ಡಾ. ಯು.ಆರ್.ಅನಂತಮೂರ್ತಿಯವರ ಬಾಲ್ಯಕಾಲದ ನೆನಪುಗಳ ಸರಣಿ ಈ ಸುರಿಮಳೆಯ ನಡುವೆ ಕೆಂಡಸಂಪಿಗೆಯಲ್ಲಿ ಇಂದಿನಿಂದ ಶುರು. ಇನ್ನು ಮುಂದೆ ಪ್ರತಿ ಸೋಮವಾರ ಈ ಜಾಗದಲ್ಲಿ ಅನಂತಮೂರ್ತಿಯವರ ನೆನಪುಗಳ ಮೆರವಣಿಗೆ. ‘ಮತ್ತೆ ಮಳೆ ಹುಯ್ಯುತಿದೆ ಎಲ್ಲ ನೆನಪಾಗುತಿದೆ…’ಎಂದು ಬರೆದ ಅವರ ಬಾಲ್ಯಲೋಕದ ಪರಿಮಳ ಇನ್ನು ಪ್ರತಿವಾರ ನಿಮ್ಮ ಮುಂದೆ. ಅನಂತಮೂರ್ತಿಯವರ ಹಿಂದೆ ಬೆಂಬಿಡದೆ ನಡೆದು, ಅವರನ್ನು ದಿನಗಟ್ಟಲೆ ಮಾತನಾಡಿಸಿ ಆ ಮಾತುಗಳನ್ನು ಅಕ್ಷರಕ್ಕಿಳಿಸಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್. ಜೊತೆಗಿರುವ ಛಾಯಾಚಿತ್ರಗಳೂ ಅವರದೇ.

ದಾಳಿಂಬೆ ರಾಕ್ಷಸನ ಕಥೆ

ನನ್ನ ತುಂಬಾ ಹಿಂದಿನ ನೆನಪು ಅಂದರೆ ನಾವು ಕೆರೆಕೊಪ್ಪ ಎಂಬ ಊರಿನಲ್ಲಿ ಇದ್ದದ್ದು. ತೀರ್ಥಹಳ್ಳಿಯಿಂದ ಆಗುಂಬೆ ಕೆಡೆಗೆ 23-24 ಕಿಲೋಮೀಟರ್ ಹೋದರೆ ತೂದೂರು ಸಿಗುತ್ತದೆ. ಆಗೆಲ್ಲಾ ಟಾರ್ ರಸ್ತೆ ಇರಲಿಲ್ಲ. ಆ ಕಾಲದಲ್ಲಿ ಜಲ್ಲಿ ಕಲ್ಲಿನ ರಸ್ತೆಯೇ ದೊಡ್ಡ ರಸ್ತೆ. ಈ ರಸ್ತೆಯಲ್ಲಿ ತೂದೂರಿನವರೆಗೂ ಬಂದು ಅಲ್ಲಿಂದ ಕಾಲು ಹಾದಿಯಲ್ಲಿ ಕಾಡಿನ ಒಳಗೆ ಹೋದರೆ ಕಾಡಿನ ಮಧ್ಯೆ ಕೆರೆಕೊಪ್ಪ ಅಂತ ಒಂದು ಮನೆ ಇತ್ತು. ಆ ಮನೆಗೆ ಮತ್ತೆ ನಾನು ಹೋಗಿ ನೋಡಿದ್ದೇನೆ. ಈಗ ಕಾಡೂ ಇಲ್ಲ. ಆ ಮನೆಯೂ ಹಾಗೆ ಇಲ್ಲ.

ಈ ನಮ್ಮ ಮನೆಯ ಎದುರು ಒಂದು ದಾಳಿಂಬೆ ಗಿಡ ಇತ್ತು. ನಮ್ಮ ಮನೆಗೆ ಆಗೀಗ ಬರುತ್ತಿದ್ದವರೊಬ್ಬರು ದಾಳಿಂಬೆ ರಾಕ್ಷಸನ ಕಥೆ ಹೇಳುತ್ತಿದ್ದರು. ದಾಳಿಂಬೆ ರಾಕ್ಷಸ ಅಂತ ಒಬ್ಬ ಇದ್ದನಂತೆ. ಅವನೊಂದು ದಾಳಿಂಬೆ ಗಿಡದ ಬುಡದಲ್ಲಿ ಕಾವಲು ಕುಳಿತಿರುತ್ತಿದ್ದನಂತೆ. ಈ ದಾಳಿಂಬೆ ಗಿಡದಲ್ಲಿ ಒಂದೇ ಒಂದು ಹಣ್ಣು. ಗರ್ಭಿಣಿ ರಾಜಕುಮಾರಿಯೊಬ್ಬಳಿಗೆ ಈ ಮರದ ಹಣ್ಣು ತಿನ್ನಬೇಕು ಎಂಬ ಆಸೆಯಾಗುತ್ತದೆ. ಗರ್ಭಿಣಿಯ ಬಯಕೆಯನ್ನು ತೀರಿಸಲು ಏಳು ಸಮುದ್ರ ದಾಟಿ ಒಂದು ಕಾಡಿಗೆ ಹೋದರೆ ಅಲ್ಲೊಂದು ದಾಳಿಂಬೆ ಗಿಡವಿದೆ. ಅದರಲ್ಲೊಂದೇ ಒಂದು ಹಣ್ಣಿದೆ ಅದನ್ನು ತರಬೇಕು ಎಂದು ರಾಜಕುಮಾರನಿಗೆ ಗೊತ್ತಾಗುತ್ತೆ. ದಾಳಿಂಬೆ ಹಣ್ಣನ್ನು ಕಿತ್ತು ತರುವುದಕ್ಕಾಗಿ ಆ ರಾಜಕುಮಾರ ರಾಕ್ಷಸನಿಗೆ ಏನೋ ಮಾಡಿ ನಿದ್ರೆ ಬರಿಸುತ್ತಾನೆ. ರಾಕ್ಷಸ ನಿದ್ದೆ ಹೋದಾಗ ದಾಳಿಂಬೆ ಹಣ್ಣನ್ನು ಕಿತ್ತು ಏಳು ಸಮುದ್ರ ದಾಟಿ ಬಂದು ರಾಜಕುಮಾರಿ ಬಯಕೆ ಪೂರೈಸುತ್ತಾನೆ.

ಈ ಕಥೆಯನ್ನು ಹೇಳುವವರು ದಾಳಿಂಬೆ ಒಯ್ಯಲು ಬರುವ ರಾಜಕುಮಾರನಿಗೆ ಅನೇಕ ಅಡಚಣೆಗಳನ್ನು ಸೃಷ್ಟಿಸುತ್ತಿದ್ದರು. ನನಗೀಗ ಆ ಅಡಚಣೆಗಳೆಲ್ಲಾ ಮರೆತು ಹೋಗಿವೆ. ಪ್ರತೀ ಸಾರಿ ಕಥೆ ಕೇಳುವಾಗಲೂ ಯಾವುದಾದರೊಂದು ಹೊಸ ಅಡಚಣೆ ಸೇರಿಕೊಳ್ಳುತ್ತಿತ್ತು. ನನ್ನ ಕುತೂಹಲ ಇದ್ದಿದ್ದು ಅದರ ಮೇಲೆ. ದಾಳಿಂಬೆ ಹಣ್ಣು ಸಿಗದಂತೆ ಅವನಿಗೆ ಯಾವ ಅಡ್ಡಿ ಎದುರಾಗುತ್ತೆ ಎಂಬುದನ್ನು ತಿಳಿಯಲು ನಾನು ಕಾಯುತ್ತಿದ್ದೆ. ದಾಳಿಂಬೆ ಹಣ್ಣು ರಾಜಕುಮಾರನಿಗೆ ಸಿಗಬೇಕು, ಆದರೆ ಅದು ಸುಲಭವಾಗಿ ಸಿಗಬಾರದು!

ನಾವು ಕತೆಗಾರರಾಗುವಾಗ ಮೊದಲು ಕಲಿಯುವುದೇ ಇದನ್ನು- ದಾಳಿಂಬೆ ಹಣ್ಣು ಸಿಗಬೇಕು, ಆದರೆ ಅದು ಸುಲಭವಾಗಿ ಸಿಗಬಾರದು- ತುಂಬಾ ಜನ ಕತೆಗಳನ್ನು ಬೆಳೆಸುವುದೇ ಹೀಗೆ. ನನಗೆ ಈ ದಾಳಿಂಬೆ ರಾಕ್ಷಸನ ಕಥೆ ಕೇಳಿದ ನಂತರ ನಮ್ಮ ದಾಳಿಂಬೆ ಗಿಡವೇ ಆ ರಾಕ್ಷಸ ಕಾವಲು ಕುಳಿತಿರುವ ಗಿಡ ಅನ್ನಿಸುತ್ತಿತ್ತು. ಅಂದರೆ ಪುರಾಣಕ್ಕೂ ವಾಸ್ತವಕ್ಕೂ ನಡುವಿನ ವ್ಯತ್ಯಾಸ ಬಾಲ್ಯದಲ್ಲಿ ಕಾಣೆಯಾಗಿಬಿಟ್ಟಿರುತ್ತೆ. ಬಾಲ್ಯದಲ್ಲಿ ಕಂಡಿದ್ದೆಲ್ಲಾ ಪುರಾಣದಲ್ಲಿ ಕೇಳಿದ ಹಾಗೆಯೇ ಇರುತ್ತೆ. ಹಾಗೇನೇ ಪುರಾಣದಲ್ಲಿ ಕೇಳಿದ್ದೆಲ್ಲಾ ನಿಜವಾಗಿ ನಡೆದ ಹಾಗೆ ಇರುತ್ತೆ. ಇಲ್ಲಿ ವಾಸ್ತವ ಮತ್ತು ಪುರಾಣದ ಅಂತರವೇ ಇರುವುದಿಲ್ಲ. ಬಹಳ ಒಳ್ಳೆಯ ಸಾಹಿತ್ಯ ಕೃತಿಯನ್ನು ಓದಿದಾಗಲೂ ನಾವು ಈ ಅಂತರವನ್ನು ಮೀರಿಬಿಟ್ಟಿರುತ್ತೇವೆ. ಇದಕ್ಕೊಂದು ಹೊಸ ಸಾಹಿತ್ಯ ಸಿದ್ಧಾಂತವನ್ನೇ ಮಾಡಿಬಿಡಬಹುದು.

ಎಲ್ಲಾ ಸತ್ಯಗಳನ್ನು ನಾವು ನೋಡುವುದು ಸಾಹಿತ್ಯದ ಕಿಟಕಿಯ ಮುಖಾಂತರ. ಈ ಕಿಟಕಿಯಲ್ಲಿ ನೋಡುವ ಕ್ರಿಯೆಯಲ್ಲಿ ಕಿಟಕಿಯ ಹೊರಗಿನದ್ದು ಕಾಣಿಸುವಂತೆಯೇ ಆ ಕಿಟಕಿಯ ಅಂಚೂ ಕಾಣಿಸುತ್ತದೆ. ಒಳ್ಳೆಯ ಸಾಹಿತ್ಯ ಕೃತಿ ಅನ್ನೋದು ಕಿಟಕಿಯ ಹೊರಗಿನದ್ದನ್ನು ತೋರುತ್ತಲೇ ಕಿಟಕಿಯ ಅಸ್ತಿತ್ವನ್ನೂ ತೋರಿಸುವಂಥದ್ದು. ಬಹಳ ಒಳ್ಳೆಯ ಸಿನಿಮಾದ ಸಂದರ್ಭದಲ್ಲೂ ಇದು ನಿಜ.

ನನ್ನ ಬಾಲ್ಯದ ನೆನಪುಗಳಲ್ಲಿ ಅತ್ಯಂತ ಹಳೆಯದ್ದು ಅಂದರೆ ಈ ದಾಳಿಂಬೆ ಗಿಡ.

ಅಬ್ಬಕ್ಕನ್ನ ಗುಬ್ಬಕ್ಕ ಕಚ್ಕೊಂಡೋಯ್ತು

ನಮ್ಮ ಮನೆಗೆ ಅಬ್ಬಕ್ಕ ಎಂಬ ಹೆಂಗಸು ಕೆಲಸಕ್ಕೆ ಬರುತ್ತಿದ್ದಳು. ಅವಳನ್ನು ಕಂಡರೆ ನನಗೆ ಬಹಳ ಇಷ್ಟ. ಇದಕ್ಕೆ ಇದ್ದ ಕಾರಣ ಆಕೆಯೂ ಕಥೆಗಳನ್ನು ಹೇಳುತ್ತಿದ್ದಳು. ಆಕೆ ನಮ್ಮ ಮನೆಗೆ ಬಂದು ಮುಸುರೆ ತಿಕ್ಕಿ ನನ್ನ ಅಮ್ಮನ ಹತ್ತಿರ ಸುಖ-ದುಃಖ ಎಲ್ಲಾ ಮಾತನಾಡಿ ನಮ್ಮಲ್ಲಿ ಉಳಿದಿದ್ದ ಪದಾರ್ಥವನ್ನು ತಗೊಂಡು ಹೋಗುತ್ತಿದ್ದಳು. ಕೆಲವೊಮ್ಮೆ ದಾರಿಯಲ್ಲಿ ಬರುವಾಗ ಸಿಕ್ಕ ದಂಟು, ಸೊಪ್ಪು ಇಲ್ಲವೇ ನಮಗೆ ಸ್ನಾನಕ್ಕೆ ಬೇಕಾದ ಮತ್ತಿ ಸೊಪ್ಪನ್ನೋ ಆಕೆಯೇ ನಮ್ಮ ಮನೆಗೆ ತಂದುಕೊಡುತ್ತಿದ್ದಳು. ಇಷ್ಟು ಸಾಮಾನ್ಯವಾದ ಅಬ್ಬಕ್ಕನಿಗೆ ಎರಡು ಮಕ್ಕಳು. ಎರಡೂ ಕಂಕುಳಲ್ಲಿ ಎರಡು ಮಕ್ಕಳನ್ನು ಎತ್ತಿಕೊಂಡು ಬರುತ್ತಿದ್ದಳು.

ಈ ಅಬ್ಬಕ್ಕ ನನ್ನ ಮಟ್ಟಿಗೆ ಪುರಾಣ ಸದೃಶ ವ್ಯಕ್ತಿ. ಒಂದೊಂದು ರಾತ್ರಿ ಅವಳಿಗೆ ಮೈಮೇಲೆ ಬರುತ್ತಿತ್ತು. ಅಬ್ಬಕ್ಕನಿಗೆ ಮೈಮೇಲೆ ಬರುವ ರಾತ್ರಿಗಳಲ್ಲಿ ಆ ಹಳ್ಳಿಯ ಸುತ್ತಮುತ್ತಲಿನ ಎಲ್ಲರೂ ಹಣ್ಣು ಕಾಯಿ ತೆಗೆದುಕೊಂದು ನಿಮಿತ್ತ ಕೇಳುವುದಕ್ಕೆಂದು ಬರುತ್ತಿದ್ದರು. ಅಬ್ಬಕ್ಕ ತಲೆಕೂದಲೆಲ್ಲಾ ಕೆದರಿಕೊಂಡು ಇಷ್ಟು ಕುಂಕುಮ-ಅರಿಶಿನ ಬಳಿದುಕೊಂಡಿರುತ್ತಿದ್ದಳು. ಅದು ನಿತ್ಯ ನೋಡುವ ಅಬ್ಬಕ್ಕನೇ ಅಲ್ಲ. ಕಣ್ಣೆಲ್ಲೋ ನೆಟ್ಟಿರೋದು. ಏನಾದರೂ ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರಗಳನ್ನು ಹೇಳುತ್ತಿದ್ದಳು. ಬಾಯಲ್ಲಿ ವಿಚಿತ್ರ ಸದ್ದು ಮಾಡಿಕೊಂಡು ಎರಡು ಕೈಯಲ್ಲೂ ಅಡಿಕೆ ಸಿಂಗಾರವನ್ನು ಹಿಡಿದುಕೊಂಡು ಅದನ್ನು ಆಡಿಸುತ್ತಾ ಭವಿಷ್ಯವನ್ನು ಹೇಳುತ್ತಿದ್ದಳು. ನಮ್ಮ ಅಜ್ಜಯ್ಯ ಅವಳನ್ನು ನೋಡಲು ಹೋಗುವಾಗ ಒಂದೊಂದು ಸಾರಿ ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದರು. ಇಂಥ ಹೊತ್ತಲ್ಲಿ ನಮ್ಮ ಅಜ್ಜಯ್ಯನಿಗೂ ಅವಳು ಅಬ್ಬಕ್ಕ ಅಲ್ಲ. ಅವಳು ದೇವಿ. ಮೈಮೇಲಿನದ್ದು ಇಳಿದುಹೋದ ನಂತರ ಆಕೆ ಮುಂಚಿನ ಅಬ್ಬಕ್ಕ. ಈ ನಿತ್ಯದ ಅಬ್ಬಕ್ಕ ದೇವಿಯೂ ಆಗುತ್ತಾಳಲ್ಲಾ ಅನ್ನೋದು ನನಗೊಂದು ವಿಚಿತ್ರದಂತೆ ಕಾಣಿಸುತ್ತಿತ್ತು. ಅವಳು ನಮ್ಮ ಮನೆಗೆ ಬಂದಾಗ ಸತ್ಯದ ಅಬ್ಬಕ್ಕ ಆಗದೆ ನಿತ್ಯದ ಅಬ್ಬಕ್ಕನೇ ಆಗಿರುತ್ತಿದ್ದಳು.

ಕನ್ನಡ ಭಾಷೆಯಲ್ಲಿ ನಾನು ಆಡಿದ ಮೊದಲನೇ ನುಡಿ ಯಾವುದು ಅನ್ನೋದನ್ನು ನನ್ನ ಅಮ್ಮ ನನ್ನ ಸಂಬಂಧದವರು ನೆನಪು ಮಾಡುತ್ತಾ ಇದ್ದುದರಿಂದ ನನಗೂ ನೆನಪಿದೆ. ನಾವು ನೆನಪು ಎಂದು ಹೇಳುವಾಗ ಅದು ವ್ಯಕ್ತಿಗತವಾದುದಲ್ಲ. ನಮ್ಮ ನೆನಪುಗಳೂ ಕೂಡಾ ನಮ್ಮ ಮೇಲೆ ಬಹಳ ಪ್ರೀತಿ ಉಳ್ಳವರು ಆಗಾಗ ನೆನಪು ಮಾಡುತ್ತಾ ಇದ್ದುದರಿಂದ ಅವು ನಮ್ಮ ನೆನಪಿನಲ್ಲೂ ಉಳಿದಿರುತ್ತವೆ. ವೇದಗಳೂ ಉಳಿದದ್ದು ಹೀಗೆಯೇ. ಅದರ ಮೇಲೆ ಪ್ರೀತಿ ಉಳ್ಳವರು ನೆನಪಿಸುತ್ತಾ ಹೋದರು. ಇದು ಬೈಬಲ್ ಬಗ್ಗೆಯೂ ನಿಜ. ಕುರಾನ್ ಬಗ್ಗೆಯೂ ನಿಜ. ಎಲ್ಲವೂ ಕೂಡ ಹೀಗೆ ಸತತವಾಗಿ ನೆನಪು ಮಾಡಿಕೊಳ್ಳುವುದರಿಂದ ಪೂರ್ವದ ನೆನಪಾಗಿ ಉಳಿದಿವೆ.

ನನಗೆ ಬಹಳ ಕ್ಷುಲ್ಲಕವಾದ ವಾಕ್ಯದ ಸಾತತ್ಯ ಇದೆ. ಒಂದು ಸಾರಿ ಅಬ್ಬಕ್ಕ ನಮ್ಮ ಮನೆಗೆ ಬಂದಾಗ ನಾನು ಅವಳ ಬಗ್ಗೆ ತಮಾಷೆ ಮಾತಾಡಿದೆನಂತೆ. ಅದೇನಂದರೆ ‘ಅಬ್ಬಕ್ಕನ್ನ ಗುಬ್ಬಕ್ಕ ಕಚ್ಕೊಂಡೋಯ್ತು’. ಈಗ ನೋಡಿದರೆ ಅದೇನು ಬಹಳ ದೊಡ್ಡ ವಾಕ್ಯವಲ್ಲ. ಆದರೆ ನಮ್ಮ ಅಮ್ಮ ‘ನೋಡು, ನಮ್ಮ ಅನಂತು ‘ಅಬ್ಬಕ್ಕನ್ನ ಗುಬ್ಬಕ್ಕ ಕಚ್ಕೊಂಡೋಯ್ತು’ ಅಂದ.’. ಇಲ್ಲೊಂದು ಪ್ರಾಸವಿದೆ. ಅಬ್ಬಕ್ಕ-ಗುಬ್ಬಕ್ಕ. ಅದನ್ನು ಹೇಳುವಾಗ ಅಬ್ಬಕ್ಕನ್ನ ಗುಬ್ಬಕ್ಕ ಕಚ್ಚೊಂಡೋ……ಯ್ತು. ಹೋ….ಯ್ತು ಎಂದು ದೀರ್ಘವನ್ನು ಮತ್ತಷ್ಟು ದೀರ್ಘವಾಗಿಸುವುದರಲ್ಲಿ ಹೋಗುವ ಒಂದು ಕ್ರಿಯೆಯೂ ಇದೆ.

ಇದನ್ನು ಅಮ್ಮ ಅನಂತು ಹೀಗಂದ ಎಂದು ಅಜ್ಜನಿಗೆ ಹೇಳುತ್ತಿದ್ದಳು. ಅವರ ಅಕ್ಕನಿಗೆ ಹೇಳುತ್ತಿದ್ದಳು. ಅವರ ಅಮ್ಮನಿಗೂ ಹೇಳುತ್ತಿದ್ದಳು. ಇದನ್ನೆಲ್ಲಾ ನಾನೂ ಕೇಳಿಸಿಕೊಳ್ಳುತ್ತಿದ್ದೆ. ಹಾಗೇನೇ ಮೊನ್ನೆ ಮೊನ್ನೆ ಅವಳು ಸಾಯುವ ತನಕವೂ ಅನಂತು ಚಿಕ್ಕವನಿರುವಾಗ ಹೀಗಂದಿದ್ದ ಎಂದು ಹೇಳುತ್ತಲೇ ಇದ್ದಳು. ನಾನು ಬರೆದಿದ್ದನ್ನೇನೂ ನನ್ನಮ್ಮ ಓದಿರಲಿಲ್ಲ. ಆದರೆ ನನ್ನೆಲ್ಲಾ ಸಾಹಿತ್ಯ ಕೃತಿಗಳ ಉಗಮವನ್ನು ‘ಅಬ್ಬಕ್ಕನ್ನ ಗುಬ್ಬಕ್ಕ ಕಚ್ಕೊಂಡೋಯ್ತು’ವಿನಲ್ಲಿ ಆಕೆಗೆ ಕಾಣಿಸುತ್ತಿತ್ತು. ಆಮೇಲೆ ಇನ್ನೊಂದೇನು ವಿಚಿತ್ರ ಅಂದರೆ ಅಬ್ಬಕ್ಕ ಬಹಳ ದಪ್ಪವಾಗಿದ್ದ ಹೆಂಗಸು. ಎರಡು ಮಕ್ಕಳನ್ನೂ ಹೆತ್ತಿದ್ದಳು. ಗುಬ್ಬಕ್ಕ ಬಲು ಸಣ್ಣದು. ಇಂಥಾ ಅಬ್ಬಕ್ಕನನ್ನು ಒಂದು ಗುಬ್ಬಕ್ಕ ಕಚ್ಚಿಕೊಂಡು ಹೋಗೋದೇ?

ಇದು ನನ್ನ ನೆನಪಿನಲ್ಲಿ ಉಳಿದಿರುವ ಸಂಗತಿ. ಇದೆಲ್ಲಾ ಯಾರಿಗೂ ಮಿಸ್ಟರಿ ಅನ್ನಿಸಬೇಕಾಗಿಲ್ಲ. ಆದರೆ ನನಗೆ ಈ ವಾಕ್ಯ ರಚನೆಗಳಲ್ಲೇ ಮಿಸ್ಟರಿ ಕಾಣಿಸುತ್ತದೆ. ಇದೆಲ್ಲಾ ನನಗೆ ತಿಳುವಳಿಕೆ ಬಂದ ಮೇಲೆ ನಾನೇ ವಿಶ್ಲೇಷಿಸಿ ತಿಳಿದುಕೊಂಡ ಸಂಗತಿಗಳು. ಈ ತರಹದ್ದೆಲ್ಲಾ ತಿಳಿಯಲು ತೊಡಗಿದರೆ ಅದನ್ನು ಹೇಳುವುದರಲ್ಲಿ ಇರುವ ಸಂತೋಷ ಮಾಯವಾಗಿ ತಿಳಿಯುವುದರ ಸಂತೋಷವೇ ಹೆಚ್ಚಾಗಿಬಿಡುತ್ತದೆ.

ಕುಂಟಕಾಲು ಕೃಷ್ಣಪ್ಪಯ್ಯ, ಕ್ರಾಪು ಮತ್ತು ಜುಟ್ಟು

ಕೆರೆಕೊಪ್ಪದ ಮನೆಯಲ್ಲಿದ್ದಾಗಲೇ ನನಗೆ ಅಕ್ಷರಾಭ್ಯಾಸ ಪ್ರಾರಂಭವಾಗಿದ್ದು. ಇದು ನನಗೀಗ ನೆನಪಾಗುತ್ತಿದೆ. ಆಗ ಸ್ಕೂಲ್ ಹತ್ತಿರ ಇರಲಿಲ್ಲ. ಹಬ್ಬದ ದಿನ ಅದು. ಒಂದು ಮಂತ್ರ ಇದೆ ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ಅಕ್ಷರಾಭ್ಯಾಸಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ. ಎಂದು ಹೇಳಿ ನಮ್ಮಮ್ಮ ನನ್ನನ್ನು ನೆಲದಲ್ಲಿ ಮರಳು ಹರಡಿ ಕೂರಿಸಿ ಬೆರಳನ್ನು ಹಿಡಿದುಕೊಂಡು ಅ ಎಂಬ ಅಕ್ಷರವನ್ನು ಬರೆಯಿಸಿದ್ದಳು.

ಮಕ್ಕಳಾಗಿದ್ದಾಗ ಮರಳಲ್ಲಿ ಆಡುವುದೂ ಸಂತೋಷದ ವಿಷಯ. ನಿತ್ಯ ನಾನು ಆ ಮರಳ ಮೇಲೆ ಬರೆಯುತ್ತಿದ್ದೆ. ನಾನು ಅಕ್ಷರಗಳನ್ನೆಲ್ಲಾ ಕಲಿತದ್ದೇ ಹೀಗೆ. ಕಂಪ್ಯೂಟರ್ ಕೂಡಾ ಆ ಮರಳಿನಿಂದಲೇ ಬಂದಿರೋದು ಅನ್ನುತ್ತಾರಲ್ಲ….ಆದ್ದರಿಂದ ಅವತ್ತು ನಾನು ಮರಳಲ್ಲಿ ನಾನು ಅಕ್ಷರಗಳನ್ನು ಬರೆಯುತ್ತಿದ್ದುದಕ್ಕೂ ಈಗ ಕಂಪ್ಯೂಟರ್ ನಲ್ಲಿ ಟೈಪ್ ಮಾಡುವುದಕ್ಕೂ ಒಂದು ತರಹದ ಸಂಬಂಧ ಇದೆ. ಎರಡೂ ಮರಳಿನಿಂದಲೇ ಬಂದಿರೋದು.

ಅಕ್ಷರ ಕಲಿತ ಮೇಲೆ ಒಬ್ಬರು ಮೇಷ್ಟ್ರು ಬೇಕಲ್ಲ. ಅದು ಯಾವುದೋ ಸ್ಕೂಲಿಗೆ ಹೋಗುವ ಮೇಷ್ಟ್ರನ್ನು ತಂದು ನನಗೂ ಮೇಷ್ಟ್ರು ಮಾಡಿದರು. ಅವರದ್ದು ಕುಂಟು ಕಾಲು. ಅವರ ಮೇಲೆ ನನಗೆ ಇನ್ನಿಲ್ಲದ ಸಿಟ್ಟು. ಯಾಕೆಂದರೆ ಅವರು ನನಗೆ ಪಾಠ ಹೇಳಿಕೊಡುವಾಗ ನೀಡುತ್ತಿದ್ದ ಶಿಕ್ಷೆ. ಹಾಗಾಗಿ ಅವರು ಮನೆಗೆ ಬಂದಾಗ ಕೃಷ್ಣಪ್ಪಯ್ಯ ಬಂದರೋ ಎಂದೋ ಮೇಷ್ಟ್ರು ಬಂದರು ಎಂದೋ ಯಾವತ್ತೂ ಹೇಳುತ್ತಿರಲಿಲ್ಲ. ಕುಂಟುಕಾಲು ಕೃಷ್ಣಪ್ಪಯ್ಯ ಬಂದ ಎನ್ನುತ್ತಿದ್ದೆ. ಇದನ್ನು ಕೇಳಿದರೆ ನಮ್ಮ ಅಜ್ಜಯ್ಯನಿಗೆ ಸಿಟ್ಟು ಬರುತ್ತಿತ್ತು. ಅದು ಸಹಜ ಕೂಡಾ. ಆಗ ನಾನಿನ್ನೂ ಐದೋ ಆರೋ ವರ್ಷದ ಬಾಲಕ. ಹಿರಿಯರೊಬ್ಬರನ್ನು ಅವರ ಅಂಗವೈಕಲ್ಯವನ್ನು ಅಣಕಿಸಿ ಏಕವಚನದಲ್ಲಿ ಕರೆದರೆ ಯಾರಿಗೆ ಸಿಟ್ಟು ಬರುವುದಿಲ್ಲ. ಆದರೆ ನಮ್ಮ ಅಮ್ಮನಿಗೆ ಮಾತ್ರ ಸಹಾನುಭೂತಿ ಇರೋದು. ಹಾಗಾಗಿ ಈ ಬಗೆಯ ಪದಪ್ರಯೋಗವೆಲ್ಲಾ ಅಮ್ಮನ ಬಳಿ ಮಾತನಾಡುವಾಗ ಬಳಕೆಯಾಗುತ್ತಿತ್ತು.

ಕೃಷ್ಣಪ್ಪಯ್ಯ ಬರುವಾಗಲೇ ಒಂದು ಬೆತ್ತ ತಂದಿರುತ್ತಿದ್ದರು. ನಾನು ಅವರು ಹೇಳಿಕೊಟ್ಟದ್ದನ್ನು ಕಲೀಬೇಕಿತ್ತು. ಅದೇನು ಕಲಿತೆ ಎಂಬುದು ಮರೆತು ಹೋಗಿದೆ. ಆದರೆ ಕೃಷ್ಣಪ್ಪಯ್ಯ ಮಾತ್ರ ನೆನಪಿದಾರೆ.

**********************

ನನಗೆ ಚೌಲ ಆಗಿದ್ದು ನೆನಪಿದೆ. ಮೊಟ್ಟ ಮೊದಲನೇ ಸಾರಿ ಮಕ್ಕಳ ಕೂದಲನ್ನು ಕತ್ತರಿಸುವುದಕ್ಕೆ ಚೌಲ ಎನ್ನುತ್ತಾರೆ. ಚೌಲ ಕರ್ಮ ಆಗುವವರೆಗೂ ಮಕ್ಕಳು ಕೂದಲನ್ನು ಕತ್ತರಿಸದೆ ಉದ್ದಕ್ಕೆ ಬಿಟ್ಟುಕೊಂಡಿರುತ್ತಾರೆ. ಅಕ್ಷರಾಭ್ಯಾಸ ಆಗುವುದಕ್ಕೆ ಮೊದಲು ಇಲ್ಲವೇ ನಂತರ ಸುಮಾರು ಐದಾರು ವರ್ಷದ ಹೊತ್ತಿಗೆ ಈ ಚೌಲ ಕರ್ಮ ಮಾಡುತ್ತಾರೆ. ಇದು ನನಗೆ ನೆನಪಿದೆ. ಆಗೆಲ್ಲಾ ನಮ್ಮ ಮನೆಗಳಿಗೇ ಕ್ಷೌರಿಕರು ಬರುತ್ತಿದ್ದರು. ನನ್ನ ಚೌಲ ಕರ್ಮಕ್ಕೆ ಬರಬೇಕಾಗಿದ್ದ ಕ್ಷೌರಿಕ ಶುಭ್ರವಾದ ಬಿಳಿ ಬಟ್ಟೆ ಧರಿಸುತ್ತಿದ್ದ ಎಂದು ನೆನಪು. ಅವನಿಗೊಂದು ಕ್ರಾಪ್ ಕೂಡಾ ಇತ್ತು.

ಆ ಕಾಲದಲ್ಲಿ ಯಾರಾದರೂ ಕ್ರಾಪ್ ಬಿಟ್ಟಿದ್ದರೆ ಅವರಿಗೂ ನಗರಕ್ಕೂ ಯಾವುದೋ ಸಂಬಂಧವಿದೆ ಎಂದರ್ಥ. ಕ್ರಾಪಿಗೆ ಈಗ ಯಾವ ಅರ್ಥವೂ ಇಲ್ಲ. ಹಿಂದೆ ಇದಕ್ಕೆ ಬಹಳ ದೊಡ್ಡ ಸಾಂಕೇತಿಕ ಅರ್ಥವಿತ್ತು. ಅದನ್ನು ಮೊದಲು ಗ್ರಹಿಸಿದವರು ಅಡಿಗರು.‘ಕ್ರಾಪು ತಲೆಯು ನವೀನ ಜಗದ ಯುಗದ ಕೇತನ’ ಅಂತ ಅವರು ಬರೀತಾರೆ. ಬ್ರಾಹ್ಮಣ ಹುಡುಗರಿಗೆ ಕ್ರಾಪು ತಲೆ ಒಂದು ಬಾವುಟವೇ ಸರಿ. ಯಾಕೆಂದರೆ ಕ್ರಾಪು ಬಿಟ್ಟರೆ ಅವನೆಲ್ಲೋ ಸ್ವಲ್ಪ ಬ್ರಾಹ್ಮಣಿಕೆಯಿಂದ ದೂರವಾಗುತ್ತಿದ್ದಾನೆ, ಮಡಿವಂತಿಕೆಯಿಂದ ದೂರವಾಗುತ್ತಿದ್ದಾನೆ ಎಂದರ್ಥ.

ನಮ್ಮ ಹಳ್ಳಿಯಲ್ಲಿರುವವರೆಲ್ಲಾ ಸಾಮಾನ್ಯವಾಗಿ ಜುಟ್ಟು ಬಿಟ್ಟವರು. ಆದರೆ ಕ್ಷೌರಿಕ ಮಾತ್ರ ಕ್ರಾಪು ಬಿಟ್ಟಿದ್ದ. ನನ್ನ ಚೌಲಕ್ಕೆ ಅವನೇ ಬೇಕು ಅಂತ ನಾನು ಹಟ ಮಾಡಿದ್ದು ನನಗೆ ಚೆನ್ನಾಗಿ ನೆನಪಿದೆ. ಅತ್ತೂ ಕರೆದು ಇನ್ಯಾರನ್ನಾದರೂ ಕರೆದರೆ ಅವನ ಹತ್ತಿರ ಚೌಲ ಮಾಡಿಸಿಕೊಳ್ಳುವುದಿಲ್ಲ ಎಂದು ಹಠ ಮಾಡಿದ್ದೆ. ಕೊನೆಗೂ ಅವನೇ ಬಂದ. ಚೌಲ ಆಯಿತು. ಕ್ರಾಪ್ ಬಿಡಿಸಿಕೊಂಡೆ.

ನನ್ನ ಅಪ್ಪ ಕೂಡಾ ಕ್ರಾಪು ಜುಟ್ಟಿನ ಮಧ್ಯೆ ಹೋರಾಡುತ್ತಿದ್ದವರು. ನಮ್ಮ ಅಜ್ಜ ವೈದಿಕ ಬ್ರಾಹ್ಮಣ. ಅವರು ಅಲ್ಲಿ ಇಲ್ಲಿ ಹೋಮ, ಹವನ, ಹಬ್ಬ ಮಾಡಿಸುತ್ತಾ ಇಲ್ಲವೇ ಸತ್ಯನಾರಾಯಣ ಪೂಜೆ ಮಾಡಿಸುವುದು, ವ್ರತ ಮಾಡಿಸುವುದಕ್ಕೆಲ್ಲಾ ಹೋಗುತ್ತಿದ್ದರು. ಅವರು ಅಂಗಿಯನ್ನೂ ಹಾಕುತ್ತಿರಲಿಲ್ಲ. ಅವರು ಒಂದು ವಸ್ತ್ರ ಹೊದ್ದುಕೊಳ್ಳುತ್ತಿದ್ದರು. ನನ್ನ ಅಪ್ಪ ಲೌಕಿಕ ಬ್ರಾಹ್ಮಣರು. ಲೌಕಿಕ ಬ್ರಾಹ್ಮಣರು ಅಂದರೆ ಇವರು ಶುಭಾಶುಭ ಸಂದರ್ಭಗಳಿಗೆಲ್ಲಾ ಪುರೋಹಿತರೊಬ್ಬರನ್ನು ಕರೆಯಿಸಿಕೊಳ್ಳಬೇಕೇ ಹೊರತು ಅವರೇ ಪುರೋಹಿತರಲ್ಲ. ಲೌಕಿಕ ಬ್ರಾಹ್ಮಣರಾಗಿಬಿಟ್ಟಿದ್ದ ಅಪ್ಪ ಕ್ರಾಪ್ ಮಾಡಿಸಿಕೊಂಡಿದ್ದರು. ಇದೆಂಥಾ ಕ್ರಾಪ್ ಅಂದರೆ ಇದರ ಮರೆಯಲ್ಲೇ ಒಂದು ಸಣ್ಣ ಜುಟ್ಟೂ ಇರುತ್ತಿತ್ತು.

ನಾನು ನನ್ನ ಅಪ್ಪನ ಬೆಳವಣಿಗೆಯನ್ನು ನೋಡುವುದು ಈ ಕ್ರಾಪು ಜುಟ್ಟುಗಳ ಸಂಕೇತದಲ್ಲಿ. ಒಮ್ಮೊಮ್ಮೆ ಜುಟ್ಟು ದೊಡ್ಡದಾಗುತ್ತಿತ್ತು. ಒಮ್ಮೊಮ್ಮೆ ಕ್ರಾಪು ದೊಡ್ಡದಾಗುತ್ತಿತ್ತು. ಅವರ ಆಲೋಚನಾ ಕ್ರಮದ ಬದಲಾವಣೆಗಳು ಈ ಜುಟ್ಟು-ಕ್ರಾಪುಗಳಲ್ಲಿ ಯಾವುದು ದೊಡ್ಡದಾಗುತ್ತಿದೆ ಎಂಬುದರಲ್ಲಿ ಗೊತ್ತಾಗುತ್ತಿತ್ತು. ನನ್ನ ಹಾಗೆ ಬ್ರಾಹ್ಮಣರ ಕುಲದಲ್ಲೇ ಹುಟ್ಟಿ ಬಂದವನಿಗೆ ಹೊರಗಡೇ ಇಲ್ಲದಿದ್ದರೂ ಒಳಗಡೆ ಒಂದು ಜುಟ್ಟಿರುತ್ತೆ. ನಾನು ನನ್ನ ಒಳಜುಟ್ಟನ್ನು ಹುಡುಕುತ್ತಲೇ ಇರುತ್ತೇನೆ. ಅದು ಇನ್ನೂ ಎಲ್ಲಾದರೂ ಉಳಿದುಕೊಂಡಿರಬಹುದೇ ಎಂದು….

ಇವೆಲ್ಲಾ ಸಾಮಾನ್ಯವಾಗಿರುವಂಥದ್ದು. ಆದರೆ ಒಬ್ಬ ಬರಹಗಾರನಿಗೆ ಮುಖ್ಯವಾದುದರಿಂದ ನಾನಿದನ್ನು ಹೇಳುತ್ತಿದ್ದೇನೆ. ನಮ್ಮ ಅಪ್ಪನಲ್ಲೂ ಒಂದು ಮುಚ್ಚಿಟ್ಟುಕೊಂಡ ಕ್ರಾಪು ಹಾಗೇ ಮುಚ್ಚಿಟ್ಟುಕೊಂಡ ಜುಟ್ಟಿತ್ತು. ಆದರೆ ಅಜ್ಜನಿಗೆ ಜುಟ್ಟು ಮಾತ್ರ ಇತ್ತು.

ಶ್ಯಾನುಭೋಗರ ಕ್ಷೌರ ಮತ್ತು ರಾವು ಬಿಡಿಸಿದ್ದು

ನಮ್ಮ ಅಪ್ಪ ಶಾನುಭೋಗರು. ಶ್ಯಾನುಭೋಗಿಕೆಗಾಗಿ ಬೇರೆ ಬೇರೆ ಊರುಗಳಲ್ಲಿ ಓಡಾಡಬೇಕಾಗಿ ಬರೋದು. ಅವರ ಬಗ್ಗೆ ಇರುವ ನನ್ನ ಅತ್ಯಂತ ಹಳೆಯ ನೆನಪು ಯಾವುದು ಎಂದರೆ ಅವರೊಂದು ರೂಲು ದೊಣ್ಣೆ ಹಿಡಿದುಕೊಂಡು ಲೆಕ್ಕ ಬರೆಯುವ ಉದ್ದನೆಯ ಕಾಗದವನ್ನು ಅದರ ಕೆಳಗೆ ಇಟ್ಟುಕೊಂಡು ದೊಣ್ಣೆಯನ್ನು ತಿರುಗಿಸುತ್ತಾ ಖಾಲಿ ಕಾಗದದ ಮೇಲೆ ಗೆರೆಗಳನ್ನು ಎಳೆಯುತ್ತಿರುವುದು. ಅವರ ಕೈಲಿದ್ದ ಆ ರೂಲ್ ದೊಣ್ಣೆ ಅವರ ಅಧಿಕಾರದ ಸಂಕೇತವಾಗಿಯೂ ಕಾಣಿಸುತ್ತಿತ್ತು. ಎಲ್ಲಿ ರೂಲ್ ದೊಣ್ಣೆ ತಗೊಂಬಾ ಎಂದು ಅವರಂದರೆ ನಾವು ಅದನ್ನು ತೆಗೆದುಕೊಂಡು ಹೋಗಿ ಕೊಡಬೇಕಾಗಿತ್ತು.

ನಮ್ಮ ಅಪ್ಪ ಆಧುನಿಕರಾಗಿದ್ದರು ಎಂಬುದಕ್ಕೆ ಮತ್ತೊಂದು ಸಂಕೇತ ಏನು ಎಂದರೆ ಅವರು ಮುಖ ಕ್ಷೌರವನ್ನು ಬೇರೆಯವರ ಹತ್ತಿರ ಮಾಡಿಸುತ್ತಿರಲಿಲ್ಲ. ತಾವೇ ಮುಖ ಕ್ಷೌರ ಮಾಡಿಕೊಳ್ಳುತ್ತಿದ್ದರು. ಇದಕ್ಕೆ ಅವರ ಹತ್ತಿರ ಒಂದು ಹತಾರ ಇತ್ತು. ಅದೊಂದು ಬೆಲ್ಟ್. ಇದನ್ನು ಕಾಲಿನ ಬೆರಳಿಗೆ ಹಾಕಿಕೊಂಡು ರೇಜರನ್ನು ಆ ಬೆಲ್ಟಿನ ಒಳಗೆ ಮೇಲೆ ಕೆಳಗೆ ಜಾರಿಸುತ್ತಿದ್ದರು. ಆಗ ಅದು ಹರಿತವಾಗುತ್ತಿತ್ತು. ನಮ್ಮಪ್ಪ ಕ್ಷೌರಕ್ಕೆ ಕುಳಿತರೆ ನಾವೆಲ್ಲಾ ಅವರ ಸುತ್ತ ನೆರೆಯುತ್ತಿದ್ದೆವು. ನಾವಷ್ಟೇ ಯಾಕೆ ಹಳ್ಳಿಯವರಿಗೂ ಇದೊಂದು ಕುತೂಹಲಕರ ಸಂಗತಿ. ಹಾಗಾಗಿ ಅವರೂ ಬಂದು ಬಿಡುತ್ತಿದ್ದರು.

ರೇಜರ್ ಹರಿತ ಮಾಡಿದ ಮೇಲೆ ಮುಖದ ತುಂಬಾ ಸೋಪಿನ ಬುರುಗು ಹಚ್ಚಿಕೊಂಡು ಒಂದು ಕನ್ನಡಿಯನ್ನು ಕೈಯಲ್ಲಿ ಹಿಡಿದುಕೊಂಡು ತಮ್ಮ ಕ್ಷೌರ ಕರ್ಮ ಆರಂಭಿಸುತ್ತಿದ್ದರು. ಆಗ ನಮ್ಮ ಮನೆಯಲ್ಲಿ ಇದ್ದದ್ದು ಅದೊಂದೇ ಕನ್ನಡಿ. ಆಗೆಲ್ಲಾ ಹೀಗೆಯೇ. ಮನೆಗೆ ಒಂದೊಂದೇ ಕನ್ನಡಿಗಳು. ಒಂದೊಂದು ಸಾರಿ ಮಾತ್ರ ಗೋಡೆಗೆ ಅಂಟಿಸಿರುವ ಸಣ್ಣ ಕನ್ನಡಿಗಳು ಇರುತ್ತಿದ್ದವು. ಊಟ ಆದ ಮೇಲೆ ಅಕ್ಷತೆ ಇಟ್ಟುಕೊಳ್ಳುವಾಗ ಅದನ್ನು ನೋಡಿಕೊಳ್ಳುವುದಕ್ಕೆ ಅನುಕೂಲವಾಗುವಂತೆ ಇವನ್ನು ಇಟ್ಟಿರಲಾಗುತ್ತದೆ. ಹೆಂಗಸರು ಕುಂಕುಮ ಇಟ್ಟುಕೊಳ್ಳಲೂ ಇವನ್ನೇ ಬಳಸುತ್ತಾರೆ. ನಮ್ಮಪ್ಪನ ಹೆಗ್ಗಳಿಕೆ ಏನೂ ಅಂದರೆ ಅವರಲ್ಲಿ ಕೈಯಲ್ಲಿ ಹಿಡಿದುಕೊಳ್ಳುವಂಥ ಒಂದು ಕನ್ನಡಿ ಇತ್ತು ಎಂಬುದು.

ಇದು ಅವರಿಗೆ ಎಲ್ಲಿಂದ ಬಂತು ಎನ್ನುವುದಕ್ಕೆ ಒಂದು ಇತಿಹಾಸವಿದೆ. ಅವರು ಇದ್ದ ಹಳ್ಳಿಯಲ್ಲಿ ಅವರ ಅಪ್ಪನಿಗೆ ಅಂದರೆ ನಮ್ಮ ಅಜ್ಜನಿಗೆ ಗೊತ್ತಾಗದ ಹಾಗೆ ಯಾರು ಯಾರ ಹತ್ತಿರವೋ ಇಂಗ್ಲಿಷ್ ಪುಸ್ತಕಗಳನ್ನು ತರಿಸಿಕೊಂಡು ಗುಪ್ತವಾಗಿ ಲಂಡನ್ ಮೆಟ್ರಿಕ್ಯುಲೇಶನ್ ಪಾಸು ಮಾಡಿಕೊಂಡಿದ್ದರು. ದಿಲ್ಲಿಗೆ ಹೋಗಿ, ಬನಾರಸಿಗೆ ಹೋಗಿ, ಅಲ್ಲೇ ಕಾಶಿಯಲ್ಲಿ ಸ್ವಲ್ಪ ದಿನ ಇದ್ದು ಆಮೇಲೆ ರೈಲ್ವೇ ಸ್ಟೇಷನ್ ಮಾಸ್ಟರ್ ಆಗಿದ್ದರು. ಈ ಕೆಲಸವನ್ನು ಅವರಿಗೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಏಕೆಂದರೆ ಅವರಿಗೊಂದು ಜ್ವರ ಗೆಡ್ಡೆಯಿತ್ತು. ಮಲೆನಾಡಿನವರಿಗೆಲ್ಲಾ ಆ ಕಾಲದಲ್ಲಿ ಜ್ವರದ ಗೆಡ್ಡೆಗಳು ಸಾಮಾನ್ಯ. ಆ ಸಮಯದಲ್ಲೇ ಅಪ್ಪ ಈ ಕನ್ನಡಿ, ರೇಜರ್ ಇತ್ಯಾದಿಗಳನ್ನೆಲ್ಲಾ ಸಂಪಾದಿಸಿದ್ದೂ ಅವುಗಳನ್ನು ಬಳಸಲು ಅಭ್ಯಾಸ ಮಾಡಿಕೊಂಡಿದ್ದು. ಅವರ ಹತ್ತಿರ ಒಂದು ಕ್ಯಾಮೆರಾ ಕೂಡಾ ಇತ್ತು. ಬಾಕ್ಸ್ ಕ್ಯಾಮೆರಾ. ಒಂದು ರೀತಿಯಲ್ಲಿ ನಮ್ಮ ಅಪ್ಪನೇ ಮೊದಲು ಆಧುನಿಕತೆಯನ್ನು ನಮ್ಮ ಹಳ್ಳಿಗೆ ತಂದದ್ದು.

ರಾವು ಬಿಡಿಸಿದ್ದು

ಇನ್ನೊಂದು ಬಾಲ್ಯದ ದಟ್ಟವಾದ ನೆನಪು ನನ್ನ ತಮ್ಮನೊಬ್ಬನದ್ದು. ನನಗೆ ವೆಂಕಟೇಶಮೂರ್ತಿ ಎಂಬ ತಮ್ಮನೊಬ್ಬನಿದ್ದ. ನನಗಿಂತ ಎರಡೇ ವರ್ಷ ಚಿಕ್ಕವನು. ಅವನಿಗೆ ಆಗೀಗ ಮೂರ್ಛೆ ಬರುತ್ತಿತ್ತು. ಒಂದು ಸಾರಿ ಹೀಗೆ ಮೂರ್ಛೆ ಹೋದವನಿಗೆ ಎಚ್ಚರ ಆಗಲೇ ಇಲ್ಲ. ನಮ್ಮ ಹಳ್ಳಿಯಿಂದ ಸ್ವಲ್ಪದೂರದಲ್ಲಿ ಒಬ್ಬರು ಪೋಸ್ಟ್ ಮಾಸ್ಟರ್ ಇದ್ದರು. ನಮ್ಮ ಹಳ್ಳಿಯಿಂದ ನಾಲ್ಕು ಕಿಲೋಮೀಟರ್ ಕಾಡಿನಲ್ಲೇ ಹೋದರೆ ಅಲ್ಲೊಂದು ಪೋಸ್ಟಾಫೀಸು. ದಿನಕ್ಕೊಂದು ಸಾರಿ ಆ ದಾರಿಯಲ್ಲಿ ಬರುವ ಬಸ್ ಪೋಸ್ಟ್ ಬ್ಯಾಗ್ ತರುತ್ತಿತ್ತು. ಈ ಬ್ಯಾಗನ್ನು ಪೋಸ್ಟ್ ಮಾಸ್ಟರು ಬಿಚ್ಚುವ ಹೊತ್ತಿಗೆ ಕಾಗದಕ್ಕಾಗಿ ಕಾಯುತ್ತಿದ್ದ ಜನರೆಲ್ಲಾ ಅಲ್ಲಿ ಸೇರುತ್ತಿದ್ದರು.

ಈ ಪೋಸ್ಟ್ ಮಾಸ್ಟರ್ ಸ್ವಲ್ಪ ಮಂತ್ರ-ಗಿಂತ್ರ ಎಲ್ಲಾ ಹೇಳುತ್ತಿದ್ದರು. ನಮ್ಮ ಅಪ್ಪ ಹೋಗಿ ಅವರನ್ನು ಕರೆದುಕೊಂಡು ಬಂದರು. ಅವರು ಬಂದು ನಮ್ಮ ಅಪ್ಪ ಅಮ್ಮನ ಜತೆ……ಇಟ್ಟುಕೊಂಡು ಮೃತ್ಯುಂಜಯ ಜಪ ಮಾಡಿದರು. ಮೃತ್ಯುಂಜಯ ಜಪವನ್ನು ಅವರು ಹಗಲೂ ರಾತ್ರಿ ಊಟ ನಿದ್ರೆ ಮಾಡದೇ ಮಾಡಿದರು. ಇದರಿಂದ ಅವರು ಪೋಸ್ಟ್ ಮಾಸ್ಟರ್ ಕೆಲಸವನ್ನೇ ಕಳೆದುಕೊಂಡರು. ಅಂದರೆ ಪೋಸ್ಟ್ ಬ್ಯಾಗ್ ಬರುವಾಗ ಅವರಲ್ಲಿ ಇರದೇ ಅದೇ ಹಗರಣವಾಗಿಬಿಟ್ಟಿತು. ಈ ಸತತ ಮೃತ್ಯುಂಜಯ ಜಪ ಮಾಡುತ್ತಲೇ ಅವರು ಒಂದು ಬಳೆಯ ಓಡನ್ನು ಸಣ್ಣ ದೀಪದಲ್ಲಿ ಕಾಯಿಸಿ ನನ್ನ ತಮ್ಮನ ದೇಹಕ್ಕೆ ತಗುಲಿಸುತ್ತಿದ್ದರು. ಇದೂ ಒಂದು ಔಷಧ. ಹೀಗೆ ಅವನ ಕೈತುಂಬಾ ಸುಟ್ಟಿದ್ದರು. ಕೊನೆಗೆ ಅವನಿಗೆ ಎಚ್ಚರವಾಯಿತು.

ಈ ನನ್ನ ತಮ್ಮ ಬಹಳ ವಿಚಿತ್ರವಾದವನು. ಅವನು ಜೀರಿಗೆ ಮೆಣಸಿನಕಾಯಿಯನ್ನು ಕಚ ಕಚ ಅಗಿದು ನುಂಗಿಬಿಡುತ್ತಿದ್ದ. ಇದಕ್ಕೆ ಸಂಬಂಧಿಸಿದ ಪಂಥಗಳಲ್ಲಿ ಭಾಗವಹಿಸಿ ದುಡ್ಡು ಗೆಲ್ಲುತ್ತಿದ್ದ. ಅವನಿಗೆ ಖಾರವೇ ಆಗುತ್ತಿರಲಿಲ್ಲ. ಅವನಿಗೆ ನಮ್ಮಲ್ಲಿ ರಾವು ಎನ್ನುವ ಒಂದು ಮಕ್ಕಳ ಕಾಯಿಲೆ ಇತ್ತು. ಈ ರಾವು ಬಂದವರು ಸಿಕ್ಕಾಪಟ್ಟೆ ತಿನ್ನುತ್ತಾರೆ. ನನ್ನ ತಮ್ಮ ಏನು ಕೊಟ್ಟರೂ ತಿಂದೂ ತಿಂದೂ ತಿನ್ನಲು ಕೊಡುವವರಿಗೆ ಭಯ ಹುಟ್ಟಿಸುತ್ತಿದ್ದ. ಊಟಕ್ಕೆ ಕುಳಿತರೆ ಏಳುತ್ತಲೇ ಇರಲಿಲ್ಲ. ಮನೆಯವರೆಲ್ಲಾ ಇವನಿಗೆ ರಾವು ಬಾಧಿಸಿದೆ. ಅದನ್ನು ಬಿಡಿಸಬೇಕು ಎಂದು ತೀರ್ಮಾನಿಸಿದರು.

ನನಗೆ ಆಶ್ಚರ್ಯ ಹುಟ್ಟಿಸಿದ ಒಂದು ವಿಚಾರ ಅಂದರೆ ಈ ರಾವು ಬಿಡಿಸುವ ಕ್ರಿಯೆಯ ವರ್ಣನೆ ದೇವನೂರು ಮಹಾದೇವರ ಒಂದು ಕತೆಯಲ್ಲಿಯೂ ಇದೆ. ಒಬ್ಬ ಬ್ರಾಹ್ಮಣನಿಗೂ ದಲಿತನಿಗೂ ಸಾಮಾನ್ಯವಾದ ಆಚರಣೆಗಳಿವು. ಇಲ್ಲಿ ರಾವು ಬಿಡಿಸುವ ಹಬ್ಬವನ್ನು ನೆನಪಿಸಿಕೊಳ್ಳುತ್ತೇನೆ. ನಾವೆಲ್ಲಾ ಊಟಕ್ಕೆ ಕೂತಿದ್ದೇವೆ. ಎರಡು ಮೂರು ಸಾಲು. ವೆಂಕಟೇಶನಿಗೆ ಬಡಿಸಿದರೂ ಬಡಿಸಿದರು ತಿಂದ, ತಿಂದ ಕೊನೆಗೆ ಸಾಕು ಎನ್ನುವುದಕ್ಕೆ ಶುರು ಮಾಡಿದ. ಇಲ್ಲ, ತಿನ್ನು. ತಿನ್ನಲೇ ಬೇಕು ನೀನು ಹಠ ಮಾಡಿ ಅವನಿಗೆ ವಾಂತಿಯಾಗುವ ತನಕ ತಿನ್ನಿಸುವುದು ಆಗ ರಾವು ಬಿಡುತ್ತೆ ಎನ್ನುವುದು ನಂಬಿಕೆ. ಈ ರಾವು ಬಿಡಿಸುವ ಕ್ರಿಯೆ ನೆನಪಾದಗಲೆಲ್ಲಾ ನಮಗೆ ಬಡಿದಿರುವ ಆಧುನಿಕತೆಯ ರಾವೂ ಜ್ಞಾಪಕಕ್ಕೆ ಬರುತ್ತೆ. ಅದು ಬೇಕು, ಇದು ಬೇಕು, ಆ ಗ್ಯಾಡ್ಜೆಟ್ ಬೇಕು, ಈ ಗ್ಯಾಡ್ಜೆಟ್ ಬೇಕು, ಅಮೆರಿಕ ಬೇಕು ಹೀಗೆ, ಈ ರಾವಿದೆಯಲ್ಲಾ ಇದು ಬಿಡುತ್ತೆ ಅಂದ್ಕೊಂಡಿದ್ದೀನಿ. ರಾವು ಬಿಡಿಸುವ ಕ್ರಿಯೆಯಂತೆಯೇ ಅತಿಯಾದಾಗ ಅದು ಬಿಟ್ಟುಹೋಗುತ್ತೆ. ವೆಂಕಟೇಶನಿಗೆ ಹಾಗೆ ತಿನ್ನಿಸಿದ ಮೇಲೆ ಅವನು ಸರಿಯಾಗಿಬಿಟ್ಟ.

ತಮ್ಮನ ಸಾವೆಂಬ ನೋವು

ನನ್ನ ತಮ್ಮ ವೆಂಕಟೇಶ ಬಹಳ ಬುದ್ಧಿವಂತನಾದ. ಗಣಿತದಲ್ಲಿ ಬಹಳ ಚತುರ. ನನ್ನ ಜತೆ ಹಾಸನಕ್ಕೆ ಬಂದು ಇಂಜಿನಿಯರಿಂಗ್ ಮಾಡಿದ. ಅಲ್ಲಿಂದ ಕೊಚ್ಚಿನ್ ಗೆ ಹೋದ. ಅಲ್ಲಿಂದ ನನಗೊಂದು ಕಾಗದ ಬರೆದು ನನಗೆ ಕಲ್ಕತ್ತಾದಲ್ಲೊಂದು ಕೆಲಸ ಸಿಕ್ಕಿದೆ. ಅಲ್ಲಿಗೆ ಹೋಗಬೇಕು. ನನಗೊಂದಿಷ್ಟು ದುಡ್ಡು ಕಳುಹಿಸು ಎಂದು ಕೇಳಿದ್ದ. ನಾನು ಕಳುಹಿಸುವುದಕ್ಕೆಂದು ಸಿದ್ಧನಾಗಿದ್ದೆ. ಅವನ ಮುಂದಿನ ಕಾಗದಕ್ಕೆಂದು ನಾನು ಕಾಯುತ್ತಿದ್ದರೆ ಕಾಗದದ ಬದಲಿಗೆ ಒಂದು ಟೆಲಿಗ್ರಾಂ ಬಂತು-ವೆಂಕಟೇಶ ಸತ್ತು ಹೋದ!

ನನ್ನ ಬಾಲ್ಯದಿಂದ ಬಂದ ಎಲ್ಲವನ್ನೂ ನೆನಪು ಮಾಡುವ ಘಟನೆ ಎಂದರೆ ನನ್ನ ತಮ್ಮ ದಿಢೀರ್ ಎಂದು ಸತ್ತದ್ದು. ಅವನು ಸತ್ತು ಹೋದ ಸುದ್ದಿ ಬಂದ ಮರುದಿನವೇ ನನ್ನ ಸೋದರ ಮಾವನ ಮದುವೆ. ಗೋಣಿಬೀಡು ಎಂಬ ಊರಿನಲ್ಲಿ ನಡೆಯುವ ಈ ಮದುವೆಗಾಗಿ ನನ್ನ ಅಪ್ಪ ಅಮ್ಮ ಎಲ್ಲಾ ಬಂದಿದ್ದರು. ನಾನು ಹಾಸನದಲ್ಲಿ ಲೆಕ್ಚರರ್ ಆಗಿದ್ದೆ. ಗೋಣಿಬೀಡಿಗೆ ಹೋಗಿ ಮದುವೆ ನಿಲ್ಲಿಸಬೇಕು. ಆ ಮೇಲೆ ಕೊಚ್ಚಿನ್ ಗೆ ಹೋಗಿ ನನ್ನ ತಮ್ಮನ ಮೃತದೇಹದ ವಿಲೇವಾರಿ ಮಾಡಬೇಕು.

ನನ್ನ ಹಾಸನದ ಮನೆಯಲ್ಲಿ ಸಣ್ಣ ಅಕ್ವೇರಿಯಂನಲ್ಲಿ ಮೀನು ಸಾಕುತ್ತಿದ್ದೆ. ತಮ್ಮ ಸತ್ತ ಟೆಲಿಗ್ರಾಂ ಬಂದಾಗ ಈ ಮೀನುಗಳ ಎದುರೇ ಇದ್ದೆ. ಆ ಮೀನುಗಳೆಲ್ಲಾ ಜೀವಂತವಾಗಿ ಓಡಾಡುತ್ತಿರುವಾಗ ನನ್ನ ತಮ್ಮ ಸತ್ತು ಹೋಗಿದ್ದ ಸುದ್ದಿಯ ಜತೆ ನಾನು ಕುಳಿತಿದ್ದೆ. ಇದೊಂದು ವಿಚಿತ್ರ. ಯಾರಾದರೂ ಸತ್ತಾಗ ಒಂದು ಇರುವೆ ಕೂಡಾ ಬದುಕಿರುವುದು ನಮಗೆ ಕಾಣಿಸತೊಡಗುತ್ತದೆ. ಅದನ್ನು ನೋಡಿದಾಗ ಈ ಇರುವೆ ಬದುಕಿದೆ, ಆದರೆ ನಾನು ಪ್ರೀತಿಸುವವನೊಬ್ಬ ಇಲ್ಲ ಅನ್ನಿಸತೊಡಗುತ್ತದೆ.

ಈ ದಿನಗಳಲ್ಲಿ ಎಸ್ತರ್ ನನ್ನ ವಿದ್ಯಾರ್ಥಿಯಾಗಿದ್ದಳು. ನಾವಿಬ್ಬರೂ ಮದುವೆಯಾಗಬೇಕೆಂದು ನಿರ್ಧರಿಸಿದ್ದೆವು. ಆದರೆ ಯಾರಿಗೂ ಗೊತ್ತಾಗದೇ ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದೆವು. ಇದಕ್ಕಿದ್ದ ಕಾರಣ ಸರಳ. ಇದು ಬಯಲಾದರೆ ಹುಡುಗರು ಗಲಾಟೆ ಮಾಡುತ್ತಾರೆ ಎಂಬ ನಮ್ಮ ಭಯ.
ನನ್ನ ತಮ್ಮನ ಸಾವಿನ ಸುದ್ದಿ ಬಂದ ದಿನ ನಮ್ಮ ಮನೆಗೆ ಬಂದ ಎಸ್ತರ್ ಸುದ್ದಿ ಕೇಳಿ ನನ್ನನ್ನು ಆಲಿಂಗಿಸಿಕೊಂಡಳು. ಆ ಕ್ಷಣವೇ ನಾನವಳನ್ನು ಮದುವೆಯಾಗುತ್ತೇನೆ ಎಂಬುದು ಖಚಿತವಾಯಿತು. ಯಾಕೆಂದರೆ ಆ ಸಂದರ್ಭದಲ್ಲಿ ಎಲ್ಲಾ ಮರೆತಳಲ್ಲಾ. ಒಂದು ರೀತಿಯ ಅಪೂರ್ವವಾದ ಜೆನ್ವಿನ್‌ನೆಸ್ ವ್ಯಕ್ತವಾಯಿತಲ್ಲ…

ನಾನೆದ್ದು ಗೋಣಿಬೀಡಿಗೆ ಹೋದೆ. ಅಲ್ಲೆಲ್ಲಾ ಮದುವೆಗೆ ಸೇರಿದ್ದರು. ‘ವೆಂಕಟೇಶನಿಗೆ ಬಹಳ ಹುಶಾರಿಲ್ಲ. ಕೊಚ್ಚಿನ್ ಗೆ ಹೋಗಬೇಕು. ಮದುವೆಯನ್ನು ಮುಂದೆ ಹಾಕಿ’ ಎಂದೆ. ಅಷ್ಟು ಹೊತ್ತಿಗೇ ಹಲವರಿಗೆ ನಾನು ಸತ್ಯವನ್ನು ಮುಚ್ಚಿಡುತ್ತಿದ್ದೇನೆ ಎಂದು ಗೊತ್ತಾಯಿತು. ನಾನು ಯಾರನ್ನೋ ಕರೆದುಕೊಂಡು ಕೊಚ್ಚಿನ್ ಗೆ ಹೋದೆ. ಹೋಗಿ ನೋಡಿದಾಗ ವೆಂಕಟೇಶನಿಗೆ ಟೈಫಾಯ್ಡ್ ಆಗಿತ್ತು ಎಂದು ತಿಳಿಯಿತು. ಅದರ ಬಗ್ಗೆ ಅವನದ್ದು ನಿರ್ಲಕ್ಷ್ಯ. ತಾನು ಕಲ್ಕತ್ತಾಕ್ಕೆ ಹೋಗುತ್ತಿದ್ದೇನೆಂದು ಗೆಳೆಯರಿಗೆಲ್ಲಾ ಒಂದು ಪಾರ್ಟಿ ಕೊಟ್ಟಿದ್ದಾನೆ. ಎಲ್ಲರೂ ಚೆನ್ನಾಗಿ ತಿಂದಿದ್ದಾರೆ. ಆ ಕಾಲದಲ್ಲಿ ನಾನು ಬಿಯರ್ ಕುಡಿಯುತ್ತಿದ್ದೆನಾದ್ದರಿಂದ ಅವನೂ ಕುಡಿದಿರಬಹುದು ಎಂದುಕೊಳ್ಳುತ್ತೇನೆ. ಇದರಿಂದೆಲ್ಲಾ ಅವನಿಗೆ ನಂಜಾಗಿ ಅವನ ಪ್ರಾಣವೇ ಎರವಾಗಿದೆ.

ಅವನು ಬದುಕಿನ ಬೇರೆ ಯಾವುದೋ ಒಂದು ದಾರಿಯಲ್ಲಿದ್ದ. ಯಾಕೆಂದರೆ ಅವನ ಟ್ರಂಕ್ ತಂದೆನಲ್ಲಾ ಅದರಲ್ಲಿ ಸಿಕ್ಕ ಕಾಗದಗಳನ್ನು ನೋಡಿದ ಮೇಲೆ ಅವನೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದ ಎಂಬುದು ಗೊತ್ತಾಯಿತು. ನಾನು ಹೇಗೆ ಜಾತಿಯಿಂದ ಹೊರಗೆ ಮದುವೆಯಾದೆನೋ ಹಾಗೆಯೇ ಅವನೂ ಜಾತಿಯಿಂದ ಹೊರಗೇ ಮದುವೆಯಾಗುತ್ತಿದ್ದ. ಅದನ್ನು ನಾನು ಯಾವತ್ತೂ ನಮ್ಮ ಅಮ್ಮನಿಗೆ ಹೇಳಲಿಕ್ಕೇ ಹೋಗಲಿಲ್ಲ. ಈಗ ನನ್ನ ಅಮ್ಮ ಇಲ್ಲದೇ ಇರುವುದರಿಂದ ಧೈರ್ಯವಾಗಿ ಹೇಳಬಹುದಷ್ಟೇ. ನಾನು ಹೀಗಾದ ಮೇಲೆ ಉಳಿದ ಮಕ್ಕಳಾದರೂ ಸರಿಯಾಗಿದ್ದಾರೆ ಎಂದು ತಿಳಿದುಕೊಂಡಿದ್ದ ಅವಳ ನಂಬಿಕೆಯನ್ನು ಹಾಳು ಮಾಡಬಾರದು ಎಂದು ಈ ವಿವರವನ್ನು ಹೇಳಿರಲಿಲ್ಲ.

ವೆಂಕಟೇಶನ ಟ್ರಂಕ್ ನಲ್ಲಿ ಆ ಹುಡುಗಿ ಬರೆದ ಕಾಗದಗಳೆಲ್ಲಾ ಇದ್ದವು. ಕೊಚ್ಚಿನ್ ನಲ್ಲೇ ಇವುಗಳನ್ನು ನೋಡಿದೆನಾದರೂ ನಾನು ಆ ಹುಡುಗಿಯನ್ನು ನೋಡಲು ಹೋಗಲಿಲ್ಲ. ಸುಮ್ಮನೇ ಬಂದು ಬಿಟ್ಟೆ. ಆಕೆ ಕೂಡಾ ಅವನ ಅಂತಿಮ ದರ್ಶನಕ್ಕೆ ಬರಲಿಲ್ಲ. ನಮ್ಮ ಅಪ್ಪನೂ ಜತೆಗೆ ಕೊಚ್ಚಿನ್ ಗೆ ಬಂದಿದ್ದರು. ಅಲ್ಲೇ ಅಂತ್ಯ ಕ್ರಿಯೆಗಳನ್ನು ನಡೆಸಿದೆವು. ಆ ಮೇಲೆ ಹಿಂದಕ್ಕೆ ಬಂದೆವು. ಅಪ್ಪ ಮಂಕಾಗಿಬಿಟ್ಟಿದ್ದರು.

ಅಜ್ಜ, ಅಣ್ಣಪ್ಪನಾಯಕ ಮತ್ತು ನನ್ನ ಕ್ರಾಪು ತಲೆ

ವೆಂಕಟೇಶನ ಬದುಕನ್ನು ನಮ್ಮ ಅಜ್ಜನ ಬದುಕಿನ ಜತೆಗೆ ಹೋಲಿಸಿದರೆ ಬಹಳ ಸಾಮ್ಯತೆಗಳು ಕಾಣಿಸುತ್ತವೆ. ನಮ್ಮ ಅಜ್ಜನೂ ಒಂದು ಕಾಲದಲ್ಲಿ ಮನೆ ಬಿಟ್ಟು ಕೇರಳಕ್ಕೆ ಹೋದವರು. ಅವರ ತಾಯಿಯನ್ನು ಸಂಬಂಧಿಕರ್ಯಾರೋ ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದು ಸಿಟ್ಟು ಮಾಡಿಕೊಂಡು ಒಂದು ಚೀಲ ಹುಣಸೇಹಣ್ಣನ್ನು ಹೊತ್ತುಕೊಂಡು ಅದನ್ನು ಮಾರುತ್ತಾ ಕೇರಳ ತಲುಪಿ ರಾಜಾ ರವಿವರ್ಮ ಇದ್ದ ಮನೆಗೆ ಹೋಗಿದ್ದರಂತೆ. ಅಲ್ಲಿ ಹೋಗಿ ಬಾಗಿಲು ತಟ್ಟಿದಾಗ ಯಾರೋ ಬಾಗಿಲು ತೆರೆದರಂತೆ. ರವಿವರ್ಮ ಹುಡುಗ ಚೆನ್ನಾಗಿದ್ದಾನೆ ಎಂದು ದೀಪಧಾರಿಯ ಕೆಲಸ ಕೊಟ್ಟನಂತೆ. ಅವನು ಚಿತ್ರ ಬರೆಯುವಾಗ ದೀಪ ಹಿಡಿದು ನಿಲ್ಲುವುದು ನನ್ನ ಅಜ್ಜನ ಕೆಲಸವಾಗಿತ್ತಂತೆ. ನನ್ನ ಅಜ್ಜ ಬ್ರಾಹ್ಮಣರು ಎಂದು ಗೊತ್ತಾದ ಮೇಲೆ ಪುರೋಹಿತರಾಗಿ ಕೆಲಸ ಮಾಡಲು ಬೇಕಿರುವ ವಿದ್ಯೆಯನ್ನೂ ಕಲಿಯಲು ಅವಕಾಶ ಮಾಡಿಕೊಟ್ಟು ಪುರೋಹಿತರನ್ನಾಗಿ ಮಾಡಿದರಂತೆ. ಅಲ್ಲಿ ಜಾನಕಿ ಎಂಬಾಕೆಯನ್ನು ನನ್ನ ಅಜ್ಜ ಕೂಡಿಕೆ ಮಾಡಿಕೊಂಡು ಆಕೆಯಿಂದ ಒಂದು ಮಗುವಾಗಿತ್ತಂತೆ. ನನ್ನ ಅಜ್ಜಿಯನ್ನು ಮದುವೆ ಮಾಡಿಸಿದ್ದೂ ಈಕೆಯೇ ಅಂತೆ. ನನ್ನ ಅಜ್ಜ ಈಕೆಯನ್ನು ಮ್ಯಾಜಿಸ್ಟ್ರೇಟರ ಮಗಳು ಎಂದು ಹೊಗಳುತ್ತಿದ್ದರು.

ನಮ್ಮ ವೆಂಕಟೇಶನೂ ಬದುಕಿದ್ದರೆ ನಮ್ಮ ಅಜ್ಜ ಮಾಡಿದ ಕೆಲಸವನ್ನೇ ಕೇರಳದಲ್ಲಿ ಮಾಡುತ್ತಿದ್ದ ಅನಿಸುತ್ತದೆ.

ಅಣ್ಣಪ್ಪ ನಾಯಕನ ಕೇಕೆ

ನಾವು ದೊಡ್ಡವರಾಗುತ್ತಿದ್ದಂತೆ ನಮ್ಮ ಅಪ್ಪ ಕೆರೆಕೊಪ್ಪ ಬಿಟ್ಟು ಬೇಗವಳ್ಳಿ ಎಂಬ ಊರಿಗೆ ಬಂದರು. ಇದು ಕೆರಕೊಪ್ಪಕ್ಕಿಂತ ದೊಡ್ಡ ಊರು. ನಾವು ಸ್ಕೂಲಿಗೆ ಹೋಗುವುದಕ್ಕೂ ಅನುಕೂಲವಾಗುತ್ತಿತ್ತು. ಅಲ್ಲಿಯೂ ಶಾನುಬೋಗಿಕೆಯನ್ನು ಮುಂದುವರಿಸಿದರು. ಆಗ ಅನೇಕ ರೀತಿಯ ಅನುಭವಗಳು ನನಗಾದುವು. ಒಬ್ಬ ಶಾನುಭೋಗ ಆಗಿದ್ದರೆ ಆತ ಹಳ್ಳಿಯಲ್ಲಿ ಬಹಳ ಮುಖ್ಯ ವ್ಯಕ್ತಿ. ಇನ್ನೊಬ್ಬ ಮುಖ್ಯ ವ್ಯಕ್ತಿ ಪಟೇಲ. ಆ ಊರಿನ ಪಟೇಲರು ಅಣ್ಣಪ್ಪ ನಾಯಕ ಎಂಬವರು. ಅಣ್ಣಪ್ಪ ನಾಯಕ ಒಂದು ಕೇಕೆ ಹಾಕಿದರೆ ಅದು ಮೈಲುಗಟ್ಟಲೆ ಸುತ್ತಳತೆಯಲ್ಲಿ ಕೇಳಿಸುತ್ತಿತ್ತು. ಅಣ್ಣಪ್ಪ ನಾಯಕ ತನ್ನ ಅಧಿಕಾರವನ್ನು ಸ್ಥಾಪಿಸಿದ್ದೇ ಈ ಕೇಕೆಯ ಮೂಲಕ ಎನಿಸುತ್ತದೆ. ಈ ಅಣ್ಣಪ್ಪ ನಾಯಕ ಈಡಿಗ ಜಾತಿಯವರು. ಶಾನುಬೋಗರಾಗಿದ್ದ ನಮ್ಮ ಅಪ್ಪ ಮತ್ತು ಅಣ್ಣಪ್ಪನಾಯಕರ ಮಧ್ಯೆ ಬಹಳ ಒಳ್ಳೆಯ ಹೊಂದಾಣಿಕೆ ಇತ್ತು. ವರ್ಷಕ್ಕೊಮ್ಮೆ ಜಮಾ ಬಂದಿ ನಡೆಯೋದು. ಈ ಜಮಾ ಬಂದಿ ಅಂದರೆ ನಮ್ಮ ಅಮ್ಮನಿಗೆ ಪತ್ರೊಡೆ ಮಾಡುವ ಕೆಲಸ. ಊರಿನಲ್ಲಿ ಎಲ್ಲೆಲ್ಲಿ ಕೆಸುವಿನ ಸೊಪ್ಪಿದೆ ಎಂದು ಹುಡುಕಿ. ಅದನ್ನು ಹೆಚ್ಚಿ ಅದಕ್ಕೆ ಬೇಕಾದ ಪದಾರ್ಥ ಎಲ್ಲಾ ಹಾಕಿ ಬೇರೇ ಹೆಂಗಸರನ್ನೂ ಸೇರಿಸಿ ಜಮಾ ಬಂದಿಗೆ ಸೇರಿದ ನೂರಾರು ಜನರಿಗೆ ತಿನ್ನಲು ಸಾಕಾಗುವಷ್ಟು ಪತ್ರೊಡೆ ಮಾಡುತ್ತಿದ್ದರು.

ಜಮಾಬಂದಿ ಅಂದರೆ ಒಂದು ರೀತಿ ಅಸೆಂಬ್ಲಿ ಇದ್ದ ಹಾಗೆ. ಅಮಲ್ದಾರರೂ ಬರುತ್ತಿದ್ದರು. ಅಮಲ್ದಾರರು ಅಂದರೆ ಇರೋ ಚಿತ್ರ ಏನು ಅಂದರೆ ಆ ಪಿಕ್ ಹ್ಯಾಟ್. ಬಿಸಿಲಿಗೆ ಅಂತ ಹಾಕಿಕೊಳ್ಳುವ ಹ್ಯಾಟ್ ಅದು. ಹಿಂದೆ ಎಲ್ಲರೂ ಅಂದರೆ ಬ್ರಿಟಿಷರೂ ಅದನ್ನು ಹಾಕಿಕೊಳ್ಳುತ್ತಿದ್ದರು. ಆ ಕಾಲದಲ್ಲಿ ನನಗಿದ್ದ ದೊಡ್ಡ ಆಸೆ ಏನಪ್ಪಾ ಅಂದರೆ ಅಂಥಾ ಹ್ಯಾಟ್ ಹಾಕಿಕೊಳ್ಳುವ ಮನುಷ್ಯ ನಾನಾಗಬೇಕು ಅನ್ನೋದು. ಆಗ ಅಮ್ಮ ನೀನೇನಾಗುತ್ತೀಯ ಎಂದು ಕೇಳಿದರೆ ಅಮಲ್ದಾರನಾಗ್ತೀನಿ ಎಂದು ಉತ್ತರ ಕೊಡುತ್ತಿದ್ದೆ.

ಅಮಲ್ದಾರರ ಉಪಸ್ಥಿತಿಯಲ್ಲಿ ಈ ಜಮಾಬಂದಿ ನಡೆಯುತ್ತಿತ್ತು. ನಮ್ಮ ಅಪ್ಪ ಲೆಕ್ಕದಲ್ಲಿ ಬಹಳ ಜೋರು. ಅವರು ಸ್ವತಃ ಓದಿ ಓದಿ ಅಸ್ಟ್ರಾನಮಿಯನ್ನೂ ಅರ್ಥ ಮಾಡಿಕೊಳ್ಳುತ್ತಿದ್ದರು. ಅವರು ನಕ್ಷತ್ರಗಳ ಚಲನೆಯ ವೈಜ್ಞಾನಿಕ ವಿವರಗಳನ್ನೂ ತಿಳಿದಿದ್ದರು. ಇದು ಕೇವಲ ಪಂಚಾಂಗ ವಾಚನದಿಂದ ಸಿದ್ಧಿಸಿದ ವಿದ್ಯೆಯಲ್ಲ. ಅವರು ಪಂಚಾಂಗದ ತಪ್ಪುಗಳನ್ನು ಕಂಡು ಹಿಡಿಯುವಷ್ಟು ಈ ವಿದ್ಯೆಯನ್ನು ಅರಿತಿದ್ದರು. ಫ್ರಾನ್ಸ್ ನಿಂದ ನಕ್ಷತ್ರಾದಿ ಗ್ರಹಗಳ ಚಲನೆಯ ವಿವರ ತರಿಸಿಕೊಂಡು, ಆಧುನಿಕ ಪಂಚಾಂಗಗಳನ್ನು ಪರಾಮರ್ಶಿಸಿ ಗ್ರಹಣದ ಸಮಯವನ್ನು ಸರಿಯಾಗಿ ಗಣಿಸುತ್ತಿದ್ದರು. ಇದನ್ನವರು ಉಳಿದ ಬ್ರಾಹ್ಮಣರಿಗೆ ಹೇಳುತ್ತಿದ್ದುದೂ ಚೆನ್ನಾಗಿಯೇ ಇರುತ್ತಿತ್ತು – ‘ನಿಮ್ಮ ಧರ್ಮಕಾರ್ಯಕ್ಕೆಲ್ಲಾ ನಿಮ್ಮ ನಿಮ್ಮ ಪಂಚಾಂಗವನ್ನೇ ಇಟ್ಟುಕೊಳ್ಳಿ. ನಿಜ ಬೇಕೆನಿಸಿದರೆ ಆಧುನಿಕ ಪಂಚಾಂಗ ನೋಡಿ’. ಕಾಲಾನುಕಾಲದಲ್ಲಿ ಆದ ಅನೇಕ ಬದಲಾವಣೆಗಳನ್ನು ಒಳಗೊಳ್ಳುವುದರಲ್ಲಿ ನಮ್ಮ ಜ್ಯೋತಿಷ್ಯಾಸ್ತ್ರ ಸೋತಿದೆ. ಇದನ್ನವರು ಅರಿತಿದ್ದರು.

ನಮ್ಮಪ್ಪನ ಹಾಗೆಯೇ ಆಧುನಿಕವಾಗಿ ಯೋಚನೆ ಮಾಡಿ ಪಂಚಾಂಗದಲ್ಲಿ ತಿದ್ದುಪಡಿಗಳನ್ನು ಪ್ರಸ್ತಾಪಿಸಿದವರೊಬ್ಬರ ಕಥೆಯನ್ನು ಆಮೇಲೆ ಕೇಳಿದೆ. ಅವರು ಗೋಕರ್ಣದವರು. ಅವರು ಪಂಚಾಂಗದಲ್ಲಿ ಸೂಚಿಸಲಾಗಿರುವ ಕೆಲವು ವಿದ್ಯಮಾನಗಳನ್ನು ತೋರಿಸಿ ಇವೆಲ್ಲಾ ಹೀಗೆ ನಡೆಯುವುದಿಲ್ಲ ಎಂದು ವಾದಿಸಿ ಅವುಗಳ ನಿಜವಾದ ಸಮಯವನ್ನು ಸೂಚಿಸುವ ಪಂಚಾಂಗವನ್ನು ಮಾಡಿ ಅವರು ಮಠದಿಂದ ಬಹಿಷ್ಕೃತರಾಗಿಬಿಟ್ಟರಂತೆ. ನಮ್ಮ ಪಂಚಾಂಗವನ್ನು ಇವನು ಹಾಳು ಮಾಡಿದ ಎಂದು ಮಠದವರು ಬಹಿಷ್ಕಾರ ಹಾಕಿದ್ದರಂತೆ. ಅವರನ್ನು ನಾನು ಗೋಕರ್ಣದಲ್ಲಿ ನಮ್ಮಪ್ಪನ ಶ್ರಾದ್ಧ ನಡೆಸುವ ಸಂದರ್ಭದಲ್ಲಿ ಭೇಟಿಯಾದೆ.

ಕ್ರಾಪು ತಲೆಯು ನವೀನ ಜಗದ ಯುಗದ ಕೇತನ

ನನಗೆ ಚೌಲ ಆಗಿದ್ದು ನೆನಪಿದೆ. ಮೊಟ್ಟ ಮೊದಲನೇ ಸಾರಿ ಮಕ್ಕಳ ಕೂದಲನ್ನು ಕತ್ತರಿಸುವುದಕ್ಕೆ ಚೌಲ ಎನ್ನುತ್ತಾರೆ. ಚೌಲ ಕರ್ಮ ಆಗುವವರೆಗೂ ಮಕ್ಕಳು ಕೂದಲನ್ನು ಕತ್ತರಿಸದೆ ಉದ್ದಕ್ಕೆ ಬಿಟ್ಟುಕೊಂಡಿರುತ್ತಾರೆ. ಅಕ್ಷರಾಭ್ಯಾಸ ಆಗುವುದಕ್ಕೆ ಮೊದಲು ಇಲ್ಲವೇ ನಂತರ ಸುಮಾರು ಐದಾರು ವರ್ಷದ ಹೊತ್ತಿಗೆ ಈ ಚೌಲ ಕರ್ಮ ಮಾಡುತ್ತಾರೆ. ಇದು ನನಗೆ ನೆನಪಿದೆ. ಆಗೆಲ್ಲಾ ನಮ್ಮ ಮನೆಗಳಿಗೇ ಕ್ಷೌರಿಕರು ಬರುತ್ತಿದ್ದರು. ನನ್ನ ಚೌಲ ಕರ್ಮಕ್ಕೆ ಬರಬೇಕಾಗಿದ್ದ ಕ್ಷೌರಿಕ ಶುಭ್ರವಾದ ಬಿಳಿ ಬಟ್ಟೆ ಧರಿಸುತ್ತಿದ್ದ ಎಂದು ನೆನಪು. ಅವನಿಗೊಂದು ಕ್ರಾಪ್ ಕೂಡಾ ಇತ್ತು.

ಆ ಕಾಲದಲ್ಲಿ ಯಾರಾದರೂ ಕ್ರಾಪ್ ಬಿಟ್ಟಿದ್ದರೆ ಅವರಿಗೂ ನಗರಕ್ಕೂ ಯಾವುದೋ ಸಂಬಂಧವಿದೆ ಎಂದರ್ಥ. ಕ್ರಾಪಿಗೆ ಈಗ ಯಾವ ಅರ್ಥವೂ ಇಲ್ಲ. ಹಿಂದೆ ಇದಕ್ಕೆ ಬಹಳ ದೊಡ್ಡ ಸಾಂಕೇತಿಕ ಅರ್ಥವಿತ್ತು. ಅದನ್ನು ಮೊದಲು ಗ್ರಹಿಸಿದವರು ಅಡಿಗರು. ‘ಕ್ರಾಪು ತಲೆಯು ನವೀನ ಜಗದ ಯುಗದ ಕೇತನ’ ಅಂತ ಅವರು ಬರೀತಾರೆ. ಬ್ರಾಹ್ಮಣ ಹುಡುಗರಿಗೆ ಕ್ರಾಪು ತಲೆ ಒಂದು ಬಾವುಟವೇ ಸರಿ. ಯಾಕೆಂದರೆ ಕ್ರಾಪು ಬಿಟ್ಟರೆ ಅವನೆಲ್ಲೋ ಸ್ವಲ್ಪ ಬ್ರಾಹ್ಮಣಿಕೆಯಿಂದ ದೂರವಾಗುತ್ತಿದ್ದಾನೆ, ಮಡಿವಂತಿಕೆಯಿಂದ ದೂರವಾಗುತ್ತಿದ್ದಾನೆ ಎಂದರ್ಥ.

ನಮ್ಮ ಹಳ್ಳಿಯಲ್ಲಿರುವವರೆಲ್ಲಾ ಸಾಮಾನ್ಯವಾಗಿ ಜುಟ್ಟು ಬಿಟ್ಟವರು. ಆದರೆ ಕ್ಷೌರಿಕ ಮಾತ್ರ ಕ್ರಾಪು ಬಿಟ್ಟಿದ್ದ. ನನ್ನ ಚೌಲಕ್ಕೆ ಅವನೇ ಬೇಕು ಅಂತ ನಾನು ಹಟ ಮಾಡಿದ್ದು ನನಗೆ ಚೆನ್ನಾಗಿ ನೆನಪಿದೆ. ಅತ್ತೂ ಕರೆದು ಇನ್ಯಾರನ್ನಾದರೂ ಕರೆದರೆ ಅವನ ಹತ್ತಿರ ಚೌಲ ಮಾಡಿಸಿಕೊಳ್ಳುವುದಿಲ್ಲ ಎಂದು ಹಠ ಮಾಡಿದ್ದೆ. ಕೊನೆಗೂ ಅವನೇ ಬಂದ. ಚೌಲ ಆಯಿತು. ಕ್ರಾಪ್ ಬಿಡಿಸಿಕೊಂಡೆ.
ನನ್ನ ಅಪ್ಪ ಕೂಡಾ ಕ್ರಾಪು ಜುಟ್ಟಿನ ಮಧ್ಯೆ ಹೋರಾಡುತ್ತಿದ್ದವರು. ನಮ್ಮ ಅಜ್ಜ ವೈದಿಕ ಬ್ರಾಹ್ಮಣ. ಅವರು ಅಲ್ಲಿ ಇಲ್ಲಿ ಹೋಮ, ಹವನ, ಹಬ್ಬ ಮಾಡಿಸುತ್ತಾ ಇಲ್ಲವೇ ಸತ್ಯನಾರಾಯಣ ಪೂಜೆ ಮಾಡಿಸುವುದು, ವ್ರತ ಮಾಡಿಸುವುದಕ್ಕೆಲ್ಲಾ ಹೋಗುತ್ತಿದ್ದರು. ಅವರು ಅಂಗಿಯನ್ನೂ ಹಾಕುತ್ತಿರಲಿಲ್ಲ. ಅವರು ಒಂದು ವಸ್ತ್ರ ಹೊದ್ದುಕೊಳ್ಳುತ್ತಿದ್ದರು. ನನ್ನ ಅಪ್ಪ ಲೌಕಿಕ ಬ್ರಾಹ್ಮಣರು. ಲೌಕಿಕ ಬ್ರಾಹ್ಮಣರು ಅಂದರೆ ಇವರು ಶುಭಾಶುಭ ಸಂದರ್ಭಗಳಿಗೆಲ್ಲಾ ಪುರೋಹಿತರೊಬ್ಬರನ್ನು ಕರೆಯಿಸಿಕೊಳ್ಳಬೇಕೇ ಹೊರತು ಅವರೇ ಪುರೋಹಿತರಲ್ಲ. ಲೌಕಿಕ ಬ್ರಾಹ್ಮಣರಾಗಿಬಿಟ್ಟಿದ್ದ ಅಪ್ಪ ಕ್ರಾಪ್ ಮಾಡಿಸಿಕೊಂಡಿದ್ದರು. ಇದೆಂಥಾ ಕ್ರಾಪ್ ಅಂದರೆ ಇದರ ಮರೆಯಲ್ಲೇ ಒಂದು ಸಣ್ಣ ಜುಟ್ಟೂ ಇರುತ್ತಿತ್ತು.

ನಾನು ನನ್ನ ಅಪ್ಪನ ಬೆಳವಣಿಗೆಯನ್ನು ನೋಡುವುದು ಈ ಕ್ರಾಪು ಜುಟ್ಟುಗಳ ಸಂಕೇತದಲ್ಲಿ. ಒಮ್ಮೊಮ್ಮೆ ಜುಟ್ಟು ದೊಡ್ಡದಾಗುತ್ತಿತ್ತು. ಒಮ್ಮೊಮ್ಮೆ ಕ್ರಾಪು ದೊಡ್ಡದಾಗುತ್ತಿತ್ತು. ಅವರ ಆಲೋಚನಾ ಕ್ರಮದ ಬದಲಾವಣೆಗಳು ಈ ಜುಟ್ಟು-ಕ್ರಾಪುಗಳಲ್ಲಿ ಯಾವುದು ದೊಡ್ಡದಾಗುತ್ತಿದೆ ಎಂಬುದರಲ್ಲಿ ಗೊತ್ತಾಗುತ್ತಿತ್ತು. ನನ್ನ ಹಾಗೆ ಬ್ರಾಹ್ಮಣರ ಕುಲದಲ್ಲೇ ಹುಟ್ಟಿ ಬಂದವನಿಗೆ ಹೊರಗಡೇ ಇಲ್ಲದಿದ್ದರೂ ಒಳಗಡೆ ಒಂದು ಜುಟ್ಟಿರುತ್ತೆ. ನಾನು ನನ್ನ ಒಳಜುಟ್ಟನ್ನು ಹುಡುಕುತ್ತಲೇ ಇರುತ್ತೇನೆ. ಅದು ಇನ್ನೂ ಎಲ್ಲಾದರೂ ಉಳಿದುಕೊಂಡಿರಬಹುದೇ ಎಂದು….

ಇವೆಲ್ಲಾ ಸಾಮಾನ್ಯವಾಗಿರುವಂಥದ್ದು. ಆದರೆ ಒಬ್ಬ ಬರಹಗಾರನಿಗೆ ಮುಖ್ಯವಾದುದರಿಂದ ನಾನಿದನ್ನು ಹೇಳುತ್ತಿದ್ದೇನೆ. ನಮ್ಮ ಅಪ್ಪನಲ್ಲೂ ಒಂದು ಮುಚ್ಚಿಟ್ಟುಕೊಂಡ ಕ್ರಾಪು ಹಾಗೇ ಮುಚ್ಚಿಟ್ಟುಕೊಂಡ ಜುಟ್ಟಿತ್ತು. ಆದರೆ ಅಜ್ಜನಿಗೆ ಜುಟ್ಟು ಮಾತ್ರ ಇತ್ತು.

ಅಪ್ಪನ ಇಸ್ಪೀಟು ಎಲೆಗಳು

ನನ್ನ ಅಜ್ಜ ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡಿನಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾಗಿದ್ದರು. ನನ್ನ ಅಜ್ಜನಿಗೆ ಪೂಜೆಯಲ್ಲಿ ಸಹಾಯ ಮಾಡುತ್ತಾ ನನ್ನ ಅಪ್ಪ ಬೆಳೆದರು.

ಈ ದೇವಸ್ಥಾನಕ್ಕೆ ಮೂಡಿಗೆರೆ, ಚಿಕ್ಕಮಗಳೂರುಗಳಿಂದೆಲ್ಲಾ ಭಕ್ತಾದಿಗಳು ಬರುತ್ತಿದ್ದರು. ಈ ಭಕ್ತಾದಿಗಳ ಮೂಲಕವೇ ನನ್ನ ಅಪ್ಪ ಕದ್ದು ಮುಚ್ಚಿ ಇಂಗ್ಲಿಷ್ ಪುಸ್ತಕಗಳನ್ನು ತರಿಸಿಕೊಳ್ಳುತ್ತಿದ್ದರು. ಈ ಪುಸ್ತಕಗಳನ್ನು ಓದಿ ಅವರು ಅರ್ಚಕ ವೃತ್ತಿಯಲ್ಲಿರುತ್ತಲೇ ಲಂಡನ್ ಮೆಟ್ರಿಕ್ಯುಲೇಶನ್ ಪರೀಕ್ಷೆ ಪಾಸಾದರು. ಆ ದಿನದ ಕೆಲವು ಘಟನೆಗಳನ್ನು ನಾನು ನನ್ನ ಅಜ್ಜನ ಬಾಯಿಂದ ಮತ್ತು ಅಪ್ಪನ ಬಾಯಿಂದ ಕೇಳಿದ್ದೇನೆ. ಕೆಲವನ್ನು ನನಗೆ ಅಪ್ಪನ ಗೆಳೆಯರು ಹೇಳಿದ್ದರು.

ಅಪ್ಪ ಗುಟ್ಟಾಗಿ ಲಂಡನ್ ಮೆಟ್ರಿಕ್ಯುಲೇಷನ್ ಪಾಸ್ ಮಾಡಿದ್ದರ ಹಿಂದೆಯೇ ಅವರಿಗೆ ಮದುವೆಯಾಯಿತು. ಮದುವೆಯ ನಂತರ ಅಪ್ಪ ಗೋಣಿಬೀಡು ಬಿಟ್ಟು ಕಾಶಿಗೆ ಹೋದರು. ಆ ಕಾಲದಲ್ಲಿ ಹುಡುಗಿಯರಿಗೆ ಮೈನೆರೆಯುವ ಮೊದಲೇ ಮದುವೆ ಮಾಡಿಬಿಡುತ್ತಿದ್ದರು. ಅವರು ಋತುಮತಿಯರಾಗುವ ತನಕವೂ ತವರು ಮನೆಯಲ್ಲೇ ಇರುತ್ತಿದ್ದರು. ಹೀಗಾಗಿ ಅಪ್ಪನಿಗೆ ಕಾಶಿಗೆ ಹೋಗುವುದಕ್ಕೆ ಮದುವೆ ಅಡ್ಡಿಯಾಗಲಿಲ್ಲ.

