Advertisement
ಆಡೂ ಆಟ ಆಡೂ…: ಬಸವನಗೌಡ ಹೆಬ್ಬಳಗೆರೆ ಸರಣಿ

ಆಡೂ ಆಟ ಆಡೂ…: ಬಸವನಗೌಡ ಹೆಬ್ಬಳಗೆರೆ ಸರಣಿ

ಒಳಾಂಗಣ ಆಟವಾಗಿ ಹುಣಸೇ ಬೀಜಗಳನ್ನು ಗೆಲ್ಲುವ ಆಟವಾಡಿ ಬೀಜಗಳನ್ನು ಆಡುತ್ತಿದ್ದೆವು. ಆಗ ಹುಣಸೇಬೀಜಗಳನ್ನು ಕೊಂಡುಕೊಳ್ಳುವವರು ಮನೆ ಮನೆಗೆ ಬರುತ್ತಿದ್ದರಿಂದ ಅವರು ಕೊಡುತ್ತಿದ್ದರಿಂದ ಚಿಲ್ಲರೆ ಕಾಸಿಗೆ ಆಸೆಪಟ್ಟು ಹುಣಸೇಬೀಜಗಳನ್ನು ಗೆಲ್ಲುವುದನ್ನು ಚಾಲೆಂಜ್ ಆಗಿ ಸ್ವೀಕರಿಸುತ್ತಿದ್ದೆವು. ಆದರೆ ಗೋಲಿಯಾಟ ಆಡಿ ಗೋಲಿಗಳನ್ನು ಗೆಲ್ಲುವುದೂ ಸಹ ಪ್ರತಿಷ್ಟೆಯ ವಿಷಯ ಎನಿಸಿಕೊಳ್ಳುತ್ತಿತ್ತಾದರೂ ಗೆದ್ದ ಗೋಲಿಗಳಿಂದ ಒಂದು ರೂಪಾಯಿಯೂ ಲಾಭವಿರಲಿಲ್ಲ. ಚೌಕಾಬಾರ ಆಡಲು ಕವಡೆಗಳನ್ನು ಕೆಲವರು ಬಳಸುತ್ತಿದ್ದರಾದರೂ ನಾವು ಹುಣಸೆಬೀಜಗಳನ್ನು ತೇದುಕೊಂಡೇ ಅವನ್ನೇ ಬಳಸಿಕೊಂಡು ಆಡುತ್ತಿದ್ದೆವು. ಈ ರೀತಿ ತೇದ ಬೀಜಗಳಿಂದ ಕೆಲವರು ಸರಿ ಬೆಸ ಸಂಖ್ಯೆಯ ಆಟ ಆಡುತ್ತಿದ್ದರು.
ಬಸವನಗೌಡ
ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೊಂದನೆಯ ಕಂತು ನಿಮ್ಮ ಓದಿಗೆ

ಆಟಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಳೆಯರಿಂದ ಹಿಡಿದು ವಯಸ್ಸಾದವರವರೆಗೂ ಆಟಗಳನ್ನು ಆಡಲೋ ಅಥವಾ ಆಡಲಾಗದಿದ್ದರೂ ನೋಡಲು ಇಷ್ಟಪಡುತ್ತಾರೆ. ಆಟಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಿವೆ. ಹಿಂದಿನ ಮಕ್ಕಳು ಆಡುತ್ತಿದ್ದ ಆಟಗಳಿಗೆ ಹೋಲಿಸಿದಲ್ಲಿ ಈಗಿನವರು ಆಡುವ ಆಟಗಳು ಬದಲಾಗಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಪೋಷಕರು ತಮ್ಮ ಮಕ್ಕಳಿಗೆ ಆಟ ಆಡಲೇ ಕಳಿಸುತ್ತಿಲ್ಲ ಎಂದೇ ಹೇಳಬಹುದು. ಈಗಿನವಿರಿಗೇನಿದ್ದರೂ ತಮ್ಮ ಮಕ್ಕಳು ರಜಾದಲ್ಲೂ ಕೋಚಿಂಗ್ ಹೋಗಬೇಕು, ಉತ್ತಮ ಅಂಕಗಳನ್ನು ಪಡೆಯಬೇಕು, ಇನ್ನೂ ಚಿಕ್ಕವರಿದ್ದರೂ ಸಹ ಮುಂದೆ ಇನ್ನೂ ಐದಾರು ವರ್ಷಗಳ ಮುಂದೆ ಪಿಯುಸಿ ನಂತರದಲ್ಲಿ ನಡೆಯುವ ನೀಟ್ ಐಐಟಿ, ಸಿಇಟಿ ಎಕ್ಸಾಂ ಗಳ ಪರೀಕ್ಷೆಗೆ ಮಕ್ಕಳನ್ನು ಅಣಿಗೊಳಿಸಲು ಪ್ರಾಥಮಿಕ ಪ್ರೌಢ ಶಾಲೆಯ ಮಕ್ಕಳ ರಜೆಗೂ ಕತ್ತರಿ ಹಾಕಲಾಗುತ್ತಿದೆ!! ಕೆಲ ಕೋಚಿಂಗ್ ಸೆಂಟರ್‌ನವರು ಹಾಗೂ ಶಾಲೆಗಳವರು ಇದಕ್ಕೆ ಕೋಚಿಂಗ್ ಕೊಡುವ ಹೆಸರಿನಲ್ಲಿ ಹಣವನ್ನು ಪೀಕುವ ಜೊತೆ ಮಕ್ಕಳ ರಜೆಗೂ ಅವಕಾಶವಿಲ್ಲದಂತೆ ಮಾಡುತ್ತಾರೆ.

ಹಿಂದೆ ಮಕ್ಕಳು ಪಟ್ಟಣದಲ್ಲಿ ಓದುತ್ತಿದ್ದರೂ ರಜಾ ಅವಧಿಯಲ್ಲಿ ಹಳ್ಳಿಯಲ್ಲಿರುವ ತಮ್ಮ ಅಜ್ಜ ಅಜ್ಜಿಯ ಮನೆಗೆ ಕಳಿಸುತ್ತಿದ್ದರು. ರಜಾ ಅವಧಿ ಮುಗಿಯುವವರೆಗೂ ಅವರು ಅಲ್ಲೇ ಕಾಲ ಕಳೆಯುತ್ತಿದ್ದರು. ಆಡುವ ಆಟಗಳು ಅಷ್ಟೇ. ಮರಕೋತಿಯಾಟ, ಚಿನ್ನಿದಾಂಡು, ಲಗೋರಿ, ಬುಗುರಿ, ಗೋಲಿಯಾಟ, ಜೂಟ್ ಮುಟ್ಟಾಟ, ಕಬ್ಬಡ್ಡಿ, ಕುಂಟಾಟ ಆಡುತ್ತಿದ್ದರು. ಇವು ಹೊರಾಂಗಣ ಆಟಗಳಾದರೆ ಚೌಕಾಬಾರ, ಚೆಸ್, ಕಣ್ಣುಮುಚ್ಚಾಲೆ, ಹುಣಸೇ ಬೀಜಗಳನ್ನು ಗೆಲ್ಲುವ ಆಟ ಆಡುತ್ತಿದ್ದೆವು. ಇನ್ನೂ ವಿಶೇಷ ಅಂದ್ರೆ ಎಸೆದ ಸೈಕಲ್ ಅಥವಾ ಬೈಕ್‌ಗಳ ಹಳೇ ಟೈರ್‌ಗಳನ್ನು ಓಡಿಸುವ ಆಟ ಆಡುತ್ತಿದ್ದರು. ಇದನ್ನು ಆಟವಾಗಿ ಆಡದಿದ್ದರೂ ಒಂದು ಕೋಲು ತೆಗೆದುಕೊಂಡು ಟೈರು ಮುಂದೆ ಹೋಗುವಂತೆ ಹೊಡೆಯುತ್ತಾ ರಸ್ತೆಯಲ್ಲಿ ಹೋಗುತ್ತಿದ್ದರು. ಕೆಲವರು ಇದಕ್ಕೂ ಸ್ಪರ್ಧೆ ಮಾಡುತ್ತಿದ್ದರು. ಈ ಸಮಯದಲ್ಲಿ ಬೈಕಿನ ಟೈರ್ ಇರುವವರು ಗೆಲ್ಲುತ್ತಿದ್ದರು. ಇನ್ನೂ ಕೆಲವರು ಬಳ್ಳಿಯಂತೆ ಬೆಳೆಯುತ್ತಿದ್ದ ಆದರೆ ಕಾಂಡವು ಮಾತ್ರ ಕೋಲಿನಂತೆ ಗಟ್ಟಿ  ಇರುವ ಅದರೆ ಬಾಗಿಸಬಹುದಾಗಿದ್ದ ಗಿಡದ ಕಾಂಡಕ್ಕೆ ಸೆಣಬಿನ ದಾರ ಕಟ್ಟಿ ಬಿಲ್ಲು ಮಾಡಿಕೊಂಡು ಜೋಳದ ಗಿಡದ ದಂಟಿನಿಂದ ಬಾಣವನ್ನು ಮಾಡಿಕೊಂಡು ಅದರ ಮೇಲೆ ಇಟ್ಟು ಬಿಡುವ ಆಡುತ್ತಿದ್ದೆವು. ನಮಗೆ ಆಗ ಮಹಾಭಾರತದ ಪಾತ್ರಗಳ ಪ್ರಭಾವ ಇದ್ದುದರಿಂದ ಬಿಲ್ಲು ಬಾಣ ಆಟವನ್ನು ಹೆಚ್ಚೇ ಆಡುತ್ತಿದ್ದೆವು. ಈಗ ಪ್ಲಾಸ್ಟಿಕ್ ಬಿಲ್ಲು ಬಾಣವನ್ನು ಅಂಗಡಿಯಲ್ಲಿ ಕಾಣಬಹುದು.

