‘ನಮ್ಜಯು ಜಾಣೆ; ಮನೆ ಕೆಲಸಾನೂ ಮಾಡಿ, ಅಂಗಡೀನೂ ನಿಭಾಯಿಸ್ತಾಳೆ’ ಎಂದು ಮನೆಮಂದಿಯೆಲ್ಲಾ ಕೊಂಡಾಡಿದವರೇ, ಮೆಚ್ಚಿ ಮುದ್ದಾಡಿದವರೇ… ಎಲ್ಲವೂ ಸರಿಯಿದ್ದಾಗ. ಮೊದಲ ಬಾರಿಯ ಲಾಕ್ಡೌನ್ ಹೇಗೋ ಕಳೆಯಿತು. ಎರಡನೇ ಬಾರಿ ಲಾಕ್ಡೌನ್ ಆಗುವುದಕ್ಕೆ ಒಂದು ವಾರ ಮೊದಲೇ, ಸಹಾಯಕ್ಕಿದ್ದ ಹುಡುಗಿಗೆ ಎರಡು ತಿಂಗಳ ಮುಂಗಡ ಹಣ ನೀಡಿ, ಬುಟಿಕ್ ಬಾಗಿಲು ಹಾಕಿದ್ದೆ. ಆದರೆ ಮುಂದಿನ ನಾಲ್ಕೇ ದಿನದಲ್ಲಿ ಜ್ವರ ಆರಂಭವಾಗಿತ್ತು. ಟೆಸ್ಟಿನಲ್ಲಿ ಕೋವಿಡ್ ಇರುವುದು ದೃಢವಾಗಿತ್ತು. ‘ಕೋವಿಡ್ ಕೇರ್ ಕೇಂದ್ರಗಳು ಈ ಬಾರಿ ಚನ್ನಾಗಿವೆಯಂತೆ. ಅಲ್ಲಿಗೇ ಹೋಗೋದು ವಾಸಿ’ ಎಂದು ಮಾವ ಪ್ರಾರಂಭಿಸಿದ್ದರು.
ಅಲಕಾ ಕಟ್ಟೆಮನೆ ಬರೆದ ಈ ಕತೆ ‘ಚಹರೆ’ ನಿಮ್ಮ ಈ ಭಾನುವಾರದ ಓದಿಗೆ

 

ಹೆಸರಿಗಷ್ಟೇ ಹಬ್ಬ ಇವತ್ತು. ಯಾವ ಸಡಗರ ಸಂಭ್ರಮವೂ ಇಲ್ಲದೆ ಬರೀ ಚಪ್ಪೆ. ಮನೆಮಂದಿ ಯಾರೂ ಇಲ್ಲದೆ ಒಬ್ಬಳೇ ಇದ್ದೇನಲ್ಲ, ಹಾಗಾಗಿ ಎಲ್ಲದಕ್ಕೂ ಉದಾಸೀನ. ಮೈಸೂರಿನ ಹೊರವಲಯದ ಹೊಸ ಬಡಾವಣೆಯೊಂದರಲ್ಲಿ ಕುಳಿತಿರುವ ನನ್ನ ಒಂಟಿತನವನ್ನು ಹಂಚಿಕೊಳ್ಳುತ್ತಿರುವುದು ಇಲ್ಲಿನ ಬಿಕೋ ಎನ್ನುವ ರಸ್ತೆಗಳು ಮತ್ತು ಖಾಲಿ ಸೈಟುಗಳು ಮಾತ್ರ. ನಾವಿರುವ ಬೀದಿಯಲ್ಲಿ ನಾಲ್ಕಾರು ಮನೆಗಳು ಬಂದಿವೆ, ಇಲ್ಲವೆಂದಲ್ಲ. ಆದರೂ… ಏನೋ ಖಾಲಿ, ಹೊರಗೂ… ಒಳಗೂ. ಗಣಪತಿ ಚೌತಿಗಾಗಿ ಮನೆಮಂದಿಯೆಲ್ಲಾ ಊರಿಗೆ ಹೋಗಿದ್ದಾರೆ. ಅಲ್ಲಿ ಹಬ್ಬದ ಗೌಜಿ ಸ್ವಲ್ಪ ಜೋರೇ ಆದ್ದರಿಂದ ಪ್ರತಿ ವರ್ಷ ನಾನೂ ಹೋಗುತ್ತಿದ್ದವಳೇ. ಆದರೆ ಈ ವರ್ಷ… ಊಹುಂ, ಮನಸ್ಸಿಲ್ಲ. ಊರಿಗೆ ಹೋಗುವುದಕ್ಕೆ ಮಾತ್ರವಲ್ಲ, ಇಂದು ಬೆಳಗ್ಗೆ ಏಳುವುದಕ್ಕೂ ಮನಸ್ಸಿರಲಿಲ್ಲ. ಹಾಗಂತ ಎಷ್ಟೊತ್ತು ಮಲಗುವುದು, ನಿದ್ದೆಯೂ ಬಾರದಿರುವಾಗ? ಜೊತೆಗೆ ನನ್ನ ಸುಂದರಿಗೂ ಹೊಟ್ಟೆಗೆ ಹಾಕಬೇಕಲ್ಲ. ನನ್ನ ಮರೆವಿಗಿಷ್ಟು! ನಾನಿರುವುದು ಒಬ್ಬಳೆ ಎಂದೆನಲ್ಲ, ಜೊತೆಗೆ ಸುಂದರಿಯೂ ಇದ್ದಾಳೆ. ಎಂಟು ತಿಂಗಳ ಅಚ್ಚ ಬಿಳಿಯ ಬಣ್ಣದ ಪಮರೇನಿಯನ್ ನಾಯಿಮರಿ (ಶಾಂತಂ ಪಾಪಂ, ನಮ್ಮ ಸುಂದರಿ!) ನನ್ನ ದಿನದ ಏಳುವ ಸಮಯ ಮೀರಿ ಹೋಗಿದ್ದರಿಂದ ನನ್ನ ಕಾಲಿನ ಬಳಿ ಬಂದು ಮೂರು ಬಾರಿ ಹೊದಿಕೆ ಎಳೆದು ಹೋಗಿತ್ತು. ಜೊತೆಗೆ ಅದನ್ನು ಹೊರಗೆ ಬಿಡುವ ಹೊತ್ತೂ ಆಗಿದ್ದರಿಂದ ಎದ್ದು ಬಂದಿದ್ದೆ. ‘ಸದ್ಯ! ಬಂದ್ಯಲ್ಲ’ ಎನ್ನುವಂತೆ ನನ್ನ ಸುತ್ತ ಕುಣಿದಾಡಿ, ನಾ ಗೇಟು ತೆರೆಯುತ್ತಿದ್ದಂತೆ ಹೊರಗೋಡಿತ್ತು ಸುಂದರಿ. ಗಂಟೆ ಒಂಬತ್ತು ಹೊಡೆದಿದ್ದರಿಂದ ನಮ್ಮಿಬ್ಬರ ಹಸಿವಿಗೆ ಗತಿ ಕಾಣಿಸಬೇಕೆಂದು ಗಡಿಬಿಡಿಯಿಂದ ನಾನೂ ಒಳಗೋಡಿದೆ.

