ಹೋದಹೋದಂತೆ ತಾವು ಮಾಡುತ್ತಿದ್ದ ಕೆಲಸವನ್ನೂ ಬಿಟ್ಟು, ಇದನ್ನೇ ಮಾಡಲು ತೊಡಗಿ ಸಿಕ್ಕಾಪಟ್ಟೆ ದುಡ್ಡು ಮಾಡಿದರಂತೆ. ಇದ್ದ ಒಬ್ಬನೇ ಮಗನಿಗೂ ಕೂಡ ಬೇರೆ ಕಡೆ ಯಾಕೆ ಕೆಲಸ ಮಾಡ್ತೀಯಾ ನನ್ನ ಕೃಷಿ ಕೆಲಸವನ್ನೇ ಮಾಡು ಅಂತ ಅವನನ್ನೂ ತಮ್ಮ ಜೊತೆಗೆ ಸೇರಿಸಿಕೊಂಡರು. ಮಗ ಮದುವೆಯ ವಯಸ್ಸಿಗೆ ಬಂದಾಗ ಭಾರತದಲ್ಲೇ ಒಂದು ಹುಡುಗಿಯನ್ನೂ ಹುಡುಕಿದರಂತೆ. ಅಮೆರಿಕೆಯಲ್ಲಿ ಇರೋ ಹುಡುಗ ಅಂದರೆ ಹುಡುಗಿ ಬೇಡ ಅನ್ನುತ್ತಾಳೆಯೇ? ಕೂಡಲೇ ಹೂಂ ಅಂದಳು. ಆದರೆ ಕೆಲವು ದಿನಗಳ ನಂತರ ಅವನನ್ನು ಮದುವೆಯಾಗಲಾರೆ ಅಂದಳಂತೆ. ಯಾಕೆ ಅಂತ ಕೇಳಿದಾಗ “ಅಮೆರಿಕೆಗೆ ಹೋಗಿ ಒಬ್ಬ ರೈತನನ್ನು ಮದುವೆಯಾಗುವುದೇ? No way!” ಅಂದಳಂತೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೆರಡನೆಯ ಬರಹ
ಕ್ಯಾಲಿಫೋರ್ನಿಯಾದ ಭೂಮಿಯನ್ನು ಮುಟ್ಟಿದಾಗ ಭಾರತಕ್ಕೆ ಬಂದಷ್ಟೇ ಖುಷಿಯಾಗಿತ್ತು! ಹವಾಗುಣ ನಮ್ಮ ದಕ್ಷಿಣ ಭಾರತದ ಹವಾಮಾನವನ್ನೇ ಹೋಲುತ್ತಿತ್ತು. ನಮ್ಮನ್ನು ವಿಮಾನ ನಿಲ್ದಾಣದಿಂದ ಕರೆದೊಯ್ಯಲು ಅಕ್ಕ ವಿದ್ಯಾ ಹಾಗೂ ಕೃಷ್ಣ ಮಾಮ ಬಂದಿದ್ದರು. ಅವಳನ್ನು ಭೇಟಿಯಾಗುವ ನನ್ನ ಎಷ್ಟೋ ವರ್ಷಗಳ ಕನಸು ಅವತ್ತು ನನಸಾಗಿತ್ತು. ನನ್ನ ಅಮ್ಮನನ್ನೇ ಭೇಟಿಯಾದಷ್ಟು ಖುಷಿಪಟ್ಟೆ. ಅವರ ಮನೆ ವಿಶಾಲವಾಗಿತ್ತು. ತುಂಬಾ ಲಕ್ಷಣವಾಗಿತ್ತು. ದೊಡ್ಡ ಹಾಲ್ ಹಾಗೂ ಕೊಣೆಗಳು. ಬಚ್ಚಲು ಮನೆ ಕೂಡ ತುಂಬಾ ದೊಡ್ಡದಿತ್ತು. ಹಿತ್ತಿಲಲ್ಲಿ ಕೂಡ ಹಸಿರಿನಿಂದ ಕಂಗೊಳಿಸುವ ತೋಟ. ಕ್ರಿಷ್ ಮಾಮ ಅವರಿಗೆ ತೋಟ ಮಾಡುವ ಹವ್ಯಾಸ ಇದ್ದಿದ್ದು ತುಂಬಾ ಎದ್ದು ಕಾಣುತ್ತಿತ್ತು. ಅಲ್ಲಿ ಹಲವಾರು ಹಣ್ಣಿನ ಗಿಡಗಳು ಇದ್ದವು. ಟೊಮಾಟೊಗಳಂತು ಸಿಕ್ಕಾಪಟ್ಟೆ ಬೆಳೆದಿದ್ದವು. ಅವರ ಆಸ್ಥೆ, ಉತ್ಸಾಹ ಕಂಡು ಬೆರಗಾದೆ. ಇಂತಹ ಒಳ್ಳೆಯ ಹವ್ಯಾಸಗಳು ಇದ್ದವರ ಮುಖದ ಹೊಳಪು ಬೇರೆಯೇ ಇರುತ್ತದೆ.
