ಮಣ್ಣು, ಬೆಳ್ಳಿ, ಬಂಗಾರ ಈ ಮೂರು ವಸ್ತುಗಳು ಭೂಮಿಯಿಂದಲೇ ಬಂದಂತವು. ಈ ವಸ್ತುಗಳು ನಮ್ಮ ಬದುಕಿನ ವಿಕಾಸಕ್ಕೆ ನಾಂದಿ ಹಾಡಬೇಕು. ಆದರೆ ಈ ವಸ್ತುಗಳಿಗಾಗಿ ಮನುಷ್ಯ ತನ್ನ ಮನಸ್ಸನ್ನು ವಿಶಮ ಮಾಡಿಕೊಳ್ಳುತ್ತಾನೆ. ಅದು ಕೌಟುಂಬಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ. ಮಣ್ಣಿನಿಂದ ಹಣತೆ ಇಡೀ ಜಗತ್ತನ್ನು ಬೆಳಗುವಂತೆ ನಮ್ಮ ಸುತ್ತಮುತ್ತಲಿನ ಸಮುದಾಯವನ್ನು ಕೂಡ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸಬೇಕೆಂಬ ಸಂದೇಶ ನೀಡುವ ಈ ಕವಿತೆ ಭೂಮಿ ತೂಕದ್ದು. ಮಾತು ಬೆಳ್ಳಿ, ಮೌನ ಬಂಗಾರ ಎಂಬ ಗಾದೆ ಮಾತಿಗೆ ಮಣ್ಣು ಜೀವಸತ್ವ ಎಂದು ಸೇರಿಸಬೇಕಾಗಿದೆ.
ಕನ್ನಡ ಕಾವ್ಯದಲ್ಲಿ “ದೀಪಾವಳಿ” ಉಲ್ಲೇಖವಿರುವ ಕವಿತೆಗಳ ಕುರಿತು ಡಾ. ರಾಜೇಂದ್ರಕುಮಾರ್ ಮುದ್ನಾಳ್ ಬರಹ
ವಿಶ್ವ ಭೂಪಟದಲ್ಲಿ ಭಾರತ ಎಲ್ಲಾ ದೇಶಗಳಿಗಿಂತಲೂ ವೈವಿಧ್ಯಮಯವಾದ ಸಂಸ್ಕೃತಿಯನ್ನು ರೂಢಿಸಿಕೊಂಡಿರುವ ದೇಶ. ಭಾರತೀಯರು ಪ್ರತಿಯೊಂದನ್ನು ಸೂಕ್ಷ್ಮವಾಗಿ ಗ್ರಹಿಸುವ ಪ್ರತೀತಿಯವರು. ಭಾರತ ಭೌಗೋಳಿಕವಾಗಿ ವಿಭಿನ್ನವಾದ ಭೂಪ್ರದೇಶವನ್ನು ಹೊಂದಿರುವ ನೆಲ. ಹಾಗೆಯೇ ಇಲ್ಲಿ ಜೀವಿಸುವ ಪ್ರತಿಯೊಬ್ಬ ಮನುಷ್ಯನು ಕೂಡ ವಿವಿಧ ಸಂಸ್ಕೃತಿ ಪರಂಪರೆಗಳಲ್ಲಿ ಜೀವಿಸುವವರು. ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಜನರ ಬದುಕು ಕುತೂಹಲದ ಗೂಡಾಗಿದೆ. ಭಾರತೀಯರ ಭಾಷೆ, ಶೈಲಿ, ಆಲೋಚನಾ ಕ್ರಮ, ಉಡುಪು, ಆಹಾರ, ಮಾತುಗಾರಿಕೆ, ಕಲೆ, ಶಿಲ್ಪ, ಕಸಬುಗಾರಿಕೆ, ಪ್ರಕೃತಿಯ ವೈವಿಧ್ಯತೆ ವಿಶ್ವವನ್ನು ಸೃಷ್ಟಿಸಿಕೊಂಡಿದೆನಿಸುತ್ತದೆ.
ನಮ್ಮ ದೇಶ ಪುರಾಣ, ಚರಿತ್ರೆ, ಇತಿಹಾಸ, ಮಹಾಕಾವ್ಯ, ಧರ್ಮಗಳ ತವರೂರು ಎಂದರೂ ಅತಿಶಯೋಕ್ತಿಯಲ್ಲ. ದಾಸರು, ಶರಣರು, ತತ್ವಜ್ಞಾನಿಗಳು, ಸೂಫಿಗಳು ಅವಧೂತರು ಓಡಾಡಿದ ಭೂಮಿಯಿದು.
ಇಲ್ಲಿನ ಪ್ರತಿಯೊಂದು ಹಬ್ಬ, ಹುಣ್ಣಿಮೆ ಆಯಾ ದಿನಗಳ ವಿಶೇಷತೆಯನ್ನು ಸಾರುತ್ತವೆ. ಭಾರತೀಯರು ಪ್ರತಿ ದಿನವನ್ನು ಸಂತೋಷದಿಂದ ಸವಿಯಬೇಕೆಂಬ ಹಂಬಲವೇ ಈ ವಿಶೇಷ ದಿನಗಳ ಆಚರಣೆ. ಸಂಕ್ರಾಂತಿ, ಯುಗಾದಿ, ಎಳ್ಳಮವಾಸ್ಯೆ, ದಸರಾ ದೀಪಾವಳಿಯಂತ ಹಲವು ಹಬ್ಬಗಳು ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿ ಜೀವಂತವಾಗಿವೆ. ಕನ್ನಡ ನಾಡಿನ ಕವಿಗಳು ಕತ್ತಲು ಬೆಳಕಿನಾಟವನ್ನು ಚಿತ್ರಿಸಲು ಪ್ರಯತ್ನಿಸಿದ್ದಾರೆ. ಅಂತಹ ಕವಿತೆಗಳ ವಿಶ್ಲೇಷಣೆ ಈ ಅಕ್ಷರಗಳ ದೀಪಾವಳಿ.
