ಪರದೇಶದ ಪ್ರಜೆ ಅಂತಾದ ಮಾತ್ರಕ್ಕ ಹುಟ್ಟಿನ ಮೂಲ ಬದಲಾಯಿಸಿಕ್ಕೆ ಆಗ್ತದೇನು? ಇಲ್ಲ ಮೈ ಬಣ್ಣ ಬದಲು ಆಗ್ತದೇನು?” ಪವಮಾನನಿಗೆ ತನ್ನ ಬದುಕಿನ ಅಸ್ತಿತ್ತ್ವಕ್ಕ ಕಾರಣರಾದವರನ್ನು ಬಿಟ್ಟು ಅಮೆರಿಕಾದ ಪ್ರಜೆ ಅನ್ನೋ ಅಸ್ತಿತ್ವವನ್ನು ಪಡೆಯೋದೇ ಮುಖ್ಯ ಆದಂಗಿತ್ತು. ರಾಮಾಚಾರರ ಆರೋಗ್ಯ ಸುಧಾರಿಸೊ ಹಂಗ ಕಾಣಲಿಲ್ಲ. ಮುಂದೇನು? ಅನ್ನೋ ಸೀತಾಬಾಯಿಯ ಯೋಚನಿಕಿಂತ, ಊರಿನ ಮಂದಿ ಮಾತೇ ಜಾಸ್ತಿಯಾಯಿತು. ನಾಲ್ಕ ಮಂದಿ ಒಂದೇ ಕಡೆ ಸೇರಿದ್ರು ಅಂದ್ರ ಆಚಾರು, ಪವಮಾನನ ಸುದ್ದಿ ಮಾತಾಡಿಕೊಂಡೇ ಹೊತ್ತು ಕಳೀತಿದ್ರು.
ಕಳೆದ ವಾರವಷ್ಟೇ ನ್ಯೂ ಜೆರ್ಸಿಯಲ್ಲಿ ಬಿಡುಗಡೆಯಾದ ಸರಿತಾ ನವಲಿ ಅವರ “ಆವನಾವನು ಕಾಯ್ವ” ಕಥಾ ಸಂಕಲನದ ಶೀರ್ಷಿಕೆಯ ಕತೆ ಈ ಭಾನುವಾರದ ನಿಮ್ಮ ಓದಿಗೆ

 

ಕಲ್ಲಳ್ಳಿಯ ವೆಂಕಟೇಶದೇವರ ಗುಡಿ ಹಿಂದಿನ ಗುಡ್ಡದಾಗಿನಿಂದ ಸೂರ್ಯ ಮೆಲ್ಲಕ ಮ್ಯಾಲೆ ಏರಲಿಕ್ಕೆ ಹತ್ತಿದ್ದ. ಹಳ್ಳ್ಯಾಗಿನ ಮಂದಿನೂ ಎದ್ದು ತಮ್ಮ-ತಮ್ಮ ಕೆಲಸ ಸುರುಮಾಡಿದ್ರು. ಹೆಣ್ಣು ಮಕ್ಕಳು ಅಂಗಳ ಕಸ ಬಳದು, ನೀರಿನ ಥಳಿ ಹಾಕಿ ರಂಗೋಲಿ ಹಾಕ್ತಿದ್ರ, ಗಂಡಸರು ಕೊಟ್ಟಿಗಿ ಕಸ ಬಳದು, ಬುಟ್ಟಿ ತುಂಬ ಕಸ ತುಂಬಿಕೊಂಡು ತಿಪ್ಪಿಗುಂಡಿಗೆ ಹಾಕಿಬರೋ ತಯಾರಿಲಿದ್ರು. ನಾಗವ್ವ ಹಾಲಿನ ಪಾತ್ರಿ ಹಿಡಕೊಂಡು ಕೊಟ್ಟಿಗಿ ಕಡೆ ಬರೋದನ್ನ ನೋಡಿದ ಆಕಿ ಗಂಡ ನಿಂಗಪ್ಪ ಅವಸರದಿಂದ ಕೈಯಾಗಿದ್ದ ಚುಟ್ಟದ ದಮ್ ಎಳದು, ಅದನ್ನ ನೆಲಕ್ಕ ಒತ್ತಿ ಆರಿಸಿ ಕಸಬರಗಿ ಹಿಡಕೊಂಡು ಕೂತ. ತನ್ನ ಹತ್ರ ಇರೋ ಎರಡು ಆಕಳ, ಮೂರು ಎಮ್ಮಿಗಳ ಹಾಲು ಹಿಂಡಿಕೊಂಡು ವರ್ತನಿ ಮನಿಗೊಳಿಗೆ ಹಾಲು ಹಾಕಿ ಬರೋ ಅವಸರದಲ್ಲಿದ್ದ ನಾಗವ್ವ, ಆಕಳದ ಬೆನ್ನು ಸವರಿಹಾಲಿನ ಪಾತ್ರಿ ಹಿಡಕೊಂಡು ಕೆಳಗ ಕೂತಳು. ಹಾಲು ಹಿಂಡಿ, ಪಾತ್ರಿಯೊಳಗ ಹಾಕಿಕೊಂಡು ವೆಂಕಟೇಶ ದೇವರ ಗುಡಿಯ ಅರ್ಚಕರಾದ ರಾಮಾಚಾರರ ಮನಿಗೆ ಬಂದಳು.

“ಅವ್ವಾರ, ಹಾಲು…. ಹಾಲು ತಂದೇನ್ರೀ, ಅಡಗಿ ಮನಿ ಒಳಗ ಇದ್ದೀರೇನು? ಹಾಲು ಹಾಕಿಸಿಕೊಳ್ರೀ”, ನಾಗವ್ವನ ಧ್ವನಿ ಕೇಳಿ ಫಕ್ಕನೇ ಕಣ್ಣುಬಿಟ್ಟರು ಸೀತಾಬಾಯಿ.

“ಅಯ್ಯ ನಮ್ಮವ್ವ… ಆಗ್ಲೇ ಹಾಲಿನ ನಾಗವ್ವ ಬರೋ ಹೊತ್ತಾಗ್ಯದಲ್ಲ, ಎಷ್ಟೊತ್ತು ಮಲಗಿಬಿಟ್ಟೆ. ದಿನಾ ಆ ಮೂಲಿಮನಿ ದುರ್ಗವ್ವನ ಹುಂಜ ಕ್ಕೊ..ಕ್ಕೊ..ಕೋ ಅನ್ನೋ ಧನಿ ಕೇಳೇ ಎದ್ದು ಬಿಡ್ತಿದ್ದೆ, ಇವತ್ತ್ಯಾಕ ಹೀಂಗಾತು?” ಅವಸರದಿಂದ ಹಾಸಿಗಿ ಮ್ಯಾಲೆ ಎದ್ದುಕೂತರು.

ತನ್ನ ಮುಂಗೈ ನೋಡಿ ಮುಣು-ಮುಣು ಅಂತ ಮಂತ್ರ ಅನಕೋತ ಬಲಗಡೆ ಗ್ವಾಡಿ ಮ್ಯಾಲೆ ಹಾಕಿದ್ದ ವೆಂಕಟೇಶ ದೇವರ ಫೋಟೋಕ್ಕ ಕೈ ಮುಗದು ಎದ್ದು, “ಇಗ ಬಂದೆ.. ತಡಿಯವ್ವ” ಅಂತ ನಾಗವ್ವಗ ಹೇಳಿ, ಹಾಸಿಗಿ ಸುರುಳಿ ಸುತ್ತಿ, ಮೂಲ್ಯಾಗ ಒರಗಿಸಿ, ಮಾರಿ ಮ್ಯಾಲೆ ಬಂದಿದ್ದ ಕೂದಲ ಹಿಂದಕ್ಕ ಸರಿಸಿ, ತಲಿ ಕೂದಲ ಸರಿಮಾಡಿಕೋತ, ಅರ್ಧ ಬಿಚ್ಚಿದ್ದ ಹೆರಳನ್ನು ಎರಡು ಸುತ್ತು ಸುತ್ತಿ ಬುಚುಡ ಕಟ್ಟಿ, ಸೀರಿ ನಿರಿಗಿ ಸರಿಮಾಡಿಕೊಂಡು, ಸೆರಗಿನಿಂದ ಮಾರಿ ಒರೆಸಿಕೋತ ಪಡಸಾಲಿಗೆ ಬಂದು ಬಾಗಲ ತೆಗದರು.

ಸೀತಾಬಾಯಿ ಬಾಗಲ ತಗೀಲಿಕ್ಕೆ ತಡ ಮಾಡಿದಷ್ಟೂ ಹೊತ್ತು ವರ್ತನಿ ಮನಿಗೊಳಿಗೆ ಹಾಲು ಹಾಕಲಿಕ್ಕೆ ತಡ ಆಗ್ತದಂತ ಚಡಪಡಿಸಿಕೋತ ಆ ಕಡೆ-ಈಕಡೆ ನೋಡಿಕೋತ ನಿಂತಿದ್ದ ನಾಗವ್ವ, ಚಿಲಕ ಸಪ್ಪಳ ಕೇಳ್ಸಿದಕೂಡ್ಲೆ ಬಾಗ್ಲದ ಕಡೆ ತಿರುಗಿ, “ಯಾಕ್ರವ್ವ ಏಟೊತ್ತು ಮಾಡಿದ್ರಿ, ಮೈಯಾಗ ಆರಾಮ ಇಲ್ಲೇನು?” ಕಾಳಜಿಯಿಂದ ಕೇಳಿದಳು.

ಆಕಿ ಮೈಯಾಗ ಆರಾಮ ಇಲ್ಲೇನು ಅಂತ ಅಂದಿದ್ದೇ ತಡ ಸೀತಾಬಾಯಿಗೆ ತಮ್ಮ ಗಂಡ ರಾಮಾಚಾರ್ರು ರಾತ್ರಿಯೆಲ್ಲ ಮೈ-ಕೈ ಸೂಲಿಯೆಂದು, ಅವ್ರ ಬಲಗೈ ಮತ್ತ ಬಲಗಾಲು ವಿಪರೀತ ಸೆಳಿಲಿಕ್ಕೆ ಹತ್ತ್ಯಾವ ಅಂತ ರಾತ್ರೆಲ್ಲ ಸರಿಯಾಗಿ ನಿದ್ದಿ ಮಾಡಿರಲಿಲ್ಲ, ತಾವೂ ಇಷ್ಟು ಬೇವಿನ ಎಣ್ಣಿ ಬಿಸಿಮಾಡಿ, ಅವರ ಕೈ-ಕಾಲಿಗೆ ಹಚ್ಚಿ ತಿಕ್ಕಿ ಮಾಲೀಶ್ ಮಾಡಿದ್ದು, ಆದ್ರೂ ಆಚಾರರಿಗೆ ಯಾಕೋ ಕಾಲು ಬ್ಯಾನಿ ಕಡಿಮಿ ಆಗಲಾರದೆ ಇದ್ದಿದ್ದರಿಂದ, ತನಗೂ ಇಡೀ ರಾತ್ರಿ ಅವರ ಸೇವಾ ಮಾಡೋದೇ ಆಗಿ, ಬೆಳಗಾಮುಂಜಾನೆ ಸ್ವಲ್ಪ ನಿದ್ದಿ ಹತ್ತಿತ್ತು ಅಂತ ನೆನಪಾಯಿತು.

