ಅಂಗಳದಲ್ಲಿ ಯಾರೂ ಕಾಣಲಿಲ್ಲ. ಅಲ್ಲಿ ಯಾವ ಮರ್ಸಿಡಿಸ್, ಬೆನ್ಝ್ ಕಾರುಗಳೂ ನಿಂತಿರಲಿಲ್ಲ. ಭಕ್ತಾದಿಗಳ ಜನಜಂಗುಳಿ ಇರಲಿಲ್ಲ. ಝಗ ಝಗಿಸುವ ದೀಪಾಲಂಕೃತ ವೇದಿಕೆ, ಮೆತ್ತನೆಯ ಗಾದಿ ಯಾವುದೂ ಇರಲಿಲ್ಲ. ಇದ್ದುದೆಲ್ಲ ಕೇವಲ ನೀರವತೆ. ಒಳಗೆ ಯಾವುದೋ ಕೋಣೆಯೊಳಗಿಂದ ಬೆಳಕು ಕಾಣುತ್ತಿತ್ತು. ಆ ಕೋಣೆಯ ಕಿಟಕಿಯ ಬಳಿ ನಿಂತೆವು. ಕಿಟಕಿಯೊಳಗಿಂದ 77 ವರುಷದ ವೃದ್ಧೆಯೊಬ್ಬರು ಲಗುಬಗೆಯಿಂದ ಹೊರ ಬಂದು ಯಾರು ಬೇಕು? ಎಂದು ಕೈಕಟ್ಟಿ ನಿಂತು ವಿಚಾರಿಸಿದರು.
ಗಿರಿಜಾ ಶಾಸ್ತ್ರಿ ಬರೆಯುವ “ಆ ಕಾಲದ ರಾಜಲಕ್ಷ್ಮಿ” ಸರಣಿಯಲ್ಲಿ ಹೊಸ ಬರಹ

ಎಲ್ಲ ಅಹಂಕಾರಗಳನ್ನೂ ನೀಗಿಕೊಂಡು ಒಂದು ಬೆಣ್ಣೆಯ ಮುದ್ದೆಯಾಗಿ ಕುರ್ಚಿಯೊಂದರಮೇಲೆ ವಿನೀತರಾಗಿ ಅವರು ಕುಳಿತಿದ್ದರು. ಬಿಳಿಯ ಮುಖ, ಬೆಳ್ಳಗಿನ ಸೀರೆ, ಬೆಳ್ಳಿ ತಲೆ. ಕಣ್ಣೊಳಗೆ ಕರಗುತ್ತಿದ್ದ ಅಪಾರ ಕರುಣೆ. ನಾನು ಒಬ್ಬ ಯೋಗಿನಿಯ ಮುಂದೆ, ಬೆಳಕಿನ ಪ್ರವಾಹದ ಮುಂದೆ ಕುಳಿತಿದ್ದೆ.

“ನಿಮ್ಮ ನಿರ್ಗಮನದಿಂದ ಕನ್ನಡ ಸಾಹಿತ್ಯಕ್ಕೆ ಎಷ್ಟು ನಷ್ಟವಾಯಿತಲ್ಲಾ, ಯಾಕೆ ಹೀಗೆ ಮಾಡಿದಿರಿ”? ಎಂದು ಕೇಳಿದ್ದಕ್ಕೆ “What about my inner quest?” ಎಂದು ಸವಾಲು ಹಾಕಿದರು.

