ತನಗೆ ಮಂಗಳೂರಿನಲ್ಲಿ ಅಂಗಡಿ ಇದೆ. ನಾಲ್ಕು ಕಾಸೂ ಓಡಾಡುತ್ತಿದೆ. ಸಂಜೀವ ಚೆನ್ನಾಗಿರಲಿ ಎಂದುಕೊಂಡರು. ಆದರೆ ಪೂವಮ್ಮನನ್ನು ಒಪ್ಪಿಸುವುದು ಕಷ್ಟವಾಯಿತು. ಅವಳ ಸಮಾಧಾನಕ್ಕಾಗಿ ಸಂಜೀವನನ್ನು ಜಪ್ಪುವಿಗೆ ಕರೆಸಿ, ಸೀತಾರಾಮನನ್ನು ಕೂಡಿಸಿ ಸಂಧಾನ ಮಾಡಿ ಒಂದೆಕರೆ ತೋಟ ಮತ್ತು ಮನೆ ಉಳಿಸಿಕೊಂಡು ಉಳಿದ ಜಾಗವನ್ನು ಸಂಜೀವನಿಗೆ ಬಿಟ್ಟುಕೊಟ್ಟರು. ತಮ್ಮ ತಂದೆಯ ನೆನಪಿಗಾಗಿ ಅಷ್ಟಾದರೂ ಇರಲಿ ಎಂದು ಸಮಾಧಾನ ಪಟ್ಟುಕೊಂಡರು. ಎಂದಾದರೂ ಜಾತ್ರೆಗೋ, ಕೋಲಕ್ಕೋ ಹೋದಾಗ ತುಂಬೆಹಿತ್ಲಿನ ತಮ್ಮ ಮನೆಯಲ್ಲಿ ಇದ್ದು ಬಿಡುತ್ತಿದ್ದರು. ಸಂಜೀವ ಗಂಡ, ಹೆಂಡತಿ ಬಂದಾಗ ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ಮೊದಲಿನಂತೆಯೇ ಗೌರವ ಕೊಡುತ್ತಿದ್ದ.
ಎಂ. ನಾಗರಾಜ ಶೆಟ್ಟಿ ಕಥಾಸಂಕಲನದ “ಬಣ್ಣದ ಹೊಂಡ”ದ ಕತೆ “ಆ ದೇವ ಈ ದೇವ ಎನಬೇಡ” ನಿಮ್ಮ ಈ ಭಾನುವಾರದ ಓದಿಗೆ
ಕ್ರಿಸ್ತ ಪೂರ್ವ
ಉರಿಯನನ್ನು ಹುರಿದುಂಬಿಸುವವರು ಬಹಳ ಜನ ಇದ್ದರು. ಎಂದಿನಂತೆ ಸೀತಾರಾಮ ಮುಂಚೂಣಿಯಲ್ಲಿದ್ದ. ಪ್ರತಿ ಸಲ ಉರಿಯ ಎಗರಿದಾಗಲೂ ‘ಹೋʼ ಎಂದು ಎಲ್ಲರೂ ಬೊಬ್ಬೆ ಹೊಡೆಯುತ್ತಿದ್ದರು. ಉರಿಯ ಸ್ವಲ್ಪ ಹಿಮ್ಮೆಟ್ಟಿದರೆ ಅವನನ್ನು ಎಳೆದು ಹಾಕಿ ಕಣಕ್ಕೆ ಸಜ್ಜುಗೊಳಿಸಲಾಗುತ್ತಿತ್ತು. ಇಂದು ಉರಿಯನ ಏಟು ಎರಡು ಸಲ ಗುರಿ ತಪ್ಪಿತು. ಅದೃಷ್ಟ ಉರಿಯನ ಅಂದರೆ ದೇಜಪ್ಪ ಭಂಡಾರಿಗಳ ಕಡೆ ಇರಲಿಲ್ಲ. ಇಷ್ಟು ಹೊತ್ತಿಗೆ ಎದುರಾಳಿಯ ಪಕ್ಕೆ ಬಗೆದು ಉರಿಯ ಗತ್ತಿನಿಂದ ‘ಕ್ಕೊ ಕ್ಕೊ ಕ್ಕೋʼ ಎನ್ನಬೇಕಾಗಿತ್ತು. ದೇಜಪ್ಪ ಭಂಡಾರಿಗಳು ಅಧೀರರಾಗುತ್ತಾ ಹೋದಂತೆ ಉರಿಯನ ದಾಳಿ ಕಡಿಮೆಯಾಗುತ್ತಾ ಬಂತು. ಎದುರಾಳಿಯ ಜಿಗಿತ ಪ್ರಬಲವಾಯಿತು; ಯಾವ ಶಕ್ತಿ ಮೈಯಲ್ಲಿ ಬಂತೋ ಗಿಡುಗನಂತೆ ಎಗರಿ ಉರಿಯನ ತೊಡೆ ಸೀಳಿ ಬಿಟ್ಟಿತು. ಹಿಮ್ಮೆಟ್ಟುವವ ಉರಿಯ ಅಲ್ಲ; ಸೇಡು ತೀರಿಸಲೆಂಬಂತೆ ಮುನ್ನುಗ್ಗಿದ, ಎದುರಾಳಿಗೆ ಕುಕ್ಕಿದ. ಅದರ ಪಕ್ಕೆ ತಿವಿದ. ಆ ನೋವಲ್ಲಿ ಎದುರಾಳಿ ಹುಂಜ ಜಿಗಿದು ಉರಿಯನಿಗೆ ಮಾರಣಾಂತಿಕ ಏಟು ಕೊಟ್ಟಿತು. ಉರಿಯನ ಕಣ್ಣು ರೆಪ್ಪೆ ಬಾಡುತ್ತಾ ಬಂತು.
ದೇಜಪ್ಪ ಭಂಡಾರಿಗಳು ಹೆಗಲ ಮೇಲಿನ ಟವೆಲ್ ಕೊಡವಿ ಅಂಕದಿಂದ ಹೊರನಡೆದರು. ಮನೆಯಿಂದ ಉರಿಯನನ್ನು ಎತ್ತಿಕೊಂಡು ಕೋಳಿ ಅಂಕಕ್ಕೆ ಹೊರಟಾಗ ಪೂವಮ್ಮನಿಗೆ ಹೇಳಿದ್ದರು; ರಾತ್ರಿ ಸಾರಿಗೆ ಅರೆದಿಡು. ಅವರ ವಿಶ್ವಾಸ ಆ ಮಟ್ಟದ್ದು. ಉರಿಯ ಈವರೆಗೆ ಸೋತಿಲ್ಲ. ಸೀತಾರಾಮ ಇನ್ನೂ ರೆಕ್ಕೆ ಬಲಿಯದ ಉರಿಯನನ್ನು ಕೊಟ್ಟಾಗ ‘ನೋಡು ನಿನಗೆ ಅರ್ಜುನನಂತಾ ಕೋಳಿ ಕೊಡುತ್ತೇನೆ. ಇದನ್ನು ಚೆನ್ನಾಗಿ ಸಾಕು. ಮುಂದೆ ಎಲ್ಲಾ ಕೋಳಿ ಕಟ್ಟದಲ್ಲೂ ಇದೇ ಗೆಲ್ಲುತ್ತದೆʼ ಎಂದಿದ್ದು ಉರಿಯ ಅಂಕಕ್ಕೆ ಇಳಿದ ಮೇಲೆ ನಿಜವಾಗಿತ್ತು.
ಹಿಂದೆಯೂ ಭಂಡಾರಿ ಹುಂಜಗಳನ್ನು ಸಾಕಿದ್ದರು. ಮನೆಯ ಮಕ್ಕಳಂತೆ ಜೋಪಾನ ಮಾಡಿದ್ದರು. ತುಪ್ಪದಲ್ಲಿ ಹುರಿದ ಗೇರು ಬೀಜ ತಿನ್ನಿಸಿದ್ದರು. ತಾಕತ್ತು ಬರಲು ಏನೇನು ಕೊಡಬೇಕೋ ಅದನ್ನೆಲ್ಲಾ ಕೊಟ್ಟಿದ್ದರು. ಆ ರೀತಿಯಲ್ಲಿ ಉರಿಯನನ್ನು ಸಾಕಲು ಅವರಿಂದ ಸಾಧ್ಯವಾಗಿರಲಿಲ್ಲ. ಉರಿಯ ಮನೆಗೆ ಬರುವ ಸಮಯಕ್ಕೆ ಭಂಡಾರಿಯವರ ಕೈ ಖಾಲಿಯಾಗುತ್ತಾ ಬಂದಿತ್ತು. ಮನೆಯಲ್ಲಿ ಏನಿದೆಯೋ ಅದನ್ನು ತಿನ್ನಿಸಿ ಮುಚ್ಚಟೆ ಮಾಡಿದ್ದರು. ಹೆಂಡತಿ ಪೂವಮ್ಮಳನ್ನು ಮಾತಾಡಿಸದಿರಬಹುದು; ಉರಿಯನ ಮೈದಡವದೆ ಅವರು ನಿದ್ದೆ ಮಾಡಿದವರಲ್ಲ. ಉರಿಯ ಹುಂಜ ಎನ್ನುವುದಕ್ಕಿಂತ ಭಂಡಾರಿಯವರ ಜೊತೆಗಾರ. ಅವರ ಮನಸ್ಸು ಅವನಿಗೆ ತಿಳಿಯುತ್ತಿತ್ತು. ಕಾಳಗದ ಕಣಕ್ಕೆ ಇಳಿಸಿದಾಗ ತನ್ನನ್ನು ತಾನು ಮರೆತು ಹೋರಾಡಿ, ಗೆದ್ದು ವಿಜೃಂಭಿಸುತ್ತಿದ್ದ. ಅವನ ಜಯದಲ್ಲಿ ಭಂಡಾರಿ ಎಲ್ಲವನ್ನೂ ಮರೆಯುತ್ತಿದ್ದರು.

