ಶಿಂಬೋರ್ಸ್ಕಾರ ಜನಪ್ರಿಯತೆ ಮತ್ತು ಯಶಸ್ಸಿಗೆ ಕಾರಣವೇನು ಗೊತ್ತೇ? ವಿಶಿಷ್ಟ ಕಾವ್ಯ ಶೈಲಿ, ವಿಭಿನ್ನತೆ. ಯಾವುದೇ ಒಂದು ಕಾವ್ಯ ಶೈಲಿಗೆ ಜೋತು ಬೀಳದೆ, ತನ್ನದೇ ಆದ ನುಡಿಗಟ್ಟನ್ನು ಮತ್ತು ತನ್ನದೇ ಆದ ಭಾಷೆಯನ್ನು ಠಂಕಿಸಿದರು. ದೊಡ್ಡ ಐತಿಹಾಸಿಕ ಘಟನೆಗಳು, ಮಾನವ ಅಸ್ತಿತ್ವದ ಜೈವಿಕ ಸ್ಥಿತಿಗತಿ, ಕವಿಯ ಸಾಮಾಜಿಕ ಪಾತ್ರ ಮತ್ತು ತಾತ್ವಿಕ ವ್ಯವಸ್ಥೆಗಳು, ಸಿದ್ಧಾಂತಗಳಿಂದ ದೂರವೇ ಉಳಿಯಿತು ಅವರ ಕಾವ್ಯ.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿಯಲ್ಲಿ ವಿಸ್ಲಾವಾ ಶಿಂಬೋರ್ಸ್ಕಾ (೧೯೨೩-೨೦೧೨) ಬದುಕು ಮತ್ತು ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ
ಪೋಲ್ಯಾಂಡಿನ ವಿಸ್ಲಾವಾ ತಮ್ಮ ಕಾವ್ಯದಿಂದಲೇ ಪ್ರಪಂಚದಾದ್ಯಂತ ಚಿರಪರಿಚಿತರು. ೧೯೯೬ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಇವರನ್ನು ನೊಬೆಲ್ ಸಮಿತಿಯು “ಕಾವ್ಯದ ಮೊಜಾರ್ಟ್” ಎಂದು ನಾಮಕರಣ ಮಾಡಿತು.
ವಿಸ್ಲಾವಾ, ಒಂದು ಗೊಂದಲಮಯ ವಿದ್ಯಮಾನವನ್ನು ಪ್ರತಿನಿಧಿಸುತ್ತಾರೆ, ಅವರ ಕೃತಿಗಳು ಅವರ ಪ್ರಾಮಾಣಿಕತೆಯ ಹೊರತಾಗಿಯೂ ಓದುಗರನ್ನು ರೋಮಾಂಚನಗೊಳಿಸುತ್ತವೆ. ಅವರ ಕಾವ್ಯವು ಅಂತರ್ಮುಖಿ, ವಿವೇಚನಾಯುಕ್ತ ಮತ್ತು ಶಾಂತ ರೀತಿಯ ಶೈಲಿಯಿಂದ ಕೂಡಿದೆ. ಅವರ ಕಾವ್ಯದ ಸರಳತೆಯು ಸಿದ್ಧಾಂತಗಳನ್ನು ವಿರೋಧಿಸಿದರೂ, ಸಮಕಾಲೀನ ಓದುಗರ ಅಭಿರುಚಿಗೆ ತಕ್ಕಂತೆಯೇ ಇದೆ.
ಶಿಂಬೋರ್ಸ್ಕಾ ಅವರ ವಿಚಾರ ವಿಮರ್ಶಕರ ಹಂಗಿಲ್ಲದೆ ಮತ್ತು ಸಮೂಹ ಮಾಧ್ಯಮದ ಸಹಾಯವಿಲ್ಲದೆ ತನ್ನ ಓದುಗರಿಗೆ ತಲುಪುತ್ತದೆ. ಅವರ ಕವನ ಸಂಕಲನಗಳಂತೂ ಜನಪ್ರಿಯ ಕಾದಂಬರಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಇದೆ ಕಾರಣಕ್ಕೆ “ನಾನು ಸತ್ತು ಸ್ವರ್ಗಕ್ಕೋ ನರಕಕ್ಕೋ ಹೋದರು, ಅಲ್ಲಿಯೂ ಪುಸ್ತಕಗಳಿಗೆ ಸಹಿ ಹಾಕಿ ಕೊಡ್ತಾ ಇರ್ತೀನಿ ಅನ್ಸತ್ತೆ” ಎಂದು ತಮಾಷೆ ಮಾಡುವರು ಶಿಂಬೋರ್ಸ್ಕಾ.
