ಬೆಳಗ್ಗೆ ಅಂಬಲಿಯೋ, ಬೆಣ್ಣೆ ಹಾಕಿದ ಬಿಸಿಬಿಸಿ ರೊಟ್ಟಿಯನ್ನೋ ತಿಂದು, ಅಡುಗೆ ಮನೆ ಕೆಲಸಗಳನ್ನು ಮಾಡಿ, ಜೊತೆಗೆ ಕೊಟ್ಟಿಗೆ ದನಕರುಗಳ ಕೆಲಸವಾದ ಮೇಲೆ, ಮಧ್ಯಾಹ್ನ ಊಟಕ್ಕಿಂತ ಮೊದಲು ಎಲ್ಲರೂ ಸ್ನಾನ ಮಾಡಿಕೊಳ್ಳುತ್ತಿದ್ದರು. ಅಲ್ಲೆಲ್ಲ ಮಧ್ಯಾಹ್ನದ ಹೊತ್ತಿಗೆ ರಣರಣ ಬಿಸಿಲು. ಹಾಗಾಗಿ ಆ ಹೊತ್ತಿನಲ್ಲಿ ಕೆಲಸ ಸಾಗುತ್ತಲೇ ಇರುತ್ತಿರಲಿಲ್ಲ. ಹಾಗಾಗಿ, ಬಹುತೇಕವಾಗಿ ಇಬ್ಬರು ಅಕ್ಕಂದಿರು, ಸ್ನಾನ ಮಾಡಿದ ಎಲ್ಲರ ಬಟ್ಟೆಗಳನ್ನೂ ಹಾಗೂ, ಪಾತ್ರೆಗಳನ್ನೂ ಒಂದೊಂದು ಬುಟ್ಟಿಗಳಲ್ಲಿ ಹಾಕಿಕೊಂಡು ಕೆರೆಗೆ ಹೋಗಿ ಅವನ್ನೆಲ್ಲ ತೊಳೆದುಕೊಂಡು ಬರುತ್ತಿದ್ದರು.
ರೂಪಶ್ರೀ ಕಲ್ಲಿಗನೂರ್‌ ಬರಹ

ನನಗೆ ಈಗಲೂ ಆ ಸಮಯ ಬಹುತೇಕ ನೆನಪಿದೆ. ಅಕ್ಕನ ಕಾಲು ಮುರಿದ ಸಂದರ್ಭದಲ್ಲಿ ಅಕ್ಕ ಆಸ್ಪತ್ರೆಯ ಹಾಸಿಗೆಯ ಮೇಲೆ ವಾರಗಟ್ಟಲೇ ಇರಬೇಕಿತ್ತು. ಜೊತೆಗೆ ತಮ್ಮ ತೀರಾ ಪುಟ್ಟವನು. ಬಹುಶಃ ಎರಡೂವರೆ ಮೂರು ವರ್ಷದವನಿರಬೇಕು. ದೊಡ್ಡಮ್ಮನ ಮದುವೆಗೆ ಹೋದ ನಾವು ಆಟ ಆಡುತ್ತಿದ್ದಾಗ ವಿಪರೀತ ಚೂಟಿಯಾಗಿದ್ದ, ಎಲ್ಲರಿಂದಲೂ ಪಿ.ಟಿ. ಉಷಾ ಎಂದು ಕರೆಸಿಕೊಳ್ಳುತ್ತಿದ್ದ ಅಕ್ಕ ಅದಾವುದೋ ಕೆಟ್ಟ ಘಳಿಗೆಯಲ್ಲಿ, ಎತ್ತರದ ಕಟ್ಟೆಯಿಂದ ರಪ್ಪಂತ ಕೆಳಗೆ ಹಾರಿಬಿಟ್ಟಿದ್ದಳಷ್ಟೇ… ಆಮೇಲೆ ಆದದ್ದೆಲ್ಲ ಬೇರೆ ಕತೆ… ಏಳು ವರ್ಷದ ಪುಟ್ಟ ಹುಡುಗಿಯ ಎಡಗಾಲಿಗೆ ಆಪರೇಷನ್‌ ಆದಾಗ ಬರೋಬ್ಬರಿ ಇಪ್ಪತ್ನಾಲ್ಕು ಹೊಲಿಗೆಗಳು ಬಿದ್ದಿದ್ದವು. ಹಾಗಾಗಿ ಸವಣೂರಿನಿಂದ ಹುಬ್ಬಳ್ಳಿಗೆ ಅಪ್ಪ ಹಾಗೂ ಬಗಲಲ್ಲಿ ತಮ್ಮನನ್ನಿರಿಸಿಕೊಂಡ ಅಮ್ಮನ ಓಡಾಟಕ್ಕೆ ತೊಂದರೆಯಾಗಬಾರದೆಂದು ನನ್ನನ್ನು, ಅಮ್ಮನ ಅಕ್ಕನ ಮನೆಯಲ್ಲಿ ಬಿಟ್ಟಿದ್ದರು.

