Advertisement
ಉಪ್ಪರಿಗೆಯೆಂಬ ಶಾಶ್ವತ ನೆನಪು…: ವಿನಾಯಕ ಅರಳಸುರಳಿ ಅಂಕಣ

ಉಪ್ಪರಿಗೆಯೆಂಬ ಶಾಶ್ವತ ನೆನಪು…: ವಿನಾಯಕ ಅರಳಸುರಳಿ ಅಂಕಣ

ಮಲೆನಾಡು ಎಂದ ಮೇಲೆ ಹಾವುಗಳು ಬರಲೇ ಬೇಕಲ್ಲ? ಕೆಳಗಿನ ಎಲ್ಲ ಕೋಣೆಗಳಲ್ಲೂ ತಪಸ್ಸು ಮಾಡದೆಯೇ ಬಂದ ದೇವರಂತೆ ಧುತ್ತೆಂದು ಪ್ರತ್ಯಕ್ಷವಾಗುತ್ತಿದ್ದ ಹಾವುಗಳು ಈ ಉಪ್ಪರಿಗೆಯ ಕೋಣೆಗೆ ಮಾತ್ರ ಬರುತ್ತಿರಲಿಲ್ಲ. ಹಾಗಾಗಿ ನಾನು ಮಧ್ಯಾಹ್ನ ಮಲಗಲು ಉಪ್ಪರಿಗೆಯ ಕೋಣೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಕಿಟಕಿಯಿಂದ ಬೀಳುವ ಬಿಸಿಲ ಕೋಲುಗಳನ್ನು ನೋಡುತ್ತ, ಅಮ್ಮ ಮಾಡಿದ ಚಕ್ಕುಲಿಯನ್ನೋ, ಚಿಪ್ಸನ್ನೋ ಒಂದು ತಟ್ಟೆಯಲ್ಲಿಟ್ಟುಕೊಂಡು ಬಾಲಮಂಗಳ, ತುಂತುರು ಹಿಡಿದು ಹಾಸಿಗೆಯಲ್ಲಿ ಮಲಗಿ ಓದುವ ಮೋಜಿಗೆ ಯಾವ ಸ್ವರ್ಗಸುಖವೂ ಸಾಟಿಯಿರಲಿಲ್ಲ!
ವಿನಾಯಕ
ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ” ನಿಮ್ಮ ಓದಿಗೆ

ಮಲೆನಾಡಿನ ಯಾವುದೇ ಹಳೆಯ ಮನೆಗಳಲ್ಲಿ ಹೆಚ್ಚಾಗಿ ಉಪ್ಪರಿಗೆಯಿದ್ದೇ ಇರುತ್ತದೆ. ಮನೆಯ ಮಧ್ಯದ ಕೋಣೆಯ ಮೇಲೆ ನಿರ್ಮಿಸಿರುವ ಈ ಮೇಲ್ಮನೆಯಲ್ಲಿ ಆಲೆಮನೆ ಬೆಲ್ಲ, ಕಾಫಿ ಬೀಜವನ್ನು ಪುಡಿ ಮಾಡುವ ಹಳೆಯ ಕಾಲದ ಯಂತ್ರ, ಕಬ್ಬಿಣದ ಕೆಲ ಸಲಕರಣೆಗಳು… ಹೀಗೆ ಕುತೂಹಲ ಕೆರಳಿಸುವ ಅನೇಕ ವಸ್ತುಗಳಿರುತ್ತವೆ. ಮರದ ಕಂಬಿಗಳಿಂದ ಮಾಡಿದ ಇದರ ಕಿಟಕಿಗಳಿಂದ ಇಣುಕಿ ನೋಡಿದರೆ ಹೊರಗಿನ ಗುಡ್ಡ, ಬೆಟ್ಟ, ತೋಟ, ಕಾಡುಗಳ ಸುಂದರ ನೋಟ ಕಣ್ಣಿಗೆ ಲಭ್ಯವಾಗುತ್ತದೆ.

