ಕನ್ನಡದ ಪ್ರಮುಖ ಬರಹಗಾರ ಪಿ.ಲಂಕೇಶ್ ಹೇಳುವಂತೆ ಒಬ್ಬ ಬರಹಗಾರನ ಭಾಷೆಯೇ ಆತನ ಅಸಲಿ ಮತ್ತು ಖೊಟ್ಟಿತನವನ್ನು ಬಯಲು ಮಾಡುವ ಸಾಧನ. ಬರಹದಲ್ಲಿ ಹೆಚ್ಚು ಹೊತ್ತು ಅದನ್ನು ಅವಿತಿಟ್ಟು ಆಟ ಆಡಲಾಗದು. ಇಲ್ಲಿ ಗೆದ್ದ ಮಾತಿವೆ, ಸೋತ ಮಾತಿವೆ. `ಕವಿಯ ಜೀವನಾನುಭವ ಮತ್ತೆ ಮತ್ತೆ ಕಸಿಗೊಂಡಾಗ ಆತನ ಕಾವ್ಯದಲ್ಲಿ ಹೊಸಕಳೆ ಕಾಣಬಹುದು. ಆ ಕಸುವು ಹೊಂದಿರುವ ಮಂಡಲಗಿರಿ ಪ್ರಸನ್ನ ಅವರ ಮುಂದಿನ ಬರಹಗಳು ಮತ್ತಷ್ಟು ಹೊಸತನದೊಂದಿಗೆ ಓದುಗ ವಲಯಕ್ಕೆ ತಲುಪಲಿ.
ಮಂಡಲಗಿರಿ ಪ್ರಸನ್ನ ಅವರ “ನಿದಿರೆ ಇರದ ಇರುಳು” ಗಜಲ್‌ ಸಂಕಲನಕ್ಕೆ ಡಾ. ರಮೇಶ ಅರೋಲಿ ಬರೆದ ಮುನ್ನುಡಿ

ತನ್ನ ಕಣ್ಣೆದುರಿನ ಸಂಕಟಗಳಿಗೆ ಸ್ಪಂದಿಸದ ವಿಜ್ಞಾನಿ, ಕಲಾವಿದ, ರಾಜಕಾರಣಿ, ನಟ, ಹಾಡುಗಾರ, ಕವಿ ಮತ್ತು ಒಬ್ಬ ನಾಗರಿಕ ಒಂದು ಅಪ್ರಸ್ತುತ ಬದುಕನ್ನು ಜೀವಿಸುವ ಅಪಾಯಕ್ಕೆ ಈಡಾಗಬೇಕಾಗುತ್ತದೆ. ಕಾಲದ ದಂದುಗಗಳಿಗೆ ಮಿಟುಕುವ ಜವಾಬುದಾರಿ ಎಲ್ಲರ ಮೇಲೂ ಒಂದಲ್ಲಾ ಒಂದು ರೂಪದಲ್ಲಿ ಇರುತ್ತದೆ. ಮತ್ತದಕ್ಕೆ ನಾವೆಲ್ಲ ಭಾಗೀದಾರರೇ ಅನಿಸಿತು. ಮಂಡಲಗಿರಿ ಪ್ರಸನ್ನ ಅವರ ಇಲ್ಲಿನ ಗಜಲ್‌ಗಳನ್ನು ಓದಿ ನನ್ನ ಎರಡು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಇದನ್ನು ಯಾವ ಅರ್ಥದಲ್ಲೂ ಮುನ್ನುಡಿ ಅಂತಲೋ, ಇಲ್ಲ ವಿಮರ್ಶೆ ಅಂತಲೋ ಭಾವಿಸುವ ಅಗತ್ಯವಿಲ್ಲ. ಈ ಬರಹ ಕೇವಲ ಒಬ್ಬ ಸಹ ಬರಹಗಾರನ ಅನಿಸಿಕೆ ಎಂದಷ್ಟೇ ಇಲ್ಲಿ ಹೇಳುವ ಮೂಲಕ ನಾನು ವಿಮರ್ಶಕ ಅಲ್ಲ ಅನ್ನುವುದನ್ನು ಸ್ಪಷ್ಟಪಡಿಸುತ್ತೇನೆ. ಇಲ್ಲಿಯ ಗಜಲ್‌ಗಳಲ್ಲಿ ಮೂಲ ವ್ಯಾಕರಣ, ಛಂದಸ್ಸಿನ ಸಮರ್ಪಕ ಬಳಕೆ ಇರುವುದರಿಂದ ಆ ಕುರಿತು ನಾನೇನೂ ಹೇಳುವುದಿಲ್ಲ. ಇಲ್ಲಿನ ರಚನೆಗಳನ್ನು ಗಜಲ್ ಅನ್ನುವುದರ ಜೊತೆ ಜೊತೆಗೆ ಮುಕ್ತ ಕವಿತೆಗಳಂತೆ ಓದಿಕೊಂಡಿದ್ದೇನೆ. ಹೀಗೆ ಅಂದುಕೊಂಡೇ ಪ್ರತಿಕ್ರಿಯಿಸುತ್ತಿದ್ದೇನೆ.

