“ನೋಡು, ಡ್ಯಾಡಿ, ಬದಲಾವಣೆ ಅಂದರೆ, ಪ್ರಧಾನ ಮಂತ್ರಿಗಳ, ಸರ್ಕಾರಗಳ, ರಾಜಕೀಯ ಪಕ್ಷಗಳ ಬದಲಾವಣೆ ಅಲ್ಲ. ನಮ್ಮ, ನಮ್ಮ ಮನೆ, ಮನಸ್ಸುಗಳಲ್ಲಿ ಆಗುತ್ತಿರುವ ಬದಲಾವಣೆಗಳು. ಅದಕ್ಕೆ ನಮ್ಮ ಪ್ರತಿರೋಧ, ಹೊಂದಾಣಿಕೆ ಇವುಗಳನ್ನು ಅರ್ಥ ಮಾಡಿಕೊಳ್ಳುವುದು ಕೂಡ ಮುಖ್ಯ. ಮಕ್ಕಳ ಲಾಲನೆ, ಪಾಲನೆ ಹೆಂಗಸರ ಕರ್ತವ್ಯ ಮಾತ್ರ ಎಂಬ ಧೋರಣೆಯೇ ಬದಲಾಗಬೇಕು, ಬದಲಾಗುತ್ತಿದೆ. ಭಾರತದಲ್ಲಿ ಕಾಣಬರುವ ಮಾತೃತ್ವದ ಪರಿಕಲ್ಪನೆ ಇಲ್ಲಿಲ್ಲದಿರಬಹುದು. ಆದರೆ ಒಟ್ಟು ಸಮಾಜವೇ ಮಾತೃಸ್ವರೂಪಿಯಾಗಿದೆ.”
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಏಳನೆಯ ಬರಹ
ಪ್ರವಾಸದ ಸಂದರ್ಭದಲ್ಲಿ ನಾವು ಹೊಸದಾಗಿ ನೋಡುವುದು, ಕಲಿಯುವುದು ಎಷ್ಟಿರುತ್ತದೆ ಅನ್ನುವುದು ಪ್ರವಾಸಿಗಳ ವೈಯಕ್ತಿಕ ಆಯ್ಕೆ. ಅದಕ್ಕಿಂತ ಮುಖ್ಯವಾಗಿ ನಾವು ನಮ್ಮ ಪೂರ್ವಗ್ರಹಗಳನ್ನು ತಿದ್ದಿಕೊಳ್ಳುವ, ತಪ್ಪೊಪ್ಪಿಕೊಳ್ಳುವ, ನಾಚಿಕೆಪಟ್ಟಿಕೊಳ್ಳುವ ಸಂಗತಿಗಳು, ಅವಕಾಶಗಳು ಕೂಡ ಅಷ್ಟೇ ಇರುತ್ತವೆ ಎಂಬುದನ್ನು ನಾನು ಅನುಭವದಿಂದ ಕಂಡುಕೊಂಡಿದ್ದೇನೆ. ನಾವು ಪವಿತ್ರ, ಕಾಲಾತೀತ, ಪ್ರೌಢ ಎಂದು ನಂಬಿಕೊಂಡು ಬಂದಿರುವ ವಿಚಾರಗಳು, ಸಂಗತಿಗಳೆಲ್ಲ ಎಷ್ಟೋ ಸಲ ಬಾಲಿಶವಾಗಿರುತ್ತವೆ, ತೀವ್ರ ಪೂರ್ವಗ್ರಹದಿಂದ ಕೂಡಿರುತ್ತವೆ ಎಂದು ತಳಬುಡವೆಲ್ಲ ಅಲ್ಲಾಡಿ ನಮಗೇ ನಾಚಿಕೆಯಾಗುತ್ತದೆ. ನಾವು ಸ್ವಲ್ಪ ಬದಲಾಗುತ್ತೇವೆ ಕೂಡ. ಆದರೆ ನಮ್ಮ ಗ್ರಹಿಕೆ, ವಿಚಾರವೆಲ್ಲ ಬಾಲಿಶವಾಗಿತ್ತು, ನಾವು ಈಗ ತಿದ್ದುಕೊಂಡಿದ್ದೇವೆ ಎಂದು ಸಾರ್ವಜನಿಕವಾಗಿ ಒಪ್ಪಿಕೊಳ್ಳುವ ಪ್ರಾಂಜಲತೆ ನಮಗಿರುವುದಿಲ್ಲ. ಇನ್ನೊಬ್ಬರಿಗೆ ಹೇಳುವುದಿರಲಿ, ನಮಗೂ ಕೂಡ ನಾವು ಹೇಳಿಕೊಳ್ಳುವುದಿಲ್ಲ. ಹಾಗೆಲ್ಲ ನಿವೇದಿಸಿಕೊಳ್ಳಲು ಕೂಡ ಒಂದು ರೀತಿಯ ಭಯ. ನಾನು ಕೂಡ ಈ ತರದವನೇ. ಆದರೆ ಎರಡು ಸಂಗತಿಗಳ ಬಗ್ಗೆ ನನಗೆ ಬರವಣಿಗೆಯಲ್ಲಿ ತಪ್ಪೊಪ್ಪಿಗೆ ಹೇಳಬೇಕೆನಿಸಿದೆ.
*****
ವಿದೇಶಗಳ ನಾಗರಿಕರು ಅಥವಾ ಅಲ್ಲಿಗೆ ಹೋಗುವ ಭಾರತೀಯರ ಬದುಕು ಯಾಂತ್ರಿಕ, ನೀರಸ. ದಿನದುದ್ದಕ್ಕೂ ಯಾಂತ್ರಿಕವಾಗಿ ದುಡಿಯುತ್ತಾರೆ. ದುಡಿಯುವುದು, ಸಂಪಾದಿಸುವುದು ಮಾತ್ರವೇ ಅವರ ಗುರಿ. ಕುಟುಂಬ, ಪ್ರೀತಿ, ಪ್ರೇಮ, ಕಾಳಜಿ, ಇವೆಲ್ಲ ಇವರಿಂದ ದೂರ. ಬದುಕೇ ನೀರಸ. ಮನೆ ಕೂಡ ಕಾರ್ಖಾನೆಯಂತಿರುತ್ತದೆ. ನಾನಾ ರೀತಿಯ ಉಪಕರಣಗಳಿಂದ ತುಂಬಿರುತ್ತದೆ. ಮನೆ ಒಳಗೆ ಇರುವ ಕುಟುಂಬದ ಸದಸ್ಯರು ಪರಸ್ಪರ ಒಡನಾಡುವುದಿಲ್ಲ. ನಮ್ಮ ಭಾರತದಲ್ಲಿ ಎಲ್ಲವೂ ಜೀವಂತ, ಪ್ರೌಢ, ಕೌಟುಂಬಿಕ ಪ್ರೀತಿ, ಒತ್ತಾಸೆ ಎಲ್ಲವೂ ಗಾಢವಾಗಿರುತ್ತದೆ, ಮಾನವೀಯವಾಗಿರುತ್ತದೆ. ನಾವು ಸಾಂಸ್ಕೃತಿಕ ಹೆಗ್ಗಳಿಕೆಯವರು.
ಈ ನಂಬಿಕೆ ವಿಚಾರಗಳನ್ನು ಆಧರಿಸಿ ನಾನು ನನ್ನ “ಅಮೆರಿಕದಲ್ಲಿ ಬಸವನಗುಡಿ” ಪ್ರವಾಸ ಕಥನದಲ್ಲಿ ಒಂದು ಅಧ್ಯಾಯವನ್ನು ಬರೆದೆ. “ಒಂದು ದಿನದ ಲಯ” ಎಂಬುದು ಈ ಅಧ್ಯಾಯದ ಶೀರ್ಷಿಕೆ. ಮನೆ ಒಳಗಿಂದಲೇ ಕೆಲಸ ಮಾಡುವ ಕುಟುಂಬದ ಚಿತ್ರಣವದು. ಈ ಚಿತ್ರಣದಲ್ಲಿ ಸುಳ್ಳಿಲ್ಲ ಆದರೆ ಈಗ ಅನಿಸುತ್ತದೆ, ಈ ಬರವಣಿಗೆ ಒಮ್ಮುಖವಾದದ್ದು, ಬರವಣಿಗೆ ಪರಿಣಾಮಕಾರಿಯಾಗಿರಲೆಂದು ಉತ್‌ಪ್ರೇಕ್ಷೆಯಿಂದ ಕೂಡಿದುದು ಎಂದು.