ನನ್ನ ಅಜ್ಜನ ಹಳೆಮನೆಯಲ್ಲೂ ಉಪ್ಪರಿಗೆಯೊಂದಿತ್ತು‌. ಅನೇಕಾನೇಕ ಸಲಕರಣೆಗಳಿಂದ ತುಂಬಿಹೋಗಿ ಅತ್ಯಂತ ಇಕ್ಕಟ್ಟಿನಿಂದ ಕೂಡಿದ್ದ ಅಲ್ಲಿಗೆ ಹತ್ತುವುದು ಮಕ್ಕಳಾದ ನಮಗೆ ಅತ್ಯಂತ ಭಯ ಹಾಗೂ ಕುತೂಹಲದ ಸಂಗತಿಯಾಗಿತ್ತು. ಸಾಲದ್ದಕ್ಕೆ ಆ ಉಪ್ಪರಿಗೆಯ ಗೋಡೆಯಲ್ಲಿದ್ದ ಮರದ ದಪ್ಪ ದಪ್ಪ ತೊಲೆಗಳ ಹಿಂದೆ ನಮ್ಮ ಭಯವನ್ನು ದುಪ್ಪಟ್ಟುಗೊಳಿಸುವಂಥಹಾ ರೋಚಕ ಕಥೆಗಳೂ ಇದ್ದವು. ಅವುಗಳ ಪೈಕಿ ಒಂದು ‘ಹೊತ್ತುಗ’ದ ಕಥೆ.

ನಮಗೆಲ್ಲ ಗೊತ್ತೇ ಇರುವಂತೆ ಮನೆಯ ಜಂತಿ, ಕಂಬ, ತೊಲೆಗಳನ್ನೆಲ್ಲಾ ಕಾಡಿನ ನಡುವಿನ ಯಾವುದೋ ಮರದಿಂದ ಮಾಡಿರುತ್ತಾರೆ. ಹಾಗೆ ಕಂಬ-ತೊಲೆಗಳಾಗುವ ಮೊದಲು ಅವು ಹಕ್ಕಿ, ಪಕ್ಷಿ, ಪ್ರಾಣಿಗಳು ವಾಸವಾಗಿರುವ ವೃಕ್ಷಗಳಾಗಿರುತ್ತವೆ. ಬರೀ ಹಕ್ಕಿ-ಪಕ್ಷಿಗಳಿದ್ದರೆ ತೊಂದರೆಯಿಲ್ಲ. ಬ್ರಹ್ಮರಾಕ್ಷಸನೋ, ಚೌಡಿಯೋ, ಮತ್ತಿನ್ಯಾವ ಪ್ರೇತವೋ ವಾಸವಾಗಿದ್ದರೆ? ಅಷ್ಟೇ ಅಲ್ಲ, ಆಯುಷ್ಯ ಪೂರ್ತಿಯಾಗದೇ, ಆಸೆಗಳು ತೀರದೇ ಅರ್ಧಕ್ಕೆ ಸಾಯುವವರೆಲ್ಲ ಪ್ರೇತಗಳಾಗುತ್ತಾರೆಂಬುದು(!) ನಮಗೆಲ್ಲ ಗೊತ್ತೇ ಇರುವ ಸಂಗತಿ ತಾನೇ? ಅಂತೆಯೇ ಮದುವೆಯ ವಯಸ್ಸಿನಲ್ಲಿ ತೀರಿಕೊಂಡ ಶುಂಟೀಕೊಪ್ಪದ ಮಾಬಲನ ಮಗಳೋ, ಇಲ್ಲಾ ಹೊಳೆಯಲ್ಲಿ ಕಾಲುಜಾರಿ ಮರಣಿಸಿದ ಕೇಗಾರು ವೀರಭದ್ರನೋ ಮತ್ಯಾರೋ ಅಂತರಪಿಶಾಚಿಯಾಗಿ ಆ ಮರದಲ್ಲಿ ನೇತಾಡಿಕೊಂಡಿದ್ದರೂ ಇರುತ್ತಾರೆ! ಅಂತಹಾ ಮರವನ್ನು ಕಡಿದುತಂದು ಕಂಬ ಮಾಡಿ ನಿಲ್ಲಿಸಿದಮೇಲಾದರೂ ಈ ಚೌಡಿ, ಬ್ರಹ್ಮರಾಕ್ಷಸ, ಅಂತರ್ಪಿಶಾಚಿಗಳು ಆ ಕಂಬವನ್ನು ಬಿಟ್ಟು ಹೋಗಿರುವುದಿಲ್ಲ. ಹಗಲಿನಲ್ಲಿ ಶಕ್ತಿಕಳಕೊಂಡಂತೆ ಮಲಗಿರುವ ಅವು ರಾತ್ರೆಯಾಗುತ್ತಿದ್ದಂತೆಯೇ ಜಾಗೃತವಾಗಿ ತಮ್ಮ ಕೆಳಗೆ ತಲೆಯಿಟ್ಟು ಮಲಗುವವರ ಮೇಲೆ ತಮ್ಮ ಚೇಷ್ಟೆಗಳನ್ನು ಪ್ರಯೋಗಿಸಲಾರಂಭಿಸುತ್ತವೆ. ಮಧ್ಯರಾತ್ರೆಯ ಹೊತ್ತಿಗೆ ಗಾಢವಾಗಿ ನಿದ್ರೆಯಲ್ಲಿರುವವರ ಕತ್ತನ್ನು ಹಿಸುಕಿ ಉಸಿರುಗಟ್ಟಿಸುತ್ತವೆ. ಇವನ್ನೇ ಆಡುಭಾಷೆಯಲ್ಲಿ ‘ಹೊತ್ತುಗ’ ಎನ್ನುತ್ತಾರೆ.

