ವಾರದ ಹಿಂದಿನವರೆಗೆ ಜಗತ್ತು ಅಭಿವೃದ್ಧಿಯ ಹೆಸರಲ್ಲಿ ಹೇಗೆಲ್ಲ ನಾಟ್ಯವಾಡುತ್ತಿತ್ತು? ಬದುಕಿನ ಬಗ್ಗೆ, ನಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಪ್ರೀತಿ, ಕಾಳಜಿ ಇರುವ, ಮಹತ್ವ ಗೊತ್ತಿರುವವರ ಕಣ್ಣಲ್ಲಿ, ಅಭಿವೃದ್ಧಿ ಅನ್ನುವುದು ಹಗ್ಗ ಬಿಚ್ಚಿದ ಹುಚ್ಚು ಕುದುರೆಯ ಓಡಾಡುತ್ತ, ನಿಸರ್ಗವನ್ನು ಹಾಳುಮಾಡುತ್ತಿರುವಂತೆ ಕಂಡಿದ್ದಿರಬೇಕು. ಅದರ ಓಟಕ್ಕೊಂದು ಲಂಗು ಲಗಾಮು ಹಾಕಲು ಸಾಧ್ಯವೇ ಇಲ್ಲ ಅನ್ನುವಷ್ಟು ಅದು ವೇಗ ಪಡೆದುಕೊಂಡಿತ್ತು. ಅಭಿವೃದ್ಧಿ ಅಂದ್ರೆ ಪ್ರಾಕೃತಿಕ ಸಂಪನ್ಮೂಲಗಳನ್ನೆಲ್ಲ ಗುಳುಂ ಗುಳುಂ ಅಂತ ನುಂಗುತ್ತಾ, ಪ್ರಕೃತಿಗೊಂದು ಚಂದದ ಗೋರಿ ಕಟ್ಟುವ ಕೆಲಸವಾಗಿತ್ತು ಅಷ್ಟೇ ಹೊರತು, ಅದರೊಟ್ಟಿಗೆ ಹೆಜ್ಜೆಯಿಡುತ್ತಾ, ಆರಾಮವಾಗಿ ಜೀವಿಸಬೇಕೆಂಬ ಯಾವ ಯೋಜನೆಯೂ ಅದಕ್ಕಿದ್ದಂತಿರಲಿಲ್ಲ.
ರೂಪಶ್ರೀ ಕಲ್ಲಿಗನೂರ್ ಅಂಕಣ

 

ಗೃಹಬಂಧನದಲ್ಲಿ ಕುಳಿತವರೊಮ್ಮೆ ಎದ್ದು ಹೋಗಿ, ಬಾಗಿಲನ್ನೋ ಅಥವಾ ಕಿಟಕಿಯನ್ನೋ ತೆರೆದು ನೋಡಿ. ಹೊರಗೆ ಇಡೀ ಜಗತ್ತೇ ಸ್ತಬ್ಧವಾದಂತಿದೆಯಲ್ಲ? ಬೆಂಗಳೂರಿನಲ್ಲಿರುವವರಿಗಂತೂ, ವಾಹನಗಳ ಓಡಾಟವಿಲ್ಲದೇ, ಗಂಟಲು ತುಂಬುತ್ತಿದ್ದ ಮಾಲಿನ್ಯದ ಪ್ರಮಾಣ ತಗ್ಗಿ, ಗಾಳಿ ಶುದ್ಧವಾಗುತ್ತಿರುವುದರ ಅರಿವಾಗುತ್ತದೆ. ಬೆಳಗ್ಗೆ ಕಣ್ಣು ಬಿಟ್ಟಾಗಿನಿಂದ ಹಿಡಿದು, ರಾತ್ರಿ ಹಾಸಿಗೆಗೆ ಬಿದ್ದು, ಕಣ್ಣು ಮುಚ್ಚುವವರೆಗೂ ಗಡಿಯಾರದ ಜೊತೆಗಿನ ಓಟದಲ್ಲಿ ಜಿದ್ದಿಗೆ ಬಿದ್ದಿದ್ದ ಮೈ-ಮನಸ್ಸುಗಳಿಗೆರಡಕ್ಕೂ ಈಗ ಬಯಸಿದ ಆರಾಮ ಸಿಕ್ಕಿದೆ. ಆದರೆ ಅತಿಯಾದ್ರೆ ಅಮೃತವೂ ವಿಷ ಅನ್ನುವುದನ್ನರಿತ ನಮಗೆಲ್ಲ, ಈಗ ತಾನಾಗೇ ಸಿಕ್ಕ ವಿಪರೀತ ವಿರಾಮದ ಸಮಯ, ಆಮೆಯ ದಿನಚರಿಯಂತಾಗಿ, ಒಮ್ಮೆ ಮತ್ತೆ ಎಂದಿನ ದಿನಚರಿ ಆರಂಭವಾದ್ರೆ ಸಾಕಪ್ಪಾ ಅಂತನ್ನಿಸೋಕೆ ಶುರುವಾಗಿದೆ.

