Advertisement
“ಹಾಸ್ಯೋತ್ಸವ” ಹೇಗಾಯ್ತು ಗೊತ್ತ?: ಎಚ್. ಗೋಪಾಲಕೃಷ್ಣ ಸರಣಿ

“ಹಾಸ್ಯೋತ್ಸವ” ಹೇಗಾಯ್ತು ಗೊತ್ತ?: ಎಚ್. ಗೋಪಾಲಕೃಷ್ಣ ಸರಣಿ

ನಮ್ಮ ಇಡೀ ಜೀವಮಾನದ ಮತ್ತು ಮುಂದಿನ ಹತ್ತೋ ಹನ್ನೆರಡು ಜನ್ಮದ ದುಡಿತ ಅದಕ್ಕೆ ಹಾಕಬೇಕು ಅನಿಸ್ತಾ? ಕೈನಲ್ಲಿ ಬಿಡಿಕಾಸು ಅಥವಾ ಒಂದೇ ಒಂದು ನಯಾಪೈಸೆ, ಇಲ್ಲದಿರುವಾಗ ಇಂತಹ ತಿಕ್ಕಲು ತಿಕ್ಕಲು ಐಡಿಯಾಗಳು ಮನಸಿಗೆ ಬರುತವೆ ಅಂತ ಒಬ್ಬರು ಗೊಣಗಿದರಾ….? ಕೈತುಂಬ ಕಾಸಿದ್ದು ಯಾವದಾದರೂ ಮಂತ್ರಿ ಪಂತ್ರಿನ ಇನ್ವಾಲ್ವ್ ಮಾಡಿದ್ದರೆ ಅಂವ ಲಾರಿಗಳಲ್ಲಿ ತುಂಬಿ ಜನರನ್ನ ಸಪ್ಲೈ ಮಾಡಬಹುದು! ಆದರೆ ಸಾಹಿತ್ಯದ ಕಾರ್ಯಕ್ರಮಕ್ಕೆ ಲಾರಿಗಳಲ್ಲಿ ತುಂಬಿ ತರುವ ಜನ ಸರಿ ಹೊಂದುತ್ತಾರೆಯೇ?
ಎಚ್.
ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೦ನೇ ಬರಹ ನಿಮ್ಮ ಓದಿಗೆ

ಹಿಂದಿನ ಕಂತು ಹೀಗೆ ಮುಗಿಸಲು ಹೊರಟಿದ್ದೆ..

ಅಪರಂಜಿ ಹತ್ತನೇ ಹುಟ್ಟಿದಹಬ್ಬದ ಕಾರ್ಯಕ್ರಮದ ಬಗ್ಗೆ ಹೇಳಿದ್ದೆ. ಹಾಸ್ಯೋತ್ಸವದ ಬಗ್ಗೆ ಹೇಳಲು ಹೊರಟಿದ್ದೆ ತಾನೇ ಹಿಂದಿನ ಎಪಿಸೋಡುಗಳಲ್ಲಿ..?

ಹಾಸ್ಯೋತ್ಸವದ ಒಂದು vague ಕಲ್ಪನೆ ತಲೆಯಲ್ಲಿ ರೂಪುಗೊಳ್ಳುತ್ತಿತ್ತು. ಅದು ಒಂದು ಘನೀಭೂತ ಸ್ಥಿತಿ ತಲುಪಿದೆ ಅನಿಸಿದಾಗ ಸಭಾಂಗಣ ಬುಕ್ ಮಾಡಲು ಭಾರತೀಯ ವಿದ್ಯಾಭವನಕ್ಕೆ ನಾನು ಕೃಷ್ಣ ಹೋದೆವು. ಆಗ ಶ್ರೀ ಮತ್ತೂರು ಕೃಷ್ಣಮೂರ್ತಿ ಅವರು ವಿದ್ಯಾ ಭವನದ ಅಧ್ಯಕ್ಷರು ಶ್ರೀ ಶಿವಪ್ಪ ಅವರು ಅಲ್ಲಿನ ಇಲಾಖೆ ಒಂದರ ಮುಖ್ಯರು.

ಹೀಗೆ ಹಾಲ್ ಬುಕ್ ಮಾಡಲು ಬಂದ ವಿಷಯ ತಿಳಿಸಿದೆವು. ಶಿವಪ್ಪ ಅವರು ನಗುನಗುತ್ತಾ ಪಕ್ಕೆ ಹಿಡಿದುಕೊಂಡರು. ಮತ್ತೂರು ಅವರು ಮುಖದಲ್ಲಿ ಮುಗುಳ್ನಗೆ ಸೂಸುತ್ತಾ ಶಿವಪ್ಪನವರ ಕಡೆ ನೋಡುತ್ತಿದ್ದಾರೆ…

(ಈ ಸಮಯದಲ್ಲಿ ಶ್ರೀ ಕೃಷ್ಣ ಸುಬ್ಬರಾವ್ ದೇವರ ಪಾದ ಸೇರಿದ ಸುದ್ದಿ ಬಂದಿತು ಮತ್ತು ಕೃಷ್ಣ ಅವರ ಬಗ್ಗೆ ಒಂದು ಪುಟ್ಟ ಟಿಪ್ಪಣಿ ಹಾಕಿದ್ದೆ. ಮುಂದಿನ ಬಾರಿ ಪ್ರಸಂಗ ಮುಂದುವರೆಸುವೆ ಅಂತ ಹೇಳಿದ್ದೆ ಅಲ್ಲವೇ.. ಈಗ ಬ್ಯಾಕ್ ಟು ಹಾಲು ಬುಕ್ ಮಾಡಲು ಹೋದ ಕತೆ ಎಡೆಗೆ.)