“ನಾ ಆರಾಮಾಗೇ ಇದ್ದೀನಿ ನಾಗವ್ವ, ನಮ್ಮನ್ಯಾಗ ಇವರಿಗೆ ಸ್ವಲ್ಪ ಆರಾಮ ಇಲ್ಲ” ಎಂದರು ಸೀತಾಬಾಯಿ.

“ಯಾಕ್ರವ್ವ, ಏನಾತು ಪೂಜಾರಪ್ಪಗ?” ನಾಗವ್ವ ಗಾಬರಿಯಿಂದ ಕೇಳಿದ್ಲು.

“ಏ.. ಘಾಬ್ರಿ ಆಗಂಥದ್ದೇನಲ್ಲ. ಕೈಸೂಲಿ, ಕಾಲುಸೂಲಿಯಂತ ರಾತ್ರೆಲ್ಲ ತ್ರಾಸ ಬಟ್ಟರು. ವಯಸ್ಸಾತು ನೋಡು. ಗುಡಿ ಪೂಜೆ ಮಾಡ್ಲಿಕ್ಕೂ ಕೈಲಾಗವಲ್ಲದು. ಹೀಂಗ ನಡದದ ನೋಡು” ಅಂತ ಅನಕೋತ ಹಾಲು ಹಾಕಿಸಿಕೊಳ್ಳಲಿಕ್ಕೆ ಪಾತ್ರಿ ತರಲಿಕ್ಕಂತ ಅಡಗಿಮನೀಗೆ ಹೋದರು.

“ಇನ್ನಾರ ಮಗ-ಸೊಸಿನ್ನ ಕರಸಕೊಳ್ರೀ ಅವ್ವಾರ, ನಿಮಗೂ ವಯಸ್ಸಾತು.” ನಾಗವ್ವ ಕೂಗಿ ಹೇಳಿದ್ಲು.

ಹಾಲಿನ ಪಾತ್ರೀನ ಅಡಗಿ ಮನಿಯೊಳಗ ಇಟ್ಟು, ಬಚ್ಚಲಕ್ಕ ಹೋಗಿ ಕೈಕಾಲು ತೊಳಕೊಂಡ ಬಂದ ಸೀತಾಬಾಯಿ, ಹಾಸಿಗೆ ಮ್ಯಾಲೆ ಇನ್ನೂ ಮಲಗೇ ಇದ್ದ ರಾಮಾಚಾರರನ್ನ ಎಬ್ಬಿಸಿದರು.

“ಅಲ್ರೀ, ಆಗ್ಲೇ ಹೊತ್ತಾಗ್ಯದ, ಏಳಬಕಾಗಿತ್ತು…. ಅಂಧಂಗ ಕಾಲು ಸೂಲಿ ಹೆಂಗದ? ಇನ್ನು ಸ್ನಾನ, ಸಂಧ್ಯಾವಂದನ ಮುಗಿಸಿ, ಗುಡಿಗಿ ಹೋಗಿ ಬಾಗಲ ತಗೀಬಕಲ್ಲರ್ರಿ. ಇವತ್ತು ಶನಿವಾರ, ಇನ್ನೊಂದು ತಾಸು-ಒಪ್ಪೊತ್ತಿನ್ಯಾಗ ಮಂದಿ, ಮಕ್ಕಳು ಅಂತ ಎಲ್ಲಾರೂ ಗುಡಿಗೆ ಬರ್ಲಿಕ್ಕೆ ಸುರು ಮಾಡ್ತಾರ.”
ಸೀತಾಬಾಯಿಯ ಮಾತಿಗೆ ಧಡಕ್ಕನೆ ಎದ್ದುಕೂತ ರಾಮಾಚಾರರು, “ಏನ… ಆಗ್ಲೇ ಎಬ್ಬಿಸಬಾರದೇನು? ಹೊತ್ತು ಎಷ್ಟಾಗ್ಯದ? ಬಿಸಿಲೇರದರೊಳಗ ಗುಡಿಗೆ ಹೋಗಿಬಿಡ್ತೀನಿ.” ಅಂದರು.

“ಅಲ್ಲ … ನಿಮ್ಮ ಕಾಲಬ್ಯಾನಿ ಹೆಂಗದ? ಮತ್ತ …. ಗುಡಿತನಕ ನಡಕೋತ ಹೋಗಬಕಲ್ಲ?” ಸೀತಾಬಾಯಿ ಕಾಳಜಿಯಿಂದ ಪ್ರಶ್ನಿಸಿದರು.

“ಸ್ವಲ್ಪ ಗುಣ ಆಧಂಗ ಅನ್ನಿಸ್ತದ. ವಯಸ್ಸಾತು. ಒಂದಿನ ಇದ್ದಂಗ ಇನ್ನೊಂದಿನ ಇರಂಗಿಲ್ಲ ನೋಡು.” ಅಂತ ಅನಕೋತ ತಮ್ಮ ಕೈ-ಕಾಲುಗಳನ್ನ ಮಡಚಿ-ಚಾಚಿ ನೋಡಿಕೊಂಡು, ಸಾವಕಾಶಕಾಗಿ ಎದ್ದುನಿಂತರು. ಗ್ವಾಡಿ ಮ್ಯಾಲಿನ ವೆಂಕಟೇಶ ದೇವರ ಫೋಟೋಕ್ಕ ಕೈ ಮುಗುದು, ತಮ್ಮ ಜನಿವಾರನ ಕಿವಿಗೆ ಸುತ್ತಿಗೋತ ಹಿತ್ತಲಕಡಿಗೆ ಹೋದರು.

* * *

ಆಚಾರರು ಸ್ನಾನ-ಸಂಧ್ಯಾವಂದನೆ ಮುಗಿಸಿ, ದೇವರ ಪೆಟ್ಟಿಗಿ ತೊಗೊಂಡು, ಮೆಲ್ಲಕ ಹೆಜ್ಜಿ ಹಾಕಿಕೋತ ಊರು ಹೊರಗ ಧೂರದಾಗ ಇರೋ ಗುಡಿ ಕಡೆ ಹೋಗೋದನ್ನ ನೋಡಿದ ಸೀತಾಬಾಯಿಗೆ ಹಾಲಿನ ನಾಗವ್ವ ಹೇಳಿದ “ಇನ್ನಾರ ಮಗ-ಸೊಸಿನ್ನ ಕರಸಕೊಳ್ರೀ ಅವ್ವಾರ, ನಿಮಗೂ ವಯಸ್ಸಾತು.” ಅನ್ನೋ ಮಾತು ನೆನಪಾದವು.

ಮಗನಿಗೆ ಫೋನ್ ಮಾಡಿ ಮಾತಾಡೋಣ ಅಂತ ಅಂದುಕೊಂಡರೂ, ತಮ್ಮಷ್ಟಕ್ಕ ತಾವೇ ಮಾತಾಡಿಕೊಂಡರು.
“ಇನ್ನು ಸ್ನಾನ-ಪೂಜೆ ಆಗಿ, ಮಡೀಲೆ ಅಡಗಿ ಆಗಬಕು. ವಯಸ್ಸಾದ ಮ್ಯಾಲೆ ಜಡ್ಡು-ಜಾಪತ್ತು ಎಲ್ಲ ಇದ್ದಿದ್ದೆ.” ತಮಗ ತಾವೆ ಅವಸರ ಮಾಡಿಕೋತ, ಅಡಗಿ ಮನ್ಯಾಗ ಮ್ಯಾಲೆ ಕೋಲಿಗೆ ತೂಗು ಹಾಕಿದ್ದ ಸೀರೀನ ಎಳಕೊಂಡು, ನಿರಿಗೆ ಹಾಕಿ ಇಟ್ಟುಕೊಂಡು ಮುಂದಿನ ಕೆಲಸದಾಗ ತೊಡಗಿಕೊಂಡರು.

ಅದೆಷ್ಟೋ ವರ್ಷಗಳಿಂದ ತಮ್ಮ ವಂಶದವರೇ ಪೂಜಾ ಮಾಡಿಕೊಂಡು ಬಂದ ಕಲ್ಲಳ್ಳಿ ವೆಂಕಟರಮಣನ ಗುಡಿಯ ಎಲ್ಲಾ ಜವಾಬ್ದಾರಿಗಳನ್ನೂ ಈಗ ರಾಮಾಚಾರರೇ ವಹಿಸಿಕೊಂಡಿದ್ದರು. ಗುಡಿ ಪೂಜಾದಿಂದ ಬರೋ ಆದಾಯ, ಹಿರೇರಿಂದ ಬಂದ ಆರು ಎಕರೆ ಜಮೀನು ಅವರ ಜೀವನಕ್ಕೆ ಆಧಾರ ಆಗಿದ್ದವು. ತಮ್ಮ ತಂದಿ-ತಾಯಿಗೆ ಒಬ್ಬನೇ ಮಗನಾದ ಅವರು ಸಣ್ಣವರಿದ್ದಾಗಿಂದಲೇ ಸಂಸ್ಕೃತ ಪಾಠ ಎಲ್ಲ ಕಲಿತು ಒಳ್ಳೇ ಪಂಡಿತರಾಗಿದ್ದರು. ಬಳಗ ಅಂತ ಅಕ್ಕ-ಪಕ್ಕದ ಊರಾಗ ಸಂಬಂಧಿಕರಿದ್ದರು. ಊರಿನಿಂದ ಒಂದು ಮೈಲಿ ದೂರದಾಗ ಇರೋ ಮನಿದೇವರಾದ ವೆಂಕಟರಮಣನ ಗುಡಿಗೆ ದಿನಾಲೂ ಹೋಗಿ ಪೂಜಾ ಮಾಡಿಕೊಂಡು ಬರಬೇಕಾಗಿತ್ತು.

ಆದಿನ ತಡವಾಗಿ ಎದ್ದು, ಮೆಲ್ಲಕ ನಡಕೋತ ಆಚಾರರು ಗುಡಿ ಹತ್ರ ಬರೋದ್ರೊಳಗ ಸಾಕಷ್ಟು ಭಕ್ತಾದಿಗಳು ಬಂದು ಆಚಾರ ಬರೋದನ್ನ ಕಾಯ್ಕೋತ ಕೂತಿದ್ರು. ಮುನ್ನೂರು ವರ್ಷದ ಹಳೇ ಗುಡಿ, ಪ್ರದಕ್ಷಿಣಿ ಹಾಕಲಿಕ್ಕೆ ದೊಡ್ಡದಾಗ ಪ್ರಾಂಗಣ, ಗುಡಿ ಸುತ್ತಲೂ ಹಸಿರು ಗುಡ್ಡಗಳು, ಗಿಡ-ಮರಗಳು, ಪುಟ್ಟದಾದ ವೆಂಕಟ್ರಮಣನ ವಿಗ್ರಹ, ಅಲ್ಲಿನ ಸ್ಥಳ ಮಹಾತ್ಮೆ ಸುತ್ತು-ಮುತ್ತಲಿನ ಜನರನ್ನು ಅಲ್ಲಿಗೆ ಬರೋಹಂಗ ಮಾಡ್ತಿದ್ದವು. ತಾವು ಬರೋದನ್ನೇ ಕಾಯ್ತಾ ನಿಂತಿದ್ದ ಜನರನ್ನು ನೋಡಿದ ರಾಮಾಚಾರರು ಮೈ-ಕೈ ಸೂಲಿ ಮರತು ಗುಡಿ ಬಾಗಿಲು ತಗದು ಒಳಗ ಹೋದರು. ಎಲ್ಲಾರೂ ಪ್ರದಕ್ಷಿಣಿ-ನಮಸ್ಕಾರ ಹಾಕೋದ್ರೊಳಗ ದೇವರ ಪೂಜಾಕ್ಕ ತಯಾರಿ ಮಾಡ್ಕೋಬೇಕು ಅಂತ ಅವಸರದಿಂದ ಮುಂದಿನ ಕೆಲಸಗಳಿಗೆ ಮುಂದಾದರು.

