ಕವಿಯೊಬ್ಬನ ಮನಸ್ಸಿನ ಮೇಲೆ ಬೀರುವ ಹೊರಜಗತ್ತಿನ ಘಟನೆಗಳು ಪ್ರಭಾವವು ಬಹು ಪರಿಣಾಮವನ್ನು ಮನಸ್ಸಿನ ಮೇಲೆ ಬೀರಿಯೇ ಇರುತ್ತದೆ. ಈ ಪ್ರಭಾವದ ಪ್ರೇರಣೆಯಿಂದ ಆದ ಪರಿಣಾಮವು ಬಹು ದಟ್ಟವಾಗಿರುತ್ತದೆ. ಇವು ಪದರ ಪದರಗಳಾಗಿ ಬಿಡಿಸಿಕೊಳ್ಳಲು ಪ್ರಯತ್ನಿಸಿದಷ್ಟು ಅದು ನೆನಪಾಗುತ್ತಲೇ ಇರುತ್ತದೆ. ಇದರಿಂದ ಬಿಡುಗಡೆಗೆ ಮಹಾಮರೆವಿನ ಅಗತ್ಯ ಕವಿಗಿದೆ ಅನಿಸದೆ. ಮೂಲದಲ್ಲಿ ಇಲ್ಲದ ಒಂದು ಕೃತಿಯನ್ನು ತನ್ನ ಭಾಷೆಯ ಮೂಲಕ ಕಟ್ಟಿಕೊಳ್ಳುವಾಗ ಕವಿ ತನ್ನ ಸುತ್ತಮುತ್ತಲಿನ ಘಟನೆಗಳನ್ನು ಆ ಭಾಗದಲ್ಲಿನ ಔಚಿತ್ಯ ಅನಿಸಿದರೆ ಅಲ್ಲಿ ತರುತ್ತಾನೆ. ಈ ಪ್ರಭಾವ ಪ್ರೇರಣೆಗಳು ಕಾವ್ಯ ರಚನೆಗೆ ಇರಲಿ, ಅವನ ವ್ಯಕ್ತಿತ್ವದ ರಚನೆಗೇ ಸಹಾಯ ಮಾಡಿಬಿಡುತ್ತದೆ.
ಆರ್. ದಿಲೀಪ್ ಕುಮಾರ್ ಅಂಕಣ

 

ಕವಿಯೊಬ್ಬ ಸಾವಿರಾರು ಕಾವ್ಯಗಳ ಬರೆದರೂ ತನ್ನ ಜೀವಿತದಲ್ಲಿ ಬರೆಯುವುದು ಒಂದೇ ಕಾವ್ಯವನ್ನು. ಉಳಿದವು ಬೇರೆ ಬೇರೆ ಕಾವ್ಯವೆಂಬ ಶೀರ್ಷಿಕೆಯ ಹೊತ್ತ ಒಂದು ವಜ್ರದ ಹರಳಿನ ಬೇರೆ ಬೇರೆ ಛಾಯೆಗಳು ಅನ್ನುವ ಮಾತೊಂದಿದೆ. ಇದು ಕವಿಯೊಬ್ಬನಲ್ಲಿನ ಭಾವಗಳು ಒಂದನ್ನೊಂದು ಮೀರಿಸಿ ಬಂದರೂ ಯಾವುದೋ ಒಂದು ಭಾವ ಮೂಲದಲ್ಲಿ ಅವಿತು ಕುಳಿತಿರುತ್ತದೆ. ಕಾಲಾನಂತರ ಅದು ಹೊರಬರುತ್ತದೆ. ಕೆಲವೊಮ್ಮೆ ರೂಪಕ, ಪ್ರತಿಮೆ, ಅಲಂಕಾರಗಳಿಂದ ಅಥವಾ ಕಾವ್ಯರೂಪದಿಂದ ಅದು ಹೊಸತಾಗಿ ಕಂಡರೂ ಅವನಲ್ಲಿನ ಮೂಲಭಾವ ಒಂದೇ ಆಗಿದ್ದು ಹೊಸದಾಗಿ ಹೊದಿಕೆ ಹೊದ್ದು ಬಂದಿರುತ್ತದೆ.

ಒಂದು ಕಾವ್ಯ ಬರೆದ ನಂತರ ಮತ್ತೊಂದು ಕಾವ್ಯದ ರಚನೆಗೆ ತೊಡಗಿದಾಗ ಮೊದಲು ಬರೆದ ಕಾವ್ಯದ ಸಾಲುಗಳೋ, ಭಾವಗಳೋ, ಉಪಮೆ ರೂಪಕಗಳು ಮತ್ತೆ ಮತ್ತೆ ಕವಿಯ ಮುಂದೆ ಬಂದು ನಿಲ್ಲುವ ಸಾಧ್ಯತೆ ಇದ್ದೇ ಇರುತ್ತದೆ. ಇದರಿಂದ ಬಿಡುಗಡೆ ಬಹಳ ಕಷ್ಟಸಾಧ್ಯ. ಸಾಮಾನ್ಯ ಕವಿಯಿಂದ ಮಹಾಕವಿಯವರೆಗೂ ಇದು ನಡೆಯುತ್ತಲೇ ಇರುತ್ತದೆ. ಪ್ರತೀ ಕ್ಷಣವೂ ಭೂತ ರಚನೆಯನ್ನು ಮೀರಿಕೊಳ್ಳುವಲ್ಲಿ ಅವನ ಪ್ರಜ್ಞೆ ಮತ್ತು ವ್ಯಕ್ತಿತ್ವ ಬಹಳ ಮುಖ್ಯದ್ದಾಗಿದ್ದರೂ ಕೆಲವೊಮ್ಮೆ ಅದು ಅಸಾಧ್ಯವಾಗಿ ಯಾವುದೋ ಒಂದು ರೂಪದಲ್ಲಿ ಬಂದು ಬಿಡುತ್ತದೆ. ಕವಿಯ ವ್ಯಕ್ತಿತ್ವ, ಅವನು ಕಟ್ಟಿಕೊಡಲು ಇಚ್ಚಿಸುವ ಕಾಣ್ಕೆಗಳ ಭಾವಗಳು ಕಾಲಾನಂತರವೂ ಹೀಗೆ ಎರಡು ಬೇರೆ ರೂಪಗಳಲ್ಲಿ ಉಳಿದುಬಿಡುತ್ತದೆ. ಈ ಮೀರುವಿಕೆಯ ಹಂಬಲವೇ ಹೆಚ್ಚಾದ ಕವಿಯು ಸದ್ಯಕ್ಕೆ ಮುಖಾಮುಖಿಯಾಗುತ್ತಲೇ ಬಹುದೊಡ್ಡ ನಿರ್ವಾತವನ್ನು ಅನುಭವಿಸಿದರೆ ಅದನ್ನು ಮೀರಿಕೊಳ್ಳಬಹುದೇನೋ. ಆ ನಿರ್ವಾತವೂ ರಚನೆಗೆ ಅನ್ವಯವೇ ಹೊರತು ಅವನ ಮನೋಯೋಚನೆಗಳಿಗಲ್ಲ.