“ಎಷ್ಟು ಜನ ಬರಬಹುದು ಕಾರ್ಯಕ್ರಮಕ್ಕೆ…? ”

ಅಪರಂಜಿ ಹತ್ತನೇ ಹುಟ್ಟಿದ ಹಬ್ಬದ ಅನುಭವ ಆಗಿತ್ತು. ಜನ ಹಾಸ್ಯ ಕಾರ್ಯಕ್ರಮ ಅಂದರೆ ಬಂದೇ ಬರುತ್ತಾರೆ ಎನ್ನುವ ಭರವಸೆ ಬೇರೆ ಹುಟ್ಟಿತ್ತು. ಈ ಹಿನ್ನೆಲೆಯಲ್ಲಿ ನಿಮ್ಮ ಸಭಾಂಗಣ ತುಂಬುತ್ತೆ ಎಂದ ಕೃಷ್ಣ.

ಪಕ್ಕೆ ಸಡಿಲ ಮಾಡಿಕೊಂಡರು ಶಿವಪ್ಪನವರು. ಶಿವಪ್ಪನವರು ಕವಿಗಳೆಂದು ಹೆಸರು ಮಾಡಿದ್ದರು. ಅವರು ಬರೆದ ಕವನಗಳು ಆಕಾಶವಾಣಿಯಲ್ಲಿ ಬರುತ್ತಿತ್ತು. ಮುದ್ದುರಾಮ ಹೆಸರಿನ ಅಂತ್ಯ ಹೊಂದಿದ್ದ ಇವರ ಪುಟ್ಟ ಪುಟ್ಟ ಕವನಗಳು ಮಂಕು ತಿಮ್ಮನ ಕಗ್ಗದ ಹಾಗೇ ಜನಜನಿತವಾಗುತ್ತಿದ್ದವು.

(ಮತ್ತೂರು ಕೃಷ್ಣಮೂರ್ತಿ)

ಮತ್ತೂರು ಕೃಷ್ಣಮೂರ್ತಿ ಅವರದು ಯಾವಾಗಲೂ ನಗು ತುಂಬಿದ ಮುಖ. ಅವರ ಕುಮಾರವ್ಯಾಸ ಭಾರತದ ಗಮಕ ವ್ಯಾಖ್ಯಾನವನ್ನು ರಾಜಾಜಿನಗರದ ಕುಮಾರವ್ಯಾಸ ಮಂಟಪದಲ್ಲಿ ಸುಮಾರು ಸಲ ಕೇಳಿದ್ದೆ. ನಗುಮುಖದಲ್ಲಿ ಇವರು ಕೊಡುತ್ತಿದ್ದ ಮಾತಿನ ಗೊಂಚಲುಗಳು ಆಕರ್ಷಣಿಯವಾಗಿರುತ್ತಿತ್ತು. ಇವರು ಮಿನರ್ವ ಮಿಲ್ (ಅಥವಾ ಬಿನ್ನಿ ಮಿಲ್) ನಲ್ಲಿ ಉದ್ಯೋಗದಲ್ಲಿದ್ದರು ಎಂದು ಎಷ್ಟೋ ವರ್ಷದ ನಂತರ ನನ್ನ ಸಹೋದ್ಯೋಗಿ ಗೆಳೆಯ ಶ್ರೀ ರಾಮಕುಮಾರ್ ತಿಳಿಸಿದ್ದರು. ಶ್ರೀ ರಾಮಕುಮಾರ್ ತಂದೆಯವರ ಸಹೋದ್ಯೋಗಿ ಇವರು. ಒಂದೇ ಒಂದು ಕ್ಷಣವೂ ಅವರ ಮುಖ ಗಂಟು ಹಾಕರು. ಬೆಂಗಳೂರು ವಿದ್ಯಾ ಭವನದ ನಂತರ ಲಂಡನ್ ವಿದ್ಯಾಭವನದ ಮುಖ್ಯಸ್ಥರಾದರು.

ಅವರು ಅದೇ ಹಸನ್ಮುಖರಾಗಿ ನಮ್ಮ ಮಾತು ಆಲಿಸುತ್ತಾ ಕುಳಿತಿದ್ದಾರೆ.

ನಿಮ್ಮ ಸಭಾಂಗಣ ತುಂಬುತ್ತೆ ಎನ್ನುವ ನಮ್ಮ ಅತಿ ವಿಶ್ವಾಸದ ಮಾತುಗಳು ಶಿವಪ್ಪ ಅವರ ನಗುವಿಗೆ ಮೂಲ!

ನಗುವಿನ ನಡುವೆ ಅವರು ಅವರ ಸಂಶಯಕ್ಕೆ ಕಾರಣ ವಿವರಿಸಿದರು.

“ಇಲ್ಲಿ ಇದೇ ಸಭಾಂಗಣದಲ್ಲಿ ಎಷ್ಟು ಕಾರ್ಯಕ್ರಮ ನಡೆಯುತ್ತೆ ಗೊತ್ತಾ? ಉದ್ದಕ್ಕೂ ಖುರ್ಚಿ ಹಾಕಿರುತ್ತೆ. ನಾಲ್ಕೋ ಐದೋ ಸಾಲು ಖುರ್ಚಿಗಳಲ್ಲಿ ಜನ ಬಿಡಿ ಬಿಡಿ ಇರ್ತಾರೆ. ಕೊನೆ ಕೊನೆಯಲ್ಲಿ ಇಡೀ ಸಭಾಂಗಣದಲ್ಲಿ ಕೈ ಬೆರಳಿಗೆ ಅಷ್ಟು ಜನ ಇರ್ತಾರೆ. ನಿಮ್ಮ ಕಾರ್ಯಕ್ರಮಕ್ಕೂ ಜನ ಬರದೇ ಇದ್ದರೆ… ಅಂತ ಅನಿಸಿತು….”