‘ದೀಪದಿಂದ ದೀಪವ, ಹಚ್ಚಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚಲು’ ಸಿನಿಮಾದ ಹಾಡಿನ ಸಾಲುಗಳು ಬಾಂಧವ್ಯದ ಪ್ರತೀಕವನ್ನು ಇಮ್ಮಡಿಗೊಳಿಸುತ್ತವೆ. ದೀಪ ಕೇವಲ ಬೆಳಕಿನ ಸಂಕೇತವಲ್ಲ. ಅನಂತ ಅರಿವಿನ ಸಂಕೇತ. ನಮ್ಮ ಹೃದಯದಲ್ಲಿರುವ ಹತಾಶೆ, ದ್ವೇಷ, ಅಸೂಯೆ, ಜಿಗುಪ್ಸೆ ಇತ್ಯಾದಿ ಅಂಶಗಳನ್ನು ಶಮನಗೊಳಿಸಿ, ಪ್ರೀತಿ, ವಾತ್ಸಲ್ಯ, ಪ್ರೇಮ, ಸ್ನೇಹ, ಸಂವೇದನೆಯಯನ್ನು ತೋರ್ಪಡಿಸುವುದೇ ನಿಜವಾದ ದೀಪಾವಳಿ. ಈ ಮೂರು ದಿನದ ಬದುಕಿನಲ್ಲಿ ನೂರು ದಿನದವರೆಗೂ ನೆನಪಿಟ್ಟುಕೊಳ್ಳುವಂತಹ ಬದುಕು ನಮ್ಮದಾಗಲಿ ಎಂಬ ಜೀವನ ಉತ್ಸಾಹವೇ ಹಬ್ಬಗಳ ಹೂರಣ. ಈ ಹಿನ್ನೆಲೆಯಲ್ಲಿ ನಮ್ಮ ನಾಡಿನ ಕವಿಗಳಾದ ಜಿ.ಎಸ್.ಶಿವರುದ್ರಪ್ಪ, ಕೆ ಎಸ್. ನರಸಿಂಹಸ್ವಾಮಿ ಹಾಗೂ ಚೆನ್ನವೀರ ಕಣವಿ ಅವರ ದೀಪಾವಳಿ ಕುರಿತಾದ ಕವಿತೆಗಳನ್ನು ಸವಿಯೋಣ.
ಕನ್ನಡ ಕಾವ್ಯಲೋಕದ ದಾಂಪತ್ಯ ದೀವಿಗೆಯ ಕವಿ ಕೆ.ಎಸ್. ನರಸಿಂಹಸ್ವಾಮಿಯವರು ‘ಇರುವಂತಿಗೆ’ ಕವನ ಸಂಕಲನದಲ್ಲಿ ‘ದೀಪಾವಳಿ’ಯ ಸಂದರ್ಭದಲ್ಲಿ ತಮ್ಮ ಹೆಂಡತಿಯನ್ನು ಹೊಗಳಿದ ಪರಿ, ಪ್ರೀತಿಸಿದ ರೀತಿ, ತಮ್ಮ ಅರ್ಧಾಂಗಿಯನ್ನು ಒಲಿಸುವ ಶೈಲಿ ಅದ್ಭುತವಾಗಿದೆ.
‘ನಕ್ಕಂತೆ ಇರುವ ಸಿರಿ ಮೊಗವೆ ಅದಕ್ಕೆ ತಕ್ಕಂತೆ ಇರುವ ಕಣ್ ಬೆಳಕೆ ನಿಂತಂತೆ ಕಾಣುವ ನಿರಾತಂಕ ದೀಪವೇ
ಅಂತರಂಗದ ಜೀವನದಿಯೆ’
ಹುಣ್ಣಿಮೆಯ ಬೆಳದಿಂಗಳ ಸೌಂದರ್ಯವನ್ನು ಕೆಲವು ಪದಗಳಲ್ಲಿ ಹಿಡಿದಿಡಲು ಸಾಧ್ಯವೇ? ಹಾಗೆಯೇ ಹೂವಿನ ಮಕರಂದವನ್ನು ಸೆರೆಹಿಡಿಯಲು ಸಾಧ್ಯವೇ? ಇಲ್ಲ. ಏಕೆಂದರೆ ಕವಿ ತನ್ನ ಜೀವಿತದ ಭಾಗವಾಗಿರುವ ಆತ್ಮವನ್ನು ಬಿಟ್ಟುಕೊಡಲು ಸಾಧ್ಯವೇ? ಪ್ರತಿದಿನವೂ ಮನೆಯ ಒಡತಿ ಸ್ಪೂರ್ತಿಯ ತಾಣವಾಗಿದ್ದಾಳೆ. ಜೀವಂತವಾಗಿ ಹರಿಯುವ ನಿನ್ನ ನೋಟ, ಮಾತು, ಸ್ಪಂದನೆ ಕಾಳಜಿ ನನಗೆ ಬೆಳಕಾಗಿದೆ ಎಂಬ ಕವಿಯ ಆಲೋಚನೆಗೆ ಸಾಣೆ ಹಿಡಿಯುವವರು ಯಾರೂ ಇಲ್ಲ.
“ನಕ್ಕಂತೆ ಇರುವ ಸಿರಿ ಮೊಗವೆ
ಹೂಗೆನ್ನಗುಕ್ಕುವಂತಿರುವ ನೊರೆ ಹಾಲೆ
ತಂತಿಯಲಿ ಇಂಪು ಹರಿದಂತೆ
ಈ ಮನೆಯೊಳಗೆ ಸಂತಸದ ನೆಲೆಯಾದ ಚೆಲುವೆ
ದೀಪವನ್ನು ಹಚ್ಚಿಬಹ ಹೆಣ್ಣೆ ಆ ಬೆರಳೆ ಮಿಂಚಿನಲಿ ಬೆಳ್ಳಿ ಬರೆದಂತೆ
ಹಣತೆಗಳ ನಡುವೆ ಹೊಂಬೆರಳು ಹರಿದಾಡುತಿದೆ
ವೀಣೆಯಲಿ ಬೆರಳು ಬರುವಂತೆ.”
ಈ ದೀಪಾವಳಿ ಹಬ್ಬ ನನಗೆ ಬೇಡವೆಂದು ಕವಿ ಹೇಳುತ್ತಿದ್ದಾನೆಯೇ ಎಂಬ ಸಂಶಯ ಓದುಗರನ್ನು ಕಾಡುತ್ತದೆ. ಏಕೆಂದರೆ ನೀನೇ ನನ್ನ ಬಾಳಿಗೆ ದೀಪವಾಗಿ ಬಂದಿರುವಾಗ ಈ ದೀಪಗಳ ಸಹವಾಸ ನನಗೆ ಬೇಕೇ? ನನ್ನ ಜೀವಿತದ ಕಷ್ಟ ಸುಖಗಳಲ್ಲಿ ಭಾಗಿಯಾಗುವ ನಿನ್ನ ಆತ್ಮಸ್ಥೈರ್ಯವೇ ನನಗೆ ಹೊಂಬೆಳಕಾಗಿದೆ. ವೀಣೆಯಲ್ಲಿರುವ ತಂತಿಗಳ ಇಂಪಾದ ನಾದ ವಿಕ್ಷಿಪ್ತ ಮನಸ್ಸನ್ನು ಸುಸ್ಥಿತಿಗೆ ತರುವಂತೆ ನೀನು ನನ್ನ ಮನೆಯಂಗಳದಲ್ಲಿ ಓಡಾಡುತ್ತಿದ್ದರೆ ಅದುವೇ ನನಗೆ ಸಪ್ತಸ್ವರದ ಯಾನ ಎಂಬಂತೆ ಕವಿ ಬಿಂಬಿಸಲು ಪ್ರಯತ್ನಿಸಿರಬಹುದು.
ನೀನು ಹಣತೆಯನ್ನು ಯಾವಾಗ ಹಚ್ಚುತ್ತೀಯಾ ಎಂದು ಎಣ್ಣೆಯೊಳಗಿನ ಬತ್ತಿ ಕಾಯುತ್ತಿದೆ. ನಿನ್ನನು ನೋಡಲು, ನಿನ್ನ ತಾಯ್ತನದ ಸ್ಪರ್ಶವ ಅನುಭವಿಸುವ ಕಾತರವಿದೆ ಈ ಕತ್ತಲೆಯ ಗೂಡಿಗೆ.
ಹಣತೆಯನ್ನು ಹಚ್ಚಿಬಿಡು,
ಬಾಗಿಲಲಿ ಇಟ್ಟುಬಿಡು
ನಿನ್ನಿಂದ ದೀಪಾವಳಿ
ಬರುವ ಸಡಗರದಲ್ಲೆ ಮತ್ತೊಂದ ಕೊಟ್ಟುಬಿಡು ಕೊಡನೆಂದು ನಗುತ ಹೇಳಿ.
ಹೆಂಡತಿಯ ಮೇಲಿನ ಅತಿ ಹೆಚ್ಚು ಪ್ರೀತಿಯಿಂದ ಮತ್ತೊಂದು ಪ್ರೇಮದ ಕಾಣಿಕೆ ನೀಡಲು ಸಿದ್ಧಳಾಗೆಂದು ಕವಿ ಕಾಡುವ ಪರಿಭಾಷೆ ಅಮೋಘವಾಗಿದೆ. ಹೊಸದಾಗಿ ಮದುವೆಯಾದ ವಧು-ವರರು ಮೊದಲ ದೀಪಾವಳಿ ಸಂಭ್ರಮಕ್ಕೆ ಅಣಿಯಾಗುತ್ತಿರುತ್ತಾರೆ. ಅಂಥವರು ಮುಂದಿನ ದೀಪಾವಳಿಯ ಹೊತ್ತಿಗೆ ಮುದ್ದಾದ ಮಗುವೊಂದು ಮಡಿಲಿನಲಿ ನಗುತ್ತಿರಲಿ ಎಂಬ ಸೂಚನೆ ಇದೆ. ದಾಂಪತ್ಯದಲ್ಲಿ ಮಗು ಬೆಳಕಿನ ಸಂಕೇತವಾಗಿ ಜೀವನದ ಉತ್ಸಾಹವಾಗಿ ನಮ್ಮೊಂದಿಗೆ ಇರಬೇಕೆಂಬ ಹಂಬಲ ಒಡಮೂಡಿದೆ. ನವ ವಧು ವರರಿಗೊಂದು ಕಿವಿ ಮಾತಾಗಿಯೂ ಕವಿ ಹೇಳಿರಬೇಕೆನಿಸುತ್ತದೆ.
‘ಶಿಲಾಲತೆ’ಕವನ ಸಂಕಲನದಲ್ಲಿ ‘ದೀಪಾವಳಿ’ ಕುರಿತ ಚಿತ್ರಣವು
“ಸಣ್ಣ ಮಕ್ಕಳ ಸದ್ದು ಹೊಗೆ ಹಾವಳಿ
ಬೆಂಕಿಯ ಕೂಡ ಸರಸ ದೀಪಾವಳಿ
ನಾ ಕಂಡ ಅಚ್ಚರಿ ಏನೆಂದು ಹೇಳಲಿ
ಈ ಭೂಮಿ ಆಸೆಗಳ ದೀಪಾವಳಿ
ಇದು ಬೆಂಕಿ ಇರಬಹುದು ನನಗೆ ಬೆಳಕು
ತುಂಬ ನೀಲಿಯ ಮೇಲೆ ಹೆಜ್ಜೆ ಬೆಳಕು
ನೆಲ ಜಲಗಳಾಸೆಗಳ ದೀಪಾವಳಿ
ರತ್ನ ಪಕ್ಷಿಯ ಕಣ್ಣ ದೀಪಾವಳಿ “
ನಾವು ಬಾಲ್ಯದಲ್ಲಿ ಪಟಾಕಿ ಹಚ್ಚುವುದಕ್ಕೆ ಬಹಳಷ್ಟು ಅಂಜುತ್ತಿದ್ದೆವು. ಅದು ಶಬ್ದ ಮಾಡಿದಾಗ ನಲಿಯುತ್ತಿದ್ದೆವು. ಅಪ್ಪ, ಅಮ್ಮ ಹುಷಾರ್ ಹುಷಾರ್ ಎಂದು ನಮಗೆ ಎಚ್ಚರಿಕೆ ನೀಡುತ್ತಿದ್ದರು, ನಾನು ಹಚ್ಚಿದ ಪಟಾಕಿ ಹೆಚ್ಚು ಶಬ್ದ ಮಾಡಿತು ಎಂದು ಬೀಗುತ್ತಿದ್ದೆವು. ಮಕ್ಕಳಿರುವಾಗ ದೀಪಾವಳಿಯ ಹಬ್ಬದ ಸಂಭ್ರಮವೇ ಬೇರೆ. ನಾ ಮುಂದು ನೀ ಮುಂದು ಎಂದು ಪಟಾಕಿ ಹಚ್ಚುತ್ತಿದ್ದೆವು. ನಮ್ಮ ಕಣ್ಣು, ಕಿವಿ ಎಲ್ಲವೂ ಜಾಗೃತೆಯಿಂದ ಕೆಲಸ ಮಾಡುತ್ತಿದ್ದವು. ರಾಕೆಟ್, ಸುತಳಿ, ಬಿಸಕಲ್ಲು, ಹಾವಿನ ಮದ್ದು, ಹೂವಿನ ಗಿಡ, ಚೋಟ್ಯಾ ಪಟಾಕಿ, ಹೂ ಬಾಣ ಎಂದೆಲ್ಲ ವಿವಿಧ ಹೆಸರುಗಳ ಪಟಾಕಿಗಳು ನಮ್ಮನ್ನು ಸೆಳೆಯುತ್ತಿದ್ದವು. ಬಂದೂಕಿನಲ್ಲಿ ಮದ್ದಿನ ರೀಲ್ ಚೆಟ್ ಚೆಟ್ ಎಂದು ಖುಷಿಯಿಂದ ಗುಂಡು ಹಾರಿಸಿದಷ್ಟೇ ಖುಷಿಯಾಗುತ್ತಿತ್ತು. ರಾತ್ರಿಯಲ್ಲಿ ಬೆಳಕಿನ ಚಿತ್ತಾರದ ಆಟವೇ ಅಮೋಘ. ಅದು ಕೇವಲ ಬೆಳಕಾಗದೆ, ಮಿಂಚಾಗದೆ ನಮ್ಮ ಬಾಳಿನ ಸಂತೋಷವನ್ನು ಹೆಚ್ಚಿಸುತ್ತಿತ್ತು.