೬೧ ಗಜಲ್ ರಚನೆಗಳ “ನಿದಿರೆ ಇರದ ಇರುಳು” ಈ ಗುಚ್ಛವು ಮಂಡಲಗಿರಿ ಪ್ರಸನ್ನ ಅವರ ಈ ಮುಂಚಿನ ಸಾಹಿತ್ಯ ಪ್ರಕಾರಗಳಿಗೆ ಹೊಸ ಸೇರ್ಪಡೆಯಾದರೂ, ಈಗಾಗಲೇ ಅವರು ಕವಿತೆ ರಚನೆಯಲ್ಲಿ ತೊಡಗಿದ ಕಾರಣ ಕಾವ್ಯ ಓದುಗರಿಗೆ ಪರಿಚಿತರು. ಓದಿದ್ದು ಇಂಜಿನಿಯರಿಂಗ್ ಆದರೂ ಅವರ ಆಸಕ್ತಿ ಕಾವ್ಯ, ಲಲಿತ ಪ್ರಬಂಧ, ಮಕ್ಕಳ ಕಾವ್ಯ, ಮಕ್ಕಳ ನಾಟಕಗಳಂತಹ ಸೃಜನಶೀಲ ಬರವಣಿಗೆಯ ಕಡೆಗೆ ವಾಲಿದ್ದು ಅವರಿಗೂ ಖುಷಿ ನೀಡಿದೆ ಎಂದು ನಂಬುತ್ತೇನೆ.

(ಮಂಡಲಗಿರಿ ಪ್ರಸನ್ನ)

ಮನುಷ್ಯ ಮತ್ತು ಪರಿಸರದ ಸಾವಯವ ಸಂಬಂಧವನ್ನು ಸಾರುವ ಅನೇಕ ಗಜಲ್ ರಚನೆಗಳು ಈ ಸಂಕಲನದಲ್ಲಿವೆ. ನೆನಪಿನ ಬಗ್ಗೆ, ಪ್ರಕೃತಿಯ ವಿಸ್ಮಯಗಳ ಬಗ್ಗೆ, ಬೆಳಗಿನ ರಂಗೋಲಿ, ಹೂವುಗಳ ಮೇಲೆ, ಪ್ರೇಮ, ವಿರಹ, ತ್ಯಾಗ, ವಂಚನೆ, ತೃಪ್ತಿಯ ಕುರಿತು ಬರೆದ ಗಜಲ್ ಗಳಿವೆ. ಒಂದು ಗಜಲ್‌ನ ಸಾಲು ನೋಡುವುದಾದರೆ:

ಭೋರ್ಗರೆವ ಕಡಲುಕ್ಕಿ ಕಿನಾರೆಗೆ ಮುತ್ತಿಡುತಿರಲು `ಗಿರಿ’
ಸುಳಿಯಪ್ಪುಗೆ ನೆನಪಿಸಿಕೊಂಡಾಗೊಮ್ಮೆ ನಿನ್ನ ನೆನಪು (ಗಜಲ್-೩)