ಈಗ ಒಂದು ಸ್ವಲ್ಪ ಡೈವರ್ಷನ್…

ಆಗಾಗಲೇ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಅಭಾವ ಎಲ್ಲಾ ಕಡೆಯೂ ಶುರುವಾಗಿತ್ತು. ನಮ್ಮ ಗಾಂಧಿ ಸಂಘದ ಕಾರ್ಯಕ್ರಮಗಳಲ್ಲಿ ಇದರ ಅನುಭವ ಚೆನ್ನಾಗೇ ಆಗಿತ್ತು. ಸಭಿಕರ ಅಭಾವದ ಬಗ್ಗೆ ಸುಮಾರು ಹಾಸ್ಯ ಲೇಖನಗಳು ಪ್ರಕಟವಾಗಿದ್ದವು. ಇದರಲ್ಲಿ ಸುಮಾರು ನಮ್ಮ ಹಿಂದಿನ ಪೀಳಿಗೆ ಅನುಭವಿಸಿದ್ದ ಪ್ರಸಂಗಗಳು ಸಹ ಇದ್ದವು. ಅಂತಹ ಒಂದೆರೆಡು ಪುಟಾಣಿ ಪ್ರಸಂಗಗಳನ್ನು ಮೊದಲು ಮರೆಯುವ ಮುನ್ನ ವಿವರಿಸಿ ಬಿಡುತ್ತೇನೆ.

ಒಂದು ಹಾಸ್ಯಲೇಖನದ ಜಿಸ್ಟ್ ಹೀಗೆ. ಸಭಿಕರನ್ನು ಸಭೆಗಳಿಗೆ ಆಕರ್ಷಿಸುವುದು ಹೇಗೆ ಅಂತ ಒಂದು ಜಿಜ್ಞಾಸೆ ಶುರು ಆಗುತ್ತೆ. ಸಭೆ ಮೊದಲು ತಿಂಡಿ ಕಾಫಿ, ಸಭೆ ನಂತರ ಊಟ ಇಟ್ಟರೆ ಸಭಿಕರನ್ನು ಸೆಳೆಯಲು ಸಾಧ್ಯವೇ ಎನ್ನುವ ಚರ್ಚೆ ಬರುತ್ತೆ. ಇಂತಹ ಹಲವು ಪ್ರಯೋಗ ಮಾಡಿದ್ದೇವೆ. ಮೊದಲು ಬಂದು ತಿಂಡಿ ಕಾಫಿ ಮುಗಿಸಿ ಹೊರಕ್ಕೆ ಹೋಗುತ್ತಾರೆ. ಕಾರ್ಯಕ್ರಮ ಮುಗಿಯುವ ಸಮಯಕ್ಕೆ ಬಂದು ಉಂಡು ಹೋಗುತ್ತಾರೆ. ಇಂತಹ ಪ್ರಯೋಗ ಹಲವು ಸಲ ನಡೆದು ಸಂಪೂರ್ಣ ವಿಫಲರಾಗಿದ್ದೇವೆ ಎಂದು ಒಬ್ಬರು ಹೇಳುತ್ತಾರೆ. ಸಭೆಯಲ್ಲಿ ಜನ ಇರಲಿ ಅಂದರೆ ಅದೇ ಸಮಯದಲ್ಲಿ ಇರೋಲ್ಲ ಅಂತ ಬಾಲಂಗೋಚಿ ಅಂಟಿಸಿದರು. ಸಭೆಯ ಮಧ್ಯೆ ಆಗಾಗ ಕಾಫಿ ಕೋಡುಬಳೆ ಚಕ್ಕಲಿ ಹಂಚುತ್ತಾ ಇದ್ದರೆ ಹೇಗೆ ಅಂತ ಒಂದು ಸಪ್ಲಿಮೆಂಟರಿ ಬಂತು. ಅದರ ಪ್ರಯೋಗ ಸಹ ನಡೆದಿದೆ. ಸಭಿಕರ ಗಮನ ಪೂರ್ತಿ ಕೋಡುಬಳೆ ಚಕ್ಕಲಿ ಸುತ್ತ ತುಂಬಿ ಅದಕ್ಕೆ ನೂಕು ನುಗ್ಗಲು ಆಗಿ ಜನರ ಗಮನ ಡೈವರ್ಟ್ ಆಗುತ್ತೆ. ಸಭಾಮರ್ಯಾದೆ ಎಕ್ಕುಟ್ಟು ಹೋಗುತ್ತೆ. ಅತಿಥಿಗಳಿಗೆ ಅವಮಾನ ಮಾಡಿದ ಹಾಗೆ ಆಗುತ್ತೆ ಬೇಡ ಅಂತ ಡಿಸೈಡ್ ಆಯ್ತಾ? ಬೆಳಿಗ್ಗೆ ಕಾಫಿ ಬಿಸ್ಕಿಟ್ ಕೊಡೋಕ್ಕೆ ಪರದಾಡುತ್ತಾ ಇರುವ ನಾವು ಮಧ್ಯೆ ಮಧ್ಯೆ ಕೋಡುಬಳೆ ಚಕ್ಕಲಿ ಕೊಡೋದು ಅಂದರೆ ಅದೊಂದು ತಿರುಕನೋರ್ವ ಊರಮುಂದೆ… ನೆನಪಿಗೆ ತರುವ ಕನಸು ಅಷ್ಟೇ! ಜನರನ್ನು ಆಕರ್ಷಿಸಲು ಬೀರು ಹೆಂಡ ಪಂಡ ಕೊಟ್ಟರೆ ಹೇಗೆ ಅಂತ ಒಂದು ಸಲಹೆ ಬಂತಾ?