ಕಾಶಿಯಲ್ಲಿ ಒಂದು ಛತ್ರದಲ್ಲಿ ಉಳಿದುಕೊಂಡು ದಾಸೋಹದ ಅನ್ನದಲ್ಲೇ ಹೊಟ್ಟೆ ತುಂಬಿಸಿಕೊಂಡು ಬ್ರಾಹ್ಮಣ್ಯಕ್ಕೆ ಅಗತ್ಯವಾದ ಮಂತ್ರ ಮುಂತಾದುವುಗಳನ್ನು ಕಲಿತುಕೊಂಡರು. ಈ ಕಾಲದಲ್ಲಿ ಅಪ್ಪನಿಗೊಬ್ಬ ಗೆಳೆಯನಿದ್ದ. ಆತನೂ ಅಪ್ಪನಂತೆಯೇ ಊರು ಬಿಟ್ಟು ಕಾಶಿಗೆ ಬಂದಾತ. ಈತ ಕಾಶಿ ಬಿಟ್ಟ ಮೇಲೆ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದಾನೆ ಎಂದು ಅಪ್ಪ ಹೇಳುತ್ತಿದ್ದರು. ಎಷ್ಟೋ ವರ್ಷದ ನಂತರ ಈತನನ್ನು ನಾನು ನೋಡಿದೆ. ಆ ಕಾಲದಲ್ಲಿ ಪೊಲೀಸರು ತೊಡುತ್ತಿದ್ದ ಚಡ್ಡಿಯಲ್ಲಿ ಆತನನ್ನು ನೋಡಿದಾಗ ನನ್ನ ಅಪ್ಪನೂ ಈತನೂ ಒಂದು ಕಾಲದಲ್ಲಿ ಗೆಳೆಯರಾಗಿದ್ದವರೇ ಎಂಬ ಸಂಶಯವೂ ಕಾಡಿತ್ತು.

ಕಾಶಿಯಲ್ಲಿದ್ದ ನನ್ನ ಅಪ್ಪ ಆಮೇಲೆ ದೆಹಲಿಗೆ ಬಂದರಂತೆ. ಆದರೆ ಅವರು ತಮ್ಮ ದೆಹಲಿ ದಿನಗಳ ಕತೆಯನ್ನು ಯಾವತ್ತೂ ಹೇಳಿರಲಿಲ್ಲ. ಆದರೆ ಆಗೀಗ ಭಾರತ ವಿಭಜನೆಯ ಮಾತು ಬಂದಾಗ ‘ನಾನು ದಿಲ್ಲಿಯಲ್ಲಿದ್ದಾಗ ಜಿನ್ನಾ ತನ್ನ ಮನೆಯ ಎದುರು ನಿಂತು ಹಲ್ಲುಜ್ಜಿಕೊಳ್ಳುತ್ತಿದ್ದಾಗ ನೋಡುತ್ತಿದ್ದೆ’ ಎನ್ನುತ್ತಿದ್ದರು. ಅಪ್ಪನ ಮನೋಲೋಕದಲ್ಲಿ ಮನೆಯ ಹೊರಗೆ ನಿಂತು ಬೀದಿಯಲ್ಲಿ ಹೋಗುವವರಿಗೂ ಕಾಣುವಂತೆ ಹಲ್ಲುಜ್ಜಿಕೊಳ್ಳುವುದೆಂದರೆ ಅಸಂಸ್ಕೃತವಾದದ್ದು. ಅದನ್ನು ಅಪ್ಪ ಜಿನ್ನಾಗೆ ಅನ್ವಯಿಸಿ ಹೇಳುತ್ತಿದ್ದರು. ಅಪ್ಪ ಜಿನ್ನಾನನ್ನು ಈ ಸ್ಥಿತಿಯಲ್ಲಿ ನೋಡಿದ್ದರೇ ಎಂಬ ವಿಷಯದಲ್ಲಿ ನನಗೀಗಲೂ ಅನುಮಾನಗಳಿವೆ. ಏಕೆಂದರೆ ಜಿನ್ನಾ ಹೀಗಿರಲು ಸಾಧ್ಯವಿರಲಿಲ್ಲ. ಸಾಕಷ್ಟು ಶ್ರೀಮಂತನೂ ಅತ್ಯಂತ ಆಧುನಿಕನೂ ಆಗಿದ್ದ ಜಿನ್ನಾ ಮನೆಯ ಹೊರಗೆ ನಿಂತು ಹಲ್ಲುಜ್ಜುವುದನ್ನು ಕಲ್ಪಿಸಿಕೊಳ್ಳುವುದೂ ಕಷ್ಟವೇ. ಅದೇನೇ ಇದ್ದರೂ ನನ್ನ ಅಪ್ಪನ ದೃಷ್ಟಿಯಲ್ಲಿ ಮಾತ್ರ ಜಿನ್ನಾ ಇದ್ದದ್ದು ಹಾಗೆ.

ನನ್ನ ಅಪ್ಪ ಸಂಪೂರ್ಣವಾಗಿ ಆಟೋ ಡೈಡಾಕ್ಟ್. ಇಂಗ್ಲಿಷ್ ನಲ್ಲಿ ಆಟೋ ಡೈಡಾಕ್ಟ್ ಅಂದರೆ ಶಾಲೆಗೆ ಹೋಗದೇ ಕಲಿತವನು ಎಂದರ್ಥ. ನನ್ನ ಅಪ್ಪನೂ ಶಾಲೆಗೆ ಹೋಗದೇ ಕಲಿತ ಸ್ವಾಧ್ಯಾಯಿ. ಅವರು ಕೊನೆಯ ತನಕವೂ ಹಾಗೆಯೇ ಇದ್ದರು.

ನನ್ನ ಅಪ್ಪನಿಗೆ ಇಸ್ಪೀಟ್ ಆಡುವ ಹುಚ್ಚು ಬಹಳ. ಅಪ್ಪ ತೀರಿಕೊಂಡ ಮೇಲೆ ಅವರ ಗೆಳೆಯರೊಬ್ಬರು ಅವರ ಇಸ್ಪೀಟ್ ಹುಚ್ಚಿನ ಕುರಿತ ಒಂದು ಕತೆ ಹೇಳಿದ್ದರು. ಇದು ನಡೆದದ್ದು ನನ್ನ ಅಜ್ಜ ಗೋಣಿಬೀಡಿನಲ್ಲಿ ಅರ್ಚಕರಾಗಿದ್ದ ದಿನಗಳಲ್ಲಿ. ಗೋಣಿಬೀಡಿನ ಸುಬ್ರಹ್ಮಣ್ಯ ದೇವಸ್ಥಾನದ ಬದಿಯಲ್ಲೇ ಒಂದು ನದಿ ಇದೆ. ನದಿ ದಂಡೆಯಲ್ಲೊಂದು ಅಶ್ವತ್ಥದ ಮರವಿದೆ. ಅದರ ಕೆಳಗೆ ಕುಳಿತು ನನ್ನ ಅಪ್ಪ ಅವರ ಗೆಳೆಯರೊಂದಿಗೆ ಇಸ್ಪೀಟ್ ಆಡುತ್ತಿದ್ದರಂತೆ. ಹೀಗೆ ಒಂದು ದಿನ ಇಸ್ಪೀಟಿನ ಗುಂಗಿನಲ್ಲಿ ಮುಳುಗಿದ್ದಾಗ ನಡೆದ ಘಟನೆಯನ್ನು ಅಪ್ಪನ ಗೆಳೆಯರು ವಿವರಿಸಿದ್ದು ಹೀಗೆ…

”ನಾವೆಲ್ಲಾ ಕೂತು ಟ್ವೆಂಟಿ ಎಯ್ಟ್ ಆಡುತ್ತಿದ್ದೆವು, ಟ್ವೆಂಟಿ ಎಯ್ಟ್ ಎಂದರೆ ರಮ್ಮಿಯಂತೆ ಬರೇ ಅದೃಷ್ಟದ ಆಟ ಅಲ್ಲ. ಪ್ರತಿಯೊಬ್ಬರ ಮುಖವನ್ನೂ ಗಮನಿಸಿ ಅವರ ಕೈಯಲ್ಲಿ ಏನು ಎಲೆ ಇರಬಹುದು ಎಂಬುದನ್ನು ಊಹಿಸಿ ನಮ್ಮ ಕೈಯಲ್ಲಿರುವ ಎಲೆಯನ್ನು ಕೆಳಗೆ ಬಿಡಬೇಕು. ನಿಮ್ಮ ಅಪ್ಪ ಹೀಗೆ ಕೆಳಗೆ ಬಿಡಬೇಕಾದ ಎಲೆ ಯಾವುದೆಂಬ ಯೋಚನೆಯಲ್ಲಿದ್ದಾಗ ಒಬ್ಬ ಹುಡುಗ ಓಡಿ ಬಂದು ‘ಮೂಡಿಗೆರೆ ಸಾಹುಕಾರರು ಪೂಜೆ ಮಾಡಿಸುವುದಕ್ಕೆ ಬಂದಿದ್ದಾರೆ’ ಎಂದ.”

“ಅವತ್ತು ನಿಮ್ಮ ಅಜ್ಜ ಇರಲಿಲ್ಲ. ಬ್ರಾಹ್ಮಣಾರ್ಥಕ್ಕೆ ಹಳ್ಳಿಗೆ ಹೋಗಿದ್ದರು. ಪೂಜೆಯ ಕೆಲಸ ಅವತ್ತು ನಿಮ್ಮಪ್ಪನದ್ದೇ. ಇಸ್ಪೀಟ್ ಆಡುತ್ತಿದ್ದ ಅವರು ಎಲೆಯನ್ನು ಕೆಳಗಿಟ್ಟು ಉಟ್ಟ ಪಂಚೆಯನ್ನು ಎತ್ತಿ ಕಟ್ಟಿ ಓಡಿದರು. ಸ್ನಾನ ಮಾಡದೆ ಮೈಲಿಗೆಯಲ್ಲೇ ದೇವಸ್ಥಾನದೊಳಕ್ಕೆ ನುಗ್ಗಿ ಸುಬ್ರಹ್ಮಣ್ಯ ಸ್ವಾಮಿಗೆ ಅರ್ಚನೆ ಮಾಡಿ ಹೊರಬಂದು ಮತ್ತೆ ಆಟಕ್ಕೆ ಕುಳಿತರು.”

ಈ ಕತೆಯ ಅಂತ್ಯವನ್ನು ಅದ್ಭುತವೊಂದರ ವರ್ಣನೆಯಂತೆ ಹೇಳಿದ್ದರು. ”ನಿಮ್ಮ ಅಜ್ಜ ಬಂದು ದೇವಸ್ಥಾನದೊಳಕ್ಕೆ ಹೋದರೆ ಅಲ್ಲೊಂದು ಹಾವು ಹೆಡೆಬಿಚ್ಚಿ ನಿಂತಿತ್ತು.”.

ನನ್ನ ಅಪ್ಪ ಸುಬ್ರಹ್ಮಣ್ಯ ಸ್ವಾಮಿಗೆ ಮೈಲಿಗೆಯಲ್ಲಿ ಪೂಜೆ ಮಾಡಿದ್ದರಿಂದ ಹೀಗಾಯಿತು ಎಂದು ಅವರ ಗೆಳೆಯ ಹೇಳಿದರು. ಈ ಕತೆಯನ್ನು ಅವರ ಗೆಳೆಯರ ಬಾಯಲ್ಲಷ್ಟೇ ಕೇಳಿದನೇ ಹೊರತು ಅಪ್ಪನ ಬಾಯಿಂದ ಈ ಘಟನೆಗೆ ಸಂಬಂಧಿಸಿದ ಯಾವ ಸಣ್ಣ ಸೂಚನೆಗಳೂ ಹೊರಬಂದಿರಲಿಲ್ಲ. ಈ ಕತೆ ಗೋಣಿಬೀಡಿನ ಸುಬ್ರಹ್ಮಣ್ಯ ಸ್ವಾಮಿಯ ಮಹಿಮೆಯನ್ನು ಹೇಳುವುದಕ್ಕೆ ಎಲ್ಲರೂ ಬಳಸುತ್ತಿದ್ದ ಕತೆ. ನನಗೆ ಇದರಲ್ಲಿ ಮುಖ್ಯವಾಗಿದ್ದು ನನ್ನ ಅಪ್ಪ ಮೈಲಿಗೆಯಲ್ಲಿ ಹೋಗಿ ಅಲ್ಲಿ ಪೂಜೆ ಮಾಡಿದ್ದು ಮತ್ತು ಅವರಿಗೆ ಇದ್ದ ಇಸ್ಪೀಟಿನ ಹುಚ್ಚಿನ ತೀವ್ರತೆ.

**********************

ಅಪ್ಪನ ಇಸ್ಪೀಟ್ ಆಟದ ಹುಚ್ಚಿಗೆ ಸಂಬಂಧಿಸಿದ ಮತ್ತೊಂದು ಕಥೆ ಇದೆ. ನನ್ನ ತಾಯಿಯನ್ನು ಅವರು ಮದುವೆಯಾದ ನಂತರ ನಡೆದದ್ದು. ಇಸ್ಪೀಟ್ ಆಡುತ್ತಿರುವಾಗಲೇ ಅವರು ವಾಲ್ಟರ್ ಸ್ಕಾಟ್ ನ ‘ಐವಾನ್ ಹೋ’ (IvanHoe) ಎಂಬ ಪುಸ್ತಕವನ್ನೂ ಓದುತ್ತಿದ್ದರು. ಈ ಕತೆಯಲ್ಲಿ ಬಹಳ ಸಾವುಗಳು ಸಂಭವಿಸುತ್ತವೆ. ಈ ಸಾವುಗಳ ಗುಂಗಿನಲ್ಲಿ ಮುಳುಗಿರುವಾಗ ಅಪ್ಪನ ಜತೆ ಇಸ್ಪೀಟ್ ಆಡುತ್ತಿದ್ದ ಅವರ ಸ್ನೇಹಿತರೊಬ್ಬರು ಅಲ್ಲಿಯೇ ಕುಸಿದು ಬಿದ್ದು ಸತ್ತು ಹೋಗಿಬಿಟ್ಟರಂತೆ. ಈ ಘಟನೆ ಅಪ್ಪನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಇದು ನೆನಪಾದಾಗಲೆಲ್ಲಾ ಅವರಿಗೆ ಮಂಕು ಕವಿಯುತ್ತಿತ್ತು. ಅಥವಾ ಈಗ ಮನೋವೈಜ್ಞಾನಿಕವಾಗಿ ವಿವರಿಸಲಾಗುವ ಖಿನ್ನತೆ ಅವರನ್ನು ಆವರಿಸುತ್ತಿತ್ತು. ಹೀಗೆ ಅವರಿಗೆ ಮಂಕು ಕವಿದಾಗಲೆಲ್ಲಾ ಅವರನ್ನು ಬಾವಿ ಕಟ್ಟೆಯಲ್ಲಿ ಕೂರಿಸಿ ನೀರು ಸೇದಿ ಸೇದಿ ಅವರ ತಲೆಗೆ ಸುರಿಯಬೇಕಾಗುತ್ತಿತ್ತೆಂದು ಅಮ್ಮ ಹೇಳುತ್ತಿದ್ದರು. ಅಪ್ಪನಿಗೆ ಹೀಗಾದಾಗ ಅವರು ಪೀಪಲ್ಸ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಖಿನ್ನತೆಯ ಕಾರಣದಿಂದ ಅವರು ಬಹಳ ದಿನ ಕೆಲಸಕ್ಕೆ ಹೋಗಿರಲಿಲ್ಲವಂತೆ. ತಲೆಯ ಮೇಲೆ ನೀರು ಸುರಿದದ್ದಕ್ಕೋ ಅಮ್ಮನ ಹರಕೆಗಳ ಕಾರಣಕ್ಕೋ ಅಪ್ಪ ಚೇತರಿಸಿಕೊಂಡರು.

ನಾನು ಗಣಿತ ಕಲಿಯಬೇಕು ಎಂಬುದು ಅಪ್ಪನ ಆಸೆ ಮತ್ತು ಒತ್ತಾಯಗಳೆರಡೂ ಆಗಿದ್ದವು. ಆದರೆ ನನಗೆ ಸಾಹಿತ್ಯ ಓದಬೇಕು ಎಂಬ ಆಸೆ. ಕೊನೆಗೆ ನಾನು ಸಾಹಿತ್ಯ ಓದುವುದನ್ನು ಅಪ್ಪ ಒಪ್ಪಿಕೊಂಡರು. ಆದರೆ ಈ ಒಪ್ಪಿಗೆಗೆ ಅವರದ್ದೊಂದು ಷರತ್ತು ಇತ್ತು. ಅದು ನಾನು ಯಾವತ್ತೂ ವಾಲ್ಟರ್ ಸ್ಕಾಟ್ ನ ಐವಾನ್ ಹೋ ಓದಬಾರದು ಎಂಬುದು!

ಕಾಲಲ್ಲಿ ಚಕ್ರ ಉದರದಲ್ಲಿ ಗೆಡ್ಡೆ

ಇನ್ನೊಂದು ನನಗೆ ನೆನಪಿರುವ, ಅವರು ಹೇಳುತ್ತಿದ್ದ ಘಟನೆಯೆಂದರೆ ಅವರು ದೆಹಲಿಯಲ್ಲಿ ಇನ್ಯಾವುದೋ ಒಂದು ಪರೀಕ್ಷೆ ಪಾಸಾಗಿ ರೈಲ್ವೇ ಸ್ಟೇಷನ್ ಮಾಸ್ಟರ್ ಕೆಲಸಕ್ಕೆ ಆಯ್ಕೆಯಾದದ್ದು. ಆದರೆ ಅವರ ಹೊಟ್ಟೆಯಲ್ಲಿದ್ದ ಜ್ವರಗೆಡ್ಡೆಯಿಂದಾಗಿ ಅವರಿಗೆ ಈ ಕೆಲಸ ಸಿಗಲಿಲ್ಲ. ಆ ಕಾಲದಲ್ಲಿ ಮಲೆನಾಡಿನ ಎಲ್ಲರಲ್ಲೂ ಒಂದು ಜ್ವರಗೆಡ್ಡೆ ಇರುತ್ತಿತ್ತು. ಇದೆಷ್ಟು ಸಹಜವಾಗಿ ವಿಷಯವಾಗಿತ್ತೆಂದರೆ ಗಂಡಸೆರಲ್ಲಾ ಹೊಟ್ಟೆಯೊಳಗೊಂದು ಜ್ವರಗೆಡ್ಡೆ ಇಟ್ಟುಕೊಂಡು ಬಸುರಿ ಹೆಂಗಸರಂತೆ ಕಾಣಿಸುತ್ತಿದ್ದರೂ ಗೆಡ್ಡೆ ಇದ್ದವರಿಗೂ ಅದನ್ನು ನೋಡುವವರಿಗೂ ಇದರ ಇರುವಿಕೆಯೇ ಗೊತ್ತಾಗುತ್ತಿರಲಿಲ್ಲ. ನಮ್ಮೂರಲ್ಲಿ ಆಗ ಗಂಡಸರೂ ನಡೆದು ಬರುವ ಹೊತ್ತಿನಲ್ಲಿ ಬಸುರಿ ಹೆಂಗಸರಂತೆ ಕಾಣಿಸುತ್ತಿದ್ದ ದಿನಗಳವು. ಈ ಗೆಡ್ಡೆಗೆ ಕಾರಣವಾಗುತ್ತಿದ್ದ ಮಲೇರಿಯಾವನ್ನು ಭಾರೀ ಜ್ವರ ಎನ್ನತ್ತಿದ್ದರು. ಇದು ನಾಲ್ಕು ದಿವಸಗಳಿಗೊಮ್ಮೆ ಬರುವ ಜ್ವರ. ಈ ಜ್ವರವನ್ನೂ ಆ ಕಾಲದವರು ಬಹಳ ಸಹಜವಾಗಿ ಸ್ವೀಕರಿಸಿಬಿಟ್ಟಿದ್ದರು. ಯಾರನ್ನಾದರೂ ಕೆಲಸಕ್ಕೆ ಅಥವಾ ಮತ್ಯಾವುದಕ್ಕೋ ಹೋಗಿ ಕರೆದರೆ ಅವರು ತಮಗೆ ಜ್ವರ ಬರುವ ದಿನವಾಗಿದ್ದರೆ ‘ಅವತ್ತು ನನಗೆ ಜ್ವರ ಬರುತ್ತದೆ. ನಾನು ಬರುವುದಿಲ್ಲ’ ಎನ್ನುತ್ತಿದ್ದರು. ಭಾರೀ ಜ್ವರ ಬರುವುದೆಂದರೆ ಒಂದು ಪೂರ್ವ ನಿಗದಿತ ಭೇಟಿಯಂತೆ!

ನನ್ನ ಅಪ್ಪನಿಗೆ ರೈಲ್ವೇ ಸ್ಟೇಷನ್ ಮಾಸ್ಟರ್ ಕೆಲಸೇ ಸಿಗದೇ ಇದ್ದುದರಿಂದಲೋ ಏನೋ ಅವರು ಮತ್ತೆ ಗೋಣಿಬೀಡಿಗೇ ಬಂದರು. ಬಂದು ಇಲ್ಲಿ ಪೂಜೆ ಮಾಡುವ ಬದಲಿಗೆ ಪೋಸ್ಟ್ ಮಾಸ್ಟರ್ ಆದರು. ಆ ಮೇಲೆ ಅದನ್ನೂ ಬಿಟ್ಟು ಮುಂಬೈಗೆ ಹೋಗಿ ಅಕೌಂಟೆಂಟ್ ಆಗಿದ್ದರು. ಅದನ್ನೂ ಬಿಟ್ಟು ಮತ್ತೇನೋ ಕೆಲಸ ಮಾಡಿದರು. ಇದರ ಬಗ್ಗೆ ನನ್ನ ಅಜ್ಜ ಆಗಾಗ ಹೇಳುತ್ತಿದ್ದರು. ‘ನನ್ನ ಪಾದದಲ್ಲಿ ಚಕ್ರವಿದೆ. ನಿನ್ನ ಅಪ್ಪನ ಪಾದದಲ್ಲೂ ಒಂದು ಚಕ್ರವಿದೆ. ಅದು ನಿಂತಲ್ಲಿ ನಿಲ್ಲುವುದಕ್ಕೆ ಬಿಡುವುದಿಲ್ಲ. ನಮ್ಮನ್ನು ಓಡಾಡಿಸುತ್ತಲೇ ಇರುತ್ತದೆ.’ ಈ ಚಕ್ರ ನನ್ನ ಪಾದದಲ್ಲೂ ಇದೆ ಎಂಬುದು ಅಪ್ಪನ ಭಾವನೆಯಾಗಿತ್ತು. ‘ನೀನೂ ಬಹಳ ಓಡಾಡುತ್ತೀಯ’ ಎನ್ನುತ್ತಿದ್ದರು. ಈ ದೃಷ್ಟಿಯಲ್ಲಿ ನಾವೆಲ್ಲಾ ಚಕ್ರಧಾರಿಗಳು-ಕೈಯಲ್ಲಲ್ಲ ಕಾಲಿನಲ್ಲಿ!

ನನ್ನ ಅಪ್ಪನಿಗೊಂದು ಸ್ವಂತದ ಸಾಹಿತ್ಯ ಲೋಕವಿತ್ತು. ಇದರಲ್ಲಿ ಗೋಲ್ಡ್ ಸ್ಮಿತ್ ಮಹಾ ಲೇಖಕನೇ ಹೊರತು ಷೇಕ್ಸ್‌ಪಿಯರ್ ಅಲ್ಲ. ಗೋಲ್ಡ್ ಸ್ಮಿತ್ ಬರೆದ ವಿಕಾರ್ ವೇಕ್ ಫೀಲ್ಡ್ ಅವರ ದೃಷ್ಟಿಯಲ್ಲಿ ಮಹತ್ಕೃತಿ. ಬಹುಶಃ ಒಂದು ಕಾಲ ಘಟ್ಟದಲ್ಲಿ ಬಹಳಷ್ಟು ಮಂದಿ ಹೀಗೆಯೇ ಚಿಂತಿಸುತ್ತಿದ್ದರು ಎನಿಸುತ್ತದೆ. ಕುವೆಂಪು ಅವರಿಗೂ ಷೇಕ್ಸ್‌ಪಿಯರ್‌ಗಿಂತ ವರ್ಡ್ಸ್ ವರ್ತ್ ಮಹತ್ವದ ಕವಿ. ಏಕೆಂದರೆ ಅವರ ದೃಷ್ಟಿಯಲ್ಲಿ ವರ್ಡ್ಸ್ ವರ್ತ್ ದಾರ್ಶನಿಕ ಕವಿಯಾಗಿದ್ದರೆ ಷೇಕ್ಸ್‌ಪಿಯರ್ ಕೇವಲ ಸಂತೆಯ ಕವಿ.

ಅಪ್ಪ ಇಂಗ್ಲಿಷನ್ನು ತಾವೇ ಓದಿ ಕಲಿತವರು. ಇಂಗ್ಲಿಷ್‌ನ ಕುರಿತ ಅವರ ಆಸಕ್ತಿಗಳೂ ಕೂಡಾ ಕುತೂಹಲ ಹುಟ್ಟಿಸುವಂಥವು. ಅವರಿಗೆ ಪೀರಿಯಾಡಿಕ್ ಸೆನ್ಟೆನ್ಸ್‌ಗಳೆಂದರೆ ಇಷ್ಟ. ಈ ಪೀರಿಯಾಡಿಕ್ ಸೆನ್‌ಟೆನ್ಸ್‌ಗಳೆಂದರೆ ಅವು ಇಡೀ ಪುಟವನ್ನೂ ವ್ಯಾಪಿಸಿಕೊಂಡಿರಬಹುದು. ಡಾಕ್ಟರ್ ಜಾನ್ಸನ್‌ನ ಇಂಗ್ಲಿಷ್ ಹೀಗೇ ಇರುತ್ತಿತ್ತು. ಗೋಲ್ಡ್ ಸ್ಮಿತ್‌ನ ಇಂಗ್ಲಿಷ್ ಕೂಡಾ ಹೀಗೇ ಇರುತ್ತಿತ್ತು. ಎಡ್ಮಂಡ್ ಬರ್ಕ್‌ನ ಇಂಗ್ಲಿಷ್ ಕೂಡಾ ಇದೇ ಬಗೆಯದ್ದು. ಅವನ ಭಾಷಣವೊಂದನ್ನು ಅಪ್ಪ ನನಗೆ ಬಾಯಿಪಾಠ ಮಾಡಿಸಿದ್ದರು.

ಈ ಎಡ್ಮಂಡ್ ಬರ್ಕ್‌ಗೆ ಭಾರತದ ಇತಿಹಾಸದಲ್ಲೂ ಒಂದು ಸ್ಥಾನವಿದೆ. ಭಾರತದ ಗವರ್ನರ್ ಜನರಲ್ ಆಗಿದ್ದ ವಾರನ್ ಹೇಸ್ಟಿಂಗ್ಸ್‌ನ ಮೇಲಿದ್ದ ಆರೋಪಗಳ ಕುರಿತು ಇಂಗ್ಲೆಂಡ್‌ನ ಸಂಸತ್ತು ಒಂದು ವಿಚಾರಣೆ ನಡೆಸಿತು. ಬ್ರಿಟಿಷ್ ಆಧಿಪತ್ಯವನ್ನು ಸ್ಥಾಪಿಸುವುದಕ್ಕೆ ವಾರನ್ ಹೇಸ್ಟಿಂಗ್ಸ್ ಬಳಸಿದ ತಂತ್ರಗಳು ಮತ್ತು ಭ್ರಷ್ಟ ವಿಧಾನಗಳಿಗೆ ಸಂಬಂಧಿಸಿದ ಆರೋಪಗಳಿವೆ. ಇವನಿಗೂ ಮೊದಲಿದ್ದ ರಾಬರ್ಟ್ ಕ್ಲೈವ್ ಹಲವು ಕ್ರೂರ ಮತ್ತು ಭ್ರಷ್ಟ ವಿಧಾನಗಳನ್ನು ಬಳಸಿದ್ದ. ಆದರೆ ಈತನ ಕೃತ್ಯಗಳನ್ನು ಅದೇಕೋ ಬ್ರಿಟಿಷ್ ಪಾರ್ಲಿಮೆಂಟ್ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ವಾರನ್ ಹೇಸ್ಟಿಂಗ್ಸ್‌ಗೆ ಅಂಥ ಅದೃಷ್ಟವಿರಲಿಲ್ಲ. ಆ ಕಾಲದ ಪ್ರಮುಖ ರಾಜಕೀಯ ಸಿದ್ಧಾಂತಿ ಹಾಗೂ ಭಾಷಣಕಾರ ಎಡ್ಮಂಡ್ ಬರ್ಕ್‌ನ ಕಣ್ಣಿಗೆ ವಾರನ್ ಹೇಸ್ಟಿಂಗ್ಸ್ ಭ್ರಷ್ಟತೆಗಳು ಕಾಣಿಸಿದ್ದವು. ಆತ ವಾರನ್ ಹೇಸ್ಟಿಂಗ್ಸ್‌ಗೆ ಛೀಮಾರಿ ಹಾಕಬೇಕೆಂದು ವಾದಿಸಿದ. ಕೊನೆಗೆ ಹೌಸ್ ಕಾಮನ್ಸ್ ಇದಕ್ಕೆ ಒಪ್ಪಿಗೆ ನೀಡಿತು. ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಈ ವಿಚಾರಣೆ ಆರು ವರ್ಷಗಳ ಕಾಲ ನಡೆಯಿತು. ಎಡ್ಮಂಡ್ ಬರ್ಕ್ ಈ ವಿಚಾರಣೆಯ ಪ್ರವರ್ತಕನಾಗಿದ್ದ.

ಅಪ್ಪನಿಗೆ ಇಂಗ್ಲೆಂಡ್ ಅಂದರೆ ಬಹಳ ಗೌರವ. ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದವನನ್ನೇ ಶಿಕ್ಷಿಸಲು ಅವರು ಹಿಂದೆಗೆಯಲಿಲ್ಲ ಎಂಬುದು ಅವರಿಗೆ ಇಂಗ್ಲೆಂಡ್ ನ ಮೇಲಿದ್ದ ಗೌರವ ಮತ್ತಷ್ಟು ಹೆಚ್ಚಿಸಿತ್ತು. ಇದರಿಂದಾಗಿಯೋ ಏನೋ ಅವರು ಎಡ್ಮಂಡ್ ಬರ್ಕ್ ಭಾಷಣ ಅವರಿಗೆ ಬಹಳ ಇಷ್ಟ. ಅವರ ಇಂಗ್ಲಿಷ್ ಕಲಿಕೆ ಕೂಡಾ ಬಾಯಿಪಾಠಾಧಾರಿತವಾಗಿತ್ತು. ಹಾಗಾಗಿ ನನ್ನನ್ನೂ ಈ ಭಾಷಣವನ್ನು ಬಾಯಿಪಾಠ ಮಾಡು ಎಂದು ಒತ್ತಾಯಿಸುತ್ತಿದ್ದರು. ನಾನು ಎಸ್ಎಸ್ಎಲ್‌ಸಿ ಮುಗಿಸುವ ಮೊದಲೇ ಎಡ್ಮಂಡ್ ಬರ್ಕ್‌ನ ಭಾಷಣವನ್ನು ಬಾಯಿ ಪಾಠ ಮಾಡಿದ್ದೆ. ನನಗೆ ಉಪನಯನ ಆದ ಮೇಲೆ ಪುರುಷಸೂಕ್ತವನ್ನು ಬಾಯಿಪಾಠ ಮಾಡುವುದಕ್ಕೆ ಇದ್ದ ಒತ್ತಡಕ್ಕಿಂತಲೂ ಹೆಚ್ಚಿನ ಒತ್ತಡವನ್ನು ಅಪ್ಪ ಎಡ್ಮಂಡ್ ಬರ್ಕ್‌ನ ಭಾಷಣವನ್ನು ಬಾಯಿಪಾಠ ಮಾಡಲು ಹೇರಿದ್ದರು. ಇಂಗ್ಲಿಷ್ ಉಚ್ಚಾರಣೆಯ ಬಗಗೆ ಏನೂ ತಿಳಿಯದ ನಾನು ಎಡ್ಮಂಡ್ ಬರ್ಕ್‌ನ ಭಾಷಣವನ್ನೂ ಪುರುಷಸೂಕ್ತದ ಶ್ಲೋಕಗಳ ಧಾಟಿಯಲ್ಲೇ ಹೇಳುತ್ತಿದ್ದೆ.

ಇಷ್ಟೆಲ್ಲಾ ಇಂಗ್ಲಿಷ್ ಗೊತ್ತಿದ್ದರೂ ಅವರಿಗೆ ಇಂಗ್ಲಿಷ್‌ನ ಉಚ್ಚಾರಣೆಯ ಕುರಿತು ಏನೇನೂ ತಿಳಿದಿರಲಿಲ್ಲ. ಆದರೆ ಅವರ ಬರವಣಿಗೆಯನ್ನು ನೋಡಿದರೆ ಅವರಿಗೆ ಉಚ್ಚಾರಣೆಯ ಬಗ್ಗೆ ಏನು ತಿಳಿದಿರಲಾರದೆಂದು ಯಾರೂ ಭಾವಿಸುವಂತೆ ಇರಲಿಲ್ಲ. ಅವರ ವಾಕ್ಯಗಳೆಲ್ಲವೂ ವಿಶ್ಲೇಷಣೆಗೆ ಒಳಪಡಿಸುವಂಥವು. ಈಗಲೂ ಇಂಗ್ಲಿಷ್ ಕಲಿಯುವ ವಿದ್ಯಾರ್ಥಿಗಳಿಗೆ ಹೀಗೆ ವಾಕ್ಯಗಳನ್ನು ವಿಶ್ಲೇಷಿಸುತ್ತಾರೆ. ಒಂದು ವಾಕ್ಯದಲ್ಲಿರುವ noun clause, adverbial ಮತ್ತು adjectival clausesಗಳನ್ನು ತೋರಿಸಿಕೊಡುವ ಕೆಲಸವಿದು. ನಮಗೆಲ್ಲಾ noun clauseಗೂ adjectival clauseಗಳಿಗೆ ವ್ಯತ್ಯಾಸ ತಿಳಿಯದೆ ಒದ್ದಾಡುತ್ತಿದ್ದುದೂ ಉಂಟು. Parenthesis ಅದನ್ನು ಪ್ರತ್ಯೇಕವಾಗಿ ವಿವರಿಸಬೇಕಿತ್ತು. ಇವನ್ನೆಲ್ಲಾ ಹೇಗೆ ಗುರುತಿಸುವುದೆಂದು ಅಪ್ಪ ಹೇಳಿಕೊಡುತ್ತಿದ್ದರು. ಆದರೆ ಉಚ್ಚಾರಣೆಯ ಬಗ್ಗೆ ಮಾತ್ರ ಏನೂ ಗೊತ್ತಿರಲಿಲ್ಲ.

ಈ ಉಚ್ಚಾರಣೆಯ ಅರಿವಿಲ್ಲದೇ ಇದ್ದುದರಿಂದ ಅವರ ಬಾಯಿಂದ ವಿಚಿತ್ರ ಪದಗಳು ಹೊರಬೀಳುತ್ತಿದ್ದವು. ನಾನು ಕಾಲೇಜು ಸೇರಿದ್ದ ದಿನಗಳಲ್ಲಿ ನಡೆದ ಘಟನೆಯೊಂದಿದೆ. ಆಗ ಅವರಿಗೆ ಮೂತ್ರಬಾಧೆ ಆರಂಭವಾಯಿತು. ಇದನ್ನು ಸರಿಪಡಿಸಿಕೊಳ್ಳಲು ಸಣ್ಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡರು. ಇದನ್ನು ವಿವರಿಸಲು ಅವರು ನಾನು ಸರ್ಕಮ್ ಸ್ಕಿಷನ್ ಮಾಡಿಸಿಕೊಂಡೆ ಎಂದರು. ಕಾಲೇಜಿಗೆ ಹೋಗುತ್ತಿದ್ದ ನಾನು ಅದು ಹಾಗಲ್ಲ ಸರ್ಕಮ್ ಸಿಷನ್ (circumcision)ಎಂದರೆ ಅವರು ಒಪ್ಪಲೇ ಇಲ್ಲ. ಕೊನೆಗೆ ಡಿಕ್ಷನರಿ ತಂದಿಟ್ಟುಕೊಂಡು ಅವರಿಗೆ ವಿವರಿಸಬೇಕಾಯಿತು. ಆಮೇಲಿನಿಂದ ಅವರು ಪ್ರಜ್ಞಾಪೂರ್ವಕವಾಗಿ ಈ ಪದವನ್ನು ಉಚ್ಚರಿಸುತ್ತಿದ್ದರು.

ಅಪ್ಪನ ದೆಸೆಯಿಂದ ಆಚಾರ್ಯನಾಗಲಿಲ್ಲ

ಅಪ್ಪ ಗಟ್ಟಿ ಧೋರಣೆಗಳನ್ನು ಹೊಂದಿದ್ದ ಮನುಷ್ಯ. ಇವುಗಳ ವಿರುದ್ಧ ಮಾತನಾಡಿದರೆ ಅವರಿಂದ ಏಟು ತಿನ್ನಬೇಕಾಗುತ್ತಿತ್ತು. ರಷ್ಯಾದ ಝಾರ್ ಗಳ ವಿಷಯಕ್ಕೆ ಸಂಬಂಧಿಸಿದಂತೆ ವಾದಿಸಿದ್ದಕ್ಕೆ ಅವರೊಮ್ಮೆ ನನಗೆ ಹೊಡೆದಿದ್ದರು. ಇದು ನಾನು ಚಿಕ್ಕವಾಗಿದ್ದಾಗಲೇನೂ ಅಲ್ಲ. ನನಗೆ ಗೋಪಾಲಗೌಡರಂಥವರೆಲ್ಲಾ ಗೆಳೆಯರಾದ ಮೇಲೆ ನಡೆದ ಘಟನೆ ಇದು.

ಆಗ ನನಗೆ ಶಂಕರನಾರಾಯಣ ಎಂಬ ಒಬ್ಬ ಗೆಳೆಯನಿದ್ದ. ನನ್ನ ‘ಸಂಸ್ಕಾರ’ ಪುಸ್ತಕವನ್ನು ನಾನು ಅವನಿಗೇ ಅರ್ಪಿಸಿದ್ದೇನೆ. ಗೋಪಾಲಗೌಡರೂ ಕೂಡಾ ಆಗ ನನ್ನ ಗೆಳೆಯರು. ನಾವು ಶಿವಮೊಗ್ಗದಲ್ಲಿದ್ದೆವು. ಈ ದಿನಗಳಲ್ಲಿ ಶಂಕರನಾರಾಯಣ, ಗೋಪಾಲಗೌಡರು ನಮ್ಮ ಮನೆಯಲ್ಲಿ ಊಟಕ್ಕೆ ಸೇರುತ್ತಿದ್ದುದು ಬಹಳ ಸಾಮಾನ್ಯ. ಒಂದು ದಿನ ನಾವೆಲ್ಲಾ ಒಟ್ಟಿಗೆ ಊಟಕ್ಕೆ ಕುಳಿತಿದ್ದೆವು. ಅಪ್ಪ ಕೂಡಾ ನಮ್ಮ ಜತೆಗೇ ಊಟಕ್ಕೆ ಕುಳಿತಿದ್ದರು. ಮಾತಿನ ಮಧ್ಯೆ ಅದು ಹೇಗೋ ರಷ್ಯಾದ ವಿಷಯ ಬಂತು.

‘ರಷ್ಯಾದಲ್ಲಿ ಕ್ರಾಂತಿಯಾಗಿದ್ದು ಒಂದು ಘೋರ ಅಪರಾಧ’ ಎಂದು ನಮ್ಮ ಅಪ್ಪ ವಾದಿಸುತ್ತಿದ್ದರು. ನಾನು ‘ಇದು ಹಾಗಲ್ಲ ಅಪ್ಪಯ್ಯ. ಅಲ್ಲಿ ಬಹಳ ನೀಚರಾಗಿದ್ದ ಝಾರ್ ದೊರೆಗಳಿದ್ದರು. ಅವರ ಆಡಳಿತದಿಂದಾಗಿ ಬೇಸತ್ತ ಜನ ಕ್ರಾಂತಿಯನ್ನು ಮಾಡಿದರು’ ಎಂದು ನಾನು ಓದಿದ ಪಾಠವನ್ನು ಅವರಿಗೆ ಒಪ್ಪಿಸಿದೆ. ಆದರೆ ಅವರು ರಷ್ಯಾದಲ್ಲಿ ಕ್ರಾಂತಿಯಾದದ್ದು ಸರಿಯಲ್ಲ ಎಂಬ ವಾದವನ್ನು ಮುಂದುವರಿಸಿದರು. ನಾನೂ ಅಷ್ಟೇ, ಕಲಿತದ್ದನ್ನೆಲ್ಲಾ ನೆನಪಿಸಿಕೊಂಡು ರಷ್ಯಾದ ಕ್ರಾಂತಿ ಸರಿ ಎಂಬ ವಾದವನ್ನು ಬೆಳೆಸುತ್ತಾ ಹೋದೆ. ವಾದ ಬೆಳೆಯುತ್ತಾ ಹೋದಂತೆ ಅಪ್ಪನಿಗೆ ತಾನು ಸೋಲುತ್ತೇನೆ ಅನ್ನಿಸತೊಡಗಿತೇನೋ. ಅವರು ತಮ್ಮ ಎಂಜಲು ಕೈಯಲ್ಲಿ ನನ್ನ ಕಪಾಳಕ್ಕೆ ಹೊಡೆದು ‘ರಷ್ಯಾದಲ್ಲಿ ಕ್ರಾಂತಿಯಾದದ್ದು ತಪ್ಪು’ ಎಂದರು.

‘ಎಂಜಲು ಕೈಯಲ್ಲಿ ನನಗೆ ಹೊಡೆದರೆ ಅಲ್ಲಿ ಕ್ರಾಂತಿಯಾದದ್ದು ಸರಿಯೋ ತಪ್ಪೋ ಎಂಬುದು ನಿರ್ಧಾರವಾಗುವುದಿಲ್ಲ’ ಎಂದು ನಾನು ಹೇಳಿದೆ. ಇದನ್ನು ಕೇಳಿ ಅಲ್ಲಿದ್ದವರೆಲ್ಲಾ ನಕ್ಕು ಬಿಟ್ಟರು. ಅಪ್ಪನಿಗೆ ಬಹಳ ನಾಚಿಕೆಯಾಯಿತು. ಇದಾದ ಮೇಲೆ ಅವರು ಯಾವ್ಯಾವುದೋ ಚರಿತ್ರೆಯ ಪುಸ್ತಕಗಳನ್ನು ತಂದು ಓದಿ ರಷ್ಯಾದ ಕ್ರಾಂತಿಯ ಬಗ್ಗೆ ಇನ್ನಷ್ಟು ತಿಳಿದುಕೊಂಡರು. ಒಂದು ದಿನ ಅವರು ಎಲ್ಲರ ಎದುರಿಗೇ ‘ನೀನು ಅವತ್ತು ಹೇಳಿದ್ದು ಕರೆಕ್ಟ್, ಅಲ್ಲಿ ಕ್ರಾಂತಿಯಾಗಬೇಕಿದ್ದು ಸಹಜವೇ ಆಗಿತ್ತು’ ಎಂದು ಒಪ್ಪಿಕೊಂಡರು.

ಅಪ್ಪನ ಆಕಾಶದ ಹುಚ್ಚು

ಅಪ್ಪ ತನ್ನ ಕಾಲಕ್ಕೆ ಬಹಳ ಆಧುನಿಕ. ನಾನು ಹೊಸ ವಿಚಾರಗಳಿಗೆ ತೆರೆದುಕೊಳ್ಳುತ್ತಿದ್ದ ಹೊತ್ತಿನಲ್ಲೇ ಅವರೂ ಅವೇ ವಿಚಾರಗಳಿಗೆ ತಮ್ಮನ್ನು ಮುಕ್ತವಾಗಿಟ್ಟುಕೊಂಡಿದ್ದರು. ಹೀಗೆ ಓದಿಕೊಳ್ಳುತ್ತಲೇ ಅವರೂ ಗಾಂಧಿವಾದಿಯೂ ಆಗಿಬಿಟ್ಟರು. ಆದರೆ ಆಸ್ತಿಯ ಹಕ್ಕು ಮುಂತಾದುವುಗಳಿಗೆ ಸಂಬಂಧಿಸಿದಂತೆ ಮಾತ್ರ ಅಪ್ಪನದ್ದು ಆಕಾಲದ ಶಾನುಬೋಗರ ನಿಲುವೇ.

ಅಪ್ಪನಿಗೆ ರಾಜಾಗೋಪಾಲಾಚಾರಿ ಎಂದರೆ ಬಹಳ ಇಷ್ಟ. ಅವರು ಬಹಳ ಬುದ್ಧಿವಂತರು, ಗಾಂಧೀಜಿಗೆ ಬೀಗರಾಗಿದ್ದವರು, ಒಂದು ಅಂತರ್ ಜಾತೀಯ ವಿವಾಹವನ್ನು ಮಾಡಿದ್ದವರು ಹೀಗೆ ಅಪ್ಪನ ಇಷ್ಟಕ್ಕೆ ಹಲವು ಕಾರಣಗಳು. ಜತೆಗೆ ಅಪ್ಪನಿಗೂ ಅವರ ಹೆಸರೇ ಇತ್ತು. ರಾಜಗೋಪಾಲಾಚಾರಿಯವರು ತಳೆದಿದ್ದ ಸಂಪ್ರದಾಯ ವಿರೋಧಿ ನಿಲುವುಗಳಿಗೂ ವೇದದಲ್ಲಿ ಪುರಾವೆಯಿದೆ ಎಂದು ತೋರಿಸಿಕೊಡಲು ಅಪ್ಪ ಸದಾ ಮುಂದಾಗುತ್ತಿದ್ದರು.

ಅಪ್ಪನ ಯೋಚನಾ ವಿಧಾನವನ್ನು ಈಗ ಅರ್ಥ ಮಾಡಿಕೊಳ್ಳಲು ಹೊರಟರೆ ನನಗೆ ನೆನಪಾಗುವುದು ಬಂಗಾಳದ ಈಶ್ವರಚಂದ್ರ ವಿದ್ಯಾಸಾಗರರು. ಅವರೂ ಅಷ್ಟೇ ಮೈಮೇಲೆ ಅಂಗಿ ಹಾಕಿಕೊಳ್ಳದ ಬ್ರಾಹ್ಮಣರು. ಆದರೆ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ವಾದಿಸಿದವರು. ಬದಲಾಗುತ್ತಾ ಆಗುತ್ತಾ ಮನುಸ್ಮೃತಿಗಿಂತ ಪರಾಶರ ಸ್ಮೃತಿಯೇ ಒಳ್ಳೆಯದು ಮತ್ತು ಹೆಚ್ಚು ಮಾನವೀಯವಾಗಿರುವಂಥದ್ದು ಎಂದು ಬರೆಯಲು ಹೊರಟವರು. ಈ ಕೆಲಸಕ್ಕೆ ಕೈ ಹಾಕುವ ಮೊದಲೇ ಅವರಿಗೆ ಎಲ್ಲಾ ಬ್ರಾಹ್ಮಣರೂ ತಮ್ಮನ್ನು ವಿರೋಧಿಸುತ್ತಾರೆ ಎಂಬುದು ಗೊತ್ತಿತ್ತು. ಆದರೂ ಅವರು ತಮ್ಮ ತಂದೆಯ ಬಳಿ ಹೋಗಿ ಮನುಸ್ಮೃತಿಯ ಕುರಿತ ತಮ್ಮ ಆಲೋಚನೆಗಳನ್ನು ವಿವರಿಸಿ ‘ಇದನ್ನು ಬರೆಯಬೇಕೆಂದಿದ್ದೇನೆ. ತಮ್ಮ ಅನುಮತಿ ಬೇಕು’ ಎಂದು ಕೇಳಿದರು.

ವಿದ್ಯಾಸಾಗರರ ತಂದೆ ‘ನಾನು ಅನುಮತಿ ಕೊಡದಿದ್ದರೆ ಏನು ಮಾಡುತ್ತೀಯಾ?’ ಎಂದು ಕೇಳಿದರು. ಅದಕ್ಕೆ ವಿದ್ಯಾಸಾಗರರು ಹೇಳಿದ್ದು ಹೀಗೆ ‘ನಿಮ್ಮ ಸಾವಿನ ನಂತರ ಬರೆಯುತ್ತೇನೆ.’

ವಿದ್ಯಾಸಾಗರರ ತಂದೆ ಇದಕ್ಕೆ ‘ಅಷ್ಟೆಲ್ಲಾ ಕಾಯುವ ಅಗತ್ಯವಿಲ್ಲ. ನೀನಿಗಲೇ ಬರೆಯಬಹುದು’ ಎಂದು ಅನುಮತಿ ಕೊಟ್ಟರಂತೆ.

