ಕನೇರಿ ತನ್ನ ಪುಕ್ಕಗಳನ್ನೊಮ್ಮೆ ಕೊಡವಿತು. ನಂತರ ಅವುಗಳನ್ನು ಕುಕ್ಕತೊಡಗಿತು. `ನಂಗೆ ಯಾವಾಗಲೂ ಹಕ್ಕಿಗಳೆಂದರೆ ಪಂಚ ಪ್ರಾಣ. ನಾನು ಈ ಕನೇರಿ ಹಕ್ಕೀನಾ ನನ್ನ ಪುಟ್ಟ ಮಗಳಿಗಾಗಿ ತಗಂಡು ಹೋಗ್ತಿದೀನಿ. ಹಾ, ಅಲ್ಲಿ ನೋಡಿ. ಅವನು ಈಗ ಹಾಡ್ತಾ ಇದಾನೆ,’ ಅಂದಳು ಅಮೇರಿಕನ್ ಹೆಂಗಸು. ಕನೇರಿ ಚಿಲಿಪಿಲಿಗುಟ್ಟತೊಡಗಿತು. ಅದರ ಗಂಟಲ ಮೇಲಿನ ಪುಕ್ಕಗಳು ನಿಮಿರಿ ನಿಂತವು. ನಂತರ ಅದು ತನ್ನ ಕೊಕ್ಕನ್ನು ಕೆಳಕ್ಕಾಕಿಕೊಂಡು ಪುಕ್ಕಗಳನ್ನು ಹೆಕ್ಕತೊಡಗಿತು.
ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ನೆಸ್ಟ್‌ ಹೆಮಿಂಗ್ವೆಯ ಒಂದಷ್ಟು ಕಥೆಗಳನ್ನು ಎಸ್. ಗಂಗಾಧರಯ್ಯ ಕನ್ನಡಕ್ಕೆ ತಂದಿದ್ದು, ಈ ಸಂಕಲನದ ಒಂದು ಕಥೆ “ಕನೇರಿ” ನಿಮ್ಮ ಓದಿಗೆ

ರೈಲು ಕೆಂಪು ಕಲ್ಲಿನಿಂದ ಕಟ್ಟಲಾಗಿದ್ದ ದೊಡ್ಡ ಮನೆಯೊಂದನ್ನು ವೇಗದಿಂದ ತಟಾಯ್ತು. ಆ ಮನೆಗೆ ನಾಲ್ಕು ದಪ್ಪನೆಯ ಪಾಮ್ ಮರಗಳಿದ್ದ ಉದ್ಯಾನವಿತ್ತು. ಆ ಮರಗಳ ಕೆಳಗೆ ಅವುಗಳ ನೆರಳಿನಲ್ಲಿ ಕೆಲವು ಮೇಜುಗಳಿದ್ದವು. ಮನೆಯ ಮತ್ತೊಂದು ಬದಿಯಲ್ಲಿ ಕಡಲಿತ್ತು. ಕಡಲು ಆಗೊಮ್ಮೆ ಈಗೊಮ್ಮೆ ಮಾತ್ರ ಕಾಣಿಸುತ್ತಿತ್ತು. ಅದು ತುಂಬಾ ತಳದಲ್ಲಿ ಬಂಡೆಗಳಿಗೆ ಅಪ್ಪಳಿಸುತ್ತಿತ್ತು.

`ನಾನು ಈ ಕನೇರಿಯನ್ನು ಪಲೇರ್ಮೋದಲ್ಲಿ ಕೊಂಡುಕೊಂಡಿದ್ದೆ. ಅವತ್ತು ಭಾನುವಾರ. ನಮಗಲ್ಲಿ ಕೇವಲ ಒಂದು ಗಂಟೆ ಮಾತ್ರ ಸಮಯವಿತ್ತು. ಅದನ್ನು ಮಾರಿದ ವ್ಯಕ್ತಿ ಡಾಲರ್‌ಗಳ ನಿರೀಕ್ಷೆಯಲ್ಲಿದ್ದ. ನಾನು ಅವನಿಗೆ ಒಂದೂವರೆ ಡಾಲರ್ ಕೊಟ್ಟೆ. ಕನೇರಿ ನಿಜಕ್ಕೂ ಎಷ್ಟು ಚೆನ್ನಾಗಿ ಹಾಡ್ತಾನೆ ಅಂತೀರಿ,’ ಅಂದಳು ಅಮೇರಿಕನ್ ಹೆಂಗಸು.

(ಎಸ್. ಗಂಗಾಧರಯ್ಯ)

ರೈಲಿನಲ್ಲಿ ಧಗೆಯಿತ್ತು. `ಲಿಟ್ ಸ್ಯಾಲಾನ್’ ಬೋಗಿಯಲ್ಲಂತೂ ಅದರ ಹೊಡೆತ ಇನ್ನೂ ಹೆಚ್ಚಿತ್ತು. ತೆರೆದಿದ್ದ ಕಿಟಕಿಗಳಿಂದ ಗಾಳಿಯ ಸುಳಿವಿರಲಿಲ್ಲ. ಅಮೇರಿಕನ್ ಹೆಂಗಸು ಕಿಟಕಿಯ ಪರದೆಯನ್ನು ಕೆಳ ಸರಿಸಿದಳು. ಆಗೊಮ್ಮೆ ಈಗೊಮ್ಮೆ ಕೂಡಾ ಕಡಲು ಕಾಣುತ್ತಿರಲಿಲ್ಲ. ಮತ್ತೊಂದು ಬದಿಯಲ್ಲಿ ಗಾಜಿನ ಹಲಗೆಯಿತ್ತು. ನಂತರ ಕಾರಿಡಾರ್ ಇತ್ತು. ಅದರಾಚೆಗೆ ತೆರೆದ ಕಿಟಕಿಯಿತ್ತು. ಕಿಟಕಿಯಾಚೆಗೆ ಧೂಳು ಹಿಡಿದ ಮರಗಳು. ಎಣ್ಣೆ ಜಿಡ್ಡಿನ ರಸ್ತೆ. ಸಪಾಟು ದ್ರಾಕ್ಷಿ ತೋಟಗಳು. ಅವುಗಳ ಹಿಂಬದಿಗೆ ಬೂದು ಬಣ್ಣದ ಕಲ್ಲಿನ ಪುಟ್ಟ ಬೆಟ್ಟಗಳು.

