾಂತಿ ಮಣ್ಣುಪಾಲಾಯ್ತಲ್ಲ! ಇರಲಿ. LA ಗವರ್ನರ್ ಮತ್ತು ನಗರದ ಮೇಯರ್ ಡೆಮಾಕ್ರೆಟಿಕ್ ಪರ. ಇವರ ಮೇಲೆ ರಿಪಬ್ಲಿಕನ್ ಟ್ರಂಪ್ ಅವರ ಅಧಿಕಾರ ನಡೆಯುವುದಿಲ್ಲ ಎಂದು ಅಸಮಾಧಾನವಾಗಿ ಅಧ್ಯಕ್ಷರು ಈ ಅತೀತ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಸುದ್ದಿ ವಿಶ್ಲೇಷಣೆಗಳು ಹೇಳುತ್ತಿವೆ. ನಮ್ಮಷ್ಟಕ್ಕೆ ನಾವು ಅಂದುಕೊಳ್ಳುವುದು ಎಂಭತ್ತು ತಲುಪುತ್ತಿರುವ ಅಧ್ಯಕ್ಷರಿಗೆ ಅರಳುಮರಳು ಬಂದಿದೆ ಅಂತ.

ಇದಕ್ಕೂ ಆಸ್ಟ್ರೇಲಿಯಾಕ್ಕೂ ಏನು ಸಂಬಂಧ? ಅಲ್ಲಿ ಸಲ್ಲುವುದು ಇಲ್ಲೂ ಸಲ್ಲುತ್ತದೆ. ಅಮೆರಿಕೆಯಲ್ಲಿ ಜನಾಂಗೀಯ ಭೇದ, ದಳ್ಳುರಿ ಯಾವತ್ತೂ ಇದ್ದೇಇದೆ. ಇಲ್ಲೂ ಆಸ್ಟ್ರೇಲಿಯಾದಲ್ಲೂ ಕೂಡ ಇದೆ. ಆದರೆ ಅದರ ಗಾತ್ರ ಕಡಿಮೆ. ಇಲ್ಲಿರುವುದೇ ೨೬ ಮಿಲಿಯನ್ ಜನ. ಅದರಲ್ಲೂ ಮೂಲನಿವಾಸಿಗಳ ಸಂಖ್ಯೆ ಕೇವಲ ಶೇಕಡ ೩.೭ ಅಷ್ಟೇ ಇರುವ ಈ ಕನಿಷ್ಠ ಸಂಖ್ಯೆಯಲ್ಲೂ ಕೂಡ ಬೇಧಭಾವ ಎತ್ತಿಕಾಣುತ್ತದೆ. ಎರಡೂ ದೇಶಗಳಿಗೆ ಇರುವ ಸಾಮ್ಯತೆ ಎಂದರೆ ವಸಾಹತುಶಾಹಿಗಳು ಬಂದು ಆಕ್ರಮಿಸಿಕೊಂಡು ಮೂಲನಿವಾಸಿಗಳನ್ನು ನಿರ್ಮೂಲನೆ ಮಾಡುವವರಿದ್ದರು. ಅದು ಹೇಗೋ ಮೂಲನಿವಾಸಿಗಳು ಬದುಕಿದ್ದಾರೆ. ಆದರೆ ಅಮೆರಿಕೆಯಲ್ಲಿ ಇರುವ ಮತ್ತೊಂದು ಸಂಗತಿಯೆಂದರೆ ಕಪ್ಪುಜನರನ್ನು ಗುಲಾಮರನ್ನಾಗಿ ಕೊಂಡುಕೊಂಡು ತಂದು ಇತಿಹಾಸದಲ್ಲಿ ಕ್ರಮೇಣ ಅವರು ನಾಗರಿಕ ಹಕ್ಕುಗಳನ್ನು, ಪೌರತ್ವವನ್ನು ಪಡೆದಿದ್ದಾರೆ. ಆದರೆ ಬಿಳಿಯರಿಗೆ ಸಮನಾಗಿ ಸಮಾನ ಸ್ಥಾನಮಾನಗಳು ಇಂದಿಗೂ ಲಭಿಸಿಲ್ಲ. ಸಮಾನತೆ ಸಿಕ್ಕಿಲ್ಲ ಎಂದು ಈ ಬಾರಿಯ ಫ್ರೆಂಚ್ ಓಪನ್ ಟೆನಿಸ್ ವಿಜೇತೆ ಕೋಕೋ ಗೌಫ್ ಹೇಳಿದ್ದಾಳೆ. ಸಮಾನತೆಗಾಗಿ, ನ್ಯಾಯಕ್ಕಾಗಿ ಆಸ್ಟ್ರೇಲಿಯಾದ ಮೂಲನಿವಾಸಿಗಳು ಹೋರಾಡುತ್ತಲೇ ಇದ್ದಾರೆ.