ಆಗ ಇಂತಹ ಹೆಂಡ ಸಾರಾಯಿ ವಿಷಯ ಗಟ್ಟಿಯಾಗಿ ಚರ್ಚಿಸುವುದು ಸಹ ಸಭ್ಯತೆಯ ಇತಿಮಿತಿ ಮೀರಿದ್ದು. ಕತ್ತಲಾದ ಮೇಲೆ ಗಡಂಗಿಗೆ ಹೋಗಿ ಮೂಲೆಯಲ್ಲಿ ಯಾರಿಗೂ ಕಾಣದ ಹಾಗೆ ಕೂತು ಗಂಟಲಿಗೆ ಸುರುವಿಕೊಂಡು ಬರೋದು ಅಷ್ಟೇ. ಯಾರೋ ಕೆಲವು ರೆಬೆಲ್ ಸಾಹಿತಿಗಳು ತಮ್ಮ ಗಡoಗಿನ ಅನುಭವ ಗಟ್ಟಿಯಾಗಿ ಹೇಳುತ್ತಿದ್ದರು ಅಷ್ಟೇ. ಸಲಹೆ ತೂರಿಬಿಟ್ಟವರನ್ನು ದುರ ದುರ ನೋಡಿ ಅದನ್ನೂ ಡ್ರಾಪ್ ಮಾಡಿದೆವಾ?

ಹೊಸಾ ಐಡಿಯಾ ಮತ್ತೊಬ್ಬ ಹಾಸ್ಯ ಸಾಹಿತಿ ಕೊಟ್ಟರು. ಸಾಹಿತ್ಯದ ಕಾರ್ಯಕ್ರಮದ ಜತೆ ಜತೆಗೆ ಅಂದಿನ ಚಲನ ಚಿತ್ರದ ಖ್ಯಾತ ನಟಿಯರನ್ನು ಕರೆಸಿ ಡ್ಯಾನ್ಸ್ ಮಾಡಿಸಿದರೆ ಹೇಗೆ? ಅದರಲ್ಲೂ ಆಗಿನ ಖ್ಯಾತರಾದ ಜ್ಯೋತಿಲಕ್ಷ್ಮಿ, ಹೆಲೆನ್ ಇಂತಹ ಡಾನ್ಸರ್ಸ್ ಇದ್ದರೆ ಕಾರ್ಯಕ್ರಮಕ್ಕೆ ಜನ ಜಾತ್ರೆ ಹಾಗೆ ಸೇರುತ್ತಾರೆ… ಅನ್ನುವ ಐಡಿಯಾ ಬಂದಿದ್ದು.

ನಮ್ಮ ಇಡೀ ಜೀವಮಾನದ ಮತ್ತು ಮುಂದಿನ ಹತ್ತೋ ಹನ್ನೆರಡು ಜನ್ಮದ ದುಡಿತ ಅದಕ್ಕೆ ಹಾಕಬೇಕು ಅನಿಸ್ತಾ? ಕೈನಲ್ಲಿ ಬಿಡಿಕಾಸು ಅಥವಾ ಒಂದೇ ಒಂದು ನಯಾಪೈಸೆ (ಈಗಿದು ಪೈಸೆ), ಇಲ್ಲದಿರುವಾಗ ಇಂತಹ ತಿಕ್ಕಲು ತಿಕ್ಕಲು ಐಡಿಯಾಗಳು ಮನಸಿಗೆ ಬರುತವೆ ಅಂತ ಒಬ್ಬರು ಗೊಣಗಿದರಾ….? ಕೈತುಂಬ ಕಾಸಿದ್ದು ಯಾವದಾದರೂ ಮಂತ್ರಿ ಪಂತ್ರಿನ ಇನ್ವಾಲ್ವ್ ಮಾಡಿದ್ದರೆ ಅಂವ ಲಾರಿಗಳಲ್ಲಿ ತುಂಬಿ ಜನರನ್ನ ಸಪ್ಲೈ ಮಾಡಬಹುದು! ಆದರೆ ಸಾಹಿತ್ಯದ ಕಾರ್ಯಕ್ರಮಕ್ಕೆ ಲಾರಿಗಳಲ್ಲಿ ತುಂಬಿ ತರುವ ಜನ ಸರಿ ಹೊಂದುತ್ತಾರೆಯೇ?

ಸಭೆ ಏನೂ ತೀರ್ಮಾನಕ್ಕೆ ಬರದೇ ಬರಕಾಸ್ತು ಆಗುತ್ತೆ..! ಅಂದರೆ ಜನರನ್ನು ಸೇರಿಸುವ ಐಡಿಯಾ ಸಖತ್ ಫೇಲ್ ಆಗುತ್ತೆ. ಇದು ಒಂದು ಹಾಸ್ಯ ಲೇಖನದ ಸ್ಯಾಂಪಲ್(ಕರ್ತೃ ನಾನೇ ಇರಬಹುದು!)

ಮತ್ತೊಂದು ನಮ್ಮ ಹಿಂದಿನ ಪೀಳಿಗೆಯದ್ದು. ನಾವು ಬೆಳೆಯೋ ಸಮಯಕ್ಕೆ ಇದು ಜನಜನಿತ ಅಂದರೆ ಭಾರೀ popular ಆಗಿತ್ತು.

