“ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಸರ್ವೇಯರ್ ಜನರಲ್ ಆಗಿದ್ದ ಕರ್ನಲ್ ಕಾಲಿನ್ ಮೆಕೆಂಜಿ ಎಂಬಾತ ದಕ್ಷಿಣ ಭಾರತದ ಎಲ್ಲೆಡೆ ಸಂಚರಿಸಿ ಇಲ್ಲಿನ ಸಾವಿರಾರು ಶಾಸನಗಳನ್ನು, ನಾಣ್ಯಗಳನ್ನು ಹಾಗೂ ಮೂರ್ತಿಗಳನ್ನು ಸಂಗ್ರಹಿಸಿದ್ದ. ಸ್ಥಳೀಯ ಐತಿಹ್ಯಗಳನ್ನು ಅಲ್ಲಲ್ಲಿನ ಹಿರಿಯರಿಂದ ಕೇಳಿ ದಾಖಲು ಮಾಡಿಕೊಂಡ ಬರಹ ರೂಪದ ಹೇಳಿಕೆಗಳೇ ಕೈಫಿಯತ್ತುಗಳು. ಈ ರೀತಿ ದಾಖಲು ಮಾಡಿಕೊಳ್ಳಲು ಮೆಕೆಂಜಿ ಕೆಲವು ಬ್ರಾಹ್ಮಣ ವಿದ್ವಾಂಸರನ್ನು ನೇಮಿಸಿಕೊಂಡಿದ್ದ.”
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳುಸರಣಿಯ ಎರಡನೆಯ ಕಥೆ ಈ ಭಾನುವಾರದ ನಿಮ್ಮ ಓದಿಗಾಗಿ.


ಬೇಕಲ ರಾಮ ನಾಯಕರ ‘ಬಾಳಿದ ಹೆಸರು’ ಐತಿಹ್ಯ ಕತೆಯಲ್ಲಿ ಬರುವ ಘಟನೆಯು ಮೂಡುಬಿದ್ರಿ ಚೌಟ ಅರಸರ ಕೈಫಿಯತ್ತಿನಲ್ಲಿ ಹೀಗೆ ದಾಖಲಾಗಿದೆ.

ಸ್ವಸ್ತಿ ಶ್ರೀ ಜಿಯಾಭ್ಯುದಯ ಶಾಲಿವಾಹನ ಶಕವರುಷ 1082 ನೆಯ ವಿಕ್ರಮ ಸಂವತ್ಸರದ…
6. (ಯಿವರ ಮಗ) ಬೊಜರಾಯ ಚೌಟರು ಶಕವರುಷ 1238 ನೇಯ ನಳ ಸಂವತ್ಸರದ ಕಾರ್ತೀಕ ಶು|| 15 ಆರಭ್ಯ ಆಳಿದರು. ಆಳುತಿರಲಾಗಿ ಇವರು ರಾಯರು ಎಂಬ ಹೆಸರುಯಿಟ್ಟುಕೊಂಡು ಅರಸ್ತನ ಮಾಡುತ್ತಾರೆಂಬ ವರ್ತಮಾನವು ವಿಜಯನಗರದಲ್ಲು ಅಚ್ಚುತ ಕೃಷ್ಣರಾಯರು ತಿಳಿದು ಇವರನ್ನ ತಮ್ಮ ಬಳಿಗೆ ಬರುವಂತೆ ನಿರೂಪ ಅಪ್ಪಣೆ ಕೊಟ್ಟು ಜಿಲ್ಲೇನ ಹರಕಾರ ಕಳುಹಿಸಿಕೊಟ್ಟು ಕರಶಿದಲ್ಲಿ ಅರಮನೆಯಲ್ಲು ಇವರ ತಮ್ಮ ಲಕ್ಷ್ಮಿ ಅರಸರ ನಿಟ್ಟು ಸಂಗಡಾ ಕರಕೊಂಡು ಜನರ ಪ್ರಧಾನಿ ನಾರಣಪ್ಪಯ ಜನ 1 ಕಳವಳಿಗೆ ನಾರಣ ಶ್ಯಾನಭೋಗ ಜನ 1 ರಾಯಸ್ತದ ಕಾಶಿ ಪತೃ ಜನ 1 ಅವಸರದ ಸುಬ್ಬರಾಯ ಜನ 1 ನಾಯಕವಾಡಿಗಳು ಪದಮ ನಾಯಕ ಜನ 1 ಕೊಟಿ ನಾಯಕ ಜನ 1 ಅಂತು ಇಷ್ಟು ಮಂದಿ ಮುಖ್ಯ ಜನರು ಊಳಿಗದವರು ಜ 40 ಆಯುಧಪಾಣಿ ಜನಗಳಾಗಿ ಹೊರಟು ಶ್ರೀ ಸೋಮನಾಥ ಸ್ವಾಮಿ ದರುಶನ ಮಾಡಿಕೊಂಡು ಹೊರಟು ವಿಜಯನಗರಕ್ಕೆ ಹೋಗಿ ಒಂದು ಬಿಡಾರವನ್ನು ಮಾಡಿಕೊಂಡು ಆರು ತಿಂಗಳು ಪರಿಯಂತ್ರ ಕಾದುಕೊಂಡು ಇರುತ್ತ ರಾಯರ ದರುಶನವು ಆಗದೆ ಬಹಳ ಚಿಂತೆಯಿಂದ ಒಂದಾನೊಂದು ದಿನ ರಾತ್ರೆ ಮಲಗಿ ನಿದ್ರೆಗೈವ ವೇಳ್ಯೆಯಲ್ಲು ಸ್ವಪ್ನದಲ್ಲು ಒಬ್ಬ ಬ್ರಹ್ಮಚಾರಿ ಹುಡುಗನು ಬಂದು ನಾನು ರಾಯರ ಭೇಟಿ ಮಾಡಿಸಿಕೊಡುತ್ತೇನೆ ನಿನ್ನ ಬಿಡಾರದ ಸಮೀಪದ ವಟವೃಕ್ಷದ ಬುಡದಲ್ಲಿ ಒಂದು ದೇವತ ಬಿಂಬ ಇದೆ. ಅದನ್ನು ನಿನ್ನ ಊರಿಗೆ ಕೊಂಡುಹೋಗಿ ದೇವಸ್ಥಾನ ಕಟ್ಟಿಸಿ ಪೂಜೆ ಮಾಡೀಯ ಅಂತ ಕೇಳುವಾಗ್ಯೆ ಆದೀತು ಅಂತ ಹೇಳಿದಲ್ಲಿ ಹಾಗೆ ಎಚ್ಚರಿಕೆ ಆಗಿ ಎದ್ದು ಬೆಳಗಾದ ಬಳಿಕ ತಮ್ಮ ಕಡೆ ಸಮಾಜಿಗರ ಕೈಯ್ಯಲ್ಲಿ ಹೇಳಿ ಅವರನ್ನು ಕರಕೊಂಡು ಆ ಮರದ ಬುಡಕ್ಕೆ ಹೋಗಿ ನೋಡುವಾಗ್ಯೆ ಒಂದು ಶಿಲಾಮೂರ್ತಿಯು ಇದ್ದಲ್ಲಿ ಅದನ್ನು ತಂದು ಬಿಡಾರದಲ್ಲಿ ಇಟ್ಟುಕೊಂಡು ಬ್ರಹ್ಮಚಾರಿಯು ಸ್ವಪ್ನದಲ್ಲಿ ಬಂದು ಹೇಳಿದ ಕಾರಣ ಸುಬ್ಬರಾಯ ದೇವರೆ ಅಂತ ನಿಶ್ಚೈಸಿ ಪ್ರಾರ್ಥನೆಯನ್ನು ಮಾಡಿದ ತರುವಾಯ ಮೂರನೆ ದಿವಸದಲ್ಲಿ ರಾಯರಿಗೆ ಗ್ಯಾಪಕ ಬಂದು ಚೌಟರಸ ಅವರ ಸಾಮಾಜಿಕರ ಸಹಾ ವಡ್ಡೋಲಗದಲ್ಲಿ ಕರೆಸಿಯಂತ ಅಪ್ಪಣೆಯಾಗಿ ಇವರನ್ನ ಕರಕೊಂಡು ಹೋಗಿ ರಾಯರ ಸನ್ನಿಧಾನದ ಆಸ್ಥಾನದಲ್ಲಿ ರಾಯರ ಭೇಟಿ ಆದಲ್ಲಿ ನೀವು ರಾಜ್ಯವನ್ನು ಅನುಭವಿಸಿಕೊಂಡು ನಮಗೆ ಕಪ್ಪವನ್ನು ಕೊಡದೆ ರಾಯರು ಅಂತ ಹೆಸರುಯಿಟ್ಟುಕೊಂಡು ಈ ಮೇರೇಗೆ ಮದಯುಕ್ತರಾಗಿ ನಡೆವ ಕಾರಣವೇನು ಅಂತ ಭೊಜರಾಯ ಚೌಟರ ಕೈಯ ಪರಾಂಬರಿಸಿ ಇವರ ಕಡೆ ಸಾಮಾಜಿಕರ ಮುಖವನ್ನು ನೋಡಿ ಈ ವಿದ್ಯಮಾನ ಏನು ಅಂತ ಅಪ್ಪಣೆ ಆದಲ್ಲಿ ಆಗ್ಯೆ ಕವಳಿಗೆ ನಾರಣ ಶ್ಯಾನುಭಾಗನು ಅರಿಕೆ ಮಾಡಿಕೊಂಡ ವಿವರ ಈ ಚೌಟರ ತಾಯಿಗೆ ಗಂಡು ಮಕ್ಕಳು ಹುಟ್ಟದೆಯಿದ್ದ ಕಾರಣ ಮಗ ಹುಟ್ಟಿದರೆ ರಾಯರ ಹೆಸರು ಇಟ್ಟೆನೆಂತ ಹೇಳಿ ತಮ್ಮ ಚರಣವನ್ನು ಮನದಲ್ಲಿ ಧ್ಯಾನಿಸಿ ಪ್ರಾರ್ಥನೆ ಮಾಡಿಕೊಂಡದರಿಂದ ಈ ಗಂಡು ಕುಮಾರ ಜನಿಸಿದ್ದರಿಂದ ಇವರಿಗೆ ದೇವರ ಪಾದ ಹೆಸರನ್ನಿಟ್ಟಿದ್ದಾರೆ.

ಮಗನ ಸಂರಕ್ಷಣವೇನಿದ್ದರೂ ದೇವರ ಪಾದಕ್ಕೆ ಕೂಡಿದೆಯಂತ ಅರಿಕೆ ಮಾಡಿದಲ್ಲಿ ಆ ಮಾತನ್ನು ರಾಯರು ಚಿತ್ತಕ್ಕೆ ತಂದು ಕಾಲಗಳಿಗೆ ಪರಿಯಂತ್ರ ಭೊಜರಾಜ ಚೌಟರ ಮುಖವನ್ನು ನೋಡಿ ಆ ಬಳಿಕಾ ನಮಗೆ ಹರಿಕೆ ಹೇಳಿಕೊಂಡು ಹುಟ್ಟಿದ ಮಗನಾದ ಮೇಲೆ ನಮ್ಮಲ್ಲಿ ನಿಮಗೆ ದೇವತಾಭಾವನೆ ಉಂಟಾಯಿತು. ಅದರಿಂದ ಈ ಭೊಜರಾಯನು ನಮಗೆ ಮಗನೆ ಸರಿಯಂತ ಅತ್ತರೆ ಕರದು ಕೂಡಿಸಿಕೊಂಡು ಅಪ್ಪಣೆ ಕೊಟ್ಟ ವಿವರ ನೀವು ಯಾರ ವಂಶಸ್ಥರು ನಿಮ್ಮ ಕುಲದೇವರು ಯಾವ ದೇವರು ಅಂತ ಪರಾಂಬರಿಸಿದಲ್ಲಿ ನಾವು ಸೋಮಾನ್ವಯ ಭೂಪಾಲ ಜನಿತ ಜೈನಕ್ಷೇತ್ರೆಯ ವಂಶದವರು.