ಆಗ ನಾವು ಆಡುವ ಕ್ರಿಕೆಟ್ ಆಟವೂ ಸಹ ಈಗಿನ ಮಕ್ಕಳ ಆಟಕ್ಕೆ ಹೋಲಿಸಿದರೆ ನಾವು ತುಂಬಾ ಕಡಿಮೆ ಖರ್ಚಿನಲ್ಲಿ ಆಡುತ್ತಿದ್ದೆವು. ತೆಂಗಿನ ಮಟ್ಟೆಯನ್ನು ಬ್ಯಾಟನ್ನಾಗಿ ಮಾಡಿಕೊಂಡು, ಯಾವುದಾದರೂ ಗಿಡದ ನೇರವಾಗಿರುವ ಕೋಲುಗಳನ್ನು ವಿಕೆಟ್‌ಗಳನ್ನಾಗಿ ಆಗ ಬರೀ 5 ರೂಪಾಯಿಗೆ ಸಿಗುತ್ತಿದ್ದ ರಬ್ಬರ್ ಬಾಲಿನಲ್ಲಿ ಆಡುತ್ತಿದ್ದೆವು. ಸ್ವಲ್ಪ ಸ್ಥಿತಿವಂತರು ಟೆನ್ನಿಸ್ ಬಾಲಿನಲ್ಲಿ ಆಡುತ್ತಿದ್ದರು. ನನಗೆ ಈ ಐದು ರೂಪಾಯಿಯೂ ಸಿಗದಿದ್ದುದಕ್ಕಾಗಿ ಹಳೇ ಪ್ಲಾಸ್ಟಿಕ್ ಡಬ್ಬಿಯನ್ನು ಬಾಲನ್ನಾಗಿ ಮಾಡಿಕೊಂಡು ಆಡುತ್ತಿದ್ದೆ!! ಆಗ ಮನೆಯ ಓಣಿಯಲ್ಲಿ ಇರುತ್ತಿದ್ದ ಚಿಕ್ಕ ಜಾಗದಲ್ಲಿ ಬೌಂಡರಿ ಮ್ಯಾಚನ್ನು ಆಡುತ್ತಿದ್ದೆವು. ಪಿಚ್ ಕ್ಯಾಚ್ ಆಟವೇ ನಮ್ಮ ಮುಖ್ಯ ಆಟವಾಗಿತ್ತು.

