2011-05-12_7814ಒಂದು ಮಂಕು ಮಂಕು ಸಾಯಂಕಾಲ. ಬೇಸಗೆಯ ಮಳೆ ನಿಂತು ಹೋದ ನಂತರದ ಕಪ್ಪಿಟ್ಟ ಆಕಾಶ. ಎಲ್ಲವೂ, ಎಲ್ಲರೂ ಮರಳಿ ಮನೆಯ ಕಡೆ ದೌಡಾಯಿಸುತ್ತಿರುವ ಧಾವಂತದ ಹೊತ್ತು. ನಾನಾದರೋ ಏನೂ ಅವಸರವಿಲ್ಲದವನಂತೆ ಈ ತಾಯಿ ಮತ್ತು ಮಗನ ಕೊಂಡಾಟಗಳನ್ನು ನೋಡುತ್ತಾ ಕುಕ್ಕರಗಾಲಲ್ಲಿ ಕೂತಿದ್ದೆ. ನಗುವೂ, ಬೇಸರವೂ, ಏನೋ ಒಂದು ತರಹದ ಅನ್ಯಮನಸ್ಕತೆಯೂ ಒಂದಕ್ಕಿಂತ ಒಂದು ಮಿಗಿಲಾಗಿ ನುಗ್ಗಿ ಬರುತ್ತಾ ‘ಆಹಾ ಪ್ರಪಂಚವೇ’ ಎಂದು ಸುಮ್ಮನೆ ಗೊಣಗಿಕೊಂಡೆ.

ಈ ತಾಯಿಯ ಹೆಸರು ಗೀತಾ.ಈಕೆ ಜೇನು ಕುರುಬರ ಹೆಂಗಸು. ಕಷ್ಟಗಳನ್ನು ಉಂಡೂ ಉಂಡೂ ಬಹುಶಃ ಈಕೆಯ ಮುಖ ಗಂಡಸಿನಂತೆ ಗಡುಸಾಗಿ ಹೋಗಿದೆ. ಮಗನ ಹೆಸರು ಶಿವ.ತಮಾಷೆಯೆಂದರೆ ಈ ಮಗ ಮನುಷ್ಯ ಪುತ್ರನಲ್ಲ. ಮನುಷ್ಯರ ಗುಂಡೇಟಿನಿಂದ ತೀರಿ ಹೋದ ಹೆಣ್ಣಾನೆಯೊಂದರ ಗಂಡು ಮಗು. ತಾಯಿ ತೀರಿಹೋದಾಗ ಈತನಿಗೆ ಇನ್ನೂ ಎರಡು ತಿಂಗಳೂ ತುಂಬಿರಲಿಲ್ಲ. ಈಗ ಕಳೆದ ಒಂದೂವರೆ ತಿಂಗಳಿಂದ ಜೇನು ಕುರುಬರ ಗೀತಾ ಈ ಆನೆ ಮಗನನ್ನು ಸಾಕುತ್ತಿದ್ದಾಳೆ.

ಆಕೆ ತನ್ನ ಈ ತಾಯ್ತನವನ್ನು ಎಷ್ಟು ಗಂಭೀರವೂ, ಸಹಜವಾಗಿಯೂ ತೆಗೆದುಕೊಂಡಿದ್ದಾಳೆಂದರೆ ಆಕೆಯ ಕಣ್ಣಿಗೆ ರಾತ್ರಿಯಿಡೀ ನಿದ್ದೆ ಹತ್ತುವುದಿಲ್ಲ. ಆನೆ ಮಗನಿಗೆ ಹಸುವಿನ ಹಾಲು ಕಾಯಿಸಿ ಕುಡಿಸಲಿಕ್ಕೆ ಎರಡು ಸಲ ಏಳುತ್ತಾಳೆ. ಒಂದು ಸಲ ಅದರ ಕಕ್ಕ ಬಳಿದು ತೆಗೆಯಲಿಕ್ಕೆ ಏಳುತ್ತಾಳೆ. 2011-05-12_7737

