ಈ ಸಂಶೋಧನೆಗಳನ್ನು ಸರಿಯಾಗಿ ಗ್ರಹಿಸಿದರೆ ವಸಾಹತುಪ್ರಜ್ಞೆಯು ಕಾದಂಬರಿ ಪ್ರಕಾರದಲ್ಲಿ ಪ್ರಬಲವಾಗಿ ಬರುವ ಯುರೋಪಿನ ಕಥಾಹಂದರದ (Plot) ಮೂಲಕ ಹೇಗೆ ಭಾರತೀಯರಿಗೆ ತಮ್ಮ ಅನುಭವವನ್ನು ಹೇಳಲು ಅಡ್ಡಿಯಾಗುತ್ತದೆ ಎಂಬುದು ಅರ್ಥವಾಗುತ್ತದೆ. ಅಂದರೆ ಇಲ್ಲಿಯ ಊರು, ಕೇರಿ, ಜನ, ಜೀವನದ ಬಗ್ಗೆ ಕಾದಂಬರಿಗಳು ಹೇಳಿದರೂ ಕೂಡ ಯುರೋಪಿನ ಕಥಾಹಂದರದ ಚೌಕಟ್ಟು ಅನುಭವಗಳನ್ನು ಮಸುಕಾಗಿಸುತ್ತದೆ. ಹೀಗಾಗಿ ಎಲ್ಲವೂ ಪರಿಚಿತವಾಗಿ ಇದ್ದರೂ ಕೂಡ, ಅಲ್ಲಿ ಒಂದು ರೀತಿಯ ಅಪರಿಚಿತತೆ ಮುನ್ನೆಲೆಗೆ ಬಂದು ಬಿಡುತ್ತದೆ.
ಕನ್ನಡದ ಹೊಸ ರೀತಿಯ ಕಾದಂಬರಿಗಳ ಕುರಿತ ತಮ್ಮ ಅವಲೋಕನವನ್ನು  ಡಾ. ಅಶ್ವಿನಿ ಬಿ. ದೇಸಾಯಿ ಹಾಗೂ ಚೈತ್ರ ಎಂ.ಎಸ್ ಇಲ್ಲಿ ಪ್ರಸ್ತುತಪಡಿಸಿದ್ದಾರೆ. 

 

ಕನ್ನಡದಲ್ಲಿ ಗದ್ಯರೂಪದ ಬರವಣಿಗೆಗೆ ವಿಸ್ತಾರವಾದ ಇತಿಹಾಸವಿದೆ. ಶಿವಕೋಟ್ಯಾಚಾರ್ಯರ ವಡ್ಡಾರಾಧನೆಯಿಂದ ಹಿಡಿದು ಚಂಪೂಪ್ರಕಾರದ ಭಾಗವಾಗಿ ಗದ್ಯಬರಹಗಳು ಕನ್ನಡದ ಜಗತ್ತಿನಲ್ಲಿ ನಿರಂತರವಾಗಿ ಕಾಣಿಸುತ್ತವೆ. ಸುಮಾರು 18ನೇ ಶತಮಾನದ ಕಾಲಘಟ್ಟದಿಂದ ಸಂಪೂರ್ಣವಾಗಿ ಗದ್ಯವಾಗಿ ಪ್ರಕಟವಾದ ಕೃತಿಗಳ ಪಟ್ಟಿ ದೊಡ್ಡದಿದೆ. ಅವುಗಳಲ್ಲಿ ಮುದ್ರಾಮಂಜೂಷದಿಂದ ಹಿಡಿದು ಕೃಷ್ಣರಾಜ ವಿಲಾಸ, ಚಾಮರಾಜೋಕ್ತವಿಲಾಸ, ಬಾಣಭಟ್ಟನ ಕಾದಂಬರಿಯ ಅನುವಾದ, ಮುದ್ದಣನ ರಾಮಾಶ್ವಮೇಧದವರೆಗಿನ ವಿಸ್ತಾರವಾದ ಗದ್ಯದ ಜಗತ್ತೊಂದಿದೆ.

ಈ ಗದ್ಯ ಪ್ರಕಾರವು 20ನೇ ಶತಮಾನದಲ್ಲಿ ನಮ್ಮ ಮುಂದೆ ಹೆಚ್ಚು ಪ್ರಚಲಿತದಲ್ಲಿ ಇರುವ ಕಾದಂಬರಿ ಪ್ರಕಾರಕ್ಕಿಂತ ಭಿನ್ನವೆಂದು ಅನೇಕರಿಗೆ ಅನಿಸಿದೆ. ಕೀರ್ತಿನಾಥ ಕುರ್ತಕೋಟಿಯವರಂತೂ ಕಾದಂಬರಿ ಹಾಗೂ ಕಾದಂಬರೀಪೂರ್ವ ಗದ್ಯಗಳ ನಡುವಿನ ವ್ಯತ್ಯಾಸದ ಕುರಿತು ಈಗಾಗಲೇ ಬರೆದಿದ್ದಾರೆ. ಹಾಗಿದ್ದರೆ ನಿರ್ದಿಷ್ಟವಾಗಿ ವಿಸ್ತಾರವಾದ ಗದ್ಯರೂಪದಲ್ಲಿರುವ ಎರಡು ಪ್ರಕಾರಗಳ (ಕಾದಂಬರಿಪೂರ್ವ ಮತ್ತು ಕಾದಂಬರಿಗಳ) ನಡುವಿನ ವ್ಯತ್ಯಾಸ ತಿಳಿಯಲು ಸಾಧ್ಯವೇ ಮತ್ತು ಆ ಎರಡು ವ್ಯತ್ಯಾಸಗಳು ನಮಗೆ ಇಂದಿನ ಸಾಹಿತ್ಯವನ್ನು ತಿಳಿಯಲು ಏನಾದರೂ ಸಹಾಯ ಮಾಡಬಹುದೇ ಎನ್ನುವುದು ನಮಗಿರುವ ಪ್ರಶ್ನೆ. ಆದರೆ ಈ ಎರಡು ಗದ್ಯಪ್ರಕಾರಗಳ ನಡುವಿನ ವ್ಯತ್ಯಾಸವನ್ನು ತಿಳಿಯಲು ಸರಿಯಾದ ಮಾನದಂಡಗಳು ಇರದೇ ಇರುವ ಕಾರಣ ಕಾದಂಬರೀಪ್ರಕಾರವನ್ನು ಸ್ವಲ್ಪ ಗಂಭೀರವಾಗಿ ಪರಿಶೀಲಿಸಿ ನಮ್ಮ ಸಮಸ್ಯೆಯನ್ನು ಬಿಡಿಸಿಕೊಳ್ಳಲು ಸಾಧ್ಯವೇ ಎನ್ನುವುದನ್ನು ಸ್ವಲ್ಪ ಪರಿಶೀಲಿಸೋಣ.

ಕನ್ನಡದ ಮಟ್ಟಿಗೆ ಕಾದಂಬರಿಗಳ ಪ್ರವೇಶವಾದದ್ದು ಇಂಗ್ಲೀಷ್ ಪ್ರಭಾವದಿಂದ ಎಂಬುವುದು ಎಲ್ಲರಿಗೂ ತಿಳಿದಿದೆ. ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ’, ಎಂ.ಎಸ್. ಪುಟ್ಟಣ್ಣಯ್ಯನವರ ‘ಮಾಡಿದ್ದುಣ್ಣೋ ಮಹಾರಾಯ’ ಇಂತಹ ಕನ್ನಡದ ಪ್ರಾರಂಭಿಕ ಕೃತಿಗಳ ನಂತರ ಸಾಲುಸಾಲಾಗಿ ನಾವು ಸಾಕಷ್ಟು ಹೆಸರುವಾಸಿಯಾಗಿರುವ ಕಾದಂಬರಿಕಾರರನ್ನು ಗುರುತಿಸಬಹುದು: ಮಾಸ್ತಿ, ಕುವೆಂಪು, ಅನಂತಮೂರ್ತಿ, ಅನಕೃ, ಎಂ.ಕೆ. ಇಂದಿರಾ, ತಿರುಮಲಾಂಬಾ, ತ್ರಿವೇಣಿ, ಇತ್ಯಾದಿ ಕಾದಂಬರಿಕಾರರ ಒಂದು ದೊಡ್ಡ ಪಟ್ಟಿಯೇ ಇದೆ. ಬಹುಶಃ ಇದೇ ಕಾಲಘಟ್ಟದಲ್ಲಿ ಭಾರತದ ಇನ್ನಿತರ ಭಾಷೆಗಳಲ್ಲಿ ಈ ಕಾದಂಬರಿ ಪ್ರಕಾರದ ಪ್ರವೇಶವಾದುದನ್ನು ನಾವು ಕಾಣಬಹುದು.