(ಎಂ. ನಾಗರಾಜ ಶೆಟ್ಟಿ)
ಭಂಡಾರಿಯವರ ಒಬ್ಬಳೇ ಮಗಳು ಜಲಜಾಕ್ಷಿಯ ಮದುವೆಯ ಮಾಮಿಸಿಕೆಯ ಊಟ ಗಡದ್ದಾಗಿದ್ದು ಉರಿಯನಿಂದ. ಬೀಗರ ತಮ್ಮಣದ ಹಿಂದಿನ ದಿನ ಬಾಕಿಮಾರು ಗದ್ದೆಯಲ್ಲಿ ಮೇಲಂಟರ ಕೋಳಿ ಅಂಕ ಇತ್ತು. ಅದು ವರ್ಷಕ್ಕೊಮ್ಮೆ ನಡೆಯುವ ಕೋಳಿ ಕಟ್ಟ. ಅದರ ಮಾರನೆಯ ದಿನ ಮೇಲಂಟರ ಮನೆಯ ಭೂತದ ಕೋಲ. ಸುತ್ತ ಮುತ್ತ ಅಂಕದ ಹುಂಜಗಳನ್ನು ಸಾಕಿದವರು, ಭೂತಕ್ಕೆ ಹರಸಿಕೊಂಡವರು ಎಲ್ಲರೂ ಈ ಕೋಳಿ ಅಂಕದಲ್ಲಿ ಭಾಗವಹಿಸುತ್ತಾರೆ. ಕೊನೆಯ ದಿನ ಗೆದ್ದ ಹುಂಜಕ್ಕೆ ಮೇಲಂಟರು ಬಂಗಾರದ ಪದಕ ತೊಡಿಸುತ್ತಾರೆ. ಇದು ಸಾವಿರಾರು ರುಪಾಯಿ ಬಾಜಿ ಕಟ್ಟುವ ಪ್ರತಿಷ್ಠೆಯ ಕೋಳಿ ಅಂಕ.
ಹಿಂದಿನ ವರ್ಷವೇ ಉರಿಯನ್ನು ಮೇಲಂಟರ ಅಂಕಕ್ಕೆ ಇಳಿಸಲು ಕರೆ ಬಂದಿತ್ತು. ಎರಡು ಕಟ್ಟಗಳಿಗೆ ಪ್ರವೇಶ ಮಾಡಿ ಉರಿಯ ಗೆದ್ದಿದ್ದ. ಆದರೆ ಮೇಲಂಟರ ಅಂಕದಲ್ಲಿ ಬಿಗಿಯಾದ ಹುಂಜಗಳು ಭಾಗವಹಿಸುವುದರಿಂದ ಭಂಡಾರಿ ಉರಿಯನನ್ನು ಇಳಿಸಿರಲಿಲ್ಲ. ಈ ಬಾರಿ ಕರೆ ಬಾರದಿದ್ದರೂ ಹೋಗಲೇಬೇಕಿತ್ತು. ಮಗಳ ಮದುವೆಯನ್ನು ಕಷ್ಟ ಪಟ್ಟು ಮಾಡಿದ್ದರು. ಇಪ್ಪತ್ತೈದು ಸಾವಿರಕ್ಕೆ ತುಂಬೆಹಿತ್ಲಿನ ಮನೆ ಮತ್ತು ತೋಟ ಮಾರಾಟ ಆಗಿತ್ತು. ಕಷ್ಟಕ್ಕೆ ಆಗುವ ಗೆಳೆಯ ಸೀತಾರಾಮನಿಂದ ಮೂವತ್ತು ಸಾವಿರ ಕಡ ತಂದಿದ್ದರು. ಪೂವಮ್ಮನ ಒಡವೆ ಮಾರಿ ಹದಿನೈದು ಸಾವಿರ ಸಿಕ್ಕಿತ್ತು. ಮದುವೆ ಮುಗಿಯುವ ಹೊತ್ತಿಗೆ ಎಲ್ಲಾ ಖರ್ಚಾಗಿ ಕೈ ಬರಿದಾಗಿತ್ತು. ಬೀಗರ ತಮ್ಮಣ ಜೋರಾಗಿ ಮಾಡದಿದ್ದರೆ ಮರ್ಯಾದೆಗೆ ಕಡಿಮೆ. ಅದಕ್ಕೆ ಉರಿಯನ ಮೇಲೆ ಬಾರ ಹಾಕಿ ಮೇಲಂಟರ ಕೋಳಿ ಅಂಕಕ್ಕೆ ಬಂದಿದ್ದರು.
ಉರಿಯ ಅಲ್ಲಿ ಪ್ರದರ್ಶಿಸಿದ ಶೌರ್ಯ ಅಸಮಾನ. ಎರಡು ಕೋಳಿಗಳನ್ನು ಸುಲಭದಲ್ಲಿ ಮಣಿಸಿದ್ದ. ಕೊನೆಯ ಕೋಳಿ ಮೇಲಂಟರ ಲಕ್ಷ್ಮಣ. ಮೇಲಂಟರ ಕೈ ತುತ್ತು ತಿಂದು ಬೆಳೆದ ಹುಂಜ. ಹೋರಾಟ ಬಿರುಸಾಗಿ ನಡೆಯಿತು. ಜಯ ಅತ್ತ ಇತ್ತ ವಾಲಿ ಕೊನೆಗೆ ಉರಿಯನಿಗೆ ಒಳಿಯಿತು. ಮೇಲಂಟರು ಬೇಜಾರು ಪಟ್ಟುಕೊಳ್ಳುತ್ತಾ ಉರಿಯನಿಗೆ ಬಂಗಾರದ ಪದಕ ತೊಡಿಸಿದರು.
ಮಾರನೆಯ ದಿನದ ಬೀಗರ ಊಟದಲ್ಲಿ ಉರಿಯನ ಶೌರ್ಯ ಕೊಂಡಾಡದವರಿಲ್ಲ. ಉರಿದ ಗೆದ್ದು ಕೊಟ್ಟ ಒಟ್ಟೆ ಕೋಳಿಗಳನ್ನು ತಿಂದು ಎಲ್ಲರೂ ಬಾಯಿ ಚಪ್ಪರಿಸಿದರು. ಲಕ್ಷ್ಮಣನ ಜೊತೆ ನಡೆದ ಕೊನೆಯ ಕಾಳಗದಲ್ಲಿ ಉರಿಯನ ಕಾಲಿಗೆ ಬಲವಾದ ಏಟು ಬಿದ್ದಿತ್ತು. ತನಗೇನೂ ಆಗಿಲ್ಲ ಎನ್ನುವಂತೆ ಕಿರೀಟದಂತೆ ಎದು ಕಾಣುವ ತನ್ನ ಕೆಂಪು ಜುಟ್ಟನ್ನು ಆಡಿಸುತ್ತಾ ಉರಿಯ ಗತ್ತಿನಿಂದ ಕೂಗುತ್ತಿದ್ದ.
ಜಲಜಾಕ್ಷಿಯ ಮದುವೆಯಾದ ನಂತರ ಭಂಡಾರಿಯವರು ಸಂತೋಷವಾಗಿರಬೇಕಾದರೆ ಕೋಳಿ ಅಂಕ ಇರಬೇಕು. ಎಲ್ಲಿ ಯಾವಾಗ ಕೋಳಿ ಅಂಕ ಇದೆ ಎಂದು ಮರೆಯದಂತೆ ಬರೆದಿಟ್ಟುಕೊಳ್ಳುತ್ತಾರೆ. ಮೊದಲು ಉರಿಯನನ್ನು ಕಣಕ್ಕಿಳಿಸಬೇಕಾದರೆ ಬಹಳ ಯೋಚನೆ ಮಾಡುತ್ತಿದ್ದರು. ಒಂದು ಸ್ಪರ್ಧೆಗೂ ಇನ್ನೊಂದಕ್ಕೂ ಅಂತರವಿರುತ್ತಿತ್ತು. ಈಗ ಹಾಗಲ್ಲ. ಉರಿಯನಿಗೆ ಏಟು ಬಿದ್ದು ಗಾಯವಾದರೆ ಅದು ವಾಸಿಯಾಗುವವರೆಗೆ ಚಡಪಡಿಸುತ್ತಾ ಕಾಯುತ್ತಿದ್ದರು. ಗುಣವಾಗಿದೆ ಎಂದು ಕೋಳಿವೈದ್ಯ ಫಕೀರ ಹೇಳಿದ ಕೂಡಲೇ ಉರಿಯನನ್ನು ಎತ್ತಿಕೊಂಡು ಕಣಕ್ಕೆ ಹೋಗಿ ಬಿಡುತ್ತಿದ್ದರು. ಫಕೀರನ ಹತ್ತಿರ ‘ಗುಣವಾಯಿತಾ? ಬೇಗ ವಾಸಿ ಮಾಡುʼ ಎಂದು ಪದೇ ಪದೇ ಕೇಳಿ ಅವನು ಮ್ಯಾಜಿಕ್ ಮಾಡಿಯಾದರೂ ಬೇಗ ಗುಣ ಮಾಡಲಿ ಎನ್ನುವಂತೆ ಅಂಗಲಾಚುತ್ತಿದ್ದರು. ಉರಿಯ ಬಿಟ್ಟರೆ ಇನ್ನಿಲ್ಲ ಎನ್ನುವಂತಾಗಿತ್ತು. ಊರಲ್ಲಿ ಗದ್ದೆ, ತೋಟ, ಮನೆ ಹೋದ ಮೇಲೆ ಆ ಕಡೆ ಹೋಗುವ ಹಾಗಿರಲಿಲ್ಲ. ಹೋದರೆ ಹೊಟ್ಟೆ ಕಿವಿಚಿದಂತೆ ಸಂಕಟ.
ದೇಜಪ್ಪ ಭಂಡಾರಿಯವರ ತಂದೆ ವೆಂಕಪ್ಪ ಭಂಡಾರಿ ಮೂಲ ಗೇಣಿಗೆ ಸಾಗುವಳಿ ಮಾಡುತ್ತಿದ್ದ ಎಂಟು ಮುಡಿ ಗದ್ದೆಯನ್ನು ಕಷ್ಟ ಪಟ್ಟು ದುಡಿದು ಸ್ವಂತಕ್ಕೆ ಮಾಡಿಕೊಂಡಿದ್ದರು. ತಂದೆ ತೀರಿದ ಮೇಲೆ ದೇಜಪ್ಪ ಭಂಡಾರಿ ಗದ್ದೆಯಲ್ಲಿ ಬೆವರು ಸುರಿಸಿ ಸುಗ್ಗಿ, ಕೊಳಕೆ ಎರಡು ಬೆಳೆ ತೆಗೆಯುತ್ತಿದ್ದರು. ಎರಡು ಮುಡಿ ಗದ್ದೆಯನ್ನು ತೋಟ ಮಾಡಿ ಅಡಿಕೆ, ತೆಂಗು ಹಾಕಿದ್ದರು. ತಂದೆಯ ಕಾಲದ ಮುಳಿ ಹುಲ್ಲಿನ ಮನೆಗೆ ಮಂಗಳೂರು ಹೆಂಚು ಹೊದಿಸಲಾಗಿತ್ತು. ಉಳುಮೆಗೆ ಕೊಟ್ಟಿಗೆಯಲ್ಲಿ ಜೋಡಿ ಕೋಣಗಳೂ ಇದ್ದವು.