ಅಮ್ಮನ ಮೂರನೆಯ ಅಕ್ಕ, ದೊಡ್ಡಮ್ಮ ಮದುವೆಯಾಗಿ ಹೋಗಿದ್ದ ಆ ಊರಿನ ಹೆಸರು ಸುನ್ನಾಳ ಎಂದು. ದೊಡ್ಡಮ್ಮನಿಗೆ ಐದು ಜನ ಮಕ್ಕಳು. ಹಾಗಾಗಿ ದೊಡ್ಡಪ್ಪ, ದೊಡ್ಡಮ್ಮನ ಜೊತೆ ಮೂರು ಜನ ಅಣ್ಣಂದಿರು ಹಾಗೂ ಇಬ್ಬರು ಅಕ್ಕಂದಿರು ಸೇರಿ ಒಟ್ಟು ಏಳು ಜನರ ದೊಡ್ಡ ಕುಟುಂಬವದು. ಮೊದಲಿನಿಂದಲೂ ನಮ್ಮ ಮೂರೂ ಜನರನ್ನು ಕಂಡರೆ ಸಕ್ಕರೆಯಷ್ಟು ಮುದ್ದು ಸುರಿಯುವವರ ಜೊತೆ ಅಮ್ಮನನ್ನು ಬಿಟ್ಟು ಕೆಲ ದಿನಗಳು ಇರುವುದು ನನಗೆ ತೊಂದರೆಯಾಗಲಿಕ್ಕಿಲ್ಲ ಎಂದೇ ಅಮ್ಮ ನನ್ನನ್ನ ಅಲ್ಲಿಗೆ ಕಳಿಸಿದ್ದಳು. ಅದು ಸರಿಯಾದ ನಿರ್ಧಾರವೇ. ಸಾಮಾನ್ಯವಾಗಿ, ಚಿಕ್ಕ ವಯಸ್ಸಿನಿಂದಲೂ ಎಲ್ಲಿಗೆ ಹೋದರೂ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಗುಣ ಇರುವ ನನಗೆ, ಆ ಸಮಯದಲ್ಲಿ ಅಲ್ಲಿದ್ದ ಅಕ್ಕಂದಿರ, ಅಣ್ಣಂದಿರ ನಡುವೆ ಇರುವುದೇನೂ ಕಷ್ಟವಾಗಿರಲಿಲ್ಲ…

ದೊಡ್ಡಮ್ಮನದು ರೈತಾಪಿ ಕುಟುಂಬವಾದ್ದರಿಂದ ಮನೆಯ ಒಳಗೆ, ಹೊರಗೆ, ಹೊಲ, ಕೊಟ್ಟಿಗೆ, ಹಸುಗಳು ಅಂತ ವಿಪರೀತ ಕೆಲಸಗಳು. ಹಾಗಾಗಿ ಬೆಳಗ್ಗೆಯಿಂದ ಸಂಜೆಯವರೆಗೂ ಎಲ್ಲರೂ ಮನೆ ಕೆಲಸಗಳನ್ನು