ಅದೊಂದು ಬುಧವಾರ. ಸಂಜೆ ನಮ್ಮ ಅಳಿಯ ಪೋರ್ಚುಗಲ್‌ಗೆ ಹೋಗಬೇಕು. ಹೊರಡುವ ಮುನ್ನ ದಿನದುದ್ದಕ್ಕೂ ಮನೆಯಿಂದಲೇ ಕೆಲಸ ಮಾಡಬೇಕು. ನನ್ನ ಮಗಳು ಕೂಡ ಮನೆಯಿಂದ ನಲವತ್ತು ಮೈಲಿ ದೂರವಿರುವ ಕಛೇರಿಗೆ ಹೋಗಿ ಸಭೆಗಳಲ್ಲಿ ಭಾಗವಹಿಸಲೇಬೇಕಾದ ಅನಿವಾರ್ಯತೆ. ಎಷ್ಟು ಹೊತ್ತಿಗೆ ಅವಳು ವಾಪಸ್ ಬರುವುದೋ ಗೊತ್ತಿಲ್ಲ. ಮಗನ ಶಾಲೆ, ಈಜು ತರಗತಿ, ಮಗಳ Day Care Centre ಯಾವುದಕ್ಕೂ ಚ್ಯುತಿ ಬರಬಾರದು. ಇದನ್ನೆಲ್ಲ ನಿಭಾಯಿಸುವುದು ಹೇಗೆ? ನಾನು, ನನ್ನ ಹೆಂಡತಿ ಮನೆಯ ಹೊರಗಿನ ಬದುಕಿಗೆ ಯಾವ ರೀತಿಯಲ್ಲೂ ನೆರವಾಗಲು ಬಲ್ಲವರಲ್ಲ. ಮೂರು ನಾಲ್ಕು ದಿನದಿಂದಲೇ ಇದನ್ನೆಲ್ಲ ಹೇಗೆ ನಿಭಾಯಿಸಬೇಕೆಂಬ ಚರ್ಚೆ ಪ್ರಾರಂಭ.
ಮಕ್ಕಳು ಹೆಸರಿಗೆ ಮಕ್ಕಳು. ಅವರ ಜೀವನ ಶೈಲಿ ಸಂಕೀರ್ಣ. ಮೊಮ್ಮಗನನ್ನು ಎಂಟು ಘಂಟೆಗೆ ಸ್ಕೂಲಿಗೆ ಕಳಿಸಬೇಕಾದರೆ ಬೆಳಿಗ್ಗೆ ಆರು ಘಂಟೆಯಿಂದಲೇ ತಯಾರಿ ಪ್ರಾರಂಭ. ಅವನ ಮನೆ ತಿಂಡಿ, ಸ್ಕೂಲು ತಿಂಡಿ, ಊಟ ಎಲ್ಲವೂ ತಯಾರಾಗಬೇಕು. ಸ್ಕೂಲಿಂದ ವಾಪಸ್ ಬರುವ ಹೊತ್ತಿಗೆ ಬಿಸಿ ಊಟ ರೆಡಿಯಾಗಿರಬೇಕು. ಈಜು ತರಬೇತಿ ಮುಗಿಸಿ ಬರುವ ಹೊತ್ತಿಗೆ ಸಂಜೆಯ ತಿಂಡಿ ರೆಡಿಯಾಗಬೇಕು.
ಬಿಡುವಿಲ್ಲದ ಈ ದಿನಚರಿ ನನಗೆ ತಿಳಿದಿದೆಯೆಂಬಂತೆ ಮೊಮ್ಮಗಳು ಬೆಳಿಗ್ಗೆ ಎಲ್ಲರಿಗಿಂತ ಮುಂಚೆ ಎದ್ದು ನಾನಾ ಚಟುವಟಿಕೆ, ಚೇಷ್ಟೆಗಳಲ್ಲಿ ತೊಡಗಿ, ಎಲ್ಲರ ಗಮನವನ್ನೂ ಬೇಡುತ್ತಾಳೆ. ಅವಳ ಊಟ, ತಿಂಡಿ, ಆಟ, ನಿದ್ದೆ, ಯಾವುದರಲ್ಲೂ ನಿಶ್ಚಯವಿಲ್ಲ. ಯಾವಾಗ ಯಾವುದು ಬೇಕಾದರೂ ಆಗಬಹುದು, ಆಗದೆ ಇರಬಹುದು. ಎತ್ತಿಸಿಕೊಳ್ಳಲು, ಆಟವಾಡಿಸಿಕೊಳ್ಳಲು, ಮಲಗಲು, ಇಷ್ಟ ಬಂದಂತೆ, ಇಷ್ಟವಾದಷ್ಟು ರಚ್ಚೆ ಹಿಡಿಯಬಹುದು. ಯಾವ ಕ್ಷಣದಲ್ಲಿ ಯಾರ ಬಳಿಯಾದರೂ ಹೋಗಬಹುದು, ಹೋಗದೆ ಇರಬಹುದು.
ಇದೆಲ್ಲವನ್ನೂ ಹೇಗೆ ಹೇಗೋ ನಿರ್ವಹಿಸಿ ನನ್ನ ಮಗಳು ಕಛೇರಿಗೆ ಹೋಗಲು ಆತುರಾತುರವಾಗಿ ರೆಡಿಯಾಗಬೇಕು. ಸ್ನಾನ, ತಿಂಡಿ, Functional ಶೃಂಗಾರ, ಸ್ಟೇಶನ್‌ಗೆ ನಡೆದುಕೊಂಡು ಹೋಗುವುದು ಎಲ್ಲದರಲ್ಲೂ ಧಾವಂತ. ವಾಪಸ್ ಬರುವುದು ಎಷ್ಟು ಹೊತ್ತಿಗೋ ಹೇಳಲಾಗುವುದಿಲ್ಲ. ವಾಪಸ್ ಬರುವ ಹೊತ್ತಿಗೆ ಮೊಮ್ಮಗಳು Day Care Centre ನಿಂದ ಹಿಂತಿರುಗಿ ಬಂದಿರುತ್ತಾಳೆ. ಆದರೆ ತಂದೆ ವಿಮಾನ ನಿಲ್ದಾಣಕ್ಕೆ ಹೊರಡುವಾಗ ಮಗಳು ಎದುರಿಗೆ ಇರಬಾರದು. ಇದ್ದರೆ ನಾನೂ ಬರುವೆನೆಂದು ಹಠ ಹಿಡಿದರೆ ಮತ್ತೆ ಅವಳನ್ನು ಸಾವರಿಸಲು ಗಂಟೆಗಳೇ ಬೇಕಾಗುತ್ತವೆ. ತಂದೆ-ತಾಯಿ ಯಾರಾದರೂ ಒಬ್ಬರು ಅವಳ ಜೊತೆಯಲ್ಲಿ ಇರಬೇಕು. ತಾತ-ಅಜ್ಜಿ ಕೇವಲ Value Addition ಅಷ್ಟೇ. ಅಳಿಯ ವಿಮಾನ ನಿಲ್ದಾಣಕ್ಕೆ ಹೊರಡುವ ಹೊತ್ತಿಗೆ ಮಗಳಿಗೆ ವಾಪಸ್ ಬರಲು ಸಾಧ್ಯವಾಗುವುದೋ ಇಲ್ಲವೋ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ಬರಲು ಸಾಧ್ಯವಾಗದೆ ಹೋದರೆ ಏನು ಮಾಡಬೇಕು? ಹಿರಿಯರಾದ ನಾವು ಮೊಮ್ಮಗಳನ್ನು ಸಮೀಪದ ಪಾರ್ಕ್‌ಗೆ ಕರೆದುಕೊಂಡು ಹೋಗಿ ಮನೆಯನ್ನು, ತಂದೆ-ತಾಯಿಗಳನ್ನು ಕೊಂಚ ಹೊತ್ತು ಮರೆಸಬೇಕು. ನಾವು ಪಾರ್ಕಿನಿಂದ ಬರುವ ಹೊತ್ತಿಗೆ ತಾಯಿ ಕೆಲಸದಿಂದ ವಾಪಸ್ ಬಂದಿರುತ್ತಾಳೆ. ತಂದೆ ವಿಮಾನ ನಿಲ್ದಾಣಕ್ಕೆ ಹೊರಟಿರುತ್ತಾರೆ. ಇದೆಲ್ಲವೂ ಕ್ಷಣ ಕ್ಷಣದಲ್ಲಿ precise ಆಗಿ ಆಗಬೇಕು. ಆಗುವ ತನಕ ಎಷ್ಟೊಂದು ಚರ್ಚೆ, ಎಷ್ಟೊಂದು ಆತಂಕ.