ಮಧ್ಯಾಹ್ನದ ತನಕ ಗುಡಿಗೆ ಬರೋ ಭಕ್ತರಿಗೆ ಕಾಯಕೊಂಡು ಕೂತಿದ್ದ ಆಚಾರರು ಆ ದಿನ ತಡವಾಗೆ ಮನಿಗೆ ಬಂದು ಊಟ ಮಾಡಿ, ಪಡಸಾಲ್ಯಾಗ ಚಾಪಿ ಹಾಸಿಕೊಂಡು, ಮಳಕಾಲಿಗೆ ಅಮೃತಾಂಜನ್ ನೀವಿಕೊಂಡು, “ಉಶ್….ಉಶ್” ಅಂತ ಅನಕೋತ, ಬೀಸಣಿಕಿ ಬೀಸಿಕೊಂಡು ಮಲಗಿದ್ದನ್ನು ನೋಡಿದ ಸೀತಾಬಾಯಿ, ಅವರ ಫೋನನ್ನ ಅಡಗಿ ಮನಿಗಿ ತೊಗೊಂಡು ಹೋಗಿ ಮಗನಿಗೆ ಫೋನ್ ಮಾಡಿದರು. ಎರಡು ವರ್ಷದ ಹಿಂದ ಸೂಟಿಗಂತ ಬಂದಿದ್ದ ಮೊಮ್ಮಗ, ಮೊಬೈಲ್ ಫೋನನ್ನ ಹೆಂಗ ಉಪಯೋಗಿಸಬಕು ಅನ್ನೋದನ್ನು ಈ ಅಜ್ಜಿಗೆ ಕಲಿಸಿದ್ದ, ನೆನಪಿಸಿಕೊಂಡರು ಸೀತಾಬಾಯಿ.
ಸರಿ ಹೊತ್ತಿನ್ಯಾಗ ಫೋನ್ ರಿಂಗಾಗಿದ್ದನ್ನು ಕೇಳಿ ಎಚ್ಚರಗೊಂಡ ಪವಮಾನನ ಹೆಂಡತಿ ಮೇಘಾ ಅವನನ್ನು ಎಬ್ಬಿಸಿದಳು.

“ಫೋನ್ ರಿಂಗಾಗ್ಲಿಕತ್ತ್ಯದ. ಇಷ್ಟೊತ್ತಿನ್ಯಾಗ ಯಾರು ಮಾಡ್ತಾರ, ಇಂಡಿಯಾದ ಇರಬೇಕು ನೋಡ್ರಿ”.

ನಿದ್ದಿಯಿಂದ ಎದ್ದು ನೋಡಿದ ಪವಮಾನನಿಗೆ ಫೋನಿನಲ್ಲಿ ಕಂಡ ನಂಬರಿನಲ್ಲಿ ಮೊದಲಿಗೆ ಇಂಡಿಯಾದ ಕೋಡ್ ನಂಬರ್ ಕಾಣಿಸಿ ಗಾಬರಿಯಾಯಿತು.
ನಿದ್ದಿಗಣ್ಣಿನ್ಯಾಗ “ಹಲೋ.. ಯಾರು?” ಅಂದಾಗ ಆ ಕಡೆಯಿಂದ ತಾಯಿಯ ಧ್ವನಿ ಕೇಳಿಸಿತು.

“ಪವಮಾನ… ನಾನೋ…ಅಮ್ಮ ಮಾತಾಡ್ಲಿಕ್ಕೆ ಹತ್ತೀನಿ. ಆರಾಮ ಇದ್ದೀಯಾ? ನಿನ್ನ ಹೆಣ್ತಿ-ಮಕ್ಕಳು ಆರಾಮ ಇದ್ದಾರಾ?”

“ನಾವೆಲ್ಲ ಆರಾಮ ಇದ್ದಿವೇನು ಅಂತ ಕೇಳ್ಲಿಕ್ಕೆ ಇಷ್ಟೊತ್ತಿನ್ಯಾಗ ಫೋನ್ ಮಾಡ್ಯಾರಂತೇನು?” ಸೀತಾಬಾಯಿಯ ಧ್ವನಿ ಕೇಳಿಸಿಕೊಂಡ ಮೇಘಾ ರೇಗಿಕೊಂಡಳು.

“ಇಷ್ಟೊತ್ತಿನ್ಯಾಗ ಯಾಕ ಫೋನ್ ಮಾಡಿಯಮ್ಮ, ಏನಾತು? ನಮಗಿಲ್ಲೆ ಈಗ ನಡುರಾತ್ರಿ ಆಗ್ಯದ.” ಆಕಳಿಸಿದ ಪವಮಾನ.

“ಅಯ್ಯ… ಮರತೇ ಬಿಡ್ತೀನಿ ನೋಡು. ಯಾವಾಗ್ಲೂ ನೀನ ಫೋನ್ ಮಾಡಿರ್ತಿಯಲ್ಲ… ಒಂದು ವಾರದಿಂದ ನಿನ್ನ ಫೋನ್ ಬ್ಯಾರೆ ಬಂದಿರಲಿಲ್ಲ…ಅದಕ್ಕ ಮಾಡಿದೆ. ಪವಮಾನ…. ಈಗೀಗ್ ನಿಮ್ಮಪ್ಪಗ ಗುಡಿ ಪೂಜ, ಕೆಲಸ ಕೈಲಾಗವಲ್ಲದು. ಗುಡಿ ಪೂಜಾ ನಿಂದ್ರಲೂಬಾರದು, ಮತ್ತ ಗುಡಿನೂ ನಮ್ಮ ಕೈಬಿಟ್ಟು ಹೋಗಬಾರದೋ..” ಮಿಡುಕಿದರು.

“ಅಯ್ಯೋ.. ನಾಳೆ ಫೋನ್ ಮಾಡ್ತೀನಿ ಅಂತ ಹೇಳ್ರಿ. ಅವರಿಗೆ ಮುಂಜಾನೆ ಆದಾಗ ಫೋನ್ ಮಾಡಿದ್ರ ಮಡೀಲೇ ದೇವರಮನ್ಯಾಗ ಕೂತಿರ್ತಾರ, ಇನ್ನ ರಾತ್ರಿ ಮಾಡಿದ್ರ ಟಿ.ವಿ. ಸೀರಿಯಲ್ ನೋಡಿಕೋತ ಕೂತಿರ್ತಾರ. ನಾವು ನೋಡಿದ್ರ ಕ್ಯಾರಿಯೋಕಿ ಪಾರ್ಟಿ ಮುಗಿಸಿಕೊಂಡು ಹೈರಾಣಾಗಿ ಬಂದು ಈಗ ಮಲಗೀವಿ. ನಾಳೆ ಮಾಡೀರಂತ, ಈಗ ಇಡ್ರಿ ಫೋನು.” ಜೋರು ಮಾಡಿದಳು ಮೇಘಾ.

“ನಾನು ನಾಳೆ ಮುಂಜಾನೆ ಆದಾಗ ಫೋನ್ ಮಾಡ್ತೀನಮ್ಮ… ನಿಮಗ ರಾತ್ರಿ ಆಗಿರ್ತದ” ಮಾತು ಮುಗಿಸಿದ ಪವಮಾನ.

“ನಾಳೆ ಮುಂಜಾನೆ ಫೋನ್ ಮಾಡ್ತೀನಿ ಅಂದ್ರಿ… ಶನಿವಾರ ಮುಂಜಾನೆ ಪ್ರದ್ಯುಮ್ನಂದು ಬಾಸ್ಕೆಟ್ ಬಾಲ್ ಕ್ಲಾಸ್ ಇರ್ತದ ಅನ್ನೋದನ್ನ ಮರೆತರೇನು?” ಮೇಘಾ ನಿದ್ದಿಯೊಳಗ ಗೊಣಗಿದಳು.

ಆದಿನ ತಡವಾಗಿ ಎದ್ದು, ಮೆಲ್ಲಕ ನಡಕೋತ ಆಚಾರರು ಗುಡಿ ಹತ್ರ ಬರೋದ್ರೊಳಗ ಸಾಕಷ್ಟು ಭಕ್ತಾದಿಗಳು ಬಂದು ಆಚಾರ ಬರೋದನ್ನ ಕಾಯ್ಕೋತ ಕೂತಿದ್ರು. ಮುನ್ನೂರು ವರ್ಷದ ಹಳೇ ಗುಡಿ, ಪ್ರದಕ್ಷಿಣಿ ಹಾಕಲಿಕ್ಕೆ ದೊಡ್ಡದಾಗ ಪ್ರಾಂಗಣ, ಗುಡಿ ಸುತ್ತಲೂ ಹಸಿರು ಗುಡ್ಡಗಳು, ಗಿಡ-ಮರಗಳು, ಪುಟ್ಟದಾದ ವೆಂಕಟ್ರಮಣನ ವಿಗ್ರಹ, ಅಲ್ಲಿನ ಸ್ಥಳ ಮಹಾತ್ಮೆ ಸುತ್ತು-ಮುತ್ತಲಿನ ಜನರನ್ನು ಅಲ್ಲಿಗೆ ಬರೋಹಂಗ ಮಾಡ್ತಿದ್ದವು.