ಗಜಲಿನಲ್ಲಿ ಮನುಷ್ಯನ ಇಂದ್ರೀಯಗಳಿಗೆ (ಪ್ರಾಣಿ ಪಕ್ಷಿಗಳಷ್ಟು ನಾವು ನಿಸರ್ಗಕ್ಕೆ ಹತ್ತಿರವಿಲ್ಲ ಎಂದಾಗಲೂ) ಪರಿಸರ ಸದಾ ಒಂದಲ್ಲಾ ಒಂದು ವಿಶೇಷತೆಯನ್ನು ದಾಖಲಿಸಬಲ್ಲ ಅನುಭೂತಿಯನ್ನು ನಮಗೆ ನೀಡುತ್ತದೆ ಎಂಬುದನ್ನು ಇಲ್ಲಿ ನೆನಪಿಸಿದ್ದಾರೆ. ಇಂತಹ ಅನುಭವಗಳನ್ನು ಒಳಮನಸಿಗೆ ಇಳಿಸಿಕೊಂಡು, ಸರಿ ಸಮಯಕ್ಕೆ ಕಾದು ಯಾವುದೋ ಕ್ರಿಯಾಶೀಲ ರೂಪದಲ್ಲಿ ವ್ಯಕ್ತಪಡಿಸುತ್ತೇವಷ್ಟೆ. ಹಾಗೆ ದಕ್ಕಿಸಿಕೊಳ್ಳುವ ಸಾಮರ್ಥ್ಯ ಇರಬೇಕು.

ನಮ್ಮತನವ ತಿಳಿಯಲೆಂದೆ ಮೈಯ ತುಂಬ ಕಣ್ಣು
ತಿರುತಿರುಗಿ ಆಗಾಗ ನೋಡಲಿದೆ ಅರಿವಿನ ಬೆನ್ನುಡಿ (ಗಜಲ್-೧)

ಹೀಗೆ ಮೈಯೆಲ್ಲಾ ಕಣ್ಣಾದಾಗ ಮಾತ್ರ ನಮ್ಮ ಅನುಭವದ ರೆಟೀನಾದಲ್ಲಿ ಒಂದಷ್ಟು ಉಳಿಯಬಲ್ಲ ಸಂಗ್ರಹಯೋಗ್ಯ ಚಿತ್ರಗಳು ಸೆರೆಯಾಗಬಲ್ಲವು. ಹಾಗಾದರೆ ನಮಗೆ ಖುಷಿ ಕೊಡಬಲ್ಲುವಷ್ಟೇ ನೆನಪಿಟ್ಟುಕೊಳ್ಳಬೇಕೆ? ಅದಾಗದು.

ಇಲ್ಲಿನ ಗಜಲ್‌ಗಳಲ್ಲಿ ನಿದ್ದೆಗೆಡಿಸುವ ಯಾತನೆಗಳು ಸಹ ಇವೆ. ಇಂತಹ ಒಳ ಸಂಕಟಗಳು ಮನುಷ್ಯರಾದ ನಮ್ಮನ್ನು ಸೋಲಿಸುತ್ತವೆ; ಆದರೆ ಕಾವ್ಯಕ್ಕೆ ಅವೇ ಅಸಲು ಮಾಲು. ಇದೊಂದು ವಿಪರ್ಯಾಸವು ಹೌದು. ಒಳ್ಳೆಯ ಕಾವ್ಯ ಬದುಕಿನ ಕೆಟ್ಟ ಅನುಭವಗಳಿಂದ ರೂಪ ತಾಳುತ್ತದೆ. ಬಹುಶಃ ಒಂದು `ಸಂತೃಪ್ತ’ ಭಾವದ ಬದುಕಿನಿಂದ ನಮಗಷ್ಟೇ ತೃಪ್ತ ಅನಿಸಬಹುದಾದ ಕವಿತೆ ಹುಟ್ಟಬಹುದು. ಆದರೆ ಬದುಕು ಸುಟ್ಟುಕೊಂಡು ಕಟ್ಟಿದ ಕಾವ್ಯಕ್ಕೆ ಮಿಡಿವ ತಾಕತ್ತು ಎಲ್ಲಾ ಕಾಲಕ್ಕು ಪ್ರಸ್ತುತ ಅನಿಸುತ್ತದೆ. ಸಾವಯವ ಸಂಬಂಧದ ಜರೂರು ಇಲ್ಲಿ ಕೆಲಸ ಮಾಡುತ್ತದೆ.

ನಯನಗಳೀಗ ಸೋತಿವೆ ದಣಿವು ಮರೆತು ನಿದಿರೆಗೆ ಜಾರಬೇಕೆಂದಿದ್ದೆ
ಹಾಸಿಗೆಯಲೂ ಮುಳ್ಳು ಕಾಣುತಿದ್ದೇನೆ ಈ ಯಾತನೆಗೆ ಕೊನೆಯೆಂದು (ಗಜಲ್-೪)

ಮಾರುಕಟ್ಟೆಯ ಈ ದಿನಗಳಲ್ಲಿ ನಿದಿರೆಯೆಂಬುದು ಸಹ ಸರಕು ಆದ ಈ ಹೊತ್ತಲ್ಲಿ, ನಿದ್ದೆಗೆ ಜಾರುವುದು ಸಹ ಸುಲಭದ ಮಾತಲ್ಲ. ಉಂಡು ಗಡದ್ದು ನಿದ್ದೆ ಮಾಡುವವರನ್ನು ಕಂಡು ಹೇಳುವ `ಎಂಥಾ ಅದೃಷ್ಟವಂತನಪ್ಪ ನೀನು’ ಮಾತು ಕೇವಲ ಹಾಸಿಗೆಯಲಿ ಚೆಲ್ಲಿದ ದೇಹಕ್ಕೆ ಹೇಳುವುದಲ್ಲ. ಅದು ಅಂತಹ ವ್ಯಕ್ತಿಯ ಮಾನಸಿಕ ಸ್ಥಿತಿಗೂ ಹೇಳಿದ ಮಾತಾಗುವುದು. ನಿದ್ದೆ ಹತ್ತುವುದಿಲ್ಲ ಅಂದರೆ ಅದಕ್ಕೆ ಬಾಹ್ಯ ಕಾರಣ ಎಷ್ಟಿರುತ್ತವೋ; ಅಷ್ಟೇ ಪ್ರಮಾಣದ ಆಂತರಿಕ ಸಂಗತಿಗಳು ಸಹ ನಮ್ಮನ್ನು ಕದಡಿಬಿಡಬಲ್ಲವಾಗಿರುತ್ತವೆ. ಇದರಲ್ಲಿ ಸಾಮಾಜಿಕ ಕಾರಣವೋ ಅಥವಾ ವೈಯಕ್ತಿಕ ಕಾರಣವೋ ಅಂತು ನಾವು ಅವುಗಳ ಶಿಕಾರಿಯಾಗಬೇಕಾಗುತ್ತದೆ. ಈ ಸ್ಥಿತಿ ಒಬ್ಬ ಕ್ರಿಯಾಶೀಲ ಮನಸು ಉಳ್ಳಾತನಿಗೆ ಆದಲ್ಲಿ ಮೇಲಿನಂತಹ ಸಾಲು ಹುಟ್ಟಬಲ್ಲವು. ನಿದಿರೆ ಎಂಬುದು ಸರಕು ಅಂದೆ. ಹೌದು ಈಗಾಗಲೇ ಐರೋಪ್ಯ ದೇಶಗಳು ಸೇರಿದಂತೆ ಒತ್ತಡದಲ್ಲಿ ದಿನಗೆಲಸ ಮಾಡುವ ನೌಕರರು ಮಧ್ಯಾಹ್ನದ ಹೊತ್ತು ಲಘು ನಿದ್ರೆಗಾಗಿ `ಸ್ಲೀಪಿಂಗ್ ಪಾರ್ಲರ್’ ಅಥವಾ `ನ್ಯಾಪಿಂಗ್ ಸೆಂಟರ್’ ಗಳಲ್ಲಿ ಅರ್ಧ ಗಂಟೆ, ಒಂದು ತಾಸಿನ ನಿದ್ದೆ ಮಾಡಿ ಬರುತ್ತಾರೆ, ಇವೆಲ್ಲವೂ `ಪೇಡ್’-ಹಣ ಕೊಟ್ಟು ಮಲಗುವ ಕೇಂದ್ರಗಳು. ನಮ್ಮ ದೇಶದಲ್ಲಿ ಸಾರ್ವಜನಿಕ ಪಾರ್ಕು, ಬಸ್ ಸ್ಟ್ಯಾಂಡ್ ರೈಲು ನಿಲ್ದಾಣಗಳಲ್ಲಿ ಅಡ್ಡಾದಿಡ್ಡಿ ಮಲಗಿ ಜಗದ ಜಂಜಡಗಳನ್ನು ಮರೆವ ರೀತಿಯವು. ಆದರೆ ಮಂಡಲಗಿರಿ ಪ್ರಸನ್ನ ಅವರು ಹೇಳುವ ಈ ಶೇರ್‌ನಲ್ಲಿ:

ಕಾಯುತಿವೆ ಪ್ರತಿಕ್ಷಣ ಮುಪ್ಪಡರದ ಭರವಸೆಗಳು `ಗಿರಿ’
ಕನಸುಗಳು ಕಣ್ಣೊಳಗೆ ಉಳಿದು ಬಿಟ್ಟಿವೆ ಸಾಯದೆ ಹಾಗೆ (ಗಜಲ್-೧೨)
ಎಂಬ ಗಜಲಿನಲ್ಲಿ ಇನ್ನೂ ಕಾಣಲಾರದ ಕನಸು ಎಂದೆಂದಿಗೂ ಜೀವಂತ ಎಂಬುದನ್ನು ಸೊಗಸಾಗಿ ಹೇಳಿದ್ದಾರೆ. ಮತ್ತೊಂದು ಗಜಲ್‌ನಲ್ಲಿ ಮುಂದುವರೆದ ಅವರ ಭಾವ:

ಸತ್ತ ದೇಹದ ಮುಂದೆ ಕೂತು ಅಳುವಲ್ಲಿ ಅರ್ಥವೇನಿದೆ
ಇರುವಾಗ ಪ್ರೀತಿ ತೋರದೆ ಕಣ್ಣೀರಿಡುವಲ್ಲಿ ಅರ್ಥವೇನಿದೆ (ಗಜಲ್-೧೩)
ಅನ್ನುವಾಗಲೂ ಸಾವೆಂಬುದು ಸತ್ತವರ ವಿಷಯವಲ್ಲ; ಅದೆಂದಿಗೂ ಇನ್ನು ಬದುಕುಳಿದವರ ಮಾತಿನ ವಸ್ತು ಮತ್ತು ಅದರ ಅಂದಾಜು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ, ಎಂಬ ತಾತ್ಪರ್ಯ ನೀಡುತ್ತದೆ.

ಸುಖದ ನಿದಿರೆಯಲಿಹಳು ನಲ್ಲೆ ಹಾಡಬೇಡ ಕೋಗಿಲೆ
ಎದೆಗೆ ತಲೆಯಿಟ್ಟು ಮಲಗಿಹಳು ಕಾಡಬೇಡ ಕೋಗಿಲೆ (ಗಜಲ್-೨೨)
ಮೇಲಿನ ಸಾಲು ಥಟ್ಟನೆ ನನಗೆ ತೆಲುಗು ಚಿತ್ರವೊಂದರ `ಓ ಪಾಪ ಲಾಲಿ’ ಹಾಡು ನೆನಪಿಸಿತು. ಎಸ್.ಪಿ. ಬಾಲಸುಬ್ರಮಣ್ಯ ಹಾಡಿರುವ ಆ ಗೀತೆಯಲ್ಲಿ `ಓ ಕೋಯಿಲಾ ಪಾಡವೆ ನಾ ಪಾಟಾನಿ’- ಓ ಕೋಗಿಲೆಯೇ ನೀನೆ ನನ್ನ ಹಾಡನ್ನು ಹಾಡಿ ನನ್ನ ಪ್ರೇಯಸಿಗೆ ಹಿತ ನೀಡು ಅಂದಂತೆ, ಇಲ್ಲಿ ಪ್ರಿಯಕರ ಎದೆ ಮೇಲೆ ಒರಗಿ ನಿದ್ದೆಗೆ ಜಾರಿದ ಪ್ರೇಯಸಿಗೆ ಭಂಗ ಬಾರದಿರಲೆಂದು ಕೋಗಿಲೆ ಹಾಡದಂತೆ ವಿನಂತಿಸಿಕೊಂಡ ಪರಿ ಒಬ್ಬ ಕವಿಗೆ ಸಾಧುವೇ. ದೇವರಲ್ಲಿ ಪ್ರೀತಿಗಾಗಿ, ನಿದಿರೆಗಾಗಿ ಪ್ರಾರ್ಥಿಸುತ್ತ, ಏಕ್ ದಮ್ ಬಯಲು ಸೀಮೆಯಿಂದ ಕಡಲಿಗೆ ಹಾತೊರೆವ, ಬೆಟ್ಟ-ಕಣಿವೆ ಸುತ್ತಲು ಹಂಬಲಿಸುವ ರೀತಿ ಏಕಕಾಲಕ್ಕೆ ಭವೊಲ್ಲಂಘನೆಯಂತೆಯು ಮತ್ತು ಭಾವೋಲ್ಲಂಘನೆಯಂತೆಯೂ ಗೋಚರಿಸುತ್ತದೆ. ಇಂತಹ ತದ್ವಿರುದ್ಧತೆ ಕಾವ್ಯಕ್ಕೆ ಅನುಚಿತವೇನಲ್ಲ. ಹಾಗೆಯೆ, ಓದಲು ಮುದನೀಡುವ ಇನ್ನೊಂದು ಗಜಲ್ ಮನ ಸೆಳೆಯುತ್ತದೆ:

(ರಮೇಶ ಅರೋಲಿ)

ಸೂರ್ಯನನ್ನೇ ಕಣ್ಣಲಿ ತಂದಿಟ್ಟು ಬಯಕೆ ದೀಪ ಹಚ್ಚಿದಳು
ನಲುಮೆ ಮಾತಿಂದ ಒಡಲುತಣಿಸಿ ನೂರು ನವಿಲ ಕುಣಿಸಿದಳು (ಗಜಲ್-೬)
ಎಂಬಲ್ಲಿ `ಬಯಕೆ ದೀಪ’ ದ ರೂಪಕ ಅದ್ಭುತವಾಗಿ ಪ್ರಕಟಗೊಂಡಿದೆ. ಇಲ್ಲಿಯ ರಚನೆಗಳನ್ನು ಓದುತ್ತಾ `ಮದಿರೆ ಇರದ ಗಜಲ್’ ಎಂಬ ಅಭಿಪ್ರಾಯಕ್ಕೆ ಬರುವ ಹೊತ್ತಿಗೆ ಅಲ್ಲೆರಡು ಮದಿರೆ ಕುರಿತಾದ ರಚನೆ ಎದುರಾದವು.

ಕನ್ನಡದ ಪ್ರಮುಖ ಬರಹಗಾರ ಪಿ.ಲಂಕೇಶ್ ಹೇಳುವಂತೆ ಒಬ್ಬ ಬರಹಗಾರನ ಭಾಷೆಯೇ ಆತನ ಅಸಲಿ ಮತ್ತು ಖೊಟ್ಟಿತನವನ್ನು ಬಯಲು ಮಾಡುವ ಸಾಧನ. ಬರಹದಲ್ಲಿ ಹೆಚ್ಚು ಹೊತ್ತು ಅದನ್ನು ಅವಿತಿಟ್ಟು ಆಟ ಆಡಲಾಗದು. ಇಲ್ಲಿ ಗೆದ್ದ ಮಾತಿವೆ, ಸೋತ ಮಾತಿವೆ. `ಕವಿಯ ಜೀವನಾನುಭವ ಮತ್ತೆ ಮತ್ತೆ ಕಸಿಗೊಂಡಾಗ ಆತನ ಕಾವ್ಯದಲ್ಲಿ ಹೊಸಕಳೆ ಕಾಣಬಹುದು. ಆ ಕಸುವು ಹೊಂದಿರುವ ಮಂಡಲಗಿರಿ ಪ್ರಸನ್ನ ಅವರ ಮುಂದಿನ ಬರಹಗಳು ಮತ್ತಷ್ಟು ಹೊಸತನದೊಂದಿಗೆ ಓದುಗ ವಲಯಕ್ಕೆ ತಲುಪಲಿ ಎಂದು ಆಶಿಸುತ್ತ….. ಈ ಗಜಲ್ ಸಂಕಲನಕ್ಕಾಗಿ ಕವಿಮಿತ್ರ ಮಂಡಲಗಿರಿ ಪ್ರಸನ್ನ ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.