ಈ ದೇಶಗಳಲ್ಲಿ ಸಾಮಾಜಿಕ ನ್ಯಾಯ ಎನ್ನುವುದು ಬಹಳ ದೊಡ್ಡ ವಿಷಯ. ಪದೇಪದೇ ಚರ್ಚೆಗೆ ಬರುತ್ತದೆ. ಎಲ್ಲರೂ ಈ ಎರಡು ಪದಗಳನ್ನು ಉದುರಿಸುತ್ತಲೇ ಉದ್ಗರಿಸುತ್ತಾರೆ. ಅಮೆರಿಕೆಯಲ್ಲಿ, ಆಸ್ಟ್ರೇಲಿಯಾದಲ್ಲಿ ಮೂಲನಿವಾಸಿಗಳಿಗೆ, ಕಪ್ಪು ಜನರಿಗೆ ಸಾಮಾಜಿಕ ನ್ಯಾಯ ಸಿಕ್ಕಬೇಕು ಅನ್ನುತ್ತಾರೆ. ಈ ವಿಷಯದಲ್ಲಿ ನನಗೆ ಮೆಚ್ಚುಗೆಯಾಗುವುದು ಮತ್ತು ಇಲ್ಲಿ ಹೇಳಲೇ ಬೇಕಿರುವುದು ಆಸ್ಟ್ರೇಲಿಯಾದ SBS ರೇಡಿಯೋ ಮತ್ತು ಟಿವಿ ಮಾಧ್ಯಮ. Special Broadcasting Service SBS ಗೆ ಈ ವಾರ ಐವತ್ತು ವರ್ಷ ತುಂಬಿದೆ. ಐವತ್ತರ ಸಂಭ್ರಮವಾಗಿ ಹೊಸಹೊಸ ಕಾರ್ಯಕ್ರಮಗಳನ್ನು ತರುವುದಾಗಿ ಹೇಳುತ್ತಾ ಕಳೆದ ೫೦ ವರ್ಷಗಳ ತಮ್ಮ ಬೆಳವಣಿಗೆಯನ್ನು ಅವಲೋಕಿಸುತ್ತಿದೆ SBS. ಇದರ ವಿಶೇಷತೆ ಇರುವುದು ಅದಕ್ಕಿರುವ ಸಾಮಾಜಿಕ ನ್ಯಾಯದ ಕಳಕಳಿ, ಬದ್ಧತೆ ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದು. ಆಸ್ಟ್ರೇಲಿಯಾದ ಬಹುಸಂಸ್ಕೃತಿ ಸಮುದಾಯಗಳ ವಿಷಯಗಳನ್ನು, ಸಮಸ್ಯೆಗಳನ್ನು, ಕಥನಗಳನ್ನು SBS ಬೆಳಕಿಗೆ ತಂದು ಸಂಸ್ಕೃತಿಗಳ ಮತ್ತು ಭಾಷೆಗಳ ಮಹತ್ವವನ್ನು ಹೇಳುತ್ತದೆ. SBS ನ ಒಂದು ಭಾಗ NITV – ಆಸ್ಟ್ರೇಲಿಯನ್ First Nations (ಮೂಲನಿವಾಸಿಗಳು) ಜನರಿಗೆ ಮೀಸಲಾದದ್ದು.

ಈ ವಾರ SBS ಅನೇಕ ಕಥೆಗಳನ್ನು ಹೇಳುತ್ತಿದೆ. ೧೯೭೫ ರಲ್ಲಿ ವಿಯೆಟ್ನಾಂ ಯುದ್ಧ ಮುಗಿಯುತ್ತಾ ಅಲ್ಲಿನ ನೂರಾರು ಮಕ್ಕಳು ಅನಾಥರಾದಾಗ ಅವರನ್ನು ಆಸ್ಟ್ರೇಲಿಯಾಕ್ಕೆ ತಂದು ಅವರು ಇಲ್ಲಿನ ಕುಟುಂಬಗಳೊಂದಿಗೆ ಬೆಳೆದಿದ್ದು. ಗ್ರೀಕ್ ದೇಶದ ಬಡತನದಿಂದ ತಪ್ಪಿಸಿಕೊಂಡು ಇಲ್ಲಿಗೆ ವಲಸೆಬಂದು ಹೊಸ ಬದುಕು ಕಟ್ಟಿಕೊಂಡು ಈಗಿನ ಸಮಾಜದ ಮುಖ್ಯ ಭಾಗವಾಗಿರುವ ಗ್ರೀಕ್ ಸಮುದಾಯಗಳು, ಚೈನಾದವರ ಕಥೆಗಳು, ಭಾರತದಿಂದ ವಲಸೆಬಂದ ವೈದ್ಯಕೀಯ ವಿಭಾಗಗಳವರು (ಡಾಕ್ಟರು, ನರ್ಸ್), ಅಕ್ಕಪಕ್ಕದ ದ್ವೀಪಗಳಿಂದ ಬಂದು ಆಸ್ಟ್ರೇಲಿಯನ್ ಆದವರು.