ಪವಮಾನ ಹೇಳಿದ ‘ನಾಳೆ’ ನಾಲ್ಕು ದಿವ್ಸ ಆದ ಮ್ಯಾಲೆ ಬಂತು. ಹತ್ತು-ಹದಿನೈದು ನಿಮಿಷ ಫೋನು ಮಾಡಿ ಮಾತಾಡಿದ ಮಗ, ಅಪ್ಪ-ಅಮ್ಮನ ಬಗ್ಗೆ ಕಾಳಜಿ ಮಾಡೋದಕ್ಕಿಂತ ಪರದೇಶದೊಳಗ ತನಗಿರೋ ಗೋಳನ್ನೇ ಹೇಳಿಕೊಂಡ. ಅವನ ಮಾತು ಕೇಳಿಸಿಕೊಂಡ ತಾಯಿ ಸೀತಾಬಾಯಿ, “ಪರದೇಶಗೊಳಗ ಮಗ ಎಷ್ಟು ಕಷ್ಟ ಪಡತಾನ, ಅವನಿಗ್ಯಾಕ ಹೆಚ್ಚಿನ ತ್ರಾಸ ಕೊಡಬಕು, ಹೆಂಗಿದ್ರೂ ಆಚಾರರು ತಮ್ಮಷ್ಟಕ್ಕ ತಾವ ಓಡಾಡಿಕೊಂಡಿದ್ದಾರಲ್ಲ…” ಅಂತ ಸುಮ್ಮನಾದರೂ ರಾಮಾಚಾರರ ಆರೋಗ್ಯದಾಗ ಏನಾರ ವ್ಯತ್ಯಾಸ ಆದ್ರ ನೂರಾರು ವರುಷಗಳಿಂದ ಅವರ ಮನಿತನದವರೇ ಮಾಡಿಕೋತ ಬಂದಿರೋ ವೆಂಕಟೇಶ ದೇವರ ಗುಡಿ ಪೂಜಾಕ್ಕೇನು ವ್ಯವಸ್ತಿ ಮಾಡೋದು ಅಂತ ಯೋಚಿಸಿ ಗ್ವಾಡಿ ಮ್ಯಾಲಿನ ದೇವರ ಫೋಟೋಕ್ಕ ಕೈ ಮುಗಿದರು.

* * *

ಅಪ್ಪ ರಾಮಾಚಾರರ ಹಂಗೆ ರಾಮಾಚಾರ-ಸೀತಾಬಾಯಿಯ ಒಬ್ಬನೇ ಮಗನಾದ ಪವಮಾನ ಸಣ್ಣ ಹುಡುಗಯಿದ್ದಾಗಿನಿಂದ ಭಾಳ ಚುರುಕ ಇದ್ದ. ಸಾಲಿ ಓದಿನ ಜೋಡಿ, ಮಂತ್ರ-ದೇವರನಾಮ ಎಲ್ಲ ಕಲ್ತಿದ್ದ. ಏಳನೇ ಕ್ಲಾಸ್ ತನಕ ಅವರ ಊರಾಗಿನ ಸಾಲ್ಯಾಗೆ ಓದಿ, ಆಮ್ಯಾಲೆ ಧಾರವಾಡದಾಗ ಸೀತಾಬಾಯಿಯವರ ಅಣ್ಣನ ಮನ್ಯಾಗಿದ್ದು ಓದು ಮುಂದುವರಿಸಿದ್ದ. ಅವನಿಗೆ ಮೆರಿಟ್ಟಿನ್ಯಾಗ ಇಂಜಿನಿಯರಿಂಗ್ ಸೀಟು ಸಿಕ್ಕಾಗ ರಾಮಾಚಾರರು ಸಂತೋಷಪಟ್ಟರೂ ಸೀತಾಬಾಯಿಗೆ ಮನಸಿನ್ಯಾಗ ಅದೇನೋ ಅಳುಕು ಮೂಡಿತ್ತು. ಮಗ ಹೀಂಗೇ ಹೆಚ್ಚಿಗೆ ಓದುಕೋತ ಹೋಗಿ, ದೊಡ್ಡ ನೌಕರಿ ಅಂತ ಊರೂರು ಓಡ್ಯಾಡಿಕೋತ ಇದ್ರ ಮುಂದ ತಮ್ಮ ಹಳ್ಳಿಗೆ ಬಂದು ಇದ್ದು ಗುಡಿ ಪೂಜಾ ಮುಂದುವರೆಸಲಿಕ್ಕೆ ಮನಸು ಮಾಡತಾನೇನು? ಗಂಡನನ್ನು ಪ್ರಶ್ನಿಸಿದ್ದರು. ಮಗನ ಸಾಧನೆ ನೋಡಿ ಸಂತೋಷದಿಂದ ಉಬ್ಬಿಹೋಗಿದ್ದ ಆಚಾರರು, “ಏನ.. ಹೀಂಗ ಪ್ರಶ್ನೆ ಕೇಳ್ತಿಯಲ್ಲ. ನಮ್ಮ ಮಗ ಅಂದ್ರ ಏನು ಅಂದ್ಕೊಂಡಿ, ಅವನು ಎಷ್ಟೇ ವಿದ್ಯಾ ಕಲ್ತ್ರೂ, ಎಂಥಾ ದೊಡ್ಡ ನೌಕರಿ ಮಾಡಿದ್ರೂ, ಅವನಿಗೆ ನಾವು ಕೊಟ್ಟ ಸಂಸ್ಕಾರ ಮರತು ಹೋಗಂಗಿಲ್ಲ..”. ಮಾತು ಮುಂದವರೆಸದೆ ಸೀತಾಬಾಯಿ ಸುಮ್ಮನಾಗಿದ್ದರು.

ಇಂಜಿನಿಯರಿಂಗ್ ಡಿಗ್ರಿ ಕೈಯಾಗ ಬರೋಕಿಂತ ಮೊದಲೇ ಪವಮಾನನ ಕಣ್ಣುಗಳು ಅಮೆರಿಕಾದ ಕನಸು ಕಾಣಲಿಕ್ಕೆ ಸುರುಮಾಡಿದ್ದವು. ತನ್ನ ಜೊತೆಯ ಹುಡುಗರ ಹಂಗ ತಾನೂ ಅಲ್ಲಿನ ಓದಿನ ಎಲ್ಲ ಮಾಹಿತಿಗಳನ್ನ ತಿಳಕೊಂಡು ಅಪ್ಪ-ಅಮ್ಮನ ಮುಂದೆ ಆ ಬಗ್ಗೆ ಮಾತಾಡಿದ್ದ. ಸಂಪ್ರದಾಯಸ್ಥ ತಂದಿ-ತಾಯಿ ವಿದೇಶಕ್ಕ ಹೋಗಲಿಕ್ಕೆ ಏನಂದಾರು ಅನ್ನೋ ಪ್ರಶ್ನೆನೆ ಬರಲಾರದಂಗ ತನ್ನನ್ನು ತಯಾರಿ ಮಾಡಿಕೊಂಡೇ ಊರಿಗೆ ಬಂದ್ದಿದ್ದ.

“ಅಮೇರಿಕಾಗೆ ಹೋದ ಮ್ಯಾಲೂ ದಿನಾ ಸಂಧ್ಯಾವಂದನಿ ಮಾಡ್ತೀನಿ. ಶನಿವಾರ ಒಪ್ಪತ್ತು, ಏಕಾದಶಿ ಎಲ್ಲ ಮಾಡ್ತೀನಿ. ನೀವು ತೋರ್ಸಿದ ಹುಡುಗಿನ್ನೇ ಲಗ್ನ ಆಗ್ತೀನಿ. ಸ್ವಲ್ಪ ವರ್ಷ ಅಲ್ಲಿದ್ದು, ಮತ್ತಿಲ್ಲಿಗೇ ವಾಪಸು ಬರ್ತೀನಿ. ನನಗ ಸಿಕ್ಕಿರೋ ಈ ಅವಕಾಶಕ್ಕ ನೀವು ಇಲ್ಲ ಅನ್ನಬಾರದು” ಅಂತ ಭಾವನಾತ್ಮಕವಾಗಿ ಭಾಷಣ ಬಿಗಿದು, ಮುಂದ ನಾಲ್ಕು ತಿಂಗಳದಾಗ “ಅರಿಜೋನಾ ಸ್ಟೇಟ್ ಯುನಿವರ್ಸಿಟಿ” ನ್ಯಾಗ ಸೀಟು ಗಿಟ್ಟಿಸಿಕೊಂಡು ಅಮೆರಿಕಾದ ಫೀನಿಕ್ಸ್ ಗೆ ಹಾರಿದ್ದ.

* * *

ಮಗ ಮೊದಲಿಗೆ ಒಂದೆರಡು ಸಲ ಊರಿಗೆ ಬಂದು ಹೋದಾಗ ಅವನಲ್ಲಿ ಅಂಥಾ ಬದಲಾವಣೆ ಏನೂ ಕಾಣದ ಸೀತಾಬಾಯಿಗೆ, ಮಗನಿಂದ ಕೇಳಿ ತಿಳಿದಿದ್ದ ಫೀನಿಕ್ಸಿನ ಬರಡು-ಬಂಜರು ಮರುಭೂಮಿಗಿಂತ ಹಸಿರು-ಹಸಿರಾಗಿರೋ ಕಲ್ಲಳ್ಳಿ ಬಗ್ಗೆನೇ ಅವನಿಗೆ ಅಭಿಮಾನ ಅದ ಅಂತ ಅನ್ನಿಸಿತ್ತು. ಮುಂದಿನ ಎರಡು ವರ್ಷದಾಗ ಓದು ಮುಗಿಸಿದ ಮಗನಿಗೆ ನ್ಯೂ ಯಾರ್ಕಿನಲ್ಲಿ ಕೆಲಸ ಸಿಕ್ಕಿತು. ನ್ಯೂ ಜೆರ್ಸಿಯಲ್ಲಿ ಮನಿ ಮಾಡಿ, ಮದುವಿ ಆಗೋ ಯೋಚನೆ ಮಾಡಿದ ಪವಮಾನ. ತಮ್ಮ ವೈನಿ ಕಡೆ ಬಳಗದ ಹುಡುಗಿ ಮೇಘಾಳನ್ನು ಲಗ್ನ ಆಗಲಿಕ್ಕೆ ಒಪ್ಪಿಕೊಂಡ ಪವಮಾನ ಮದುವಿಗಂತ ಬಂದಾಗ ಮಾತ್ರ ಮೊದಲಿನಂತಿಲ್ಲ ಅಂತ ಸೀತಾಬಾಯಿ ಅನಕೊಂಡ್ರು. ಮಗನನ್ನು ನೋಡಿದ ಕೂಡಲೆ ನ್ಯೂ ಜೆರ್ಸಿ ಗಾಳಿ-ನೀರಿನ ರೂಢಿ ಅವನಿಗೆ ಛೊಲೋನೆ ಆಗ್ಯದ ಅನ್ನೋದು ತಾಯಿಗೆ ಗೊತ್ತಾಗಿತ್ತು. ಅವನು ಆಡೋ ಮಾತು, ಮನಿಯೊಳಗ ಚಪ್ಪಲಿ ಹಾಕಿಕೊಂಡು ಓಡಾದೋದು, ಮೈ ಮ್ಯಾಲಿನ ಜನಿವಾರ ಕಾಣಿಸಲಾರದೆ ಇದ್ದದ್ದು ನೋಡಿ ಸೀತಾಬಾಯಿ ಗಾಬರಿಯಾದರು. ಆದ್ರೂ ಮೇಘಾ ಸಂಪ್ರದಾಯಸ್ಥ ಮನಿಯೊಳಗ ಬೆಳೆದ ಹುಡುಗಿ, ಅವನನ್ನು ಹಾದಿಗೆ ತರ್ತಾಳ ಅಂತ ಸಮಾಧಾನ ಪಟ್ಟುಕೊಂಡರು. ಇವ್ರು ಅನ್ಕೊಂಡಿದ್ದು ಒಂದು, ಅಲ್ಲೆ ಆಗಿದ್ದೇ ಬ್ಯಾರೆ. ಲಗ್ನ ಆಗಿ ಮೂರು ವರ್ಷಕ್ಕ ಕೂಸಿನ್ನ ಎತಕೊಂಡು ಬಂದ ಸೊಸಿನ್ನ ಅತ್ತಿ-ಮಾವ ಇಬ್ಬರೂ ಗುರ್ತೇ ಹಿಡೀಲಿಲ್ಲ! ಏನೋ ಅಲ್ಲಿನ ಮಂದ್ಯಾಗ ಬ್ಯಾರೆ ನಮನಿ ಕಾಣಬಾರದೂ ಮತ್ತ ನ್ಯೂ ಜೆರ್ಸಿಯ ಛಳಿಯ ವಾತಾವರಣಕ್ಕ ತಕ್ಕಂಥ ಬಟ್ಟಿ ಹಾಕಿಕೊಳ್ಳುತ್ತಿರಬಹುದು ಅಂತ ಅಂದುಕೊಂಡ ಸೀತಬಾಯಿಗೆ ಮುಂದಿನ ಸ್ವಲ್ಪ ದಿನಗಳೊಳಗೆ ಮಗನ ಜೊತಿಗೆ ಸೊಸೀಗೂ ಪರದೇಶನೇ ಆರಾಮ ಅನ್ಸ್ಯದ ಅಂತ ಗೊತ್ತಾಗಿ ಹೋಯಿತು. ಮೂರು ವರ್ಷದಾಗ ಇಡೀ ಜಗತ್ತನ್ನೇ ನೋಡಿಬಿಟ್ಟೀನಿ ಅನ್ನೋಹಂಗ ಆಕಿ ಆಡ್ತಿದ್ದ ಮಾತುಗಳಿಂದ ಬ್ಯಾಸರ ಆದ್ರೂ, ಏನೋ ಸಣ್ಣ ಹುಡುಗಿ, ಕೂಸಿನ ತಾಯಿ ಅಂತ ಅವರೇ ಸುಧಾರಿಸಿಕೊಂಡು ಹೋದರು.