ಎತ್ತರದ ಕೆಲವು ಚಿಮಣಿಗಳಿಂದ ಹೊಗೆ ಏಳುತ್ತಿತ್ತು. ಆಗ್ನೇಯ ಫ್ರ್ಯಾನ್ಸ್‌ನ ಬಂದರು ನಗರ ಮಾರ್ಸೆಗೆ ಬರುತ್ತಲೇ ರೈಲಿನ ವೇಗ ಕಡಿಮೆಯಾಯಿತು. ಅಲ್ಲಿ ಅನೇಕ ಹಳಿಗಳಿದ್ದವು. ಅವುಗಳಲ್ಲಿ ಒಂದರ ಮುಖೇನ ರೈಲು ನಿಲ್ದಾಣವನ್ನು ತಲುಪಿತು. ಮಾರ್ಸೆ ನಿಲ್ದಾಣದಲ್ಲಿ ರೈಲು ಇಪ್ಪತೈದು ನಿಮಿಷಗಳ ಕಾಲ ನಿಂತಿತ್ತು. ಅಮೇರಿಕನ್ ಹೆಂಗಸು ಇಳಿದು ಹೋಗಿ ಒಂದು ಪ್ರತಿ ಲಂಡನ್ನಿನಿಂದ ಪ್ರಕಟಗೊಳ್ಳುವ `ಡೈಲಿ ಮೇಲ್’ಟ್ಯಾಬ್ಲಾಯ್ಡ್ ಪತ್ರಿಕೆಯನ್ನೂ, ಅರ್ಧ ಲೀಟರ್ ಎವಿಯನ್ ನೀರಿನ ಬಾಟಲನ್ನು ಕೊಂಡು ತಂದಳು. ಅದಕ್ಕಾಗಿ ಅವಳು ಪ್ಲ್ಯಾಟ್‌ಫಾರ್ಮ್‌ನಿಂದ ದೂರ ಹೋಗದೆ ತನ್ನ ಬೋಗಿಯ ದಡದಲ್ಲೇ ಕೊಂಚ ದೂರವಷ್ಟೇ ನಡೆದು ಹೋಗಿದ್ದಳು. ಯಾಕೆಂದರೆ ಕ್ಯಾಂಝ್ ನಗರದಲ್ಲಿ ಅವಳಿಗೆ ಇನ್ನೇನು ರೈಲು ತಪ್ಪಿಸಿಕೊಳ್ಳುವುರಲ್ಲಿತ್ತು. ಅಲ್ಲಿ ಸುಮಾರು ಹನ್ನೆರಡು ನಿಮಿಷ ನಿಂತಿದ್ದ ರೈಲು ಇದ್ದಕ್ಕಿದ್ದಂತೆ ಹೊರಡುವ ಯಾವ ಸೂಚನೆಯನ್ನೂ ಕೊಡದೆ ದಿಢೀರ್ ಹೊರಟು ಬಿಟ್ಟಿತ್ತು. ಆಗ ಅವಳು ಅದೃಷ್ಟವಶಾತ್ ಸರಿಯಾದ ಸಮಯಕ್ಕೆ ರೈಲನ್ನು ಹತ್ತಿಕೊಂಡಿದ್ದಳು. ಅಮೇರಿಕನ್ ಮಹಿಳೆ ಕೊಂಚ ಕಿವುಡಿ. ಸರಿಯಾಗಿ ಕಿವಿ ಕೇಳಿಸುತ್ತಿರಲಿಲ್ಲ. ರೈಲು ಹೊರಡುವ ಸೂಚನೆಗಳನ್ನು ಕೊಟ್ಟಿದ್ದು, ಅವುಗಳು ತನಗೆ ಕೇಳಿಸದೇ ಹೋದರೆ ಅನ್ನುವ ಹೆದರಿಕೆ ಅವಳಿಗೆ.

ರೈಲು ಮಾರ್ಸೆಯನ್ನು ಬಿಟ್ಟಿತು. ಮಾರ್ಸೆಯಲ್ಲಿ ಕಂಬಿ ಬದಲಾವಣೆಯ ಅಂಗಳ ಹಾಗೂ ಫ್ಯಾಕ್ಟರಿಗಳ ಹೊಗೆ ಮಾತ್ರ ಇರಲಿಲ್ಲ. ಹಿಂದಿರುಗಿ ನೋಡಿದರೆ ಮಾರ್ಸೆಲ್ಲೆ ಮತ್ತದರ ಬಂದರಿನ ಹಿಂದೆ ಕಲ್ಲಿನ ಬೆಟ್ಟಗಳಿದ್ದವು. ಅಲ್ಲಿನ ನೀರಿನ ಮೇಲೆ ಸೂರ್ಯನ ಮುಳುಗುವಿಕೆಯ ಕಡೆಯ ಕ್ಷಣಗಳು ಕಣ್ಣಿಗೆ ಕಟ್ಟುವಂತಿದ್ದವು.

