ಮದುವೆಯಾಗಲು ಕಾಯುತ್ತಿದ್ದ ದಿನಗಳಲ್ಲಿ ಭ್ರಮೆ ನಿಧಾನವಾಗಿ ಕರಗುತ್ತಿತ್ತು. ಈ ನನ್ನ ಮಗ ಮತ್ತು ನನ್ನ ನಡುವೆ ಇರುವ ಸಮಾನ ಆಸಕ್ತಿಗಳಾದರೂ ಏನು ಎಂದು ಉತ್ತರವೇ ಇಲ್ಲದ ಪ್ರಶ್ನೆಗಳಲ್ಲಿ ದಿನ ಕಳೆಯುತ್ತಿತ್ತು. ಹತ್ತಿರ ಬಂದರೂ ದೇಹ ಸ್ಪಂದಿಸದಿರುವಾಗ ಬದುಕೆಲ್ಲ ಸಿಕ್ಕಿ ಬಿದ್ದು ಏನು ಗತಿ ಎಂದು ಕಳವಳಿಸಲು ಪ್ರಾರಂಭಿಸಿದ್ದೆ. ಒಮ್ಮೆ ಸುಷ್ಮಾ ಸ್ವರಾಜಳ ಅವಳಿಯಂತೆ ಕಾಣಿಸುವ ಅವನ ಅಮ್ಮನನ್ನು ಭೇಟಿಯಾದೆ. ಡಿ ಎಚ್ ಲಾರೆನ್ಸನ ಸನ್ಸ್ ಅಂಡ್ ಲವರ್ಸ್ ಕಾದಂಬರಿ ನೆನಪಿಗೆ ಬಂತು. ಈಕೆ ಉಡದ ಹಿಡಿತದವಳು. ಮಗನನ್ನು ತನ್ನ ಮೂವರು ಹೆಹ್ಮಕ್ಕಳ ಯೋಗಕ್ಷೇಮದ ನೆಪದಲ್ಲಿ ಬದುಕಿನುದ್ದಕ್ಕೂ ಕಟ್ಟಿಹಾಕಬಲ್ಲ ಪ್ರಚಂಡೆ ಎನ್ನುವುದು ಅಂತರಾತ್ಮಕ್ಕೆ ಥಳಥಳನೆ ಹೊಳೆದಿತ್ತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ನಾಲ್ಕನೆಯ ಬರಹ
೧. ಪುರುಷೋತ್ತಮನ ಕಾರು!
ಅವ ಒಬ್ಬ ಕೇವಲ ಕಾರನ್ನು ಬಾಡಿಗೆಗೆ ಓಡಿಸುತ್ತಿದ್ದವ. ಎಪ್ಪತ್ತರ ದಶಕದಲ್ಲಿ ನಾನಿದ್ದ ಸಣ್ಣ ಊರಿನಲ್ಲಿ ಇದ್ದ ಬಾಡಿಗೆ ಕಾರುಗಳು ಎರಡೇ ಎರಡು. ಅಂತಹ ಎಳೆಯ ವಯಸ್ಸಿನಲ್ಲಿ ಅವನ ಬಗ್ಗೆ ಮೋಹ ಬೆಳೆದಿದ್ದು ಕಾರು ಓಡಿಸುತ್ತಿದ್ದ ಅಂತಲೇ? ಸ್ಟಿಯರಿಂಗ್ ಹಿಡಿದಾಗ ಎಲ್ಲವನ್ನೂ ನಿಯಂತ್ರಿಸಬಲ್ಲವನಂತೆ ಕಾಣುತ್ತಿದ್ದ ಅಂತಲೇ? ಅಥವಾ ಏನೇ ನಡೆದರೂ, ಓಡಿದರೂ ಎಷ್ಟು ಮಹಾ ದೂರ ಹೋಗಬಹುದಿತ್ತು ಎನ್ನುವ ಕಾಲದಲ್ಲಿ ಸುಯ್ಯನೆ ಎತ್ತಿ ಕರೆದೊಯ್ಯುತ್ತಿದ್ದ ಅಂತಲೇ?
ಒಮ್ಮೆ ಹಾದಿಯಲ್ಲಿ ಕಾರು ಕೈ ಕೊಟ್ಟಿತು. ಏನೇ ಕೆಣಕಿದರೂ ಗೊರ್ರನೆ ಸದ್ದುಮಾಡುತ್ತಾ ನಿಂತೇಬಿಟ್ಟಿತು. ಪುರುಷೋತ್ತಮ ಬಾನೆಟ್ ತೆಗೆದ. ಅದರ ಅಡಿಯಲ್ಲಿ ಅಂಗಾತ ಮಲಗಿ ಪೂಸಿ ಹೊಡೆದ. ಇತ್ತ ಹಾರಿದ, ಅತ್ತ ತೆವಳಿದ. ಅಪ್ಪರಾಣೆ ಕಾರು ಮಾತ್ರ ಕ್ಯಾರೆ ಎನ್ನದೆ ಬಿಮ್ಮನೆ ಬಿಗಿದುಕೊಂಡೆ ನಿಂತಿತ್ತು. ನೆತ್ತಿಯ ಮೇಲೆ ಬಿಸಿಲು, ಹೊಟ್ಟೆಯಲ್ಲಿ ತಾಳ. ಬೀಟಿಕಟ್ಟೆಯ ಹತ್ತಿರ ಸುತ್ತ ಹಸಿರಿದ್ದರೂ ಸಹ ನನ್ನೊಳಗಿನ ಭ್ರಮೆ ಕರಗಿ ನೀರಾಗಿ ಹರಿದಿತ್ತು.
ವರುಷಗಳ ನಂತರ ಪುರುಷೋತ್ತಮ ಎಂಬ ಹೆಸರಿನ ವ್ಯಂಗ್ಯ ಆ ಗಳಿಗೆಯಲ್ಲಿ ನನ್ನ ಅಂತರಾತ್ಮಕ್ಕೆ ಹೊಳೆದಿತ್ತೋ ಏನೊ ಅಂತನ್ನಿಸಿತ್ತು. ನನ್ನ ಮೊದಲನೆಯ ಗುಟ್ಟಾದ ಲವ್ ಅಫೇರ್ ತನ್ನಿಂತಾನೇ ಫಟ್ಟನೆ ಒಡೆದಿತ್ತು. ಆಗ ನನಗೆ ಕೇವಲ ಹತ್ತು ವರ್ಷ.