ಇವುಗಳಿಂದ ಬಿಡುಗಡೆಯಾಗದ್ದಕ್ಕೆ ಬಹುಮುಖ್ಯ ಕಾರಣವೇ ಪ್ರಭಾವ ಮತ್ತು ಪ್ರೇರಣೆ. ಕವಿಯೊಬ್ಬನ ಮನಸ್ಸಿನ ಮೇಲೆ ಬೀರುವ ಹೊರಜಗತ್ತಿನ ಘಟನೆಗಳು ಪ್ರಭಾವವು ಬಹು ಪರಿಣಾಮವನ್ನು ಮನಸ್ಸಿನ ಮೇಲೆ ಬೀರಿಯೇ ಇರುತ್ತದೆ. ಈ ಪ್ರಭಾವದ ಪ್ರೇರಣೆಯಿಂದ ಆದ ಪರಿಣಾಮವು ಬಹು ದಟ್ಟವಾಗಿರುತ್ತದೆ. ಇವು ಪದರ ಪದರಗಳಾಗಿ ಬಿಡಿಸಿಕೊಳ್ಳಲು ಪ್ರಯತ್ನಿಸಿದಷ್ಟು ಅದು ನೆನಪಾಗುತ್ತಲೇ ಇರುತ್ತದೆ. ಇದರಿಂದ ಬಿಡುಗಡೆಗೆ ಮಹಾಮರೆವಿನ ಅಗತ್ಯ ಕವಿಗಿದೆ ಅನಿಸದೆ. ಮೂಲದಲ್ಲಿ ಇಲ್ಲದ ಒಂದು ಕೃತಿಯನ್ನು ತನ್ನ ಭಾಷೆಯ ಮೂಲಕ ಕಟ್ಟಿಕೊಳ್ಳುವಾಗ ಕವಿ ತನ್ನ ಸುತ್ತಮುತ್ತಲಿನ ಘಟನೆಗಳನ್ನು ಆ ಭಾಗದಲ್ಲಿನ ಔಚಿತ್ಯ ಅನಿಸಿದರೆ ಅಲ್ಲಿ ತರುತ್ತಾನೆ. ಈ ಪ್ರಭಾವ ಪ್ರೇರಣೆಗಳು ಕಾವ್ಯ ರಚನೆಗೆ ಇರಲಿ, ಅವನ ವ್ಯಕ್ತಿತ್ವದ ರಚನೆಗೇ ಸಹಾಯ ಮಾಡಿಬಿಡುತ್ತದೆ.

ಎಂದಿನಂತೆಯೇ ಒಂದು ಸಾಮಾನ್ಯ ಬೆಳಗಿನ ಸೂರ್ಯೋದಯದ ಕಿರಣಗಳು ಮೈ ತಾಕಿದ ತಕ್ಷಣ ಇಪ್ಪತ್ತನಾಲಕ್ಕು ಅಕ್ಷರದ ಗಾಯತ್ರಿ ಹೊರಬಂದಂತೆ, ಒಂದು ಕ್ರೌಂಚ ಪಕ್ಷಿಗೆ ಬಿದ್ದ ಬಾಣ ಅದರ ನರಳಾಟ ಅದರೊಂದಿಗಿದ್ದ ಮತ್ತೊಂದು ಹಕ್ಕಿಯು ಆ ಸತ್ತ ಹಕ್ಕಿಯ ಸುತ್ತ ಸುತ್ತುವ ಶೋಕವೇ ಶ್ಲೋಕವಾದಂತೆ, ಯಾವುದೋ ಒಂದು ಭವದ ಘಟನೆ ಭಾವಕ್ಕೆ ನಾಟಿ ದೊಡ್ಡ ವೃಕ್ಷವಾಗುತ್ತದೆ. ಅದು ಅನುಭವದಲ್ಲಿ ಮುಕ್ತತೆಯನ್ನು ಸಾಧಿಸಿ, ಮನಃಸಾಕ್ಷಿಯನ್ನು ಒಪ್ಪಿ, ಬಹಿರ್ಮುಖವಾಗಿ ಚಲಿಸಿ, ಅಲ್ಲಿನ ಬಹುದ್ವಂದ್ವದ ಕಾಲವಾದ ಒಪ್ಪಿಕೊಳ್ಳುವಿಕೆಯನ್ನು ಮುಟ್ಟಿ ಭಾವನಾತ್ಮಕವಾಗಿಯೆ ಪರ್ಯಾವಸಾನ ಆಗುತ್ತದೆ.

ಇಲ್ಲಿ ದ್ವಂದ್ವ ಅನ್ನುವುದಕ್ಕೂ ಬಹುಮುಖ್ಯ ಕಾರಣ ಒಂದು ಅನುಭವವನ್ನು ಮನಸ್ಸು ಒಪ್ಪಿ ಅದು ಬಹಿರ್ಮುಖಗೊಳ್ಳುವಾಗ ಲೇಖಕನೊಬ್ಬನಲ್ಲಿನ ಪದಗಳ ಬಳಕೆ, ಭಾವ ಭಾಷೆಗೆ ಧಕ್ಕೆಯಾಗದಂತೆ ಹೊರಹಾಕುವ ಕ್ರಿಯೆಯಲ್ಲಿನ ಔಚಿತ್ಯ ಪ್ರಜ್ಞೆ ಎಲ್ಲವನ್ನೂ ದಾಟಿ ಕಾವ್ಯ ಹೊರಬರುವುದೂ ಸಹಾ ಅವನಿಗೆ ಅರಿವಿಲ್ಲದಂತೆ. ಪ್ರಜ್ಞಾಪೂರ್ವಕವಾಗಿ ಬರೆದರೂ ಇದರ ಯೋಚನೆಯೇ ಪ್ರತೀ ಕ್ಷಣವೂ ನಡೆಯುತ್ತಲೇ ಇರುತ್ತದೆ. ಅದರಲ್ಲಿಯೂ ಈ ಭಾವನಾತ್ಮಕತೆ (ನ್ಯಾರೋಟಿಸಿಸಂ) ಬಹುಮುಖ್ಯ ಅನಿಸುವುದು ಕಾವ್ಯ, ಕಾವ್ಯ ರಚನೆಯ ಕಾಲ, ಕವಿಯ ಮನಸ್ಸುಗಳ ಹೊಯ್ದಾಟದೊಂದಿವೆ ಓದುಗ, ಓದುಗನ ಕಾಲ, ದೇಶ ಇವುಗಳಿಂದ. ಇದು ಒಂದಕ್ಕೊಂದು ಕನೆಕ್ಟ್ (ಸಾಯುಜ್ಯ ಸಂಬಂಧ, ಸಕೀಲ ಸಂಬಂಧ) ಹೊಂದದೆ ಕವಿಯು ಕಾವ್ಯವೂ ಓದುಗನೂ ಬೇರೆ ಬೇರೆಯಾಗಿಯೇ ಇರುತ್ತಾರೆ.

ಬೆಂಕಿಯಿಂದ ದೂರ ಉಳಿದ ಕರ್ಪೂರದಂತೆ ಇದ್ದ ಸ್ಥಿತಿ ಈ ಸಾಯುಜ್ಯ ಸಂಬಂಧಕ್ಕೆ ಸಿಕ್ಕ (ಕನೆಕ್ಟ್) ತಕ್ಷಣ ಬೆಂಕಿ ಮತ್ತು ಕರ್ಪೂರ ತನ್ನ ಕಾರ್ಯವನ್ನು ಪ್ರಾರಂಭ ಮಾಡಿಬಿಡುತ್ತದೆ. ಇದು ಕಾವ್ಯ ಮತ್ತು ಓದುಗನ ಸ್ಥಿತಿಯೂ ಹೌದು (ಮಾಡಿ ಮಡಿಯದೆ ಬದುಕಿ ಉಳಿಯಬಾರದು, ಮಡ್ಡಿ / ಕರ್ಪೂರವಾಗದೇ ಬೆಂಕಿ ಬಳಿಗೆ / ಸುಳಿಯಬಾರದು ; ಹೊತ್ತಿ ಹೊಗೆವ ಮಡ್ಡಿಯ ಕಂಪು / ಹೊರಗಡೆಗೆ ; ಒಳಗೆ ಕೊನೆಯಿಲ್ಲದ ಧಗೆ – ಭಗ್ನ – ಗೋಪಾಲಕೃಷ್ಣ ಅಡಿಗ)