ಅವರಿಬ್ಬರೂ ನಮ್ಮನ್ನು ಎಷ್ಟೊಂದು ಪ್ರೀತಿಯಿಂದ ನೋಡಿಕೊಂಡರು ಅಂದರೆ ಒಂದು ಅಪರಿಚಿತ ಜಾಗದಲ್ಲಿ ಅವರನ್ನು ಮೊದಲ ಸಲ ಭೆಟ್ಟಿಯಾಗುತ್ತಿದ್ದೇವೆ ಎಂಬ ಭಾವನೆ ಒಂದು ಕ್ಷಣವೂ ನಮಗೆ ಬರಲೆ ಇಲ್ಲ. ಅವಳು ನನ್ನ ಅಮ್ಮನ ಆಪ್ತ ಸ್ನೇಹಿತೆಯೂ ಆಗಿದ್ದರಿಂದ ಅವಳ ಬಳಿ ಎಷ್ಟೊಂದು ವಿಷಯಗಳನ್ನು ನಾನು ಆಗಾಗ ಚರ್ಚಿಸುತ್ತಿದ್ದೆ. ಫೋನಿನಲ್ಲಿ ಈಗಾಗಲೇ ಮಾತಾಡಿದ್ದ ಎಷ್ಟೋ ವಿಷಯಗಳನ್ನೂ ಕೂಡ ಎದುರು ಬದರು ಕುಳಿತು ಮಾತಾಡುವ ಖುಷಿಯೇ ಬೇರೆ. ನನ್ನ ಅಮ್ಮ (ದಿ. ಪರಿಮಳ ಕುರ್ತಕೋಟಿ) ಆಗಿನ ಕಾಲದಲ್ಲಿಯೇ ತುಂಬಾ ದಿಟ್ಟತನದಿಂದ ಬೆಳೆದವಳು. ಅವಳು ಲೇಖಕಿ ಕೂಡ ಆಗಿದ್ದರಿಂದ, ತಪ್ಪು ಅನಿಸಿದ ಎಷ್ಟೋ ವಿಷಯಗಳ ಕುರಿತು ನಿರ್ಭಿಡೆಯಿಯಿಂದ ಬರೆಯುತ್ತಿದ್ದಳು. ಅವಳು ಆಗಿನ ಕಾಲದಲ್ಲಿ ಇದ್ದ ವಿಧೇಯ ಹೆಣ್ಣುಮಕ್ಕಳ ತರಹ ಇರುವುದನ್ನು ತಿರಸ್ಕರಿಸಿದ್ದಳು. ಹಾಗಂತ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ ಅಂತಲ್ಲ, ಆದರೆ ಬರಿ ಅಡಿಗೆ ಮಾಡುವುದಕ್ಕೆ ಹೆಣ್ಣು ಹುಟ್ಟಿಲ್ಲ ಅನ್ನುವ ಧೋರಣೆ ಅವಳದಾಗಿತ್ತು. ಒಂದು ಸಂಸಾರ ಅಂದ ಮೇಲೆ ಎಲ್ಲರೂ ಅದನ್ನು ಸಮಾನವಾಗಿ ತೂಗಿಸಿಕೊಂಡು ಹೋಗಬೇಕು ಎಂಬುದು ಅವಳ ವಾದವಾಗಿತ್ತು. ಹೀಗಾಗಿ ಅವಳ ಗೆಳತಿಯಾಗಿದ್ದ ವಿದ್ಯಾ ಕೂಡ ಹಾಗೆಯೇ ಇರಬಹುದು ಅಂತ ನಾನು ಅಂದುಕೊಂಡಿದ್ದೆ.