ಮೈಸೂರಿನಿಂದ ಒಂದು ಹತ್ತು ಹನ್ನೆರೆಡು ಕಿ.ಮೀ. ದೂರದ ಬನ್ನೂರು ರಸ್ತೆಯ ತಿರುವಿನಲ್ಲಿ ಹಲಗಯ್ಯನ ಹುಂಡಿ ಎಂಬ ಒಂದು ಸಣ್ಣ ಹಳ್ಳಿ. ಯಾವುದೇ ಬಸ್ಸು ಆಟೋಗಳ ಸೌಕರ್ಯವಿಲ್ಲದ ಆ ಹಳ್ಳಿಯನ್ನು ದಾಟಿಕೊಂಡು ಒಳಗೆ ಹೋದರೆ ಅಜ್ಞಾತವಾಗಿ ನಿಂತಿರುವ ಆಶ್ರಮವೊಂದಿದೆ. ಅದೇ ರಾಜಲಕ್ಷ್ಮಿ ಅವರ ಆಶ್ರಮ. ಈ ಆಶ್ರಮಕ್ಕೆ ಒಂದು ಹೆಸರಿರುವ ಹಾಗೆ ಇಲ್ಲ. ಇದಕ್ಕೆ ಯಾವ ರಹದಾರಿಗಳಾಗಲೀ, ಮಾರ್ಗಸೂಚಿಗಳಾಗಲೀ, ಯಾವುದೇ ಫಲಕಗಳಾಗಲೀ ಇಲ್ಲ. ಅಲ್ಲಿನ ಅಕ್ಕ ಪಕ್ಕದ ಹಳ್ಳಿಗರಿಗೂ ಆಶ್ರಮದ ಹೆಚ್ಚಿನ ಪರಿಚಯವಿಲ್ಲ. ಆಶ್ರಮಕ್ಕೆ ವರ್ತನೆ ಹಾಕುವ ಹಾಲುಮಾರುವ ಗೌಳಿಗರೋ, ಇಲ್ಲ ತರಕಾರಿ ಮಾರುವ ರೈತರೋ ಅದೃಷ್ಟವಶಾತ್ ಸಿಕ್ಕಿದರೆ ಆಶ್ರಮದ ದಾರಿಯನ್ನು ತೋರಿಸಿಯಾರು. ಅಷ್ಟು ಜನವಿದೂರ. ಅಷ್ಟು ನಿಸ್ಸಂಗ. ನೀರವತೆ ಇಲ್ಲಿ ರಾಜ್ಯವಾಳುತ್ತಿದೆ. ನಮ್ಮ ಜೊತೆಗೆ ನನ್ನ ಸೋದರ ಸಂಬಂಧಿಯಾದ ಸೀತಾರಾಮ ಇರದಿದ್ದರೆ ಅದನ್ನು ಪತ್ತೆಹಚ್ಚಲು ಸಾಧ್ಯವೇ ಆಗುತ್ತಿರಲಿಲ್ಲವೇನೋ. ಅವನಿಗೆ ಆಶ್ರಮದ ದಾರಿ ಪರಿಚಯವಿತ್ತು. ಈ ಹಿಂದೆ ಈ ಆಶ್ರಮವನ್ನು ಕಟ್ಟಿಕೊಂಡಿರುವ ಸ್ವಾಮಿ ಆತ್ಮಾನಂದೇಂದ್ರರನ್ನು ನೋಡಲು ಒಮ್ಮೆ ಬಂದಿದ್ದನಂತೆ ಇದೇ ಸ್ಥಳಕ್ಕೆ. ಹೀಗೆ ಗೊತ್ತು ಗುರಿಯಿಲ್ಲದೆ ಏನನ್ನೋ ಹುಡುಕಿಕೊಂಡು ಹೋಗುವುದರಲ್ಲಿ ಎಂಥ ಮಜಾ ಇದೆ! 83 ವರುಷ ಪ್ರಾಯದ ಆತ್ಮಾನಂದೇಂದ್ರರು ರಾಜಲಕ್ಷ್ಮಿಯವರ ಸೋದರ ಸಂಬಂಧಿ; 1948-49ರಲ್ಲಿ IAS ಮಾಡಿ, 1968ರಲ್ಲಿ ಹುದ್ದೆಯನ್ನು ತೊರೆದು ಸನ್ಯಾಸಿಗಳಾದವರು; ಯಳ್ಳಂಬಳಸೆ ಸುಬ್ಬರಾಯ ಶರ್ಮ ಅರ್ಥಾತ್ ಸಚ್ಚಿದಾನಂದೇಂದ್ರ ಸರಸ್ವತಿಯವರ ಶಿಷ್ಯರು. (ಸಚ್ಚಿದಾನಂದೇಂದ್ರ ಸರಸ್ವತಿಯವರೇ ಬಹುಶಃ ರಾಜಲಕ್ಷ್ಮಿಯವರಿಗೂ ಧೀಕ್ಷೆಕೊಟ್ಟಿರಬಹುದು.) ಇವರು ತಮ್ಮ ಗುರುಗಳನ್ನು ಕಾಣಲು ಉತ್ತರ ಕಾಶಿಯಿಂದ ಹೊಳೆನರಸೀಪುರದವರೆಗೆ ಕಾಲುನಡಿಗೆಯಿಂದಲೇ ಬಂದಿದ್ದರಂತೆ.