ಕತ್ತಲಾಗತೊಡಗಿದಂತೆ ರೈಲು ಬಯಲಲ್ಲಿದ್ದ ಹೊತ್ತಿ ಉರಿಯುತಿದ್ದ ಹೊಲ ಮನೆಯೊಂದು ತಟಾಯ್ತು. ದಾರಿಯುದ್ದಕ್ಕೂ ಮೋಟಾರ್ ಕಾರುಗಳು ನಿಂತಿದ್ದವು. ಮನೆಯೊಳಗಿದ್ದ ವಸ್ತುಗಳೆಲ್ಲಾ ಮನೆಯಾಚೆ ಅಸ್ತವ್ಯಸ್ತವಾಗಿ ಬಿದ್ದಿದ್ದವು. ಕೆಲವರು ಉರಿಯುತ್ತಿದ್ದ ಆ ಮನೆಯನ್ನು ನೋಡುತ್ತಾ ನಿಂತಿದ್ದರು. ಕತ್ತಲಾದ ಮೇಲೆ ರೈಲು ಅವನ್ಯೋನ್ ನಿಲ್ದಾಣ ತಲುಪಿತು. ಅಲ್ಲಿ ಇಳಿಯುವವರು ಇಳಿದರು. ಹತ್ತುವವರು ಹತ್ತಿಕೊಂಡರು. ಪ್ಯಾರಿಸ್‌ಗೆ ಹಿಂದಿರುಗುತ್ತಿದ್ದ ಫ್ರೆಂಚಿನವನೊಬ್ಬ ಪತ್ರಿಕೆಗಳ ಮಾರಾಟದ ಅಂಗಡಿಯಲ್ಲಿ ಅವತ್ತಿನ ಫ್ರೆಂಚ್ ಪತ್ರಿಕೆಗಳನ್ನು ಕೊಂಡು ತಂದ. ರೈಲು ನಿಲ್ದಾಣದ ಪ್ಲ್ಯಾಟ್‌ಫಾರ್ಮ್‌ನಲ್ಲಿ ನೀಗ್ರೋ ಸೈನಿಕರುಗಳಿದ್ದರು. ಅವರೆಲ್ಲರೂ ಕಂದು ಬಣ್ಣದ ಯೂನಿಫಾರ್ಮ್‌ಗಳನ್ನು ತೊಟ್ಟಿದ್ದರು. ಅವರೆಲ್ಲರೂ ಎತ್ತರಕ್ಕಿದ್ದರು. ಎಲೆಕ್ಟ್ರಿಕ್ ದೀಪದ ಬೆಳಕಿನಲ್ಲಿ ಅವರುಗಳ ಮುಖಗಳು ಹೊಳೆಯುತ್ತಿದ್ದವು. ಮುಖಗಳು ಕಪ್ಪಗಿದ್ದವು. ಅವರು ಎಷ್ಟು ಎತ್ತರ ಇದ್ದರು ಅಂದರೆ ಅವರನ್ನು ಕತ್ತೆತ್ತಿ ದಿಟ್ಟಿಸುವುದೇ ಕಷ್ಟವಾಗುತ್ತಿತ್ತು. ಆ ನೀಗ್ರೋಗಳು ಹಾಗೆ ಅಲ್ಲಿ ನಿಂತಿರುವಾಗಲೇ ರೈಲು ಅವನ್ಯೋನ್ ನಿಲ್ದಾಣದಿಂದ ಹೊರಟಿತು. ನೀಗ್ರೋಗಳ ಜೊತೆ ಬಿಳಿಯ ಸಾರ್ಜೆಂಟ್ ನಿಂತಿದ್ದ.

`ಲಿಟ್ ಸ್ಯಾಲಾನ್’ ಬೋಗಿಯೊಳಗೆ ಪರಿಚಾರಕ ಅವರುಗಳಿಗೆ ಮಲಗುವ ಸಲುವಾಗಿ ಮೂರು ಹಾಸಿಗೆಗಳನ್ನು ಅಣಿಗೊಳಿಸಿದ್ದ. ಅಮೇರಿಕನ್ ಮಹಿಳೆ ಇರುಳಿಡೀ ನಿದ್ದೆ ಮಾಡಿ ಹಂಗೆ ಹಾಸಿಗೆಯಲ್ಲಿ ಮೈ ಚೆಲ್ಲಿದ್ದಳು. ಇರುಳಿನಲ್ಲಿ ರೈಲಿನ ವೇಗಕ್ಕೆ ಅವಳು ಹೆದರುತ್ತಿದ್ದಳು. ಅವಳ ಹಾಸಿಗೆ ಕಿಟಕಿಯ ಪಕ್ಕಕ್ಕೇ ಇತ್ತು.

ಪಲೇರ್ಮೋದಿಂದ ತಂದಿದ್ದ ಕನೇರಾ ಹಕ್ಕಿಯ ಪಂಜರ ಬೋಗಿಯ ಕೈಕಾಲು ಮುಖ ತೊಳೆಯುವ ಮತ್ತು ಶೌಚಾಲಯಕ್ಕೆ ಹೋಗುವ ದಾರಿಯ ಕಾರಿಡಾರಿನಲ್ಲಿತ್ತು. ಅದರ ಮೇಲೆ ಬಟ್ಟೆಯೊಂದನ್ನು ಕವುಚಲಾಗಿತ್ತು. ಬೋಗಿಯ ಆಚೆ ನೀಲಿಯ ಬೆಳಕಿತ್ತು. ಆ ಇಡೀ ಇರುಳು ರೈಲು ದಡಬಡಿಸಿಕೊಂಡು ತುಂಬಾ ವೇಗದಿಂದ ಚಲಿಸುತ್ತಿತ್ತು. ಅಮೇರಿಕನ್ ಮಹಿಳೆ ಒಂಚೂರೂ ನಿದ್ದೆ ಮಾಡದೆ ಅಪಘಾತಕ್ಕಾಗಿ ಕಾಯುತ್ತಿದ್ದಳು.