ಒಳಾಂಗಣ ಆಟವಾಗಿ ಹುಣಸೇ ಬೀಜಗಳನ್ನು ಗೆಲ್ಲುವ ಆಟವಾಡಿ ಬೀಜಗಳನ್ನು ಆಡುತ್ತಿದ್ದೆವು. ಆಗ ಹುಣಸೇಬೀಜಗಳನ್ನು ಕೊಂಡುಕೊಳ್ಳುವವರು ಮನೆ ಮನೆಗೆ ಬರುತ್ತಿದ್ದರಿಂದ ಅವರು ಕೊಡುತ್ತಿದ್ದರಿಂದ ಚಿಲ್ಲರೆ ಕಾಸಿಗೆ ಆಸೆಪಟ್ಟು ಹುಣಸೇಬೀಜಗಳನ್ನು ಗೆಲ್ಲುವುದನ್ನು ಚಾಲೆಂಜ್ ಆಗಿ ಸ್ವೀಕರಿಸುತ್ತಿದ್ದೆವು. ಆದರೆ ಗೋಲಿಯಾಟ ಆಡಿ ಗೋಲಿಗಳನ್ನು ಗೆಲ್ಲುವುದೂ ಸಹ ಪ್ರತಿಷ್ಟೆಯ ವಿಷಯ ಎನಿಸಿಕೊಳ್ಳುತ್ತಿತ್ತಾದರೂ ಗೆದ್ದ ಗೋಲಿಗಳಿಂದ ಒಂದು ರೂಪಾಯಿಯೂ ಲಾಭವಿರಲಿಲ್ಲ. ಚೌಕಾಬಾರ ಆಡಲು ಕವಡೆಗಳನ್ನು ಕೆಲವರು ಬಳಸುತ್ತಿದ್ದರಾದರೂ ನಾವು ಹುಣಸೆಬೀಜಗಳನ್ನು ತೇದುಕೊಂಡೇ ಅವನ್ನೇ ಬಳಸಿಕೊಂಡು ಆಡುತ್ತಿದ್ದೆವು. ಈ ರೀತಿ ತೇದ ಬೀಜಗಳಿಂದ ಕೆಲವರು ಸರಿ ಬೆಸ ಸಂಖ್ಯೆಯ ಆಟ ಆಡುತ್ತಿದ್ದರು.

ಚಿನ್ನಿದಾಂಡೂ ಸಹ ಎರಡು ಕೋಲುಗಳಿಂದ ಮಾಡಿದ ಚಿನ್ನಿ ದಾಂಡುವಿನ ಮೂಲಕ ಆಡಬಹುದಿತ್ತೇ ವಿನಃ ಅದಕ್ಕೂ ಹೆಚ್ಚು ಖರ್ಚು ಆಗುತ್ತಿರಲಿಲ್ಲ. ಇನ್ನು ನಾನು ಬೆಳೆದಿದ್ದ ಊರು ನೀರಾವರಿಯ ಸೌಲಭ್ಯ ಇದ್ದುದರಿಂದ ಬೇಸಗೆಯ ರಜಾದಲ್ಲಿ ಹೊಲಕ್ಕೆ ಬುತ್ತಿ ಕೊಡಲು ಹೋದಾನ ಸಣ್ಣ ನೀರಿನ ಕಾಲುವೆಯಲ್ಲಿ ಆಡುತ್ತಿದ್ದೆವು. ನನ್ನ ಸ್ನೇಹಿತರನೇಕರು ಈಜು ಹೊಡೆಯಲು ಹೋಗುತ್ತಿದ್ದರಾದರೂ ನಾನು ಒಮ್ಮೆ ನೀರು ತುಂಬಿರುವ ಚಾನೆಲ್‌ನಲ್ಲಿ ಹೋಗಿ ಅದೃಷ್ಟವಶಾತ್ ಬದುಕಿಬಂದುದ್ದರಿಂದ ನನಗೆ ನೀರೆಂದರೆ ಭಯ ಉಂಟಾಗುತ್ತಿತ್ತು. ಅದಕ್ಕಾಗಿ ನಾನು ಈಜು ಕಲಿಯಲೇ ಇಲ್ಲ. ಈ ಕೊರಗು ಇಂದಿಗೂ ಇದೆ.