ಗಜಲ್-೧

ಬದುಕಿನ ರಮ್ಯತೆ ಭಗ್ನಗೊಳಿಸಿದ ನಿನಗೆ ಕೃತಜ್ಞತೆಗಳು
ಮಲ್ಲಿಗೆ ಮನಕೆ ಕೊಳ್ಳಿಯಿರಿಸಿದ ನಿನಗೆ ಕೃತಜ್ಞತೆಗಳು

ಜಗದ ಚೆಲುವಿಗೆ ಬೀಗಿ ಬಿಳಿಯದೆಲ್ಲ ಹಾಲೆಂದುಕೊಂಡೆ
ನೊರೆ ಹಾಲಿಗೂ ಹುಳಿ ಹಿಂಡಿದ ನಿನಗೆ ಕೃತಜ್ಞತೆಗಳು

ಋತುಗಳ ಸಹಜಗುಣ ತಿಳಿಯದೆ ಸುಮ್ಮನೆ ದೂರಿದೆನಲ್ಲ
ಉಸುರಿಗೂ ಕೆಂಡದ ಲೇಪನೀಡಿದ ನಿನಗೆ ಕೃತಜ್ಞತೆಗಳು

ಇರುಳ ನಿದಿರೆಯನು ದೂರವಿರಿಸಿ ನಕ್ಷತ್ರವೆಣಿಸುತ ಕುಳಿತೆ
ಸವಿಗನಸ ನೆಮ್ಮದಿಗೂ ಕನ್ನವಿರಿಸಿದ ನಿನಗೆ ಕೃತಜ್ಞತೆಗಳು

ಮಾಸಿದ ಮುಖದಲೂ ಚೆಲುವು ಮೂಡಿಸುವ ಹುಂಬತನ
ನನ್ನೊಳಗೆ ನಗೆ ಕಾರಂಜಿ ಬತ್ತಿಸಿದ ನಿನಗೆ ಕೃತಜ್ಞತೆಗಳು

ಊಹಿಸಲಾಗದ ತಿರುವಿನ ಹಾದಿಯ ಚಮತ್ಕಾರವೆ ಅದು
ನೆನಪಿನ ಸೋನೆಗೂ ನೋವುಣಿಸಿದ ನಿನಗೆ ಕೃತಜ್ಞತೆಗಳು

ಬಿಡದ ವ್ಯಾಮೋಹವೆ ಕೊನೆಗೆ ಮುಳುವಾಯಿತಲ್ಲ `ಗಿರಿ’
ಇತಿಹಾಸದ ದುರಂತಕಥೆ ನೆನಪಿಸಿದ ನಿನಗೆ ಕೃತಜ್ಞತೆಗಳು

ಗಜಲ್-೨

ನಿನ್ನೆದೆಗೆ ತಲೆಯಿಟ್ಟು ನನ್ನೆದೆ ತೊಳಲಾಟ ಹೇಳಲು ಬಿಡು
ನನ್ನಂತರಂಗವು ನಿನ್ನ ಸಂಕಟಗಳ ಏನೆಂದು ಕೇಳಲು ಬಿಡು

ಎಷ್ಟುದಿನ ಅದನು ಹೀಗೆ ಅದುಮಿ ಇಡುವುದು ಹೇಳು
ಒಡಲ ಭಾವಗಳ ಗುದ್ದಾಟದ ಪೆಟ್ಟುಗಳ ತೋರಲು ಬಿಡು

ಕತ್ತಲೆಯ ಗೂಡಲಿ ಉಳಿದು ಉಸಿರುಗಟ್ಟುತಿದೆ ಪ್ರತಿದಿನ
ಬೆಳಗಿನ ಉದಯಿಸುವ ಸೂರ್ಯಕಿರಣ ನೋಡಲು ಬಿಡು

ಸೆರೆಮನೆಯಾಗಿದೆ ನಾಕು ಗೋಡೆಗಳ ನಡುವಿನ ಬದುಕು
ಮನಕೆ ಮುದನೀಡುವ ಆಹ್ಲಾದಕರ ಗಾಳಿ ತೂರಲು ಬಿಡು

ಕಣ್ಣಾಲಿ ನೀರು ಮಡುಗಟ್ಟಿ ಕತಕತನೆ ಕುದ್ದು ಆವಿಯಾಗುತಿದೆ
`ಗಿರಿ’ ಒಡಲ ಗಾಯಗಳನು ಒಂದಷ್ಟಾದರೂ ಮಾಯಲು ಬಿಡು