ಮುಂದಿನ ಸಲ ಊರಿಗೆ ಬರೋದ್ರಾಗ ನ್ಯೂ ಜೆರ್ಸಿನ್ಯಾಗೆ ಸ್ವಂತ ಅಪಾರ್ಟಮೆಂಟ್, ಕೈಯಾಗ ಗ್ರೀನ್ ಕಾರ್ಡ್ ಹಿಡಕೊಂಡು ಬಂದಿಳಿದರು ಮಗ-ಸೊಸಿ, ಇಬ್ಬರು ಮೊಮ್ಮಕ್ಕಳು. ಗ್ರೀನ್ ಕಾರ್ಡ ಸಿಕ್ಕಮ್ಯಾಲೆ ನ್ಯೂ ಯಾರ್ಕಿನ ಕೆಲಸ ಬಿಟ್ಟು ನ್ಯೂ ಜೆರ್ಸಿಯಲ್ಲೇ ಕೆಲಸಕ್ಕೆ ಸೇರಿಕೊಂಡಿದ್ದೀನಿ ಅಂತ ಹೇಳಿದ ಪವಮಾನ. ಈ ಸಲ ಅವರು ಇಲ್ಲಿ ಹಳ್ಳ್ಯಾಗ ಇದ್ದಿದ್ದೇ ಕಮ್ಮಿ. ಆದ್ರೂ ಮಗ-ಸೊಸಿನ್ನ ತಮ್ಮೆದರು ಕೂಡಿಸಿಕೊಂಡು ರಾಮಾಚಾರರು ಮುಂದಿನ ಜೀವನದ ಬಗ್ಗೆ ಮಾತಾಡಿದರು.

“ಪರದೇಶಕ್ಕ ಹೋಗಿ ಇಷ್ಟು ವರ್ಷಾತು. ಮತ್ತ ಯಾವಾಗ ವಾಪಾಸು ಬರಬಕು ಅಂದ್ಕೋಂಡೀದಿ ಪವಮಾನ?”

“ಇನ್ನೊಂದೆರಡು ವರ್ಷ ಆದಮ್ಯಾಲೆ ಯೋಚನಿ ಮಾಡ್ತೀನಿ ಅಪ್ಪ, ಈಗ ಕೆಲಸ ಬದಲಾಯಿಸಿ, ಮನಿ ತೊಗೊಂಡೀನಿ”.

“ಸರಿನಪ್ಪ… ಈ ಬಗ್ಗೆ ಯೋಚನಿ ಮಾಡು.” ರಾಮಾಚಾರರು ಮಾತು ಮುಗಿಸಿದರು. ಪವಮಾನನೂ ಮಾತು ಮುಂದುವರೆಸಲಿಲ್ಲ. ಆದ್ರ ಅಡಗಿ ಮನಿಯೊಳಗ ಬಂದ ಮೇಘಾ ಸಿಟ್ಟಿನಿಂದ ಮಾತಾಡಿದಳು.

“ನಿಮಗ ನಿಮ್ಮ ಮಡಿ-ಮೈಲಿಗಿ, ಗುಡಿ-ಪೂಜಾನೇ ಆಯ್ತು. ಬಾಣಂತನಕ್ಕ ಬರಲಿಲ್ಲ, ಗೃಹಪ್ರವೇಶಕ್ಕ ಬರಲಿಲ್ಲ. ನಾವಿಬ್ಬರೇ ಅಲ್ಲಿ ಎಷ್ಟು ಕಷ್ಟಪಡತೀವಿ ಅಂತ ನಿಮಗ ಹೆಂಗ ಅರ್ಥ ಆಗ್ತದ? ನಾನೂ ಇನ್ನು ಕೆಲಸಕ್ಕ ಸೇರಕೋಬೇಕು ಅಂತ ಇದ್ದೀನಿ. ನೀವಂತೂ ಅಲ್ಲಿಗೆ ಬರಂಗಿಲ್ಲ, ಮಕ್ಕಳನ್ನು ಡೇ ಕೇರಿನ್ಯಾಗ ಬಿಡಬಕಾಗ್ತದ. ಆದ್ರ ನಿಮಗೆ ರೊಕ್ಕ ಬೇಕಾದಾಗಮಾತ್ರ ನಾವ ಕಳಿಸಬೇಕಾಗ್ತದ” ದನಿಯೇರಿಸಿದಳು.

ತಂದಿ-ತಾಯಿ ರೂಢಿಸಿಕೊಂಡ ಬದುಕು ಮತ್ತು ಮಗ-ಸೊಸಿ ಬಯಸಿದ ಬದುಕಿನ ನಡುವೆ ಘರ್ಷಣೆಯಾಗಿತ್ತು. ಇವರು ರೂಢಿಸಿಕೊಂಡಿದ್ದನ್ನು ಅವರು ಬಯಸಲಿಲ್ಲ, ಅವರು ಬಯಸಿದ್ದನ್ನು ಇವರು ರೂಢಿಸಿಕೊಳ್ಳೋದಿಲ್ಲ! ಇವರು ಅವರಿಂದ ಮಗನ ಕರ್ತವ್ಯವನ್ನು ಎದುರು ನೋಡುತ್ತಿದ್ದರು, ಅವರು ಇವರ ಹಿರಿತನದ ಜವಾಬ್ದಾರಿಯನ್ನು ಅಪೇಕ್ಷಿಸುತ್ತಿದ್ದರು!

ಸೊಸಿ ಮಾತು ಕೇಳಿದ ಸೀತಾಬಾಯಿಗೆ ಅಪ್ಪನ ಹತ್ರ ಪವಮಾನ ಹೇಳಿದ ಆ ಎರಡು ವರ್ಷಗಳು ಎಂದೂ ಬರಂಗಿಲ್ಲ ಅಂತ ಖಾತ್ರಿ ಆಯಿತು. ಪಾಪ, ರಾಮಾಚಾರರು ಮಾತ್ರ ಪಂಚಾಂಗ ತಿರುವಿ ಹಾಕಿದ ಸರತಿಗೊಮ್ಮೆ ತಿಂಗಳಗಳ ಲೆಕ್ಕ ಇಡೋದನ್ನ ಬಿಡಲಿಲ್ಲ. ತಿಂಗಳುಗಳು ಕಳೆದು ಸಂವತ್ಸರಗಳು ತಿರುಗಿದರೂ ಮಗಯೇನು ಊರಿನ ಕಡೆ ತಿರುಗಿ ನೋಡಲಿಲ್ಲ.

ಈಗೀಗ ಪವಮಾನ ಅಪ್ಪ-ಅಮ್ಮಗ ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಫೋನ್ ಮಾಡಿ ಮಾತಾಡ್ತಾನ. ಮೇಘಾನೂ ಕೆಲಸ ಮಾಡ್ಲಿಕ್ಕೆ ಸುರುಮಾಡಿರುವದಾಗಿಯೂ, ಮಕ್ಕಳು ದೊಡ್ಡವರಾದಂಗ ದೊಡ್ಡ ಮನಿ ಇರಬಕಂತ ಐದು ಬೆಡ್ ರೂಮಿನ ಮನಿ ತೊಗೊಬೇಕಂತ ಮಾಡೀನಿ ಅಂತ ಮಗ ಅಂದಿದ್ದನ್ನು ರಾಮಾಚಾರರಿಗೆ ಹೇಳಲೇ ಇಲ್ಲ ಸೀತಾಬಾಯಿ. ಮಗ ಈಗ ತಮಗಷ್ಟೇ ಮಗ ಆಗಿರದೆ, ಅವನ ಎರಡು ಮಕ್ಕಳಿಗೆ ಅಪ್ಪ ಆಗಿದ್ದ ಅನ್ನೋ ಮಾತು ಅವರಿಗೆ ಅರ್ಥ ಆಗಿತ್ತು. “ಅವರವರ ಹಾದಿ ಅವರವರಿಗೆ!” ಮನಸ್ಸು ಮಾತನಾಡಿತು.

* * * *

ಕೆಲಸ ಕೈಲಾಗದೆ ಸುಸ್ತಾಗಿ ಕೂಡುತ್ತಿದ್ದ ಆಚಾರ್ರ ಆರೋಗ್ಯದ ಬಗ್ಗೆ ಸೀತಾಬಾಯಿಗೆ ಯೋಚನಿ ಸುರುವಾಯಿತು. ಆಚಾರ್ರಿಗೆ ಹೆಚ್ಚು-ಕಮ್ಮಿಯೇನಾದರೂ ಆದ್ರ ಮುಂದೇನು? ಅನ್ನೋ ಚಿಂತಿಯೊಳಗ ಬತ್ತಿ ಮಾಡಿಕೋತ ಕೂತಿದ್ದಾಗ, ‘ಮಧುಕರಿ ದಾಸರು’ ತಾಳ ಹಾಕಿಕೋತ, ಹಾಡು ಹಾಡಿಕೊಂಡು ಬಂದರು. “ಆವನಾವನು ಕಾಯ್ವ ಅವನಿಯೊಳಗೆ, ಜೀವರಿಗೆ ಧಾತೃ ಶ್ರೀಹರಿಯಲ್ಲದೆ…”. ದಾಸರ ಜೋಳಿಗಿಗೆ ಅಕ್ಕಿ-ಬ್ಯಾಳಿ ಸುರುದು, ದಕ್ಷಿಣಿ ಕೊಟ್ಟು ನಮಸ್ಕಾರ ಮಾಡಿದ ಸೀತಾಬಾಯಿಗೆ ಅಂಗಳದಾಗ ಕಿಟ್ಟಣ್ಣನ ಧ್ವನಿ ಕೇಳಿಸಿತು.