ಭಾರತಕ್ಕೆ ಕಥನ ಪರಂಪರೆ ಹೊಸದೇನು ಅಲ್ಲ. ರಾತ್ರಿ-ಬೆಳಗು ಅಂತಿಲ್ಲದೆ ವಾರಗಟ್ಟಲೆ, ತಿಂಗಳುಗಟ್ಟಲೆ ಕಥೆ ಹೇಳುವ, ಕೇಳುವ ಸಾಮರ್ಥ್ಯವಿರುವವರು ನಾವು. ರಾಮಾಯಣ, ಮಹಾಭಾರತ, ಭಾಗವತ, ಮಂಟೇಸ್ವಾಮಿ, ಮೈಲಾರಲಿಂಗ, ಜುಂಜಪ್ಪ ಇತ್ಯಾದಿಗಳ ಬಹು ದೊಡ್ಡ ಕಥನ ಪರಂಪರೆ ಕನ್ನಡದಲ್ಲಿದೆ. ಯಕ್ಷಗಾನ, ತಾಳಮದ್ದಲೆ, ಬಯಲಾಟ, ಗಮಕ ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಕಥೆ ಹೇಳುವ ಸಂಪ್ರದಾಯಗಳು ಹಿಂದಿನಿಂದಲೂ ಒಂದು ತಲೆಮಾರಿನಿಂದ ಇನ್ನೊಂದಕ್ಕೆ ಹಸ್ತಾಂತರವಾಗಿವೆ. ಇಂದಿಗೂ ಜೀವಂತವಾಗಿವೆ ಈ ಪ್ರಕಾರಗಳು. ಇಷ್ಟೆಲ್ಲ ಕಥಾನಕಗಳನ್ನು ಸೃಷ್ಟಿಸಿರುವ ಕನ್ನಡಿಗರಿಗೆ ಈ ಕಾದಂಬರಿ ಪ್ರಕಾರವೂ ಬಂದು ಸೇರಿದರೆ, ಇದರಲ್ಲಿ ಅಂತಹ ವಿಶೇಷವೇನೂ ಇಲ್ಲವೆಂದು ಹೇಳಬಹುದು.

ಈ ಮೇಲೆ ತಿಳಿಸಿದಂತೆ ಕಥೆ ಹೇಳುವುದು ನಮಗೆ ಹೊಸ ವಿಷಯವಲ್ಲದಿದ್ದರೂ, ಈ ಕಾದಂಬರಿಗಳು ನಮಗೆ ತಿಳಿದಿರುವ ಕಥೆಗಳಿಗಿಂತ ಸ್ವಲ್ಪ ಭಿನ್ನ. ಇವು ಯುರೋಪಿಯನ್‌ರ ತರಹ ಬೇರೊಂದು ರೀತಿಯಲ್ಲಿ ಕಥೆಯನ್ನು ಹೇಳುವ ರೀತಿ ಎಂದು ನಾವು ಗುರುತಿಸಬಹುದಾಗಿದೆ. ಮತ್ತಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ ಈ ಕಾದಂಬರಿ ಪ್ರಕಾರಕ್ಕೆ ತನ್ನದೇ ಆದ ಒಂದು ಕಥಾಹಂದರವಿರುತ್ತದೆ (Plot). ಈ ಕಾದಂಬರಿಗಳು ತಮ್ಮ ಸುತ್ತಮುತ್ತಲಿನ ಪರಿಸರದ ಸಂಗತಿಗಳನ್ನು ತೆಗೆದುಕೊಂಡು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಮಸ್ಯೆಗಳನ್ನು ಎತ್ತಿ ಹಿಡಿಯುತ್ತವೆ. ಸಮಾಜದ ಓರೆ ಕೋರೆಗಳನ್ನು ತೋರಿಸುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ ಇವು ನಮ್ಮ ಸಮಾಜದ ಕನ್ನಡಿಯಾಗಿವೆ ಎಂದು ಹೇಳಲಾಗುತ್ತದೆ.

ಈ ಮೊದಲೇ ಹೇಳಿದಂತೆ ಕಥಾಹಂದರ ಈ ಸಾಮಾಜಿಕ ಸಮಸ್ಯೆಗಳನ್ನು, ನ್ಯೂನತೆಗಳನ್ನು, ಶೋಷಣೆಯನ್ನು ಮತ್ತು ಇವುಗಳನ್ನು ಅನುಭವಿಸುತ್ತಿರುವ, ಪರಿಸ್ಥಿತಿಯ ಕೈಗೂಸಾಗಿಂದ ಪಾತ್ರಗಳ ತೊಳಲಾಟವನ್ನು ತೋರಿಸಿಕೊಡುತ್ತವೆ. ಕಥಾಹಂದರವನ್ನು ಇದಕ್ಕಾಗಿಯೇ ಹೆಣೆಯಲಾಗಿರುತ್ತದೆ. ಉದಾಹರಣೆಗೆ ಎಂ.ಕೆ. ಇಂದಿರಾರವರ ‘ಫಣಿಯಮ್ಮ’ದಲ್ಲಿ ಬಾಲ ವಿಧವೆಯೊಬ್ಬಳ ಕಥೆ, ಯು.ಆರ್. ಅನಂತಮೂರ್ತಿಯವರ ‘ಸಂಸ್ಕಾರ’ದಲ್ಲಿ ಬ್ರಾಹ್ಮಣರ ಅಗ್ರಹಾರದಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಜಾತಿವ್ಯವಸ್ಥೆಯ ದುರವಸ್ಥೆ, ಭೈರಪ್ಪನವರ ‘ವಂಶವೃಕ್ಷ’ದಲ್ಲಿ ಹಿಂದೂ ಸಮಾಜ ಎದುರಿಸುತ್ತಿರುವ ‘moral dilemma’’ಗಳು ಹೀಗೆ ಕಥಾಹಂದರ ಮತ್ತು ಅದರ ವಸ್ತು ವಿಷಯ ಪೂರ್ವ ನಿರ್ಧರಿತವಾಗಿರುವುದನ್ನು ನಾವು ಕಾಣಬಹುದು. ಈ ರೀತಿಯ ಕಾದಂಬರಿಗಳು ಅಂದರೆ ಗಟ್ಟಿಯಾದ ಕಥಾಹಂದರದ ಮೂಲಕ ನಮ್ಮ ಮಾರುಕಟ್ಟೆಯಲ್ಲಿ ಪ್ರಚಲಿತವಾಗಿ ಚಲಾವಣೆಯಲ್ಲಿರುವ ಕಾಲದಲ್ಲೇ, ಕೆಲವು ಕಾದಂಬರಿಗಳು ಸ್ವಲ್ಪ ಭಿನ್ನವಾಗಿ ಕಂಡುಬರುತ್ತಿವೆ.