ಪ್ರಭಾವ ಅನ್ನುವುದು ಬಹು ಮುಖ್ಯ ಅನಿಸುವುದು ಕಾವ್ಯದ ಓದಿಗೆ ಮುಂದಾದಾಗ. ಅದು ಎರಡು ರೀತಿಯಲ್ಲಿ ತನ್ನ ಕಾರ್ಯವನ್ನು ಕವಿಯ ಮೇಲೆ ಮಾಡಿರುತ್ತದೆ. ಒಂದು ಕವಿಯು ಆಯ್ದುಕೊಳ್ಳುವ ವಸ್ತುವನ್ನು ಅವನಿಗೂ ಮೊದಲು ಬೇರೆ ದೇಶ, ಕಾಲ, ಭಾಷೆಯಲ್ಲಿ ಬಂದ ಕೃತಿಯಿಂದ. ಮತ್ತೊಂದು ತನ್ನ ಕಾಲದಲ್ಲಿನ ಅದಕ್ಕೆ ಬಂಧ ಪಟ್ಟ ಸಮಕಾಲೀನ ಕೃತಿಗಳು ಮತ್ತು ಸಮಾಜದಲ್ಲಿನ ಅದರ ಇರತ ರೂಪಗಳು ( ಜಾನಪದ ಕಥೆಯಾಗಿ, ಕಾವ್ಯವಾಗಿ ಒಟ್ಟಿನಲ್ಲಿ ಬಾಯಿಮಾತಿನಲ್ಲಿ ಪಸರಿಸಿದ್ದು ) ಇವೆರಡೂ ಮುಖ್ಯ ಅಂಶಗಳ ಜೊತೆಗೇ ತನ್ನ ಕಾಲದ ಘಟನೆ. ಇವುಗಳು ನಿರಂತರವಾಗಿ ಕವಿಯ ಕಾವ್ಯ ರಚನೆಯ ಸಮಯದಲ್ಲಿ ಒಂದಕ್ಕೊಂದು ಪೈಪೋಟಿ ನಡೆಸುತ್ತಲೇ ಕಾವ್ಯದ ವಸ್ತು, ರೂಪ, ಕಾವ್ಯ ಭಾಷೆ ಮತ್ತು ಆ ಸಂದರ್ಭದ ಭಾವ ಇವುಗಳ ಮೇಲೆ ರಚನಾತ್ಮಕ ಮತ್ತು ಕ್ರಿಯಾತ್ಮ ಪ್ರಭಾವ ಬೀರುತ್ತಲೇ ಇರುತ್ತದೆ.

ಕೆಲವೊಮ್ಮೆಯಂತೂ ಮೊದಲ ಎರಡು ಅಂಶಗಳ ಪ್ರಭಾವದಿಂದ ಬಿಡಿಸಿಕೊಂಡರೂ ಅಥವಾ ಅದನ್ನು ಕಾವ್ಯದ ವಸ್ತುಸಂದರ್ಭದ ನಿರ್ವಹಣೆಗಷ್ಟೆ ಪಡೆದರೂ ಅದರ ಭಾವ ತೀವ್ರತೆಯು ಅವನ ಸಮಕಾಲೀನದಲ್ಲೆ ಸಿಕ್ಕುತ್ತದೆ. ಮೂಲಕ್ಕೇ ಮೂಲವಾದ ಭಾವದ ಆವಿರ್ಭಾವ ಅವನಿಗೆ ಕಣ್ಣ ಮುಂದೆ ಕಾಣುತ್ತದೆ. ಅದು ಕಾವ್ಯದ ರಚನೆಗೆ ಪೂರಕವಾಗಿ ಅವನಿಗೆ ಅರಿವಿಲ್ಲದೆ ಕಾರ್ಯ ನಿರ್ವಹಿಸಿಬಿಡುತ್ತದೆ.

ಪಂಪನ ಕಾವ್ಯದಲ್ಲಿಯೂ ಈ ಮೂರನೆಯ ಅಂಶದ ಪ್ರಭಾವ ಬಹಳ ನಿಚ್ಛಳವಾಗಿ ಕಾಣಬಹುದು. ವ್ಯಾಸ, ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯರಿಂದ ಕಾವ್ಯದ ವಸ್ತುವನ್ನು ಪಡೆದರೂ ಅವನ ನಿರ್ವಹಣೆಯಲ್ಲಿ ಅವನ ಸಮಾಜದ ಪ್ರಭಾವ ಇದ್ದೇ ಇದೆ. ಅದರಲ್ಲಿಯೂ ಕೆಲವೊಮ್ಮೆ ಕವಿಯೊಬ್ಬನು ಒಂದು ಕಾವ್ಯದಲ್ಲಿ ಕಡೆದ ಕಲಾಕೃತಿಯೇ ಮತ್ತೊಂದು ಕಾವ್ಯ ರಚನೆಗೆ ತೊಡಗಿದಾಗ ಮತ್ತೆ ಹೊಸದಾಗಿ ಅಲ್ಲಿಗೂ ಔಚಿತ್ಯದಲ್ಲಿ ಬಂದು ಸೇರುತ್ತದೆ. ಇದು ಕವಿಯೊಬ್ಬ ಅವನ ಕಾವ್ಯದಿಂದಲೇ ಬಿಡಿಸಲಾರದ ಬಂಧಕ್ಕೆ ಸಿಕ್ಕಿಹಾಕಿಕೊಳ್ಳುತ್ತಾನೆ. ಈ ವಿಶಿಷ್ಟವಾದ ಬಂಧ ಪಂಪನಲ್ಲಿನ ಎರಡೂ ಕಾವ್ಯದಲ್ಲಿ ಸಿಕ್ಕುತ್ತದೆ.

ಒಂದೇ ಚಿತ್ರ, ಒಂದೇ ಸಂದರ್ಭ ಮತ್ತು ಎರಡು ಬೇರೆ ಬೇರೆ ಕಾವ್ಯಗಳು. ಈ ಕಾವ್ಯಗಳನ್ನು ವಿದ್ವಾಂಸರು ಆಗಮಿಕ ಮತ್ತು ಲೌಕಿನ ಎಂದು ವಿಭಾಗ ಮಾಡಿದ್ದರೂ ಅಲ್ಲಿಯದು ಇಲ್ಲಿ, ಇಲ್ಲಿಯದು ಅಲ್ಲಿ ಮಧ್ಯೆ ಬಂದು ಬಿಡುತ್ತಲೇ ಈ ವಿಭಾಗ ಕ್ರಮದ ಗೆರೆಯನ್ನು ಅಳಿಸಿ ಎರಡೂ ಲೌಕಿಕದಲ್ಲಿಯೇ ಪ್ರಾರಂಭವಾಗಿ ಆಗಮಿಕದ ಕಡೆಗೆ ಚಲನೆ ಕೊಡುವ ಕಾವ್ಯವಾಗಿ ನಿಂತುಬಿಡತ್ತದೆ. ಧರ್ಮಂ ಪ್ರಧಾನಂ ಅರ್ಥಂ ಧರ್ಮಾಂಗ್ರಪಫಣಂ ಅದರ್ಕೆ ರಸಮದು ಕಾಮಂ ಅನ್ನುವ ಅಂಶ ಈ ಎರಡನ್ನೂ ಬೆಸೆವ ಕಾರ್ಯ ಮಾಡುತ್ತದೆ.