ಟಿವಿ ಇಲ್ಲದ ಅಂದಿನ ಕಾಲದಲ್ಲಿ ಹತ್ತು ವರ್ಷಕ್ಕೇ ಲವ್ ಮಾಡುವ ದಾರ್ಷ್ಟ್ಯವೇ?
ಅತ್ಯಂತ ಹಿರಿಯ ಅಣ್ಣನಿಗೆ ಮೈಸೂರಿನಿಂದ ಹೆಣ್ಣು ತಂದು ಮದುವೆಯಾಗಿ ಆಷಾಢದಲ್ಲಿ ಅತ್ತಿಗೆ ಬರೆಯುತ್ತಿದ್ದ ಇನ್ಲ್ಯಾಂಡ್ ಲೆಟರುಗಳನ್ನು ಮನೆಯ ಹೆಂಗಸರು ನಯವಾಗಿ ತೆರೆದು ಓದಿ, ತಿರುಗಿ ಅಂಟಿಸಿ ಮತ್ತೆ ಅಟ್ಟದಲ್ಲಿ ಇಟ್ಟು ಬರುತ್ತಿದ್ದರು. ಅಣ್ಣನೆನ್ನಿಸಿಕೊಂಡವ ಮನೆಗೆ ಬಂದಾಗ ಮೊದಲು ಬಟ್ಟೆ ಬದಲಾಯಿಸಲು ಅಟ್ಟ ಹತ್ತಿ ಹೋಗುತ್ತಿದ್ದ. ಪತ್ರ ಓದಿರುತ್ತಿದ್ದ, ಲುಂಗಿ ಸುತ್ತಿಕೊಂಡು ಕೆಳಗಿಳಿದು ಬಂದರೆ ಮನೆಯ ಹೆಂಗಸರೆಲ್ಲ ಉಕ್ಕಿ ಬರುತ್ತಿದ್ದ ಖೊಳ್ಳನೆಯ ನಗುವನ್ನು ತಡೆಯಲು ಹರಸಾಹಸ ಮಾಡುತ್ತಿದ್ದನ್ನು ಗಮನಿಸಿದ್ದೆ.
ಪಾಪ, ಅತ್ತಿಗೆಮ್ಮ ಆ ಪತ್ರಗಳಲ್ಲಿ ಆಗಿನ ಚಿತ್ರದ ಹಾಡುಗಳನ್ನೆಲ್ಲ ಅಷ್ಟಿಷ್ಟು ಬರೆಯುತ್ತಿದ್ದರು. ‘ನನಗೆ ನಿಮ್ಮ ಮೇಲೆ ತುಂಬ ಪ್ರೀತಿ ಇದೆ. ನಿಮಗೆ ನನ್ನ ಮೇಲೆ ಪ್ರೀತಿ ಇದೆಯೋ ಇಲ್ಲವೋ ಗೊತ್ತಿಲ್ಲ,’ ಎಂಬ ಸಾಲುಗಳು ನನ್ನ ಮನಸ್ಸನ್ನು ಕಲಕಿದ್ದವು. ‘ಎಂದೆಂದು ನೀವು ಸುಖವಾಗಿರಿ… ನನ್ನನ್ನು ಮರೆತು ಹಾಯಾಗಿರಿ…’ ನನ್ನ ಕಣ್ಣಲ್ಲಿ ನೀರು ಬರಿಸಿತ್ತು.
ಒಂದು ದಿನ ಉದ್ದಲಂಗ ತೊಟ್ಟ ಸಂಭ್ರಮದಲ್ಲಿ ಸರಬರ ಮಾಡಿಕೊಳ್ಳುತ್ತಾ ಹೊರಗೆ ಕೂತಿದ್ದಾಗ ಒಂದು ಕಾರು ಬಂದು ನಿಂತಿತು. ಬಿಳಿಬಿಳಿಯಾದ ಅತ್ತಿಗೆಮ್ಮ ಇಳಿದರು. ಆಷಾಢ ಮುಗಿದು ತಿಂಗಳಾದರೂ ಅಣ್ಣಯ್ಯ ಕರೆದುಕೊಂಡು ಬರಲು ಹೋಗಿರಲಿಲ್ಲ. ವಿಶಾಲಮ್ಮ ತಮ್ಮ ಹಿರಿಯ ಬಲಮಗನಿಗೆ ಹೋಗಿ ಕರೆದು ತಾರೆಂದು ಹೇಳಿ ಹೇಳಿ ಸುಸ್ತಾಗಿದ್ದರು.
ಪಾಪ, ಮೈಸೂರಿನ ಅಗ್ರಹಾರದ ಭಕ್ಷೀಸ್ ಶ್ರೀಪತಿಯವರ ಮನೆಯವರು ಕಾರು ಮಾಡಿ ಮಗಳನ್ನು ಕಳಿಸಿಯೇಬಿಟ್ಟಿದ್ದರು. ದಿಢೀರನೆ ಬಂದಿಳಿದ ಮನೆ ಸೊಸೆಯನ್ನು ನೋಡಿ ವಿಶಾಲಮ್ಮನೂ ಸೇರಿದಂತೆ ಹೆಂಗಸರೆಲ್ಲ ಬ್ಬೆಬ್ಬೆ ಎಂದದ್ದು ನೆನಪಿದೆ.