ಇತ್ತೀಚಿನ ದಶಕಗಳಲ್ಲಿ ಕೆಲವು ಕಾದಂಬರಿಗಳು ಈವರೆಗೆ ಬಂದಿರುವ ಅನೇಕ ಕಾದಂಬರಿಗಳಿಗಿಂತ ಭಿನ್ನ ಎಂದು ಅನೇಕ ವಿಮರ್ಶಕರು, ತಮ್ಮೊಳಗಿನ ಚರ್ಚೆಗಳಲ್ಲಿ ಮಾತನಾಡುವುದು ಕಂಡು ಬರುತ್ತದೆ. ಹೆಸರು ಹೇಳಲು ಇಚ್ಛಿಸದ ಖ್ಯಾತ ವಿಮರ್ಶಕರೊಬ್ಬರು, ಈ ಭಿನ್ನ ಕಾದಂಬರಿಗಳ ಬಗ್ಗೆ ಮಾತನಾಡುವಾಗ ಇವು ಕಾದಂಬರಿಗಳೇ ಅಲ್ಲ ಎಂದು ವೈಯಕ್ತಿಕ ಭೇಟಿಯಲ್ಲಿ ಪ್ರತಿಪಾದನೆ ಮಾಡಿದ್ದರು.
ಇದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ಹೊರಬಂದ ‘ಸ್ವಪ್ನ ಸಾರಸ್ವತ’ (ಗೋಪಾಲಕೃಷ್ಣ ಪೈ), ‘ಹಳ್ಳ ಬಂತು ಹಳ್ಳ’ (ಶ್ರೀನಿವಾಸ ವೈದ್ಯ), ‘ತಲೆಗಳಿ’ (ವಿ.ತೀ. ಶೀಗೆಹಳ್ಳಿ), ‘ಸ್ವಾತಂತ್ರ್ಯದ ಓಟ’ (ಬೋಳುವಾರು ಮಹಮ್ಮದ್ ಕುಂಞಿ) ಇವುಗಳನ್ನು ತೆಗೆದುಕೊಳ್ಳಬಹುದು ( ಈ ಸಾಲಿಗೆ ವಸುಧೇಂದ್ರರ ‘ಹರಿಚಿತ್ತ ಸತ್ಯ’ ಹಾಗೂ ಶಿವಾನಂದ ಕಳವೆ ಅವರ ‘ಮಧ್ಯಘಟ್ಟʼ ಮುಂತಾದವು ಸೇರಿಕೊಳ್ಳುತ್ತವೆ). ಇವುಗಳು ಒಂದೇ ಕೇಂದ್ರವಿಲ್ಲದೆ ಇರುವ ಕಥಾನಕಗಳು. ಗಟ್ಟಿಯಾದ ಕಥಾಹಂದರವಿಲ್ಲದಿರುವ ‘ಕಾದಂಬರಿಗಳು’, ಅಂದರೆ ಕಾದಂಬರಿಯ ಮುಖ್ಯ ಅಂಶವಾದ ಕಥಾಹಂದರ ಇವುಗಳಲ್ಲಿ ಅತ್ಯಂತ ದುರ್ಬಲವಾಗಿದೆ ಎಂದು ಹೇಳಬಹುದು. ಈ ಕಥೆಗಳಲ್ಲಿ ನಾಯಕನಾಗಲಿ, ನಾಯಕಿಯಾಗಲಿ, ಅಥವಾ ಇನ್ನಿತರ ಮುಖ್ಯ ಪಾತ್ರಗಳಾಗಲಿ ಸುಧಾರಣೆ ಅಥವಾ ಬದಲಾವಣೆಯ ಅಜೆಂಡಾಗಳನ್ನು ಹಿಡಿದುಕೊಂಡಂತೆ ಅನಿಸುವುದಿಲ್ಲ. ಈ ರೀತಿಯ ವಿಷಯಗಳಿಗೆ ವ್ಯತಿರಿಕ್ತವಾದ ಚಲನೆಯೊಂದು ಈ ಕಾದಂಬರಿಗಳಲ್ಲಿ ಕಾಣಸಿಗುತ್ತದೆ ಮತ್ತು ಅಧ್ಯಯನದ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ. ಇಲ್ಲಿ ನಾವು ನಮ್ಮ ಸಾಂಪ್ರದಾಯಿಕ ರೀತಿಯಲ್ಲಿ ಅವ್ಯಾಹತವಾಗಿ, ಬಹಳ ವಿವರಣಾತ್ಮಕವಾಗಿ, ಒಂದು ಕಥೆಯಿಂದ ಇನ್ನೊಂದು ಕಥೆಗೆ ಹೆಣೆದುಕೊಳ್ಳುಳ, ಅತ್ಯಂತ ನಿರುಮ್ಮಳವಾಗಿ ಕಥೆ ಹೇಳುವ ಶೈಲಿಯನ್ನು ನಾವು ಕಾಣಬಹುದು. ಈ ಕಾದಂಬರಿಗಳನ್ನು ತೀರಾ ವಾಚಾಳಿಯಾಗಿರುವ ಕಾದಂಬರಿಗಳೆಂದೇ ಹೇಳಬಹುದು.

ಅತ್ಯಂತ ವಾಚಾಳಿ ಹಾಗೂ ಬಹಳ ತೆಳುವಾದ ಕಥಾಹಂದರಗಳನ್ನು ಉಳ್ಳ ಈ ಕಾದಂಬರಿಗಳು ವಿಮರ್ಶೆಯ ಜಗತ್ತಿನಲ್ಲಿ, ಅಕೆಡೆಮಿಕ್ ಜಗತ್ತಿನಲ್ಲಿ ಅಷ್ಟೇನೂ ಪ್ರಸಿದ್ಧಿ ಪಡೆದಿಲ್ಲ. ಆದರೆ ಬಹಳಷ್ಟು ಜನರಿಗೆ ಇವುಗಳು ಆಪ್ತ ಎನಿಸಿವೆ ಹಾಗೂ ತಮ್ಮ ಸಾಮುದಾಯಿಕ ಅನುಭವಗಳಿಗೆ ತೀರಾ ಹತ್ತಿರವೆನಿಸಿವೆ. ಈ ಲೇಖನದಲ್ಲಿ ಈ ಹೊಸ ಬಗೆಯ ಕಾದಂಬರಿಯೊಂದನ್ನು ತೆಗೆದುಕೊಂಡು, ಇದಕ್ಕೂ ವಸಾಹತುಶಾಹಿಯ ಕಾಲಘಟ್ಟದಲ್ಲಿ ಮತ್ತು ಅದರಿಂದ ಪ್ರಭಾವಿತವಾಗಿ ಬಂದ ಕಾದಂಬರಿಗಳಿಗೂ ಇರುವ ವ್ಯತ್ಯಾಸವನ್ನು ಸಂಕ್ಷಿಪ್ತವಾಗಿ ತೋರಿಸಲು ಪ್ರಯತ್ನಿಸಲಾಗಿದೆ. ಈ ಮೂಲಕ ಕಾದಂಬರಿ ಮತ್ತು ಕಾದಂಬರಿ ಪೂರ್ವ ಗದ್ಯ ಪ್ರಕಾರಗಳ ನಡುವಿನ ವ್ಯತ್ಯಾಸ ತಿಳಿಯಲು ಸಾಧ್ಯವೇ ಎಂದು ಯೋಚಿಸಲು ಯತ್ನಿಸಬಹುದು.

ಮೇಲೆ ಹೇಳಿದ್ದನ್ನು ಸ್ಪಷ್ಟಪಡಿಸಲು ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’ದ ಕೆಲವು ಘಟನೆಗಳನ್ನು ತೆಗೆದುಕೊಳ್ಳೋಣ-
ಅಂಬಕ್ಕ ಭೋಜನ ಸಾಲೆಯ ಕಿಡಕಿಯಿಂದ ಹಿತ್ತಲಿನ ಭಾವಿ ಕಟ್ಟೆಯ ಮೇಲಿನ ಈ ಸ್ನಾನ ದೃಶ್ಯವನ್ನು ನೋಡಿ “ಅಯ್ಯ ಮನೀಗಂತು ಬಂತಲ್ಲ ಇದು ಸುಡ್ಲಿ” ಎಂದು ತನ್ನಷ್ಟಕ್ಕೆ ತಾನೇ ಒಟಗುಡುತ್ತ ಒಳಗೆ ಪಡಸಾಲೆಗೆ ಬಂದಳು, ಬಂದು ಅದೇ ಹೊರಗಿನಿಂದ ಬರುತ್ತಿದ್ದ ವಾಸುದೇವಾಚಾರ್ಯರಿಗೆ “ನಾರಾಯಣ ಬಂದದ ಖೋಡಿ” ಎಂದು ಪಿಸುಗುಟ್ಟಿದಳು. ನಾರಾಯಣ ಬಂದದ್ದನ್ನು ಕೇಳಿ ವಾಸುದೇವಾಚಾರ್ಯರು ಹಿತ್ತಲಿಗೆ ನಡೆದರು. ಆಗ ತುಳಸಕ್ಕ ತುಳಸೀ ಕಟ್ಟಿಯ ಮೇಲೆ ನಿಂತು ಒಂದು ಒಣಗಿ ಒಣಗಿ ಚಕ್ಕಿ ಆದಂತಹ ಪಂಜಾ ತೊಗೊಂಡು ತಿಕ್ಕಿ ತಿಕ್ಕಿ ನಾರಾಯಣನ ತಲೆ ಮಾರಿ ಬೆನ್ನು ವರಸಲಿಕ್ಕೆ ಹತ್ತಿದ್ದಳು. ವಾಸುದೇವಾಚಾರ್ಯರು “ಆ ಲವಡೀ ಮಗನ ಬಾಯಾಗ ಒಂದಿಷ್ಟು ಪಂಚಗವ್ಯ ಹಾಕಿ ಒಳಗ ಕರಕೊಂಡು ಬರ್ರಿ” ಎಂದು ಕೃತಕ ಕೋಪವನ್ನು ಪ್ರಕಟಿಸುತ್ತ ತಾವು ಹಿಂದೆ ಬಂದರು.