*****

ಹಬ್ಬದ ದಿನವೂ ಹೀಗೆ ಒಂಟಿಬಡುಕಿಯಂತೆ ಇರಬೇಕಿತ್ತೇ? ಈ ಪ್ರಶ್ನೆಯನ್ನು ಎಷ್ಟು ಬಾರಿ ಕೇಳಿಕೊಂಡರೂ ಉತ್ತರ ‘ಹೌದು’ ಎಂದೇ ಬರುತ್ತಿತ್ತು ಮನಸ್ಸಿನಲ್ಲಿ. ವಿಶ್ವಾಸವೇ ಉಳಿಯದಲ್ಲಿ ವಿನೋದಕ್ಕೋ ವಿಹಾರಕ್ಕೋ ಆಸಕ್ತಿ ಎಲ್ಲಿ, ಯಾಕಾಗಿ ಉಳಿದೀತು? ಹಾಗಾಗಿ ಮನೆಮಂದಿಯೊಂದಿಗೆ ಊರಿಗಲ್ಲ, ಎಲ್ಲಿಗೆ ಹೋಗುವುದೂ ದೂರ… ಸದ್ಯಕ್ಕೆ. ಗಾಯ ಮಾಯುವಷ್ಟಾದರೂ ಸಮಯ ಬೇಡವೆ? ದೇಹದ ನೋವಿಗೆ ವೈದ್ಯರ ಔಷಧ ಕೆಲಸ ಮಾಡುತ್ತಿದೆ. ಆದರೆ ಮನಸ್ಸಿನ ನೋವಿಗೆ ಕಾಲವೇ ಮದ್ದು. ಹಾಗಾಗಿ ಗಾಯ ಕೆದಕಿ ವ್ರಣವಾಗುವುದು ಬೇಡವೆಂದು ಒಬ್ಬಳೇ ಉಳಿದಿದ್ದೇ ಸರಿಯಾಯಿತು ಎಂದೇ ಮನಸ್ಸು ತೀರ್ಪು ಕೊಡುತ್ತಿತ್ತು. ಛೇ, ನನ್ನಷ್ಟಕ್ಕೆ ನಾನಿರುವಾಗ ಮನಸ್ಸು ಕೆಡಿಸುವ ಆ ಹಳೆಯ ಯೋಚನೆಗಳಿಗೆ ಯಾಕಾದರೂ ತಲೆಯಲ್ಲಿ ಜಾಗ ಕೊಡಬೇಕು ಎಂದು ಎಷ್ಟೇ ತಲೆ ಕುಡುಗಿಕೊಂಡರೂ ಮತ್ತೆ ಅದದೇ ವಿಷಯ ಒತ್ತರಿಸಿಕೊಂಡು ಬರುವುದೆಂದರೆ! ತಿಂಡಿ ತಯಾರಿಸಿ ಹೊಟ್ಟೆಗಿಷ್ಟು ಸುರಿದುಕೊಂಡಾಗ ಸ್ವಲ್ಪ ಹಾಯೆನಿಸಿತು. ತನ್ನ ತಟ್ಟೆಗೆ ತಿಂಡಿ ಬೀಳುತ್ತಿದ್ದಂತೆಯೇ ಧಾವಿಸಿ ಬಂತು ಸುಂದರಿ. ಪಾಪ, ಇದೊಂದೇ ಕಳೆದ ಕೆಲವು ದಿನಗಳಿಂದ ನನ್ನೆಲ್ಲಾ ಕಷ್ಟ-ಸುಖಗಳಲ್ಲಿ ನನ್ನ ಜೊತೆಗಿದ್ದಿದ್ದು… ನನಗೆ ಕೋವಿಡ್ ಬಂದ ದಿನಗಳಲ್ಲೂ.

ನಾನೊಂದು ಸ್ವಂತ ಬುಟಿಕ್ ನಡೆಸುತ್ತಿರುವವಳು, ಮನೆಯ ಗರಾಜಿನಲ್ಲೇ. ಕೆಲವು ವರ್ಷಗಳ ಹಿಂದೆ, ಊರೊಳಗಿದ್ದಾಗ ಶುರು ಮಾಡಿದ್ದ ಉದ್ಯಮವದು. ಈಗೆರಡು ವರ್ಷಗಳ ಹಿಂದೆ ಹೊರವಲಯದ ನಮ್ಮ ಸ್ವಂತ ಮನೆಗೆ ವಾಸಕ್ಕೆ ಬಂದ ಮೇಲೂ ಈ ಬುಟಿಕ್ ಮುಂದುವರೆಸುತ್ತಿದ್ದೇನೆ. ನನ್ನ ಖರೀದಿದಾರರು ಬೇಸರವಿಲ್ಲದೆ ಇಲ್ಲಿಯವರೆಗೂ ಬರುತ್ತಾರೆ. ‘ನಮ್ಜಯು ಜಾಣೆ; ಮನೆ ಕೆಲಸಾನೂ ಮಾಡಿ, ಅಂಗಡೀನೂ ನಿಭಾಯಿಸ್ತಾಳೆ’ ಎಂದು ಮನೆಮಂದಿಯೆಲ್ಲಾ ಕೊಂಡಾಡಿದವರೇ, ಮೆಚ್ಚಿ ಮುದ್ದಾಡಿದವರೇ… ಎಲ್ಲವೂ ಸರಿಯಿದ್ದಾಗ. ಮೊದಲ ಬಾರಿಯ ಲಾಕ್ಡೌನ್ ಹೇಗೋ ಕಳೆಯಿತು. ಎರಡನೇ ಬಾರಿ ಲಾಕ್ಡೌನ್ ಆಗುವುದಕ್ಕೆ ಒಂದು ವಾರ ಮೊದಲೇ, ಸಹಾಯಕ್ಕಿದ್ದ ಹುಡುಗಿಗೆ ಎರಡು ತಿಂಗಳ ಮುಂಗಡ ಹಣ ನೀಡಿ, ಬುಟಿಕ್ ಬಾಗಿಲು ಹಾಕಿದ್ದೆ. ಆದರೆ ಮುಂದಿನ ನಾಲ್ಕೇ ದಿನದಲ್ಲಿ ಜ್ವರ ಆರಂಭವಾಗಿತ್ತು. ಟೆಸ್ಟಿನಲ್ಲಿ ಕೋವಿಡ್ ಇರುವುದು ದೃಢವಾಗಿತ್ತು. ‘ಕೋವಿಡ್ ಕೇರ್ ಕೇಂದ್ರಗಳು ಈ ಬಾರಿ ಚನ್ನಾಗಿವೆಯಂತೆ. ಅಲ್ಲಿಗೇ ಹೋಗೋದು ವಾಸಿ’ ಎಂದು ಮಾವ ಪ್ರಾರಂಭಿಸಿದ್ದರು. ‘ಇಲ್ಯಾರು ನೋಡೋರು? ಮಾಡಾಕಕ್ಕೆ ಯಾರಿದಾರೆ? ನನ್ಕೈಲಂತೂ ಆಗಲ್ಲ’ ಅತ್ತೆಯೂ ದನಿಗೂಡಿಸಿದರು. ‘ವಯಸ್ಸಾದೋರು ಮನೆಲ್ಲಿ ಇದ್ದಾರಲ್ಲಾ. ಮಗಳೂ ಚಿಕ್ಕವಳು. ಸುಮ್ಕೆ ರಿಸ್ಕ್ ಅಲ್ವಾ? ಕೋವಿಡ್ ಕೇರ್ ನಲ್ಲಿದ್ರೇ ಒಳ್ಳೇದು’ ಎಂದು ಪತಿಯೂ ತೀರ್ಪಿತ್ತರು. ನನ್ನ ವೈದ್ಯರಲ್ಲಿ ಈ ಬಗ್ಗೆ ಮಾತನಾಡಿದಾಗ, ನನ್ನ ಲಕ್ಷಣಗಳು ತೀವ್ರವಾಗಿ ಇಲ್ಲದ್ದರಿಂದ ಮನೆಯಲ್ಲೇ ವ್ಯಷ್ಟಿಯಲ್ಲಿ ಇದ್ದು ಚಿಕಿತ್ಸೆ ತೆಗೆದುಕೊಂಡರೆ ಸಾಕು ಎಂದು ಖಡಾಖಂಡಿತವಾಗಿ ಹೇಳಿದರು. ಹಾಗೆ ರೋಗಿಯನ್ನು ಸಂಪೂರ್ಣವಾಗಿ ವ್ಯಷ್ಟಿಯಲ್ಲಿ ಇರಿಸುವುದು ನಮ್ಮ ಮನೆಯಲ್ಲಿ ಕಷ್ಟವೇ ಆಗಿರಲಿಲ್ಲ. ಅತಿಥಿಗಳಿಗಾಗಿ ಮೀಸಲಿರಿಸಿದ್ದ ಕೋಣೆ ಇದಕ್ಕೆ ಪ್ರಶಸ್ತವಾಗಿಯೇ ಇತ್ತು. ಹಾಗಾಗಿ ವೈದ್ಯರ ಮಾತನ್ನು ಮನೆಯವರಿಗೆ ತಿಳಿಸಿ, ಪ್ರತ್ಯೇಕವಾಸದಲ್ಲೇ ಮುಂದುವರಿದೆ. ಬಹುಶಃ ಅದೇ ನನ್ನ ತಪ್ಪು. ಈ ಬಗ್ಗೆ ಮನೆಮಂದಿಗೆ ತಿಳಿಸಿದಾಗ, ಅವರ ಪ್ರತಿಕ್ರಿಯೆ ಏನು ಎಂಬುದನ್ನು ನಾನೇ ಖಾತ್ರಿ ಪಡಿಸಿಕೊಳ್ಳಬೇಕಿತ್ತು. ಆದರೆ ವೈದ್ಯರೇ ಹೇಳಿದ ಮೇಲೆ ಅನುಮಾನಕ್ಕೆ ಆಸ್ಪದವಿಲ್ಲವೆಂದು ನಾ ಭಾವಿಸಿದರೂ, ವಿಷಯ ಬೇರೆಯೇ ಆಗಿತ್ತು. ಮಾರನೆಯ ದಿನ ಬೆಳಗ್ಗೆ ಏಳುವಷ್ಟರಲ್ಲಿ ಮನೆ ಖಾಲಿ! ಎಲ್ಲರೂ ಬ್ಯಾಗು ತುಂಬಿಕೊಂಡು ನನ್ನನ್ನು ಒಂಟಿಯಾಗಿ ಬಿಟ್ಟು ಊರಿಗೆ ಹೋಗಿದ್ದರು. ಹೇಳಿ-ಕೇಳಿ ಮಾಡುವುದಕ್ಕೆ ನನ್ನ ಬಳಿ ಮಾತುಗಳೇ ಉಳಿದಿರಲಿಲ್ಲ.