ಆವತ್ತು ನಮ್ಮ ಅದೃಷ್ಟ ಚೆನ್ನಾಗಿತ್ತು. ನಾವು ಮೊಮ್ಮಗಳೊಡನೆ ಪಾರ್ಕಿಗೆ ಹೊರಡುವುದಕ್ಕೂ, ಮಗಳು ರಸ್ತೆಯ ಕೊನೆಯಲ್ಲಿ ಕಾಣಿಸಿಕೊಳ್ಳುವುದಕ್ಕೂ ಸರಿ ಹೋಯಿತು. ಎಲ್ಲರೂ ಒಟ್ಟಿಗೇ ಒಂದು ದೀರ್ಘ ನಿಟ್ಟುಸಿರು ಬಿಟ್ಟೆವು.
ಮೊಮ್ಮಗಳಿಗೆ ರಾತ್ರಿ ಹೊತ್ತು ತಂದೆ ಜೊತೆ ಮಲಗಿಯೇ ಅಭ್ಯಾಸ. ತಂದೆ ಪ್ರವಾಸ ಹೋಗುವುದು ಉದ್ಯೋಗದ ದೃಷ್ಟಿಯಿಂದ ಅನಿವಾರ್ಯ ಎಂದು ಒಂದು ಮುಕ್ಕಾಲು ವರ್ಷದ ಮಗುವಿಗೆ ಒಪ್ಪಿಸುವುದು ಹೇಗೆ? ಇಂತಹ ದಿನಗಳಲ್ಲಿ ಮಗುವನ್ನು ಮಲಗಿಸಲೇ ಎರಡು-ಮೂರು ಘಂಟೆ ಬೇಕಾಗುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ಫಲಿತಾಂಶ ಯಾವ ದಿಕ್ಕಿನಲ್ಲಿರುತ್ತದೆ ಎಂದು ಹೇಳುವ ಹಾಗಿಲ್ಲ. ಇದೆಲ್ಲದರ ಮಧ್ಯೆ ಮೊಮ್ಮಗನನ್ನು ನಾಳೆ ಸ್ಕೂಲಿಗೆ ಕಳಿಸುವ ತಯಾರಿಯನ್ನು ಈವತ್ತು ರಾತ್ರಿಯಿಂದಲೇ ಶುರುಮಾಡಿಕೊಳ್ಳಬೇಕು.
ಇಷ್ಟನ್ನೂ ಮಗಳು ಅಳಿಯ ದೌಡಾಯಿಸಿಕೊಂಡೇ ಮಾಡಿದರು. ಮುಂದೆಯೂ ಮಾಡುತ್ತಾರೆ. ವಾರದಲ್ಲಿ ಎರಡು ಮೂರು ದಿವಸವಾದರೂ ದೈನಿಕದ ಲಯ ಹೀಗೇ ಇರುತ್ತದೆ.
ವಿದ್ಯೆಗೆಂದು, ಉದ್ಯೋಗಕ್ಕೆಂದು ವಿದೇಶಗಳಿಗೆ ಹೋಗುವುದು ಮುಂದಿನ ತಲೆಮಾರಿನವರ ಆಯ್ಕೆ. ಆದರೆ ಈ ತರಾತುರಿ, ಗಡಿಬಿಡಿ, ಉದ್ವೇಗ, ಇದೆಲ್ಲ ಅವರು ಬಯಸಿದ್ದಲ್ಲ. ಇಲ್ಲಿ ಬದುಕುವ ಭಾಗವಾಗಿ ಬಂದ ಲಯ.
ಇದರಲ್ಲಿ ಯಾಂತ್ರಿಕವಾದದ್ದು ಏನೂ ಇಲ್ಲ. ಅದು ಪ್ರತಿದಿನದ, ಪ್ರತಿಕ್ಷಣದ, ಪ್ರತಿ ಕುಟುಂಬದ ಹೋರಾಟ. ಗಂಡ ಒಬ್ಬನೇ ಕೆಲಸ ಮಾಡುತ್ತಾ, patriarchyಯ ಎಲ್ಲ ಮೌಲ್ಯಗಳನ್ನು ಮನೆಯಲ್ಲಿ ಆಚರಿಸುತ್ತಾ, ಬದುಕಿದ ನನ್ನ ತಲೆಮಾರಿನವರಿಗೆ, ಇದೆಲ್ಲ ಯಾಂತ್ರಿಕ ಲಯವಾಗಿ ಕಾಣಬಹುದು, ಕಾಣುತ್ತದೆ. ಆದರೆ ಹಾಗೆ ಕಾಣುವುದು ತಪ್ಪು. ನಗರೀಕರಣ, ಹೆಂಗಸರ ಉದ್ಯೋಗಶೀಲತೆ, ಹೊಸ ಕೌಟುಂಬಿಕ ಶೈಲಿ, ಇವುಗಳನ್ನು ಗ್ರಹಿಸಲಾಗದ, ಒಪ್ಪಲಾಗದ ಮನಸ್ಸಿಗೆ ಇದೆಲ್ಲ ಯಾಂತ್ರಿಕವಾಗಿ ಕಾಣುತ್ತದೆ. ಯಾಂತ್ರಿಕತೆ ಇಲ್ಲವೆಂದಲ್ಲ. ಆದರೆ ಅದನ್ನೇ ಮುಂದೆ ಮಾಡಿ, ಮಕ್ಕಳ ಕೌಟುಂಬಿಕ ಲಯದಿಂದಾಗಿಯೇ ಅವರಿಗೆ ಸಾಧ್ಯವಾಗಿರುವ ಸ್ವಾತಂತ್ರ‍್ಯ, ವ್ಯಕ್ತಿತ್ವ ವಿಕಾಸ, ಉನ್ನತ ಸಾರಿಗೆ ಸಂಬಳ, ಇದನ್ನೆಲ್ಲ ನಾವು ಕಡೆಗಣಿಸಬಾರದು. ಕನ್ನಡ ಸಾಮಾಜಿಕ ಚಿಂತನೆ ನಮ್ಮನ್ನು ಈ ರೀತಿ ಬೆಳೆಸಲಿಲ್ಲ. ನಗರ ಜೀವನ, ಹೊಸ ರೀತಿಯ ಉದ್ಯೋಗಗಳೆಂದರೆ ಅನಾಥ ಪ್ರಜ್ಞೆ, ಅನಾಮಧೇಯ ಬದುಕು, ಯಾಂತ್ರಿಕ ಜೀವನ ಲಯ ಎಂದೇ ಹೇಳಿಕೊಟ್ಟಿತು. ನಾನು ನನ್ನ ಅಮೆರಿಕನ್ ಪ್ರವಾಸ ಕಥನದಲ್ಲಿ “ಒಂದು ದಿನದ ಲಯ” ಎಂದು ಬರೆದಾಗ ಈ ಪಳಿಯುಳಿಕೆಯ ಸಾಮಾಜಿಕ ಗ್ರಹಿಕೆಯ ಸ್ತರದಲ್ಲೇ ಬರೆದಿರಬೇಕು. ಈಗ ಹಾಗೆ ಬರೆದದ್ದು ತಪ್ಪೆನಿಸುತ್ತದೆ, ಬಾಲಿಶವೆನಿಸುತ್ತದೆ.
