ಮಾತೇ ಮಾಣಿಕ್ಯ ಎನ್ನುವವರಿಗೆ ಮಾತು ಮಾಣಿಕ್ಯವಲ್ಲ ಮೌನ ಮಾಣಿಕ್ಯ ಎಂಬ ಸೂತ್ರಕ್ಕೆ ತಕ್ಕಂತೆ ಮಕ್ಕಳು ಅಣಿಯಾಗಿದ್ದರು. ಬೊಂಬೆ ಆಟದಲ್ಲಿ ಪ್ರಾವಿಣ್ಯತೆ ಪಡೆದ ಕ್ರಿಯಾಶೀಲರು ಗೊಂಬೆಯನ್ನು ಬಹಳ ಅಮೋಘವಾಗಿ ಓಡುವುದನ್ನು, ನಡೆಯುವುದನ್ನು, ಹಾರಾಡುವುದನ್ನು, ನಿಧಾನಗತಿಯ ಚಲನೆಯನ್ನು, ಬೈಕ್ ಸವಾರಿ ಮಾಡುವುದನ್ನು, ಕನಸು ಕಾಣುವ ವೈಶಿಷ್ಟ್ಯತೆಯನ್ನು ಅದ್ಭುತವಾಗಿ ರಚಿಸಿಕೊಂಡಿದ್ದರು. ಹದಿಹರೆಯದಲ್ಲಿರುವಾಗ ಮನುಷ್ಯನ ಆಸೆ ಆಕಾಂಕ್ಷೆಗಳು ಕೇವಲ ಮಾತುಗಳಲ್ಲಿಲ್ಲ ಭಾವನೆಗಳಲ್ಲಿವೆ. ಕನಸು ಕಾಣುವ ಆಲೋಚನೆಯೇ ವಿಭಿನ್ನವಾಗುವುದು. ಹದಿಹರೆಯ ಮತ್ತು ಮಧ್ಯಮ ವಯಸ್ಸಿನ ದೀರ್ಘಾವಧಿಯಲ್ಲಿನ ಮನುಷ್ಯನ ಪಯಣ ಹೆಚ್ಚು ಕಠಿಣ ಹಾಗೂ ಸವಾಲುಗಳು ಎದುರಾಗುವ ಸಮಯವದು.
ಕಲ್ಬುರ್ಗಿ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ‘ಸರ್ಕಲ್ ಆಫ್ ಲೈಫ್’ ಪಪೇಟ್ ಶೋ ಕುರಿತು ಡಾ. ರಾಜೇಂದ್ರಕುಮಾರ್ ಮುದ್ನಾಳ್ ಬರಹ
‘ಸರ್ಕಲ್’ ಎಂಬ ಪದವನ್ನು ಕನ್ನಡದಲ್ಲಿ ‘ವೃತ್ತ’ ಎಂದು ಕರೆಯುವರು. ಅಂದರೆ ಶೂನ್ಯತ್ವ. ವಚನ ಪರಿಭಾಷೆಯಲ್ಲಿ ‘ಶೂನ್ಯ’ಕ್ಕೆ ಬಹಳಷ್ಟು ಮಹತ್ವವಿದೆ. ಎಲ್ಲಿಂದ ಆರಂಭವಾಗುವುದು ಅಲ್ಲೇ ಬಂದು ಕೂಡುವುದು. ಬದುಕು ಕೂಡ ಮಗುವಿನಿಂದ ವೃದ್ಯಾಪದವರೆಗೂ ಆರಂಭವಾದ ಮನುಷ್ಯನ ಯಾನ. ಅದು ಹಲವು ಮಜಲುಗಳನ್ನು ಅನುಭವಿಸುತ್ತದೆ. ಮಗುವಾಗಿದ್ದಾಗ ಆಟದ ಚಿಂತೆ. ಪ್ರಕೃತಿಯನ್ನು ಪ್ರೀತಿಸುವ ಬಯಕೆ. ಹದಿಹರೆಯದಲ್ಲಿ ಪ್ರೀತಿಯನ್ನು ಕಾಣುವ, ಹುಡುಕುವ, ಪಡೆಯುವ ಅಭಿಲಾಷೆ. ಮಧ್ಯ ವಯಸ್ಸಿನಲ್ಲಿ ದುಡಿಯುವ ಸೂರು ಕಟ್ಟುವ, ಕಟ್ಟಿಕೊಳ್ಳುವ ಇರಾದೆ. ಈ ವಯಸ್ಸಿನ ಸಂಕೀರ್ಣತೆಗಳು