ಆ ದಿನ ಆರಂಭವಾದ ಒಂಟಿತನ ಇಂದಿಗೂ ಮುಗಿಯುತ್ತಲೇ ಇಲ್ಲ. ತಿಂಗಳ ನಂತರ ಅವರೆಲ್ಲ ಮರಳಿ ಬಂದ ಮೇಲೂ, ನಾ ಒಂಟಿಯೇ. ಇವರುಗಳ ಸಹವಾಸವೇ ಬೇಡ ಎನಿಸಿದ್ದರಿಂದ, ಬುಟಿಕ್ ಕೆಲಸದಲ್ಲಿ ನನ್ನಷ್ಟಕ್ಕೆ ನಾ ತೊಡಗಿಸಿಕೊಳ್ಳೋಣ ಎಂದರೆ ಆರೋಗ್ಯ ಬಿಡುತ್ತಿಲ್ಲ. ದೇಹದ ಒಂದೊಂದು ಮೂಳೆ, ಒಂದೊಂದು ಗಂಟುಗಳಲ್ಲೂ ತೀಕ್ಷ್ಣ ನೋವು. ಆರೋಗ್ಯ ಮೊದಲಿನಂತಾಗಲು ಇನ್ನೂ ಕೆಲವು ಸಮಯ ಬೇಕು ಎಂದಿದ್ದಾರೆ ವೈದ್ಯರು. ನನ್ನ ಪುಟ್ಟ ಮಗಳ ಸಾನಿಧ್ಯದಿಂದ ಮನಸ್ಸಿನ ಗಾಯ ನಿಧಾನಕ್ಕೆ ಮಾಯುತ್ತಿದೆ. ಏನೇ ಆದರೂ ಅಂದು ಬೆಳಗಿನ ನನ್ನ ಅವಸ್ಥೆಯನ್ನು ನೆನಪಿಸಿಕೊಂಡಾಗೆಲ್ಲಾ ಎದೆ ಹಿಂಡುವಂತೆ ನೋವಾಗುತ್ತದೆ. ಮನೆಯಲ್ಲಿ ಹಾಲು-ತರಕಾರಿಯೂ ಸರಿಯಾಗಿಲ್ಲದ, ಹೊರಗೆ ಹೋಗಲೂ ಆಗದ, ಇದ್ಯಾ-ಸತ್ಯಾ ಕೇಳಲೂ ಯಾರೂ ಇಲ್ಲದಂತಹ ಪರಿಸ್ಥಿತಿ. ಒಂಟಿ ಬಡಾವಣೆಯಾದ್ದರಿಂದ ಹೆಚ್ಚು ಅಂಗಡಿಗಳೂ ಇಲ್ಲದೆ, ಲಾಕ್ಡೌನ್ ಸಹ ಘೋಷಣೆಯಾಗಿ ಇನ್ನು ಎರಡು ವಾರ ಕಳೆಯುವುದೇ ದುಸ್ತರ ಎಂಬಂಥ ಸ್ಥಿತಿಯಲ್ಲಿ ನೆರವಾದವಳು ಸರೋಜಮ್ಮ. ಅಲ್ಲೇ ಹತ್ತಿರದಲ್ಲಿ ಹೊಸದಾಗಿ ಕಟ್ಟುತ್ತಿದ್ದ ಮನೆ ಕೆಲಸಕ್ಕೆಂದು ಪಕ್ಕದಲ್ಲಿ ಗುಡಿಸಲು ಹಾಕಿಕೊಂಡವಳು ಆಕೆ. ‘ವಬ್ರೇಯಾ ಇರಾದು? ವಾ…! ನಿಂಬುಟ್ಟೋದೋರ್ ಬಾಯಿಗೆ ಇಟ್ಟಾಕ… ಏನಾರ ಬೇಕಾರೆ ಯೇಳಕ್ಕ, ತಂದ್ಗೊಟ್ಟೇನು’ ಎಂದವಳಲ್ಲಿ ದಾಕ್ಷಿಣ್ಯ ಬಿಟ್ಟು ವಸ್ತುಗಳನ್ನು ತರಿಸಿಕೊಂಡಿದ್ದೆ. ಅವಳು ನನ್ನ ಅಗತ್ಯ ವಸ್ತುಗಳನ್ನು ತರುವುದಕ್ಕೆ ಸುಮಾರು ದೂರ ನಡೆದೇ ಹೋಗಬೇಕಿತ್ತು ಪಾಪ. ಆದರೂ ಬೇಸರಿಸಿಕೊಳ್ಳದೆ, ‘ಜರಾ ಬಂತೂಂತ ಇಂಗೆ ಬುಟ್ಟೋಗದ್ನ ಯೆಲ್ಲೂ ಕಾಣೆ ಕಣಕ್ಕ, ಸಿವಾ ನೋಡ್ತಾವ್ನ ಬುಡಿ’ ಎಂದು ನನ್ನನ್ನು ಸಮಾಧಾನಿಸಿ, ‘ಏನಾರ ಬೇಕಾರೆ ಯೇಳಿ’ ಎಂದು ಮತ್ತೆ ಮತ್ತೆ ಹೇಳಿದ್ದಳು. ಮನೆಮಂದಿಯ ವರ್ತನೆಯನ್ನು ಜೀರ್ಣಿಸಿಕೊಳ್ಳಲಾರದೆ ನಾ ಆಘಾತದಲ್ಲಿದ್ದ ಆ ದಿನಗಳಲ್ಲಿ ತವರಿನವರೂ ಫೋನಲ್ಲೇ ಉಪಚಾರ ಮಾಡಿದ್ದರು.

ದೇಹದ ನೋವಿಗೆ ವೈದ್ಯರ ಔಷಧ ಕೆಲಸ ಮಾಡುತ್ತಿದೆ. ಆದರೆ ಮನಸ್ಸಿನ ನೋವಿಗೆ ಕಾಲವೇ ಮದ್ದು. ಹಾಗಾಗಿ ಗಾಯ ಕೆದಕಿ ವ್ರಣವಾಗುವುದು ಬೇಡವೆಂದು ಒಬ್ಬಳೇ ಉಳಿದಿದ್ದೇ ಸರಿಯಾಯಿತು ಎಂದೇ ಮನಸ್ಸು ತೀರ್ಪು ಕೊಡುತ್ತಿತ್ತು.