ಹಗಲೂ ಅಷ್ಟೇ. ಕಣ್ಣು ರೆಪ್ಪೆ ಮುಚ್ಚದೆ ಶಿವನ ಚಲನವಲನಗಳನ್ನು ಕಾಯುತ್ತಿರುತ್ತಾಳೆ. ನಡೆಯುವಾಗ ಅದು ಮುಗ್ಗರಿಸಿದರೆ ಇವಳ ಕರುಳು ದಸಕ್ಕೆನ್ನುತ್ತದೆ. ಅದು ದೂಳಲ್ಲಿ ಆಟವಾಡಿ ಸೊಂಡಿಲು ಮಣ್ಣು ಮಾಡಿಕೊಂಡರೆ ಜೇನು ಕುರುಬರ ಭಾಷೆಯಲ್ಲಿ ಅದನ್ನು ಬೈದು ತನ್ನ ಹರಿದ ಶರಟಿನ ತುದಿಯಿಂದ ಅದನ್ನು ಒರೆಸಿ ಉಜ್ಜಿ ಶುಚಿ ಮಾಡುತ್ತಾಳೆ. ಹಂಡೆಯಲ್ಲಿ ಬಿಸಿ ನೀರು ಕಾಸಿ ದಿನಕ್ಕೆರಡು ಬಾರಿ ಸ್ನಾನ ಮಾಡಿಸುತ್ತಾಳೆ. ಹಾಲಲ್ಲಿ ರಾಗಿ ಹುಡಿ ಬೆರೆಸಿ, ಅಂಬಲಿ ಮಾಡಿ ಕುಡಿಸಿ ಅದೇನಾದರೂ ಕುಡಿಯಲಾಗದೆ ಉಗಿದರೆ ಕೆಟ್ಟದಾಗಿ ಬೈಯ್ಯುತ್ತಾಳೆ. ಬೈದಾದ ನಂತರ ‘ಅಯ್ಯೋ ನಿನ್ನ ಬೈದೆನಾ ಕೂಸೇ, ರಾಜಾ’ ಅಂತ ಮುಮ್ಮುಲ ಮರಗುತ್ತಾಳೆ.

ಈ ತುಂಟ ಆನೆ ಮರಿಯೂ ಅಷ್ಟೇ, ಗೀತಾಳನ್ನು ಮರುಗಿಸಲೆಂದೇ ಬೇಕಾದಷ್ಟು ಕೀಟಲೆಗಳನ್ನೂ ಮಾಡುತ್ತದೆ. ಬೇಕು ಬೇಕೇಂತಲೇ ತನ್ನ ಸೊಂಡಿಲಿನಿಂದ ಆಕೆಯ ಬಿಗಿದು ಕಟ್ಟಿದ ತುರುಬನ್ನು ಎಳೆಯುವುದು, ಬಿಸಿಲಲ್ಲಿ ಒಣಗಲು ಹಾಕಿದ ಆಕೆಯ ಹರಿದ ಬಟ್ಟೆಗಳ ಮೇಲೆ ತನ್ನ ಪಾದದ ಚಿತ್ರಗಳನ್ನು ಬಿಡಿಸುವುದು ಇತ್ಯಾದಿ ಮಾಡುತ್ತಾನೆ. ಆಗ ಆಕೆ ಸಿಟ್ಟಿನಿಂದ ಅದರ ಕಿವಿ ಹಿಂಡಿ ಬುದ್ದಿ ಹೇಳಿ, ಅದರ ಕಿವಿ ಹಿಡಿದು ಎಳೆದುಕೊಂಡು ಆಟದ ಸೆರೆಮನೆಯಂತಹ ಬಿದಿರು ತಡಿಕೆಯ ಅಂಗಳದೊಳಕ್ಕೆ ಸೇರಿಸಿ ಬೈದು ಬಿಡುತ್ತಾಳೆ