ಅವರ ಮನೆಗೆ ಹೋದ ತಕ್ಷಣ ಅಡಿಗೆ ಮನೆ ನೋಡಿದಾಗ, ಇವಳಿಗೆ ಭಾರತೀಯ ಅಡಿಗೆ ಏನೂ ಮಾಡಲಿಕ್ಕೆ ಬರಲಿಕ್ಕಿಲ್ಲ ಅಂತಲೇ ಅನಿಸಿತು. ಅವಳು ಮೊದಲೇ ಪ್ರಗತಿಪರ ಹೆಣ್ಣುಮಗಳು, ಅದರಲ್ಲೂ ಅಮೆರಿಕೆಗೆ ಬಂದು ಈಗಾಗಲೇ 40 ವರ್ಷಗಳಾಗಿತ್ತು. ಬಹುಶಃ ನಾವು ಅಲ್ಲಿ ಇರುವವರೆಗೆ ಹೊರಗಿನ ಊಟ, ಇಲ್ಲವೇ ವಿದೇಶಿ ಊಟವೆ ಗತಿ ಅಂತ ಅಂದುಕೊಂಡೆ. ಅವಳ ಅಡಿಗೆ ಮನೆಯೇನೋ ವಿಶಾಲವಾಗಿತ್ತು, ತುಂಬಾ ಸುಂದರವಾಗಿತ್ತು ಆದರೆ ನನಗೆ ಇಷ್ಟವಾದ ಹಚ್ಚಿದ ಕೆಂಪು ಅವಲಕ್ಕಿ ಕೂಡ ಮಾಡಲೂ ಇವಳಿಗೆ ಬರುತ್ತದೋ ಇಲ್ಲವೋ ಅಂತ ನನಗೆ ಸಂಶಯ ಮೂಡಿತು. ಆದರೆ ನಾನು ಅಂದುಕೊಂಡಿದ್ದು ಸುಳ್ಳು ಮಾಡಿದ ನನ್ನ ಅಕ್ಕ ಮನೆಯಲ್ಲಿ ಇದ್ದಾಗೆಲ್ಲ ಭಾರತೀಯ ಶೈಲಿಯ ಅಡಿಗೆಯನ್ನು ತನ್ನ ಕೈಯಾರೆ ಮಾಡಿ ನಮಗೆಲ್ಲ ಉಣಬಡಿಸಿದಳು! ಅವಲಕ್ಕಿಯನ್ನೂ ಕೂಡ ಅವಳು ಮರೆತಿರಲಿಲ್ಲ. ಥೇಟು ನನ್ನ ಅಮ್ಮನ ತರಹವೆ. ಅಮ್ಮ ಕೂಡ ಯಾವಾಗಲೂ ಅಡಿಗೆ ಮನೆಯಲ್ಲಿ ಇರುವುದನ್ನು ವಿರೋಧಿದ್ದರೂ ಹೊಸ ಹೊಸ ತಿನಿಸುಗಳನ್ನು ಆಗಾಗ ಮಾಡುತ್ತಿದ್ದಳು. ಹೊಸ ಪ್ರಯೋಗಗಳನ್ನು ಕೂಡ ಮಾಡುತ್ತಿದ್ದಳು. ಭಾರತೀಯರು ಎಲ್ಲಿಗೆ ಹೋದರೂ, ಎಷ್ಟೇ ಪ್ರಗತಿಪರ ಚಿಂತನೆಗಳಿದ್ದರೂ ತಮ್ಮ ಸ್ವಂತಿಕೆಯನ್ನು, ಭಾರತೀಯ ಸೊಗಡನ್ನು ಬಿಡಲಾರರು ಎಂಬುದು ಅಲ್ಲಿ ಇರುವ ತನಕ ಮತ್ತೆ ಮತ್ತೆ ಸಾಬೀತಾಗಿತ್ತು.