ಕೊರೋನಾ ಅನ್ನೋ ಸಾಂಕ್ರಾಮಿಕ ರೋಗ ಚೀನಾದ ಹೊಟ್ಟೆಯಿಂದ ಚಿಮ್ಮಿ, ಎಲ್ಲ ಗಡಿಗಳನ್ನ ದಾಟಿ, ಸೀಮೋಲ್ಲಂಘನ ಮಾಡಿ, ಊಹಿಸಲಸಾಧ್ಯವಾದ ಕಡೆಯಲ್ಲೆಲ್ಲಾ ಸಂಚರಿಸುತ್ತಾ ತನ್ನ ಭೀಕರ ಸಾವಿನ ಮುಖವನ್ನು ತೋರಿಸಿ, ಹೆದರಿಸುವ ಮುಂಚೆ ಈಗಿನ ಇಡೀ ಜಗತ್ತು ಹೇಗಿತ್ತು? ಅಂತ ತಿಳಿದುಕೊಳ್ಳುವ ಸಂದರ್ಭ ಬಂದಿದೆ.

ವಾರದ ಹಿಂದಿನವರೆಗೆ ಜಗತ್ತು ಅಭಿವೃದ್ಧಿಯ ಹೆಸರಲ್ಲಿ ಹೇಗೆಲ್ಲ ನಾಟ್ಯವಾಡುತ್ತಿತ್ತು? ಬದುಕಿನ ಬಗ್ಗೆ, ನಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಪ್ರೀತಿ, ಕಾಳಜಿ ಇರುವ, ಮಹತ್ವ ಗೊತ್ತಿರುವವರ ಕಣ್ಣಲ್ಲಿ, ಅಭಿವೃದ್ಧಿ ಅನ್ನುವುದು ಹಗ್ಗ ಬಿಚ್ಚಿದ ಹುಚ್ಚು ಕುದುರೆಯ ಓಡಾಡುತ್ತ, ನಿಸರ್ಗವನ್ನು ಹಾಳುಮಾಡುತ್ತಿರುವಂತೆ ಕಂಡಿದ್ದಿರಬೇಕು. ಅದರ ಓಟಕ್ಕೊಂದು ಲಂಗು ಲಗಾಮು ಹಾಕಲು ಸಾಧ್ಯವೇ ಇಲ್ಲ ಅನ್ನುವಷ್ಟು ಅದು ವೇಗ ಪಡೆದುಕೊಂಡಿತ್ತು. ಅಭಿವೃದ್ಧಿ ಅಂದ್ರೆ ಪ್ರಾಕೃತಿಕ ಸಂಪನ್ಮೂಲಗಳನ್ನೆಲ್ಲ ಗುಳುಂ ಗುಳುಂ ಅಂತ ನುಂಗುತ್ತಾ, ಪ್ರಕೃತಿಗೊಂದು