‘ನಾನು ನಿನ್ನ ಅಮ್ಮ, ನೀನು ನನ್ನ ಮಾತು ಕೇಳೋಕು. ಹಠ ಮಾಡಿದರೆ ಸೌದೆ ಸೋಟಿನಿಂದ ಬಾರಿಸಿಯೇ ಬಿಡುವೆ’ ಎಂದು ಗದರುತ್ತಾಳೆ. ಶಿವನೂ ಅಷ್ಟೇ ತಾನು ಆನೆ ಮರಿಯೆಂಬುದು ಮರೆತು ವಿದೇಯ ಮಗುವಂತೆ ಅಳಲು ತೊಡಗುತ್ತದೆ. ಆದರೆ ಅದರ ಅಳು ಪುಟ್ಟ ಆನೆಯೊಂದು ಘೀಳಿಡುವಂತೆ ಕೇಳುತ್ತದೆ. ಮೂರೂವರೆ ತಿಂಗಳ ಆನೆ ಮರಿ ಘೀಳಿಡುವ ಸದ್ದು. ಆ ಸದ್ದು ಮಾತ್ರ ಸಾಕು ನಮಗೆ ಇದೆಲ್ಲ ಸಹಜವಾಗಿಲ್ಲ ಅಂತ ಅನಿಸಲಿಕ್ಕೆ.

‘ಗೀತಾ, ನೋಡು ಶಿವನ ಕಣ್ಣಲ್ಲಿ ನೀರು ಬರುತ್ತಿದೆ. ಏನಾದರೂ ಸೋಂಕು,ಗೀಂಕು ತಗುಲಿರಬೇಕು’ ಅನ್ನುತ್ತೇನೆ.
‘ಸೋಂಕೂ ಅಲ್ಲ, ಗೀಂಕೂ ಅಲ್ಲ ಅದಕ್ಕೆ ಅದರ ತಾಯಿಯ ನೆನಪು ಆಗಿರಬೇಕು ಸಾಹೇಬರೇ’ ಆಕೆ ಅನ್ನುತ್ತಾಳೆ. ಹಾಗೆ ಅನ್ನುವಾಗ ಆಕೆಯ ಕಣ್ಣಲ್ಲಿ ಒಂದು ನೋವಿನ ಸೆಳಕುಮಿಂಚಿನಂತೆ ಮೂಡಿ ಮಾಯವಾಗುತ್ತದೆ. ಆಕೆ ಉಸ್ಸಂತ ನೆಲದಲ್ಲಿ ಮಂಡಿಯೂರಿ ಕುಳಿತು ಬಿಡುತ್ತಾಳೆ. ಆಮೇಲೆ ಏನೇನೋ ಕಥೆಗಳನ್ನು ಹೇಳುತ್ತಾಳೆ. ಅದರಲ್ಲಿ ಏನೇನೋ ಕೊಂಚ ನನಗೆ ಅರ್ಥವಾಗುತ್ತದೆ. ಉಳಿದದ್ದು ಹಾಗೇ ಗಾಳಿಯಲ್ಲಿ ಹೊರಟು ಹೋಗುತ್ತದೆ.

ನಾವಿಬ್ಬರೂ ಹಾಗೇ ಒಬ್ಬರನ್ನೊಬ್ಬರು ಅರ್ದ ಅರ್ದ ಅರ್ಥ ಮಾಡಿಕೊಂಡು ತುಂಬ ಹೊತ್ತು ಕೂತಿರುತ್ತೇವೆ. 2011-05-12_7805‘ಗೀತಾ,ನಿನ್ನ ಯಜಮಾನ ಗಂಡಸು ಎಲ್ಲಿ? ನಿಜವಾದ ನಿನ್ನ ಇಬ್ಬರು ಗಂಡು ಮಕ್ಕಳೆಲ್ಲಿ?’ ಎಂದು ಮಾತು ಬದಲಿಸಲು ನೋಡುತ್ತೇನೆ. ಗಂಡ ಸೌದೆ ತರಲು ಕಾಡಿಗೆ ಹೋದ ಅನ್ನುತ್ತಾಳೆ. ಗಂಡು ಮಕ್ಕಳು ಇಬ್ಬರು ಸರಕಾರೀ ಹಾಸ್ಟೆಲಲ್ಲಿ ಓದುತ್ತಿರುವವರು ಈಗ ರಜೆಯಲ್ಲಿ ಹಾಡಿಗೆ ಬಂದಿದ್ದಾರೆ. ಒಬ್ಬ ಕಾಡಿನೊಳಗಿನ ಕೆರೆಯಲ್ಲಿ ಮೀಯಲು ಹೋಗಿದ್ದಾನೆ. ಇನ್ನೊಬ್ಬಾತ ಮೊಬೈಲಿನ ಬ್ಯಾಟರಿ ಚಾರ್ಜು ಮಾಡಿಸಿಕೊಂಡು ಬರಲು ಕರೆಂಟಿರುವ ಸಾಹುಕಾರರೊಬ್ಬರ ಅಂಗಡಿಗೆ ಹೋಗಿದ್ದಾನೆ. ಒಂದು ಸಲ ಬ್ಯಾಟರಿ ಚಾರ್ಜು ಮಾಡಿಸಲು ಐದು ರೂಪಾಯಿಯಂತೆ.