ಚೆನ್ನವೀರ ಕಣವಿರವರ ‘ನಗರದಲ್ಲಿ ನೆರಳು’ ಕವನ ಸಂಕಲನದಲ್ಲಿ ಒಡಮೂಡಿದ ಬೆಳಕಿನ ಕವಿತೆಗಳು ಮನಸಿನ ಮೇಲೆ ಪ್ರಭಾವ ಬಿರುತ್ತವೆ.
ಸಂದಿಗೊಂದಿ ಕಸ ದೂಳಿ ಜೊಂಡಿಗೆ ಜೇಡ ಬಲೆ ಗುಡಿಸಿ
ಸುಣ್ಣ ಬಣ್ಣವ ಹಚ್ಚಿ ಹಳೆಯ ತಲೆ ದಿಂಬಿಗೆ ಹೊಸ ಚೀಲ ತೊಡಿಸಿ
ಹರಕು ಮುರುಕು ಸಾಮಾನುಗಳ ಗಂಟು ಕಟ್ಟಿ ಮೂಲೆಗೆ ಇರಿಸಿ
ಸ್ನೇಹಿತರೆ ಬಳಗಕ್ಕೆ ರೆಡಿಮೇಡ್ ಶುಭಾಶಯಗಳು ಕಳಿಸಿ
ವಿಶೇಷ ಸಂಚಿಕೆಯ ಮುಖಪುಟದಲ್ಲಿ ಹೆಣ್ಣಿನ ಚಿತ್ರ ಭಂಗಿ ಕಂಡಾಗ
ಇದ್ದುದ್ದರಲ್ಲೆ ಖುಷಿಯಾಗಿ ಬಂತು ದೀಪಾವಳಿ.
ಹಬ್ಬದ ದಿನಗಳಲ್ಲಿ ಮನೆಯನ್ನು ಸ್ವಚ್ಛಗೊಳಿಸುವುದು, ಹಳೆ ಬಟ್ಟೆಗಳಿಗೆ ವಿದಾಯ ಹೇಳಿ ಹೊಸ ಬಟ್ಟೆಗಳನ್ನು ಧರಿಸಿಕೊಳ್ಳುವ ಸಂಪ್ರದಾಯ. ವಸ್ತುಗಳನ್ನು ಪ್ರೀತಿಸಿದಷ್ಟು ಮನುಷ್ಯರನ್ನು ನಾವು ಪ್ರೀತಿಸಲಾಗುತ್ತಿಲ್ಲ ಎಂಬ ಕಳವಳ ಕವಿಯದು. ಗೆಳೆಯರು ಮತ್ತು ಬಂಧು ಬಳಗಕ್ಕೆ ಈಗಾಗಲೇ ಸಿದ್ಧ ಮಾದರಿಯಲ್ಲಿರುವ ಶುಭಾಶಯಗಳನ್ನು ತಿಳಿಸುತ್ತಾ ಹಬ್ಬವನ್ನು ಆಚರಿಸುತ್ತೇವೆ. ದಿನಪತ್ರಿಕೆ, ಮಾಸ ಪತ್ರಿಕೆಗಳ ಮುಖಪುಟದಲ್ಲಿ ಸುಂದರ ನಾರಿಯರ ಮುಖಭಾವದ ಚಹರೆ, ಮೂಡಣದ ಸೂರ್ಯನಂತೆ ಪ್ರಭಾವವಲಯ ಸೃಷ್ಟಿಯಾಗಿರುತ್ತದೆ. ಬಡವರು, ಮಧ್ಯಮ ವರ್ಗ ಇದ್ದುದ್ದರಲ್ಲಿಯೇ ತಮ್ಮ ಮನೆಯಲ್ಲಿ ಸಿಹಿ ತಿಂಡಿ ತಿನಿಸುಗಳನ್ನು ಮಾಡಿ ಹಬ್ಬವನ್ನು ಆಚರಿಸುವರು. ಶ್ರೀಮಂತರು ಹೆಚ್ಚಿನ ಪಟಾಕಿಗಳನ್ನು ಹೊಡೆದು ಖುಷಿಪಟ್ಟು ವಾಯುಮಾಲಿನ್ಯಕ್ಕೂ ಕಾರಣರಾಗುವರು ಎಂಬ ಸೂಚ್ಯದನಿ ಇಲ್ಲಿದೆ. ಇಲ್ಲಿನ ರೆಡಿಮೇಡ್ ಶುಭಾಶಯಗಳು ಎಂಬ ಪದ ಸಂಕುಚಿತವಾಗಿದೆ. ಇಂದಿನ ಎಐ ಯುಗದಲ್ಲಿ ಒಬ್ಬರಿಗೊಬ್ಬರು ಪ್ರೀತಿಯಿಂದ ವಿಶ್ವಾಸದಿಂದ ಶುಭಾಶಯಗನ್ನು ಮನದುಂಬಿ ಹೇಳುವುದೇ ಅಪರೂಪವಾಗಿದೆ. ಸಂಬಂಧಗಳು ರೆಡಿಮೇಡ್ ಆಗದೆ ಸೃಜನಶೀಲವಾಗಿರಬೇಕೆಂಬ ಹಂಬಲವೇ ಕವಿತೆಯ ಆಶಯ. ಮನುಷ್ಯನ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನೆಲ್ಲ ಕಟ್ಟಿ,ಉತ್ತಮತೆಯನ್ನು ರೂಢಿಸಿಕೊಳ್ಳುವ ಸಂಪ್ರದಾಯ ಬೆಳೆಸಿಕೊಳ್ಳುವುದೇ ನಿಜವಾದ ಹಬ್ಬ.