ಅಲ್ಲಲ್ಲಿ ವಿದೇಶಿಯರನ್ನು ಕಾಣುತ್ತಿದ್ದೆ ಎಂಬುದನ್ನು ಬಿಟ್ಟರೆ, ಅಲ್ಲಿ ಹೆಚ್ಚು ಕಡಿಮೆ ಭಾರತೀಯ ವಾತಾವರಣವೇ ಇತ್ತು. ಎಷ್ಟೋ ಭಾರತೀಯ ತಿಂಡಿ ತಿನಿಸುಗಳ ಹೊಟೇಲುಗಳು, ದಿನಸಿ ಅಂಗಡಿಗಳು ಕೂಡ ಅಲ್ಲಿದ್ದವು. ವಿಚಿತ್ರ ಎಂದರೆ ಅಲ್ಲಿ ಮಳೆಯೇ ಬರೋದಿಲ್ಲ ಅಂತೆ. ಬಿದ್ದರೂ ಅತಿ ಕಡಿಮೆ ಮಳೆ. ಒಂದು ಸಲ ಹೀಗೆ ಬೀಳುತ್ತಿದ್ದ ಅತಿ ಕಡಿಮೆ ಮಳೆಯೇ ಸ್ವಲ್ಪ ಜಾಸ್ತಿ ಬಿದ್ದಿದ್ದಕ್ಕೆ ಅಲ್ಲಿನ ಬಹುತೇಕ ಮನೆಗಳಲ್ಲಿ “ಸೋರುತಿಹುದು ಮನೆಯ ಮಾಳಿಗಿ” ಆಗಿತ್ತಂತೆ. ಅದೂ ಅಲ್ಲದೆ ಅಲ್ಲಿ ನೀರಿನ ಸೆಲೆಯೆ ಇಲ್ಲ. ನೀರನ್ನು ತುಂಬಾ ದೂರದಿಂದ ಅಲ್ಲಿಗೆ ತರುತ್ತಾರೆ. ಎಷ್ಟೋ ಕಡೆಗೆ ಮನೆಯ ಮುಂದೆ ಕೃತಕ ಹುಲ್ಲು ಹಾಸು ಹಾಕಿದರೆ tax ನಲ್ಲಿ ಕಡಿತ ಕೊಟ್ಟು ಪ್ರೋತ್ಸಾಹಿಸುತ್ತಾರೆ ಅಂತ ಅಕ್ಕ ಹೇಳುತ್ತಿದ್ದಳು! ಯಥೇಚ್ಛವಾಗಿ ನೀರನ್ನು ಹಾಳು ಮಾಡುತ್ತಿರುವ ನಮ್ಮ ದೇಶಕ್ಕೂ ಇದೆ ಪರಿಸ್ಥಿತಿ ಇವತ್ತಲ್ಲ ನಾಳೆ ಬಂದೆ ಬರುತ್ತದೆ. ಆದರೆ ನಮಗೆ ಬುದ್ಧಿ ಬರುವುದು ಯಾವಾಗ?!