ಆ ಮಗ ಮೊಬೈಲಲ್ಲಿ ಆಡಿ ಆಡಿ ಅರ್ದ ದಿನದಲ್ಲೇ ಮತ್ತೆ ಚಾರ್ಜು ಮಾಡಲು ಹೋಗುತ್ತಾನಂತೆ.
‘ಹಾಳಾದ ಮಕ್ಕಳು’ ಎಂದು ಅವರಿಗೂ ಪ್ರೀತಿಯಲ್ಲೇ ಬೈಯ್ಯುತ್ತಾಳೆ. ಆಕೆಯ ಗಂಡನೂ ಆನೆಯ ಮಾವುತನೇ. ಇವರಿಬ್ಬರು ಸಾಕುತ್ತಿದ್ದ ಮೊದಲ ಆನೆ ರಾಜೇಂದ್ರ. ಮೈಸೂರು ಅರಮನೆಯಲ್ಲಿ ಒಂದು ಕಾಲದಲ್ಲಿ ಅದು ಪಟ್ಟದಾನೆಯಾಗಿತ್ತು. ವಯಸ್ಸಾದಾಗ ಇವರ ಸುಪರ್ದಿಗೆ ಬಂದು ಒಂದು ದಿನ ಇವರ ಕಣ್ಣ ಮುಂದೆಯೇ ತೀರಿಹೋಯಿತು. ಆ ನಂತರ ಇವರ ಸುಪರ್ದಿಗೆ ಬಂದ ಆನೆಯ ಹೆಸರು ಲಂಬೋದರ. ಅದು ಕಾಡೊಳಗಿದ್ದ ಒಂದು ದೊಡ್ಡ ರೌಡಿ ಆನೆಯಾಗಿತ್ತು. ಪ್ಲಾಂಟರನೊಬ್ಬ ಅದರ ಒಡಲೊಳಕ್ಕೆ ಹಲವು ಕಾಡುತೂಸುಗಳನ್ನು ತೂರಿಸಿಬಿಟ್ಟಿದ್ದ. ಆಮೇಲೆ ಅದನ್ನು ಹಿಡಿದು ಪಳಗಿಸಿ ಇವರಿಬ್ಬರ ಸುಪರ್ದಿಗೆ ವಹಿಸಿದ್ದರು. ಸಾಯುವವರೆಗೆ ಹೊಟ್ಟೆಯೊಳಗಿದ್ದ ಕಾಡುತೂಸುಗಳಿಂದಾಗಿ ನರಳುತ್ತಾ ಬದುಕಿದ್ದ ಲಂಬೋದರ ಒಂದು ದಿನ ತಾನೂ ವೃಣದಿಂದಾಗಿ ತೀರಿಹೋಗಿತ್ತು. ಅದು ತೀರಿಹೋದಾಗ ಈ ಗೀತಾ ತಲೆಯ ಮೇಲೆ ಮಣ್ಣೆರಚಿ ಹುಚ್ಚಿಯಂತೆ ಅತ್ತಿದ್ದಳು.

