ರಾತ್ರಿ ಉಚ್ಚೆ ಉಯ್ಯಲು ಹೊರ ಬಂದು ನೋಡಿದಾಗ ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದ ತೆಂಗಿನ ಮರಗಳು ದೆವ್ವದಂತೆ ಕಾಣುತ್ತಿದ್ದವು. ಹಾಸ್ಟೆಲ್ ಹುಡುಗರು ಸಂಜೆ ಸ್ಕೂಲಿಂದ ಬಂದರೆಂದರೆ ಗುರಿ ಇಟ್ಟು ಕಲ್ಲು ಬೀಸಿ ತೆಂಗಿನ ಕಾಯಿ ಉದುರಿಸುತ್ತಿದ್ದರು. ಪ್ರತಿನಿತ್ಯ ಒಂದೆರಡು ತೆಂಗಿನ ಕಾಯಿ ಕಿತ್ತು ಚೂಪಾದ ಕಲ್ಲಿನಿಂದ ಮತ್ತು ಹಲ್ಲಿನಿಂದ ಸಿಪ್ಪೆ ಸಿಗಿದು ಕಾಯಿ ಕೆಚ್ಚಿ ಪಚಿಡಿ ಮಾಡಿ ತಿನ್ನುತ್ತಿದ್ದೆವು. ತೋಟದ ಮಾಲೀಕರಿಗೆ ಗೊತ್ತಾದರೆ ದೊಣ್ಣೆಯೊಂದಿಗೆ ಓಡಿಸಿಕೊಂಡು ಬರುತ್ತಿದ್ದರು. ಅವರ ಹತ್ತಿರ ಬಂದೂಕು ಇದೆ, ಅವರು ನಿರ್ದಯಿಗಳು, ಕಳ್ಳತನ ಮಾಡಿದರೆ ಗುಂಡು ಹಾರಿಸಿ ಸುಟ್ಟು ಬಿಡುತ್ತಾರೆಂದು ಅಡುಗೆ ಭಟ್ಟ ಬಸವರಾಜಣ್ಣ ಸದಾ ಎಚ್ಚರಿಸುತ್ತಿದ್ದ.
ಗುರುಪ್ರಸಾದ್ ಕಂಟಲಗೆರೆ ಬರೆಯುವ ‘ಟ್ರಂಕು ತಟ್ಟೆ’ಸರಣಿಯ ಎರಡನೇ ಕಂತು

 

ನಾವಿದ್ದ ಹಾಸ್ಟೆಲ್ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಹಂದಿಗೂಡಿಗೂ ಕಡೆಯಾಗಿತ್ತು. ಶೌಚಾಲಯ, ಸ್ನಾನಗೃಹವಿರಲಿ ಕುಡಿಯುವ ನೀರು ಸಹ ಇರಲಿಲ್ಲ. ಮಾಜಿ ದನದ ಕೊಟ್ಟಿಗೆ ಎಂದಮೇಲೆ ಹಂದಿ ದನಗಳಿಗೆಲ್ಲಿಂದ ಶೌಚಾಲಯ, ಸ್ನಾನಗೃಹ ತರುವುದು! ಎರಡು ಹೈಸ್ಕೂಲ್ ಮತ್ತು ಒಂದು ಕಾಲೇಜು ಹಾಸ್ಟೆಲ್‌ನಿಂದ ಸುಮಾರು ಮುನ್ನೂರು ಹುಡುಗರಿದ್ದ ಹಾಸ್ಟೆಲ್‌ಗೆ ಒಂದೇ ಒಂದು ಶೌಚಾಲಯವಾಗಲಿ, ಸ್ನಾನಗೃಹವಾಗಲಿ ಇರಲಿಲ್ಲ. ನಾವಿದ್ದ ಗಂಗಾಧರಪ್ಪನವರ ತೆಂಗಿನ ತೋಟದಲ್ಲಿ ಬಹಿರ್ದೆಸೆಗೆ ಹೋಗಲು ತೆಂಗಿನ ಮರದ ಬುಡದಲ್ಲಿ ಮೊಣಕಾಲುದ್ದ ಬೆಳೆದಿದ್ದ ಹುಲ್ಲು ಮೆಣೆಗಳನ್ನು ಆಶ್ರಯಿಸುತ್ತಿದ್ದೆವು. ತೋಟದ ತುಂಬ ಎಲ್ಲಿ ನೋಡಿದರೂ ಹಸಿ ಹಸಿ ಹೇಲು ಕೆಂಡದಂತೆ ಬಿದ್ದಿರುತಿತ್ತು. ನಾವು ಶಾಲೆಗೆ ಹೋಗುವಾಗ ನಮ್ಮ ಬರಿ ಕಾಲುಗಳಲ್ಲಿ ಆ ಕೆಂಡದಂತಿದ್ದ ಹೇಲನ್ನು ದಾಟಿಕೊಂಡು ಹೋಗುತ್ತಿದ್ದೆವು. ಸದಾ ಯಾರಾದರೊಬ್ಬರು ಎಲ್ಡಕ್ಕೆ ಕೂತೆ ಇರುತಿದ್ದರು. ಎಷ್ಟೋ ಸಲ ನಾವು ಅವರನ್ನು ಬಳಸಿಕೊಂಡು ಹೋಗುತ್ತಿದ್ದೆವು. ಅವಸರಕ್ಕೆ ಮಲವಿಸರ್ಜನೆಯನ್ನೇನೋ ಮಾಡಿಬಿಡುತ್ತಿದ್ದೆವು. ಆದರೆ ತೊಳೆಯುವುದು ಎಲ್ಲಿಂದ? ಈಗ ಅದೊಂದು ಯಕ್ಷ ಪ್ರಶ್ನೆಯಾಗಿರುವಾಗ, ಆ ದಿನಗಳಲ್ಲಿ ಅದೊಂದು ಸಮಸ್ಯೆ ಎಂದು ಯಾರಿಗೂ ಅನಿಸಿದಂತಿರಲಿಲ್ಲ.