ಹಂಚಿಕೊಂಡು ಮಾಡುತ್ತಿದ್ದರು. ಹಾಗಾಗಿ ಕೆಲಸದಿಂದ ಯಾರಿಗೂ ವಿನಾಯಿತಿ ಇರಲಿಲ್ಲ. ಯಾರಾದರೂ ಹಾಗೆ ಕೆಲಸ ಬಿಟ್ಟು ಹರಟೆಗೆ ಕುಳಿತರೆ ದೊಡ್ಡಮ್ಮನ ಬೈಗುಳದ ಬಾಣಗಳು ರಿಮ್… ರಿಮ್.. ಅಂತ ತೂರಿ ಬರುತ್ತಿದ್ದರಿಂದ ಯಾರೂ ಆ ಬಾಣದ ಚೂಪಾದ ಮೊನೆಗೆ ಸಿಕ್ಕಿಹಾಕಿಕೊಳ್ಳುವ ಪ್ರಯತ್ನ ಮಾಡುತ್ತಿರಲಿಲ್ಲ. ಅಡುಗೆಮನೆಯಲ್ಲಿ ದೊಡ್ಡಮ್ಮನ ಹಿಂದೆ, ಕೊಟ್ಟಿಗೆಯಲ್ಲಿ ಅಣ್ಣಂದಿರ ಹಿಂದೆ, ಹೊರಗೆ ಏನೇನೋ ಕೆಲಸ ಮಾಡುತ್ತಿರುತ್ತಿದ್ದ ಅಕ್ಕಂದಿರ ಹಿಂದೆ ನಾನು ಬೆಕ್ಕಿನಮರಿಯಂತೆ ಓಡಾಡಿಕೊಂಡಿರುತ್ತಿದ್ದೆ. ಅವ್ವಿ… ರೂಪಕ್ಕಾ.. ತಂಗ್ಯಾ… ಒಬ್ಬೊಬ್ಬರಿಂದ ಒಂದೊಂದು ಹೆಸರುಗಳು ನನಗೆ. ಇಡೀ ದಿನ ನನಗೆ ಬೇಸರಿಕೆ ಕಳೆಯಲೆಂದು “ಅಪ್ಪಿ.. ಅದ್ನ ತಂದುಕೊಡ್ತೀ…” “ರೂಪಕ್ಕಾ… ಒಳಗ ಅಕ್ಕಾನ ಕಡೆಲಿಂದ ಅದ್ನ ಇಸಗೊಂಡು ಬಾರವ್ವ…” ಅಂತಂದು ಸಣ್ಣಪುಟ್ಟ ಕೆಲಸ ಹೇಳುತ್ತಿದ್ದರೆ ನನಗೆ ಖುಷಿ. ನಾನೂ ಇವರೊಟ್ಟಿಗೆ ಕೆಲಸ ಮಾಡುತ್ತಿದ್ದೀನಲ್ಲ ಅಂತ. ಹಾಗಾಗಿ ಎಲ್ಲ ಕೆಲಸಗಳಲ್ಲೂ ಪಾಲ್ಗೊಳ್ಳುವ ಸಲುವಾಗಿ, ಒಟ್ಟಿನಲ್ಲಿ ಯಾರೊಟ್ಟಿಗಾದರೂ ಒಡನಾಡುತ್ತಲೇ ಇರುತ್ತಿದ್ದೆ.