ಬೆಳಕಾಗುವ ಹೊತ್ತಿಗೆ ರೈಲು ಪ್ಯಾರಿಸ್ ನಗರದ ಹತ್ತಿರದಲ್ಲಿತ್ತು. ಅಮೇರಿಕನ್ ಮಹಿಳೆ ಶೌಚಾಲಯಕ್ಕೆ ಹೋಗಿ ಬಂದಳು. ನಡು ಪ್ರಾಯದ ಅವಳು ಇರುಳಿಡೀ ಕಣ್ಣು ಮುಚ್ಚದಿದ್ದರೂ ತುಂಬಾ ಆರೋಗ್ಯಕರವಾಗಿ ಕಾಣುತ್ತಿದ್ದಳು. ಬಂದವಳೇ ಸೀದಾ ಹಕ್ಕಿಯ ಪಂಜರದತ್ತ ನಡೆದು ಅದಕ್ಕೆ ಕವುಚಿದ್ದ ಬಟ್ಟೆಯನ್ನು ತೆಗೆದು ಅದನ್ನು ಬಿಸಿಲು ಬರುತ್ತಿದ್ದ ಜಾಗದಲ್ಲಿ ನೇತಾಕಿ ತಿರುಗಿ ತಿಂಡಿ ತಿನ್ನುವ ಸಲುವಾಗಿ ರೈಲಿನ ತಿಂಡಿ ಬೋಗಿಯತ್ತ ಹೋದಳು. ಅವಳು ಮತ್ತೆ ಬೋಗಿಗೆ ಹಿಂದಿರುಗಿದಾಗ ಹಾಸಿಗೆಗಳನ್ನು ಮಡಚಿ ಕೂರುವ ಸೀಟುಗಳನ್ನಾಗಿ ಮಾರ್ಪಡಿಸಲಾಗಿತ್ತು. ಕನೇರಿ ಹಕ್ಕಿ ತೆರೆದಿದ್ದ ಕಿಟಕಿಯಿಂದ ತೂರಿ ಬರುತ್ತಿದ್ದ ಸೂರ್ಯನ ಬಿಸಿಲಿಗೆ ತನ್ನ ಪುಕ್ಕಗಳನ್ನು ಕೊಡವಿಕೊಳ್ಳುತ್ತಿತ್ತು. ರೈಲು ಪ್ಯಾರಿಸ್‌ಗೆ ತುಂಬಾ ಹತ್ತಿರವಾಯ್ತು.

`ಅವನಿಗೆ ಸೂರ್ಯನ ಬೆಳಕು ಅಂದ್ರೆ ತುಂಬಾ ಇಷ್ಟ. ಇನ್ನೊಂದು ಚಣ, ಹಾಡಾಕೆ ಶುರು ಮಾಡ್ತಾನೆ,’ ಅಂದಳು ಅಮೇರಿನ್ ಹೆಂಗಸು.

ಕನೇರಿ ತನ್ನ ಪುಕ್ಕಗಳನ್ನೊಮ್ಮೆ ಕೊಡವಿತು. ನಂತರ ಅವುಗಳನ್ನು ಕುಕ್ಕತೊಡಗಿತು. `ನಂಗೆ ಯಾವಾಗಲೂ ಹಕ್ಕಿಗಳೆಂದರೆ ಪಂಚ ಪ್ರಾಣ. ನಾನು ಈ ಕನೇರಿ ಹಕ್ಕೀನಾ ನನ್ನ ಪುಟ್ಟ ಮಗಳಿಗಾಗಿ ತಗಂಡು ಹೋಗ್ತಿದೀನಿ. ಹಾ, ಅಲ್ಲಿ ನೋಡಿ. ಅವನು ಈಗ ಹಾಡ್ತಾ ಇದಾನೆ,’ ಅಂದಳು ಅಮೇರಿಕನ್ ಹೆಂಗಸು. ಕನೇರಿ ಚಿಲಿಪಿಲಿಗುಟ್ಟತೊಡಗಿತು. ಅದರ ಗಂಟಲ ಮೇಲಿನ ಪುಕ್ಕಗಳು ನಿಮಿರಿ ನಿಂತವು. ನಂತರ ಅದು ತನ್ನ ಕೊಕ್ಕನ್ನು ಕೆಳಕ್ಕಾಕಿಕೊಂಡು ಪುಕ್ಕಗಳನ್ನು ಹೆಕ್ಕತೊಡಗಿತು. ರೈಲು ನದಿಯೊಂದನ್ನು ತಟಾಯ್ದು ನಂತರ ದಟ್ಟ ಕಾಡಿನೊಳಗೆ ಎಚ್ಚರಿಕೆಯಿಂದ ಸಾಗತೊಡಗಿತು. ರೈಲು ಪ್ಯಾರಿಸ್ ನಗರದ ಅನೇಕ ಹೊರಭಾಗಗಳನ್ನು ದಾಟಿತು. ಅಲ್ಲಿ ಅನೇಕ ಕಂಬಿ ಬಂಡಿಗಳಿದ್ದವು. ರೈಲಿಗೆ ಅಭಿಮುಖವಾಗಿದ್ದ ಗೋಡೆಗಳಲ್ಲಿ ಬೇಲ್ ಜಾರ್ಡಿಯನ್, ಡ್ಯೂ ಬಾನಟ್, ಪರ್ನಾಲ್ ಮುಂತಾದವರ ಬಗ್ಗೆ ದೊಡ್ಡ ದೊಡ್ಡ ಜಾಹಿರಾತುಗಳಿದ್ದವು. ಅಲ್ಲೆಲ್ಲಾ ರೈಲು ಚಲಿಸುತ್ತಿದ್ದಾಗ ಅದಿನ್ನೂ ಬೆಳಗಿನ ತಿಂಡಿಗೂ ಮುಂಚಿನ ಸಮಯದಂತೆ ಭಾಸವಾಗುತ್ತಿತ್ತು. ಕೆಲವು ನಿಮಿಷಗಳ ಕಾಲ ನಾನು ಅಮೇರಿಕನ್ ಹೆಂಗಿಸಿನ ಮಾತುಗಳಿಗೆ ಕಿವಿಗೊಡಲಿಲ್ಲ. ಆಗವಳು ನನ್ನ ಹೆಂಡತಿಯ ಹತ್ತಿರ ಮಾತನಾಡುತ್ತಿದ್ದಳು.

`ನಿನ್ನ ಗಂಡನೂ ಅಮೇರಿಕನ್ನಾ?’ ಆ ಹೆಂಗಸು ಕೇಳಿದಳು.

`ಹೌದು, ನಾವಿಬ್ಬರೂ ಅಮೇರಿಕನ್,’ ಅಂದಳು ನನ್ನ ಹೆಂಡತಿ.

`ನಾನು ಇಂಗ್ಲೀಷ್‌ನವರು ಅಂದುಕೊಂಡಿದ್ದೆ.’