ಬಹುಶಃ ಭಾರತದ ಹವಾಗುಣ ಇದೆ ಎಂಬ ಕಾರಣಕ್ಕೋ ಏನೋ ಕ್ಯಾಲಿಫೋರ್ನಿಯಾದಲ್ಲಿ ತುಂಬಾ ಜನ ಭಾರತೀಯರು ವಾಸವಾಗಿದ್ದಾರೆ. ಅಮೆರಿಕೆಯಲ್ಲಿಯೇ ಅತಿ ಹೆಚ್ಚು ಭಾರತೀಯರು ವಾಸವಾಗಿರುವುದು ಇದೆ ರಾಜ್ಯದಲ್ಲಂತೆ. ಅಲ್ಲಿನ ಕೈ ತೋಟಗಳನ್ನು ನೋಡಿ ನನಗೆ ಖುಷಿ ಆಗುತ್ತಿತ್ತು. ತೋಟಗಾರಿಕೆ, ವ್ಯವಸಾಯದ ಬಗ್ಗೆ ನನಗಿದ್ದ ಒಲವನ್ನು ಗ್ರಹಿಸಿದ ಅಕ್ಕ-ಬಾವ ನನಗೆ ಒಬ್ಬ ವಿಶೇಷ ವ್ಯಕ್ತಿಯ ಬಳಿ ಕರೆದುಕೊಂಡು ಹೋದರು. ಅವರ ಹೆಸರು ಟ್ರೀನೊ. ಅವರದೊಂದು ಸಣ್ಣ ತೋಟವಿತ್ತು. ಅದರಲ್ಲೇ ವೈವಿಧ್ಯಮಯ ಹಣ್ಣಿನ ಗಿಡಗಳನ್ನು ಬೆಳೆದಿದ್ದರು. ಅವರ ಪೇರಳೆ ಗಿಡಗಳು ವಿಶೇಷವಾಗಿದ್ದವು. ಒಂದೇ ಮರದಲ್ಲಿ ಹಲವಾರು ಬಗೆಯ ಪೇರಲೆ ಹಣ್ಣುಗಳನ್ನು ಅವರು ಬೆಳೆಸಿದ್ದರು. ಆತ ಮೆಕ್ಸಿಕನ್ ಮೂಲದವನು. ಅವರಿಗೆ ಇಂಗ್ಲೀಶ್ ಕೂಡ ಅಷ್ಟೊಂದು ಚೆನ್ನಾಗಿ ಬರುತ್ತಿರಲಿಲ್ಲ. ಅವರಿಗೆ ಅದಾಗಲೇ 90 ವರ್ಷ ವಯಸ್ಸಾಗಿತ್ತು. ಆದರೆ ನನಗಿಂತಲೂ ಹೆಚ್ಚಿನ ಸ್ಪೂರ್ತಿ ಅವರಲ್ಲಿ ಕಂಡೆ. ನಡೆಯುವಾಗ ಬಿದ್ದಾನು ಅಂತ ಅವನಿಗೊಂದು ವಿದ್ಯುತ್ ಚಾಲಿತ ಗಾಲಿ ಖುರ್ಚಿ ವ್ಯವಸ್ಥೆ ಮಾಡಿದ್ದರು. ಆದರೂ ನಮಗೆ ಏನೋ ತೋರಿಸುವ ಭರದಲ್ಲಿ ಎದ್ದು ಅತ್ತಿತ್ತ ಅಡ್ಡಾಡಿ ಖುಷಿಯಿಂದ ಎಲ್ಲ ಹಣ್ಣಿನ ಮರಗಳನ್ನು ತೋರಿಸುತ್ತಿದ್ದರು. ಕಬ್ಬನ್ನು ಕೂಡ ಅವರು ಬೆಳೆದಿದ್ದರು. ನಮಗೆ ಅದನ್ನು ಕತ್ತರಿಸಿ ತಿನ್ನಲು ಕೊಟ್ಟರು. ರೈತರೂ ಎಲ್ಲಿದ್ದರೂ ಧಾರಾಳಿಗಳೆ ಬಿಡಿ! ಇಷ್ಟೇ ಸಣ್ಣ ಜಾಗದಲ್ಲಿ ಇಂತಹದೊಂದು ಸ್ವರ್ಗ ಸೃಷ್ಟಿಸಲು ಸಾಧ್ಯವೇ ಅಂತ ನಾವು ಬೆರಗಿನಿಂದ ಇಡೀ ತೋಟದಲ್ಲಿ ಅಡ್ಡಾಡಿದೆವು. ಒಂದಿಷ್ಟು ಹಣ್ಣುಗಳನ್ನೂ ಕೊಂಡೆವು. ವಾಹ್ ಅವರೊಂದಿಗಿನ ಭೇಟಿ ಮರೆಯಲು ಸಾಧ್ಯವೇ ಇಲ್ಲ! ನನಗೂ ಮುಂದೊಮ್ಮೆ ತೋಟ ಮಾಡಿ ಟ್ರೀನೋ ತರಹವೆ ಇರಬೇಕು ಎಂಬ ಆಸೆಯಿದೆ ಅಂತ ಅಕ್ಕ ಭಾವನೆದುರು ಹೇಳಿದೆ. ನಿನ್ನ ಆಸೆ ಆದಷ್ಟು ಬೇಗ ಫಲಿಸಲಿ ಅಂತ ಅಂದರು. ನಾನಾಗಲೇ ಭಾರತದಲ್ಲಿ ಒಂದು ಹೊಲವನ್ನು ಕೂಡ ಖರೀದಿಸಿಟ್ಟಿದ್ದೆ. ಮರಳಿ ಹೋದ ಮೇಲೆ ವ್ಯವಸಾಯಕ್ಕೆ ಧುಮುಕುವ ಬಯಕೆ ಇತ್ತು. ಅದಕ್ಕೆ ಆಶಾಳ ಬೆಂಬಲ ಕೂಡ ಇತ್ತು.