ಇದೊಂದು ವಿಶೇಷವಾದ ತೌಲನಿಕ ಅಧ್ಯಯನ ಅನಿಸುವುದು ಇಲ್ಲಿಯವರೆವಿಗೂ ಬೇರೆ ಸಂಸ್ಕೃತಿ, ಬೇರೆ ಕಾಲ, ಬೇರೆ ವ್ಯಕ್ತಿಗಳು ರಚಿಸಿದ ಕೃತಿಯನ್ನು ಮತ್ತೊಂದು ಕಾಲದ, ಸಂಸ್ಕೃತಿಯ, ವ್ಯಕ್ತಿಯು ರಚನೆ ಮಾಡಿದ ರಚನೆಗಳನ್ನು ನೋಡಿಯಾಗಿದೆ. ಉದಾಹರಣೆಗೆ ಭಾರತೀಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತವನ್ನು ಪಾಶ್ಚಾತ್ಯರ ಇಲಿಯಡ್ ಮತ್ತು ಒಡೆಸ್ಸಿಗೆ ಹೋಲಿಸಿ ನೋಡಿಯಾಗಿದೆ. ಅದರಂತೆ ಭಾರತೀಯರಲ್ಲಿ ವ್ಯಾಸ ಮತ್ತು ಪಂಪರ ಕಾವ್ಯ, ಕನ್ನಡದ ಅಸ್ಮಿತೆಯಲ್ಲಿ ಪಂಪ ಮತ್ತು ರನ್ನ, ಕುಮಾರವ್ಯಾಸರಂತಹಾ ಒಂದೇ ವಸ್ತುವನ್ನು ಆಯ್ಕೆ ಮಾಡಿ ರಚನೆ ಮಾಡಿರುವ ಕಾವ್ಯಗಳನ್ನು ನೋಡಿಯಾಗಿದೆ. ಆದರೆ ಇದು ಒಬ್ಬನೇ ಕವಿಯಲ್ಲಿನ ಎರಡು ಕಾವ್ಯಗಳಲ್ಲಿಯೂ ಬರುವ ಒಂದೇ ವಸ್ತು ಸಮಾನತೆಯ ಭಾಗವನ್ನಾಧರಿಸಿದ ಅಧ್ಯಯನ. ಒಂದೇ ವಿಷಯವನ್ನು ಎರಡು ಬೇರೆ ಬೇರೆ ಕಾಳಜಿಗಳನ್ನು ಕೇಂದ್ರವಾಗಿಟ್ಟುಕೊಂಡು ರಚನೆಗೆ ಸಹಾಯ ಮಾಡಿರುವ ಕವಿಯ ಒಳಗಿನ ಮೋಟಿಫ಼್ (ಆಶಯ) ನ ಅಧ್ಯಯನ.

ಕಾವ್ಯ ಪ್ರಭೇದದಲ್ಲಿ ಇದು ಒಂದೇ ರಾಚನಿಕ ವಿನ್ಯಾಸ ಮತ್ತು ವಸ್ತುವನ್ನು ಉಳ್ಳದ್ದಾಗಿದೆ. ಆದರೆ ಎರಡೂ ಕಾವ್ಯಗಳಲ್ಲಿ ಇದು ಹೊಮ್ಮಿಸುವ ರಸ ಮತ್ತು ಅದರಿಂದ ಕವಿಯು ಹೊರಹೊಮ್ಮಿಸುವ ಮೋಟಿಫ್ ನ ಕಡೆಗಿನ ಚಲನೆಯನ್ನು ಬಯಸುವ ಭಾಗವಾಗಿದೆ. ಮೊದಲೇ ಹೇಳುವುದಾದರೆ ಇದೊಂದು ಶೃಂಗಾರದಿಂದ ಸಾವಿನ ಕಡೆಗೆ ನಡೆವ ಅಕಾಲಿಕ ಅನಪೇಕ್ಷಿತ ಚಲನೆ. ಇದರಲ್ಲಿ ಕಾರ್ಯ ಸಾವಾದರೆ ಕಾರಣ ಆ ಜೋಡಿಗಳಂತೂ ಅಲ್ಲ ಅನ್ನುವುದು ವಿಶೇಷ.

ಪಂಪನ ಎರಡೂ ಕಾವ್ಯಗಳ ರಚನೆ ಸರದಿ ಮತ್ತು ಅದರ ರಚನೆಯ ಕಾಲದ ಬಗೆಗೆ ನಮ್ಮ ವಿದ್ವಾಂಸರಲ್ಲಿ ಬಹುವಿಷಯಗಳು ಚರ್ಚಿತವಾಗಿದೆ. ಡಾ. ಟಿ ವಿ ವೆಂಕಟಾಚಲಶಾಸ್ತ್ರಿಗಳು ಎ ವೆಂಕಟಸುಬ್ಬಯ್ಯನವರು ಮತ್ತು ಎಂ ಗೋವಿಂದ ಪೈಗಳು ಹೇಳಿರುವುದನ್ನು ಒಪ್ಪಿ. ಆಧುನಿಕ ಜ್ಯೋತಿರ್ಗಣಿತದಂತೆ ಕೃತಿಯಲ್ಲಿ ಉಕ್ತವಾಗಿರುವ ಶಕ ಸಂವತ್ಸರಗಳು ಕ್ರಿ ಶ 942 ಅಕ್ಟೋಬರ್ ಹದಿನಾರನೆಯ ತಾರೀಕು ಭಾನುವಾರಕ್ಕೆ ಆದಿಪುರಾಣ ಕಾವ್ಯದ ರಚನೆಯು ಮೂರು ತಿಂಗಳ ಅಲ್ಪಾವಧಿಯಲ್ಲಿಯೂ ಆನಂತರ ವಿಕ್ರಮಾರ್ಜುನ ವಿಜಯವು ಶಾಸನದ ಲಿಖಿತ ತೇದಿಯಿಂದೊಳಗೆ ಅಂದರೆ ಕ್ರಿ ಶ 942/943 ರಲ್ಲಿ ಆರು ತಿಂಗಳ ಅಲ್ಪಾವಧಿಯಲ್ಲಿ ಅದನ್ನೂ ಪೂರ್ಣಗೊಳಿಸಿರಬೇಕೆಂದು ಹೇಳಿ ಅದಕ್ಕೆ ಕರೀಂ ನಗರದ ಮ್ಯೂಸಿಯಂ ಶಾಸನದಲ್ಲಿ ಪಂಪ ಭಾರತದ ಐದು ಪದ್ಯಗಳನ್ನು ಸಾಕ್ಷಿಯಾಗಿ ಕೊಟ್ಟು ಪಂಪ ಭಾರತದ ರಚನೆಯು ಶಾಸನ ಲಿಖಿತ ತೇದಿಯೊಂದಿಗೆ ಮುಗಿದಿರುವುದಂತೂ ನಿಶ್ಚಿಯ ಎಂದಿರುತ್ತಾರೆ.

ಆಗ ಅವನಿಗೆ ನಲ್ವತ್ತು ವರ್ಷ ವಯಸ್ಸಾಗಿತ್ತು. ( ನೋಡಿ – ಪಂಪ ಸಂಪುಟ – ಪ್ರಸ್ತಾವನೆ -ಸಂಪಾದನೆ ಡಾ. ಟಿ ವಿ ವೆಂಕಟಾಚಲಶಾಸ್ತ್ರಿ – ಹಂಪಿ ವಿ ವಿ ) ಇದಲ್ಲದೆ “ಸಾಪೇಕ್ಷ” ಅನ್ನುವ ಸೀತಾರಾಮ ಜಹಗೀರ್ ದಾರ್ ಅನ್ನುವವರ ಪುಸ್ತಕದಲ್ಲಿ ಮತ್ತೊಂದು ಚರ್ಚೆಯೂ ಇದ್ದು, ಅದು ತನ್ನ ವಿಶಿಷ್ಟ ರಚನೆಯಿಂದ ಗಮನ ಸೆಳೆಯುತ್ತದೆ. ಅದರಲ್ಲಿ ಕಾಲಗಣನೆಯು ಇದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಕ್ರಿ ಶ 941 ರ ನವೆಂವರ್ ಏಳರಂದು ಆದಿಪುರಾಣವೂ, ಕ್ರಿ ಶ 942 ರ ಮಾರ್ಚಿ ತಿಂಗಳಲ್ಲಿ ವಿಕ್ರಮಾರ್ಜುನ ವಿಜಯವೂ ರಚನೆಯಾಯಿತು. ಅವನು ಹುಟ್ಟಿದ ಕಾಲ ಕ್ರಿ ಶ 902 ಎಂದಿದೆ. ( ನೋಡಿ – ಸಾಪೇಕ್ಷ – ಸೀತಾರಾಮ ಜಹಗೀರ್ ದಾರ್) ಇದರಲ್ಲಿ ಅವನ ಕಾಲದ ಬಗೆಗೆ ಒಮ್ಮತದ ಅಭಿಪ್ರಾಯವಿರುವುದಂತು ಎಷ್ಟು ನಿಚ್ಚಳವಾಗಿದೆಯೋ ಅಷ್ಟೇ ನಿಚ್ಚಳವಾಗಿ ಅವನಿಗೆ ಎರಡೂ ಕಾವ್ಯ ಮುಗಿಸಿದಾಗ ನಲವತ್ತು ವರ್ಷ ಅಗಿತ್ತೆನ್ನುವುದೂ ಮುಖ್ಯ ಅಂಶವಾಗುತ್ತದೆ.