`ಓಹ್, ಇಲ್ಲಾ ಇಲ್ಲ.’

`ಬಹುಶಃ ನನ್ನ ಷರಾಯಿಯ ತೂಗು ಪಟ್ಟಿಗಳನ್ನು ನೋಡಿ ನಿಮಗೆ ಹಂಗೆ ಅನಿಸಿರಬಹುದು,’ ಅಂದೆ ನಾನು.

ಅವಳಿಗೆ ನನ್ನ ಮಾತುಗಳು ಕೇಳಿಸಲಿಲ್ಲ. ಅವಳು ನಿಜಕ್ಕೂ ತುಂಬಾನೇ ಕಿವುಡಿಯಾಗಿದ್ದಳು. ಅವಳು ತುಟಿಗಳ ಚಲನೆಯನ್ನಾಧರಿಸಿ ಅರ್ಥಮಾಡಿಕೊಳ್ಳುತ್ತಿದ್ದಳು. ನಾನು ಅವಳತ್ತ ನೋಡಲಿಲ್ಲ. ಬದಲಿಗೆ ಕಿಟಕಿಯಾಚೆಗೆ ಕಣ್ಣು ನೆಟ್ಟೆ. ನನ್ನ ಹೆಂಡತಿಯೊಂದಿಗೆ ಅವಳು ಮಾತಾಡುತ್ತಲೇ ಇದ್ದಳು.

`ನೀವೂ ಅಮೇರಿಕನ್ಸ್ ಆಗಿರುವುದು ನಂಗೆ ತುಂಬಾ ಸಂತೋಷದ ಸಂಗತಿ. ಅಮೇರಿಕಾದ ಗಂಡಸರು ತುಂಬಾ ಒಳ್ಳೆಯ ಗಂಡಂದಿರಾಗಿರುತ್ತಾರೆ. ನಿಮಗೆ ಗೊತ್ತಾ, ಅದಕ್ಕಾಗೇ ನಾವು ಸ್ವಿಟ್ಜರ್‍ಲ್ಯಾಂಡಿನ ವೆವ್ವೆ ನಗರವನ್ನು ಬಿಟ್ಟದ್ದು. ಅಲ್ಲಿದ್ದಾಗ ನನ್ನ ಮಗಳು ಅಲ್ಲಿಯ ಯಾವನೋ ಒಬ್ಬನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು,’ ಅಂದ ಅಮೇರಿಕನ್ ಹೆಂಗಸು ಒಂದು ಚಣ ಮಾತು ನಿಲ್ಲಿಸಿದಳು. `ಅವರದ್ದು ಭಯಾನಕ ಹುಚ್ಚು ಪ್ರೀತಿಯಾಗಿತ್ತು,’ ಮತ್ತೆ ಮಾತು ನಿಲ್ಲಿಸಿದಳು. `ಆದ್ರೂ ನಾನವಳನ್ನ ಅಲ್ಲಿಂದ ಕರ್ಕಂಡು ಬಂದೆ ಬಿಡಿ,’ ಅಂದಳು.

ಅಲ್ಲಿ ಸುಮಾರು ಹನ್ನೆರಡು ನಿಮಿಷ ನಿಂತಿದ್ದ ರೈಲು ಇದ್ದಕ್ಕಿದ್ದಂತೆ ಹೊರಡುವ ಯಾವ ಸೂಚನೆಯನ್ನೂ ಕೊಡದೆ ದಿಢೀರ್ ಹೊರಟು ಬಿಟ್ಟಿತ್ತು. ಆಗ ಅವಳು ಅದೃಷ್ಟವಶಾತ್ ಸರಿಯಾದ ಸಮಯಕ್ಕೆ ರೈಲನ್ನು ಹತ್ತಿಕೊಂಡಿದ್ದಳು. ಅಮೇರಿಕನ್ ಮಹಿಳೆ ಕೊಂಚ ಕಿವುಡಿ. ಸರಿಯಾಗಿ ಕಿವಿ ಕೇಳಿಸುತ್ತಿರಲಿಲ್ಲ. ರೈಲು ಹೊರಡುವ ಸೂಚನೆಗಳನ್ನು ಕೊಟ್ಟಿದ್ದು, ಅವುಗಳು ತನಗೆ ಕೇಳಿಸದೇ ಹೋದರೆ ಅನ್ನುವ ಹೆದರಿಕೆ ಅವಳಿಗೆ.

`ಅದು ಸರಿ. ಆದರೆ ನಿಮ್ಮ ಮಗಳು ಅದರಿಂದ ಆಚೆ ಬಂದಳಾ?’ ನನ್ನ ಹೆಂಡತಿ ಕೇಳಿದಳು.

`ಹಂಗಂತ ನಂಗೆ ಅನುಸ್ತಾ ಇಲ್ಲ. ಏನನ್ನೂ ಸರಿಯಾಗಿ ತಿನ್ನಲ್ಲ, ನಿದ್ದೇನಂತೂ ಕತ್ರುಸಾ ಮಾಡಲ್ಲ. ನಾನು ಇನ್ನಿಲ್ಲದಂಗೆ ಶಕ್ತಿ ಮೀರಿ ಪ್ರಯತ್ನ ಪಟ್ಟೆ. ಆದರವಳು ಜಪ್ಪಯ್ಯ ಅಂತಾ ಇಲ್ಲ. ಯಾವುದರ ಮೇಲೂ ಅವಳಿಗೆ ಆಸಕ್ತೀನೇ ಇಲ್ಲ. ಯಾವ ಸಂಗತಿಗಳಿಗೂ ತಲೆ ಕೆಡಿಸ್ಕಣಲ್ಲ. ನನಗೆ ನಮ್ಮ ದೇಶದವನು ಅಲ್ಲದವನೊಂದಿಗೆ ಅವಳು ಮದುವೆ ಮಾಡಿಕೊಳ್ಳುವುದು ಇಷ್ಟವಿರಲಿಲ್ಲ,’ ಅಮೇರಿಕನ್ ಹೆಂಗಸು ಒಂದು ಚಣ ಮಾತಿಗೆ ಬಿಡುವು ಕೊಟ್ಟಳು. ನಂತರ ಮುಂದುವರೆದು ಹೇಳಿದಳು, `ಯಾರೋ ಒಬ್ಬರು ನನ್ನ ಸ್ನೇಹಿತರು ಒಮ್ಮೆ ಹೇಳಿದ್ದರು, `ಅಮೇರಿಕಾದ ಹುಡುಗಿಗೆ ಯಾವ ವಿದೇಶಿಯೂ ಒಳ್ಳೆಯ ಗಂಡನಾಗಲಿಕ್ಕೆ ಸಾಧ್ಯವೇ ಇಲ್ಲ ಅಂತ.’