ನಾವಿದ್ದ ಮಾವಿನ ತೋಪಿನ ಹಾಸ್ಟೆಲ್ ಇಡೀ ತಿಪಟೂರಿಗೆ ತಗ್ಗಿನ ಪ್ರದೇಶವಾಗಿತ್ತು. ಪುರಸಭೆಯವರು ವಾರಕ್ಕೆ ಒಂದೆರಡು ಸರ್ತಿ ಬಿಡುತಿದ್ದ ನೀರು ಊರ ಕಷ್ಮಲವನ್ನೆಲ್ಲ ಹೊತ್ತು ನಾವಿರುವೆಡೆಗೆ ಬರುತ್ತಿತ್ತು. ರೈಲ್ವೆ ಸ್ಟೇಷನ್ ಪಕ್ಕದ ಮಾವಿನ ತೋಪಿನಲ್ಲಿದ್ದ ಸ್ಲಂ ಜನರ ಗುಡಿಸಲುಗಳಿಗೆ ಬೆಂಕಿ ಬಿದ್ದು ಅವೆಲ್ಲ ಸುಟ್ಟು ಬೂದಿಯಾಗಿದ್ದವು. ಅವರು ಮತ್ತೆ ಅದೇ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಪುನರ್‍ವಸತಿ ಕಲ್ಪಿಸಿಕೊಳ್ಳಲು ಹವಣಿಸುತ್ತಿದ್ದರು. ಸುಟ್ಟು ಕರಕಲಾಗಿರುವ ಅವಶೇಷಗಳು, ಮೋಟುಗೋಡೆಗಳು ಬೆಂಕಿ ಬಿದ್ದಿರುವುದಕ್ಕೆ ಕುರುಹಾಗಿದ್ದವು. ಆ ಸ್ಲಂ ಜನರಲ್ಲಿ ಅನೇಕ ಕುಟುಂಬಗಳು ಬಂಡುಕೋರರಂತೆ ಬಂದು ಕಾಲೇಜು ಹಾಸ್ಟೆಲ್ ಹುಡುಗರ ರೂಮುಗಳಲ್ಲಿ ತಂಗಿದ್ದರು. ಅವರ ಬೆಳೆದು ನಿಂತ ಹೆಣ್ಣುಮಕ್ಕಳೂ ಇರುತ್ತಿದ್ದರು. ಪರಿಣಾಮವಾಗಿ ಒಂದು ರೂಮಿನಲ್ಲಿ ವಿದ್ಯಾರ್ಥಿಗಳಿದ್ದರೆ ಅದರ ಪಕ್ಕದ ರೂಮಿನಲ್ಲೆ ಸ್ಲಂ ವಾಸಿಗಳಿರುತ್ತಿದ್ದರು. ಸ್ಲಂಕುಟುಂಬಗಳು ಪಕ್ಕದ ರೂಮಿಗೆ ಬಂದುದರಿಂದ ಒಂದಿಷ್ಟು ಅನುಕೂಲವೂ ಆಗಿತ್ತು. ಹೇಗೆಂದರೆ ಸ್ಲಂನವರ ರೂಮುಗಳಲ್ಲಿ ಮಿಣುಕುತ್ತಿದ್ದ ಪೋರ್ಟಬಲ್ ಟೀವಿಗಳಲ್ಲಿ ಬರುತ್ತಿದ್ದ ಪಿಚ್ಚರ್ ನೋಡಲು ನಮ್ಮುಡುಗರು ಇಣುಕುತ್ತಿದ್ದರು. ಶುಕ್ರವಾರದ ಚಿತ್ರಮಂಜರಿ, ಭಾನುವಾರದ ಸಂಜೆ ಪಿಚ್ಚರ್ ನೋಡಲು ಅವರ ರೂಮುಗಳು ರಷ್ ಆಗುತ್ತಿದ್ದವು. ಒಬ್ಬರ ತಲೆ ಇನ್ನೊಬ್ಬರು ನೋಡಿಕೊಂಡು ನಿಂತಿರುತ್ತಿದ್ದರು. ಫೈಟಿಂಗ್ ಸೀನ್‌ಗಳಲ್ಲಂತು ಹೀರೊ ಹೊಡೆಯುವ ಒಂದೋ ಎರಡೋ ಡಿಶುಂ ಕಾಣಿಸಿದರೆ ಪುಣ್ಯ ಇನ್ನೊಂದು ಏಟು ನೋಡುವಷ್ಟರಲ್ಲಿ ಇನ್ನೊಬ್ಬನ ತಲೆ ಅಡ್ಡಬಂದಿರುತ್ತಿತ್ತು. ಪಿಚ್ಚರ್ ಮುಗಿದ ಮೇಲೆ ಇದನ್ನೇ ರಾತ್ರಿಯೆಲ್ಲ ಚಪ್ಪರಿಸುತ್ತಿದ್ದೆವು.

