ದೊಡ್ಡಬ್ಬೆಗೆ ಉಗುರು ತೆಗೆಯಲು ಯಾರೂ ಜನ ಸಿಗುವುದಿಲ್ಲ. ಆಕೆ ಕುತ್ತಿಗೆ ವಾರೆ ಮಾಡಿಕೊಂಡು ನಾನು ಬಂದಿದ್ದೇನೋ ಹೇಗೋ ಎಂದು ನೋಡುತ್ತಾಳೆ. ಹದಿನೈದು ದಿನಕ್ಕೋ ತಿಂಗಳಿಗೋ ನಾನು ಟೈಮು ಮಾಡಿಕೊಂಡು ಹೋಗಿ ಉಗುರು ತೆಗೆದು ಬರುತ್ತೇನೆ. ಕೊಳಕು ತುಂಬಿರುವ ಉಗುರು ನೋಡಿದರೆ ಒಮ್ಮೆ ಕಿರಿಕಿರಿಯಾಗುತ್ತದೆ. ನೇಲ್ ಕಟರ್ ಉಪಯೋಗಿಸುವ ಹಾಗಿಲ್ಲ. ಚೂರು ಆಚೀಚೆ ಆದರೂ ಕಚಕ್! ಅಬ್ಬೆ ಬೊಬ್ಬೆ ಹೊಡೆಯುತ್ತಾಳೆ. ಆಕೆಯ ಕಣ್ಣಂಚಲ್ಲಿ ಹನಿ ಗುತ್ತುತ್ತದೆ. ನೋವಾಯಿತಾ ಅಬ್ಬೆ ಎಂದು ಕೇಳಿದರೂ ಇಲ್ಯೊಮಾರಾಯ, ಏನೋ ಹಳೇ ನೆನಪು ನೆನಪಾತು ಎಂದು ನನ್ನನ್ನು ಸಾಗಹಾಕುತ್ತಾಳೆ.
ಗುರುಗಣೇಶ್ ಭಟ್ ಡಬ್ಗುಳಿ ಲೇಖನ

 

ನನಗೆ ಮುದುಕರೆಂದರೆ ಮಕ್ಕಳ ಹಾಗೇ; ಥೇಟು ಅಷ್ಟೇ ಪ್ರೀತಿ. ಒಂದು ಲೆಕ್ಕದಲ್ಲಿ ಹೇಳಬೇಕೆಂದರೆ ಮಕ್ಕಳಿಗಿಂತ ಮುದುಕರನ್ನು ಕಂಡರೇ ಹೆಚ್ಚು ಇಷ್ಟ. ಮುದುಕರ ಬಾಯಿಂದ ಉದುರುವ ಕಥೆಗಳಿರುತ್ತವಲ್ಲ, ಅವನ್ನು ಕೇಳುತ್ತ ಕುಳಿತರೆ ತಲೆಯೊಳಗೆ ಹೊಕ್ಕ ಜಗತ್ತಿನ ಸಕಲ ಕೋಟಲೆಗಳು ಉದುರಿಹೋಗುತ್ತವೆ. ಮುದಿ ಜನರ ಅನುಭವಗಳು, ಮಾತು ಮಾತಿಗೆ ಉದ್ಧರಿಸುವ ಗಾದೆಗಳು, ಥೋ ಒಂದೋ ಎರಡೋ? ಮುದುಕರ ಕುರಿತು ಪ್ರೀತಿ ಎಂಬ ಪ್ರೀತಿ ಬೆಳೆಯಲು ಕಾರಣಗಳು ಬೇಕಾದಷ್ಟಿವೆ.

ಯಾವತ್ತೋ ಪರಿಚಯವಾದ ಕೆಲವರು ಎಂದಿಗೂ ಎದೆಯಿಂದ ದೂರವಾಗುವುದೇ ಇಲ್ಲ. ಅದರಲ್ಲೂ ವೃದ್ಧರು; ಅವರ ನೆನಪಿನ ಜೋಳಿಗೆಯಿಂದ ಅಪರಾತ್ರಿ ಕಳ್ಳ ಬಂದೂಕು ಹೆಗಲಿಗೇರಿಸಿ ಶಿಕಾರಿಗೆ ಹೋದ ಮಾತುಗಳೋ, ಅವರ ಅಘೋರ ವೈರಿಯ ಜೊತೆಗಿನ ಕಾದಾಟವೋ, ಯಾರಿಗೋ ಮದುವೆ ಮಾಡಿಸಿದ್ದೋ,.. ಹೀಗೆ ವಿಶಿಷ್ಟ ಬಗೆಯ ಹತ್ತಲ್ಲ ನೂರು ಕತೆಗಳು ನಾಲಿಗೆಯ ತುದಿಯಲ್ಲಿ ಯಾರಿಗಾದರೂ ಹೇಳಲು ಎಂದೇ ಕಾದುಕೂತಿರುತ್ತವೆ. ಅಂಥವರ ಬಗ್ಗೆ ಹೇಳಲೇಬೇಕು.