ಯಾರೂ ಹೋಗದ ಕಿರಿದಾದ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ ನಾವು ಆಶ್ರಮದ ಗೇಟನ್ನು ತೆರೆದುಕೊಂಡು ಒಳ ನಡೆದೆವು. ಗೇಟಿನ ಬಳಿಯೇ, ರಾಜಲಕ್ಷ್ಮಿಯವರ ಸನ್ಯಾಸಾಶ್ರಮದ ಹೆಸರನ್ನು ತಿಳಿಯದ ನಾವು ಅವರನ್ನು “ಮಾತಾಜಿ” ಎಂದು ಸಂಬೋಧಿಸಬೇಕೆಂದು ನಿಶ್ಚಯಿಸಿದೆವು. ಸೀತಾರಾನಿಗೆ ಕೂಡ ಎಲ್ಲಿಲ್ಲದ ಹುರುಪು ಬಂದಿತ್ತು. ವೃತ್ತಿಯಲ್ಲಿ ಇಂಜಿನಿಯರ್ ಆದ ನನ್ನ ತಮ್ಮ ನಟರಾಜ ಕೂಡ ನಮ್ಮ ಅತಿ ಉತ್ಸಾಹಕ್ಕೆ ಬೇಸರಪಟ್ಟುಕೊಳ್ಳದೇ ನಮ್ಮನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಬಂದಿದ್ದ. ಒಳ ಹೊಕ್ಕೊಡನೆ ಆಶ್ರಮದ ಸುಂದರ ಕೈತೋಟ ನಮ್ಮನ್ನು ಕೈಮಾಡಿ ಕರೆಯಿತು. ಅಂಗಳದಲ್ಲಿ ಯಾರೂ ಕಾಣಲಿಲ್ಲ. ಅಲ್ಲಿ ಯಾವ ಮರ್ಸಿಡಿಸ್, ಬೆನ್ಝ್ ಕಾರುಗಳೂ ನಿಂತಿರಲಿಲ್ಲ. ಭಕ್ತಾದಿಗಳ ಜನಜಂಗುಳಿ ಇರಲಿಲ್ಲ. ಝಗ ಝಗಿಸುವ ದೀಪಾಲಂಕೃತ ವೇದಿಕೆ, ಮೆತ್ತನೆಯ ಗಾದಿ ಯಾವುದೂ ಇರಲಿಲ್ಲ. ಇದ್ದುದೆಲ್ಲ ಕೇವಲ ನೀರವತೆ. ಒಳಗೆ ಯಾವುದೋ ಕೋಣೆಯೊಳಗಿಂದ ಬೆಳಕು ಕಾಣುತ್ತಿತ್ತು. ಆ ಕೋಣೆಯ ಕಿಟಕಿಯ ಬಳಿ ನಿಂತೆವು. ಕಿಟಕಿಯೊಳಗಿಂದ 77 ವರುಷದ ವೃದ್ಧೆಯೊಬ್ಬರು ಲಗುಬಗೆಯಿಂದ ಹೊರ ಬಂದು ಯಾರು ಬೇಕು? ಎಂದು ಕೈಕಟ್ಟಿ ನಿಂತು ವಿಚಾರಿಸಿದರು. ಅವರ ಬಿಳಿಯ ಸೀರೆ, ಬಿಳಿಯ ಕುಪ್ಪಸ, ಬೋಳು ಹಣೆ, ಬೋಳು ಕೈ, ಆ ವ್ಯಕ್ತಿಯ ನಿರಾಭರಣ ರೀತಿಯನ್ನು ನೋಡಿ ಅವರೇ ರಾಜಲಕ್ಷ್ಮಿಯವರೆಂದು ಖಚಿತ ಪಡಿಸಿಕೊಂಡು “ನಿಮ್ಮನ್ನೇ ನೋಡಬೇಕೆಂದು ಬಂದೆವು” ಎಂದು ಸೀತಾರಾಮ ಧೈರ್ಯದಿಂದ ಹೇಳಿಬಿಟ್ಟ. ಜೊತೆಗೆ ನಮ್ಮಿಬ್ಬರನ್ನೂ ಅವರಿಗೆ ಪರಿಚಯ ಮಾಡಿಕೊಟ್ಟು ತನ್ನನ್ನೂ ಪರಿಚಯ ಮಾಡಿಕೊಂಡ. ತಕ್ಷಣ ಬನ್ನಿ ಒಳಗೆ ಎಂದು ಕರೆದರು.