ಸರೋಜಮ್ಮ ಮಾತ್ರ, ‘ರೋಗ ರೊಟ್ಟು, ಸಂಸಾರ ಗುಟ್ಟು ಅಂತರಲ್ಲ, ಯಾಕೆಳಿ? ಕಷ್ಟ ಅನ್ನೋತ್ಗ, ನಮ್ಮೋರಲ್ದಿದ್ರೂ ಯಾರೋ ಬತ್ತರೆ ಕಣ್ಬುಡಕ್ಕ. ಇಂಗಳ್ತಾ ಕುಂತಿದ್ರ ರೋಗ ವಾಸಿಯಾದದಾ? ಮಾತ್ರೆ ತಕಂದ್ರಾ? ಬೆಕಾರೆ ಕಾಪಿ ಕಾಸ್ಗೊಟ್ಟೇನು…’ ಎನ್ನುತ್ತಾ ದಿನಕ್ಕೊಮ್ಮೆಯಾದರೂ ನನ್ನ ಕಿಟಕಿಯ ಬಳಿ ಬರುತ್ತಿದ್ದಳು. ʻವಬ್ರೇಯಾಂತ ಅಂಜ್ಕಬ್ಯಾಡಿ, ಬೆಕಾರೆ ಕೂಗಿ ನನ್ನ ರಾತ್ರಿಗʼ ಎನ್ನುತ್ತಿದ್ದಳು. ಆ ಹೊತ್ತಿಗೆ ಅವಳನ್ನು ಬಿಟ್ಟು ನನ್ನ ಬಗ್ಗೆ ಕನಿಕರಿಸಿದ್ದ ಇನ್ನೊಂದು ಜೀವವೆಂದರೆ ನನ್ನ ಸುಂದರಿ ಮಾತ್ರ. ಅದಂತೂ ನನ್ನ ಬಗ್ಗೆ ಎಷ್ಟೊಂದು ಕಾಳಜಿ ಮಾಡುತ್ತಿತ್ತು. ಹತ್ತಿರ ಬರಬೇಡ ಎಂದು ನಾನೆಷ್ಟೇ ದೂರ ಮಾಡಿದರೂ ನನ್ನ ಸುತ್ತಲೇ ಸುತ್ತುತ್ತಿತ್ತಲ್ಲ ಪಾಪದ್ದು. ಇವೆಲ್ಲ ನೆನಪಾದರೆ ಸುಂದರಿಯನ್ನು ಮತ್ತೆ ಮತ್ತೆ ಮುದ್ದಿಸಬೇಕೆನಿಸುತ್ತದೆ. ಮನುಷ್ಯರಿಗೂ ಇಲ್ಲದಷ್ಟು ಅಂತಃಕರಣ ಅದಕ್ಕೆ… ಅರೆರೆ! ಹೊರಗೆ ಒಂದಿಷ್ಟು ಮಕ್ಕಳು ಪಟಾಕಿ ಹೊಡೆಯುತ್ತಿದ್ದಾರೆ. ಎಷ್ಟೊತ್ತಿನಿಂದ ಪಟಾಕಿ ಹೊಡೆಯುತ್ತಿದ್ದಾರೊ ಏನೋ, ನನ್ನರಿವಿಗೆ ಬರಲೇ ಇಲ್ಲವಲ್ಲ. ಇಷ್ಟು ಜೋರು ಶಬ್ದ ಆಗುವುದಿಲ್ಲ ನನ್ನ ಪುಟ್ಟಮರಿಗೆ.

‘ಸುಂದ್ರೀ… ಓ ಸುಂದ್ರೀ, ಬಾಯಿಲ್ಲಿ… ಎಲ್ಲೋದ್ಯೆ ಸುಂದ್ರೀ…’ ಅರೆ! ಎಲ್ಲೋಯ್ತು ನನ್ನ ಸುಂದರಿ? ಪಟಾಕಿ ಶಬ್ದಕ್ಕೆ ಹೆದರಿ ಸೋಫಾದಡಿಗೆ ಹೊಕ್ಕಿರಬೇಕು… ಇಲ್ಲವಲ್ಲ! ‘ಎಲ್ಲಿದ್ದೀಯೆ ಸುಂದ್ರೀ… ಮಂಚದ ಕೆಳಗೆ ಹೋದ್ಯಾ?’ ಎಲಾ ಇದರ! ಇಲ್ಲವಲ್ಲ! ಬಾಗಿಲ ಹಿಂದೆಯೂ ಇಲ್ಲ, ಅಡಿಗೆ ಮನೆಯಲ್ಲೂ ಇಲ್ಲ, ಬಚ್ಚಲುಮನೆ, ಹಿಂಬಾಗಿಲು, ಮಹಡಿಯಲ್ಲಿ, ಗಿಡಗಳ ಹಿಂದೆಯೂ… ಊಹುಂ! ಎಷ್ಟು ಕರೆದರೂ ಸದ್ದಿಲ್ಲ… ಎಲ್ಲೋಯ್ತು ಹಾಗಿದ್ರೆ?

ಆಗಲೇ ನನಗೆ ಅರಿವಾಗಿದ್ದು ಮನೆಯ ಮುಂಬಾಗಿಲು ಹಾರುಹೊಡೆದಿದೆ… ಮಾತ್ರವಲ್ಲ, ಮನೆಯ ಗೇಟೂ ತೆರೆದಿದೆ. ಶಿವನೇ, ಇದೆಂತ ಹೊಣೆಗೇಡಿತನ ನನ್ನದು! ಬೆಳಗ್ಗೆ ಸುಂದರಿಯನ್ನು ಹೊರಗೆ ಬಿಟ್ಟ ಮೇಲೆ ಮುಂಬಾಗಿಲು ಮತ್ತು ಗೇಟು ಭದ್ರಪಡಿಸಲೇ ಇಲ್ಲವಲ್ಲ ನಾನು. ಬೇಡದ ಸುಡುಗಾಡು ಯೋಚನೆಗಳು… ದೂರ ತಳ್ಳಿದರೂ ಮತ್ತೆ ಗುಂಯ್ಯನೆ ಮುತ್ತಿ ನಿನ್ನೆಯಿಂದಲೂ ಜೀವ ಹಿಂಡುತ್ತಿವೆ. ನಾನೇನು ಮಾಡುತ್ತಿದ್ದೇನೆ-ಬಿಡುತ್ತಿದ್ದೇನೆ ಎಂಬುದೇ ನನಗೆ ತಿಳಿಯದಂತಾಗಿದೆ. ಛೇ… ಪಾಪ! ನನ್ನ ಸುಂದರಿ ಎಲ್ಲಿ ಹೋಯಿತು? ಗೇಟಿನ ಹೊರಗೆ ಬಂದವಳು ದೊಡ್ಡ ಧ್ವನಿಯಲ್ಲಿ ಅದನ್ನು ಕೂಗಿಕರೆದು ಹುಡುಕಲಾರಂಭಿಸಿದೆ. ‘ಯಾರಾದರೂ ಒಳಗೆ ನುಗ್ಗಿ ಅದನ್ನು ಕದ್ದೊಯ್ದರೇ?’ ಎಂಬ ಯೋಚನೆ ಬರುತ್ತಿದ್ದಂತೆ ಮತ್ತೂ ಹೆದರಿಕೆಯಾಯ್ತು. ಕಾಂಪೌಂಡಿನ ಆಚೀಚೆಯ ಸಂದಿಗಳಲ್ಲಿ ಹುಡುಕುತ್ತಿದ್ದಾಗ ಬೀದಿಯಲ್ಲಿ ಪಟಾಕಿ ಹೊಡೆಯುತ್ತಿದ್ದ ಹುಡುಗರೂ ಬಂದರು.