ಅದರ ಜೊತೆಗೆ ೫೦ ವರ್ಷಗಳ ಹಾದಿಯಲ್ಲಿ ಮೂಡಿಬಂದ ಅನೇಕಾನೇಕ ಕಾರ್ಯಕ್ರಮಗಳು. ಇವನ್ನೆಲ್ಲಾ ನಾನು ಸುಮಾರು ೨೧ ವರ್ಷಗಳಲ್ಲಿ ನೋಡಿದ್ದೀನಿ. ಸಂಜೆ ಆರೂವರೆಯ ವರ್ಲ್ಡ್ ನ್ಯೂಸ್, ಮಂಗಳವಾರ ಎಂಟೂವರೆಗೆ ಪ್ರಸಾರವಾಗುವ Insight, ಪ್ರವಾಸಕಥನಗಳು, ಡಾಕ್ಯುಮೆಂಟರಿಗಳು, ಇಪ್ಪತ್ತು ವರ್ಷಗಳ ಹಿಂದೆ ನಡೆಸುತ್ತಿದ್ದ ಸಿನಿಮಾ ವಿಮರ್ಶೆ, ವಿಜ್ಞಾನವಿಶೇಷ ಕಾರ್ಯಕ್ರಮಗಳು, ದೇಶವಿದೇಶಗಳಲ್ಲಿ ನಡೆಯುವ ಸಂಶೋಧನೆಗಳ ಬಗ್ಗೆ, ಇನ್ನೂ ಏನೇನೋ ಕಾರ್ಯಕ್ರಮಗಳು. ಅದೆಷ್ಟು ವೈವಿಧ್ಯತೆ! ಸಂಜೆ ಆರೂವರೆ ವರ್ಲ್ಡ್ ನ್ಯೂಸ್ ಓದುವ/ಹೇಳುವ ಅನೇಕರು ನನಗೆ ಚಿರಪರಿಚಿತ ಮುಖಗಳು. ಅವರಲ್ಲಿ ಕೆಲವರು ಎರಡೂವರೆ ದಶಕಗಳಿಂದ ನ್ಯೂಸ್ ಓದುತ್ತಿದ್ದಾರೆ, ನಮಗೆ ಪ್ರಪಂಚದಲ್ಲಿ ನಡೆಯುತ್ತಿರುವ ಸುದ್ದಿಸಮಾಚಾರಗಳನ್ನು ತಿಳಿಸುತ್ತಾರೆ. ಇವರ ಫ್ರೆಶ್ ಯಂಗ್ ಮುಖಗಳು, ಬರುಬರುತ್ತಾ ಮುಖದಲ್ಲಿ ಕಾಣಿಸಿದ ಸುಕ್ಕುಗಳು, ತಲೆ ಕೂದಲು ನೆರೆತಿದ್ದು, ಅವರ accent ಬದಲಾಗಿದ್ದು, ಹಾಕುವ ಉಡುಪು ಶೈಲಿ ಎಲ್ಲವೂ ನನಗೆ ಪರಿಚಯದ್ದು. SBS ಎಂದರೆ ಆಸ್ಟ್ರೇಲಿಯಾ ಅನ್ನೋ ಭಾವನೆ, ಖುಷಿ, ಆಪ್ತಭಾವ. ಐವತ್ತು ತುಂಬಿರುವ ಈ ವಿಶೇಷ ಮಾಧ್ಯಮ ಚಾನೆಲ್ಲಿಗೆ ಮತ್ತಷ್ಟು ವರ್ಷಗಳು ಸೇರಲಿ. ಸೇರುತ್ತಾ ಸೇರತ್ತಾ ಅದು ನೂರಾಗಲಿ.

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