“ಬೇಡ ಹೊರಗೇ ಕುಳಿತುಕೊಳ್ಳುತ್ತೇವೆ. ಇಲ್ಲಿ ಗಾಳಿ ಚೆನ್ನಾಗಿದೆ”
ಎಂದದಕ್ಕೆ, ಆ ಯೋಗಿನಿ ನಮಗಾಗಿ ಕುರ್ಚಿಯನ್ನು ಒಳಗಿನಿಂದ ತರಲು ತಾವೇ ಹೊರಟರು. ಅದನ್ನು ಕಂಡು ನಮಗೆ ನಾಚಿಕೆಯಾಗಿ ನಾವೇ ಒಳ ಹೋಗಿ ಕುರ್ಚಿಗಳನ್ನು ಹೊರತಂದೆವು. ಅಷ್ಟು ಹೊತ್ತಿಗೆ ನಮ್ಮ ಜೊತೆಗೆ ಆತ್ಮಾನಂದೇಂದ್ರರೂ ಸೇರಿಕೊಂಡರು. “ಒಂದರ್ಧ ಗಂಟೆಯಷ್ಟೆ, ಅನುಷ್ಠಾನಕ್ಕೆ ಸಮಯವಾಯಿತು” ಎಂದು ಹೇಳುತ್ತಾ ನಮ್ಮನ್ನು ಆಶ್ರಮದ ದೊಡ್ಡ ಹಾಲಿನೊಳಗೆ ಕರೆದುಕೊಂಡು ಹೋದರು. ನನಗೆ ರಾಜಲಕ್ಷ್ಮಿಯವರೊಡನೆ ಮಾತ್ರ ಮಾತನಾಡಬೇಕಿತ್ತು. ಆದರೆ ಅಷ್ಟರೊಳಗೆ ಸ್ವಾಮೀಜಿಯವರ ಹಿಂದೆ ಎಲ್ಲರೂ ಒಳಗೆ ಹೋಗಿಯಾಗಿತ್ತು.

ಮಾತನ್ನು ಶುರುಮಾಡಲು ಸಚ್ಚಿದಾನಂದೇಂದ್ರ ಸರಸ್ವತಿಯವರ ಬಹುಚರ್ಚಿತ “ಸದಸತ್ ವಿಲಕ್ಷಣ’” ‘ಮೂಲಾವಿದ್ಯಾನಿರಾಸ’ ಮುಂತಾದ ವಿವಾದಾತ್ಮಕ ವಿಚಾರಗಳ ಕುರಿತು ಸೀತಾರಾಮ ಅವರನ್ನು ಕೆಣಕಿದ. ಅವರು ಹೇಳುತ್ತಾ ಹೋದರು. ಎಲ್ಲವೂ ಗಹನವಾದ ಶಂಕರ ವೇದಾಂತಕ್ಕೆ ಸಂಬಂಧಿಸಿದ ವಿಚಾರಗಳು. ನಾವೋ ಸರಿಯಾಗಿ ಹೋಂ ವರ್ಕ್ ಕೂಡಾ ಮಾಡದೇ ಹೋಗಿದ್ದೆವು. ಹೀಗಾಗಿ ಅವರು ಹೇಳಿದ ವಿಚಾರಗಳೆಲ್ಲವೂ ನಮ್ಮ ತಲೆಯ ಮೇಲೆ ಹೋಯಿತು.

ತಮ್ಮ ಶಿಕ್ಷಕ ವೃತ್ತಿಯಿಂದ ನಿವೃತ್ತರಾದನಂತರ ಹೊಳೆನರಸೀಪುರದಲ್ಲಿ ನೆಲೆಸಿದ ಯಳ್ಳಂಬಳಸೆ ಸುಬ್ರಾಯ ಶರ್ಮರು (1880-1975), 1948 ರಲ್ಲಿ ಸನ್ಯಾಸ ಸ್ವೀಕರಿಸಿ ಸಚ್ಚಿದಾನಂದೇಂದ್ರ ಸರಸ್ವತಿಯಾದರು. ಜೀವನ್ಮುಕ್ತ ಋಷಿ, ಪುರುಷ ಸರಸ್ವತಿಯೆಂದೇ ಹೆಸರಾದ ಅವರು ಅಧ್ಯಾತ್ಮ ಪ್ರಕಾಶವೆಂಬ ಪತ್ರಿಕೆಯನ್ನು (1920) ಶಂಕರವೇದಾಂತದ ಪ್ರಚಾರಕ್ಕೆಂದೇ ಪ್ರಾರಂಭಿಸಿದವರು. ಅದರ ಮೂಲಕ ಶಂಕರ ಭಗವತ್ಪಾದರ ಶಿಷ್ಯ ಪರಂಪರೆಯಿಂದ ಸಿಡಿದು ವಿವಾದಾತ್ಮಕ ವಿಚಾರಗಳನ್ನು ಪ್ರಕಟಿಸಿ ಎಲ್ಲರ ಟೀಕೆಗೆ ಒಳಗಾಗಿದ್ದವರು. ಶಂಕರರ ಪ್ರಸ್ಥಾನತ್ರಯಭಾಷ್ಯಗಳ ಮೇಲೆ ಅವರ ಅನುಯಾಯಿಗಳ ವ್ಯಾಖ್ಯಾನಗಳಲ್ಲಿನ ಮೂಲಭೂತ ದೋಷಗಳನ್ನು, ಪಾಠಾಂತರಗಳನ್ನು ಬೆಳಕಿಗೆ ತಂದು “ಶಂಕರರೆಡೆಗೇ ಹಿಂತಿರುಗಿ” ಎಂಬ ಕರೆಯೊಡನೆ ಶುದ್ಧಶಂಕರ ವೇದಾಂತದ ಹರಿಕಾರರಾದರು. ಕನ್ನಡ, ಸಂಸ್ಕೃತ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ 188 ಗ್ರಂಥಗಳನ್ನು ಬರೆದು ಪ್ರಕಟಿಸಿದರು. ಆ ವೇದಾಂತದ ಚರ್ಚೆಯನ್ನು ಆತ್ಮಾನಂದೇಂದ್ರರು ವಿವರಿಸುತ್ತಿದ್ದರು.