ಕಣವಿಯವರು ದೀಪಾವಳಿ ಕೇವಲ ಪಟಾಕಿ ಹಚ್ಚಿ ಖುಷಿ ಪಡುವುದಲ್ಲ. ಇನ್ನು ಅನೇಕ ಅಂಶಗಳನ್ನು ಗಮನಿಸಬೇಕೆಂಬ ಸೂಚನೆ ನೀಡುತ್ತಾರೆ. ದೀಪಾವಳಿ ಮನದ ಹಣದ ಹಬ್ಬವಾಗದೆ ‘ಸಾಮಾಜಿಕ ಪ್ರಜ್ಞೆ’ಯ ಹಬ್ಬವಾಗಬೇಕೆಂದು ಮುನ್ನುಡಿ ಬರೆಯುತ್ತಾರೆ.
“ಹೊಲ, ಗದ್ದೆ, ಗಿರಣಿ, ಕಚೇರಿ ಕಾರ್ಖಾನೆಯಲ್ಲಿ ಬೆವರು ಸುರಿಸಿ
ಸಂಪು, ಹರತಾಳ, ಕೊಲೆ, ಸುಲಿಗೆ, ಅಪಘಾತ ರಕ್ತ ಕುಂಕುಮ ವಿರಿಸಿ
ವಿಧಾನ ಸಭೆಯ ವಿಧಿಯಿರದ ಗೊಂದಲದೊಳಗೆ ಸಿಕ್ಕು ಪಾರಾಗಿ
ಪಕ್ಷಾಂತರಕ್ಕೆ ಮನಸೋಲದೆ ತನ್ನ ಹಾದಿಯ ತಾನು ಹಿಡಿದು
ಕಲ್ಲಿನೇಟಿಗೆ ಎಲ್ಲ ವಿದ್ಯುತ್ ದೀಪ ಒಡೆದು ಚೂರಾಗಿರಲು
ಹಣತೆಗಳ ಹುಡುಕಿಕೊಂಡು ಬಂತು ದೀಪಾವಳಿ.
ಸಮುದಾಯ ನಿಂತ ನೀರಾಗಿರುವುದಿಲ್ಲ. ಅದು ವೈರುಧ್ಯಗಳ ತಾಣ. ರೈತನ ಹೊಲಗದ್ದೆಗಳಲ್ಲಿ ಬೆವರು ಸುರಿಸಿ, ಹಲವು ಕಷ್ಟ ಸಂಕೋಲೆಗಳನ್ನು ಬೆಟ್ಟದಂತೆ, ರಾಜಕೀಯ ವಿದ್ಯಮಾನಗಳ ಬೇಗುದಿಗೆ ಜನರು ಹೈರಾಣಾಗಿದ್ದಾರೆ. ಸಾರ್ವಜನಿಕರ ಆಸ್ತಿ ಆಸ್ತಿಗಳ ಬಗ್ಗೆ ನಿಷ್ಕಾಳಜಿ ಹೆಚ್ಚಾಗಿದೆ. ಇದರ ನಡುವೆ ಮತ್ತೊಂದು ದೀಪಾವಳಿ ನಮ್ಮನ್ನು ಹುಡುಕಿಕೊಂಡು ಬಂದಿದೆ. ಹೀಗೆ ಕಾಲಚಕ್ರಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ ಎಂಬ ಅಳಲು ಕವಿಯದು. ಇಲ್ಲಿ ಬೆವರಿಗೆ ಬೆಲೆ ಇರದೆ ಕೇವಲ ಸುಳ್ಳಿಗೆ ಬೆಲೆ ಇದೆ ಎಂಬ ಅಂಶವಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದನ್ನು ನಾವು ಹೋರಾಟ ಮಾಡಿ ಪಡೆಯುತ್ತಿದ್ದೇವೆ. ಒಮ್ಮೊಮ್ಮೆ ಈ ಹೋರಾಟಗಳು ಕೂಡ ಹಾರಾಟಗಳಾಗಿ ಪ್ರತಿಫಲ ಸಿಗುವುದಿಲ್ಲ. ಶ್ರೀಸಾಮಾನ್ಯ ಇಲ್ಲಿ ಮೂಲೆಗುಂಪಾಗಿದ್ದಾನೆ. ಜನರು ಕೂಡ ವಿವೇಕದ ಮಹತ್ವ ಅರಿಯದೆ ಕಂಗಾಲಾಗಿದ್ದಾರೆ. ಎಂಬ ಧ್ವನಿ ಕವಿತೆಯದು. ಹಬ್ಬ ಹೊಸತನವನ್ನು ತರಬೇಕೆ ಹೊರತು ಹಳೆಯ ವಿಚಾರಗಳೆ ಮತ್ತೆ ಮತ್ತೆ ನೆನಪಾಗದಂತೆ ಎಚ್ಚರ ವಹಿಸಬೇಕೆಂಬ ನಿಲುವಿದೆ.