ಹತ್ತು ವರ್ಷದ ನನಗೆ ಬಿಳಿಹೆಂಡತಿ ಅತ್ತಿಗೆಮ್ಮನನ್ನು ನೋಡಿ ಪಾಪ ಅಂತನ್ನಿಸಿತ್ತು. ಸ್ವಲ್ಪ ಹೊತ್ತಾದ ಮೇಲೆ ಕದ್ದು ಅಟ್ಟ ಹತ್ತಿ ಹೋಗಿ ಅಣ್ಣಯ್ಯನಿಗೆ ಅದೇ ಊರಿನಲ್ಲಿ ಅದ್ಯಾರೋ ಲವರ್ ಇದಾಳಂತೆ, ಅದನ್ನ ಬಿಡಿಸಲೆಂದೇ ಮದುವೆ ಮಾಡಿದ್ದಂತೆ, ಎಂದು ಕಿವಿಗೆ ಬಿದ್ದಿದ್ದೆಲ್ಲವನ್ನು ಒದರಿಬಿಟ್ಟೆ. ಜೊತೆಗೆ ಅವಳಿಗೋಸ್ಕರ ಆ ಗೋದ್ರೇಜ್ ಬೀರುವಿನಲ್ಲಿ ದುಡ್ಡು ಕೂಡಿಡುತ್ತಿದ್ದಾನಂತೆ ಅಂತ ಸ್ವಲ್ಪ ಮಸಾಲೆ ಸಹ ಸೇರಿಸಿದೆ.
ಪುಸ್ತಕಗಳನ್ನು ಇಡಿಡಿಯಾಗಿ ನುಂಗುವ ಅಭ್ಯಾಸವಿದ್ದ ನನಗೆ ಆ ಸಣ್ಣ ಊರಿನ ಪಬ್ಲಿಕ್ ಲೈಬ್ರರಿಯವ ಸುಲಭವಾಗಿ ಪುಸ್ತಕಗಳನ್ನು ಕೊಡುತ್ತಿರಲಿಲ್ಲ. ಇದ್ದ ಒಂದೇ ಒಂದು ಕನ್ನಡ ಪಾಠ ಪುಸ್ತಕವನ್ನು ತಂದ ದಿನವೇ ಓದಿರುತ್ತಿದ್ದೆ. ವಾರಕ್ಕೊಮ್ಮೆ ಬಂದು ಬೀಳುತ್ತಿದ್ದ ಪ್ರಜಾಮತದ ‘ಗುಪ್ತಸಮಾಲೋಚನೆ’ ಅರ್ಥವಾಗದಿದ್ದರೂ ಅಕ್ಷರಗಳು ತಲೆಯೊಳಗೆ ಹೋಗಿರುತ್ತಿದ್ದವು.
ಮೈಸೂರಿನ ಬಿಳಿ ಅತ್ತಿಗೆಮ್ಮ ನನ್ನ ಕಣ್ಣಿಗೆ ಆಧುನಿಕದ ಲೋಕಕ್ಕೆ ಕರೆದೊಯ್ಯುವ ಹರಿಕಾರಳಂತೆ ಕಂಡಿದ್ದರೊ ಏನೊ.’ ಸಾರ್ವಜನಿಕ ಗ್ರಂಥಾಲಯದವನ ಹತ್ತಿರ ‘ನಂಗಲ್ಲ… ಅತ್ತಿಗೆಮ್ಮನಿಗೆ’ ಎಂದು ಸುಮ್ಮಾನದಿಂದ ಹೇಳಬಹುದಿತ್ತು. ಹಾಗೆ ಹೇಳಿ ಹೇಳಿ ತ್ರಿವೇಣಿ, ಆರ್ಯಾಂಬಾ ಪಟ್ಟಾಭಿ, ಎಂ ಕೆ ಇಂದಿರಾರ ಕಾದಂಬರಿಗಳೆಲ್ಲವನ್ನೂ ನುಂಗಿ ನೀರು ಕುಡಿದೆ. ಜೊತೆಗೆ ಕಾಸು ಕೂಡಿಟ್ಟು ಭಟ್ಟರ ಹೋಟೆಲ್ಲಿನಿಂದ ಮಸಾಲೆದೋಸೆ ತರಿಸುತ್ತಿದ್ದ ಅತ್ತಿಗೆಮ್ಮ ನನಗೂ ಅರ್ಧ ಕೊಡುತ್ತಿದ್ದರಲ್ಲ? ಕಾದಂಬರಿ ಓದುತ್ತಾ ನ್ಯೂಸ್ ಪೇಪರಿನ ಒಳಗೊಂದು ಬಾಳೆ ಎಲೆಯಲ್ಲಿ ಸುತ್ತಿ ಕೊಡುತ್ತಿದ್ದ ಭಟ್ಟರ ಹೋಟೆಲ್ಲಿನ ಮಸಾಲೆ ದೋಸೆ ತಿನ್ನುತ್ತಾ ಸರಿ, ನಾನು ಯಾರನ್ನು ಪ್ರೀತಿಸಬೇಕು ಎಂದು ತಲೆ ಕೆಡಿಸಿಕೊಳ್ಳುತ್ತಿದ್ದ ದಿನಗಳಲ್ಲಿ ಪುರುಷೋತ್ತಮ ಕಣ್ಣಿಗೆ ಬಿದ್ದಿದ್ದ. ಆದರೇನು, ಕಾರಿನ ಕೇವಲ ಒಂದು ಟಯರು ಪಂಕ್ಚರ್ ಆದರೂ ಸರಿ ಮಾಡಲಾಗದವನು ನನ್ನ ಪ್ರೇಮಿಯಾಗಲು ಲಾಯಕ್ಕೆ?
ಎಷ್ಟು ಬೇಗ ಪ್ರಾರಂಭವಾಗಿತ್ತೋ ಅಷ್ಟೇ ಬೇಗ ಫಟ್ಟನೆ ಒಡೆದಿತ್ತು!
*****
೨. ಇಂಗ್ಲಿಷ್ ಗೊತ್ತಿಲ್ಲದ ಪ್ರೇಮಿ!