ಎಲ್ಲೆ ಹೋಗಲಿ, ಯಾವ ಒಸಗೆ ಮನೆಯಲ್ಲೇ ಆಗಲಿ ನನಗೆ ಇಬ್ಬರೋ ಒಬ್ಬರೋ ಮುದಿಜೀವದ ಸಾಂಗತ್ಯ ದಕ್ಕಿಬಿಡುತ್ತದೆ. ಅವರ ಬಳಿ ಸಾಮಾನ್ಯವಾಗಿ ನಾನು ಎತ್ತುವ ವಿಷಯ ಇದೇ- ನೀವು ಬ್ರಿಟೀಷರನ್ನು ನೋಡಿದ್ದೀರಾ? ಪ್ರಶ್ನೆ ಬಿದ್ದದ್ದೇ ತಡ ಅವರ ಮುಖ ಒಂದು ರೀತಿಯ ನಗುವಿಂದ ಆವೃತವಾಗುತ್ತದೆ. ನನ್ನ ಅನುಭವದಂತೆ ಎಲ್ಲರದ್ದೂ ಒಂದೇ ರೀತಿಯ ಕಿಸಿದ ಬಾಯಿಯ ನಗು. ಅದೊಂದು ಪ್ರಶ್ನೆಯೇ ಅಲ್ಲವೆಂಬಂತೆ ಅವರಾಡುವ ಆ ನಗೆಯಿಂದ ನಾನು ಕಂಗಾಲಾಗುತ್ತೇನೆ. ನಂತರ ಅವರಿಂದ ಬರುವ ಉತ್ತರಗಳೋ ನಮನಮೂನೆಯವು. ಹೊನ್ನಾವರ ಮೂಲದ ಅಜ್ಜರೊಬ್ಬರು ಹೇಳುತ್ತಿದ್ದರು: ಅದು ಅವರ ಪ್ರಾಯಕಾಲದ ಕತೆ. ಅವರನ್ನು ಯಾವುದೋ ಕಾರಣಕ್ಕೆ ಹುಡುಕಿಕೊಂಡು ಬ್ರಿಟೀಷ್ ಪೋಲೀಸರು ಬಂದರಂತೆ. ನಮ್ಮ ಅಜ್ಜನವರದ್ದು ಮಹಾನ್ ಚಾಲಾಕಿ ಬುದ್ಧಿ. ಅವರಿಗೆ ಸಿಗಲೇ ಬಾರದು ಎಂದು ನಿರ್ಧರಿಸಿ ಗುಡ್ಡೆ ಹತ್ತಿದರು. ಪೇಟೆ ಅನ್ನ ಉಂಡ ಮೈಯ ಪೋಲೀಸನ ಬಳಿ ಆಗುತ್ತಾ ಎದೆಮಟ್ಟದ ಗುಡ್ಡೆ ಹತ್ತಲು? ಸ್ವಲ್ಪ ದೂರ ಹತ್ತಿದಂತೆ ಮಾಡಿದ. ಊಹು, ಕಾಲ ಕೆಳಗೆ ಕಂದಕ, ನೆತ್ತಿ ಮೇಲೆ ಭೂತ ಭೂತ ಮರ. ಏನು ತಾನೇ ಮಾಡುತ್ತಾನೆ.ಕಂಗಾಲಾಗಿ ಜೀವ ಉಳಿದರೆ ಸಾಕು ಎಂದು ಹೇಗೋ ಮಾಡಿ ಇಳಿಯಲು ಪ್ರಯತ್ನಿಸಿದ. ಹೇಗೋ ಹತ್ತಿಬಿಟ್ಟಿದ್ದಾನೆ ಇಳಿಯಲು ಬರುತ್ತಿಲ್ಲ. ಈಗ ಮಾಡುವುದಾದರೂ ಏನು? ಗಂಟಲು ಬಿರಿಯುವ ಹಾಗೆ ಕೂಗಿದ. ಅಲ್ಲೆ ಯಾವುದೋ ಸಂದಿಯಲ್ಲಿ ಅಡಗಿದ್ದ ನಮ್ಮ ಹೀರೋ ಅಜ್ಜನೇ ಕೊನೆಗೆ ಅವನ ಕೈ ಹಿಡಿದು ಇಳಿಸಿ ಹುಳಿ ಮಜ್ಜಿಗೆಗೆ ಉಪ್ಪು ನೀರು ಬೆರೆಸಿ ಕುಡಿಸಿ ಕಳಿಸಿದನಂತೆ. ಈ ಕಥೆ ಹೇಳಿದ ಅಜ್ಜ ಈಗಿಲ್ಲ.

