ರಾಮುನ್ನ ಒಲಿಸ್ಕಣಾದು ಕಷ್ಟ. ಹನುಮಂತನ್ನ ಒಲಿಸ್ಕಣಾದು ಸುಲ್ಬ. ರಾಮಾ ಅಂದ್ರೆ ಸಾಕು ಹನುಮ ಓಡೋಡ್ಕಂಡು ಬರ್ತಾನೆ. ಆಗ ಬ್ಯಾರೆ ಆಟ ಕಟ್ದೆ ರಾಮ್ನೂ ಹಿಂದಿಂದ್ಲೇ ಬತ್ತಾನೆ ಅಂಬೋದು ಅಜ್ಜಿ ಯೋಳ್ತಿದ್ದ ಇಚಾರ. ಅಂಗಾಗಿ ರಾಮನ ಹತ್ರುಕ್ಕೆ ಹೋಗಾಕೆ ಸಲೀಸು ಹನುಮಂತನ ಭಜನೆ ಮಾಡೋದು. ಹನುಮ ಕಪಿ ಅಲ್ವೇ. ಕಿಚಪಿಚಾಂತ ನಾವೂ ಕಪಿಗಳಂಗೇ ಭಜನೆ ಹಾಡ್ತಿದ್ವಿ. ಮರದಾಗಿರೋವೂ ಜಾತಿಪ್ರೀತಿಗೆ ಓಡಿಬರೋ ಅಂಗೆ ಇರ್ತಿತ್ತು ನಮ್ಮ ಆಲಾಪ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹಳ್ಳಿಯಲ್ಲಿ ರಾಮನವಮಿಯ ಆಚರಣೆಯ ಕುರಿತ ಬರಹ ನಿಮ್ಮ ಓದಿಗೆ
ರಾಮನ ಅವತಾರ, ರಘುಕುಲ ಸೋಮನ ಅವತಾರ… ಅಂತ ಕೋರಸ್ನಲ್ಲಿ ಅರಚುತ್ತಿದ್ದದ್ದು ಇನ್ನಾ ಮರೆಯೋಕಾಗಲ್ಲ. ಭೂಕೈಲಾಸ ಸಿನ್ಮಾದ ಈ ಹಾಡು ರಾಮ್ನೋಮಿನಲ್ಲಿ ಅರಿಶಿನ-ಕುಂಕುಮದಲ್ಲಿ ಕಂಪಲ್ಸರಿ ಹಾಡ್ಲಿಕ್ಕೇ ಬೇಕಿತ್ತು. ಹೊಸ ಹಾಡು ಭಜನೆ ಏನೇ ಕಲಿತ್ರೂನೆ ದೊಡ್ಡೋರು, ಅದೇನ್ರಮ್ಮಿ ಅಂಗೆ ಆಗ್ಲಿಂದ ನೋಡ್ತೀವಿ, ರಾಮನ ಅವತಾರ ಯೋಳಾಕೇ ಒಲ್ಲೇಂತೀರಿ. ಅದೇನ್ ಆಡ್ತೀರಪ್ಪ. ಮೊದ್ಲು ಅದುನ್ನ ಗುನುಗಿ ಅಂತ ಜಬರಿಸ್ತಿದ್ರು. ತಿರ್ಗಾ ಅಕ್ಕಂದ್ರು, ಅಮ್ಮಂದ್ರು ಅದ್ನ ಸುರು ಹಚ್ಕಂಡು ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ ರಘುಕುಲ ಸೋಮ, ಸೀತೆಯ ಚಿಂತೆಗೆ ಪೂರ್ಣವಿರಾಮ, ಲಂಕೆಯ ವೈಭವ ನಿರ್ನಾಮ ಅಂತ ಕೊನೇ ಮುಟ್ಟೊ ಹೊತ್ಗೆ ಚಳ್ಳೆಪಿಳ್ಳೆಗಳೆಲ್ಲಾ ಗಂಟಲು ಹರಿಯೋ ಅಂಗೆ ದನಿ ತೂರ್ಸೋದು. ಇನ್ನಾ ನಾಕು ಸಾಲಿದ್ರೂ ಸುತ ಅದು ಯಾರ್ ಕಿವೀ ಮ್ಯಾಗೂ ಬೀಳ್ತಿರಲಿಲ್ಲ. ಬ್ಯಾರೆ ಹಾಡು ಹಾಡೋರು ಆಗ್ಲೇ ಗಂಟ್ಲು ಕ್ಯಾಕರುಸ್ಕಂಡು ರೆಡಿ ಆಗ್ತಿದ್ರು. ನಾವೂ ಗುಜುಗುಜು ಸುರು ಹಚ್ಕಂಡು, ಅವುರ್ ಮನ್ಯಾಗೆ ಪಂಡಾರ(ತಿಂಡಿ) ಏನು ಕೊಡಬೋದು, ಯಾವ ವಾಸನೆ ಬತ್ತಾ ಅದೆ ಅಂತ ಯೋಚ್ನೆ ಮಾಡ್ತಿದ್ವಿ. ರಾಮ್ನೋಮಿಗೆ ಕೊಡೋದೆ ಪಾನಕ, ಕೋಸಂಬ್ರಿ. ಆದ್ರೆ ಹೆಸರುಬೇಳೇದಾ, ಕಡಲೆಬೇಳೇದಾ ಕೋಸಂಬ್ರಿ, ಅಂಗೇ ಬೆಲ್ಲದ ಪಾನಕಾನಾ, ನಿಂಬೆಹಣ್ಣಿಂದಾ, ಎಳ್ಳೀಕಾಯಿಂದಾ(ಹೆರಳೇಕಾಯಿ), ಬೆಲ್ಲದಣ್ಣಿಂದಾ(ಬೇಲದ ಹಣ್ಣು), ಸರಬತ್(ಶರಬತ್) ಹಣ್ಣಿಂದಾ ಪಾನಕ ಕೊಡೋದು ಅನ್ನಾ ಘನಂದಾರಿ ಯೋಸ್ನೆ ನಮ್ದು.