ಹದಿಹರೆಯದಲ್ಲಿ ಮೈಸೂರಿನ ಹೆಸರಾಂತ ಕಾಲೇಜಿನಲ್ಲಿ ನನ್ನ ಜೊತೆಯವರೆಲ್ಲ ಓದುತ್ತಿದ್ದದ್ದು ಮಿಲ್ಸ್ ಅಂಡ್ ಬೂನ್! ಅದೊಂದು ವ್ಯಾಪಾರಿ ಸಂಸ್ಥೆ. ಪ್ರಣಯದ ಕತೆಗಳನ್ನೆಲ್ಲ ಬರೆಸಿ ಬರೆಸಿ ಕಾದಂಬರಿಯಾಗಿ ಉರುಳಿಸುತ್ತಿತ್ತು. ಆ ದಿನಗಳಲ್ಲಿ ಅವರಿವರು ಕೊಟ್ಟದ್ದೆಲ್ಲವನ್ನು ಓದಿ ಓದಿ ಬಿಸಾಕಿದೆ. ಪ್ರೇಮದ ಪರಿಭಾಷೆಯೂ ಸೇರಿದಂತೆ ಇಂಗ್ಲಿಷ್ ಸಿಕ್ಕಾಪಟ್ಟೆ ಸುಧಾರಿಸಿತ್ತು. ಇಷ್ಟು ಚೆನ್ನಾಗಿ ಇಂಗ್ಲೀಷಿನಲ್ಲಿ ಬರೆಯಬಲ್ಲೆ, ಆದರೆ ಪ್ರೇಮಿಯೇ ಇಲ್ಲವೇ!
ರಜೆಗೆ ಊರಿಗೆ ಹೋದಾಗ ಸಂಬಂಧಿಯೊಬ್ಬ ಫೋನಿನಲ್ಲಿ ಮಾತಾಡಲು ಸಿಕ್ಕ. ಮಾತಾಡಿ ಮಾತಾಡಿ ವಿಶಾಲಮ್ಮನ ಕೈಲಿ ಸಹ ಸಿಕ್ಕು ಬಿದ್ದೆ. ಮದುವೆ ಮಾಡಿಬಿಡುತ್ತೇವೆ ಎಂದು ಬೆದರಿಸಿದಾಗ ಜ್ಞಾನೋದಯವಾಗಿತ್ತು! ಅಯ್ಯಯ್ಯೋ, ಓದನ್ನು ಬಿಟ್ಟು ಮದುವೆ ಮಾಡಿಕೊಳ್ಳುವ ಇರಾದೆ ನನಗೆ ಕನಸು ಮನಸ್ಸಿನಲ್ಲಿಯೂ ಇರಲಿಲ್ಲ. ಹೊ ಎಂದು ಅತ್ತು ಕರೆದು ಮತ್ತೆ ಮೈಸೂರಿಗೆ ಪರಾರಿಯಾದೆ. ಬುದ್ಧಿ ಬಂದಿದೆ ಎಂದು ವಿಶಾಲಮ್ಮ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರೋ ಏನೋ.
ಪ್ರೇಮಕಥೆಗಳಿಗೆ ಅಷ್ಟು ಸುಲಭವಾಗಿ ಉಪಸಂಹಾರ ಸಿಕ್ಕಲು ಸಾಧ್ಯವೇ? ಅವ ಒಮ್ಮೆ ನನ್ನನ್ನು ಮೊಟ್ಟಮೊದಲ ಬಾರಿಗೆ ಭೇಟಿಯಾಗಲು ಮೈಸೂರಿಗೆ ಬಂದ. ಕೆಲವೇ ಹತ್ತನೆಯ ತರಗತಿ ಓದಿದ್ದ ಇವನು ನನ್ನ ಪ್ರೇಮಿಯಾಗಿರಲು, ಗಂಡನಾಗಲು ಲಾಯಕ್ಕೆ? ಆ ಸಣ್ಣ ಊರಿನಲ್ಲಿ ಸಿಕ್ಕಿ ಬಿದ್ದು ನನ್ನ ಬದುಕನ್ನೆಲ್ಲ ಕಳೆಯಬೇಕೆ? ಪಟಪಟನೆ ಬಾಯಿಂದ ಉದುರುವ ನನ್ನ ಇಂಗ್ಲಿಷನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರಲ್ಲ? ಈ ನನ್ನ ಮಗನಿಗೆ ಒಂದು ವಾಕ್ಯ ಇಂಗ್ಲಿಷ್ ಮಾತಾಡಲು ಬರುವುದಿಲ್ಲವೇ!
ದುಃಸ್ವಪ್ನದಿಂದ ಬೆಚ್ಚಿ ಎದ್ದವಳಂತೆ ನಡೆದೇ ಬಿಟ್ಟೆ!

೩. ಬಿಹಾರಿ ಬಾಬು!
ಪರಮಾಣು ವಿಜ್ಞಾನದಲ್ಲಿ ನನಗೆ ಪರಮ ಆಸಕ್ತಿ. ಐನ್ಸ್ಟೈನ್ ನನ್ನ ಯಾವತ್ತಿನ ಹೀರೋ! ಬಿಯೆಸ್ಸಿಯ ರಸಾಯನ ಶಾಸ್ತ್ರದಲ್ಲಿ ಅಪ್ಪರಾಣೆ ರಸವೇ ಇಲ್ಲ ಅಂತನ್ನಿಸಿತ್ತು. ಇನ್ನು ಗಣಿತ ಪರವಾಗಿಲ್ಲ ಅಂತನ್ನಿಸಿದರೂ ಸಹ ಪಾಠ ಹೇಳುವವರ ಮುಖಗಳು ಮಹಾ ರಸಹೀನ ಅಂತನ್ನಿಸಿ ಕೈಬಿಟ್ಟೆ.