ಇಂತಹ ಗಂಭೀರವಾದ ವಿಚಾರಗಳನ್ನು ಅರಗಿಸಿಕೊಳ್ಳುವ ಮಟ್ಟದ ಬೌದ್ಧಿಕತೆ ನಮ್ಮಲ್ಲಿರಲಿಲ್ಲ. ಅದನ್ನು ನಾವು ನಿರೀಕ್ಷಿಸಿಯೂ ಇರಲಿಲ್ಲ. ಹೀಗಾಗಿ ನಾನು ರಾಜಲಕ್ಷ್ಮಿಯವರ ಕಡೆಗೆ ತಿರುಗಿದೆ. ನನ್ನ ಮನದೊಳಗಿನ ಮಾತುಗಳನ್ನು ಆಡಬೇಕಿತ್ತು. ಅವರು ಆತ್ಮಾನಂದರು ಹೇಳುತ್ತಿರುವುದನ್ನು ಮೊದಲ ಸಲ ಕೇಳುತ್ತಿರುವರೋ ಎಂಬಂತೆ ತನ್ಮಯರಾಗಿ ಕೇಳುತ್ತ ಕುಳಿತಿದ್ದರು. ಸೀತಾರಾಮ ಸ್ವಾಮಿಗಳನ್ನು ತನ್ನಡೆಗೆ divert ಮಾಡಿಕೊಂಡು ಏನೋ ಮಾತನಾಡಲು ತೊಡಗಿದ. ನಾನು ರಾಜಲಕ್ಷ್ಮಿಯವರತ್ತ ತಿರುಗಿದೆ-
“Inner quest” ಎಂದಿರಿ ನಮ್ಮಂತಹ ಸಮಾಜದಲ್ಲಿ ಹೊರಗಿನ ಹೋರಾಟದ ಅವಶ್ಯಕತೆ ಇಲ್ಲವೇ ಅದು ಬೇಡವೇ?” ಎಂದು ನಾನು ಕೇಳಿದೆ.

“ಮಾಡಿ. ಒಳಗಿನ ಶೋಧನೆಯ ಜೊತೆಗೆ ಹೊರಗಿನ ಹೋರಾಟ ಮಾಡಬಾರದೆಂದೇನು ಇಲ್ಲವಲ್ಲ. ನಿಸ್ವಾರ್ಥವಾಗಿ ಮಾಡುವುದಾದರೆ ಎಲ್ಲವೂ ಸರಿ. ಎಲ್ಲವೂ ಕೇವಲ ಮಜಲುಗಳಷ್ಟೆ. ಹೋರಾಟ ಮುಂದುವರೆಯುತ್ತಲೇ ಇರುತ್ತದೆ. ಒಳಗಿನ ಶೋಧನೆಯ ಜೊತೆಗೆ ಹೊರಗಿನ ಹೋರಾಟವನ್ನೂ ಮುಂದುವರೆಸಬಹುದು, that is even fine. ಸಂಬಂಧದೊಳಗೆ ಇದ್ದುಕೊಂಡೇ ಎಲ್ಲ ಶೋಧನೆ ಮಾಡಬಹುದು.”

