”ಎಲ್ಲ ರೀತಿಯ ಭಾರತೀಯ ಜನರು ಇಲ್ಲಿ ಒಂದಾಗಿದ್ದರೂ ಪ್ರತ್ಯೇಕವಾಗಿದ್ದರೂ ಒಬ್ಬರಿಗೊಬ್ಬರು ಪ್ರೀತಿ ತೋರುತ್ತಾರೆ. ಕಾಲು ನೋವಾದವರು ಗೋಡೆ ಸಿಕ್ಕೊಡನೆ ಒರಗಿ ನಿಂತಂತೆ. ಅತ್ತಿಂದಿತ್ತ ಸಿಂಧೂರ ಇಟ್ಟ ಹೆಂಗಸರು, ನಮಾಜು ಮಾಡುವ ಮುಸ್ಲೀಮರೂ ಕಾಣಿಸುತ್ತಾರೆ. ಹೆಚ್ಚಿನ ಸಂಪಾದನೆಗೆ, ಹೆಚ್ಚಿನ ಓದಿಗೆಂದು, ಊರು ಬಿಡಬೇಕಾದ ಕಾಲವೊಂದು ಕೂಡಿ ಬಂದಾಗ ಹೊರಟ ಇವರ ಪಯಣ ರೂಪಾಯಿಯಲ್ಲಿ ಡಾಲರ್ ಗುಣಿಸುತ್ತಾ, ಊರುಮನೆಯನ್ನು ನೆನೆಯುತ್ತಾ, ಇಲ್ಲಿನ ಸ್ವಚ್ಛಂದ ಬದುಕನ್ನು ಅನುಭವಿಸುತ್ತಾ ಹಿಂತಿರುಗಲಾರದ ಸಿಕ್ಕಿನೊಳಗೆ ಸಿಕ್ಕಾಗಿರುತ್ತದೆ”
ಸುಜಾತಾ ಎಚ್.ಆರ್. ಬರೆಯುವ ತಿರುಗಾಟ ಕಥಾನಕದ ಮೂರನೆಯ ಕಂತು.

ಮನುಷ್ಯ ಹೋದೆಡೆಯೆಲ್ಲ ತನ್ನ ಊರು ತನ್ನ ಭಾಷೆ, ತನ್ನ ಕಲೆಯ ಪರಿಭಾಷೆಯನ್ನು ಹೊತ್ತೇ ಸಾಗುತ್ತಾನೆ. ಹವಾಮಾನ ವೈಪರಿತ್ಯವೋ… ಆರ್ಥಿಕ ಇಳಿಮುಖವೋ…. ಅನಾಹುತಗಳಿಂದ ಪಾರಾಗಿ ನೆಲೆಯಾಗುವ ಛಲವೋ….
ಜನವಸತಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುತ್ತಾ ಜಗತ್ತನ್ನು ವಿಶಾಲವಾಗಿಯೂ ಅಂತೇ ಅಂಗೈಲ್ಲಿಡುವ ಸಣ್ಣ ಮಾದರಿಯನ್ನಾಗಿಯೂ ಉಳಿಸಿಕೊಂಡು, ಅದರೊಳಗೆ ತನ್ನ ಗಾಢ ಚಹರೆಯ ಚೆಲುವನ್ನು ವಲಸೆ ಬಂದ ಗೂಡನ್ನು ತನ್ನ ನೆರಳಂತೆ ಉಳಿಸಿಹೋಗುವ ಒಳತುಡಿತವೇ ದೇಶಕೋಶಗಳನ್ನು ಖಂಡತುಂಡವಾಗಿಸಿ, ನೀರ ಗೆರೆಯ ಸುತ್ತಲೇ ಕಟ್ಟಿಕೊಂಡ ನಾಗರೀಕತೆಯನ್ನೂ ಮೈಗೂಡಿಸಿಕೊಳ್ಳುತ್ತ ಒಂದಾಗಿಸುತ್ತದೆ.

ಓ ದೇಶಪ್ರೇಮವೇ! ಅದು ಬರಿ ಮಣ್ಣಲ್ಲ. ಅದು ತನ್ನ ದೇಹದ ರೂಪವನ್ನು, ಬಣ್ಣವನ್ನು, ತನ್ನ ಬಾಯ ಚಲನೆಯಲ್ಲಿ ಚಲಿಸುವ ಭಾಷೆಯನ್ನು, ಆಂಗಿಕ ಅಭಿನಯವನ್ನು, ರಕ್ತದೊಳಗಿನ ತಂತುಗಳನ್ನು, ಅಂತರ್ಗತವಾಗಿ ಒಲಿದುಬಂದ ನೆನಪುಗಳನ್ನು, ಬಾಂಧವ್ಯವನ್ನು, ಯೋಗ್ಯ ಅಯೋಗ್ಯ ಸಿಟ್ಟು ಸೆಡವು ತಾಳ್ಮೆಯನ್ನು ಕೂಡುತ್ತ ಕಳೆಯುತ್ತ ಒಲಿಯುತ್ತ, ಮುನಿಯುತ್ತ, ಸಂಕೀರ್ಣವಾಗಿರುತ್ತದೆ.

ಅಮೇರಿಕದ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಡಬ್ಬಿಯಲ್ಲಿ ಹಾಕಿ ಕುಲುಕಿದಂತೆ ಪ್ರಪಂಚದ ದೇಸೀಯರೆಲ್ಲ ಕಾಣಿಸುತ್ತಾರೆ. ಏಳು ಸಮುದ್ರ ದಾಟಿ, ಏಳು ಬೆಟ್ಟ ಹತ್ತಿಳಿದು, ಸಮುದ್ರದಾಚೆಗಿನ ತಣ್ಣನೆಯ ಹಸಿರು ಹೊದ್ದ ದೇಶದಲ್ಲಿ ವೈವಿಧ್ಯತೆಯೆಂಬುದು ಎಲ್ಲೆಡೆ ಕಾಣಸಿಗುತ್ತದೆ. ಅಮೇರಿಕಾದಲ್ಲಿ ಭರಿಸಲಾರದ ವೆಚ್ಛವನ್ನು ಸರಿತೂಗಿಸುವುದಕ್ಕಾಗಿಯೋ ಅಮೆರಿಕಾದಲ್ಲಿ ತಮ್ಮ ರಕ್ಷಣೆಗಾಗಿಯೋ…

ಅಲ್ಲಲ್ಲೇ ಗುಂಪುಗುಂಪಾಗಿ ದೇಶದೇಶದವರು ಒಟ್ಟಾಗಿ ಕಾಣಸಿಗುತ್ತಾರೆ. ಪ್ರಪಂಚದ ಜನರನ್ನೆಲ್ಲ ಒಟ್ಟಿಗೆ ಹಾಕಿ ಕುಲುಕಿದಂತೆ ಕಂಡರೂ ನದಿ ಎಳೆದ ವಿಭಿನ್ನ ಚಹರೆಗಳು ಅಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತವೆ. ಚೈನಾ, ಬಾಂಗ್ಲಾ, ನೇಪಾಲೀ, ಪಾಕೀಸ್ತಾನಿಗಳು. ಹತ್ತಿ ಬೆಳೆಯಲೆಂದು ಗುಲಾಮರಾಗಿ ಬಂದ ಆಫ್ರಿಕಾದ ಕಪ್ಪು ಜನರು, ಇರಾನಿಗಳು, ಎಲ್ಲರಿಗಿಂತ ಮುಂಚೆ ಬಂದ ಬುದ್ಧಿವಂತ ಜೂಯಿಶ್ ಗಳು ಇಲ್ಲಿ ಅತ್ಯಂತ ಶ್ರೀಮಂತರು.

ಭಾರತೀಯರೆಂದರೆ ಬ್ರೈನೀಸ್ ಎಂಬುದು ಅಮೆರಿಕನ್ನಿರಿಗಿದೆ. ಏಕೆಂದರೆ ಭಾರತದ ಕಡೆಯಿಂದ ಹಿಂದೆ ಹೋದವರು ಹೆಚ್ಚಿನವರು ವೈದ್ಯರೇ ಆಗಿರುತ್ತಿದ್ದರು. ಹಾಗಾಗಿ ಅವರ ವೃತ್ತಿ ದೆಸೆಯಿಂದ ಗೌರವ ಹೆಚ್ಚು. ಆದರೆ ಇತ್ತೀಚೆಗೆ ಸ್ವಲ್ಪ ಅಸಹನೆಯಿದೆ. ಭಾರತೀಯರ ಟೆಕ್ಕೀಸ್ ಗಳಿಕೆ ಅಮೇರಿಕಾದಲ್ಲಿ ಹೆಚ್ಚಿದೆ.

ಭಾರತ ದೇಶದಲ್ಲಿ ಸಿಕ್ಕ ನೆರೆ ಮನೆಯವರು

ನ್ಯೂಯಾರ್ಕ್ ನಗರದಲ್ಲೊಂದು ಇಂಥ ಪ್ರದೇಶವೇ “ಜಾಕ್ಸನ್ ಹೈಟ್ಸ್”. ಇಲ್ಲಿಗೆ ಕಾಲಿಟ್ಟೊಡನೆ, ಪಾನ್ ಅಂಗಡಿಗಳು ಅಮೇರಿಕಾವನ್ನೇ ಅಳ್ಳಾಡಿಸುವಂತೆ ಕಾಣಿಸುತ್ತವೆ. ಮೈಸೂರಿನ ಬೋಗಾದಿಯ ಗಿಳಿಶಾಸ್ತ್ರದವನು ಪಾನಿ ಪೂರಿ
ಅಂಗಡಿಯ ಅಡ್ರೆಸ್ ನಲ್ಲಿ ತನ್ನ ಭವಿಷ್ಯ ಅರಸುತ್ತಿದ್ದಾನೆ.

ಅಲ್ಲಲ್ಲೇ ಗುಂಪುಗುಂಪಾಗಿ ದೇಶದೇಶದವರು ಒಟ್ಟಾಗಿ ಕಾಣಸಿಗುತ್ತಾರೆ. ಪ್ರಪಂಚದ ಜನರನ್ನೆಲ್ಲ ಒಟ್ಟಿಗೆ ಹಾಕಿ ಕುಲುಕಿದಂತೆ ಕಂಡರೂ ನದಿ ಎಳೆದ ವಿಭಿನ್ನ ಚಹರೆಗಳು ಅಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತವೆ. ಚೈನಾ, ಬಾಂಗ್ಲಾ, ನೇಪಾಲೀ, ಪಾಕೀಸ್ತಾನಿಗಳು. ಹತ್ತಿ ಬೆಳೆಯಲೆಂದು ಗುಲಾಮರಾಗಿ ಬಂದ ಆಫ್ರಿಕಾದ ಕಪ್ಪು ಜನರು, ಇರಾನಿಗಳು, ಎಲ್ಲರಿಗಿಂತ ಮುಂಚೆ ಬಂದ ಬುದ್ಧಿವಂತ ಜೂಯಿಶ್ ಗಳು ಇಲ್ಲಿ ಅತ್ಯಂತ ಶ್ರೀಮಂತರು.

ಬಾಂಗ್ಲಾ ದೇಶದವರು, ಜರ್ದೋಸಿ ಅಂಗಡಿಯವರು, ಮದ್ರಾಸಿ ಹೋಟೆಲ್ಲುಗಳು, ಗುಜರಾತಿ ಸಿಹಿ ತಿಂಡಿಗಳು, ಕಲೋನಿಯಲ್ ಕಾಲದಲ್ಲಿ ಬಂದ ತಮಿಳರು, ಶ್ರೀಲಂಕಾದವರು ಪಕ್ಕ ಅಮೇರಿಕನ್ ಇಂಗ್ಲೀಷ್ ಅಕ್ಸೆಂಟ್ ನಲ್ಲಿ ಮಾತನಾಡಿದರೂ ದೇಹ ಅವರ ದೂರದ ಅನ್ಯ ನೆಲೆಯನ್ನು ತೋರುತ್ತವೆ. ಮೂಲ ದೇಹಾಕೃತಿಗೆ ಹೊಂದದ ಅಮೆರಿಕನ್ ಸ್ಟೈಲಿಶ್ ಬಟ್ಟೆಗಳು ಇನ್ನೊಬ್ಬರ ಬಟ್ಟೆಯನ್ನು ಮೈಮೇಲೆ ಇಳಿಬಿಟ್ಟಂತೆ ಕಾಣಿಸುತ್ತವೆ.

ಎಲ್ಲ ರೀತಿಯ ಭಾರತೀಯ ಜನರು ಇಲ್ಲಿ ಒಂದಾಗಿದ್ದರೂ ಪ್ರತ್ಯೇಕವಾಗಿದ್ದರೂ ಒಬ್ಬರಿಗೊಬ್ಬರು ಪ್ರೀತಿ ತೋರುತ್ತಾರೆ. ಕಾಲು ನೋವಾದವರು ಗೋಡೆ ಸಿಕ್ಕೊಡನೆ ಒರಗಿ ನಿಂತಂತೆ. ಅತ್ತಿಂದಿತ್ತ ಸಿಂಧೂರ ಇಟ್ಟ ಹೆಂಗಸರು, ನಮಾಜು ಮಾಡುವ ಮುಸ್ಲೀಮರೂ ಕಾಣಿಸುತ್ತಾರೆ. ಹೆಚ್ಚಿನ ಸಂಪಾದನೆಗೆ, ಹೆಚ್ಚಿನ ಓದಿಗೆಂದು, ಊರು ಬಿಡಬೇಕಾದ ಕಾಲವೊಂದು ಕೂಡಿ ಬಂದಾಗ ಹೊರಟ ಇವರ ಪಯಣ ರೂಪಾಯಿಯಲ್ಲಿ ಡಾಲರ್ ಗುಣಿಸುತ್ತಾ, ಊರುಮನೆಯನ್ನು ನೆನೆಯುತ್ತಾ, ಇಲ್ಲಿನ ಸ್ವಚ್ಛಂದ ಬದುಕನ್ನು ಅನುಭವಿಸುತ್ತಾ ಹಿಂತಿರುಗಲಾರದ ಸಿಕ್ಕಿನೊಳಗೆ ಸಿಕ್ಕಾಗಿರುತ್ತದೆ.

ನ್ಯೂಯಾರ್ಕ್ ನಲ್ಲಿ ನಾವು ಎರಡು ದಿನ ಪಯಣಿಸಿದ ಎರಡು ಕಾರಿನ ಚಾಲಕರೊಂದಿಗಿನ ಮಾತು ಪ್ರಪಂಚದ ಅತಿ ದೊಡ್ಡ ನಗರದಲ್ಲಿ ವಲಸೆ ಬಂದಂಥ ಎಲ್ಲರ ಮಾತುಗಳೂ ಆಗಿವೆ. ಇವರು ಬೆಳೆಯುತ್ತಿರುವ ಎಲ್ಲಾ ನಗರದ ಬೆಳವಣಿಗೆಯ ಪಾತ್ರಗಳೂ ಹೌದು.

ಬಾಂಗ್ಲಾ ದೇಶದಿಂದ ಬಂದ ಈತ ೩೫ರ ಪ್ರಾಯ. ಹೆಸರು ಬಾಬು. ಊರಲ್ಲಿದ್ದ ಹೆಂಡತಿಯನ್ನು ಕರೆ ತಂದಿದ್ದಾನೆ. ಹೆಂಡತಿ ಗರ್ಭಿಣಿ. ಬಂದು ೧೯ ವರುಷವಾಗಿದೆ. ಕೈಲಿ ಕಾಸೇನೂ ಉಳಿದಿಲ್ಲ. ಬಾಂಗ್ಲದಿಂದ ಬಂದು ಎಷ್ಟು ದುಡಿದರೂ ಪುಟ್ಟ ಮನೆಗೆ ೨೦೦೦ ಡಾಲರ್ ಬಾಡಿಗೆ ಕೊಟ್ಟು ಉಳಿದ ೧೦೦೦ ಡಾಲರ್ ನಲ್ಲಿ ಮನೆದೂಗಿಸಬೇಕು. ಸಣ್ಣ ಪುಟ್ಟ ಉಳಿತಾಯವಿದ್ದರೆ ಮೂರು ವರುಷಕ್ಕೊಮ್ಮೆ ತನ್ನೂರಿಗೆ ಹೋಗುವ ಕನಸಿಗೆ ಕರಗಿಹೋಗುತ್ತದೆ. ಆದರೆ ಅವನ ಮಾತುಮಾತಲ್ಲಿ ಬಾಂಗ್ಲಾದಲ್ಲಿ ಇಷ್ಟು ಕಷ್ಟಪಟ್ಟು ದುಡಿದರೆ ಉತ್ತಮ ಬದುಕು ಸಿಗಬಲ್ಲುದು ಎನ್ನುವ ಪ್ರಜ್ಞೆ ಕಾಣಿಸುತಿತ್ತು.