‘ಏನಾರಾ ಕಳದೋಯ್ತಾ ಆಂಟಿ?’
‘ಹೂಂ ಕಣ್ರೋ. ನಮ್ಮ ಸುಂದ್ರಿ ನೋಡಿದ್ರಾ?’
‘ಸುಂದ್ರೀನಾ! ಆ ಬಿಳೀ ನಾಯಿ ಮರಿ ಅಲ್ವಾ?’
‘ಹೌದು ಕಣ್ರೋ, ನೋಡಿದ್ರಾ?’
‘ಆವಾಗ್ಲೇ ಆ ಮೋರಿ ಪಕ್ಕದಲ್ಲಿ ಓಡೋಗ್ತಾ ಇತ್ತು. ಪಕ್ಕದ್ ಬೀದೀಗೋಗಿರ್ಬೇಕು’
‘ಅಯ್ಯಯ್ಯೊ! ಆ ಬೀದಿಯಲ್ಲಿ ಒಂದೆರಡು ದೊಡ್ಡ ನಾಯಿಗಳಿವೆಯಲ್ಲಾ’

‘ಹೂಂ ಆಂಟಿ. ಆ ಬಿಳೀ ಕಾರಿನ ಕೆಳಗೆ ಮಲಗಿರತ್ವೆ. ನಾವು ಹೋದ್ರೂ ಅಟ್ಟಿಸಿಕೊಂಡು ಬರತ್ವೆ’ ಎಂಬ ಮಕ್ಕಳ ಮಾತಿಗೆ ಜೀವವೇ ಬಾಯಿಗೆ ಬಂದ ಹಾಗಾಯ್ತು. ನನ್ನ ಪಾಪದ ಸುಂದ್ರಿಯನ್ನು ಹರಿದುಬಿಡುವಷ್ಟು ದೊಡ್ಡ ನಾಯಿಗಳವು… ಕ್ರೂರ ನೋಟದ, ಕೋರೆ ಹಲ್ಲಿನ, ಕಂದು ಬಣ್ಣದ, ಎತ್ತರವಾದ… ಆ ನಾಯಿಗಳ ಚಿತ್ರ ಕಣ್ಮುಂದೆ ಬರುತ್ತಿದ್ದಂತೆ ತತ್ತರಿಸಿದೆ. ಹಾಗೆ ನೋಡಿದರೆ ನಮ್ಮ ಈ ಬಡಾವಣೆಯಲ್ಲಿ ಜನರಿಗಿಂತ ನಾಯಿಗಳ ಸಂಖ್ಯೆಯೇ ಹೆಚ್ಚು. ಇಲ್ಲಿಂದ ಕಣ್ಣಳತೆಯ ದೂರದಲ್ಲಿ ಊರಿನ ಒಂದಿಷ್ಟು ಕಸವನ್ನು ತಂದು ಸುರಿಯುತ್ತಾರೆ. ಆ ತ್ಯಾಜ್ಯದ ಬಳಿಯಲ್ಲಿ ಹತ್ತಿಪ್ಪತ್ತು ನಾಯಿಗಳು ತಮ್ಮ ಮಕ್ಕಳು ಮೊಮ್ಮಕ್ಕಳೊಂದಿಗೆ ವಾಸಿಸುತ್ತಿವೆ. ಹಾಗೆ ವೃದ್ಧಿಯಾದ ಅವುಗಳ ಸಂಸಾರ ನಮ್ಮ ಬಡಾವಣೆಯನ್ನೆಲ್ಲಾ ವ್ಯಾಪಿಸಿದೆ. ಅವುಗಳ ಕೈಗೇನಾದರೂ ಸುಂದರಿ ಸಿಕ್ಕಿದರೆ ನನಗದರ ರೋಮವೂ ಸಿಕ್ಕುವುದಿಲ್ಲ. ಛೇ! ಇದೆಂತಹ ಅಜಾಗರೂಕತೆ ನನ್ನದು. ಮಕ್ಕಳ ಪಟಾಕಿ ಸದ್ದಿಗೆ ನನ್ನ ಗಮನ ಸೆಳೆಯಲು ಯತ್ನಿಸಿರಬೇಕು ಅದು. ನಾನೆಲ್ಲಿದ್ದೆ ಈ ಲೋಕದಲ್ಲಿ! ನನ್ನಿಂದ ಪ್ರತಿಕ್ರಿಯೆಯೇ ಬಾರದಿದ್ದರಿಂದ ಹೆದರಿ ಓಡಿಹೋಗಿದೆ. ಇದನ್ನೀಗ ಹುಡುಕಲೇಬೇಕೆಂದು ಮನೆಯ ಬಾಗಿಲಿಗೆ ಕೀಲಿ ತಗುಲಿಸಿ ಗಾಡಿ ತೆಗೆದು ಗೇಟಿನಿಂದ ಹೊರಬೀಳುವಾಗ ಸಮಯ ಮೂರು ಗಂಟೆ. ಆಗಲೇ ನನ್ನ ಗಮನಕ್ಕೆ ಬಂದಿದ್ದು, ನಾನಿವತ್ತು ಅಡಿಗೆಯನ್ನೂ ಮಾಡಿಲ್ಲ, ಸುಂದರಿಗೂ ಹೊಟ್ಟೆಗೆ ಹಾಕಿಲ್ಲವೆಂದು! ಇವತ್ತ್ಯಾಕೋ ಎದ್ದ ಘಳಿಗೆ…

*****

ಎಲ್ಲೆಂದು ಹುಡುಕಲಿ ನನ್ನ ಸುಂದರಿಯನ್ನು? ನೆತ್ತಿಯ ಮೇಲೆ ಬಿಸಿಲು ಸುಡುತ್ತಿದ್ದರೂ ಅದನ್ನೂ ಮೀರಿ ದುಃಖದಿಂದ ಎದೆ ಸುಡುತ್ತಿತ್ತು. ನನ್ನ ಕಷ್ಟಕಾಲದಲ್ಲಿ ನಾ ನಂಬಿದವರೇ ಅಪರಿಚಿತರಂತೆ ವರ್ತಿಸಿದಾಗ, ಅಪರಿಚಿತರು ನನ್ನವರಾದಾಗ, ರೋಗವೊಂದು ಚಹರೆಗಳನ್ನು ಈ ಪರಿ ಬದಲಿಸಲು ಸಾಧ್ಯವೇ ಎಂದು ದಂಗಾಗಿ ಕುಳಿತಿದ್ದಾಗ, ನನ್ನ ಮೇಲೆ ಪ್ರೀತಿಯ ಮಳೆಗರೆದಿದ್ದ ಮೂಕ ಜೀವಿಯಿದು. ಸ್ವಲ್ಪ ದೂರದೂರಕ್ಕೆ ಮನೆಯಿರುವ ಬಡಾವಣೆಯಿದು. ಇರುವ ಜನ ಒಬ್ಬರಿಗೊಬ್ಬರು ಸಹಾಯಕ್ಕೆ ಬರುವ ಮನಸ್ಥಿತಿಯವರೇ. ಆದರೂ… ‘ಮೇಡಂ, ಇಲ್ಲೆಲ್ಲಾದ್ರೂ ಒಂದು ಬಿಳೀ ಪಮರೇನಿಯನ್ ನಾಯಿಮರಿ ಬಂದಿತ್ತಾ?’ ಗೇಟಿನಲ್ಲಿ ಯಾರದ್ದೋ ನಿರೀಕ್ಷೆಯಲ್ಲಿದ್ದಂತೆ ನಿಂತಿದ್ದ ಒಬ್ಬಾಕೆಯನ್ನು ಕೇಳಿದ್ದೆ. ಒಂದು ಕ್ಷಣ ಯೋಚಿಸಿದ ಆಕೆ, ‘ನಮ್ ಕೆಲಸದವಳು ಹೋಗುವಾಗಲೇ ಒಂದು ಬಿಳಿ ನಾಯ್ಮರಿ ಇಲ್ಲೆಲ್ಲಾ ಓಡಾಡ್ತಿತ್ತು. ಈಗಲ್ಲ, ಮಧ್ಯಾಹ್ನ ಒಂದ್ಗಂಟೆಲ್ಲೇ’ ಎಂದು ಹೇಳಿದಾಗ ಮೈಪರಚಿಕೊಳ್ಳುವಂತಾಯ್ತು. ಒಂದಿಷ್ಟಾದರೂ ಗಮನವಿರಬೇಡವೆ ನನಗೆ?

ಎದುರು ಸಿಕ್ಕವರನ್ನೆಲ್ಲಾ ಕೇಳುತ್ತಲೇ ಮುಂದುವರೆದಿದ್ದೆ ನನ್ನ ಸುಂದರಿಯ ಬಗ್ಗೆ. ಸದಾ ನನ್ನ ಕಾಲು ಸುತ್ತುತ್ತಾ ನಾ ಕೂತಲ್ಲೆಲ್ಲಾ ಬಂದು ಪಕ್ಕದಲ್ಲೇ ಪವಡಿಸುತ್ತಿದ್ದ ಮುಗ್ಧಜೀವಿ ಎಷ್ಟೊಂದು ಹಚ್ಚಿಕೊಂಡಿತ್ತು ನನ್ನ. ಇವತ್ತು ಆ ಪಟಾಕಿ ಸದ್ದಿಗೆ ಎಷ್ಟು ಹೆದರಿತ್ತೋ ಏನೋ. ಅದರ ಕರೆಗೂ ಸ್ಪಂದಿಸದಂತೆ ನಾ ಮನಸ್ಸು ಕೆಡಿಸಿಕೊಂಡಿದ್ದೆ ಎಂದರೆ… ಅತಿಯಾಗಲಿಲ್ಲವೇ ನನ್ನದು? “ಇಲ್ಲೆಲ್ಲಾದ್ರೂ ಬಿಳಿ ನಾಯಿಮರಿ ಬಂದಿತ್ತಾ?” ಎಂಬ ನನ್ನ ಪ್ರಶ್ನೆಗೆ ಅಂಗಳದಲ್ಲಿ ಆಟವಾಗುತ್ತಿದ್ದ ಆ ಮಕ್ಕಳು ಥಟ್ಟನೆ ತಿರುಗಿ ನೋಡಿದರು. ಆಗಲೇ ನಾ ನೋಡಿದ್ದು ಅವರೊಂದಿಗಿದ್ದ ಆ ಬಿಳಿ ನಾಯಿಮರಿಯನ್ನು. ಅರೆ! ಎನ್ನುತ್ತಾ ಕುತೂಹಲದಿಂದ ಗಮನಿಸಿದೆ ಒಮ್ಮೆ. ನಮ್ಮ ಸುಂದರಿಯಂತೆಯೇ ಪಮರೇನಿಯನ್ ಮರಿ ಹೌದಾದರೂ ಇದರ ಕೂದಲು ಮತ್ತು ಮುಖ ಲಕ್ಷಣಗಳೇ ಬೇರೆ. ಅಲ್ಲದೆ ನಮ್ಮ ಸುಂದರಿಗಿಂತ ಸ್ವಲ್ಪ ದೊಡ್ಡದು ಎನಿಸಿತು. ಜೊತೆಗೆ ಅದೂ ನನ್ನನ್ನು ಗುರುತಿಸಲಿಲ್ಲ. ಆದರೆ ಆ ನಾಯಿಯನ್ನು ನಾನು ಗಮನಿಸಿದ ರೀತಿಗೆ ಆ ಮಕ್ಕಳು ಹೌಹಾರಿ ಅದನ್ನು ತಕ್ಷಣ ಒಳಗೆ ಕರೆದುಕೊಂಡು ಹೋದರು. ‘ಇಲ್ಯಾವ ನಾಯಿಯೂ ಬಂದಿಲ್ಲ’ ಎನ್ನುತ್ತಾ ಧಡಾರನೆ ಬಾಗಿಲು ಹಾಕಿಕೊಂಡರು. ‘ಇದೊಳ್ಳೆ ಕಥೆ ಇವರದ್ದು. ಅಲ್ಲ! ನಾನೇನು ಇವರ ನಾಯಿ ಹೊತ್ತೊಯ್ಯವುದಕ್ಕೆ ಬಂದಿದ್ದೇನೆಯೇ?’ ಎಂದು ಗೊಣಗಿಕೊಂಡು ಗಾಡಿ ಮುಂದೋಡಿಸುವ ಮುನ್ನ ಕನ್ನಡಿಯಲ್ಲಿ ಮುಖ ನೋಡಿಕೊಂಡೆ. ನಿದ್ದೆಯಿಲ್ಲದ ಕಣ್ಣು, ಹಸಿದು ಆಯಾಸಗೊಂಡಿದ್ದ ಮುಖ, ಕೆದರಿದ ತಲೆ, ಮುದುರಿ ಮುದ್ದೆಯಾದ ಬಟ್ಟೆ… ಈ ಚಹರೆಯಲ್ಲಿ ಅವರಿಗೆ ನಾನು ನಾಯಿಕಳ್ಳಿಯಂತೆ ಕಂಡಿರಲೂ ಸಾಕು ಎಂದು ನನ್ನಷ್ಟಕ್ಕೇ ನಗು ಬಂತು. ಸುಮಾರು ಎರಡು ತಾಸುಗಳ ಮೇಲಾಗಿತ್ತು ನಾ ಸುಂದರಿಯನ್ನು ಹುಡುಕಲು ಆರಂಭಿಸಿ. ಈಗ ಹೊಟ್ಟೆಯೂ ಚುರುಗುಟ್ಟಿ, ಕುಡಿಯಲು ನೀರೂ ಇಲ್ಲದೆ ಬಿಸಿಲಲ್ಲಿ ತಾರಾಮಾರಿ ತಿರುಗಾಡಿದ್ದಕ್ಕೆ ಸಾಕಷ್ಟು ಆಯಾಸವೂ ಆಗಿತ್ತು. ಅಳು ಬರುವಂತಾಗಿ ಒಂದಿಷ್ಟು ದೂರ ಸುಮ್ಮನೆ ಗಾಡಿ ಓಡಿಸುತ್ತಾ, ಕಡೆಗೆ ಯಾರೂ ಇಲ್ಲದ ಖಾಲಿ ಜಾಗಕ್ಕೆ ಹೋಗಿ ಕೂತೆ.

ನನ್ನ ಪ್ರೀತಿಯ ಸುಂದರಿ… ಹೀಗೆ ನನ್ನಿಂದ ದೂರಾಗಿಬಿಡಬಹುದೆಂಬ ಕಲ್ಪನೆಯೂ ಇರಲಿಲ್ಲ ನನಗೆ. ಎಷ್ಟು ಮಾಡಿದರೂ ಅದರ ಅಗಲಿಕೆಯನ್ನು ನಾನು ಸಹಿಸದವಳಾಗಿದ್ದೆ. ನನ್ನವರು ಎಂದು ನಾನು ಭಾವಿಸಿದವರ ರೂಕ್ಷ, ಕ್ರೂರ ವರ್ತನೆಯಿಂದ ನೊಂದಿದ್ದ ಮನಸ್ಸಿಗೆ ತಂಪೆರೆಯುತ್ತಿದ್ದವರೇ ನನ್ನ ಪುಟ್ಟ ಮಗಳು ಮತ್ತು ಸುಂದರಿ. ಆದರೆ ಈ ಬಾರಿ ಊರಿಗೆ ಹೊರಟವರು ನನ್ನ ಮಗಳನ್ನು ಕರೆದೊಯ್ಯುವಾಗ ತಡೆಯುವ ಮನಸ್ಸಾದರೂ, ನನ್ನ ಸ್ವಾರ್ಥಕ್ಕಾಗಿ ಮಗುವಿನಿಂದ ಹಬ್ಬದ ಸಂಭ್ರಮವನ್ನೇಕೆ ಕಸಿಯುವುದೆಂದು ಸುಮ್ಮನಾಗಿದ್ದೆ. ಈಗ ಸುಂದರಿಯೂ ಸಿಗದೆ ಹೋದಾಗ… ದೇವರೆ! ಇಷ್ಟು ಅನಾಥಪ್ರಜ್ಞೆ ಹಿಂದೆಂದೂ ಕಾಡಿರಲಿಲ್ಲ. ಅದೆಷ್ಟು ಹೊತ್ತು ಅಳುತ್ತಿದ್ದೆನೋ ನನಗೂ ಗೊತ್ತಿಲ್ಲ. ಅತ್ತೂಅತ್ತು ಹಗುರಾಗಿ ಮೊಬೈಲ್ ನೋಡಿದಾಗ ಗಂಟೆ ಆರಾಗುತ್ತಿತ್ತು. ಮೋಡ ಕವಿದಂತಾಗಿ ಒಂದೊಂದು ಹನಿ ಹಾಕುತ್ತಿತ್ತು. ಒಲ್ಲದ ಮನಸ್ಸಿನಿಂದಲೇ ಮನೆಗೆ ಹೊರಡುವುದಕ್ಕೆ ಎದ್ದಾಗಲೇ ಅರ್ಥವಾಗಿದ್ದು ಮನೆಯಿಂದ ಬಹಳ ದೂರಕ್ಕೆ ಬಂದಿದ್ದೇನೆಂದು. ಇದ್ಯಾವುದೋ ಹೊಸ ಜಾಗ ಎಂದು ಜಿಪಿಎಸ್ ಹಾಕುವುದಕ್ಕೆ ನೋಡಿದರೆ ನೆಟ್ವರ್ಕ್ ಇಲ್ಲ ಎಂಬುದು ಗಮನಕ್ಕೆ ಬಂತು. ಇದ್ಯಾವ ದಿಕ್ಕು ಎಂದು ಸುತ್ತ ನೋಡುತ್ತಿರುವಾಗಲೇ ಥಟ್ಟನೆ ಆ ಅಪರಿಚಿತ ವ್ಯಕ್ತಿಯೂ ಗಮನಕ್ಕೆ ಬಂದ!