*****
ನಾನು ಬದುಕಿನ ಮೊದಲ 18-20 ವರ್ಷಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ, ಸಣ್ಣಪುಟ್ಟ ಪಟ್ಟಣಗಳಲ್ಲಿ ಕಳೆದವನು. ಹೆರಿಗೆ, ಬಾಣಂತನ, ಮಕ್ಕಳನ್ನು ಸಾಕುವ, ಬೆಳೆಸುವ ರೀತಿ ಇದೆಲ್ಲವನ್ನೂ ಒಂದು ನಿರ್ದಿಷ್ಟ ಶೈಲಿಯಲ್ಲಿ ನೋಡಿದವನು. ಒಂದೇ ಸೂರಿನಡಿಯಲ್ಲಿ ಮೂವತ್ತು-ನಲವತ್ತು ಹೆರಿಗೆಗಳನ್ನು, ಸಮಾನ ಸಂಖ್ಯೆಯ ಬಾಣಂತನವನ್ನು ಅವಿಭಕ್ತ ಕುಟುಂಬದ ಚೌಕಟ್ಟಿನಲ್ಲಿ ನೋಡುವ ಅನಿವಾರ್ಯತೆ. ಮಕ್ಕಳು ತಾಯಿಯ ಹತ್ತಿರವೇ ಬೆಳೆಯಬೇಕು, ಆವಾಗಲೇ ಭಾವನಾತ್ಮಕವಾಗಿ ಸುರಕ್ಷಿತ, ಆರೋಗ್ಯಪೂರ್ಣ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾರೆ, ತಾಯಿಯ ಸ್ಥಾನವನ್ನು ಇನ್ನೊಂದು ಹೆಂಗಸು ಯಾವುದೇ ಕಾರಣಕ್ಕೂ ತುಂಬುವುದು ಸಾಧ್ಯವಿಲ್ಲ. ಮಕ್ಕಳನ್ನು ಲಾಲಿಸುವುದರಲ್ಲಿ, ಬೆಳೆಸುವುದರಲ್ಲಿ ಗಂಡಸರ ಯಾವ ಪಾತ್ರವನ್ನೂ ಕಂಡಿರಲಿಲ್ಲ. ನನ್ನ ಮಕ್ಕಳು, ನನ್ನ ಓರಿಗೆಯವರ ಮಕ್ಕಳು ಕೂಡ ಇದೇ ವಾತಾವರಣದಲ್ಲಿ ಹುಟ್ಟಿ ಬೆಳೆದವರು.
ಮಗುವಿಗೆ ಮೂರು-ನಾಲ್ಕು ತಿಂಗಳಾದ ತಕ್ಷಣವೇ ದಾದಿಯರಿಗೆ ಒಪ್ಪಿಸುವುದು, ದಿನವೆಲ್ಲ ಅವರ ಆರೈಕೆಯಲ್ಲಿ ಬಿಡುವುದು, ಮೊಲೆ ಹಾಲೂಡಿಸುವುದನ್ನು ಬಹುಬೇಗ ನಿಲ್ಲಿಸಿಬಿಡುವುದು, ಇದನ್ನೆಲ್ಲ ಮಾಡುವುದು ತಪ್ಪು ಮಾತ್ರವಲ್ಲ, ಮಾತೃ ಹೃದಯವಿರುವ ಯಾವ ಹೆಂಗಸೂ ಇದನ್ನು ಮಾಡುವುದಿಲ್ಲ ಎಂಬುದು ನನ್ನ ಅಚಲ ನಂಬಿಕೆಯಾಗಿತ್ತು. ನನ್ನ ಮೊದಲನೆ ಮೊಮ್ಮಗನಿಗೆ ಸಾಂಪ್ರದಾಯಿಕ ರೀತಿಯ ಬಾಣಂತನ. ನಮ್ಮ ಮನೆಯಲ್ಲೇ ನಮ್ಮೆದುರಿಗೇ ನಡೆಯಿತು. ಮಗಳು ಕೆಲಸಕ್ಕೆ ಹೋಗುತ್ತಿದ್ದಳು ನಿಜ. ಆದರೆ ನನ್ನ ಹೆಂಡತಿಯೇ ಬಾಣಂತಿ ತಾಯಿ ವಹಿಸಬೇಕಾದ ಪಾತ್ರವನ್ನು ಪ್ರೀತಿಯಿಂದ ನಿರ್ವಹಿಸಿದಳು. ಇದರಿಂದ ನನಗೆ ತುಂಬಾ ಖುಷಿಯಾಯಿತು.
ನನ್ನ ಬಂಧುಗಳ ಮಗ ಮತ್ತು ಅವನ ಸಂಸಾರ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು. ನಾನೂ ಕೂಡ ಅವರಿರುವ ನಗರಕ್ಕೆ ಹೋಗಬೇಕಾಯಿತು. ನನ್ನ ಮಗನೂ ಅಲ್ಲೇ ಕೆಲಸ ಮಾಡುತ್ತಿದ್ದ. ನಾಲ್ಕಾರು ಮೈಲಿಗಳ ಅಂತರದಲ್ಲಿ ಬಂಧುಗಳ ಮಗನ ಮನೆ. ಅವರಿಗೆ ಒಂದು ಮಗುವಾಯಿತು. ಮೊದಲ ವರ್ಷದ ಹುಟ್ಟು ಹಬ್ಬಕ್ಕೆ ನಾನು ಹೋಗಿದ್ದೆ. ನಂತರ ಬೆಂಗಳೂರಿಗೆ ಬಂದೆವು. ಮಗುವನ್ನು Day Care Centreಗೆ ಬಿಡುತ್ತಾರೆ. ಅದಕ್ಕಾಗಿ ಒಂದೊಂದೂವರೆ ವರ್ಷದಿಂದ ಅರ್ಜಿ ಹಾಕಿಕೊಂಡು ಪ್ರಯತ್ನ ನಡೆಸಿದ್ದಾರೆ. ಅದೃಷ್ಟ ಚೆನ್ನಾಗಿತ್ತು, ಈಗ ಸೀಟು ಸಿಕ್ಕಿದೆ ಎಂದು ತಿಳಿದಾಗ ನಾನು ಪ್ರತಿಭಟಿಸಿದೆ. ಹೀಗೆ ಮಾಡುವುದು ಸರಿಯಲ್ಲ. ಇಷ್ಟು ಬೇಗ ಮಗು ತಾಯಿಯ ಆಸರೆ/ಗಮನದಿಂದ ವಂಚಿತವಾಗುವುದು ಸರಿಯಲ್ಲ, ಮಾನವೀಯವಲ್ಲ, ಇದೆಲ್ಲ ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು, ಇಷ್ಟು ನನ್ನ ವಾದವಾಗಿತ್ತು. ನನ್ನ ಹೆಂಡತಿ “ಇದು ನಿಮಗೆ ಸಂಬಂಧ ಪಡದ ವಿಷಯ. ಇನ್ನೊಬ್ಬರ ಕುಟುಂಬದ ವಿಷಯದಲ್ಲಿ ನಾವು ಮಧ್ಯೆ ಪ್ರವೇಶಿಸಬಾರದು” ಎಂದು ಜಗಳ ಕಾಯ್ದಳು.