ತಲೆಯಲ್ಲಿ ಈಗ ಬರೀ ಪರಮಾಣು ವಿಜ್ಞಾನದಲ್ಲಿ ಮುಂದುವರೆಯುವ ಹುಮ್ಮಸ್ಸು. ಆದರೆ ಆ ಸಣ್ಣ ಊರಿನ ವಿದ್ಯಮಾನಗಳು ನನ್ನ ತಲೆ ಕೆಡಿಸಿದ್ದವು. ಅಲ್ಲಿದ್ದಿದ್ದು ಒಂದೇ ಒಂದು ಮಹಿಳಾ ಕಾಲೇಜು. ಉಳಿದಂತೆ ಅಲ್ಲಿದ್ದ ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಎಲ್ಲದರ ಹುಡುಗರೂ ಅದರ ಸುತ್ತವೇ ಬಿದ್ದು ಕೊಳೆಯುತ್ತಿದ್ದರು. ಯಾವ ಯಾವ ಹೆಣ್ಮಕ್ಕಳು ಯಾವಯಾವ ದಾರಿಯಲ್ಲಿ ಎಷ್ಟೆಷ್ಟು ಹೊತ್ತಿಗೆ ಕಾಲೇಜಿಗೆ ಬರುತ್ತಾರೆ ಅಂತ ಎಲ್ಲರಿಗೂ ಗೊತ್ತಿರುತ್ತಿತ್ತು. ನಮ್ಮ ಟೈಮ್ ಟೇಬಲ್ ಅವರ ಬಾಯಿಯಲ್ಲಿ. ಆ ಹೊತ್ತಿಗೆ ಅಲ್ಲಲ್ಲೇ ಠಳಾಯಿಸುತ್ತಿರುತ್ತಿದ್ದವು.
ಅಲ್ಲಿ ಬಿಹಾರಿನಿಂದ ಇಂಜಿನಿಯರಿಂಗ್ ಮಾಡಲು ಬಂದಿದ್ದ ಒಂದು ಬೆಣ್ಣೆಬಿಸ್ಕೆಟ್ ನನ್ನ ಹಿಂದೆ ಮುಂದೆ ಸುತ್ತಿದಾಗ ಪಾಪ ಅಂತನ್ನಿಸಿತು. ಜೊತೆಗೆ ನನ್ನ ಡೆನಿಸ್ ರಾಬಿನ್ಸ್, ಮಿಲ್ಸ್ ಅಂಡ್ ಬೂನ್ ಭಾಷಾ ಪ್ರಾವೀಣ್ಯತೆಯೆಲ್ಲ ಅಭಿವ್ಯಕ್ತಿಸಿಕೊಳ್ಳಲು ಸುಪ್ತಪ್ರಜ್ಞೆಯಲ್ಲಿ ಕಾದಿದ್ದವೊ ಏನೋ. ಸರಿ ನಮ್ಮ ಪ್ರೇಮಪತ್ರಗಳ ಭರಾಟೆ ಶುರು! ಆತನಿಗೆ ನನ್ನಷ್ಟು ಚೆಂದದ ಇಂಗ್ಲಿಷ್ ಇರಲಿಲ್ಲ. ಹೊರಳಿ ನೋಡಿದಾಗ ನನ್ನ ಪತ್ರಗಳನ್ನು ಓದಿ ಓದಿ ಅವನ ಭಾಷೆ ಸುಧಾರಿಸಿದ್ದಿರಬಹುದೇ ಎಂಬ ಗುಮಾನಿ ಹುಟ್ಟುತ್ತದೆ. ಅವನ ಉದ್ದೇಶ ಸಹ ಅದೇ ಆಗಿತ್ತೋ ಏನೋ!
ಎಂಬತ್ತರ ದಶಕದಲ್ಲಿ ಅಂತ ಸಣ್ಣ ಊರಿನಲ್ಲಿ ಪರಸ್ಪರ ಭೇಟಿ ಮಾಡಿದರೆ ಗುಲ್ಲೆದ್ದು ರಂಪವಾಗುತ್ತಿತ್ತು. ಸರಿ ನಾವು ಮೂವರು ಸ್ನೇಹಿತೆಯರು, ಬಿಹಾರಿ ಬಾಬು ಮತ್ತವನ ಒಬ್ಬ ಪಾಪದ ಸ್ನೇಹಿತ ಸೇರಿಕೊಂಡು ಮಂಗಳೂರಿನಲ್ಲಿದ್ದ ಸ್ನೇಹಿತೆಯ ಮನೆಗೆ ಹೋದೆವು. ಮುಖತಃ ಮಾತಾಡಲೂ ಸಾಧ್ಯವಿರದಿದ್ದ ಊರಿನಿಂದ ದೂರ ಹೋಗಿ ಒಂದೆರಡು ದಿನ ಖುಷಿಯಾಗಿ ಕಾಲ ಕಳೆದು ಬರುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಆತಿಥ್ಯ ಮುಗ್ಧವಾಗಿತ್ತು, ಪ್ರಾಮಾಣಿಕವಾಗಿತ್ತು. ಯಾಕೆ ನೀವು ನೀವೆ ಬಂದಿದೀರ ಎಂದು ಸಹ ಕೊಂಕೆತ್ತಲಿಲ್ಲ.
ಮರಳಿ ಊರಿಗೆ ಬರುವ ಹೊತ್ತಿಗೆ ಗುಲ್ಲೋ ಗುಲ್ಲು! ಅದೇನೇನು ಕಲ್ಪಿಸಿಕೊಂಡಿದ್ದರೋ! ರಸ್ತೆಯಲ್ಲಿ ನಡೆಯಲೂ ಆಗದ ಸ್ಥಿತಿ. ಮಂಗಳೂರು ಯಾತ್ರೆ ಬಿಹಾರಿಬಾಬು ಎಂಥ ಪರಮ ಪುಕ್ಕಲ ಎನ್ನುವುದನ್ನು ಸಾಬೀತುಪಡಿಸಿತ್ತು . ಪುಣ್ಯಕ್ಕೆ ಅಷ್ಟೊತ್ತಿಗೆ ಕೊನೆ ವರ್ಷದ ಪರೀಕ್ಷೆಗಳು ಮುಗಿದವು. ರಿಸಲ್ಟ್ ಮಾತ್ರ ಘೋರವಾಗಿತ್ತು. ಅಪ್ಪರಾಣೆ ಯಾರೂ ನನಗೆ ಫಿಸಿಕ್ಸ್ ಎಂಎಸ್ಸಿಗೆ ಸೀಟು ಕೊಡುವ ಹಾಗಿರಲಿಲ್ಲ. ಬಿಹಾರಿಬಾಬು ಪ್ರಕರಣ ಮತ್ತು ಆ ಸಣ್ಣ ಊರಿನ ಸಣ್ಣತನ ನನಗೆ ಯಶವಂತ ಚಿತ್ತಾಲರ ‘ಮೂರು ದಾರಿಗಳು’ ಕಾದಂಬರಿಯನ್ನು ನೆನಪಿಸಿದ್ದವು.