ಪಂಪ ಒಂದು ಕಾವ್ಯದ ರಚನೆಯಿಂದ ಮತ್ತೊಂದರ ರಚನೆಗೆ ಮುಂದಾಗುವಾಗ ಸಮಯದ ಅಂತರ ಇದ್ದೇ ಇದೆ. ಇದು ಅವನ ಭಾಷೆ, ಭಾವ, ಬಂಧದಲ್ಲಿ ತಿಳಿಯದೇ ಹೋದರೂ ವಸ್ತುವಿನ ಆಯ್ಕೆ ಮತ್ತು ಅದರ ವಿರ್ವಹಣೆಯಲ್ಲಿ ತಿಳಿಯುತ್ತದೆ. ಸಂಕೀರ್ಣ ಭಾವದಲ್ಲಿ ಕಾವ್ಯ ರಚನೆಗೆ ಮುಂದಾದರೂ ಭವದಲ್ಲಿನ ಘಟನೆಗಳು ಅವನಲ್ಲಿ ತೀವ್ರವಾದ ಪ್ರಭಾವ ಬೀರಿದೆ. ಅದಕ್ಕೆ ಸಾಕ್ಷಿಗಳು ಅವನ ಕೃತಿಯಲ್ಲಿಯೇ ಸಾಕ್ಷಿಗಳು ಸಿಕ್ಕುತ್ತದೆ. ಈ ಪದ್ಯದಲ್ಲಿನ ಭಾಷೆ, ವಸ್ತು, ಭಾವ, ಸ್ವಲ್ಪ ಮಾರ್ಪಾಟಿನೊಂದಿಗೆ ಎರಡೂ ಕಾವ್ಯಗಳಲ್ಲಿ ಬರುತ್ತದೆ. ಎರಡೂ ಪದ್ಯಗಳ ಕೊನೆಯಲ್ಲಿನ ಉದ್ಘಾರ ಒಂದೇ ಆಗಿದೆ. ತಾ ಹೇಳಬೇಕಾದುದನ್ನು ಎರಡೂ ಕಾವ್ಯದಲ್ಲಿ ಒಂದೇ ರೀತಿಯಲ್ಲಿಯೂ ಹೇಳಿದ್ದಾನೆ.

ಆದಿಪುರಾಣದಲ್ಲಿ ಈ ಪದ್ಯ ಮೊದಲು ಬಂದಿರುವ ಸಂದರ್ಭವೇ ಬಹಳ ಕುತೂಹಲಕಾರಿಯಾಗಿದೆ. ಆದಿಪುರಾಣದ ಭವಾವಳಿಯಲ್ಲಿ ಮೂರನೆಯದು ಶ್ರೀಮತಿ ಮತ್ತು ವಜ್ರಜಂಘರ ಸಂದರ್ಭವದು. ಮೊದಲೊಳ್ ನೀಳ್ದು ಎನ್ನುವ ಪದ್ಯ ಭಾಗದಲ್ಲಿ ಅವರ ಸಾವನ್ನು ಚಿತ್ರಿಸಿ ‘ಕೊಂದುದು’ ಎಂದು ಸ್ಪಷ್ಟವಾಗಿ ಹೊಗೆ, ಕಿಟಕಿ ತೆರೆಯದ್ದು, ಅವರು ಒಬ್ಬರನ್ನೊಬ್ಬರು ಅಪ್ಪಿ ಸತ್ತಿದ್ದು ಹೇಳುತ್ತಾನೆ.

ಇಲ್ಲಿ ಕೊಂದ ನಂತರದ ವರ್ಣನೆ ಮತ್ತೆ ಪ್ರಾರಂಭ ಆಗುವ ಭಾಗವಿದು. ಎಂದಿನಂತೆ ತಮ್ಮ ಶಯ್ಯಾಗೃಹದಲ್ಲಿ ಇಬ್ಬರೂ ದೇಹ ಮನಸ್ಸುಗಳು ಕೂಡಿ ಒಂದಾಗಿರುವಾಗ, ಕೊಠಡಿಯ ಘಮಲಿಗಾಗಿ ಹಾಕಿದ್ದ ಧೂಪದ ಗಾಳಿ ಹೋಗುವ ಕಿಟಕಿಯನ್ನು ತೆರೆಯದೆ ಇದ್ದುದರಿಂದ ಸಮಸ್ಯೆ ಪ್ರಾರಂಭ ಆಗುತ್ತದೆ. ಕೆಲಸದವರೂ ಆ ಕಿಟಕಿಯನ್ನು ತೆರೆಯಲು ಮರೆತು, ಕೊನೆಗೆ ತಾವು ತೆರೆಯದೆ ಮಲಗಿದ ಕಾರಣ ಇಬ್ಬರೂ ಭೋಗದೊಂದಿಗೇ ಸಾವು ಹೊಗೆಯ ರೂಪದಲ್ಲಿ ಇಬ್ಬರನ್ನೂ ಕೊಲ್ಲುತ್ತದೆ.

ಕಾವ್ಯಗಳನ್ನು ವಿದ್ವಾಂಸರು ಆಗಮಿಕ ಮತ್ತು ಲೌಕಿನ ಎಂದು ವಿಭಾಗ ಮಾಡಿದ್ದರೂ ಅಲ್ಲಿಯದು ಇಲ್ಲಿ, ಇಲ್ಲಿಯದು ಅಲ್ಲಿ ಮಧ್ಯೆ ಬಂದು ಬಿಡುತ್ತಲೇ ಈ ವಿಭಾಗ ಕ್ರಮದ ಗೆರೆಯನ್ನು ಅಳಿಸಿ ಎರಡೂ ಲೌಕಿಕದಲ್ಲಿಯೇ ಪ್ರಾರಂಭವಾಗಿ ಆಗಮಿಕದ ಕಡೆಗೆ ಚಲನೆ ಕೊಡುವ ಕಾವ್ಯವಾಗಿ ನಿಂತುಬಿಡತ್ತದೆ. 

ವಿಕ್ರಮಾರ್ಜುನ ವಿಜಯದಲ್ಲಿ ಅರ್ಜುನ ಅಗ್ನಿಗೆ ಆಹುತಿಯಾಗಿ ಖಾಂಡವವನವನ್ನು ಕೊಡುವಾಗ ಅಲ್ಲಿನ ಎಲ್ಲಾ ಪಶು, ಪಕ್ಷಿ, ಮರ, ಗಿಡಗಳೆಲ್ಲಾ ಸುಟ್ಟು ಕರಕಲಾಗುತ್ತದೆ. ಇದೊಂದು ಬಹುದೊಡ್ಡ ದಾಳಿ ಅನಿಸಿಬಿಡುತ್ತದೆ. ಮುಂದೆ ನಿಂತು ಮಾಡಿಸುವುದು ಕೃಷ್ಣ, ಮಾಡುವುದು ಅರ್ಜುನ. ಇಲ್ಲಿನ ಪರಿಸರದ ವಿನಾಶಕ್ಕೆ ಅತಿಯಾಸೆಯಿಂದ ನಡೆದ ಘಟನೆ ಕಾರಣ. ಆ ಖಾಂಡವ ವನದಲ್ಲಿ ಸಿಕ್ಕಿಕೊಂಡ ಒಂದು ಜೋಡಿ ಆ ಬೆಂಕಿಯ ಉರಿ ತಾಳಲಾರದೆ ನಾಶವಾದ ಚಿತ್ರಣ ಇದೆ. ಇಲ್ಲೊಂದು ರೌದ್ರ ಮತ್ತು ಭಯಾನಕ ಚಿತ್ರವಿದೆ. ವೀರತ್ವವೇ ಪೌರುಷವೇ ಪ್ರಮುಖವೆಂದು ತಿಳಿದಾಗ ಉಳಿದ ಸಾಮಾನ್ಯರ ಬದುಕು ಗಣನೆಗೆ ಬರುವುದಿಲ್ಲ. ಹಾಗೆ ವೀರತ್ವದ ಪರಾಕಾಷ್ಟೆಯಲ್ಲಿ ನಿಂತಾಗ ನಡೆವ ಸಾವಿನ ಸರಮಾಲೆಯ ಚಿತ್ರಣದ ಭಾಗವಿದೆ.