ನನ್ನ ಅಭಿಪ್ರಾಯವೇ ಸರಿಯಾದ್ದು, ಮೌಲಿಕವಾದ್ದು ಎನ್ನುವಂತೆ ಮಗು ಪಾಲನಾ ಕೇಂದ್ರದ ವಾತಾವರಣಕ್ಕೆ ಹೊಂದಿಕೊಳ್ಳಲಿಲ್ಲ. ಕಾಯಿಲೆ ಬಿತ್ತು. ಖಿನ್ನತೆಗೆ ಒಳಗಾಯಿತು. ಮತ್ತೆ ಮತ್ತೆ ಜ್ವರ ಬರಲು ಪ್ರಾರಂಭಿಸಿತು. ನೋಡಿ ನನ್ನ ವಿಚಾರಗಳು ಎಷ್ಟು ಸರಿಯಾಗಿವೆ ಎಂದು ಗೊಣಗಿದೆ. ನನ್ನ ಮಾತು ಯಾರು ಕೇಳುತ್ತಾರೆ. ಮಗು ಹುಷಾರಾಗುವ ತನಕ ಕಾದು ಮತ್ತೆ ಪಾಲನಾ ಕೇಂದ್ರಕ್ಕೆ ಸೇರಿಸಿದರು.
ಇನ್ನೊಬ್ಬರ ವಿಷಯಕ್ಕೆ ಬಂದಾಗ ಹೀಗೆಲ್ಲ ಅಭಿಪ್ರಾಯ ವ್ಯಕ್ತಪಡಿಸಿ ಜಗಳ ಕಾದಿದ್ದವನು, ನನ್ನ ಸ್ವಂತ ಮಗಳ ವಿಷಯಕ್ಕೆ ಬಂದಾಗ, ಬಾಯಿ ಮುಚ್ಚಿಕೊಳ್ಳಬೇಕಾಯಿತು. ಅಥವಾ ಮಗಳೇ ಬಾಯಿ ಮುಚ್ಚಿಸಿದಳು. ನಾನು ನನ್ನ ವಿಚಾರಗಳನ್ನು ತಿಳಿಸಿದಾಗ, ಇದು ನಿನಗೆ ಸಂಬಂಧ ಪಡದ ವಿಷಯ. ಮಕ್ಕಳನ್ನು ನೋಡುವ, ಬೆಳೆಸುವ ರೀತಿ ತಲೆಮಾರಿನಿಂದ ತಲೆಮಾರಿಗೆ ಭಿನ್ನವಾಗುತ್ತದೆ. ದೇಶದಿಂದ ದೇಶಕ್ಕೆ ವ್ಯತ್ಯಾಸವಿರುತ್ತದೆ ಎಂದು ನೇರವಾಗಿ ಹೇಳಿದಳು. ಇದೆಲ್ಲ ನಿನಗೆ ಅರ್ಥವಾಗುವುದಿಲ್ಲ ಎಂದು ಕೂಡ ಪರೋಕ್ಷವಾಗಿ ಸೂಚಿಸಿದಳು. ನೀನು ಕೆಲವು ವರ್ಷ ಕೆಲಸಕ್ಕೆ ಹೋಗಬೇಡ. ಆ ಕಾಲಾವಧಿಯ ಸಂಬಳ ಸಾರಿಗೆಯನ್ನೆಲ್ಲ ನಾನೇ ನಿನಗೆ ಕೊಡುವೆ. ಮಗುವನ್ನು ಚೆನ್ನಾಗಿ ನೋಡಿಕೋ ಎಂದು ವಾದಿಸಿದೆ. ನಾನು ಕೆಲಸ ಮಾಡುವುದು ಬರೀ ಸಂಬಳಕ್ಕಲ್ಲ. ಕೆಲಸ ಮಾಡುವುದು ನನ್ನ ಮನಸ್ಸಿನ, ವ್ಯಕ್ತಿತ್ವದ ಅಗತ್ಯ. ನನಗೆ ದಿನದುದ್ದಕ್ಕೂ ಮನೆಯಲ್ಲಿ ಕುಳಿತುಕೊಂಡಿರುವುದು ಇಷ್ಟವಿಲ್ಲ. ನನಗೂ ಒಂದು ವೈಯಕ್ತಿಕ ಬದುಕಿದೆ. ನಾನು ಕೆಲಸ ಮಾಡಬಾರದು ಅನ್ನುವ ವಿಚಾರ ನಿನಗಿದ್ದರೆ, ನೀನು ನನ್ನನ್ನು ಏಕೆ ಇಷ್ಟೊಂದು ಓದಿಸಿದೆ ಎಂದು ಅವಳು ಪ್ರತಿವಾದ ಮಾಡಿದಳು. ನನ್ನ ಮಾತು ಏನೂ ನಡೆಯಲಿಲ್ಲ. ಮೊಮ್ಮಗಳು ಕೂಡ ಮೊದಲು ಪ್ರತಿಭಟಿಸಿದಳು. ಒಗ್ಗಿಕೊಳ್ಳಲಿಲ್ಲ. ಕಾಯಿಲೆ ಬಿದ್ದಳು. ಇದನ್ನೆಲ್ಲ ನೀವು ಗಮನಿಸಬೇಕು ಎಂದು ನಾನು ಒತ್ತಾಯಿಸಿದೆ. ಯಾರೂ ಕ್ಯಾರೇ ಅನ್ನಲಿಲ್ಲ.
ಒಂದಾರು ತಿಂಗಳ ನಂತರ ನಾವು ಮಗಳ ಮನೆಗೆ ಬಂದೆವು. ಮೊಮ್ಮಗಳೇ ಪಾಲನಾ ಕೇಂದ್ರಕ್ಕೆ ಚೆನ್ನಾಗಿ ಹೊಂದಿಕೊಂಡುಬಿಟ್ಟಿದ್ದಳು. ಇದೆಲ್ಲ ನಿಜವೇ, ಸುಳ್ಳೇ ಎಂದು ಪರೀಕ್ಷಿಸಲು ನಾನೇ ಕೇಂದ್ರಕ್ಕೆ ಪದೇ ಪದೇ ಹೋಗುತ್ತಿದ್ದೆ. ಅವಳ ವಯಸ್ಸಿನ (ಇನ್ನೇನು ಅವಳಿಗೆ ಎರಡು ವರ್ಷ ತುಂಬುತ್ತದೆ) ಮಕ್ಕಳು, ಬೇರೆ ಬೇರೆ ದೇಶಗಳ, ಭಾಷೆಗಳ ಮಕ್ಕಳು ತುಂಬಾ ಆರೋಗ್ಯಕರವಾದ, ನಿರ್ಮಲವಾದ ವಾತಾವರಣದಲ್ಲಿ ಬೆಳೆಯುತ್ತಿದ್ದರು. ಉತ್ತಮವಾದ, ಆಧುನಿಕವಾದ ಆಟಪಾಟದ, ಮನೋವಿಕಾಸದ ಉಪಕರಣಗಳು, ಶುಚಿಯಾದ ಊಟ, ತಿಂಡಿಯ ವ್ಯವಸ್ಥೆ, ಮಕ್ಕಳು ಎದ್ದು ಬಿದ್ದರೂ ಯಾವುದೇ ರೀತಿಯ ಗಾಯ, ನೋವಾಗದಂತೆ ಮೃದುವಾದ ಹುಲ್ಲಿನಿಂದ ತುಂಬಿದ ಪುಟ್ಟ ಆಟದ ಮೈದಾನ. ತರಬೇತಿ ಪಡೆದ ಮೃದು ಸ್ವಭಾವದ ನಗುಮುಖದ ಶಿಕ್ಷಕರು, ದಾದಿಯರು. ಮೊಮ್ಮಗಳು ಅವರಿಗೆಲ್ಲ ಚೆನ್ನಾಗಿ ಹೊಂದಿಕೊಂಡುಬಿಟ್ಟಿದ್ದಳು. ದಾದಿ, ಶಿಕ್ಷಕಿಯರಲ್ಲಿ ತನ್ನ ಒಲವು ಯಾರ ಕಡೆಗೆ ಎಂದು ಸೂಚಿಸಿ ಆಯ್ಕೆ ಮಾಡಿಕೊಂಡಿದ್ದಳು. ಡಚ್ ಭಾಷೆಯಲ್ಲೇ ಮಾತನಾಡುತ್ತಿದ್ದಳು. ಮನೆಯಿಂದ ಹೊರಡುವಾಗ ಒಂದು ಕ್ಷಣ ಮಂಕಾದವಳಂತೆ ಕಂಡರೂ, ಪಾಲನಾ ಕೇಂದ್ರ ಹತ್ತಿರ ಬಂದಾಗ ಉತ್ಸಾಹ ತೋರಿಸುತ್ತಿದ್ದಳು. ನನ್ನ ಅಳಿಯನ ಕೈಯಿಂದ ಅವರ ಕೈಗೆ ಸಂತೋಷವಾಗಿ ಹೋಗುತ್ತಿದ್ದಳು. ಪ್ರತಿ ಮಗುವನ್ನೂ ಎತ್ತಿಕೊಂಡು, ಮುದ್ದಾಡಿ ಪ್ರತಿದಿನವೂ ಸ್ವಾಗತಿಸುವುದು ಅಲ್ಲಿಯ ಒಂದು ಕ್ರಮ. ಸಂಜೆ ವಾಪಸ್ ಕರೆದುಕೊಂಡು ಬರಲು ಹೋದಾಗಲೂ ಎಲ್ಲ ಮಕ್ಕಳೂ ಊಟ, ಆಟ, ನಿದ್ದೆ ಎಲ್ಲವನ್ನೂ ಮುಗಿಸಿ, ಹರ್ಷಚಿತ್ತವಾಗಿಯೇ ಇರುತ್ತಿದ್ದವು. ನಗುನಗುತಾ ದಾದಿಯರನ್ನು, ಶಿಕ್ಷಕಿಯರನ್ನು ಬೀಳ್ಕೊಡುತ್ತಿದ್ದವು. ಮಕ್ಕಳ ಚಟುವಟಿಕೆ ಕುರಿತು ಪ್ರತಿದನವೂ ವೀಡಿಯೋ ಚಿತ್ರಗಳನ್ನು ಕಳಿಸುತ್ತಿದ್ದರು. ಕುಟುಂಬದ ಸದಸ್ಯರ ಒಡನಾಟದ ಅಗತ್ಯವೇ ಇಲ್ಲವೆಂಬಂತೆ ಈ ಮಕ್ಕಳು ಹೇಗೆ, ಏಕೆ ಇಷ್ಟೊಂದು ಸಂತೋಷವಾಗಿದ್ದಾರೆ ಎಂದು ನನಗೇ ಆಶ್ಚರ್ಯವಾಗುತ್ತಿತ್ತು.
ಕೇಂದ್ರದಲ್ಲಿ ವಾರ್ಷಿಕೋತ್ಸವ ಸಮಾರಂಭ. ಹಿರಿಯರನ್ನೂ, ಪೋಷಕರನ್ನೂ ಆಹ್ವಾನಿಸಿದ್ದರು. ಕೇಂದ್ರದ ಕಟ್ಟಡದ ಕೆಳಗಡೆಯೇ ದೊಡ್ಡ ಪೆಂಡಾಲ್ ಹಾಕಿದ್ದರು. ವಿಶೇಷವಾದ ಮಕ್ಕಳಿಗೆ ಅನುಕೂಲವಾಗುವಂತಹ ಆಟದ ಮೈದಾನವನ್ನು ಕೂಡ ಸೃಷ್ಟಿಸಿದ್ದರು. ಊಟ, ತಿಂಡಿ, ಪಾನೀಯಕ್ಕೂ ವ್ಯವಸ್ಥೆಯಿತ್ತು. ಮಕ್ಕಳು ಅವರ ಪಾಡಿಗೆ ಅವರು ಆಡುತ್ತಿದ್ದರು, ಬೀಳುತ್ತಿದ್ದರು, ಏಳುತ್ತಿದ್ದರು. ಅವರೆಲ್ಲರೂ ಮಾತನಾಡುತ್ತಿದ್ದರೂ, ನಗುತ್ತಿದ್ದರೂ, ಅಳುತ್ತಿದ್ದರೂ, ಕರೆಯುತ್ತಿದ್ದರೂ ಯಾವ ಭಾಷೆಯಲ್ಲಿ ಮಾತನಾಡುತಿದ್ದಾರೆ ಎಂಬುದು ನಮಗೆ ಅರ್ಥವೇ ಆಗುತ್ತಿರಲಿಲ್ಲ. ದಾದಿ, ಶಿಕ್ಷಕಿ ಕೂಡ ನಮ್ಮೊಡನೆ ನಗುವಿನ, ಸಂಜ್ಞೆಯ ಭಾಷೆಯಲ್ಲಿ ಮಾತನಾಡುತ್ತಿದ್ದರು. ಇಂಗ್ಲಿಷ್ ಅಥವಾ ಡಚ್‌ನಲ್ಲಲ್ಲ. ಮಕ್ಕಳಂತೆ ಶಿಕ್ಷಕಿಯರು, ದಾದಿಯರು ಕೂಡ ಬೇರೆ ಬೇರೆ ಭಾಷೆಗಳಿಗೆ, ದೇಶಗಳಿಗೆ ಸೇರಿದವರಾಗಿದ್ದರು.
ವಾರ್ಷಿಕೋತ್ಸವಕ್ಕೆ ಬಂದಿದ್ದ ಬೇರೆ ಬೇರೆ ದೇಶಗಳ ತಂದೆ-ತಾಯಿಗಳ ಜೊತೆ ಮಾತನಾಡುವ ಅವಕಾಶ ಕೂಡ ಸಿಕ್ಕಿತು. ಮಕ್ಕಳು ಸಂತೋಷವಾಗಿದ್ದಾರೆ ಅನ್ನುವುದನ್ನು ಎಲ್ಲರೂ ಹೇಳಿದರು. ಮಕ್ಕಳಿಗೆ ಅಗತ್ಯವಾದ “ಸಾಮಾಜಿಕತೆ”ಯನ್ನು ಈ ಪ್ರಮಾಣದಲ್ಲಿ ನಾವು ನೆರೆಹೊರೆಯಲ್ಲಾಗಲೀ, ಮನೆಯೊಳಗಾಗಲೀ ಕಲಿಸುವುದು ಸಾಧ್ಯವೇ ಇಲ್ಲ ಎಂಬುದೇ ಎಲ್ಲರ ಅಭಿಪ್ರಾಯವಾಗಿತ್ತು. ಜೊತೆಗೆ ಮಕ್ಕಳು ಸ್ವಾವಲಂಬಿಗಳಾಗುವುದನ್ನು ಕೂಡ ಕಲಿಯುತ್ತಾರೆ ಎಂಬುದು ಕೂಡ ಮುಖ್ಯವಲ್ಲವೇ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಕೇಂದ್ರದಲ್ಲಿ ಪ್ರವೇಶ ಪಡೆಯುವುದು ಎಷ್ಟು ಕಷ್ಟ ಎಂಬುದೇ ಎಲ್ಲರ ಚಿಂತೆ. ಹೆಂಗಸರು ಹೆಚ್ಚು ವೃತ್ತಿಪರರಾಗಿರಬೇಕು, ಆವಾಗ ಮಾತ್ರ ಹೆಚ್ಚಿನ ಆರ್ಥಿಕ ಪ್ರಗತಿ ಸಾಧ್ಯ ಎಂಬುದನ್ನು ಒಪ್ಪಿಕೊಂಡಿರುವ ಈ ದೇಶಗಳಲ್ಲಿ, ಶಿಶುಪಾಲನಾ ಕೇಂದ್ರ ಅಗತ್ಯ, ಅತ್ಯಗತ್ಯ. ದಿನದುದ್ದಕ್ಕೂ ಹೆಂಗಸರು ಕಛೇರಿಯಲ್ಲಿ ಕೆಲಸ ಮಾಡಬೇಕಾದ ಸಂದರ್ಭಗಳಿರುತ್ತವೆ. ಅಂತಹ ಕುಟುಂಬಗಳಲ್ಲಿ ಕೆಲಸಕ್ಕೆ ಹೊರಡುವ ಮುನ್ನ ತಂದೆ-ತಾಯಿಗಳು ಮಕ್ಕಳನ್ನು ಬೆಳಿಗ್ಗೆ ಶಾಲೆಗೆ ಕರೆದುಕೊಂಡುಹೋಗಿ ಬಿಡುತ್ತಾರೆ. ಶಾಲೆ ಮುಗಿಯುವ ಹೊತ್ತಿಕೆ ಪಾಲನಾ ಕೇಂದ್ರದ ಸಿಬ್ಬಂದಿ ವಿಶೇಷ ವಾಹನದೊಂದಿಗೆ ಅಲ್ಲಿಗೆ ಹೋಗಿ ಮಕ್ಕಳನ್ನು ಕರೆದುಕೊಂಡು ಬಂದು ಪಾಲನಾ ಕೇಂದ್ರದಲ್ಲಿ ಇಟ್ಟುಕೊಳ್ಳುತ್ತಾರೆ. ಸಂಜೆ ಕೆಲಸ ಮುಗಿದ ಮೇಲೆ ತಂದೆ-ತಾಯಿ ಇಬ್ಬರೂ ಪಾಲನಾ ಕೇಂದ್ರಕ್ಕೆ ಬಂದು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ. ಇದರಿಂದ ಹೆಂಗಸರ ವೃತ್ತಿಪರತೆ ಬೆಳೆಯುತ್ತದೆ. ಕುಟುಂಬದ ಆದಾಯವೂ ಹೆಚ್ಚುತ್ತದೆ. ಮಕ್ಕಳು ಕೂಡ ಹೆಚ್ಚು ಸಾಮಾಜಿಕವಾಗಿಯೂ, ಸ್ವತಂತ್ರ ವ್ಯಕ್ತಿತ್ವವುಳ್ಳವರಾಗಿಯೂ ಬೆಳಯುತ್ತಾರೆ.
ಇದೆಲ್ಲದರ ಅನುಭವದಿಂದಾಗಿ ನನ್ನ ವಿಚಾರ, ಪರಿಕಲ್ಪನೆಗಳು ಕ್ರಮೇಣ ಬದಲಾಗುತ್ತಿದ್ದರೂ ಇದನ್ನು ಮಗಳ ಎದುರಿಗೆ ಒಪ್ಪಿಕೊಳ್ಳುವುದಕ್ಕೆ ಸ್ವಲ್ಪ ಮುಜುಗರವಾಯಿತು. ನನ್ನ ಮುಜುಗರದ ಬಗ್ಗೆಯಾಗಲೀ, ಹಳೇ ಕಾಲದ ಪರಿಕಲ್ಪನೆಗಳ ಬಗ್ಗೆಯಾಗಲೀ ತುಂಬಾ ತಲೆ ಕೆಡಿಸಿಕೊಳ್ಳುವುದು ಅನಗತ್ಯ ಎಂಬಂತೆ ನನ್ನ ಮೊಮ್ಮಗಳು ಸುಮ್ಮನಿದ್ದಳು. ನಿನ್ನ ವಿಚಾರ, ಭಾವನೆಗಳು ಏನೇ ಇದ್ದರೂ, ಭವಿಷ್ಯದ ದಿನಗಳು ನನ್ನದೇ ಎಂಬಂತೆ.
ಮಗಳಿಗೂ ಕ್ರಮೇಣ ನನ್ನ ತಾಕಲಾಟದ ಅಂದಾಜು ಬಂದಿರಬಹುದು. ನನ್ನ ಮನಸ್ಸನ್ನು ಓದಬಲ್ಲವಳಂತೆ ಬಿಡಿಸಿ ಹೇಳಿದಳು:
“ನೋಡು, ಡ್ಯಾಡಿ, ಬದಲಾವಣೆ ಅಂದರೆ, ಪ್ರಧಾನ ಮಂತ್ರಿಗಳ, ಸರ್ಕಾರಗಳ, ರಾಜಕೀಯ ಪಕ್ಷಗಳ ಬದಲಾವಣೆ ಅಲ್ಲ. ನಮ್ಮ, ನಮ್ಮ ಮನೆ, ಮನಸ್ಸುಗಳಲ್ಲಿ ಆಗುತ್ತಿರುವ ಬದಲಾವಣೆಗಳು. ಅದಕ್ಕೆ ನಮ್ಮ ಪ್ರತಿರೋಧ, ಹೊಂದಾಣಿಕೆ ಇವುಗಳನ್ನು ಅರ್ಥ ಮಾಡಿಕೊಳ್ಳುವುದು ಕೂಡ ಮುಖ್ಯ. ಮಕ್ಕಳ ಲಾಲನೆ, ಪಾಲನೆ ಹೆಂಗಸರ ಕರ್ತವ್ಯ ಮಾತ್ರ ಎಂಬ ಧೋರಣೆಯೇ ಬದಲಾಗಬೇಕು, ಬದಲಾಗುತ್ತಿದೆ. ಭಾರತದಲ್ಲಿ ಕಾಣಬರುವ ಮಾತೃತ್ವದ ಪರಿಕಲ್ಪನೆ ಇಲ್ಲಿಲ್ಲದಿರಬಹುದು. ಆದರೆ ಒಟ್ಟು ಸಮಾಜವೇ ಮಾತೃಸ್ವರೂಪಿಯಾಗಿದೆ.”
(ಹಿಂದಿನ ಕಂತು: ಟೋಬಿ ಎಂಬ ಶಿಕ್ಷಕ)
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.
ಬೆಂಗಳೂರಿನ ಮಗ ಸೊಸೆ ಯರ ದಿನಚರಿಯ u ಹೀಗೆ ಇದೆ. ಎಂಟುಗಂಟೆಗೆ lkg ಗೆ ಬಸ್ ನಲ್ಲಿ ಹೋಗುವ ಮಗು ಏಳಕ್ಕೆ ಎದ್ದು ತಯಾರಾಗಿ ಊಟ ತಿಂಡಿ ಯ ಭ್ಯಾಗ್ ಮತ್ತು ಪುಸ್ತಕದ ಬ್ಯಾಗ್ ತೆಗೆದುಕೊಂಡು ಬಸ್ನಲ್ಲಿ ಸ್ಕೂಲ್ ಗೆ ಹೋಗಬೇಕು ಮಧ್ಯಾಹ್ನ ಸ್ಕೂಲ್ ನವರು ಸ್ಕೂಲ್ ಬಸ್ ಮನೆ ಹತ್ತಿರ ಇರುವ ಡೇ ಕೇರ್ ಗೆ ಬಿಡುತ್ತಾರೆ ಸಂಜೆ ಅಲ್ಲಿಂದ ಕರೆತ್ತರುವುದು. ಬಸ್ನಲ್ಲಿ ಬೆಲ್ಟ್ ಹಾಕಿ ಕೂ ರಿಸುತ್ತಾರೆ. ಒಬ್ಬಳು ಆಯ ಇರುತ್ತಾಳೆ . ಮಗ ಸೊಸೆ ಅವರವರ ಕಾರುಗಳ ಲ್ಲಿ ಹೋಗುತ್ತಾರೆ.
thanq so much Madam
ಅಮೇರಿಕದ ನನ್ನ ಮಗನ ಸಂಸಾರದ ಬಗ್ಗೆ ನನಗೂ ಒಂದಿಷ್ಟು ತಕರಾರೇ ಹೌದು.ಅವರಷ್ಟಕ್ಕೆ ಅವರು ಇಬ್ಬರೂ ಉದ್ಯೋಗ ಮಾಡಿಕೊಂಡು ಆರಾಮಾಗಿಯೇ ಇರುತ್ತಾರೆ.ಆದರೆ ಮಕ್ಕಳು ಚಿಕ್ಕವರಿದ್ದಾಗ ಮಾತ್ರ ನಮ್ಮನ್ನು ಅವಲಂಬಿಸಬೇಕಾಗುತ್ತದೆ.ವರ್ಷದ ನಾಲ್ಕೈದು ತಿಂಗಳು ನಾವು ಮಗುವನ್ನು ನೋಡಿಕೊಂಡರೆ ಮಿಕ್ಕ ಆರು ತಿಂಗಳು ಸೊಸೆಯ ಅಪ್ಪ,ಅಮ್ಮ ನೋಡಿಕೊಳ್ಳುತ್ತಾರೆ.ಹಿರಿಯರು ಬಂದು ಮಾಡುವವರೆಗು ಅವರಿಗೆ ತೊಂದರೆ ಇರುವುದಿಲ್ಲ.