ಚಂದದ ಗೋರಿ ಕಟ್ಟುವ ಕೆಲಸವಾಗಿತ್ತು ಅಷ್ಟೇ ಹೊರತು, ಅದರೊಟ್ಟಿಗೆ ಹೆಜ್ಜೆಯಿಡುತ್ತಾ, ಆರಾಮವಾಗಿ ಜೀವಿಸಬೇಕೆಂಬ ಯಾವ ಯೋಜನೆಯೂ ಅದಕ್ಕಿದ್ದಂತಿರಲಿಲ್ಲ. ಅದಕ್ಕಾಗಿಯೇ ಇರಬೇಕು ಈಗ ಇಡೀ ಜಗತ್ತಿನ ಓಟಕ್ಕೇ ಸರಿಯಾದ ಬ್ರೇಕ್ ಬಿದ್ದಿದೆ. ಓಡುವ ಕುದುರೆಯ ಕಾಲು ಮುರಿದು, ಕುದುರೆ ಮುಗ್ಗರಿಸಿ ಬಿದ್ದಿದೆ.

ಇಗ್ಗೆರೆಡು ತಿಂಗಳ ಹಿಂದೆ ಅಕ್ಕನ ಮಗಳಿಗೆ ಬಟ್ಟೆ ಕೊಳ್ಳಲು ಮಾರ್ಕೆಟ್ಟಿಗೆ ಹೋಗಿದ್ವಿ. ಈಗಿದ್ದ ಅವಳ ಬಟ್ಟೆಗಳೆಲ್ಲ, ಅವಳು ಉದ್ದುದ್ದ ಬೆಳೆಯುವ ಪರಿಗೆ, ಹೆದರಿ ಮೂಲೆ ಸೇರಿಕೊಂಡಿದ್ದವು. ಅಲ್ಲದೇ ಮನೆಯಲ್ಲಿ ಮದುವೆ ಬೇರೆ ಇತ್ತು. ಹಾಗಾಗಿ ಒಂದು ಮೂರ್ನಾಲ್ಕು ಜೊತೆ ಬಟ್ಟೆಗಳನ್ನು ತಂದರಾಯ್ತು ಅಂತ ಅವಳನ್ನ ಕರೆದುಕೊಂಡು ಹೋಗಿದ್ವಿ. ಎರಡು ಮೂರು ದೊಡ್ಡ ಅಂಗಡಿಗಳನ್ನ ಸುತ್ತಾಡಿದರೂ, ಒಂದು ಟೀ ಷರ್ಟಿನ ಹೊರತು ಬೇರೇನೂ ಸಿಕ್ಕಿರಲಿಲ್ಲ. ಹಾಗಾಗಿ ಅಲ್ಲೇ ಪಕ್ಕದಲ್ಲಿದ್ದ ಹೊಸದಾಗಿ, ಅಂದರೆ ಎರಡು ತಿಂಗಳ ಹಿಂದಷ್ಟೇ ಆರಂಭವಾದ ದೊಡ್ಡ ಬಟ್ಟೆಯಂಗಡಿಯೊಂದಕ್ಕೆ ಹೋದ್ವಿ.