ಅಜ್ಜನ ಮನೆಯ ಉಪ್ಪರಿಗೆಯಲ್ಲಿ ಅಂಥದೇ ತೊಲೆಯೊಂದಿತ್ತು. ಅದರ ಕೆಳಗೆ ಮಲಗುವವರಲ್ಲಿ ಹೆಚ್ಚಿನವರಿಗೆ ಯಾವುದಾದರೊಂದು ಕೆಟ್ಟ ಕನಸು ಬೀಳುತ್ತಿತ್ತು. ಅಲ್ಲದೇ ಮಧ್ಯರಾತ್ರೆಯ ಹೊತ್ತಿಗೆ ಯಾರೋ ಕತ್ತು ಹಿಸುಕಿದಂತಾಗಿ ಉಸಿರುಗಟ್ಟುತ್ತಿದ್ದುದೂ ಉಂಟಂತೆ! ಹಾಗೆ ಆ ತೊಲೆಯಡಿ ಮಲಗಿದವರು ನಡುರಾತ್ರೆಯ ಹೊತ್ತಿಗೆ ಇದ್ದಕ್ಕಿದ್ದಂತೆ ಅಲಲಲಲಾ ಹೇ ಎಂದು ವಿಚಿತ್ರವಾಗಿ ಕಿರುಚಿ ಉಳಿದವರೆಲ್ಲರನ್ನೂ ಬೆಚ್ಚಿಬೀಳಿಸುತ್ತಿದ್ದರು. ಇನ್ನು ಕೆಲವರಂತೂ ಕನಸಿನಲ್ಲಿ ತಮ್ಮನ್ನು ಅಟ್ಟಿಸಿಕೊಂಡು ಬರುತ್ತಿರುವ ಪ್ರೇತದಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಹಾಸಿಗೆಯ ತುಂಬಾ ಹೊರಳಾಡುತ್ತಾ ವಿಚಿತ್ರ ಸದ್ದಿನಲ್ಲಿ ಆರ್ತನಾದ ಮಾಡುತ್ತಿದ್ದರು‌. ಇದನ್ನೆಲ್ಲ ನೋಡಿ, ಕೇಳಿದ ಮಕ್ಕಳಾದ ನಾವು ಮನಸ್ಸಿನಲ್ಲೇ ಆ ಹೊತ್ತುಗದ ಭಯಾನಕ ರೂಪವನ್ನು ಕಲ್ಪಿಸಿಕೊಂಡು ಗಡಗಡನೆ ನಡುಗುತ್ತಿದ್ದೆವು.