ಅಲ್ಲಿ ಇದಕ್ಕಾಗಿ ಹೋಗುವ ಬಹುತೇಕ ಹಿರಿಯರು ಖುಷಿಯಾಗಿರುವುದಿಲ್ಲ.ಈ ಹಿರಿಯರು ಕೆಲವು ಕಾರ್ಯಕ್ರಮಗಳಲ್ಲಿ ಅಥವಾ ಸಂಜೆ-ಬೆಳಗಿನ ವಾಯು ವಿಹಾರದ ಹೊತ್ತಿನಲ್ಲಿ ಭೆಟ್ಟಿಯಾದಾಗ ಇದನ್ನೇ ಮಾತನಾಡಿಕೊಳ್ಳುತ್ತಾರೆ.ಆರು ತಿಂಗಳು ಕಳೆಯುವಷ್ಟರಲ್ಲಿ ಅವರಿಗೆ ಸಾಕಾಗಿರುತ್ತದೆ.
ಮಕ್ಕಳ ಸ್ವಾತಂತ್ರ್ಯ,ಗಳಿಕೆ,ಘನತೆ,ಸಾಧನಗಳ ಬಗ್ಗೆ ಹಿರಿಯರಿಗೆ ಸಂತೋಷವೇ.ಆದರೆ ಈ ವಯಸ್ಸಿನಲ್ಲಿ ಇಷ್ಟು ದೂರ ಬಂದು ತಮಗೆ ಬೇಕಾದ ಸಾಮಾಜಿಕ,ಸಾಂಸ್ಕೃತಿಕ ವಾತಾವರಣದಿಂದ ಹೊರತಾಗಿ ಉಳಿಯುವುದು ಕೂಡ ಮಾನಸಿಕ ಗಾಸಿಯೇ ಹೌದು.ಶಿಕ್ಷಣ ಪಡೆದು ಜವಾಬ್ದಾರಿಯ ನೌಕರಿ ಮಾಡಿದ ಹಿರಿಯರು ಬೇಗ ಹೊಂದಿಕೊಳ್ಳುತ್ತಾರೆ.ಶಿಕ್ಷಣದ ಕೊರತೆ ಹಾಗು ಮನೆ,ಮನೆತನಗಳ ಆಚೆ ಹೋಗಿರದವರಿಗೆ ಹೊರದೇಶದ ವಾತಾವರಣ ಉಸಿರುಗಟ್ಟಿಸುತ್ತದೆ.
ಈ ಶಿಕ್ಷಣಕ್ಕೆ ತಕ್ಕಂಥ ಅಲ್ಲದಿದ್ದರೂ ಸುಖವಾಗಿ ಇರಲು ಬೇಕಾದಷ್ಟು ಆರ್ಥಿಕ ಅನುಕೂಲದ ಉದ್ಯೋಗಗಳು ನಮ್ಮಲ್ಲೂ ಸಿಗುತ್ತವೆ.ಆದರೆ ಅಲ್ಲಿಯ ಉದ್ಯೋಗವನ್ನು ಹೆಚ್ಚು ಇಷ್ಟ ಪಡುತ್ತಾರೆ.ಅದಕ್ಕೆ ಖಂಡಿತ ಒಳ್ಳೆಯ ಕಾರಣಗಳಿವೆ.ಖಾಸಗಿತನಕ್ಕೆ ಅಡ್ಡ ಬಾರದ ನೆರೆ ಹೊರೆ,ಸರಕಾರಿ ಕಚೇರಿಗಳ ಕಿರುಕುಳದಿಂದ ವಿಮುಕ್ತಿ,,ಸ್ವಚ್ಛ ವಾತಾವರಣ,ಭ್ರಷ್ಟಾಚಾರದ ಕಿರಿಕಿರಿಯಿಂದ ದೂರ,ಒಳ್ಳೆಯ ಶಾಲೆಗಳು, ಜಾತಿ,ಧರ್ಮಗಳ ತಾರತಮ್ಯದಿಂದ ದೂರ…ಹೀಗೆ ಬದುಕು ಆರಾಮಾಗಿರುತ್ತದೆ.
ಆದರೆ ದೂರ ಹೋದ ಮೇಲೆ ಇಲ್ಲಿಯ ಸಂಬಂಧಗಳಿಂದಲೂ ದೂರ ಹೋಗಲೇ ಬೇಕು.ಹುಟ್ಟು, ಸಾವು,ಮದುವೆ,ನಾಮಕರಣ ಇವು ಮಾತ್ರ ಅಲ್ಲ,ನಮ್ಮವೇ ಆದ ಸಾಹಿತ್ಯ, ಸಂಗೀತ ಮುಂತಾದ ಸಾಂಸ್ಕೃತಿಕ ವಲಯದಿಂದ ಕೂಡ ದೂರ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.ಈ ಕಾರಣದಿಂದಾಗಿಯೇ ನನ್ನ ದೊಡ್ಡ ಮಗ ಅಲ್ಲಿ ಇರಲು ಆಗದೆ ಮರಳಿ ಬಂದ.ಸಣ್ಣವನಿಗೆ ಅದೇ ಇಷ್ಟವಾದಂತಿದೆ..
ಇದು ಸತ್ಯನಾರಾಯಣ ಅವರು ಪ್ರಸ್ತಾಪ ಮಾಡಿದ ವಿಷಯದಿಂದ ಸ್ವಲ್ಪ ದೂರ ಹೋಗಿಯೇ ಹೇಳಿದ ಮಾತಿನಂತೆ ಅನ್ನಿಸಬಹುದು.ಆದರೆ ಚರ್ಚೆಯಲ್ಲಿ ಇದು ಕೂಡ ಬರಬೇಕಾಗುತ್ತದೆ..
ಇನ್ನು,ಪುರುಷ, ಮಹಿಳೆ ಎಂಬ ವಿಷಯದಲ್ಲಿ ನಾವು ಖಂಡಿತ ಬಹಳ ಹಿಂದೆ ಇದ್ದೇವೆ.ಅವರನ್ನು ತಲುಪಲು ಹೊರಟಿದ್ದೇವೊ ಏನೊ.ಆದರೆ ನಮ್ಮ ನಡಿಗೆ ತುಂಬ ನಿಧಾನವಾಗುದೆ.ಬಹುಶಃ ಸಂಪೂರ್ಣ ಮನಸ್ಸಿನಿಂದ ನಾವು ಸಾಗಿಲ್ಲ.ಒಂದು ಅನಿವಾರ್ಯತೆ ನಮ್ಮನ್ನು ನಡೆಸುತ್ತಿದೆ..
ಆತ್ಮ ವಿಶ್ಲೇಷಣೆಗೆ ಹಚ್ಚುವ ಬರೆಹ ನಿಮ್ಮದು,ಸರ್..