Advertisement
ಅಮ್ಮನಿಗೆ ಅಂತಿಮ ವಿದಾಯ…: ವಿಜಯಕುಮಾರಿ ಬಿ. ಬರಹ

ಅಮ್ಮನಿಗೆ ಅಂತಿಮ ವಿದಾಯ…: ವಿಜಯಕುಮಾರಿ ಬಿ. ಬರಹ

ಇನ್ನೊಂದು ನನಗೆ ಬೇಸರವನ್ನು ಉಂಟುಮಾಡಿದ್ದು, ಅಮ್ಮ ತುಂಬಾ ಚೆನ್ನಾಗಿ ಉಪ್ಪಿನಕಾಯಿ ಹಾಕುತ್ತಿದ್ದರು, ಒಂದು ದೊಡ್ಡ ಪಿಂಗಾಣಿ ಜಾಡಿ ಇತ್ತು, ಅದನ್ನು ನೋಡಿ ಅಯ್ಯೋ ಉಪ್ಪಿನ ಕಾಯಿಯ ರೆಸಿಪಿಯನ್ನೇ ನಾವು ಕಲಿಯಲಿಲ್ಲವಲ್ಲಾ ಎಂದು ಬೇಸರವಾಗುತ್ತಿತ್ತು. ತಿಥಿಎಲ್ಲಾ ಮುಗಿಸಿ ಹೊರಡುವಾಗ ನನ್ನ ಮನದಲ್ಲಿ ಇದ್ದದ್ದು ಒಂದೇ ಕೊರಗು, ಅಮ್ಮನಿಗೆ ಆಪರೇಷನ್ ಆಗಿ ಮತ್ತು ಕರೋನ ಟೈಮ್‌ನಲ್ಲಿ ಎಲ್ಲಾ ಕಡೆ ಓಡಾಡಲು ಕಷ್ಟವಿದ್ದಾಗ ಅಮ್ಮನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲವೇನೋ ಎನ್ನುವ ಕೊರಗು ನನ್ನ ಮನದಲ್ಲಿ ಉಳಿದಿತ್ತು, ಕಡೆಯದಾಗಿ ಅಮ್ಮ ಬಳಸುತ್ತಿದ್ದ ಚಪ್ಪಲಿಯನ್ನು ತೆಗೆದುಕೊಂಡು ಬೆಂಗಳೂರಿಗೆ ಬಂದೆ…
ವಿಜಯಕುಮಾರಿ ಬಿ. ಬರಹ ನಿಮ್ಮ ಓದಿಗೆ

ಅಮ್ಮ ಅಮ್ಮ ತೀರಿಕೊಂಡರು ಎಂದು ತಮ್ಮನ ಫೋನು ಬಂದಾಗ, ನಾನು ಗತಕಾಲಕ್ಕೆ ಇಳಿದಿದ್ದೆ. ಮನೆಯಲ್ಲಿ ನಾನು ಚಿಕ್ಕವಳಿರುವಾಗ, ಅಜ್ಜಿಯ ಸಾವನ್ನು ನೋಡಿದ್ದು ಬಿಟ್ಟರೆ ಈಗ ಅಮ್ಮನ ಸಾವನ್ನೇ ನೋಡಿದ್ದು. ಅಮ್ಮನಿಗೆ ಆಗಲೇ 85ರ ಮೇಲಾಗಿತ್ತು. ಅಮ್ಮನ ಹುಟ್ಟಿದ ದಿನಾಂಕ ನಮಗ್ಯಾರಿಗೂ ಗೊತ್ತಿರಲಿಲ್ಲ. ಹುಟ್ಟಿದ ಹಬ್ಬವನ್ನೇ ಯಾವತ್ತೂ ಆಚರಿಸಿರಲಿಲ್ಲ. ನಮ್ಮ ತಂದೆಗೆ ಅವರ ಹುಟ್ಟಿದ ದಿನಾಂಕ ಗೊತ್ತಿತ್ತು. ನಮ್ಮ ತಾಯಿಯ ತಂದೆ ಶಿಕ್ಷಕರಾಗಿದ್ದ ಕಾರಣ, ಅವರು ಅಮ್ಮನ ಹುಟ್ಟಿದ ದಿನಾಂಕವನ್ನು ಬರೆದಿಟ್ಟಿದ್ದರು. ಹಾಗೆ ನೊಡಿದರೆ, ಅಮ್ಮನೇ ಹೆಚ್ಚು ಓದಿರಲಿಲ್ಲ. 2-3ನೇ ಕ್ಲಾಸಿನವರೆಗೂ ಹೋಗಿದ್ದೆ ಎಂದು ಹೇಳುತ್ತಿದ್ದರು.

ಅಮ್ಮ ನೋಡಲು ಬೆಳ್ಳಗೆ ತುಂಬ ಸುಂದರವಾಗಿದ್ದರು, ಶಾಲೆಯಲ್ಲಿ ಯಾರೋ ಒಬ್ಬ ಶಿಕ್ಷಕರು ಅಮ್ಮನನ್ನು ಮದುವೆ ಆಗುತ್ತೀಯಾ? ಎಂದು ಕೇಳುತ್ತಿದ್ದರಂತೆ. ಅಮ್ಮ ಗಾಬರಿ ಮತ್ತು ಸಂಕೋಚದಿಂದ ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದರಂತೆ. ಮನೆಗೆಲಸ ದನಕರುಗಳನ್ನು ನೋಡಿಕೊಳ್ಳುವುದು ಇಂತಹ ಕೆಲಸಗಳಲ್ಲಿ ಮನೆಯಲಿ ಆರಾಮವಾಗಿದ್ದೆ ಎಂದು ಹೇಳುತ್ತಿದ್ದರು. ನಮ್ಮ ಅಮ್ಮನಿಗೆ ಅವರ ತಂದೆ “ದಡ್ಡಿ ನೀನು ಶಾಲೆಗೆ ಹೋಗಲಿಲ್ಲ” ಎಂದು ಬಯ್ಯುತ್ತಿದ್ದರಂತೆ. ವಿದೇಶದಲ್ಲಿದ್ದ ಮಗಳಿಗೆ ಇನ್ನೂ ನಾವು ಅಮ್ಮ ತೀರಿಹೋದ ವಿಷಯ ಹೇಳಿರಲಿಲ್ಲ. ಆದರೆ, ತಂಗಿ ಅವಳಿಗೆ ವಿಷಯ ತಿಳಿಸಿಬಿಟ್ಟಿದ್ದಳು. ಮಗಳೇ ಫೋನು ಮಾಡಿಕೊಂಡು ಬಂದಳು. ಆಗ ನಾನು ನೋಡು ನೀನು ಬಂದಾಗ ಅಜ್ಜಿಯನ್ನು ಭೇಟಿ ಮಾಡಿದ್ದು ಎಷ್ಟು ಒಳ್ಳೆಯದಾಯಿತು. ಈವತ್ತು ಅಜ್ಜಿಯೇ ಇಲ್ಲ ಎಂದು ಗದ್ಗದಿತಳಾಗಿ ಹೇಳಿದಾಗ ಅವಳು ಅಳತೊಡಗಿದಳು. ಅಜ್ಜಿ “ನೀನು ಬೇಗ ಮಗು ಮಾಡಿಕೋ ನಾನು ಸಾಯುವುದರಲ್ಲಿ ಮಗುವನ್ನು ನೋಡಬಹುದು ಎಂದು ಹೇಳಿದ್ದರಲ್ಲಾ! ಇವತ್ತು ಅಜ್ಜಿಯೇ ಇಲ್ಲ” ಎಂದು ನಾನು ಹೇಳಿದಾಗ ಅವಳು ನೊಂದುಕೊಂಡು ಕಣ್ಣೀರು ಹಾಕಿದಳು.

ಇನ್ನು ಊರಿಗೆ ತಲುಪುವ ಹೊತ್ತಿಗೆ ದುಃಖ ಕಡಿಮೆ ಆಗಿ ಮೌನವಾಗಿ ಅಮ್ಮನಿಗೆ ಹಾರ ಹಾಕಿ ಕೈಮುಗಿದೆ. ತಮ್ಮ ಅಮ್ಮ ತೀರಿಕೊಂಡ ಬಗೆಯನ್ನು ಹೇಳುತ್ತಿದ್ದ. ಹಿಂದಿನ ರಾತ್ರಿ ಮಂಚದಿಂದ ಕೆಳಗೆ ಬಿದ್ದುಬಿಟ್ಟಿದ್ದರಂತೆ. ಎಬ್ಬಿಸಿ ಪುನಃ ಮಂಚದ ಮೇಲೆ ಮಲಗಿಸಿದ್ದೆವು, ಬೆಳಿಗ್ಗೆ ತಡವಾಗಿಎದ್ದು ಹಸಿವಾಗುತ್ತಿದೆ ಎಂದು ಬ್ರೆಡ್ ತರಿಸಿಕೊಂಡು ಟೀ ಜೊತೆ ತಿಂದು, ತುಂಬಾ ಸುಸ್ತಾಗುತ್ತಿದೆ ಎಂದು ಮಲಗಿದವರು, ಹಾಗೆಯೇ ಮೇಲುಸಿರು ಬಂತಂತೆ, ನೋಡನೋಡುತ್ತಲೇ ತಮ್ಮ ಅಮ್ಮ ಅಮ್ಮ ಎಂದು ಕರೆಯುವಾಗಲೇ ಉಸಿರು ನಿಂತು ಹೋಯಿತಂತೆ. ಪ್ರಾಣ ಹೀಗೂ ಹೋಗುವುದುಂಟೇ! ಅಮ್ಮಾ ಎಂದು ಕರೆಯುವಾಗಲೇ ಹೋಗುತ್ತಿರುವ ಪ್ರಾಣವನ್ನು ಹಿಡಿದಿಡಲು ಆಗುವುದೇ ಎಂದು ನನಗನಿಸಿತು.

ಇದಕ್ಕೂ ಮುಂಚೆ ಹಿಮೋಗ್ಲೋಬಿನ್ ಕಡಿಮೆ ಆಗಿ, ಹೀಗೆಯೇ ನಡೆದು ಹೋಗುತ್ತಿದ್ದವರು ಬಿದ್ದು ಬಿಟ್ಟಿದ್ದರು. ಹಿಪ್‌ನ ಮೂಳೆ ಮುರಿದು ಅದಕ್ಕೆ ಆಪರೇಷನ್ ಆಗಿ, ಸ್ವಲ್ಪ ನಡೆದಾಡುವಂತೆ ಆಗಿದ್ದರು. ನಂತರ ಒಂದು ದಿನ ಲೈಟಾಗಿ ಸ್ಟ್ರೋಕ್ ಆಗಿ ಮಾತು ತೊದಲ ತೊಡಗಿದರು, ಮತ್ತೇ ಆಸ್ಪತ್ರೆಗೆ ಸೇರಿಸಿ ಹಿಮೋಗ್ಲೋಬಿನ್ ಸರಿಯಾಗಲು ಬಹಳ ಬಾರಿ ರಕ್ತ ಕೊಡಿಸಿದ್ದರು, ಸ್ವಲ್ಪ ಆರೋಗ್ಯ ಸುಧಾರಿಸುವವರೆಗೂ ತಂಗಿಯ ಮನೆಯಲ್ಲೇ ಬಹಳ ದಿನ ಇದ್ದರು. ಇದು ಕರೋನ ಮುಂಚಿನ ಕತೆ. ನಂತರ ಕರೋನ ಬಂತು ಆಗ ತಂದೆಯವರಿಗೂ ಕರೋನ ಬಂದಿತ್ತು. ಅವರು ಅಮ್ಮನಿಗಿಂತ ಹತ್ತು ವರ್ಷದೊಡ್ಡವರು, ಆದರೂ ಕರೋನದಿಂದ ಹುಷಾರಾಗಿ ಮನೆಗೆ ಬಂದಿದ್ದರು. ಈ ಎಲ್ಲಾ ಅನಾರೋಗ್ಯದಲ್ಲೂ, ತಂಗಿಯ ಮನೆಯಲ್ಲಿಯೇ ಅಪ್ಪ ಅಮ್ಮ ಇದ್ದರು. ನಾವು ಹೆಣ್ಣು ಮಕ್ಕಳು ಮೂರೂ ಜನರು ಹೋಗಿ ಬಂದು ಅಪ್ಪ ಅಮ್ಮನ್ನು ನೋಡಿಕೊಂಡವು ಆದರೆ, ತಮ್ಮನ ಹೆಂಡತಿ ಗೆಸ್ಟ್ ತರಹ ಒಂದು ದಿನ ಬಂದು ಹೋಗಿದ್ದಳಷ್ಟೇ, ಅಮ್ಮ ಸ್ವಲ್ಪ ಸುಧಾರಿಸಿಕೊಂಡನಂತರ ಊರಿಗೆ ಬಂದು ಊರಲ್ಲಿಯೇ ಇದ್ದರು, ಅಡಿಗೆಯನ್ನು ಮಾತ್ರ ಅವರೇ ಮಾಡಬೇಕಿತ್ತು. ತಮ್ಮ ಒಬ್ಬನೇ ನಾವು ನಾಲ್ಕು ಜನ ಅಕ್ಕಂದಿರು, ಸೊಸೆ ಮನೆಯಿಂದ ಬೇರೆ ಹೋಗಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿ ಬೆಂಗಳೂರಿನಲ್ಲೇ ಸೆಟಲ್ ಆಗಿದ್ದರು. ಸೊಸೆ ಬೇರೆ ಹೋಗುವಾಗ ಅಪ್ಪ ಅಮ್ಮ ಅವಳಿಗೆ ತಡೆದಿರಲಿಲ್ಲ, ಆದರೆ, ಅವಳ ಧೋರಣೆ ಹೇಗಿತ್ತು ಎಂದರೆ ಅಪ್ಪ ಅಮ್ಮ ಅನಾರೋಗ್ಯವಾದಾಗ, ನಾನ್ಯಾಕೆ ಅವರನ್ನು ನೋಡಿಕೊಳ್ಳಬೇಕು ಎಂದು ಅವರನ್ನು ಯಾವತ್ತೂ ನೋಡಿಕೊಳ್ಳಲಿಲ್ಲ. ನನ್ನ ಅಪ್ಪ ಇಂಜಿನಿಯರ್ ಆಗಿದ್ದರು, ಪುಣ್ಯಕ್ಕೆ ಅವರಿಗೆ ಪೆನ್ಷನ್ ಬರುತ್ತಿತ್ತು, ಹಣದ ಅವಲಂಬನೆಯೇನೂ ಅವರಿಗೆ ಇರಲಿಲ್ಲ. ಸೊಸೆಯದು ಒಂದೇ ಕಂಡೀಷನ್, ನಾನು ನೋಡಿಕೊಳ್ಳುವುದಿಲ್ಲ ಎಂದು. ಇದೆಲ್ಲಾ ಗೊತ್ತಿದ್ದ ಅಮ್ಮ ಮಗನ ಮನೆಗೆ ಹೋಗಲು ಇಷ್ಟವೇ ಪಡುತ್ತಿರಲಿಲ್ಲ. ನಾನು ಊರಲ್ಲೇ ಸಾಯಬೇಕು, ಒಳ್ಳೆಯ ಮಣ್ಣಲ್ಲಿ ಮಣ್ಣು ಮಾಡಿ ಎಂದು ಹೇಳುತ್ತಿದ್ದರು. ಅಮ್ಮ ಹೀಗ್ಯಾಕೆ ಹೇಳುತ್ತಿದ್ದಾರೆ ಎಂದು ನಾನು ಯೋಚಿಸುತ್ತಿದ್ದೆ, ಸೊಸೆಯ ಕಡೆಯಿಂದ ನಾವು ಹೆಣ್ಣುಮಕ್ಕಳು ಆಡುವಂತಿಲ್ಲ ಅನುಭವಿಸುವಂತಿಲ್ಲ. ಹೋಗಲಿ ಎಂದು ಸಹಿಸಿಕೊಂಡು ಸೊಸೆಯನ್ನು, ಬಂದಿದ್ದೆವು.

ಅಮ್ಮ ತಮ್ಮನ ತೀರಿಕೊಂಡಾಗ ಮಗನನ್ನು ನಮ್ಮಕಾರಿನಲ್ಲಿಯೇ ಕರೆದುಕೊಂಡು ಬಂದಿದ್ದೆವು. ಮಾರನೇ ದಿನ ಮಣ್ಣು ಮಾಡಬೇಕಾಗಿದ್ದರಿಂದ ಶವ ಇದ್ದರಾತ್ರಿ ಮನೆಯಲ್ಲಿ ಹರಿಕಥೆ ಹೇಳಿಸುತ್ತಾರೆ, ಮೂರು ನಾಲ್ಕು ಜನ ಕಥೆಗಳನ್ನು, ಬಂದಿದ್ದರು, ಅವರು ಜನಪದ ಕೆಲವು ನೀತಿ ಕಥೆಗಳನ್ನು ಹೇಳುತ್ತಿದ್ದರು. ಅಮ್ಮನನ್ನು ಮಲಗಿಸಿದ್ದಲ್ಲಿ ಹಚ್ಚಿಟ್ಟ ದೀಪ ರಾತ್ರಿಯೆಲ್ಲಾ ಉರಿಸಬೇಕು ಎಂದು ಹೇಳಿದ್ದರು. ಊರಿನಲ್ಲಿ ಇದ್ದ ತಂದೆಯವರ ದಾಯಾದಿಗಳ ಮನೆಯವರೆಲ್ಲರೂ ಬಂದು, ಸ್ವಲ್ಪ ಹೊತ್ತುಕೂತು, ಹರಿಕಥೆಯವರ ಜೊತೆಗೂಡಿ ಭಜನೆ ಮಾಡಿ ಹೋಗುತ್ತಿದ್ದರು. ಸಾವಿನ ಸಂದರ್ಭದಲ್ಲಿ ಎಲ್ಲರೂ ಬಂದು ಹೋಗಿದ್ದು ಒಂದು ರೀತಿ ನನಗೆ ಇಷ್ಟವಾಯಿತು. ಸಾವಲ್ಲಿ ಎಲ್ಲರೂ ಜೊತೆಗೂಡುತ್ತಾರೆಂದು ಆದರೆ ನಿದ್ರೆ ಮಾತ್ರ ನನ್ನ ಕಣ್ಣಿಗೆ ಹತ್ತಿರ ಸುಳಿಯಲಿಲ್ಲ. ಹಾಗೂ ಹೀಗೂ ಬೆಳಗಾದಾಗ, ಮನೆಯಲ್ಲಿ ಶವ ಇರುವಾಗ ಅಡಿಗೆ ಮಾಡುವಂತಿಲ್ಲ ಎಂದು ನಿಯಮ. ಕೆಲವು ನಿಯಮಗಳು ನಿಜಕ್ಕೂ ಒಳ್ಳೆಯದಾಗಿರುತ್ತದೆ. ಶವ ಇಟ್ಟುಕೊಂಡು ಅಡಿಗೆ ಮಾಡಲು ಹೇಗೆ ಸಾಧ್ಯ. ದಾಯಾದಿಗಳ ಮನೆಯವರು ತಿಂಡಿ-ಕಾಫಿ ಎಲ್ಲಾ ತಂದು ಕೊಟ್ಟರು, ಎಲ್ಲರೂ ಅನಿವಾರ್ಯವಾಗಿ ತಿಂಡಿ-ಕಾಫಿ ಮುಗಿಸಿದೆವು. ರಾಹುಕಾಲ ಮುಗಿದ ನಂತರ ಶವ ಎತ್ತುವುದು ಎಂದು ಹೇಳಿದ್ದರು. ಅಮ್ಮನ ಬಳೆಗಳಿದ್ದವು, ಎರಡೂ ಕೈಯ್ಯಲ್ಲಿ. ತೀರಿಕೊಂಡ ಕೂಡಲೇ ತೆಗಿಯಬೇಕಿತ್ತು, ಈಗ ಬರುತ್ತೋ, ಇಲ್ಲವೂ ಎಂದು ಮಾತನಾಡತೊಡಗಿದರು. ನಾನೇ ಹೋಗಿ ನೋಡಿದೆ ಕೈ ತಣ್ಣಗಿತ್ತು, ಬಳೆಗಳು ಆರಾಮವಾಗಿಯೇ ಬಂದವು. ತೆಗೆದು ತಮ್ಮನ ಕೈಯ್ಯಲ್ಲಿ ಬಳೆಗಳನ್ನು ಕೊಟ್ಟೆ. ನಂತರ ಬಿಸಿನೀರು ತನ್ನಿ ಎಂದರು, ಮೊದಲೆಲ್ಲಾ ಸ್ನಾನ ಮಾಡಿಸುತ್ತಿದ್ದರು, ಈಗ ಟವೆಲ್‌ನಲ್ಲಿ ಮೈ ಒರೆಸುವುದನ್ನು ಪ್ರಾರಂಭಿಸಿದರು. ಅಮ್ಮನಿಗೆ ಟವೆಲ್ ಬಾತ್ ಆಯಿತು, ನಂತರ ಇನ್ನೊಂದು ವಿಚಿತ್ರ ನಿಯಮ ಇದೆ, ತವರು ಮನೆಯಿಂದ ತಂದ ಸೀರೆ ಉಡಿಸಬೇಕು ಎಂದು, ಎಷ್ಟೊಂದು ದಿನ ಗಂಡನ ಮನೆಯಲ್ಲಿ ಬದುಕಿ ಬಾಳಿದ್ದರೂ ಸಂಸ್ಕಾರದ ದಿನ ತವರಿನ ಸೀರೆಯೇ ಉಡಿಸಬೇಕು ಎನ್ನುವುದು ಎಂತಹ ನಿಯಮವೋ ನನಗೆ ಅರ್ಥವಾಗಲಿಲ್ಲ.

ಅಮ್ಮನ ಅಣ್ಣ ಮಗ ಹಸಿರು ಸೀರೆ ಬಳೆಗಳನ್ನು ತಂದಿದ್ದ, ಎಣ್ಣೆ, ಬಾಚಣಿಗೆಯನ್ನೂ ತರುತ್ತಾರೆ. ಅಕ್ಕ ಸೀರೆ ಉಡಿಸಿದಳು, ತಲೆಯನ್ನೂ ಬಾಚಿದ್ದಾಯಿತು, ಅಮ್ಮನಿಗೆ ಹಸಿರು ಸೀರೆ ಚೆನ್ನಾಗಿ ಒಪ್ಪುತ್ತಿತ್ತು, ಅಮ್ಮನನ್ನು ಚಟ್ಟದಲ್ಲಿ ಮಲಗಿಸಿದರು, ಶವಯಾತ್ರೆಗೆ ಟ್ರ್ಯಾಕ್ಟರ್ ರೆಡಿ ಮಾಡಿದ್ದರು, ನಾನು ಕಾರಲ್ಲಿ ಹೋಗುವುದೆಂದು ಯೋಚಿಸುತ್ತಿದ್ದೆ, ಸಂಬಂದಿ ಅಣ್ಣನೊಬ್ಬ ಅಮ್ಮನನ್ನು ಒಬ್ಬರನ್ನೇ ಕಳುಹಿಸುತ್ತೀರೆ ನಮ್ಮ ಅಂದಾಗ ಟಚ್ ಆಯಿತು. ಅಯ್ಯೋ ಹೌದಲ್ಲವಾ ಎಂದು, ಹೆಣ್ಣು ಮಕ್ಕಳು ನಾವೆಲ್ಲಾ ಟ್ರಾಕ್ಟರ್‌ನಲ್ಲಿಯೇ ಹೊರಟೆವು, ತಮ್ಮ ಕಿಚ್ಚು ಹಿಡಿದಿದ್ದ, ಟ್ರಾಕ್ಟರ್ ಮೆರವಣಿಗೆ ಮೂಲಕ “ಊರ ಬಾಗಿಲ” ಮುಂದೆ ಹೊರಟಿತು. ಈ “ಊರ ಬಾಗಿಲು” ಎಂದರೆ ಊರಿನ ಕೊನೆ ಎಂದರ್ಥ. ಆದರೆ, ಅದಕ್ಕೂ ಮೀರಿ ಹಿಂದೆ ಮುಂದೆ ಊರು ಬೆಳೆದಿತ್ತು.