ಅದೊಂದು ಪುಟ್ಟ ಶಾಪಿಂಗ್ ಮಾಲ್ ಥರ ಇತ್ತು. ಮೂರೋ ನಾಲ್ಕೋ ಫ್ಲೋರ್ ಇರುವಂಥದ್ದು. ಕೊನೆಯ ಮಹಡಿಯಲ್ಲಿ ಮಕ್ಕಳ ಬಟ್ಟೆಯಿದ್ದವು. ಲಿಫ್ಟಿನಲ್ಲಿ ಮೇಲೆ ಹೋಗಿ, ಅಲ್ಲಿರುವ ಅವಳ ವಯಸ್ಸಿನ ಬಟ್ಟೆಗಳನ್ನು ತಡಕಾಡಿದಾಗ ಮಕ್ಕಳು ಬೇಸಿಗೆಯಲ್ಲಿ ಹಾಕಿಕೊಳ್ಳುವಂಥ ನಾಲ್ಕು ಬಟ್ಟೆಗಳು ಸಿಕ್ಕವು. ಅವುಗಳನ್ನ ಹಾಕಿಸಿ, ಅಳತೆ, ಚಂದ ಎಲ್ಲ ನೋಡಿ ಮುಗಿಸುವುದರೊಳಗೆ ಕೊನೆಗೆ ಎರಡಷ್ಟೇ ಕೊಳ್ಳಲು ಆಯ್ಕೆಯಾಗಿದ್ದವು. ಮತ್ತೆ ಲಿಫ್ಟ್ ನಲ್ಲಿ ಕೆಳಗೆ ಹೋಗಿ ಬಿಲ್ಲಿಂಗ್ ಗೆ ಅಂತ ನಿಂತರೆ ನಾಲ್ಕು ಮಹಡಿಯ ಕಟ್ಟಡಕ್ಕೆ ಒಂದೇಒಂದು ಬಿಲ್ಲಿಂಗ್ ಕೌಂಟರ್ ತೆರೆದಿಟ್ಟುಕೊಂಡಿದ್ದರು. ‘ಅಯ್ಯೋ ಇದೇನಪ್ಪ. ಇಷ್ಟು ದೊಡ್ಡ ಅಂಗಡಿಗೆ ಒಂದೇ ಬಿಲ್ಲಿಂಗ್ ಕೌಂಟರ್ರಾ!” ಅಂತಂದುಕೊಳ್ಳುವಷ್ಟರಲ್ಲಿ, ಇನ್ನೊಂದು ಕೌಂಟರ್ ಓಪನ್ ಆಗಿ ನಮ್ಮ ಬಟ್ಟೆಗಳ ಬಿಲ್ಲಿಂಗ್ ಶುರುವಾಯಿತು. ಹಾಗೆ ಅಲ್ಲಿ ಬಿಲ್ಲಿಂಗಿಗೆ ನಿಂತಾಗ, ಹಿಂದಿದ್ದ ಕೌಂಟರ್ ನಲ್ಲಿ ಗಂಡ-ಹೆಂಡಿರಿಬ್ಬರು ಆ ಅಂಗಡಿಯವರು ವಸ್ತುಗಳನ್ನು ಹಾಕಿಕೊಳ್ಳಲು ಕೊಟ್ಟ ದೊಡ್ಡ ಚೀಲದ ತುಂಬಾ ಏನೇನನ್ನೋ ತುಂಬಿಸಿ, ಹಿಡಿದುಕೊಂಡು ನಿಂತದ್ದು ನನ್ನ ಗಮನಕ್ಕೆ ಬಂತು. ಓಹೋ, ಶಾಪಿಂಗ್ ಜೋರಾಗಿರ್ಬೇಕು… ಬೇರೆ ಬೇರೆ ಮಹಡಿಗಳಲ್ಲಿ ಇನ್ನೂ ಬೇರೆ ಬೇರೆ ವಸ್ತುಗಳೆಲ್ಲ ಸಿಗತ್ತೆ ಅನ್ಸತ್ತೆ ಇಲ್ಲಿ’ ಅಂತಂದುಕೊಳ್ಳುವುದನ್ನ ಮುಗಿಸಿರಲಿಲ್ಲ; ಅಷ್ಟರಲ್ಲಿ ಅವರಿಬ್ಬರೂ ಸೇರಿ ಆ ಬ್ಯಾಗಿನಲ್ಲಿದ್ದ ಸಾಮಾನುಗಳನ್ನು ಬಿಲ್ಲಿಂಗ್ ಟೇಬಲ್ ನ ಮೇಲೆ ಸುರಿಯಲಾರಂಭಿಸಿದರು.