ಕನಸುಗಳು ಯಾರಿಗೆ ತಾನೇ ಬೀಳುವುದಿಲ್ಲ? ಮಕ್ಕಳಿಂದ ಹಿಡಿದು ಮುದುಕರ ತನಕ ಎಲ್ಲರೂ ಒಂದಿಲ್ಲೊಂದು ಕನಸುಕಂಡು ಹೊರಳಾಡಿಯೇ ಆಡುತ್ತಾರೆ. ಅವರವರ ವಯಸ್ಸಿಗೆ ತಕ್ಕಂತೆ ಕನಸುಗಳು ಬೀಳುತ್ತವೆ. ಇನ್ನು ಭೂತ-ಪ್ರೇತಗಳ ಬಗ್ಗೆ ವಿಶೇಷ ಭಯ-ಭಕ್ತಿಗಳಿರುವ ನನ್ನಂಥವರಿಗಂತೂ ಭಯಾನಕ ಕನಸುಗಳೇ ಹೆಚ್ಚಾಗಿ ಬೀಳುತ್ತವೆ.

  *****

ಮೊದಲೇ ಹೇಳಿದಂತೆ ಉಪ್ಪರಿಗೆಯಲ್ಲಿ ಕಾಫಿ ಬೀಜ ಪುಡಿ ಮಾಡುವ ಯಂತ್ರ, ಹಳೆಯಕಾಲದ ವಿಶೇಷ ಮಾದರಿಯ ಕಡಗೋಲು, ವಿಚಿತ್ರ ವಿನ್ಯಾಸದ ಮರದ ಸಲಕರಣೆಗಳು ಮುಂತಾದ ಕುತೂಹಲಕಾರಿ ವಸ್ತುಗಳಿರುತ್ತಿದ್ದವು. ಜೊತೆಗೆ ತುಂಬಿಸಿಟ್ಟ ಸೀಮೆಣ್ಣೆ, ಪೆಟ್ರೋಲ್‌ಗಳ ದೊಡ್ಡ ಕ್ಯಾನ್‌ಗಳೂ ಅಲ್ಲಿದ್ದವು. ಒಲೆಗೆ ಬೆಂಕಿ ಒಟ್ಟಲಿಕ್ಕೆ ಹಾಗೂ ತೋಟಕ್ಕೆ ನೀರು ಬಿಡುವ ಮೋಟಾರಿಗೆ ಬೇಕಾದ ಇಂಧನವನ್ನು ಅಪ್ಪ ಅಲ್ಲಿ ಶೇಖರಿಸಿಟ್ಟಿದ್ದ. ಹೀಗೆ ಸಾಮಾನು ಸರಂಜಾಮುಗಳಿಂದ ತುಂಬಿದ್ದ ಉಪ್ಪರಿಗೆಗೆ ಒಬ್ಬೊಬ್ಬರೇ ಹತ್ತುವುದು ಮಕ್ಕಳಾದ ನಮಗೆ ನಿಷಿದ್ಧವಾಗಿತ್ತು. ತೀರಾ ಚಿಕ್ಕವರಿದ್ದಾಗ ‘ಅಲ್ಲಿ ರಾಕ್ಷಸ ಗೂಗೆ ಇದೆ’ ಎಂದು ಹೆದರಿಸಿದರೆ ಕೊಂಚ ದೊಡ್ಡವರಾದಮೇಲೆ ‘ಅಲ್ಲಿ ಹಾವು, ಚೇಳು ಎಲ್ಲ ಇರತ್ತೆ’ ಎಂದು ಬೆದರಿಸಿ ಉಪ್ಪರಿಗೆಗೆ ನಮ್ಮ ಪ್ರವೇಶವನ್ನು ನಿಯಂತ್ರಿಸುತ್ತಿದ್ದರು. ಯಾವಾಗಲೋ ಅಪ್ಪನನ್ನು ಹಿಂಬಾಲಿಸಿ ಹೋದಾಗಲಷ್ಟೇ ಅಲ್ಲಿನ ನಿಗೂಢಮಯ ವಸ್ತುಗಳ ನೋಡಬಹುದಾಗಿತ್ತು. ಅಪ್ಪ ದೊಡ್ಡ ಕ್ಯಾನ್‌ನಿಂದ ತನ್ನ ಕೈಲಿರುವ ಚಿಕ್ಕ ಕ್ಯಾನ್‌ಗೆ ಪಂಪರ್ ಕೊಳವೆಯ ಮೂಲಕ ಸೀಮೆಎಣ್ಣೆಯನ್ನು ತುಂಬಿಸಿಕೊಳ್ಳುತ್ತಿದ್ದರೆ ನಾನು ಅಲ್ಲಿನ ರಾಶಿಯಲ್ಲಿ ನನಗೆ ಆಡಲಿಕ್ಕೆ ಯಾವುದಾದರೂ ವಿಚಿತ್ರವಾದ ಸಲಕರಣೆ ದೊರೆಯುತ್ತದೆಯೇ ಎಂದು ಕಣ್ಣಾಡಿಸುತ್ತಿದ್ದೆ. ಅಲ್ಲಿ ಸಿಗುವ ಕಡಗೋಲು, ಕಡುಗತ್ತಿ, ಮರದ ಡಬ್ಬಿ, ಚಕ್ರ ಮುಂತಾದವನ್ನು ಗದೆ, ಖಡ್ಗಗಳೆಂದು ಭಾವಿಸಿ ಎತ್ತಿಕೊಂಡು ಕೆಳಗೆ ತರುತ್ತಿದ್ದೆ. ಒಂದು ಕಾಲಕ್ಕೆ ಉಪಯೋಗಕಾರಿ ವಸ್ತುಗಳಾಗಿ ಈಗ ಅನುಪಯುಕ್ತವಾಗಿ ಮೂಲೆ ಸೇರಿದ್ದ ಅವುಗಳಲ್ಲಿ ಒಂದಿಡೀ ತಲೆಮಾರಿನ ಬೆರಳಗುರುತುಗಳಿದ್ದವು. ಪ್ರಸ್ತುತ ಬಳಕೆಯಲ್ಲಿಲ್ಲದಿದ್ದುರಿಂದಲೋ ಏನೋ, ಅವು ನನಗೆ ವಿಚಿತ್ರವಾಗಿ ಕಾಣುತ್ತಿದ್ದವು.