ಮನಿ ಒಳಗ ಬಂದ ಕಿಟ್ಟಣ್ಣ, “ಆರಾಮ ಇದ್ದಿಯೇನು ಮಾಮಿ? ನಮಸ್ಕಾರ ಮಾಡ್ತೀನಿ”. ಸೀತಾಬಾಯಿಗೆ ನಮಸ್ಕಾರ ಮಾಡಿದ. ಅಲ್ಲೇ ನಿಂತಿದ್ದ ದಾಸರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಕಿಟ್ಟಣ್ಣನಿಗೆ, “ಒಳ್ಳೆದಾಗಲಿ” ಅಂತ ಹೇಳಿದ ದಾಸರು ತಾಳ ಹಾಕಿಕೋತ ತಮ್ಮ ಹಾಡು ಮುಂದುವರೆಸಿ, ಓಣಿಯೊಳಗ ನಡಕೋತ ಹೋದರು.

“ನಾನು ಆರಾಮ ಇದ್ದೀನಪ್ಪ, ನೀನು ಎಲ್ಲಿದ್ದಿ ಇಷ್ಟು ದಿವಸ? ಮಂತ್ರಾಲಯಕ್ಕ ಪಾದಯಾತ್ರಾ ಹೋಗಿಬರ್ತೀನಿ ಅಂದು ಹೋದಾಂವ, ಆರು ತಿಂಗಳು ಆದಮ್ಯಾಲೆ ಬಂದಿಯಲ್ಲೋ?” ಕಿಟ್ಟಣ್ಣನನ್ನು ವಿಚಾರಿಸಿದರು ಸೀತಾಬಾಯಿ.

“ನನಗೇನದರಿ ಮಾಮಿ, ಮನಿಯಿಲ್ಲ, ಮನಿಮಂದಿಯಂತ ಯಾರೂ ಇಲ್ಲ….ರಾಯರ ಸೇವಾ ಮಾಡ್ಕೋತ ಮಂತ್ರಾಲಯದೊಳಗೆ ಇದ್ದಬಿಟ್ಟೆ.” ಜೋರಾಗಿ ನಕ್ಕೋತ ಹೇಳಿದ.

“ರಾಯರು ಏನಾರ ಸದ್ಬುದ್ಧಿ ಅನುಗ್ರಹ ಮಾಡಿದ್ರೋ, ಇಲ್ಲಾ ನೀನು ಬರೀ ನೀರು ಹೊರಲಿಕ್ಕೆ ಲಾಯಕ್ಕು ಅಂತ ಅಂದ್ರೋ?” ದೇವರ ಪೆಟ್ಟಿಗಿ ಗಂಟು ಭುಜಕ್ಕ ಹಾಕ್ಕೊಂಡ ರಾಮಾಚಾರರು ಮನಿ ಒಳಗ ಬಂದ್ರು.

“ಆರಾಮ ಇದ್ದಿರೇನ್ರಿ ಮಾಮ? ನಮಸ್ಕಾರ ಮಾಡ್ತೀನಿ” ಆಚಾರರಿಗೆ ನಮಸ್ಕಾರ ಮಾಡಿದ ಕಿಟ್ಟಣ್ಣ.

ಕಿಟ್ಟಣ್ಣ ಸೀತಾಬಾಯಿಗೆ ತವರುಮನಿ ಕಡೆಯಿಂದ ಸಂಬಂಧಿ. ಅವರಪ್ಪ ಎಲ್ಲೋ ದೇಶಾಂತರ ಹೋದ ಮ್ಯಾಲೆ ತಾಯಿ ರಮಾಬಾಯಿ ಒಬ್ಬಕಿನೇ ಈ ಮಗನನ್ನು ಸಾಕಿದ್ದಳು. ತಾನು ನಾಲ್ಕು ಮಂದಿ ಮನಿ ಅಡಗಿ ಕೆಲಸ ಮಾಡಿಕೊಂಡು ಮಗನ ಸಾಲಿಗಿ ಕಳಸಿದ್ರೂ, ಕಿಟ್ಟಣ್ಣಗ ಓದು ಹತ್ತಲಿಲ್ಲ. ತನ್ನ ಮಗನಿಗೆ ದೇಹ ಬೆಳದಿತ್ತೇ ವಿನಃ ಬುದ್ಧಿ ಬೆಳೆದಿಲ್ಲ ಆ ತಾಯಿಗೆ ಗೊತ್ತಾದ ಮ್ಯಾಲೆ ಅವರಿವರ ಕೈಕಾಲು ಹಿಡಕೊಂಡು, ’ಸಾಮೂಹಿಕ ಉಪನಯನ’ ಕಾರ್ಯಕ್ರಮದಾಗ ಮುಂಜವಿ ಮಾಡಿಸಿ ಮಠಕ್ಕ ಸೇರಿಸಿದ್ದಳು. ಅಲ್ಲಿ ಕಿಟ್ಟಣ್ಣನಿಗೆ ಭಾವಿಯಿಂದ ನೀರು ಸೇದಿ ಹಾಕೋ ಕೆಲಸ. ಅದನ್ನು ಹೇಳಿ-ಹೇಳಿ ರಾಮಾಚಾರರು ಆಗಾಗ ಹಾಸ್ಯ ಮಾಡುತ್ತಿದ್ದರು. ತನ್ನ ತಾಯೀನೂ ಹೋದಮ್ಯಾಲೆ ಕಿಟ್ಟಣ್ಣಗ ಯಾರೂ ಇಲ್ಲದಂಗಾಗಿ ತನಗ ಮನಸಿಗೆ ತಿಳದಂಗ ಊರೂರು ತಿರಗ್ತಾ, ಆ ಗುಡಿ-ಈ ಮಠ ಅಂತ ಸೇವಾ ಮಾಡ್ಕೊಂಡು ಇದ್ದುಬಿಟ್ಟಿದ್ದ. ಆಗಾಗ ಕಲ್ಲಳ್ಳಿಗೆ ಬಂದು ಆಚಾರ ಮನ್ಯಾಗ ಠಿಕಾಣಿ ಹೂಡಿ, ಸೀತಾಬಾಯಿಗೆ ಭಾವಿಯಿಂದ ಮಡಿನೀರು ತಂದುಕೊಡ್ತಿದ್ದ.

ಕಿಟ್ಟಣ್ಣ ಬಂದಮ್ಯಾಲೆ ರಾಮಾಚಾರರಿಗೆ ಸಾಕಷ್ಟು ಸಹಾಯ ಆಯಿತು. ಆದ್ರೂ ಒಂದೂ ಮಂತ್ರ ಬರಂಗಿಲ್ಲ, ಸಂಧ್ಯಾವಂದನಿನೂ ಸರಿಯಾಗಿ ಮಾಡಂಗಿಲ್ಲ ಅಂತ ಆಚಾರ್ರು ಸಿಟ್ಟು ಮಾಡ್ತಿದ್ರು. ನಮ್ಮ ಪವಮಾನ ಎಂಟು ವರ್ಷಕ್ಕೇ ಎಷ್ಟೊಂದು ಮಂತ್ರ ಕಲ್ತಿದ್ದ ಅಂತ ಮಗನನ್ನು ನೆನಪಿಸಿಕೊಳ್ತಾಯಿದ್ದರು.
“ನಮ್ಮ ಪವಮಾನ ಅಷ್ಟು ಶಾಣ್ಯಾಯಿದ್ದ…..ನೀನೂ ಇದ್ದಿ ನೋಡು ಧಡ್ಡ ಶಿಖಾಮಣಿ..” ಕಿಟ್ಟಣ್ಣನನ್ನು ಬೈಕೋತ ದೇವರ ಪೂಜಿ ಮಾಡ್ತಿದ್ರು. ಅವನು ಅದನ್ನೆಲ್ಲ ಕಿವಿಗೆ ಹಾಕ್ಕೊಳ್ಳದೇ ಇರ್ತಿದ್ದ.

ಅವನಿಗೆ ಮೆರಿಟ್ಟಿನ್ಯಾಗ ಇಂಜಿನಿಯರಿಂಗ್ ಸೀಟು ಸಿಕ್ಕಾಗ ರಾಮಾಚಾರರು ಸಂತೋಷಪಟ್ಟರೂ ಸೀತಾಬಾಯಿಗೆ ಮನಸಿನ್ಯಾಗ ಅದೇನೋ ಅಳುಕು ಮೂಡಿತ್ತು. ಮಗ ಹೀಂಗೇ ಹೆಚ್ಚಿಗೆ ಓದುಕೋತ ಹೋಗಿ, ದೊಡ್ಡ ನೌಕರಿ ಅಂತ ಊರೂರು ಓಡ್ಯಾಡಿಕೋತ ಇದ್ರ ಮುಂದ ತಮ್ಮ ಹಳ್ಳಿಗೆ ಬಂದು ಇದ್ದು ಗುಡಿ ಪೂಜಾ ಮುಂದುವರೆಸಲಿಕ್ಕೆ ಮನಸು ಮಾಡತಾನೇನು? ಗಂಡನನ್ನು ಪ್ರಶ್ನಿಸಿದ್ದರು.

ದಿನಾ ಕಳದಂಗೆಲ್ಲ ಮನುಷ್ಯ ಸವದು ಸಣ್ಣಗಾಗ್ತಾನೇ ಹೊರತು ವಯಸ್ಸೇನು ಸಣ್ಣದಾಗಂಗಿಲ್ಲಲ? ಒಂದಿನ ಮುಂಜಾನೆ ರಾಮಾಚಾರರಿಗೆ ಹಾಸಿಗೆಯಿಂದ ಏಳಲಿಕ್ಕೇ ಆಗಲಾರದಂಗ ಆಯ್ತು. ಡಾಕ್ಟರ್ ಬಂದು ನೋಡಿ, ಆಚಾರ್ರಿಗೆ ಎಡಭಾಗಕ್ಕ ಲಕ್ವ ಹೊಡದದ ಅಂತ ಹೇಳಿದಾಗ ಏನೂ ತೋಚದಂಗ ಕೂತಬಿಟ್ಟರು ಸೀತಾಬಾಯಿ. ಕಿಟ್ಟಣ್ಣ ದೇವರ ಸೇವ ಬಿಟ್ಟು ಆಚಾರರ ಸೇವಾಕ್ಕ ನಿಂತ. ಪಕ್ಕದ ಊರಾಗಿನ ರಾಮದೇವರ ಗುಡಿ ರಂಗಾಚಾರರು ತಮ್ಮ ಗುಡ್ಯಾಗಿನ ಪೂಜ ಮುಗಿಸಿ ಬಂದು ವೆಂಕಟೇಶದೇವರ ಪೂಜಾನೂ ಮಾಡ್ಲಿಕ್ಕೆ ಸುರು ಮಾಡಿದರು. ಅವರಿಗೆ ಬ್ಯಾರೆ ಕೆಲಸಯಿದ್ದ ದಿನ ಕಿಟ್ಟಣ್ಣನೇ ತನಗ ತಿಳಿದಂಗ ದೇವರ ಪೂಜಾ ಮುಗಿಸಿ, ಮಂಗಳಾರತಿ ಮಾಡಿ ಬರ್ತಿದ್ದ.