ಅವತ್ತು ನಾರಾಯಣ ಬಂದದ್ದನ್ನು ನೋಡಿ ವಾಸುದೇವಾಚಾರಿಗೆ ನಿರುಂಬಳ ಅನಿಸಿತು, ಸಂತೋಷ ಆತು……… ಆ ಸಲ ಹೋಳಿ ಹುಣ್ಣಿವೆಯ ಮುಂದೆ ಮೂರು ನಾಲ್ಕು ದಿನ ನಾರಾಯಣ ಮನೆಯ ಹೊರಗೆ ಉಳಿದು ಬಿಟ್ಟಿದ್ದನ್ನು ನೋಡಿ ಅವರೆಲ್ಲ ಗಾಬರಿಯಾಗಿದ್ದರು….. ಇಂತಹ ತಪ್ತ ವಾತಾವರಣದಲ್ಲಿ, ಕಾಮದಹನದ ಸಂಜೆ ನಾರಾಯಣ ಮನೆಗೆ ಬಂದದ್ದೇ ಅವರಿಗೆಲ್ಲ ಒಂದು ನಿರಾಳವಾದ ನಿಶ್ಚಿಂತತೆಯನ್ನು ತಂದಿತ್ತು …. ವಾಸುದೇವಾಚಾರು “ಆ ಲವಡಿ ಮಗನ ಬಾಯಾಗ ಒಂದಿಷ್ಟು ಪಂಚಗವ್ಯ ಹಾಕಿ ಒಳಗ ಕರಕೊಂಡು ಬರ್ರಿ” ಎಂದು ಹೇಳಿದ್ದನ್ನು ಕೇಳಿ ಅಂಬಕ್ಕ ಸಿಡಿಮಿಡಿಗೊಂಡಳು. ಅವಳು ನಾರಾಯಣನ ಬೊಗಸೆಯೊಳಗ ದೊನ್ನಿಯಿಂದ ಪಂಚಗವ್ಯ ಸುರುವುತ್ತ “ಈ ಮನ್ಯಾಗಿನ್ನ ದೊಡ್ಡ ಹಂಡೇದ್ದ ತುಂಬ ಪಂಚಗವ್ಯ ಮಾಡಿ ಇಟಗೋಬೇಕಾಗತದ. ಅಷ್ಟೊಂದು ಗೋಮೂತ್ರ ಶಗಣಿ ಎಲ್ಲಿಂದ ತರಬೇಕೋ ಏನೋ?” ಎಂದು ಗೊಣಗದೇ ಬಿಡಲಿಲ್ಲ.

ಈ ಕಥೆಗಳಲ್ಲಿ ನಾಯಕನಾಗಲಿ, ನಾಯಕಿಯಾಗಲಿ, ಅಥವಾ ಇನ್ನಿತರ ಮುಖ್ಯ ಪಾತ್ರಗಳಾಗಲಿ ಸುಧಾರಣೆ ಅಥವಾ ಬದಲಾವಣೆಯ ಅಜೆಂಡಾಗಳನ್ನು ಹಿಡಿದುಕೊಂಡಂತೆ ಅನಿಸುವುದಿಲ್ಲ. ಈ ರೀತಿಯ ವಿಷಯಗಳಿಗೆ ವ್ಯತಿರಿಕ್ತವಾದ ಚಲನೆಯೊಂದು ಈ ಕಾದಂಬರಿಗಳಲ್ಲಿ ಕಾಣಸಿಗುತ್ತದೆ ಮತ್ತು ಅಧ್ಯಯನದ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ.

ಪಂತರ ಮನೆಯ ಮದುವೆ ಎಂತಲೋ, ಅಥವಾ ನವಲಗುಂದದ ಸಣ್ಣ ಸಮಾಜದ ನಿಂತ ನೀರಿನ ಜನಜೀವನದಲ್ಲಿ ಕ್ವಚಿತ್ತಾಗಿ ಆಗೀಗ ಬರುವ ಸಂಭ್ರಮವೆಂತಲೋ, ಅಂತೂ ವಾಸುದೇವಾಚಾರ್ಯರ ಮನೆಯ ಮದುವೆಗಳಿಗೆ ಒಂದು ಅನುರಣಿತವಾಗಿರುತ್ತದೆ. (ಪುಟ ಸಂ. 73-74)

ಈ ಮೇಲೆ ವಿವರಿಸಲಾದ ಸಂಗತಿಗಳನ್ನು ನಾವೊಮ್ಮೆ ಗಂಭೀರವಾಗಿ ತೆಗೆದುಕೊಳ್ಳೋಣ. ಈ ವಿವರಣೆಗಳು ಹೋಳಿ ಹುಣ್ಣಿಮೆಯ ಆಚರಣೆಯ ಬಗ್ಗೆ ನಮ್ಮ ಗಮನ ಸೆಳೆಯುತ್ತವೆ. ಇದಕ್ಕಿಂತ ಮೊದಲು ನವಲಗುಂದ ಹಳ್ಳಿಯಲ್ಲಿ ನಡೆದ ಹೋಳಿ ಹುಣ್ಣಿಮೆಯ ವಿವರಣೆ ಮತ್ತು ನಾರಾಯಣ ಅನ್ನುವ ಪಾತ್ರ ಹೋಳಿಯ ಅಂಗವಾಗಿ ಓಕಳಿಯ ಬಣ್ಣಗಳಲ್ಲಿ ಮಿಂದೆದ್ದು ಅವನ ವಸ್ತ್ರಗಳು ಹೇಗೆ ವರ್ಣರಂಜಿತವಾಗಿದ್ದವು ಎನ್ನುವ ವಿವರಣೆಯೂ ಬರುತ್ತದೆ. ಬಹಳ ದಿನಗಳ ನಂತರ ಮನೆಗೆ ಮರಳಿದ ಸದಸ್ಯನನ್ನು ಪ್ರೀತಿಯಿಂದ ಬಯ್ದು ಹೇಗೆ ಸಂಭ್ರಮಿಸುತ್ತಾರೆ ಎನ್ನುವುದೂ ಈ ವಿವರಣೆಯಿಂದ ಗೊತ್ತಾಗುತ್ತದೆ. ನಾರಾಯಣ ಎಲ್ಲೆಲ್ಲಿ ಹೋಗಿದ್ದ, ಹಾಗಾಗಿ ಅವನನ್ನು ಹೇಗೆ ಶುಚಿಗೊಳಿಸಬೇಕು, ಸ್ನಾನ ಮಾಡಿಸುವರೊಬ್ಬರು, ಪಂಚಗವ್ಯ ನೀಡಿ ಎನ್ನುವವರೊಬ್ಬರು, ಹೀಗೆ ಅನೇಕ ಕಾರ್ಯಗಳಿಗೆ ವಾಸುದೇವಾಚಾರ್ಯರ ಇಡೀ ಕುಟುಂಬ ಸಾಕ್ಷಿಯಾಗುತ್ತದೆ. ದಿನವೂ ಕೂಡ ಹೀಗೆ ಏನೇನೋ ಕೆಲಸ ಕಾರ್ಯಗಳು ವಾಸುದೇವಾಚಾರ್ಯರ ಮನೆಯಲ್ಲಿ, ನವಲುಗುಂದ ಹಳ್ಳಿಯಲ್ಲಿ ನಡೆಯುತ್ತಲೇ ಇರುವುದನ್ನು, ಶ್ರೀನಿವಾಸ ವೈದ್ಯರ ವಾಚಾಳಿ ಎನ್ನಿಸುವ ವಿವರಣೆಗಳಲ್ಲಿ ನಾವು ನೋಡಬಹುದು. ಆದರೆ ಈ ವಿವರಗಳನ್ನು ಇಟ್ಟುಕೊಂಡು ಅವರೊಂದು ನಿರ್ಣಯ ಮಾಡುವ ರೀತಿಯಲ್ಲಿ ಒಂದು ವಾಕ್ಯವನ್ನು ಬರೆಯುತ್ತಾರೆ. ವೈದ್ಯರ ಪ್ರಕಾರ “ಪಂತರ ಮನೆಯ ಮದುವೆ ಎಂತಲೋ, ಅಥವ ನವಲಗುಂದದ ಸಣ್ಣ ಸಮಾಜದ ನಿಂತ ನೀರಿನ ಜನಜೀವನದಲ್ಲಿ ಕ್ವಚಿತ್ತಾಗಿ ಆಗೀಗ ಬರುವ ಸಂಭ್ರಮವೆಂತಲೋ…” ಎನ್ನುವಲ್ಲಿ ಈ ಅಕಾಲಿಕ ಸಂಭ್ರಮಗಳನ್ನು ಬಿಟ್ಟರೆ ನವಲಗುಂದದ ಜೀವನ ನಿಂತ ನೀರಿನಂತಿದೆ. ಬಹಳಷ್ಟು ಬಾರಿ ಓದುಗರಾಗಿ ನಾವು ಇದನ್ನು ಬಹಳ ಮಹತ್ವದೆಂದು ಪರಿಗಣಿಸುವುದಿಲ್ಲ. ಆದರೆ ಈ ತರಹದ ಪ್ರತಿಪಾದನೆಗಳು ಪದೇ ಪದೇ ಮರುಕಳಿಸುತ್ತವೆ.