ದೇಜಪ್ಪ ಭಂಡಾರಿಯವರ ಹೆಂಡತಿ ಪೂವಮ್ಮ ಮುಲ್ಕಿಗೆ ಸಮೀಪದ ಕುಕ್ಕೆಬೈಲಿನವರು. ಮುಲ್ಕಿಯ ಪೇಟೆಗೆ ಹೋಲಿಸಿದರೆ ದೇಜಪ್ಪ ಭಂಡಾರಿಯ ತುಂಬೆ ಹಿತ್ಲು ಸಣ್ಣ ಹಳ್ಳಿ. ರೈಲು ಇಳಿದು ನಾಲ್ಕು ಮೈಲು ನಡೆದುಕೊಂಡು ಬರಬೇಕು. ಬಸ್ಸು ಹೋಗುವ ದಾರಿ ಕೂಡಾ ಇಲ್ಲ. ಅಗತ್ಯ ಬಿದ್ದರೆ ಕೇಳಿದಷ್ಟು ಕೊಟ್ಟು ಬಾಡಿಗೆ ಕಾರು ಮಾಡಿಕೊಂಡು ಬರಬೇಕು. ಮನೆಗೆ ಬೇಕಾದ ಸಾಮಾನುಗಳಿಗೂ ಅಷ್ಟೇ. ರೈಲ್ವೇ ಸ್ಟೇಷನ್ ರಸ್ತೆಯ ಪೇಟೆ ಬೀದಿಗೆ ಹೋಗಿ ಬೇಕಾದುದನ್ನು ತೆಗೆದುಕೊಂಡು ಬರಬೇಕು. ಇದು ಪೂವಮ್ಮನಿಗೆ ಒಗ್ಗುತ್ತಿರಲಿಲ್ಲ. ಆಕೆ ಮುಲ್ಕಿ ಪೇಟೆ ನೋಡಿದವಳು. ತಮ್ಮ ಊರಿಗೆ ಹೋಗೋಣ, ಇಲ್ಲಿರುವುದು ಬೇಡ ಎಂದು ಒಂದೆರಡು ಸಲ ಪಿಸುಮಾತಿನಲ್ಲಿ ಭಂಡಾರಿಯವರಿಗೆ ಹೇಳಿದ್ದಳು. ಆದರೆ ಗಟ್ಟಿಯಾಗಿ ಹೇಳುವ ಹಾಗಿರಲಿಲ್ಲ. ಸಿಟ್ಟು ಬಂದರೆ ದೇಜಪ್ಪ ಭಂಡಾರಿ ಬೋಳಾರರ ಯಕ್ಷಗಾನದ ಕಂಸನಂತೆ. ತಾನು ಹೇಳಿದ್ದೇ ಆಗಬೇಕೆನ್ನುವ ಛಲದ ಮನುಷ್ಯ.
ಐದು ಮುಕ್ಕಾಲು ಅಡಿ ಎತ್ತರದ, ಸೇಡಿ ಮಣ್ಣಿನ ಬಣ್ಣದ ದೇಜಪ್ಪನ ಮೈ ಆತ ಗದ್ದೆ ಇಳಿದು ಉಳುವಾಗ ಬಿಸಿಲಿಗೆ ಮಿರಮಿರ ಹೊಳೆಯುತ್ತಿತ್ತು. ಸೊಂಟಕ್ಕೊಂದು ಚೌಕಳಿಯ ದಟ್ಟಿ ಸುತ್ತಿಕೊಂಡು ‘ಕೋಟಿ- ಚೆನ್ನಯʼ ಕೋಣಗಳ ನೊಗ ಹಿಡಿದು ಗದ್ದೆ ಹೊಡೆಯುವಾಗ ಪೂವಮ್ಮ ಮೈ ಮರೆತು ನೋಡುತ್ತಿದ್ದುದುಂಟು. ಪಟೇಲರು, ಶೇಕರ ಹಾಗೆ ನೀವೂ ಅಂಗಿ ಹಾಕಿಕೊಳ್ಳಿ, ಮೈ ಬಿಟ್ಟು ಬಿಸಿಲಿಗೆ ಯಾಕೆ ಒಣಗುತ್ತೀರಾ ಎಂದು ಪೂವಮ್ಮ ಆಕ್ಷೇಪಿಸಿದರೆ, ನಾನು ಅವರಂತೆ ಶ್ರೀಮಂತನೂ ಅಲ್ಲ, ನಿನ್ನಪ್ಪ ನನಗೆ ವರದಕ್ಷಿಣೆಯನ್ನೂ ಕೊಟ್ಟಿಲ್ಲ ಎಂದು ಭಂಡಾರಿ ಛೇಡಿಸುತ್ತಾರೆ. ಮಾವ ವೆಂಕಪ್ಪ ಭಂಡಾರಿ ಇರುವವರೆಗೆ ಸುಮ್ಮನಿದ್ದ ಪೂವಮ್ಮ ಮಾವ ಸತ್ತ ಮೇಲೆ ಪಿರಿಪಿರಿ ಮಾಡಿ, ಉಳುಮೆ ಮಾಡುವಾಗ ಗಂಜಿ ಫ್ರಾಕ್ ಹಾಕುವಂತೆ ಮಾಡಿದರು. ದೇಜಪ್ಪ ಭಂಡಾರಿಗೆ ಮೊದಮೊದಲು ಕಿರಿಕಿರಿಯಾದರೂ ಹೆಂಡತಿಯ ಸಂತೋಷಕ್ಕಾಗಿ ರೂಢಿಸಿಕೊಂಡರು.
ಮದುವೆಯಾಗಿ ಬಹಳ ವರ್ಷಗಳವರೆಗೆ ಭಂಡಾರಿಗಳಿಗೆ ಮಕ್ಕಳಾಗಿರಲಿಲ್ಲ. ಪೂವಮ್ಮ ಕೊರಗುತ್ತಿದ್ದರೂ ದೇಜಪ್ಪ ತಲೆ ಕೆಡಿಸಿಕೊಂಡಿರಲಿಲ್ಲ. ಆಗುವ ಸಮಯದಲ್ಲಿ ಆಗುತ್ತದೆ ಚಿಂತೆ ಯಾಕೆ ಮಾಡಬೇಕು ಎಂದರೆ ತಾಯಿ ದೇಂಞಿ ಕೇಳಬೇಕಲ್ಲ. ಆ ದೇವರಿಗೆ ಈ ದೇವರಿಗೆ ಎಲ್ಲಾ ಹರಕೆ ಆಯಿತು. ಕೊನೆಗೆ ಕಾಂಞಗಾಡಿನ ನಂಬೂದಿರಿ, ನಾಗದೋಷ ಇದೆ; ಸುಬ್ರಹ್ಮಣ್ಯದಲ್ಲಿ ನಾಗನಕಲ್ಲು ಹಾಕಿ ಪೂಜಿಸಿದರೆ ಮಕ್ಕಳಾಗುತ್ತವೆ ಎಂದ. ಆ ವರ್ಷ ಆದ ಬೆಳೆಯಲ್ಲಿ ಮೂರು ಮುಡಿ ಅಕ್ಕಿ ಮಾರಿ, ಗಂಡಹೆಂಡತಿ ಸುಬ್ರಹ್ಮಣ್ಯಕ್ಕೆ ಹೋಗಿ ನಾಗನ ಕಲ್ಲು ಹಾಕಿ ಬಂದರು.
ನಾಗನ ಕಲ್ಲು ಹಾಕಿ ಬಂದಿದ್ದಕ್ಕೋ, ಮಕ್ಕಳಾಗುತ್ತವೆ ಎಂಬ ಮಾನಸಿಕ ಸ್ಥೈರ್ಯ ಒದಗಿದ್ದಕ್ಕೋ ವರ್ಷದೊಪ್ಪತ್ತಿನಲ್ಲಿ ಜಲಜಾಕ್ಷಿ ಹುಟ್ಟಿದಳು. ಅವಳಿಗೆ ತಂದೆಯ ಬಣ್ಣ ಇರಲಿಲ್ಲ. ತಾಯಿಯಂತೆ ನಸುಗಪ್ಪು. ಆದರೆ ಚುರುಕು. ಅದು ಮಾಡಬೇಡ, ಇದು ಮಾಡಬೇಡ ಎಂದು ಒಂದು ಸಲ ಹೇಳಿದರೆ ಮುಗೀತು, ಮಾಡುವವಳಲ್ಲ. ತುಂಬೆ ಹಿತ್ಲಲ್ಲಿ ಶಾಲೆ ಇಲ್ಲ. ಓದಲು ಮೀಯ ಪದವಿಗೆ ಹೋಗಬೇಕು. ಅದಕ್ಕೆ ಮೂರು ಮೈಲು. ದೇಜಪ್ಪ ಭಂಡಾರಿ ಅಲ್ಲಿಯವರೆಗೆ ನಡೆದುಕೊಂಡು ಹೋಗಿ ನಾಲ್ಕನೇ ಕ್ಲಾಸು ಓದಿದ್ದು. ಐದನೇ ಕ್ಲಾಸು ಅಲ್ಲಿ ಇರದುದರಿಂದ ಮುಂದೆ ಓದಲು ಮನಸ್ಸಿದ್ದರೂ ಆಗಿರಲಿಲ್ಲ. ಕಾಡುದಾರಿಯಲ್ಲಿ ಏಳು ಮೈಲಿ ನಡೆದುಕೊಂಡು ಹೋಗಿ ಮಿಡ್ಲ್ ಸ್ಕೂಲ್ ಓದುವುದು ಬೇಡವೆಂದು ವೆಂಕಪ್ಪ ಭಂಡಾರಿ ಮಗನ ಓದು ನಿಲ್ಲಿಸಿದ್ದರು. ಜಲಜಾಕ್ಷಿಯ ಕತೆಯೂ ಹೀಗೇ ಆಗುತ್ತದೆ ಎಂದು ಪೂವಮ್ಮನಿಗೆ ಭಯ. ಆಕೆ ಮೂಲ್ಕಿಯಲ್ಲಿ ಏಳನೇ ತರಗತಿವರೆಗೆ ಓದಿದ್ದರು. ಬರಾವು ತಲೆಗೆ ಹತ್ತದ್ದರಿಂದ ಮುಂದೆ ಓದಲಿಲ್ಲ. ಮಗಳಿಗೆ ಓದಿಸಬೇಕೆಂದು ಆಸೆ. ಅದು ತುಂಬೆ ಹಿತ್ಲಲ್ಲಿ ಸಾಧ್ಯವಿರಲಿಲ್ಲ.