ದಿಬ್ಬದಲ್ಲಿದ್ದ ಸ್ಲಂನಿಂದ ಹರಿದು ಬರುತ್ತಿದ್ದ ಕೊಳಚೆ ನೀರು ಕಪ್ಪಗೆ ಕಿಲುಬುಗಟ್ಟಿ ಸಣ್ಣ ಕಾಲುವೆಗಳಲ್ಲಿ ಹರಿಯುತ್ತಿತ್ತು. ಆ ಕಪ್ಪು ನೀರಿನಲ್ಲಿ ತಿಗ ತೊಳೆದುಕೊಳ್ಳಲು ಕೂತರೆ ಬೆರಳುಗಳಿಗೆ ಅದೇನೇನೋ ಸಿಗುತ್ತಿತ್ತು. ಕೆಲವೊಮ್ಮೆ ಅದನ್ನೇ ಮೆತ್ತಿಕೊಳ್ಳುತ್ತಿದ್ದೆವು.

ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದ ತೆಂಗಿನಮರಗಳು ರಾತ್ರಿ ಉಚ್ಚೆ ಉಯ್ಯಲು ಹೊರ ಬಂದು ನೋಡಿದಾಗ ದೆವ್ವದಂತೆ ಕಾಣುತ್ತಿದ್ದವು. ಹಾಸ್ಟೆಲ್ ಹುಡುಗರು ಸಂಜೆ ಸ್ಕೂಲಿಂದ ಬಂದರೆಂದರೆ ಗುರಿ ಇಟ್ಟು ಕಲ್ಲು ಬೀಸಿ ತೆಂಗಿನ ಕಾಯಿ ಉದುರಿಸುತ್ತಿದ್ದರು. ಪ್ರತಿನಿತ್ಯ ಒಂದೆರಡು ತೆಂಗಿನ ಕಾಯಿ ಕಿತ್ತು ಚೂಪಾದ ಕಲ್ಲಿನಿಂದ ಮತ್ತು ಹಲ್ಲಿನಿಂದ ಸಿಪ್ಪೆ ಸಿಗಿದು ಕಾಯಿ ಕೆಚ್ಚಿ ಪಚಿಡಿ ಮಾಡಿ ತಿನ್ನುತ್ತಿದ್ದೆವು. ತೋಟದ ಮಾಲೀಕರಿಗೆ ಗೊತ್ತಾದರೆ ದೊಣ್ಣೆಯೊಂದಿಗೆ ಓಡಿಸಿಕೊಂಡು ಬರುತ್ತಿದ್ದರು. ಅವರ ಹತ್ತಿರ ಬಂದೂಕು ಇದೆ, ಅವರು ನಿರ್ದಯಿಗಳು, ಕಳ್ಳತನ ಮಾಡಿದರೆ ಗುಂಡು ಹಾರಿಸಿ ಸುಟ್ಟು ಬಿಡುತ್ತಾರೆಂದು ಅಡುಗೆ ಭಟ್ಟ ಬಸವರಾಜಣ್ಣ ಸದಾ ಎಚ್ಚರಿಸುತ್ತಿದ್ದ. ಆದರೂ ಪ್ರತಿದಿನ ಕಲ್ಲೊಡೆದು ಕಾಯಿ ಕಿತ್ತು ತಿನ್ನುವುದು ತಪ್ಪಿರಲಿಲ್ಲ.

ಬೆಳಗ್ಗೆ ಆರು ಗಂಟೆಗೆ ನಡೆಯುವ ಪ್ರೇಯರ್‌ಗೆ ಪಾಲ್ಗೊಳ್ಳದಿದ್ದರೆ ವಾರ್ಡನ್‌ರಿಂದ ಬೀಳುವ ಏಟುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಅಷ್ಟೊತ್ತಿಗೆ ಏನಾದರೂ ಮಾಡಿ ಮುಖ ತೊಳೆಯಲೇಬೇಕಿತ್ತು. ಮುಖ ತೊಳೆಯುವ ನೀರಿಗಾಗಿ ಅಂಗೈಗೆ ಹಲ್ಲುಪುಡಿ ಸುರಿದುಕೊಂಡು ಸೊಂಟಕ್ಕೆ ಟವಲ್ ಸುತ್ತಿಕೊಂಡು ಹಿಂಡುಹಿಂಡಾಗಿ ತಿಪಟೂರು ತುಂಬಾ ಅಲೆಯುತ್ತಿದ್ದೆವು.