ನಮ್ಮನೆಯ ಉಪ್ಪರಿಗೆಯಿಂದ ಎದುರಿನ ಗುಡ್ಡ ಹಾಗೂ ಅದರ ಮೇಲಿನ ಕಾಡುಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ಚುಮುಚುಮು ಮುಂಜಾವುಗಳಲ್ಲಿ, ಸಂಜೆಯ ತಂಪಿನಲ್ಲಿ ಅಲ್ಲಿ ನವಿಲುಗಳು, ಕಾಡುಕೋಳಿಗಳು, ಮುಂಗುಸಿಗಳೂ ತಮ್ಮಷ್ಟಕ್ಕೆ ತಾವೇ ಏನೋ ಕೂಗಿಕೊಳ್ಳುತ್ತ ಓಡಾಡುತ್ತಿದ್ದವು. ಕಿಟಕಿಯ ಸರಳಿಗೆ ಮುಖ ಆನಿಸಿ ಕುಳಿತಿರುವ ನನ್ನ ಇರುವಿನ ಅರಿವಿಲ್ಲದ ಅವು ತಮ್ಮ ಏಕಾಂತದಲ್ಲಿ ತಾವು ಮುಳುಗಿದ್ದರೆ ನಾನು ಸುಲಭವಾಗಿ ಕಣ್ಣೆದುರು ಬಾರದ ಕಾರಣಕ್ಕೇ ನಿಗೂಢವೂ, ವಿಶೇಷವೂ ಆಗಿರುವ ಅವುಗಳ ರೂಪ-ಹಾವ-ಭಾವಗಳನ್ನು ನೋಡುತ್ತ ಕೂತುಬಿಡುತ್ತಿದ್ದೆ. ಅದೇ ಗುಡ್ಡದ ಒಂದು ಪಾರ್ಶ್ವ ತೋಟದ ಬೇಸಾಯಕ್ಕೆಂದು ಮಣ್ಣು ತೆಗೆದೂ ತೆಗದೂ ಇಳಿಜಾರಾಗಿ ಪರಿವರ್ತನೆಯಾಗುತ್ತು. ಸಂಜೆಯಾದೊಡನೆ ಸೂರ್ಯನ ಇಳಿಬಿಸಿಲು ಅದರ ಮೇಲೆ ಕೆಂಪಾಗಿ ಬೀಳುತ್ತಿತ್ತು. ಉಪ್ಪರಿಗೆಯ ಕಿಟಕಿಯಿಂದ ನೋಡುವಾಗ ಅದು ಯಾವುದೋ ಕಿನ್ನರ ಲೋಕದ ಬಿಸಿಲಿನಂತೆ ಭಾಸವಾಗುತ್ತಿತ್ತು. ಅದೇ ಇಳಿಜಾರಿಗೆ ಹೋಗಿ ನಿಂತಾಗ ಅಷ್ಟೇನೂ ವಿಶೇಷವಾಗಿ ಕಾಣದ ಆ ಸಂಜೆ ಇಲ್ಲಿ, ಈ ಉಪ್ಪರಿಗೆಯ ಕಿಟಕಿಯಿಂದ ನೋಡಿದಾಗ ಮಾತ್ರ ವಿವರಿಸಲಾಗದ ಸುಂದರ ದೃಶ್ಯವಾಗಿ ಕಾಣುತ್ತಿತ್ತು. ಈಗ ಯೋಚಿಸುವಾಗ ಕೆಲವೊಂದು ಕ್ಷಣಗಳೂ ಹಾಗೆಯೇ ಅಲ್ಲವೇ ಅನಿಸುತ್ತದೆ. ಅವುಗಳನ್ನು ಹಾಯುವಾಗ ನಮಗೆ ವಿಶೇಷ ಎನ್ನಿಸುವುದಿಲ್ಲ. ಅದೇ, ಆ ಘಳಿಗೆ ಮುಗಿದು ಇನ್ನೆಲ್ಲೋ ನಿಂತು ತಿರುಗಿ ನೋಡುವಾಗ ಅದು ಎಂಥ ಸುಂದರ ಕ್ಷಣವಾಗಿತ್ತಲ್ಲವೇ ಅನ್ನಿಸುತ್ತದೆ. ಬಹುಷಃ ಈ ಉಪ್ಪರಿಗೆಯೂ ಹೀಗೆ ಎಲ್ಲವನ್ನೂ ಸುಂದರವಾಗಿಸುವ ವರ್ತಮಾನವಾಗಿತ್ತೋ ಏನೋ?