ಜಲಜಾಕ್ಷಿಗೆ ನಾಲ್ಕು ವರ್ಷವಾಗುವಾಗ ದೇಜಪ್ಪ ಭಂಡಾರಿಯ ತಾಯಿ ದೇಂಞಿ ತೀರಿಕೊಂಡರು. ತುಂಬೆ ಹಿತ್ಲು ಬಿಟ್ಟು ನಾನು ಎಲ್ಲಿಯೂ ಹೋಗುವುದಿಲ್ಲ ಎಂದು ಹೇಳುತ್ತಿದ್ದ ಜೀವ ಅದು. ತಾಯಿ ಸತ್ತ ಮೇಲೆ ಮೇಲೆ ದೇಜಪ್ಪ ಕೃಷಿಯಲ್ಲೇ ಜೀವನ ಸಾಗಿಸುವ ಕುರಿತು ಯೋಚನೆಗೆ ಬಿದ್ದರು. ಗದ್ದೆ, ತೋಟದ ಉತ್ಪತ್ತಿಯಲ್ಲಿ ಜೀವನ ಮೇಲಕ್ಕೆ ಏರುವುದೂ ಇಲ್ಲ, ಕೆಳಕ್ಕೆ ಇಳಿಯುವುದೂ ಇಲ್ಲ. ಪೂವಮ್ಮನಿಗೂ ತುಂಬೆ ಹಿತ್ಲಲ್ಲಿ ಇರಲು ಇಷ್ಟವಿರಲಿಲ್ಲ. ಮಾವನ ಮನೆ ಮುಲ್ಕಿಗೆ ಹೋಗಿ ಬರುವಾಗ ಅಂಗಡಿ ವ್ಯಾಪಾರ ಮಾಡಿ ಕೆಲವು ಸಂಬಂಧಿಕರು ಉದ್ಧಾರ ಆಗಿದ್ದನ್ನು ಭಂಡಾರಿ ಕಂಡಿದ್ದರು. ಹಾಗಂತ ಮುಲ್ಕಿಯಲ್ಲಿ ವ್ಯಾಪಾರ ಮಾಡಿ ತಮ್ಮವರ ಎದುರಲ್ಲಿ ಸಣ್ಣವರಾಗುವುದು ಅವರಿಗೆ ಇಷ್ಟವಿರಲಿಲ್ಲ. ಮುಲ್ಕಿ- ತುಂಬೆಹಿತ್ಲು ನಡುವೆ, ಹೋಗಿ ಬರಲು ಅನುಕೂಲವಾಗುವಂತೆ ಎಲ್ಲಿಯಾದರೂ ಅಂಗಡಿ ಮಾಡುವ ಕುರಿತು ಚಿಂತಿಸುತ್ತಿದ್ದರು.
ಸೀತಾರಾಮ ದೇಜಪ್ಪ ಭಂಡಾರಿಯವರ ಹಳೆಯ ದೋಸ್ತು. ಮೀಯಪದವಿನಲ್ಲಿ ಜೊತೆಗೆ ಓದಿದವರು. ಸೀತಾರಾಮ ಮರ ಕಡಿಸಿ ಮಾರುವ ಕೆಲಸ ಮಾಡಿಕೊಂಡಿದ್ದು ಸ್ವಲ್ಪ ದುಡ್ಡು ಸೇರಿದ ಮೇಲೆ ಮಂಗಳೂರಿಗೆ ಹೋಗಿ ಜಪ್ಪುವಿನಲ್ಲಿ ಸೌದೆ ಅಂಗಡಿ ಇಟ್ಟುಕೊಂಡಿದ್ದ. ಕಾಸು ಚೆನ್ನಾಗಿತ್ತು. ಅವನ ತಾಯಿ, ಅಣ್ಣಂದಿರು ಮೀಯಪದವಿನಲ್ಲಿ ಇದ್ದರು. ಅವರನ್ನು ನೋಡಲು ಬರುವಾಗಲೆಲ್ಲ ತುಂಬೆ ಹಿತ್ಲಿಗೆ ಬಂದು ದೇಜಪ್ಪ ಭಂಡಾರಿಯನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದ.
ಸೀತಾರಾಮನೊಂದಿಗೆ ತಾನು ಊರು ಬಿಡಬೇಕೆಂದಿರುವ ವಿಷಯ ದೇಜಪ್ಪ ಪ್ರಸ್ತಾಪಿಸಿದರು. ಮಂಗಳೂರಿನಲ್ಲಿ ವ್ಯಾಪಾರ ಮಾಡುವ ವಿಷಯ ಸೀತಾರಾಮನಿಗೂ ಹಿಡಿಸಿತು. ತಾನೇ ಖುದ್ದು ನಿಂತು ಜಪ್ಪುವಿನಲ್ಲಿ ಜೀನಸು ಅಂಗಡಿಯೊಂದನ್ನು ದೇಜಪ್ಪ ಭಂಡಾರಿಗೆ ಕೊಡಿಸಿದ. ಅಂಗಡಿಯ ಪಕ್ಕದಲ್ಲಿ ವಸತಿಗೂ ಅನುಕೂಲ ಮಾಡಿಕೊಟ್ಟ. ದೇಜಪ್ಪ ತೋಟ ಮತ್ತು ಗದ್ದೆಯ ಉಸ್ತುವಾರಿ ನಂಬಿಕೆಯ ಆಳು ಸಂಜೀವನಿಗೆ ವಹಿಸಿ ಜಪ್ಪುವಿನಲ್ಲಿ ಸಂಸಾರ ಹೂಡಿದರು.
ಶುರುವಿನಲ್ಲಿ ದೇಜಪ್ಪಗೆ ತೊಂದರೆಯಾಯಿತು. ವ್ಯಾಪಾರ ಎಂದರೆ ಏನು, ಎತ್ತ ಗೊತ್ತಿಲ್ಲ. ಊರಲ್ಲಿ ಬೆವರು ಸುರಿಸಿ ಬೆಳೆದ ಅಕ್ಕಿ ಮುಡಿಯ ದುಡ್ಡು ಕರಗುತ್ತಿತ್ತು. ಸೀತಾರಾಮ ಮಂಗಳೂರಿಗೆ ಬಂದು ಬಹಳ ವರ್ಷಗಳಾಗಿದ್ದವು. ಅವನಿಗೆ ವ್ಯಾಪಾರದ ಮರ್ಮ ಗೊತ್ತಿತ್ತು. ದೇಜಪ್ಪರಿಗೆ ಸೂಕ್ಷ್ಮಗಳನ್ನು ತಿಳಿಸಿ, ಅವರ ನೆರವಿಗಾಗಿ ಜೀನಸಿ ಅಂಗಡಿಯಲ್ಲಿ ಕೆಲಸ ಮಾಡಿ ಗೊತ್ತಿದ್ದ ಆಳೊಬ್ಬನನ್ನು ಗೊತ್ತು ಮಾಡಿ ಕೊಟ್ಟ. ನಿಧಾನಕ್ಕೆ ವ್ಯಾಪಾರ ಚಿಗುರತೊಡಗಿತು. ದೇಜಪ್ಪ ಭಂಡಾರಿ ತಿಂಗಳಿಗೆ ಎರಡು ಸಲ ತುಂಬೆಹಿತ್ಲಿಗೆ ಹೋಗಿ ತೋಟ, ಗದ್ದೆ ನೋಡಿಕೊಂಡು, ಸಂಜೀವನನ್ನು ವಿಚಾರಿಸಿಕೊಂಡು ಬರುತ್ತಿದ್ದರು. ಸಂಜೀವನೂ ಆಗಾಗ್ಗೆ ಜಪ್ಪುವಿಗೆ ಬಂದು ತರಕಾರಿಯಿಂದ ಅಕ್ಕಿವರೆಗೆ ಏನೇನು ಬೆಳೆದಿದೆಯೋ ಅದನ್ನು ಒಪ್ಪಿಸಿ ಹೋಗುತ್ತಿದ್ದ.
ಪೂವಮ್ಮನ ಕೊರಳಗೆ ಚಿನ್ನದ ಒಡವೆಗಳು ಬಂದವು. ಜಲಜಾಕ್ಷಿಗೆ ಬಂಗಾರದ ಸರ ಮಾಡಿಸಿದರು. ಅವಳು ಜಪ್ಪುವಿನ ಸಿರಿಯನ್ ಮಿಶನ್ ಶಾಲೆಗೆ ಹೋಗುತ್ತಿದ್ದಳು. ಓದಿನಲ್ಲಿ ಹುಷಾರಿದ್ದಳು. ಸೀತಾರಾಮನಿಂದಾಗಿ ದೇಜಪ್ಪ ಭಂಡಾರಿಗೆ ಹಲವರ ಪರಿಚಯವಾಯಿತು. ಅವರಲ್ಲಿ ಕೆಲವರಿಗೆ ಕೋಳಿ ಅಂಕದ ಹುಚ್ಚು. ಸೀತಾರಾಮನೂ ಕಡಿಮೆ ಏನಲ್ಲ. ದೇಜಪ್ಪ ಭಂಡಾರಿಯೂ ಕೋಳಿ ಅಂಕಕ್ಕೆ ಹೋಗಲು ಶುರು ಮಾಡಿದರು. ಇದು ಎಷ್ಟು ಜಾಸ್ತಿಯಾಯಿತೆಂದರೆ ಅಂಗಡಿಯನ್ನು ಕೆಲಸದ ಹುಡುಗನಿಗೆ ಒಪ್ಪಿಸಿ ಕೋಳಿ ಅಂಕ ಎಲ್ಲಿದೆಯೋ ಅಲ್ಲಿಗೆ ಹೋಗಿ ಬಿಡುತ್ತಿದ್ದರು. ಪೂವಮ್ಮ ಹಾಗೆಲ್ಲಾ ಹೋಗುವುದು ಬೇಡ, ಅಂಗಡಿಯನ್ನು ಆಳುಗಳಿಗೆ ಬಿಟ್ಟು ಹೋದರೆ ಹೆಚ್ಚು ಕಡಿಮೆಯಾಗುತ್ತದೆ ಎಂದರೂ ದೇಜಪ್ಪ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ.