ಒಂದು ಸಾಹಿತ್ಯದ ಸಭೆ ಸುಮಾರು ಹೊತ್ತು ನಡೆಯುತ್ತೆ. ಕೊನೆಗೆ ಸಭೆಯ ಅಧ್ಯಕ್ಷ ಮಾತ್ರ ಉಳಿದುಕೊಳ್ಳುತ್ತಾರೆ, ಕಾರಣ ಅವರದ್ದೇ ಕೊನೆಯ ಭಾಷಣ, ಅಧ್ಯಕ್ಷ ಭಾಷಣ. ಎದುರು ಒಬ್ಬ ಗಟ್ಟಿಯಾಗಿ ಕೂತಿರ್ತಾನೆ. ಅವನನ್ನು ಕಂಡು ಅಧ್ಯಕ್ಷರಿಗೆ ತುಂಬಾ ಸಂತೋಷ ಆಗುತ್ತೆ. ಒಬ್ಬನಾದರೂ ನನ್ನ ಭಾಷಣ ಕೇಳಲು ಕೊನೆಯವರೆಗೂ ಇದ್ದಾನಲ್ಲ ಎನ್ನುವ ಅನಿರ್ವರ್ಚನಿಯ ಸಂತೋಷ ಅವರಿಗೆ.

“ನಿಮ್ಮನ್ನು ನೋಡಿ ಸಂತೋಷ ಆಯ್ತು. ಭಾಷಣ ಕೇಳಲು ಕೊನೆವರೆಗೂ ಇದ್ದೀರಲ್ಲ….” ಅಂತ ತಮ್ಮ ಸಂತಸ ವ್ಯಕ್ತ ಮಾಡುತ್ತಾರೆ.

“ಅಯ್ಯೋ ಸಾಮಿ, ನೀವು ನಿಂತಿರೋ ಜಮಖಾನ ನನ್ನ ಹೆಂಡ್ತಿ ತವರಿಂದು. ಅದನ್ನ ಬಿಟ್ಟು ಹೋದರೆ ನನ್ನ ಬುರುಡೆ ಒಡೆದುಬಿಡ್ತಾಳೆ. ನಿಮ್ಮದೇ ಕೊನೆ ಭಾಷಣ, ಅದು ಮುಗಿದ ಮೇಲೆ ಅದನ್ನ ಎತ್ಕೊಂಡು ಹೋಗಬೇಕು. ಅದಕ್ಕೇ ಕಾದಿದ್ದೀನಿ….” ಅಂದ ಅವನು!

ಹೆಚ್ಚು ಕಡಿಮೆ ಸಾಹಿತ್ಯದ ಕಾರ್ಯಕ್ರಮಗಳಿಗೆ ಇಂತಹ ಅನುಭವ ಪ್ರಚಲಿತವಾಗಿತ್ತು.

ಮತ್ತೆ ಟ್ರ್ಯಾಕ್‌ಗೆ… ಪುನರಾಯಾನ್ ಮಹಾ ಕಪಿ ತರಹ.

ಶಿವಪ್ಪ ಅವರು ಅವರ ನಗುವಿನ ಕಾರಣ ವಿವರಿಸಿದರು.

“ಇಲ್ಲಿ ಇದೇ ಸಭಾಂಗಣದಲ್ಲಿ ಎಷ್ಟು ಕಾರ್ಯಕ್ರಮ ನಡೆಯುತ್ತೆ ಗೊತ್ತಾ? ಉದ್ದಕ್ಕೂ ಖುರ್ಚಿ ಹಾಕಿರುತ್ತೆ. ಕಾರ್ಯಕ್ರಮ ಶುರು ಆದಾಗ ನಾಲ್ಕೋ ಐದೋ ಸಾಲು ಖುರ್ಚಿಗಳಲ್ಲಿ ಜನ ಇರ್ತಾರೆ. ಕೊನೆ ಕೊನೆಯಲ್ಲಿ ಇಡೀ ಸಭಾಂಗಣದಲ್ಲಿ ಕೈ ಬೆರಳಿಕೆ ಅಷ್ಟು ಜನ ಇರ್ತಾರೆ. ನಿಮ್ಮ ಕಾರ್ಯಕ್ರಮಕ್ಕೂ ಜನ ಬರದೇ ಇದ್ದರೆ.. ಅಂತ ಅನಿಸಿತು….”

“ಹಾಗಲ್ಲ ಸಾರ್, ನಮ್ಮ ಕಾರ್ಯಕ್ರಮಗಳಿಗೆ ಜನ ಬರ್ತಾರೆ….”. ಅವರಿಗೆ ನಂಬಿಕೆ ಬರಲಿಲ್ಲ. ಅವರ ಮುಖದಲ್ಲಿನ ಹುಸಿ ನಗೆ ಇನ್ನೂ ಮಾಸಿರಲಿಲ್ಲ…

“ಒಂದು ವೇಳೆ ನೀವು ಕಾರ್ಯಕ್ರಮಕ್ಕೆ ಮುಂಚೆಯೇ ಬರದಿದ್ದರೆ ನಿಮಗೆ ಒಳಗೆ ಬರೋಕ್ಕೂ ಜಾಗ ಸಿಗುಲ್ಲ…” ಎಂದ ಕೃಷ್ಣ, ದನಿಯಲ್ಲಿ ಚಾಲೆಂಜ್ ಮಾಡುವ ಧಾಟಿ ಇತ್ತು. ಶಿವಪ್ಪನವರು ಮಾರುತ್ತರ ನೀಡಿದರು.

“ಒಂದು ವೇಳೆ ಹಾಗೇನಾದರೂ ಆದರೆ ಹಾಲ್‌ನ ಬಾಡಿಗೆ ಬೇಡ….” ಅಂದರು ಶಿವಪ್ಪ.

“ಹಾಗೇ ಆಗಲಿ ಸಾರ್. ಮುಂದಿನ ನಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಹಾಲ್ ಫ್ರೀ ಕೊಡಬೇಕು….” ಅಂತ ಒಂದು ಬಾಯಿಮಾತಿನ ಕರಾರಿಗೆ ಮುಂದಾದೆವು.