ನಾನು ಇಂಗ್ಲಿಷ್ ಎಂ ಎ ಮಾಡುತ್ತಿದ್ದ ಮೊದಲ ವರ್ಷದಲ್ಲಿ ಕನ್ನಡನಾಡಿಗೆ ಮರಳಿ ಬಾರದಂತೆ ತೆರಳಲು ಈ ಬಾಬು ರಾಜಧಾನಿಗೆ ಬಂದ. ಜೊತೆಯಲ್ಲಿ ನಾನು ಬರೆದಿದ್ದ ಪತ್ರಗಳ ಕಟ್ಟನ್ನೂ ಹೊತ್ತು ತಂದಿದ್ದ. ಇದು ನನ್ನ ಬೈಬಲ್ ಗೊತ್ತಾ? ಇಂದು ಗದ್ಗದ ದನಿಯಲ್ಲಿ ಹೇಳಿದಾಗ ‘ಹೋಗಲೇ, ಪಾರಾಯಣ ಮಾಡಿಕೊಂಡಿರು. ಅಷ್ಟು ಸಾಕು ನಿನ್ನ ಜನ್ಮಕ್ಕೆ’ ಎಂದು ಕನ್ನಡದಲ್ಲಿ ಗೊಣಗಿಕೊಂಡಿದ್ದೆ.
ಬೀಳ್ಕೊಡಲು ರೈಲು ನಿಲ್ದಾಣಕ್ಕೆ ಸಹ ಹೋಗಬೇಕೆನ್ನಿಸಲಿಲ್ಲ.
೪. ‘ಮೈ-ಮನಗಳ ಸುಳಿಯಲ್ಲಿ’
ಇಂಗ್ಲಿಷ್ ಎಂ ಎ ಮುಗಿಯಿತು. ಕೆಲಸವೂ ಸಿಕ್ಕಿತು. ಮನೆಯವರು ಕಾಣದ ಕೇಳದ ಅಪರಿಚಿತನಿಗೆ ಎಲ್ಲಿ ಕಟ್ಟಿಬಿಡುತ್ತಾರೋ ಎಂಬ ಪ್ರಚಂಡ ಭಯದಲ್ಲಿ ಅಪರಿಚಿತ ದೇವತೆಗಿಂತ ಪರಿಚಿತ ದೆವ್ವವೇ ವಾಸಿ ಎಂದುಕೊಂಡು ಆ ಎಂ ಟೆಕ್ ಮರಾಠಿ ಹುಡುಗ ಲೇಚಿ ಪೋತಾಮ ಎಂದು ಕೇಳಿದಾಗ ಹೂಂ ಎಂದುಬಿಟ್ಟೆ. ಮೂವರು ತಂಗಿಯರಿದ್ದು ಒಬ್ಬನೇ ಮಗನಾಗಿದ್ದ ಅವನಿಗೆ ಲೇಚಿ ಪೋಗುವ ಸ್ವಾತಂತ್ರ್ಯ ಇಲ್ಲ ಎಂದು ನಂತರ ಗೊತ್ತಾಯಿತು.
ಮದುವೆಯಾಗಲು ಕಾಯುತ್ತಿದ್ದ ದಿನಗಳಲ್ಲಿ ಭ್ರಮೆ ನಿಧಾನವಾಗಿ ಕರಗುತ್ತಿತ್ತು. ಈ ನನ್ನ ಮಗ ಮತ್ತು ನನ್ನ ನಡುವೆ ಇರುವ ಸಮಾನ ಆಸಕ್ತಿಗಳಾದರೂ ಏನು ಎಂದು ಉತ್ತರವೇ ಇಲ್ಲದ ಪ್ರಶ್ನೆಗಳಲ್ಲಿ ದಿನ ಕಳೆಯುತ್ತಿತ್ತು. ಹತ್ತಿರ ಬಂದರೂ ದೇಹ ಸ್ಪಂದಿಸದಿರುವಾಗ ಬದುಕೆಲ್ಲ ಸಿಕ್ಕಿ ಬಿದ್ದು ಏನು ಗತಿ ಎಂದು ಕಳವಳಿಸಲು ಪ್ರಾರಂಭಿಸಿದ್ದೆ.
ಒಮ್ಮೆ ಸುಷ್ಮಾ ಸ್ವರಾಜಳ ಅವಳಿಯಂತೆ ಕಾಣಿಸುವ ಅವನ ಅಮ್ಮನನ್ನು ಭೇಟಿಯಾದೆ. ಡಿ ಎಚ್ ಲಾರೆನ್ಸನ ಸನ್ಸ್ ಅಂಡ್ ಲವರ್ಸ್ ಕಾದಂಬರಿ ನೆನಪಿಗೆ ಬಂತು. ಈಕೆ ಉಡದ ಹಿಡಿತದವಳು. ಮಗನನ್ನು ತನ್ನ ಮೂವರು ಹೆಹ್ಮಕ್ಕಳ ಯೋಗಕ್ಷೇಮದ ನೆಪದಲ್ಲಿ ಬದುಕಿನುದ್ದಕ್ಕೂ ಕಟ್ಟಿಹಾಕಬಲ್ಲ ಪ್ರಚಂಡೆ ಎನ್ನುವುದು ಅಂತರಾತ್ಮಕ್ಕೆ ಥಳಥಳನೆ ಹೊಳೆದಿತ್ತು.
ಅವನ ಕಡೆಯಿಂದ ಏನೇನೋ ಕಾರಣಗಳಿಗೆ ಮದುವೆ ಮುಂದೆ ಹೋದಾಗ ನನ್ನ ಸ್ವಾತಂತ್ರ್ಯದ ಹಾದಿ ಕಣ್ಣು ಹೊಡೆದು ಕರೆದಿತ್ತು.