ನನ್ನದೇ ಅಜ್ಜನ ಕತೆ ಹೇಳುತ್ತೇನೆ ಕೇಳುವಂತವರಾಗಿ. ಅಜ್ಜ ಮತ್ತು ಅವನ ಇಬ್ಬರು ಅಣ್ಣಂದಿರಿಗೆ ಬ್ರಿಟೀಷರಲ್ಲಿ ಕೆಲವರನ್ನು ಕಂಡರೆ ಎಷ್ಟು ಭಯವಿತ್ತೋ ಮತ್ತೆ ಕೆಲವರನ್ನು ಕಂಡರೆ ಅಷ್ಟೇ ಸಲುಗೆಯೂ ಇತ್ತಂತೆ. ಅವರು ಯಾವ ಹೋರಾಟಕ್ಕಾಗಲೀ ಚಳುವಳಿಗಾಗಲಿ ಧುಮುಕಿದವರಲ್ಲ. ತಾವಾಯಿತು ತಮ್ಮ ಹೊಟ್ಟೆಪಾಡಾಯಿತು. ದೇವರ ಘಂಟೆ ಬಡಿಯುತ್ತಾ, ಕುಂಡೆಗೆ ಉಡಕೊಕ್ಕೆ ಸಿಕ್ಕಿಸಿಕೊಂಡು ತಣ್ಣಗೆ ಮನೆ ಜಮೀನು ದೇವಸ್ಥಾನ ಅಂತ ಕುಲಕಸುಬಿನಲ್ಲಿ ಬದುಕು ತಳೆದವರು. ಅರಬೈಲು ಎಂಬ ಅರಬೈಲಿನ ಘಟ್ಟದ ಶುರುವಿನಲ್ಲಿ ಕವಲೊಡೆದ ಹೆದ್ದಾರಿಯಿಂದ ಎರಡು ಕೀಮಿಗೆಲ್ಲ ಮನೆ. ಇವರು ವರ್ಷಕ್ಕೊಮ್ಮೆ ಮಾವನ ಮನೆಗೊ ಮತ್ತೆಲ್ಲೊ ಹೋಗುವಾಗ ಬರುವಾಗ ಕೈಯಲ್ಲಿ ನಾಕಾಣೆ ಇದ್ದರೆ ಸಿಕ್ಕ ಟ್ರಕ್ಕುಗಳಿಗೆ ಕೈ ಮಾಡುವುದಾಗಿತ್ತಂತೆ. ಒಮ್ಮೊಮ್ಮೆ ಬ್ರಿಟೀಷರ ಜೀಪುಗಳಲ್ಲೂ ಹಿಂಬದಿಗೆ ಕುಳಿತು ಬಂದಿದ್ದೆ ಎಂದು ಕೊನೆಬಾರಿಗೆ ಕೇಳಿದಾಗ ಹೇಳಿದ್ದ. ಅದು ಬಿಟ್ಟರೆ ಮತ್ಯಾವನೋ ಬ್ರಿಟೀಷ್ ಅಧಿಕಾರಿ ಅಜ್ಜನಿಗೆ ಕಾಟ ಕೊಟ್ಟಿದ್ದನಂತೆ. ಎಲ್ಲರಂತೆ ಇವನದೂ ಬೆಟ್ಟ ಗುಡ್ಡ ಅಲೆದು ಕಿತ್ತಾಬಿದ್ದು ಓಡಿ ಅವನಿಂದ ತಪ್ಪಿಸಿಕೊಂಡ ಕತೆಗಳು ರಾಶಿ ಉಂಟು.