*****

ಯಾರೀತ? ಇಲ್ಲೇನು ಮಾಡುತ್ತಿದ್ದಾನೆ… ಇಷ್ಟು ನಿರ್ಜನ ಜಾಗದಲ್ಲಿ? ಊಹುಂ… ಅರ್ಥವಾಗಲಿಲ್ಲ. ಆದರೆ ಇವನನ್ನು ಎಲ್ಲೋ ಕಂಡ ಹಾಗಿದೆಯಲ್ಲ! ಎಲ್ಲಿ? ಎಂದು ಯೋಚಿಸುತ್ತಿರುವಂತೆಯೇ ಅರಿವಾಯ್ತು… ಇಲ್ಲಿಯೇ ಕಂಡಿದ್ದೇನೆ ಅವನನ್ನು! ಅಂದರೆ, ಬಹಳಷ್ಟು ಹೊತ್ತಿನಿಂದ ಆತ ಇಲ್ಲೇ ಇದ್ದಾನೆ! ಈಗಿರುವ ಹಾಗೆಯೆ ನನ್ನಿಂದ ಸ್ವಲ್ಪ ದೂರದಲ್ಲಿ ತನ್ನ ಬೈಕ್ ಮೇಲೆ ಕೂತು! ಮಾತ್ರವಲ್ಲ, ನನ್ನನ್ನು ನಾಯಿಕಳ್ಳಿಯಂತೆ ಕಂಡ ಮನೆಮುಂದೆ ನಾನು ಕನ್ನಡಿ ನೋಡಿದಾಗಲೇ ಈ ಚಹರೆ ನನಗೆ ಕನ್ನಡಿಯಲ್ಲಿ ಕಂಡಿತ್ತು… ಎಂಬಲ್ಲಿಗೆ ಆತ ನನ್ನನ್ನು ಹಿಂಬಾಲಿಸುತ್ತಿದ್ದಾನೆ! ಅದೆಷ್ಟೋ ಹೊತ್ತಿನಿಂದ ಹಿಂಬಾಲಿಸುತ್ತಿದ್ದಾನೆ! ಮೊದಲೇ ಹಸಿವು, ನೀರಡಿಕೆ, ದುಃಖದಿಂದ ನಿತ್ರಾಣಳಾಗಿದ್ದ ನನಗೆ ಈಗಂತೂ ತಲೆಸುತ್ತಿ ಬೀಳುವಷ್ಟು ಆತಂಕವಾಯಿತು. ಜಾಣೆ-ಜಾಣೆ ಎಂದು ಬಂಧುಗಳಲ್ಲೆಲ್ಲ ಹೊಗಳಿಸಿಕೊಳ್ಳುತ್ತಿದ್ದ ನಾನು ಇಂದು ಎದ್ದ ಘಳಿಗೆಯಿಂದ ಬರೀ ಪೆದ್ದತನವನ್ನೇ ಮಾಡುತ್ತಿದ್ದೇನಲ್ಲ. ಈಗ ನಾ ಮಾಡಿದ್ದಂತೂ ಮಿತಿಮೀರಿದ ಮೂರ್ಖತನ. ನೋಡುವುದಕ್ಕೆ ಸಾಕಷ್ಟು ಎತ್ತರವಾದ, ಅಗಲವಾದ ಕಟ್ಟುಮಸ್ತಾದ ಜೀವ ಅವನದ್ದು, ಮುಖದ ಚಹರೆ ಅರಿವಿಗೆ ಬಾರದಂತೆ ಗಡ್ಡ ಬಿಟ್ಟಿದ್ದಾನೆ… ಯಾಕಾಗಿ ನನ್ನ ಬೆನ್ನು ಹತ್ತಿದ್ದಾನೋ… ಶನಿ! ಇನ್ಯಾವ ಕೆಡುಕು ಯೋಚನೆ ಅವನ ಮನದಲ್ಲಿ ಉಂಟೋ ಎಂದು ಯೋಚಿಸುತ್ತಿದ್ದಂತೆಯೇ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆದ ಇತ್ತೀಚಿನ ಘಟನೆಯೆಲ್ಲಾ ನೆನಪಾಗಿ, ‘ಕಾಪಾಡೂ…’ ಎಂದು ಕಾಣದ ದೇವರಲ್ಲಿ ಮೊರೆಯಿಡುವಷ್ಟಾಯಿತು ಅವಸ್ಥೆ. ದಿಕ್ಕು ಯಾವುದಾದರೇನು, ಒಟ್ಟಿನಲ್ಲಿ ಯಾವುದೋ ರಸ್ತೆ ಹಿಡಿದು ಮೊದಲು ಇಲ್ಲಿಂದ ಹೋಗಬೇಕು. ಮನೆಯ ದಾರಿ ಆಮೇಲೆ ಗೊತ್ತಾಗುತ್ತದೆ ಎಂದು ಗಾಡಿ ತಿರುಗಿಸುತ್ತಿದ್ದಂತೆಯೇ, ಅವನ ಬೈಕಿಗೂ ಜೀವ ಬಂತು! ‘ಅಯ್ಯೋ’ ಎಂದು ಚೀರುವಂತಾಗಿ ಗಾಬರಿಯಲ್ಲಿ ಗಾಡಿ ಓಡಿಸಲಾರಂಭಿಸಿದೆ. ಆತ ನನ್ನ ಬೆನ್ನಿಗೇ ಇದ್ದ. ಒಂದೆರಡೇ ಕ್ಷಣಗಳಲ್ಲಿ ಆತ ನನ್ನನ್ನು ಸಮೀಪಿಸಬಹುದೆಂಬ ಸತ್ಯದ ಅರಿವಾಗಿ ಯಮನೇ ನನ್ನ ಬೆನ್ನಟ್ಟುತ್ತಿರುವಂತೆ ಭಾಸವಾಯ್ತು. ಆ ಘಳಿಗೆಯಲ್ಲಿ ಸುಂದರಿ ಮತ್ತು ನನ್ನ ಪುಟ್ಟ ಮಗಳ ನೆನಪಾಗಿ, ಹೇಗಾದರೂ ಇವನ ಕೈಯಿಂದ ತಪ್ಪಿಸಿಕೊಂಡು ಬದುಕಬೇಕು ಎಂಬ ಭಾವ ನನ್ನಲ್ಲಿ ಪ್ರಚಂಡ ಶಕ್ತಿಯನ್ನು ತುಂಬುತ್ತಿತ್ತು. ಆದರೆ ನನ್ನ ಮನೋವೇಗಕ್ಕೆ ನನ್ನ ಗಾಡಿ ಓಡುತ್ತಿರಲಿಲ್ಲ. ನಾನೆಷ್ಟೇ ವೇಗದಲ್ಲಿ ಗಾಡಿ ದೌಡಾಯಿಸಿದರೂ ಆತ ನನ್ನಿಂದ ಅಷ್ಟೇ ಅಂತರದಲ್ಲಿ ಇರುತ್ತಿದ್ದ. ಸಂಜೆಯ ತಂಪು ಗಾಳಿಯಲ್ಲೂ ಉಸಿರುಗಟ್ಟುತ್ತಿತ್ತು.