*****
೫. ಕಿವಿನಾಡಿನಲ್ಲಿ ಒಬ್ಬ ಅಜಯ್ ದೇವಗನ್!
‘ತಥ್! ಆ ಅಜಯ್ ದೇವಗನ್ ಒಬ್ಬ ಸತ್ತ ಕಣ್ಣಿನವ. ಅದೇನಂತ ಇಷ್ಟಪಡುತ್ತೀಯೋ!’ ಎಂದು ಸ್ನೇಹಿತೆಯರು ಮೂಗು ಎಳೆದಿದ್ದರು. ನನಗೆ ಅವನ ಕಣ್ಣಿನ ಮೂಲೆಯಲ್ಲೆಲ್ಲೊ ವಿಷಾದದ ಎಳೆ ಕಂಡಿತ್ತು.
ಇವತ್ತಿಗೂ ವಿಷಾದ ಎನ್ನುವುದು ಒಂದು ಬಗೆಯ ಸೆಕ್ಸ್ ಅಪೀಲ್ ಅಂತ ನನ್ನ ಅಭಿಪ್ರಾಯ. ಇಪ್ಪತ್ತರ ಹರೆಯದ ಹೆಚ್ಚಿನಂಶ ಎಲ್ಲ ಗಂಡಸರು ನನ್ನ ಕಣ್ಣಿಗೆ ಅಪಾಪೋಲಿಗಳಂತೆ ಕಾಣಿಸುತ್ತಾರೆ. ಸ್ವಲ್ಪವಾದರೂ ಮಾಗಬೇಕು, ಅಲ್ಲಲ್ಲಿ ಬಿಳಿಕೂದಲು ಇಣುಕುತ್ತಿರಬೇಕು. ಬದುಕಿನ ಬಗ್ಗೆ ವಿಷಾದ ಕಣ್ಣಲ್ಲಿ ಮೂಡಬೇಕು.
ಹೀಗೇ ಏನೇನೊ ಹರಿಯ ತಲೆ ತಿಂದಿದ್ದೆ.
ಕಿವಿನಾಡಿಗೆ ಹೋದ ಒಂದು ವಾರದಲ್ಲಿ ಅಲ್ಲೊಂದು ಖಂಡಾಲಾ ಎನ್ನುವ ದೊಡ್ಡ ನೇಬರ್ ಹುಡ್ ಇದೆ ಅಂತ ಮ್ಯಾಪಿನಲ್ಲಿ ನೋಡಿ ಹೆಸರಿನ ಮೋಹಕ್ಕೂ ಏನೊ ಅಲ್ಲೇ ಒಂದು ಮನೆ ಬಾಡಿಗೆಗೆ ಹಿಡಿದಿದ್ದೆವು. ಸುತ್ತ ಇದ್ದಬದ್ದ ಹೆಸರುಗಳೆಲ್ಲ ಭಾರತೀಯವೇ! ಲಕ್ಷ್ಮಿ ಪ್ಲೇಸ್, ಸರಸ್ವತಿ ಪ್ಲೇಸ್, ಮದ್ರಾಸ್ ರೋಡ್, ಮೈಸೂರ್ ರೋಡ್, ಗವಾಸ್ಕರ್ ಪ್ಲೇಸ್, … ಹೀಗೇ! ಆ ಖಂಡಾಲಾ ನಕ್ಷೆಯನ್ನು ಸಿದ್ಧಪಡಿಸಿ ಅಭಿವೃದ್ಧಿ ಮಾಡಿದ್ದವ ಒಬ್ಬ ಇಂಡಿಯಾದಲ್ಲಿ ಹಲವಾರು ವರ್ಷಗಳ ಮಟ್ಟಿಗೆ ಇದ್ದ ಆರ್ಮಿ ಆಫೀಸರ್ ಅಂತೆ!
ಹರಿ ರೈಲಿನಲ್ಲಿ ಆಫೀಸಿಗೆ ಹೋಗುತ್ತಿದ್ದ. ನಾನು ನಂತರದ ರೈಲಿನಲ್ಲಿ ಬುತ್ತಿ ಒಯ್ದು ಅವನ ಜೊತೆ ಊಟ ಮಾಡಿ, ನಂತರ ಲೈಬ್ರರಿಯಲ್ಲಿ ಸಾಕಷ್ಟು ಹೊತ್ತು ಕಳೆದು ಸುಮಾರು ನಾಲ್ಕೂವರೆಯ ಹೊತ್ತಿನ ರೈಲು ಹಿಡಿದು ಮನೆಗೆ ಬರುತ್ತಿದ್ದೆ. ಅವನು ಹಿಂತಿರುಗಿ ಬರುವ ಹೊತ್ತಿಗೆ ಬಿಸಿಬಿಸಿ ಅಡಿಗೆ ಮಾಡಿದ್ದರೆ ಇಬ್ಬರೂ ಚಳಿಗೆ ತತ್ತರಿಸುತ್ತಾ ಬೆಚ್ಚಗೆ ಊಟ ಮಾಡಬಹುದಿತ್ತು.
ಒಮ್ಮೆ ರೈಲಿನಲ್ಲಿ ಟಿಕೆಟ್ ಚೆಕ್ ಮಾಡಲು ಬರುತ್ತಿದ್ದವ ನನ್ನ ಕಣ್ಣಿಗೆ ಬಿದ್ದ! ಫಿಜಿ ಇಂಡಿಯನ್! ಅರೆ! ಸ್ವಲ್ಪ ಅಜಯ್ ದೇವಗನ್ ತರ ಇದಾನಲ್ಲ ಅಂತ ಹೊರಳಿ ನೋಡಿದ್ದೆ. ಆ ಹೊತ್ತಿಗೆ ಸರಿಯಾಗಿ ಅವನೂ ತಿರುಗಿ ನೋಡಿದ್ದ. ವಾರೆವ್ಹಾ! ಇದೊಂದು ‘ಮೌನರಾಗಂ’ ಅಂತನ್ನಿಸಿ ನಗು ಬಂದಿತ್ತು.