ನಿಜವಾದ ಜೀವನ ‘ಕಬ್ಬಿಣದ ಕಡಲೆ’ಯಾಗುವುದು. ಒತ್ತಡ ನಿರ್ವಹಣೆ, ಉದ್ಯೋಗದ ಭರವಸೆಯಲ್ಲಿ ಹತಾಶೆ. ಈ ಅಪೇಕ್ಷೆಗಳ ನಡುವೆ ವೃದ್ಧಾಪ್ಯ ಮನೆಯ ಹೊಸ್ತಿಲಲ್ಲಿ ಕಾಲಿಡುತ್ತದೆ. ಮತ್ತು ಈ ಸಂದರ್ಭದಲ್ಲಿ ವೃದ್ಧಾಪ್ಯ ಮತ್ತೆ ಮಗುವಾಗಿ ಪ್ರಕೃತಿಯೊಂದಿಗೆ ಬೆರೆಯುವ ಅವಿನಾಭಾವ ಸಂಬಂಧವೇ ಸರ್ಕಲ್ ಆಫ್ ದಿ ಲೈಫ್. ಬದುಕೊಂದು ಬಂಧನದ ಛಾಯೆ ಎಂದು ತೋರ್ಪಡಿಸುವುದು. ಆ ಬಂಧನದಿಂದ ಬಿಡುಗಡೆ ಹೇಗೆ ಎಂಬುವ ಪ್ರಕ್ರಿಯೆಯ ಹುಡುಕಾಟವೇ ಜೀವನದ ಬಿಂದು.
ಇದು ಗೊಂಬೆಯೊಂದಿಗಿನ ಪಯಣ. ಈ ಪಪ್ಪೆಟ್ ಶೋ ದಲ್ಲಿ ಮಾತುಗಳಿಲ್ಲ. ಕೇವಲ ಕ್ರಿಯಾತ್ಮಕ ಸಂಬಂಧಗಳೇ ಮನುಷ್ಯನನ್ನು ಹತ್ತಿರವಾಗಿಸುತ್ತವೆ ಎಂಬ ಸಂದೇಶವಿದೆ.
ಮಗು ಆರಂಭದಲ್ಲಿ ಅಂಬೆಗಾಲು ಇಡುತ್ತಾ ಚೆಂಡಿನೊಂದಿಗೆ ಆಟವಾಡುತ್ತದೆ. ಪಕ್ಕದಲ್ಲಿ ಬೆಳೆದು ನಿಂತ ಮರ. ಈ ಸಂದರ್ಭದಲ್ಲಿ ಪಾತರಗಿತ್ತಿಯ ಹಾರಾಟ ಗುಲಾಬಿ ಬಣ್ಣದ ಕಪ್ಪು ಮಿಶ್ರಿತ ಚಿಟ್ಟೆ. ಅದಕ್ಕೂ ಮಗುವಿನೊಂದಿಗೆ ಆಟವಾಡುವ ಸಂಭ್ರಮ. ಚಿಟ್ಟೆಗೂ ಮಗುವಿಗೆ ಇಬ್ಬರಿಗೂ ಕುತೂಹಲ. ನೋಡುವರಿಗೂ ತುಂಬಾ ಕುತೂಹಲ. ಆಟವಾಡುವ ಸಂಭ್ರಮ. ಸಂತೋಷ ನಲಿದಾಡುತಿರುತ್ತದೆ. ಇದು ಮನುಷ್ಯನ ಬಾಲ್ಯಾವಸ್ಥೆಯಲ್ಲಿ ಉಂಟಾಗುವ ಮನುಷ್ಯನ ಪ್ರತಿ ಕ್ಷಣಗಳನ್ನು, ಅತಿ ಸೂಕ್ಷ್ಮವಾಗಿ ಚಿಟ್ಟೆ – ಗೊಂಬೆಯ ನಗುವಿನೊಂದಿಗೆ ಪ್ರದರ್ಶಿಸಿದ್ದಾರೆ. ತೊಗಲುಗೊಂಬೆಯ ಮಾದರಿಯಂತೆ ಇದೆ. ಆದರೂ ವಿಭಿನ್ನ. ಹಾಸ್ಯದ ಹೆಚ್ಚುಗಾರಿಕೆ, ಗೊಂಬೆಗಳ ಹತಾಶೆ, ನಾಚಿಕೆ ನೋಡುವುದೇ ಮನಮೋಹಕ. ಅಮೂರ್ತದಲ್ಲಿ ಮೂರ್ತರೂಪದ ಮಂದಹಾಸ ಕಾಣಿಸುತ್ತದೆ. ಇದು ಕೇವಲ ಗೊಂಬೆಯ ಮನದ ಇಂಗಿತವು ಹೌದು. ನಮ್ಮ ಮನದ ಭಾವವು ಹೌದು.