ಬೆಳಗ್ಗೆ ಅಂಬಲಿಯೋ, ಬೆಣ್ಣೆ ಹಾಕಿದ ಬಿಸಿಬಿಸಿ ರೊಟ್ಟಿಯನ್ನೋ ತಿಂದು, ಅಡುಗೆ ಮನೆ ಕೆಲಸಗಳನ್ನು ಮಾಡಿ, ಜೊತೆಗೆ ಕೊಟ್ಟಿಗೆ ದನಕರುಗಳ ಕೆಲಸವಾದ ಮೇಲೆ, ಮಧ್ಯಾಹ್ನ ಊಟಕ್ಕಿಂತ ಮೊದಲು ಎಲ್ಲರೂ ಸ್ನಾನ ಮಾಡಿಕೊಳ್ಳುತ್ತಿದ್ದರು. ಅಲ್ಲೆಲ್ಲ ಮಧ್ಯಾಹ್ನದ ಹೊತ್ತಿಗೆ ರಣರಣ ಬಿಸಿಲು. ಹಾಗಾಗಿ ಆ ಹೊತ್ತಿನಲ್ಲಿ ಕೆಲಸ ಸಾಗುತ್ತಲೇ ಇರುತ್ತಿರಲಿಲ್ಲ. ಹಾಗಾಗಿ, ಬಹುತೇಕವಾಗಿ ಇಬ್ಬರು ಅಕ್ಕಂದಿರು, ಸ್ನಾನ ಮಾಡಿದ ಎಲ್ಲರ ಬಟ್ಟೆಗಳನ್ನೂ ಹಾಗೂ, ಪಾತ್ರೆಗಳನ್ನೂ ಒಂದೊಂದು ಬುಟ್ಟಿಗಳಲ್ಲಿ ಹಾಕಿಕೊಂಡು ಕೆರೆಗೆ ಹೋಗಿ ಅವನ್ನೆಲ್ಲ ತೊಳೆದುಕೊಂಡು ಬರುತ್ತಿದ್ದರು. ಅಲ್ಲಿ ಉಳಿದವರ ಬಟ್ಟೆಗಳನ್ನು ಒಗೆದ ಮೇಲೆ ತಾವೂ ಅಲ್ಲೇ ಸ್ನಾನ ಮಾಡಿ, ಒಗೆದ ಬಟ್ಟೆಗಳನ್ನು ಕೆರೆಯ ದಂಡೆಯ ಮೇಲೆ ಹರವಿ, ಒಣಗಿಸಿಕೊಂಡು ಬರುವುದು… ಅದೊಂದು ನನ್ನ ನೆಚ್ಚಿನ ದಿನನಿತ್ಯದ ಕಾರ್ಯಕ್ರಮ. ಆಗ ಅಕ್ಕಂದಿರು ನನ್ನನ್ನೂ ಅವರೊಟ್ಟಿಗೆ ಕರೆದುಕೊಂಡು ಕೆರೆಗೆ ಹೋಗುತ್ತಿದ್ದರು. (ಆಗ ನಾನದನ್ನು ಕೆರೆ ಅಂದುಕೊಂಡಿದ್ದೆ ಅಷ್ಟೇ! ಆದರಲ್ಲಿ ನೀರಿನ ಹರಿವು ಇತ್ತು.)

ನನಗೆ ಅದೊಂದು ಕನಸಿನಂಥ ಜಾಗ. ಅಗಲವಾದ ಕೆರೆ, ದಂಡೆಯಲ್ಲಿ ಮರಳು, ಹುಲ್ಲು, ಒಂಚೂರು ದೂರದಲ್ಲಿ ಎತ್ತರೆತ್ತರವಾದ ಮರಗಳು… ಮಧ್ಯಾಹ್ನದ ನೀರವತೆಯಲ್ಲಿ ನಮ್ಮನ್ನು ಬಿಟ್ಟರೆ ಅಲ್ಲಿ ಬೇರೆ ಜನರನ್ನು ಕಂಡದ್ದು ಕಡಿಮೆಯೇ ಎನ್ನಬೇಕು. ನಮ್ಮದೇ ಗದ್ದಲ… ಒಬ್ಬ ಅಕ್ಕ ದಂಡೆಯಲ್ಲಿ ಕೂತು ಪಾತ್ರೆಗಳನ್ನು ಬೆಳಗುತ್ತಿದ್ದರೆ (ಉತ್ತರ ಕರ್ನಾಟಕದಲ್ಲಿ ಪಾತ್ರೆಗಳನ್ನು ತೊಳೆಯುವುದಕ್ಕೆ, ಬೆಳಗುವುದು ಎನ್ನುತ್ತಾರೆ), ದೊಡ್ಡಕ್ಕ, ಮಂಡಿ ಮುಳುಗುವಷ್ಟು ನೀರಿಗೆ ಹೋಗಿ, ನಮ್ಮೆಲ್ಲರ ಬಟ್ಟೆಗಳನ್ನು ಒಗೆಯುತ್ತಿದ್ದಳು.