ಇನ್ನೊಂದು ಉದಾಹರಣೆ-

ಸೋನಕ್ಕನ ಸಾವು ಪಂತರ ಮನೆತನದ ಏಕತಾನದ ನೀರಸ ಜೀವನ ಪ್ರವಾಹದ ದಿಕ್ಕನ್ನೇ ಬದಲಿಸಿದ ಒಂದು ಮಹತ್ವದ ಕಾಲಖಂಡವಾಯಿತು ಎನ್ನಬಹುದೇನೋ? ಮುಂದೆ ಎಷ್ಟೋ ವರ್ಷ ಪಂತರ ಮನೀ ಮಂದಿ ಏನಾರ ಸುದ್ದೀ ಸುಖ ದುಃಖ ಹೇಳಿಕೊಳ್ಳುವ ಮುಂದೆ ಸೋನೀ ಸಾವಿನಿಂದಲೇ ಕಾಲಗಣನೆ ಮಾಡತೊಡಗಿದರು. (ಪುಟ ಸಂ.92)

ಮತ್ತೆ

ಬೆಳ್ಳಿಗ್ಗೆಯಿಂದ ಮಧ್ಯಾಹ್ನ ಬಲಿಯುವವರೆಗೆ ಪಡಸಾಲೆಯಲ್ಲಿ ರೋಗಿಗಳನ್ನು ನೋಡಿ, ವಾಸುದೇವಾಚಾರ್ಯರು ಹಿತ್ತಲಿಗೆ ಬಂದು, ಬಾವಿಯಿಂದ ತಾವೇ ಏಳೆಂಟು ಕೊಡ ನೀರು ಸೇದಿ ದಬದಬನೇ ಸುರಿದುಕೊಂಡು ಸ್ನಾನ ಮುಗಿಸಿ, ದೇವರಕಟ್ಟೆಗೆ ಬಂದು ಪೂಜೆಗೆ ಕುಳಿತರೆ, ಎರಡು ಗಂಟೆಯವರೆಗೆ ನಿತ್ಯ ಅಖಂಡ ಪೂಜೆಯಾಗಬೇಕು. ಒಮ್ಮೊಮ್ಮೆ ಆಚಾರ್ಯರ ಪೂಜೆ ಮುಗೀಬೇಕಾದರೆ ಮುನಸೀಪಾಲಿಟೀದು ಮೂರರ ಗಂಟೆ ಬಾರಿಸಿರುತ್ತದೆ.

ಆಮೇಲೆ ಭೋಜನ ವಾಮಕುಕ್ಷಿ ಎಲ್ಲ ಮುಗಿಸಿ, ಇಳಿ ಮಧ್ಯಾಹ್ನಕ್ಕೆ ಬರೀ ಮೈಮೇಲೆ ಒಂದು ಉಪ್ಪರಣಿ ಹೊದ್ದು ಲಾಲಗಡಿ ಆಂಜನೇಯನ ದರ್ಶನಕ್ಕೆ ನಡೆಯುತ್ತಾರೆ. ಅಲ್ಲಿ ಆಗೊಮ್ಮೆ ಈಗೊಮ್ಮೆ ಪುರಾಣ ಪುಣ್ಯ ಕಥೆಗಳೋ ಹರಿಕೀರ್ತನೆಗಳೋ ನಡೆದಿದ್ದರೆ ಕೇಳಿ, ಇಲ್ಲವೇ ಮುಗಿಲಿಗೆ ತೆರೆದುಕೊಂಡಿದ್ದ ಹೊರಗಿನ ಕಲ್ಲುಬೆಂಚಿಗೆ ಆತು ಕುಳಿತು ಮಗದುಮನ ಚೌಘಡಾದ ಚೇತೋಹಾರಿ ಆಲಾಪಗಳೊಳಗ, ತಮ್ಮನ್ನು ತಾವೇ ತೇಲಿ ಬಿಟ್ಟು ತೃಪ್ತಿಪಟ್ಟು ಮನೆಯ ಕಡೆಗೆ ಹೆಜ್ಜೆ ಬೆಳೆಸುತ್ತಿದ್ದರು.

ಇಂತಹ ನಿಂತ ನೀರಿನ ಜೀವನದಾಗ ಸಹಿತ ಒಮ್ಮೊಮ್ಮೆ ಬುದ್ಬುದಗಳು ಏಳತಿದ್ದವು. (ಪು.ಸಂ.106)

ಎಷ್ಟೆಲ್ಲ ಘಟನೆಗಳು ನವಲಗುಂದದಲ್ಲಿ ಘಟಿಸುತ್ತವೆ! ನವಲಗುಂದವಷ್ಟೇ ಅಲ್ಲ ಯಾವುದೇ ಹಳ್ಳಿಯಲ್ಲೂ ನಡೆಯುತ್ತಿರುತ್ತವೆ. ಅವನ್ನೆಲ್ಲ ಅಷ್ಟೇ ಸಂಭ್ರಮದಿಂದ ವಿವರಿಸುವ ವೈದ್ಯರಿಗೆ, ಅದನ್ನೆಲ್ಲ ವಿವರಿಸಿಯಾದ ಮೇಲೆ ನವಲಗುಂದ ನಿಂತ ನೀರಾಗಿರುವ ಹಳ್ಳಿ ಎಂದೇಕೆ ಷರಾ ಬರೆಯುತ್ತಾರೆ ಎಂಬ ಪ್ರಶ್ನೆ ಧುತ್ತೆಂದು ಬಂದು ನಿಲ್ಲುತ್ತದೆ. ಎಲ್ಲಿಯೂ ಕೂಡ ದಿನವೂ ಮದುವೆ-ಮುಂಜಿಗಳು ನಡೆಯಲು ಸಾಧ್ಯವಿಲ್ಲ, ಹಾಗೆಯೇ ಮೇಲೆ ವಿವರಿಸಿದಂತೆ ಎಲ್ಲ ಸಾವುಗಳೂ ‘ಸೋನಕ್ಕ’ನ ಸಾವಿನಂತೆ ಜೀವನದ ದಿಕ್ಕನ್ನು ಬದಲಿಸಲೂ ಸಾಧ್ಯವಿಲ್ಲ. ಮುಂಜಾನೆಯಿಂದ ವಿವಿಧ ಆಚರಣೆಗಳಲ್ಲಿ, ಕಾರ್ಯಗಳಲ್ಲಿ, ವೈದ್ಯಕೀಯ ವೃತ್ತಿಯಲ್ಲಿ ನಿರತರಾಗಿರುವ ವಾಸುದೇವಾಚಾರ್ಯರ ಜೀವನ ನಿಂತ ನೀರೇಕೆ ಆಗುವುದು? ದಿನವೂ ಹಬ್ಬ ಹರಿದಿನಗಳು, ಮದುವೆ-ಮುಂಜಿಗಳು ಸಾವು-ನೋವುಗಳು ಆಗುವುದಿಲ್ಲ, ನವಲಗುಂದದಲ್ಲಿ ಅಷ್ಟೇ ಅಲ್ಲ, ಎಲ್ಲ ಭಾರತೀಯರು ಒಂದಲ್ಲಾ ಒಂದು ದಿನನಿತ್ಯದ ಆಚರಣೆಯಲ್ಲಿರುವುದು ಸರ್ವೇಸಾಮಾನ್ಯ. ಹಾಗಿದ್ದ ಮೇಲೆ ಇಷ್ಟೆಲ್ಲ ವಿವರಿಸಿದಾಗಲೂ ವೈದ್ಯರಿಗೆ ನವಲಗುಂದದ ಸಮಾಜ ನಿಂತ ನೀರು ಎಂದೇಕೆ ಅನ್ನಿಸುವುದು? ಆಗಿನ ನವಲಗುಂದದ ಚಿತ್ರಣವನ್ನು ಬಿಟ್ಟು, ಈಗಿನ ನಮ್ಮ ಜನಜೀವನವನ್ನು ಗಮನಿಸೋಣ.