ಬಿಡಿಒ ಆಫೀಸ್ ಹಿಂಭಾಗದಲ್ಲಿ ಒಂದು ಕೈಪಂಪ್ ಇತ್ತು. ಅದರಲ್ಲಿ ಸರದಿಯಂತೆ ನೀರು ಜಗ್ಗಿಕೊಂಡು ಕೈಕಾಲು ಮುಖ ತೊಳೆದುಕೊಳ್ಳುತ್ತಿದ್ದೆವು. ಸ್ವಲ್ಪ ದಿನದಲ್ಲೇ ಅದರಲ್ಲಿನ ನೀರು ಬತ್ತಿ ಹೋದುದರಿಂದ ಮತ್ತೆ ಚಿಂತೆಗೀಡಾದೆವು. ವಾರ್ಡನ್ ನಮ್ಮ ಯಾವ ಸಬೂಬುಗಳನ್ನು ಕೇಳುತ್ತಿರಲಿಲ್ಲ. ಪ್ರೇಯರ್‌ಗೆ ಮುಖ ತೊಳೆದುಕೊಂಡು ಸಿದ್ಧರಿರಬೇಕು ಅಷ್ಟೆ! ಒಬ್ಬ ಜಲಾನಯನಿ ಹುಡುಗ ನಗರದ ಬಿ.ಹೆಚ್. ರಸ್ತೆಯಲ್ಲಿ ಒಂದು ಜಲತಾಣವನ್ನು ಕಂಡು ಹಿಡಿದುಕೊಂಡು ಬಂದು ನಮ್ಮಲ್ಲಿ ಕೆಲವರಿಗೆ ತಿಳಿಸಿದ. ನಾವು ರಹಸ್ಯವಾಗಿ ಆ ಜಾಗವನ್ನು ಹುಡುಕಿಕೊಂಡು ಹೋದೆವು. ಅದು ತಿಪಟೂರು ಪುರಸಭೆ ಆವರಣವಾಗಿತ್ತು. ಅಲ್ಲಿ ಒಂದು ನೀಲಿ ಬಣ್ಣದ ಈಶ್ವರನ ಆಳೆತ್ತರದ ವಿಗ್ರಹವಿತ್ತು. ಅದರ ಮುಡಿಯಲ್ಲಿರುವ ಗಂಗೆಯ ಬಾಯಿಂದ ನೀರು ಸುರಿಯುವಂತೆ ಮಾಡಲಾಗಿತ್ತು. ಆ ನೀರು ಬಂದು, ಕೂತಿರುವ ಶಿವನ ಕಮಲದಾಕಾರದ ತೊಟ್ಟಿಯಲ್ಲಿ ಸಂಗ್ರಹವಾಗುತ್ತಿತ್ತು. ನಾವು ಅದನ್ನು ಕಂಡವರೆ ಹಿರಿ ಹಿರಿ ಹಿಗ್ಗಿದೆವು. ಸ್ವಚ್ಛಂದವಾಗಿ ಹಲ್ಲುಜ್ಜಿ ಮುಖ ತೊಳೆದುಕೊಂಡು ಹೋಗಿ ಪ್ರೇಯರ್‌ನಲ್ಲಿ ಪಾಲ್ಗೊಂಡೆವು.

ಸುಮಾರು ದಿನಗಳ ಕಾಲ ಹೀಗೆ ಮಂದುವರಿಯಿತು. ಅಲ್ಲಿದ್ದ ನೌಕರರೂ ಕೂಡ ನಮ್ಮನ್ನು ಮೊದಮೊದಲು ಪ್ರಶ್ನಿಸಲಿಲ್ಲ. ಆದರೆ ನಾವು ಎಸಗಿದ ಪ್ರಮಾದದಿಂದಾಗಿ ಸ್ವಲ್ಪದರಲ್ಲೇ ಅದರ ಬಾಯಿಗೂ ಮಣ್ಣಾಕಿಕೊಂಡೆವು. ಅಲ್ಲಿ ನೀರಿರುವ ವಿಷಯ ಒಬ್ಬರಿಂದ ಒಬ್ಬರಿಗೆ ಹಾಸ್ಟೆಲ್‌ನ ಎಲ್ಲರಿಗೂ ಹರಡಿದುದರಿಂದ ಎಲ್ಲರೂ ಅಲ್ಲಿಗೆ ಲಗ್ಗೆ ಇಡತೊಡಗಿದರು. ಲಗ್ಗೆ ಇಟ್ಟರೂ ಪರವಾಗಿಲ್ಲ, ಹಲ್ಲುಜ್ಜಿ ಬಂದ ನೊರೆ ಮತ್ತು ಉಗುಳನ್ನು ಪುರಸಭೆ ಕಾರ್ಯಾಲಯದ ಕಾರಿಡಾರ್ ಮೇಲೆಲ್ಲಾ ಉಗಿದು ತಿರುಗಾಡತೊಡಗಿದೆವು. ಆಫೀಸ್ ಕೆಲಸಕ್ಕೆ ಬಂದವರೆಲ್ಲ ಗಲೀಜಾಗಿರುವುದನ್ನು ಕಂಡು ಬೇಸರಿಸಿಕೊಂಡು ‘ಡಿ’ ಗ್ರೂಪ್‌ಗೆ ಇಲ್ಲಿ ಯಾರಿಗೂ ಮುಖ ತೊಳೆಯಲು ಅವಕಾಶ ಕೊಡಬಾರದೆಂದು ಹೇಳಿಬಿಟ್ಟರಂತೆ! ಅಂದಿನಿಂದ ನಾವು ಆ ದಾರಿಯನ್ನು ಕಳೆದುಕೊಂಡೆವು.

ಮುಖ ತೊಳೆಯುವ ನೀರಿಗಾಗಿ ಅಂಗೈಗೆ ಹಲ್ಲುಪುಡಿ ಸುರಿದುಕೊಂಡು ಸೊಂಟಕ್ಕೆ ಟವಲ್ ಸುತ್ತಿಕೊಂಡು ಹಿಂಡುಹಿಂಡಾಗಿ ತಿಪಟೂರು ತುಂಬಾ ಅಲೆಯುತ್ತಿದ್ದೆವು.