ಮಕ್ಕಳಿಗೆ ಗೊಂಬೆ ಆಟವೆಂದರೆ ಪಂಚಪ್ರಾಣ. ಹಿರಿಯರಿಗೂ ಗೊಂಬೆ ಎಂದರೆ ಪ್ರೀತಿ. ಇದು ಕೇವಲ ಮಕ್ಕಳಿಗಾಗಿ ಮಾತ್ರವಲ್ಲದೆ ಹಿರಿಯರಿಗೂ ಅವಶ್ಯ. ಅತಿ ಹೆಚ್ಚು ಮಾತನಾಡುವ ಮಕ್ಕಳು ಒಂದು ಗಂಟೆ ಕಾಲ ಕ್ರಿಯಾತ್ಮಕವಾಗಿದ್ದರು. ಶಾಲೆಯಲ್ಲಿ, ಮನೆಯಲ್ಲಿ ಮಕ್ಕಳು ಸುಮ್ಮನಿರುವುದಿಲ್ಲ. ಆದರೆ ಮಾತಿಲ್ಲದ ನಾಟಕವನ್ನು ನೋಡುವುದಕ್ಕೆ ಕುಳ್ಳಿರಿಸಿದಾಗ ಅದರ ಫಲಿತಾಂಶ ನಟನೆಯೊಂದಿಗೆ, ಗೊಂಬೆಯ ಆಟದೊಂದಿಗೆ ತಲ್ಲೀನರಾಗಿದ್ದರು.

ಮಾತೇ ಮಾಣಿಕ್ಯ ಎನ್ನುವವರಿಗೆ ಮಾತು ಮಾಣಿಕ್ಯವಲ್ಲ ಮೌನ ಮಾಣಿಕ್ಯ ಎಂಬ ಸೂತ್ರಕ್ಕೆ ತಕ್ಕಂತೆ ಮಕ್ಕಳು ಅಣಿಯಾಗಿದ್ದರು. ಬೊಂಬೆ ಆಟದಲ್ಲಿ ಪ್ರಾವಿಣ್ಯತೆ ಪಡೆದ ಕ್ರಿಯಾಶೀಲರು ಗೊಂಬೆಯನ್ನು ಬಹಳ ಅಮೋಘವಾಗಿ ಓಡುವುದನ್ನು, ನಡೆಯುವುದನ್ನು, ಹಾರಾಡುವುದನ್ನು, ನಿಧಾನಗತಿಯ ಚಲನೆಯನ್ನು, ಬೈಕ್ ಸವಾರಿ ಮಾಡುವುದನ್ನು, ಕನಸು ಕಾಣುವ ವೈಶಿಷ್ಟ್ಯತೆಯನ್ನು ಅದ್ಭುತವಾಗಿ ರಚಿಸಿಕೊಂಡಿದ್ದರು. ಹದಿಹರೆಯದಲ್ಲಿರುವಾಗ ಮನುಷ್ಯನ ಆಸೆ ಆಕಾಂಕ್ಷೆಗಳು ಕೇವಲ ಮಾತುಗಳಲ್ಲಿಲ್ಲ ಭಾವನೆಗಳಲ್ಲಿವೆ. ಕನಸು ಕಾಣುವ ಆಲೋಚನೆಯೇ ವಿಭಿನ್ನವಾಗುವುದು. ಹದಿಹರೆಯ ಮತ್ತು ಮಧ್ಯಮ ವಯಸ್ಸಿನ ದೀರ್ಘಾವಧಿಯಲ್ಲಿನ ಮನುಷ್ಯನ ಪಯಣ ಹೆಚ್ಚು ಕಠಿಣ ಹಾಗೂ ಸವಾಲುಗಳು ಎದುರಾಗುವ ಸಮಯವದು.
ತಂತ್ರಜ್ಞಾನದಲ್ಲಿ ಮುಂದಿರುವ ನಾವು ಪ್ರಕೃತಿಯ ಪ್ರತಿಯೊಂದು ಸಂತೋಷದಿಂದ ದೂರವಾಗಿದ್ದೇವೆ. ಕೆಲಸ ಮಾಡುತ್ತಿರುವಾಗ ಚಿಟ್ಟೆ ಮತ್ತೆ ಬಂದು ಆ ವ್ಯಕ್ತಿಯನ್ನು ಸಂಧಿಸುತ್ತದೆ. ಆದರೆ ಚಿಟ್ಟೆಗೆ ಅವನು ಕಿವಿ ಕೊಡುವುದಿಲ್ಲ ಕೆಲಸ ಕೆಲಸ ಎಂದು ಹೇಳುತ್ತಾ ಮನುಷ್ಯ ತನ್ನತನವನ್ನು ತನ್ನ ಪ್ರೀತಿಯನ್ನು ಪ್ರಕೃತಿಯೊಂದಿಗಿನ ಬಂಧನ ಕಳೆದುಕೊಳ್ಳುತ್ತಿದ್ದಾನೆ ಎಂಬ ಜಾಗೃತಿ ಪ್ರಯೋಗ ಮೂಡಿಸಿತ್ತು.