ಇಲ್ಲಿ ಲಂಚ ಮೋಸ ಇಲ್ಲದಿದ್ದರೂ ಅತೀ ಶಿಸ್ತಿನ ನಿಯಮಗಳು ಕಾರು ಚಾಲಕರನ್ನು ಹಣ ಕಳೆದುಕೊಳ್ಳುವಂತೆ ಮಾಡಿಬಿಡುತ್ತವೆ. ಹಾಗೇ ದುಡ್ಡು ಹೇರಳವಾಗಿರುವವರಿಗೆ ಮಾತ್ರ ಇಲ್ಲಿಯ ನೆಲೆ ಸಾಧ್ಯ! ಎನ್ನುವ ವಿಷಾದ ಈ ಯುವಕನ ಮುಖದ ಮೇಲೆ ಕಾಣಿಸುತಿತ್ತು. ಕ್ವೀನ್ಸ್ ನಲ್ಲಿರುವ ಟ್ರಂಪ್ ಹುಟ್ಟಿದ ಆಸ್ಪತ್ರೆಯನ್ನು ತೋರಿ ಅದರ ಪಕ್ಕದಲ್ಲಿರುವ ಟ್ರಂಪ್ ಬಿಲ್ಡಿಂಗ್ ತೋರಿದ. ಇದು ಮಿಲಿಯನೇರ್ ದೇಶವೆಂದ. ಅಪ್ಪ ರಿಯಲ್ ಎಸ್ಟೇಟ್ ಫೀಲ್ಡ್ ನಲ್ಲಿ ಮಾಡಿಟ್ಟಿದ್ದನ್ನು ಮಗ ಟ್ರಂಪ್ ಅಭಿವೃದ್ಧಿಗೊಳಿಸಿದ ಎಂದನು. ಕ್ಲಿಂಟನ್ ಉತ್ತಮ ಅಮೇರಿಕ ಅಧ್ಯಕ್ಷರಾಗಿದ್ದರು ಎಂದ.

ಮಾರನೆ ದಿನ ಅಮೆರಿಕಾ ಭಾರತದ ಜಾಕ್ಸನ್ ಹೈಟ್ಸ್ ನೋಡಿ ಬರಲು ರೈಲು ಮಾರ್ಗದಲ್ಲಿ ಹೋಗಿದ್ದೆವು. ವಾಪಾಸಾಗುವಾಗ ರಸ್ತೆ ಬದಿ ಟ್ಯಾಕ್ಸಿ ಕಾಯುತ್ತಾ ನಾವು ನಿಂತಿದ್ದೆವು. ಆಕಸ್ಮಿಕವಾಗಿ ಹಿಂದಿನ ದಿನ ನಮಗೆ ಸಿಕ್ಕಿದ್ದ ಕಾರು ಡ್ರೈವರ್ ಬಾಬು ಓಡಿ ಬಂದು “ಹಲ್ಲೋ” ಹೇಳಿದ. ಒಳ್ಳೆ ಬಟ್ಟೆ ತೊಟ್ಟಿದ್ದ. ಅವನನ್ನು ಕಂಡಾಗ ಪ್ರಪಂಚ ಎಷ್ಟು ಚಿಕ್ಕದಾಗಿದೆ ಅನ್ನಿಸಿದ್ದು ಸುಳ್ಳಲ್ಲ.

ಒಂದಲ್ಲ ಮತ್ತೊಂದು ಇನ್ನೊಂದು ವಿಮಾನ ಹತ್ತುತ್ತಲೇ ಇದ್ದವರಿಗೆ ಅಷ್ಟು ದೂರದಲ್ಲಿ ಹಿಂದಿನ ದಿನ ನಮ್ಮವನೇ ಆದ ಒಬ್ಬ ಡ್ರೈವರ್ ಸಿಕ್ಕಿದ್ದೂ ಅಲ್ಲದೆ, ಮತ್ತೊಂದು ಬಾರಿ ಅವನು ಎದುರಾಗಿದ್ದೂ ಅಲ್ಲದೆ, ಗುರುತು ಹಿಡಿದು ಮಾತನಾಡಿಸಿದ್ದು ಅಚ್ಚರಿಯಾಗಿತ್ತು. ಅವನು ಶನಿವಾರ ರಜಾದಿನ ಗಾಡಿ ಮುಟ್ಟುವುದಿಲ್ಲ ಎನ್ನುತ್ತಲೇ ನಮಗೆ ಗಾಡಿಗಳು ಸಿಗುವ ದಾರಿಯನ್ನು ತೋರಿ ನಗುತ್ತಾ ಟಾಟಾ ಹೇಳಿ ಹೋದ. ಹಿಂದಿನ ದಿನ ಟಿಪ್ಸು ಕೊಟ್ಟಾಗ ಅವನ ಮುಖದಲ್ಲಿ ಸಂಕೋಚದೊಂದು ಮೆಲು ನಗುವಿದ್ದದ್ದು ನೆನಪಾಯಿತು.

ಇಂದು ಸಿಕ್ಕ ಮತ್ತೊಂದು ಟ್ಯಾಕ್ಸಿಯಲ್ಲಿ ಸಿಕ್ಕವರು ವಯಸ್ಸಾದ ೬೦ ರ ಆಸುಪಾಸಿನ ಪಾಕಿಸ್ತಾನಿ ಮುಖ ಚರ್ಯೆಯ ಸಮಾಧಾನಿ. ಇಲ್ಲಿಗೆ ಬಂದು ಒಂಬತ್ತು ವರುಷವಾಗಿದೆಯೆಂದರು. ಊರು “ಪೇಷಾವರ” ವೆಂದರು. ಮೂಲ ಅಫ್ಘಾನಿಸ್ತಾನ.

