ಮೊನ್ನೆ ರೈಲಿನಲ್ಲಿ ಹೋಗುತ್ತಾ, ಲ್ಯಾಪ್ಟಾಪಿನಲ್ಲಿ ಕನ್ನಡ ನವ್ಯ ಪರಂಪರೆಯ ಬಗ್ಗೆ ವಿದ್ವತ್‌ ಪೂರ್ಣವಾದ ಲೇಖನ ಒಂದನ್ನು ಓದುತ್ತಿದ್ದೆ. ನವ್ಯದ ಕಾಲಘಟ್ಟ, ಸಾಮಾಜಿಕ ಪರಿಸರ, ಅದರ ಹಿಂದಿನ ಸ್ಪೂರ್ತಿ, ಅದು ಮಾಡಿದ ಪ್ರಭಾವ ಹೀಗೆಲ್ಲಾ ಬಲು ಕಗ್ಗಂಟಿನ ವಿಷಯಗಳು ಅದರಲ್ಲಿ ಇದ್ದವು. ಒಂದು ಸಾಲು ಅರ್ಥವಾದರೆ ಮತ್ತೊಂದು ಸಾಲನ್ನು ಎರಡೆರಡು ಸಲ ಓದಬೇಕಾಗಿತ್ತು. ಮೂರನೇ ಸಾಲು ಎಷ್ಟು ಸಲ ಓದಿದರೂ ತಿಳಿಯುತ್ತಿರಲಿಲ್ಲ. ತಿಣುಕುತ್ತಿದ್ದೆ.

ಅಷ್ಟು ಹೊತ್ತಿಗೆ ನನ್ನ ಮುಂದೆ ಇಬ್ಬರು ಹುಡುಗಿಯರು ಬಂದು ಕೂತರು. ಹದ್ನೆಂಟಿಪ್ಪತ್ತು ವರ್ಷದ ಚೆಲುವೆಯರು. ಉಳಿದವರಿಗೆ ಅರ್ಥವಾಗದ ಹಾಗೆ ತುಂಡು ತುಂಡು ಮಾತುಗಳನ್ನು ಆಡಿಕೊಳ್ಳುತ್ತ ನಗುತ್ತಿದ್ದರು. ಬಹುಶಃ ಒಬ್ಬಳು ಎಲ್ಲೋ ಕೆಲಸ ಮಾಡುತ್ತಿದ್ದಳೆಂದು ಕಾಣುತ್ತದೆ. ಇನ್ನೊಬ್ಬಳಂತೂ ಈಗಷ್ಟೆ ಯೂನಿವರ್ಸಿಟಿ ಸೇರಿದವಳಂತಿದ್ದಳು. ನೋಡಿದರೆ, ಹಲವು ವರ್ಷಗಳ ಆಪ್ತ ಗೆಳತಿಯರಿರಬಹುದು ಅನಿಸುವಂತಿತ್ತು.

ಆ ಚೆಲುವೆಯರನ್ನೇ ಹೆಚ್ಚು ನೋಡಿದರೆ ಪೋಕರಿ ಅಂದುಕೊಳ್ಳಬಹುದು ಎಂಬ ಎಚ್ಚರದಲ್ಲಿ ಮತ್ತೆ ನನ್ನ ಓದಿನತ್ತ ತಿರುಗಿದೆ. ಕನ್ನಡದ ನವ್ಯದ ಕಾಲಘಟ್ಟದ ಹೊತ್ತಿಗೆ ಹೇಗೆ ಜಗತ್ತಿನ ಬೇರೆಡೆ ನವ್ಯೋತ್ತರ ಬಂದುಬಿಟ್ಟಿತ್ತು ಎಂಬ ಸಂಗತಿ ಬಂತು. ಹಾಗಾಗಿ ನಮ್ಮ ನವ್ಯದಲ್ಲೂ ತುಸು ನವ್ಯೋತ್ತರ (post-modern) ಸುಳಿದುಬಿಟ್ಟಿದೆ ಎಂದಿದ್ದದ್ದು ನೋಡಿ ಯೋಚಿಸತೊಡಗಿದೆ. ನನ್ನ ಅಲ್ಪ ಓದಿನಲ್ಲೇ ಕನ್ನಡದ ಯಾವ ಕೃತಿಯಲ್ಲಿ ಪೋಸ್ಟ್-ಮಾಡರ್ನ್ ಬಂದಿರಬಹುದು ಎಂದು ಹುಡುಕಿದೆ. ಯಾವುದೂ ಹೊಳೆಯಲಿಲ್ಲ. ಕನ್ನಡದ ನವ್ಯದಲ್ಲಿ ನವ್ಯ ಮತ್ತು ಪೋಸ್ಟ್-ಮಾಡರ್ನ್ ಕಲಸಿಕೊಂಡಿದೆ ಎಂದು ಓದಿ, ಹಾಗಂದರೆ ಏನಿರಬಹುದು ಎಂದು ಎಷ್ಟು ಯೋಚಿಸಿದರೂ ಗೊತ್ತಾಗಲಿಲ್ಲ.