ತುಂಬೆಹಿತ್ಲಿನಿಂದ ಪದೇ ಪದೇ ಬಂದು ಹೋಗುತ್ತಿದ್ದ ಸಂಜೀವ ಬರುವುದನ್ನು ಕಡಿಮೆ ಮಾಡಿದ್ದ. ದೇಜಪ್ಪ ಈ ಬಗ್ಗೆ ಗಮನ ಹರಿಸಲಿಲ್ಲ. ಒಮ್ಮೆ ಭಂಡಾರಿಯವರಿಗೆ ಬೇಕಾದವರೊಬ್ಬರು ಸಂಜೀವ ಸರಕಾರದ ‘ಉಳುವವನೇ ಹೊಲದೊಡೆಯʼ ಕಾನೂನಿನಂತೆ ದೇಜಪ್ಪ ಭಂಡಾರಿಯವರ ಭೂಮಿಗೆ ಡಿಕ್ಲರೇಷನ್ ಕೊಟ್ಟಿದ್ದಾರೆಂಬ ಸುದ್ದಿ ತಂದರು. ಮೊದಲು ಭಂಡಾರಿ ಇದನ್ನು ನಂಬಲಿಲ್ಲ. ಸಂಜೀವ ಅಂತಾ ಹುಡುಗ ಅಲ್ಲ, ತನ್ನನ್ನು ಕೇಳದೆ ಮುಂದುವರಿಯಲಾರ ಎಂದುಕೊಂಡರು. ತಿಂಗಳುಗಟ್ಟಲೆ ಅವನು ಬರದಿರುವುದನ್ನು ನೋಡಿ ಪೂವಮ್ಮನೇ ಒತ್ತಾಯ ಮಾಡಿ ಭಂಡಾರಿಯವರನ್ನು ತುಂಬೆಹಿತ್ಲಿಗೆ ಕಳುಹಿಸಿದರು.
ತಾನು ಮಾಡಿದುದಕ್ಕಿಂತ ಚೆನ್ನಾಗಿ ತೋಟ ಮಾಡಿದುದನ್ನು ನೋಡಿ ಭಂಡಾರಿಗೆ ಖುಷಿಯಾಯಿತು. ಸಂಜೀವನೂ ಹಿಂದೆ ಇದ್ದ ಹಾಗೇ ಇದ್ದ. ವಿಚಾರಿಸಿ ನಿಜಾಂಶ ತಿಳಿದುಕೊಳ್ಳುವುದು ಒಳ್ಳೆಯದೆಂದು ಭಂಡಾರಿ ಕೇಳಿದರು ‘ಎಲ್ಲರೂ ಡಿಕ್ಲರೇಷನ್ ಕೊಡುತ್ತಿದ್ದಾರಂತೆ, ನೀನೂ ಕೊಡುತ್ತಿದ್ದೀಯಾ ಹೇಗೆ?ʼ
ಸಂಜೀವ ತುಟಿ ಬಿಚ್ಚಲಿಲ್ಲ. ಭಂಡಾರಿ ಒತ್ತಾಯಿಸಿದರು. ‘ಹೇಳು ನೀನೇನಾದರೂ ಕೊಟ್ಟಿದ್ದೀಯಾ?ʼ
‘ನಾನಾಗಿ ಕೊಡಲಿಲ್ಲ. ಪಾರಂ ತುಂಬಿಕೊಂಡು ಬಂದು ಸೈನ್ ಮಾಡಲು ಹೇಳಿದರು. ಬಲವಂತ ಮಾಡಿದಾಗ ಬೇರೆ ದಾರಿ ಕಾಣದೆ ಸೈನ್ ಮಾಡಿದ್ದು ಹೌದುʼ ಸಂಜೀವ ಹೇಳಿದ. ಭಂಡಾರಿಯವರಿಗೆ ಒಮ್ಮೆ ಕೆಟ್ಟದ್ದೆನ್ನಿಸಿದರೂ ಭೂಮಿಯನ್ನು ಇಷ್ಟು ವರ್ಷದಿಂದ ನಿಯತ್ತಿನಿಂದ ಮಾಡಿದ್ದಾನೆ, ಕಾನೂನು ಪ್ರಕಾರ ಡಿಕ್ಲರೇಷನ್ ಕೊಟ್ಟಿದ್ದು ತಪ್ಪಲ್ಲ ಅನ್ನಿಸಿತು. ತನಗೆ ಮಂಗಳೂರಿನಲ್ಲಿ ಅಂಗಡಿ ಇದೆ. ನಾಲ್ಕು ಕಾಸೂ ಓಡಾಡುತ್ತಿದೆ. ಸಂಜೀವ ಚೆನ್ನಾಗಿರಲಿ ಎಂದುಕೊಂಡರು. ಆದರೆ ಪೂವಮ್ಮನನ್ನು ಒಪ್ಪಿಸುವುದು ಕಷ್ಟವಾಯಿತು. ಅವಳ ಸಮಾಧಾನಕ್ಕಾಗಿ ಸಂಜೀವನನ್ನು ಜಪ್ಪುವಿಗೆ ಕರೆಸಿ, ಸೀತಾರಾಮನನ್ನು ಕೂಡಿಸಿ ಸಂಧಾನ ಮಾಡಿ ಒಂದೆಕರೆ ತೋಟ ಮತ್ತು ಮನೆ ಉಳಿಸಿಕೊಂಡು ಉಳಿದ ಜಾಗವನ್ನು ಸಂಜೀವನಿಗೆ ಬಿಟ್ಟುಕೊಟ್ಟರು. ತಮ್ಮ ತಂದೆಯ ನೆನಪಿಗಾಗಿ ಅಷ್ಟಾದರೂ ಇರಲಿ ಎಂದು ಸಮಾಧಾನ ಪಟ್ಟುಕೊಂಡರು. ಎಂದಾದರೂ ಜಾತ್ರೆಗೋ, ಕೋಲಕ್ಕೋ ಹೋದಾಗ ತುಂಬೆಹಿತ್ಲಿನ ತಮ್ಮ ಮನೆಯಲ್ಲಿ ಇದ್ದು ಬಿಡುತ್ತಿದ್ದರು. ಸಂಜೀವ ಗಂಡ, ಹೆಂಡತಿ ಬಂದಾಗ ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ಮೊದಲಿನಂತೆಯೇ ಗೌರವ ಕೊಡುತ್ತಿದ್ದ.
ಜಪ್ಪುವಿನಲ್ಲಿ ದೇಜಪ್ಪ ಭಂಡಾರಿಯವರ ವ್ಯಾಪಾರ ನೋಡಿ ಕಾಮತರು ಪಕ್ಕದಲ್ಲಿ ಇನ್ನೊಂದು ಅಂಗಡಿ ತೆಗೆದರು. ಯಾರು ಅಂಗಡಿ ತೆರೆದರೂ ತನ್ನ ವ್ಯಾಪಾರ ಕಡಿಮೆಯಾಗಲಿಕ್ಕಿಲ್ಲ, ಗಿರಾಕಿಗಳೆಲ್ಲ ಪರಿಚಯವಾಗಿ ಬಿಟ್ಟಿದ್ದಾರೆ ಎಂದು ದೇಜಪ್ಪ ತಲೆ ಕೆಡಿಸಿಕೊಳ್ಳಲಿಲ್ಲ. ಕಾಮತರು ವ್ಯಾಪಾರದಲ್ಲಿ ಬಲು ಹುಷಾರು. ಅವರ ನೆಂಟರು ವ್ಯಾಪಾರಸ್ತರು. ಅವರಿಗೆ ಬಂದರಿನಲ್ಲಿ ಬಂಡಸಾಲೆ ಇತ್ತು. ಕಡಿಮೆ ಬೆಲೆಯಲ್ಲಿ ಅವರಿಗೆ ಸಾಮಾನುಗಳು ಸಿಗುತ್ತಿದ್ದವು. ದೇಜಪ್ಪ ಭಂಡಾರಿಯವರಿಗಿಂತ ಕಡಿಮೆ ಬೆಲೆಯಲ್ಲಿ ಅವರು ಮಾರಾಟ ಮಾಡತೊಡಗಿದರು.
ಜಲಜಾಕ್ಷಿ ಪ್ರಾಥಮಿಕ ಶಾಲೆ ಮುಗಿಸಿ ಹೈಸ್ಕೂಲಿನಲ್ಲಿ ಓದುತ್ತಿದ್ದಳು. ಅವಳು ಒಂಬತ್ತನೆಯ ತರಗತಿಯಲ್ಲಿದ್ದಾಗ ಅಂಗಡಿಯಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದ ಆಳು ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ. ಕೆಲವು ದಿನಗಳಲ್ಲಿ ಭಂಡಾರಿಯವರ ಅಂಗಡಿಯ ಮುಂದಿನ ಓಣಿಯಲ್ಲಿ ಅವನ ಅಂಗಡಿ ಪ್ರಾರಂಭವಾಯಿತು. ಅವನಿಗೆ ಗಿರಾಕಿಗಳ ಬಳಕೆ ಚೆನ್ನಾಗಿತ್ತು.
ಭಂಡಾರಿಯವರು ಕೋಳಿ ಅಂಕಕ್ಕೆ ಹೋಗದೆ ಅಂಗಡಿಯಲ್ಲಿ ನೆಟ್ಟಗೆ ಕೂರುವ ಹೊತ್ತಿಗೆ ಅಂಗಡಿಯಲ್ಲಿ ಸಾಮಾನು ಖಾಲಿಯಾಗಿ ಬಂಡಸಾಲೆಯಲ್ಲಿ ಸಾಲ ಹೆಚ್ಚಾಗಿದ್ದುದು ತಿಳಿಯಿತು. ಏನಾದರೂ ಮಾಡಿ ವ್ಯಾಪಾರ ಸರಿ ಮಾಡಲು ಗಿರಾಕಿಗಳನ್ನು ಕರೆದು ಮಾತನಾಡಿಸಿದರು. ಬೆಲೆ ಕಮ್ಮಿ ಮಾಡಿದರು.