ಹೊರಗೆ ಇಡೀ ಜಗತ್ತೇ ಸ್ತಬ್ಧವಾದಂತಿದೆಯಲ್ಲ? ಬೆಂಗಳೂರಿನಲ್ಲಿರುವವರಿಗಂತೂ, ವಾಹನಗಳ ಓಡಾಟವಿಲ್ಲದೇ, ಗಂಟಲು ತುಂಬುತ್ತಿದ್ದ ಮಾಲಿನ್ಯದ ಪ್ರಮಾಣ ತಗ್ಗಿ, ಗಾಳಿ ಶುದ್ಧವಾಗುತ್ತಿರುವುದರ ಅರಿವಾಗುತ್ತದೆ. ಬೆಳಗ್ಗೆ ಕಣ್ಣು ಬಿಟ್ಟಾಗಿನಿಂದ ಹಿಡಿದು, ರಾತ್ರಿ ಹಾಸಿಗೆಗೆ ಬಿದ್ದು, ಕಣ್ಣು ಮುಚ್ಚುವವರೆಗೂ ಗಡಿಯಾರದ ಜೊತೆಗಿನ ಓಟದಲ್ಲಿ ಜಿದ್ದಿಗೆ ಬಿದ್ದಿದ್ದ ಮೈ-ಮನಸ್ಸುಗಳಿಗೆರಡಕ್ಕೂ ಈಗ ಬಯಸಿದ ಆರಾಮ ಸಿಕ್ಕಿದೆ.

ಮೊದಲಿಗೆ ಮೂರು ಚಪ್ಪಲಿಗಳು ಬಿದ್ದವು, ಆಮೇಲೆ ಎರಡು ಬೇರೆ ಬೇರೆ ಜೋಡಿಯ ಶೂಗಳು, ಆಮೇಲೆ ಒಂದು ಶೂ ಮತ್ತು ಒಂದು ಚಪ್ಪಲಿ… ಆ ಬ್ಯಾಗಿನ ತುಂಬಾ ಇದ್ದದ್ದು ಬರೀ ಶೂ ಮತ್ತು ಚಪ್ಪಲಿಗಳೇ… ನಾನು ಲೆಕ್ಕ ಹಾಕಿದ ಪ್ರಕಾರ ಹೆಂಡತಿ ಆರೇಳು ಜೊತೆ ಚಪ್ಪಲಿ ತೆಗೆದುಕೊಂಡಿದ್ದಳು ಮತ್ತೆ ಗಂಡನೂ ಜಿದ್ದಿಗೆ ಬಿದ್ದವನಂತೆ ನಾಲ್ಕೈದು ಜೊತೆ ಬೇರೆ ಬೇರೆ ತೆರನಾದ ಶೂಗಳನ್ನು ತೆಗೆದುಕೊಂಡಿದ್ದನು. ಒಬ್ಬರಿಗೆ, ಒಂದು ಸಲಕ್ಕೆ ಎಷ್ಟು ಜೋಡಿ ಚಪ್ಪಲಿ ಬೇಕಾಗಬಹುದು? ಇಡೀ ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ಬೇಕಾದ್ದ ಬೇಡಾದ್ದ ಎಷ್ಟೆಲ್ಲ ಅಂಗಡಿಗಳಿರಬೇಕಾದರೂ ಜನಕ್ಕೆ ಒಮ್ಮೆಲೇ ಎಲ್ಲವನ್ನೂ ಕೊಂಡುಬಿಡುವ ಹುಚ್ಚೇಕೆ? ಜನರ ಕೊಳ್ಳುವ ಹುಚ್ಚು ನೆನೆಸಿಕೊಂಡೇ ತಲೆ ಚಿಟ್ಟೆಂದಿತು.