`ಹೇಯ್, ಇಲ್ಲಾ ಬಿಡಿ ಹಂಗೇನಿಲ್ಲ,’ ಅಂದಳು ನನ್ನ ಹೆಂಡತಿ.

ಅಮೇರಿಕನ್ ಹೆಂಗಸು ನನ್ನ ಹೆಂಡತಿಯ ಪ್ರಯಾಣದ ಕೋಟನ್ನು ಹೊಗಳಿದಳು. ಆ ಹೊಗಳಿಕೆ ನಿಧಾನವಾಗಿ ಅವಳು ಸುಮಾರು ಇಪ್ಪತ್ತು ವರ್ಷಗಳಿಂದಲೂ ಬಟ್ಟೆಯನ್ನು ಖರೀದಿಸುತ್ತಿರುವ ರೂಸಂತನೋರೆ ವ್ಯಾಪಾರ ಬೀದಿಯಲ್ಲಿರುವ ಮೆಝೂನ್ ಡಿ ಕುಚುಯೋರ್ ಅಂಗಡಿಯ ಕಡೆಗೆ ತಿರುಗಿತು. ಆ ಅಂಗಡಿಯವರಿಗೆ ತನ್ನ ಅಳತೆ ಸದಾ ನೆನಪಲ್ಲಿರುವುದರಿಂದ ಅಂಗಡಿ ಮಾರಾಟಗಾತಿಗೆ ತನ್ನ ಅಭಿರುಚಿ ಚೆನ್ನಾಗಿ ಗೊತ್ತಿರುವುದರಿಂದ ಅವಳು ತನಗೆ ಬೇಕಾದ ದಿರಿಸುಗಳನ್ನು ಆ ಹುಡುಗಿಯೇ ಆರಿಸಿ ಅಮೇರಿಕಾಕ್ಕೆ ಕಳಿಸುತ್ತಾಳೆಂದು ಹೇಳಿದಳು. ಈಗಿರುವ ಮಾರಾಟದ ಹುಡುಗಿಯ ಹೆಸರು ಥೇಈಸ್ ಅಂತಲೂ ಅವಳಿಗೂ ಮುಂಚೆ ಇದ್ದವಳ ಹೆಸರು ಆಮಲಿ. ಕಳೆದ ಇಪ್ಪತ್ತು ವರ್ಷಗಳಿಂದಲೂ ಆ ಇಬ್ಬರು ಹುಡುಗಿಯರೇ ಅಂಗಡಿಯನ್ನು ನಿಭಾಯಿಸುತ್ತಿದ್ದಾರೆ. ಆಗಿನಿಂದಲೂ ಒಬ್ಬಳೇ ವಿನ್ಯಾಸಕಾರ್ತಿ. ಆದರೆ ಬೆಲೆಗಳು ಮಾತ್ರ ಗಗನಕ್ಕೆ ಹೋಗಿವೆ. ಈಗ ಆ ಅಂಗಡಿಯವರ ಬಳಿ ಅವಳ ಮಗಳ ಮೈಯ ಅಳತೆ ಕೂಡಾ ಇದೆ. ಅವಳು ಈಗಾಗಲೇ ಬೆಳೆದಿರುವುದರಿಂದ ಅಳತೆಯಲ್ಲಿ ಅಂಥ ಬದಲಾವಣೆ ಆಗೋಕೆ ಸಾಧ್ಯವಿಲ್ಲ, ಅಂತಲೂ ಹೇಳಿದಳು.

ರೈಲು ಈಗ ಪ್ಯಾರಿಸ್ ನಗರವನ್ನು ಪ್ರವೇಶಿಸುತ್ತಿತ್ತು. ಬೆಳಗಿನ ಐದಕ್ಕೆ ಇಟಲಿಗೆ ಹೋಗುವ ಕಂದು ಬಣ್ಣದ ಮರದ ತಿಂಡಿ ಡಬ್ಬಿ ಕಾರುಗಳು, ಕಂದು ಬಣ್ಣದ ಮಲಗುಗೋಣೆಗಳಿದ್ದ ಕಾರುಗಳು ಮುಂತಾದ ಅನೇಕ ಕಾರುಗಳು ಅಲ್ಲಿ ನಿಂತಿದ್ದವು. ಒಂದು ವೇಳೆ ರೈಲು ಐದಕ್ಕೆ ಬಿಡದೇ ಹೋದಲ್ಲಿ ಅವೆಲ್ಲಾ ಪ್ಯಾರೀಸ್-ರೋಮ್‌ನತ್ತ ಮುಖ ಮಾಡುತ್ತಿದ್ದವು.

`ಅಮೇರಿಕಾದ ಗಂಡಸರು ತುಂಬಾ ಒಳ್ಳೆಯ ಗಂಡಂದಿರಾಗಿ ಇರ್ತಾರೆ, ಮದುವೆ ಆಗಬೇಕು ಅಂದ್ರೆ ಇಡೀ ಪ್ರಪಂಚದಲ್ಲಿ ಕೇವಲ ಅಮೇರಿಕಾದ ಗಂಡಸರನ್ನೇ ಮದುವೆ ಆಗಬೇಕು,’ ಅಂದಳು ಅಮೇರಿಕನ್ ಹೆಂಗಸು ನನ್ನ ಹೆಂಡತಿಗೆ. ನಾನು ನನ್ನ ಬ್ಯಾಗುಗಳನ್ನು ಕೆಳಗಿಳಿಸಿಕೊಳ್ಳುತ್ತಿದ್ದೆ.