ಕಾಮತರು ತಮ್ಮ ಅಂಗಡಿಗೆ ಇನ್ನೊಂದು ಕಟ್ಟಡ ಸೇರಿಸಿ ದೊಡ್ಡದು ಮಾಡಿದರು. ಅಲ್ಲಿ ಇಲ್ಲದ ಸಾಮಾನುಗಳು ಇರಲಿಲ್ಲ. ತಮ್ಮ ಅಂಗಡಿಯಲ್ಲಿ ಸಾಮಾನು ತುಂಬಿಸುವ ಶಕ್ತಿ ಭಂಡಾರಿಯವರಿಗೆ ಇರಲಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ಕೂತು ತಪಸ್ಸು ಮಾಡಿದರೂ ಖರ್ಚಿಗೆ ಕಾಸು ಹುಟ್ಟದಾದಾಗ ಮರೆತು ಬಿಟ್ಟಿದ್ದ ಕೋಳಿ ಅಂಕವನ್ನು ಮತ್ತೆ ಭಂಡಾರಿ ಹೊಕ್ಕರು. ಉರಿಯ ಅವರಿಗೆ ಜೊತೆಯಾದ. ಅವನು ಕಟ್ಟದಲ್ಲಿ ಗೆದ್ದಾಗ ಭಂಡಾರಿಗಳಿಗೆ ತಾನು ಗೆದ್ದಂತೆ ಅನ್ನಿಸುತ್ತಿತ್ತು. ಅಂದು ಆರಾಮ ನಿದ್ದೆ ಬರುತ್ತಿತ್ತು. ‘ಕೋಳಿ ಅಂಕಕ್ಕೆ ಹೋಗಿ ಭಂಡಾರಿ ಕೆಟ್ಟು ಹೋದʼ ಎಂದು ಜನ ಆಡಿಕೊಂಡರೂ ಭಂಡಾರಿ ಅತ್ತ ಕಿವಿ ಕೊಡಲಿಲ್ಲ.
ಜಲಜಾಕ್ಷಿಗೆ ಪಿಯುಸಿ ಮುಗಿದ ನಂತರ ಪದವಿ ಕಾಲೇಜಿಗೆ ಹೋಗಬೇಕೆಂಬ ಮನಸ್ಸಿತ್ತು. ಹಂಪನಕಟ್ಟೆಯ ಕಾಲೇಜಿಗೆ ಕಳುಹಿಸಲು ಭಂಡಾರಿಯವರಿಗೆ ಮನಸ್ಸಿರಲಿಲ್ಲ. ವ್ಯಾಪಾರವೂ ಕಡಿಮೆ ಆಗಿತ್ತು. ಹೊಯಿಗೆ ಬಜಾರಿನ ಅಲ್ಬುಕರ್ಕರ ಹಂಚಿನ ಕಾರ್ಖಾನೆಯಲ್ಲಿ ಮೇಸ್ತ್ರಿಯಾಗಿದ್ದ ವಿಶ್ವನಾಥ ಮದುವೆಯ ಪ್ರಸ್ತಾಪ ಮುಂದಿಟ್ಟಾಗ ಭಂಡಾರಿ ಹಿಂದು ಮುಂದು ನೋಡದೆ ಒಪ್ಪಿ ಬಿಟ್ಟರು. ವರದಕ್ಷಿಣೆ ಅವರ ಪರಿಸ್ಥಿತಿಗೆ ಜಾಸ್ತಿಯಾದರೂ ಬೆಳೆದ ಮಗಳನ್ನು ಎಷ್ಟು ದಿನವೆಂದು ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯ? ಊರಿನಲ್ಲಿದ್ದ ತೋಟ, ಮನೆಯ ಮೇಲೆ ಮೋಹ ಇರಲಿಲ್ಲ. ಅದನ್ನು ಸಂಜೀವನಿಗೆ ಮಾರಿದರು. ಒಳ್ಳೆಯ ಕಾಲದಲ್ಲಿ ಪೂವಮ್ಮನಿಗೆ ಮಾಡಿಸಿದ ಒಡವೆ ಈಗ ಮಗಳ ಅನುಕೂಲಕ್ಕೆ ಬಂತು ಕಡಿಮೆಯಾಗಿದ್ದಕ್ಕೆ ಸೀತಾರಾಮ ನೆರವು ನೀಡಿದ. ಮದುವೆ, ತಮ್ಮಣ ಎಲ್ಲರೂ ಮೆಚ್ಚುವಂತೆ ಆಯಿತು.
ಜಲಜಾಕ್ಷಿಯ ಸಂಸಾರ ಅಲ್ಲಿಂದಲ್ಲಿಗೆ ಇತ್ತು. ಮೇಸ್ತ್ರಿಯಾಗಿ ವಿಶ್ವನಾಥ ತರುತ್ತಿದ್ದ ಸಂಬಳದಿಂದ ಅವರ ಅವರ ದಿನ ಸಾಗುತ್ತಿತ್ತು. ಜಲಜಾಕ್ಷಿಗೆ ಕೊಟ್ಟ ವರದಕ್ಷಿಣೆಯ ಹಣದಿಂದ ಅವನು ತನ್ನ ತಂಗಿಯ ಮದುವೆ ಮಾಡಿದ್ದ. ಅವನ ತಾಯಿ ತೀರಿಕೊಂಡಿದ್ದು ತಂದೆ ಅವನ ಜೊತೆಯಲ್ಲಿದ್ದರು. ಮೂರು ಜನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮದುವೆಯಾಗಿ ವರ್ಷದೊಳಗೆ ಜಲಜಾಕ್ಷಿ ಗಂಡು ಮಗುವನ್ನು ಹೆತ್ತಳು. ಪೂವಮ್ಮ ಮಗುವನ್ನು ಆರು ತಿಂಗಳು ನೋಡಿಕೊಂಡರು. ಮಗು ತೆವಳುವ ಹೊತ್ತಿಗೆ ಮಾವನ-ವಿಶ್ವನಾಥನ ಊಟಕ್ಕೆ ತೊಂದರೆಯಾಗುತ್ತದೆಂದು ಅವಳು ಗಂಡನ ಮನೆಗೆ ಹೋದಳು.
ಒಂದು ದಿನ ಎಷ್ಟು ಹೊತ್ತಾದರೂ ವಿಶ್ವನಾಥ ಕಾರ್ಖಾನೆಯಿಂದ ಮನೆಗೆ ಬರಲಿಲ್ಲ. ಜಲಜಾಕ್ಷಿ ಗಾಬರಿಯಾದಳು. ರಾತ್ರಿ ಕಾರ್ಖಾನೆಯಿಂದ ವಿಶ್ವನಾಥನನ್ನು ಆಸ್ಪತ್ರೆಗೆ ಸೇರಿಸಿದ ಸುದ್ದಿ ಬಂತು. ಮೂರು ದಿನ ಆಸ್ಪತ್ರೆಯಲ್ಲಿದ್ದು ವಿಶ್ವನಾಥ ಮನೆಗೆ ಬಂದಾಗ ಅಚ್ಚಿನ ಯಂತ್ರಕ್ಕೆ ಸಿಲುಕಿದ್ದ ಅವನ ಬಲಗೈಯನ್ನು ಕತ್ತರಿಸಲಾಗಿತ್ತು.
ಅಲ್ಪಸ್ವಲ್ಪ ಪರಿಹಾರ ಕೊಟ್ಟು ವಿಶ್ವನಾಥನನ್ನು ಕಾರ್ಖಾನೆಯಿಂದ ಬಿಡುಗಡೆ ಮಾಡಿದರು. ಭಂಡಾರಿಯವರು ಮಗಳಿಗೆ ಸಾಂತ್ವನ ಹೇಳಿದರು. ಪೂವಮ್ಮ ಸಮಾಧಾನ ಪಡಿಸಿದರು. ಆದರೆ ಎದೆಯಲ್ಲಿ ನೋವು ಹಾಗೆಯೇ ಉಳಿಯಿತು. ಸುಮ್ಮನೆ ಅಂಗಡಿಗೆ ಹೋಗಿ ಕೂರುತ್ತಿದ್ದರು. ಆಗಾಗ್ಗೆ ದಮ್ಮು ಬರುತ್ತಿತ್ತು. ಡಾ. ಸುವರ್ಣ ಔಷಧಿ ಬರೆದುಕೊಟ್ಟು ದಿನಾ ತೆಗೆದುಕೊಳ್ಳಲು ಹೇಳಿದರು. ಊಟಕ್ಕೇ ತೊಂದರೆ ಇತ್ತು. ದಮ್ಮು ಜಾಸ್ತಿಯಾಗಿ ಕಷ್ಟವಾದಾಗ ಒಂದೆರಡು ದಿನಕ್ಕೆ ಮಾತ್ರೆ ತರುತ್ತಿದ್ದರು.

ಸೀತಾರಾಮ ಜಲಜಾಕ್ಷಿಯ ಮದುವೆಗೆ ಕೊಟ್ಟ ಹಣ ತೀರಿಸಿರಲಿಲ್ಲ. ತೀರಿಸುವ ದಾರಿಯೂ ಇರಲಿಲ್ಲ. ಸೀತಾರಾಮನ ಮಗಳ ಮದುವೆ ನಿಶ್ಚಯವಾಗಿತ್ತು. ಸೀತಾರಾಮ ಜೀವದ ಗೆಳೆಯ. ಹಣ ಬೇಕೆಂದು ಕೇಳುವವನಲ್ಲ. ಆದರೆ ಮಗಳ ಮದುವೆಯ ಸಂದರ್ಭದಲ್ಲಿ ಕೊಡದಿರುವುದು ನ್ಯಾಯವಲ್ಲ. ಭಂಡಾರಿ ಇದೇ ಯೋಚನೆಯಲ್ಲಿರುತ್ತಿದ್ದರು. ಗಂಡನ ಚಿಂತೆ ಪೂವಮ್ಮಳಿಗೂ ಗೊತ್ತು. ಒಂದು ಕಡೆ ಮಗಳ ಬದುಕಿನ ಚಿಂತೆ, ಇನ್ನೊಂದೆಡೆ ಸಮಯಕ್ಕಾದವರ ಋಣ ತೀರಿಸುವ ಚಿಂತೆ. ಪೂವಮ್ಮನೂ ಯೋಚಿಸಿ ಹಣ್ಣಾದರು.