ಇದಾದ ನಂತರ ಅರ್ಜುನ ಸಾವಿಗೂ ಈ ಖಾಂಡವದಹನದಿಂದ ಒಂದು ಅಸ್ತ್ರ ಹುಟ್ಟುತ್ತದೆ. ಇದೊಂದು ರೀತಿಯಲ್ಲಿ ಮರಿಗೆ ಮರಿ ಇಕ್ಕುವ ಸಂದರ್ಭ. ಇದೊಂದು ಆಕ್ರಮಣದ ಸಂದರ್ಭದ ಚಿತ್ರ ಕೊಡುವಾಗ ಬಹಳ ಆರ್ದ್ರತೆಯನ್ನೊಮ್ಮೆ ಗಮನಿಸಿ. ಈ ಪದ್ಯದ ನಂತರದ ಪದವೇ “ಕೋಳುಮಂ” ಎಂದು ವಚನ ಪ್ರಾರಂಭ ಆಗುತ್ತದೆ.

ಆ ಕಂದ ಪದ್ಯಗಳು ಹೀಗಿದೆ

ಆದಿಪುರಾಣ

ಬಿಡದೆ ಪೊಗೆ ಸುತ್ತೆ ತೋಳಂ
ಸಡಲಿಸದಾ ಪ್ರಾಣವಲ್ಲಭರ್ ಪ್ರಾಣಮನಂ
ದೊಡಗಳೆದರೋಪರೋಪರೊ
ಳೊಡಸಾಯಲ್ಪಡೆದರಿನ್ನವೇಂ ಸೈಪೊಳವೆ ( ೫.೨೪ )

ಅರ್ಥ : ಬಿಡದೆ ಹೊಗೆಯು ಸುತ್ತಿಕೊಂಡಿತು. ಅದರಿಂದ ತೋಳುಗಳನ್ನು ಸಡಲಿಸದೆಯೆ ಆ ಪ್ರಾಣವಲ್ಲಭರು ಜೊತೆ ಜೊತೆಯಲ್ಲಿಯೇ ಪ್ರಾಣಗಳನ್ನು ಕಳೆದುಕೊಂಡರು. ಹೀಗೆ ಕಾಂತೆಯೂ ಕಾಂತನೂ ಜೊತೆಯಲ್ಲಿ ಸಾಯಲು ಅಳವಿಲ್ಲದ ಅದೆಷ್ಟು ಪುಣ್ಯವನ್ನು ಮಾಡಿದ್ದರೋ!

ವಿಕ್ರಮಾರ್ಜುನ ವಿಜಯ

ಒಡನಳುರೆ ಕಿರ್ಚು ತೋಳಂ
ಸಡಲಿಸದಾ ಪ್ರಾಣವಲ್ಲಭರ್ ಪ್ರಾಣಮನಂ
ದೊಡಗೆಳೆದರೋಪರೋಪರೊ
ಳಡಸಾಯಲ್ ಪಡೆದರಿನ್ನವುಂ ಸಯ್ಪೊಳವೆ ( ೫.೯೩ )

ಅರ್ಥ : ಉರಿಯು ತಮ್ಮನ್ನು ಒಟ್ಟಿಗೆ ಸುಡಲು ತಮ್ಮ ತೋಳುಗಳನ್ನು ಸಡಲಿಸದೆ ಆ ಪ್ರಿಯ ಪ್ರೇಯಸಿಯರು ಜೊತೆಯಲ್ಲಿಯೇ ಪ್ರಾಣವನ್ನು ಕಳೆದರು. ಪ್ರಿಯರು ಪ್ರಿಯರೊಡನೆ ಸಾಯುವ ಅದೃಷ್ಟವನ್ನು ಪಡೆದರು. ಇದಕ್ಕಿಂತ ಬೇರೆ ಅದೃಷ್ಟವೂ ಪುಣ್ಯವೂ ಬೇರೆ ಇದೆಯೇ?

ಇದುವರೆವಿಗೂ ಪಂಪನ ಕೃತಿಗಳ ಸಂಪಾದನೆಗಳಲ್ಲೂ ಈ ಪದ್ಯಗಳು ಇದೆ. ಇದಕ್ಕೆ ಎಲ್ಲಿಯೂ ಯಾವ ಪಾಠಾಂತರವನ್ನೂ ಯಾವ ಸಂಪಾದಕರೂ ತೋರಿಸಿಲ್ಲ. ಬೆಳ್ಳಾವೆ ವೆಂಕಟನಾರಾಯಣಪ್ಪನವರ ಮೊದಲ ಸಂಪಾದನೆಯ ಪಂಪ ಭಾರತಂ ಎಂಬ ವಿಕ್ರಮಾರ್ಜುನ ವಿಜಯಂ ನಲ್ಲಿ ಸಣ್ಣ ಬದಲಾವಣೆಗೆ ಮೇಲೆ ಸಂಖ್ಯೆಯಲ್ಲಿ ಕೊಟ್ಟಿದ್ದರೂ ಅದು ಪದ್ಯದ ಬಂಧ, ಭಾವ, ಭಾಷೆ, ಅರ್ಥವನ್ನೇನೂ ಬದಲಾವಣೆ ಮಾಡಲಾರದು (ಪಂಪ ಭಾರತಂ ಎಂಬ ವಿಕ್ರಮಾರ್ಜುನ ವಿಜಯಂ ಸಂಪಾದನೆ ಮಾಡಿರುವುದು ಬೆಳ್ಳಾವೆ ಅವರು, ಆದರೆ ಪುಸ್ತಕದ ಮೊದಲ ಪುಟದಲ್ಲಿ ಸಂಪಾದಕರ ಹೆಸರಿನ ಬದಲಿಯಾಗಿ ಕುವೆಂಪು ಹೆಸರನ್ನು ಪ್ರಧಾನ ಸಂಪಾದಕರು ಎಂದು ಅಚ್ಚು ಮಾಡಲಾಗಿದೆ, ಅಲ್ಲಿ ಬಹುಮುಖ್ಯವಾದ ಸಂಪಾದನಾಕಾರರ ಹೆಸರೇ ಇಲ್ಲ ಎಂಬ ವಿಷಯವನ್ನು ಪ್ರೊ. ಜೆ ಹೆಚ್ ನಾಯಕರು ತಮ್ಮ ಕೃತಿಯಾದ ‘ಮತ್ತೆ ಮತ್ತೆ ಪಂಪ’ದಲ್ಲಿಯೂ ಪ್ರಸ್ತಾಪ ಮಾಡಿದ್ದಾರೆ) ಪಂಪ ಸಂಪುಟ ಸಂಪಾದನೆ ಪ್ರೊ. ಟಿ ವಿ ವೆಂಕಟಾಚಲಶಾಸ್ತ್ರಿ ಮತ್ತು ಆದಿಪುರಾಣ ದೀಪಿಕೆ ಸಂಪಾದನೆ ತ. ಸು. ಶಾಮರಾಯ ಮತ್ತು ಪ. ನಾಗರಾಜಯ್ಯರ ಕೃತಿಗಳಲ್ಲಿಯೂ ಯಾವುದೇ ಪಾಠಾಂತರಗಳು ಇದಕ್ಕಿಲ್ಲ. ಇತ್ತೀಚೆಗೆ ಬಿಡುಗಡೆಯಾದ ಪಂಪ ಭಾರತಂ ಪ್ರೊ. ಶಿವರಾಮಯ್ಯನವರ ಸಂಪಾದನೆಯಲ್ಲೂ ಯಾವ ಪಾಠಾಂತರವೂ ಇಲ್ಲದೆ ಬಂದಿದೆ. ಈ ಕಾರಣದಿಂದ ಪದ್ಯವು ಎಲ್ಲಾ ಪಾಠಾಂತರಗಳಲ್ಲೂ ಸಮಾನವಾಗಿ ಬರುವುದು ತಿಳಿಯುತ್ತದೆ.