ಪವಮಾನ ಈ ತಿಂಗಳು ಬರ್ತೀನಿ, ಮುಂದಿನ ತಿಂಗಳು ಬರ್ತೀನಿ ಅಂತ ಹೇಳಿಕೋತ ಆರು ತಿಂಗಳಾದರೂ ಹಾಸಿಗಿ ಹಿಡದಿದ್ದ ಅಪ್ಪನ ನೋಡ್ಲಿಕ್ಕೆ ಬರಲಿಲ್ಲ. ಅಂವ ಅಲ್ಲೆ ಅಮೆರಿಕಾದ ಸಿಟಿಜೆನ್ ಶಿಪ್ ತೊಗೊಳ್ಳೋ ಓಡಾಟದೊಳಗ ಇದ್ದ. ನಾಲ್ಕನೆತ್ತಿತನಕ ಸಾಲಿ ಕಲಿತಿದ್ದ ಸೀತಾಬಾಯಿ ಯೋಚನಿ ಮಾಡಿದರು. “ಪರದೇಶದ ಪ್ರಜೆ ಅಂತಾದ ಮಾತ್ರಕ್ಕ ಹುಟ್ಟಿನ ಮೂಲ ಬದಲಾಯಿಸಿಕ್ಕೆ ಆಗ್ತದೇನು? ಇಲ್ಲ ಮೈ ಬಣ್ಣ ಬದಲು ಆಗ್ತದೇನು?” ಪವಮಾನನಿಗೆ ತನ್ನ ಬದುಕಿನ ಅಸ್ತಿತ್ತ್ವಕ್ಕ ಕಾರಣರಾದವರನ್ನು ಬಿಟ್ಟು ಅಮೆರಿಕಾದ ಪ್ರಜೆ ಅನ್ನೋ ಅಸ್ತಿತ್ವವನ್ನು ಪಡೆಯೋದೇ ಮುಖ್ಯ ಆದಂಗಿತ್ತು. ರಾಮಾಚಾರರ ಆರೋಗ್ಯ ಸುಧಾರಿಸೊ ಹಂಗ ಕಾಣಲಿಲ್ಲ. ಮುಂದೇನು? ಅನ್ನೋ ಸೀತಾಬಾಯಿಯ ಯೋಚನಿಕಿಂತ, ಊರಿನ ಮಂದಿ ಮಾತೇ ಜಾಸ್ತಿಯಾಯಿತು. ನಾಲ್ಕ ಮಂದಿ ಒಂದೇ ಕಡೆ ಸೇರಿದ್ರು ಅಂದ್ರ ಆಚಾರು, ಪವಮಾನನ ಸುದ್ದಿ ಮಾತಾಡಿಕೊಂಡೇ ಹೊತ್ತು ಕಳೀತಿದ್ರು. ವೆಂಕಟೇಶದೇವರ ಗುಡಿಗೆ ವಂಶ ಪಾರಂಪರ್ಯವಾಗಿ ಪೂಜಾ ಮಾಡಿಕೊಂಡು ಬಂದ ಪೂಜಾರರು ಇಲ್ಲದೇ ಹೋದ್ರ, ಮುಜರಾಯಿ ಇಲಾಖೆಯವರು ಬಂದು ಗುಡಿನ್ನ ತಮ್ಮ ವಶಕ್ಕ ತೊಗೊಂಡು, ಅಷ್ಟೋ-ಇಷ್ಟೋ ಸಂಬಳ ಅಂತ ಕೊಟ್ಟು, ಬ್ಯಾರೆ ಯಾರನ್ನಾದ್ರೂ ದೇವರ ಪೂಜಾ ಮಾಡ್ಲಿಕ್ಕೆ ನೇಮಕ ಮಾಡ್ತಾರ ಅನ್ನೋ ಸುದ್ದಿ ಸೀತಾಬಾಯಿಯ ಕಿವಿಗೂ ಮುಟ್ಟಿತು. ಇನ್ನು ಬಳಗದವರು ರಾಮಾಚಾರರನ್ನು ನೋಡ್ಲಿಕ್ಕೆ ಬಂದಂಗ ಮಾಡಿ ತಮ್ಮ ಪುಕ್ಕಟೆ ಸಲಹಾ ಕೊಟ್ಟು ಸೀತಾಬಾಯಿಗೆ ತಲಿಸೂಲಿ ತರಸಿದರು. ಇಂಥಾ ಪರಿಸ್ಥಿತಿಯೊಳಗ ಒಂದು ದಿನ ಆಚಾರ ಆರೋಗ್ಯ ಮ್ಯಾಲೆ-ಕೆಳಗ ಆಯ್ತು.

ಅವತ್ತು ಶನಿವಾರ ಸಂಜೀಮುಂದ ದೇವರಿಗೆ ದೀಪ ಹಚ್ಚಿ, ಹೂ ಬತ್ತಿ ಮಾಡಿಕೋತ ಕೂತಿದ್ದ ಸೀತಾಬಾಯಿಯವರ ಮನಸ್ಸಿನ್ಯಾಗೂ ಯೋಚನಿಗಳು ಬಂದವು. ಈಗೋ-ಆಗೋ ಅನ್ನಹಂಗ ಇರೋ ರಾಮಾಚಾರರ ಜೀವ ಏನಾದ್ರೂ ಹೋದ್ರ, ಗುಡಿಯೊಳಗ ದೇವರ ಪೂಜಾ ನಿಂದರಬಾರದಂತ ಹೆಚ್ಚು ಹೊತ್ತು ಕಾಯಲಿಕ್ಕೂ ಹೋಗದೇ ಮುಂದಿನ ಕಾರ್ಯ ಮಾಡಬೇಕಾಗ್ತದ. ಬದುಕಿದ್ದಾಗೇ ಬಂದು ನೋಡಲಾರದ ಮಗ ಇನ್ನು ಅಮೆರಿಕಾದಿಂದ ಬಂದು ಅಪ್ಪನ ಮಾರಿ ನೋಡಲಿ ಅನ್ನೋದೇನು ಬಂತು? ತಮ್ಮ ಗುಡಿ ಪೂಜಾ ಮುಂದುವರೆಸಿಕೊಂಡು ಹೋಗೋದೇನು ಬಂತು? ದೇವರ ಪೂಜಾ ಎಂದರ ನಿಂತದೇನು? ಮೈಲಿಗಿ, ವೃದ್ಧಿ ಅಂತ ಬಂದ್ರ ಬ್ಯಾರೆದವರು ಯಾರಾದ್ರೂ ಬಂದು ಪೂಜಾ ಮಾಡಿ ಮಂಗಳಾರತಿ ಮಾಡ್ತಾರಿಲ್ಲೋ? ನೂರಾರು ವರ್ಷಗಳಿಂದ ಇರೋ ಗುಡಿಗೆ ಅದೆಷ್ಟು ಆಚಾರರು ಪೂಜಾ ಮಾಡಿಲ್ಲ? ಅಂದ್ರ ಮನುಷ್ಯನಕಿಂತ ನಾವು ನಂಬಿ ಬದುಕೋ ದೇವರು ಮಹತ್ವಪಡಕೋತಾನ ಅಲ್ಲೇನು? “ನಮ್ಮಿಂದ ಎಲ್ಲ ಕೆಲಸ ಆಗ್ತದ…ನಮ್ಮಿಂದನ ಎಲ್ಲಾ ಕೆಲಸಗಳು ಆಗಬೇಕು” ಅನ್ನೋದೆಲ್ಲ ನಾವು ಮನುಷ್ಯರು ಬಯಸೋ ಮಾತುಗಳು. ಒಂದೆರಡು ಪ್ರಯತ್ನ ನಾವು ಮಾಡಬಹುದು. ಆದ್ರ ಅದು ಆಗ್ಲೇಬೇಕು ಅನ್ನೋದು ನಮ್ಮ ಕೈಯಾಗ ಇಲ್ಲ. ಇವತ್ತು ಇದ್ದು ನಾಳೆ ಇಲ್ಲವಾಗೋ ಮನುಷ್ಯನ ಮಾತಿನಿಕಿಂತ, ನಿತ್ಯನಾದ ಭಗವಂತನನ್ನೇ ಬೇಡಿದರಾಯಿತೆಂದುಕೊಂಡು, “ಎಂಕಪ್ಪ…ನೀನ ದಾರಿ ತೋರಿಸಬಕು” ಅಂತ ಬೇಡಿಕೊಂಡರು. ಅದೆಷ್ಟೋ ಹೊತ್ತು ಕಣ್ಣು ಮುಚ್ಚಿ ಕೂತವರಿಗೆ “ಮಾಮಿ, ಸಂಜಿ ಮಂಗಳಾರತಿ ಮಾಡಿ ಗುಡಿಗೆ ಕೀಲಿ ಹಕ್ಕೊಂಡು ಬಂದೆ” ಅಂದ ಕಿಟ್ಟಣ್ಣನ ಮಾತು ಎಚ್ಚರಿಸಿತು. ಆಗಿಂದಾಗ್ಲೇ ದೇವರಿಗೆ ಮತ್ತೊಂದು ತುಪ್ಪದ ದೀಪ ಹಚ್ಚಿ ಕೈಮುಗಿ ಎದ್ದು ಬಂದು ರಾಮಾಚಾರ ಮಲಗಿದ್ದ ಒಳಮನಿಗೆ ಬಂದ ಸೀತಾಬಾಯಿ, “ಕಿಟ್ಟಣ್ಣ, ಇಲ್ಲೆ ಬಾಪ್ಪ” ಅಂತ ಕರೆದರು.

