ಎದೆಯ ಬೀದಿಯಲಿ ಬಿದ್ದ ಸಾಲುಗಳನ್ನು ಹೃದಯದ ಜೋಳಿಗೆಗೆ ತುಂಬಿದ್ದೇನೆ
ಎದೆಯ ಕಡಲ ಒಲವ ದೋಣಿಯ ಪಯಣವನ್ನು ನಿಲ್ಲಿಸಿದ್ದೇನೆ

ಎದೆಗೂಡಿನ ಒಲವ ಹಕ್ಕಿ ಹಾಡ ಮರೆತು ಮೌನದ ಕೋಟೆ ಕಟ್ಟಿಕೊಂಡಿದೆ
ಮಾಗಿ ಸಂಜೆಯಲಿ ವಿರಹದ ಬಿಕ್ಕಳಿಕೆಗೆ ಬಯಲ ಧ್ಯಾನದಲ್ಲಿದ್ದೇನೆ

ನದಿಯನ್ನೇ ತುಂಬಿಸಿಕೊಂಡ ಕಣ್ಣ ಬಟ್ಟಲುಗಳು ಎಂದೂ ಖಾಲಿಯಾಗುವುದೆ ಇಲ್ಲ
ವಿರಹದ ರಾತ್ರಿಯಲಿ ಒಲವಿನ ಕನಸುಗಳ ದಾರಿಯಲಿ ನಡೆಯುತ್ತಿದ್ದೇನೆ

ಕಣ್ಣೀರು ಕಾಲುದಾರಿಯ ಮಾಡಿವೆ ನಿನ್ನೂರಿನ ಹಾದಿಯ ಕಡೆಗೆ
ಗಾಯಗೊಂಡ ಕನಸುಗಳ ಕರಪತ್ರ ಪ್ರೇಮದ ಬಜಾರಿನಲ್ಲಿ ಹಂಚಿದ್ದೇನೆ

ನೆನಪುಗಳು ಎದೆಯ ಹಿಂಡುತಿವೆ ನೆನೆದು
ನಿನ್ನೊಂದಿಗೆ ಕಳೆದ ಬೇಸಿಗೆ
ನಿನ್ನ ನೆನಪಿನ
ಬೆಳಕಲಿ ಕಳೆದುಕೊಂಡ ಖುಷಿಯ
ಹುಡುಕುತ್ತಿದ್ದೇನೆ

ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು