ಕೋವಿಡ್-೧೯ ವರ್ಷದಲ್ಲಿ ಓದುತ್ತಿದ್ದ ಕೆಲ ವಿದ್ಯಾರ್ಥಿಗಳು ರಜೆಗೆಂದು ತಮ್ಮೂರಿಗೆ (ದೇಶಕ್ಕೆ) ಹಿಂದಿರುಗಿ, ಇತ್ತ ವೈರಸ್ ಹಾವಳಿ ಹೆಚ್ಚಾಗಿ, ಅವರು ವಾಪಸ್ ಬರಲು ಆಗದೆ ತಮ್ಮ ಓದನ್ನು ಆನ್ಲೈನ್ ಮುಖಾಂತರ ಮುಂದುವರೆಸುವ ಫಜೀತಿಯಾಗಿತ್ತು. ಕೆಲವರು ಆಸ್ಟ್ರೇಲಿಯಾದಲ್ಲಿ ಇನ್ನೂ ಮನೆ ಬಾಡಿಗೆ ಕಟ್ಟುತ್ತಿದ್ದರು; ಸಾಮಾನು, ಸರಂಜಾಮುಗಳನ್ನು ಇಲ್ಲೇ ಇಟ್ಟಿದ್ದರು. ಪಾರ್ಟ್‌ ಟೈಮ್ ಕೆಲಸವಿದ್ದವರಿಗೆ ಕೆಲಸ ಹೋಯ್ತು. ವೀಸಾ ಮುಂದುವರೆಸಲು ಸರಕಾರ ಕೊಕ್ಕೆ ಹಾಕಿತು. ಡಿಗ್ರಿ ಮುಗಿಸಲೇ ಬೇಕು ಎನ್ನುವುದು ವಿದ್ಯಾರ್ಥಿ ವೀಸಾದ ಷರತ್ತು. ಓದಿನಲ್ಲಿ ನಪಾಸಾದರೆ ಅಥವಾ ಮಧ್ಯದಲ್ಲಿ ನಿಲ್ಲಿಸಿದರೆ ವೀಸಾಗೆ ಕುತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ

ಮುಖಕ್ಕೆ ಮಾಸ್ಕ್ ಇದ್ದರೂ ಆಸ್ಟ್ರೇಲಿಯದಲ್ಲಿ ಕೋವಿಡ್-೧೯ ಪರಿಸ್ಥಿತಿ ಸುಧಾರಿಸುತ್ತಿದೆ. ದೇಶದಾದ್ಯಂತ ಸುಮಾರು ೮೦% ಕ್ಕೂ ಹೆಚ್ಚು ಜನಸಂಖ್ಯೆ ಎರಡು ಲಸಿಕೆ ಹಾಕಿಸಿಕೊಂಡು ಸರಕಾರಗಳಿಗೆ ಸಮಾಧಾನವಾಗಿದೆ. ಹೊಸದಾಗಿ ಆರಂಭವಾಗಿರುವ ಚರ್ಚೆ ಬೂಸ್ಟರ್ ಡೋಸ್ ಕಡ್ಡಾಯ ಮಾಡಬೇಕೆ, ಬೇಡವೇ ಎನ್ನುವುದು. ಅದಾಗಲೇ ಕೆಲವೊಂದು ಕಡೆ ‘ಬೂಸ್ಟರ್ ಡೋಸ್ ಹಾಕಿಸಿಕೊಂಡಿದ್ದರೆ ಮಾತ್ರ, ಹಾಕಿಸಿಕೊಂಡವರಿಗೆ ಮಾತ್ರ’ ಎನ್ನುವ ಎಚ್ಚರಿಕೆ ಫಲಕಗಳು ಕಾಣುತ್ತಿವೆ. ಬೂಸ್ಟರ್ ಅಲ್ಲ, ಅದನ್ನು ಕಡ್ಡಾಯ ಮೂರನೇ ಲಸಿಕೆ ಎಂದು ಪರಿಗಣಿಸಬೇಕು, ಹಾಗಾದರೆ ಮಾತ್ರ ಕೋವಿಡ್-೧೯ ರ ಲಸಿಕೆ ಸಂಪೂರ್ಣವಾಗಿದೆ ಎನ್ನುವುದು ಜಾರಿಗೆ ಬರಬೇಕು, ಎನ್ನುವವರ ದನಿ ಕೇಳಿ ಬರುತ್ತಿರುವಾಗಲೆ ಅತ್ತ ಕಡೆ ಅದನ್ನು ಕೇಳಿ ಕುಪಿತರಾದ ಜನರ ಪ್ರತಿಭಟನೆ ಹೆಚ್ಚುತ್ತಿದೆ. ಇವರಲ್ಲಿ ಲಸಿಕೆ-ವಿರೋಧಿಗಳು, ಒಂದು ಸರಿ ಎರಡು ಬೇಡ ಅಂದವರು, ಎರಡಕ್ಕೇ ಫುಲ್ ಸ್ಟಾಪ್ ಎಂದವರು ಇದ್ದಾರೆ. ಇವರಿಗೆ ಮೂರನೆಯದರ ಮಾತು ಕೇಳಿದರೆ ಪಿತ್ತ ನೆತ್ತಿಗೇರಿದಂತೆ.

ಇತ್ತ ಕಡೆ ನಿಧಾನವಾಗಿ ಅಂತಾರಾಷ್ಟ್ರೀಯ ಚಲನವಲನ ಸುಗಮವಾಗುತ್ತಿದೆ. ಎರಡು ಲಸಿಕೆ ಹಾಕಿಸಿಕೊಂಡ ಪ್ರವಾಸಿಗರು, ಆಸ್ಟ್ರೇಲಿಯನ್ ಪ್ರಜೆಗಳ ಕುಟುಂಬದವರು, ನೆಂಟರಿಷ್ಟರು ಮತ್ತು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಆಗಮನ ಹೆಚ್ಚುತ್ತಿದೆ. ಆಸ್ಟ್ರೇಲಿಯನ್ ವಿಶ್ವವಿದ್ಯಾಲಯಗಳಲ್ಲಿ ಓದಿ ಡಿಗ್ರಿ ಪಡೆದು ಹೆಸರುವಾಸಿ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಉದ್ಯೋಗ ಗಳಿಸುವ ಕನಸು ಹೊತ್ತಿದ್ದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಕಳೆದೆರಡು ವರ್ಷಗಳು ಫೀಸ್ ಕಟ್ಟಿ ಓದಿದ್ದರೂ ಮುಖತಃ ತಾವೆ ಆಸ್ಟ್ರೇಲಿಯಾಕ್ಕೆ ಬಂದು ಇದ್ದುಕೊಂಡು ಓದಲಾಗದೆ ನಿರಾಶರಾಗಿದ್ದರು. ತಮ್ಮೆಲ್ಲ ಕಲಿಕೆಯನ್ನು ಆನ್ಲೈನ್ ಮುಖಾಂತರ ಮಾಡಿದ್ದು ಅವರಿಗೆ ತೀವ್ರ ನಿರಾಶೆಯ ಜೊತೆ ಅಸಮಾಧಾನವಾಗಿತ್ತು. ಕೋವಿಡ್-೧೯ ರ ಕಾರಣವಾಗಿ ಆನ್ಲೈನ್ ಓದಿನ ಕ್ರಮ ಜಾರಿಗೆ ಬಂದರೂ ವಿಶ್ವವಿದ್ಯಾಲಯಗಳು ತಮ್ಮ ಶಿಕ್ಷಣಶುಲ್ಕ ಕಡಿಮೆ ಮಾಡಲಿಲ್ಲ ಎನ್ನುವುದು ಬಹಳ ಚರ್ಚಿತವಾಗಿತ್ತು. ಈ ವಿದ್ಯಾರ್ಥಿಗಳ ಓದು ಬರೇ ಶುಲ್ಕಕ್ಕೆ ಮಾತ್ರ ಸಂಬಂಧಿಸಿಲ್ಲ. ಹಲವಾರು ದೇಶಗಳ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯ ಅರ್ಹತಾ ಪರೀಕ್ಷೆಯನ್ನು ಪಾಸ್ ಮಾಡಿಕೊಂಡು, ತಮಗೆ ಬೇಕಾದ ಯೂನಿವರ್ಸಿಟಿ ಮತ್ತು ಡಿಗ್ರಿ ಓದಿಗೆ ಅರ್ಜಿ ಹಾಕಿಕೊಂಡಿರುತ್ತಾರೆ. ಅವರ ಆಯ್ಕೆಯ ಓದನ್ನು ಒದಗಿಸಲು ವಿಶ್ವವಿದ್ಯಾಲಯಗಳು ತಮ್ಮದೇ ಆದ ಅರ್ಹತೆ ಮತ್ತು ಮಾನ್ಯತೆ ಪಡೆದಿರಬೇಕು. ಯೂನಿವರ್ಸಿಟಿಯ ಗಾತ್ರ, ಕಲಿಯಲು ಮಾತು ಪಾಠ ಮಾಡಲು ಇರುವ ಸೌಲಭ್ಯಗಳು, ಸಂಪನ್ಮೂಲಗಳು, ಆಯಾ ಡಿಗ್ರಿಗಳು, ಡಿಪ್ಲೊಮಾಗಳು ಯಾವ್ಯಾವ ರೀತಿಗಳಲ್ಲಿ ಸ್ಥಳೀಯ ಸಮುದಾಯಗಳಿಗೆ ಸಹಾಯವಾಗುತ್ತವೆ, ಎಷ್ಟು ಜನ ಸ್ಥಳೀಯ ವಿದ್ಯಾರ್ಥಿಗಳಿಗೆ ಎಷ್ಟು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಎಂಬ ಅನುಪಾತ – ಹೀಗೆ ಬಹು ವಿಷಯಗಳಲ್ಲಿ ಆಯಾ ವಿಶ್ವವಿದ್ಯಾಲಯಗಳ ಡಿಗ್ರಿಗಳು ಸರಿಯಿರಬೇಕು.

ಒಂದೊಂದು ಕೋರ್ಸಿಗೂ ಹೀಗೆಲ್ಲಾ ಲೆಕ್ಕಾಚಾರ ಹಾಕಿ ಸರಕಾರದ ಬಳಿ ಆ ಕೋರ್ಸುಗಳಿಗೆ ಮಾನ್ಯತೆ ನೀಡಿ ಎಂಬ ಅರ್ಜಿ ಹಾಕಿಕೊಂಡು ವರ್ಷಾನುಗಟ್ಟಲೆ ಕಾಯಬೇಕು. ಮಾನ್ಯತೆ ಸಿಕ್ಕಮೇಲೆ ಸರಕಾರದ ಶಿಕ್ಷಣ ಇಲಾಖೆ ಹೇಳಿರುವಂತೆ ಅದಕ್ಕೆ ಪ್ರಚಾರಕೊಟ್ಟು ವಿದ್ಯಾರ್ಥಿಗಳನ್ನು ಆಕರ್ಷಿಸಬೇಕು. ಯೂನಿವರ್ಸಿಟಿ ಕೊಡುವ ಮಾಹಿತಿಯನ್ನು ಅನುಸರಿಸಿ, ಜಾಗತಿಕ ಮಟ್ಟದಲ್ಲಿ ಆಯಾ ಕೋರ್ಸಿಗೆ ಇರುವ ಬೆಲೆ ಮತ್ತು ಗೌರವವನ್ನು ಅಳೆದು ಸುರಿದು ಕೆಲವರು ತಮಗೆ ಬೇಕಾದ ಯೂನಿವರ್ಸಿಟಿಗೆ ಅರ್ಜಿ ಸಲ್ಲಿಸುತ್ತಾರೆ. ಇನ್ನೂ ಕೆಲವರು ವಿದೇಶದ ಶಿಕ್ಷಣ ಸಿಕ್ಕರೆ ಸಾಕು, ಆ ದೇಶದಲ್ಲಿ ತಳವೂರಲು ರಹದಾರಿ ಸಿಕ್ಕಂತೆ ಎಂದು ಯಾವುದೊ ಒಂದು ಕೋರ್ಸಿಗೆ ಸೇರುತ್ತಾರೆ. ಹೀಗೆ ಒಂದು ಬಾರಿ ಯೂನಿವರ್ಸಿಟಿಯಲ್ಲಿ ನನಗೆ ತುಮಕೂರಿನ ಯುವಕನೊಬ್ಬ ಕಂಡಿದ್ದ. ಬೆಂಗಳೂರಿನಲ್ಲಿ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಪದವಿ ಗಳಿಸಿ ಅವನು ಇಲ್ಲಿಗೆ ಪಬ್ಲಿಕ್ ಹೆಲ್ತ್ ಸ್ನಾತಕೋತ್ತರ ಪದವಿ ಓದಲು ಬಂದಿದ್ದ.

ಹೀಗೆ ವಿದ್ಯಾರ್ಥಿಗಳನ್ನು ಆಕರ್ಷಿಸಿ, ಅವರಿಗೆ ಕೋರ್ಸಿನ ಅಡ್ಮಿಶನ್ ಪತ್ರ ಕೊಟ್ಟು ಅವರು ವಿದ್ಯಾರ್ಥಿ ವೀಸಾಗಾಗಿ ಅರ್ಜಿ ಸಲ್ಲಿಸಿ, ಅದರಲ್ಲಿ ವಿಜಯಿಗಳಾಗಿ ರಂಗುರಂಗಿನ ಕನಸುಗಳನ್ನು ಹೊತ್ತು ಯೂನಿವರ್ಸಿಟಿಗೆ ಬರುತ್ತಾರೆ. ಇಷ್ಟೆಲ್ಲಾ ಕಷ್ಟಪಟ್ಟವರಿಗೆ ಕೋವಿಡ್-೧೯ ತನ್ನ ವಕ್ರಮುಖ ತೋರಿಸಿ ಸರಕಾರಗಳು ಹೆದರಿ ತಮ್ಮ ಮನೆಬಾಗಿಲು ಹಾಕಿಕೊಂಡು ಈ ಬಡಪಾಯಿ ವಿದ್ಯಾರ್ಥಿಗಳು ಬರಲಾರದಂತೆ ಆದರೆ ಅವರಿಗೆ ಎಷ್ಟು ಬೇಸರವಾಗಿರಬೇಡ! ಕೋವಿಡ್-೧೯ ಶುರುವಾಗುವ ಮುನ್ನ ಬಂದವರ ಭಾಗ್ಯವೇ ಭಾಗ್ಯ!

ಆಸ್ಟ್ರೇಲಿಯನ್ ವಿಶ್ವವಿದ್ಯಾಲಯಗಳಲ್ಲಿ ಓದಿ ಡಿಗ್ರಿ ಪಡೆದು ಹೆಸರುವಾಸಿ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಉದ್ಯೋಗ ಗಳಿಸುವ ಕನಸು ಹೊತ್ತಿದ್ದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಕಳೆದೆರಡು ವರ್ಷಗಳು ಫೀಸ್ ಕಟ್ಟಿ ಓದಿದ್ದರೂ ಮುಖತಃ ತಾವೆ ಆಸ್ಟ್ರೇಲಿಯಾಕ್ಕೆ ಬಂದು ಇದ್ದುಕೊಂಡು ಓದಲಾಗದೆ ನಿರಾಶರಾಗಿದ್ದರು.

ಇದರ ಮಧ್ಯೆ ಮತ್ತಷ್ಟು ಪೀಕಲಾಟದ ಕಥೆಗಳಾಗಿದ್ದವು. ಒಂದು ವರ್ಷದ ಕೋರ್ಸಿಗೆ ಬಂದವರು ತಮ್ಮ ವಿದ್ಯಾರ್ಥಿ ವೀಸಾವನ್ನು ಮುಂದುವರೆಸಲು ಸಾಮಾನ್ಯವಾಗಿ ಮತ್ತೊಂದು ಕೋರ್ಸಿಗೆ ಸೇರುತ್ತಾರೆ. ಬಹಳಷ್ಟು ವಿದ್ಯಾರ್ಥಿಗಳಿಗೆ ಓದಿನ ನಂತರ ಈ ದೇಶದಲ್ಲೇ ಕೆಲಸದ ಅನುಭವವೂ ಆಗಲಿ ಎಂದು ಆರು ತಿಂಗಳು, ಒಂದು ವರ್ಷ ಹೀಗೆ ವೀಸಾ ಮುಂದುವರಿಕೆಯಾಗುವುದೂ ಇದೆ. ಕೋವಿಡ್-೧೯ ವರ್ಷದಲ್ಲಿ ಓದುತ್ತಿದ್ದ ಕೆಲ ವಿದ್ಯಾರ್ಥಿಗಳು ರಜೆಗೆಂದು ತಮ್ಮೂರಿಗೆ (ದೇಶಕ್ಕೆ) ಹಿಂದಿರುಗಿ, ಇತ್ತ ವೈರಸ್ ಹಾವಳಿ ಹೆಚ್ಚಾಗಿ, ಅವರು ವಾಪಸ್ ಬರಲು ಆಗದೆ ತಮ್ಮ ಓದನ್ನು ಆನ್ಲೈನ್ ಮುಖಾಂತರ ಮುಂದುವರೆಸುವ ಫಜೀತಿಯಾಗಿತ್ತು. ಕೆಲವರು ಆಸ್ಟ್ರೇಲಿಯಾದಲ್ಲಿ ಇನ್ನೂ ಮನೆ ಬಾಡಿಗೆ ಕಟ್ಟುತ್ತಿದ್ದರು; ಸಾಮಾನು, ಸರಂಜಾಮುಗಳನ್ನು ಇಲ್ಲೇ ಇಟ್ಟಿದ್ದರು. ಪಾರ್ಟ್‌ ಟೈಮ್ ಕೆಲಸವಿದ್ದವರಿಗೆ ಕೆಲಸ ಹೋಯ್ತು. ವೀಸಾ ಮುಂದುವರೆಸಲು ಸರಕಾರ ಕೊಕ್ಕೆ ಹಾಕಿತು. ಡಿಗ್ರಿ ಮುಗಿಸಲೇ ಬೇಕು ಎನ್ನುವುದು ವಿದ್ಯಾರ್ಥಿ ವೀಸಾದ ಷರತ್ತು. ಓದಿನಲ್ಲಿ ನಪಾಸಾದರೆ ಅಥವಾ ಮಧ್ಯದಲ್ಲಿ ನಿಲ್ಲಿಸಿದರೆ ವೀಸಾಗೆ ಕುತ್ತು. ಅಷ್ಟೆಲ್ಲ ದುಡ್ಡು ಕಟ್ಟಿ ಆಸ್ಟ್ರೇಲಿಯಾದಲ್ಲಿ ಓದದೇ ಕ್ಷುಲ್ಲಕ ಕೋವಿಡ್ ದೆಸೆಯಿಂದ ವಾಪಸ್ ಸ್ವದೇಶಕ್ಕೆ ಬಂದು ಮನೆಯಲ್ಲಿದ್ದುಕೊಂಡು ಓದುವ ಇರುಸುಮುರಿಸು. ಆಗಲೆ ಹೇಳಿದ್ದ ತುಮಕೂರಿನ ಯುವಕ ಈ ಪರಿಸ್ಥಿತಿಯಲ್ಲಿದ್ದು ೧೦ ತಿಂಗಳ ನಂತರ ಪುನಃ ಆಸ್ಟ್ರೇಲಿಯಾಕ್ಕೆ ಬರಲು ಸಾಧ್ಯವಾಗಿತ್ತು. ನೂರಾರು ಬಾಗಿಲುಗಳನ್ನು ತಟ್ಟಿ ಅವನು ಹೇಗೋ ತನ್ನ ವಿದ್ಯಾರ್ಥಿ ವೀಸಾವನ್ನು ಮತ್ತೊಂದು ವರ್ಷಕ್ಕೆ ಮುಂದುವರೆಸಲು ಸಾಧ್ಯವಾಗಿತ್ತು. ಅವನಿಗೆ ಅದೇ ಕೋವಿಡ್ ಸಹಾಯ ಮಾಡಿತ್ತಂತೆ.