ಬಾಲ್ಯದಲಿ ಓಡಾಡಿದ ಬೀದಿಗಳನ್ನು ನೋಡಿ ಊರು ಬಹಳ ಬದಲಾಗಿದೆ ಎಂದು ಅನಿಸಿತು. ಹೆಂಚಿನ ಮನೆಗಳು ಇದ್ದ ಜಾಗದಲ್ಲಿ ಆರ್.ಸಿ.ಸಿ. ಮನೆಗಳು ತಲೆ ಎತ್ತಿದ್ದವು. ತಂದೆಯವರ ದಾಯಾದಿಗಳ ಜಮೀನಿನಲ್ಲಿ ಶವ ಸಂಸ್ಕಾರಕ್ಕೆಂದೇ ಜಾಗ ಇಟ್ಟುಕೊಂಡಿದ್ದರು, ಅಲ್ಲಿಯೇ ಸಂಸ್ಕಾರ ಮಾಡುವುದೆಂದು ಮೊದಲೇ ನಿರ್ಧರಿಸಿದ್ದರು, ಅಲ್ಲಿಗೆ ಶವ ಯಾತ್ರೆ ಹೊರಟಿತು. ಮತ್ತೊಂದು ಬಾರಿ ಪೂಜೆ ಮಾಡಿ ಶವವನ್ನು ಗುಂಡಿಗೆ ಇಳಿಸಿದರು. ನಾವು ಕಿವಿ ಓಲೆಯನ್ನು ತೆಗೆದಿರಲಿಲ್ಲ, ಅಲ್ಲಿ ಸಂಸ್ಕಾರ ಮಾಡಿಸಲು ಬಂದವರು ಅಸಮಾಧಾನದಲ್ಲೇ ಓಲೆ ತೆಗೆದುಕೊಟ್ಟರು, ಭಾವ ಮೂಗುತಿ ತೆಗೆಯಲ್ಲವಾ ಎಂದು ಕೇಳಿದರು, ಬೇಡ ಎಂದು ಸುಮ್ಮನಾದೆವು. ಶವ ಸಂಸ್ಕಾರ ಮುಗಿದು ಮೂರನೇ ದಿನಕ್ಕೆ ಹಾಲು-ತುಪ್ಪ ಬಿಡುವುದು ಎನ್ನುವ ಕಾರ್ಯ ಮಾಡಿದರು. ನಂತರ ದೀಪಾವಳಿ ಹತ್ತಿರವಿದ್ದ ಕಾರಣ ಎಲ್ಲರೂ ಸೂತಕ ಐದನೇ ದಿನಕ್ಕೆ ತೆಗೆದುಕೊಳ್ಳಬೇಕು ಎಂದರು. ಈ ಸೂತಕ ತೆಗೆಯುವುದು ಎಂದರೆ, ಮನೆಯಲ್ಲಾ ಕ್ಲೀನ್ ಮಾಡಿ ದಾಸಯ್ಯನಿಗೆ ಕರೆದು ಪೂಜೆ ಮಾಡಿ ಊಟ ಬಡಿಸಬೇಕು ಮತ್ತು ಆವತ್ತಿನಿಂದ ಮನೆಯಲ್ಲಿ ದೇವರ ಪೂಜೆ ಮಾಡುತ್ತಾರೆ. ಹನ್ನೊಂದನೇ ದಿನ ತಿಥಿ ಎಂದು ತೀರ್ಮಾನವಾಗಿತ್ತು, ತಿಥಿ ಕಾರ್ಯಕ್ಕೆ ಮನೆಯಲ್ಲಿ ತಯಾರಿ ನಡೆಯುತ್ತಿತ್ತು, ತಿಥಿಯ ಅಡುಗೆಗೆ ಖಾರದ ಪುಡಿ ಸಾಂಬಾರ್ ಪುಡಿ ಕೇಳುತ್ತಿದ್ದರು, ಬೇಕು ಎಂದು ಅಡಿಗೆಯವರು ಮನೆಯಲ್ಲಿ ಅಮ್ಮನ ಮಾಡಿದ ಪುಡಿಗಳೇ ಇದ್ದವು. ನನಗೆ ಮನಸ್ಸಿನಲ್ಲಿ ವಿಚಿತ್ರ ಅನಿಸಿತು. ಅಮ್ಮ ಮಾಡಿದ ಪುಡಿಗಳು ಮತ್ತು ಅಮ್ಮನೇ ಕಾಯಿಸಿಟ್ಟ ತುಪ್ಪ ಅಮ್ಮನ ಎಡೆಗೆ ಬಳಸುತ್ತಿದ್ದೇವೆ ಎಂದು ಸಂಕಟವಾಗುತ್ತಿತ್ತು. ತಿಥಿ ಮುಗಿದ ಮೇಲೆ ಅಮ್ಮನ ಸೀರೆಗಳನ್ನೆಲ್ಲಾ ಹರಡಿಕೊಂಡು ಕೂತಿದ್ದೆವು, ನಾವು ಹೆಣ್ಣು ಮಕ್ಕಳೆಲ್ಲಾ ಅಮ್ಮನಿಗೆ ನಾವೇ ಕೊಡಿಸಿದ ರೇಷ್ಮೆ ಸೀರೆಗಳನ್ನೆಲ್ಲಾ ನಾವು ನಾವೇ ತೆಗೆದುಕೊಂಡೆವು, ಸೊಸೆನೂ ಅವಳಿಗೆ ಬೇಕಾದ್ದು ತೆಗೆದುಕೊಳಡಳು. ಅವಳು, ಅವಳ ಮನೆಯ ಗೃಹ ಪ್ರವೇಶಕ್ಕೆ ಕೊಟ್ಟ ಸೀರೆಯನ್ನು ಅಮ್ಮ ಬ್ಲೌಸ್ ಹೊಲಿಸದೇ ಹಾಗೆಯೇ ಇಟ್ಟಿದ್ದರು, ಅದು ಅವಳಿಗೆ ಏನನಿಸಿತೋ, ಅಮ್ಮ ಸೀರೆ ಸ್ವಲ್ಪದಪ್ಪ ಇದ್ದರೆ ಅವರಿಗೆ ಇಷ್ಟ ಆಗುತ್ತಿರಲಿಲ್ಲ, ದಢೂತಿ ಆಗಿದೆ ಬೇಡ ಎಂದು ಬಿಡುತ್ತಿದ್ದರು. ಇನ್ನು ಸ್ಟೀಲ್ ಪಾತ್ರೆಗಳಂತೂ ಕೆಲಸದವರು ಕದಿಯುತ್ತಾರೆ ಎಂದು ಬೀರುವಿನಲ್ಲಿ ತುಂಬಿಸಿಟ್ಟಿದ್ದರು, ಅದರಲ್ಲಿ ಸ್ವಲ್ಪ ಪಾತ್ರೆಗಳಲ್ಲಿ ರೈಲು ವಿಭಿನ್ನವಾಗಿದ್ದ ಚೊಂಬನ್ನು ಅಕ್ಕ ತೆಗೆದುಕೊಂಡಳು. ನಾನು ಕಾಫಿ ಮಗ್, ಎಲೆ-ಅಡಿಕೆತಟ್ಟೆ, ಅದು ಹೇಗಿತ್ತೆಂದರೆ, ಮಧ್ಯದಲ್ಲಿ ಎಲೆಯ ಶೇಪ್, ಸುತ್ತಲೂ ಅಡಿಕೆ, ಸುಣ್ಣ, ಏಲಕ್ಕಿ ಇಡಲು ಬೇರೆ ಬೇರೆ ಸಣ್ಣ ಪಾರ್ಟಿಶನ್‌ಗಳಿದ್ದವು, ಮನೆಯಲ್ಲಿ ಏನೇ ಫಂಕ್ಷನ್ ಆದರೂ, ಅದರಲ್ಲಿ ಎಲೆ ಅಡಿಕೆ ಇಡುತ್ತಿದ್ದರು, ಅದನ್ನು ನಾನು ತೆಗೆದುಕೊಂಡು ಬಂದೆ.

ಮನೆಯಲ್ಲಿ ಅಮ್ಮನೇ ಕಸೂತಿ ಹಾಕಿದ ಡೋರ್ ಕರ್ಟನ್ ಮತ್ತು ಟೇಬಲ್ ಕ್ಲಾತ್‌ಗಳಿದ್ದವು, ಆ ಕಸೂತಿಗಳೆಲ್ಲಾ ಕಲರ್ ಕಾಂಬಿನೇಷನ್ ಅಷ್ಟೋಂದು ಚೆನ್ನಾಗಿದ್ದವು, ಟೇಬಲ್ ಕ್ಲಾತ್ ಬಟ್ಟೆ ಹರಿಯುವಂತಾಗಿತ್ತು, ಆದರೆ, ಆ ಡಿಜೈನ್ ಏನೂ ಆಗಿರಲಿಲ್ಲ. ಅಮ್ಮ ಹೆಚ್ಚು ಓದಿರಲಿಲ್ಲ, ಆದರೆ, ಇದನ್ನೆಲ್ಲಾ ಎಷ್ಟು ಚೆನ್ನಾಗಿ ಮಾಡಿದ್ದರು. ಕ್ರೋಶಾದಲ್ಲಿ ಕೂಡಾ ಒಂದು ಟೇಬಲ್ ಕ್ಲಾತ್ ಮಾಡಿದ್ದರು, ಅದು ಅಚ್ಚ ಬಿಳಿಯಬಣ್ಣದ ಕ್ಲಾತ್, ಕ್ರೋಶಾ ಹಾಕುವುದು ಸ್ವಲ್ಪ ಕಷ್ಟ ಎಂದು ಹೇಳುತ್ತಾರೆ, ಅದನ್ನು ಚೆನ್ನಾಗಿ ಮಾಡಿದ್ದರು ಅಮ್ಮ. ಅವರದು ಯಾವಾಗಲೂ ಒಂದು ಡೈಲಾಗ್ ಇರುತ್ತಿತ್ತು. ನಿಮ್ಮಂಗೆ ಓದಿದ್ದರೆ ನಾನು ಇನ್ನೂ ಎಲ್ಲವನ್ನೂ ಚೆನ್ನಾಗಿ ಮಾಡುತ್ತಿದ್ದೆ ಎಂದು ನಮಗೆಲ್ಲಾ ಹೇಳುತ್ತಿದ್ದರು.