ಅಷ್ಟರಲ್ಲಿ ಇಬ್ಬರೂ ಏನಕ್ಕೋ ಜೋರಾಗಿ ನಕ್ಕರು. ನನ್ನ ಯೋಚನೆಗೆ ಭಂಗವಾದಂತೆನಿಸಿ ಕಿರಿಕಿರಿಯಾಯಿತು. ಸರಿ ಇವರ ಬಾಯ್‌ಫ್ರೆಂಡುಗಳ ಜತೆಗಿನ ಸರಸದ ಕಥಾನಕ ಶುರುವಾಗುತ್ತದೆ ಅನಿಸಿತು. ತುಸು ಅಸಹನೆಯಿಂದ ಯಾವುದಾದರೂ ಸುಬ್ಬಲಕ್ಷ್ಮಿ ಸಂಗೀತ ಕೇಳೋಣ ಅಂತ ನನ್ನ ಇಯರ್‍ ಫೋನು ತೆಗೆದು ಕಿವಿಗೆ ತುರುಕಿಕೊಂಡೆ. ನನ್ನ ಲ್ಯಾಪ್ಟಾಪಿನಲ್ಲಿ ಸಂಗೀತದ ಫೋಲ್ಡರ್‍ ಹುಡುಕ ತೊಡಗಿದೆ. ಅಷ್ಟರಲ್ಲಿ ಸ್ವಲ್ಪ ದೊಡ್ಡವಳು ತನ್ನ ಮನೆಯಲ್ಲಿ ಕಳ್ಳತನವಾಯಿತು ಗೊತ್ತ ಎಂದಳು. ಇನ್ನೊಬ್ಬಳು “ಹೌದ್‌ಆಆಆಆ…” ಎಂದು ಕಣ್ಣುಬಿಟ್ಟುಕೊಂಡು ನೋಡಿದಳು. ಕಿಟಕಿ ಒಡೆದು ಕಳ್ಳರು ಒಳಗೆ ಬಂದಿದ್ದರಂತೆ. ಲ್ಯಾಪಟಾಪ್‌, ಮನೆ ಕಂಪ್ಯೂಟರ್‍, ಟಿವಿ, ಕ್ಯಾಮೆರಾ, ಪೋನು, ಐಪಾಡು, ಒಂದಷ್ಟು ದುಡ್ಡು, ಸಿಡಿ, ಡಿವಿಡಿ ಎಲ್ಲಾ ಸಾರಿಸಿ ಗುಡಿಸಿಕೊಂಡು ಹೋಗಿದ್ದನಂತೆ. ಫ್ರಿಡ್ಜಿನಲ್ಲಿದ್ದ ಅಡುಗೆಯೆಲ್ಲಾ ತಿಂದುಂಡು ಹೋಗಿದ್ದರಂತೆ. ಕೇಳುತ್ತಿದ್ದವಳು ನಕ್ಕರೂ ಹೇಳುತ್ತಿದ್ದವಳು ನಗಲಿಲ್ಲ. ಏನೋ ಯೋಚಿಸುತ್ತಾ ಕೂತಳು.