ಶಿಂಬೋರ್ಸ್ಕಾರ ಜನಪ್ರಿಯತೆ ಮತ್ತು ಯಶಸ್ಸಿಗೆ ಕಾರಣವೇನು ಗೊತ್ತೇ? ವಿಶಿಷ್ಟ ಕಾವ್ಯ ಶೈಲಿ, ವಿಭಿನ್ನತೆ. ಯಾವುದೇ ಒಂದು ಕಾವ್ಯ ಶೈಲಿಗೆ ಜೋತು ಬೀಳದೆ, ತನ್ನದೇ ಆದ ನುಡಿಗಟ್ಟನ್ನು ಮತ್ತು ತನ್ನದೇ ಆದ ಭಾಷೆಯನ್ನು ಠಂಕಿಸಿದರು. ದೊಡ್ಡ ಐತಿಹಾಸಿಕ ಘಟನೆಗಳು, ಮಾನವ ಅಸ್ತಿತ್ವದ ಜೈವಿಕ ಸ್ಥಿತಿಗತಿ, ಕವಿಯ ಸಾಮಾಜಿಕ ಪಾತ್ರ ಮತ್ತು ತಾತ್ವಿಕ ವ್ಯವಸ್ಥೆಗಳು, ಸಿದ್ಧಾಂತಗಳಿಂದ ದೂರವೇ ಉಳಿಯಿತು ಅವರ ಕಾವ್ಯ.
ಇವರ ಕಾವ್ಯ ಅನ್ಯಾಯಕ್ಕೊಳಗಾದವರಿಗೆ ಸಹಾನುಭೂತಿ, ಸಾಂತ್ವಾನದ ಮಾತುಗಳಾಗಿವೆ. ಅದರ ಮೊನಚು, ನಿಖರತೆ, ಭಾವ ತೀವ್ರತೆ, ಭಾವಗೀತೆಯ ಭಾಷೆ; ನಿರಾಭರಣವಾಗಿ ಆಡು ಮಾತಿನಂತೆಯೇ ಇದ್ದರೂ ಅಂದವಾಗಿ, ವಿಶಿಷ್ಟ ರೂಪವನ್ನು ಹೊಂದಿರುವಂಥದ್ದು. ಅವರು ತಮ್ಮ ಜೀವಿತಾವಧಿಯಲ್ಲಿ ಹದಿನಾರು ಕವನ ಸಂಕಲನಗಳನ್ನು ಹೊರತಂದರು.
ತನ್ನಷ್ಟಕ್ಕೆ ತಾನೇ, ಖಾಸಗಿಯಾಗಿ ಬದುಕಲು ಇಚ್ಛಿಸಿದ ಇವರಿಗೆ ನೊಬೆಲ್ ಪ್ರಶಸ್ತಿ ಘೋಷಣೆಯಾದಾಗ ಒಂದು ರೀತಿ ಕೈಕಾಲು ಸೆಟದಂತೆಯೇ ಭಾಸವಾಯಿತೆಂದು ಅವರ ಗೆಳೆಯರು ಹೇಳುವರು. ಕ್ರಾಕೌನಲ್ಲಿ ತಮ್ಮ ಜೀವಿತದ ಹೆಚ್ಚು ಕಾಲ ಕಳೆದ ಇವರು “ಲಿಟರರಿ ಲೈಫ಼್” ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ.
“ಈ ಜಗತ್ತನ್ನು ಕಮ್ಯುನಿಸಂನಿಂದ ಉಳಿಸಬಹುದು ಎಂಬ ನನ್ನ ಆಲೋಚನೆಯಿಂದ ದೂರವಾದೆ. ನನ್ನ ಸೃಜನಶೀಲ ಬದುಕಿನ ಶುರುವಾತಿನಲ್ಲಿ ಮಾನವ ಧರ್ಮವನ್ನೇ ಪ್ರೀತಿಸಿದೆ, ಮಾನವಕುಲಕ್ಕೆ ಏನಾದರೂ ಒಳಿತು ಮಾಡಬೇಕೆಂದುಕೊಂಡಿದ್ದೆ. ಆದರೆ ಬಲು ಬೇಗ ನನಗೆ ಅರ್ಥವಾಗಿ ಹೋಯಿತು, ಮನುಕುಲವನ್ನು ಉಳಿಸುವುದು ಸಾಧ್ಯವೇ ಇಲ್ಲವೆಂದು” ಎಂದು ಹೇಳಿದ ಶಿಂಬೋರ್ಸ್ಕಾರ ಕವಿತೆಗಳು ಕೇವಲ ರಾಜಕೀಯ ಕವಿತೆಗಳಲ್ಲದೆ ಮಾನವಕೇಂದ್ರಿತ ಕವಿತೆಗಳು ಎಂದು ಸ್ವತಃ ತಾವೇ ಹೇಳಿಕೊಂಡಿದ್ದಾರೆ.