ಒಬ್ಬ ಆಧುನಿಕ ವೈದ್ಯನ ಬದುಕನ್ನು ಉದಾಹರಣೆಯಾಗಿ ನೋಡಿದರೆ, ಅವನು ಬೆಳಗ್ಗೆದ್ದು, ನಿತ್ಯ ಕರ್ಮಗಳನ್ನು ಎಂದಿನಂತೆ ಮಾಡಿ, ಯಾವುದೋ ರೂಢಿಸಿಕೊಂಡ ಆಚರಣೆಗಳನ್ನು ಮಾಡಿ, ಕೆಲಸಕ್ಕೆ ಹೋಗಿ, ಮುಗಿಸಿಕೊಂಡು ಬಂದು ಮನೆಗೆ ಬಂದು ಮತ್ತೆ ತನ್ನ ರೂಢಿಗತವಾದ ಕೆಲಸಗಳನ್ನು ಮಾಡಿ ತನ್ನ ದಿನವನ್ನು ಮುಗಿಸುತ್ತಾನೆ. ಇದು ಜೀವನ ಜೀವಿಸುವುದಲ್ಲವೇ? ಇದನ್ನು ಬಿಟ್ಟು ಬೇರೇನು ಮಾಡಬಲ್ಲೆವು? ಇದು ಹೇಗೆ ನಿಂತ ನೀರಾಗುತ್ತದೆ? ಒಟ್ಟಿನಲ್ಲಿ ವೈದ್ಯರ ಪ್ರಕಾರ ನವಲಗುಂದದ ಸಮಾಜ, ಪಂತರ ವಾಸುದೇವಾಚಾರ್ಯರ ಜೀವನ ಇತ್ಯಾದಿಗಳು ನಿಂತ ನೀರಾಗಿರುವ ಸಮಾಜದ ಪ್ರತಿನಿಧಿಯಾಗುತ್ತದೆ. ಅವರೇ ವಿವರಿಸುವಂತೆ ಪಂತರ ಮನೆ ಇರಬಹುದು, ವಾಸುದೇವಾಚಾರ್ಯರ ಜೀವನ ಇರಬಹುದು, ನವಲಗುಂದದ ಸಮಾಜವಿರಬಹುದು, ಎಲ್ಲವೂ ಅತ್ಯಂತ ಚಟುವಟಿಕೆಗಳಿಂದ ಕೂಡಿ ಸಾಕಷ್ಟು ಸಂಭ್ರಮಿಸುವ ಸಮಾಜವಾಗಿ ಕಾಣುತ್ತದೆ. ಹಾಗಾದರೆ ಇಂತಹ ಚಲನಶೀಲ ಸಮಾಜವೊಂದು ನೀರಸವೂ, ನಿಂತ ನೀರೂ ಆಗಲು ಹೇಗೆ ಸಾಧ್ಯ? ಪಠ್ಯದೊಳಗಿನ ವಿವರಣೆಗಳು ಈ ಸಮಾಜವಾಗಲಿ, ಪಂತರ ಕುಟುಂಬ ಅಥವಾ ವಾಸುದೇವಾಚಾರ್ಯರ ಜೀವನ ಏಕೆ ನೀರಸ, ನಿಂತ ನೀರು ಎಂದು ವಿವರಿಸುವಂತೆ ಕಾಣುವುದಿಲ್ಲ. ಹಾಗಾದರೆ ಈ ನಿಂತ ನೀರಿನ ಸಮಾಜದ ಚಿತ್ರಣ ಎಲ್ಲಿಂದ ಬಂದಿರಬಹುದು? ಇದನ್ನು ಯಾಕೆ ಕಾದಂಬರಿಕಾರರು ಬಳಸಿರಬಹುದು ಎನ್ನುವ ಪ್ರಶ್ನೆ ಹಾಗೆಯೇ ಉಳಿದುಬಿಡುತ್ತದೆ. ಈ ರೀತಿ ಪದೇ ಪದೇ ಮರಳುವ ನಿಂತ ನೀರಿನ, ನೀರಸ ಬದುಕಿನ ಕುರಿತ ವಾಕ್ಯಗಳನ್ನು ಪರಿಶೀಲನೆ ಮಾಡಿದರೆ, ಈ ಅಭಿಪ್ರಾಯ ಎಲ್ಲಿಂದ ಬಂದಿರಬಹುದು ಎಂದು ಊಹಿಸಬಹುದಾಗಿದೆ.

ವಸಾಹತುಶಾಹಿಯ ಸಂದರ್ಭದಲ್ಲಿ ಭಾರತವನ್ನು ತಮ್ಮ ಸಾಂಸ್ಕೃತಿಕ ಅನುಭವದಿಂದ ಅರ್ಥಮಾಡಿಕೊಳ್ಳಲು ಯೂರೋಪಿಯನ್ನರು ಯತ್ನಿಸಿದರು. ಅವರು ತಮಗಿಂತ ಭಿನ್ನವಾಗಿರುವ ಸಂಸ್ಕೃತಿಯ ವಿವರಣೆಯನ್ನು ಕೊಟ್ಟರು. ಜೇಮ್ಸ್ ಮಿಲ್, ಹೆಗೆಲ್, ವೆಬರ್ ಮತ್ತು ಮುಖ್ಯವಾಗಿ ಕಾರ್ಲ್ ಮಾರ್ಕ್ಸ್‌ (Asiatic Mode of Production) ಭಾರತೀಯರನ್ನು, ಫ್ಯೂಡಲ್, ಟ್ರೈಬಲ್ ಹೀಗೆ ಅತ್ಯಂತ ಪ್ರಾಚೀನವಾದ ಸಮಾಜವೆಂದು ವಿವರಣೆ ನೀಡಿದರು. ಅವರ ಸಮಾಜದಲ್ಲಿ ಪರಿಚಿತವಾಗಿರುವ ಸಾಮಾಜಿಕ ಕ್ರಾಂತಿ, ಸುಧಾರಣೆ, ವರ್ಗ ಸಂಘರ್ಷಗಳು ಇತ್ಯಾದಿಗಳು ಅವರಿಗೆ ಕಾಣಿಸಲಿಲ್ಲ. ಹಾಗಾಗಿ ಅವರಿಗೆ ಭಾರತ stagnant society ಅಥವಾ ನಿಶ್ಚಲ, ನಿಂತ ನೀರಾಗಿರುವ ಸಮಾಜದಂತೆ ಕಂಡಿತು. ಅದು ಪಾಶ್ಚಾತ್ಯರ ಅನುಭವ. ಅಂದರೆ ಭಾರತೀಯ ಸಮಾಜ ನಿಂತ ನೀರು, ಅಥವಾ ಚಲನೆಯಿಲ್ಲದ್ದು ಎನ್ನುವ ಪಶ್ಚಿಮದ ಅನುಭವ ಇಂದು ನಮ್ಮ ಸಾಮಾನ್ಯ ಜ್ಞಾನವಾಗಿ ಬಿಟ್ಟಿದೆ. ಎಷ್ಟೆಂದರೆ ನಾವು ಅದನ್ನು ರೂಢಿಗತವಾಗಿ ಬಳಸುತ್ತಿದ್ದೇವೆ. ಅಂದರೆ ಯುರೋಪಿಯನ್ನರ ಭಾರತದ ಕುರಿತ ಅನುಭವಗಳೇನು ಮತ್ತು ಅದರಿಂದ ಹುಟ್ಟಿದ ಚಿತ್ರಗಳೇನು ಎಂದು ಅಧ್ಯಯನ ಮಾಡದೇ ಇದ್ದರೂ ಕೂಡ ನಾವು ಯುರೋಪಿಯನ್ನರ ಭಾರತೀಯ ಸಮಾಜದ ವಿವರಣೆಗಳನ್ನು ಅತ್ಯಂತ ಸಹಜವಾಗಿ ಸಾಮಾನ್ಯಜ್ಞಾನವಾಗಿ ಬಳಸುತ್ತಿದ್ದೇವೆ. ಇದರರ್ಥ ಶ್ರೀನಿವಾಸ ವೈದ್ಯರಿಗೆ ಇದು ಪ್ರಜ್ಞಾಪೂರ್ವಕವಾಗಿ ಬಂದ ಚಿಂತನೆಗಳಲ್ಲ. ವೈದ್ಯರನ್ನು ಸೇರಿದಂತೆ ಎಲ್ಲ ಭಾರತೀಯರಿಗೂ ಈ ರೀತಿಯ ಅನೇಕ ವಿವರಣೆಗಳು ಇಂದು ಭಾರತೀಯ ಸಮಾಜದ ಕುರಿತ ಸಾಮಾನ್ಯಜ್ಞಾನ ಹಾಗು ವೈಜ್ಞಾನಿಕ ವಿವರಣೆಗಳ ರೂಪ ಪಡೆದಿವೆ. ನವಲಗುಂದದ ಚಲನಶೀಲ ಬದುಕಿನ ಬಗ್ಗೆ ಎಷ್ಟೆಲ್ಲ ವಿವರಣೆ ಕೊಟ್ಟ ವೈದ್ಯರಿಗೆ ಈ ಸಮಾಜ ನಿಂತ ನೀರು ಎಂದು ಕಾಣಿಸಲು ಹೇಗೆ ಸಾಧ್ಯ? ಅಂದರೆ ಸದಾ ಚಲನಶೀಲವಾಗಿರುವ ಜಡವಲ್ಲದ ಸಾಮಾಜಿಕ ಬದುಕು ಶ್ರೀನಿವಾಸ ವೈದ್ಯರ ಅನುಭವದಲ್ಲಿದೆ. ಅದನ್ನು ಅವರು ಬಹಳ ಚೆನ್ನಾಗಿ, ನವಿರಾಗಿ ವಿವರಿಸಿದ್ದಾರೆ.