ಕೋಳಿ ಅಂಕದಲ್ಲಿ ಸಿಗುವ ಚಿಲ್ಲರೆ ದುಡ್ಡು, ರಾತ್ರಿ ಊಟಕ್ಕೆ ಒದಗುವ ಕಣದಲ್ಲಿ ಸೋತ ಒಟ್ಟೆ ಕೋಳಿ- ಇದಕ್ಕಾಗಿ ಭಂಡಾರಿ ಕೋಳಿ ಅಂಕಕ್ಕೆ ಹೋಗುವುದಿಲ್ಲ; ಉರಿಯ ಕಣದಲ್ಲಿ ಇರುವಷ್ಟು ಹೊತ್ತು ಅವರಿಗೆ ಭೂಲೋಕದ ಚಿಂತೆ ಇರುತ್ತಿರಲಿಲ್ಲ. ಉರಿಯನ ಕೊನೆ ಉಸಿರಿನಿಂದ ಅವರ ನೋವಿಗೆ ಉಸಿರು ಬಂತು.
ಭಂಡಾರಿಯವರ ಅಂಗಡಿಗೆ ಬಾಳೆಹಣ್ಣಿನ ಗೊನೆ ಕಳುಹಿಸುವ ಸೋಜ ಜಪ್ಪು ಸೆಮಿನರಿಯಲ್ಲಿ ಬೆಳೆದವ. ಅವನ ತಂದೆ ತಾಯಿ ಕಿರಿಸ್ತಾನರ ಜಾತಿಗೆ ಸೇರಿ ಸೆಮಿನರಿಯಲ್ಲಿದ್ದರು. ಸೋಜ ಮದುವೆಯಾದ ಮೇಲೆ ಸೆಮಿನರಿಯಿಂದ ಹೊರಗೆ ಬಂದು ಬೇರೆ ಮನೆ ಮಾಡಿಕೊಂಡಿದ್ದ. ಮತಾಂತರಗೊಂಡು ಸೆಮಿನರಿಯಲ್ಲಿರುವವರಿಗೆ ಇರಲು ಮನೆ ಕೊಡುತ್ತಿದ್ದರು. ಅವರಿಂದ ಸಣ್ಣ ಪುಟ್ಟ ಮರದ ಕೆಲಸ, ಕಬ್ಬಿಣದ ಕೆಲಸ ಮಾಡಿಸುತ್ತಿದ್ದರು. ಈ ಸಾಮಾಗ್ರಿಗಳನ್ನು ಸೆಮಿನರಿಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ದೇಜಪ್ಪ ಭಂಡಾರಿ ಅಂಗಡಿ ಪ್ರಾರಂಭಿಸಿದಾಗ ಸೆಮಿನರಿಯಲ್ಲಿ ಸಾಮಾಗ್ರಿಗಳನ್ನು ಕೊಂಡಿದ್ದರು. ಆಗ ಹೆಂಗಸರು, ಮುದುಕರು ಅಲ್ಲಿ ಓಡಾಡಿಕೊಂಡಿದ್ದುದನ್ನು, ಕೆಲಸ ಮಾಡುತ್ತಿದ್ದುದನ್ನು ಗಮನಿಸಿದ್ದರು.
ಸೋಜನಿಗೆ ಸೆಮಿನರಿಯ ಬಗ್ಗೆ, ತನ್ನ ಮತದ ಬಗ್ಗೆ ಮಾತನಾಡುವುದೆಂದರೆ ಎಲ್ಲಿಲ್ಲದ ಆಸಕ್ತಿ. ಪರಜಾತಿಯವರನ್ನು ತಮ್ಮ ಮತಕ್ಕೆ ಸೇರಿಸುವುದು ಧರ್ಮಕಾರ್ಯ, ಇದರಿಂದ ತನಗೆ ಪರಲೋಕದಲ್ಲಿ ಒಳ್ಳೆಯದಾಗುತ್ತದೆ ಎಂದು ಹೇಳುತ್ತಿದ್ದ. ಭಂಡಾರಿ ಅವನನ್ನು ಕೂರಿಸಿಕೊಂಡು ಸೆಮಿನರಿಯ ಬಗ್ಗೆ ವಿಚಾರಿಸಿದರು. ಅಲ್ಲಿ ಬಡವರನ್ನು, ವಯಸ್ಸಾದವರನ್ನು ನೋಡಿಕೊಳ್ಳುವ ಬಗ್ಗೆ ಕೇಳಿ ತಿಳಿದುಕೊಂಡರು. ಅವನ ಜೊತೆ ಸೆಮಿನರಿಗೆ ಹೋಗಿ ಬಂದರು. ಆದರೆ ತಾನು ಯಾಕೆ ಹೀಗೆ ಮಾಡುತ್ತಿದ್ದೇನೆ ಎಂದು ಸೋಜನಿಗೆ ತಿಳಿಸಲಿಲ್ಲ.
ತನ್ನ ನಿರ್ಧಾರವನ್ನು ಪೂವಮ್ಮನಿಗೆ ತಿಳಿಸುವುದು ಕಷ್ಟ ಎಂದು ಅವರಿಗೆ ಗೊತ್ತಿತ್ತು. ಮಗಳ ಕಷ್ಟ ಪರಿಹಾರವಾಗುವುದಾದರೆ ಅವಳು ಒಪ್ಪಬಹುದು ಎಂದುಕೊಂಡರು. ಅಂಗಡಿ, ಮನೆ ಮಾರಿದರೆ ಈಗಿನ ದರದಲ್ಲಿ ಸಾಕಷ್ಟು ದುಡ್ಡು ಸಿಗುತ್ತದೆ. ಅದರಲ್ಲಿ ಸೀತಾರಾಮನ ಸಾಲ ತೀರಿಸಬಹುದು. ಉಳಿದ ಹಣದಲ್ಲಿ ಮಗಳ ಜೀವನಕ್ಕೆ ಅನುಕೂಲ ಮಾಡಿಕೊಬಹುದೆಂದು ಹೆಂಡತಿಗೆ ಹೇಳಿದರು.
‘ಅದೆಲ್ಲಾ ಸರಿ. ಎಲ್ಲಾ ಮಾರಿದ ಮೇಲೆ ನಾವೇನು ಮಾಡುವುದು?ʼ ಪೂವಮ್ಮ ಪ್ರಶ್ನಿಸಿದರು. ಏನು ಮಾಡುವುದೆಂದು ಭಂಡಾರಿ ತೀರ್ಮಾನಿಸಿ ಆಗಿತ್ತು. ಆದರೆ ಹೆಂಡತಿಗೆ ಹೇಳುವುದು ಹೇಗೆ?
‘ಸೆಮಿನರಿಗೆ ಸೇರೋಣʼ ಎಂದು ನಿಧಾನವಾಗಿ ಹೇಳಿದರು.
‘ಅಂದರೆ ಜಾತಿ ಬಿಟ್ಟು!ʼ ಪೂವಮ್ಮ ಹೌಹಾರಿದರು.
‘ಬೇರೆ ದಾರಿ ಏನಿದೆ ಹೇಳು?ʼ ಎಂದು ಹೇಳಿ ಭಂಡಾರಿ ಸುಮ್ಮನಾದರು.
ಪೂವಮ್ಮ ಕೆಲವು ದಿನ ಮಾತೇ ಆಡಲಿಲ್ಲ. ಅವಳ ಮನಸ್ಸಿನ ತುಮುಲ ಭಂಡಾರಿಯವರಿಗೆ ಅರ್ಥವಾಗುತ್ತಿತ್ತು. ಹೇಳಿದ್ದಾಯಿತು. ಮುಂದೆ ಅವಳು ಏನು ಹೇಳುತ್ತಾಳೋ ಹಾಗೆ ಎಂದುಕೊಂಡು ಕಾದರು… ಕಾದರು.
ಪೂವಮ್ಮ ಸಮ್ಮತಿಸಬೇಕಾದರೆ ಸೀತಾರಾಮನ ಮಗಳ ಮದುವೆಗೆ ಮೂರು ದಿನ ಮಾತ್ರ ಉಳಿದಿತ್ತು. ಸೀತಾರಾಮನಿಗೆ ದುಡ್ಡು ಕೊಟ್ಟಾಗ ಅವನಿಗೆ ಆಶ್ಚರ್ಯ. ‘ಎಲ್ಲಿಂದ ತಂದೆ ಇಷ್ಟು ಹಣ! ಈಗ ಏನು ಅವಸರ?ʼ ಎಂದು ಗೆಳೆಯನ ಪರಿಸ್ಥಿತಿ ಅರಿತಿದ್ದ ಅವನು ವಿಚಾರಿಸಿದ. ಅಂಗಡಿ, ಮನೆ ಮಾರಿದ ವಿಷಯ ಅವನಿಂದ ಮುಚ್ಚಿಟ್ಟರು. ಪೂವಮ್ಮನ ಒಡವೆ ಒಂದಷ್ಟು ಉಳಿದಿತ್ತು ಅದನ್ನು ಮಾರಿದೆ ಎಂದು ಹೇಳಿದರು.
ತಲಪಾಡಿಯಲ್ಲಿ ಬಸ್ಸು ನಿಲ್ಲುವ ಜಾಗದಲ್ಲಿ ಅಂಗಡಿ ಕೊಂಡು ವಿಶ್ವನಾಥನನ್ನು ಕೂರಿಸಿದರು. ಕೆಲವು ದಿನ ಅಂಗಡಿಯಲ್ಲಿ ಕೂತಿದ್ದು ವಿಶ್ವನಾಥನಿಗೆ ವ್ಯವಹಾರ ಹೇಳಿಕೊಟ್ಟರು. ಉಳಿದ ಹಣವನ್ನು ಮಗಳ ಹೆಸರಿನಲ್ಲಿ ಬ್ಯಾಂಕಿನಲ್ಲಿಟ್ಟರು.