ತಿಗತೊಳೆಯಲು ಟ್ರೈನ್ ಬಳಕೆ

ಕೆಲ ದಿನಗಳ ಕಾಲ ನನಗೂ ಮತ್ತು ನಮ್ಮ ಮಾವನ ಮಗ ಮುರುಳಿಗೂ ರಾತ್ರಿ ಊಟ ಮಾಡಿದ ತಕ್ಷಣ ಲೆಟ್ರಿನ್‌ಗೆ ಅವಸರವಾಗುತಿತ್ತು. ಇಬ್ಬರೂ ತೋಟದಲ್ಲಿ ಲೆಟ್ರಿನ್ ಮಾಡಿ ತೊಳೆದುಕೊಳ್ಳಲು ನೀರಿಲ್ಲದುದರಿಂದ ಒಂದು ಉಪಾಯ ಮಾಡಿದೆವು. ನಮ್ಮ ಸಂಬಂಧಿ ಹುಡುಗರೆಲ್ಲ ಕೆಲವೊಮ್ಮೆ ಶನಿವಾರದ ಮಾರ್ನಿಂಗ್ ಕ್ಲಾಸ್ ಮುಗಿಸಿಕೊಂಡು ಊರುಗಳಿಗೆ ಹಿಂತಿರುಗುವಾಗ ರೈಲಿನಲ್ಲಿ ಪ್ರಯಾಣಿಸಿ ಬಾಣಸಂದ್ರ ಸ್ಟಾಪ್‌ನಲ್ಲಿ ಇಳಿದು ಊರು ತಲುಪುತ್ತಿದ್ದೆವು. ಆಗ ನಮಗೆ ರೈಲಿನಲ್ಲಿರುವ ಸೌಲಭ್ಯಗಳ ಪರಿಚಯವಾಗಿತ್ತು. ಅಲ್ಲಿರುವ ಶೌಚಾಲಯ, ಅದರಲ್ಲಿ ಬರುವ ನೀರು ಎಲ್ಲವೂ ನಮಗೆ ಕೌತುಕ ಉಂಟುಮಾಡಿತ್ತು. ನಾನು ಮತ್ತು ಮುರುಳಿ ಒಂದು ದಿನ ಆ ಊಹೆಯ ಮೇರೆಗೆ ರೈಲ್ವೆ ಸ್ಟೆಷನ್‌ಗೆ ಚಡ್ಡಿ ಎಳೆದುಕೊಂಡು ಹೋದೆವು. ನಮ್ಮ ಅದೃಷ್ಟಕ್ಕೆ ಏಳು ಗಂಟೆಯ ಸುಮಾರಿಗೆ ಒಂದು ರೈಲು ಬಂದು ನಿಂತಿತು. ಇಳಿಯುವವರು ಇಳಿಯುತ್ತಲೇ ಇದ್ದರು, ನಾವು ಅವರ ಸಂದಿಯಲ್ಲೇ ನುಸುಳಿ ರೈಲು ಹತ್ತಿ ತಲಾಗೊಂದೊಂದು ಶೌಚಾಲಯ ನೋಡಿಕೊಂಡು ಅವಸರಕ್ಕೆ ತೊಳೆದುಕೊಂಡು ಹೊರ ಬಂದುಬಿಟ್ಟೆವು. ಕೆಳಗಿಳಿದ ಸ್ವಲ್ಪ ಹೊತ್ತಿಗೆ ರೈಲು ಹೊರಟು ಹೋಯಿತು. ಆ ದಿನದ ಕಾರ್ಯಾಚರಣೆಯಿಂದ ಯಶ ಕಂಡ ನಾವು ಮುಂದಿನ ಕೆಲ ದಿನಗಳ ಕಾಲ ಅದನ್ನೇ ಮುಂದುವರಿಸಿದೆವು. ಆದರೆ ಒಂದು ದಿನ ರೈಲು ಇಳಿಯುವವರು ಹೆಚ್ಚಾಗಿದ್ದುದರಿಂದ ನಾವು ಹತ್ತುವುದು, ಶೌಚಾಲಯ ಪ್ರವೇಶಿಸುವುದು, ಚಡ್ಡಿ ಬಿಚ್ಚುವುದು, ತೊಳೆಯುವುದು ತಡವಾಗಿ ರೈಲು ಹೊರಟೇ ಬಿಟ್ಟಿತು. ಭಯ ಭೀತರಾದ ನಾವು ಚಲಿಸುವ ಗಾಡಿಯಿಂದ ನೆಗೆಯಬೇಕಾಗಿ ಬಂತು. ನಾವು ನೆಗೆದಿದ್ದನ್ನು ಕಂಡ ಅಲ್ಲಿದ್ದವರು ಬಾಯಿ ಮಾಡಿದರು. ಇನ್ನಷ್ಟು ಹೆದರಿದ ನಾವು ಇನ್ನ ಅತ್ತ ತಲೆ ಹಾಕುವುದನ್ನ ನಿಲ್ಲಿಸಿಬಿಟ್ಟೆವು.