ಆದರೆ ಇವತ್ತು ಸಾಮಾನ್ಯ ಜ್ಞಾನವಾಗಿ ಬಿಟ್ಟಿರುವ ಭಾರತದ ಕುರಿತ ಯುರೋಪಿನ ಚಿತ್ರಣ ಅವರ ಅನುಭವವನ್ನು ಮಸುಕಾಗಿಸಿದಂತೆ ತೋರುತ್ತದೆ. ಹಾಗಾಗಿ ಅವರ ಅನುಭವಕ್ಕೂ ಮತ್ತು ಅದರ ವಿವರಣೆಗೂ ಏನೂ ಸಂಬಂಧ ಕಾಣಿಸುವುದಿಲ್ಲ. ಭಾರತದಲ್ಲಿ ಸಮಾಜ ನಿಂತ ನೀರಾಗಿದೆ ಎಂಬ ವಿವರಣೆ ಅಲ್ಲಲ್ಲಿ ನುಸುಳಿದರೂ ಕೂಡ ಅವರ ಅನುಭವವನ್ನು ಅತ್ಯಂತ ಸಹಜವಾಗಿ, ಸುಂದರವಾಗಿ, ತುಂಬಾ ವಿವರಗಳೊಂದಿಗೆ ನಮ್ಮ ಮುಂದೆ ನಿರೂಪಿಸುತ್ತಾರೆ. ಇದನ್ನೇ ನಾವು ಈ ಮೊದಲು ಬಂದ ಕಾದಂಬರಿಗಳಿಗಿಂತ ಈ ಕಾದಂಬರಿ ಭಿನ್ನವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದು.

ಒಂದು ಕಡೆ ಶ್ರೀನಿವಾಸ ವೈದ್ಯರಿಗೆ ತಮ್ಮ ಸುತ್ತಲಿನ ಪರಿಸರದ ಆಳವಾದ ಅನುಭವವಿದೆ; ಇನ್ನೊಂದೆಡೆ ಭಾರತದ ಸಮಾಜದ ಕುರಿತ ಯೂರೋಪಿನ ವಿವರಣೆಯಿದೆ. ಮೇಲೆ ಕೊಟ್ಟ ಉದಾಹರಣೆಗಳಲ್ಲಿ ಅವರ ಅನುಭವದ ಅಪಾರ ವಿವರಗಳೊಂದಿಗೆ ವಾಚಾಳಿ ಅನ್ನಿಸುವ ಮಟ್ಟಿಗೆ, ನಿರೂಪಣೆ ಮಾಡಿದ್ದಾರೆ. ಆದರೆ ಭಾರತದ ಕುರಿತ ಯೂರೋಪಿನವರ ಚಿತ್ರಣ ಇಲ್ಲಿ ನುಸುಳಿ ಅವರೇ ಕೊಟ್ಟ ಅನುಭವಗಳಿಗೆ ವಿರುದ್ಧವಾಗಿ ಬರುತ್ತವೆ ಎಂಬುದು ಅತ್ಯಂತ ಗಮನಾರ್ಹ ಸಂಗತಿಯಾಗಿದೆ. ಏಕೆಂದರೆ ವಸಾಹತುಶಾಹಿಯೊಂದಿಗೆ ಬಂದ ಕಾದಂಬರಿಗಳು ಭಾರತದ ಕುರಿತ ಯೂರೋಪಿಯನ್ನರ ನಿರೂಪಣೆಯನ್ನು ಪುನರುತ್ಪಾದನೆ ಮಾಡುವ ಪ್ರಕಾರ ಎಂದು ಹೇಳಬಹುದಾಗಿದೆ. ಪ್ರವೀಣ್ ಟಿ.ಎಲ್ ಅವರ ‘ಸಮಾಜದ ಪ್ರತಿನಿಧೀಕರಣ: ಸಮಾಜ ವಿಜ್ಞಾನಗಳು ಮತ್ತು ಸಾಮಾಜಿಕ ಕಾದಂಬರಿಗಳು’ ಹಾಗೂ ಮಂಜುಶ್ರೀ ಎಂ. ಇವರ ‘An Enquiry into the Impact of Orientalism on Indian Novels’ ಎಂಬ ಸಂಶೋಧನೆಗಳು, ಹೇಗೆ ಕಾದಂಬರಿಗಳು ಯುರೋಪಿನ ಭಾರತದ ಕುರಿತ ಚಿತ್ರಣಗಳ ಪುನರುತ್ಪಾದನೆಯನ್ನು ಮಾಡುತ್ತಿವೆ ಎಂಬುದನ್ನು ಅತ್ಯಂತ ವೈಜ್ಞಾನಿಕವಾಗಿ ತೋರಿಸಿಕೊಟ್ಟಿವೆ. ಕನ್ನಡದ ಹಾಗೂ ಇತರ ಭಾರತೀಯ ಭಾಷೆಗಳ ಪ್ರಮುಖ ಕಾದಂಬರಿಗಳನ್ನು ತೆಗೆದುಕೊಂಡು ಯುರೋಪಿನವರ ಭಾರತದ ಕುರಿತ ಅನುಭವವನ್ನು ಕಾದಂಬರಿಗಳು ಪುನರುತ್ಪಾದಿಸುವುದನ್ನು ಸಾಕ್ಷ್ಯಾಧಾರಗಳೊಂದಿಗೆ ತೋರಿಸಿವೆ.