ನನ್ನ ಅಪ್ಪನೂ ಇಂಥದ್ದೇ ಕಾಲದಲ್ಲಿ ಬದುಕಿದ್ದವರು. ಅವರಿಗೆ ಸಂಸ್ಕೃತ ಎಂದರೆ ಬಹಳ ಪ್ರೀತಿ. ಆಧುನಿಕವಾದ ಎಲ್ಲವಕ್ಕೂ ಅದರಲ್ಲೊಂದು ಪುರಾವೆಯಿಂದ ನಂಬಿಕೆಯೂ ಜತೆಗಿತ್ತು. ಹಾಗೆಯೇ ಇಂಗ್ಲಿಷ್ ಎಂದರೂ ಪ್ರೀತಿ, ಇಂಗ್ಲಿಷ್ ಜನರ ಮೇಲೂ ಅವರಿಗೆ ಬಹಳ ಪ್ರೀತಿ, ಜತೆಗೆ ಗಾಂಧೀಜಿ ಎಂದರೆ ಇಷ್ಟ.

ಈ ಎಲ್ಲವುಗಳ ಜತೆಗೆ ಆಸ್ತಿ ಹಕ್ಕು ಹೋಗಬಾರದೆಂದು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದರು. ಇದನ್ನು ಕಾನೂನಿನ ಪುಸ್ತಕಗಳಲ್ಲಿ ಹುಡುಕಿ ಸಾಬೀತು ಮಾಡುವುದು ಅವರ ಗಂಭೀರ ಹವ್ಯಾಸಗಳಲ್ಲಿ ಒಂದು. ಇದನ್ನು ಅವರೆಷ್ಟು ಗಂಭೀರವಾಗಿ ಮಾಡುತ್ತಿದ್ದರೆಂದರೆ ಶಿವಮೊಗ್ಗದಲ್ಲಿ ಆ ಕಾಲದಲ್ಲಿದ್ದ ಎಲ್ಲಾ ವಕೀಲರಿಗಿಂತ ಹೆಚ್ಚಾಗಿ ಅವರು ಆಸ್ತಿ ಹಕ್ಕಿನ ಬಗ್ಗೆ ತಿಳಿದುಕೊಂಡಿದ್ದರು. ಈ ಕಾರಣದಿಂದಾಗಿಯೇ ಎಲ್ಲಾ ಜಮೀನ್ದಾರರೂ ನಮ್ಮ ಮನೆಗೆ ಬಂದು ಅಪ್ಪನ ಹತ್ತಿರ ಕಾನೂನು ಸಲಹೆ ಪಡೆಯುತ್ತಿದ್ದರು.ಅವರಲ್ಲಿದ್ದ ಭಾರತೀಯ ಸಂವಿಧಾನದ ಪ್ರತೀ ಹಾಳೆಯ ಬದಿಯಲ್ಲೂ ಅವರು ಬರೆದ ಅಭಿಪ್ರಾಯಗಳಿವೆ.

ನಾನೊಬ್ಬ ಗಣಿತಜ್ಞನಾಗಬೇಕೆಂಬ ಆಸೆ ಅಪ್ಪನಿಗಿತ್ತು ಎಂದು ಮೊದಲೇ ಹೇಳಿದ್ದೆ. ಅವರ ಈ ಆಸೆಗೆ ಒಂದು ಕಾರಣವಿತ್ತು. ಅಪ್ಪನಿಗೆ ಇದ್ದ ಹುಚ್ಚುಗಳಲ್ಲಿ ಮುಖ್ಯವಾದುದು ಆಕಾಶದ ಹುಚ್ಚು. ರಾತ್ರಿ ಅಂಗಳದಲ್ಲಿ ಅಂಗಾತ ಮಲಗಿ ನಕ್ಷತ್ರಗಳ ಸಂಚಾರವನ್ನು ಗುರುತಿಸುವುದಕ್ಕೆ ಪ್ರಯತ್ನಿಸುತ್ತಿದ್ದರು. ಮೊದಲಿಗೆ ಪಂಚಾಂಗವನ್ನೇ ಆಧಾರವಾಗಿಟ್ಟುಕೊಂಡು ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ಅವರು ಕೊನೆಕೊನೆಗೆ ಪಂಚಾಂಗ ಗಣಿತವನ್ನೇ ಕಲಿತು ತಾವೇ ಪಂಚಾಂಗ ರಚನೆಗೆ ಸಿದ್ಧರಾಗಿದ್ದರು.

ಪಂಚಾಂಗದಲ್ಲಿ ಒದಗಿಸಲಾಗುವ ಗ್ರಹಣದ ದಿನಾಂಕಕ್ಕೂ ನಿಜವಾದ ಗ್ರಹಣದ ದಿನಕ್ಕೂ ಇರುವ ವ್ಯತ್ಯಾಸ ಅವರನ್ನು ಬಹಳ ಕಾಡಿತ್ತು. ‘ನಮ್ಮ ಪೂರ್ವಿಕರು ಮಾಡಿದ ಲೆಕ್ಕಾಚಾರಗಳೆಲ್ಲಾ ಈಗ ತಪ್ಪಿವೆ. ಅವನ್ನು ಸರಿಪಡಿಸಿಕೊಳ್ಳಬೇಕು’ ಎನ್ನುತ್ತಿದ್ದ ಅವರು ಫ್ರಾನ್ಸ್ ಗೆ ಕಾಗದ ಬರೆದು ಆಕಾಶ ಕಾಯಗಳ ವರ್ತಮಾನದ ಚಲನೆಯನ್ನು ತಿಳಿಸುವ ಪುಸ್ತಕಗಳನ್ನು ತರಿಸಿಕೊಂಡು ತಮ್ಮದೇ ಆದ ಲೆಕ್ಕಾಚಾರಗಳನ್ನು ಮಾಡುತ್ತಿದ್ದರು. ಅವರ ತಲೆಯಲ್ಲಿ ಸದಾ ಎರಡು ಪಂಚಾಂಗಗಳಿರುತ್ತಿದ್ದವು. ಒಂದು ವೈಜ್ಞಾನಿಕ ಪಂಚಾಂಗವಾದರೆ ಮತ್ತೊಂದು ಸಾಂಪ್ರದಾಯಿಕ ಪಂಚಾಂಗ.

ಅಪ್ಪ ಇಂಗ್ಲಿಷ್ ನಲ್ಲೇ ಸಹಿ ಮಾಡುತ್ತಿದ್ದರು. ಅವರಿಗೆ ನ್ಯೂಮರಾಲಜಿಯಲ್ಲಿ ಬಹಳ ನಂಬಿಕೆ. ಯಾವ ಅಕ್ಷರಕ್ಕೆ ಎಷ್ಟು ಮೌಲ್ಯ ಎಂದು ಲೆಕ್ಕ ಹಾಕಿ ಹೆಸರನ್ನು ಯು. ಪಿ. ರಾಜಗೋಪಾಲಾಚಾರ್ ಎಂದೇ ಬರೆಯುತ್ತಿದ್ದರೇ ಹೊರತು ರಾಜಗೋಪಾಲಾಚಾರ್ಯ ಎಂದು ಬರೆಯುತ್ತಿರಲಿಲ್ಲ. ಅವರು ನ್ಯೂಮರಾಲಜಿಯ ಮೂಲಕ ತಮ್ಮ ಹೆಸರಿನಲ್ಲೇ ಆಂಗ್ಲೀಕರಣಗೊಂಡಿದ್ದರು. ಸಂಪ್ರದಾಯದಂತೆ ನನ್ನ ಹೆಸರು ಅನಂತಮೂರ್ತಿ ಆಚಾರ್ಯ ಆಗಬೇಕಾಗಿತ್ತು. ಆದರೆ ಅಪ್ಪನೇ ಆಚಾರ್ಯ ಬೇಡ ಎಂದು ತೀರ್ಮಾನಿಸಿ ನನ್ನ ಹೆಸರನ್ನು ಅನಂತಮೂರ್ತಿ ಎಂದು ಇಟ್ಟಿದ್ದರು.

ಅಪ್ಪ ಹೀಗೆ ಸದಾ ಹೊಸತಾದುದಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ತಲೇ ಇದ್ದರು. ಅವರು ಸಾಯುವ ಹೊತ್ತಿನಲ್ಲೂ ಹೀಗೆಯೇ ಇದ್ದರು. ನಾನಾಗ ಇಂಗ್ಲೆಂಡ್ ನಿಂದ ಬಂದಿದ್ದೆ. ಬಹಳ ಅಸೌಖ್ಯದಿಂದ ಹಾಸಿಗೆಯಲ್ಲೇ ಇದ್ದರು. ನನ್ನನ್ನು ಕಂಡವರೇ ತನ್ನ ದೈಹಿಕ ನೋವುಗಳ ಬಗ್ಗೆ ಹೇಳಿದರು. ಈ ಮಾತುಗಳು ಮುಗಿಯುತ್ತಿದ್ದಂತೇ ಅವರು ‘ಜಯಪ್ರಕಾಶ್ ನಾರಾಯಣ್ ಏನು ಹೇಳಿದ್ದಾರೆ ಗೊತ್ತಾ?’ ಎಂದು ರಾಜಕಾರಣದ ಮಾತನಾಡಲು ಆರಂಭಿಸಿದರು.

ಅಪ್ಪನ ಕೊನೆಯ ದಿನಗಳಲ್ಲಿ ಅವರ ಬಳಿ ಸದಾ ಎರಡು ಪುಸ್ತಕಗಳಿರುತ್ತಿದ್ದವು. ಒಂದು ಪೆಂಗ್ವಿನ್ ಪ್ರಕಾಶನ ಸಂಸ್ಥೆ ಹೊರತಂದ ಹ್ಯೂಮನ್ ಬಾಡಿ ಅಂಡ್ ಇಟ್ಸ್ ಏಲ್ ಮೆಂಟ್ಸ್ ಎಂಬ ಪುಸ್ತಕ. ಮತ್ತೊಂದು ಪಂಚಾಂಗ. ಮೊದಲನೇ ಪುಸ್ತಕ ನೋಡಿ ತನ್ನ ದೇಹದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದರು. ಪಂಚಾಂಗ ನೋಡಿ ತನ್ನ ಮೃತ್ಯುವಿಗೆ ಇದು ಒಳ್ಳೆಯ ನಕ್ಷತ್ರವೋ ಅಲ್ಲವೋ ಎಂದು ತಿಳಿದುಕೊಳ್ಳುತ್ತಿದ್ದರು. ನಾನು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇನೆ ಎಂದಾಗ ಅವರು ‘ನನಗೆ ಈ ಕೆಲವು ದಿನಗಳಲ್ಲಿ ಮೃತ್ಯುಯೋಗವಿದೆ. ಅದು ಮುಗಿದ ಮೇಲೆ ಕರೆದುಕೊಂಡು ಹೋಗು. ನನಗೆ ಆಸ್ಪತ್ರೆಯಲ್ಲಿ ಸಾಯುವುದಕ್ಕೆ ಇಷ್ಟವಿಲ್ಲ’ ಎಂದಿದ್ದರು.

ಅಪ್ಪ ಆಧುನಿಕತೆಗೆ ಮುಗ್ಧವಾಗಿ ಸ್ಪಂದಿಸುತ್ತಿದ್ದರು ಎಂದು ಈಗ ಅನ್ನಿಸುತ್ತದೆ. ಆಕಾಶ ಮತ್ತು ಬೆಕ್ಕು ಕಥೆ ಬರೆಯುವಾಗ ಈ ವಿವರಗಳೆಲ್ಲಾ ನನ್ನ ಮನಸ್ಸಿನಲ್ಲಿ ಇತ್ತು. ಅದರಲ್ಲಿರುವ ಕೆಲವು ಘಟನೆಗಳು ನನ್ನ ಅಪ್ಪನ ಜೀವನದಿಂದಲೇ ಬಂದಿವೆ. ಅಪ್ಪ ಸಾಯುವುದಕ್ಕೆ ಸ್ವಲ್ಪ ಮೊದಲು ನಮ್ಮ ಮನೆಯ ಅಟ್ಟದ ಮೇಲೆ ಒಂದು ಬೆಕ್ಕು ಮರಿ ಹಾಕಿತ್ತು. ಅದು ಸದ್ದು ಮಾಡುತ್ತಾ ಇರುತ್ತಿತ್ತು. ನನ್ನ ತಮ್ಮ ಗುರುರಾಜ ಅಟ್ಟಕ್ಕೆ ಹತ್ತಿ ಬೆಕ್ಕನ್ನು ಅಲ್ಲಿಂದ ಓಡಿಸಲು ಪ್ರಯತ್ನಿಸುತ್ತಿದ್ದಾಗ ಅಪ್ಪ ‘ಪಾಪ ಕಣೋ, ಅದನ್ನು ಅಲ್ಲೇ ಬಿಡು. ಮರಿ ಹಾಕಿದೆ’ ಅಂದ ಕೆಲವೇ ಕ್ಷಣದಲ್ಲಿ ಪ್ರಾಣಬಿಟ್ಟರು. ಮರಿ ಹಾಕಿದ ಬೆಕ್ಕನ್ನು ಅಟ್ಟದಲ್ಲೇ ಉಳಿಸಲು ಹೇಳಿದ್ದೇ ಅವರ ಕೊನೆಯ ಮಾತು.

ಬ್ರಹ್ಮಚರ್ಯದ ಆಸೆ ಕಾಮದ ಮೇಲೆ ಪ್ರೀತಿ

ನಮ್ಮೂರಿನಲ್ಲಿ ರಾಮಚಂದ್ರಭಟ್ಟರು ಎಂಬುವರೊಬ್ಬರಿದ್ದರು. ಹೌದು, ಅವರು ಭಟ್ಟರೇ. ಕಚ್ಚೆ ಪಂಚೆ ಉಡುತ್ತಿದ್ದರು. ಊರೂರು ಸುತ್ತುತ್ತಾ ಇದ್ದರು. ಗಾಂಧಿವಾದಿ ಆಗಿದ್ದರು. ಒಂದು ದಿನ ಅವರು ಮನೆ ಬಿಟ್ಟು ಸೀದಾ ಗಾಂಧೀ ಆಶ್ರಮಕ್ಕೆ ಹೋಗಿ ಕೆಲಕಾಲ ಅಲ್ಲಿದ್ದು ಹಿಂದಿರುಗಿದ್ದರು. ಈ ರಾಮಚಂದ್ರಭಟ್ಟರು ನಮಗೆಲ್ಲಾ ಗಾಂಧೀಜಿ ಕತೆಗಳನ್ನು ಹೇಳುತ್ತಿದ್ದರು. ಅವರು ಹೇಳಿದ ಒಂದು ಕತೆ ಇನ್ನೂ ನೆನಪಿದೆ.

ಪ್ರಾರ್ಥನೆ ಮುಗಿದ ನಂತರ ಗಾಂಧೀಜಿ ಹರಿಜನ ಫಂಡ್‌ಗೆ ದಾನ ಮಾಡಲು ಕೇಳಿಕೊಳ್ಳುತ್ತಿದ್ದರಂತೆ. ಆಗ ಹೆಂಗಸರೆಲ್ಲಾ ತಮ್ಮ ಮೈಮೇಲಿದ್ದ ಆಭರಣಗಳನ್ನೆಲ್ಲಾ ತೆಗೆದು ಕೊಟ್ಟು ಬಿಡುತ್ತಿದ್ದರಂತೆ. ಇದರಿಂದ ಗಾಂಧೀಜಿಯವರ ಪ್ರಾರ್ಥನಾ ಸಭೆಗಳಿಗೆ ಬರುತ್ತಿದ್ದ ಹೆಂಗಸರ ಮನೆಯವರು ಅವರ ಆಭರಣಗಳನ್ನೆಲ್ಲಾ ಕಿತ್ತಿಟ್ಟುಕೊಂಡಿರುತ್ತಿದ್ದರಂತೆ.

ಬಾಲ್ಯದ ಈ ಕಾಲಘಟ್ಟ ನನ್ನ ಮನಸ್ಸಿನ ಬೆಳವಣಿಗೆಯಲ್ಲಿ ಬಹಳ ಮುಖ್ಯ ಪಾತ್ರವಹಿಸಿದೆ ಎಂದು ನನಗೆ ಈಗಲೂ ಅನ್ನಿಸುತ್ತದೆ. ಈ ಕಾಲದಲ್ಲಿ ರಾಮಚಂದ್ರ ಭಟ್ಟರಂಥ ಇನ್ನೂ ಅನೇಕರನ್ನು ನಾನು ಪರಿಚಯಿಸಿಕೊಂಡೆ. ಅಥವಾ ನನ್ನ ಕಾಲ ಮತ್ತು ಪರಿಸರಗಳು ಪರಿಚಯಿಸಿಕೊಟ್ಟವು. ಇಂಥವರಲ್ಲಿ ಶ್ಯಾಮ ಐತಾಳರೂ ಒಬ್ಬರು. ಹಾಗೆಯೇ ಗೇಣಿ ಪದ್ಧತಿ ಸರಿ ಇಲ್ಲ ಎನ್ನುತ್ತಿದ್ದ ರಾಮಚಂದ್ರ ಶಾಸ್ತ್ರಿಗಳು ಮತ್ತೊಬ್ಬರು. ತುಂಬಾ ಕನ್ನಡ ಸಾಹಿತ್ಯವನ್ನು ಓದಿಕೊಂಡಿದ್ದ, ತಾವೇ ಸ್ವತಃ ಬರೆಯುತ್ತಿದ್ದ ಬಸವಾನಿ ರಾಮಶರ್ಮ ಇನ್ನೊಬ್ಬರು.

ಶ್ಯಾಮ ಐತಾಳರು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದವರು. ಆ ಹೊತ್ತಿಗಾಗಲೇ ಜೈಲು ವಾಸವನ್ನೂ ಮುಗಿಸಿ ಹೊರ ಬಂದಿದ್ದವರು. ಪರಿಣಾಮವಾಗಿ ಅವರ ಬಗ್ಗೆ ಬ್ರಾಹ್ಮಣರ ನಡುವೆ ವಿಚಿತ್ರವಾದ ವದಂತಿಗಳು ಹರಡಿದ್ದವು. ಶ್ಯಾಮ ಐತಾಳರಿಗೆ ಜೈಲಿನಲ್ಲಿ ಬಲವಂತವಾಗಿ ಮಾಂಸ ತಿನ್ನಿಸಿದ್ದಾರೆ ಎಂಬುದು ಅವುಗಳಲ್ಲೊಂದು. ಇದು ಎಷ್ಟು ದಟ್ಟವಾಗಿತ್ತೆಂದರೆ ಮಾಂಸ ತಿಂದು ಶ್ಯಾಮ ಐತಾಳರು ಬ್ರಾಹ್ಮಣ್ಯವನ್ನು ಕಳೆದುಕೊಂಡಿರುವುದರಿಂದ ಅವರನ್ನು ಬಹಿಷ್ಕರಿಸಬೇಕೆಂಬ ಚರ್ಚೆಯೂ ನಡೆಯುತ್ತಿತ್ತು.

ಬಸವಾನಿ ರಾಮಶರ್ಮರು ಒಂದು ರೈತಸಂಘವನ್ನು ಕಟ್ಟಿಕೊಂಡಿದ್ದರು. ಇದರಿಂದ ಬ್ರಾಹ್ಮಣರಿಗೆಲ್ಲಾ ಎಷ್ಟು ಕೋಪವಿತ್ತೆಂದರೆ ಅವರನ್ನು ಕಲಿಗೆ ಹೋಲಿಸಿ ಬೈಯುತ್ತಿದ್ದರು. ಅವರು ಮೊನ್ನೆ ಮೊನ್ನೆಯವರೆಗೂ ಬದುಕಿದ್ದರು. ಅವರು ಕಾನೂರು ಹೆಗ್ಗಡತಿಯನ್ನು ಓದಿದ ನಂತರ ಹೇಳಿದ ಮಾತು ನನಗೆ ಈಗಲೂ ನೆನಪಿದೆ ‘ಏನಯ್ಯ ಅದು, ಈ ಪುಸ್ತಕ ಓದಿದ ಮೇಲೆ ನನ್ನ ಮನೆಯಲ್ಲೇ ಒಂದು ಹೆಂಡದ ಮಡಕೆ ಮತ್ತು ಮೀನು ಇದೆಯೇನೋ ಅನಿಸಿಬಿಡುತ್ತದೆ.’ ಬಹುಶಃ ಕಾನೂರು ಹೆಗ್ಗಡತಿಯನ್ನು ಮೆಚ್ಚಿಕೊಂಡವರಾರೂ ಅದನ್ನು ಇಷ್ಟು ಪರಿಣಾಮಕಾರಿಯಾಗಿ ವ್ಯಕ್ತಪಡಿಸಿಲ್ಲ ಎಂದು ನನಗೀಗಲೂ ಅನ್ನಿಸುತ್ತದೆ. ಬಸವಾನಿ ರಾಮಶರ್ಮರ ಹೆಂಡತಿ ಕೂಡಾ ಸ್ತ್ರೀ ವಿಮೋಚನೆಯಂಥ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇವರೆಲ್ಲಾ ನನಗೆ ಬೇರೆಯೇ ಒಂದು ಜಗತ್ತನ್ನು ಪರಿಚಯ ಮಾಡಿಕೊಟ್ಟರು. ಈ ಒಬ್ಬೊಬ್ಬರ ಬಗ್ಗೆಯೂ ಮುಂದೆ ಪ್ರತ್ಯೇಕವಾಗಿಯೇ ಬರೆಯುತ್ತೇನೆ.

**********************

ನನ್ನ ಮನಸ್ಸು ರಾಜಕೀಯವಾಗಿ ಸಂವೇದನಾಶೀಲವಾಗುತ್ತಾ ಹೋಗುತ್ತಿದ್ದ ದಿನಗಳಲ್ಲಿ ನಮ್ಮ ಅಪ್ಪ ಮತ್ತೆ ಕೆಲಸ ಬದಲಾಯಿಸಿದ್ದರು. ಶಾನುಬೋಗಿಕೆಯನ್ನು ಬಿಟ್ಟು ಒಂದು ಮಠದ ಏಜಂಟರಾದರು. ಹಿಂದೆ ಮಠಗಳಿಗಿದ್ದ ಮುಖ್ಯ ಕೆಲಸವೆಂದರೆ ದೇವರ ಪೂಜೆಗಳನ್ನು ಮಾಡುವುದು, ಹಬ್ಬಗಳನ್ನು ಆಚರಿಸುವುದು, ಇದನ್ನು ಬಿಟ್ಟರೆ ನಿತ್ಯ ಕರ್ಮಗಳ ಜತೆಗೇ ಸೇರಿಕೊಂಡಿದ್ದ ಮತ್ತೊಂದು ಕೆಲಸವಿತ್ತು – ಗೇಣಿದಾರರ ಮೇಲೆ ಸತತವಾಗಿ ಕೇಸು ಹಾಕುವುದು!

ಮಠಗಳಲ್ಲಿ ಒಂದು ಪೈತ್ ಮನೆ ಅಂಥ ಇರುತ್ತೆ. ಪೈತ್ ಮನೆ ಅಂದರೆ ಮಠಕ್ಕೆ ಬೇಕಾದ ಬೆಣ್ಣೆ, ತುಪ್ಪ ಮುಂತಾದುವುಗಳನ್ನೆಲ್ಲಾ ಮಾಡುವ ಜಾಗ. ಇವನ್ನೆಲ್ಲಾ ಮಾಡುವುದಕ್ಕೆ ವೃದ್ಧೆಯಾದ ಮಹಿಳೆಯೊಬ್ಬರಿದ್ದರು. ಸಾಮಾನ್ಯವಾಗಿ ಮಠದ ಸ್ವಾಮಿಗಳ ಸಂಬಂಧಿಕ ಮಹಿಳೆಯರು ಅದರಲ್ಲೂ ವೃದ್ಧ ವಿಧವೆಯವರು ಇಲ್ಲಿ ಇರುತ್ತಾರೆ. ನಮ್ಮ ಅಪ್ಪ ಮಠದ ಏಜೆಂಟ್ ಆಗಿದ್ದರಿಂದ ನನಗೆ ಪೈತ್ ಮನೆಯೊಳಕ್ಕೆ ಪ್ರವೇಶವಿತ್ತು. ಅಲ್ಲಿದ್ದ ಮುದುಕಿ ನನಗೆ ಅವಲಕ್ಕಿ ಮೊಸರು ಕೊಡುತ್ತಿದ್ದರು, ಕಾಫಿ ಕೂಡಾ ಕೊಡುತ್ತಿದ್ದರು. ಸ್ವಾಮಿಗಳೂ ಕೂಡಾ ಗುಪ್ತವಾಗಿ ಒಂದು ಲೋಟ ಕಾಫಿ ಕುಡಿಯುತ್ತಿದ್ದರಂತೆ. ಪರಿಣಾಮವಾಗಿ ಕಾಫಿ ಪೈತ್ ಮನೆಯೊಳಕ್ಕೂ ಪ್ರವೇಶ ಪಡೆದಿತ್ತು.

ಸ್ವಾಮಿಗಳು ಗುಪ್ತವಾಗಿ ಕಾಫಿ ಕುಡಿಯುತ್ತಿದ್ದ ವಿವರ ತಿಳಿದಂತೆಯೇ ಗುಪ್ತವಾಗಿ ಅವರಿಗಿದ್ದ ಬೇರೇ ಬೇರೇ ವ್ಯವಹಾರಗಳ ಬಗೆಗಿನ ಮಾಹಿತಿಯೂ ನನ್ನ ಕಿವಿಗೆ ಬೀಳುತ್ತಿತ್ತು. ಇಂಥ ಮಾಹಿತಿಗಳ ಆಧಾರದಲ್ಲಿ ಹುಟ್ಟಿಕೊಂಡ ಅನೇಕ ಕಥೆಗಳು ಆಗ ಎಲ್ಲರಿಗೂ ಗೊತ್ತಿರುತ್ತಿತ್ತು. ಉಡುಪಿ ಮಠದ ಅನೇಕ ಸ್ವಾಮಿಗಳ ಬಗ್ಗೆ ಇಂಥ ಅನೇಕ ಕಥೆಗಳನ್ನು ನಾನೂ ಕೇಳಿದ್ದೆ.

ನಾನು ಹುಡುಗ ಆಗಿದ್ದಾಗ ವಿವೇಕಾನಂದರೆಂದರೆ ಬಹಳ ಆಸಕ್ತಿ, ಆಕರ್ಷಣೆ ಎಲ್ಲವೂ. ಅವರಂತೆಯೇ ಬ್ರಹ್ಮಚಾರಿ ಆಗಿಬಿಡಬೇಕೆಂಬ ಆಸೆ ನನಗೂ ಇತ್ತು. ಈ ಬ್ರಹ್ಮಾಚಾರಿ ಆಗಿಬಿಡಬೇಕು ಎಂಬ ಆಸೆ ಹುಟ್ಟಿಕೊಂಡಾಗಲೇ ಕಾಮೋದಯವೂ ಆಗಿಬಿಟ್ಟಿರುತ್ತದೆ. ಮಕ್ಕಳಾಗಿದ್ದಾಗ ಬ್ರಹ್ಮಚರ್ಯದ ಆಸೆಯೂ ಇರುವುದಿಲ್ಲ. ಕಾಮದ ಕುರಿತಂತೆ ಅರಿವೂ ಇರುವುದಿಲ್ಲ. ಕಾಮದ ಕುರಿತು ಅರಿವು ಮೂಡಿದರಷ್ಟೇ ಬ್ರಹ್ಮಚರ್ಯದ ಆಸೆ ಹುಟ್ಟುವುದು. ಬ್ರಹ್ಮಚಾರಿಯಾಗುವ ಆಸೆಯಲ್ಲಿ ವೀರ್ಯ ಒಣಗಿ ಹೋಗಲಿ ಎಂದು ತುಳಸಿ ಸೊಪ್ಪು ತಿನ್ನುತ್ತಿದ್ದೆ. ಈಗ ನನಗೆ ಎಪ್ಪತ್ತೈದು ವರ್ಷ ಇನ್ನೂ ಅದು ಒಣಗಿಲ್ಲ!

ಸಿಗದೇ ಹೋದಾಗ ಬರುವ ಸುಳ್ಳು ಜ್ವರ

ಇದೊಂದು ಬಹಳ ಹಳೆಯ ನೆನಪು. ನಾವಾಗ ಬೇಗವಳ್ಳಿಯಲ್ಲಿದ್ದೆವು. ಈ ಬೇಗವಳ್ಳಿ ಅನ್ನೋದು ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ದಾರಿಯಲ್ಲಿ ಸಿಗುತ್ತದೆ. ಆಗ ತುಂಬಾ ಸಣ್ಣವನಿದ್ದೆ. ಆದರೂ ಈ ಘಟನೆ ಮಾತ್ರ ಮರೆತಿಲ್ಲ.

ನಮ್ಮ ಅಪ್ಪ ಆಗಿನ್ನೂ ಶಾನುಬೋಗರಾಗಿಯೇ ಇದ್ದರು. ಅವರಿಗೆ ಗ್ಯಾಡ್ಜೆಟ್‌ಗಳ ಮೇಲೆ ಬಹಳ ಪ್ರೀತಿ. ಈ ಗುಣ ನನಗೂ ಇದೆ. ಅಪ್ಪನ ಹತ್ತಿನ ಒಂದು ಕ್ಯಾಮೆರಾ ಇತ್ತು. ಆ ಕಾಲಕ್ಕೇ ಅದು ಹಳೆಯ ಕಾಲದ ಕ್ಯಾಮರಾ ಎಂಬ ಪ್ರತೀತಿ ಇತ್ತು. ಬಹುಶಃ ಬಹಳ ಸರಳವಾದ ‘ಕ್ಲಿಕ್ ತ್ರೀ’ ತರಹದ ಡಬ್ಬಿ ಕ್ಯಾಮೆರಾ ಇದ್ದಿರಬೇಕು. ಈ ಬಗೆಯ ಕ್ಯಾಮೆರಾಗಳು ಕೈಯಲ್ಲಿ ಹಿಡಿಯುವಷ್ಟೇ ಇದ್ದರೂ ಅವುಗಳನ್ನು ಬಳಸಿ ಅಷ್ಟು ಸುಲಭವಾಗಿ ಫೋಟೋ ತೆಗೆಯಲು ಸಾಧ್ಯವಿಲ್ಲ. ಹೇಗೆ ತೆಗೆದರೂ ಅದು ‘ಶೇಕ್’ ಆಗಿಬಿಡುತ್ತದೆ. ಅಪ್ಪ ಅದನ್ನು ಒಂದು ಟ್ರೈಪಾಡ್ ಮೇಲೆ ಇಟ್ಟುಕೊಂಡು ಫೋಟೋ ತೆಗೆಯುತ್ತಿದ್ದರು. ಅಪ್ಪ ತಾವು ಸ್ವತಃ ಕ್ಷೌರ ಮಾಡಲು ಕಲಿತುಕೊಂಡಂತೆಯೇ ಇದರಲ್ಲಿ ಫೋಟೋ ತೆಗೆಯುವುದನ್ನೂ ಕಲಿತಿದ್ದರು.

ಅಪ್ಪನ ಬಳಿ ಇಂಥ ಅನೇಕ ಗ್ಯಾಡ್ಜೆಟ್‌ಗಳು ಇದ್ದವು. ಒಂದು ದಿನ ಅವರೊಂದು ಪೆನ್ ತಂದರು. ಅದನ್ನು ನೋಡಿದ ನನಗೆ ಬಹಳ ಇಷ್ಟವಾಗಿಬಿಟ್ಟಿತು. ನಾನು ‘ಅಪ್ಪಯ್ಯ ಇದು ಎಂಥಾ ಪೆನ್ನು’ ಎಂದು ಕೇಳಿದೆ. ಅದಕ್ಕವರು ‘ಇದು ಉತ್ತರಮುಖಿ’ ಅಂದರು.

ಈ ಉತ್ತರಮುಖಿ ಪೆನ್ನು ಅಂದರೆ ಪೆನ್ನಿನ ಕ್ಯಾಪ್‌ನ ಮೇಲೆ ಒಂದು ಸಣ್ಣ ಗಾಜಿನ ಕವಚದೊಳಗೆ ಒಂದು ಮ್ಯಾಗ್ನೆಟ್ ಇರುತ್ತಿತ್ತು. ಪೆನ್ನನ್ನು ಹೇಗೆ ತಿರುಗಿಸಿದರೂ ಈ ಮ್ಯಾಗ್ನೆಟ್ ಮಾತ್ರ ಉತ್ತರ ದಿಕ್ಕಿಗೆ ಮುಖ ಮಾಡಿ ನಿಲ್ಲುತ್ತಿತ್ತು-ಅಂದರೆ ಪೆನ್ನಿನಲ್ಲೊಂದು ಕಂಪಾಸ್ ಅಥವಾ ದಿಕ್ಸೂಚಿ ಇತ್ತು.

ಈ ಉತ್ತರಮುಖಿ ಪೆನ್ನು ನನಗೆ ಬೇಕು ಎಂದು ತೀವ್ರವಾಗಿ ಅನಿಸಿ ಅಪ್ಪನ ಹತ್ತಿರ ಕೇಳಿಯೇಬಿಟ್ಟೆ ‘ಅಪ್ಪಯ್ಯ ಆ ಪೆನ್ನು ನನಗೆ ಕೊಡಿ’.
`ನೀನಿನ್ನೂ ಬಳಪದಲ್ಲಿ ಬರೆಯುವುದಕ್ಕೇ ಕಲಿತಿಲ್ಲ. ನಿನಗೆ ಪೆನ್ ಯಾಕೆ? ‘ ಎಂದು ಅವರು ಗದರಿಸಿದರು.

ಅವರು ಪೆನ್ನು ಕೊಡುವುದಿಲ್ಲ ಎಂದ ಒಂದೆರಡು ಗಂಟೆಯಲ್ಲೇ ನನಗೆ ಅದೆಷ್ಟು ತೀವ್ರವಾದ ಜ್ವರ ಬಂತೆಂದರೆ ನನಗೆ ಎದ್ದು ಕುಳಿತುಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಹಣೆಗೆ ತಣ್ಣೀರು ಬಟ್ಟೆ ಹಾಕಿದರೂ ಜ್ವರದ ತೀವ್ರತೆ ಕಡಿಮೆಯಾಗಲಿಲ್ಲ. ನನಗೆ ಬಂದ ಈ ತೀವ್ರ ಜ್ವರದ ಕಾರಣ ಯಾರಿಗೂ ಹೊಳೆಯಲಿಲ್ಲ. ಅಪ್ಪ ನಾನು ಜ್ವರದಲ್ಲಿ ಕನವರಿಸುತ್ತಿದ್ದುದನ್ನು ಕೇಳಿಯೋ ಏನೋ ಒಟ್ಟಿನಲ್ಲಿ ಆ ಪೆನ್ನು ತಂದು ನನ್ನ ಕೈಯಲ್ಲಿಟ್ಟರು. ನಾನದನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಅವರು ‘ಇಕೋ, ಪೆನ್ನು ಇದೆ ನಿನ್ನ ಕೈಯಲ್ಲಿ ‘ ಎಂದರು. ನಾನು ಆ ಪೆನ್ನನ್ನು ಗಟ್ಟಿಯಾಗಿ ಹಿಡಿಕೊಂಡಿರುವಂತೆಯೇ ಜ್ವರ ಇಳಿದು ಬೆವೆತೆ.

ಒಂದು ರೀತಿಯಲ್ಲಿ ಆ ವಯಸ್ಸಿನಲ್ಲಿ ನನಗೆ ಬೇಕಾದಾಗ ಜ್ವರ ಬರಿಸಿಕೊಳ್ಳುವ ಶಕ್ತಿ ಇತ್ತು. ಏನಾದರೂ ತೀವ್ರವಾಗಿ ಬೇಕು ಅನ್ನಿಸಿ ಅದು ಸಿಗದೇ ಹೋದರೆ ನನಗೆ ಜ್ವರ ಬಂದು ಬಿಡುತ್ತಿತ್ತು. ಶಾಲೆಯಲ್ಲಿ ರಜೆ ತೆಗೆದುಕೊಳ್ಳಲೂ ನನಗೆ ಈ ಜ್ವರ ಉಪಯೋಗಕ್ಕೆ ಬರುತ್ತಿತ್ತು.
**********************

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆಯ ದಿನ ಒಂದು ಜಾತ್ರೆ ನಡೆಯುತ್ತದೆ. ಬಹಳ ದೊಡ್ಡ ಜಾತ್ರೆ ಅದು. ಹಳ್ಳಿಗಳಿಂದೆಲ್ಲಾ ಜನ ಬಂದು ಸೇರುತ್ತಾರೆ. ನಾನು ‘ಸಂಸ್ಕಾರ’ದಲ್ಲಿ ವರ್ಣಿಸುವ ಜಾತ್ರೆ ಇದುವೇ. ದೊಂಬರು, ದೊಂಬರಾಟ, ಬೊಂಬಾಯಿ ಪೆಟ್ಟಿಗೆ ಎಲ್ಲಾ ಈ ಜಾತ್ರೆಯಲ್ಲಿ ಇರುತ್ತಿದ್ದವು. ಚಿಕ್ಕವನಾಗಿದ್ದಾಗ ನನಗೆ ಜಾತ್ರೆ ಎಂದರೆ ನನ್ನ ಕನಸಿನ ಲೋಕವೆಲ್ಲಾ ಕಣ್ಣೆದುರು ಬಿಚ್ಚಿಕೊಂಡಂತೆ ಆಗುತ್ತಿತ್ತು.

ಈ ಜಾತ್ರೆ ನೋಡುವುದಕ್ಕೆ ಅಪ್ಪ ನನಗೊಂದಿಷ್ಟು ದುಡ್ಡು ಕೊಡುತ್ತಿದ್ದರು. ಆ ವರ್ಷವೂ ಹೀಗೇ ನನಗೊಂದಿಷ್ಟು ದುಡ್ಡು ಕೊಟ್ಟಿದ್ದರು. ನಾನು ಜಾತ್ರೆ ನೋಡುವುದಕ್ಕೆಂದು ತೀರ್ಥಹಳ್ಳಿಗೆ ಬಂದವನು ನಮ್ಮ ಸಂಬಂಧಿ ರಾಮಾಚಾರ್ಯರ ಮನೆಯಲ್ಲಿ ಉಳಿದುಕೊಂಡಿದ್ದೆ. ಜಾತ್ರೆ ನೋಡಲೆಂದು ಅಪ್ಪ ಕೊಟ್ಟ ಕಾಸು ಮುಗಿಯಿತು. ಜತೆಗೆ ಜಾತ್ರೆಯೂ ಮುಗಿಯುತ್ತಾ ಬಂದಿತ್ತು. ನಾನು ಮನೆಗೆ ಹಿಂದಿರುಗಲು ಸಿದ್ಧವಾಗುತ್ತಿದ್ದೆ. ಆ ರಾತ್ರಿ ರಾಮಾಚಾರ್ಯರು ಮನೆಗೆ ತೆಗೆದುಕೊಂಡು ಹೋಗಲು ಒಂದು ಖರ್ಜೂರ ಕೊಂಡು ಕೊಟ್ಟರು.

ನನಗೆ ಖರ್ಜೂರವೆಂದರೆ ಬಹಳ ಇಷ್ಟ. ಅದೆಷ್ಟು ಇಷ್ಟವೆಂದರೆ ಆ ರಾತ್ರಿಯಿಡೀ ನನಗೆ ನಿದ್ರೆಯೇ ಬರಲಿಲ್ಲ. ಒಂದೊಂದೇ ಖರ್ಜೂರ ತಿಂದು ತಿಂದೂ ಪೊಟ್ಟಣದಲ್ಲಿದ್ದ ಖರ್ಜೂರವನ್ನೆಲ್ಲಾ ಮುಗಿಸಿಬಿಟ್ಟಿದ್ದೆ. ಖರ್ಜೂರವನ್ನೆಲ್ಲಾ ತಿಂದು ಮುಗಿದ ಮೇಲೆ ಭಯವಾಗ ತೊಡಗಿತು. ಅಷ್ಟೂ ಖರ್ಜೂರ ತಿಂದರೆ ಎಂದರೆ ನಾನು ತಪ್ಪಿತಸ್ಥನಾಗಿಬಿಡುತ್ತೇನೆ. ಇದನ್ನು ತಪ್ಪಿಸಿಕೊಳ್ಳಲು ಒಂದು ಕೆಲಸ ಮಾಡಿದೆ…ಅದರ ಬಗ್ಗೆ ನನಗೆ ಇವತ್ತಿಗೂ ಅಪರಾಧೀ ಭಾವ ಇದೆ.

ರಾಮಾಚಾರ್ಯರ ಮನೆಯ ಪಕ್ಕದಲ್ಲೇ ಬಲ್ಲಾಳರ ಮನೆ ಇತ್ತು. ಈ ಬಲ್ಲಾಳರಿಗೆ ಬಹಳ ಕತೆಗಳು ಗೊತ್ತಿದ್ದವು. ಅವರ ಕಿವಿಯಲ್ಲೊಂದು ದೊಡ್ಡ ಒಂಟಿ. ದೊಡ್ಡ ಜುಟ್ಟು ಇದ್ದ ಅವರು ಬಹಳ ವಿಶಿಷ್ಟವಾಗಿ ರೀತಿಯಲ್ಲಿ ಕತೆಗಳನ್ನು ಹೇಳುತ್ತಿದ್ದರು. ಇದರಿಂದಾಗಿ ಅವರು ನಮಗೆಲ್ಲಾ ಬಹಳ ಇಷ್ಟದ ವ್ಯಕ್ತಿ. ಈ ಬಲ್ಲಾಳರ ಮನೆಯ ಹುಡುಗರ ಬಗ್ಗೆಯೇ ಒಂದು ಕತೆ ಇತ್ತು-ಈ ಹುಡುಗರು ಯಾರದ್ದಾದರೂ ಮನೆಗೆ ಬಂದರೆ ಏನಾದರೂ ಕದ್ದುಕೊಂಡು ಹೋಗುತ್ತಾರೆ ಎಂಬುದು ಈ ಕತೆ.

ರಾತ್ರಿಯಿಡೀ ಕುಳಿತು ಒಂದೊಂದೇ ಖರ್ಜೂರ ತಿಂದು ಮುಗಿಸಿದ್ದ ನಾನು ಮನೆಗೆ ಹೋದವನು ‘ರಾಮಾಚಾರ್ಯರು ಖರ್ಜೂರ ಕೊಡಿಸಿದ್ದರು. ಬಲ್ಲಾಳರ ಮಗ ಅವನ್ನೆಲ್ಲಾ ತಿಂದು ಹಾಕಿಬಿಟ್ಟ’ ಎಂದುಬಿಟ್ಟೆ. ಅವನು ಕದಿಯುವವನೇ ಎಂದು ಎಲ್ಲರೂ ಅಂದುಕೊಡಿದ್ದರಿಂದ ಅದನ್ನು ಯಾರೂ ಪ್ರಶ್ನಿಸಲಿಲ್ಲ. ಅವನ ಕಳವಿನ ಸಮುದ್ರದಲ್ಲಿ ನನ್ನ ಆರೋಪವೂ ಸೇರಿ ಹೋಯಿತು. ಅವನನ್ನು ಯಾರೂ ಕೇಳಲೂ ಇಲ್ಲ. ‘ಅವನಿಗೆ ಕಾಣುವ ಹಾಗೆ ಯಾಕೆ ನೀನು ಖರ್ಜೂರ ಇಟ್ಟುಕೊಂಡಿದ್ದೆ’ ಎಂದು ನನ್ನನ್ನೇ ಗದರಿಸುವಲ್ಲಿಗೆ ಆ ಪ್ರಕರಣ ಮುಗಿದು ಹೋಯಿತು.

ಪಾಪ, ಬಲ್ಲಾಳರ ಮಗ ಖರ್ಜೂರ ತಿಂದಿರಲಿಲ್ಲ ಎಂಬುದು ಎಷ್ಟೋ ವರ್ಷಗಳ ತನಕ ನನ್ನನ್ನು ಕಾಡಿದೆ. ‘ನಾನು ನಿನ್ನ ಬಗ್ಗೆ ಒಂದು ಸುಳ್ಳು ಹೇಳಿದ್ದೆ’ ಎಂದು ಅವನಿಗೇ ಹೇಳಿಬಿಡಬೇಕು ಎಂದು ಎಷ್ಟೋ ಸಲ ಅಂದುಕೊಂಡಿದ್ದೆ. ಅವನು ಒಂದು ಸಲ ಮೈಸೂರಿನ ನಮ್ಮ ಮನಗೆ ಬಂದಿದ್ದ. ಎಲ್ಲೆಲ್ಲೋ ಅಲೆದಾಡಿಕೊಂಡಿದ್ದ ಅವನು ಊರಿಗೆ ಹೋಗುವುದಕ್ಕೆ ದುಡ್ಡು ಕೇಳುವುದಕ್ಕೆಂದು ನನ್ನನ್ನು ಹುಡುಕಿಕೊಂಡು ಬಂದಿದ್ದ. ಆಗ ಅವನೂ ಬಹಳ ಕಷ್ಟದಲ್ಲಿದ್ದ. ಅವನ ಅಲೆದಾಟದ ಹುಚ್ಚು ಆಗ ಎಷ್ಟು ಪ್ರಖ್ಯಾತವಾಗಿತ್ತೆಂದರೆ ಅವನಿಗೆ ಊರಿಗೆ ಹೋಗಲೆಂದು ನಾನು ದುಡ್ಡು ಕೊಟ್ಟರೆ ಇನ್ನೆಲ್ಲೋ ಹೋಗುತ್ತಾನೆಂಬುದು ನನಗೂ ತಿಳಿದಿತ್ತು. ನಾನು ಅವನನ್ನು ಬಸ್ ಸ್ಟ್ಯಾಂಡ್‌ಗೆ ಕರೆದುಕೊಂಡು ಹೋಗಿ ಬಸ್ ಹತ್ತಿಸಿ, ಟಿಕೆಟ್ ತೆಗೆಸಿಕೊಟ್ಟು ದಾರಿ ಖರ್ಚಿಗೆ ಒಂದಷ್ಟು ದುಡ್ಡನ್ನು ಅವನ ಕೈಯಲ್ಲಿಟ್ಟೆ. ಈ ಮೂಲಕ ನನ್ನ ಪಾಪ ಭಾವವನ್ನು ಒಂದು ರೀತಿಯಲ್ಲಿ ತೊಡೆದುಕೊಂಡಿದ್ದೆ. ಆದರೆ ‘ನಿನ್ನ ಬಗ್ಗೆ ಒಂದು ಸುಳ್ಳು ಹೇಳಿದ್ದೆ’ ಎಂದು ಅವನಿಗೆ ಹೇಳಲು ಮಾತ್ರ ಆಗಲೇ ಇಲ್ಲ.

**********************

ನನ್ನ ಮೇಲೆ ಬಹಳ ಪ್ರಭಾವ ಬೀರಿದ ಅನುಭಾವಿ ಒಬ್ಬರಿದ್ದರು. ಅವರನ್ನು ಎಲ್ಲರೂ ಅಡಿಗರು ಎನ್ನುತ್ತಿದ್ದರು. ಅವರೊಳಗೆ ಅನುಭಾವದ ಅಪೇಕ್ಷೆ ಕುಡಿಯೊಡೆದಾಗ ಅವರು ಮನೆ ಬಿಟ್ಟು ಹೊರಟವರು ಇಡೀ ಭಾರತವನ್ನು ಸಂಚರಿಸಿದ್ದರು. ಹೀಗೆ ನೋಡುವುದಕ್ಕೆ ಜುಟ್ಟು ಬಿಟ್ಟ ಬ್ರಾಹ್ಮಣರು. ಆಗಾಗ ದೇಶ ಸಂಚಾರಕ್ಕೆ ಹೋಗುತ್ತಿದ್ದವರು. ಮಡಿ-ಮೈಲಿಗೆಗಳ ಬಗ್ಗೆ ಅವರಿಗೂ ಅನುಮಾನಗಳಿದ್ದವು. ಆದರೆ ಬಹಳ ದೊಡ್ಡ ಭಕ್ತ, ಕೆಲವು ಸಲ ಪರಮಹಂಸರ ತರಹವೇ ಇದ್ದು ಬಿಡುತ್ತಿದ್ದರು.

ನನ್ನ ಮೇಲೆ ಅವರು ಬಹಳ ಪರಿಣಾಮ ಮಾಡಲು ಶುರುಮಾಡಿದ ನಂತರ ನನ್ನ ಅಪ್ಪ ಸ್ವಲ್ಪ ಗಾಬರಿಯಾಗಿದ್ದರು. ಈ ಅಡಿಗರ ಜತೆ ಇವನು ತುಂಬಾ ಬೆರೆತರೆ ಓದುವುದನ್ನೇ ಬಿಟ್ಟು ಅವರಂತೆಯೇ ಅನುಭಾವಿಯಾಗಿಬಿಡುತ್ತಾನೋ ಎಂಬ ಭಯ ಅವರದ್ದು. ಈ ಅಡಿಗರು ನನ್ನನ್ನು ಒಂದು ಕೊಳದ ಹತ್ತಿರ ಕರೆದುಕೊಂಡು ಹೋಗಿ ‘ನಾವೀಗ ದೇವರ ಭಜನೆ ಮಾಡೋಣ’ ಎಂದು ಕಣ್ಣು ಮುಚ್ಚಿ ಮೈಮರೆತು ಭಜನೆ ಮಾಡಲು ಆರಂಭಿಸುತ್ತಿದ್ದರು. ನಾನೂ ಮೈಮರೆತು ಭಜನೆಯಲ್ಲಿ ಸೇರಿಕೊಂಡುಬಿಡುತ್ತಿದ್ದೆ.