“ಒಳಗಿನ ಶೋಧನೆ ಅಂತ ಎಲ್ಲರೂ ಸನ್ಯಾಸಿಗಳಾಗಿಬಿಟ್ಟರೆ ಅವರನ್ನು ಪೋಷಿಸುವರು ಯಾರು?” ಎಂದು ಸ್ವಾಮಿಗಳು ಹಾಸ್ಯ ಚಟಾಕಿ ಹಾರಿಸಿದರು.
ನಾನು ರಾಜಲಕ್ಷ್ಮಿಯವರನ್ನು ಮತ್ತೆ ಕೇಳಿದೆ,

“ಹಾಗಾದರೆ ನೀವು ಏಕೆ ಬರೆಯುವುದನ್ನು ಬಿಟ್ಟುಬಿಟ್ಟಿರಿ? ನಿಮ್ಮ ಅನುಭವವನ್ನು ಅಭಿವ್ಯಕ್ತಿ ಪಡಿಸಬೇಕು ಅಂತ ಅನ್ನಿಸಲಿಲ್ಲವಾ? ಆತ್ಮಶೋಧನೆ ಮತ್ತು ಬರವಣಿಗೆ ಎರಡನ್ನೂ ಮಾಡಬಹುದಿತ್ತಲ್ಲ?”

“ಮಾಡಬಹುದಿತ್ತು, ಆದರೆ ಅದು ಪ್ರಾರಂಭದಲ್ಲಿ ಗೊತ್ತಾಗಲಿಲ್ಲ. ಆಮೇಲೆ ಅದೇ ಹಾದಿಯಲ್ಲಿ ಬಹಳ ದೂರ ಬಂದುಬಿಟ್ಟೆ. ಈಗ ಅನುಭವವನ್ನು ಅಭಿವ್ಯಕ್ತಿ ಪಡಿಸಬೇಕು ಎಂದೆನಿಸುವುದಿಲ್ಲ. ಹಾಗೆ ಅನ್ನಿಸುವುದೂ ಆ ಅನುಭವವನ್ನು ತಂದುಕೊಡುತ್ತಿರುವ ಚೈತನ್ಯದ ಬಗ್ಗೆ ಅಜ್ಞಾನವನ್ನು (ಅಹಂಕಾರ) ಮೆರೆಯುವುದೇ ಅಲ್ವಾ, ಗಿರಿಜಾ?”

ಅವರ ಮಾತನ್ನು ಗ್ರಹಿಸಲಾಗದೇ ಅವರತ್ತ ನೋಡಿದಾಗ,
“ನೋಡಿ; ನಾವು ನೋಡುವ ಮತ್ತು ನೋಡಲ್ಪಡುವ ವಸ್ತು ಬೇರೆ ಎಂಬ ಅರಿವು ನಮಗಿದೆ. ಆದರೆ ನಾನು ನೋಡ್ತಾ ಇದ್ದೀನಿ ಎನ್ನುವ ಅರಿವನ್ನು ತಂದುಕೊಡುತ್ತದಲ್ಲಾ ಅದು ಯಾವುದು? ನನ್ನ ಅರಿವನ್ನು ನನಗೆ ತಂದು ಕೊಡುವ ಮತ್ತೊಂದು ಬೇರೆ ಯಾವುದೋ ಒಂದು ಚೈತನ್ಯ ಇರಲೇಬೇಕಲ್ಲವಾ. ಪ್ರಕೃತಿಯಲ್ಲಿ ಎಲ್ಲವೂ ಎಷ್ಟು orderly ಯಾಗಿದೆ ನೋಡಿ, ಅದು ಹೇಗೆ ಸಾಧ್ಯ? ಇದರ ಹಿಂದೆ ಕೂಡ ಒಂದು ಚೈತನ್ಯ ಇರಲೇಬೇಕಲ್ಲವಾ?” ಇಂತಹ ಚೈತನ್ಯದ ಬಗೆಗೆ ನಮಗೆ ವಿಸ್ಮೃತಿ ಒದಗಿಬಿಡುವ ದುರಂತವನ್ನು ಅವರು ಬಹಳ ತನ್ಮಯರಾಗಿ ಹೇಳುತ್ತಿದ್ದರು. ಅದನ್ನು ನೋಡುತ್ತಲೇ ನಾನು ಕುಳಿತುಬಿಟ್ಟೆ.
ನಮ್ಮೊಳಗಿರುವ ಚೈತನ್ಯ ಹಾಗೂ ಪ್ರಕೃತಿಯಲ್ಲಿ ನಾವು ಕಾಣುತ್ತಿರುವ ಚೈತನ್ಯ ಎರಡೂ ಕೂಡ ಒಂದೇ ಎಂಬ ಗ್ರಹಿಕೆಯಲ್ಲಿ ಅವರು ಹೇಳುತ್ತಿರುವಾಗ, “ನಾವು ಕೂಡ ಪ್ರಕೃತಿಯ ಭಾಗವೇ ಅಲ್ಲವೇ?” ಎಂದು ನಾನು ಕೇಳಿದಾಗ “ಅಷ್ಟು ತಿಳಿದುಕೊಂಡರೆ ಸಾಕು” ಎಂದರು.