ಇನ್ನೇನು ಸಂಗೀತ ಕಿವಿಗೆ ಸುರಿದುಕೊಳ್ಳಬೇಕು ಅನ್ನುವಾಗ ಅವರ ಮಾತು ಕಿವಿ ನಿಮಿರಿಸಿತ್ತು. ಅವಳ ಕಳ್ಳತನದ ಸಂಗತಿ ಕೇಳುತ್ತಾ ಸುಬ್ಬಲಕ್ಷ್ಮಿ ಸಂಗೀತ ಹುಡುಕುವುದು ಬಿಟ್ಟು ಮತ್ತೆ ನನ್ನ ನವ್ಯದ ಲೇಖನಕ್ಕೆ ಬಂದುಬಿಟ್ಟಿದ್ದೆ. ಅದರಲ್ಲಿ ದೇವನೂರು ಮಹಾದೇವರ ‘ಡಾಂಬರು ಬಂದುದು’ ಕತೆಯ ಬಗ್ಗೆ ಇತ್ತು. ಸಮಾಜದಲ್ಲಿ ಆಗುತ್ತಿದ್ದ ಬದಲಾವಣೆ, ನವೀಕರಣವನ್ನು ಹಿಡಿಯಲು ಬಳಸುತ್ತಿದ್ದ ಪ್ರತಿಮೆಗಳ ಬಗ್ಗೆ ಉದ್ದವಾದ ವಿವರಣೆ ಇತ್ತು.

ಕೊಂಚ ಸುಮ್ಮನಿದ್ದವಳು, ತನ್ನ ಅಪ್ಪ-ಅಮ್ಮನ ಮದುವೆ ಬಗ್ಗೆ ಹೇಳತೊಡಗಿದಳು. ಮಾತಿನಲ್ಲಿ ಹಿಂದಿನ ಖುಷಿಯಿರಲಿಲ್ಲ. ಯಾಕೆಂದರೆ, ತನ್ನ ಅಪ್ಪ-ಅಮ್ಮ ತಮ್ಮ ಮದುವೆಗೆಂದು ಖರೀದಿಸಿ ತಂದಿದ್ದ ಹಲವಾರು ವಸ್ತುಗಳು ಕಳುವಾಗಿತ್ತಂತೆ. ಹುಡುಗಿಯ ಅಮ್ಮನ ಅಜ್ಜಿಯ ಮದುವೆ ಡ್ರೆಸ್ ಕೂಡ ಕಳ್ಳ ಕದ್ದಿದ್ದನಂತೆ. ಮದುವೆಗೆಂದು ಎಷ್ಟೋ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಳಂತೆ. ಎರಡು ದಿನದ ಹಿಂದೆಯಷ್ಟೇ ಅದನ್ನು ಪೆಟ್ಟಿಗೆಯಿಂದ ಹೊರತೆಗೆದಿದ್ದಳಂತೆ. ತನ್ನನ್ನು ಮತ್ತು ತನ್ನ ತಮ್ಮನನ್ನು ಹೆತ್ತು ಸಾಕಿ ಸಲಹಿದ ಅಪ್ಪ-ಅಮ್ಮಂದಿರಿಗೆ ಹೀಗಾಗಬಾರದಿತ್ತು ಎಂದು ತುಂಬಾ ಭಾರವಾಗಿ ಹೇಳಿದಳು. ಹೋದ ವರ್ಷ ಅಪ್ಪ ಅಮ್ಮನಿಗೆ ಪ್ರೊಪೋಸ್ ಮಾಡಿದಾಗ ಅವಳು ಸಣ್ಣ ಮಗುವಿನಂತೆ ಕುಣಿದಿದ್ದಳಂತೆ. parasangada gendethimma book ಗೆ ಚಿತ್ರದ ಫಲಿತಾಂಶ