ಈ ಪದ್ಯಗಳು ಸಂಭೋಗ ಶೃಂಗಾದರೊಂದಿಗೇ ನಡೆಯುವ ದುರಂತವನ್ನು ತಿಳಿಸುತ್ತಲೇ ಎರಡೂ ಕಾವ್ಯಗಳಲ್ಲಿ ಒಂದೇ ಪದ್ಯ ಬಳಸಿ ತನಗೇ ಇದು ಮೆಚ್ಚಿಗೆಯಾದದ್ದೆಂದು ತಿಳಿಸಿದ್ದಾನೆ. ಎರಡು ಕಾವ್ಯಗಳಲ್ಲಿನ ಸಂದರ್ಭ ಬೇರೆಯಾರದೂ ಅದರಿಂದ ಉದಿಸುವ ಭಾವ ಒಂದೇ. ಅವನ ಮೊದಲ ಕಾವ್ಯವಾದ ಆದಿಪುರಾಣದಲ್ಲಿ ಶ್ರೀಮತಿ ಮತ್ತು ವಜ್ರಜಂಘರು ಶೃಂಗಾರದಲ್ಲಿ ತೊಡಗಿದ್ದಾಗ ಹೊಗೆಯು ಹೊರಹೋಗುವ ಕಿಟಕಿ ತೆರೆಯಲು ಮರೆತು ‘ಧೂಪಧೂಮನಿವಹವು ಕೃಷ್ಣೋರಗ’ವೇ ಆಗಿ ಕೊಂದಾಗಲೂ, ಎರಡನೆಯ ಕಾವ್ಯವಾದ ವಿಕ್ರಮಾರ್ಜುನ ವಿಜಯದಲ್ಲಿ ಕೃಷ್ಣನೊಡನೆ ಅರ್ಜುನನು ಅಗ್ನಿಗೆ ಖಾಂಡವ ವನವನ್ನು ಆಹುತಿಯಾಗಿ ಕೊಡುವಾಗ ಆ ವನದಲ್ಲಿದ್ದ ದಂಪತಿಗಳು ಬೆಂಕಿಯಲ್ಲಿ ಸಿಕ್ಕು ಸಾಯುವಾಗಲೂ ಈ ಪದ್ಯವು ಬಂದಿದೆ. ಎರಡೂ ಕಾವ್ಯಗಳ ರಚನೆಯ ಮಧ್ಯೆ ಮೊದಲೇ ಹೇಳಿದಂತೆ ಕಾಲದ ಅಂತರವು ಇದ್ದೇ ಇದೆ. ಕಾಲ ಬದಲಾದರೂ ಕವಿಯೊಬ್ಬ ತಾ ನೋಡಿಲ್ಲದ, ಅನುಭವಕ್ಕೆ ಬರದ ಯಾವುದನ್ನೂ ಕಾವ್ಯದಲ್ಲಿ ತರಲಾರನು ಅನ್ನುವುದಾದರೆ ಈ ಘಟನೆ ಅವನ ಕಾಲದಲ್ಲಿ ನಡೆದಿದೆ ಅನ್ನಲೇಬೇಕು.

ಶಿಕ್ಷೆಯಾಗೊ ಅಥವಾ ಅಕಸ್ಮಾತ್ ಆಗಿ ಘಟಿಸಿದ್ದು ಇವನು ತಾನಾಗಿಯೇ ನೋಡಿ ಅಥವಾ ತನ್ನ ಹಿರಿಯರಿಂದ ಕೇಳಿದ್ದು ಅವನ ಮೇಲೆ ಅಪಾರವಾಗಿ ಪ್ರಭಾವ ಬೀರಿರುವುದರಿಂದ, ಎರಡೂ ಕಾವ್ಯದಲ್ಲೂ ಅಂತಹಾ ಸಂದರ್ಭಗಳು ಬರುವುದರಿಂದ ಇಲ್ಲಿಗೆ ಆ ಪದ್ಯಗಳು ಬಂದಿವೆ. ವಿಶೇಷ ಅಂದರೆ ಅವನ ಎರಡೂ ಕಾವ್ಯಗಳ ಐದನೆಯ ಆಶ್ವಾಸದಲ್ಲಿಯೇ ಕಾವ್ಯ ಸಂವಿಧಾನದಲ್ಲಿಯೂ ಈ ಘಟನೆಗಳು ಸೇರಿರುವುದಕ್ಕೆ ಯಾವುದೇ ತೊಂದರೆಯುಂಟಾಗದೆ ಸಹಕಾರಿಯಾಗಿರುವುದರಿಂದ ಚಮತ್ಕಾರವೆಂಬಂತೆ ಭಾಗಗಳಲ್ಲಿನ ಭಾವ ಸ್ಪುಟವಾಗಲು ಈ ಘಟನೆಯು ಸಹಕಾರಿಯಾಗಿದೆ.

ಪ್ರೀತಿ, ಪ್ರೇಮ, ಸಂಸಾರವೇ ಬಹುಮುಖ್ಯವೆಂದು ಸಾರಿದ ಕವಿಯು (ಸಂಸಾರಸಾರೋದಯ ಪಂಪನ ಬಿರುದು) ಅದರೊಂದಿಗೇ ಸಾವನ್ನು ಮುಖಾಮುಖಿ ಮಾಡಿಬಿಡುತ್ತಾನೆ. ಜೋಡಿ ಸಾವಿನಲ್ಲೂ ತೆರೆದ “ಇನ್ನುವೇಂ ಸೈಪೊಳವೆ” (ಒಡಗೂಡಿ ಬಾಳಿದ ದಂಪತಿಗಳು ಒಡಗೂಡಿ ಸಾಯುವುದಕ್ಕಿಂತ ಬೇರೆ ಪುಣ್ಯವುಂಟೇ!) ಅನ್ನುವ ಉದ್ಘಾರವೂ ಒಂದೇ!