ಅನುಷ್ಠಾನಕ್ಕೆ ಹೊತ್ತಾಯಿತು, ಅರ್ಧಗಂಟೆ ಮಾತ್ರ ನಿಮ್ಮೊಡನಿರಲು ಸಾಧ್ಯ ಎಂದಿದ್ದ ಸ್ವಾಮೀಜಿಯವರು ನಮ್ಮೊಡನೆ ಹೆಚ್ಚು ಕಡಿಮೆ ಒಂದೂವರೆ ತಾಸಿಗೂ ಮಿಗಿಲಾಗಿ ಮಾತನಾಡಿದರು. ರಾಜಲಕ್ಷ್ಮಿಯವರು ಮಾತು ಮಾತಿಗೆ ನನ್ನ ಹೆಸರನ್ನು ಉಚ್ಚರಿಸುತ್ತಾ ಬಹಳ ಕಾಲದ ಗೆಳತಿಯಂತೆ ಮಾತನಾಡಿದರು. ನನ್ನ ಪ್ರಶ್ನೆಗಳಿಗೆ ಅವರು ಕೊಡುತ್ತಿದ್ದ ಉತ್ತರದಲ್ಲಿ ಸಮರ್ಥನೆಯಿರಲಿಲ್ಲ. ನಂಬಿಸುವ ಹಟವಿರಲಿಲ್ಲ. ನಾನು ನೆಚ್ಚಿಕೊಂಡು ಬಂದ ದಾರಿಯಿದು ಎನ್ನುವ ವಿನಯವನ್ನು ಅವರ ಅಂಗ ಭಾವಗಳು ಸಾರುತ್ತಿದ್ದವು. ನಾವು ಹೊರಡಲು ಅನುವಾದಾಗ ಸ್ವಾಮೀಜಿಯವರು ರಾಜಲಕ್ಷ್ಮಿಯವರ ಮುಖನೋಡಿದರು. ಅದನ್ನು ಅರಿತವರಂತೆ ಒಳ ಹೋಗಿ ಬಂದ ಅವರ ಕೈಯಲ್ಲಿ ಬಾಳೆ ಹಣ್ಣುಗಳಿದ್ದವು. ಪ್ರೀತಿಯಿಂದ ತೆಗೆದುಕೊಳ್ಳಿ ಎಂದರು. ಅದನ್ನು ನಾವು ಪ್ರಸಾದವೆಂದು ಸ್ವೀಕರಿಸಿದೆವು. ಬಹಳ ಸಾರ್ಥಕ ಗಳಿಗೆಗಳು ಸರಿದು ಹೋದವು. “ನಿಷ್ಪ್ರಯೋಜಕ ವಿಷಯಗಳಿಗೆ ಜಿಜ್ಞಾಸೆ ಮಾಡಬಾರದು” ಎಂದು ನಾವು ಹೊರಡುವ ವೇಳೆಗೆ ಹೇಳಿದ ಸ್ವಾಮಿಗಳ ಮಾತು ಅಷ್ಟು ಹೊತ್ತು ನಾವು ಕಳೆದ ಕಾಲಕ್ಕೆ ಭರತ ವಾಕ್ಯದಂತಿತ್ತು.