‘ನಿನಗೆ ತೃಪ್ತಿಯಾಗುವಷ್ಟು ದಿನ ಇದ್ದು ಬಾʼ ಎಂದು ದೇಜಪ್ಪ ಭಂಡಾರಿ ಪೂವಮ್ಮಳನ್ನು ಮಗಳ ಮನೆಗೆ ಕಳುಹಿಸಿದರು. ಪೂವಮ್ಮ ಮೊಮ್ಮಗನನ್ನು ಆಡಿಸಿ ಸಂತೋಷ ಪಟ್ಟರು. ಮಗಳ ಬದುಕು ಸರಿ ಹೋಗಿದ್ದು, ಅವಳ ಮುಖದಲ್ಲಿ ಮತ್ತೆ ನಗು ಮೂಡಿದ್ದು ನೋಡಿ ಅವರಿಗೆ ನೆಮ್ಮದಿಯಾಯಿತು. ಮಗಳ ಮನೆಯಿಂದ ಹೊರಟಾಗ ತಮ್ಮ ಮುಂದಿನ ದಾರಿ ಏನು ಎನ್ನುವುದನ್ನು ಅವರು ಹೇಳಲಿಲ್ಲ. ಅಮ್ಮನ ಕಣ್ಣಲ್ಲಿ ನೀರಾಡುತ್ತಿದ್ದುದನ್ನು ಕಂಡು ಜಲಜಾಕ್ಷಿ ‘ಯಾಕಮ್ಮ ಕಣ್ಣೀರು?ʼ ಎಂದು ಕೇಳಿದಳು. ಪೂವಮ್ಮ ಏನೂ ಹೇಳಲಿಲ್ಲ.
ವರ್ತಮಾನ
ಈ ಕತೆಯನ್ನು ಬರೆಯಬೇಕೆಂದು ಯಶೋಧರ ಬಹಳ ದಿನಗಳಿಂದ ಅಂದುಕೊಂಡಿದ್ದ. ಆದರೆ ಈ ಕತೆಯ ಮುಖ್ಯ ವ್ಯಕ್ತಿ ದೇಜಪ್ಪ ಭಂಡಾರಿ ಬದುಕಿರುಔಾಗ ಈ ಕತೆ ಪ್ರಕಟವಾಗುವುದು ಅವನಿಗೆ ಇಷ್ಟವಿರಲಿಲ್ಲ. ಯಶೋಧರ, ದೇಜಪ್ಪ ಭಂಡಾರಿಯವರ ಗೆಳೆಯ ಸೀತಾರಾಮನ ಮಗಳ ಗಂಡ. ತನ್ನ ಮದುವೆಯಲ್ಲಿ ದೇಜಪ್ಪ, ಹೆಂಡತಿಯೊಂದಿಗೆ ಸಡಗರದಿಂದ ಓಡಾಡಿಕೊಂಡಿದನ್ನು ನೋಡಿದ್ದ. ಆ ಮೇಲೆ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದು ತಿಳಿದು ಬಂತು. ಅವರ ಜೀವನ ವೃತ್ತಾಂತ ಹೆಂಡತಿಯಿಂದ, ಮಾವನಿಂದ ತಿಳಿದಿತ್ತು.
ಬರಹಗಾರ, ವೈಚಾರಿಕ ಮನೋಭಾವದ ಯಶೋಧರನಿಗೆ ದೇಜಪ್ಪನವರ ಮನಃಸ್ಥಿತಿಯನ್ನು ತಿಳಿದುಕೊಳ್ಳುವ ಕುತೂಹಲವಿತ್ತು. ಹೊಸ ಬದುಕಿಗೆ ಅವರು ಹೊಂದಿಕೊಂಡರೆ? ಇಳಿಗಾಲದಲ್ಲಿ ತಮ್ಮ ಸಂಪ್ರದಾಯಗಳನ್ನು ಅವರು ಹೇಗೆ ಮೀರಿದರು? ಇವೆಲ್ಲಾ ಪ್ರಶ್ನೆಗಳು ಅವನನ್ನು ಕಾಡುತ್ತಿದ್ದವು. ಡೇವಿಡ್(ದೇಜಪ್ಪನವರ ಮತಾಂತರದ ಮೇಲಿನ ಹೆಸರು) ಯಾರ ಜೊತೆಗೂ ಮಾತನಾಡುವುದಿಲ್ಲ. ಮಗಳು ಅಳಿಯ ಹೋದಾಗಲೂ ಸುಮ್ಮನೆ ಕೂತಿದ್ದರು ಎಂದು ಅವನ ಮಾವ ಹೇಳಿದ ಮೇಲೆ ಅಪರಿಚಿತನಾದ ತಾನು ಹೋಗಿ ಅವರಿಗೆ ಹಿಂಸೆ ಕೊಡುವುದು ಸರಿಯಲ್ಲವೆಂದು ಸುಮ್ಮನಾಗಿದ್ದ.
ಡೇವಿಡ್ರ ಹೆಂಡತಿ ಸತ್ತಾಗ ಯಾರಿಗೂ ತಿಳಿಸಲಿಲ್ಲ. ಗೊತ್ತಾದ ಮೇಲೆ ಮಗಳು, ಅಳಿಯ ಹೋಗಿ ಅತ್ತು ಬಂದರು. ಡೇವಿಡ್ ಹೆಂಡತಿಯನ್ನು ಹೂಳಿದ ಜಾಗದಲ್ಲಿ ಕಲ್ಲಿನಂತೆ ಕೂತಿದ್ದರಂತೆ. ಹೊಸದಾಗಿ ಮತಕ್ಕೆ ಸೇರಿದವರಿಗೆ ತಾರತಮ್ಯ ಮಾಡುತ್ತಾರಂತೆ; ನವ ಕ್ರೈಸ್ತರ ದಫನಕ್ಕೆ ಬೇರೇ ಜಾಗ. ಅಮ್ಮನಿಗೆ ಸರಿಯಾಗಿ ಸಂಸ್ಕಾರ ಮಾಡಲಿಲ್ಲ ಎಂದು ಮಗಳು ಹಲುಬುತ್ತಿದ್ದಳು.
ಸೆಮಿನರಿ ಮನೆಯ ಮುಂದೆ ಕೈ ತೋಟ ಮಾಡಿ ಡೇವಿಡ್ ಹೂ, ತರಕಾರಿ ಬೆಳೆಯುತ್ತಿದ್ದರು. ಇಡೀ ಸೆಮಿನರಿಯಲ್ಲಿ ಕೋಳಿ ಸಾಕಣೆ ಮಾಡುತ್ತಿದ್ದುದು ಅವರೊಬ್ಬರೇ. ಬೆನ್ನು ಬಗ್ಗಿ, ಕೋಲು ಹಿಡಿದು ನಡೆಯುತ್ತಿದ್ದ ಮುದುಕ ಡೇವಿಡ್ ಬಂದವರಿಗೆ ಮೊಟ್ಟೆ ಕೊಟ್ಟು ಕಳಿಸುತ್ತಿದ್ದರಂತೆ.
ಡೇವಿಡ್ ತೀರಿಕೊಂಡ ದಿನ ಯಶೋಧರ ಮಾವನ ಮನೆಯಲ್ಲಿದ್ದ. ಅಂದು ಭಾನುವಾರ. ಚರ್ಚಿಗೆ ಹೋದವರು ಡೇವಿಡ್ ತೀರಿಕೊಂಡ ಸುದ್ದಿ ತಂದರು. ಯಶೋಧರ ಮಾವನೊಂದಿಗೆ ಚರ್ಚಿಗೆ ಹೋಗಿ ಕೊನೆಯ ಕೆಲಸದಲ್ಲಿ ಪಾಲ್ಗೊಂಡ. ಎಲ್ಲಾ ತೀರಿಸಿ ಬರಬೇಕಾದರೆ ಡೇವಿಡ್ ವಾಸಿಸುತ್ತಿದ್ದ ಮನೆಗೆ ಹೋದರು.
ಚಿಕ್ಕ ಮನೆ. ಒಂದು ಹಾಲ್ ಮತ್ತು ಅಡುಗೆ ಮನೆ ಇತ್ತು. ಹಾಲಿನಲ್ಲಿ ಒಂದು ಮೇಜು ಮತ್ತು ಎರಡು ಕುರ್ಚಿ ಹಾಕಿದ್ದರು. ಮಲಗಲು ಮರದ ಬೆಂಚು ಇತ್ತು.
ಗೋಡೆಗೆ ಹಲಗೆ ಹೊಡೆದು ಅದರಲ್ಲಿ ಕ್ರಿಸ್ತನ ಮೂರ್ತಿಯನ್ನು ಇಡಲಾಗಿತ್ತು. ಡೇವಿಡ್ ನಿತ್ಯ ಪ್ರಾರ್ಥನೆ ಮಾಡುತ್ತಿದ್ದ ಯೇಸುಕ್ರಿಸ್ತ. ಯಶೋಧರ ಕ್ರಿಸ್ತನ ಶಿರವನ್ನು ಸುತ್ತಿದ ಮುಳ್ಳಿಗೆ ಹುಂಜದ ಪುಕ್ಕ ಸಿಕ್ಕಿಸಿರುವುದನ್ನು ಗಮನಿಸಿದ. ಅದರಲ್ಲಿ ಏನೋ ವಿಶೇಷತೆ ಇದೆ ಅನ್ನಿಸಿತು. ಫಾದರ್ ಅನುಮತಿ ಪಡೆದು ಯಶೋಧರ ಆ ಮೂರ್ತಿಯನ್ನು ಪಡೆದುಕೊಂಡ. ತನ್ನ ಮನೆಗೆ ತಂದು ತಾನು ಬರೆಯುವ ಮೇಜಿನ ಮೇಲಿರಿಸಿದ.

ದೇಜಪ್ಪ ಭಂಡಾರಿ ಅಲಿಯಾಸ್ ಡೇವಿಡ್, ಕ್ರಿಸ್ತನ ಮೂರ್ತಿಗೆ ಹುಂಜದ ಪುಕ್ಕವನ್ನು ಯಾಕೆ ಸಿಕ್ಕಿಸಿದ್ದಾರೆ? ಇದು ಉರಿಯನ ಪುಕ್ಕವೇ? ಅವರ ಕೋಳಿ ಅಂಕದ ಹುಚ್ಚಿನ ಸಂಕೇತವೇ? ಹುಂಜದ ಪುಕ್ಕ ಅವರಿಗೆ ನವಿಲು ಗರಿಯಂತೆ ಕಾಣುತ್ತಿತ್ತೇ? ಯಶೋಧರ ಯೋಚಿಸುತ್ತಿರಬೇಕಾದರೆ ಫಕ್ಕನೇ ಅವನಿಗೆ ಹೊಳೆಯಿತು: ದೇಜಪ್ಪ ಭಂಡಾರಿಗೆ ಈ ಮೂರ್ತಿ ಕ್ರಿಸ್ತ, ಕೃಷ್ಣ?

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