ಒಂದು ದಿನ ಅವರು ನನಗೊಂದು ಪುಸ್ತಕ ಕೊಟ್ಟರು. ಅದು ಶಿವಾನಂದ ಸರಸ್ವತಿಯವರು ಇಂಗ್ಲಿಷ್‌ನಲ್ಲಿ ಬರೆದ ಒಂದು ಪುಸ್ತಕ. ಅದು ಧರ್ಮ ಕುರಿತ ಪುಸ್ತಕ. ಈ ಅಡಿಗರಿಗೆ ಇಂಗ್ಲಿಷ್ ಕೂಡಾ ಬರುತ್ತಿತ್ತು. ತಮ್ಮ ದೇಶಸಂಚಾರದಲ್ಲಿಯೇ ಇದನ್ನೂ ಕಲಿತುಕೊಂಡಿದ್ದರು ಅನಿಸುತ್ತದೆ. ಅವರು ಜೀವನೋಪಾಯಕ್ಕೆ ತಕಲಿಯಿಂದ ನೂಲು ತೆಗೆದು ಜನಿವಾರ ಮಾಡಿ ಮಾರಾಟ ಮಾಡುತ್ತಿದ್ದರು. ವರ್ಷಕ್ಕೊಮ್ಮೆ ಮನೆಯಲ್ಲಿ ಶ್ರಾದ್ಧವಾದಾಗ ವರ್ಷವಿಡೀ ಕಷ್ಟಪಟ್ಟು ದುಡಿದು ಸಂಗ್ರಹಿಸಿದ್ದ ಎಲ್ಲವನ್ನೂ ಜನರಿಗೆ ದಾನ ಮಾಡಿಬಿಡುತ್ತಿದ್ದರು.

ಆಗೆಲ್ಲಾ ಪುಸ್ತಕಕ್ಕೆ ಬೈಂಡ್ ಹಾಕಿ ಇಡುತ್ತಿದ್ದುದು ಮಾಮೂಲು. ನನಗೆ ಕೊಟ್ಟ ಪುಸ್ತಕಕ್ಕೂ ಒಂದು ಕಾಗದದ ಬೈಂಡ್ ಇತ್ತು. ನಾನು ಪುಸ್ತಕದ ಬೈಂಡ್ ಬಿಚ್ಚಿ ಅದರ ಮುಖಪುಟ ನೋಡಲು ಹೋದಾಗ ಅದರೊಳಗೆ ಒಂದು ಹತ್ತು ರೂಪಾಯಿಯ ನೋಟು ಇತ್ತು.

ಇಷ್ಟು ಅನುಭಾವಿಯಾಗಿರುವ ಅಡಿಗರು ಈ ಹತ್ತು ರೂಪಾಯಿಗಳನ್ನೇಕೆ ಇಟ್ಟುಕೊಂಡಿದ್ದಾರೆ ಎಂಬ ಪ್ರಶ್ನೆ ನನಗೆ ಎದುರಾಯಿತು. ಆ ಹೊತ್ತಿಗಾಗಲೇ ಪರಮಹಂಸರನ್ನು ಓದಿಕೊಂಡಿದ್ದ ನನಗೆ ಅನುಭಾವಿಗಳಿಗೆ ದುಡ್ಡು ವರ್ಜ್ಯ ಎಂದುಕೊಂಡಿದ್ದೆ. ಪರಮಹಂಸರ ಹಾಸಿಗೆಯ ಕೆಳಗೆ ಯಾರೋ ದುಡ್ಡಿಟ್ಟದ್ದರಿಂದ ಪರಮಹಂಸರು ಅದರ ಮೇಲೆ ಕುಳಿತುಕೊಳ್ಳಲೂ ಆಗದೆ ಚೇಳು ಕಚ್ಚಿದಂತೆ ಒದ್ದಾಡಿಬಿಟ್ಟಿದ್ದು, ಕೊನೆಗೆ ಹಾಸಿಗೆಯ ಕೆಳಗಿದ್ದ ದುಡ್ಡು ತೆಗೆದ ನಂತರ ಅವರು ಸುಖವಾಗಿ ನಿದ್ರಿಸಿದ ಕತೆ ನನಗೆ ಗೊತ್ತಿತ್ತು. ಇದನ್ನೆಲ್ಲಾ ಯೋಚಿಸಿ ಅಡಿಗರನ್ನು ಪರೀಕ್ಷೆ ಮಾಡಿಯೇ ಬಿಡೋಣ ಎಂದುಕೊಂಡು ಆ ಹತ್ತು ರೂಪಾಯಿಯನ್ನು ಜೇಬಿಗೆ ಇಳಿಸಿ. ಪುಸ್ತಕವನ್ನು ಹಿಂದಿರುಗಿಸಿದೆ.

ಅಡಿಗರು ಪುಸ್ತಕದಲ್ಲಿ ಇದ್ದ ಹತ್ತು ರೂಪಾಯಿಯನ್ನು ಗಮನಿಸಿದ್ದು ಅದನ್ನೇನಾದರೂ ನನ್ನಲ್ಲಿ ಕೇಳಿದರೆ ಅವರೇನು ಮಹಾ ಅನುಭಾವಿಯಲ್ಲ. ನನ್ನಂತೆಯೇ ಮತ್ತೊಬ್ಬ ಮನುಷ್ಯ ಅಷ್ಟೇ ಎಂದು ತಿಳಿಯಬಹುದೆಂಬುದು ನನ್ನ ಉಪಾಯ. ಅವರು ಈ ಬಗ್ಗೆ ನನ್ನನ್ನು ಕೇಳಲೇ ಇಲ್ಲ. ಆದರೆ ನಾನು ಈ ಹತ್ತು ರೂಪಾಯಿ ಕದ್ದು ಅನುಭಾವದಿಂದ ಬಿಡುಗಡೆ ಪಡೆದುಕೊಂಡು ಬಿಟ್ಟೆ.

ಬಹಳ ವರ್ಷಗಳ ನಂತರ ನನಗೆ ಮದುವೆಯಾಗಿ ಮಕ್ಕಳೂ ಆದ ನಂತರ ಮಕ್ಕಳನ್ನೂ ಕರೆದುಕೊಂಡು ಅವರ ಮನೆಗೆ ಹೋಗಿದ್ದೆ. ನಾನು ಹೋದಾಗ ಊಟ ಮಾಡುತ್ತಿದ್ದರು. ಅದನ್ನು ಮುಗಿಸಿ ಎದ್ದು ಬಂದು ‘ಯಾವಾಗ ಬಂದೆ’ ಎಂದೆಲ್ಲಾ ವಿಚಾರಿಸಿಕೊಂಡರು. ನಾನು ಅವರಲ್ಲಿ ಹರಿಜನ ದೇವಾಲಯ ಪ್ರವೇಶವೂ ಸೇರಿದಂತೆ ಅನೇಕ ವಿಷಯಗಳನ್ನು ಮಾತನಾಡಿದೆ. ಹೀಗೇ ಮಾತನಾಡುತ್ತಾ ಇರುವಾಗ ಇವತ್ತು ನಾನು ಕದ್ದ ಹತ್ತು ರೂಪಾಯಿಯನ್ನು ಅವರಿಗೆ ಹಿಂದಕ್ಕೆ ಕೊಟ್ಟು ನಿಮ್ಮಿಂದ ಇದನ್ನು ಕದ್ದಿದ್ದೆ ಎಂದು ಹೇಳಿಬಿಡಬೇಕು ಅಂದುಕೊಂಡೆ. ಆದರೆ ಅದು ಸಾಧ್ಯವಾಗಲಿಲ್ಲ. ನಾನು ಆ ಹತ್ತು ರೂಪಾಯಿಯನ್ನು ಕದ್ದ ಕಾಲಕ್ಕೆ ಅಡಿಗರಿಗೆ ಅದೊಂದು ದೊಡ್ಡ ಮೊತ್ತವೇ ಆಗಿದ್ದಿರಬೇಕೇನೋ?

ಬಾಲ್ಯದಲ್ಲಿ ಈ ಎಲ್ಲಾ ಕಳವಿನಲ್ಲೂ ವಿಚಿತ್ರವಾದ ನಾನೊಬ್ಬ ಪ್ರತ್ಯೇಕ ಎಂಬ ಭಾವವನ್ನು ಅನುಭವಿಸಿದ್ದೇನೆ. ಈ ಕಳವಿನ ಅನುಭವಕ್ಕೂ ನನ್ನೊಳಗೆಯೇ ಇರುವ ನನಗೂ ಒಂದು ಸಂಬಂಧವಿದೆ ಎಂಬಂತೆ ಕಾಣುತ್ತದೆ. ನನ್ನ ಮುಂದಿನ ಬರವಣಿಗೆಯಲ್ಲಿ ಇದು ನನ್ನನ್ನು ತುಂಬಾ ಕಾಡಿದೆ. ಅದರ ಅರ್ಥವನ್ನು ಬಹುಶಃ ಅಲ್ಲೇ ಹುಡುಕಬೇಕೇನೋ?

ಚಿದಂಬರ ಶಾಸ್ತ್ರಿಗಳ ತಪ್ಪು ಪಂಚಾಂಗ

ನನ್ನ ಅಪ್ಪನ ಪಂಚಾಂಗ ಗಣಿತದ ಹುಚ್ಚಿನ ಬಗ್ಗೆ ಮೊದಲೇ ಹೇಳಿದ್ದೆ. ಅವರು ತಮ್ಮ ಪಂಚಾಂಗ ಗಣಿತದ ಜ್ಞಾನವನ್ನು ಇತರರಿಗೂ ಕಲಿಸುತ್ತಿದ್ದರು. ಹೀಗೆ ಪಂಚಾಂಗ ಗಣಿತವನ್ನು ಕಲಿಯಲು ನಮ್ಮ ಮನೆಗೆ ಬರುತ್ತಿದ್ದ ಒಬ್ಬರನ್ನು ನಾನು ಪ್ರೀತಿಯಿಂದ ‘ಚಿಯಾಮ’ ಎಂದು ಕರೆಯುತ್ತಿದ್ದೆ. ಅವರ ಹೆಸರು ಚಿದಂಬರಶಾಸ್ತ್ರಿ.

ಸದಾ ತಪ್ಪು ಮಾಡುತ್ತಾ ಅಪ್ಪನ ಹತ್ತಿರ ಬೈಯ್ಯಿಸಿಕೊಳ್ಳುತ್ತಿದ್ದ ಈತ ವಿಲಕ್ಷಣವಾದ ವ್ಯಕ್ತಿ. 1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಅವರಾಗ ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿಯಾಗಿದ್ದರು. ನಾನು ಇವರನ್ನು ಮೊದಲು ನೋಡಿದ್ದು ಬೇಗವಳ್ಳಿಯಲ್ಲಿ. ಇವರು ಪಂಚಾಂಗ ರಚನೆಗೆ ಅಗತ್ಯವಿರುವಷ್ಟು ಗಣಿತ ಕಲಿತರೋ ಇಲ್ಲವೋ ಗೊತ್ತಿಲ್ಲ. ಆದರೆ ಜ್ಯೋತಿಷ್ಯಕ್ಕೆ ಬೇಕಾದಷ್ಟು ಪಂಚಾಂಗ ಗಣಿತವನ್ನು ತಪ್ಪು ಮಾಡುತ್ತಲೇ ಕಲಿತುಕೊಂಡರು ಎಂಬುದಂತೂ ನಿಜ. ಅಪ್ಪನಿಗೆ ಗೊತ್ತಿದ್ದ ಪಂಚಾಂಗ ಗಣಿತ ಜ್ಯೋತಿಷ್ಯಕ್ಕೆ ಬೇಕಾದುದಕ್ಕಿಂತ ಹೆಚ್ಚು. ಆಧುನಿಕ ಕಾಲದಲ್ಲಿ ತಾರಾ ಚಲನೆಗಳೆಲ್ಲಾ ಬದಲಾಗಿಬಿಟ್ಟಿದೆ ಎಂದೆಲ್ಲಾ ತಲೆಕೆಡಿಸಿಕೊಂಡಿದ್ದ ಅವರ ಕಾಳಜಿಗಳು ಸಾಮಾನ್ಯರಿಗೆ ಸುಲಭದಲ್ಲಿ ಅರ್ಥವಾಗುವಂಥದ್ದೂ ಆಗಿರಲಿಲ್ಲ.

ಚಿದಂಬರ ಶಾಸ್ತ್ರಿ 1942ರ ಚಳವಳಿಯಲ್ಲಿ ಶಾಂತವೇರಿ ಗೋಪಾಲಗೌಡರಿಗೂ ಜತೆಗಾರ. ಇವರೆಲ್ಲಾ ಆಗ ವಿದ್ಯಾರ್ಥಿ ನಾಯಕರು. ನನಗಾಗ ಹತ್ತು ವರ್ಷ ವಯಸ್ಸು. ದೂರ್ವಾಸಪುರದಲ್ಲಿ ನನ್ನ ವಾಸ. ನಿತ್ಯ ನಡೆದುಕೊಂಡು ತೀರ್ಥಹಳ್ಳಿಯ ಮಿಡ್ಲ್ ಸ್ಕೂಲಿಗೆ ಬರುತ್ತಿದ್ದೆ. ಬೆಳಿಗ್ಗೆ ಬೇಗ ಎದ್ದು ನಡೆದುಕೊಂಡೇ ತೀರ್ಥಹಳ್ಳಿ ಸೇರುತ್ತಿದ್ದ ನಾನು ಶಾಲೆಗೆ ಹೋಗುವ ಬದಲಿಗೆ ಪ್ರಭಾತ್ ಪೇರಿಗೆ ಸೇರಿಕೊಂಡು ಬೀಡುತ್ತಿದ್ದೆ. ಆಗ ಹಾಡುತ್ತಿದ್ದ ಹಾಡುಗಳೆಲ್ಲಾ ನೆನಪಾಗುತ್ತಿವೆ…

ಕಸ್ತೂರಿಬಾಯಿಯವರೇ
ಕಮಲಾದೇವಿಯವರೇ
ನಾವು ಚಳವಳಿ ಮಾಡುವವರೇ….

ಹೀಗೆಲ್ಲಾ ಹಾಡಿಕೊಂಡು ಪ್ರಭಾತ್ ಪೇರಿ ತೆಗೆಯುತ್ತಿದ್ದ ನಾವು ಶಾಲೆಯೊಳಕ್ಕೆ ಯಾರೂ ಹೋಗದಂತೆ ಶಾಲೆಯೆದುರು ಮಲಗಿಕೊಂಡು ಬಿಡುತ್ತಿದ್ದೆವು. ನಮ್ಮ ಶಾಲೆಯ ಹೆಡ್ ಮಾಸ್ಟರ್ ಮುಕುಂದ ಶೆಣೈ ಎಷ್ಟು ಬಿಗಿಯಾದ ಮನುಷ್ಯನೆಂದರೆ ಅಡ್ಡ ಮಲಗಿದ್ದ ನಮ್ಮನ್ನು ತುಳಿದುಕೊಂಡೇ ಹೋಗಿ ಶಾಲೆಯ ಚಟುವಟಿಕೆಗಳನ್ನು ಆರಂಭಿಸಿಬಿಡುತ್ತಿದ್ದರು. ನನ್ನ ಚಳವಳಿಯ ಸಾಹಸಗಳೆಲ್ಲಾ ಅಪ್ಪನಿಗೆ ಗೊತ್ತಾಯಿತು. ಒಂದು ರಾತ್ರಿ ನಾನು ಮಲಗಿದ್ದಾಗ ನನ್ನನ್ನು ಎಬ್ಬಿಸಿ ಒಂದು ಗಾಡಿಯಲ್ಲಿ ಕೂರಿಸಿದರು. ನಾನು ನಿದ್ದೆಗಣ್ಣಿನಲ್ಲಿಯೇ ‘ಯಾಕಪ್ಪಯ್ಯ, ಎಲ್ಲಿಗೆ’ ಎಂದು ಕೇಳಿದರೆ ‘ಏಯ್, ಮಲ್ಕಳ್ಳೋ’ ಎಂದು ಗದರಿಸಿದರು. ಗಾಡಿ ಹಾಗೆಯೇ ಹೋಗಿ ಹಾದಿಗಲ್ಲು ಎಂಬ ಊರು ತಲುಪಿತು.

ಆ ಊರಿನಲ್ಲಿ ನನಗೆ ಇಳಿದುಕೊಳ್ಳಲು ಒಂದು ವ್ಯವಸ್ಥೆ ಮಾಡಿ ಕೋಣಂದೂರಿನ ಶಾಲೆಗೆ ಸೇರಿಸಿದರು. ರಾತ್ರಿ ನಿದ್ರೆಯಿಂದ ಎದ್ದಾಗ ಬೇರೆಯೇ ಊರು, ಬೇರೆಯೇ ಶಾಲೆ ಹೀಗೆ ನನ್ನ ಬದುಕೇ ಬದಲಾಗಿಬಿಟ್ಟಿತ್ತು. ಕೋಣಂದೂರಿನ ಶಾಲೆಯ ಹೆಡ್ ಮಾಸ್ಟರ್ ನನ್ನನ್ನು ಬಹಳ ಪ್ರೀತಿಯಿಂದಲೇ ಸ್ವಾಗತಿಸಿ ‘ನಿನ್ನ ಅಪ್ಪನಿಗೆ ಒಂದು ಚೀಲ ಅಕ್ಕಿ ಕಳುಹಿಸುವುದಕ್ಕೆ ಹೇಳು’ ಎಂದಿದ್ದರು. ನಾನು ಬೀಡಿ ಸೇದುವುದಕ್ಕೆ ಕಲಿತದ್ದು ಹೀಗೆ ಮನೆಯಿಂದ ಹೊರಗೆ ಹೋದ ಹತ್ತನೇ ವಯಸ್ಸಿನಲ್ಲೇ. ಮನೆಯಿಂದ ದೂರವಿದ್ದಾಗ ಮಕ್ಕಳು ಇಂಥದ್ದನ್ನೆಲ್ಲಾ ಕಲಿತುಬಿಡುತ್ತಾರೆ ಅನಿಸುತ್ತದೆ.

ನಾನು ಮೊದಲೇ ಹೇಳಿದ ‘ಚಿಯಾಮ’ ಅಥವಾ ಚಿದಂಬರಶಾಸ್ತ್ರಿ ತೀರ್ಥಹಳ್ಳಿಯ ಕ್ವಿಟ್ ಇಂಡಿಯಾ ಚಳವಳಿಯ ಹೀರೋಗಳಲ್ಲಿ ಒಬ್ಬರು. ಸರಕಾರ ಎಂದರೆ ಪೋಸ್ಟ್ ಆಫೀಸು-ಇದು ಅಬಚೂರಿನ ಪೋಸ್ಟ್ ಆಫೀಸು ಕಥೆಯಲ್ಲೂ ಅಷ್ಟೇ. ಅಲ್ಲಿ ಪೋಸ್ಟಾಫೀಸೇ ಕೇಂದ್ರ ಸರಕಾರ- ಅಂದು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ವಿದ್ಯಾರ್ಥಿ ನಾಯಕರು ಅಂದರೆ ಗೋಪಾಲಗೌಡರು, ಚಿದಂಬರ ಶಾಸ್ತ್ರಿ ಮುಂತಾದವರೆಲ್ಲಾ ಸೇರಿ ತೀರ್ಥಹಳ್ಳಿ ಪೋಸ್ಟಾಫೀಸಿನ ದೊಡ್ಡ ಡಬ್ಬಿಯನ್ನು ಕಿತ್ತು ರಾಮೇಶ್ವರ ದೇವಸ್ಥಾನದ ಹಿಂದಿನ ಬಂಡೆಗಳ ನಡುವೆ ಇದ್ದ ಮರಳನ್ನು ತೋಡಿ ಹುಗಿದಿಟ್ಟರು. ಮಾರನೆಯ ದಿನ ಇಡೀ ತೀರ್ಥಹಳ್ಳಿಯಲ್ಲಿ ಭಾರೀ ಸುದ್ದಿ. ಪೋಸ್ಟ್ ಡಬ್ಬವೇ ಇಲ್ಲವಂತೆ!

ವಿದ್ಯಾರ್ಥಿ ನಾಯಕ ಚಿದಂಬರ ಶಾಸ್ತ್ರಿಗಳು ಸುಮ್ಮನಿದ್ದಿದ್ದರೆ ಈ ಸುದ್ದಿ ಹಾಗೆಯೇ ತಣ್ಣಗಾಗಿ ಬಿಡುತ್ತಿತ್ತೋ ಏನೋ. ಆದರೆ ಚಿದಂಬರಶಾಸ್ತ್ರಿಗಳ ಬಾಯಿ ಇಡೀ ಘಟನೆಗೆ ಮತ್ತೊಂದು ತಿರುವು ನೀಡಿತು.

ತೀರ್ಥಹಳ್ಳಿಯ ಅಂದಿನ ವಿದ್ಯಾರ್ಥಿ ನಾಯಕರಾದಿಯಾಗಿ ಕೈಯಲ್ಲಿ ಸ್ವಲ್ಪ ಕಾಸಿದ್ದ ಎಲ್ಲರೂ ಕಾಫಿ ಕುಡಿಯಲು ಸೇರುತ್ತಿದ್ದ ಜಾಗವೆಂದರೆ ಕೃಷ್ಣಪ್ಪಯ್ಯನ ಹೊಟೇಲು. ಸ್ವಲ್ಪ ದೊಡ್ಡವನಾದ ಮೇಲೆ ಕೈಯಲ್ಲಿ ಕಾಸಿದ್ದಾಗ ನಾನೂ ಕಾಫಿ ಕುಡಿಯಲು ಹೋಗುತ್ತಿದ್ದೆ. ಇಲ್ಲಿ ಒಂದು ದಿನ ಚಿದಂಬರ ಶಾಸ್ತ್ರಿಗಳು ಕಾಫಿ ಕುಡಿಯುತ್ತಿದ್ದಾಗ ಅಲ್ಲಿಗೆ ಬಂದ ಒಬ್ಬ ‘ನಮ್ಮೂರಲ್ಲಿ ನಾವು ಎಂತೆಂಥಾ ಚಳವಳಿ ಮಾಡಿದ್ದೀವಿ. ನಿಮಗೇನು ಚಳವಳಿ ಮಾಡಲು ಬರುತ್ತೆ… ‘ ಎಂದು ಹಾಸ್ಯ ಮಾಡಿದನಂತೆ. ಇದನ್ನು ಕೇಳಿಸಿಕೊಂಡ ಚಿದಂಬರ ಶಾಸ್ತ್ರಿಗೆ ಅವಮಾನವಾದಂತಾಗಿ ‘ನಮಗೂ ಚಳವಳಿ ಮಾಡಲು ಬರುತ್ತೆ. ನಾವೇನು ಮಾಡಿದೆವು ಗೊತ್ತೇ? ಒಂದು ವಾರದ ಹಿಂದೆ ಪೋಸ್ಟ್ ಡಬ್ಬವನ್ನೇ ಕಿತ್ತುಕೊಂಡು ಹೋಗಿ ಮರಳಲ್ಲಿ ಹೂಳಿ ಬಂದೆವು’ ಎಂದು ತಮ್ಮ ಪರಾಕ್ರಮ ಕೊಚ್ಚಿ ಕೊಳ್ಳಲಾರಂಭಿಸಿದರು.

ಚಿದಂಬರ ಶಾಸ್ತ್ರಿಯನ್ನು ಕೆರಳಿಸಿದ್ದು ಒಬ್ಬ ಪೊಲೀಸ್ ಸಿಐಡಿ. ಚಳವಳಿಯ ಪರಾಕ್ರಮವನ್ನು ಕೊಚ್ಚಿಕೊಂಡ ಶಾಸ್ತ್ರಿಯೂ ಸೇರಿದಂತೆ ಪೋಸ್ಟ್ ಡಬ್ಬಿ ಕಿತ್ತು ಮರಳಲ್ಲಿ ಹೂತಿಟ್ಟಿದ್ದ ವಿದ್ಯಾರ್ಥಿ ನಾಯಕರನ್ನೆಲ್ಲಾ ಬಂಧಿಸಿದರು. ತೀರ್ಥಹಳ್ಳಿಯಲ್ಲಿ ಇವರನ್ನೆಲ್ಲಾ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಮರಳಲ್ಲಿ ಹೂತಿಟ್ಟ ಪೋಸ್ಟ್ ಡಬ್ಬಿಯನ್ನು ಅವರಿಂದಲೇ ಹೊರ ತೆಗೆಸಿದರು.

ಇದನ್ನು ಗೋಪಾಲಗೌಡರು ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದರು. ‘ಅದು ಎಂಥಾ ಅವಮಾನ ಮಾರಾಯ, ಮರಳನ್ನೆಲ್ಲಾ ತೆಗೆದು ಆ ಪೋಸ್ಟ್ ಬಾಕ್ಸ್ ಹಿಂದಕ್ಕೆ ಕೊಡಬೇಕಾಗಿ ಬಂತು. ಈ ದರಿದ್ರ ಚಿದಂಬರ ಶಾಸ್ತ್ರಿಯ ಬಾಯಿ ದೆಸೆಯಿಂದ’

ಈ ಚಿದಂಬರ ಶಾಸ್ತ್ರಿ ಆಮೇಲೆ ಜೈಲಿಗೆ ಹೋದರು. ಜೈಲಿನಿಂದ ಬಂದ ಮೇಲೆ ಸದಾ ನನಗೆ ಸಿಗುತ್ತಿದ್ದರು. ತಮ್ಮ ಜೈಲು ವಾಸದ ಕಥೆಗಳನ್ನೆಲ್ಲಾ ಹೇಳುತ್ತಿದ್ದರು. ‘ನಾನು ಕೆ.ಟಿ. ಭಾಷ್ಯಂಗೆ ತಲೆಗೆ ಎಣ್ಣೆ ಹಾಕಿ ಅಭ್ಯಂಜನ ಮಾಡಿಸಿದ್ದೇನೆ’ ಎಂದು ತಮ್ಮ ಅಭ್ಯಂಜನ ಪುರಾಣ ಹೇಳುತ್ತಿದ್ದರು. ಮಂತ್ರ ಹೇಳಿ ಅಭ್ಯಂಜನ ಮಾಡಿಸುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ ಚಿದಂಬರ ಶಾಸ್ತ್ರಿಗಳಿಗೆ ತಂತ್ರದಲ್ಲಿ ನಂಬಿಕೆ ಹುಟ್ಟಿಬಿಟ್ಟಿತ್ತು. ಯಾವ್ಯಾವುದೋ ಹಳ್ಳಿಗಳಿಗೆ ಹೋಗಿ ಅಲ್ಲಿದ್ದ ತಾಂತ್ರಿಕರನ್ನು ಹುಡುಕಿ ಅವರ ಹತ್ತಿರ ಮಾಟ-ಮಂತ್ರಗಳನ್ನೆಲ್ಲಾ ಕಲಿತು ಅದ್ಯಾವುದೋ ರೀತಿಯ ಧ್ಯಾನ ಮಾಡಿದರೆ ಅದು ಎಂತೆಂಥದೋ ಸಿದ್ಧಿಗಳು ಸಾಧ್ಯ ಎಂದೆಲ್ಲಾ ಹೇಳುತ್ತಿದ್ದರು.

ಆ ಕಾಲದಲ್ಲಿ ನಾವು ಹುಡುಗರಿಗೆಲ್ಲಾ ಇಂಥ ಕುತೂಹಲವಿತ್ತು. ತಂತ್ರದ ಮೂಲಕ ವಿವಿಧ ಸಿದ್ಧಿಗಳನ್ನು ಪಡೆದುಕೊಂಡವರ ಕಥೆಗಳು ನಮ್ಮ ಸುತ್ತಮುತ್ತಲೇ ಇದ್ದವು. ನೆಲದ ಮೇಲೊಂದು ವೃತ್ತ ರಚಿಸಿ ಅದರ ಮಧ್ಯೆ ಒಂದು ನೋಟು ಇಟ್ಟರೆ ಅದನ್ನು ಮುಟ್ಟಲು ಸಾಧ್ಯವಾಗುತ್ತಿರಲಿಲ್ಲವಂತೆ. ಮಾಂತ್ರಿಕ ದೂರದಲ್ಲಿ ನಿಂತು ಚಾಟಿಯನ್ನು ಜಳಪಿಸಿದರೆ ವೃತ್ತದ ಒಳಗೆ ನೋಟು ತೆಗೆಯಲು ಹೋದವನಿಗೆ ಚಾಟಿಯೇಟು ತಿಂದಷ್ಟು ನೋವಾಗಿ ಮೈಮೇಲೆ ಬರೆಗಳು ಮೂಡುತ್ತಿದ್ದವಂತೆ. ಇಂಥ ಅನೇಕ ಕಥೆಗಳನ್ನು ನಾವು ಕೇಳಿದ್ದೆವು. ಈ ಮಾಂತ್ರಿಕ ಸಿದ್ಧಿಯನ್ನು ಪಡೆಯಲು ಸತತ ಪ್ರಯತ್ನ ನಡೆಸಿದವರಲ್ಲಿ ಈ ಚಿದಂಬರ ಶಾಸ್ತ್ರಿಯೂ ಒಬ್ಬರು.

ಈ ಎಲ್ಲಾ ಕಾರಣಗಳಿಂದಲೋ ಏನೋ ಈತ ನನ್ನ ಮಟ್ಟಿಗೆ ಅಪೂರ್ವ ಶೋಭೆಯ ವ್ಯಕ್ತಿ. ಪಂಚಾಂಗದ ಗಣಿತ ಕಲಿಯಲಾರದೇ ಹೋದ, ಆದರೆ ಅಭ್ಯಂಜನ ಮಾಡಿಸಿ ಎಲ್ಲಾ ರಾಜಕೀಯ ತಲೆಗೂ ಅಭ್ಯಂಜನ ಮಾಡಿಸಿದವನು.

ನಾನು ತೀರ್ಥಹಳ್ಳಿ ಬಿಟ್ಟು ಶಿವಮೊಗ್ಗೆಗೆ ಬಂದು ಅಲ್ಲಿಂದ ಮೈಸೂರಿಗೆ ಬಂದು ಮದುವೆಯಾಗಿ, ಮಕ್ಕಳಾದವು. ಸುಮಾರು ಈ ಹೊತ್ತಿನಲ್ಲಿ ಈ ಚಿದಂಬರ ಶಾಸ್ತ್ರಿಗಳ ಮಗ ಪುಂಡ ಆದ ಎಂದು ಕೇಳಿದ್ದೆ. ನನ್ನ ಸ್ನೇಹಿತರಾದ ಗಂಗಾಧರ ಎಂಬವರು ತೀರ್ಥಹಳ್ಳಿಯ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರು. ಅವರು ತುಂಬಾ ಚೆನ್ನಾಗಿ ಕಾಲೇಜು ನಡೆಸುತ್ತಿದ್ದರು. ಚಿದಂಬರ ಶಾಸ್ತ್ರಿಗಳ ಮಗನೂ ಅದೇ ಕಾಲೇಜಿನಲ್ಲಿದ್ದ. ಅವನಿಗೆ ಹಾಜರಾತಿ ಕಡಿಮೆ ಇತ್ತು. ಹಾಗಾಗೀ ಪ್ರಿನ್ಸಿಪಾಲ್ ಗಂಗಾಧರ್ ಅವನಿಗೆ ಪರೀಕ್ಷೆ ಬರೆಯಲು ಅನುಮತಿ ಕೊಡಲು ಸಾಧ್ಯವಿಲ್ಲ ಎಂದರು. ಅವನು ಬಂಡಾಯ ಎದ್ದ. ಗಂಗಾಧರ್ ಒಮ್ಮೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ತಡೆದು ಹೊಡೆಯಲು ಹೋಗಿದ್ದನಂತೆ. ಮೈಸೂರಿನಲ್ಲಿದ್ದುಕೊಂಡು ಈ ಕತೆ ಕೇಳಿದಾಗ ಚಿದಂಬರ ಶಾಸ್ತ್ರಿಗಳ ಮಗ ನನ್ನ ಸ್ನೇಹಿತ ಗಂಗಾಧರನಿಗೆ ಹೊಡೆಯಲು ಹೋಗಿದ್ದನೇ ಎಂದು ನಾನೂ ತಬ್ಬಿಬ್ಹಾಗಿದ್ದೆ.

ಮೈಸೂರಿನ ನಮ್ಮ ಮನೆಗೆ ಒಂದು ದೊಡ್ಡ ಕಿಟಕಿ ಇತ್ತು. ಅದರ ಮೇಲೊಂದು ಸೂರ್ಯನ ಕುದುರೆ ಬಂದು ಕೂತಿತ್ತು. ನನ್ನ ಮಗಳು ಅನುರಾಧ ಇದನ್ನು ನೋಡಿದವಳೇ ‘ಅಪ್ಪ ಅಪ್ಪ ಅದೆಷ್ಟು ಹಸಿರಾಗಿದೆ. ಅದರ ಹೆಸರೇನು?’ ಎಂದು ಕೇಳಿದಳು. ‘ಅದರ ಹೆಸರು ಸೂರ್ಯನ ಕುದುರೆ’ ಎಂದೆ.

ಇದನ್ನು ಅನುರಾಧಳಿಗೆ ಹೇಳುವ ಹೊತ್ತಿನಲ್ಲಿ ನಾನು ಕಾರ್ಲ್ ಮಾರ್ಕ್ಸ್ ಓದುತ್ತಿದ್ದೆ. ಮಾರ್ಕ್ಸ್ ‘Village idiocy’ ಎಂಬ ಶಬ್ದ ಬಳಸುತ್ತಾನೆ. ಸ್ವಂಯ ಪೂರ್ಣವಾದ ಹಳ್ಳಿಗಳಲ್ಲೇ ಬೆಳೆದವರ ಮನಸ್ಸು ನಾಗರಿಕತೆಯ ಸಂಘರ್ಷಗಳನ್ನು ಒಳಗೊಳ್ಳುವಷ್ಟು ಬೆಳೆದಿರುವುದಿಲ್ಲ ಎಂಬುದನ್ನು ಮಾರ್ಕ್ಸ್ ಈ ಶಬ್ದದ ಮೂಲಕ ವಿವರಿಸಲು ಪ್ರಯತ್ನಿಸುತ್ತಾನೆ. ಇದನ್ನು ಸರಳೀಕರಿಸಿ ಹೇಳುವುದಾದರೆ ರಾಗಿ ಬೆಳೆಯುವವನ ಮನಸ್ಸಿಗಿಂತ ಭತ್ತ ಬೆಳೆಯುವವನ ಮನಸ್ಸು ಹೆಚ್ಚು ಬೆಳೆದಿರುತ್ತದೆ. ಭತ್ತವನ್ನು ಅಕ್ಕಿ ಮಾಡುವ ಕ್ರಿಯೆಯೂ ಅವನಿಗೆ ತಿಳಿದಿರಬೇಕಾಗುತ್ತೆ. ಇನ್ನು ವಾಣಿಜ್ಯ ಬೆಳೆಗಳನ್ನು ಬೆಳೆಯುವವನ ಮನಸ್ಸು ಇನ್ನೂ ಬೆಳೆದಿರಬೇಕಾಗುತ್ತದೆ. ಏಕೆಂದರೆ ಅವನು ಮಾರುಕಟ್ಟೆಗಳನ್ನು ಹುಡುಕಲೂ ತಿಳಿದಿರಬೇಕಾಗುತ್ತದೆ. ಕಾರ್ಖಾನೆಗಳನ್ನು ಮಾಡುವವನ/ದುಡಿಯುವವನ ಮನಸ್ಸು ಇನ್ನೂ ಬೆಳೆದಿರುತ್ತದೆ. ನಾನು ಬಹಳ ಸರಳ ಮಾಡಿ ಇದನ್ನು ವಿವರಿಸುತ್ತಿದ್ದೇನೆ. ಈ ಸರಳೀಕರಣದ ಮೂಲಕವೇ ನಾನು ಈ ಪರಿಕಲ್ಪನೆಗಳನ್ನು ನನ್ನ ಸೃಜನಶೀಲತೆಯೊಳಗೆ ಅರ್ಥ ಮಾಡಿಕೊಳ್ಳಲು ಸಾಧ್ಯ.

ಈ Village idiocy ಎನ್ನುವುದು ಗಾಂಧಿ ಹೇಳುವ ಗ್ರಾಮ ಸ್ವರಾಜ್ಯದ ಪರಿಕಲ್ಪನೆಗೆ ವಿರುದ್ಧವಾದುದು. ಇದು ಬಹಳವಾಗಿ ನನ್ನ ಮನಸ್ಸಿನಲ್ಲಿ ಕೊರೆಯುತ್ತಲೇ ಇತ್ತು. ಅನುರಾಥ ಕೇಳಿದ ಪ್ರಶ್ನೆಗೆ ‘ಸೂರ್ಯನ ಕುದುರೆ’ ಎಂದು ಉತ್ತರಿಸಿದಾಗ ಥಟ್ಟನೆ ನನ್ಮ ಮನಸ್ಸಿಗೆ ಬಂದದ್ದು ಸೂರ್ಯನನ್ನೂ ಒಂದು ಹುಳುವನ್ನೂ ಮತ್ತೊಂದು ಪ್ರಾಣಿಯನ್ನೂ ಒಂದಕ್ಕೊಂದು ಸಂಬಂಧವಿರುವ ಹಾಗೆ ಕಲ್ಪಿಸಿಕೊಂಡು ಅದನ್ನು ವಿವರಿಸಲು ಸಾಧ್ಯವಿರುವ ಒಂದು ಶಬ್ದವನ್ನು ಸೃಷ್ಟಿಸಿದ್ದು Village idiocy. ಅದು ಪ್ರಪಂಚದಲ್ಲಿರುವ ಎಲ್ಲಾ Phenomenonಗಳಿಗೂ ಒಂದಕ್ಕೊಂದು ಸಂಬಂಧ ಕಲ್ಪಿಸುವ ಶಕ್ತಿ ಹಳ್ಳಿಗಳ ಮನಸ್ಸಿಗೆ ಇತ್ತು. ಇದು ಅರ್ಥವಾದ ತಕ್ಷಣ ನನಗೆ ಮಾರ್ಕ್ಸ್ ಹೇಳಿದ್ದು ತಪ್ಪು ಅನ್ನಿಸಿತು. ಏಕೆಂದರೆ ಒಂದು ಸಣ್ಣ ಹುಳುವನ್ನು ಸೂರ್ಯನ ಕುದುರೆ ಎಂದು ಕರೆಯಬಹುದಾದ ರೂಪಕ ಶಕ್ತಿಯನ್ನು ಉಂಟು ಮಾಡುವಂಥ, ಹಲವು ವಿಷಯಗಳಿಗೆ ಸಂಬಂಧ ಕಲ್ಪಿಸುವ ಕಲ್ಪನಾಶಕ್ತಿ ನಮ್ಮ ಭಾಷೆಗಳನ್ನು ಮಾತನಾಡುವವರಿಗೆ ಇದೆ.

ಅದೇ ಸಮಯದಲ್ಲಿ ಚಿದಂಬರ ಶಾಸ್ತ್ರಿಗಳ ಮಗ ಗಂಗಾಧರ್ ಮೇಲೆ ದಾಳಿ ಮಾಡಿದ್ದ ಎಂಬುದನ್ನೂ ಕೇಳಿದ್ದೆ. ಇದರ ಜತೆಗೆ Village idiocy, ಸೂರ್ಯನ ಕುದುರೆ ಎಲ್ಲವೂ ಸೇರಿ ನನ್ನ ‘ಸೂರ್ಯನ ಕುದುರೆ’ ಕಥೆಯಾಗಿಬಿಟ್ಟಿತು.

ಈ ಕಥೆ ಬರೆದ ನಂತರದ ಕಥೆ ಮತ್ತೂ ವಿಶೇಷವಾದದ್ದು. ‘ಸೂರ್ಯನ ಕುದುರೆ’ ಪ್ರಕಟವಾದ ನಂತರ ಅದನ್ನು ಓದುವುದಕ್ಕೆಂದು ಗೆಳೆಯರೆಲ್ಲಾ ನನ್ನನ್ನು ತೀರ್ಥಹಳ್ಳಿಗೆ ಕರೆದರು. ಅಲ್ಲೊಂದು ಸೊಗಸಾದ ರಾಮಮಂದಿರವಿದೆ. ತೀರ್ಥಹಳ್ಳಿಯ ನಮ್ಮ ಸಾಹಿತ್ಯ ಚಟುವಟಿಕೆಗಳಿಗೆಲ್ಲಾ ಅದುವೇ ಕೇಂದ್ರ. ಅಲ್ಲೇ ನನ್ನ ಕಥೆ ಓದುವ ಕಾರ್ಯಕ್ರಮವನ್ನೂ ಏರ್ಪಡಿಸಿದ್ದರು. ನಾನು ಕಥೆಯನ್ನು ಓದಿದೆ, ಪ್ರಶ್ನೋತ್ತರ ಚರ್ಚೆಗಳೆಲ್ಲಾ ನಡೆದವು.

ಎಲ್ಲಾ ಮುಗಿದು ಇನ್ನೇನು ಹೊರಡೋಣ ಎನ್ನುವಾಗ ಒಬ್ಬ ಹುಡುಗ ನನ್ನೆದುರು ಬಂದು ‘ನಮಸ್ಕಾರ’ ಎಂದ.

‘ನಮಸ್ಕಾರ’
‘ನಾನು ಯಾರು ಗೊತ್ತಾ?’
‘ಯಾರು?’
‘ನಾನೇ ಹಡೆ ವೆಂಕಟನ ಮಗ, ನಿಮ್ಮ ಕಥೆಯಲ್ಲಿ ಬರೆದಿದ್ದೀರಲ್ಲ. ಅಪ್ಪನಿಗೆ ಎದುರಾಳಿಯಾಗಿ ನಿಲ್ಲುವವನು-ಅವನೇ’.
ಹೀಗೆ ನಾನೇ ನನ್ನ ಒಂದು ಪಾತ್ರಕ್ಕೆ ಅಲ್ಲಿ ಮುಖಾಮುಖಿಯಾಗಿಬಿಟ್ಟೆ….

[ಕೆ. ಟಿ. ಭಾಷ್ಯಂ ಹಿರಿಯ ಕಾಂಗ್ರೆಸಿಗ, ಸ್ವಾತಂತ್ರ್ಯ ಹೋರಾಟಗಾರ. 1952ರಿಂದ 1956ತನಕ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದವರು.]

ನನಗೂ ಅಮ್ಮನಿಗೂ ರಂಜದ ಹೂ

ನಾನು ಇವತ್ತು ನನ್ನ ವಿದ್ಯಾ ಗುರುಗಳ ಬಗ್ಗೆ ಹೇಳುತ್ತೇನೆ. ನನ್ನ ಮೊದಲ ವಿದ್ಯಾಗುರುವೆಂದರೆ ನನ್ನ ಅಮ್ಮ. ಏಕೆಂದರೆ ಮರಳಿನ ಮೇಲೆ ನನ್ನ ಕೈಯಲ್ಲಿ ಅಕ್ಷರಗಳನ್ನು ಬರೆಯಿಸುತ್ತಿದ್ದುದು ಅಮ್ಮ. ನಿತ್ಯ ಹೀಗೆ ಮಾಡಿಸುತ್ತಿದ್ದುದರಿಂದ ನಾನು ವಾಸ್ತವದಲ್ಲಿ ಅಕ್ಷರ ಕಲಿಯುವುದಕ್ಕೆ ಆರಂಭಿಸುವ ಹೊತ್ತಿಗೆ ಅನೇಕ ಅಕ್ಷರಗಳನ್ನು ಕಲಿತುಬಿಟ್ಟಿದ್ದೆ. ನಾವಾಗ ಕೆರೆಕೊಪ್ಪ ಎಂಬ ಕಗ್ಗಾಡಿನ ನಡುವಿನ ಹಳ್ಳಿಯಲ್ಲಿದ್ದೆವು. ಅಲ್ಲಿ ರಾತ್ರಿ ಹುಲಿ ಗರ್ಜಿಸುವುದು ಕೇಳಿಸುತ್ತಿತ್ತು. ನನ್ನನ್ನು ಆ ದಿನಗಳಲ್ಲಿ ಶಾಲೆಗೆ ಹೊರಗೆ ಕಳುಹಿಸುತ್ತಿರಲಿಲ್ಲ. ಮನೆಗೇ ಒಬ್ಬರು ಬರುತ್ತಿದ್ದರು. ಅವರ ಹೆಸರು ಕೃಷ್ಣಪ್ಪಯ್ಯ ಅವರ ಬಗ್ಗೆ ನಾನು ಈ ಮೊದಲೇ ಬರೆದಿದ್ದೇನೆ. ಅವರು ಬಹಳ ಕಟ್ಟು ನಿಟ್ಟಿನ ಮೇಷ್ಟ್ರು. ನನಗೋ ಆಗ ರಂಜದ ಹೂವನ್ನು ತಂದು ಪೋಣಿಸಿ ದೊಡ್ಡ ದೊಡ್ಡ ಸರಗಳನ್ನು ಮಾಡಿ ಅಮ್ಮನಿಗೆ ಮುಡಿಯುವುದಕ್ಕೆ ಕೊಡುವುದು, ನಾನು ಮುಡಿದುಕೊಳ್ಳುವುದರಲ್ಲೇ ಹೆಚ್ಚು ಆಸಕ್ತಿ. ಆಗ ನನಗಿನ್ನೂ ಚೌಲವಾಗಿರಲಿಲ್ಲ. ನನಗೂ ಹೆಣ್ಣು ಮಕ್ಕಳಂತೆ ಉದ್ದ ಕೂದಲಿತ್ತು. ಅಮ್ಮ ಒಂದೊಂದು ಸಾರಿ ನನಗೆ ಹುಡುಗಿಯರ ಉಡುಪು ತೊಡಿಸಿ ಹೂವು ಮುಡಿಸುತ್ತಿದ್ದಳು.

ನಾನು ರಂಜದ ಹೂವನ್ನು ಪೋಣಿಸುತ್ತಾ ಕುಳಿತಿದ್ದನ್ನು ಕಂಡರೆ ಕೃಷ್ಣಪ್ಪಯ್ಯನವರಿಗೆ ಸಿಟ್ಟು ಬರುತ್ತಿತ್ತು. ನಾನು ಓದಲು ಕಲಿಯುವುದರ ಬದಲಿಗೆ ಹೂವು ಪೋಣಿಸುತ್ತಾ ಕುಳಿತರೆ ಯಾರಿಗೆ ಸಿಟ್ಟು ಬರುವುದಿಲ್ಲ! ಅವರು ಸಿಟ್ಟು ಮಾಡಿಕೊಂಡು ಗದರಿಸಿದರೆ ನನಗೂ ಸಿಟ್ಟು ಬರುತ್ತಿತ್ತು. ಕೃಷ್ಣಪ್ಪಯ್ಯನವರ ಕಾಲು ಕುಂಟಾಗಿತ್ತು. ಅದನ್ನು ಗಮನಿಸಿದ್ದ ನಾನು ‘ಕುಂಟಕಾಲು ಕೃಷ್ಣಪ್ಪಯ್ಯ’ ಎಂದುಬಿಡುತ್ತಿದ್ದೆ. ನಮ್ಮ ಅಜ್ಜ ಇದನ್ನು ಕೇಳಿಸಿಕೊಂಡು ಬಹಳ ಗದರಿಸುತ್ತಿದ್ದರು. ‘ಮೇಷ್ಟ್ರನ್ನು ಹಂಗೆಲ್ಲಾ ಕರೆಯಬಾರದು. ಗುರುಗಳು ದೇವರ ಸಮಾನ’ ಬುದ್ಧಿವಾದ ಹೇಳುತ್ತಿದ್ದರು.

ಕೃಷ್ಣಪ್ಪಯ್ಯನವರೇ ನನ್ನ ಮೊದಲ ಶಿಕ್ಷಕರು. ಅವರೇನು ಕಲಿಸಿದರು ಎಂಬುದೆಲ್ಲಾ ನನಗೀಗ ನೆನಪಿಲ್ಲ. ಮೊದಲ ಹಂತದ ಅಕ್ಷರಾಭ್ಯಾಸ ಮಾಡಿಸಿದ್ದಂತೂ ಅವರೇ.