ಶನಿವಾರ ಬಂತೆಂದರೆ ಹಾಸ್ಟೆಲ್‌ನ ಬಹುತೇಕ ಹುಡುಗರು ತಮ್ಮ ತಮ್ಮ ಊರುಗಳಿಗೆ ಹೊರಟು ಬಿಡುತ್ತಿದ್ದರು. ಊರಿಗೆ ಹೋಗುವವರನ್ನ ಕಂಡರೆ ವಾರ್ಡನ್‌ಗೆ ಎಲ್ಲಿಲ್ಲದ ಪ್ರೀತಿ. ಬಸ್‌ಚಾರ್ಜ್‌ ಇಲ್ಲವೆಂದರೆ ಅವರೇ ಸಾಲ ಕೊಟ್ಟು ಕಳುಹಿಸುತ್ತಿದ್ದರು. ಅದನ್ನು ಸೋಮವಾರ ಬಂದಾಗ ವಾಪಾಸ್ ಕೊಡಬೇಕಾಗಿತ್ತು. ಕೆಲ ವಿದ್ಯಾರ್ಥಿಗಳನ್ನು ಕರೆಯುವವರು ಕಳುಹಿಸುವವರು ಇಲ್ಲದುದರಿಂದಾಗಿ ಹಾಸ್ಟೆಲ್‌ನಲ್ಲೆ ಉಳಿದುಬಿಡುತ್ತಿದ್ದರು. ಉಳಿದುಕೊಳ್ಳುವವರನ್ನ ಕಂಡರೆ ವಾರ್ಡನ್‌ಗಿಂತಲೂ ಅಡುಗೆ ಭಟ್ಟರಿಗೆ ಕೋಪ. ಏಕೆಂದರೆ ಒಬ್ಬ ಹುಡುಗ ಉಳಿದರೂ ಅಡುಗೆ ಮಾಡಬೇಕಾಗುತಿತ್ತು. ಹುಡುಗರು ಯಾರೂ ಇಲ್ಲವೆಂದರೆ ಅವರು ರಜಾ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಹಾಯಾಗಿರುತ್ತಿದ್ದರು. ಭಾನುವಾರ ಉಳಿದುಕೊಂಡವರಿಗೆ ಬೆಳಗ್ಗೆ ಚಪಾತಿ ಮಾಡಿಕೊಡುತ್ತಿದ್ದರು. ವಾರಪೂರ್ತಿ ಮುದ್ದೆ ತಿನ್ನುತ್ತಿದ್ದ ಹುಡುಗರಿಗೆ ಚಪಾತಿ ವಿಶೇಷವಾಗಿ ಕಾಣುತಿತ್ತು. ಚಪಾತಿಗೋಸ್ಕರವೆ ಕೆಲವೊಮ್ಮೆ ಉಳಿದುಕೊಳ್ಳುವವರ ಸಂಖ್ಯೆ ಹೆಚ್ಚಾಗುತಿತ್ತು.

ನಾವು ವಾರಕೊಮ್ಮೆ ಊರಿಗೆ ಹೋದಾಗ ಭಾನುವಾರ ವಿಶೇಷ ಸ್ನಾನ ಮಾಡಿಕೊಂಡು ಸೋಮುವಾರ ಹಾಸ್ಟೆಲ್ಗೆ ವಾಪಾಸ್ ಆಗುತ್ತಿದ್ದೆವು. ಅಕಸ್ಮಾತ್ ಹಾಸ್ಟೆಲ್‌ನಲ್ಲೇ ಉಳಿದುಕೊಂಡರೆ ಸ್ನಾನ ಎಂಬುದು ಹದಿನೈದು ದಿನಕ್ಕೆ ಶಿಫ್ಟ್ ಆಗುತಿತ್ತು. ಆದರೂ ಆಗೊಮ್ಮೆ ಈಗೊಮ್ಮೆಗೆ ನೀರಾಕಿಕೊಳ್ಳುವ ಶಾಸ್ತ್ರ ನಡೆಸುತ್ತಿದ್ದೆವು. ಹಾಸ್ಟೆಲ್‌ನಲ್ಲಂತೂ ನೀರು ಸಿಗುತ್ತಿರಲಿಲ್ಲ. ಸಿಕ್ಕರೂ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ದೊಡ್ಡ ಹುಡುಗರಿಗೆ, ಇಲ್ಲವೆ ಯಾರು ಭಟ್ಟರಿಗೆ ಮುದ್ದೆ ಕಟ್ಟುವ ಕೆಲಸಕ್ಕೆ ಸಹಾಯ ಮಾಡುತ್ತಿದ್ದರೋ ಅವರಿಗೆ ಅಡುಗೆ ಮನೆಯಲ್ಲಿಯೆ ಕಾದ ನೀರಿನ ಸ್ನಾನಕ್ಕೆ ಅವಕಾಶ ಸಿಗುತಿತ್ತು. ನಮ್ಮಂತಹ ಹುಡುಗರು ಗುಂಪುಗುಂಪಾಗಿ ಸೊಂಟಕ್ಕೆ ಟವಲ್ ಸುತ್ತಿಕೊಂಡು ನೀರು ಹುಡುಕಿಕೊಂಡು ತಿಪಟೂರಿನ ಆಚೆಗಿದ್ದ ಈಡೇನಹಳ್ಳಿ ಕೆರೆಗೆ ಹೋಗುತ್ತಿದ್ದೆವು. ಅಲ್ಲಿ ಒಂದು ಬಗುಡದ ನೀರಿನ ಕೆರೆಯಿತ್ತು. ಒಂದಿಬ್ಬರು ಹೆಂಗಸರು ತುಸು ದೂರದಲ್ಲಿ ಬಟ್ಟೆ ಒಗೆಯುತ್ತಿದ್ದುದ್ದನ್ನು ಬಿಟ್ಟರೆ ಅದು ಬಹುತೇಕ ನಿರ್ಜನ ಪ್ರದೇಶವಾಗಿತ್ತು. ಅಲ್ಲೇ ದಡದಲ್ಲಿ ಟವಲ್ ಬಿಸಾಕಿ ಈಜಾಡುವವರಂತೆ ಅದರಲ್ಲಿ ಬಿದ್ದು ಒದ್ದಾಡಿ ಎದ್ದು ಬರುತ್ತಿದ್ದೆವು. ಅಲ್ಲಿಗೆ ಆ ವಾರದ ಸ್ನಾನದ ಕಾರ್ಯಕ್ರಮ ಸಮಾಪ್ತಿಗೊಳ್ಳುತ್ತಿತ್ತು.