ಎಲ್ಲವನ್ನೂ ಕುತೂಹಲದಿಂದಲೇ ಕಾಣಬೇಕು, ನಮಗೆ ಏನೂ ತಿಳಿದೇ ಇರದ ಪೆದ್ದರೇನೋ ಎನ್ನುವಷ್ಟು ಜ್ಞಾನದ ಹಸಿವಿರಬೇಕು ಎಂದು ನಂಬಿದ್ದರು. “ನನಗೆ ಏನೂ ಗೊತ್ತಿಲ್ಲ” ಎನ್ನುವುದರ ಕುರಿತು ಹೀಗೆ ಹೇಳುವರು: “ಅದಕೆ ನೋಡಿ ‘ಏನೂ ಗೊತ್ತಿಲ್ಲ ನನಗೆ’ ಅನ್ನೋ ವಾಕ್ಯಕ್ಕೆ ಅಷ್ಟೊಂದು ಮಹತ್ವ ಕೊಡುವೆ ನಾನು. ಅದು ತುಂಬಾ ಸಣ್ಣದೇ ಇರಬಹುದು ಆದರದು ಬಲಶಾಲಿ ರೆಕ್ಕೆ ಹೊತ್ತು ಹಾರುವುದು. ನಮ್ಮೊಳಗನ್ನು, ಹೊರಗನ್ನು ಏಕವಾಗಿಸೋಕೆ ಪ್ರಯತ್ನಿಸುವುದು. ಐಸಾಕ್ ನ್ಯೂಟನ್ ಏನಾದರೂ “ನನಗೆ ಗೊತ್ತಿಲ್ಲಾ, ‘I don’t know’ ಅನ್ನದಿದ್ದರೆ ಅವನ ಹಿತ್ತಲಿನ ತೋಟದ ಸೇಬು ಆಲಿಕಲ್ಲುಗಳಂತೆ ಸುರಿದು ಗುಡ್ಡೆಹಾಕಿದಾಗ, ಅದರಿಂದ ಒಂದು ಸೇಬನ್ನು ಹೆಕ್ಕಿ ಹೊಟ್ಟೆಗಿಳಿಸಿಕೊಂಡು ತೇಗುತ್ತಿದ್ದನಷ್ಟೇ. ನನ್ನ ದೇಶದವರೇ ಆದ ಮೇರಿ ಕ್ಯೂರಿ ಏನಾದರೂ ‘ನನಗೆ ಗೊತ್ತಿಲ್ಲಾ’ ಅನ್ನದಿದ್ದರೆ ಇಷ್ಟೊತ್ತಿಗೆ ಒಂದಿಷ್ಟು ಪ್ರತಿಷ್ಠಿತ ಕುಟುಂಬದ ಹೆಣ್ಣು ಮಕ್ಕಳಿಗೆ ಹೈಸ್ಕೂಲಿನಲ್ಲಿ ರಸಾಯನಶಾಸ್ತ್ರದ ಪಾಠ ಮಾಡುತ್ತಾ ಒಂದು ನೆಲೆಯಿರುವ ನೌಕರಿ ಮಾಡುತ್ತಿದ್ದರಷ್ಟೇ. ಆದರೆ ಅವರು ಹಾಗೆ ಮಾಡದೇ, ಸತತವಾಗಿ ತಮ್ಮಷ್ಟಕ್ಕೆ ತಾವೇ ‘ನನಗೆ ಗೊತ್ತಿಲ್ಲ’ ಎಂದೇ ಹೇಳಿಕೊಂಡರು. ಇದೇ ಮಾತುಗಳು ಅವರನ್ನು ಒಂದಲ್ಲ, ಎರಡು ಬಾರಿ ಸ್ಟಾಕ್ಹೋಮಿಗೆ ಬರುವಂತೆ ಮಾಡಿತು. ದಣಿವೆಯೇ ಅರಿಯದ, ಪುಟಿಯುವ ಜೀವಗಳಿಗಿಲ್ಲಿ ನೋಬೆಲ್ ಪ್ರಶಸ್ತಿ ನೀಡುವರು.”
ಹಿರಿಯರಾದ ಎಚ್ ಎಸ್ ರಾಘವೇಂದ್ರರಾವ್, ಓ ಎಲ್ ಎನ್ ರವರ ಅನುವಾದಗಳೇ ಈ ಕವಿಯನ್ನು ಮತ್ತಷ್ಟು ಓದಲು ಪ್ರೇರೇಪಿಸಿದ್ದು. ಕೆಂಡಸಂಪಿಗೆಯಲ್ಲಿ ಪ್ರಕಟವಾಗುವ ಎಸ್ ಜಯಶ್ರೀನಿವಾಸ್ ರಾವ್ ಅವರ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಶಿಂಬೋರ್ಸ್ಕಾರವರ ಮತ್ತೊಂದಿಷ್ಟು ಕವಿತೆಗಳು ಓದಲು ಸಿಗುತ್ತವೆ.
ಶಿಂಬೋರ್ಸ್ಕಾರ ಒಂದಿಷ್ಟು ಕವಿತೆಗಳು ನಿಮ್ಮ ಓದಿಗೆ. ಈ ಎಲ್ಲಾ ಪೋಲಿಷ್ ಕವಿತೆಗಳ ಇಂಗ್ಲಿಷ್ ಅನುವಾದ ಸ್ತಾನಿಸ್ಲಾವ್ ಬರನ್‌ಚಕ್ (Stanizław Barańczak) ಹಾಗೂ ಕ್ಲೇರ್ ಕಾವನಾ (Clare Cavanagh) ಅವರದು.
1. ಒಂದು ಅಚಾನಕ್ ಭೇಟಿ
(An unexpected meeting)
ನಾವು ಪರಸ್ಪರ ಅತೀವ ಸೌಜನ್ಯದಿಂದ ನಡೆದುಕೊಳ್ಳುತ್ತೇವೆ
‘ಇಷ್ಟು ವರ್ಷಗಳ ನಂತರ ನಿಮ್ಮನ್ನು ಭೇಟಿಯಾಗಲು ಬಹಳ ಸಂತೋಷ’
ನಮ್ಮ ಹುಲಿ ಹಾಲು ಕುಡಿಯುತ್ತವೆ
ನಮ್ಮ ಗಿಡುಗ ನೆಲದ ಮೇಲೆ ನಡೆಯುತ್ತವೆ
ನಮ್ಮ ತಿಮಿಂಗಿಲಗಳೆಲ್ಲ ಮುಳುಗಿ ಹೋಗಿವೆ
ನಮ್ಮ ತೋಳಗಳೋ ತೆರೆದ ಪಂಜರದ ಹಿಂದೆ ಆಕಳಿಸುತ್ತವೆ
ನಮ್ಮ ಹಾವು ಮಿಂಚು ಕಳಚಿವೆ ಪೊರೆಯಂತೆ
ನಮ್ಮ ಮಂಗಗಳು ಹುಚ್ಚುಚ್ಚಾಗಿ ಹಾರಾಡುವುದಿಲ್ಲ
ನಮ್ಮ ನವಿಲುಗಳಂತೂ ಹೆಮ್ಮೆಯ ಗರಿ ತ್ಯಜಿಸಿವೆ
ಬಾವಲಿಗಳು ನಮ್ಮ ಹೆರಳಿನಿಂದ ಎಂದೋ ಹಾರಿ ಹೋಗಿವೆ
ಮಾತಿನ ನಡುವೆ ಮೌನವಾಗುತ್ತೇವೆ
ಎಲ್ಲಾ ಮುಗುಳ್ನಗೆಯೂ ಈಗ ಅಸಹಾಯಕ
ಈಗ ನಮ್ಮ ಮನುಷ್ಯರಿಗೆ
