ಅಪರಿಚಿತ
ನನ್ನ ಮನೆಯ ಹಾಲ್ನಲ್ಲಿ
ಗೋಡೆಯ ಮೇಲೆ ಒಂದು ಭಾವಚಿತ್ರ ಇದೆ —
ಒಬ್ಬ ಗಂಡಸಿನದು.
ನನಗಿಂತ ಮೂರ್ನಾಲ್ಕು ವರ್ಷ
ಸಣ್ಣವನಿರಬಹುದೇನೋ.
ನನ್ನದೇ ಮೂಗು, ನನ್ನದೇ ಕಣ್ಣು,
ನನ್ನದೇ ಹುಬ್ಬು…
ಬಿಳಿಗೂದಲು ಮಾತ್ರ
ನನಗಿಂತ ಒಂದೆರಡು ಕಡಿಮೆ.
ಆದರೆ
ಯಾರಿವನೆಂದು ತಿಳಿಯುತ್ತಿಲ್ಲ.
ಗಾಢ ನಿದ್ರೆಯ ಕನಸಲಿ ಸಿಕ್ಕ ಪಾತ್ರದಂತೆ,
ಆಪ್ತನೆನಿಸಿದರೂ ಅಪರಿಚಿತ —
ನೆನೆದಷ್ಟು ಮಬ್ಬು ಮಬ್ಬು.
ಮನೆಯವರನ್ನು ಕೇಳಿದರೆ
“ನೀನೇ” ಎಂದು ನಗುತ್ತಾರೆ,
“ಎಷ್ಟು ಚೆಂದ ಇದೆ ಇದು” ಎಂದು ಹೊಗಳುತ್ತಾರೆ.
ನನಗೆ ಮಾತ್ರ
ಇದು ಬಗೆಹರಿಯದ ಒಗಟು,
ಉತ್ತರವಿಲ್ಲದ ಪ್ರಶ್ನೆ —
ಯಾರಿವನು?

oplus_50
ಸುಮುಖ ಭಾರದ್ವಾಜ ಜಿ.ವಿ. ಬೆಂಗಳೂರಿನ ನಿವಾಸಿ.
ಪಿಎಚ್‌ಡಿ ವಿದ್ಯಾರ್ಥಿ.
ತಬಲ ವಾದನ, ಸಿನಿಮಾ, ಸಾಹಿತ್ಯ, ಸಂಗೀತ ಇತ್ಯಾದಿಗಳಲ್ಲಿ ಆಸಕ್ತಿ ಹೊಂದಿದ್ದಾರೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