“ಏನ್ ಮಾಮಿ, ಕರದ್ರಿ?” ಅನ್ಕೋತ ಒಳಗ ಬಂದ ಕಿಟ್ಟಣ್ಣನ ಕೈಯಾಗಿನ ಕೀಲಿ ಇಸ್ಕೊಂಡು ರಾಮಾಚಾರ ಕೈಯಾಗ ಇಟ್ಟು, “ವೆಂಕಟೇಶ ದೇವರ ಗುಡಿ ಪೂಜಾ ಇನ್ನುಮುಂದ ನೀನೇ ಮಾಡು ಕಿಟ್ಟಣ್ಣ, ನಾನು ನಿನಗ ಮಂತ್ರ ಎಲ್ಲ ಹೇಳಿಕೊಡ್ತೀನಿ, ದೇವರ ಪೂಜಾ ಹೇಳಿಕೊಡ್ತೀನಿ, ನಿನಗ ಎಷ್ಟು ತಲಿಗೆ ಹತ್ತಿತದ ಅಷ್ಟು ಕಲಿ.” ಅಂತ ಹೇಳಿ ತಾವೇ ಆಚಾರರ ಕೈ ಎತ್ತಿಸಿ ಕೀಲಿಕೈಯನ್ನ ಕಿಟ್ಟಣ್ಣನ ಕೈಯಾಗ ಹಾಕಿ ಆಶೀರ್ವಾದ ಮಾಡಿದರು. ಕಣ್ಣಾಗ ನೀರು ತಂದುಕೊಂಡ ಕಿಟ್ಟಣ್ಣ, “ಹಂಗೇ ಆಗಲ್ರಿ ಮಾಮಿ” ಅಂದ.

ರಾಮಾಚಾರರು ಹೋದ ಮ್ಯಾಲಿನ ಕಾರ್ಯಗಳನ್ನ ಕಿಟ್ಟಣ್ಣ ಮಾಡಿದ್ರೂ, ಎರಡು ದಿನದ ಮ್ಯಾಲೆ ಬಂದ ಪವಮಾನ ಮುಂದಿನ ಕಾರ್ಯಗಳನ್ನೆಲ್ಲ ಮಾಡಿ ಮುಗಿಸಿದ. ಮಕ್ಕಳಿಬ್ಬರನ್ನು ಕರಕೊಂಡು ಮೇಘಾ ಆಮ್ಯಾಲೆ ಬಂದಳು. ಇನ್ನೇನು ನ್ಯೂ ಜೆರ್ಸಿಗೆ ಹೊರಡೊ ದಿನ ಹತ್ರ ಬಂದಕೂಡ್ಲೆ ಪವಮಾನ ಅವರಮ್ಮನ ಹತ್ರ ಮಾತಾಡಿದ.

“ಅಮ್ಮ…ನೀನಿಲ್ಲಿ ಒಬ್ಬಕಿನೇ ಆಗ್ತಿದಿ. ಈ ಮಡಿ-ಮಡಿ ಅನ್ನೋದನ್ನ ಎಲ್ಲಾ ಬಿಟ್ಟು ನೀನೂ ನ್ಯೂ ಜೆರ್ಸಿಗೆ ಬಂದುಬಿಡು. ನಮ್ಮನಿನೂ ಸಾಕಷ್ಟು ಧೊಡ್ಡದದ, ಆರಾಮಾಗಿರಬಹುದು. ನೀನು ಅಲ್ಲಿಗೆ ಬರಲಿಕ್ಕೆ ಬೇಕಾಗೋ ಎಲ್ಲ ಡಾಕ್ಯುಮೆಂಟ್ಸ್ ವ್ಯವಸ್ಥಾ ನಾನು ಮಾಡ್ತೀನಿ.”

ರೂಮಿನ ಬಾಗಿಲಿನ ಹತ್ರ ಬಂದು ನಿಂತು ಅಮ್ಮ-ಮಗನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಸೊಸಿಯನ್ನೊಮ್ಮೆ ನೋಡಿ ಸೀತಾಬಾಯಿ ಮಾತನಾಡಿದರು.
“ನಾನು ನಮ್ಮ ಮನಿ ದೇವ್ರು ಎಂಕಪ್ಪನ ಸೇವಾ ಮಾಡಿಕೋತ ಇಲ್ಲೇ ಇರ್ತೀನಿ ಪವಮಾನ. ಮನುಷ್ಯರ ಹಂಗಿನ್ಯಾಗ ಇರೋದ್ರಕಿಂತ ದೇವರ ಹಂಗಿನ್ಯಾಗ ಇರೋದು ಛೊಲೋ ಅನ್ಸ್ತದ. ಯಾಕಂದ್ರ, ನನ್ನ ಹಂಗಿನ್ಯಾಗ ಇದ್ದೀ ಅಂತ ಆ ದೇವರು ಯಾವತ್ತೂ ಹಂಗಿಸಿ ಮಾತಾಡೋದಿಲ್ಲ ನೋಡು.” ಅತ್ತಿ ಆಡಿದ ಮಾತು ಕೇಳಿ ಮೇಘಾಗ ಮಾರಿ ಮ್ಯಾಲೆ ಹೊಡದಂಗ ಅನ್ನಿಸಿ ರೂಮಿನೊಳಗ ಹೋದಳು. ಪವಮಾನ ಅಮ್ಮನ್ನನ್ನು ಎದುರಿಸಲಾರದೆ ಸುಮ್ಮನೆ ತಲಿಕೆಳಗ ಹಾಕಿದ. ಸೀತಾಬಾಯಿನೇ ಮಾತು ಮುಂದುವರೆಸಿದರು.

“ಬ್ಯಾಸರ ಮಡ್ಕೋಬ್ಯಾಡೊ ಪವಮಾನ. ಎಂತೆಂಥಾ ಪರಿಸ್ಥಿತಿಗಳೊಳಗೂ ಆ ದೇವ್ರು ನನ್ನ ಕೈ ಬಿಟ್ಟಿಲ್ಲ. ಈಗ ನಾನು ಆ ಎಂಕಪ್ಪನ್ನ ಹೆಂಗ ಬಿಟ್ಟು ಬರ್ತೀನೋ?”

* * *
ಕಾಲಚಕ್ರ ತಿರುಗಲಾರದೆ ಎಂದಾರ ನಿಂದರ್ತದೇನು? ಮಠದಾಗ ನೀರು ಸೇದಿ ಹಾಕ್ತಿದ್ದ ಕಿಟ್ಟಣ್ಣ ಹತ್ತು ವರ್ಷದ ಹಿಂದ ವೆಂಕಟೇಶ ದೇವರ ಗುಡಿ ಪೂಜಾರಿ ಆದಮ್ಯಾಲೆ, ಎಲ್ಲರೂ ಆತನನ್ನು ಕೃಷ್ಣಾಚಾರ್ ಅಂತ ಕರೀತಾರ. ರಾಮಾಚಾರರು ಹೋದ ಮ್ಯಾಲೆ ‘ಮಡಿ’ ಆದ ಸೀತಾಬಾಯಿ ಗುಡಿಯ ಜವಾಬ್ದಾರಿನೆಲ್ಲ ವಹಿಸಿಕೊಂಡಾರ. ಅಮೆರಿಕಾದ ನ್ಯೂ ಜೆರ್ಸಿನ್ಯಾಗ ಪವಮಾನನ ಮಕ್ಕಳೀಗ ಕಾಲೇಜಿನ್ಯಾಗ ಓದ್ಲಿಕ್ಕತ್ಯಾರ. ಮಕ್ಕಳಿಬ್ಬರೂ ತಮ್ಮ ಪಾಡಿಗೆ ತಾವು ಬ್ಯಾರೆ ಇದ್ದು, ಆಗೊಮ್ಮೆ-ಈಗೊಮ್ಮೆ ಮನಿ ಕಡೆ ಹಣಕಿ ಹಾಕ್ತಾರ. ತಾವು ಬಯಸೋ ಹಂಗ ಜೀವನ ನಡಿಸ್ಲಿಕತ್ತ್ಯಾರ. ಐದು ಬೆಡ್ ರೂಮಿನ ದೊಡ್ಡ ಮನಿ ಈಗ ಖಾಲಿ-ಖಾಲಿಯಾಗಿ, ರಾತ್ರಿ ಹೊತ್ತಂತೂ ಗವ್ವಂತ ಅನ್ನಿಸಲಿಕ್ಕೆ ಸುರುವಾದ ಕೂಡಲೆ, ಪವಮಾನ ಮತ್ತು ಮೇಘಾ ಅದನ್ನು ಮಾರಿ ಅಲ್ಲೇ ಬ್ರಿಡ್ಜವಾಟರ್ ವೆಂಕಟೇಶ ದೇವರ ಗುಡಿ ಹತ್ರನ ಎರಡು ಬೆಡ್ ರೂಮಿನ ಅಪಾರ್ಟಮೆಂಟ್ ತೊಗೊಂಡಿದ್ದಾರ.

“ನಮ್ಮಪ್ಪ-ನಮ್ಮ ತಾತ ಎಲ್ಲರೂ ದೊಡ್ಡ ಪಂಡಿತರಾಗಿದ್ರು, ನಮ್ಮ ಮನೀದೆ ಒಂದು ವೆಂಕಟೇಶ ದೇವರ ಗುಡಿ ಅದ” ಅಂತ ಎಲ್ಲಾರಿಗೂ ಹೇಳಿಕೋತ, ರೇಷ್ಮಿ ಮಡಿ ಉಟ್ಕೊಂಡು, ದೊಡ್ಡ ಜರತಾರಿ ಶಲ್ಯ ಹೊದ್ಕೊಂಡು, ಗುಡ್ಯಾಗ ದೇವರ ಮುಂದ ಮೊದಲನೆ ಸಾಲಿನಲ್ಲಿ ಕೂತುಕೊಳ್ಳೋ ಪವಮಾನ, ಅಲ್ಲಿನ ಸಂಪ್ರದಾಯಸ್ಥರ ಗುಂಪಿಗೆ ಲೀಡರ್ ಆಗ್ಯಾನ.

“ಮಕ್ಕಳು ಮನಿಗೆ ಬಂದುಹೋಗಿ ಎಷ್ಟೋ ದಿನಗಳಾದವು, ಫೋನ್ ಆದ್ರೂ ಮಾಡದರಾಯ್ತು” ಅಂದ್ಕೊಂಡು ಮೇಘಾ ಫೋನ್ ಮಾಡಿದಾಗಲೆಲ್ಲ, “ಯಾಕಮ್ಮ ಇಷ್ಟೊತ್ತಿಗೆ ಫೋನ್ ಮಾಡಿ ಡಿಸ್ಟರ್ಬ್ ಮಾಡ್ತಿಯಾ?” ಅಂತ ಮಕ್ಕಳ ಕೈಲಿ ಬೈಸಿಕೊಂಡು ಬ್ಯಾಸರ ಮಾಡ್ಕೋತಾಳ.

ಇಲ್ಲೆ ಕಲ್ಲಳ್ಳಿಯೊಳಗ ಮನಿ ಮುಂದಿನ ಕಟ್ಟಿಮ್ಯಾಲೆ ಹತ್ತಿ-ಬತ್ತಿ ಬುಟ್ಟಿ ಇಟ್ಟಕೊಂಡು ಕೂತು, ಹಾದ್ಯಾಗ ಹೋಗೋ-ಬರೋರನ್ನೆಲ್ಲ ಮಾತನಾಡಿಸುವ ಸೀತಾಬಾಯಿ, ಹೂಬತ್ತಿ ಮಾಡಿಕೋತ ದಾಸರಪದ ಹೇಳ್ತಿರ್ತಾರ. “ಆವನಾವನು ಕಾಯ್ವ ಅವನಿಯೊಳಗೆ, ಜೀವರಿಗೆ ಧಾತೃ ಶ್ರೀಹರಿಯಲ್ಲದೆ…”