ಮಲೆನಾಡು ಎಂದ ಮೇಲೆ ಹಾವುಗಳು ಬರಲೇ ಬೇಕಲ್ಲ? ಕೆಳಗಿನ ಎಲ್ಲ ಕೋಣೆಗಳಲ್ಲೂ ತಪಸ್ಸು ಮಾಡದೆಯೇ ಬಂದ ದೇವರಂತೆ ಧುತ್ತೆಂದು ಪ್ರತ್ಯಕ್ಷವಾಗುತ್ತಿದ್ದ ಹಾವುಗಳು ಈ ಉಪ್ಪರಿಗೆಯ ಕೋಣೆಗೆ ಮಾತ್ರ ಬರುತ್ತಿರಲಿಲ್ಲ. ಹಾಗಾಗಿ ನಾನು ಮಧ್ಯಾಹ್ನ ಮಲಗಲು ಉಪ್ಪರಿಗೆಯ ಕೋಣೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಕಿಟಕಿಯಿಂದ ಬೀಳುವ ಬಿಸಿಲ ಕೋಲುಗಳನ್ನು ನೋಡುತ್ತ, ಅಮ್ಮ ಮಾಡಿದ ಚಕ್ಕುಲಿಯನ್ನೋ, ಚಿಪ್ಸನ್ನೋ ಒಂದು ತಟ್ಟೆಯಲ್ಲಿಟ್ಟುಕೊಂಡು ಬಾಲಮಂಗಳ, ತುಂತುರು ಹಿಡಿದು ಹಾಸಿಗೆಯಲ್ಲಿ ಮಲಗಿ ಓದುವ ಮೋಜಿಗೆ ಯಾವ ಸ್ವರ್ಗಸುಖವೂ ಸಾಟಿಯಿರಲಿಲ್ಲ!