ಪರಸ್ಪರ ಹೇಗೆ ಮಾತನಾಡಬೇಕು ತಿಳಿಯದು
2. ಅಂತ್ಯ ಮತ್ತು ಆರಂಭ
(The End And The Beginning)
ಪ್ರತಿ ಯುದ್ಧದ ನಂತರ
ಯಾರಾದರೊಬ್ಬರು ಸ್ವಚ್ಛ ಮಾಡಲೇಬೇಕಲ್ಲವೇ
ಎಲ್ಲವವೂ ತಂತಾನೇ
ಒಪ್ಪ ಓರಣವಾಗುವುದಿಲ್ಲವಷ್ಟೆ
ಯಾರಾದರೂ ಅವಶೇಷಗಳನ್ನ
ರಸ್ತೆ ಬದಿಗೆ ತಳ್ಳಲೇಬೇಕು
ಹೆಣ ತುಂಬಿಕೊಂಡ ಗಾಡಿಗಳಿಗೆ
ದಾರಿ ಮಾಡಿಕೊಡಲು
ಯಾರಾದರೂ ಕೈ ಕೆಸರು ಮಾಡಿಕೊಳ್ಳಲೇಬೇಕು
ಕಸ-ಕಡ್ಡಿ, ಬೂದಿ,
ಸೋಫಾ ಸ್ಪ್ರಿಂಗುಗಳಲ್ಲಿ,
ಒಡೆದ ಗಾಜಿನಲ್ಲಿ,
ರಕ್ತಸಿಕ್ತ ತುಂಡು ಬಟ್ಟೆಗಳಲ್ಲಿ
ಯಾರಾದರೂ ಎಳೆತರಬೇಕು ದೂಲನ್ನ
ಗೋಡೆ ನಿಲ್ಲಿಸಲು
ಯಾರಾದರೂ ಕಿಟಕಿ ಗಾಜು ಒರೆಸಿ
ಬಾಗಿಲು ಮತ್ತೆ ನಿಲ್ಲಿಸಬೇಕು ಚೌಕಟ್ಟಿಗೆ
ಫೋಟೋ ತೆಗೆಯುವಂಥ ಚಂದವಲ್ಲ ಬಿಡಿ ಇದು
ಸರಿಹೋಗಲು ವರುಷಗಳೇ ಬೇಕು…
ಈಗ ಮತ್ತೊಂದು ಯುದ್ಧಕ್ಕೆ ತೆರಳಿವೆ
ಎಲ್ಲಾ ಕ್ಯಾಮೆರಾಗಳು
ಬೇಕು ನಮಗೆ ಸೇತುವೆಗಳು
ಹೊಸ ರೈಲು ನಿಲ್ದಾಣಗಳು
ಅಂಗಿಯ ತೋಳು ಮಡಚಿ ಮಡಚಿ
ಹರಿದು ಹೋಗಿವೆ
ಯಾರೋ ಕೈಯಲ್ಲಿ ಪೊರಕೆ ಹಿಡದವರು
ನೆನೆಯುವರು ಮೊದಲು ಹೇಗಿತ್ತೆಂದು
ಮತ್ಯಾರೋ ಕೇಳಿಸಿಕೊಳ್ಳುವರು
ತಮ್ಮ ಭುಜದ ಮೇಲಿರುವ ತಲೆದೂಗುತ್ತಾ
ಅಲ್ಲೇ ಹತ್ತಿರದಲ್ಲಿರುವ ಮಂದಿ
ಶತಪಥ ತಿರುಗಿತ್ತದ್ದಾರೆ ಇದೆಲ್ಲವೂ ಬೇಸರವಾಯಿತೆಂದು
ಒಮ್ಮೊಮ್ಮೆ ಯಾರಾದರೂ
ಪೊದೆಗಳಡಿಯಿಂದ ಅಗೆದು ತರುವರು
ತುಕ್ಕು ಹಿಡಿದ ವಾದಗಳನ್ನು
ಹಾಗೇ ಕಸದ ತೊಟ್ಟಿಗೆ ಒಯ್ದು ಹಾಕುವರು