ಊಟ ತಿಂಡಿ, ಮೊಟ್ಟೆ ಬಾಳೆಹಣ್ಣು

ಪ್ರತಿದಿನ ಸಂಜೆ ಆರುವರೆಗೆಲ್ಲ ರಾತ್ರಿ ಊಟ ನೀಡಿಬಿಡುತಿದ್ದರು. ಇನ್ನು ಸೂರ್ಯ ಮುಳುಗಿರುತ್ತಲೆ ಇರಲಿಲ್ಲ. ಅಷ್ಟೊತ್ತಿಗಾಗಲೆ ನಾವು ಉಂಡು ತಿರುಗಾಡುತಿದ್ದೆವು. ಅದ್ಯಾವ ಕಾರಣಕ್ಕೆ ಅಷ್ಟು ಬೇಗ ನೀಡುತ್ತಿದ್ದರೊ ತಿಳಿಯದು. ಬಹುಶಃ ಭಟ್ಟರು ತಮ್ಮ ಕೆಲಸವನ್ನು ಬೇಗ ಮುಗಿಸಿಕೊಂಡು ಮನೆ ತಲುಪಲಿಕ್ಕಿರಬೇಕು. ಬಹುತೇಕ ಬಸವರಾಜಪ್ಪನೆಂಬ ಸೆಣಕಲು ಭಟ್ಟ ತನ್ನ ಬೆವರಿದ ಮೈಯಿಂದ ರೋಸು ತೆಗೆದು ಹುಡುಗರ ಮೇಲೆ ಬೀಸುತ್ತ ‘ತಟ್ಟೆ ತಗಳ್ರಿ’ ಎಂದರೆ ಸಾಕು, ಒಮ್ಮೆಲೆ ಹಾಸ್ಟೆಲ್ ತಟ್ಟೆಗಳ ಸದ್ದಿನಿಂದ ದಡಗುಡುತ್ತಿತ್ತು. ಕ್ಷಣ ಮಾತ್ರದಲ್ಲಿ ತಟ್ಟೆ ತೊಳೆಯುವ ಶಾಸ್ತ್ರ ಮುಗಿಸಿ ಡೈನಿಂಗ್ ಹಾಲೆಂಬ ಕಿರಿದಾದ ಚೌಕಾಕಾರದ ಕೋಣೆಯಲ್ಲಿ ಒಬ್ಬರ ಮೇಲೊಬ್ಬರು ತೊಡೆ ಹಾಕಿಕೊಂಡು ಇಕ್ಕಟ್ಟಾಗಿ ಕುಳಿತುಕೊಳ್ಳುತ್ತಿದ್ದೆವು. ಹತ್ತನೇಕ್ಲಾಸ್ ಹುಡುಗರಿಂದ ಶುರುವಾಗುವ ಅಂತಿ ನಮ್ಮಂಥ ಪಿಳ್ಳೆ ಪಿಸ್ಕುಗಳೊಂದಿಗೆ ಕೊನೆಯಾಗುತ್ತಿತ್ತು.