ಈ ಸಂಶೋಧನೆಗಳನ್ನು ಸರಿಯಾಗಿ ಗ್ರಹಿಸಿದರೆ ವಸಾಹತುಪ್ರಜ್ಞೆಯು ಕಾದಂಬರಿ ಪ್ರಕಾರದಲ್ಲಿ ಪ್ರಬಲವಾಗಿ ಬರುವ ಯುರೋಪಿನ ಕಥಾಹಂದರದ (Plot) ಮೂಲಕ ಹೇಗೆ ಭಾರತೀಯರಿಗೆ ತಮ್ಮ ಅನುಭವವನ್ನು ಹೇಳಲು ಅಡ್ಡಿಯಾಗುತ್ತದೆ ಎಂದು ಅರ್ಥವಾಗುತ್ತದೆ. ಅಂದರೆ ಇಲ್ಲಿಯ ಊರು, ಕೇರಿ, ಜನ, ಜೀವನದ ಬಗ್ಗೆ ಕಾದಂಬರಿಗಳು ಹೇಳಿದರೂ ಕೂಡ ಯುರೋಪಿನ ಕಥಾಹಂದರದ ಚೌಕಟ್ಟು ಅನುಭವಗಳನ್ನು ಮಸುಕಾಗಿಸುತ್ತದೆ. ಹೀಗಾಗಿ ಎಲ್ಲವೂ ಪರಿಚಿತವಾಗಿ ಇದ್ದರೂ ಕೂಡ, ಅಲ್ಲಿ ಒಂದು ರೀತಿಯ ಅಪರಿಚಿತತೆ ಮುನ್ನೆಲೆಗೆ ಬಂದು ಬಿಡುತ್ತದೆ. ಹೀಗಾಗಿಯೇ ಈ ರೀತಿಯ ಕಾದಂಬರಿಗಳು ಜನ ಸಾಮಾನ್ಯರಿಗೆ ಆಪ್ತವಾದಂತೆ ಅನಿಸುವುದಿಲ್ಲ. ಶ್ರೀನಿವಾಸ ವೈದ್ಯರೂ ಕೂಡ ಇದಕ್ಕೆ ಹೊರತೇನಲ್ಲ; ಅದಕ್ಕೆ ಅವರು ತಮ್ಮ ಸುತ್ತಲಿನ ಸಮಾಜವನ್ನು ನಿಂತ ನೀರು ಎಂದು ಹೇಳುತ್ತಾರೆ. ಆದರೆ ಗಮನಾರ್ಹ ಸಂಗತಿ ಎಂದರೆ, ಅವರ ಅಧಿಕವಾದ ವಿವರಣೆಗಳು ಅದೇ ಪರಿಸರದ ಬಗ್ಗೆ ವ್ಯತಿರಿಕ್ತವಾಗಿ ಹೇಳುತ್ತವೆ. ಹಾಗಾಗಿ ವೈದ್ಯರು ತಮಗೆ ಗೊತ್ತಿಲ್ಲದೆಯೇ ಕಾದಂಬರಿಯೊಳಯೇ ಈ ಚೌಕಟ್ಟನ್ನು ಮೀರಲು ಪ್ರಯತ್ನಿಸುವುದನ್ನು ನಾವು ಗುರುತಿಸಬಹುದಾಗಿದೆ.

ಕಾದಂಬರಿ ಪ್ರಕಾರಕ್ಕೂ ಮತ್ತು ಭಾರತೀಯರು ತಮ್ಮ ಅನುಭವಗಳನ್ನು ಕಾದಂಬರಿಯಲ್ಲಿ ವ್ಯಕ್ತಪಡಿಸುವುದಕ್ಕೂ ಇರುವ ಸಂಬಂಧ, ಹಾಗೂ ಭಾರತೀಯರ ಅನುಭವಗಳು ಕಾದಂಬರಿಯಲ್ಲಿ ಮಸುಕಾಗುವ ಸಂಗತಿಯ ಹಿನ್ನೆಲೆಯಲ್ಲಿ ನಮ್ಮ ಮೂಲ ಪ್ರಶ್ನೆಗೆ ಮರಳೋಣ. ಇಲ್ಲಿ ಕೀರ್ತಿನಾಥ ಕುರ್ತಕೋಟಿಯವರು ಗುರುತಿಸಿರುವಂತೆ ಕಾದಂಬರಿ ಪೂರ್ವ ಗದ್ಯ ಬರಹಗಳಿಗೂ ಹಾಗು ಕಾದಂಬರಿಗಳಿಗೂ ಇರುವ ವ್ಯತ್ಯಾಸದ ಸ್ವರೂಪವೇನು ಎನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ಕಾದಂಬರಿಪೂರ್ವ ಗದ್ಯಗಳು ಕಾದಂಬರಿಯಂತೆ ಯಾವುದೇ ಕಥಾಹಂದರವಿಲ್ಲದೇ ಇರುವ ಪ್ರಕಾರ. ಈ ಪ್ರಕಾರದ ಕಥಾನಕದಲ್ಲಿ ನಮ್ಮ ಅನುಭವವನು ವ್ಯಕ್ತಪಡಿಸುವುದು ಬಹುಶಃ ಸುಲಭ. ತನ್ನ ಅನುಭವಗಳ ಸ್ಪ ನಿರೂಪಣೆಗಾಗಿ ‘ಹಳ್ಳ ಬಂತು ಹಳ್ಳ’ ಅಧಿಕವಾದ, ಅತಿ ಎನಿಸುವ ನಿರೂಪಣೆಗಳಿಂದ ಕಾದಂಬರಿ ಪ್ರಕಾರದ ಚೌಕಟ್ಟನ್ನು ಮೀರಲು ಪ್ರಯತ್ನಿಸಿದೆ ಎಂದೇ ಹೇಳಬಹುದು. ಹಾಗಾಗಿ ಇದು ತೆಳು ಕಥಾಹಂದರದ, ಯಾವುದೇ ಪೂರ್ವ ನಿರ್ಧರಿತ ವಸ್ತುವಿಲ್ಲದೆ ಮುಂದುವರೆಯುತ್ತದೆ.

ಅನಂತಮೂರ್ತಿ, ಭೈರಪ್ಪ ಮತ್ತಿತರರ ಕಾದಂಬರಿಗಳ ಹಾಗೆ ಒಂದು ಗಟ್ಟಿಯಾದ ಕಥಾ ಹಂದರವಿರದಿರುವುದೇ ಈ ಹೊಸ ರೀತಿಯ ಬರವಣಿಗೆಗಳನ್ನು, ಇತರ ಕಾದಂಬರಿಗಳಿಗಿಂತ ವಿಭಿನ್ನವಾಗಿಸುವುದು. ನಾವು ಈಗಾಗಲೇ ವಿವರಿಸುವ ಪ್ರಯತ್ನಿಸುತ್ತಿರುವ ಕಾದಂಬರಿಗಳ ಪ್ರಯತ್ನವನ್ನು ಕೇಂದ್ರದಲ್ಲಿರಿಸಿ ನೋಡಿದರೆ, ಕಾದಂಬರಿ ಮತ್ತು ಕಾದಂಬರಿ ಪೂರ್ವ ಗದ್ಯಗಳು ಕಥಾಹಂದರ ಮತ್ತು ಅನುಭವವನ್ನು ಕಟ್ಟಿಕೊಡುವ ಕ್ರಮದಿಂದ ಭಿನ್ನವಾಗುತ್ತವೆ ಎಂದು ಹೇಳಬಹುದಾಗಿದೆ. ಆದರೆ ನಿರ್ದಿಷ್ಟವಾಗಿ ಈ ಎರಡು ಪ್ರಕಾರದ ಗದ್ಯಗಳ ವ್ಯತ್ಯಾಸಗಳೇನು ಎಂಬುದನ್ನು ಮುಂದಿನ ಅಧ್ಯಯನಗಳೇ ತಿಳಿಸಬೇಕಾಗುತ್ತದೆ. ಆ ಅಧ್ಯಯನಗಳ ಫಲಿತಗಳು ಏನೇ ಇರಲಿ ಈ ರೀತಿಯ ವಿಚಾರವು ಅನುಭವ ಮತ್ತು ಸಾಹಿತ್ಯದ ನಡುವಿನ ಸಂಬಂಧದ ಕುರಿತು ನಮ್ಮ ಅರಿವನ್ನು ವಿಸ್ತರಿಸುತ್ತದೆ.

*****

ಎಂ.ಎಸ್. ಚೈತ್ರ ಅವರು ಸಾಹಿತ್ಯ ಮತ್ತು ತತ್ವಶಾಸ್ತ್ರದ ಜಿಜ್ಞಾಸೆಗಳಲ್ಲಿ ಆಸಕ್ತಿ ಹೊಂದಿದವರು. ಪ್ರಸ್ತುತ ಬೆಂಗಳೂರಿನ ಸೆಂಟರ್ ಫಾರ್ ಎಜುಕೇಷನಲ್ ಅಂಡ್ ಸೋಷಿಯಲ್ ಸ್ಟಡೀಸ್ ನಲ್ಲಿ ಇಂಡಿಯಾ ಸ್ಟಡೀಸ್ ಯೂನಿಟ್ ನ ಸೀನಿಯರ್ ಫೆಲೋ.

***

ಡಾ. ಅಶ್ವಿನಿ ದೇಸಾಯಿ ಇಂಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮಾಡಿದವರು. ಪ್ರಸ್ತುತ ಬೆಂಗಳೂರಿನ ಸೆಂಟರ್ ಫಾರ್ ಎಜುಕೇಷನಲ್ ಅಂಡ್ ಸೋಷಿಯಲ್ ಸ್ಟಡೀಸ್ ನಲ್ಲಿ ಇಂಡಿಯಾ ಸ್ಟಡೀಸ್ ಯೂನಿಟ್ ನ ಫೆಲೋ.