ಗಜಲ್-೩

ಇಂದಿನ ಸಂಜೆ ಅದೇಕೊ ಕಳೆಗಟ್ಟಿದೆ ಅವಳು ಬರಬಹುದೇನೊ
ದಿನನಿತ್ಯದ ಬೇಸರವನು ದೂರಕಟ್ಟಿದೆ ಅವಳು ಬರಬಹುದೇನೊ

ಪಡುವಣದ ಗಳಿಗೆ ರಮ್ಯಗೊಂಡು ಹೊಸತು ಹುರುಪಿನಿಂದಿದೆ
ಮೌನಹೃದಯ ಶೃಂಗಾರ ಕಾವ್ಯಕಟ್ಟಿದೆ ಅವಳು ಬರಬಹುದೇನೊ

ಇರುಳಿಗೂ ಇಂದು ಹತ್ತಿರ ಸುಳಿಯಲು ಹೆದರಿಕೆ ಎನಿಸಿದಂತಿದೆ
ದೀವಟಿಗೆಯ ಜೋಡಿಕಣ್ಣು ಬೆಳಕಿಟ್ಟಿದೆ ಅವಳು ಬರಬಹುದೇನೊ

ನೂರು ನವಿಲ ನರ್ತನ ಏಕಕಾಲದಿ ಮನ ಕುಣಿಸಿ ತಣಿಸಿವೆ
ಭೂರಮೆಯಂತೆ ಒಡಲು ಚೆಲುವಿಟ್ಟಿದೆ ಅವಳು ಬರಬಹುದೇನೊ

ಆಸೆ ಕಂಗಳು ಹುಣ್ಣಿಮೆ ಚಂದಿರನಂತೆ ಅರಳಿ ನಿಂತಿವೆ `ಗಿರಿ’
ಎದೆಯೊಳಗೆ ನಲ್ಮೆ ಬೀಜಗಟ್ಟಿದೆ ಅವಳು ಬರಬಹುದೇನೊ

ಗಜಲ್-೪

ಕತ್ತಲಾಗುತಿದೆ ಮೇಲೊಂದು ಮನೆಯಿದೆ ಹೋಗಬೇಕು
ಕಾಯುತ ಕುಳಿತಿಹೆ ಸುಮ್ಮನೆ ಹೋಗಲಿದೆ ಹೋಗಬೇಕು

ಸಾಕು ನೋಡಲೇನಿದೆ ವೃಥಾ ಕಾಲ ತಳ್ಳುತ್ತಾ ಕೂಡಲು
ಬಂದ ಕೆಲಸ ಪೂರ್ಣವೇನಲ್ಲ ಸಾಗುತಿದೆ ಹೋಗಬೇಕು

ಮಿಂಚುಳ್ಳಿ ಬದುಕಲಿ ನೂರಾರು ಆಸೆ ಕೆಲ ಉಳಿದಿವೆ ನಿಜ
ಹಿಂದಿನವರಿಗೆ ದಾರಿಬಿಡುವ ಕ್ಷಣ ಬಂದಿದೆ ಹೋಗಬೇಕು

ಬದುಕಿನ ಜೊತೆ ಹರಿದ ನಗುಅಳುವಿನ ಹೊಳೆ ಸಾಲು
ಆಗಾಗ ಬಿಸಿಲ್ಗುದುರೆ ಮಿಂಚು ಕಂಡಿದೆ ಹೋಗಬೇಕು

ಏಸೋ ವಸಂತ ಕಳೆದಿವೆ ಹಗಲಿನಂತಲ್ಲ ಇರುಳೀಗ ದೀರ್ಘ
ʻಗಿರಿʼ ಸಾಕಿನ್ನು ಪ್ರಯಾಸ ದೇಹ ಬಳಲಿದೆ ಹೋಗಬೇಕು