ಇದಾದ ಮೇಲೆ ನಾನು ನನ್ನ ಅಮ್ಮನ ಊರು ಮೇಳಿಗೆಗೆ ಹೋಗಿ ಅಲ್ಲಿನ ಶಾಲೆಯಲ್ಲಿ ಕೆಲವು ಕಾಲ ಕಲಿತೆ. ಅಲ್ಲಿದ್ದ ಶೇಷಗಿರಿ ಮೇಷ್ಟ್ರು ನನ್ನ ಅಮ್ಮನಿಗೂ ಶಿಕ್ಷಕರಾಗಿದ್ದವರು. ಅದು ಏಕೋಪಾಧ್ಯಾಯ ಶಾಲೆ. ಆ ಶಾಲೆಯ ಹೊರಗೆ ತುಂಬಾ ಧೂಳು ತುಂಬಿದ ಅಂಗಳವಿತ್ತು. ಆ ಧೂಳಿನಲ್ಲಿ ದುಂಡಗಿನ ಸಣ್ಣ ಸಣ್ಣ ಕುಳಿಗಳ ಒಳಗೆ ಇರುವ ಒಂದು ಕಪ್ಪು ಹುಳು ಇರುತ್ತಿತ್ತು. ಅದನ್ನು ತನ್ನಾದೇವಿ, ಗುಬ್ಬಿ ಎಂದೆಲ್ಲಾ ಕರೆಯುತ್ತಾರೆ. ಅದನ್ನು ಆ ಕುಳಿಗಳಿಂದ ಎಬ್ಬಿಸಿ ‘ಕಾಶಿಗೆ ಹೋಗೋ ದಾರಿ ತೋರಿಸು, ಕಾಶಿಗೆ ಹೋಗೋ ದಾರಿ ತೋರಿಸು’ ಎಂದು ಬೆರಳಿನಿಂದ ಸುತ್ತು ಬರುತ್ತಿದ್ದವು. ಅದು ಹಿಂದೆ ಹಿಂದೆ ಹೋಗುತ್ತಿತ್ತು. ಮೇಷ್ಟ್ರು ಗದರಿಸಿ ನಮ್ಮನ್ನು ಒಳ ಕರೆದು ಪಾಠ ಮಾಡಬೇಕಾಗುತ್ತಿತ್ತು.

ನಮಗೆ ತರಗತಿಯೊಳಗೆ ಕುಳಿತುಕೊಳ್ಳುವುದಕ್ಕಿಂದ ಹೊರಗೆ ಹೋಗಿ ಆಡುವುದೇ ಪ್ರಿಯವಾದುದರಿಂದ ಹೊರಗೆ ಹೋಗುವುದಕ್ಕೆ ಉಪಾಯ ಯೋಚಿಸುತ್ತಲೇ ಇರುತ್ತಿದ್ದೆವು. ಸುಲಭದ ಉಪಾಯವೆಂದರೆ ‘ಒಂದಕ್ಕೆ ಸಾರ್’ ಎಂದು ಎದ್ದು ನಿಂತು ಕೇಳುವುದು. ಅವರು ಹೊರಗೆ ಹೋಗಲು ಅನುಮತಿ ಕೊಡುತ್ತಿದ್ದರು. ಆದರೆ ನಮ್ಮ ಕಳ್ಳಾಟಗಳೂ ಗೊತ್ತಿದ್ದ ಅವರು ಕೆಲವೊಮ್ಮೆ ಹೊರಕ್ಕೆ ಹೋಗಲು ಬಿಡುತ್ತಿರಲಿಲ್ಲ. ಒಂದು ದಿನ ನಿಜವಾಗಲೂ ನನಗೆ ಹೊರಗೆ ಹೋಗಲೇಬೇಕಾಗಿತ್ತು. ಆದರೆ ಅವರು ಹೊರಗೆ ಕಳುಹಿಸುವುದಿಲ್ಲ ಎಂದುಕೊಂಡು ಕೇಳಲೂ ಹೋಗದೇ ಬೆಂಚಿನ ಮೇಲೆಯೇ ಮೂತ್ರ ಮಾಡಿಬಿಟ್ಟಿದ್ದೆ.

ಪಕ್ಕದಲ್ಲಿ ಕುಳಿತಿದ್ದ ಹುಡುಗಿಯೊಬ್ಬಳು ‘ಸಾರ್ ಒದ್ದೆ’ ಎಂದು ಕೂಗಿಕೊಂಡಳು.
‘ನೀನು ಹೇಳಬಾರದಿತ್ತೇನೋ?’ ಎಂದ ಶೇಷಗಿರಿ ಮೇಷ್ಟ್ರು ನನ್ನನ್ನು ಮನಗೆ ಕಳುಹಿಸಿದರು. ಪ್ರೈಮರಿ ಸ್ಕೂಲಿನ ದಿನಗಳ ಈ ಘಟನೆಯನ್ನು ನನಗೆ ಮರೆಯಲು ಸಾಧ್ಯವೇ ಇಲ್ಲ.

`ನನ್ನ ತಲೆಯ ಹಾಗಿರುವ ಕನ್ನಡದ ೧`

ಮೇಳಿಗೆ ಸ್ಕೂಲಿನಲ್ಲಿ ನನ್ನ ಕಲಿಕೆ ಮುಗಿದ ನಂತರ ತೀರ್ಥಹಳ್ಳಿಯ ಮಿಡ್ಲ್ ಸ್ಕೂಲಿಗೆ ಸೇರಿದೆ. ನಾನು ಮೊದಲೊಂದು ವರ್ಷವೋ ಏನೊ ಹಳ್ಳ ದಾಟಿ, ಗದ್ದೆ ಅಂಚಲ್ಲಿ ನಡೆದು, ಕಾಡು ಹೊಕ್ಕು, ಗಾಡಿ ರಸ್ತೆ ಸೇರಿ ಮತ್ತಷ್ಟು ನಡೆದು ಮೇಳಿಗೆಯಿಂದಲೇ ಈ ಶಾಲೆಗೂ ಹೋಗುತ್ತಿದ್ದೆ. ಇದು ಆ ಕಾಲಕ್ಕೆ ಪ್ರಸಿದ್ಧವಾದ ಶಾಲೆ. ಕುವೆಂಪು ಕೂಡಾ ಇಲ್ಲಿಯೇ ಕಲಿತರೆಂದು ನಾವು ಕೇಳಿದ್ದೆವು. ಹಳ್ಳಿಯಿಂದ ತೀರ್ಥಹಳ್ಳಿಗೆ ಹೋಗುತ್ತಿದ್ದ ನಮ್ಮೆಲ್ಲರ ಕೈಯಲ್ಲೂ ಒಂದೊಂದು ಕೊಡೆಗಳಿರುತ್ತಿದ್ದವು. ಒಂದೊಂದು ಸಾರಿ ಈ ಕೊಡೆಯನ್ನು ಯಾರೋ ಕದ್ದು ಬಿಡುತ್ತಿದ್ದರು.
ಇಲ್ಲದಿದ್ದರೆ ನಾವೇ ಆಟದ ಗಡಿಬಿಡಿಯಲ್ಲಿ ಮರೆತು ಶಾಲೆಯಲ್ಲೇ ಬಿಟ್ಟು ಬರುತ್ತಿದ್ದೆವು. ಇಂಥ ಸಂದರ್ಭಗಳಲ್ಲಿ ಮಳೆ ಬಂದರೆ ಕಂಬಳಿ ಕೊಪ್ಪೆ ಹಾಕಿಕೊಂಡೇ ಶಾಲೆಗೆ ಹೋದದ್ದೂ ಇದೆ. ವಾಲೆ ಕೊಡೆ ಹಿಡಿದು ಅದನ್ನು ಗರ್ಎಂದು ತಿರುಗಿಸುತ್ತ ನಡೆದದ್ದೂ ಇದೆ. ಹಳ್ಳ ಮಳೆಗಾಲದಲ್ಲಿ ತುಂಬಿದರೆ ಬಿದಿರು ಸಾರದ ಮೇಲೆ ಸರ್ಕಸ್ಸಿನಲ್ಲಿ ನಡೆದಂತೆ ಎರಡು ಕೈಗಳನ್ನೂ ಚಾಚಿ ಹುಡುಗಾಡಿಕೆಯಲ್ಲಿ ಕೊಡೆ ಚೀಲ ಬ್ಯಾಲನ್ಸ್ ಮಾಡಿ ನಡೆಯಬೇಕು.

ಶಾಲೆಯಲ್ಲೇನಾದರೂ ಕೊಡೆ ಕಳೆದು ಹೋದರೆ ಶಾಲೆಯ ಪ್ಯೂನ್ ‘ಅರೆಕ್ಯಾಮ್’ ಅದನ್ನು ಹುಡುಕಿ ಕೊಡುತ್ತಿದ್ದ. ಅಂದರೆ ಅವನೇ ಮುಚ್ಚಿಟ್ಟಿದ್ದನ್ನು ಅವನೇ ಪ್ರತ್ಯಕ್ಷಗೊಳಿಸಿ ಕೊಡುತ್ತ ಇದ್ದ. ಈ ಉಪಕಾರಕ್ಕಾಗಿ ನಾವು ಅವನಿಗೆ ಬ್ರಾಹ್ಮಣ ಬಾಲಕರಾಗಿ ಹಬ್ಬಗಳಲ್ಲಿ ಗಳಿಸಿದ ದಕ್ಷಿಣೆ ದುಡ್ಡನ್ನು ಲಂಚವಾಗಿ ಕೊಡಬೇಕಾಗಿ ಬರುತ್ತಿತ್ತು. ಮಹಾ ಸಾಹಸಿ ಈ `ಅರೆ ಕ್ಯಾಮ್’. ಹಾವು ಕಂಡರೆ ಅದನ್ನು ಸಲೀಸಾಗಿ ಬಾಲ ಹಿಡಿದು ಎತ್ತಿ, ಎತ್ತಿದ ಕೈಯಿಂದ ಹಗ್ಗದಂತೆ ರೊಯ್ಯನೆ ಅದನ್ನು ಸುತ್ತಿ, ಸುಸ್ತುಗೊಳಿಸಿ ದೂರದಲ್ಲಿ ಬಿಟ್ಟು ಬರುತ್ತಿದ್ದ.

ಈ ಶಾಲೆಯಲ್ಲಿ ಮುಕುಂದ ಶೆಣೈ ಎಂಬ ಉಪಾಧ್ಯಾಯರಿದ್ದರು. ಅವರು ತಮ್ಮ ಕನ್ನಡಕವನ್ನು ಮೂಗಿನ ತುದಿಗೆ ಇಳಿಸಿಕೊಂಡು ದುರುಗುಡುತ್ತ ವಿದ್ಯಾರ್ಥಿಗಳನ್ನು ದಿಟ್ಟಿಸಿ ಭಾರೀ ಶಿಕ್ಷೆಗಳನ್ನೇ ಕೊಡುತ್ತಿದ್ದರು. ಅವರು ಕೊಡುತ್ತಿದ್ದ ಶಿಕ್ಷೆ ಹೇಗೆ ಅಂದರೆ `ಎಲ್ಲಿ ನಿನ್ನ ಎಡಗೈ ನೀಡು’ ಎಂದು `ಅರೆಕ್ಯಾಮ್ ಬೆತ್ತ ತಗೊಂಬಾ’ ಎನ್ನುತ್ತಿದ್ದರು. (ಈ ಅರೆಕ್ಯಾಮ್‌ನ ನಿಜ ಹೆಸರು ಅರೇಕೊಪ್ಪ. ಆದರೆ ಹೆಡ್ ಮಾಸ್ಟರ್ಗತ್ತಿಗೆ ದೀರ್ಘವಾಗಬಲ್ಲ ಆಆಆ ರೆ ಕ್ಯಾ ಯಾ ಯಾ ಮ್) ನಾವೇನಾದರೂ ದುಡ್ಡು ಕೊಟ್ಟು ಅರೆಕ್ಯಾಂನನ್ನು ಚೆನ್ನಾಗಿ ಇಟ್ಟುಕೊಂಡಿದ್ದರೆ ಅಷ್ಟೇನೂ ಪೆಟ್ಟಾಗದ ಬೆತ್ತಗಳನ್ನು ತಂದುಕೊಡುತ್ತಿದ್ದ. ಇಲ್ಲದಿದ್ದರೆ ಪೆಟ್ಟು ಬೀಳುವಂಥ ಗಟ್ಟಿ ಬೆತ್ತಗಳನ್ನು ತಂದುಕೊಡುತ್ತಿದ್ದ.

1942 ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ನಾವೆಲ್ಲಾ ಶಾಲೆಯ ಗೇಟಿಗೆ ಅಡ್ಡ ಮಲಗಿ ನಮ್ಮ ರಚ್ಚನ್ನು ದೇಶಭಕ್ತಿ ನೆವದಲ್ಲಿ ತೋರಿಕೊಂಡಾಗ ನಮ್ಮನ್ನು ತುಳಿದುಕೊಂಡೇ (ಈ ಹೆಡ್ ಮಾಸ್ಟ್ರು) ಹೋಗಿ ಶಾಲೆಯನ್ನು ನಡೆಸುತ್ತಿದ್ದರು. ಹುಡುಗಿಯರನ್ನು ಮಾತ್ರ ಕೈಹಿಡಿದು, ಅವರಿಂದಲೂ ನಮ್ಮನ್ನು ತುಳಿಸಿ, ತಾವೇ ಒಳಗೆ ಕರೆದುಕೊಂಡು ಹೋಗಿ. ನಮ್ಮ ದೇಶಭಕ್ತಿ, ಅವರ ರಾಜ ಭಕ್ತಿ ಪ್ರಕಟವಾಗುತ್ತ ಇತ್ತು..

ಈ ಶಾಲೆಯಲ್ಲಿರುವಾಗ ನನಗೊಬ್ಬ ಮೇಷ್ಟ್ರು ಸಿಕ್ಕರು. ಇವರು ಸಿಗುವ ತನಕ ನಾನು ಏನನ್ನೂ ಸರಿಯಾಗಿ ಕಲಿಯುತ್ತಿರಲಿಲ್ಲ. ಈ ಮೇಷ್ಟ್ರ ಗುಣ ಏನೆಂದರೆ ಅವರು ತನ್ನ ದೇಹವನ್ನೇ ಶಿಕ್ಷಣದ ಸಾಧನವನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಅವರು ಬಹಳ ಒಳ್ಳೆಯ ಮೇಷ್ಟ್ರು. ಅವರ ಹೆಸರನ್ನು ಮರೆತುಬಿಟ್ಟಿದ್ದೇನೆ. ಅವರಿಗೆ ತಲೆ ಎದುರುಗಡೆ ಸ್ವಲ್ಪ ಬೋಳಾಗಿತ್ತು-ಅಥವಾ ಅವರು ಎದುರಗಡೆ ಕ್ಷೌರ ಮಾಡಿಸಿಕೊಂಡು ಹಿಂದುಗಡೆ ಜುಟ್ಟು ಬಿಟ್ಟಿದ್ದರು. ಅವರ ತಲೆಯ ಎದುರಿನ ಕೂದಲು ಕಮಾನಾಗಿತ್ತು. ಕನ್ನಡದ ಸಂಖ್ಯೆ ಒಂದನ್ನು ಹೇಳಿಕೊಡುವುದಕ್ಕೆ ಅವರು ತಮ್ಮ ತಲೆಯನ್ನು ಬಾಗಿಸಿ ಆ ಕಮಾನನ್ನು ತೋರಿಸಿ ‘ನನ್ನ ತಲೆ ನೋಡಿ. ಇದೇ ಕನ್ನಡದ ಒಂದು’ ಎಂದಿದ್ದರು. ಇವತ್ತಿಗೂ ಕನ್ನಡದ ಒಂದು ನೋಡಿದರೆ ನನಗೆ ನನ್ನ ಮೇಷ್ಟ್ರ ತಲೆಯೇ ನೆನಪಿಗೆ ಬರುತ್ತದೆ.

ಭೂಮಿ ಸೂರ್ಯನ ಸುತ್ತ ಹೇಗೆ ತಿರುಗುತ್ತದೆ ಎಂಬುದನ್ನು ವಿವರಿಸುವುದಕ್ಕೆ ಅವರು ಮೇಜನ್ನು ಇಟ್ಟು ಅವರೇ ಭೂಮಿಯಾಗಿ ಅದರ ಸುತ್ತ ತಿರುಗುತ್ತಿದ್ದರು. ಪೇಟವನ್ನು ಒಂದು ಕಡೆ ಇಟ್ಟು ‘ಇದು ಚಂದ್ರ’ ಎನ್ನುತ್ತಿದ್ದರು. ಅವರ ದೇಹದ ಎಲ್ಲಾ ಭಾಗಗಳನ್ನೂ ಅವರು ಪಾಠೋಪಕರಣಗಳಾಗಿ ಬಳಸಿಕೊಳ್ಳುತ್ತಿದ್ದರು. ಆಗ ನಾನು ಇದ್ದಕ್ಕಿದ್ದ ಹಾಗೇ ಕಲಿಯುವುದಕ್ಕೆ ಶುರುಮಾಡಿದೆ. ನಮ್ಮ ಅಪ್ಪ ಮನೆಯಲ್ಲಿ ಸಂಸ್ಕೃತದಲ್ಲಿ ಇರುವ ಗಣಿತವನ್ನು ಹೇಳಿಕೊಡಲು ಆರಂಭಿಸಿದರು. ಆ ಸಂಸ್ಕೃತದಲ್ಲಿ ಗಣಿತವನ್ನು ಕಲಿತರೆ ನಾವು ಪಠ್ಯ ಪುಸ್ತಕದಲ್ಲಿರುವ ಗಣಿತದ ಲೆಕ್ಕಗಳಿಗೆ ಸುಲಭದ ಉತ್ತರ ಪಡೆಯಬಹುದು.. ಇವು ಬಾಯಿ ಪಾಠಮಾಡಬಲ್ಲ ಗಣಿತ ಸೂತ್ರಗಳು. ಇದರಿಂದಾಗಿ ನಾನು ಉಳಿದವರಿಗಿಂತ ಬೇಗ ಬೇಗ ಲೆಕ್ಕಗಳನ್ನು ಮಾಡುತ್ತಿದ್ದೆ.

ಇದೇ ದಿನಗಳಲ್ಲಿ ನಮಗೆ ಸರ್ವೋತ್ತಮ ರಾಯರು ಎಂಬ ಮತ್ತೊಬ್ಬರು ಮೇಷ್ಟ್ರಿದ್ದರು. ಅವರು ನನ್ನಲ್ಲಿ ನನಗೆ ನಂಬಿಕೆ ಹುಟ್ಟುವುದಕ್ಕೆ ಕಾರಣರಾದವರು. ಯಾವ ಲೆಕ್ಕವಾದರೂ ನಾನು ಕೂಡಲೇ ಮಾಡಿಬಿಡುತ್ತಿದ್ದರೆ. ಸರ್ವೋತ್ತಮರಾಯರು ನನ್ನನ್ನು ‘ಮಗು ಮಾಣಿಕ್ಯಂ’ ಎಂದು ಕರೆಯುತ್ತಿದ್ದರು.- ಅದ್ಯಾಕೆ `ಅಂ’ ನಿಂದ ಅವರ ಮೆಚ್ಚುಗೆಗೆ ಒಂದು ರಂಗಿರುತ್ತ ಇತ್ತೋ ವಿವರಿಸಲಾರೆ.

ಗಣಿತ ಸುಲಭವಾದ ತಕ್ಷಣ ಶಾಲೆಯೂ ಇಷ್ಟವಾಗತೊಡಗುತ್ತದೆ. ಒಂದು ರೀತಿಯಲ್ಲಿ ಗಣಿತವೇ ಶಾಲೆಯನ್ನೂ ದ್ವೇಷಿಸುವಂತೆ ಮಾಡುತ್ತಿರುತ್ತದೆ. ಇನ್ನೊಂದು ಇಂತಹ ವಿಷಯವೆಂದರೆ ಚರಿತ್ರೆ. ಇವತ್ತಿಗೂ ಹಲವಾರು ಶಾಲೆಗಳಲ್ಲಿ ಇದೇ ಸ್ಥಿತಿ ಇದೆ.

ಮೇಳಿಗೆಯ ನಂತರ ತೀರ್ಥಹಳ್ಳಿಯಲ್ಲೇ ಇರುವ ನಮ್ಮ ಕುಟುಂಬದ ಹಿರಿಯರಾದ ರಾಮಾಚಾರ್ಯರ ಮನೆಯಿಂದ ಮಿಡಲ್ ಸ್ಕೂಲಿಗೆ ಹೋಗುತ್ತ ಇದ್ದಾಗ ನಡೆದೊಂದು ಘಟನೆ ನೆನಪಾಗುತ್ತದೆ. ಸ್ಕೂಲಿನ ನಿಯಮದ ಪ್ರಕಾರ ಟೋಪಿ ಹಾಕಿಕೊಂಡು ಕ್ಲಾಸಿಗೆ ಬರುವುದು ಕಡ್ಡಾಯ. ನನ್ನ ಹಿರಿಯರು ಅವರ ಟ್ರಂಕಿನಿಂದ ಒಂದು ಒಳ್ಳೆಯ ಕಪ್ಪು ಟೋಪಿಯನ್ನು ಹೊರತೆಗೆದು ನನಗೆ ಕೊಟ್ಟಿದ್ದರು. ಒಂದು ದಿನ ನಾನು ಶಾಲೆಯಿಂದ ಹಿಂದಕ್ಕೆ ಬಂದಾಗ `ಟೋಪಿ ಎಲ್ಲೋ?’ ಎಂದು ಕೇಳಿದರು. ನಾನು ತಲೆ ಮುಟ್ಟಿಕೊಂಡಾಗಲೇ ಗೊತ್ತಾದ್ದು: ಯಾರೋ ಕಿಡಿಗೇಡಿಹುಡುಗರು ಕಿವಿಯಲ್ಲಿ ಹರಳು ಒಂಟಿ ಹಾಕಿಕೊಂಡು ಹಣೆಗೆ ಸಾದನ್ನು ಇಟ್ಟು ಬರುತ್ತ ಇದ್ದ, ಇನ್ನೂ ಎಳಸಾಗಿ ನಡೆದುಕೊಳ್ಳುತ್ತ ಇದ್ದ ನನ್ನ ಟೋಪಿಯನ್ನು ಎಗರಿಸಿಬಿಟ್ಟಿದ್ದರು ಎಂದು. ಇವತ್ತಿಗೂ ನನ್ನ ಹೆಂಡತಿಗೆ ಗ್ಯಾರಂಟಿಯಿಲ್ಲ; ಏನನ್ನಾದರೂ ಮೈಮರೆವಿನಲ್ಲಿ ನಾನು ಕಳೆದುಕೊಳ್ಳದೆ ಹಿಂದೆ ಬರಬಹುದು ಎಂದು.

ಆಮೇಲೆ ಹೈಸ್ಕೂಲಿಗೆ ಬಂದೆ. ನನ್ನ ಮನಸ್ಸಿನಲ್ಲಿ ಆದ ಅನೇಕ ಬದಲಾವಣೆಗಳಿಗೆ ತೀರ್ಥಹಳ್ಳಿಯ ಹೈಸ್ಕೂಲು ಕಾರಣ. ನಾನು ಆಗ ದೂರ್ವಾಸಪುರದಲ್ಲಿದ್ದೆ. ಅದಕ್ಕೆ ಮುಳಬಾಗಲು ಎಂಬ ಮತ್ತೊಂದು ಹೆಸರೂ ಇತ್ತು. ನನ್ನ ಸಂಸ್ಕಾರದಲ್ಲಿ ಬರುವ ದೂರ್ವಾಸಪುರ ಹೆಚ್ಚು ಕಡಿಮೆ ಇದೇ. ಅಲ್ಲಿಂದ ನಾಲ್ಕೈದು ಕಿಲೋಮೀಟರ್‌ಗಳಷ್ಟು ದೂರ ಬರಿಗಾಲಿನಲ್ಲೇ ನಡೆದುಕೊಂಡು ತೀರ್ಥಹಳ್ಳಿಯ ಶಾಲೆಗೆ ಬರುತ್ತಿದ್ದೆವು.

ಸಾಮಾನ್ಯವಾಗಿ ಈ ವಯಸ್ಸಿನ ಹುಡಗರು ಗುಂಪು ಕಟ್ಟಿಕೊಳ್ಳುತ್ತಾರೆ. ಈ ಗುಂಪು ಕಟ್ಟುವ ಚಟ ನನಗೂ ಇತ್ತು. ಒಂದು ಗುಂಪಿಗೆ ನಾನೇ ಲೀಡರ್. ಇನ್ನೊಂದು ಗುಂಪಿಗೆ ಅಪ್ಪಾಜಿ ಅಂತ ಮತ್ತೊಬ್ಬ ಲೀಡರ್. ಅವನಿಗೊಂದು ಅಡ್ಡ ಹೆಸರು ಇಟ್ಟಿದ್ದೆ ‘ಬೊಗ್ರ’ ಅಂತ. ಅವನು ನನಗೂ ಒಂದು ಅಡ್ಡ ಹೆಸರು ಇಟ್ಟಿದ್ದ. ಉಬ್ಬು ಹಲ್ಲಿನ ಹುಡುಗಿಯೊಬ್ಬಳ `ಪ್ರಿಯಕರ’ ಎಂದು. ಇನ್ನೂ ಕೆಟ್ಟ ಶಬ್ದದಲ್ಲಿ.

ನಾವು ಇಬ್ಬರೂ ಸದಾ ಯುದ್ಧಕ್ಕೆ ತುಡಿಯುತ್ತಿದ್ದ ಎರಡು ಗುಂಪುಗಳ ನಾಯಕರು. ಫೈಟ್ ಮಾಡುವುದು, ಮಾತು ಬಿಡುವುದು, ಮಾತಾಡಲು ಶುರು ಮಾಡುವುದರ ಮೂಲಕ ರಾಜಿಯಾಗುವುದು. ರಾಜಿಯ ನಿಯಮ ಮುರಿದಾಗ ಮತ್ತೆ ಕಾದಾಡುವುದು– ಹೀಗೆ.

ನಾನು ಆಗ ಎಷ್ಟು ದ್ವೇಷ ಸಾಧಿಸುತ್ತಿದ್ದೆ, ಅದಕ್ಕಾಗಿ ಎತೆಂಥಾ ಕುಟಿಲೋಪಾಯಗಳನ್ನು ಹೂಡುತ್ತ ಇದ್ದೆ- ನೆನದರೆ ಆಶ್ಚರ್ಯವಾಗುತ್ತದೆ..ಇದೇ ಸಂದರ್ಭದಲ್ಲಿ ಒಂದು ರೀತಿಯ ಐಡಿಯಲಿಸಂ ಕೂಡಾ ನನ್ನಲ್ಲಿ ಇತ್ತು. ಕಾದಂಬರಿಗಳನ್ನು ಓದಿದ್ದರಿಂದ ಬಂದ ಐಡಿಯಲಿಸಂ ಇದು. ಮೊದಲು ಶರಶ್ಚಂದ್ರರ ಕಾದಂಬರಿಗಳನ್ನು ಓದಲು ಶುರು ಮಾಡಿದೆ. ಆಮೇಲೆ ಅನಕೃ ಅವರ ಕಾದಂಬರಿಗಳಲ್ಲಿ ಓದು ಮುಂದುವರಿಯಿತು. ಮತ್ತೆ ಕಾರಂತರ ಚೋಮನ ದುಡಿ, ಕುವೆಂಪು ಅವರ ಕಾನೂರು ಹೆಗ್ಗಡತಿ ಓದಿದೆ. ಇವೆಲ್ಲಾ ನನ್ನ ಮನಸ್ಸಿನ ಮೇಲೆ ಬಹಳ ಪರಿಣಾಮ ಮಾಡಿದವು

ನನಗೊಬ್ಬ ಕ್ಲಾಸ್ ಮೇಟ್ ಇದ್ದ. ಅವನ ಹೆಸರು ಕೃಷ್ಣಮೂರ್ತಿ ಭಟ್ಟ. ಅವನು ಭೀಮಸೇನ ಜೋಷಿ ಹಾಡಿದ ಹಾಗೆಯೇ ಹಾಡುತ್ತಿದ್ದ. ಆಗಲೇ ಅವನು ಭೀಮಸೇನ ಜೋಷಿಯವರ ಹಾಡುಗಳನ್ನು ಕೇಳುತ್ತಿದ್ದ. ಬೇಂದ್ರೆಯ ಎಲ್ಲಾ ಪದ್ಯಗಳನ್ನೂ ನನಗೆ ಇಷ್ಟವಾಗುವಂತೆ ಮಾಡಿದ್ದೂ ಅವನೇ.

ಆಗ ನಮ್ಮ ಹೈಸ್ಕೂಲ್‌ನ ಹೆಡ್ ಮಾಸ್ಟ್ರು ಯೋಗಾನರಸಿಂಹನ್ ಅಂತ. ಬಿಳೀ ಪೇಟ ಕಟ್ಟಿ, ಬಿಳೀ ಕೋಟ್ ಹಾಕಿ, ಬಿಳೀ ದೋತರ ಉಟ್ಟು ಶುಭ್ರವಾಗಿ ಕ್ಲಾಸಿಗೆ ಬಂದು ನಾವು ಸಣ್ಣ ಹುಡುಗರೂ ಎಂಬ ಎಗ್ಗಿಲ್ಲದೆ ಷೇಕ್ಸ್‌ಪಿಯರ್‌ನ ಬಗ್ಗೆ ಮಾತನಾಡುತ್ತಿದ್ದರು. ನೆಹರೂ ಬಗ್ಗೆ ಮಾತನಾಡುತ್ತಿದ್ದರು. ಗಾಂಧಿ ಬಗ್ಗೆ ಮಾತನಾಡುತ್ತಿದ್ದರು. ನನಗೆ ಇನ್ನೂ ನೆನಪಿದೆ. ಅವರು ಗಾಂಧಿ ಸತ್ತ ದಿನ ಆ ಸುದ್ದಿಯನ್ನು ಹೇಳಿ ಕಣ್ಣೀರಿಟ್ಟಿದ್ದರು. ಒಬ್ಬ ಹೆಡ್ ಮಾಸ್ಟರ್ ಕೂಡಾ ಅಳಬಹುದು ಎನ್ನುವುದು ನನಗೆ ಮರೆಯಲಾರದ ನೆನಪು.

ನಾನು ಮನೆಗೆ ಹೋಗಿ ಅಗ್ರಹಾರದಲ್ಲಿ ಇರುವ ಬ್ರಾಹ್ಮಣರಿಗೆಲ್ಲಾ ಗಾಂಧೀಜಿಯ ಸಾವಿನ ಸುದ್ದಿ ತಲುಪಿಸಿದ್ದೆ. ನಮ್ಮ ಅಗ್ರಹಾರದಲ್ಲಿದ್ದ ಅನೇಕ ಬ್ರಾಹ್ಮಣರು ಗಾಂಧಿ ಕಲಿಯ ಅವತಾರ ಎಂದು ತಿಳಿದುಕೊಂಡಿದ್ದರು. ಗಾಂಧಿ ಹರಿಜನರನ್ನು ದೇವಾಲಯಕ್ಕೆ ಪ್ರವೇಶ ಮಾಡಿಸಿ ಕಾಲವನ್ನು ಕೆಡಿಸುತ್ತಿದ್ದಾನೆ ಎಂದು ಅವರು ಭಾವಿಸಿದ್ದರು. ನಮ್ಮ ಅಗ್ರಹಾರದಲ್ಲಿದ್ದ ಶೇಷಗಿರಿ ಜೋಯಿಸರು ಅಂತ ಒಬ್ಬರಂತೂ ಈ ರೀತಿಯ ಬಹಳ ವಾದಗಳನ್ನು ಮುಂದಿಡುತ್ತಿದ್ದರು. ಗಾಂಧಿಯ ಭಕ್ತರಾದ ನಮ್ಮ ಅಪ್ಪ ಇದಕ್ಕೆ ಪ್ರತಿವಾದಗಳನ್ನು ಮಂಡಿಸುತ್ತಿದ್ದರು. ಈ ದಿನಗಳಲ್ಲಿ ಒಬ್ಬರು ನಮ್ಮ ಮನೆಗೆ ಬಂದು ಅಪ್ಪನ ಹತ್ತಿರ ಬಂದು ‘ನಿಮ್ಮ ಮಗ ಇಪ್ಪತ್ತೊಂದನೇ ಶತಮಾನದವನ ಹಾಗೆ ಮಾತನಾಡುತ್ತಾನೆ’ ಎಂದು ದೂರಿದ್ದರು. ಅಪ್ಪಾಜಿಯೆಂಬ ನನ್ನ ಶತೃವನ್ನು ಹೀಯಾಳಿಸಲು ಈ ನನ್ನ ದೇಶಪ್ರೇಮವೂ ಬಳಕೆಯಾಗುತ್ತ ಇತ್ತು.

ದೂರ್ವಾಸರ ಗುಡ್ಡ ಎಂದು ಕರೆಯುವ ಒಂದು ದ್ವೀಪವಿತ್ತು. ಅಲ್ಲಿಗೆ ಹೋಗಿ ನಾನು ಒಂದು ಇಡೀ ದಿನ ಉಪವಾಸವನ್ನೂ ಮಾಡಿದ್ದೆ. ಆ ದಿನಗಳಲ್ಲೇ ದ್ವೇಷ ಸಾಧಿಸುವುದು, ಫೈಟ್ ಮಾಡುವುದು ಎಲ್ಲವೂ ಇದ್ದವು. ಆ ವಯಸ್ಸೇ ಅಂಥದ್ದು. ತುಂಬಾ ಬದಲಾವಣೆಗಳಿಗೆ ಮನಸ್ಸು ಮತ್ತು ದೇಹಗಳೆರಡೂ ತೆರೆದುಕೊಳ್ಳುವ ವಯಸ್ಸು ಅದು. ತುಂಬಾ ಗೋಳುಗಳ ವಯಸ್ಸು ಹಾಗೆಯೇ ಮನಸ್ಸಿನಲ್ಲಿ ಕಾಮೋದಯವಾಗುವ ವಯಸ್ಸೂ ಹೌದು.

ಈ ಕಾಮೋದಯವಾದಾಗಲಂತೂ ಏನೇನೋ ಗೊಂದಲಗಳು ಮನಸ್ಸನ್ನು ತುಂಬಿಕೊಂಡುಬಿಡುತ್ತವೆ. ಅದರಲ್ಲೂ ‘ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮೃತ್ಯು’ ಎಂಬ ಒಂದು ಪುಸ್ತಕವಿದೆ. ಇದು ಶಿವಾನಂದ ಎಂಬವರು ಬರೆದದ್ದು. ಈ ಪುಸ್ತಕವನ್ನು ಓದಿದ ನಾವೆಲ್ಲವೂ ಪಾಪ ಭಾವನೆಯಿಂದ ಬಹಳ ತೊಳಲಾಡುತ್ತಿದ್ದೆವು. ಈ ಪಾಪ ಭಾವನೆ ಹೋದದ್ದು ಶಿವರಾಮ ಕಾರಂತರನ್ನು ಓದಿದ ಮೇಲೆ . ಅವರು ತನ್ನ ಆತ್ಮ ಚರಿತ್ರೆಯಲ್ಲಿ ಈ ಬಗ್ಗೆ ಬರೆದದ್ದನ್ನು ಓದಿದ ನಂತರ ನನ್ನ ಗೊಂದಲಗಳು ಇಲ್ಲವಾದವು.

ಆ ಕಾಲದಲ್ಲಿ ನನಗೊಬ್ಬ ಸ್ನೇಹಿತ ಇದ್ದ. ಅವನನ್ನು ನಾನು ತಮ್ಮಯ್ಯ ಎಂದು ಕರೆಯುತ್ತಿದ್ದೆ. ಅವನೂ ನಾನೂ ದಾರಿಯುದ್ದಕ್ಕೂ ದ್ವೆತಾದ್ವೈತದ ಬಹಳ ಚರ್ಚೆಗಳನ್ನು ಮಾಡುತ್ತಿದ್ದೆವು. ಏಕೆಂದರೆ ಮಠದಲ್ಲಿ ಇಂಥ ಚರ್ಚೆಗಳು ನಡೆಯುತ್ತಿದ್ದವು.

ಒಂದು ದಿನ ಬಹಳ ದೊಡ್ಡ ಚರ್ಚೆ. ಬಿಂಬೋಸಿ ಪ್ರತಿಬಿಂಬೋಸ್ಮಿ. ಇದನ್ನು ದ್ವೈತವಾಗಿಯೇ ಹೇಳಬೇಕಲ್ಲವೇ? ಅಂತ ಕೆಲವರು. ಈ ಮಾತು ಅದ್ವೈತ ವಾದದ ಸಮರ್ಥನೆ ಎಂದು ಕೆಲವರು. ನೀನು ಬಿಂಬ, ನಾನು ಪ್ರತಿಬಿಂಬ. ಇವನ್ನೆಲ್ಲಾ ಊಟದ ಉದ್ದಕ್ಕೂ ಕೇಳಿಸಿಕೊಂಡಿದ್ದ ನಾವು ಶಾಲೆಗೆ ಹೋಗುವ ದಾರಿಯಲ್ಲಿ ಚರ್ಚೆ ಮಾಡುತ್ತಿದ್ದವು. ಈ ತಮ್ಮಯ್ಯ ಅದ್ವೈತ ಮಠದ ಸ್ವಾಮೀಜಿಯೊಬ್ಬರ ತಮ್ಮ. ನಾನು ದ್ವೈತ ಮಠದ ಏಜಂಟರ ಮಗ. ನಮ್ಮಿಬ್ಬರಿಗೆ ಭಾರೀ ಚರ್ಚೆಗಳಾಗುತ್ತಿದ್ದವು. ನಾನು ದ್ವೈತವೇ ಸರಿ ಎಂದರೆ ಅವನು ಅದ್ವೈತವೇ ಸರಿ ಎನ್ನುತ್ತಿದ್ದ.

ಈ ಚರ್ಚೆಗಳ ತೀವ್ರತೆ ಎಷ್ಟರ ಮಟ್ಟಿಗೆ ಇರುತ್ತಿದ್ದವೆಂದರೆ ನಾನು ತೀರ್ಥಹಳ್ಳಿ ಹೈಸ್ಕೂಲು ಬಿಟ್ಟು ಎಷ್ಟೋ ವರ್ಷಗಳಾದ ನಂತರ ಅಂದರೆ, ಮೈಸೂರಿನಲ್ಲಿ ವಿಶ್ವವಿದ್ಯಾಲಯದ ರೀಡರ್ ಆದ ಮೇಲೆ ಒಂದು ದಿನ ಬಸ್‌ನಲ್ಲಿ ಅವನು ಸಿಕ್ಕ. ತಕ್ಷಣವೇ ಅವನು ನಮ್ಮ ಹಲವು ವರ್ಷಗಳ ಹಿಂದಿನ ವಾದವನ್ನು ಮುಂದುವರಿಸುವವನಂತೆ, ‘ಇತ್ತೀಚೆಗೆ ಯಾವುದೋ ಇಂಗ್ಲಿಷ್ ಜರ್ನಲ್‌ನಲ್ಲಿ ಅದ್ವೈತವೇ ಸರಿ ಎಂಬ ಆರ್ಟಿಕಲ್ ಬಂದಿದೆ- ನೋಡಿದೆಯ?’ ಎಂದು ಬೀಗಿದ್ದ. ಆಗ ನಾನು ‘ಈಚಿಗೆ ನಾನೂ ನಿನ್ನದೇ ಅಭಿಪ್ರಾಯಕ್ಕೆ ಬಂದಿದ್ದೇನೆ’ ಎಂದು ಜುಟ್ಟಿನ ನನ್ನ ಗೆಳೆಯನಿಗೆ ಇಂಗ್ಲಿಷ್ ಭಾಷೆಯಲ್ಲಿ ಬಂದದ್ದು ಅಂತಿಮ ಸಮರ್ಥನೆಯಾಗಿ ಕಂಡಿತಲ್ಲವೆ ಎಂದು ಕ್ರಾಫಿನ ತಲೆಯ ನಾನು ಆಶ್ಚರ್ಯ ಪಟ್ಟಿದ್ದೆ.

ಪಟ್ಟೆ ಹುಲಿಗೆ ಇನ್ನೊಂದು ಬಣ್ಣ ಹೆಚ್ಚ?

ಶಿವಮೊಗ್ಗದಲ್ಲಿ ಇಂಟರ್ ಓದುತ್ತಿದ್ದ ದಿನಗಳಲ್ಲೇ ನಾನು ಸಮಾಜವಾದಿಗಳ ಪ್ರಭಾವಕ್ಕೆ ಒಳಗಾದೆ. ಆವಾಗ ನನಗೆ ಬಹಳ ಜನರು ಸ್ನೇಹಿತರಾದರು. ಅವರಲ್ಲಿ ಮುಖ್ಯರು ಗೋಪಾಲಗೌಡರು. ಇನ್ನೊಬ್ಬ ಅಣ್ಣಯ್ಯ. ಈ ಅಣ್ಣಯ್ಯ (ಪರಮೇಶ್ವರಪ್ಪ) ಹೆಚ್ಚು ಭಾಷಣ ಮಾಡುತ್ತಿರಲಿಲ್ಲ. ಆದರೂ ಸಮಾಜವಾದಿ ಪಕ್ಷದಲ್ಲಿ ಬಹಳ ಮುಖ್ಯನಾದವನು. ಅವನನ್ನು ನಾವು ಸರದಾರ್ ಪಟೇಲ್ ಎಂದು ಕರೆಯುತ್ತಿದ್ದೆವು. ಏಕೆಂದರೆ ವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಆತ ಬಹಳ ದಕ್ಷ. ಪಕ್ಷ ಕಟ್ಟುವುದಕ್ಕೆ ಈ ದಕ್ಷತೆ ಬೇಕಾಗುತ್ತದೆ. ಇದಿಲ್ಲದೆ ಎಲ್ಲರನ್ನೂ ಒಟ್ಟಿಗೇ ಚಳವಳಿಯ ಹಾದಿಯಲ್ಲಿ ಕರೆದೊಯ್ಯುವುದು ಸಾಧ್ಯವಾಗುವುದಿಲ್ಲ.

ಆ ಕಾಲದಲ್ಲಿ ಕಾಲೇಜಿನಲ್ಲಿ ಒಂದು ಗಲಾಟೆ ನಡೆಯಿತು. ನನ್ನ ಮಟ್ಟಿಗೆ ಅದು ಈಲಿಯಡ್‌ನ ಯುದ್ಧದ ಕಥೆ. ಅದರಂತೆಯೇ ಇಲ್ಲಿಯೂ ಒಬ್ಬಳು ಹೆಲೆನ್ ಇದ್ದಳು. ಅವಳ ಹೆಸರು ಸುಂದರಿ. ಹೆಸರಿಗೆ ತಕ್ಕ ಸುಂದರಿ. ಆಕೆ ಶಿವಮೊಗ್ಗ ಕಾಲೇಜಿಗೆ ಭದ್ರಾವತಿಯಿಂದ ಬರುತ್ತಿದ್ದ ಹುಡುಗಿ. ಶಿವಮೊಗ್ಗದ ಒಬ್ಬ ಹುಡುಗ ಆಕೆಗೊಂದು ಲವ್ ಲೆಟರ್ ಕೊಡಲು ಹೋದ. ಭದ್ರಾವತಿಯ ಹುಡುಗರು ನಮ್ಮೂರಿನ ಹುಡುಗಿಗೆ ಶಿವಮೊಗ್ಗದವನು ಲವ್ ಲೆಟರ್ ಕೊಡುತ್ತಾನಲ್ಲಾ ಎಂದು ಸಿಟ್ಟಿಗೆದ್ದು ಆ ಹುಡುಗನಿಗೆ ಹೊಡೆದರು. ಶಿವಮೊಗ್ಗದ ಹುಡುಗರಿಗೆ ಇದು ಸಿಟ್ಟು ತರಿಸಿ ಅವರು ಎಲ್ಲಾ ಭದ್ರಾವತಿಯ ಹುಡುಗರಿಗೂ ಹೊಡೆಯಲಾರಂಭಿಸಿದರು. ಈ ಶಿವಮೊಗ್ಗ v/s ಭದ್ರಾವತಿ ಜಗಳದಲ್ಲಿ ಈ ಅಣ್ಣಯ್ಯ ಕಾಲೇಜಿಗೆ ಬಂದು ಹುಡುಗರನ್ನು ಎಳೆದು, ಬೈದು, ಸಮಾಧಾನ ಮಾಡಿ ಸರಿಮಾಡಿದ್ದು ನನಗೆ ಈಗಲೂ ನೆನಪಿದೆ. ಈಗಿನ ಸಹ್ಯಾದ್ರಿ ಕಾಲೇಜಿನ ಮಹಡಿ ಮೆಟ್ಟಲುಗಳನ್ನು ಓಡಿ ಹತ್ತಿ ಓಡಿ ಇಳಿದು ಜಗ್ಗಾಡಿ ಬೆದರಿಸಿ ಗದರಿಸಿ ಹುಡುಗರನ್ನು ಶಾಂತ ಗೊಳಿಸಿದ ಕ್ರಮದಲ್ಲಿ ಸಮಾಜವಾದಿಗಳ ಹೀರೊ ಗಾಂಧಿ ನನಗೆ ಪ್ರತ್ಯಕ್ಷನಾಗಿದ್ದ. .

ಆ ಸಮಯದಲ್ಲಿ ನನಗೆ ಪದ್ಯ ಬರೆಯಬೇಕು ಅನ್ನಿಸಿತ್ತು.. ನಾನು ಇಂಗ್ಲಿಷ್‌ನಲ್ಲಿ ಬರೆಯುವುದಕ್ಕೆ ಶುರುಮಾಡಿದೆ.. ಇಂಗ್ಲಿಷ್‌ನಲ್ಲಿ ಬರೆಯುವುದು ಅಂದರೆ ಮಾತಾಡುವ ಇಂಗ್ಲಿಷ್‌ನಲ್ಲಿ ಬರೆಯುವುದಲ್ಲ. ಉರ್ದು, ಅರಬಿಯಂಥ ಭಾಷೆಗಳನ್ನು ಬಲಗಡೆಯಿಂದ ಎಡಗಡೆಗೆ ಬರೆಯುತ್ತಾರಲ್ಲಾ ಹಾಗೆ. ನಾನು ಬಲಗಡೆಯಲ್ಲಿ ಡಿಕ್ಷನರಿಯಿಂದ ಹುಡುಕಿ ತೆಗೆದ ರೈಮ್ಸ್ ಹಾಕಿಬಿಡುತ್ತಿದ್ದೆ. ಆ ರೈಮ್ಸ್‌ಗೆ ಸಾಲುಗಳನ್ನು ತುಂಬುತ್ತಿದ್ದೆ. ಅದೇನೋ ಬಹಳ ದಿನ ನಡೆಯಲಿಲ್ಲ. ಅದನ್ನು ಅಲ್ಲಿಗೇ ಬಿಟ್ಟು ಬಿಟ್ಟೆ. ಸುಂದರಿಗೊಂದು ಪದ್ಯ ಬರೆದು ಅವಳಿಗೆ ತಲುಪಿಸಲಿಲ್ಲ ಎಂದಷ್ಟು ನೆನಪಿದೆ.