ಮೇಲೆ ಹೇಳಿದ ಘಟನೆ ಒಂದು ಉದಾಹರಣೆಯಷ್ಟೇ ಅಂತ ಎಲ್ಲರಿಗೂ ಗೊತ್ತು. ವಾರದ ಹಿಂದಿನವರೆಗೂ ಹಾಗಿದ್ದವರು ನಾವು. ಬೇಕೋ ಬೇಡವೋ, ಕೈಯಲ್ಲಿ ಹಣ ಮುಗಿಯುವವರೆಗೂ ಕಂಡಕಂಡದ್ದನ್ನೆಲ್ಲ ಕೊಂಡವರು. ನಮ್ಮ ಕೈಯಲ್ಲಿ ಬರುವ ಹಣವನ್ನು ಯಾವೆಲ್ಲ ರೀತಿಯಲ್ಲಿ ಖಾಲೀ ಮಾಡಬಹುದು ಅಂತ ಸದಾ ಐಡಿಯಾ ಮಾಡುವುದರಲ್ಲೇ ಮುಳಗುವ ಮಾರ್ಕೆಟಿಂಗ್ ಕಂಪೆನಿಗಳು ವಾರಕ್ಕೆ ಅದೆಷ್ಟು ರೀತಿಯ ಪ್ರಾಡಕ್ಟುಗಳನ್ನ ಮಾರ್ಕೆಟ್ಟಿಗೆ ತರುತ್ತಾರೆ… ಬೇಕಿರುವುದಕ್ಕಿಂತ ಬೇಡವಿರುವುದೇ ನಮ್ಮ ಕಣ್ಣಿಗೆ ಕಾಣಿಸುತ್ತವೆ. ಹತ್ತು ಸಾರಿ ನೋಡಿದ ಮೇಲೆ ಹನ್ನೊಂದನೆಯ ಸಲವಾದ್ರೂ ನಾವದನ್ನೊಮ್ಮೆ ಟ್ರೈ ಮಾಡೋಣ ಅಂತ ಕೊಂಡುಬಿಡುತ್ತೇವೆ. ಬಟ್ಟೆಯಿಂದ ಹಿಡಿದು, ಊಟದವರೆಗೂ ಆ ಲಾಜಿಕ್ ನಡೆಯುತ್ತದೆ. ಹಾಗಾಗಿಯೇ ಅಲ್ಲವೇ ಬೆಂಗಳೂರಿನಲ್ಲಿ ರಸ್ತೆಗೆ ನಾಲ್ಕು ಹೋಟೆಲ್ಲುಗಳಿದ್ರೆ, ಮತ್ತೆ ನಾಲ್ಕು ಬಟ್ಟೆಯಂಗಡಿಗಳಿರೋದು! ಈಗ ಸಮಯ ಸಾಕಷ್ಟಿದೆ. ನಾವು ಕೊಂಡ ವಸ್ತುಗಳೆಲ್ಲದರ ಮೇಲೂ ಕಣ್ಣಾಡಿಸಬಲ್ಲ ಇಡೀ ಜಗತ್ತಿನ ಸಮಯ ನಮ್ಮ ಬಳಿಯಲ್ಲಿದೆ. ಯಾವುದು ನಿಜಕ್ಕೂ ಉಪಯೋಗಕ್ಕೆ ಬರತ್ತೆ? ಜೀವನಕ್ಕೆ ಏನು ಬೇಕು? ಎಷ್ಟು ಸಾಕು? ಎನ್ನುವ ಪ್ರಶ್ನೆಗಳನ್ನು ಕೇಳಿಕೊಂಡು ಲಾಕ್ ಡೌನ್ ಮುಗಿಯುವ ಮುಂಚೆ ಒಂಚೂರಾದರೂ ನಾವು ಬದಲಾಗಬೇಕಿದೆ.