ಹಾಗಾದರೆ ಎರಡೂ ಕಾವ್ಯಗಳಲ್ಲಿ ಈ ಸಂದರ್ಭವನ್ನು ತಂದು ಪಂಪ ಏನನ್ನು ತಾನೆ ಸಾರಿ ಹೇಳಲು ಪ್ರಯತ್ನ ಪಡುತ್ತಿದ್ದಾನೆ ಅನ್ನುವುದು ಬಹು ಮುಖ್ಯ ವಿಷಯ. ಪಂಪನು ಬದುಕಿದ್ದನೆನ್ನಲಾದ ಒಂಭತ್ತು ಮತ್ತು ಹತ್ತನೇಯ ಶತಮಾನದಲ್ಲಿ ಸತಿಸಹಗಮನ ಮತ್ತು ಅನುಗಮನ ಪದ್ಧತಿಯು ಚಾಲ್ತಿಯಲ್ಲಿತ್ತು. ವೇಶ್ಯಾವಾಟಿಕೆಯಲ್ಲಿ ಹೆಣ್ಣು ಸಿಕ್ಕಿಬಿದ್ದರೆ ಮೂಗು ಮೊಲೆ ಕೊಯ್ಯುವ, ಗಂಡಿ ಸಿಕ್ಕಿ ಬಿದ್ದರೆ ಶಿರಚ್ಛೇಧನ ಮಾಡುವ ಶಿಕ್ಷೆ ಇದ್ದಂತಹಾ ಸಂದರ್ಭದಲ್ಲಿ ಈ ಮಾತುಗಳು ಬಂದಿದೆ. ಎಲ್ಲೋ ಯಾರೊಂದಿಗೋ ಯುದ್ಧಮಾಡುತ್ತಾ ಮರಣ ಹೊಂದಿದ ಗಂಡನ ಸಾವನ್ನು ತಿಳಿದು ಅವನನ್ನು ಅನುಸಿರಿಸಿ ಹೋಗುವುದು ಅನುಗಮನವಾದರೆ, ತನ್ನ ಕಣ್ಣೆದುರು ಸತ್ತ ಗಂಡನ ಚಿತೆಯಲ್ಲಿ ಹಾರಿ ಬದುಕ ಕೊನೆಗಾಣಿಸಿಕೊಂಡು ಸಾಯುವುದು ಸಹಗಮನ. ಈ ಎರಡನ್ನೂ ಮೀರಿದ ಸ್ಥಿತಿ ಭೋಗವಿಲಾಸ ಮತ್ತು ಕಾಡಿನಲ್ಲಿ ಬದುಕುವ ವನವಾಸದಲ್ಲಿಯೂ ಪ್ರೀತಿ, ನಂಬಿಕೆಗೆ ಯಾವ ಕೊರತೆಯೂ ಉಂಟಾಗದೆ ಒಬ್ಬರನ್ನೊಬ್ಬರು ತಬ್ಬಿ ಸಾಯುವುದು ಪಂಪನಿಗೆ ಬಹುಮುಖ್ಯ ಅನಿಸಿದೆ! ಎಷ್ಟಾದರೂ ಸಾರಸಾರೋದಯನಾದ ಪಂಪನಿಗೆ ಸಾವಿನಲ್ಲಿಯೂ ಸಾರವತ್ತತೆ ಕಂಡಿದೆ.

ಇದರ ಕೊನೆಯಲ್ಲಿ ಬರುವ ಕೊನೆಯ ಉದ್ಘಾರವು ದರ್ಶನ ಧ್ವನಿ. ಕಾಲದಲ್ಲಿದ್ದೂ ಕಾಲವನ್ನು ಮೀರಿ ಬದುಕು ಸಾವಿನಲ್ಲಿ ಒಂದಾಗಬೇಕೆನ್ನುವ ಸಹಜ ಹಂಬಲದ ದರ್ಶನವನ್ನು ಇಲ್ಲಿ ತೆರೆದಿಟ್ಟಿದ್ದಾನೆ. ತನ್ನ ಕಾಲದಲ್ಲಿ ನಡೆಯುತ್ತಿದ್ದ ಈ ಸಹಗಮನ ಮತ್ತು ಅನುಗಮನಗಳು ಇವನನ್ನು ಬಹಳವಾಗಿ ಕಾಡಿದ್ದಿರಬಹುದು. ಆ ಕಾಡುವಿಕೆಯನ್ನು ಭವದಲ್ಲಿ ವಿರೋಧಿಸಲಾಗದೆ ಭಾವದಲ್ಲಿ ವಿರೋಧಿಸಿದ್ದಾನೆ. (so long as man can breeth or eye can see/ so long lives this, it gives life to thee – shall I compare thee ಎಂಬ ಒಂದು ಸಾನೆಟ್ಟಿನಲ್ಲಿ ಉದ್ಘಾರ ತೆಗೆಯುವ ಶೇಕ್ಸ್ಪಿಯರನ ಕೊನೆಯ ಸಾಲು ನೆನಪಾಗದೆ ಇರದು) ಕಾಲದಲ್ಲಿಯೇ ನಿಂತು ಅದನ್ನು ಹೇಗೆ ಶಾಶ್ವತಗೊಳಿಸಬೇಕು ಅನ್ನುವುದು ಮಹಾಕವಿಗಳಿಗೆ ಮಾತ್ರ ತಿಳಿದಿರುವ ವಿಷಯ. ಇದನ್ನು ಯಶಸ್ವಿಗೊಳಿಸಿದ ಪದ್ಯಖಂಡಗಳಿವು.

ಈ ಪದ್ಯದ ಬಗೆಗೆ ಕನ್ನಡದ ವಿದ್ವಾಂಸರುಗಳೆಲ್ಲಾ ಮಾತಾಡಿಯೇ ಇದ್ದಾರೆ. ಆಚಾರ್ಯ ಡಿ. ಎಲ್. ನರಸಿಂಹಾಚಾರ್ಯರು ಪಂಪ ಭಾರತ ದೀಪಿಕೆಯಲ್ಲಿ “ಈ ಪದ್ಯ ಪಂಪನಿಗೆ ತುಂಬಾ ಮೆಚ್ಚಿದುದು” ಎಂದೂ, ತ. ಸು. ಶಾಮರಾಯರು ಆದಿಪುರಾಣ ದೀಪಿಕೆಯಲ್ಲಿ “ಈ ಪದ್ಯವಂತೂ ಸಂಪೂರ್ಣವಾಗಿ ಪಂಪನದೇ ಆಗಿದ್ದು, ಅವನ ದರ್ಶನವನ್ನು ಪ್ರಕಟಿಸುತ್ತದೆ. ಆ ದಂಪತಿಯ ಮರಣದಲ್ಲೂ ಕವಿ ಒಂದು ಅಮೃತ ರೇಖೆಯನ್ನು ಗುರುತಿಸಿದ್ದಾನೆ” ಎಂದೂ, ಆಚಾರ್ಯ ತೀ. ನಂ. ಶ್ರೀಕಂಠಯ್ಯನವರು ಪಂಪ ಕೃತಿಯಲ್ಲಿ “ಸಜ್ಜೆ ಮನೆಯ ಪ್ರಸಂಗದ ನಿರೂಪಣೆಯಲ್ಲಿ ಪಂಪನು ಪೂರ್ವಪುರಾಣವನ್ನು ಹೆಜ್ಜೆ ಹೆಜ್ಜೆಗೂ ಅನುಸರಿಸಿದ್ದರೂ, ಈ ಪದ್ಯ ಸಂಪೂರ್ಣವಾಗಿ ಅವನದು. ಇದನ್ನೇ ಸ್ವಲ್ಪ ವ್ಯತ್ಯಾಸದೊಡನೆ ವಿಕ್ರಮಾರ್ಜುನವಿಜಯದಲ್ಲೂ ಸೇರಿಸಿ ಇದರ ಭಾವ ತನಗೆ ಬಲು ಮೆಚ್ಚಿಗೆಯಾದದ್ದೆಂಬುದನ್ನು ಸ್ಪುಟಪಡಿಸಿದ್ದಾನೆ” ಎಂದಿದ್ದಾರೆ.

ಈ ಎಲ್ಲಾ ಅಭಿಪ್ರಾಯಗಳೂ ಅವನ ಮನಸ್ಸನ್ನು ಅರಿಯಲು ಮಾಡಿದ ಪ್ರಯತ್ನವಾಗಿ ಇಂದಿಗೂ ಆ ಭಾಗದಲ್ಲಿನ ಭಾವವು ಉಜ್ವಲವಾಗಿ ಬೆಳಗುತ್ತಿದೆ. ಮನುಷ್ಯನ ಕಣ್ಣು ಎಲ್ಲಿಯವರೆವಿಗೂ ಇಲ್ಲಿನ ಕಾವ್ಯಗಳ ಮೇಲೆ ಹರಿಯುತ್ತದೋ ಅಲ್ಲಿಯವರೆವಿಗೂ ಈ ಸಾವುಗಳು ಭವದ ಸಾರವನ್ನು ಧ್ವನಿಪೂರ್ಣವಾಗಿ ಸಾರುತ್ತಲೇ ಇರುತ್ತದೆ.