`ನೀವು ವೆವ್ವೆಯನ್ನು ಬಿಟ್ಟು ಎಷ್ಟು ವರ್ಷ ಆಯ್ತು?’ ನನ್ನ ಹೆಂಡತಿ ಕೇಳಿದಳು.

`ಈ ಶರತ್ಕಾಲಕ್ಕೆ ಎರಡು ವರ್ಷದ ಹಿಂದೆ, ಕನೇರಿನಾ ಯಾಕೆ ತಗಂಡು ಹೋಗ್ತಿದೀನಿ ಗೊತ್ತಾ? ನನ್ನ ಮಗಳಿದಾಳಲ್ಲ ಅವಳಿಗೆ,’ ಅಂದಳು ಅವಳು.

`ನಿಮ್ಮ ಹುಡುಗಿ ಪ್ರೀತಿಸಿದ ಆ ಹುಡುಗ ಸ್ವಿಸ್‌ನವನಾ?’ ನನ್ನ ಹೆಂಡತಿ ಕೇಳಿದಳು.

`ಹೌದು. ಅವನು ವೆವ್ವೆಯ ತುಂಬಾ ಒಳ್ಳೆಯ ಕುಟುಂಬದಿಂದ ಬಂದವನು. ಅವನು ಮುಂದೆ ಇಂಜಿನಿಯರ್ ಕೂಡಾ ಆಗ್ತಾನೆ. ಅವರಿಬ್ಬರ ಭೇಟಿಯಾಗಿದ್ದು ವೆವ್ವೆಯಲ್ಲೇ. ಅವರಿಬ್ಬರೂ ನಡೆಯುತ್ತಾ ತುಂಬಾ ದೂರದವರೆಗೂ ಹೋಗುತ್ತಿದ್ದರು,’ ಅಂದಳು ಅಮೇರಿಕನ್ ಹೆಂಗಸು.

`ನಂಗೆ ವೆವ್ವೆ ಗೊತ್ತು. ನಾವು ನಮ್ಮ ಹನಿಮೂನ್‌ಗೆ ಅಲ್ಲಿಗೆ ಹೋಗಿದ್ದೆವು,’ ಅಂದಳು ನನ್ನ ಹೆಂಡತಿ.

`ಓಹ್, ನೀವು ನಿಜಕ್ಕೂ ಹೋಗಿದ್ರಾ? ಲವ್ಲಿ, ಅದರ ಮಜಾನೇ ಬೇರೆ ಬಿಡಿ. ಅವಳು ಹಂಗೆ ಪ್ರೀತೀಲಿ ಬೀಳ್ತಾಳೆ ಅಂತ ನಂಗೆ ಖಂಡಿತವಾಗೂ ಗೊತ್ತಿರಲಿಲ್ಲ,’ ಅಂದಳು.

`ಅದು ತುಂಬಾ ಸುಂದರವಾದ ಊರು,’ ಅಂದಳು ನನ್ನ ಹೆಂಡತಿ.

`ಹೌದು. ತುಂಬಾ ಚೆನ್ನಾಗಿದೆ ಅಲ್ವಾ? ಅಲ್ಲಿ ನೀವು ಎಲ್ಲಿ ಉಳುಕಂಡಿದ್ರಿ?’ ಕೇಳಿದಳು ಅಮೇರಿಕನ್ ಹೆಂಗಸು.

`ನಾವು ಟ್ವಾ ಕ್ಯಾರಾನ್‌ನಲ್ಲಿ,’ ಅಂದಳು ನನ್ನ ಹೆಂಡತಿ.

`ಅದು ತುಂಬಾ ಒಳ್ಳೆಯ ಹಳೆಯ ಹೊಟೇಲು,’ ಅಂದಳು ಅಮೇರಿಕನ್ ಹೆಂಗಸು.

`ಹೌದು. ನಾವು ತುಂಬಾ ಚಂದದ ರೂಮಿನಲ್ಲಿ ಉಳುಕಂಡಿದ್ದೆವು. ಶರತ್ಕಾಲದಲ್ಲಂತೂ ಆ ದೇಶ ಎಷ್ಟು ಸುಂದರ ಅಂತೀರಿ.’

`ಓಹ್, ಹಂಗಾದ್ರೆ ನೀವು ಶರತ್ಕಾಲದಲ್ಲಿ ಅಲ್ಲಿದ್ರ?’

`ಹೌದು,’ ಅಂದಳು ನನ್ನ ಹೆಂಡತಿ.

ಅಪಘಾತದಲ್ಲಿ ನಜ್ಜುಗುಜ್ಜಾಗಿದ್ದ ಮೂರು ಕಾರುಗಳನ್ನು ನಾವು ತಟಾಯ್ದೆವು. ಅವು ಉದ್ದಕ್ಕೆ ಸೀಳಿಕೊಂಡಿದ್ದವು. ಅವುಗಳ ಮೇಲ್ಚಾವಣಿಗಳು ಇಳಿ ಬಿದ್ದಿದ್ದವು.
`ನೋಡಿ ಇಲ್ಲಿ, ಎಂಥಾ ಅಪಘಾತ ಆಗಿದೆ,’ ಅಂದೆ ನಾನು.