ಈವರೆಗೆ ಏನೆಲ್ಲ ಚಿತ್ರ-ವಿಚಿತ್ರ ಕಲಹಗಳ ಉದಾಹರಣೆಗಳನ್ನ ನೋಡಿದ್ದೀವಿ, ಕೇಳಿದ್ದೀವಿ. ತೀರಾ ಕ್ಷುಲ್ಲಕ ಕಾರಣಗಳಿಗೆ, ಆಸ್ತಿ ವಿವಾದಗಳಿಗೆ, ಅಣ್ಣ-ತಮ್ಮಂದಿರು ದೂರವಾದದ್ದನ್ನ ಕೇಳಿದ್ದೀವಿ. ಜಾತಿಯ ವಿಷಯವಾಗಿ ನಡೆದ ಕೊಲೆಗಳಿಗೆ ಕಿವಿಯಾಗಿದ್ದೀವಿ. ತಮ್ಮದಲ್ಲದ ಜಾತಿಯ ಹುಡುಗನ್ನು ಮದುವೆಯಾದ ಮಗಳನ್ನೇ ಕೊಂದುಬಿಡುವ ನಿರ್ಧಾರಕ್ಕೆ ಬರುವಷ್ಟು ಕ್ರೌರ್ಯವನ್ನು ಎದೆಯಲ್ಲಿಟ್ಟುಕೊಂಡು ನಮ್ಮ ನಡುವೆ ಓಡಾಡುವ ಜನರಿದ್ದಾರೆ ಅಂತ ಎಲ್ಲರಿಗೂ ತಿಳಿದ ವಿಷಯವೇ. ಅಂಥವರೆಲ್ಲರೂ ಈಗ ಮನೆಯಲ್ಲೋ, ಬಂಧೀಖಾನೆಯಲ್ಲೋ ಬಂಧನದಲ್ಲಿದ್ದಾರೆ. ಅವರೆಲ್ಲರೂ ಈ ಹೊತ್ತಿನಲ್ಲಾದರೂ ಯೋಚಿಸಬಹುದಾ? ಬದುಕು ಎಷ್ಟು ಚಿಕ್ಕದು ಅಂತ? ಬದುಕನ್ನ ತೀರಾ ಗಂಭೀರವಾಗಿ ತೆಗೆದುಕೊಂಡೆವು ಅಂತಾ? ತಮ್ಮ ಖುಷಿಗಾಗಿ ಒಂದಷ್ಟೂ ಹಣವನ್ನೂ ವ್ಯಯಿಸದೇ, ಬ್ಯಾಂಕಿನಲ್ಲಿ ಹಣವನ್ನು ಪೇರಿಸಿಡುವವರಾದರೂ ಈಗ ಯೋಚಿಸಬಹುದ? ಯಾಕಾದರೂ ತಾನು ಬದುಕನ್ನ ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳಬೇಕಿತ್ತು ಅಂತ. ಹಣ, ಜಾತಿ, ಧರ್ಮ ಜೀವನಾವಶ್ಯಕ ಸಂಗತಿಗಳಾ? ಇದ್ದಷ್ಟು ದಿನ ಚಂದವಾಗಿ ಬದುಕು ಕಳೆಯೋಕೆ ಏನು ಬೇಕು ಅಂತ ನಾವೇ ನಿರ್ಧರಿಸಬೇಕು.

ಪ್ರಕೃತಿಯಲ್ಲಿ ಎಲ್ಲ ಪ್ರಾಣಿಗಳಂತೆ ಮನುಷ್ಯನೂ ಒಂದು ಪ್ರಾಣಿ ಅಷ್ಟೇ. ಅವನನ್ನು ಬಿಟ್ಟು ಮಿಕ್ಕೆಲ್ಲ ಪ್ರಾಣಿಗಳಿಗಿರುವ ದೈಹಿಕ ಮಿತಿಯಂತೆ ಮನುಷ್ಯನಿಗೂ ಮಿತಿಯಿರುತ್ತಿದ್ದರೆ, ಭೂಮಿ ಇಷ್ಟೊಂದು ಹದಗೆಡುತ್ತಿರಲಿಲ್ಲ ಅನ್ನಿಸುತ್ತೆ. ಅವಶ್ಯಕತೆ/ಅನಾವಶ್ಯಕ ಅನ್ನೋ ಎರಡು ಪದಗಳಿಗೆ ಯಾವ ರೀತಿಯಲ್ಲೂ ಅರ್ಥ ಉಳಿದುಕೊಂಡಿಲ್ಲ ಈಗ.