“ಓ ಪಠಾಣ್” ಎಂದು ನಾವು ಉದ್ಘರಿಸಿದ ಕೂಡಲೇ ನಮ್ಮ ಉದ್ಗಾರಕ್ಕೆ “ಇಂಡಿಯಾದಲ್ಲಿ ನಮ್ಮವರು ಬಹಳ ಬೇಡದ ಕೆಲಸಗಳನ್ನು ಮಾಡುತ್ತಾರೆ” ಎಂದು ತಮ್ಮ ಜನರ ನಡವಳಿಕೆ ಬಗ್ಗೆ ಸಂಕೋಚಪಟ್ಟರು. ಅದು ನಮ್ಮ ಕುಲಕ್ಕೆ ಕಳಂಕವೆಂದರು. ಇಸ್ಲಾಂ ಧರ್ಮದ ಪ್ರಕಾರ ಬಡ್ಡಿ ಹಾಕುವುದು, ದಬಾಯಿಸಿ ಸಾಲ ವಸೂಲಿ ಮಾಡುವುದು, ಎರಡೂ ತಪ್ಪು. ಇರುವವರು ಇಲ್ಲದವರಿಗೆ ಕೈಗಡ ಕೊಟ್ಟು ಸಹಾಯ ಮಾಡಬಹುದೇ ಹೊರತು ಇನ್ನೊಬ್ಬರ ಹೊಟ್ಟೆ ಹೊಡೆಯುವುದು ತಪ್ಪು.

ಇಸ್ರೇಲ್, ಇರಾನ್, ಭಾರತ ಎಲ್ಲ ಕಡೆ ಧರ್ಮವನ್ನ ಮೀರಿದ ನಡವಳಿಕೆ, ಅತಿಕ್ರಮಣ, ರಕ್ತ ಎಲ್ಲವೂ ನಡೆಯುತ್ತಲೇ ಇದೆ. ಇದನ್ನು ಯಾವ ಧರ್ಮವು ಹೇಳಿಲ್ಲ. ಟ್ರಂಪ್ ದರ್ಬಾರೂ ಇಂಥದೇ ಒಂದು! ಎಂದು ತಣ್ಣಗೆ ನಮ್ಮ ಮುಖ ನೋಡಿದರು.

ಇಲ್ಲಿಯ ಸಂಪಾದನೆ ತಮ್ಮ ಬದುಕಿಗಾಗುವಷ್ಟು ಸಿಗುತ್ತದೆ. ಇಲ್ಲಿ ನಾನೊಬ್ಬನೇ. ಅಣ್ಣತಮ್ಮರು ಊರಲ್ಲಿ. ಎಲ್ಲಿವರೆಗೂ ನಡೆಯುತ್ತೋ ಅಲ್ಲೀವರೆಗೂ ಇಲ್ಲಿ ಇದ್ದು ಊರಿಗೆ ಹಿಂತಿರುಗೋದು ಅಂದರು. ಏರಿಳಿತಗಳಿಲ್ಲದ ಸಮಾಧಾನಿ.

ಸಂಪಾದನೆಗೆ ಮೋಸವಿಲ್ಲ. ಕಾರಿನ ಒಡೆಯನಿಗೂ ಇಂಥ ದೊಡ್ಡ ನಗರದಲ್ಲಿ ಕಾರಿನ ತೆರಿಗೆ, ಪೆಟ್ರೋಲ್, ಬದುಕು ಇದರಿಂದ ನಡೆಯಬೇಕಲ್ಲ. ಹಳಹಳಿಕೆಯಿಲ್ಲದ ಸಮಾಧಾನದ ನುಡಿಗಳನ್ನಾಡಿ, ಗಂಭೀರವಾಗಿ ಕೈಯೆತ್ತಿ ಬೈ ಹೇಳಿ ನಮ್ಮನ್ನು ಹೋಟೆಲ್ ಪೆವಿಲ್ಲಿಯನ್ನಲ್ಲಿಳಿಸಿ ಗೇಟು ದಾಟಿದರು.

ಬೆಂಬಿಡದ ಧಾರ್ಮಿಕ ನಂಬಿಕೆಗಳು

ತಕ್ಷಣ ಡಾಲಸ್ ನ ಸಮ್ಮೇಳನದ ಉದ್ಘಾಟನೆಗೆ ಧ್ವಜ ಹಿಡಿದು ಬಂದ ಪುತ್ತಿಗೆ ಸ್ವಾಮಿಗಳು, ಮೈಸೂರಿನ ಜೆ.ಎಸ್.ಎಸ್. ಸ್ವಾಮಿಗಳು, ಕಾವಿಧಾರಿಗಳಾಗಿ ಸಮ್ಮೇಳನದಲ್ಲಿ ಭಾಗವಹಿಸಿದ್ದು ನೆನಪಾಯಿತು. ಅಮೇರಿಕದ ಎಲ್ಲ ಪ್ರಸಿದ್ಧ ಊರುಗಳಲ್ಲೂ ಇವರು ಬಂದುಳಿಯಲು ಅವರದ್ದೇ ಆದ ವಸತಿಗಳಿವೆ, ಅಂತೇ ಅವರನ್ನು ಕರೆದುಕೊಂಡು ಹೋಗಿ ಪೂಜೆ ನಡೆಸುವ ಅವರ ಫಾಲೋಅರ್ಸ್ ಬಹಳ ಜನ ಇದ್ದಾರೆ. ಇಲ್ಲಿ ಶಾಸ್ತ್ರ ಹೇಳಿಸಿಕೊಳ್ಳುವವರು ಇದ್ದಾರೆಂದೇ ಹಸ್ತ ಸಾಮುದ್ರಿಕ
ಪಂಡಿತನೊಬ್ಬ ಬಂದಿದ್ದಾನೆ.