ದಿನ ದಿನವು ಪತ್ರಿಕೆಯಲ್ಲಿ ಬರುವ ವಾಚಕರ ಪತ್ರಗಳ ದೂರಿನಂತೆ
ಬಹುದಿನದ ಮೇಲೆ ಬಂದ ಕವನ ಸಂಕಲನದ ತಿದ್ದಿದೆರಡನೆಯ ಆವೃತ್ತಿಯಂತೆ ಬರುವ ಕಾಲಕ್ಕೆ ಬಂತು ದೀಪಾವಳಿ
ಚುಮುಚುಮು ಚಳಿ ಶುರುವಾಗುವ ಹೊತ್ತಿನಲ್ಲಿಯೇ ದೀಪಾವಳಿ ಆಗಮಿಸುವುದು. ಪ್ರತಿದಿನ ಬೆಳಿಗ್ಗೆಯ ದಿನಪತ್ರಿಕೆಯ ವಾಚಕರ ವಾಣಿಯಲ್ಲಿ ಸಮುದಾಯದ ಕಷ್ಟ, ಸಂಕಷ್ಟ ನೋವುಗಳನ್ನು ಹಂಚಿಕೊಳ್ಳುವ ವಾಚಕರ ಹಾಗೆ ದೀಪಾವಳಿಯು ತನ್ನತನವನ್ನು ತೋರ್ಪಡಿಸುವುದಕ್ಕೆ ಬರುತ್ತಲೇ ಇರುವುದು. ಹಾಗೆ ಬಹಳ ದಿನಗಳ ನಂತರ ಕವನ ಸಂಕಲನ ಬಿಡುಗಡೆ ಮಾಡುವ ಕವಿ ಮನಸ್ಸಿನ ಹಾಗೆ ಮತ್ತೆ ಮತ್ತೆ ತಿದ್ದುವ ಮತ್ತೆ ಮತ್ತೆ ಪರಿಷ್ಕೃತಗೊಳ್ಳುವ ಆಲೋಚನೆಗಳನ್ನ ದಾಖಲಿಸುವ ಕೆಲಸದಂತೆ ದೀಪಾವಳಿ ನಮ್ಮ ಆಶಯಗಳಿಗೆ ಮುನ್ನುಡಿ ಬರೆಯುತ್ತದೆ ಎಂಬ ಹಂಬಲ ಕವಿತೆಯದು. ಆಶಾ ಗೋಪುರವನ್ನೇ ನಿರ್ಮಾಣ ಮಾಡಿಕೊಳ್ಳುವಂತಹ ಕವಿಗಳಿಗೆ ಆಸೆ ಕುಂದಿದರು ಗೋಪುರ ಶಾಶ್ವತವಾಗಿರಲೆಂಬ ಶತ ಪ್ರಯತ್ನದ ತಿದ್ದುಪಡಿಗೆ ನಾವು ಸಜ್ಜುಗೊಳ್ಳಬೇಕು. ನಮ್ಮ ಜೀವನದ ಸವಾಲುಗಳಿಗೆ ಎಂಬ ಸಂದೇಶ ಉಚಿತವಾದದ್ದು.
‘ಬೆಳ್ಳಿ ದೀಪ, ಬಂಗಾರ ಬೆಳಕು’ ಕವಿತೆಯು ‘ಜೀನಿಯಾ’ ಕವನ ಸಂಕಲದಲ್ಲಿ ಹೀಗೆ ಒಡ ಮೂಡಿದೆ.
“ಮಣ್ಣ ಹಣತೆಗೂ ಬೆಳ್ಳಿಯ ದೀಪಕು ಬಂಗಾರದ ಬೆಳಕು
ಎಣ್ಣೆ ಬತ್ತಿ ಗಳ ನೇಹದಿ ಅರಳಿವೆ
ಎಲ್ಲಾ ಒಳ್ಳೆ ಬದುಕು”.
ಮಣ್ಣು, ಬೆಳ್ಳಿ, ಬಂಗಾರ ಈ ಮೂರು ವಸ್ತುಗಳು ಭೂಮಿಯಿಂದಲೇ ಬಂದಂತವು. ಈ ವಸ್ತುಗಳು ನಮ್ಮ ಬದುಕಿನ ವಿಕಾಸಕ್ಕೆ ನಾಂದಿ ಹಾಡಬೇಕು. ಆದರೆ ಈ ವಸ್ತುಗಳಿಗಾಗಿ ಮನುಷ್ಯ ತನ್ನ ಮನಸ್ಸನ್ನು ವಿಶಮ ಮಾಡಿಕೊಳ್ಳುತ್ತಾನೆ. ಅದು ಕೌಟುಂಬಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ. ಮಣ್ಣಿನಿಂದ ಹಣತೆ ಇಡೀ ಜಗತ್ತನ್ನು ಬೆಳಗುವಂತೆ ನಮ್ಮ ಸುತ್ತಮುತ್ತಲಿನ ಸಮುದಾಯವನ್ನು ಕೂಡ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸಬೇಕೆಂಬ ಸಂದೇಶ ನೀಡುವ ಈ ಕವಿತೆ ಭೂಮಿ ತೂಕದ್ದು. ಮಾತು ಬೆಳ್ಳಿ, ಮೌನ ಬಂಗಾರ ಎಂಬ ಗಾದೆ ಮಾತಿಗೆ ಮಣ್ಣು ಜೀವಸತ್ವ ಎಂದು ಸೇರಿಸಬೇಕಾಗಿದೆ.
ಜಿ.ಎಸ್. ಶಿವರುದ್ರಪ್ಪನವರು ದೀಪಾವಳಿ ಬಗ್ಗೆ
“ಮೌನ ಶೀತಲ ಶಿಖರ ಕಾನನದ ಕಷ್ಟದಲ್ಲಿ ನಿಂತ ಧೈರ್ಯಗಳಲ್ಲಿ ದೀಪಾವಳಿ
ಹೆಜ್ಜೆ ಹೆಜ್ಜೆಗೂ ಜನ ಜನದ ಜೀವ ರಕ್ತವತುಂಬಿ ತೆರೆದ ಬಾವುಟದಲ್ಲಿ ದೀಪಾವಳಿ”
ಭಾರತ ನೆರೆಹೊರೆಯ ದೇಶದೊಂದಿಗೆ ಯುದ್ಧ ಮಾಡುವಾಗ, ದೀಪಾವಳಿ ಹಬ್ಬ ಬಂದ ಸಂದರ್ಭದಲ್ಲಿ ಕವಿ ಮನಸು ಮಿಡಿದ ರೀತಿ ಇದು. ನಮ್ಮ ಸೈನಿಕರು ಗಡಿಗಳಲ್ಲಿ ನಮ್ಮ ದೇಶದ ರಕ್ಷಣೆಗೆ ಹಗಲಿರುಳು ಹೋರಾಡುತ್ತಿದ್ದಾರೆ. ಅವರ ಧೈರ್ಯಕ್ಕೆ ನಾವು ಎಷ್ಟು ಕೃತಜ್ಞತೆಗಳನ್ನು ಹೇಳಿದರು ಸಾಲದು. ನಮ್ಮ ಸೈನಿಕರ ರಕ್ತ ಬಾವುಟದ ರಕ್ಷಣೆಗೆ ನಿಂತಿದೆ. ಇಲ್ಲಿ ನಾವು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರೆ ನಮ್ಮ ಯೋಧರು ವಿರೋಧಿಗಳನ್ನು ಗುಂಡಿಕ್ಕಿ ಕೊಂದು ದೀಪಾವಳಿ ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮವರ ಗುಂಡಿಗೆಗೂ ಗುಂಡು ತಗುಲಿ ಕಣ್ಣೀರು ಸುರಿಸುತ್ತಿದ್ದೇವೆ. ಹಾಗೆ ಮುಂದುವರೆದು
ನಮ್ಮ ಜನಗಣಮನದ ಅಧಿನಾಯಕ ಪ್ರಜ್ಞೆ ಕಣ್ ತೆರೆದು ನಿಂತಲ್ಲಿ ದೀಪಾವಳಿ
ಎಂದಿನಂತಲ್ಲ ಇದು ನಮಗೆ ಈ ಸಲದ ಬಂದ ಹೊಸ ಬೆಳಕಿನೆಚ್ಚರದ ದೀಪಾವಳಿ
ಈ ಸಲದ ದೀಪಾವಳಿ ಖುಷಿ ಇಲ್ಲ, ಅಪಾರ ಪ್ರಾಣ ಹಾನಿ ತಂದಿದೆ ಎಂಬ ಧೋರಣೆ ತಾಳಿದೆ. ಕಾರಣ ಇಲ್ಲ ಸಲ್ಲದ ಕಾರಣಗಳಿಂದ ನೆರೆಯ ದೇಶಗಳು ಯುದ್ಧ ಸಾರಿರುವುದು ಸರಿಯಾದ ಕ್ರಮವಲ್ಲ. ನೆರೆಹೊರೆಯವರು ಪ್ರೀತಿ ವಿಶ್ವಾಸದಿಂದ ಇರಬೇಕು. ಗಡಿಗಳಲ್ಲಿ ಯೋಧರ ಸಾವಿಗೆ ಬೆಲೆ ಇಲ್ಲವೇ ಎಂಬ ಆತಂಕ ಮಡುಗಟ್ಟಿದೆ. ಜೀವ ಹಾನಿಯಿಂದ ನಾವು ಗಳಿಸುವುದು ಏನೂ ಇಲ್ಲ ಎಂಬ ಕವಿಯ ಸಂದೇಶ ಈ ಜಗತ್ತು ತಿಳಿದುಕೊಳ್ಳಬೇಕಿದೆ.
ಉತ್ತರದ ಗಡಿಯಲ್ಲಿ ಎತ್ತಿರುವ ಮುಡಿಯಲ್ಲಿ ಎಚ್ಚರದ ಕಣ್ಣಿನಲ್ಲಿ ದೀಪಾವಳಿ
ಕೋವಿಯಲಗಿನ ಮೇಲೆ
ಸಂಜೆ ಮುಂಜಾವುಗಳ
ಬೆಳಕು ಬಿಂಬಿಸುವಲ್ಲಿ ದೀಪಾವಳಿ.
ಕೆಣಕಿದರೆ ಸಿಡಿಗುಂಡಿನುತ್ತರವ ಕೊಡುವಲ್ಲಿ
ಎದ್ದ ಕಿಡಿಯೊಳು ನಮ್ಮ ದೀಪಾವಳಿ
ಬಿದ್ದ ಒಂದೊಂದು ನೆತ್ತರ ಬಿಂದು ತಾಯ್ನೆಲಕ್ಕೆ ಕುಂಕುಮವ ನಿಡುವಲ್ಲಿ ದೀಪಾವಳಿ.
ಜನನಿ ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲಾದದ್ದು ಎಂಬ ಮಾತು ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬನು ಕೂಡ ಅನುರಣಿಸುತ್ತಿರುತ್ತಾನೆ. ಹಾಗೆಯೇ ಯಾವುದೇ ರೀತಿಯ ಹಿಂಸೆ ಭೂಮಿಯ ಮೇಲೆ ನಡೆಯಬಾರದೆಂಬ ಆಲೋಚನೆ ಏಕೆ ಬರುವುದಿಲ್ಲ. ಪ್ರೀತಿಯ ಅಪ್ಪುಗೆಯ ನಾಲ್ಕು ಮಾತುಗಳು ಪ್ರತಿಯೊಬ್ಬರ ಮನಸ್ಸನ್ನು ತೆರೆಯುವಂತಾಗಲಿ. ಆಗ ಮಾತ್ರ ದೀಪಾವಳಿ ಸಾರ್ಥಕತೆ ಬರುವುದು. ಇಲ್ಲದಿದ್ದಲ್ಲಿ ಯೋಧರ ರಕ್ತಕ್ಕೆ ಪ್ರತಿ ರಕ್ತವನ್ನು ಬೇಡುತ್ತಾ ಹೋದರೆ ಜಗತ್ತು ಹಿಂಸೆಯ ಗೂಡಾಗುತ್ತದೆ ಎಂಬ ಗೂಡಾರ್ಥವು ಒಳಗೊಂಡಿದೆ. ಯೋಧರ ರಕ್ತ ತಾಯಿ ನೆಲಕ್ಕೆ ಬಿದ್ದರೆ, ಅದು ದೀಪಾವಳಿಯಾಗುವುದಿಲ್ಲ. ತಾಯಿಯ ಮಡಿಲಿಗೆ ಬೆಂಕಿ ಮಳೆ ಸುರಿದಂತಾಗುವುದು ಎಂಬ ಕವಿಯ ಅಂತರ್ದ್ವನಿ ಗಮನಿಸಬೇಕು.