ಉಗಾದಿ ಮುಗಿದೇಟ್ಗೆ ಪಟುಕ್ಕಂತ ಬರೋದು ರಾಮ್ನೋಮಿ ಹಬ್ಬ. ಇನ್ನಾ ನಾವು ಉಗಾದಿ ಹೋಳ್ಗೆ, ಜೋಕಾಲಿ ಆಟದ ಗುಂಗಲ್ಲೇ ಇರ್ತೀವಿ. ಆಗ್ಲೇ ಬರೋ ಈ ರಾಮ್ನೋಮಿ ನಮ್ಗೆ ಎರಡನೇ ಸತಿ ಹೊಸಬಟ್ಟೆ ಟ್ರಂಕಿನಿಂದ ತೆಗೆಯಾಕೆ, ಮೇಲಿಂದ ಮೇಲೆ ಹಾಕ್ಕಂಡು ಮೆರಿಯಾಕೇಂತ್ಲೆ ಬತ್ತದೆ ಅಂಬೋದು ಭ್ರಮೆ ಆಗಿತ್ತು. ಹೊಸಬಟ್ಟೆ ಇಕ್ಕಂಡು ಅರಿಶಿನ ಕುಂಕುಮಕ್ಕೆ ನಿರಿಗೆ ಚಿಮ್ಮಿಸ್ಕಂತಾ ಹೋಗೋದು. ಎಲ್ರೂ ನಮ್ಮ ಬಟ್ಟೆ ನೋಡೋಕೆ, ನಾವೂ ಅವುರ್ ಬಟ್ಟೆ ನೋಡಾಕೆ ಸಿಗಾ ಚಾನ್ಸು ಬುಡಾಕಾದೀತೇ?
ಭಜನೆ ರಾಮ್ನೋಮಿ ಹಬ್ಬದಾಗೆ ಬಲು ಮುಖ್ಯ. ನಾಕೈದು ಜನ ಹಾಡು ಯೋಳಿದ್ ಮ್ಯಾಗೆ ಭಜನೆ ಸುರು. ಪೈಪೋಟಿ ಮ್ಯಾಗೆ ಹಾಡು. ಅದ್ರಾಗೂ ರಾಮನ ಭಜನೆಗಿಂತ, ಅವುನ್ ಸೇವಕ ಹನುಮಂತನ ಭಜನೆ ಸ್ಯಾನೆ. ಯಾಕೇಂದ್ರೆ ರಾಮುನ್ನ ಒಲಿಸ್ಕಣಾದು ಕಷ್ಟ. ಹನುಮಂತನ್ನ ಒಲಿಸ್ಕಣಾದು ಸುಲ್ಬ. ರಾಮಾ ಅಂದ್ರೆ ಸಾಕು ಹನುಮ ಓಡೋಡ್ಕಂಡು ಬರ್ತಾನೆ. ಆಗ ಬ್ಯಾರೆ ಆಟ ಕಟ್ದೆ ರಾಮ್ನೂ ಹಿಂದಿಂದ್ಲೇ ಬತ್ತಾನೆ ಅಂಬೋದು ಅಜ್ಜಿ ಯೋಳ್ತಿದ್ದ ಇಚಾರ. ಅಂಗಾಗಿ ರಾಮನ ಹತ್ರುಕ್ಕೆ ಹೋಗಾಕೆ ಸಲೀಸು ಹನುಮಂತನ ಭಜನೆ ಮಾಡೋದು. ಹನುಮ ಕಪಿ ಅಲ್ವೇ. ಕಿಚಪಿಚಾಂತ ನಾವೂ ಕಪಿಗಳಂಗೇ ಭಜನೆ ಹಾಡ್ತಿದ್ವಿ. ಮರದಾಗಿರೋವೂ ಜಾತಿಪ್ರೀತಿಗೆ ಓಡಿಬರೋ ಅಂಗೆ ಇರ್ತಿತ್ತು ನಮ್ಮ ಆಲಾಪ. ಸಂಜೆ ನಾಕು ಗಂಟೇಗೆ ಸುರು ಆದ್ರೆ ಆರೆಂಟು ಮನೇಗ್ಳಲ್ಲಿ ಇಂಗೇ ಭಜನೆ ಮಾಡ್ಕಂಡು ಮನೇಗೆ ವಾಪಾಸಾಗಾ ಹೊತ್ಗೆ ಎಂಟೋ ಒಂಬತ್ತೋ ಆಗಿರ್ತಿತ್ತು. ಎಲ್ಲಾರ ಮನೆ ಪಾನಕ, ಮಜ್ಜಿಗೆ, ಕೋಸಂಬ್ರಿ ಹೊಟ್ಟೆ ಒಳಗೆ ಗೂರಾಡ್ತಿತ್ತು. ಮದಮದಲಿನ ಮನೆಗ್ಳಾಗೆ ಚೆನ್ನಾಗಿ ಕರ್ಚಾಗ್ತಿತ್ತು. ಎಲ್ರೂ ಲೋಟ ಪೂರ್ತಿ ಪಾನಕ, ಮಜ್ಜಿಗೆ ಕುಡ್ದು, ಮುತ್ತುಗದೆಲೇನಾಗೆ ಕೋಸಂಬ್ರಿ ಮೇಯ್ತಿದ್ವಿ. ಕೊನೆಕೊನೆಗೆ ಒಂದು ಬಟ್ಟಲು ತಕಂಡು ಹೋಗಿ ಅದ್ರಾಗೆ ಕೋಸಂಬ್ರಿ ಹಾಕಿಸ್ಕಂತಿದ್ವಿ. ಪಾನಕ ಅಂತೂ ಒಂದೇ ಲೋಟದಾಗೆ ನಾಕೈದು ಜನ ಕುಡಿದ ಶಾಸ್ತ್ರಾ ಮಾಡಾದೂ ನಡೀತಿತ್ತು.
ರಾಮ್ನೋಮಿ ಸಡಗ್ರ
ರಾಮ್ನೋಮಿ ಅಂದೇಟ್ಗೆ ನಮ್ಗೆ ನೆಪ್ಪಾಗೋದು ರಾಮ ಅಲ್ವೇ ಅಲ್ಲ. ಪಾನಕ ಕೋಸಂಬ್ರಿ ಸಮಾರಾದ್ನೆ, ಹಾಲೋಳಿಗೆ. ನಮ್ಮ ಬಾಲ್ಯದಾಗೆ ರಾಮ್ನೋಮಿ ಆಚರಣೆ ಬಲು ಜೋರಿತ್ತು. ಬೆಳಿಗ್ಗೇನೇ ಎದ್ದು ಎಣ್ಣೆಸ್ನಾನ ಮಾಡ್ಕಂತಿದ್ರು. ಆಮ್ಯಾಕೆ ಅಪ್ಪ ಊರಾಗಿದ್ದ ಬ್ರಾಂಬ್ರು ಮತ್ತೀಗ ಶೆಟ್ಟರ ಮನೇಗ್ಳಿಗೆ ಹೋಗಿ ಅವತ್ತು ಬೆಳಗ್ಗೇನೇ ಅಶ್ವತ್ಥಕಟ್ಟೆ(ಜಗಲಿಕಟ್ಟೆ) ತಾವ್ಕೆ(ಬಸ್ಟಾಂಡಿನಲ್ಲಿರಾದು) ಆ ಮನೇಗ್ಳ ಗಂಡಸ್ರನ್ನ ಬರೇಳ್ತಿದ್ರು. ನಮ್ ತಾತನ ಕಾಲ್ದಾಗ್ಲಿಂದ ನಡ್ಕಂಡು ಬಂದಿರಾ ಆಚಾರ. ಅಲ್ಲಿ ಅಶ್ವಥನಾರಾಯಣ ಸೋಮಿಗೆ ಪೂಜೆ ಮಾಡಿದ್ ಮ್ಯಾಗೆ ಕಟ್ಟೆ ಮ್ಯಾಲೆ ಸಮಾರಾದ್ನೆ ಸುರು ಆಗ್ತಿತ್ತು. ಅಲ್ಲಿ ನಮ್ಮ ತಾತ, ಅಪ್ಪ ಉಗಾದಿ ಇಂದ್ಲೇ ಅರವಂಟಿಗೆ(ಅರವಟ್ಟಿಗೆ) ಸುರು ಮಾಡಿಸ್ತಿದ್ರಲ್ಲ ಅದ್ರಾಗೇನೆ ರಾಮ್ನೋಮಿ ದಿಸ ಎರಡು ದೊಡ್ಡ ದೊಡ್ಡ ಹಿತ್ತಾಳೆ ಕೊಳಗಗಳಾಗೆ ಬೆಲ್ಲದ ಪಾನಕ, ಅಂಗೆ ಎರಡು ದೊಡ್ಡ ಮಂಕರಿಗಳ ತುಂಬಾ ಬ್ಯಾಳೆ (ಕೋಸಂಬ್ರಿ) ಮಡಗಿದ್ದು ಬಂದ ಜನರಿಗೆಲ್ಲಾ ಕೊಡೋರು. ಹತ್ರದಾಗೇ ಇದ್ದ ಕಾಲನಿಯವರು, ಲಿಂಗಾಯತ್ರು ನಾಯಕರು ಎಲ್ರೂ ಮಕ್ಕಳು ಮರಿ ಹೆಂಗುಸ್ರು ಗಂಡಸರು ಚೊಂಬು ತಂದುಕೊಂಡು ಪಾನಕ ಹುಯ್ಯಿಸಿಕೊಳ್ಳೋರು. ಮುತ್ತುಗದೆಲೇ ಮ್ಯಾಗೆ ಬ್ಯಾಳೆ ಇಕ್ಕಿಸ್ಕಣಾರು. ನಮ್ಮ ಚಿಕ್ಕರಾಮಪ್ಪ, ಗೋವಿಂದಪ್ಪ, ದಾಳಪ್ಪ, ಲಿಂಗಪ್ಪ, ತಿಮ್ಮಪ್ಪ ಇವುನ್ನೆಲ್ಲಾ ನೋಡ್ಕಂತಿದ್ರು. ಬ್ರಾಂಬ್ರು ಮತ್ತೆ ಶೆಟ್ರು ಗಂಡಸರು ಪೂಜೆ ಮುಗುದೇಟ್ಗೆ ಸೀದಾ ಮದ್ಲು ನಮ್ಮ ಮನೇಗೆ ಬರೋರು. ಮದ್ಲು ಬ್ರಾಂಬ್ರಿಗೆ ಹೊಸ ಬೀಸಣಿಗೆನಾಗೆ ಗಾಳಿ ಬೀಸೋರು. ಅದ್ಯಾಕೋ ಗೊತ್ತಿಲ್ಲಪ್ಪ, ಮುತ್ತಾತನ ವಂಶದಿಂದಲೂವೇ ಇದೇ ನಡ್ಕಂಡು ಬಂದೈತೆ.
ರಾಮ್ನೋಮೀಗೇಂತ್ಲೇ ನಾಕೈದು ಹೊಸಾ ಬೀಸಣಿಗೆ ತಂದಿಕ್ಕೋರು. ಯಾಕೇಂದ್ರೆ ಊರಾಗಿದ್ದಿದ್ದೇ ನಾಕೈದು ಬ್ರಾಂಬ್ರ ಮನೆ. ಬೀಸಿದ ಬೀಸಣಿಗೆ ಅವರಿಗೇ ದಾನ ಕೊಡೋರು. ಬ್ಯಾಸಿಗೆ ಝಳ ಸುರು ಆಗಿರ್ತಿತ್ತಲ್ಲ, ಜೀವ ತಂಪು ಮಾಡ್ಕಣಾಕೆ ಅಂತ ಕೊಡೋರು. ಆಮ್ಯಾಕೆ ಎಳನೀರು ಒಡ್ದು ಕೊಡೋರು. ಹಳೇ ತಲೇಗ್ಳು ಇವಿಷ್ಟೇ ತಕಣಾರು. ಪಾನಕ, ಕೋಸಂಬ್ರಿ ತಕಂತಿರ್ಲಿಲ್ಲ. ನಮ್ಮನೆ ನೀರು ಬೆರೆತಿರ್ತಿತ್ತಲ್ಲ ಅಂತ್ಲೋ ಏನೋ. ಆದ್ರೆ ಹೊಸ ತಲೆಗ್ಳು ಪಾನಕಾನೂ ಕುಡ್ದು, ಕೋಸಂಬ್ರೀನೂ ತಿಂತಿದ್ರು. ತೆಂಗಿನಕಾಯಿ ತಾಂಬೂಲವ ದಕ್ಷಿಣೆ ಮಡಗಿ ಕೊಟ್ಟು, ಕಾಲಿಗೆ ಮೊಕ್ಕೊಣೋರು(ನಮಸ್ಕಾರ). ಅವ್ರನ್ನ ಸಾಗಾಕಿ ಶೆಟ್ಟರ ಗಂಡಸರನ್ನು ಉಪಚಾರ ಮಾಡ್ತಿದ್ರು. ಅವ್ರದ್ದೂ ಮುಗಿದ ಮ್ಯಾಲೇ ಮನೇಲೂ ಪಾನಕ ಮತ್ತೆ ಬ್ಯಾಳೆ ಸಮಾರಾಧ್ನೆ ಸುರುವಾಗ್ತಿತ್ತು. ರಾಮಪ್ಪ ಬ್ಯಾಳೇಗೆ ಬೇಕಾದ್ದೆಲ್ಲ ರೆಡಿ ಮಾಡಿರ್ತಿದ್ದ. ನಾಗಮ್ಮ ಕಮಲಮ್ಮ ಕೈ ಹಾಕ್ತಿದ್ರು. ಮನ್ಯಾಗೂ ಬೇಜಾನ್ ಜನ ಬಂದು ಪಾನಕ ಹುಯ್ಯುಸಿಕಂಡು, ಬ್ಯಾಳೆ ಇಕ್ಕಿಸಿಕಂಡು ಕುಷೀಲಿ ಹೋಗ್ತಿದ್ರು. ಮಧ್ಯಾಹ್ನದಗಂಟ ಮನೇಯಾಗೆ ಅಂಗೇ ಜಗಲಿಕಟ್ಟೆನಾಗೆ ಸಮಾರಾದ್ನೇ ನಡೀತಿತ್ತು.
ಊರಾಗೆ ನಾಕೈದು ಬ್ರಾಂಬ್ರು ಇದ್ರಲ್ಲ. ಅದ್ರಾಗೆ ನಾಗೇಶಪ್ಪನೋರು ಊರ ಶ್ಯಾನುಭೋಗ್ರಾಗಿದ್ದೋರು. ಅವ್ರ ಮನೇಗೆ ಅಪ್ಪನ್ನ ಕರ್ಯೋರು. ಅಪ್ಪ ಹೋಗಿ ಬರೋರು. ಇನ್ನಾ ಶೆಟ್ರ ಮನೆಗ್ಳು ಎಂಟೋ ಹತ್ತೋ ಇದ್ವು. ಅದ್ರಾಗೆ ಐದಾರು ಮನೆಯೋರು ಗಂಡಸ್ರನ್ನ ಕರೀತಿದ್ರು. ನಮ್ಮನೆ ಮುಗ್ಸಿ ಎಲ್ರೂ ಅವ್ರ ಮನೆಗ್ಳಿಗೆ ಹೋಗಿ ಬರ್ತಿದ್ರು. ಇಷ್ಟಾಗೋ ಹೊತ್ಗೆ ಮಧ್ಯಾಹ್ನ.

ರಾಮದೇವಸ್ಥಾನದಲ್ಲಿ
ಆಮ್ಯಾಕೆ ರಾಮರ ಗುಡೀನಾಗೆ ಪೂಜೆ ಶುರು ಆಗ್ತಿತ್ತು. ಊರಿನ್ ಜನ್ರ ತಾವ ಎಲ್ಲಾ ಚಂದಾ ಎತ್ತಿ ಪಾನಕ, ಬ್ಯಾಳೆ ಮಾಡಿಸ್ತಿದ್ರು. ಎಲ್ಲಾ ಜಾತಿಯೋರೂ ಕಲೆತು ಅಲ್ಲಿ ಪೂಜೆ ಮಾಡಿಸ್ತಿದ್ರು. ಆದ್ರೆ ರಾಮರ ಗುಡಿ ನಮ್ಮನೆ ಮಗ್ಗುಲಿನಾಗೇ ಇತ್ತು. ನಮ್ಮನೇನಲ್ಲಿ ಬೆಳಗ್ನಿಂದ ಸಮಾರಾದ್ನೆ ನಡೀತಿತ್ತಲ್ಲ, ಗುಡೀನಲ್ಲಿ ಯಾರೂ ಬರ್ತಿರಲಿಲ್ಲ. ಚೊಂಬು ತಂದು ಹಾಕುಸ್ಕಳಿ ಅಂತ ಒತ್ತಾಯ ಮಾಡಿ, ಎಲ್ಲಾರ್ಗೂ ಕೊಟ್ಟು ಕಾಲಿ ಮಾಡ್ತಿದ್ರು.