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಈಗ ಹೆಚ್ಚು ಪ್ರಚಲಿತದಲ್ಲಿದ್ದು, ಡಾಲಸ್ ನಗರದಲ್ಲಿ ದೊಡ್ಡ ದೇವಸ್ಥಾನದ ಅಭಿವೃದ್ಧಿಯಲ್ಲಿದ್ದಾರೆ. ಪೂಜೆಗಳು ನಡೆವಾಗ ಜನರ ಬಿಡದಿ ಹೆಚ್ಚಾದಾಗ ಪಕ್ಕದಲ್ಲೇ ಇರುವ ಚರ್ಚ್ ನಲ್ಲಿ ಅವರಿಗೆ ಸ್ಥಳವಸತಿ ಕೊಡುತ್ತಾರೆ. ಅಷ್ಟರಮಟ್ಟಿಗೆ ಅಮೇರಿಕನ್ ಚರ್ಚಿನವರು ಉದಾರಿಗಳು.

ಒಂದಲ್ಲ ಮತ್ತೊಂದು ಇನ್ನೊಂದು ವಿಮಾನ ಹತ್ತುತ್ತಲೇ ಇದ್ದವರಿಗೆ ಅಷ್ಟು ದೂರದಲ್ಲಿ ಹಿಂದಿನ ದಿನ ನಮ್ಮವನೇ ಆದ ಒಬ್ಬ ಡ್ರೈವರ್ ಸಿಕ್ಕಿದ್ದೂ ಅಲ್ಲದೆ, ಮತ್ತೊಂದು ಬಾರಿ ಅವನು ಎದುರಾಗಿದ್ದೂ ಅಲ್ಲದೆ, ಗುರುತು ಹಿಡಿದು ಮಾತನಾಡಿಸಿದ್ದು ಅಚ್ಚರಿಯಾಗಿತ್ತು. ಅವನು ಶನಿವಾರ ರಜಾದಿನ ಗಾಡಿ ಮುಟ್ಟುವುದಿಲ್ಲ ಎನ್ನುತ್ತಲೇ ನಮಗೆ ಗಾಡಿಗಳು ಸಿಗುವ ದಾರಿಯನ್ನು ತೋರಿ ನಗುತ್ತಾ ಟಾಟಾ ಹೇಳಿ ಹೋದ. ಹಿಂದಿನ ದಿನ ಟಿಪ್ಸು ಕೊಟ್ಟಾಗ ಅವನ ಮುಖದಲ್ಲಿ ಸಂಕೋಚದೊಂದು ಮೆಲು ನಗುವಿದ್ದದ್ದು ನೆನಪಾಯಿತು.

ಸಚ್ಚಿದಾನಂದ ಸ್ವಾಮಿಗಳದು ನೂರು ಮಿಲಿಯನ್ ಡಾಲರ್ ನ ಪ್ರಾಜೆಕ್ಟ್. ಇಲ್ಲಿ ಅವರಿಗೆ ಡೋನರ್ಸ್ ಬಹಳವಿದ್ದಾರೆ ಎಂದು ನಮ್ಮ ಸ್ನೇಹಿತರು ಹೇಳಿದರು. ನಾವು ಆ ದೇವಸ್ಥಾನಕ್ಕೆ ಹೋದಾಗ ಜೋಯಿಸರು ಮಂತ್ರ ಹೇಳುತ್ತ ಹೊಸ ಕಾರಿನ ಪೂಜೆ ಮಾಡುತ್ತಿದ್ದರು. ತಕ್ಷಣ ನಾವು ಭಾರತದಲ್ಲಿದ್ದೀವಿ ಎಂದೇ ಅನ್ನಿಸಿತು.

ಡಾಲಸ್ ನಗರವೊಂದರಲ್ಲೇ ಹದಿನಾರು ಸಾವಿರ ಕನ್ನಡಿಗರು ಇದ್ದಾರೆ. ಟೆಕ್ಸಾಸ್ ನಲ್ಲಿ ಒಟ್ಟು ಎರಡು ಲಕ್ಷ ಭಾರತೀಯರಿದ್ದಾರೆ.

ಇನ್ನು ಹ್ಯೂಸ್ಟನ್ ನಗರದಲ್ಲಿರುವ ಮೀನಾಕ್ಷಿ ಟೆಂಪಲ್ ಐವತ್ತು ವರುಷ ಹಳೆಯದು. ಐದಾರು ಎಕರೆ ವಿಸ್ತಾರದಲ್ಲಿ ಅಲ್ಲಿನ ವಾತಾವರಣ ಪಕ್ಕಾ ನಮ್ಮ ದೇಸಿ ದೇವಸ್ಥಾನದಂತಿದ್ದು ಕೃಷ್ಣ ಜನ್ಮಾಷ್ಟಮಿಯ ಪೂಜೆ ನಡೆಯುತಿತ್ತು. ಒಂದೊಳ್ಳೆ ಏರಿಯಾದಲ್ಲಿ ಒಂದೈವತ್ತು ಎಕರೆ ಜಮೀನು ಸರ್ಕಾರ ಕೊಟ್ಟಿದೆ. ಹೂಸ್ಟನ್ ನಗರದ ವಾತಾವರಣವೇ ಸುಂದರವಾಗಿದೆ. ಅದರೊಳಗಿರುವ ಈ ದೇವಸ್ಥಾನ ಅದರ ಹಿಂದಿರುವ ಅರ್ಚಕರ ವಸತಿ ಎಲ್ಲವೂ ತಣ್ಣಗಿದೆ.