‘ದೇವರೇ, ಈ ಕೆಟ್ಟ ಮನುಷ್ಯರಿಂದ ಆನೆಗಳನ್ನೂ,ಕಾಡು ಕುರುಬರನ್ನೂ ಕಾಪಾಡು’ ಎಂದು ಅಲ್ಲಿ ನೆರೆದವರಿಗೆಲ್ಲ ಹಿಡಿಹಿಡಿ ಶಾಪ ಹಾಕಿದ್ದಳು.
‘ನೀವು ಚೆನ್ನಾಗಿ ನೋಡಿಕೊಂಡಿಲ್ಲ ಅದಕ್ಕಾಗಿ ಲಂಬೋದರ ಸತ್ತು ಹೋದ’ ಅಂತ ಯಾರೋ ಬೈದಿದ್ದರಂತೆ. ಅದಕ್ಕಾಗಿ ಅವಳಿಗೆ ಆವತ್ತು ದುಃಖ ಇನ್ನೂ ಉಮ್ಮಳಿಸಿ ಬಂದಿತ್ತು. ಮೊನ್ನೆ ಇದನ್ನೆಲ್ಲ ಹೇಳುವಾಗ ಅವಳಿಗೆ ಇನ್ನೊಮ್ಮೆ ದುಃಖ ಉಮ್ಮಳಿಸಿ ಬಂದು ಎಲ್ಲರಿಗೂ ಇನ್ನೊಮ್ಮೆ ಶಾಪ ಹಾಕಿದಳು. ತನ್ನ ತುರುಬನ್ನು ಎಳೆಯಲು ಬಂದ ಶಿವನ ಸೊಂಡಿಲಿಗೆ ಮುತ್ತಿಟ್ಟಳು.

‘ಎನ್ನ ಜೀವ ಹೋದರೂ ಸರಿಯೇ ಈ ಶಿವನನ್ನು ಬೆಳೆಸಿ ದೊಡ್ಡವನನ್ನಾಗಿ ಮಾಡಿ ದೊಡ್ಡ ಪಟ್ಟದಾನೆ ಮಾಡಿಯೇ ತಾನು ಜೀವ ಬಿಡುವುದು’ ಎಂದು ಕಣ್ಣೀರು ಹಾಕಿ ಪ್ರೀತಿಯಿಂದ ನಕ್ಕಳು. ಆಮೇಲೆ ನನಗೊಂದು ಗುಟ್ಟು ಹೇಳಿದಳು.

2011-05-12_7900

ಅದು ಈ ಶಿವನಿಗಾಗಿ ಅವಳು ಜೇನು ಕುರುಬರ ದೇವರು ಅಮ್ಮಾಳಮ್ಮನ ಬಳಿ ಹರಕೆ ಹಾಕಿಕೊಂಡಿರುವ ಗುಟ್ಟು. ಇಲ್ಲೇ ಕಾವೇರಿ ನದಿಯ ತೀರದಲ್ಲಿ ಕಾಡಿನೊಳಗಡೆ ಅಮ್ಮಾಳಮ್ಮ ದೇವತೆ ಇರುವಳು. ಅವಳು ಒಳ್ಳೆಯವರಿಗೆ ಒಳ್ಳೆಯ ದೇವರು.ಕೆಟ್ಟವರಿಗೆ ತೀರಾ ಕೆಟ್ಟವಳು. ಅವಳ ಬಳಿ ಇವಳು ಒಬ್ಬಳೇ ಹೋಗಿ ಈ ಆನೆಮಗನನ್ನು ಬದುಕಿಸಿ ದೊಡ್ಡವನನ್ನಾಗಿ ಮಾಡಲು ಬಿಡು. ದೊಡ್ಡದೊಂದು ಹರಕೆ ತೀರಿಸುವೆನು ಅಂದಿರುವಳಂತೆ. ಆ ದೊಡ್ಡ ಹರಕೆ ಏನೆಂದು ಯಾರಿಗೂ ಹೇಳದೆ ತನ್ನೊಳಗೇ ಬಚ್ಚಿಟ್ಟುಕೊಂಡಿರುವಳು. ಆ ಗುಟ್ಟನ್ನು ಮಾತ್ರ ಆಕೆ ನನ್ನ ಬಳಿಯೂ ಹೇಳಲಿಲ್ಲ.