ಮಧ್ಯಾಹ್ನದ ಹೊತ್ಗೆ ಇದುನ್ನೆಲ್ಲಾ ಮುಗ್ಸಿ, ಗಂಡಸರ ಹಾರಾಟಾ ಮುಗುದ್ ಮ್ಯಾಗೆ, ಅವ್ರು ಉಂಡು ಮನಿಕ್ಕಣಾರು. ಸಂಜಿ ನಾಕು ಗಂಟೆ ಹೊತ್ಗೆ ಹೆಂಗುಸರ ಕಾರುಬಾರು ಸುರು. ಅರಿಶಿನ ಕುಂಕುಮ ಅಂತ ಮತ್ತೆ ಬ್ರಾಂಬ್ರ ಅಮ್ಮಯ್ಯನೋರ್ನ ನಮ್ಮನಿಗೆ ಮದ್ಲು ಕರ್ದು ಅವುರ್ಗೆ ಮೆಹರಬಾನಿ ಮಾಡಿ ಕಳ್ಸಿ, ಶೆಟ್ರ ಹೆಂಗುಸ್ರು ಗುಂಪಾಗಿ ಒಬ್ಬರೊಬ್ಬರ ಮನೆಗೆ ಹೋಗಾಟ ಸುರು ಆಗ್ತಿತ್ತು. ಹೋದೋರ ಮನೇಗೆಲ್ಲಾ ಹಾಡು, ಭಜನೆ ಮುಗ್ಸಿ, ದ್ಯಾವ್ರಿಗೆ ಆರತಿ ಎತ್ತಿ, ಕುಂಕಮ ಕೊಟ್ಟು ಕಳಿಸೋರು. ಅಲ್ದಾಡೀ ರಾತ್ರೆ ಒಂಬತ್ತು ಗಂಟೆ ಹೊತ್ಗೆ ಸುಸ್ತಾಗಿ ಮನೀಗೆ ಬರೋದು. ಉಗಾದೀಗಿಂತ ರಾಮ್ನೋಮೀಗೆ ಈ ಕಾರುಣುಕ್ಕೇ ಸ್ಯಾನೇ ಸಡ್ಗರ. ನಾವೂ ಮನೆಮನೆ ಅಲೀತಿದ್ದಿದ್ದು ಈಗ್ಲೇಯಾ.
ಹಾಲೋಳಿಗೆ
ವಾರದ ಹಿಂದೆ ಬ್ಯಾಳೆ ಹೋಳ್ಗೆ ತಿಂದು ಅದ್ರ ಹೂರಣ ಅರಗುಸ್ಕಂಡಿರ್ತೀವಲ್ಲ, ತಿರ್ಗಾ ಮಾಡಿದ್ರೆ, ಅರುಗಬೇಕಲ್ಲ. ಈ ಹಬ್ಬುಕ್ಕೆ ನಮ್ಮನ್ಯಾಗೆ ಹಾಲೋಳಿಗೆ ಮಾಡ್ತಿದ್ರು. ಹಿಂದಿನ ದಿನವೇ ರೇಕು(ಒಬ್ಬಟ್ಟಿನ ಹಾಳೆ) ತಿಕ್ಕಿ, ಗೋಳಿಸಿ( ಎಣ್ಣೆಯಲ್ಲಿ ಕರಿದು), ಇಕ್ಕಂಡಿರ್ತಿದ್ರು. ಅಂಗಾಗಿ ಇದು ಬ್ಯಾಳೆ ಹೋಳ್ಗೆ ತರ ಸ್ಯಾನೆ ರೇಜಿಗೆ(ಗೋಜಿನ) ಕೆಲಸ ಅಲ್ಲ. ಅಮ್ಮದೀರ್ಗೆ ಸಲೀಸು. ಗಸಗಸೆ ಪಾಯಸ ಒಂದು ಮಾಡಿಕ್ಕುದ್ರೆ ಸಾಕು. ನಾವು ಅಂಗೇ ಹೋಗ್ತಾ ಬರ್ತಾ ಒಂದೊಂದು ರೇಕು ತಕಂಡು ಪಾಯಸದಾಗೆ ಅದ್ದಿ ತಕ್ಸನ ತೆಕ್ಕಂಡು ತಿನ್ ಕಂತಾ ಮಜಾ ಮಾಡ್ತಿದ್ವಿ. ಕರುಂಕುರುಂ ಅಂತ ಗರಿಗರಿ ರೇಕು ಸೊಲ್ ಸೊಲ್ಪಾನೇ ಸೀಯಾಗಿ(ಅದ್ದಿದ ತಕ್ಷಣ ತೆಗೆದ್ರೆ ಜಾಸ್ತಿ ಸೀ ಅಂಟಿರಲ್ಲ) ಬಲ್ ಮಜಾ ಕೊಡ್ತಿತ್ತು. ಪಾಯಸ ಅವತ್ತೇ ಕಾಲಿ ಆದ್ರೂವೇ ರೇಕುಗ್ಳು ದೊಡ್ಡ ಸಿಲ್ವಾರ್ ಡಬ್ಬದ ತುಂಬಾ ಇರ್ತಿದ್ವಾ? ನಮ್ಗೆ ಅದು ಕಾಲಿ ಆಗಾಗಂಟ ಜೀವ ನಿಲ್ತಿರಲಿಲ್ಲ. ಇಸ್ಕೂಲಿಂದ ಬಂದ ತಕ್ಷಣ ಮದ್ಲು ಡಬ್ಬ ಹುಡೀಕ್ಕಂಡು ಹೋಗ್ತಿದ್ವಿ. ಅಂಗೇ ಸಿನೇಹಿತೇರ್ಗೂ ಮುಚ್ಚಿಟ್ಕಂಡು ಕೊಡಾ ಆಟ ನಮ್ದು. ಎಲ್ಡೇ ದಿನುಕ್ಕೆ ಆಸೂ ಕಾಲಿ ಮಾಡಿ ಬಯ್ಯಿಸಿಕೊಂತಿದ್ವಿ. ಅದೇನ್ ಅಂಗೆ ರಾಕ್ಷಸೀರ ತರ ತಿಂತೀರಿ. ಲಂಕಿಣೀರು ಅಂತ ಬಯ್ಯೋರು.
ಟೀವಿನಾಗೆ ರಾಮನ ಸಿನ್ಮಾ
ಆವಾಗೆಲ್ಲಾ ಪ್ರತಿ ಭಾನುವಾರ ಟೀವಿನಾಗೆ ಕನ್ನಡ ಸಿನ್ಮಾ ಬರ್ತಿತ್ತಲ್ಲ. ರಾಮ್ನೋಮಿ ಹತ್ರ ಬಂದಾಗ ರಾಮಾಂಜನೇಯ ಯುದ್ಧಾನೋ, ರಾಮಾಯಣಾನೋ ಒಟ್ನಾಗೆ ಯಾವುದೋ ಒಂದು ದೇವ್ರ ಸಿನ್ಮಾ ಹಾಕೋರು. ಬಲ್ ಖುಷಿ ನಮ್ಗೆ ಆಗ. ದ್ಯಾವ್ರ ಸಿನ್ಮಾ ಅಂತ ಜಾಗ ಗಿಟ್ಟಿಸಾಕೆ ಒಂದು ಗಂಟೆ ಮುಂದಾಗೇ ಆದಿನಾರಾಯಣಪ್ಪನ ಮನೇಗೆ ಹೋಗಿ ಟೀವಿ ಮುಂದ್ಕೆ ಜಾಗ ಮಾಡ್ಕಂಡು ಕುಂತ್ಕಂತಿದ್ವಿ.(ಇಡೀ ಊರಾಗೆ ಅವ್ರ ಮನ್ಯಾಗೆ ಮಾತ್ರಾನೇ ಟೀವಿ ಇದ್ದಿದ್ದು. ಹಾಲಿನ ಡೇರಿನಾಗೆ ಜನ ನೋಡಾಕೇಂತ ಅಪ್ಪ ಟೀವಿ ಮಡಗಿದ್ರು. ಅಲ್ಲಿ ರಾಶಿ ಜನ ಕುಂತು ನೋಡೋರು.) ರಾಮಾಂಜನೇಯರ ಯುದ್ಧ ನೋಡ್ತಿದ್ರೆ ಕಣ್ಣಾಗೆ ಬಲು ಭಕ್ತಿಯಿಂದ ನೀರು ಸುರೀತಿತ್ತು. ರಾಮ್ನೋಮಿ ಅಂದ್ರೆ ಈ ಸಿನ್ಮಾಗಳೂ ನೆನಪಾಗ್ತವೆ.
ಈಗಿನ ರಾಮ್ನೋಮಿ
ಇತ್ತೀಚ್ಗೆ ನಮ್ಮೂರ್ನಾಗೂ ಪಟ್ಟಣದ ಗಾಳಿ ಬೀಸೈತೆ. ಅರಿಶಿನ ಕುಂಕುಮಕ್ಕೆ ಕರೆಯೋರು ಕಾಣಾಕೇ ಇಲ್ಲ. ಅಪ್ಪ ಊರು ಬಿಟ್ಟ ಮ್ಯಾಗೆ ಅರವಂಟಿಗೇನೂ ಇಲ್ಲಾ, ಜಗಲಿಕಟ್ಟೆ ಮ್ಯಾಗೆ ಪಾನಕ ಬ್ಯಾಳೇನೂ ಇಲ್ಲಾ.