ಇಂತಿಪ್ಪ ನನ್ನ ಐಶಾರಾಮಿಗೆ ಭುಸ್ಸೆಂದು ಭುಸುಗುಟ್ಟುತ್ತ ನುಗ್ಗಿದ್ದು ಒಂದು ನಾಗರಹಾವು. ಮಳೆಗಾಲದ ಒಂದು ದಿನ ಉಪ್ಪರಿಗೆಯಲ್ಲಿ ನ್ಯಾಲೆ ಕಟ್ಟಿ ಒಣಗಿಸಿದ್ದ ಬಟ್ಟೆಯನ್ನು ತೆಗೆಯಲು ಹೋದ ಅಮ್ಮನಿಗೆ ಮಾಡು ಹಾಗೂ ಗೋಡೆಗಳ ನಡುವಲ್ಲಿ ಭುಸ್ ಎನ್ನುವ ಸದ್ದು ಕೇಳಿದೆ. ಏನೆಂದು ನೋಡುವಷ್ಟರಲ್ಲಿ ನ್ಯಾಲೆಯ ಮೇಲೆ ನ್ಯಾಲೆಯ ಒಂದು ಭಾಗವೇ ಜೀವ ತಳೆದು ತೆವಳಿ ಬರುತ್ತಿದೆಯೋ ಎಂಬಂತೆ ಹರಿದು ಬಂದಿತ್ತು… ನಾಗರ ಹಾವು. ಹೆದರಿದ ಅಮ್ಮ ಮೆಟ್ಟಿಲಿಳಿದು ಪರಾರಿಯಾದಳು. ಬಳಿಕ ವಿಷಯ ತಿಳಿದು ಬಂದ ಜನ ಹಾವನ್ನು ಅಟ್ಟಿದರಾದರೂ ಈ ಘಟನೆ ಹಾವಿನಿಂದ ಸುರಕ್ಷಿತ ಎಂಬ ಉಪ್ಪರಿಗೆಯ ಹೆಗ್ಗಳಿಕೆಯನ್ನು ಅಳಿಸಿಹಾಕಿತು. ಮಧ್ಯಾಹ್ನಗಳಲ್ಲಿ ಮಲಗುತ್ತಿದ್ದ ನನ್ನ ಮೋಜೂ ಅಲ್ಲಿಗೆ ಮುಗಿಯಿತು.