ಸಣ್ಣಕ್ಕ, ಮನೆಯಿಂದಲೇ ಒಂದಷ್ಟು ಬೂದಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಬಂದಿರುತ್ತಿದ್ದಳು. ಅದಕ್ಕೆ ಕೆರೆಯ ದಂಡೆಯ ಮೇಲೆ ಸಿಗುತ್ತಿದ್ದ ಸವುಳ(ಮೆದುವಾದ ಮಣ್ಣಿನಂಥದ್ದು)ನ್ನು ಸೇರಿಸಿ ಪಾತ್ರೆ ತೊಳೆದರೆ, ಕಟ್ಟಿಗೆಯ ಬೆಂಕಿ ಉರಿಗೆ ಕಪ್ಪಾಗುತ್ತಿದ್ದ ಪಾತ್ರೆಗಳೆಲ್ಲ ಫಳಫಳನೇ ಹೊಳೆಯುತ್ತಿದ್ದವು.. ಕೆಲವೊಮ್ಮೆ, ದಂಡೆಯಲ್ಲಿ ಹಾಗೆ ಪಾತ್ರೆ ತೊಳೆಯುವಾಗ, ನೀರಿನ ಸೆಳವಿಗೆ ಸಿಕ್ಕು ಒಂದೊಂದು ಪಾತ್ರೆ ತೇಲಿಕೊಂಡು ಹರಿವಿನೊಟ್ಟಿಗೆ ಹೋಗುವಾಗ “ಹಿಡಿಲೇ… ನನ್‌ ಭಾಂಡೀ ಹೋತು…” ಎಂದು ಸಣ್ಣಕ್ಕ ಕೂಗುತ್ತಿದ್ದಳು… ಆಗ ಅದಾಗಲೇ, ನೀರಿನಲ್ಲಿ ನಿಂತು ಬಟ್ಟೆ ಒಗೆಯುವುದರಲ್ಲಿ ತಲ್ಲೀನಳಾಗಿರುತ್ತಿದ್ದ ದೊಡ್ಡಕ್ಕ “ಐ ನಿನ್‌ ಬಾಯಾಗರ… ನೋಡಬೇಕೋ… ಬ್ಯಾಡೋ…” ಎಂದು ತಂಗಿಯನ್ನು ಬೈಯುತ್ತಲೇ, ಕೈಲಿದ್ದ ಬಟ್ಟೆಯನ್ನು, ಹಿಡಿದುಕೊಂಡು, ನೀರಿನಲ್ಲಿ ಆದಷ್ಟೂ ಜೋರಾಗಿ ನಡೆಯುತ್ತಾ ಹೋಗಿ ಪಾತ್ರೆಯನ್ನು ಹಿಡಿದುಕೊಂಡು ಬಂದು ಮತ್ತೊಮ್ಮೆ ಸಣ್ಣಕ್ಕನಿಗೆ ಬಯ್ಯುತ್ತಿದ್ದಳು. ಆಗ ನಾನು ನಕ್ಕೆನಂದರೆ “ನೋಡ್‌ ಯವ್ವಾ ಹೆಂಗ್‌ ನಗ್ತಾಳಿಕಿ… ಅಕ್ಕಾಗ್‌ ಬೈದ್ರ ನಗ್ತಾರನೂ…” ಎಂದು ಹುಸಿ ಕೋಪ ಮಾಡಿಕೊಂಡರೆ ಅವಳ ದುಂಡನೆಯ ಮುಖವೆಲ್ಲ ಮುದ್ದುಗರೆಯುವಂತೆ ಕಾಣುತ್ತಿತ್ತು. ಹಾಗೆ ಪಾತ್ರೆ ಕಾಪಾಡಿಕೊಳ್ಳಲು ಹೋದಾಗ, ಸಣ್ಣ ಪುಟ್ಟ ಬಟ್ಟೆಗಳು ತೇಲಿಹೋಗಿ, ವಾಪಾಸ್ಸು