ಮತ್ತೂರು ಕೃಷ್ಣಮೂರ್ತಿ ಅವರು ತಮ್ಮ ಎಂದಿನ ಹಸನ್ಮುಖದಲ್ಲಿ ನಮ್ಮ ಮಾತು ಕೇಳುತ್ತಾ ಕುಳಿತಿದ್ದರು. ಈಗ ಅವರು ಮಧ್ಯೆ ಪ್ರವೇಶಿಸಿದರು.

“ವಿದ್ಯಾಭವನ ಇದರಲ್ಲಿ ಇನ್‌ವಾಲ್ವ ಆಗೋದು ಬೇಡಿ. ನಿಮ್ಮ ಪರ್ಸನಲ್ ಬೆಟ್ ಮಾಡ್ಕೊಳ್ಳಿ ಬೇಕಾದರೆ….” ಅಂತ ಸಲಹೆ ಕೊಟ್ಟರು!

ಶಿವಪ್ಪನವರು ಹಾಲ್ ತುಂಬಿದರೆ ರೂ 500/-ಕೊಡುವುದಾಗಿ ಒಪ್ಪಿದರು.

ಮೊಟ್ಟಮೊದಲಿಗೆ 1995ರಲ್ಲಿ ಹಾಸ್ಯೋತ್ಸವ ಶುರುವಾಯಿತು. ಕೊರವಂಜಿ ಅಪರಂಜಿ ಬಳಗ ನಮ್ಮೊಂದಿಗೆ ಇತ್ತು, ಇತ್ತು ಏನು ನಾವೇ ಅದಾಗಿದ್ದೆವು ಮತ್ತು ಸುಮಾರು ಪ್ರಾಯೋಜಕರು ನೆರವು ನೀಡಿದ್ದರು. ಪ್ರಾಯೋಜಕರ ನೆರವು ಪಡೆವಲ್ಲಿ ಅಪರಂಜಿ ಸಂಪಾದಕರಾದ ಶ್ರೀ ಶಿವಕುಮಾರ್ ದೊಡ್ಡ ಪ್ರಭಾವ ಬೀರಿದ್ದರು.

ಕಾರ್ಯಕ್ರಮದ ಆರಂಭಕ್ಕೆ ಮೊದಲೇ ಜನ ಕಿಕ್ಕಿರಿದು ಸೇರಿದ್ದರು. ಹಾಲಿನ ಒಳಗೆ ಹೊರಗೆ ತುಂಬಿ ತುಳುಕುತ್ತಿದ್ದಾರೆ. ಸಂಜೆವರೆಗೆ ನಡೆದ ಕಾರ್ಯಕ್ರಮ ಅಭೂತ ಪೂರ್ವ ಯಶಸ್ಸು ಕಂಡಿತು. ನಾಡಿನ ಹಾಸ್ಯ ಪ್ರೇಮಿಗಳು ಇಡೀ ದಿನದ ಕಾರ್ಯಕ್ರಮವನ್ನು ನೋಡಿದರು. ವೃತ್ತ ಪತ್ರಿಕೆಗಳು ಕಾರ್ಯಕ್ರಮ ಕುರಿತು ಪ್ರಶಂಸೆಯ ವರದಿ ಕೊಟ್ಟಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ hmt ಸಂಸ್ಥೆ ಪ್ರಾಯೋಜನೆಯ ಭಾರ ಭಾಗಶಃ ಹೊತ್ತಿತ್ತು. ಅದರ ಪ್ರಚಾರದ ಟ್ಯಾಗ್ ಲೈನ್ Time keepers to Nation ಎಂದಿತ್ತು. ಅದರಂತೆ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಯಿತು. ಇದೇ ಸಂಪ್ರದಾಯ ಮುಂದುವರೆಯಿತು. ಮತ್ತೊಂದು ಎಂದರೆ ರಾಜಕಾರಣಿಗಳಿಂದ ಅಂತರ ಕಾಪಾಡಿಕೊಂಡಿದ್ದು. ಸಾಮಾನ್ಯವಾಗಿ ರಾಜಕಾರಣಿಗಳು ಅಂದರೆ ಸಮಯ ಮೀರಿ ಬರುವವರು ಹಾಗೂ ಯಾವುದೇ ಶಿಷ್ಟಾಚಾರ ಹಾಗೂ ಕಟ್ಟುಪಾಡಿಗೆ ಒಳಗಾಗದವರು ಎನ್ನುವ ಸಾರ್ವಜನಿಕ ಅಭಿಪ್ರಾಯ ಈಗಿನ ಹಾಗೇ ಅಂದೂ ಇತ್ತು. ನಮ್ಮ ಮೈಂಡ್ ಸೆಟ್‌ಗೆ ರಾಜಕಾರಣಿಗಳು ಹೊಂದುವುದಿಲ್ಲ ಎನ್ನುವ ಸತ್ಯವೂ ಅರಿವಾಗಿತ್ತು. ರಾಜಕಾರಣಿಗಳು ಹೀಗಾಗಿ ನಮ್ಮ ಸಭೆ ಉದ್ಘಾಟನೆಗಳಿಗೆ ಆಹ್ವಾನಿತರಾಗಲಿಲ್ಲ. ಆದರೆ ಶ್ರೀ ಎಸ್ ಎಂ ಕೃಷ್ಣ ಅವರು ಮುಖ್ಯ ಮಂತ್ರಿಗಳಾಗಿದ್ದಾಗ ಅವರು ಬಂದು ಸಭಿಕರ ಸಾಲಿನಲ್ಲಿ ಕೂತು ಕಾರ್ಯಕ್ರಮದಲ್ಲಿ ಖುಷಿ ಪಡುತ್ತಿದ್ದುದು ಸಾಮಾನ್ಯವಾಗಿತ್ತು. ಅದರಲ್ಲೂ ಭಾಗ್ಯದ ಲಕ್ಷ್ಮೀ.. ಹಾಡಿನ ನಾಟಕದ ರೂಪವನ್ನು ಕೇಳಲು ಎಂದೇ ಅವರು ಪತ್ನಿ ಶ್ರೀಮತಿ ಪ್ರೇಮಾಕೃಷ್ಣ ಅವರ ಸಂಗಡ ಬರುತ್ತಿದ್ದರು. ಗಾನವಿನೋದಿನಿ ತಂಡದ ಸದಸ್ಯರು ಸುಬ್ಬರಾಮ್ ನೇತೃತ್ವದಲ್ಲಿ ಕಿರ್ಲೊಸ್ಕರ್ ಸತ್ಯ ಈ ಹಾಡು ಹೇಳುತ್ತಿದ್ದರೆ ಜನ ಬಿದ್ದು ಬಿದ್ದು ನಗುತ್ತಿದ್ದರು.