‘ಹೇಳಬೇಡ ಪರವಾಗಿಲ್ಲ. ಶಿವ ಬದುಕಿ ದೊಡ್ಡವನಾದರೆ ಹರಕೆ ತೀರಿಸುವಾಗ ನಾನೂ ಬರುವೆ’ ಎಂದು ಹೇಳಿ ಬಂದಿರುವೆ. ಬರುವ ಮೊದಲು ಇನ್ನೊಂದು ಗುಟ್ಟನ್ನೂ ಹೇಳಿದಳು. ಅದು ಏನೆಂದರೆ ಅವಳೂ ಈ ಆನೆಮಗನೂ ಇಬ್ಬರೇ ಇರುವಾಗ ಅವಳು ಅವನನ್ನು ಕರೆಯುವ ಹೆಸರು ‘ಶಿವ’ ಅಂತ ಅಲ್ಲವಂತೆ.

‘‘ಶಿವ” ಅಂತ ಹೆಸರು ಇಟ್ಟಿರುವುದು ಫಾರೆಸ್ಟಿನ ರೇಂಜರು ಸಾಹೇಬರು. ಆದರೆ ಅಮ್ಮಾಳಮ್ಮ ದೇವರು ಬೇರೆ ಒಂದು ಹೆಸರಿನಿಂದ ಕರೆಯಲು ಹೇಳಿರುವಳು. ಅದು ನನಗೂ ಮತ್ತು ಇವನಿಗೂ ಮಾತ್ರ ಗೊತ್ತು. ಬೇರೆ ಯಾರಿಗೂ ಹೇಳಕೂಡದು’ ಅಂದಳು. ‘ಆಯ್ತು ತಾಯೀ ಯಾರಿಗೂ ಗೊತ್ತಾಗಬಾರದು. ನಿನ್ನ ಆನೆ ಮಗ ಬದುಕಿ ದೊಡ್ಡ ಪಟ್ಟದಾನೆಯಾದರೆ ಸಾಕು’ ಎಂದು ಹೇಳಿ ಬಂದಿದ್ದೆ. ದಾರಿಯಲ್ಲಿ ಬರುವಾಗ ನನ್ನ ಹೆತ್ತ ತಾಯಿಯ ಬಳಿ ಹೋಗಿದ್ದೆ. ಆಕೆಯ ಬಳಿ ಈ ಮನುಷ್ಯ ತಾಯಿ ಮತ್ತು ಆನೆ ಮಗನ ಕಥೆಯನ್ನು ಹೇಳಿದೆ. ಫೋಟೋಗಳನ್ನೂ ತೋರಿಸಿದೆ.

2011-05-12_7804‘ಹೌದು. ಹೆತ್ತ ಮಕ್ಕಳಿಗಿಂತ ಸಾಕಿದ ಮಕ್ಕಳೇ ಕೊನೆಯಲ್ಲಿ ಉಪಕಾರಕ್ಕೆ ಸಿಗುವುದು’ ಎಂದು ಆಕೆಯೂ ತನ್ನ ಇತ್ತೀಚೆಗಿನ ಕೆಲವು ಸಂಕಟಗಳನ್ನು ನನ್ನ ಬಳಿ ಹೇಳಿಕೊಂಡಳು.
‘ಬರಿ ತಿನ್ನಲು ಬೇಕಾದಾಗ ಮಾತ್ರ ನಿನಗೆ ಅಮ್ಮನ ನೆನಪಾಗುವುದು’ ಎಂದು ಹೊಟ್ಟೆ ತುಂಬ ತಿನ್ನಿಸಿ ಕಳಿಸಿದಳು.

(ಫೋಟೋಗಳೂ ಲೇಖಕರವು)