ಶಿವಮೊಗ್ಗದಲ್ಲಿದ್ದಾಗಲೇ ನನಗೆ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಿತು. ಅದು ಗಂಭೀರವಾದುದಕ್ಕೆ ಕಾರಣವೇನೆಂದರೆ ಎಚ್.ಎಸ್ ಬಿಳಿಗಿರಿ ನನ್ನ ಸ್ನೇಹಿತನಾದದ್ದು. ಅಮೇಲೆ ಪುತಿನ, ಅಡಿಗರನ್ನೆಲ್ಲಾ ಓದಿದೆ. ಶಿವಮೊಗ್ಗ ಇಂಟರ್ ಕಾಲೇಜಿನಲ್ಲಿ ನನಗೆ ಇದ್ದ ಯಾವ ಮೇಷ್ಟ್ರುಗಳೂ ನನಗೆ ನೆನಪಿಗೆ ಬರುತ್ತಿಲ್ಲ. ಅಲ್ಲಿ ಬಹಳ ಮೇಷ್ಟ್ರುಗಳಿದ್ದರೂ ಬಹಳ ಒಳ್ಳೆಯ ಮೇಷ್ಟ್ರುಗಳಿರಲಿಲ್ಲವೇನೋ? ನಾನು ಸಂಸ್ಕೃತದ ವಿದ್ಯಾರ್ಥಿಯಾದರೂ ಮಲೆನಾಡಿನ ರಂಜದ ಹೂವಿನ ಮೇಲೊಂದು ಪದ್ಯ ಬರೆದ, ಹೊಟ್ಟೆ ಹುಣ್ಣಾಗುವಂತೆ ನಗಿಸುವ, ಬಾಲ್ಯದಲ್ಲಿ ನನ್ನ ಹುಟ್ಟೂರಿನ ಮೇಳಿಗೆಯಲ್ಲೇ ಬೆಳೆದರೆಂದು ಖ್ಯಾತರಾದ ಪರಮೇಶ್ವರ ಭಟ್ಟರ ಕ್ಲಾಸಿಗೆ ಚಕ್ಕರ್ ಹಾಕಿ ಹೋಗಿ ಕೂತಿರುತ್ತ ಇದ್ದೆ. ಆಗ ಸುಬ್ಬಣ್ಣನೂ ಒಬ್ಬ ವಿದ್ಯಾರ್ಥಿ

ಒಬ್ಬ ಮುಸ್ಲಿಮ್ ಮೇಷ್ಟ್ರು ಅಲ್ಲಿದ್ದರು. ಅವರು ಲಾಜಿಕ್ ಪಾಠ ಮಾಡುತ್ತಿದ್ದರು. ಸ್ವಲ್ಪ ರೋಪಿನ ಮನುಷ್ಯ. ತುಂಬಾ ಶಬ್ದ ಮಾಡುವ ಬೂಟ್ ಹಾಕಿಕೊಂಡು ಬರುತ್ತಿದ್ದರು. ಡಬ ಡಬ ಎಂದು ಸದ್ದು ಮಾಡಿಕೊಂಡು ಓಡಾಡುತ್ತಾ ಹುಡುಗರ ಎದುರಿಗೆ ನಿಂತು ಅವರನ್ನು ಗದರಿಸುವುದು ಇತ್ಯಾದಿ ಮಾಡುತ್ತಿದ್ದರು. ಆ ಕಾಲದಲ್ಲಿ ಶಿವಮೊಗ್ಗದಲ್ಲಿ ಆರ್‌ಎಸ್‌ಎಸ್ ಬಲವಾಗಿ ಬೆಳೆಯುತ್ತಿತ್ತು. ಒಂದು ದಿನ ಆ ಹುಡುಗರೆಲ್ಲಾ ನಿರ್ಧರಿಸಿ ಆ ಮುಸ್ಲಿಂ ಮೇಷ್ಟ್ರಿಗೆ ಹೊಡೆಯಲು ತೀರ್ಮಾನಿಸಿದರು. ಆದು ತಿಳಿದದ್ದೇ ಆತ ಒಂದು ಸೈಕಲ್‌ನಲ್ಲಿ ಜೋರಾಗಿ ಹೋಗಿ ಶಿವಮೊಗ್ಗದ ಸೇತುವೆಯ ಪಕ್ಕದಲ್ಲಿದ್ದ ಗರಗಸದ ಅಂಗಡಿ ಇತ್ತು. ಅದರಲ್ಲಿ ಅಡಗಿ ಕೂತರು. ಅದು ಮುಸಲ್ಮಾನರೇ ನಡೆಸುತ್ತಿದ್ದ ಅಂಗಡಿ.. ಎಲ್ಲ ಹುಡುಗರೂ ಬಂದು ಆ ಅಂಗಡಿಗೆ ಮುತ್ತಿಗೆ ಹಾಕಿ ಆತನನ್ನು ಹೊರಗೆ ಕಳುಹಿಸಿ ಎಂದು ಒತ್ತಾಯಿಸ ತೊಡಗಿದರು. ಅಂಗಡಿಯವರೂ ದೊಣ್ಣೆ ಗಿಣ್ಣೆ ಹಿಡಿದುಕೊಂಡು ನಾವು ಹೊರಗೆ ಕಳುಹಿಸುವುದಿಲ್ಲ ಎನ್ನುತ್ತಿದ್ದರು.

ನಾನು ಸಮಾಜವಾದಿಯಲ್ಲವೆ? ನಾನೂ ಸೈಕಲ್‌ನಲ್ಲಿ ಅಲ್ಲಿಗೆ ಬಂದು ನನ್ನ ಸಹಪಾಠಿಗಳಿಗೆ ‘ಇವೆಲ್ಲಾ ಮಾಡುವುದು ತಪ್ಪು. ಇದು ಹಿಂದೂ ಮುಸ್ಲಿಂ ಗಲಾಟೆಗೆ ಕಾರಣವಾಗಿಬಿಡುತ್ತದೆ’ ಎಂದೆಲ್ಲಾ ಹೇಳಿದೆ. ಅಲ್ಲಿದ್ದ ಹುಡುಗರಲ್ಲಿ ಯಾರೋ ಒಬ್ಬ ನನಗೆ ಎರಡು ಕೆನ್ನೆಗಳ ಮೇಲು ತಪರಾಕಿ ಹೊಡೆದು, ‘ಹೋಗಯ್ಯ… ಬಂದ ಇವನೊಬ್ಬ ಅಧಿಕ ಪ್ರಸಂಗಿ’ ಎಂದು ಬೈದ. ನಾನೇನು ಮಾಡಿದೆ ಎಂದರೆ ಸೀದಾ ಪೋಲೀಸ್ ಸ್ಟೇಷನ್‌ಗೆ ಹೋಗಿ ‘ಅಲ್ಲೊಂದು ಹಿಂದೂ-ಮುಸ್ಲಿಂ ಗಲಾಟೆ ಆಗುವ ಹಾಗೆ ಇದೆ’ ಎಂದು ಹೇಳಿ ಅವರ ಜೀಪಿನಲ್ಲೇ ಮತ್ತೆ ಅದೇ ಜಾಗಕ್ಕೆ ಬಂದೆ.. ಪೊಲೀಸರು ನಮ್ಮ ಲಾಜಿಕ್ ಮೇಷ್ಟ್ರನ್ನು ಹೇಗೋ ಬಚಾವ್ ಮಾಡಿ ಜೀಪಿನಲ್ಲಿ ನನ್ನ ಜೊತೆಯೇ ಕರೆದೊಯ್ದರು.- ಡಿಸಿ ಬಂಗಲೆಗೆ.

ಮಾರನೇ ದಿನ ಈ ಗಲಾಟೆಯಿಂದಾಗಿಯೇ ಕಾಲೇಜಿಗೆ ರಜೆ. ಅದರ ಮಾರನೇ ದಿನ ನಾನು ಕಾಲೇಜಿಗೆ ಹೊರಟರೆ ಗಲಾಟೆ ಮಾಡಿದ ಹುಡುಗರು ‘ನಿನ್ನನ್ನು ತುಂಗೆಗೆ ಎತ್ತಿ ಹಾಕುತ್ತೇವೆ’ ಎಂದು ಬೆದರಿಕೆ ಹಾಕುತ್ತ ಅಡ್ಡ ಬಂದರು. ಆದರೆ ನನ್ನ ಬೆನ್ನಿಗೆ ಶಿವಮೊಗ್ಗದ ಅಂದಿನ ಸಮಾಜವಾದಿ ನಾಯಕರಾದ ಫೈಲ್ವಾನ್ ಮಹೇಶ್ವರಪ್ಪ ಎಂಬುವವರು ಇಬ್ಬರು ಫೈಲ್ವಾನರನ್ನು ಕಾಯಲು ಬಿಟ್ಟಿದ್ದರು.

ಈ ಸಮಾಜವಾದಿ ಪೈಲ್ವಾನರು ನಮಗೆಲ್ಲ ಬಹು ಸಲಿಗೆಯ ಹಿರಿಯರು. ಅವರು ತಮ್ಮ ಮರದಷ್ಟು ಗಟ್ಟಿಯಾದ ಗುಜ್ಜು ಗುಜ್ಜಾದ ಕಿವಿಗಳನ್ನು ಮುಟ್ಟಿನೋಡು ಎಂದು ಹೇಳುತ್ತ ಇದ್ದರು. ಕುಸ್ತಿಯಲ್ಲಿ ಏಟುಗಳನ್ನು ತಿಂದು ಮರಗಟ್ಟಿದ ಕಿವಿಗಳು ಅವು. ಹಿಂಡಲು ಆಗದ ಕಿವಿಗಳು. ಹಿಂಡಲು ಪ್ರಯತ್ನಿಸಿದಷ್ಟೂ ಮಂದಹಾಸ ಅರಳುವ ಮುಖ. ಮುಂದೊಂದು ದಿನ ನಾನು ಪಿಎಸ್‌ಸಿ ನಲ್ಲಿ ಲೆಕ್ಚರರ್ ಕೆಲಸಕ್ಕೆಂದು ಇಂಟರ್ವ್ಯೂ ತೆಗೆದುಕೊಳ್ಳುವ ಮುಂಚೆ ನನ್ನನ್ನು ಪಿಎಸ್ ಸಿ ಮೆಂಬರಾಗಿದ್ದ ಅವರ ಜಾತಿಯ ಮುಖಂಡರ ಮನೆಗೆ ಕರೆದುಕೊಂಡು ಹೋಗಿ ನನಗೆ ಕೆಲಸ ಕೊಡಿಸಲೇಬೇಕೆಂದು ಅವರು ಒತ್ತಾಯಿಸಿದ್ದರು. ಹೀಗೆ influence ಉಪಯೋಗಿಸಿ ನಾನು ಕೆಲಸ ಪಡೆದದ್ದು ಅದೇ ಮೊದಲು ಅದೇ ಕೊನೆ. ನನ್ನ ಮೇಲೆ ಅಷ್ಟು ಅಭಿಮಾನ ಈ ಪೈಲ್ವಾನ್ ಮಹೇಶ್ವರಪ್ಪನವರಿಗೆ.

ನಮ್ಮ ಕಾಲೇಜಿಗೆ ಒಬ್ಬ ಸೂಪರಿಂಟೆಂಡೆಂಟ್ ಇದ್ದರು. ಅವರು ‘ನಾಲ್ಕೇಟು ತಿಂದು ಅವನು ವರ್ಗಾವಣೆಯಾಗಿ ಹೋಗುತ್ತಿದ್ದ. ನೀನ್ಯಾಕೆ ಇದನ್ನು ಮಾಡಲಿಕ್ಕೆ ಹೋದೆ?’ ಎಂದು ನನ್ನನ್ನು ತಮ್ಮ ಛೇಂಬರಿಗೆ ಕರೆದು ಗದರಿಸಿದರು. ನಾನು ಅವರಿಗೂ ಒಂದು ಸಮಾಜವಾದೀ ಲೆಕ್ಚರ್ ಕೊಟ್ಟಿದ್ದೆ. ಇದಾದ ಮೇಲೆ ಆ ಮೇಷ್ಟ್ರಿಗೆ ವರ್ಗಾ ಆಯಿತು. ನನಗೆ ಹೊಡೆಯುತ್ತೀನಿ ಎಂದು ಹೆದರಿಸಿದ ಹುಡುಗರೆಲ್ಲಾ ಸರಿಯಾದರು. ನನ್ನನ್ನು ಒಪ್ಪಿಕೊಂಡರು. ನನ್ನ ರಾಜಕೀಯ ಜೀವನ ಒಂದರ್ಥದಲ್ಲಿ ಆಗಲೇ ಶುರುವಾಯಿತು. ಅದು ಬೆಳೆದದ್ದು ಕಾಗೋಡು ಸತ್ಯಾಗ್ರಹದ ಮೂಲಕ. ಆಗ ನಾನು ಕಲಿತದ್ದು ಮೇಷ್ಟ್ರುಗಳಿಂದಲ್ಲ. ಅಲ್ಲಿಯ ರಾಜಕೀಯ ವಲಯದಿಂದ. ಅಲ್ಲಿ ಯಾವ ಯಾವ ತರದ ಜನಗಳಿದ್ದರು ಎಂದು ಈಗ ಯೋಚಿಸದರೆ ನನಗೇ ಆಶ್ಚರ್ಯವಾಗುತ್ತದೆ.

ರಂಗನಾಥರಾಯರು ಎಂಬವರೊಬ್ಬರಿದ್ದರು. ಅವರು ಬೆಳಗಾಂ ಕಾನೂನು ಕಾಲೇಜಿನ ಪ್ರೊಫೆಸರ್. ಅವರಿಗೆ ಎಂ.ಎನ್ ರಾಯ್ ಗೊತ್ತಿದ್ದರು. ಅಷ್ಟೇ ಅಲ್ಲ ರಾಯ್‌ರನ್ನು ಚೆನ್ನಾಗಿ ಓದಿ ಕೊಂಡಿದ್ದರು. ಅವರು ಬಂದು ನಮಗೆ ‘ಈ ಪಕ್ಷದ ರಾಜಕಾರಣವೇ ತಪ್ಪು, ಪಕ್ಷಾತೀತವಾದ ರಾಜಕಾರಣ ಮಾಡಬೇಕು. ನಾವೊಂದು ಹೊಸ ರೀತಿಯ ಡೆಮಾಕ್ರಸಿಯನ್ನ ತರಬೇಕು’ ಎಂದು ನಾನು ಒಂದೊಂದು ಭಾಷಣ ಮಾಡಿದಾಗಲೂ ಅದನ್ನು ಕೇಳಿಸಿಕೊಂಡು, ಕಾಫಿ ಕುಡಿಸಿ, ಕರೆದುಕೊಂಡು ಹೋಗಿ ಪಾರ್ಕ್‌ನಲ್ಲಿ ಕೂರಿಸಿ ಹೇಳುತ್ತಿದ್ದರು.

ಅವರ ಜತೆಯಲ್ಲಿ ದೀಕ್ಷಿತ್ ಎಂಬ ಮತ್ತೊಬ್ಬರೂ ಇರುತ್ತಿದ್ದರು. ಅವರು ಒಂದು ಅಡಿಕೆ ಮಂಡಿಯಲ್ಲಿ ರೈಟರ್. ವೀರಶೈವ, ವೀರ ವೈಷ್ಣವ ಎನ್ನುವ ಹಾಗೆ ವೀರ ರಾಯಿಸ್ಟ್ ಎಂದವರನ್ನು ಕರೆಯಬಹುದೇನೊ! ಪಕ್ಷ ಕಟ್ಟಿ ಕ್ರಾಂತಿ ಮಾಡುವ ಭ್ರಮೆಯ ನಮಗೆ ರಾಯ್ ಚಿಂತನೆಯನ್ನು ಮನದಟ್ಟು ಮಾಡುವ ದೀಕ್ಷೆ ತೊಟ್ಟ ಈ ದೀಕ್ಷಿತ್ ತಮಗೆ ಬಿಡುವಾದ ಕಾಲವನ್ನೆಲ್ಲ ಮುಡಿಪಾಗಿ ಇಟ್ಟ ಕರ್ಣಪಿಶಾಚಿಯಂತೆಯೂ ಆಪ್ತಗೆಳೆಯನಂತೆಯೂ ಕಾಣುತ್ತ ಇದ್ದರು.. ಆರ್ ಎಸ್ ಎಸ್ ಗೆ ಸೇರಿಬಿಟ್ಟಿದ್ದ ನನ್ನ ಗೆಳೆಯ ಶಂಕರನಾರಾಯಣ ಭಟ್ಟನನ್ನು ನಾನು ಸಮಾಜವಾದಿ ಮಾಡಿದ್ದೆ. ನಮ್ಮಿಬ್ಬರನ್ನೂ ನೋಡುವುದಕ್ಕೆ ಬರುತ್ತಿದ್ದ ದೀಕ್ಷಿತರು ಪಕ್ಷ ರಾಜಕಾರಣದ ಮಿತಿಗಳ ಕುರಿತ ಅವರ ಗುರು ರಂಗನಾಥರಾಯರ ಪ್ರಶ್ನೆಗಳನ್ನೆಲ್ಲಾ ನಮ್ಮ ಮುಂದಿಟ್ಟು, .ಹೊಟ್ಟೆತುಂಬಿದರೂ ಇನ್ನೂ ತಿನ್ನು ಎಂಬಂತೆ ಅದೇ ಅದೇ ವಿಚಾರಗಳನ್ನು ಬಡಿಸಿ, ಗೋಳು ಹೊಯ್ದುಕೊಳ್ಳುತ್ತಿದ್ದರು. ನಮ್ಮ ಜತೆಯೇ ಬರುತ್ತಿದ್ದ ಈ ದೀಕ್ಷಿತರಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು ನಾವು ‘ಒಂದಕ್ಕೆ ಅವಸರವಾಗಿದೆ’ ಎಂದು ಬೀದಿಯ ಸಂದಿ ಹುಡುಕಿ ಅಲ್ಲೆಲ್ಲಾದರೂ ಮೂತ್ರ ಮಾಡುವವರಂತೆ ನಿಂತರೆ, ದೀಕ್ಷಿತರು ತನಗೂ ‘ಒಂದಕ್ಕೆ ಅವಸರವಾಗಿದೆ’ ಎಂದು ನಮ್ಮ ಜತೆ ನಿಂತು ಬಿಡುತ್ತಿದ್ದರು. ಅವರನ್ನು ನಾವು ಸಾಕ್ರಟೀಸ್ ಎಂದು ಕರೆಯುತ್ತಿದ್ದೆವು. ಸಾಕ್ರಟೀಸ್ ತನ್ನ ಕಾಲದ ಯುವಕರನ್ನು ಹೀಗೇ ಪೀಡಿಸಿರಬೇಕು. ಕುರುಚುಲು ಗಡ್ಡದ ದೀಕ್ಷಿತ್ ಕಾಣಲು ಕೂಡ ಸಾಕ್ರಟೀಸನೆ!

ಇನ್ನೊಬ್ಬರು ನಮಗೆ ಕ್ರಾಂತಿಯ ರಹಸ್ಯ ಲೋಕದವರಾಗಿ ಪ್ರಿಯರಾದವರೆಂದರೆ, ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಹೆಸರುಗಳನ್ನು ಪಡೆದವರಾದ, ನಮ್ಮೂರಲ್ಲಿ ಅಣ್ಣ ದೇಶಪಾಂಡೆಯೆಂಬ ಹೆಸರಿನವರಾಗಿ ಹೇಗೋ ಪ್ರತ್ಯಕ್ಷರಾದ, Trotsky ವಾದಿಗಳಾದ, ಗೋವಾದ ಜೈಲಿನಿಂದ ಓಡಿಬಂದೆನೆಂದು ಹೇಳಿಕೊಳ್ಳುವ, ತಾನು ಬಿಟ್ಟು ಬಂದ ಪ್ರತಿ ಊರಿನಲ್ಲೂ ಒಬ್ಬ ಪ್ರಿಯತಮೆಯನ್ನು ಬಿಟ್ಟುಬಂದವರಾದ , ನಮ್ಮೆಲ್ಲರಿಂದಲೂ ಸಾಲಮಾಡಿ- ಒಕ್ಕಲಿಗರ ಹಾಸ್ಟೆಲ್ಲಿನಲ್ಲಿ ನಾಮಕಾವಸ್ತೆ ವಾರ್ಡೆನ್ ಆಗಿ ಜೀವಿಸುತ್ತ ಇದ್ದ ಗೋಪಾಲಗೌಡರಿಂದಲೂ ಸಾಲಮಾಡಿ- ಕಷ್ಟದಲ್ಲಿದ್ದ ತನ್ನ ಪ್ರಿಯತಮೆಯರಿಗೆ ಮನಿ ಆರ್ಡರ್ ಕಳುಹಿಸುತ್ತ ಇದ್ದರೆಂಬುದು ಹೇಗೋ ನಮಗೆ ತಿಳಿದುಬಿಟ್ಟಿದ್ದ, ಅಸಾಧಾರಣ ತಾರ್ಕಿಕನಾದ, ಬಹುಶ್ರುತನಾದ, ನೋಡಲು ಬಹು ಆಕರ್ಷಕವಾದ ಎತ್ತರದ ನಿಲುವಿನ, ಹೆಚ್ಚುಪಾಲು ಇಂಗ್ಲಿಷಿನಲ್ಲೇ ಮಾತಾಡುತ್ತ ಇದ್ದ ಆಜಾನುಬಾಹು ಒಬ್ಬರು. ಹಲವು ಹೆಸರುಗಳಲ್ಲಿ ಕ್ರಾಂತಿಗೆ ದೇಶವನ್ನು ಸಿದ್ಧಗೊಳಿಸುತ್ತ ಇದ್ದ ಈ ಅನಾಮಧೇಯರು ನನ್ನನ್ನು ಪಾರ್ಕಿನಲ್ಲಿ ಕೂರಿಸಿಕೊಂಡು ಮಾಡಿದ ರಾಜಕಾರಣದ ಪಾಠಗಳು ಈಗಲೂ ನೆನಪಿವೆ. ಅವರು ಶಿವಮೊಗ್ಗದಿಂದ ಓಡಿ ಹೋಗುವ ಮುಂಚೆ, ಪೋಲೀಸರು ತನಗಾಗಿ ಹುಡುಕುತ್ತ ಇದ್ದಾರೆ ಎಂದು ನಮ್ಮನ್ನೆಲ್ಲ ನಂಬಿಸಿದ್ದರು. ಅಥವಾ ಹಾಗೆ ನಾವೇ ನಂಬುವಂತೆ, ಅವರು ಆತಂಕಿತರಾಗಿ ಪಿಸುಮಾತುಗಳಲ್ಲೇ Trotsky ಬಗ್ಗೆ ಮಾತಾಡಲು ತೊಡಗಿದ್ದರು. ಅವರಿಗೆ ಸಹಾಯಮಾಡಲೆಂದು ನಾನು ನನ್ನ ಅಪ್ಪನನ್ನು ಹೇಗೋ ಒಪ್ಪಿಸಿ, ಅವರು ತನ್ನ ಸ್ನೇಹಿತರೊಬ್ಬರಿಂದ ಎರಡು ಸಾವಿರ ಸಾಲ ಪಡೆಯುವಂತೆ ಮಾಡಿ (ಆಗ ಅದು ದೊಡ್ಡ ಹಣ) ಈ ಹಣವನ್ನು ಈ ರಹಸ್ಯ ವ್ಯಕ್ತಿ ‘ಅಣ್ಣಾ ದೇಶಪಾಂಡೆಗೆ” ಕೊಟ್ಟಿದ್ದೆ. ನಾಡಿದ್ದು ಈ ಹಣವನ್ನು ಕೊಡುವೆನೆಂದು ನಾಳೆ ಅವರು ಪರಾರಿಯಾಗಿದ್ದರು.

ಕಮ್ಯುನಿಸ್ಟರು ಕೂಡಾ ನಮಗೆ ಸ್ನೇಹಿತರಾಗಿದ್ದರು. ಅವರೆಲ್ಲಾ ಭದ್ರಾವತಿಯಿಂದ ಬರುತ್ತಿದ್ದರು. ಏಕಕಾಲದಲ್ಲಿ ರಾಯಿಸಂ, ಗಾಂಧೀವಾದ-ಲೋಹಿಯಾವಾದ ಇವೆಲ್ಲವೂ ಕೂಡಾ ಇಂಟರ್ ಮೀಡಿಯಟ್ ಕಾಲೇಜಿನಲ್ಲಿ ಸಿಗುತ್ತಿತ್ತು. ಇದರ ಜತೆಗೆ ಕಾಗೋಡು ರೈತ ಸತ್ಯಾಗ್ರಹವೂ ಇದ್ದುದರಿಂದ ನನ್ನ ಅರಿವಿನ ಎಲ್ಲೆಗಳು ಬಹಳ ವಿಸ್ತಾರವಾಗಿಬಿಟ್ಟವು.

ಕಾಗೋಡು ರೈತ ಸತ್ಯಾಗ್ರಹದ ಜತೆಗಿನ ನನ್ನ ಒಡನಾಟದಲ್ಲಿ ಓದು ಹಿಂದೆ ಸರಿಯಿತು. ಪರಿಣಾಮವಾಗಿ ನಾನು ಕೆಮಿಸ್ಟ್ರಿಯಲ್ಲಿ ಫೇಲ್ ಆಗಿಬಿಟ್ಟೆ. ನನಗೆ 47 ನಂಬರ್ ಬಂದಿತ್ತು. ನನ್ನ ಅಪ್ಪ ಸಂಖ್ಯೆಗಳ ಬಗ್ಗೆ ಬಹಳ ತಿಳಿದವರಾಗಿದ್ದರಿಂದ ಅದು 74 ಆಗಿದ್ದು ಬರೆಯುವಾಗ ತಪ್ಪಾಗಿರಬಹುದು ಎಂದುಕೊಂಡು ಅದನ್ನು ಸರಿಪಡಿಸುವುದಕ್ಕೆ ಒಂದು ಅರ್ಜಿ ಹಾಕಿಸಿದರು. ಆಗ ಇಂಥ ಅರ್ಜಿಗಳನ್ನು ರೀಟೋಟಲಿಂಗ್ ಅರ್ಜಿಗಳು ಎನ್ನುತ್ತಿದ್ದರು. ರೀಟೋಟಲಿಂಗ್‌ನ ಫಲಿತಾಂಶ ಬಂದಾಗಲೂ ನನಗೆ ದೊರೆತ ಅಂಕಗಳು 47 ಆಗಿತ್ತು. ಇದರಿಂದ ನನಗೆ ಬಹಳ ಒಳ್ಳೆಯದೇ ಆಯಿತು. ಹೀಗೆ ನಾನು ಗಳಿಸಿಕೊಂಡ ಒಂದು ವರ್ಷದ ಬಿಡುವು ಬಿಳಿಗಿರಿಯಂಥವರ ಸ್ನೇಹದಲ್ಲಿ ಬಹಳಷ್ಟು ಸಾಹಿತ್ಯ ಓದಲು ಸಾಧ್ಯಮಾಡಿತು.

ಆ ಕಾಲದಲ್ಲಿ ಗಾರ್ಕಿಯ ಎಲ್ಲಾ ಕಥೆಗಳನ್ನೂ ಓದಿಬಿಟ್ಟೆ. ಶೆಲ್ಲಿಯನ್ನು ಇಡಿಯಾಗಿ ಓದಿಕೊಂಡೆ. ಗಾಂಧಿ ಮತ್ತು ಪರಮಂಹಸರ ಜೀವನ ಚರಿತ್ರೆಯನ್ನು ಬರೆದಿರುವ ಫ್ರೆಂಚ್ ನಾವೆಲಿಸ್ಟ್ ರೊಮೇರೊಲಾ ಅವರ ಎಲ್ಲಾ ಕೃತಿಗಳನ್ನೂ ಓದಿದೆ. ಸಂಗೀತಗಾರ ಬಿಥೋವೆನ್ ಬಗ್ಗೆ ಅವರು ಬರೆದ ನಾವೆಲ್ Jean Christophe ಓದಿದೆ. ಒಂದು ವರ್ಷ ಬೇರೇನೂ ಕೆಲಸವಿಲ್ಲದೇ ಇದ್ದುದರಿಂದ ಸೈಕಲ್ ಮೇಲೆ ಭದ್ರಾವತಿಗೂ ಹೋಗಿ ಸಿನಿಮಾ ನೋಡಿ ಬರುತ್ತಿದ್ದೆ. ನನ್ನ ತಂದೆಗೆ ಪ್ರೆಸ್‌ನಲ್ಲಿ ಸಹಾಯಮಾಡಿದೆ- ನನಗೆ ಆಗ ಮೊಳೆ ಜೊಡಿಸುವುದು, ಟ್ರಡಲ್‌ನಲ್ಲಿ ತುಳಿದು ಪ್ರಿಂಟ್ ಮಾಡುವುದು ಕೊಂಚ ಗೊತ್ತಿತ್ತು. ಕಾಗೋಡು ಸತ್ಯಾಗ್ರಹದ ಹೆಚ್ಚು ಪಾಂಪ್ಲಟ್‌ಗಳನ್ನೂ ನಾನೇ ಬರೆದು ನಾನೇ ಮೊಳೆಜೋಡಿಸಿ ನಾನೇ ಪ್ರಿಂಟ್ ಮಾಡಿ ನಾನೇ ಹಂಚಿದ್ದವನು ಫೇಲಾದ ನಂತರ ಪದ್ಯಗಳನ್ನು ಬರೆಯಲು ಶುರುಮಾಡಿದೆ. ಬಿಳಿಗರಿ ನನ್ನ ಯಾವ ಪದ್ಯವನ್ನೂ ಒಪ್ಪುತ್ತಿರಲಿಲ್ಲ. ಅವನೂ ರಾಯಿಸ್ಟ್ ಪಂಥದವನಾಗಿದ್ದ.

ಫೇಲಾದ ಸುದ್ದಿ ತಿಳಿದಿದ್ದೇ ನನ್ನ ಅಪ್ಪ ತುಂಬ ಬೇಸರಗೊಂಡಿದ್ದರು. ನನ್ನ ಗೆಳೆಯ ಶಂಕರನಾರಾಯಣ ಭಟ್ಟ ಪಾಸಾಗಿದ್ದ. ಇದರಿಂದ ಗಿಲ್ಟಿಯಾದ ಭಟ್ಟ ನನ್ನನ್ನು ಕುಂದಾಪುರಕ್ಕೆ ಕರೆದುಕೊಂಡು ಹೋದ; ಅಪ್ಪ ಅಮ್ಮನಿಗೆ ಗೊತ್ತಾಗದಂತೆ ನಾನು ಹೋದದ್ದು. ಒಂದು ವಾರ ನನ್ನ ಅಪ್ಪ ನಿತ್ಯ ನಾನು ಹಿಂದೆ ಬರುವೆನೋ ಇಲ್ಲವೋ ಕಾದರು. ಆ ದಿನಗಳಲ್ಲಿ ಹುಡುಗರು ಹೀಗೆ ಓಡಿಹೋಗುವುದು ಸಾಮಾನ್ಯವಾಗಿತ್ತು. ಮಲೆನಾಡಿನ ಹುಡುಗರು ಓಡಿಹೋಗುವುದು ಬೊಂಬಾಯಿಗೆ! ನಾನು ಹೋದದ್ದು ಕುಂದಾಪುರಕ್ಕೆ. ಒಂದು ಗಾದೆಯಿದೆ “ಕುಟ್ಟಿ ಕುಂದಾಪುರಕ್ಕೆ ಹೋದಹಾಗೆ” ಅಂತ. ನಾನು ಬೇಸರದಲ್ಲಿ ಹೋದದ್ದೂ ಹೀಗೇ ಆಯಿತು!ನಾನು ಹಿಂದೆ ಬಂದದ್ದೇ ಖುಷಿಯಾದ ನನ್ನ ಅಪ್ಪ ಎಲ್ಲಿ ಹೋಗಿದ್ದಿ ಎಂದೂ ನನ್ನ ಕೇಳಲಿಲ್ಲ.

ಆಗೊಬ್ಬರು ನಿಯತಕಾಲಿಕವೊಂದನ್ನು ತರುತ್ತ ಇದ್ದ ಶೆಟ್ಟರಿದ್ದರು. ಇವರೇ ನನ್ನ ಪದ್ಯಗಳನ್ನು ಪ್ರಕಟಿಸುತ್ತ ಇದ್ದವರು. ಅವರು ಹೇಳಿದ ಮಾತೊಂದು ನೆನಪಿದೆ. ನಾನು ಆ ದಿನಗಳಲ್ಲಿ ಗುಟ್ಟಾಗಿ ಸಿಗರೇಟು ಸೇದುತ್ತ ಇದ್ದೆನಲ್ಲವೆ? ಶೆಟ್ಟರು ಹೇಳಿದರು: “ನಿನ್ನ ತಂದೆಯವರಿಗೆ ಹೇಗೂ ನಿನ್ನ ಮೇಲೇ ಸಿಟ್ಟು ಬಂದಿದೆ. ನೀನೀಗ ಅವರ ಎದುರು ಸಿಗರೇಟನ್ನೂ ಸೇದಿ ಬಿಡು. ಪಟ್ಟೆ ಹುಲಿಗೆ ಇನ್ನೊಂದು ಬಣ್ಣ ಹೆಚ್ಚ?”

ಕಾಗೊಡು ಸತ್ಯಾಗ್ರಹದ ಬಗ್ಗೆಯೇ ಪ್ರತ್ಯೇಕವಾಗಿ ಬರೆಯಬೇಕು. ರಾಜಕಾರಣವೂ ಸಾಹಿತ್ಯವೂ ಅಭಿನ್ನವೆನ್ನುವಂತೆ ಆಗ ರೂಪಗೊಂಡ ಪ್ರಜ್ಞೆ ನನ್ನ ಹದಿನೆಂಟನೇ ವರ್ಷದಿಂದ ರೂಪಗೊಂಡ ಪ್ರಜ್ಞೆ ಈಗಲೂ ನನ್ನ ವಿಚಾರಗಳ ಭಾವನೆಗಳ ಅಡಿಗಲ್ಲಾಗಿ ಉಳಿದಿದೆ.

“ದೇವರೇ ಅಮ್ಮನನ್ನು ಬದುಕಿಸು”

ಇವತ್ತು ನಾನೇ ಬರೆಯಲು ಮನಸ್ಸು ಮಾಡಿ ಕೂತಿದ್ದೇನೆ. ಇಸ್ಮಾಯಿಲ್ ನಾನು ಹೇಳಿದ್ದನ್ನು ಕೇಳಿ ಬರೆದುಕೊಂಡು ನನಗೆ ಕಳಿಸಿ, ನಾನದನ್ನು ತಿದ್ದಿ, ‘ಕೆಂಡಸಂಪಿಗೆ’ಗೆ ಪ್ರಕಟಿಸಲು ಕೊಡುವ, ಸ್ನೇಹದಲ್ಲಿ ರೂಪ ಪಡೆಯುವ ಮಾರ್ಗವನ್ನು ಬಿಟ್ಟಿದ್ದೇನೆ.

ಈವರೆಗೆ ನಾನು ಬರೆದದ್ದು ಹಲವು ಓದುಗರಿಗೆ ಖುಷಿ ಕೊಟ್ಟಿದೆ. ಈ ಖುಷಿಗಾಗಿ ನಾನು ಅಪ್ರಮಾಣಿಕವಾಗಿ ಆಗಿ ಹೋದ ಕಾಲವನ್ನು ಮನರಂಜಕವಾಗುವಂತೆ ಮರುಕಳಿಸಿಕೊಂಡಿಲ್ಲ-ನಿಜ. ಆದರೆ ಆ ಅನುಭವಗಳೇ ನನಗೆ ಆಗುತ್ತಿರುವಾಗ ನನ್ನ ಬಾಲ್ಯದಲ್ಲಿ ಪಟ್ಟ ಆತಂಕಗಳು, ಕಷ್ಟಗಳು ಕಥನದಲ್ಲಿ ಮಸುಕಾಗುತ್ತವೆ. ಕಥೆಗಳನ್ನು ಬರೆಯುವಾಗ ಹೀಗಾಗುವುದಿಲ್ಲ. ಆಗ ನಾನು ಕೇವಲ ನಾನಲ್ಲ. ಆದ್ದರಿಂದಲೇ ಸದ್ಯದ ಸತ್ಯವೂ ಮಾತಿನಲ್ಲಿ ಇರುತ್ತದೆ. ವಿಪರ್ಯಾಸವೆಂದರೆ ಜೀವನವನ್ನು ಚರಿತ್ರೆ ಮಾಡುವಾಗ ಗೊತ್ತಿಲ್ಲದಂತೆಯೇ ಹೇಳಿಕೊಳ್ಳುವುದರಲ್ಲಿ, ಕೇಳುಗ ಎದುರಿಗಿದ್ದರಂತೂ, ಕೇಳುಗನನ್ನು ರಂಜಿಸಿ ಒಲಿಸಿಕೊಳ್ಳುವ ಆಸೆ ಅಡಗಿರುತ್ತದೆ. ಯಾವಾಗಲೂ ಅಲ್ಲ. ಆದರೆ ಹೆಚ್ಚು ಪಾಲು.

ಮತ್ತೆ ಹುಟ್ಟಿ ಬಂದು ನಿನ್ನ ಹಿಂದಿನ ಬಾಲ್ಯವನ್ನು ನೀನು ಬದುಕುತ್ತೀಯ? ಎಂದು ವಿಧಿಯೇನಾದರೂ ನನಗೆ ಕೇಳಿದರೆ ನಾನೇನು ಹೇಳುತ್ತೇನೆ? ಗೊತ್ತಿಲ್ಲ. ಬೆಳೆಯುವುದರಲ್ಲಿ ಇರುವ ಬಾಧೆ ಸುಖದ್ದು ಖಂಡಿತ ಅಲ್ಲ; ಕೇವಲ ನೋವಿನದೂ ಅಲ್ಲ. ಅದು ಇದೆ-ಅಷ್ಟೇ. ಮನುಷ್ಯ ಮಾತ್ರರಾದ ನಮಗೆಲ್ಲರಿಗೂ ಇದೆ.

ಈಗೊಂದು ಹಿಂದಿನ ಬಾಲ್ಯದ ನೆನಪು: ಸುಖಕೊಡುವ ನೆನಪಲ್ಲ; ಕೇವಲ ದುಃಖದ್ದೂ ಅಲ್ಲ- ಹಳ್ಳಿಯಲ್ಲೊಂದು ದೊಡ್ಡ ಹೆಂಚಿನ ಮನೆ. ಕೋಣೆಯಲ್ಲಿ ಅಮ್ಮ ಮಲಗಿದ್ದಾಳೆ. ಕೆಲವು ದಿನಗಳ ಹಿಂದೆ ಅವಳಿಗೆ ಗರ್ಭಪಾತವಾಗಿದೆ. ರಕ್ತ ಹರಿಯುವುದು ನಿಂತಿಲ್ಲ. ಕಡುಗತ್ತಲಿನ ನಡು ರಾತ್ರೆಯಲ್ಲಿ ಅವಳು ನರಳುವುದು ಕೇಳುತ್ತದೆ. ಕೋಣೆಯ ಹೊರಗೆ ನಡುಮನೆಯಲ್ಲಿ ಮಲಗಿದ ನಾನು ಮತ್ತು ನನ್ನ ಅಪ್ಪ ಲಾಟೀನಿನ ದೀಪ ದೊಡ್ಡ ಮಾಡಿ ಅವಳ ಮುಖ ನೋಡಿದರೆ ಬಿಳುಚಿಕೊಂಡಿದ್ದಾಳೆ. ಅರೆ ಪ್ರಜ್ಞೆಯಲ್ಲಿದ್ದಾಳೆ.

ನಮಗೆ ದಿಗಿಲಾಗಿ ಟಾರ್ಚ್ ಹಿಡಿದುಕೊಂಡು ನಾನೂ ನನ್ನ ತಂದೆಯೂ ತೀರ್ಥಹಳ್ಳಿಗೆ ಡಾಕ್ಟರನ್ನು ಕರೆದುಕೊಂಡು ಬರಲು ಹೋಗುತ್ತೇವೆ. ಕತ್ತಲಲ್ಲಿ ಕಾಡಿನ ನಡುವೆ ಜಲ್ಲಿ ರಸ್ತೆಯ ಮೇಲೆ ಮೆಟ್ಟಿಲ್ಲದೆ ನಡೆಯಬೇಕು. ಅಮ್ಮ ಯಾವ ಘಳಿಗೆಯಾದರೂ ಸಾಯಬಹುದೆಂದು ತಿಳಿದೇ ಹನ್ನೆರಡೋ ಹದಿಮೂರೋ ವಯಸ್ಸಿನ ನಾನು ತಂದೆಯ ಜತೆ ಹೆಜ್ಜೆ ಹಾಕುತ್ತೇನೆ. ತೀರ್ಥಹಳ್ಳಿಯಲ್ಲಿ ಎಲ್ ಎಂ ಪಿ ಮಾಡಿದ ಹೊಸತಾಗಿ ಆಸ್ಪತ್ರೆ ಸೇರಿದ ಡಾಕ್ಟರನ್ನು ಅವರ ಮನೆ ಬಾಗಿಲು ಬಡಿದು ಬಡಿದೂ ಎಬ್ಬಿಸುತ್ತೇವೆ. ಅವರು ಎದ್ದು ನಮ್ಮ ಜತೆ ಅವರ ಸಾಲಿನಲ್ಲೇ ಇರುವ ಲೇಡಿ ಡಾಕ್ಟರನ್ನು ಎಬ್ಬಿಸುತ್ತಾರೆ. ಇಬ್ಬರೂ ಆಸ್ಪತ್ರೆಗೆ ಬಂದು ಹತಾರಿಗಳನ್ನು ಚೀಲದಲ್ಲಿ ಹಾಕಿಕೊಂಡಾದ ಮೇಲೆ ಲೇಡಿ ಡಾಕ್ಟರು ಹೇಳಿದ್ದೊಂದು ಮಾತು ಕೇಳುತ್ತದೆ: ”ಡಾಕ್ಟರ್, ಡೆಟ್ಟಾಲೇ ಇಲ್ಲವಲ್ಲ?” ಡೆಟ್ಟಾಲಿನ ಹೆಸರನ್ನು ನಾನು ಕೇಳಿದ್ದು ಅದೇ ಮೊದಲು.

ತೀರ್ಥಹಳ್ಳಿಯಲ್ಲಿ ಆಗ ಬಾಡಿಗೆಗೆ ಸಿಗುತ್ತಾ ಇದ್ದುದು ಒಂದೇ ಟ್ಯಾಕ್ಸಿ. ಅದನ್ನು ನಾವು ಅರಿವೆ ಟಾಪ್ ಕಾರೆಂದು ಕರೆಯುತ್ತಾ ಇದ್ದೆವು. ಯಾಕೆಂದರೆ ಅದರ ಟಾಪ್ ಬಟ್ಟೆಯದು. ಅದರ ಮೂತಿಯಲ್ಲೊಂದು ಸ್ಟಾರ್ಟಿಂಗ್ ಹ್ಯಾಂಡೆಲ್ ಎಂಬ Z ಆಕಾರದ ಹತಾರಿಯನ್ನು ತೂರಿಸಿ ಜೋರಾಗಿ ತಿರುಗಿಸಬೇಕು, ಮತ್ತೆ ಮತ್ತೆ. ಆಗ ಅದು ಒಲ್ಲೆ ಒಲ್ಲೆ ಎಂಬಂತೆ ಬುರ್ ಬುರ್ ಎಂದು ಸ್ಟಾರ್ಟ್ ಆಗಿ, ತನ್ನ ಎಂಜಿನ್ನಿನ ಚಲನೆಯ ಭರವಸೆ ಹುಟ್ಟಿಸುವ ಗರ್ಜನೆಯ ಸದ್ದು ಪಡೆಯುತ್ತದೆ. ಇದಾಗದೇ ಹೋದಾಗ ಹಿಂದಿನಿಂದ ಎರಡು ಮೂರು ಜನ ಅದನ್ನು ತಳ್ಳಿ ಸ್ಟಾರ್ಟ್ ಮಾಡಬೇಕು. ಅಪ್ಪ ಇಂಥದೊಂದು ಕಾರನ್ನು ಬಾಡಿಗೆಗೆ ಪಡೆದು ತಂದರು. ಡೆಟ್ಟಾಲ್ ಇಲ್ಲದ ಡಾಕ್ಟರುಗಳನ್ನು ಮನೆಗೆ ಕರೆದುಕೊಂಡು ಬಂದಾಯಿತು.

ಅಮ್ಮ ಸತ್ತಿರಲಿಲ್ಲ ಎಂದು ತಂದೆಗೆ ಸಮಾಧಾನವಾಯಿತು. ಆದರೆ ಲೇಡಿ ಡಾಕ್ಟರ್ ಅಮ್ಮನನ್ನು ಪರೀಕ್ಷಿಸಿ ನಮಗೆಲ್ಲಾ ಕೇಳಿಸುವಂತೆ ಅವರ ಸಹೋದ್ಯೋಗಿಗೆ: “ಸ್ವಲ್ಪ ಲೇಟಾಗಿ ಬಿಟ್ಟಿತು ಡಾಕ್ಟರ್” ಎಂದು ರಕ್ತಪಾತಕ್ಕೆ ಏನು ಕಾರಣವೆಂದು ಹೇಳಿದರು. ತಾವು ಮಾಡಬಹುದಾದ್ದನ್ನೆಲ್ಲಾ ಲಾಟೀನಿನ ಬೆಳಕಿನಲ್ಲೇ ಮಾಡುತ್ತಾ ಕುಳಿತರು.

ನಾನು ಮರೆಯಲಾಗದ್ದು ಇದು. ಕತ್ತಲಲ್ಲಿ ಮನೆಯ ಚಿಟ್ಟೆಯಿಂದ ಇಳಿದು ಮನೆಯೆದುರು ವಿಶಾಲವಾಗಿ ತನ್ನ ಕೊಂಬೆಗಳನ್ನು ಹರಡಿದ್ದ ಮರದ ಬುಡದಲ್ಲಿ ನಿಂತೆ. ನಕ್ಷತ್ರಗಳನ್ನು ನೋಡುತ್ತಾ ಪ್ರಾರ್ಥಿಸಿದೆ. “ದೇವರೇ ಅಮ್ಮನನ್ನು ಬದುಕಿಸು”

ಅದೇನಾಯಿತೋ! ಮರದ ಬುಡದಲ್ಲೇ ಹುಲ್ಲಿನ ಮೇಲೆ ಕೂತೆ. ಕಾಲು ಚಾಚಿದೆ. ನನಗೆ ತಿಳಿಯದಂತೆಯೇ ಸಮಾಧಾನ ಪಡುತ್ತಾ ಕೂತಲ್ಲೇ, ಹಾಗೇ ನಿದ್ದೆ ಬಂದಿತು. ಹುಲ್ಲಿನ ಮೇಲೆ ಮಲಗಿದೆ. ನನಗೆ ಎಚ್ಚರಾದಾಗ ಸೂರ್ಯನು ಮೆಲ್ಲನೆ ಪೂರ್ವದಲ್ಲಿ ಕಾಣಿಸಲು ಶುರುವಾಗಿದ್ದ. ಅಮ್ಮ ಸತ್ತಿಲ್ಲ ಎಂದೇ ಅನ್ನಿಸಿತು. ಲಗುಬಗೆಯಿಂದ ಅಮ್ಮ ಮಲಗಿದ್ದ ಕೋಣೆಗೆ ಹೋದೆ. ಅಮ್ಮ ಎಚ್ಚರಾಗಿದ್ದಳು. ದಿಂಬಿಗೊರಗಿ ಕೂತಿದ್ದಳು. ಎಂದಿನಂತೆ ರವೆ ಗಂಜಿ ಕುಡಿಯದೆ ಕಾಫಿ ಕುಡಿಯುತ್ತಿದ್ದಳು.

ಏನೂ ಆಗಿರಲೇ ಇಲ್ಲವೆಂಬಂತೆ ನಾನು ಅಮ್ಮನನ್ನು ಕಣ್ಣಿನ ಸೂಚನೆಯಲ್ಲೇ ಕೇಳಿದೆ: ಅದು ನನ್ನ ತಂದೆಗಾಗಲೀ, ನನ್ನ ಅಜ್ಜನಿಗಾಗಲೀ ಅಮ್ಮನ ಪರಮವೈರಿಯಾಗಿದ್ದ ಜೋತಾಡುವ ಮಲೆಯಾಳೀ ಕಿವಿಗಳ, ದೊಡ್ಡ ಬೆಂಡೋಲೆಯ ಅವಳ ‘ಅತ್ತೆ’ಗಾಗಲೀ ಗೊತ್ತಿರದ ಗುಟ್ಟು. ತೀರ್ಥಹಳ್ಳಿ ಹೈಸ್ಕೂಲಿಗೆ ಹೋಗುವ ನಾನು ವಾರಕ್ಕೊಮ್ಮೆ ಗುಟ್ಟಾಗಿ ತರುತ್ತಿದ್ದ ವಸ್ತು-ಹೊಗೆಸೊಪ್ಪು. ಕೊಂಚ ಸುಣ್ಣ ಹಚ್ಚಿ ಉಜ್ಜಿ ಅದರ ಚೂರನ್ನು ಅಮ್ಮನಿಗೆ ಕೊಟ್ಟೆ. ಅವಳದನ್ನು ಗುಪ್ತವಾಗಿ ಬಾಯಿಗೆ ಹಾಕಿಕೊಂಡಳು.

ಅಮ್ಮನಿಗೆ ಮಾತ್ರವಲ್ಲ, ಅವಳ ಗೆಳತಿಯರಾದ ಅಗ್ರಹಾರದ ಕೆಲವು ಗೃಹಿಣಿಯರಿಗೂ ನಾನು ನಸ್ಯವನ್ನು ಪೇಟೆಯಿಂದ ತರುತ್ತಾ ಇದ್ದೆ. ನನ್ನ ಅಮ್ಮನ ಅಮ್ಮನಿಗೆ-ಅಮ್ಮಮ್ಮ ಎಂದು ನಾವಳನ್ನು ಕರೆಯೋದು-ನಸ್ಯದ ಚಟ. ವಿಧವೆಯಾಗಿ ಸದಾ ಮಡಿಯಲ್ಲೂ, ಮುಗುಳು ನಗೆಯಲ್ಲೂ ಇರುವ ಅಮ್ಮಮ್ಮನಿಗೆ ಮನೆಮಂದಿಯಿಂದ ಮುಚ್ಚಿಡಬೇಕಾದ ಚಟ ಇದಲ್ಲ. ಒಮ್ಮೆ ಮರೆತು ಕಪ್ಪು ನಸ್ಯದ ಹುಡಿಯನ್ನೇ ಕಾಫಿ ಪುಡಿಯೆಂದು ತಿಳಿದು ಬಂದವರಿಗೆ ಕಾಫಿ ಮಾಡಿಕೊಟ್ಟ ಕಥೆಯನ್ನು ನಾವು ಅಮ್ಮಮ್ಮನಿಗೆ ನೆನಪು ಮಾಡಬೇಕು; ಆಗವಳು ನಗಬೇಕು-ಇದೊಂದು ನಮ್ಮ ಆಟ.