ಮಾತಿಲ್ಲ ಕತೆಯಿಲ್ಲ, ಆದರೂ ನೋಡಿದಾಗೆಲ್ಲ ಮುಖದಲ್ಲಿ ಒಂದು ನಗು! ನಾನು ಇಳಿಯುವ ಶಿಮ್ಲಾ ಕ್ರೆಸೆಂಟ್ ನಿಲ್ದಾಣದಲ್ಲಿ ಪ್ಲಾಟ್ ಫಾರಮ್ಮಿನ ಮೇಲೆ ನಿಂತು ನಾನಿರುವ ಬೋಗಿಯ ಕಡೆ ನೋಡುತ್ತಿದ್ದ.
ಸಿಕ್ಕಿಬಿದ್ದೆ ಮಗನೇ ಎಂದು ಒಳಗೊಳಗೆ ನಕ್ಕಿದ್ದೆ.
ಹರಿಯ ಹತ್ತಿರ ಇದೆಲ್ಲವನ್ನೂ ಹೇಳಿಬಿಟ್ಟೆನೆ! ಸ್ವಲ್ಪ ದಿನದಲ್ಲೇ ನಾನು ಹೋಗುವ ರೈಲಿಗೇ ಹರಿಯೂ ಬಂದ. ಅಯ್ಯಯ್ಯೋ, ಯಾಕೋ ಬೇಗನೇ ಬಂದೆ? ಎಂದು ಕೇಳಿದ್ದಕ್ಕೆ ಕಳ್ಳ ನಗು ನಕ್ಕಿದ್ದ.
ಸರಿ, ನೀನು ಇನ್ನೊಂದು ಬೋಗಿಗೆ ಹೋಗು, ಇಲ್ಲದಿದ್ದರೆ ಅಜಯ್ ದೇವಗನ್ ಇವತ್ತು ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ಬೇಡಿಕೊಂಡೆ. ‘ಏನೂ ಇಲ್ಲ, ಹೆಂಡತಿ ಜೊತೆ ಪಾರ್ಟಿ ಮಾಡಲು ಹೋಗುತ್ತಾನೆ, ನೋಡುತ್ತಿರು,’ ಎಂದು ರೇಗಿಸುತ್ತಲೇ ಇನ್ನೊಂದು ಬೋಗಿಗೆ ಹೋದ.
ಕಣ್ಣೂ ಕಣ್ಣೂ ಕಲೆತಾಗ… ಸುಸೂತ್ರವಾಗಿ ನಡೆದು ಶಿಮ್ಲಾ ಕ್ರೆಸೆಂಟ್ ಬಂದಾಗ ಬಾಗಿಲಿನಿಂದ ಪ್ಲಾಟ್ ಫಾರಮ್ಮಿಗೆ ಹಾರಿದರೆ ಎದುರಿಗೆ ಹರಿ! ಅಜಯ್ ದೇವಗನ್ ಹೊಟ್ಟೆಗೆ ಬೆಂಕಿ ಬಿದ್ದು ಉರಿದು ಹೋಗುವ ಹಾಗೆ ನನ್ನ ಸೊಂಟದ ಸುತ್ತ ಕೈ ಹಾಕಿ ಅಂಟಿಕೊಂಡಂತೆ ನಡೆದಾಗ ಬೆನ್ನನ್ನು ಚುಚ್ಚುತ್ತಿದ್ದ ಕಣ್ಣುಗಳ ಅರಿವಾಗಿತ್ತು.
ಮರು ದಿನ ಟಿಕೆಟ್ ಚೆಕ್ ಮಾಡುತ್ತಿರುವಾಗ ಅವನ ಮುಖವನ್ನೇ ದಿಟ್ಟಿಸಿ ನೋಡಿದೆ. ಮುಗುಳು ನಕ್ಕ. ಅಲ್ಲಿ ಸಮಾಧಾನವಿದ್ದಂತೆ ಅನ್ನಿಸಿತು. ಅರೆ, ಹರಿಗೆ ಇದು ಗೊತ್ತಿತ್ತೇ?
‘ಅದರಲ್ಲೇನು ಮಹಾ ಗಹನವಾದದ್ದು? ಇಬ್ಬರಿಗೂ ಮದುವೆಯಾಗಿದ್ದರೆ ಸುಲಭ, ನಿರೀಕ್ಷೆಗಳು ಇರೊಲ್ಲ, ರೈಲಿನಲ್ಲಿ ಕಣ್ಣಲ್ಲೇ ಫ್ಲರ್ಟ್ ಮಾಡಿ ಮನೆಗೆ ಹೋಗಿ ಹೆಂಡತಿಯ ಜೊತೆ ಮುದ್ದುಮುದ್ದಾಗಿ ಇರಬಹುದು. ಈ ಇಂಡಿಯನ್ ಗಂಡಸರು ಯಾವುದಕ್ಕೂ ರಿಸ್ಕ್ ತಗೊಳಲ್ಲ ಅಂತ ನಂಗೊತ್ತಿಲ್ಲವಾ?’ ಅಂತ ಹರಿ ಉಡಾಫೆಯಿಂದ ನಕ್ಕಾಗ ಅರೆ, ನನಗಿಂತ ಚಿಕ್ಕವನಾ ಇವನು ಎಂದು ಅಚ್ಚರಿಯಿಂದ ನೋಡಿದ್ದೆ.

‘ನಾನು ನಿನಗೆ ರಿಸ್ಕಾ ಮಗನೇ?’
‘yes, but you are a worth-it Risk!’
‘ಮತ್ತೆ ನೀನು, ನನಗೆ?’
‘I am a pain in your neck!’
ಇಬ್ಬರೂ ಹಹಹಾ ಎಂದು ನಕ್ಕಾಗ ಪಕ್ಕದಲ್ಲಿ ಕಾಫಿ ಹೀರುತ್ತಿದ್ದ ಕಿವಿಮಂದಿ ತಿರುಗಿ ನೋಡಿದ್ದರು!