ಈ ಮುದುಕರ ಬಗ್ಗೆ ಬರೀಬೇಕು ಅಂದಾಗೆಲ್ಲ ಕಣ್ಣೆದುರು ಮುದ್ದಾಂ ಬರುವುದು ಆಚೆಮನೆಯ ದೊಡ್ಡಬ್ಬೆ. ಆಕೆಗೆ ಅ ಆಗಲಿ ಆ ಆಗಲಿ ಏನೂ ಗೊತ್ತಿಲ್ಲ. ಬಾಯಿ ತೆಗೆದರೆ ವಚನದಂತಹ ನಾಕು ಹಾಡು ಬರುತ್ತದೆ. ಮಿಕ್ಕಿದ್ದೆಲ್ಲ ಅಲವರಿಕೆಯೆ. ಎಂಟೋ ಹತ್ತೊ ಅಥವಾ ಹನ್ನೆರಡೋ; ಸಣ್ಣ ವಯಸ್ಸಿಗೆ ಮದುವೆಯಾಗಿ ಬದುಕು ತೆರೆದುಕೊಳ್ಳುವ ವಯಸ್ಸಿಗೆ ಎಂಟತ್ತು ಮಕ್ಕಳು. . ಮಕ್ಕಳು ಈಚೀಚೆಗೆ ಹಿಸೆ ಆಗಿದ್ದಾರೆ. ಅವರಿಗೆ ಪುರುಸೊತ್ತಿಲ್ಲ. ಮಿಗಿಲಾಗಿ ಅವರಿಗೂ ಕಣ್ಣು ಕಾಣದಷ್ಟು ವಯಸ್ಸಾಗಿದೆ.ಮೊಮ್ಮಕ್ಕಳು ದೂರ ಊರಿನಲ್ಲಿ ಸ್ವಂತ ಬದುಕು ಕಟ್ಟಿಕೊಳ್ಳುವ ತಲೆಯಲ್ಲಿ ಬದುಕುತ್ತಿದ್ದಾರೆ. ಎಲ್ಲ ಸರಿಯೇ ಉಂಟಲ್ಲ ಎಂದು ಅನಿಸುತ್ತದೆ. ಆದರೆ ನನ್ನನ್ನು ಇಲ್ಲೊಂದು ಸಂಗತಿ ಬಹುವಾಗಿ ಕಾಡುತ್ತಿದೆ. ದೊಡ್ಡಬ್ಬೆಗೆ ಉಗುರು ತೆಗೆಯಲು ಯಾರೂ ಜನ ಸಿಗುವುದಿಲ್ಲ. ಆಕೆ ಕುತ್ತಿಗೆ ವಾರೆ ಮಾಡಿಕೊಂಡು ನಾನು ಬಂದಿದ್ದೇನೋ ಹೇಗೋ ಎಂದು ನೋಡುತ್ತಾಳೆ. ಗೋಡೆಯಾಚಿಗಿಂದಲೇ ನನ್ನ ಹೆಸರು ಹಿಡಿದು ಕರೆಯುತ್ತಾಳೆ. ಹದಿನೈದು ದಿನಕ್ಕೋ ತಿಂಗಳಿಗೋ ನಾನು ಟೈಮು ಮಾಡಿಕೊಂಡು ಹೋಗಿ ಉಗುರು ತೆಗೆದು ಬರುತ್ತೇನೆ. ಕೊಳಕು ತುಂಬಿರುವ ಉಗುರು ನೋಡಿದರೆ ಒಮ್ಮೆ ಕಿರಿಕಿರಿಯಾಗುತ್ತದೆ. ನೇಲ್ ಕಟರ್ ಉಪಯೋಗಿಸುವ ಹಾಗಿಲ್ಲ. ಬ್ಲೇಡನ್ನೆ ಸ್ವಲ್ಪ ಮೊಂಡು ಮಾಡಿಕೊಂಡು ಉಗುರಿನ ಸಂದಿಯೊಳಗೆ ಹೆಟ್ಟಿ, ದಪ್ಪನೆ ಸೊಕ್ಕಿನಿಂದ ಬೆಳೆದ ಮುದುಕು ಉಗುರನ್ನು ಕತ್ತರಿಸಬೇಕು. ಚೂರು ಆಚೀಚೆ ಆದರೂ ಕಚಕ್! ಅಬ್ಬೆ ಬೊಬ್ಬೆ ಹೊಡೆಯುತ್ತಾಳೆ. ಆಕೆಯ ಕಣ್ಣಂಚಲ್ಲಿ ಹನಿ ಗುತ್ತುತ್ತದೆ. ನೋವಾಯಿತಾ ಅಬ್ಬೆ ಎಂದು ಕೇಳಿದರೂ ಇಲ್ಯೊಮಾರಾಯ, ಏನೋ ಹಳೇ ನೆನಪು ನೆನಪಾತು ಎಂದು ನನ್ನನ್ನು ಸಾಗಹಾಕುತ್ತಾಳೆ.