“ನಮ್ಮ ಕೈಲಾಗುವಾಗ ಬೇರೆಯವರ ಮೇಲೆ ಏಕೆ ಅವಲಂಬಿಸಬೇಕು” ಎನ್ನುವ 77 ವರುಷದ ವೃದ್ಧೆ ರಾಜಲಕ್ಷ್ಮಿಯವರು ಸ್ವತಃ ತಾವೇ ಅಡುಗೆ, ಮನೆ ಸ್ವಚ್ಛಮಾಡುವುದು ಮುಂತಾದ ಕೆಲಸಗಳನ್ನು ಮಾಡುತ್ತಾರೆ. ‘ನಮ್ಮದು ಬಹಳ ಸರಳ ಆಹಾರ’ ಎನ್ನುತ್ತಾರೆ. 83 ವರುಷದ ಸ್ವಾಮೀಜಿ ಮೈಸೂರು ಪೇಟೆಗೆ ಹೋಗಿ ದಿನನಿತ್ಯಕ್ಕೆ ಬೇಕಾದ ಸಾಮಾನುಗಳನ್ನು ತರುತ್ತಾರೆ. ಅವರ ಆಶ್ರಮದಲ್ಲಿ ಯಾವ ಒಂದು ವಾಹನವೂ ನಿಂತಿದ್ದನ್ನು ನಾವು ಗಮನಿಸಲಿಲ್ಲ. ಊರೊಳಕ್ಕೆ ಹನ್ನೆರಡು ಕಿ.ಮೀ. ನಡೆದುಕೊಂಡೇ ಹೋಗುತ್ತಾರೇನೋ! ಹೇಳಿ ಕೇಳಿ ಉತ್ತರಕಾಶಿಯಿಂದ ಕಾಲ್ನಡಿಗೆಯಲ್ಲಿ ಬಂದಿದ್ದವರು ಅವರು!

ನಾವು ಹೊರಟಾಗ ಆಶ್ರಮದ ಅಂಗಳದೊಳಗೆ ಹಾಗೂ ಹೊರಗೆ ಎಲ್ಲೆಲ್ಲೂ ಕತ್ತಲು ಹರಡಿತ್ತು. ಯಾವುದೇ ದೀಪಗಳಿರಲಿಲ್ಲ. ಮೇಲೆ ಆಕಾಶದಲ್ಲಿ ಗೀರು ಚಂದಿರ ಬಿಟ್ಟರೆ ಬೆಳಕಿನ ಸುಳಿವೂ ಅಲ್ಲಿರಲಿಲ್ಲ. ಎಮರ್ಜನ್ಸಿ ದೀಪವನ್ನು ಹಿಡಿದು ನಮ್ಮ ಜೊತೆಯಲ್ಲಿ ನಾವು ಬೇಡವೆಂದರೂ ಗೇಟಿನ ತನಕ ಅವರಿಬ್ಬರೂ ಬಂದರು. ಬಳಿಯಲ್ಲಿಯೇ ಇದ್ದ ಗಿಡದಿಂದ ನನಗೊಂದು ಗುಲಾಬಿಯನ್ನು ಕಿತ್ತು ಕೊಟ್ಟ ರಾಜಲಕ್ಷ್ಮಿಯವರು “ನಿಮಗೆ ಒಳ್ಳೆಯದಾಗಲೀ” ಎಂದು ಮನತುಂಬಿ ಹರಸಿದರು. ಅವರ ಒಳ್ಳೆಯ ನಡತೆಗೆ ಅದರ gestures ಗೆ ನಾನು ಇನ್ನಿಲ್ಲದಂತೆ ಕರಗಿ ಹೋದೆ. ಅನತಿ ದೂರದಲ್ಲಿ ನಿಲ್ಲಿಸಿದ್ದ ನಮ್ಮ ಕಾರು ರಿವರ್ಸ್ ತೆಗೆದುಕೊಂಡು ಮುಖ್ಯ ರಸ್ತೆ ತಲಪುವವರೆಗೆ ಆ ವೃದ್ಧ ಸನ್ಯಾಸಿಗಳು ಗೇಟಿನ ಬಳಿಯೇ ದೀಪವನ್ನು ಮೇಲೆತ್ತಿಹಿಡಿದು ಬಿ.ಎಂ.ಶ್ರೀ ಯವರ “ಕರುಣಾಳು ಬಾ ಬೆಳಕೆ” ಕವಿತೆಯನ್ನು ಆತ್ಮಸಾತ್ ಮಾಡಿಕೊಂಡಿದ್ದರ ಪ್ರತೀಕದಂತೆ ನಿಂತೇ ಇದ್ದರು. ನಾವು ಬಹಳ ದೂರ ಸಾಗುವವವರೆಗೂ ನಮ್ಮನ್ನು ಆ ದೀಪದ ಬೆಳಕು ಹಿಂಬಾಲಿಸುತ್ತಿತ್ತು. ಹೊರಗೆ ಕತ್ತಲು ಆವರಿಸಿದ್ದರೂ ಮೇಲೆ ಗೀರು ಚಂದಿರ ದಾರಿ ತೋರುತ್ತಿದ್ದ. ನಮ್ಮೊಳಗೆ ದೀಪೋತ್ಸವದ ಜಾತ್ರೆ ನಡೆಯುತ್ತಿತ್ತು.