ಇನ್ನು ಬುಗುರಿಯ ಆಟವನ್ನು ಆಗ ಬಹಳ ಆಡುತ್ತಿದ್ದೆವು. ಆಗ ಮರದ ಬುಗುರಿ ಬಳಸುತ್ತಿದ್ದೆವು. ಕೆಲವರು ಬುಗುರಿಯನ್ನು ಕೈ ಮೇಲೆ ಆಡಿಸಿಕೊಳ್ಳುತ್ತಿದ್ದರು. ಹೀಗೆ ಇನ್ನೂ ಅನೇಕ ಗ್ರಾಮೀಣ ಕ್ರೀಡೆಗಳನ್ನು ಆಗ ಆಡುತ್ತಿದ್ದರು. ಆದರೆ ಇಂದಿನ ಮಕ್ಕಳು ಆ ಎಲ್ಲಾ ಆಟಗಳನ್ನು ಆಡುತ್ತಿಲ್ಲ. ಬದಲಾಗಿ ಬರೀ ವಿಡಿಯೋ ಗೇಮ್, ಮೊಬೈಲ್ ಗೇಮ್ ಮಾತ್ರ ಆಡುತ್ತಿದ್ದಾರೆ. ದೈಹಿಕ ಕಸರತ್ತು ಬೇಡುವ ಆಟಗಳನ್ನು ಬರೀ ಸ್ಪೋರ್ಟ್ಸ್ ಕೋಟಾದ ಆಸೆಯಿಂದ ಮಾತ್ರ ಆಡುತ್ತಿದ್ದಾರೆ. ಐಪಿಎಲ್ ಬಂದ ಮೇಲಂತೂ ಬಹುತೇಕರು ಬರೀ ಕ್ರಿಕೆಟ್ ಮಾತ್ರ ಆಡಲು ಬಯಸುತ್ತಿದ್ದಾರೆ. ಆಡಿದರೆ ಓಕೆ ಆದರೆ ಬರೀ ನೋಡಲು ಬಯಸುತ್ತಿದ್ದಾರೆ. ನೋಡಿದ್ದರೂ ಓಕೆ ಆದರೆ ಬೆಟ್ಟಿಂಗ್ ಆಡಲು ಬಯಸುತ್ತಿರುವುದು ಮಾತ್ರ ಶೋಚನೀಯದ ಸಂಗತಿಯಾಗಿದೆ.

‘ಶರೀರ ಮಾಧ್ಯಂ ಖಲು ಧರ್ಮ ಸಾಧನಂ’ ಎಂಬಂತೆ ಮೊದಲು ನಮ್ಮ ಶರೀರ ಸದೃಢವಾಗಿ ಚೆನ್ನಾಗಿರಬೇಕು. ಆಟದ ಜೊತೆ ದೈಹಿಕವಾಗಿ ಪರಿಶ್ರಮಪಟ್ಟರೆ ಮಾತ್ರ ಸದೃಡತೆ ಸಾಧ್ಯ. ಇಲ್ಲದಿದ್ದರೆ ದೇಹವು ರೋಗಗಳ ಗೂಡಾದೀತು. ಚಿಕ್ಕ ಚಿಕ್ಕ ವಯಸ್ಸಿನಲ್ಲಿಯೇ ಕಣ್ಣಿಗೆ ಕನ್ನಡಕ, ಆ ವ್ಯಾಧಿ ಈ ವ್ಯಾಧಿ ಎಂದು ಆಸ್ಪತ್ರೆಗೆ ಹೋಗುತ್ತಿರುವ ಮಕ್ಕಳು, ಪೋಷಕರ ಒತ್ತಡಕ್ಕಾಗಿ ಬಾಲ್ಯವನ್ನು ಕಳೆದುಕೊಳ್ಳುತ್ತಿರುವ ಮಕ್ಕಳನ್ನು ನೋಡಿ ಇಷ್ಟೆಲ್ಲಾ ಹೇಳಬೇಕೆನಿಸಿತು. ಸದ್ಯ ನಾನು ಇಂತಹ ಜಮಾನದಲ್ಲಿ ನನ್ನ ಬಾಲ್ಯಇಲ್ಲ ಎಂಬುದೇ ನನ್ನ ಅದೃಷ್ಟ.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