ಇಷ್ಟಾದರೂ ಉಗುರು ತೆಗೆಯುವವರು ಇದ್ದಾರಲ್ಲ ಎಂಬ ಆಶೆಯಲ್ಲಿ ಆಕೆಯ ತೇವಗೊಂಡ ಕಣ್ಣಾಲಿಗಳೊಳಗಿಂದ ನನಗಾಗಿ ಹಾರೈಕೆ ಹೊಮ್ಮುತ್ತದೆ. ಕೈ ಕಾಲಿನ ಬೆರಳುಗಳ ತುದಿಗೆ ಜೀವನದ ಸಕಲ ಆಡಂಬೋಲಗಳು ಹೆಪ್ಪುಕಟ್ಟಿದ ಹಾಗೆ ಕಪ್ಪಗೆ ಜಡ್ಡಾಗಿ ಕೂತ ಆ ಉಗುರುಗಳಿಗೆ ಮುಕ್ತಿ ದೊರಕುತ್ತಿದ್ದ ಹಾಗೆ ಆಕೆ ಇನ್ನೊಂದೆರಡು ತಿಂಗಳುಗಳ ಪಾಲಿಗೆ ಖುಷಿಯಾಗುತ್ತಾಳೆ. ನಿಮಗೆ ಗೊತ್ತಿರಲಿ, ಮುದುಕರ ಉಗುರುಗಳು ಅಷ್ಟು ಬೇಗ ಬೆಳೆಯುವುದಿಲ್ಲ. ಇನ್ನು ಅಷ್ಟು ದಿನ ನಿನಗೆ ತೊಂದರೆ ಕೊಡುವುದಿಲ್ಲ ಎನ್ನುತ್ತಾಳೆ. ಎರಡೂ ಕೈ ಮುಂದೆ ಹಾಕಿ ತಲೆ ನುಂಪಳಿಸಿ ಹಾರೈಸುತ್ತಾಳೆ. ಆಗ ನನ್ನ ಕಣ್ಣುಗಳು ತೀವ್ರವಾಗುತ್ತವೆ. ನಾನಂತೂ ಇಂಥ ಮುಗ್ಧ ಹಾರೈಕೆಗಳಿಗೆ ಕರಗಿಹೋಗುತ್ತೇನೆ. ನನ್ನಂಥವನ ಬದುಕಿಗೆ ಬೇಕಿರುವುದು ಇಂಥ ಬಡಪಾಯಿಗಳ ಹಾರೈಕೆಯಷ್ಟೇ ಎಂಬುದು ನನ್ನ ಮನಸ್ಸಲ್ಲಿ ಘಟ್ಟಿಯಾಗಿ ಕೂತುಬಿಟ್ಟಿದೆ. ಆಗೆಲ್ಲ ನನ್ನವಳ ಜೊತೆ ಚೆಂದದ ಬಾಳ್ವೆ ನೆಡಸಬೇಕಂದಷ್ಟೇ ಅನಿಸುತ್ತದೆ. ಮುಂದೆ ನಮ್ಮ ಮುದಿಕಾಲದಲ್ಲಿ ನಮ್ಮ ಉಗುರು ತೆಗೆಯಲು ನನ್ನಂಥದೇ ಹುಡುಗ ಯಾರಾದರೂ ಸಿಗಬಹುದು, ಸಿಗದಿದ್ದರೆ ನನ್ನುಗುರನ್ನು ಅವಳೂ ಅವಳುಗುರುನ್ನು ನಾನೂ ತೆಗೆಯುವಷ್ಟಾದರೂ ಕಣ್ಣು ಕಾಣಲಿ ಎಂದೆಲ್ಲ ಮುಗ್ಧ ಕಲ್ಪನೆಯೊಂದು ಚಿಗುರುತ್ತದೆ.

ಅವರು ಯಾವ ಹೋರಾಟಕ್ಕಾಗಲೀ ಚಳುವಳಿಗಾಗಲಿ ಧುಮುಕಿದವರಲ್ಲ. ತಾವಾಯಿತು ತಮ್ಮ ಹೊಟ್ಟೆಪಾಡಾಯಿತು. ದೇವರ ಘಂಟೆ ಬಡಿಯುತ್ತಾ, ಕುಂಡೆಗೆ ಉಡಕೊಕ್ಕೆ ಸಿಕ್ಕಿಸಿಕೊಂಡು ತಣ್ಣಗೆ ಮನೆ ಜಮೀನು ದೇವಸ್ಥಾನ ಅಂತ ಕುಲಕಸುಬಿನಲ್ಲಿ ಬದುಕು ತಳೆದವರು. ಅರಬೈಲು ಎಂಬ ಅರಬೈಲಿನ ಘಟ್ಟದ ಶುರುವಿನಲ್ಲಿ ಕವಲೊಡೆದ ಹೆದ್ದಾರಿಯಿಂದ ಎರಡು ಕೀ.ಮಿ.ಗೆಲ್ಲ ಮನೆ.

ಅಜ್ಜನ ಮನೆಯ ಅಬ್ಬೆಯನ್ನು ಚೂರಾದರೂ ಬರೆಯದಿದ್ದರೆ ನನಗೆ ರಾತ್ರಿ ನಿದ್ದೆಬರುವುದೇ ಇಲ್ಲ ಎಂಬಮಟ್ಟಿಗೆ ಅವಳನ್ನು ಹಚ್ಚಿಕೊಂಡಿದ್ದೆ ಎಂದು ಅವಳು ಸತ್ತುಹೋದ ವರ್ಷವೊಪ್ಪತ್ತಿನ ಈ ದಿನಗಳಲ್ಲಿ ಅನಿಸುವುದುಂಟು. ನಾನೊಬ್ಬನೇ ಅಲ್ಲ ಆಕೆಯನ್ನು ಅವಳ ಮೊಮ್ಮಕ್ಕಳ ಸಂಕುಲವೆಲ್ಲವೂ ಪೊಗದಸ್ತಾಗಿಯೇ ಹಚ್ಚಿಕೊಂಡಿತ್ತು. ಆಕೆ ಬದುಕು ಕಟ್ಟಿಕೊಂಡ ಸಾಹಸದ ಬಗೆ ಇಂದಿಗೂ ಅವಳ ಬದುಕನ್ನು ನಾವು ಬದುಕಬೇಕೆಂಬಷ್ಟು ಆಸೆ ಮೂಡಿಸುತ್ತದೆ. ಕೇರಿಗೇ ಘಟ್ಟಿ ಹೆಂಗಸಾಗಿ ಅಜ್ಜನ ರೂಪಗಳೆಲ್ಲವನ್ನೂ ನಿಭಾಯಿಸಿ ಎಂತೆಂತವರನ್ನೋ ಎದುರುಹಾಕಿಕೊಂಡು ನಮಗೆಲ್ಲ ಗೊಬ್ಬರಬುಟ್ಟಿಯಲ್ಲೂ ಹಿಡಿಯದಷ್ಟು ಪ್ರೀತಿಮಾಡಿ ಕಾಲಿಗೆ ಎಣ್ಣೆಹಚ್ಚಿ ನುಂಪಳಿಸುತ್ತ ಸುದ್ದಿಹೇಳುತ್ತಿದ್ದ ದಿನಗಳು ನೆನಪಾದರೆ ಮಳೆಬಂದಹಾಗಾಗುತ್ತದೆ.

ಸೀಸನ್ನಿಗೆ ತಕ್ಕಂತೆ ಹಲಸಿನ ಕಾಯಿ ಹಪ್ಪಳ, ಇಟ್ಟಂಡೆ ಹುಲ್ಲಿನ ಹಿಡಿ, ಮಾವಿನ ಹಣ್ಣಿನ ಹಪ್ಪಳ, ತೆಗಸಿನ ಗರಿಯ ಹಿಡಿಮಾಡಿ ಯಲ್ಲಾಪುರ ಪೇಟೆಯ ಫಿರಖಾನನಿಗೆ ಮಾರಿ ಮಾರಿ ಇಷ್ಟಿಷ್ಟೇ ದುಡ್ಡುಮಾಡಿ ಬಯಲುಸೀಮೆಯ ಗಡಿ ಹತ್ತಿರ ಹತ್ತಿರ ಕಿರವತ್ತಿಯಲ್ಲಿ ಬಿಸಿಲುರಣ ಕಾಯಿಸುತ್ತ ಬಿದ್ದಿದ್ದ ಗದ್ದೆಬಯಲನ್ನು ಖರೀದಿಮಾಡಿ ಭತ್ತ ಬಿಕ್ಕಿದ ಕತೆಗಳನ್ನೆಲ್ಲ ನೀವು ಅವಳ ಬಾಯಿಂದಲೇ ಕೇಳಬೇಕಿತ್ತು. ಅದನ್ನೆಲ್ಲ ನಾನು ಹೇಳಿದರೆ ಸಮಾ ಆಗುವುದಿಲ್ಲ. ಯಾರು ಹೇಳಬೇಕೋ ಅವರೇ ಹೇಳಬೇಕು. ಆದರೆ ಏನು ಮಾಡಲೂ ಅವಳು, ಅಬ್ಬೆ ಇಲ್ಲ. ಹೋಗಿದ್ದಾಳೆ.ಹೋದಮೇಲೆಯೇ ನೆನಪು ಹೆಚ್ಚು ಹೆಚ್ಚು ಬರಲು ತಾಗುತ್ತದೆ. ಯಾವತ್ತಿನ ಹಾಗೆ.