ಈಗ್ಲೂ ರಾಮ್ನೋಮಿ ನಿಂತಿಲ್ಲ. ಮನೆಗ್ಳಾಗೆ ಮಾಡಾಕಿಲ್ಲ. ಎಲ್ಲಾ ಗುಡೀಗ್ಳ ತಾವೇನೇ ನಡೀತೈತೆ. ಆಯಾ ದ್ಯಾವ್ರ ಒಕ್ಕಲು ಆಯಾ ದ್ಯಾವ್ರ ಗುಡೀ ತಾವ ಚಂದಾ ಎತ್ತಿ ಪಾನಕ ಬ್ಯಾಳೆ ತರ್ಸಿ, ಪೂಜೆ ಮಾಡ್ಸಿ, ಪಂಡಾರ ಹಂಚ್ತಾರೆ. ಕಾಲೋನಿನಾಗಿರಾ ನರಸಿಂಹಪ್ಪನ ಗುಡೀತಾವ ಮಾದಿಗ್ರು, ನಮ್ ಹೊಲ್ದಾಗಿರಾ ಕದಿರಪ್ಪನ ಗುಡೀತಾವ ಉಪ್ಪಾರ್ರು, ಸತ್ಯಮ್ಮ, ನಾಡವಾರಮ್ಮನ ಗುಡೀತಾವ ನಾಯಕರು, ಈಶ್ವರನ ಗುಡೀತಾವ ಲಿಂಗಾಯತರು, ಈರಮಲ್ಲಪ್ಪನ(ವೀರಮಲ್ಲಪ್ಪ) ಗುಡೀತಾವ ಅಗಸರು, ರಾಮ, ಆಂಜನೇಯನ ಗುಡೀತಾವ ಉಳಿದೋರೂ ಕೂಡ್ಕಂಡು ಹಬ್ಬ ಮಾಡ್ತಾರೆ. ಆಗಿನ್ ಕಾಲದಾಗೆ ಜಾತಿಜನಿವಾರ, ಆಚಾರ ಇಚಾರಾ ಒಂತರಕ್ಕೆ ಇದ್ರೆ, ಈಗ ಇನ್ನೊಂತರಕ್ಕೆ ಐತೆ. ಆಗ ಜಾತಿ ಮಧ್ಯಾನೂ ಎಲ್ಲಾರೂ ಕೂಡಿ ಇರ್ತಿದ್ರು. ಕಷ್ಟ ಸುಖಕ್ಕೆ ಆಗ್ತಿದ್ರು. ಹಬ್ಬಾಂದ್ರೆ ಇರೋರು ಇಲ್ದೋರಿಗೆ ಕೈಕೂಡ್ಸಿ ಜೊತ್ಯಾಗೇ ನಗಾಡ್ಕಂಡು ಹಬ್ಬ ಮಾಡೀವು. ಈಗ ಬಿಂಕ ಬಿಗ್ಮಾನ ವಸಿ ಐತಾ? ಸ್ಯಾನೇನೆ ಐತೆ. ಜಾತಿ ಜನಿವಾರಗಳು ಹತ್ರ ಇರಾರ್ನೂವೇ ದೂರುಕ್ಕೇ ತಳ್ಳತವೆ.
ಆ ಇಸ್ಯಾ ಬುಡಿ. ಆಗಿನ್ ಕಾಲದಾಗೆ ಆರಾಣೆ ಕೂಲಿ ಇತ್ತು. ಕಾಸಿಲ್ದೆ ಕೈ ಆಡ್ತಿರಲಿಲ್ಲ. ಈಗ ಐನೂರು ರೂಪಾಯಿತಂಕ ಕೂಲಿ ಐತೆ. ಅಂಗಾಗಿ ಕೈ ಸಲೀಸಾಗಿ ಆಡ್ತೈತೆ. ಎಲ್ರೂ ಕೂಡ್ಕಂಡು ಕಾಸು ಕೂಡ್ಸಿ, ಸಮಾರಾದ್ನೆ ಚೆಂದಾಗೇ ಮಾಡ್ತಾರೆ. ದ್ಯಾವ್ರ ಪೂಜೆ ಮಾಡ್ಸಿ ಪಾನಕ ಬ್ಯಾಳೆ ತಿಂದ್ರೆ ರಾಮ್ನೋಮಿ ಮುಗೀತು. ಆಗಿನ ಸಂಭ್ರಮ ಸಡಗ್ರ ಈಗೆಲ್ಲಿ ಕಾಣಬೇಕೂ??

ಎಲ್ಲಿರುವೆ ರಾಮಾ ಬಾರಯ್ಯಾ ಅಂತ ಆಗ ಹೆಣ್ಣುಮಕ್ಕಳು ಹಾಡ್ತಿದ್ದಿದ್ದು ನೆನಪಿಗೆ ಮುತ್ತಿ, ಬ್ಯಾಸ್ರ ಆಗ್ತೈತೆ. ಹಾಡು, ಹಸೆ ಎಲ್ಲಾ ಮುಗ್ದೋಗವ್ವೆ. ಮನೆಮನೆಗೂ ಟೀವಿ ಬಂದು ಅದೇ ದೊಡ್ಡಬ್ಬ. ಬ್ಯಾರೆ ಹಬ್ಬಗೋಳು ಯಾತಕ್ಕೇಳಿ??

ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.