ಹದಿಹರೆಯದಲ್ಲಿರುವಾಗ ಚಿಟ್ಟೆ ತನ್ನನ್ನು ಮುಟ್ಟಿಸಿಕೊಳ್ಳಲು ಭಯಪಡುತ್ತಿತ್ತು. ಆದರೆ ವೃದ್ಧಾಪ್ಯವಾದಾಗ ಮಗುವಿದ್ದಾಗ ಚಿಟ್ಟೆಯಿಂದ ಆತನನ್ನು ತಬ್ಬಿಕೊಳ್ಳುತ್ತಿತ್ತು, ಮುಟ್ಟುತ್ತಿತ್ತು.
ಮಗುವಿನ ಆಸೆಯೇ ಬೇರೆ. ಹದಿಹರೆಯದಲ್ಲಿದ್ದಾಗ ಆಸೆಯೇ ಬೇರೆ. ಹದಿಹರೆಯದಲ್ಲಿದ್ದಾಗ ಆಕ್ರಮಣ ಶೀಲನಾಗಿ ಚಿಟ್ಟೆಯನ್ನು ಹಿಡಿಯಲು ಪ್ರಯತ್ನಿಸುವ ಮನುಷ್ಯನಿಗೆ ಚಿಟ್ಟೆ ಸಿಗುವುದೇ ಇಲ್ಲ. ಅದು ಸಿಕ್ಕಾಗ ಅದನ್ನು ತನ್ನ ಕಾಲಡಿಯಲ್ಲಿ ಇಟ್ಟುಕೊಳ್ಳುವ ಅಹಂಕಾರ ತೋರಿಸುತ್ತಾನೆ. ಈ ತರಹದ ಬೆಳವಣಿಗೆಗಳು ನಮ್ಮ ಸಮಾಜದಲ್ಲಿವೆ ಎಂಬ ಸೂಚನೆ ಇದೆ.

ತಾನು ಆಟವಾಡುವ ಚೆಂಡು ಗಿಡದ ಮೇಲೇ ಸಿಕ್ಕಿ ಬಿದ್ದಾಗ, ಗಿಡವನ್ನು ಏರುವ ಪ್ರಮೇಯ ಬರುತ್ತದೆ. ಆದರೆ ಮನುಷ್ಯ ಗಿಡವನ್ನು ಕಡಿಯಲು, ಅಲ್ಲಾಡಿಸಲು ಪ್ರಯತ್ನಿಸುತ್ತಾನೆ. ಮನುಷ್ಯ ಪ್ರಕೃತಿಯ ಮೇಲೆ ಮಾಡುತ್ತಿರುವ ದೌರ್ಜನ್ಯ ಇದು ಎಂದು ನಾಟಕ ಪ್ರತಿಧ್ವನಿಸುತ್ತದೆ. ತನ್ನ ಸ್ವಹಿತ ಚಿಂತನೆಯ ಮನುಷ್ಯನ ಮೂಲ ಗುಣ. ಅದನ್ನು ಮರೆತು, ಅದನ್ನು ಇನ್ನೊಬ್ಬರ ಹಿತಕ್ಕಾಗಿ ಬೆಳೆಸಿಕೊಳ್ಳುವ ಸಾಧ್ಯತೆಗಳನ್ನು ನಾಟಕ ಉಣ ಬಡಿಸುತ್ತದೆ. ಮಗುವಾಗಿದ್ದಾಗ ಸೂಕ್ಷ್ಮತೆ, ಮಧ್ಯಮ ವಯಸ್ಸಿಗೆ ಬಂದಾಗ ಅದು ಕಾಣೆಯಾಗುವುದು. ವೃದ್ಧಾಪ್ಯ ಬಂದಾಗ ಅತಿ ಸೂಕ್ಷ್ಮವಾಗುವುದು. ಮಧ್ಯಮ ವಯಸ್ಸಿನಲ್ಲಿ ಚಿಟ್ಟೆಯನ್ನು ಎಷ್ಟು ಬಾರಿ ಕರೆದರೂ ಚಿಟ್ಟೆ ಬರುವುದೇ ಇಲ್ಲ…. ಅದೇ ವೃದ್ಧಾಪ್ಯದ ಸಮಯದಲ್ಲಿ ಒಂದೇ ಚಲನೆಗೆ ಚಿಟ್ಟೆ ಹಾರಿ ಬರುವುದು. ಆಕ್ರಮಣ ಶೀಲತೆಯನ್ನು ಮೈಗೂಡಿಸಿಕೊಂಡ ಮನುಷ್ಯನಿಗೆ ಪ್ರೀತಿಯ ಶೀಲತೆಯನ್ನು ಮೈಗೂಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂಬ ಆಲೋಚನೆ ನಾಟಕದಲ್ಲಿದೆ. ಮಗುವಿನೊಂದಿಗೆ ಚಿಟ್ಟೆ ಕುಚೇಷ್ಟಗಳನ್ನು ಮಾಡುತ್ತದೆ. ಅದೇ ವೃದ್ಧಾಪ್ಯ ಸಮಯದಲ್ಲಿ ತನ್ನ ಸೂಕ್ಷ್ಮತೆಯನ್ನು ಕಾಯುತ್ತದೆ. ಸಂಸಾರ ಬಂಧನ, ಕೆಲಸದ ಒತ್ತಡಗಳ ನಡುವೆ ಮಾನವ ಪ್ರಕೃತಿಯ ಸಂತೋಷವನ್ನು ಮರೆತಿದ್ದಾನೆ. ಆ ಸಂತೋಷಕ್ಕಾಗಿ ಪ್ರಕೃತಿ ಕಾಯುತ್ತಿದೆ; ಆದರೆ ಮನುಷ್ಯ ಕಾಯುತ್ತಿಲ್ಲ. ಪ್ರಕೃತಿಯ ಮನುಷ್ಯನಿಗೆ ಪ್ರೀತಿ ಹಂಚಲು ಬಯಸುತ್ತದೆ ಆದರೆ ಮನುಷ್ಯ ಆ ಪ್ರೀತಿಗೆ ಹೊಂಚು ಹಾಕಲು ಪ್ರಯತ್ನಿಸುತ್ತಾನೆ.
(ಕಲ್ಬುರ್ಗಿ ನಾಟಕೋತ್ಸವ 2026 ಶೀರ್ಷಿಕೆಯಡಿ ಕಲ್ಬುರ್ಗಿ ನೆಕ್ಸ್ಟ್ ಫೌಂಡೇಶನ್ ವತಿಯಿಂದ ರಂಗಶಂಕರ ಸಹಯೋಗದೊಂದಿಗೆ ಕಲ್ಬುರ್ಗಿ ರಂಗಾಯಣದಲ್ಲಿ ಪ್ರದರ್ಶನಗೊಂಡ ‘ಸರ್ಕಲ್ ಆಫ್ ಲೈಫ್ ‘ ಪಪೇಟ್ ಶೋ ಮಕ್ಕಳ ಮನಸೂರೆಗೊಂಡಿತು. ಪ್ರವೀಣ ಗೋಡ್ಖಿಂಡಿ ಅವರ ಸಂಗೀತ ತಂಗಾಳಿಯಂತೆ ಇಂಪಾಗಿತ್ತು. ಎಸ್ ಸುರೇಂದ್ರನಾಥ್ ಅವರ ನಿರ್ದೇಶನ ಅದ್ಭುತವಾಗಿತ್ತು.)

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಮೂಲತಃ ಯಾದಗಿರಿ ಜಿಲ್ಲೆಯ ಮುದ್ನಾಳ ಗ್ರಾಮದವರು. ಸದ್ಯ ಇವರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಎಂಟು ವರ್ಷಗಳಿಂದ ಯಾದಗಿರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಚಂದ್ರಕಾಂತ ಕೂಸನೂರ : ಬಹುಶೀಸ್ತೀಯ ಅಧ್ಯಯನ ( ಕಥನಕ್ರಮ,ನಾಟಕ ಮತ್ತು ಚಿತ್ರಕಲೆಗಳನ್ನು ಅನುಲಕ್ಷಿಸಿ )ವಿಷಯದಡಿ ಸಂಶೋಧನಾ ಪ್ರಬಂಧ ಮಂಡಿಸಿ 2023ರಲ್ಲಿ ಪಿಎಚ್.ಡಿ ಪದವಿ ಪಡೆದಿರುವರು. ನಾಟಕಗಳ ಕುರಿತಾದ ರಂಗ ಪ್ರಯೋಗಗಳ ವಿಮರ್ಶಾ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಣೆಗೆ ಸಿದ್ಧವಾಗಿದೆ.