ನನ್ನನ್ನು ಬಹುವಾಗಿ ಪ್ರಭಾವಿಸಿದ ಮುದಿಜೀವಗಳಲ್ಲಿ ಇಡೀ ದಿನ ತಲೆ ಮೇಲೆ ಕೈಹೊತ್ತು ಕುಳಿತು ಹೋಗಿ ಬರುವ ಕನ್ನಡ ಶಾಲೆ ಮಕ್ಕಳನ್ನು ಚಾಳಿಸುತ್ತಿದ್ದ ನಾಯ್ಕರ ಹರಿಯಪ್ಪಜ್ಜನೂ, ಅಜ್ಜನಮನೆ ಹತ್ತಿರದ ದೇವಸ್ಥಾನದ ಪೂಜೆ ಮಾಡಿಯೇ ಕೈಯಲ್ಲಿ ಬಿಡಿಗಾಸೂ ಮಾಡಿಕೊಳ್ಳದೇ ಇಂದಿಗೂ ಚಪ್ಪಲಿ ಹಾಕದೆ ನಡೆಯುವ ಭಟ್ಟರೂ, ಹೂಂ ಈಅಜ್ಜರ ಕತೆಯನ್ನೂ ಎರಡು ಸಾಲು ಬರೆಯಲೇಬೇಕು. ಅಬ್ಬೆಯ ಹನ್ನೆರಡನೇ ದಿನಕ್ಕೆ ಇವರು ಬೆಳಗು ಬೇಗ ಹಾಜರಾಗಿದ್ದರು. ನನ್ನಬ್ಬೆ ಅವರ ಆತ್ಮೀಯ ಗೆಳತಿಯಾಗಿದ್ದಳಂತೆ. ಅವರ ಕಣ್ಣು ಇಡೀ ದಿನ ಒದ್ದೆಯಾಗಿಯೇ ಇದ್ದಹಾಗೆ ಕಾಣಿಸುತ್ತಿತ್ತು. ಆದರೂ ಹಳೇ ಪುರಾಣಗಳನ್ನು ಮತ್ತೆಮತ್ತೆ ಹೇಳಿ ನೆಗಿಹೊಡೆದರು. ನಮಗಂತೂ ಭಾರಿ ಕುತೂಹಲ,ಮಜ. ಗೊತ್ತಿರದ ಹಲವು ಸಂಗತಿಗಳು ಗೊತ್ತಾಗುತ್ತ ಹೋಗುತ್ತಿದ್ದವು.

ಅಬ್ಬೆ ಗೊಬ್ಬರ ಬುಟ್ಟಿ ಹೋರುತ್ತಿದ್ದಳಂತೆ ಮಣ್ಣುಬುಟ್ಟಿ ಹೋರುತ್ತೊದ್ದಳಂತೆ. ಗಂಡಸರು ಮಾಡುತ್ತಿದ್ದ ಎಲ್ಲ ಕೆಲಸವನ್ನೂ ಮಾಡುತ್ತಿದ್ದಳಂತೆ. ಯಾವುದಕ್ಕು ಕಮ್ಮಿಯಿರಲಿಲ್ಲ ಎಂದೆಲ್ಲ ಹೇಳಿ ಜೀವ ಹಗುರಮಾಡಿಕೊಂಡರು. ಕೈಯಲ್ಲಿದ್ದ ಕ್ಯಾಮರಾಕಂಡು ಕೇಳ ಫೋಟೋ ಹೊಡೆಸಿಕೊಂಡು ಫೋಟೋ ಪ್ರಿಂಟ್ ಹಾಕಿಸಿ ತಂದುಕೊಡಲು ಹೇಳಿದ್ದರು. ಆಗಲೇ ಅವರಿಗೂ ಆರಾಮಿರಲಿಲ್ಲ. ಯಾವಾಗ ಹೋಗುತ್ತೇನೇ , ಬೇಗ ಕೊಟ್ಟರೆ ಚೊಲೊ ಆಗಿತ್ತು ಮಾರಾಯ ಎಂದಿದ್ದರು. ನಾನಿನ್ನೂ ಅವರಿಗೆ ಫೋಟೋ ಕೊಡಲೇ ಇಲ್ಲ. ನನ್ನ ಬಗ್ಗೇ ನನಗೆ ಬೇಜಾರಾದಾಗೆಲ್ಲ ನೆನಪಾಗುತ್ತದೆ. ಅವರು ಸತ್ತುಹೋದಮೇಲೆ ಪೋಟೊ ಕೊಟ್ಟರೆ ಏನು ಸಾಧಿಸಿದ ಹಾಗಾಯಿತು ಎಂದೆಲ್ಲ ಅನಿಸಿ ಮುಂದಿನ ಸಾರಿ ಮನೆಗೆ ಹೋಗುವವರೆಗೂ ಅವರು ಬದುಕಿದ್ದರೆ ಸಾಕು ಎಂದು ಬೇಡುತ್ತೇನೆ.