2019ರ ಕೋವಿಡ್ ಸಂದರ್ಭದಲ್ಲಿ ಭಾರತೀಯರು ಹಬ್ಬ ಹರಿದಿನಗಳನ್ನು ಆಚರಿಸದೆ ಮಂಕಾಗಿದ್ದರು. ಕಾರಣ ಕೋವಿಡ್ ಮಹಾಮಾರಿ ಜನರನ್ನು ಬಲಿ ತೆಗೆದುಕೊಂಡಿತ್ತು. ಜನರು ಈ ರೋಗಕ್ಕೆ ಹೆದರಿ ಯಾರನ್ನು ಮುಟ್ಟಿಸಿಕೊಳ್ಳದ ರೀತಿಯಲ್ಲಿದ್ದರು. ಆರೋಗ್ಯವಂತ ವ್ಯಕ್ತಿಯು ಕೂಡ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳಿದ್ದವು. ಅದನ್ನು ಮೆಟ್ಟಿ ನಿಲ್ಲಬೇಕೆಂಬ ಇಚ್ಛೆಯೆ ಹೆಚ್ಚಿನದಾಗಿತ್ತು. ಸಾವು, ನೋವು ಮನುಷ್ಯನನ್ನು ಬಂಧನಕ್ಕೊಳಪಡಿಸುತ್ತವೆ. ಈ ಹತಾಶೆಯಿಂದ ಹೊರಬರಲು ನಮ್ಮ ಪೂರ್ವಿಕರು ಹಬ್ಬಗಳ ಪ್ರಜ್ಞೆಯನ್ನು ಜಾರಿ ತಂದಿದ್ದಾರೆ ಎನಿಸುತ್ತದೆ. ಅವರ ವೈಜ್ಞಾನಿಕ ಚಿಂತನೆಗೆ ನಾವೆಲ್ಲರೂ ತಲೆಬಾಗಲೇಬೇಕು. ಇಲ್ಲದಿದ್ದಲ್ಲಿ ಅಪಕ್ವತೆಯ ಜೀವನ ನಮ್ಮದಾಗುವುದು. ಮೇಣದಬತ್ತಿ ತಾನು ಉರಿದು ತನ್ನ ಸುತ್ತಲಿನ ಪ್ರದೇಶ ಬೆಳಕಿನಲ್ಲಿ ಇರಬೇಕೆಂಬ ಮಹಾದಾಸೆ ಹಾಗೆಯೇ ತಂದೆ ತಾಯಿಯರಿಗೆ ತಮ್ಮ ಮಕ್ಕಳು ಮತ್ತೊಬ್ಬರಿಗೆ ಬೆಳಕಾಗಿ ಇರಬೇಕೆಂಬ ನಿಟ್ಟಿನಲ್ಲಿ ತಮ್ಮ ಕಷ್ಟ ಸುಖ ದುಃಖಗಳನ್ನೆಲ್ಲವನ್ನು ಮೇಣದ ಬತ್ತಿಯ ಹಾಗೆ ನುಂಗಿಕೊಂಡಿರುತ್ತಾರೆ.
ಇಂದಿನ ಎ ಐ ಯುಗದಲ್ಲಿ ನಮ್ಮನ್ನು ನಾವು ಸ್ವ ಪರೀಕ್ಷೆ ಮಾಡಿಕೊಳ್ಳುವುದನ್ನು ಮರೆತಿದ್ದೇವೆ. ಪ್ರತಿಯೊಂದಕ್ಕೂ ತಂತ್ರಜ್ಞಾನದ ಸಹಾಯ ಪಡೆಯುತ್ತಿದ್ದೇವೆ. ಇದರಿಂದ ಬಿಡುಗಡೆಯಾಗುವ ನಿಟ್ಟಿನಲ್ಲಿ ಮನುಷ್ಯ ಜೀವಿ ಯೋಚಿಸಬೇಕಿದೆ. ಮನುಷ್ಯ ಪ್ರಕೃತಿಯೊಂದಿಗೆ ಅನುಸಂಧಾನ ಮಾಡದಿದ್ದರೆ, ಅತಿ ದೊಡ್ಡ ಸಂತೋಷವನ್ನು ನಾವು ಕಳೆದುಕೊಳ್ಳುವ ಹಂತದಲ್ಲಿದ್ದೆವೆ.

ತಾಂತ್ರಿಕ ನೈಪುಣ್ಯತೆ ನಮ್ಮ ಜೀವನದ ಉಸಿರಲ್ಲ, ಪ್ರತಿಯೊಬ್ಬರೊಂದಿಗೆ ಸ್ನೇಹದ ಮಾತು, ಪ್ರೀತಿಯ ಅಪ್ಪುಗೆ, ಅಭಿನಂದನೆಯ ಅನುಸಂಧಾನದಿಂದ ದೀಪಾವಳಿ ಹಬ್ಬ ಮೆರಗು ನೀಡಬೇಕು. ದ್ವೇಷ, ಅಸೂಯೆ, ಅಹಿಂಸೆ, ಅತ್ಯಾಚಾರ, ದೌರ್ಜನ್ಯಗಳಿಂದ ಜಾತಿ ತಾರತಮ್ಯದಿಂದ ಈ ಸಮಾಜ ಮುಕ್ತಿ ಪಡೆದಾಗ ನಿಜವಾದ ದೀಪಾವಳಿ ಯಶಸ್ವಿಯಾಗುವುದು. ದೀಪಾವಳಿ ಮನೆ ಮನೆಗೆ ಶಾಂತಿ, ಪ್ರೀತಿ, ಐಕ್ಯತೆ ತರಲಿ. ಕೊನೆಯದಾಗಿ ನಾವು ಹಚ್ಚುವ ಪಟಾಕಿ ಪರಿಸರ ಸ್ನೇಹಿಯಾಗಿರಲಿ. ಶಬ್ದ ಭಯ ಹುಟ್ಟಿಸದಿರಲಿ. ಬೆಳಕು ಬರಿದಾಗದಿರಲಿ.

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಮೂಲತಃ ಯಾದಗಿರಿ ಜಿಲ್ಲೆಯ ಮುದ್ನಾಳ ಗ್ರಾಮದವರು. ಸದ್ಯ ಇವರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಎಂಟು ವರ್ಷಗಳಿಂದ ಯಾದಗಿರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಚಂದ್ರಕಾಂತ ಕೂಸನೂರ : ಬಹುಶೀಸ್ತೀಯ ಅಧ್ಯಯನ ( ಕಥನಕ್ರಮ,ನಾಟಕ ಮತ್ತು ಚಿತ್ರಕಲೆಗಳನ್ನು ಅನುಲಕ್ಷಿಸಿ )ವಿಷಯದಡಿ ಸಂಶೋಧನಾ ಪ್ರಬಂಧ ಮಂಡಿಸಿ 2023ರಲ್ಲಿ ಪಿಎಚ್.ಡಿ ಪದವಿ ಪಡೆದಿರುವರು. ನಾಟಕಗಳ ಕುರಿತಾದ ರಂಗ ಪ್ರಯೋಗಗಳ ವಿಮರ್ಶಾ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಣೆಗೆ ಸಿದ್ಧವಾಗಿದೆ.