ಸ್ವಾಮಿ ನಾರಾಯಣ ಟೆಂಪಲ್ ಕೂಡ ಸಣ್ಣಸಣ್ಣ ರಾಜಸ್ತಾನೀ ಕುಸುರಿ ಕೆತ್ತನೆಯಲ್ಲಿ ಅತ್ಯಂತ ವೈಭವವಾಗಿದೆ. ಆದರೆ ಇಲ್ಲಿಯಂತೆಯೇ ಪ್ರಧಾನ ಅರ್ಚಕರು ಬಗ್ಗಲಾರದೆ ಕೂತು ಮರಿ ಅರ್ಚಕರ ಕೈಲಿ ಪೂಜೆ ನಡೆಸುತ್ತಿದ್ದರು.

ನಮ್ಮೂರಿನ ಹಳೆ ದೇವಸ್ಥಾನಗಳ ಪಟಾಲಂ ಅರ್ಚಕರಂತೆಯೇ ಥೇಟ್! ಜುಟ್ಟು ಜನಿವಾರ ದೊಡ್ಡ ಹೊಟ್ಟೆ. ಆದರೆ ಅಮೇರಿಕಾದ ಪ್ರಯಾಣದಲ್ಲಿ ಬಾಯಿ ಕೆಟ್ಟಿದ್ದ ನಮಗೆ ದೇವಸ್ಥಾನದ ಕ್ಯಾಂಟೀನ್ ನಲ್ಲಿ ಸಿಕ್ಕ ರುಚಿಕರವಾದ ಪೊಂಗಲ್, ಪುಳಿಯೋಗರೆ, ಇಡ್ಲಿ ಚಟ್ನಿ, ಸಾಂಬಾರ್ ಮನಸ್ಸನ್ನು ಪ್ರಸನ್ನವಾಗಿಸಿ ಮರುಳು ಮಾಡಿತು. ಕಡಿಮೆ ಹಣದಲ್ಲಿ ಇದರ ವ್ಯವಸ್ಥೆ ಮಾಡಿದವರ ಹೊಟ್ಟೆ ತಣ್ಣಗಿರಲಿ. ದೇವಾ!

ಪೆನ್ಚಿಲೋನಿಯಾದ ಬೆಟ್ಟಗುಡ್ಡದ ನಡುವಲ್ಲಿ ಒಂದು ಆ ರಾಜ್ಯದ ನಿಲ್ದಾಣ. ಅಲ್ಲಿದ್ದವಳು ಮೈಕಟ್ಟಿನ ಬಗ್ಗೆ ಏನೂ ತಲೆಕೆಡಿಸಿಕೊಳ್ಳದ ಟೋಮೆಟೊ ಬಣ್ಣದ ಗುಂಡನೆಯ ಹೆಣ್ಣುಮಗಳು. ತನ್ನ ಮುಂದೆ ಎರಡು ಕೆಂಪನೆ ಮಾಗಿದ ಟೊಮೆಟೊ ಇಟ್ಟುಕೊಂಡು ಕುಳಿತಿದ್ದಳು. ಲವಲವಿಕೆಯಿಂದ ನಮಗೆ ಮಾಹಿತಿ ಪತ್ರವನ್ನು ಕೊಟ್ಟಳು. ನಾವು ಟೊಮೆಟೊ ನೋಡಿದಾಗ ಅವಳು ಅಲ್ಲಿಯ ಜನ ನನಗೆ ತಾಜಾ ತರಕಾರಿಯನ್ನು ದಿನವೂ ತಂದುಕೊಡುತ್ತಾರೆ ಎಂದು ದೊಡ್ಡ ಕುಲುಕು ನಗೆಯೊಂದಿಗೆ ಹೇಳಿದಳು. ನಾನು ಹತ್ತಿರದ ಪಟ್ಟಣದಿಂದ ಬರುತ್ತೇನೆ. ಹೋಗುವಾಗ ಮನೆಗೆ ಈ ತರಕಾರಿಗಳನ್ನು ಜನರ ಪ್ರೀತಿಯನ್ನು
ಕೊಂಡೊಯ್ಯುತ್ತೇನೆ. ಹ್ಹಹ್ಹಹ್ಹಾ…. ಎನ್ನುತ್ತ ನಕ್ಕಳು.

ಇಲ್ಲಿ ಅತ್ಯದ್ಭುತ ನಂದಗೋಕುಲದಂಥ ಇಸ್ಕಾನ್ ನೆಲೆಯಿದೆ . ಅಲ್ಲಿ ದನಕರುಗಳು ಹಸಿರಿನಲ್ಲಿ ಮೇಯುವುದು, ಆ ತಪ್ಪಲಿನಲ್ಲಿ ಇಸ್ಕಾನಿನ ಮಂದಿಯ ಮೌನದ ಇರುವಿಕೆ ಆ ಫೀಲನ್ನು ತಂದುಕೊಡುತ್ತದೆ ಎಂದು ನಮ್ಮ ಸ್ನೇಹಿತರಾದ ರೆಡ್ಡಿಯವರು ಹೇಳಿದರು. ಹೀಗೊಂದು ಭಾರತವೇ ಅಮೇರಿಕಾದಲ್ಲಿದೆ.