ಮನೆಗೆ ಬಂದಮೇಲೆ ದೊಡ್ಡಮ್ಮ ಇಬ್ಬರಿಗೂ ಬೈದರೆ ಆಗ ನನಗೆ ನಿಜಕ್ಕೂ ಬೇಸರವಾಗುತ್ತಿತ್ತು. ಏಕೆಂದರೆ ಆ ಅಕ್ಕಂದಿರಿಬ್ಬರೂ ಎದೆಯಲ್ಲಿ ಇವತ್ತಿಗೂ ಪ್ರೀತಿ ಬಿಟ್ಟರೆ ಬೇರೇನೂ ಇಟ್ಟುಕೊಳ್ಳಲಾಗದ ಮುಗ್ಧ ಮನುಷ್ಯರು. ತಮ್ಮ ಪಾಲಿಗೆ ಬಂದ ದುರ್ವಿಧಿಯನ್ನೂ ಹಳಿಯದೇ “ನಮ್ದು ಇಷ್ಟ ಬಿಡು ತಂಗೀ…” ಎಂದು ಇದ್ದದ್ದನ್ನು ಇದ್ದಂತೆ ಅಪ್ಪಿಕೊಳ್ಳುವ ಅಪ್ಪಟ ಮನುಷ್ಯರು. ಹಾಗಾಗಿ ಅವರೊಟ್ಟಿಗೆ ಓಡಾಡುವುದೆಂದರೆ ನನಗೆ ಇನ್ನಿಲ್ಲದ ಖುಷಿ.

ಅಣ್ಣಂದಿರೇನೂ ಕಡಿಮೆಯಿಲ್ಲ… ಊಟಕ್ಕೆ ಕುಳಿತಾಗ “ಏ ತಂಗೀಗೆ ಇನ್ನಷ್ಟು ಬೆಣ್ಣಿ ಹಾಕು…” ಅನ್ನುವುದು. “ತಂಗೀ… ಅಂಬಲೀಗೆ ಮಜ್ಜಗಿ ಕೂಡ ಹನಿ ಹಾಲು ಹಾಕ್ಕೋ.. ಸವಿ (ರುಚಿ) ಅನ್ನಸ್ತೇತಿ” ಎಂದು ಪ್ರೀತಿ ಮಾಡುವರು. ಪೇಟೆಗೆ ಹಾಲು ಹಾಕೋದಕ್ಕೆ ಹೋಗುವಾಗ, ಪ್ರತಿದಿನವೂ ನನ್ನನ್ನೂ ಜೊತೆಗೆ ಸೈಕಲ್ಲಿನಲ್ಲೋ ಅಥವಾ ನಡೆದುಕೊಂಡೋ ಕರೆದುಕೊಂಡು ಹೋಗುತ್ತಿದ್ದರು. ಹಾಗಾಗಿ ಆ ಊರಿನಲ್ಲಿ ಕೆಲವೊಂದಷ್ಟು ಜನರಿಗೂ ನಾನು ಪರಿಚಯವಾಗಿಬ್ಬಿಟ್ಟಿದ್ದೆ. ಹಾಗೆ ಹೋಗಿ ಬರುವಾಗ ಸುನ್ನಾಳಪ್ಪನ, ಆ ಊರನ್ನು ಕಾಯುತ್ತಾನೆಂಬ ಪ್ರತೀತಿಯಿರುವ ಹನುಮಂತನ ಗುಡಿಗೆ ಹೋಗಿ, ಅಂಗಾರ ಹಚ್ಚಿಸಿಕೊಂಡೇ ಬರುತ್ತಿದ್ದರು. ಯಾವತ್ತಾದರೂ, ಅಣ್ಣಂದಿರು ತಾವು ಬೇರೆ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡು ಅವತ್ತು ಹೊಡುವಾಗ ನನ್ನನ್ನು ಜೊತೆಗೆ ಕರೆಯಲಿಲ್ಲವೆಂದರೆ, ಒಳಗಿನಿಂದ ದೊಡ್ಡಮ್ಮ, “ಏ ತಂಗೀನೂ ಕರ್ಕೊಂಡ್‌ ಹೋಗಲಾ ಮಾರ್ಯಾ (ಅಣ್ಣನ ಮಾರುತಿ ಹೆಸರು ದೊಡ್ಡಮ್ಮನ ಬಾಯಿಯಲ್ಲಿ ಮಾರೋತಿ.. ಮಾರ್ಯಾ ಆಗಿಯ್ತು.. ಮಾರ್ಯಾ ಅಂತ ಬಳಸುತ್ತಿದ್ದದ್ದು ಬೈಗುಳದ ಹಾಗೆ)” ಅಂತಲೂ ಜೋರು ಬಿಸಿಲಿದ್ದ ದಿನ ಕರೆದರೆ “ಏ ಬಿಸಲು ಜಗ್ಗೈತಿ… ಇಂಥಾ ಬಿಸಲಾಗ ಅಕಿನ್ನ ಕರ್ಕೊಂಡೋಗಿ ತಂಗೀ ಮಾರೀನ ಕರ್ರಗ ಮಾಡಬೇಕಂತೀನ” ಅಂತ ಅನ್ನುವವಳೂ ಅವಳೇನೇ. ಹಾಗಾಗಿ ಇಡೀ ಮನೆಯೆ ಪ್ರೀತಿಯ ಪ್ಯಾಕೇಜ್‌ ಆಗಿದ್ದರಿಂದ ನಾನು ಅಮ್ಮನನ್ನು ಮಿಸ್‌ ಮಾಡಿಕೊಳ್ಳುತ್ತಿರಲಿಲ್ಲ. ಹಾಗಾಗಿ ಇಂದಿಗೂ ನಮ್ಮ ಮೂರೂ ಜನರಿಗೂ ನೆಚ್ಚಿನ ಬಳಗವದು.

ಮೊದಲೆ ಅದು ರಣರಣಬಿಸಿಲಿನ ಊರಾದ್ದರಿಂದ ಸೆಖೆ ಜಾಸ್ತಿ ಇದ್ದ ದಿನವಂತೂ ಯಾರೂ ಮನೆಯಲ್ಲಿ ನಿದ್ರೆಮಾಡಲು ಸಾಧ್ಯವೇ ಇರುತ್ತಿರಲಿಲ್ಲ. ಹಾಗಾಗಿ, ಏಣಿ ಹತ್ತಿ ಎಲ್ಲರೂ ಆಗಸದಲ್ಲಿರುವ ಚುಕ್ಕಿಗಳನ್ನು ಎಣಿಸುತ್ತಾ, ಮೇಲೊಂದು ಕೌದಿ, ಕೆಳಗೊಂದು ಕೌದಿ ಹಾಕಿಕೊಂಡು ಅಣ್ಣಂದಿರು ಮತ್ತು ಅಕ್ಕಂದಿರೊಟ್ಟಿಗೆ ತಾರಸಿಯಲ್ಲಿ ಮಲಗುತ್ತಿದ್ದೆ. ಮೊದಲೇ ಎತ್ತರದ ಬಗ್ಗೆ ಭಯವಿರುವ ನನಗೆ, ಏಣಿ ಹತ್ತುವುದು ಸಾಕುಸಾಕು ಎನಿಸುತ್ತಾದರೂ, ಅಣ್ಣಂದಿರ ಕಾಳಜಿಯಲ್ಲಿ ಒಂದಿಷ್ಟು ಧೈರ್ಯ ತಂದುಕೊಂಡು ಹತ್ತಿ ಹೋಗುತ್ತಿದ್ದೆ. ಮೇಲೆ ಒಂದು ಕೌದಿ ಎಳೆದುಕೊಂಡರೆ ಸಾಕು… ಬೆಳಗ್ಗೆ ಬೀದಿಯ ಕೋಳಿಗಳೆಲ್ಲ ಕೊಕ್ಕೊಕ್ಕೋ… ಕೊಕ್‌ ಕೊಕ್‌ ಎಂದು ಅರಚಿಕೊಳ್ಳುವಾಗಲೇ ಎಚ್ಚರ!