ಕಿವಿಯಲ್ಲಿ ಇಯರ್‍ ಫೋನ್ ಇದ್ದರೂ ನಾನು ಸಂಗೀತ ಕೇಳುತ್ತಿರಲಿಲ್ಲ. ಇಷ್ಟು ಹೊತ್ತಿಗೆ ನವ್ಯ, ನವ್ಯೋತ್ತರ ಭಾರವಾಗಿ ಕಾಣುತ್ತಿತ್ತು. ವಾಕ್ಯ ಎಲ್ಲಿ ಶುರುವಾಗಿ ಎಲ್ಲಿ ಕೊನೆಯಾಗುತ್ತಿದೆ ಎಂದು ಗೊತ್ತಾಗದಷ್ಟು ಗಲಿಬಿಲಿ ಆಗುತ್ತಿತ್ತು. ಆದರೆ, ಅಷ್ಟರಲ್ಲಿ ಆಲನಹಳ್ಳಿಯ ಗೆಂಡೆತಿಮ್ಮನ ಬಗ್ಗೆ ಒಂದಿಷ್ಟು ಸಂಗತಿ ಬಂತು. ಖುಷಿಯಾಗಿ ಓದ ತೊಡಗಿದೆ. ಹಳ್ಳಿಗೆ ಬ್ರಾ, ರಿಬ್ಬನ್, ಪೌಡರ್‍ ಸ್ನೋ ಬರುವ ಪ್ರಸಂಗದ ಬಗ್ಗೆ, ಅದು ಹಳ್ಳಿಯ ಜೀವನವನ್ನು ಅಲ್ಲಾಡಿಸುವ ಬಗ್ಗೆ ಓದಿ ಕತೆಯೇ ಓದಿದಷ್ಟು ಲವಲವಿಕೆ ಮೂಡಿತು.

ಆ ಹುಡುಗಿ ತನ್ನ ಅಪ್ಪ-ಅಮ್ಮನ ಮದುವೆಯನ್ನು ಅವರು ಮುಂದೂಡದ ಹಾಗೆ ಮಾಡಲು ತಾನೂ, ತನ್ನ ತಮ್ಮನೂ ಯೋಚಿಸುತ್ತಿರುವುದಾಗಿ ಹೇಳಿದಳು. ಅಷ್ಟೇ ಅಲ್ಲ, ಅವರ ಮದುವೆ ಖರ್ಚು ತುಂಬಿಕೊಡಲು ತನ್ನ ತಮ್ಮ ಬಿಟ್ಟಿದ್ದ ಪಾರ್ಟ್ ಟೈಮ್ ಕೆಲಸವನ್ನು ಮತ್ತೆ ಹಿಡಿದಿದ್ದಾನೆ. ತಾನೂ ತುಸು ಹೆಚ್ಚು ಓವರ್‍ ಟೈಮ್ ಮಾಡ್ತಾ ಇದ್ದೀನಿ ಎಂದೆಲ್ಲಾ ಪಟ್ಟಿ ಮಾಡಿದಳು. ಇನ್ಸೂರೆನ್ಸ್‌ನಿಂದ ಹೆಚ್ಚು ದುಡ್ಡು ಬರುತ್ತಿಲ್ಲ ಎಂದು ಅವಳ ಅಮ್ಮ ತಲೆ ಮೇಲೆ ಕೈಹೊತ್ತು ಕೂತಿದ್ದಾಳಂತೆ. ಇಬ್ಬರೂ ಮಕ್ಕಳು ಅವರಿಗೆ ಸಹಾಯ ಮಾಡುವುದಾಗಿ ಭಾಷೆ ಕೊಟ್ಟಿದ್ದಾರಂತೆ.

ಹೀಗಂದು ಮೊದಲಿಗೆ ಕುಲುಕುಲು ನಗುತ್ತಿದ್ದ ಹುಡುಗಿಯರು ಸುಮ್ಮನಾದರು. ತುಂಬಾ ಧೀರ್ಘವಾದ ಮೌನ ಆವರಿಸಿತು. ರೈಲು ಓಡುತ್ತಿದ್ದ ಗುಡುಗುಡು ಸದ್ದು ಮಾತ್ರ ಮಂದವಾಗಿ ಕೇಳುತ್ತಿತ್ತು. ಗೆಂಡೆತಿಮ್ಮ ಕತೆಯಲ್ಲಿ ಮನೆಯ ಗಲೀಜಿನ ಬಗ್ಗೆ ಅತ್ತೆ-ಸೊಸೆಯರ ಜಗಳದ ಭಾಗ ಓದಿ ಸಣ್ಣಗೆ ನಕ್ಕೆನೇನೋ. ಇಬ್ಬರೂ ನನ್ನತ್ತ ನೋಡಿದಂತೆ ಅನಿಸಿತು. ತಲೆಯೆತ್ತಿ ನೋಡಿದೆ. ಇಬ್ಬರೂ ಎದುರಿಗೇ ಇದ್ದರೂ ಅವರ ಯೋಚನೆಗಳು ಅವರನ್ನು ದೂರ ಬೇರೆಲ್ಲೋ ಒಯ್ದಿತ್ತು.