“ನೀನು ಭಾಳ ಲಕ್ಕಿ ಇದ್ದಿ, ಯಾಕಂದರ ನಿನಗ ಸಪೋರ್ಟ್ ಕೊಡಲಿಕ್ಕೆ ಆಶಾ ಇದ್ದಾಳ” ಅಂದಳು ಅಕ್ಕ. ರೈತ ಆಗುತ್ತೀನಿ ಅಂದರೆ ಬೆಂಬಲ ಕೊಡುವ ಸಂಗಾತಿಗಳು ಭಾಳ ಅಪರೂಪ. ಅದರ ಕುರಿತು ಅಕ್ಕ ಹೇಳಿದ ಒಂದು ಕತೆ ಈ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತೆ ಇತ್ತು. ಒಂದು ಭಾರತೀಯ ಕುಟುಂಬ ತುಂಬಾ ಹಿಂದೆ ಕ್ಯಾಲಿಫೋರ್ನಿಯಾಕ್ಕೆ ಬಂದು ನೆಲೆಸಿದರಂತೆ. ಪಕ್ಕದಲ್ಲಿದ್ದ ಒಂದು ಸಣ್ಣ ಜಾಗದಲ್ಲಿ ತಮಗೆ ಬೇಕಾದ ತರಕಾರಿ ಬೆಳೆಯಲು ಶುರುಮಾಡಿದರು. ಕ್ರಮೇಣ ತಾವು ಬಳಸಿದರೂ ಮಿಕ್ಕಿದ್ದ ತರಕಾರಿಗಳನ್ನು ಅಲ್ಲಿನ ಭಾರತೀಯ ಕಿರಾಣಿ (grocery) ಅಂಗಡಿಗಳಲ್ಲಿ ಮಾರಲು ತೊಡಗಿದರು. ಅವರ ತಾಜಾ ತರಕಾರಿಗಳಿಗೆ ಬೇಡಿಕೆ ಹೆಚ್ಚಾದಂತೆ ಇನ್ನೂ ದೊಡ್ಡ ಜಾಗ ತೆಗೆದುಕೊಂಡು ಹೆಚ್ಚು ಹೆಚ್ಚು ಬೆಳೆಸಲು ತೊಡಗಿದರು. ಹೋದಹೋದಂತೆ ತಾವು ಮಾಡುತ್ತಿದ್ದ ಕೆಲಸವನ್ನೂ ಬಿಟ್ಟು, ಇದನ್ನೇ ಮಾಡಲು ತೊಡಗಿ ಸಿಕ್ಕಾಪಟ್ಟೆ ದುಡ್ಡು ಮಾಡಿದರಂತೆ. ಇದ್ದ ಒಬ್ಬನೇ ಮಗನಿಗೂ ಕೂಡ ಬೇರೆ ಕಡೆ ಯಾಕೆ ಕೆಲಸ ಮಾಡ್ತೀಯಾ ನನ್ನ ಕೃಷಿ ಕೆಲಸವನ್ನೇ ಮಾಡು ಅಂತ ಅವನನ್ನೂ ತಮ್ಮ ಜೊತೆಗೆ ಸೇರಿಸಿಕೊಂಡರು. ಮಗ ಮದುವೆಯ ವಯಸ್ಸಿಗೆ ಬಂದಾಗ ಭಾರತದಲ್ಲೇ ಒಂದು ಹುಡುಗಿಯನ್ನೂ ಹುಡುಕಿದರಂತೆ. ಅಮೆರಿಕೆಯಲ್ಲಿ ಇರೋ ಹುಡುಗ ಅಂದರೆ ಹುಡುಗಿ ಬೇಡ ಅನ್ನುತ್ತಾಳೆಯೇ? ಕೂಡಲೇ ಹೂಂ ಅಂದಳು. ಆದರೆ ಕೆಲವು ದಿನಗಳ ನಂತರ ಅವನನ್ನು ಮದುವೆಯಾಗಲಾರೆ ಅಂದಳಂತೆ. ಯಾಕೆ ಅಂತ ಕೇಳಿದಾಗ “ಅಮೆರಿಕೆಗೆ ಹೋಗಿ ಒಬ್ಬ ರೈತನನ್ನು ಮದುವೆಯಾಗುವುದೇ? No way!” ಅಂದಳಂತೆ. ಇದು ನಮ್ಮವರು ರೈತರಿಗೆ ಕೊಡುವ ಕಿಮ್ಮತ್ತು! ಈ ಕತೆಯನ್ನು ಕೇಳಿದಾಗ ಹೌದು ವಿದ್ಯಾ ನಾನು ನಿಜಕ್ಕೂ ಲಕ್ಕಿ ಅಂದೆ!
ಅಲ್ಲಿ ಇರುವವರೆಗೂ ಹಲವಾರು ಕಡೆ ಕರೆದುಕೊಂಡು ಹೋದರು. ಒಂದು ದಿನ ವೈನ್ ಯಾರ್ಡ್ಗೆ ಹೋಗಿದ್ದೆವು. ಎಷ್ಟೋ ವರ್ಷಗಳಿಂದ ಸಂಗ್ರಹಿಸಿ ಇಟ್ಟಿದ್ದ ವೈನ್ ಪೀಪಾಯಿಗಳು ಅಲ್ಲಿದ್ದವು. ಬಾಯಲ್ಲಿ ನೀರು ಬಂತು. ಒಂದು ದಿನ ಲಾಸ್ ವೇಗಾಸ್ ಗೂ ಬೆಳಗಿನ ಸಮಯದಲ್ಲಿ ಹೋದೆವು. ಬರಿ ಮೋಜು ಮಸ್ತಿ, ಜೂಜಾಟದ ತಾಣವಾಗಿರುವ ಅಲ್ಲಿಗೆ ಮಗಳನ್ನು ರಾತ್ರಿ ಕರೆದುಕೊಂಡು ಹೋಗಲಾದೀತೇ! ಆಗ ಹೊಸ ವರ್ಷದ ಸಂಭ್ರಮ ಬೇರೆ. ಆದರೆ ಅಲ್ಲಿಗೆ ಹೋಗಿ ಜೂಜಾಟ ಆಡಿ ಬಂದಿಲ್ಲ ಅಂದರೆ ಹೇಗೆ? ಬರಿ ನೂರು ಡಾಲರ್ ಮಿತಿ ಕೊಟ್ಟಿದ್ದಳು ಆಶಾ. ಹೀಗಾಗಿ ಇಬ್ಬರೂ ಸೇರಿ ಜೂಜಾಡಿ ಅಷ್ಟೇ ಸೋತು ಬಂದೆವು! ಅಲ್ಲೊಂದು ಭಾರತೀಯ ಹೊಟೇಲ್ ಇದೆ. ಅದರ ಹೆಸರು ಗಾಂಧಿ ಅಂತಿತ್ತು! ಅಲ್ಲಿಯೇ ಊಟ ಮಾಡಿ ಮರಳಿದೆವು.
(ಮುಂದುವರಿಯುವುದು..)
(ಹಿಂದಿನ ಕಂತು: ವೃದ್ಧಾಪ್ಯ ಮತ್ತು ಸಮಾಜ)
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.