ಮತ್ತಷ್ಟು ಅಜ್ಜಂದಿರು ನೆನಪು ಮಾಡಿಕೊಳ್ಳದಿದ್ದರೂ ನೆನಪಾಗುತ್ತಾರೆ. ಪಾರ್ಶ್ವ ವಾಯು ಆಗಿದ್ದನ್ನೂ ಮೀರಿ ಕಾಶಿ ಯಾತ್ರೆ ಮಾಡಿಬಂದ ಜೀವನೋತ್ಸಾಹದ ತಾರೀಮಕ್ಕಿ ಅಜ್ಜರೂ, ವರ್ಷಕ್ಕೊಮ್ಮೆಯಾದರೂ ಬಂದು ಒಂದು ಒಪ್ಪತ್ತು ಕತೆ ಹೊಡೆದು ಹೋಗುವ ಆರ್ತಿಬೈಲ್ ಅಜ್ಜನೂ,ತನ್ನ ಯೌವನದ ಮಹಾ ಧಾಂಧಲೆಗಳಿಂದ ಹೆಸರುವಾಸಿಯಾಗಿದ್ದ ಜಾತಿ ಗೀತಿಗಳನ್ನು ಬದಲಾಯಿಸಿಕೊಂಡ ದೂಳಿ ಕುಟ್ಟಜ್ಜನೂ, ಊರಿಗೆ ಏಕಮಾತ್ರ ಕ್ರಿಶ್ಚನ್ನನಾಗಿಯೂ ಇಡಿಡೀ ಊರನ್ನೇ ತಾನು ಹೇಳಿದಂತೆ ಕುಣಿಸುತ್ತಿದ್ದ ಮಿಂಗ್ಲಿಯೂ, ಅವನಿಗೆ ಸಖತ್ತಾಗಿ ಸೆಡ್ಡು ಹೊಡೆಯುತ್ತಿದ್ದ ಸಾಯುವವರೆಗೂ ಮಾವಿನ ಹಣ್ಣಿನ ಹಪ್ಪಳ ಮಾಡಿ ಎಲ್ಲೆಲ್ಲೊ ಹಂಚಿಹೋದ ಮೊಮ್ಮಕ್ಕಳಿಗೆ ಕಳಿಸುತ್ತಿದ್ದ ಭಾಗಬ್ಬೆಯೂ, ತೀರ ಚಿಕ್ಕಂದಿನಲ್ಲಿ ನಮ್ಮನ್ನು ಪ್ರೇರೇಪಿಸಿದ್ದ ಅಜ್ಜನ ಬೆಟಗೇರಿ ಕೃಷ್ಣ ಶರ್ಮ ಎಂಬ ಹೆಸರೂ, ಚೀರೆಕಲ್ಲು ಕೆತ್ತುವ ಘಟ್ಟದ ಕೆಳಗಿನ ಇಷ್ಟದ ಊರಿನ ಮಿನನ್ನನೂ… ಹೂ ಅಣ್ಣ ಹೇಳುತ್ತಿದ್ದ. ಅಲ್ಲೆಲ್ಲೋ ಮಂಚಿಕೆರೆ ಸಮೀಪ ಬೇಡ್ತಿ ಸೇತುವೆಯ ಆಸುಪಾಸು ಬಾಯಿ ಬಿಟ್ಟರೆ ಕತೆ ಹೇಳುವ ಮುದುಕ ಇದ್ದಿದ್ದನಂತೆ ಅವನ ಭೇಟಿಯೂ ಆಗಿಲ್ಲ….ಹೀಗೆ ಎಷ್ಟೆಷ್ಟೊ ಜನ ಮಿದುಳಿನ ಪದರಗಳಲ್ಲಿ ಹಾದುಹೋಗುತ್ತಾರೆ. ಆಕೆಗೂ ಒಬ್ಬ ಅಜ್ಜ ಇದ್ದಾನಂತೆ; ಚೆನ್ನಾಗಿ ಶಿಕಾರಿ ಮಾಡುತ್ತಾನಂತೆ. ಅವನ ಶಿಕಾರಿಯ ಕತೆ ಬರೆದಿದ್ದಳು. ಅವನದ್ದು ನನಗಿನ್ನೂ ಗುರುತಾಗಿಲ್ಲ. ಮಾಡಿಕೊಳ್ಳಬೇಕು. ಕತೆ ಕೇಳಬೇಕು.

ನನ್ನನ್ನು ದಿನದ ಕೊನೆಗೆ ಕಾಡುವ ಪ್ರಶ್ನೆ ಇದೇ; ನನ್ನ ಅಜ್ಜನ ಹಾಗೇ ಒಂದು ದಿನ ಈ ಅಜ್ಜಂದಿರೆಲ್ಲ ಹೇಳದೆ ಕೇಳದೇ ಹೋದಮೇಲೆ ನಾನು ಮಾಡುವುದಾದರೂ ಏನು?