ಇಲ್ಲಿ ನಡೆದಿರುವುದರ ಬಗ್ಗೆ ತಿಳಿದವರು
ಒಂದಿಷ್ಟು ಕಮ್ಮಿ ತಿಳಿಯದವರಿಗೆ ಜಾಗ ಮಾಡಿಕೊಡಬೇಕು
ಕಡಿಮೆಗಿಂತಲೂ ಚೂರು ಕಮ್ಮಿ,
ಕಡೆಗೆ ಏನೆಂದರೇನೂ ತಿಳಿಯದವರಿಗೆ
ಕಾರಣ-ಪರಿಣಾಮಗಳನ್ನು ಮೀರಿ
ಹುಲುಸಾಗಿ ಬೆಳೆದ ಹುಲ್ಲಿನಲ್ಲಿ
ಯಾರೋ ಒಬ್ಬ ನಿಗಚಿ ಮಲಗಬೇಕು
ಹುಲ್ಲಿನೆಸಳು ಬಾಯಲ್ಲಿ ಕಚ್ಚಿ
ಹಾಗೇ ಮುಗಿಲನ್ನು ದಿಟ್ಟಿಸಬೇಕು
3. ಮೋಡಗಳು
(Clouds)
ನಿಜವಾಗಿಯೂ ಸಿಕ್ಕಾಪಟ್ಟೆ
ಚುರುಕಾಗಿರಬೇಕು
ಮೋಡಗಳನ್ನ ಬಣ್ಣಿಸುವಾಗ
ಅರೆಚಣ ಸಾಕು ಇವಕ್ಕೆ,
ಮತ್ತಿನೇನೋ ಆಗಿ ರೂಪಾಂತರವಾಗಲು
ಆಕಾರ, ಬಣ್ಣ, ಭಂಗಿ, ವಿನ್ಯಾಸ
ಯಾವುದನ್ನೂ ಮತ್ತೆ ಪುನರಾವರ್ತನೆ ಮಾಡದಿರುವುದೇ
ಇವುಗಳ ಟ್ರೇಡ್ ಮಾರ್ಕ್
ನೆನಪುಗಳ ಭಾರ ಹೊರದೆ
ನಿಜದಲಿ ಸರಾಗ ತೇಲಿವೆ
ಈ ನೆಲದ ಮೇಲಣ ಏನೆಲ್ಲದಕ್ಕೂ ಸಾಕ್ಷಿ!
ಏನಾದರೂ ಘಟಿಸಿದಾಗೆಲ್ಲ ಚದುರಿವೆ
ಹಾಗೆ ನೋಡಿದರೆ
ಈ ಬದುಕು ಗಟ್ಟಿ ನೆಲದ ಮೇಲಿದೆ
ಮುಗಿಲಿಗಿಂತಲೂ
ಶಾಶ್ವತ, ನಿರಂತರ
ಮೋಡವಲ್ಲದಿದ್ದರೆ
ಒಂದು ಕಲ್ಲು ನಂಬಿಕೆಗೆ ಅರ್ಹ
ಅಣ್ತಮ್ಮನಂತೆ ಆಪ್ತ
ಎಷ್ಟೇ ಅಂದರೂ ಅವರಿಬ್ಬರೂ
ದೂರದಿಂದ ‘ಹಾರುವ’ ಸೋದರ ಸಂಬಂಧಿಗಳಲ್ಲವೆ
ಜನ, ತಮಗೆ ಬೇಕೆನಿಸಿದರೆ ಬದುಕಲಿ
ಇಲ್ಲವಾದರೆ ಒಬ್ಬೊಬ್ಬೊರಾಗಿ ಸಾಯಲಿ
ಮೋಡಗಳಿಗೆ, ಇಲ್ಲಿ ಕೆಳಗೆ ಏನೇ ಆದರೂ
ಫರಕು ಬೀಳುವುದಿಲ್ಲ
ನಿಮ್ಮ ಬದುಕಿಡೀ
ಈ ಜಂಬದ ಪಡೆ ಸರಾಗ ತೇಲುವುದು,
ನೋಡಿ, ನನ್ನದು ಮಾತ್ರ ಹೀಗೆ ಅಪೂರ್ಣ!
ನಾವು ಇಲ್ಲದಿರುವಾಗ, ಮಾಯವಾಗಬೇಕೆಂತೇನಿಲ್ಲ
ತೇಲಿ ಹೋಗುವಾಗ ಕಾಣಲೇಬೇಕೆಂದಿಲ್ಲ
4. ಮೂರು ವಿಲಕ್ಷಣ ಪದಗಳು
(Three Oddest Words)
ನಾನು,
ಭವಿಷ್ಯ:
ಎನ್ನುವಾಗ
ಆ ಮೊದಲಕ್ಷರ ‘ಭ’ ಈಗಾಗಲೇ
ಭೂತಕಾಲ ಸೇರಿದೆ
ನಿಶ್ಯಬ್ದ:
ಅಂದಕೂಡಲೇ
ಅದನ್ನು ಇಲ್ಲವಾಗಿಸಿದೆ
ಏನೂ ಇಲ್ಲ:
ಅಂದಾಗಲೇ
ಯಾವ ಅಮೂರ್ತವೂ
ಹಿಡಿಯಲಾಗದ್ದನ್ನು ಸೃಷ್ಟಿಸಿರುವೆ
5. ಮನೆಗೆ ಹೋಗೋದು
(Going Home)
ಅವ ಮನೆಗೆ ಬಂದ…
ಏನೂ ಹೇಳಲಿಲ್ಲ
ಏನೋ ಆಗಿದೆಯೆಂದು ಸ್ಪಷ್ಟವಾಗಿ ಕಂಡಿತು
ತೊಟ್ಟ ಅಂಗಿ ಕಳಚದೆ ಹಾಗೇ ಮಲಗಿದ
ಹಾಸಿಗೆ ಹೊದ್ದು ಮುಸುಕೆಳೆದ
ಕಾಲು ಮುದುರಿದ
ಅವನಿಗೆ ನಲವತ್ತರ ಆಸುಪಾಸು
ಆದರೆ ಈ ಸದ್ಯ ಹಾಗನಿಸೋಲ್ಲ
ಏಳು ಪದರಿನ ಚರ್ಮದೊಳಗೆ,
ಕತ್ತಲೆಯಲ್ಲಿ ಅವಿತು
ತಾಯಿಯ ಗರ್ಭದಲ್ಲಿರುವಂತೆ ಮಲಗಿದ
ಹೋಮಿಯೋಸ್ಟಾಸಿಸ್ ಮೆಟಾಗಲಾಟಿಕ್ ಕಾಸ್ಮೋನೌಟಿಕ್ಸ್ , ಕುರಿತು
ನಾಳೆ ಉಪನ್ಯಾಸ ಕೊಡುವನು
ಈಗಂತೂ ಮುದುರಿ ಮಲಗಿ
ನಿದ್ದೆ ಹೋದ
6. ರಾಜಕೀಯ ಕಾಲ
(Political Age)
ನಾವು ನಮ್ಮ ಕಾಲದ ಮಕ್ಕಳು
ಇದು ರಾಜಕೀಯ ಕಾಲ
ಹಗಲೂ, ಇರುಳೂ
ನನ್ನದು, ನಮ್ಮದು,ಅವರದು
ಎಲ್ಲವೂ ರಾಜಕೀಯ
ನಿಮಗಿಷ್ಟವಿದೆಯೋ ಇಲ್ಲವೋ
ನಿಮ್ಮ ವಂಶವಾಹಿಗಳಲ್ಲಿ ರಾಜಕೀಯ ಇತಿಹಾಸವಿದೆ
ತೊಗಲಿಗೆ, ರಾಜಕೀಯ ಅಂಟಿದೆ
ಕಣ್ಣುಗಳಿಗೆ, ರಾಜಕೀಯ ಓರೆ ನೋಟವಿದೆ
ನೀನು ಆಡಿದ್ದೆಲ್ಲವೂ ಪ್ರತಿಧ್ವನಿಸುವುದು
ಆಡದಿರುವುದೂ ತನ್ನಷ್ಟಕ್ಕೆ ತಾನು ಮಾತನಾಡಿಕೊಳ್ಳುವುದು
ಹೇಗೋ ನೀನು ಮಾತನಾಡಿದ್ದೆಲ್ಲವೂ ರಾಜನೀತಿಯೇ
ಇನ್ನೂ ಕಾಡಿಗೆನಾದರೂ ಹೊರಟಿರೋ
ರಾಜಕೀಯ ನೆಲದ ಮೇಲೆ
ರಾಜಕೀಯ ಹೆಜ್ಜಗಳನ್ನೇ ಹಾಕುವಿರಿ
ರಾಜಕೀಯ ಅಲ್ಲದ ಪದ್ಯಗಳೂ ಈಗ ರಾಜಕೀಯವೇ
ನೆತ್ತಿಯ ಮೇಲೊಬ್ಬ ಚಂದಿರನಲ್ಲದ
ಚಂದಿರ ಹೊಳೆಯುತ್ತಾನೆ
ಅರಗಿಸಿಕೊಳ್ಳಲಾಗದ ಪ್ರಶ್ನೆಯೊಂದಿದೆ
ಇರಬೇಕೋ, ಇರಬಾರದೋ!