ಇವೆಲ್ಲಾ ಚಟಗಳಿದ್ದೂ ಮಹಾ ಮಡಿ-ಮೈಲಿಗೆಯ, ಏಕಾದಶಿ ತಪ್ಪದೆ ಉಪವಾಸ ಮಾಡುವ, ಮಡಿಯಲ್ಲಿ ನನ್ನಿಂದಲೂ ಮುಟ್ಟಿಸಿಕೊಳ್ಳದ ನನ್ನ ಅಮ್ಮನ ಕಣ್ಣಿನಲ್ಲಿ ನಾನು ಜಾತಿ ಕೆಡುತ್ತಾ ಹೋದ, ಅವಳಿಗೆ ಪರಮ ದುಃಖದ, ದುಃಖಕ್ಕಿಂತ ಹೆಚ್ಚಾಗಿ ಓರಗೆಯವರ ಕಣ್ಣಲ್ಲಿ ಕಳಪೆಯಾಗುವ ಭಯದ, ಆದರೆ ನನ್ನ ಬಿಡುಗಡೆಯ ಕತೆಯನ್ನು ಹೇಳುವುದಿದೆ.

ಹಣ್ಣ ಆರಿಸಹೋಗಿ ಹಾವ ಮೆಟ್ಟಿಬಿಟ್ಟೆ ಅನಿಸಿ

ವಯಸ್ಸಾದಂತೆ ಹೆಸರುಗಳು ಮರೆತು ಹೋಗುತ್ತವೆ. ಆದರೆ ಮುಖಗಳು ನೆನಪಿರುತ್ತವೆ. ಅವರ ಧ್ವನಿ ನೆನಪಿರುತ್ತದೆ. ಬಾಲ್ಯದಲ್ಲಿ ಒಂದು ದಿನವಿದ್ದಂತೆ ಇನ್ನೊಂದು ದಿನ ಇರುತ್ತಿರಲಿಲ್ಲ. ಅದರಲ್ಲೂ ಒಂದೊಂದು ಮನೆಗೂ ಒಂದೊಂದು ಹೆಸರಿದ್ದ ಮಲೆನಾಡಿನ ಹಳ್ಳಿಗಳಲ್ಲಿ ಪ್ರತಿ ದಿನವೂ ಹೊಸ ದಿನವೆಂದೇ ಅನ್ನಿಸುತ್ತಿತ್ತು. ಬೆಳಿಗ್ಗೆ ಎದ್ದದ್ದೇ ಉಮಿ ಕರಿಯಲ್ಲಿ ಹಲ್ಲುಗಳನ್ನು ಉಜ್ಜಿ, ಸದಾ ಉರಿಯುವ ಬಚ್ಚಲಲ್ಲಿ ಸದಾ ಕುದಿಯುವ ನೀರನ್ನು ಹಿತ್ತಾಳೆ ಹಂಡೆಯಿಂದ ಬಳಪದ ಕಲ್ಲಿನ ಬೋಗುಣಿಗೆ ತಣ್ಣೀರು ಬೆರೆಸಿ ಹದ ಮಾಡಿಕೊಂಡು ತಲೆಯ ಮೇಲೆ ಸುರಿದುಕೊಂಡು, ತಿಂಗಳು ಹಿಂದೆ ಗುಡ್ಡದಿಂದ ಕೊಯ್ದು ತಂದು ನೆನಸಿಟ್ಟ ಮತ್ತಿ ಸೊಪ್ಪಿನ ಲೋಳೆಯ ಜತೆ ಸೀಗೆ ಪುಡಿಯನ್ನೂ ಬೆರೆಸಿ ನೊರೆ ಬರುವಂತೆ ತಲೆಯುಜ್ಜಿಕೊಂಡು, ಅಮ್ಮ ಅಡುಗೆ ಮನೆಯಿಂದ ಕೂಗಿ ಹೇಳಿದಂತೆ ಕಿವಿ ಸಂದಿ, ಕಂಕುಳ ಸಂದಿ, ತೊಡೆ ಸಂದಿಗಳನ್ನು ಸೀಗೆಯಲ್ಲಿ ಉಜ್ಜಿ ತೊಳೆದು, ಮುಖ ಮೈ ಕೆಂಪಾಗುವಷ್ಟು ಬಿಸಿ ನೀರನ್ನು ಬುಳುಬಳು ಎಂದು ಶಬ್ದ ಮಾಡುತ್ತಾ ತುಂಬುವ ಹಿತ್ತಾಳೆಯ ಚೊಂಬಿನಿಂದ ತಲೆ ಮೇಲೆ ಸುರಿದುಕೊಂಡು, ಪಾಣಿ ಪಂಚೆಯಿಂದ ತಲೆಯನ್ನೂ ಮೈಯನ್ನೂ ಅಮ್ಮನಿಗೆ ತೃಪ್ತಿಯಾಗುವಂತೆ ಒರೆಸಿಕೊಂಡು, ಇನ್ನೊಂದು ಮಡಿಯಲ್ಲಿ ಒಣಗಿದ ಪಾಣಿ ಪಂಚೆಯುಟ್ಟು, ಊಟದ ಮನೆಗೆ ಬಂದು, ಮಣೆ ಮೇಲೆ ಕೂತು ದೇಹದ ಬೇರೆ ಬೇರೆ ಸ್ಥಳಗಳಲ್ಲಿ ಲೋಕ ಕಲ್ಯಾಣದ ದೇವತೆಗಳನ್ನು ಮಂತ್ರೋಕ್ತವಾಗಿ ಆಹ್ವಾನಿಸಿ, ಅಂಗೈಯನ್ನು ಬಟ್ಟಲು ಮಾಡಿ ತಾಮ್ರದ ಚಮಚದಿಂದ ಮೂರು ಬಾರಿ ನೀರು ಸುರಿದುಕೊಂಡು ಒಳಗಿನ ದೇವತೆಗಳಿಗೆ ನನ್ನ ತುಟಿಗಳಿಂದ ಕುಡಿಸುತ್ತಾ ಒಂದಷ್ಟು ಗಾಯತ್ರಿ ಜಪ ಮಾಡಿ, ಅಮ್ಮ ಕೊಡುವ ಡಿಕಾಕ್ಷನ್ ಕಾಫಿ ಕುಡಿದು ಎದ್ದು ಓದಲು ಕೂರುವುದು. ನಾನಿದ್ದ ಎಲ್ಲ ಹಳ್ಳಿಗಳಲ್ಲೂ ಇದೇ ನಿತ್ಯದ ಕ್ರಮವಲ್ಲ. ಇದು, ದೂವಾರ್ಸಪುರದ ಪುರಾತನ ಮಠವೂ, ಆಧುನಿಕ ಪೋಸ್ಟ್ ಆಫೀಸೂ ಇದ್ದ ಅಗ್ರಹಾರದಲ್ಲಿ.

ಇನ್ನೂ ಹಿಂದೆ ಕೆರೆಕೊಪ್ಪದಲ್ಲಿ ಅಂಗಳದ ಆಚೆ ಮನೆಯನ್ನು ಆಕ್ರಮಿಸಲು ಹೊಂಚುತ್ತ ಇರುವ ಅರಣ್ಯ.. ನಸುಕಿನಲ್ಲಿ ಎದ್ದು, ಮನೆಯೆದುರು ಅರಣ್ಯದ ಅಂಚಿನಲ್ಲಿ ಇದ್ದ ರಂಜದ ಮರ ಒಂದರಿಂದ ನೆಲದ ಮೇಲೆ ಚೆಲ್ಲಿದ ನಕ್ಷತ್ರದ ಆಕಾರದ ರಂಜದ ಹೂಗಳನ್ನು ಆರಿಸಿ, ಧೂರ್ವೆಯನ್ನು ಹುಲ್ಲಲ್ಲಿ ಹುಡುಕಿ ಕಿತ್ತು ತರುವುದು, ಕೇದಗೆ ಅರಳಿದೆಯೆ, ಮರದ ಮೇಲಿನ ಗೂಡೊಂದರಲ್ಲಿ ಮೊಟ್ಟೆ ಮರಿಯಾಯಿತೆ, ಎಂದು ಬಿದಿರಿನ ಸಂದಿಯಿಂದ ನಿತ್ಯ ನೋಡುವುದು. ಧೂರ್ವೆಯನ್ನು ಅಜ್ಜಯ್ಯನಿಗೆ ಕೊಟ್ಟು, ಅಮ್ಮ ಕಡಗೋಲಿನಿಂದ ಮೊಸರು ಕಡೆಯುತ್ತ, ‘ಏಳು ನಾರಾಯಣನೆ, ಏಳು ಲಕ್ಷ್ಮೀ ರಮಣ’ ಎಂಬ ಹಾಡನ್ನು ಹೇಳುವುದನ್ನು ಆಲಿಸುತ್ತ ರಂಜದ ಹೂವನ್ನು ಬಾಳೆಯ ನಾರಿನಲ್ಲಿ ಪೋಣಿಸುವುದು, ‘ಕುಂಟು ಕಾಲಿನ ಕೃಷ್ಣಪ್ಪಯ್ಯ’ ಮೇಷ್ಟ್ರಿಗಾಗಿ ಆತಂಕದಲ್ಲಿ ಕಾಯುವುದು. ‘ಇವತ್ತು ಮೇಷ್ಟ್ರಿಗೆ ಜ್ವರ ಬರಲಿ ದೇವರೇ’ ಎಂದು ಮನಸ್ಸಲ್ಲೇ ಪ್ರಾರ್ಥಿಸುವುದು. ಕೆರೆಕೊಪ್ಪದಲ್ಲಿ ನಮಗೆಲ್ಲಾ ಚರಟದ ಕಾಫಿ. ಆದರೆ ಅಜ್ಜಯ್ಯನಿಗೆ, ಕೆಲವು ಸಾರಿ ಮನೆಯಲ್ಲಿರುತ್ತಿದ್ದ, ನನ್ನ ತಂದೆ ಶಾನುಭೋಗರಿಗೆ ಮತ್ತು ಅವರ ಗೆಳೆಯರಾದ ಊರಿನ ಪಟೇಲರಿಗೆ ಮಾತ್ರ ‘ಓರಿಜಿನಲ್’ ಕಾಫಿ ಪುಡಿಯ ಕಾಫಿ. ಆಗಲೇ ಹುರಿದು, ಆಗಲೇ ಪುಡಿಮಾಡಿ, ಆಗಲೇ ಕುದಿಯುವ ನೀರಿಗೆ ಬೆರಸಿ, ಮುಚ್ಚಿಟ್ಟು, ಅದರ ಗಸಿ ಇಳಿಯುವಷ್ಟು ಹೊತ್ತು ಕಾದು,ಅದಕ್ಕಾಗಿಯೇ ಇದ್ದ ಬಟ್ಟೆಗೆ ಸುರಿದು ಹಿಂಡಿ, ಡಿಕಾಕ್ಷನ್ ಇಳಿಯುವಾಗ ಕಳೆದುಕೊಂಡ ಉಷ್ಣಾಂಶವನ್ನು ಬಿಸಿಬಿಸಿ ಎಮ್ಮೆ ಹಾಲು ಬೆರೆಸಿ ಹದ ಮಾಡಿ ಕಾಫಿ ಮಾಡುವುದೇ ಸಾಮಾನ್ಯ. ಈ ಕಾಫಿಯನ್ನು ಫಳಫಳ ಹೊಳೆಯುವ ಹಿತ್ತಾಳೆ ಲೋಟದಿಂದ ಇನ್ನೊಂದು ಲೋಟಕ್ಕೆ ನೊರೆ ಬರುವಂತೆ ಎತ್ತರದಿಂದ ಹಲವು ಸಾರಿ ಹುಯ್ದು ಕುಡಿಯಲು ಅಗತ್ಯವಾದ ಬಿಸಿಗದನ್ನು ಇಳಿಸಿ, ಸೆರಗು ಮುಚ್ಚಿದ ಕೈಯಮೇಲೆ ಅದನ್ನು ಇಟ್ಟುಕೊಂಡು ಹಸನ್ಮುಖಿಯಾಗಿ ಅದನ್ನು ಅಮ್ಮ ಕೊಡುವುದು. ಮಕ್ಕಳಿಗೂ ತನಗೂ ಎಲ್ಲೋ ಒಂದೊಂದು ಸಾರಿ ಈ ಕಾಫಿಯ ಪುಣ್ಯ. ನಿತ್ಯ ಈ ಕಾಫಿಯ ಘಮಘಮದ ವಾಸನೆಯನ್ನು ಕೊಂಚವಾದರೂ ಉಳಿಸಿಕೊಂಡ ಅದರ ಚರಟ ಕುದಿಸಿ ಮಾಡಿದ ಕಾಫಿಯ ಸೇವನೆ ನಮಗೆ.

ಇವೆಲ್ಲದರ ತಯಾರಿಯೂ ನೆನಪಾಗುತ್ತದೆ. ಕಾಫಿ ಬೀಜವನ್ನು ಬ್ಯಾರಿಯೊಬ್ಬರು ತಿಂಗಳಿಗೊಮ್ಮೆ ನಮಗೆ ತಂದುಕೊಡುತ್ತಿದ್ದರು. ಈ ವಿಶೇಷ ಪದಾರ್ಥಗಳೆಲ್ಲವೂ ಕಡವಾಗಿ ನಾವು ಪಡೆಯುವುದು ವರ್ಷಕ್ಕೊಮ್ಮೆ .ಅಂದರೆ ದೀಪಾವಳಿಯಿಂದ ಇನ್ನೊಂದು ದೀಪಾವಳಿಗೆ, ಯುಗಾದಿಯಿಂದ ಇನ್ನೊಂದು ಯುಗಾದಿಗೆ, ಗೌರಿ ಹಬ್ಬದಿಂದ ಇನ್ನೊಂದು ಗೌರಿ ಹಬ್ಬದವರೆಗೆ ಈ ಕಡದ ಅವಧಿ. ಈ ಕಡವನ್ನು ತೀರಿಸುವುದು ಬದಲಾಗಿ ನಾವು ಬೆಳೆದ ಅಡಿಕೆಯನ್ನೋ, ಭತ್ತವನ್ನೋ ಬದಲಿಗೆ ಕೊಟ್ಟು. ಜರಿ ಟೋಪಿ ತೊಟ್ಟ ಬ್ಯಾರಿ ಬಂದಾಗಲೆಲ್ಲಾ ನಮಗೆ ಸಕ್ಕರೆಯಿಂದ ಮಾಡಿದ ಮಿಠಾಯಿ ಪುಕ್ಕಟೆ ಸಿಗುತ್ತಿತ್ತು. ಹುಂಜದ ತಲೆಯಂತಹ ಕುಚ್ಚುಗಳಿದ್ದ, ನಡೆದಾಗ ಸದ್ದು ಮಾಡುವ ಚಪ್ಪಲಿಯೊಂದನ್ನು ನನಗೆ ಆಸೆಯಾಯಿತೆಂದು ಬ್ಯಾರಿಯೊಬ್ಬರು ತಂದುಕೊಟ್ಟದ್ದು ನೆನಪಿದೆ. ನನ್ನ ಭಯನಿವಾರಣೆಗೆಂದು ಎಂದೋ ಒಮ್ಮೆ ಕರಡಿ ಆಡಿಸುವವನು ತಂದ ಕಡು ಕಪ್ಪು ಕರಡಿಮೇಲೆ ನನ್ನನ್ನು ಕೂರಿಸಿ ಅಂಗಳ ಸುತ್ತಿಸಿದ್ದೂ ನೆನಪಿದೆ.

ಕೆರೆಕೊಪ್ಪದಲ್ಲಿ ನಾನೂ ಅಮ್ಮನಿಂದ ತಲೆ ಬಾಚಿಸಿಕೊಂಡು ರಂಜದ ಹೂವನ್ನು ಮುಡಿಯುತ್ತಿದ್ದೆ; ಮಗಳು ಬೇಕೆಂಬ ಅಮ್ಮನ ಆಸೆ ಪೂರೈಕೆಯಾದದ್ದು ಅವರ ಮೂರನೇ ಹೆರಿಗೆಯಲ್ಲಿ. ಮುಂದೆ ಬೇಗುವಳ್ಳಿಯಲ್ಲಿ ಈ ತಂಗಿಯನ್ನು ಎತ್ತಿಕೊಂಡು ಬೀದಿಯಮೇಲೆ ಆಡಿಸುತ್ತ ಇದ್ದಾಗ ಜಂಬದ ಹುಂಜವೊಂದು ನನ್ನ ಮೇಲೆ ಎರಗಿತ್ತು. ಮನೆಯ ಎದುರಿದ್ದ ಟೈಲರ್‌ನ ಕುರ್ಚಿಯಮೇಲೆ ಕೂತು ನನ್ನ ಕಿರುಬೆರಳನ್ನು ಸೂಜಿಗೆ ತಾಗಿಸಿ ಅದರ ಹರಿತ ಗಮನಿಸುತ್ತ ಇದ್ದಾಗ ನನ್ನ ತಂಗಿಯೂ ತನ್ನದೇ ಕುತೂಹಲದಲ್ಲಿ ಮೆಶಿನ್ನಿನ ಪೆಡಲನ್ನು ತುಳಿದು ನನ್ನ ಬೆರಳನ್ನು ಹೊಲಿದಿದ್ದಳು.

ತೀರ್ಥಹಳ್ಳಿಯ ಛತ್ರಕೇರಿ ಮನೆಯಿಂದ ಮೊದಲಾಗಿ, ಆ ಮೇಲೆ ಒಂಟಿ ಮನೆಯ ಕೆರೆಕೊಪ್ಪದಿಂದ, ಹತ್ತಿರದ ಇನ್ನಷ್ಟು ಮನೆಗಳಿದ್ದ ಪ್ರೈಮರಿ ಸ್ಕೂಲೂ ಇದ್ದ ಬೇಗುವಳ್ಳಿಗೆ, ಬೇಗುವಳ್ಳಿಯಿಂದ ವರ್ಷಕ್ಕೊಂದು ರಥೋತ್ಸವ ನಡೆಯುವ ಮೇಳಿಗೆಗೆ (ಹುಟ್ಟಿದ್ದು ತಾಯಿಯ ಪ್ರಕಾರ ಮೇಳಿಗೆಯಲ್ಲೇ), ಮೇಳಿಗೆಯಿಂದ ತೀರ್ಥಹಳ್ಳಿಗೆ ಹತ್ತಿರವಾದ, ತುಂಗೆಯ ದಡದಲ್ಲಿದ್ದ ಅಗ್ರಹಾರವಾದ ದೂರ್ವಾಸಪುರಕ್ಕೆ-ಹೀಗೆ ನನ್ನ ತಂದೆಯ ಓಡಾಟದಲ್ಲಿ ನನ್ನ ಬಾಲ್ಯ ಕಳೆದದ್ದು. ಜಪಗಿಪದ ದ್ವಿಜತ್ವದ ಆಚರಣೆಗಳು ದೂರ್ವಾಸಪುರದ ನನ್ನ ಮಿಡಲ್ ಮತ್ತು ಹೈಸ್ಕೂಲು ದಿನಗಳಿಗೆ ಸೇರಿದವು.

ಮೇಳಿಗೆಯ ಇನ್ನೊಂದು ಈಗಲೂ ಕಾಡುವ ಶೈಶವದ ನೆನಪು:
ಸಾಯುತ್ತ ಮಲಗಿದ್ದ ಚಂಡೆಮದ್ದಲೆಯ ರಸಿಕರಾದ ನನ್ನ ಅಮ್ಮನ ಅಪ್ಪ ಒಂದು ದಿನ, ‘ಸತ್ಯಭಾಮೆ ಬಾರೇ ನೋಡೇ’ ಎಂದು ಕರೆದರು. ನನ್ನ ಅಮ್ಮ ಓಡಿಬಂದು ‘ಏನು ಬೇಕು ಅಪ್ಪಯ್ಯ’ ಎಂದರು. ಹೊರಗೆ ಮಲಗಿದ್ದ ಮೇಳಿಗೆ ಅಜ್ಜಯ್ಯ ದೇವಸ್ಥಾನದ ಬದಿಗಿದ್ದ ಮರವೊಂದನ್ನು ಕೈಎತ್ತಿ ತೋರಿಸುತ್ತ, ‘ನೋಡೇ ಅಲ್ಲಿ. ವಿಷ್ಣು ಗರುಡನಮೇಲೆ ಕೂತು ನನ್ನನ್ನೇ ಹೇಗೆ ನೋಡ್ತ ಇದಾನೆ ನೋಡೇ’ ಎಂದಿದ್ದರು. ಅಮ್ಮ ಒದ್ದೆ ಬಟ್ಟೆ ತಂದು ಅಜ್ಜಯ್ಯನ ಹಣೆ ಮೇಲೆ ಇಟ್ಟು ಅವರ ತಲೆ ಸವರಿದ್ದರು. ಅವರು ಸತ್ತದ್ದು ರಾಮನವಮಿಯ ದಿನ. ಅವರನ್ನು ನೆಲದ ಮೇಲೆ ಮಲಗಿಸಿ ಎರಡು ತುದಿಯಲ್ಲೂ ಹಣತೆ ಹಚ್ಚಿದ್ದರು. ರಾಮನವಮಿಯ ಭಜನೆಗಳು ದೇವಸ್ಥಾನದಿಂದ ಕೇಳುತ್ತ ಇದ್ದವು. ಎಲ್ಲರೂ ಅಜ್ಜ ಸತ್ತರೆಂದು ಅಳುತ್ತ ಇದ್ದಾಗ ದೇವಸ್ಥಾನದಲ್ಲಿ ನಡೆಯುವ ಮಂಗಳಾರತಿಗೆ ಹೋಗಬೇಕೆಂದು ನಾನು ರಂಪಮಾಡಿದ್ದು ಮರೆಯುವುದಿಲ್ಲ.

ವರ್ಷವಿಡೀ ಅದೆಷ್ಟೋ ಹಬ್ಬಗಳು, ವ್ರತಗಳು, ಮಠದಲ್ಲಿ ಪೂಜೆ ಪುನಸ್ಕಾರಗಳು, ನೆಂಟರ ಮನೆಯ ಮದುವೆಗಳು. ಅತಿಯಾದ ಮಡಿ ಮೈಲಿಗೆಯ ಸಂಕೋಚಗಳಲ್ಲಿ ಮಧ್ಯಾಹ್ನವಾದ ಮೇಲೆ ಅದೆಷ್ಟೋ ಹೊತ್ತು ಕಳೆದು ಬಡಿಸುವ ಶ್ರಾದ್ಧದ ಊಟಗಳು ಮತ್ತು ಉಪನಯನವಾದ್ದರಿಂದ ಕುಡಿಯುವ ಬಟ್ಟಲಿಗೆ ಬೀಳುವ ದಕ್ಷಿಣೆ.

ನಮ್ಮ ಮನೆಯಲ್ಲಿ ಅಜ್ಜಯ್ಯ ಅವರ ಅಪ್ಪ ಅಮ್ಮನ ಶ್ರಾದ್ಧವನ್ನು ವಿಧ್ಯುಕ್ತವಾಗಿ ಅಕ್ಕಿ ಸಿಗದ ಯುದ್ಧದ ಕಾಲದಲ್ಲೂ ನಡೆಸುತ್ತಾ ಇದ್ದರು. ನನಗೆ ವೇದ ಮಂತ್ರಗಳನ್ನು ಕಲಿಸಲು ಬರುತ್ತಿದ್ದ ಕೊಠಾರಿಯೊಬ್ಬರು ಕುಂಟುತ್ತಲೇ ಮೈಲುಗಟ್ಟಳೆ ನಡೆದು ಈ ಶ್ರಾದ್ಧಾದಿಗಳ ಬ್ರಾಹ್ಮಣಾರ್ಥಕ್ಕೆ ಹಾಜರಾಗುತ್ತಿದ್ದರು. ತಮಗೆ ಸಿಕ್ಕಿದ ದುಡ್ಡನ್ನೆಲ್ಲಾ ಖರ್ಚು ಮಾಡದೆ ಕೂಡಿಡುತ್ತಿದ್ದರು. ಅವರಿಗೆ ಮಕ್ಕಳೂ ಇರಲಿಲ್ಲ. ಹೆಂಡತಿ ಹೆರಿಗೆಯ ಸಮಯದಲ್ಲೇ ಎಂದೋ ಸತ್ತಿದ್ದರಂತೆ. ಆದ್ದರಿಂದ ಅವರು ಲೆಕ್ಕಕ್ಕೆ ಗೃಹಸ್ಥರೇ; ಸಂತಾನವಿಲ್ಲದ ಗೃಹಸ್ಥ. “ಕೊಠಾರಿಗಳೇ ಈ ಎಲ್ಲಾ ಹಣವನ್ನು ಯಾರಿಗೆಂದು ನೀವು ಕೂಡಿಡುವುದು? ಎಂದು ಕೇಳಿದರೆ “ನಾನು ಸತ್ತ ಮೇಲೆ ಯಾರಾದರೂ ನನ್ನ ಶ್ರಾದ್ಧ ಕರ್ಮಗಳನ್ನು ಮಾಡಬೇಕಲ್ಲವೇ? ಅದಕ್ಕಾಗಿ” ಎಂದು ನಿರ್ಭಾವದಲ್ಲಿ ಹೇಳುತ್ತಿದ್ದರು. ಅವರು ಕೂಡಿಟ್ಟ ಹಣವನ್ನು ಖರ್ಚು ಮಾಡಿ ಪುಣ್ಯಾತ್ಮನೊಬ್ಬ ಗಯಕ್ಕೆ ಹೋಗಿ ಒಂದು ಶ್ರಾದ್ಧವನ್ನು ಮಾಡಿದರೆ ಸಾಕು ಎಂಬುದು ಅವರ ಆಸೆಯಾಗಿತ್ತು. ಈ ಯಾರೋ ಪುಣ್ಯಾತ್ಮ ಮಾಡಬೇಕಾದ ಖರ್ಚಿಗಾಗಿ ಯಾರಿಗೂ ಕೇಡು ಬಯಸದ ಈ ಕೊಠಾರಿ ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಒಂದು ಪಾಣಿ ಪಂಚೆಯಲ್ಲಿ ತಮಗೆ ಸಿಕ್ಕ ನಾಣ್ಯಗಳನ್ನೆಲ್ಲಾ ಬೆಳ್ಳಿ ರೂಪಾಯಿಗೆ ಪರಿವರ್ತಿಸಿ ಗಂಟು ಕಟ್ಟಿ ಇಡುತ್ತಿದ್ದರು. ರೋಮಿಗೂ ಪೂರ್ವದ ನಾಗರಿಕತೆಯೊಂದನ್ನು ಕಟ್ಟಿದ ಎಟ್ರೂಸ್ಕನ್ನರು ವಾಸಿಸುತ್ತ ಇದ್ದ ಮನೆಗಳನ್ನು ಈಗ ಕಾಣಲಾರೆವು. ಬದುಕುವುದು ಅಲ್ಪಕಾಲ; ಸತ್ತ ಮೇಲೆ ನಾವಿರುವುದು ಶಾಶ್ವತದಲ್ಲಿ ಎಂದು ತಿಳಿದ ಅವರು ಮಣ್ಣಿನ ಮನೆಯಲ್ಲಿ ಬದುಕಿ ಈಗಲೂ ಉಳಿದುಕೊಂಡಿರುವ ತದ್ವತ್ ಆಕಾರದ ಕಲ್ಲಿನ ಮನೆಯನ್ನು ಕಟ್ಟಿಕೊಂಡು ಸಾಯುತ್ತ ಇದ್ದರಂತೆ.

ದೂರ್ವಾಸಪುರದಲ್ಲ ಕಳೆದ ಬಾಲ್ಯವೇ ನನ್ನ ಪ್ರಜ್ಞೆಯ ಉತ್ಪಾತಗಳಿಗೆ ಮುಖ್ಯವಾದುದು. ಮಠದ ಆವರಣದಲ್ಲಿದ್ದ ಕೆಂಡಸಂಪಿಗೆಯ ಮರ, ಈ ಕೆಂಡಸಂಪಿಗೆ ಮರದ ಪಕ್ಕದಲ್ಲೇ ಇದ್ದ ಆಯುರ್ವೇದದ ಔಷಧಿಗಳಿಗೆ ಬಳಕೆಯಾಗುವ ಕುಸುಮ ಭರಿತವಾದ ಇನ್ನೊಂದು ನಾಗ ಸಂಪಿಗೆ ಎಂಬ ಮರ; ಈ ಹೂವುಗಳನ್ನು ನಾವು ಆರಿಸಿ ತಂದು, ಬಿಸಿಲಲ್ಲಿ ಒಣಗಿಸಿ, ರಂಜದ ಕಟ್ಟೆ ಎಂಬ ಗುಡ್ಡದ ಮೇಲಿದ್ದ ನಮ್ಮದೇ ಆದ ಪೇಚೆಯಲ್ಲಿದ್ದ ಶ್ಯಾಮ ಪಂಡಿತರಿಗೆ ಕೊಟ್ಟು ಪಡೆಯುತ್ತಿದ್ದ ಹೆಚ್ಚೆಂದರೆ ಒಂದೆರಡು ರೂಪಾಯಿಗಳು.

ಗೌರಿ ಪೂಜೆಗೆಂದು ನಾನು, ನನ್ನ ತಮ್ಮ ವೆಂಕಟೇಶ (ಕೊಚ್ಚಿಯಲ್ಲಿ ಸತ್ತವನು, ಜೀರಿಗೆ ಮೆಣಸಿನ ಕಾಯನ್ನು ತಿಂದು ಚಾಕಲೇಟ್ ಗೆಲ್ಲುತ್ತ ಇದ್ದವನು) ನನಗಿಂತ ಚಿಕ್ಕವನಾದ ನನ್ನ ಸೋದರ ಮಾವ ರಾಮ ಸಾಮಕ ಒಟ್ಟಾಗಿ ಕಾಡು ಮೇಡು ಅಲೆದು ಸಂಗ್ರಹಿಸುತ್ತಿದ್ದ ನೂರಾರು ಬಗೆಯ ಪವಿತ್ರ ಕಾರ್ಯಕ್ಕೆ ಅಗತ್ಯವಾದ ಪತ್ರೆಗಳು, ಅವುಗಳ ವಿಶಿಷ್ಟ ವಾಸನೆಗಳು, ತನ್ನದೇ ವಿಶಿಷ್ಟ ರುಚಿಯ ಚಿಕ್ಕ ಚಿಕ್ಕ ಹಣ್ಣುಗಳ ಹುಳಿ ಸಿಹಿ ಮಾವಿನ ದೈತ್ಯಾಕಾರದ ಮರಗಳು, ಅವುಗಳ ಹಣ್ಣನ್ನು ಬೀಳಿಸಲು ನಾವು ಬೀಸುತ್ತಿದ್ದ ಕತ್ತರಿಸಿದ ಮರದ ಕೋಲುಗಳು, ಗುರಿಯಿಟ್ಟು ಹೊಡೆಯುವ ಚಾಟರ್ ಬಿಲ್ಲು, ಬೀಸುವ ಕೋಲಿಗೆ ಹಣ್ಣು ಉದುರಲಿ ದೇವರೇ ಎಂದು ನಾವು ಮಾಡುತ್ತಾ ಇದ್ದ ಪ್ರಾರ್ಥನೆಗಳು, ಬಿದ್ದ ಹಣ್ಣನ್ನು ಚೀಪುವಾಗ ಇಡೀ ಬಾಯಿಗೆ ಸಿಗುತ್ತಿದ್ದ ರಸಭರಿತ ಗೊರಟವನ್ನು ಹೀರುತ್ತಾ ಇದ್ದಾಗ ನಾಲಗೆಗೆ ಸಿಗುವ ಸುಖ- ಚೀಪುವ ಸದ್ದಿನಿಂದ ಒಬ್ಬರಿಗೊಬ್ಬರು ಕೊಡುವ ಈ ಸುಖದ ಪ್ರೇರಣೆ-ಇವೆಲ್ಲಾ ಒಟ್ಟಾಗಿ ನೆನಪಾಗುವುದು ಅಲ್ಲ. ಅದೊಂದು ದಿನ ‘ಇದು’ ಸಂಭವಿಸಿದ್ದು ಎನ್ನಿಸುವಂತೆ ನಿರ್ದಿಷ್ಟವಾಗಿ ನೆನಪಾಗುತ್ತದೆ. ಕೆಳಗೆ ಬಿದ್ದ ಹಣ್ಣನ್ನು ಆರಿಸುವಾಗ ಇನ್ನೇನು ಹಾವನ್ನು ಮೆಟ್ಟಿ ಬಿಟ್ಟೆ ಅನ್ನಿಸಿ ಹಿಂದೆ ಸರಿದ ರೋಮಾಂಚನವನ್ನು ಈಗಿನ ನೆರತ ಕೂದಲೂ ನೆನೆಯುತ್ತದೆ.

ಅವತಾರವೆಂಬ ಚಟ ಮತ್ತು ಚಡಪಡಿಕೆ

ಕಾರ್ತಿಕ ಮಾಸದ ಅದೊಂದು ಸಂಜೆ-ಮಠಕ್ಕೊಬ್ಬರು ಹರಿದಾಸರು ಬಂದಿದ್ದಾರೆ. ಅವರು ಹೇಳುವ ಪ್ರಹ್ಲಾದ ಚರಿತ್ರೆಯ ವೈಖರಿ ನಮ್ಮನ್ನು ತನ್ಮಯವಾಗಿ ಕೇಳುವಂತೆ ಮಾಡುತ್ತದೆ. ಅದೇ ಗೊತ್ತಿರುವ ಕಥೆ, ಆದರೆ ಗೊತ್ತೇ ಇರಲಿಲ್ಲ ಎನ್ನಿಸುವಂತೆ ಮತ್ತೆ ಗೊತ್ತಾಗುವ ಕಥೆ. ಅದಕ್ಕೆ ಅಲ್ಲಲ್ಲಿ ಪುರಾಣ ಲೋಕದಿಂದ ಸದ್ಯದ ಲೌಕಿಕಕಕ್ಕೆ ತರುವ ಉಪ ಕಥೆಗಳ ಉಪ್ಪಿನಕಾಯಿ.

ಒಂದಾನೊಂದು ಕಾಲದಲ್ಲಿ ಬಡ ಕ್ಷೌರಿಕನೊಬ್ಬನಿದ್ದು, ಒಂದೊಂದು ಕ್ಷೌರಕ್ಕೂ ಒಂದೊಂದು ಬಿಲ್ಲೆಯನ್ನು ಸಂಪಾದಿಸಿ ಅವನು ಹಲವು ಕಾಲ ನೆಮ್ಮದಿಯಾಗಿಯೇ ಬದುಕುತ್ತಿದ್ದ. ಯಾರು ಕರೆದರೂ ಪೆಟ್ಟಿಗೆ ಸಮೇತ ಹಾಜರಾಗುತ್ತಾ ಇದ್ದ. ಅವನಿಗೊಮ್ಮೆ ಹೀಗೆ ಬಿಲ್ಲೆ ಬಿಲ್ಲೆ ಸಂಪಾದಿಸಿಕೊಂಡು ಬದುಕುವುದು ಬೇಜಾರಾಯಿತು. ಕ್ರಾಪು ಬಿಟ್ಟು ದಿಲ್ಲಿ ದೇಶಾಂತರ ಸುತ್ತುತ್ತಿದ್ದ ಯಾರೋ ಒಬ್ಬರು ಹೇಳಿದರು: `ಲಂಕೆಗೆ ಹೋಗು, ಅಲ್ಲಿ ಒಂದು ಕ್ಷೌರ ಮಾಡಿದರೆ ನಾಲ್ಕು ಇಟ್ಟಿಗೆ ಬಂಗಾರ ಸಿಗುತ್ತದೆ` ನಮ್ಮ ಕ್ಷೌರಿಕ ಮಹಾಶಯನಿಗೆ ಆಸೆಯಾಗದೇ ಇರುತ್ತದೆಯೇ? ರಾಮ ಕಟ್ಟಿದ ಸೇತುವೆ ಆ ಕಾಲದಲ್ಲಿ ಇನ್ನೂ ಮುಳುಗದೆ ಇತ್ತು. ಅಳಿಲು ಮಾಡಿದ ಮರಳು ಸೇವೆಯಿಂದ ಶ್ರೀರಾಮ ಕಟ್ಟಿದ ಸೇತುವೆಯನ್ನು ದಾಟಿ ಹೋದ. (ನಮ್ಮ ಭಾಗ್ಯಕ್ಕೆ ಈ ಅಳಿಲಿನ ಮರಳು ಸೇವೆಯನ್ನು ಉದ್ದ ಕಥೆ ಮಾಡಿ ಹೇಳಿ ದಾಸರು ರಸಭಂಗ ಮಾಡುತ್ತಿರಲಿಲ್ಲ). ಹೋದದ್ದೇ ಒಬ್ಬರು ತನ್ನ ಹೆಂಡತಿ ಹೆರುವ ತನಕ ಬೆಳೆಸಿದ್ದ ದಾಡಿಯನ್ನೂ ತಲೆಗೂದಲನ್ನೂ ಬೋಳಿಸಿಕೊಳ್ಳಲು ಪುತ್ರೋತ್ಸವದ ಹರ್ಷದಲ್ಲಿ ಕಾದಿದ್ದರು. ಅವರಿಗೆ ಕ್ಷೌರವನ್ನು ಮಾಡಿಯಾಯಿತು. ಅವರೇನು ಕೊಟ್ಟರು ಗೊತ್ತೇ? ಬಿಲ್ಲೆಯಲ್ಲ-ನಾಲ್ಕು ಇಟ್ಟಿಗೆ ಬಂಗಾರ! ಕೋಟಿ ಕೋಟಿ ಬಿಲ್ಲೆಗಳಿಗೂ ಮಿಗಿಲಾದ ಹಣ.

ತನ್ನ ಆಯುಷ್ಯವನ್ನೆಲ್ಲಾ ಮಾತ್ರವಲ್ಲ ತನ್ನ ಮಕ್ಕಳು ಮರಿಮಕ್ಕಳು ತಮ್ಮ ಆಯುಷ್ಯವನ್ನೆಲ್ಲಾ ಕ್ಷೌರ ಮಾಡುತ್ತಾ ಕಳೆದರೂ ಸಿಗಲಾರದಷ್ಟು ಹಣ. ನಮ್ಮ ಕ್ಷೌರಿಕ ಮಹಾಶಯ ಆಸೆಬುರಕನೇನೂ ಅಲ್ಲ. ಇಷ್ಟೇ ಸಂಪತ್ತು ತನಗೆ ಸಾಕೆಂದುಕೊಂಡ. ನಡೆದೂ ನಡೆದೂ ಆಯಾಸವಾಗಿತ್ತು. ಹಸಿವಾಗಿತ್ತು. ಊಟ ಮಾಡಲೆಂದು ಒಂದು ಖಾನಾವಳಿಗೆ ಹೋದ. ಹೊಟ್ಟೆ ತುಂಬ ಊಟ ಮಾಡಿದ. ಲಂಕೆಯ ಹಲಸಿನ ಹಣ್ಣಿನ ಪಾಯಸ, ಅದರದೇ ಮುಳಕ, ಮಾವಿನ ರಸಾಯನ, ಪತ್ರೊಡೆ-ಹೀಗೆ ಬಗೆ ಬಗೆಯ ಭಕ್ಷ್ಯ ಭೋಜ್ಯಗಳ ಉಟವನ್ನು ಮಾಡಿದವನೇ ಹೊರ ಬಂದು ಕೈತೊಳೆದು ಊಟದ ಬಿಲ್ಲನ್ನು ಕೊಡಲು ಹೋದ. ಅವನ ಜಂಘಾಬಲವೇ ಉಡುಗಿ ಹೋಯಿತು. ಲಂಕೆಯಲ್ಲಿ ಊಟ ದುಬಾರಿಯಾದರೂ ಇಷ್ಟು ದುಬಾರಿಯೇ? ಎರಡು ಬಂಗಾದ ಇಟ್ಟಿಗೆಯನ್ನು ಸ್ಪೆಷಲ್ ಊಟಕ್ಕೆಂದು ಕೊಡಬೇಕಾಯಿತು. ನಿಟ್ಟುಸಿರು ಬಿಡುತ್ತಾ ಕೊಟ್ಟ. ‘ಈ ಲಂಕೆಯ ಸಹವಾಸವೇ ಸಾಕು. ಎರಡು ಇಟ್ಟಿಗೆ ಬಂಗಾರವಾದರೂ ಉಳಿಯಿತಲ್ಲವೇ?’ ಎಂದು ಸಮಾಧಾನ ಪಡುತ್ತಾ ಭಾರತಕ್ಕೆ ಮರಳುವಾಗ, ಇನ್ನೇನು ಸೇತುವೆಯನ್ನು ದಾಟಬೇಕು, ಆಗ ಅಲ್ಲಿ ಖಾಕಿ ತೊಟ್ಟು ಕಾಲಿಗೆ ಬೂಟು ಹಾಕಿ ತಲೆಯ ಮೇಲೊಂದು ನಮ್ಮ ಅಮಲ್ದಾರರು ಹಾಕುವಂತಹ ಹ್ಯಾಟನ್ನು ಹಾಕಿ ಭರ್ಜರಿ ಮೀಸೆ ಬಿಟ್ಟವನೊಬ್ಬ ‘ಹೋಯ್’ ಎಂದು ತಡೆದು ನಿಲ್ಲಿಸಿದ.

ನಮ್ಮ ಕ್ಷೌರಿಕ ಮಹಾಶಯ ಅಚ್ಚರಿಯಿಂದಲೂ ಭಯಗ್ರಸ್ತನಾಗಿಯೂ ಒಂದು ಕೈಯಲ್ಲಿ ಎರಡು ಇಟ್ಟಿಗೆ ಬಂಗಾರವಿದ್ದ ಚೀಲವನ್ನೂ ಇನ್ನೊಂದು ಕೈಯಲ್ಲಿ ಕ್ಷೌರದ ಪೆಟ್ಟಿಗೆಯನ್ನೂ ಹಿಡಿದು ನಮ್ರನಾಗಿ ನಿಂತ. ಹ್ಯಾಟಿನವನು ಕೇಳಿದ ‘ಸುಂಕ ಕೊಡು’
‘ಎಷ್ಟು?’
‘ಎರಡು ಬಂಗಾರದ ಇಟ್ಟಿಗೆ ಇಲ್ಲಿ ಪ್ರತಿ ದಿನದ ಸುಂಕ’
ಕ್ಷೌರಿಕ ಮಹಾಶಯ ಸುಧಾರಿಸಿಕೊಳ್ಳಲೆಂದು ಕೂತ. ತನ್ನ ಬಲಗೈನಲ್ಲಿದ್ದ ಇಟ್ಟಿಗೆ ಚೀಲವನ್ನು ಅವನಿಗೆ ಕೃಷ್ಣಾರ್ಪಣಮಸ್ತು ಎಂದು ಕೊಟ್ಟ. ಹೆಗಲ ಮೇಲಿದ್ದ ಪಾಣಿ ಪಂಚೆಯಿಂದ ಮುಖ ಒರೆಸಿಕೊಂಡು, ಸ್ವರ್ಣಾರ್ಥಿಯಾಗಿ ಬರುವಾಗ ಯಾವ ಕಬ್ಬಿಣದ ಹತಾರಿಗಳ ಪೂರ್ವಾರ್ಜಿತ ಪೆಟ್ಟಿಗೆಯನ್ನು ತಂದಿದ್ದನೋ ಅದನ್ನೇ ಹಿಡಿದು ಭಾರತಕ್ಕೆ ಬಂದ. ಭಾರತದಲ್ಲಿ ಕ್ಷೌರ ಮಾಡಿದ್ದರೆ ಸಿಕ್ಕ ಒಂದು ಬಿಲ್ಲೆಯಲ್ಲಿ ಕೆಲವು ಕಾಸಾದರೂ ಅವನಿಗೆ ಗಂಜಿ ಊಟ ಮಾಡಿದ ಬಳಿಕ ಉಳಿಯುತ್ತಿತ್ತು; ಕೀಳಲ್ಲದ ಕಳ್ಳು ಎಂಬ ಸುರಾಪಾನಕ್ಕೂ ಅದು ಸಾಕಾಗುತ್ತ ಇತ್ತು.

ಈ ಉಪ ಕಥೆಯನ್ನು ಹಣದಗಳಿಕೆಗಾಗಿ ಅಮೆರಿಕಕ್ಕೆ ಹೋಗುವವರಿಗೆ ಈಗ ನಾನು ಹೇಳಿಯೇನು!

ಉಗ್ರನರಸಿಂಹ ಹಿರಣ್ಯಕಶಿಪುವನ್ನು ಉಗುರಿನಿಂದ ಬಗೆದು ಕೊಂದ ಮೇಲೂ ಮುಂದೇನು ಮಾಡುವುದು ತಿಳಿಯದೆ ಉಗ್ರನಾಗಿಯೇ ಹೂಂಕರಿಸುತ್ತಿರುವಾಗ ಬಾಲಕ ಪ್ರಹ್ಲಾದ ಭಕ್ತಿಯಿಂದಲೂ ಯುಕ್ತಿಯಿಂದಲೂ ಶ್ರೀ ಮನ್ನಾರಯಣನಿಗೆ ‘ನಿನ್ನ ಅವತಾರ ಸಮಾಪ್ತಿಯಾಯಿತು’ ಎಂದು ಎಚ್ಚರಿಸುವುದು; ಎಲ್ಲ ಅವತಾರಗಳೂ ತಮ್ಮ ಕೆಲಸವಾದ ಮೇಲೂ ತಮ್ಮ ಅವತಾರವೇ ಚಟವಾಗಿಬಿಟ್ಟು ಅದರಿಂದ ಹೊರ ಬರಲಾರದೆ ಚಡಪಡಿಸುವುದು-ಹರಿದಾಸರ ಮುಂದಿನ ಕಥೆ.

ಇದು ತಾತ್ವಿಕವಾದ ವ್ಯಾಖ್ಯಾನ, ಸಂಸ್ಕೃತ ಶ್ಲೋಕಗಳಿಂದ ಸಮರ್ಥನೆ, ಬ್ರಿಟಿಷರು ತಮ್ಮ ಅವತಾರದ ಕೆಲಸ ಭಾರತದಲ್ಲಿ ಮುಗಿಯಿತು ಇನ್ನು ಹೊರಡಬೇಕು ಎಂಬ ಸೂಚನೆ ಕೂಡಾ ಹರಿದಾಸರ ಕಥೆಯಲ್ಲಿ.

ಈ ದೂರ್ವಾಸಪುರದಲ್ಲಿದ್ದಾಲೇ ನಾನು ಕಾರಂತರನ್ನು, ಕುವೆಂಪುರನ್ನು ಓದಿದ್ದು. ತೀರ್ಥಹಳ್ಳಿಯ ತುಂಗೆಯ ಮೇಲಿನ ನನಗೆ ಪರಿಚಿತವಾದ ಬಂಡೆಗಳನ್ನೇ ಕುವೆಂಪುವಿನ ಹೂವಯ್ಯ ದಾಟಿ ಹೋದದ್ದು. ನಮ್ಮ ಕೊಟ್ಟಿಗೆಗೆ ಸಗಣಿ ಎತ್ತಲು ಬರುವವನೇ ಚೋಮನಿರಬಹುದು ಎಂದು ನಾನು ಜಾಗೃತನಾದದ್ದು. ಅಗ್ರಹಾರದ ಹಿರಿಯರಿಂದ ಅನ್ಯನಾಗಿ ಯೋಚಿಸಲು ಪ್ರಾರಂಭಿಸಿದ್ದು. ಸೆಟ್ಟರ ಹುಡುಗಿಯನ್ನು ಮದುವೆಯಾದ ಕೋಟ ಜಗತ್ತಿನ ಬ್ರಾಹ್ಮಣ ಕಾರಂತರನ್ನು ಮಠದ ಜನ ಜರೆಯುತ್ತಿದ್ದುದರಿಂದಲೇ ನನಗೆ ಆಗ ಕಾರಂತರು ಆದರ್ಶರಾದ್ದು. ‘ಈ ಕುಪ್ಪಳ್ಳಿ ಗೌಡರ ಹುಡುಗನಿಗೆ ಅದು ಹೇಗೆ ವೇದ ಉಪನಿಷತ್ತು ತಿಳಿಯೋದು ಸಾಧ್ಯವೋ?’ ಎಂಬ ಮಾತು ಕೇಳಿದಾಗಲೇ ಬ್ರಾಹ್ಮಣ ಗರ್ವದ ಬಗ್ಗೆ ನನ್ನಲ್ಲಿ ಹೇಸಿಗೆ ಹುಟ್ಟಿದ್ದು. ಹಚ್ಚೆ ಕುಚ್ಚಲೆಂದು ಬಿನ್ನಾಣದಲ್ಲಿ ನನ್ನನ್ನು ಪುಸಲಾಯಿಸಲು ಬಂದ ಕೆಂಡಸಂಪಿಗೆ ಮುಡಿದ ಕಿಳ್ಳೆಕ್ಯಾತರ ಹುಡುಗಿ ನನಗೆ ಈ ಜನ್ಮದಲ್ಲಿ ದಕ್ಕಲಾರದ ಸುಂದರಿ ಅನ್ನಿಸಿದ್ದು.