ಇದೊಂದು ಸಂದಿಗ್ಧ ಪರಿಸ್ಥಿತಿ. ಹೊರಗೆ ಕಾಲಿಟ್ಟರೆ ಕೊಲ್ಲುವ ಕೊರೋನಾಕ್ಕೆ ಈಡಾಗುವ ಭಯದಿಂದ ನಮ್ಮದೇ ಮನೆಗಳಲ್ಲಿ ಬಂಧಿಯಾಗಿ ಕುಳಿತುಕೊಳ್ಳಬೇಕಾದ ಅನಿವಾರ್ಯ. ಸಾವಿರ ಸಾವಿರ ವರ್ಷ ಬದುಕುವವರಂತೆ, ಜಿದ್ದಿಗೆ ಬಿದ್ದು, ಹಣವನ್ನು ಗಳಿಸಿದ್ದಾದರೂ ಯಾಕೆ ಅಂತನ್ನಿಸುತ್ತಿರಬೇಕು ಕೆಲವರಿಗೆ. ಬದುಕಿನ ಅನಿಶ್ಚಿತತೆಯ ಬಗ್ಗೆ ದಾಸರು ಹೇಳಿದ, ಜನಪದರು ಹೇಳಿದ್ದ ಮಾತುಗಳನ್ನೆಲ್ಲ ಎಂದೂ ನಮಗಲ್ಲವೇ ಅಲ್ಲ ಅನ್ನುವಂತೆ, ಜಾಣ ಕಿವುಡರಾಗಿದ್ದ ನಮಗೀಗ, ಅವೆಲ್ಲ ಒಂದೊಂದಾಗಿ ನೆನಪಾಗುತ್ತಿವೆ. ಆದರೂ ಅದು ಅಷ್ಟು ಪ್ರಯೋಜನವಲ್ಲ ಬಿಡಿ. ಆಮೇಲೆ ಈ ಕರೆಗಂಟೆಯನ್ನೂ ನಾವು ಸ್ಮಶಾನ ವೈರಾಗ್ಯದಂತೆಯೇ ತೆಗೆದುಕೊಳ್ಳುವ ಜಾತಿ ಈ ಮನುಷ್ಯನದ್ದು. ಎಲ್ಲವೂ ಸರಿ ಹೋಗಲಿ, ರಸ್ತೆಯಲ್ಲಿ ಭೀತಿಯಿಲ್ಲದೇ ಓಡಾಡುವಂಥಾಗಲಿ… ಮತ್ತೆ ಅದೇ ರಾಗ ಮುಂದುವರಿಯುತ್ತದೆ. ದ್ವೇಷ, ಅಸೂಯೇ, ಕೊಳ್ಳುಬಾಕತನ, ದುಡ್ಡಿನ ಹಿಂದೋಡುವ ಓಟ ಏನೂ ಆಗೇಇಲ್ಲವೇನೋ ಅನ್ನುವಂತೆ ಸಾಂಗವಾಗಿ ನಡೆಯುತ್ತದೆ. ಅಷ್ಟೇ.. ಅಷ್ಟಲ್ಲದೇ ಮತ್ಯಾವ ಪವಾಡವೂ ಆಗುವುದಿಲ್ಲ. ಮನುಷ್ಯ ಸುಲಭಕ್ಕೆ ಪಾಠ ಕಲಿಯುವ ಪ್ರಾಣಿಯಲ್ಲ.