ಇದೂ ಕೂಡ ರಾಜಕೀಯ ಪ್ರಶ್ನೆಯೇ
ನೀವು ರಾಜಕೀಯ ಮಹತ್ವ ಪಡೆಯಲು
ಮನುಷ್ಯರೇ ಆಗಬೇಕೆಂದಿಲ್ಲ
ಯಾವುದೋ ಕಚ್ಚಾ ವಸ್ತುವಾದರೂ ಸರಿ
ಶೇಂಗಾ ಹಿಂಡಿಯೋ, ಕಚ್ಚಾತೈಲವೋ
ಅಥವಾ ತಿಂಗಳುಗಟ್ಟಲೆ ತನ್ನ ಆಕಾರದ ಕುರಿತು
ಜಗಳಗಳೇ ಆಗುವ ಕಾನ್ಫರೆನ್ಸ್ ಟೇಬಲ್ ಕೂಡ
ಬದುಕು ಸಾವುಗಳನ್ನು ನಾವು ದುಂಡು ಮೇಜಿನ
ಸುತ್ತಲೋ ಇಲ್ಲವೇ ಚಕ್ ಚೌಕ ಮೇಜಿನ
ಸುತ್ತಲೋ ತೀರ್ಮಾನಿಸಬೇಕೇ?
ಛೆ!
ಈ ನಡುವೆ,
ಜನಾಂಗ ಅಳಿದು ಹೋದವು
ಜಾನುವಾರು ಸತ್ತು ಹೋದವು
ಮನೆಗಳು ಸುಟ್ಟು ಹೋದವು
ಹೊಲಗಳು ಒಣಗಿದವು
ರಾಜಕೀಯ ಸುಳಿವೇ ಇರದ,
ಮರೆತೇ ಹೋದ ಆ ಕಾಲದಂತೆ
ಚೈತ್ರಾ ಶಿವಯೋಗಿಮಠ ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಇವರಿಗೆ ಓದು, ಬರಹ, ಕಾವ್ಯ ಅಚ್ಚುಮೆಚ್ಚು. ಇವರ ಮೊದಲ ಪ್ರಕಟಿತ ಕವನ ಸಂಕಲನ “ಪೆಟ್ರಿಕೋರ್”(ಪ್ರಾರ್ಥನಾ ಕಾವ್ಯ ಪುರಸ್ಕಾರ, ಅಮ್ಮ ಪ್ರಶಸ್ತಿ ಸಂದಿದೆ). ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ.
ಪದ್ಯಗಳಂತೂ ಅದ್ಭುತ. ಧನ್ಯವಾದಗಳು.
Maria Wislawa Anna Szymborska is a Polish poet with a difference. Also an essayist and a translator, Szymborska was also a recipient of 1996 Nobel Prize in literature.
Writer Chaitra Shivayogimath has excellently introduces this writer with some interesting facts. One of them is Szymborska’s books on poems are sold more than other writers’ works without the help of the media or social media. Inspired by this, the writer remarks, ” I think I will be signing my books even in hell or heaven after my death.”
The article has many such anecdotes. Thank you Chaitra for the article. Congrats
ಚೈತ್ರಾ ಶಿವಯೋಗಿಮಠ ಅವರ ಪದಗಳ ಆಯ್ಕೆ ಬಹಳ ವಿಶಿಷ್ಟ .
ಈಗ ನಮ್ಮ ಮನುಷ್ಯರಿಗೆ
ಪರಸ್ಪರ ಹೇಗೆ ಮಾತನಾಡಬೇಕು ತಿಳಿಯದು
ಕಡಿಮೆಗಿಂತಲೂ ಚೂರು ಕಮ್ಮಿ,
ಎಷ್ಟೇ ಅಂದರೂ ಅವರಿಬ್ಬರೂ
ದೂರದಿಂದ ‘ಹಾರುವ’ ಸೋದರ ಸಂಬಂಧಿಗಳಲ್ಲವೆ
ಫರಕು ಬೀಳುವುದಿಲ್ಲ
ತೊಗಲಿಗೆ, ರಾಜಕೀಯ ಅಂಟಿದೆ
ಜಾನುವಾರು ಸತ್ತು ಹೋದವು
—————————————————————–
ಚೈತ್ರಾ ಶಿವಯೋಗಿಮಠ – ನೊಬೆಲ್ ಪ್ರಶಸ್ತಿ ಪಡೆದ Maria Wislawa Anna Szymborska
Congratulations.