ಇನ್ನು ಈ ಉಪ್ಪರಿಗೆ ಮನೆಗೆ ಬರುವ ನೆಂಟರಿಗೆ ಕಾಣದಂತೆ ಏನನ್ನಾದರೂ ಮುಚ್ಚಿಡುವ ಜಾಗವೂ ಆಗಿತ್ತು. ಅದೊಂದು ಸಲ ಮನೆಗೆ ಬಹಳ ನೆಂಟರು ಬಂದಿದ್ದರು. ಅವರಲ್ಲಿ ಎಂಥಾ ಆಟಿಕೆಯನ್ನಾದರೂ ಕ್ಷಣಮಾತ್ರದಲ್ಲಿ ಪುಡಿಗಟ್ಟುವ ಕೀಟಲೆ ಮಕ್ಕಳೂ ಇದ್ದರು. ಅದೇ ದಿನ ಪೇಟೆಗೆ ಹೋಗಿದ್ದ ಅಪ್ಪ ನನಗೆಂದು ಟಿಣಿ ಟಿಣಿ ಎಂದು ಸದ್ದು ಮಾಡುತ್ತ ಓಡುವ ಗಂಟೆಯ ಗಾಡಿಯನ್ನು ತಂದಿದ್ದ. ನೆರೆದ ಮಕ್ಕಳ ವಿಧ್ವಂಸಕಾರಿ ಸ್ವಭಾವದ ಅರಿವಿದ್ದ ಅವನು ಅದನ್ನು ಎಲ್ಲರೆದುರೂ ತೆರೆಯದೇ ನೇರ ಉಪ್ಪರಿಗೆಗೆ ಒಯ್ದು ಮುಚ್ಚಿಟ್ಟ. ಆದರೆ ಆ ಗಂಟೆಗಾಡಿಯನ್ನು ನೋಡಿದೊಡನೆ ನನ್ನ ಮುಖದಲ್ಲರಳುವ ಖುಷಿಯನ್ನು ಅವನಿಗೆ ನೋಡಬೇಕಿತ್ತೋ ಏನೋ? ನನ್ನನ್ನು ಮಾತ್ರ ರಹಸ್ಯವಾಗಿ ಕರೆದುಕೊಂಡು ಉಪ್ಪರಿಗೆ ಹತ್ತು ಗಾಡಿಯನ್ನು ನನಗೆ ತೋರಿಸಿದ. ನಾನೋ ಕಳೆಗಿನವರಿಗೆ ಕೇಳೀತೆಂಬ ಭಯವೂ ಇಲ್ಲದೇ ಆ ಗಾಡಿಯನ್ನು ಎರಡು ಸುತ್ತು ತಳ್ಳಿ ಓಡಿಸಿಯೂ ಬಿಟ್ಟೆ! ಹೀಗೆ ಅಪ್ಪ ರಹಸ್ಯವಾಗಿ ನನ್ನನ್ನು ಒಯ್ದು ಗಾಡಿ ಓಡಿಸಿದ್ದು ಕೆಳಗಿದ್ದವರಿಗೆ ಗೊತ್ತಾಯಿತಾದರೂ ಯಾರೂ ಮಾತನಾಡಲಿಲ್ಲ. ಅಮ್ಮನಿಗೂ ಇದರಿಂದ ಬೇಸರವಾಯಿತು.

ಕಾಲಚಕ್ರ ಉರುಳಿತು. ನಮ್ಮನೆ ಲಡ್ಡಾಯಿತು. ಕೊನೆಗೊಂದು ದಿನ ಅದೇ ಉಪ್ಪರಿಗೆಯ ಕೆಳಭಾಗ ಹಿಸಿದು ಬಿತ್ತು. ನಾವೆಲ್ಲ ಪಕ್ಕದಲ್ಲಿದ್ದ ಪಣತಕೊಟ್ಟಿಗೆಯನ್ನೇ ನವೀಕರಿಸಿ ಅಲ್ಲಿಗೆ ವರ್ಗವಾದೆವು. ಬಳಿಕ ಹೊಸಮನೆಯ ಕೆಲಸ ಶುರುವಾಗುವ ಮುನ್ನದ ದಿನ ಆಳುಗಳ ಗುದ್ದಲಿ, ಪಿಕಾಸಿಗಳಿಗೆ ಸಿಕ್ಕು ಇಡೀ ಉಪ್ಪರಿಗೆ ಮನೆಯ ಜೊತೆಗೇ ಕುಸಿದು ಮಣ್ಣಾಯಿತು.

ಈಗ ಗಂಟೆಗಾಡಿಯಿಲ್ಲ. ಉಪ್ಪರಿಗೆಯಿಲ್ಲ. ಅಪ್ಪನೂ ಇಲ್ಲ… ಆದರೂ ಎಂದೋ ಒಮ್ಮೆ ಗೂಗಲ್ ಫೋಟೋಸ್‌ನಲ್ಲಿ ಸುರಕ್ಷಿತವಾಗಿಟ್ಟ ಫೋಟೋ ಅಚಾನಕ್ಕಾಗಿ ಕಂಡಾಗ ಇಪ್ಪರಿಗೆ ನೆನಪಿನಾಳದಿಂದ ಎದ್ದುಬರುತ್ತದೆ. ಮತ್ತದೇ ಕಿಟಕಿ, ಸಂಜೆ ಕಿರಣ, ನವಿಲು, ಗಂಟೆಗಾಡಿ ಹಾಗೂ ಅಪ್ಪನ ಸಮೇತ…

About The Author

ವಿನಾಯಕ ಅರಳಸುರಳಿ

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ' ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ 'ಮರ ಹತ್ತದ ಮೀನು' ಕಥಾ ಸಂಕಲನಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