ಆ ಊರು ಬಹುತೇಕ ಆಗ ಹೇಗಿತ್ತೋ ಈಗಲೂ ಹಾಗೆಯೇ ಇದೆ ಅನ್ನಿಸುತ್ತೆ. ಒಂದಷ್ಟು ಮನೆಗಳು, ಮನೆಯ ಮಕ್ಕಳು ಬದಲಾಗಿರಬಹುದಷ್ಟೇ. ಅಭಿವೃದ್ಧಿ ಅನ್ನುವುದು ಆ ಊರನ್ನು ಇಂದಿಗೂ ಕಣ್ತೆರೆದು ನೋಡುತ್ತಿಲ್ಲ. ಹಿಂದೆ ಅಲ್ಲಿಯ ಗಲ್ಲಿಗಲ್ಲಿಯೆಲ್ಲ ನನ್ನ ಪುಟ್ಟ ಕಣ್ಣಿಗೆ ದೊಡ್ಡದಾಗಿ ಕಾಣುತ್ತಿದ್ದವು, ಈಗ “ಯಾಕೋ ರಸ್ತೆಗಳು ಸಣ್ಣದಾಗಿವೆಯಲ್ಲ” ಅಂದುಕೊಳ್ಳುವಷ್ಟು ಸಣ್ಣದಾಗಿವೆ. ಆದರೆ ಅಲ್ಲಿನ ಜನರ ಎದೆಯಲ್ಲಿ ಪ್ರೀತಿಯ ಒರತೆಗೇನೂ ಆ ಥರದ ಕುಂದು ಕಂಡಿಲ್ಲ. ಅವರೆಲ್ಲ ಆಗ ಹೇಗಿದ್ದರೋ… ಈಗಲೂ ಹಾಗೇ ಇದ್ದಾರೆ. ಜಗತ್ತೆಂದರೆ, ಹಗಲೂ ರಾತ್ರಿ ಎಲ್‌.ಈ.ಡಿ. ಬಲ್ಬುಗಳನ್ನು ಉರಿಸುತ್ತ, ಆಫೀಸಿಗೆ ಹೋಗುತ್ತ ಬರುತ್ತ ಇರುವವರ ಸಿಟಿಯಷ್ಟೇ ಇಲ್ಲ… ಎಲ್ಲೆಲ್ಲಿಂದಲೋ ಆ ಸಿಟಿಗೆ ಬಂದು, ದುಡಿಯುತ್ತಿರುವ ಪ್ರತಿಯೊಬ್ಬರ ಜಗತ್ತು ಬೇರೆಬೇರೆಯೇ ಇದೆ. ಹೇಗೆ ಅನುಕೂಲಸ್ಥ ಬೇರೆ ದೇಶಗಳ ವಯ್ಯಾರಕ್ಕೆ ಮರುಳಾಗಿ “ಏ… ಇಲ್ಲೇ ಚಂದ… ಇಂಡಿಯಾಗ್ಯಾರು ಬರ್ತಾರೆ… ನಾವ್‌ ವಾಪಸ್‌ ಇಂಡ್ಯಾಗೆ ಬರೋ ಪ್ಲಾನಲ್ಲಿ ಇಲ್ಲ… ಇಲ್ಲೇ ಸೆಟಲ್‌ ಆಗ್ತೀವಪ್ಪ” ಅನ್ನೋ ಜನರೂ, ಹಳ್ಳಿಯ ಬದುಕನ್ನ ತೀರಾ ಬಿಟ್ಟುಕೊಟ್ಟು ಸಿಟಿಗಳಲ್ಲಿ ಬಂದು ವಾಸಿಸುವವರೂ ಒಂದೆನೆ. ಜಾಸ್ತಿ ವ್ಯತ್ಯಾಸವೇನಿಲ್ಲ.