ಮತ್ತೆ ಬೆಟ್ಟಿಂಗ್ ವಿಷಯಕ್ಕೆ. ಶ್ರೀ ಶಿವಪ್ಪ ಅವರು ಕಾರ್ಯಕ್ರಮದ ದಿವಸ ಹನ್ನೊಂದರ ಸುಮಾರಿಗೆ ವಿದ್ಯಾಭವನಕ್ಕೆ ಬಂದರು. ಕಾರ್ಯಕ್ರಮ ಹತ್ತಕ್ಕೆ ಶುರುವಾಗಿತ್ತು. ಅವರು ಒಳಗೆ ಇಣುಕಿ ನೋಡಲೂ ಸಹ ಜಾಗ ಸಿಗಲಿಲ್ಲ. ಹೀಗಾಗಿ ಅವರು ಹಾಗೇ ಹೋದರು. ಮಾರನೇ ವರ್ಷದ ಹಾಸ್ಯೋ ತ್ಸವದ ದಿವಸ ವೇದಿಕೆ ಮೇಲೆ ಆಗಮಿಸಿ ಬೆಟ್ಟಿಂಗ್ ಹಣ ರೂಪಾಯಿ ಐನೂರು ಕೊಟ್ಟರು.

ಮಾರನೇ ವರ್ಷದ ಹಾಸ್ಯೋತ್ಸವದ ವೇಳೆಗೆ ವಿದ್ಯಾಭವನದ ಸ್ಥಳ ಸಾಲದು ಎನ್ನುವ ಕಾರಣಕ್ಕೆ ಜಯನಗರದ ನ್ಯಾಷನಲ್ ಕಾಲೇಜಿನ ಸಭಾಂಗಣಕ್ಕೆ ಕಾರ್ಯಕ್ರಮ ಬದಲಾಯಿತು.

ಈ ನಡುವೆ ಅಂದರೆ ಮೊದಲ ಹಾಸ್ಯೋತ್ಸವ ನಡೆದ ನಂತರ ಮಂಡ್ಯದ ಇಂಜಿನಿಯರಿಂಗ್ ಪ್ರೊಫೆಸರ್ ಶ್ರೀ ಎಚ್ ಎಲ್ ಕೇಶವಮೂರ್ತಿ ಅವರ ಭೇಟಿ ಮತ್ತೊಮ್ಮೆ ಆಯಿತು. ಕೇಶವ ಮೂರ್ತಿ ಅವರು ಮಂಡ್ಯದ ಗ್ರಾಮೀಣ ಸೊಗಡನ್ನು ತಮ್ಮ ಹಾಸ್ಯ ಲೇಖನಗಳಲ್ಲಿ ಹೊಮ್ಮಿಸುತ್ತಿದ್ದರು. ಅವರು ಸೃಷ್ಟಿಸಿದ ಕ್ಯಾತ ಎನ್ನುವ ಕ್ಯಾರೆಕ್ಟರ್ ಕನ್ನಡ ಸಾಹಿತ್ಯದಲ್ಲಿ ನೂರ್ಕಾಲ ಉಳಿಯುವಂತಹುದು. ಶ್ರೀ ನಾ. ಕಸ್ತೂರಿ ಅವರ ಮೊಮ್ಮಗ ಶ್ರೀ ರಾಜಾರಾಮ್ ಅವರು ಬಳಗ ಸೇರಿದ್ದರು. ಶ್ರೀ ನಾ. ಕಸ್ತೂರಿ ಅವರು ಮತ್ತು ಶ್ರೀ ರಾ ಶಿ ಅವರು ಸೇರಿ ಕೊರವಂಜಿ ಪತ್ರಿಕೆ ಬೆಳೆಸಿದ್ದರು. ಶ್ರೀ ನಾ. ಕಸ್ತೂರಿ ಅವರು ಮೂಲತಃ ಮಲೆಯಾಲದವರಾದರೂ ಮೈಸೂರಿಗೆ ಕಾಲೇಜಿನ ಅಧ್ಯಾಪಕರಾಗಿ ಬಂದು ಇಲ್ಲಿನವರೇ ಆಗಿಹೋಗಿದ್ದರು. ಕಾಲೇಜಿನ ಇತರ ಮೇಷ್ಟ್ರುಗಳ ಸಂಗಡ ಸೇರಿ ನಾಟಕದಲ್ಲಿ ಪಾತ್ರಮಾಡುವುದು ಸೇರಿದಂತೆ ಹಲವು ನೂರು ಚಟುವಟಿಕೆಗಳ ಆಗರ ಅವರು. ಕನ್ನಡದಲ್ಲಿ ಹರಿಕತೆ, ಭಾಷಣ, ಆಶುನಾಟಕ… ಹೀಗೆ ಅವರದು ವೈವಿಧ್ಯಮಯ ಪ್ರತಿಭಾ ಸಂಗಮ.