ದಾರಿ ಬದಿಯ ಅಮೇರಿಕನ್ ಹಳ್ಳಿಗಳು

ದಾರಿಯ ನಡುನಡುವೆ ಹಳ್ಳಿಗಳು ಕಾಣಿಸುತ್ತಿದ್ದವು. ನಮ್ಮಲ್ಲಿ ಧಾನ್ಯ ಅರೆಯುವ ರೋಣಗಲ್ಲಿನ ಅಂದದಲ್ಲಿ ಅಲ್ಲಿನ ಹುಲ್ಲು ಮೆದೆಗಳು ಉರುಳಿ ಹೊಲದಲ್ಲಿದ್ದವು. ಯಂತ್ರ, ಧಾನ್ಯಗಳನ್ನು ಬೇರ್ಪಡಿಸಿ ಉಳಿದ ಹುಲ್ಲು ಹಾಗೇ ಸುತ್ತಿಕೊಂಡು ಉರುಟಿದ್ದವು. ಆ ಹರವಾದ ಬಯಲಲ್ಲಿ ನಡುನಡುವೆ ಸಣ್ಣ ನೀರಿನ ಕಟ್ಟೆ ಕೆರೆ ಕುಂಟೆಗಳು ಕಂಡರೆ ಅದರ ಸುತ್ತಲೂ ಹಸುಗಳು ಮೇಯುತ್ತಿದ್ದವು. ಸಮೃದ್ಧ ಹುಲ್ಲು ಹಸುಗಳ ಮೈಯ್ಯನ್ನು ಮಿಂಚಿಸುತ್ತಿರುತ್ತದೆ. ಹಾಲು ಹಾಗೂ ಆಹಾರಕ್ಕಾಗಿ ಸಾಕುವ ಇಲ್ಲಿಯ ದನಗಳು ಮಿಶ್ರ ತಳಿಯ ಭಾರೀ ಹಸುಗಳು.

ಇಲ್ಲಿಯ ಹಳ್ಳಿಗಳು ನಮ್ಮ ಊರುಕೇರಿಗಳಂತಿರದೆ ಹುಲ್ಲುಗಾವಲಿನ ನಡುವೆ ಚಿತ್ರ ಬರೆದಂತೆ, ಹರಿವ ತೊರೆಗೆ ಬಾಗಿಲು ತೆರೆದ ಗೋಕುಲದಂತೆ ಕಾಣುತ್ತಿದ್ದವು. ನಡುನಡುವೆ ಕಣಜಗಳು. ಉದ್ದಕ್ಕೂ ಹರಡಿಕೊಂಡ ವಿಸ್ತಾರವಾದ ಜಮೀನು. ಅಲ್ಲಿ ಕೆಲವೆಡೆ ಮಾತ್ರ ಹಣ್ಣಿನ ತೋಟಗಳು ಕಾಣಿಸುತ್ತಿದ್ದವು.

ಕಾಡು ನಮ್ಮ ಕಾಡಿನ ವೈವಿಧ್ಯತೆಗಳಿಲ್ಲದೆ ಪೊದೆಗಳಿಲ್ಲದ ಮುಳ್ಳುಕಂಟಿಗಳಿಲ್ಲದ ಒಂದೇ ಎತ್ತರದ ತೋಟಗಳಂತೆ ಕಾಣುವ ಕಾಡು. ಅಲ್ಲಿ ಉದ್ದಕ್ಕೂ ಕಾಣಿಸುತ್ತಿದ್ದ ಬೆಳೆ ನೆಲಗಡಲೆ, ಮೆಕ್ಕೆ ಜೋಳ, ಹಾಗೂ ಎಲ್ಲೋ ಒಂದು ಕಡೆ ಮಾತ್ರ ಸಾಸಿವೆ ಹೂ ಬಿಟ್ಟ ಹೊಲ ಕಂಡಂತಾಯಿತು. ಕೆಲವೆಡೆ ಇನ್ನೂ ವಸಾಹತು ಕಾಲದ ಹತ್ತಿ ಬೆಳೆಯನ್ನು ಬೆಳೆಯುತ್ತಿದ್ದಾರೆ.

ಇದು ಹಿಂದಿನಿಂದ ಬಂದ ಬೆಳೆ. ಇದಕ್ಕಾಗೇ ವರ್ಣ ಬೇಧ ನೀತಿ ಹಾಗೂ ವರ್ಣ ಕಲಹಗಳು ಇಲ್ಲಿ ಆಗಿವೆ. ಮುಂದೆ ಅದರ ವಿವರ ತೆರೆದುಕೊಳ್ಳುತ್ತದೆ. ದೊಡ್ಡ ರೈತರೇ ಇಲ್ಲಿ ಹೆಚ್ಚಾಗಿದ್ದಾರೆ. ಅಮೇರಿಕಾ ಎಲ್ಲದರಲ್ಲೂ ದೊಡ್ಡಣ್ಣನೇ… ನೀರಿನ ಒರತೆ, ನೆಲದ ಹರವು, ಜನರ ಭಾರೀ ದೇಹ, ಎಲ್ಲದರಲ್ಲಿಯೂ. ದೊಡ್ಡ ಸಮೃದ್ಧಿಯ ಭೂ ಪ್ರದೇಶ.

ಜಾರು ಮಳಿಗೆಯ ವಿರಳ ಮನೆಗಳು, ಮನೆಯ ಸುತ್ತ ಹುಲ್ಲು ಉರುಳುಗಳು, ಧಾನ್ಯ ಶೇಖರಣೆಯ ಎತ್ತರದ ಕಣಜಗಳು. ನೀರ ಕೊಳ, ಹಸಿರು ನಡುವೆ ಮೇಯುವ ಹಸುಗಳು, ಕೆಲವು ಕಡೆ ಮಾತ್ರ ಕುರಿಗಳು. ಅವರ ಜಮೀನಿನ ಸುತ್ತ ಹಾಕಿದ ಮರದ ಬೇಲಿಗಳು ಮಕ್ಕಳು ಬರೆಯುವ ಚಿತ್ರದಲ್ಲಿದ್ದಂತೆ ಕಾಣುತ್ತಿದ್ದವು. ಆದರೆ ಅಲ್ಲಿನ ರೈತರ ಸಂಕಷ್ಟಗಳು
ಏನಿವೆಯೋ ನಮ್ಮ ಅರಿವಿಗೆ ಬರಲಿಲ್ಲ. ನಾವು ಅಲ್ಲಿಯ ಹಾದಿಬದಿಯ ದಾರಿ ಹೋಕರಾಗಿದ್ದೆವು.