ಇನ್ನೊಂದು ನನಗೆ ಬೇಸರವನ್ನು ಉಂಟುಮಾಡಿದ್ದು, ಅಮ್ಮ ತುಂಬಾ ಚೆನ್ನಾಗಿ ಉಪ್ಪಿನಕಾಯಿ ಹಾಕುತ್ತಿದ್ದರು, ಒಂದು ದೊಡ್ಡ ಪಿಂಗಾಣಿ ಜಾಡಿ ಇತ್ತು, ಅದನ್ನು ನೋಡಿ ಅಯ್ಯೋ ಉಪ್ಪಿನ ಕಾಯಿಯ ರೆಸಿಪಿಯನ್ನೇ ನಾವು ಕಲಿಯಲಿಲ್ಲವಲ್ಲಾ ಎಂದು ಬೇಸರವಾಗುತ್ತಿತ್ತು. ತಿಥಿಎಲ್ಲಾ ಮುಗಿಸಿ ಹೊರಡುವಾಗ ನನ್ನ ಮನದಲ್ಲಿ ಇದ್ದದ್ದು ಒಂದೇ ಕೊರಗು, ಅಮ್ಮನಿಗೆ ಆಪರೇಷನ್ ಆಗಿ ಮತ್ತು ಕರೋನ ಟೈಮ್‌ನಲ್ಲಿ ಎಲ್ಲಾ ಕಡೆ ಓಡಾಡಲು ಕಷ್ಟವಿದ್ದಾಗ ಅಮ್ಮನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲವೇನೋ ಎನ್ನುವ ಕೊರಗು ನನ್ನ ಮನದಲ್ಲಿ ಉಳಿದಿತ್ತು, ಕಡೆಯದಾಗಿ ಅಮ್ಮ ಬಳಸುತ್ತಿದ್ದ ಚಪ್ಪಲಿಯನ್ನು ತೆಗೆದುಕೊಂಡು ಬೆಂಗಳೂರಿಗೆ ಬಂದೆ…

About The Author

ವಿಜಯಕುಮಾರಿ ಬಿ.

ವಿಜಯಕುಮಾರಿ ಬಿ. ಬೆಂಗಳೂರಿನ ನಿವಾಸಿ. ಟೆಲಿಕಾಂ ಆಫೀಸರ್ ಆಗಿ ಕೆಲಸ ಮಾಡಿ, ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ಸಾಹಿತ್ಯದ ಓದು-ಬರಹದಲ್ಲಿ ಆಸಕ್ತಿ.

2 Comments

  1. Deekshith

    ತುಂಬಾ ಚೆನ್ನಾಗಿ ಇದೆ ಅಮ್ಮ

    Reply
  2. Deekshith tr Deekshi

    It was really well written!!!

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