ಊಟ ಬಡಿಸುವುದೂ ಕೂಡ ದೊಡ್ಡ ಹುಡುಗರಿಂದಲೇ ಪ್ರಾರಂಭಗೊಳ್ಳುತ್ತಿತ್ತು. ಮೊದಲು ಒಂದು ಸಣ್ಣ ಚಂಡಿನಂತ ಮುದ್ದೆಯನ್ನು ಎಲ್ಲರಿಗೂ ಸಮಾನವಾಗಿ ಬಡಿಸಿಕೊಂಡು ಬರುತ್ತಿದ್ದರು. ಬೇಕೆಂದರೆ ಇನ್ನ ಅರ್ಧ ಮುದ್ದೆ ಹೆಚ್ಚಾಗಿ ಸಿಗುತ್ತಿತ್ತು. ಅದರ ಮೇಲೆ ಸಿಗುತ್ತಿರಲ್ಲಿಲ್ಲ. ಆನಂತರ ಹುಡಿ ಹುಡಿಯಾದ ಅನ್ನ ತರುತ್ತಿದ್ದರು. ಅದು ಮಾತ್ರ ಒಂದು ಸ್ಪೂನಿನ ಮೇಲೆ ಬರುತ್ತಿರಲಿಲ್ಲ. ಅನ್ನ ಒಂದು ಸುತ್ತು ಬಂದಾದ ಮೇಲೂ ಪಾತ್ರೆಯ ತಳದಲ್ಲಿ ಉಳಿದಿದ್ದರೆ, ಅದನ್ನ ಪುನಃ ದೊಡ್ಡ ಹುಡುಗರ ಕಡೆಯಿಂದ ಚೂರು ಚೂರು ಚುಮುಕಿಸಿಕೊಂಡು ಬರುತ್ತಿದ್ದರು. ನಾವು ಆಸೆಗಣ್ಣಿನಿಂದ ನಾವಿರುವಲ್ಲಿಗೂ ಬರಬಹುದಾ ಎಂದು ಕಾಯುತ್ತಿದ್ದರೆ, ಅದು ಮಧ್ಯದಲ್ಲೇ ನಿಂತು ಬಿಡುತ್ತಿತ್ತು. ಬಹುತೇಕ ಕಡ್ಲೆಕಾಳಿನ ಸಾರು ಮಾಡುತ್ತಿದ್ದರು. ಅದರ ರುಚಿ ನಮಗೆ ತಿಳಿಯುತ್ತಿರಲಿಲ್ಲ. ವಾರಕ್ಕೆರಡು ದಿನ ಬೇಯಿಸಿದ ಕೋಳಿ ಮೊಟ್ಟೆಯನ್ನು ಊಟದ ಜತೆಗೆ ನೀಡುತ್ತಿದ್ದರು. ಮೊಟ್ಟೆಯ ದಿನವಂತೂ ಎಲ್ಲಿ ಬೇಗ ಖಾಲಿಯಾಗಿಬಿಡುತ್ತದೊ ಎಂದು ತಿನ್ನಲೋ ಬೇಡವೋ ಎಂಬಂತೆ ಚೂರು ಚೂರೇ ಮುರಿದು ಬಾಯಿಗಿಕ್ಕಿಕೊಳ್ಳುತ್ತಿದ್ದೆವು. ಕೆಲವರು ಉಬ್ಬತ್ತಿದವರಂತೆ ಕೊಟ್ಟ ತಕ್ಷಣವೇ ಒಂದೇ ಉಸಿರಿಗೆ ನುಂಗಿ ಖಾಲಿಯಾದದ್ದಕ್ಕಾಗಿ ಮಕ ಹುಳ್ಳಗೆ ಮಾಡಿಕೊಳ್ಳುತ್ತಿದ್ದರು. ಎಲ್ಲರಿಗೂ ಕೊಟ್ಟಾದ ಮೇಲೂ ಕೆಲವೊಮ್ಮೆ ಮೊಟ್ಟೆಗಳು ಮಿಕ್ಕುತ್ತಿದ್ದವು. ಮಿಕ್ಕಿದವುಗಳನ್ನು ತಟ್ಟೆಯಲ್ಲಿಟ್ಟು ಚಾಕುವಿನಿಂದ ಚೂರು ಚೂರಾಗಿ ಕತ್ತರಿಸಿ, ಮತ್ತೆ ಸಣ್ಣ ಸಣ್ಣ ಪೀಸುಗಳನ್ನು ಹಂಚುತ್ತ ಬರುತ್ತಿದ್ದರು. ಅದೂ ಕೂಡ ನಾವಿರುವಲ್ಲಿಗೆ ಬರಲಾರದೆ ಮಧ್ಯದಲ್ಲೇ ಖಾಲಿಯಾಗಿಬಿಡುತ್ತಿತ್ತು. ಆಗ ನಾವು ಇನ್ನಷ್ಟು ನಿರಾಶರಾಗುತ್ತಿದ್ದೆವು. ಕೆಲ ಹುಡುಗರು ತಮ್ಮ ಪಾಲಿನ ಮೊಟ್ಟೆಯನ್ನು ತಿನ್ನದೆ ಮಾರಿಕೊಂಡು, ಬಂದ ದುಡ್ಡಿನಿಂದ ದುಡ್ಡಿನಾಟ ಆಡುತ್ತಿದ್ದರು.

ತಿಪಟೂರು ಕೊಬ್ಬರಿಯಂತೆ,  ಬಾಳೆಹಣ್ಣಿಗೂ ಪ್ರಸಿದ್ಧಿ. ಐವತ್ತುಪೈಸೆ ಕೊಟ್ಟರೆ ಉದ್ದದ ಪಚ್ಚ ಬಾಳೆಹಣ್ಣು ಸಿಗುತ್ತಿತ್ತು. ವಾರಕ್ಕೆರಡು ದಿನ ಬಾಳೆಹಣ್ಣನ್ನು ದಿನ ಬಿಟ್ಟು ದಿನ ಕೊಡುತ್ತಿದ್ದರು. ನಾವು ಬಾಳೆಹಣ್ಣನ್ನು ತಿಂದಾದಮೇಲೆ ಸಿಪ್ಪೆಯನ್ನು ಪೇಪರ್‌ನಂತಾಗುವವರೆಗೂ ಕವರುತ್ತಿದ್ದೆವು. ಕೆಲ ಹುಡುಗರು ‘ನಾನು ಸಿಪ್ಪೆಯನ್ನು ಎಸೆಯಲೇ ಇಲ್ಲ, ಪೂರ್ತಿ ತಿಂದೆ’ ಎಂದು ಹೇಳುತ್ತಿದ್ದರು. ನಮ್ಮ ಪಕ್ಕದಲ್ಲೇ ಇದ್ದ ಬಿಸಿಎಮ್ ಹಾಸ್ಟೆಲ್‌ನ ಹುಡುಗರಿಗೆ ಮೊಟ್ಟೆ ಕೊಡುತ್ತಿರಲಿಲ್ಲ. ಅವರು ನಾವು ತಿನ್ನುವುದನ್ನು ನೋಡಿ ಜೊಲ್ಲು ಸುರಿಸುತ್ತಿದ್ದರು. ಇನ್ನ ಕೆಲವರು ನಮ್ಮ ಹುಡುಗರಿಗೆ ಎಂಟಾಣಿನೊ, ಒಂದ್ರುಪಾಯಿನೋ ಕೊಟ್ಟು ಅವರದಾಗಿಸಿಕೊಳ್ಳುತ್ತಿದ್ದರು.

(ಚಿತ್ರ: ವೇಣುಪ್ರವೀಣ್ ಕಂಟಲಗೆರೆ; ಇಲ್ಲಸ್ಟ್ರೇಷನ್: ಸಂಘಮಿತ್ರೆ)