ಅಮೇರಿಕನ್ ಹೆಂಗಸು ಅತ್ತ ನೋಡಿದಳು. ಅವಳಿಗೆ ಕಡೆಯ ಕಾರು ಮಾತ್ರ ಕಂಡಿತು. `ನಾನು ಇರುಳಿಡೀ ಅಪಘಾತದ ಭಯಕ್ಕೆ ಜೀವ ಎಡಗೈಲಿ ಹಿಡ್ಕಂಡು ಕೂತಿದ್ದೆ. ಕೆಲವೊಮ್ಮೆ ನಂಗೆ ಮುಂದೆ ಸಂಭವಿಸಬಹುದಾದ ಕೆಲವು ಸಂಗತಿಗಳ ಬಗ್ಗೆ ಭಯಾನಕ ಮುನ್ನರಿವಾಗುತ್ತದೆ. ಇನ್ನು ಮೇಲೆ ನಾನ್ಯಾವತ್ತು ಇಷ್ಟು ಜೋರಾಗಿ ಹೋಗುವ ಇರುಳಿನ ರೈಲಿನಲ್ಲಿ ಪ್ರಯಾಣ ಮಾಡಲ್ಲ. ಜೋರಾಗಿ ಹೋಗದ ತುಂಬಾ ಆರಾಮಾಗಿರುವ ರೈಲುಗಳು ಇದ್ದೇ ಇರ್ತಾವೆ,’ ಅಂದಳು ಅಮೇರಿಕನ್ ಹೆಂಗಸು.

ರೈಲು ಪ್ಯಾರಿಸ್‌ನ ಗ್ಯಾರೆ ಡಿ ಲ್ಯಾನ್ ರೈಲ್ವೇ ನಿಲ್ದಾಣವನ್ನು ತಲುಪಿತು. ಹೊರೆಯಾಳುಗಳು ಕಿಟಕಿಗಳ ಬಳಿ ಓಡೋಡಿ ಬಂದರು. ನಾನು ಕಿಟಕಿಗಳ ಮೂಲಕವೇ ಬ್ಯಾಗುಗಳನ್ನು ಅವರ ಕೈಗೆ ಕೊಟ್ಟೆ. ನಂತರ ದೀರ್ಘವಾಗಿದ್ದ ಮಂದ ಬೆಳಕಿನ ಪ್ಲ್ಯಾಟ್‌ಫಾರ್ಮ್‌ಗೆ ನಾವು ಇಳಿದೆವು. ಅಮೇರಿಕನ್ ಮಹಿಳೆ ಮೂವರು ಅಡಿಗೆಯವರಲ್ಲಿ ಒಬ್ಬ ಅಡಿಗೆಯವನು ಕಳಿಸಿದ್ದವನೊಂದಿಗೆ ತಾನೇ ಖುದ್ದಾಗಿ ಜವಾಬ್ದಾರಿ ತೆಗೆದುಕೊಂಡಳು. `ಒಂದು ಚಣ ತಾಳಿ ಮೇಡಂ, ನಿಮ್ಮ ಹೆಸರನ್ನ ನೋಡ್ತೀನಿ,’ ಅಂದ ಆ ಅಡಿಗೆಯವನು.

ಹೊರೆಯಾಳು ಟ್ರಕ್ಕೊಂದನ್ನು ಕರೆದುಕೊಂಡು ಬಂದು ಅದರ ಮೇಲೆ ಲಗೇಜುಗಳನ್ನು ಪೇರಿಸಿದ. ನಾನು ಮತ್ತು ನನ್ನ ಹೆಂಡತಿ ಅಮೇರಿಕನ್ ಮಹಿಳೆಗೆ ಗುಡ್ ಬೈ ಹೇಳಿದೆವು. ಅಡಿಗೆಯವನು ಕಳಿಸಿದ್ದ ವ್ಯಕ್ತಿ ಟೈಪ್ ಮಾಡಲಾಗಿದ್ದ ಕಾಗದದ ಹಾಳೆಗಳಲ್ಲಿ ಅಮೇರಿಕನ್ ಹೆಂಗಸಿನ ಹೆಸರನ್ನು ಪತ್ತೆ ಹಚ್ಚಿ ಮತ್ತೆ ಅವುಗಳನ್ನು ಮಡಿಚಿ ತನ್ನ ಜೇಬಿನೊಳಕ್ಕೆ ಇಟ್ಟುಕೊಂಡ.

ನಾವು ರೈಲಿನ ಹಿಂಬದಿಗಿದ್ದ ಸಿಮೆಂಟಿನ ಉದ್ದನೆಯ ಇಳಿಜಾರಿನ ಪ್ಲ್ಯಾಟ್‌ಫಾರ್ಮ್‌ನಲ್ಲಿ ಟ್ರಕ್ಕಿನೊಂದಿಗೆ ಮುಂದೋಗುತ್ತಿದ್ದ ಹೊರೆಯಾಳುವನ್ನೇ ಹಿಂಬಾಲಿಸಿದೆವು. ಅದರ ಕೊನೆಯಲ್ಲೊಂದು ಗೇಟಿತ್ತು. ಅಲ್ಲೊಬ್ಬ ವ್ಯಕ್ತಿ ನಮ್ಮ ಟಿಕೇಟುಗಳನ್ನು ಇಸುಕಂಡ.

ಮುಂದೆ ನಾವಿಬ್ಬರೂ ಬೇರೆಬೇರೆಯಾಗಿ ಬದುಕಲು ಮನೆಗಳನ್ನು ಹುಡುಕಿಕೊಳ್ಳುವ ಸಲುವಾಗಿ ಪ್ಯಾರಿಸ್‌ಗೆ ಹಿಂದಿರುಗುತ್ತಿದ್ದೆವು.

***
*ಕನೇರಿ: ಕನೇರಿ ದ್ವೀಪಗಳ ಸೆರಿನಸ್ ಕನೇರಿಯಸ್ ಕುಲಕ್ಕೆ ಸೇರಿದ ಹಳದಿ ಗರಿಗಳುಳ್ಳ ಹಾಡುವ ಹಿಂಚ್ ಹಕ್ಕಿ.

(ಕೃತಿ: ಹೆಮಿಂಗ್ವೆ, ಇಂಡಿಯನ್‌ ಕ್ಯಾಂಪ್‌ ಮತ್ತು ಇತರ ಕಥೆಗಳು (ಕಥಾ ಸಂಕಲನ), ಲೇಖಕರು: ಎಸ್.‌ ಗಂಗಾಧರಯ್ಯ, ಪ್ರಕಾಶಕರು: ಬಿಸಿಲ ಕೋಲು ಪ್ರಕಾಶನ, ಬೆಲೆ: 160/-)