ಈ ತಿಂಗಳು ಹಳೆಯ ವಿದ್ಯಾರ್ಥಿಗಳಷ್ಟೇ ಅಲ್ಲ ನಗುನಗುತ್ತಿರುವುದು. ಹೊಸ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ವೀಸಾ ಸುಲಭವಾಗಿ ದೊರೆತು ಅವರು ಅದಾಗಲೇ ಬರಲಾರಂಭಿಸಿದ್ದಾರೆ. ಕೋವಿಡ್-೧೯ಕ್ಕೂ ಮುಂಚೆ ಸುಮಾರು ನಾಲ್ಕು ಲಕ್ಷವಿದ್ದ ವಿದ್ಯಾರ್ಥಿಗಳ ಸಂಖ್ಯೆ ೨೦೨೧ರಲ್ಲಿ ಮೂರು ಲಕ್ಷಕ್ಕೆ ಇಳಿದಿತ್ತು. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಂದ ದೇಶಕ್ಕೆ ಸುಮಾರು ನಲವತ್ತು ಬಿಲಿಯನ್ ಡಾಲರುಗಳ ಆದಾಯವಿತ್ತು ಎಂದರೆ ಅದೇನು ಸಣ್ಣ ವಿಷಯವೇ! ಹಾಗಾಗಿ ಕೇಂದ್ರ ಸರಕಾರವು ವಿದ್ಯಾರ್ಥಿ ವೀಸಾ ವಿಷಯದಲ್ಲಿ ಸ್ವಲ್ಪ ಉದಾರ ಮನೋಭಾವವನ್ನು ಹೊಂದಿದೆ. ಕಳೆದ ನವೆಂಬರ್ ತಿಂಗಳಿಂದಾಚೆ ಸುಮಾರು ೬೦,೦೦೦ ಹೆಚ್ಚು ವಿದ್ಯಾರ್ಥಿಗಳು ಬಂದಿದ್ದಾರೆ. ವಿಶ್ವವಿದ್ಯಾಲಯಗಳ ಒತ್ತಡದಿಂದಲೂ ಕೂಡ ಸರಕಾರವು ಈ ವರ್ಷ ಮಾರ್ಚ್ ೨೨ ರೊಳಗೆ ಆಸ್ಟ್ರೇಲಿಯಾಗೆ ಬಂದು ಶಿಕ್ಷಣವನ್ನು ಆರಂಭಿಸಿದರೆ ವಿದ್ಯಾರ್ಥಿ ವೀಸಾ ಶುಲ್ಕವನ್ನು ಮರುಪಾವತಿ ಮಾಡುವುದಾಗಿ ಹೇಳಿದೆ. ಈ ಹೇಳಿಕೆಯ ನಂತರ ಫೆಬ್ರವರಿ ತಿಂಗಳಲ್ಲಿ ಸುಮಾರು ಐವತ್ತು ಸಾವಿರ ಹೊಸ ವಿದ್ಯಾರ್ಥಿ ವೀಸಾ ಅರ್ಜಿಗಳು ಬಂದಿವೆಯಂತೆ.

ಕಳೆದ ವರ್ಷ ಕೋವಿಡ್ ದೆಸೆಯಿಂದ ಹೆಚ್ಚು ವಿದ್ಯಾರ್ಥಿಗಳು ಬರದೇ, ವಿಶ್ವವಿದ್ಯಾಲಯಗಳ ಹಣಕಾಸು ಪರಿಸ್ಥಿತಿಯಲ್ಲಿ ಏರುಪೇರಾಗಿ ಈ ವರ್ಷವಾದರೂ ಅದು ಸುಧಾರಿಸುತ್ತದೆಯೇನೋ ಎಂಬ ಭರವಸೆಯಿದೆ. ಹೆಚ್ಚಿನ ಆದಾಯವಿಲ್ಲದೆ ಸೊರಗಿದ ವಿಶ್ವವಿದ್ಯಾಲಯಗಳ ಅನೇಕ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದರು. ಈ ವರ್ಷ ಅದು ಸುಧಾರಿಸುತ್ತದೆ ಎನ್ನುವ ಆಶಾಕಿರಣವಿದೆ. ಇದಕ್ಕೂ ಸಹ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಕೃಪಾಕಟಾಕ್ಷವಿರಬೇಕು!