ಕನ್ನಡ ಕಲಿತು ಕನ್ನಡ ಭಾಷೆಯಲ್ಲಿ ಅತ್ಯುತ್ತಮ ಹಾಸ್ಯ ಸೃಷ್ಟಿಸಿದರು. ಕೊರವಂಜಿ ಪತ್ರಿಕೆಗೆ ಐದಾರು ಗೂಢ ನಾಮಗಳಲ್ಲಿ ಲೇಖನ ಬರೆದರು. ಕನ್ನಡಕ್ಕೆ ವಿಶಿಷ್ಟವಾದ ಬೇರೆ ಯಾವ ಭಾಷೆಯಲ್ಲಿಯೂ ಇಲ್ಲದ ಅಪೂರ್ವ ನಿಘoಟು ಅನರ್ಥ ಕೋಶ ರಚಿಸಿದರು. ಇದು ಯಾವುದೇ ಭಾಷೆಯಲ್ಲಿ ಅಲ್ಲಿಯವರೆಗೆ ಕಂಡಿರದ ಅಪೂರ್ವ ಗ್ರಂಥ ಎಂದು ವಿಮರ್ಶಕ ಲೋಕ ಗುರುತಿಸಿದೆ.

ಎಲ್ಲೆಲ್ಲಿಗೋ ಎಳೆದುಕೊಂಡು ಹೋಗ್ತಾ ಇದಾನೆ ಇಂವ ಅಂತ ನಿಮ್ಮ ಮನಸಿಗೆ ಬಂದಿದೆ ಅಂತ ಗೊತ್ತು. ಸದರಿ ಪೀಠಿಕೆ ಯಾಕೆ ಹಾಕಿದೆ ಅಂತ ಈಗ ವಿಷಯಕ್ಕೆ ಬರ್ತೀನಿ.

ಶ್ರೀಎಚ್ ಎಲ್ ಕೇಶವಮೂರ್ತಿ ಅವರ ಭೇಟಿ ಮತ್ತೊಮ್ಮೆ ಆಯಿತು ಅಂದೆ. ಇವರ ಭೇಟಿ ಮೊದಲೇ ಆಗಿತ್ತು. ಈ ಬಾರಿ ಸಿಕ್ಕಿದಾಗ ನಾ. ಕಸ್ತೂರಿ ಅವರ ವಿಷಯ ಬಂತು. ಕಸ್ತೂರಿ ಅವರ ಸಮಗ್ರ ಸಾಹಿತ್ಯ ಕುರಿತ ಹಾಗೆ ಸಾಹಿತ್ಯ ಅಕಾಡೆಮಿಗೆ ಶ್ರೀಎಚ್ ಎಲ್ ಕೇಶವಮೂರ್ತಿ ಅವರು ಕೆಲಸ ಮಾಡುತ್ತಿದ್ದರು. ಅದರ ವಿಷಯ ಹೇಳುತ್ತಾ ಡಿಸೆಂಬರ್ 25 ನಾ. ಕಸ್ತೂರಿ ಅವರು ಜನಿಸಿದ ದಿವಸ, ಅವತ್ತೇ ಹಾಸ್ಯೋತ್ಸವ ಮಾಡಿದರೆ ಹೇಗೆ ಎನ್ನುವ ಸಲಹೆ ನೀಡಿದರು.

ಕನ್ನಡ ಹಾಸ್ಯ ಪ್ರಾಕಾರಕ್ಕೆ ತಮ್ಮ ಅಮೂಲ್ಯ ಕೃತಿಗಳ ಮೂಲಕ ಒಂದು ವಿಶಿಷ್ಟ ಸ್ಥಾನ ಗಳಿಸಿಕೊಟ್ಟ ಕಸ್ತೂರಿ ಅವರ ಹುಟ್ಟಿದ ದಿವಸ ಹಾಸ್ಯೋತ್ಸವದ ದಿವಸ ಎಂದು ನಿರ್ಧಾರವಾಯಿತು.

ಈ ವೇಳೆಗೆ ಹಾಸ್ಯಬ್ರಹ್ಮ ನಗೆ ಬರಹಗಾರರ ಒಕ್ಕೂಟವನ್ನು ಒಂದು ಟ್ರಸ್ಟ್ ಆಗಿ ನೋಂದಣಿ ಮಾಡಬೇಕಾದ ಯೋಚನೆ ಬಂದಿತು. ಅದರ ಸಂಬಂಧ ಶ್ರೀ ಅರಾ ಮಿತ್ರ ಅವರನ್ನು ಮಹಾ ಪೋಷಕರು ಎಂಬುದಾಗಿ ಒಪ್ಪಿಗೆ ಪಡೆದೆವು. ಶ್ರೀ ಮಿತ್ರಾ ಅವರು ಹಿಂದಿನoತೆಯೇ ಮುಂದೆ ಸಹ ನಮ್ಮೆಲ್ಲ ಚಟುವಟಿಕೆಗಳಿಗೆ ಸ್ಫೂರ್ತಿ ಆದರು. ಕೊರವಂಜಿ ಅಪರಂಜಿ ಟ್ರಸ್ಟ್ ಈಗಾಗಲೇ ನೋಂದಣಿ ಆಗಿತ್ತು. ಮುಂದೆ ಈ ಎರಡೂ ಟ್ರಸ್ಟ್‌ಗಳು ಸೇರಿ ಹಾಸ್ಯ ಸಾಹಿತ್ಯ ಲೋಕದಲ್ಲಿ ಇತಿಹಾಸ ಸೃಷ್ಟಿಸಿದವು. ಅದರ ಕೆಲವು ನೆನಪುಗಳನ್ನು ಮುಂದೆ ಹಂಚಿಕೊಳ್ಳುತ್ತೇನೆ…

ಮುಂದಿನ ಸಂಚಿಕೆಗೆ…

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