ಹಲವು ತಾಸುಗಳಿಂದ ನೀರೇ ಕುಡಿಯದ ನನ್ನ ದೇಹದಲ್ಲಿ ಬೆವರುವುದಕ್ಕೆ ಅಷ್ಟೊಂದು ನೀರು ಎಲ್ಲಿತ್ತು ಎಂದು ಸೋಜಿಗವಾಗುವಷ್ಟು ಬೆವರಿಳಿಯುತ್ತಿತ್ತು. ಎಲ್ಲಿ, ಯಾವ ದಿಕ್ಕಿಗೆ ಗಾಡಿ ಓಡಿಸಿದರೂ ಎಲ್ಲಿಗೆ ಹೋಗಬೇಕೆಂಬುದು ಅಂದಾಜಾಗುತ್ತಿರಲಿಲ್ಲ. ಮೂಲತಃ ನನ್ನ ಬುದ್ಧಿಗೆ ಏನೂ ತೋಚದೆ ಸುಮ್ಮನೆ ಹುಚ್ಚರಂತೆ ಗಾಡಿ ಓಡಿಸುತ್ತಿದ್ದೆ. ಸಂಜೆ ಬೆಳಕು ಕ್ಷೀಣವಾಗುತ್ತಿದ್ದಂತೆ ನನ್ನ ಸುರಕ್ಷತೆಯ ಆಸೆಯೂ ಕ್ಷೀಣಿಸತೊಡಗಿತು. ಇದೇ ಹೊತ್ತಿಗೆ ಸರಕ್ಕನೆ ನನ್ನನ್ನು ಹಾದು ಹೋದ ಆತ ಅನತಿ ದೂರದಲ್ಲೇ ನನ್ನನ್ನು ಅಡ್ಡಗಟ್ಟಿ ನಿಂತ. ಅವನಿಂದ ತಪ್ಪಿಸಿಕೊಳ್ಳುವ ಕಡೆಯ ಪ್ರಯತ್ನವಾಗಿ ಏನು ಮಾಡಬಹುದು ಎಂಬ ನನ್ನ ಲೆಕ್ಕಾಚಾರವು, ಉದ್ವಿಗ್ನ ಮನಸ್ಸಿನ ಹಳಹಳಿಕೆಯಂತೆ ನನಗೇ ಭಾಸವಾಗುತ್ತಿತ್ತು. ಹಿಂದೆ ತಿರುಗಿಸುವ ತ್ರಾಣವಿಲ್ಲದೆ, ಮುಂದೆ ಹೋಗಲು ಜಾಗವಿಲ್ಲದೆಯೇ ನಾನು ಗಾಡಿ ನಿಧಾನಿಸುತ್ತಿದ್ದಂತೆಯೇ ಕೇಳಿದ್ದ ಆತ-
‘ಹೊತ್ತಲ್ಲದ ಹೊತ್ನಲ್ಲಿ ಬರಬಾರದ ಜಾಗಕ್ಕೆ ಒಬ್ಬರೇ ಯಾಕೆ ಬರ್ತೀರಾ ಮೇಡಂ? ಎಲ್ಲಿಗೆ ಹೋಗಬೇಕು ನಿಮಗೆ?’

ಅವನ ಧ್ವನಿಯಲ್ಲಿದ್ದ ಪ್ರಾಮಾಣಿಕತೆಯಿಂದ ವಿಪರೀತ ಗೊಂದಲಕ್ಕೆ ಬಿದ್ದೆ. ಉತ್ತರಿಸಲೊ, ಬೇಡವೊ ಈ ಗಡ್ಡಧಾರಿ ಆಗಂತುಕನಿಗೆ? ‘ಅದೂ…ನಾನು… ನಾಯಿ…ಮನೆ’ ಕ್ಷೀಣವಾಗಿ ಏನೇನೋ ತೊದಲಿದೆ.

‘ಹೀಗೆಲ್ಲಾ ಸುತ್ತಾಡುವ ಜಾಗ ಅಲ್ಲ ಇದು. ಕತ್ತಲಾಗ್ತಿದೆ, ಮಳೆನೂ ಬರೋಂಗಿದೆ. ನಿಮ್ಮನೆ ಎಲ್ಲಿ?’ ಮತ್ತೆ ಕೇಳಿದ ಆತ. ಉತ್ತರಿಸದೆ ಬೇರೆ ದಾರಿ ಕಾಣಲಿಲ್ಲ. ವರ್ತುಲ ರಸ್ತೆಯ ಪಕ್ಕದಲ್ಲಿದ್ದ ನಮ್ಮ ಬಡಾವಣೆಯ ಹೆಸರು ಹೇಳಿದೆ. ‘ಆದರೆ ನೀವು ಹೊರಟಿರೋ ದಾರಿ ಕೆಂಚನಳ್ಳಿಗೆ ಹೋಗತ್ತೆ. ಇಲ್ಲಿಂದ ಸುಮಾರು ದೂರ ಆಗತ್ತಲ್ಲ ನಿಮ್ಮನೆ. ಅಲ್ನೋಡಿ ನಿಮ್ಮೇರಿಯಾದ ವಾಟರ್ ಟ್ಯಾಂಕ್’ ಎಂದು ಒಂದು ದಿಕ್ಕು ತೋರಿಸಿದ. ಹೌದು! ಎತ್ತರದ ವಾಟರ್ ಟ್ಯಾಂಕು ಸಂಜೆಗಪ್ಪಿನಲ್ಲಿ ದೂರದಿಂದ ಕ್ಷೀಣವಾಗಿ ಗೋಚರಿಸುತ್ತಿತ್ತು. ‘ದಯವಿಟ್ಟು ಇಲ್ಲೆಲ್ಲಾ ಹೀಗೆ ಬರಬೇಡಿ ಮೇಡಂ. ಬನ್ನಿ ನಂಜೊತೆ’ ಎನ್ನುತ್ತಾ ಮೊದಲು ತೋರಿಸಿದ ದಿಕ್ಕಿನೆಡೆಗೆ ಗಾಡಿ ತಿರುಗಿಸಿದ. ದೇವಾ! ನಾನೀಗ ಹೋಗಲೇ ಈ ವಿಚಿತ್ರ ಚಹರೆಯವನ ಹಿಂದೆ?

*****

ಯಾಂತ್ರಿಕವಾಗಿ ಅವನ ಜೊತೆಗೆ ಗಾಡಿ ಓಡಿಸುತ್ತಿದ್ದೆ. ನಮ್ಮ ಬಡಾವಣೆಯ ವಾಟರ್ ಟ್ಯಾಂಕ್ ಗೋಚರಿಸುತ್ತಿದ್ದಂತೆಯೇ ಜೀವ ಬಂದಂತಾಯ್ತು. ಸ್ವಲ್ಪ ಹುರುಪಿನಿಂದ ಗಾಡಿ ಓಡಿಸಿದೆ. ನಮ್ಮ ಬೀದಿಗೆ ಬರುತ್ತಿದ್ದಂತೆ ಗಾಡಿ ನಿಲ್ಲಿಸಿ ಹಿಂದೆ ನೋಡಿದರೆ… ಅವನಿರಲಿಲ್ಲ! ಅರೆ, ನನ್ನನ್ನು ನನ್ನ ಜಾಗಕ್ಕೆ ತಲುಪಿಸಿ ತನ್ನಷ್ಟಕ್ಕೆ ಹೊರಟುಹೋಗಿದ್ದ ಮಹಾರಾಯ. ಛೇ! ಆ ಅಪರಿಚಿತನಿಗೆ ಕನಿಷ್ಟ ಒಂದು ಧನ್ಯವಾದವನ್ನೂ ಹೇಳಲಿಲ್ಲವಲ್ಲ ಎಂದು ಪೇಚಾಡಿಕೊಂಡೆ. ಗಾಡಿ ನಿಲ್ಲಿಸಿ ಮನೆಯ ಬೀಗ ತೆಗೆಯುತ್ತಿದ್ದಂತೆಯೇ ಓಡಿಬಂದಳು ಸರೋಜಮ್ಮ, ಜೊತೆಗೆ ಸುಂದರಿಯೂ! ‘ಅರೆ! ಇದೆಲ್ಲಿತ್ತು?’ ದಿಗ್ಭ್ರಮೆಯಿಂದ ಕೇಳಿದೆ ಅವಳನ್ನು.

‘ಅದೆದ್ದುದೋ ಕಾಣೆ. ಪಕ್ಕುದ್ ಬೀದಿಲ್ಲೊಂದು ದ್ವಡ್ ಕೆಂಚ್ನಾಯೈತಲ್ಲಕ್ಕ, ಅದ್ಬಂದು ಇಲ್ಗಂಟ ಬುಟ್ಟೋಯ್ತು’ ಎಂದರೆ ಯಾವುದನ್ನು, ಯಾರನ್ನು ನಂಬುವುದು ತಿಳಿಯದೆ ಮೆಟ್ಟಿಲ ಮೇಲೆ ಕುಸಿದುಕುಳಿತೆ. ಸುಂದರಿ ಮಡಿಲಲ್ಲಿ ಕುಳಿತು ನನ್ನ ಕೈ ನೆಕ್ಕುತ್ತಿತ್ತು.