ಈ ಮೇರೇಗೆ ಮದಯುಕ್ತರಾಗಿ ನಡೆವ ಕಾರಣವೇನು ಅಂತ ಭೊಜರಾಯ ಚೌಟರ ಕೈಯ ಪರಾಂಬರಿಸಿ ಇವರ ಕಡೆ ಸಾಮಾಜಿಕರ ಮುಖವನ್ನು ನೋಡಿ ಈ ವಿದ್ಯಮಾನ ಏನು ಅಂತ ಅಪ್ಪಣೆ ಆದಲ್ಲಿ ಆಗ್ಯೆ ಕವಳಿಗೆ ನಾರಣ ಶ್ಯಾನುಭಾಗನು ಅರಿಕೆ ಮಾಡಿಕೊಂಡ ವಿವರ ಈ ಚೌಟರ ತಾಯಿಗೆ ಗಂಡು ಮಕ್ಕಳು ಹುಟ್ಟದೆಯಿದ್ದ ಕಾರಣ ಮಗ ಹುಟ್ಟಿದರೆ ರಾಯರ ಹೆಸರು ಇಟ್ಟೆನೆಂತ ಹೇಳಿ ತಮ್ಮ ಚರಣವನ್ನು ಮನದಲ್ಲಿ ಧ್ಯಾನಿಸಿ ಪ್ರಾರ್ಥನೆ ಮಾಡಿಕೊಂಡದರಿಂದ ಈ ಗಂಡು ಕುಮಾರ ಜನಿಸಿದ್ದರಿಂದ ಇವರಿಗೆ ದೇವರ ಪಾದ ಹೆಸರನ್ನಿಟ್ಟಿದ್ದಾರೆ.

ನಮ್ಮ ಕುಲಸ್ವಾಮಿಯು ನೇತ್ರಾವತಿ ನದಿಯ ಪಶ್ಚಿಮ ಸಮುದ್ರ ಸಂಗಮಸ್ಥಳಕ್ಕೆ ಸಮೀಪವಾದ ಸಮುದ್ರ ತೀರದಲ್ಲಿ ಇರುವ ರುದ್ರಪಾದ ಕ್ಷೇತ್ರವಾದ ಉಳ್ಳಾಲದ ಮಾಗಣೆ ಸೋಮೇಶ್ವರದ ಶ್ರೀ ಸೋಮನಾಥ ಸ್ವಾಮಿಯೆ ನಮ್ಮ ಕುಲದೇವರು ಆ ಸ್ವಾಮಿ ಅನುಗ್ರಹದಿಂದ ನಮ್ಮ  ಹಿರೇರಿಗೆ ಈ ರಾಜ್ಯ ಪ್ರಾಪ್ತಿ ಆದಂತಾದ್ದು ಎಂಬ ವೃತ್ತಾಂತ ಯಾವೊತ್ತು ಅರಿಕೆ ಮಾಡಿದಲ್ಲಿ ಪರಾಂಬರಿಸಿ ಸಂತೋಷಪಟ್ಟು ವೀಳ್ಯವನ್ನು ತರಿಸಿಕೊಟ್ಟು ಈಗ ಬಿಡದಿಗೆ ಹೋಗಿ ನಾಡದು ನಿಮ್ಮ ಸಾಮಾಜಿಕರನ್ನು ಕರಕೊಂಡು ಬನ್ನಿಯಂತ ಅಪ್ಪಣೆ ಕೊಟ್ಟಲ್ಲಿ ಅದೆ ಪ್ರಕಾರ ಬಿಡಾರಕ್ಕೆ ಬಂದು ಮರುದಿವಸ ವಿರೂಪಾಕ್ಷ ದೇವರ ದರುಶನವನ್ನು ಮಾಡಿಕೊಂಡು ಆ ಮರುದಿವಸ ರಾಯರ ಆಸ್ಥಾನದಲ್ಲಿ  ಕುಳಿತಿರುವ ಸಮಯದಲ್ಲಿ ಹೋಗಿ ದರುಶನವನ್ನು ಮಾಡಿ ಕುಳಿತಿರುವಾಗ್ಯೆ ಪರಂಬರಿಸಿ ನಿಮ್ಮ ಊರಿಗೆ ನೀವು ಹೋಗಿ ನಿಮ್ಮ ಸೀಮೆ ನೀವು ಅನುಭವಿಸಿಕೊಂಡು ದೇವತಾ ಧರ್ಮ ಅಗ್ರಹಾರ ಬ್ರಹ್ಮದಾಯ ಮುಂತಾದ ಧರ್ಮಂಗಳ ನಡಸಿಕೊಂಡು ರಾಜಧರ್ಮ ಪದ್ಧತಿ ಪ್ರಕಾರ ನಡಕೊಳ್ಳುತ್ತ ನಿಮ್ಮ ಸೀಮೆ ಪೂರ್ವ ಪ್ರಕಾರ ಉಂಬಳಿಯಾಗಿ ಅನುಭವಿಸಿಕೊಂಡು ನಿಮ್ಮ ವಂಶದಲ್ಲಿ  ಜನ್ನಿತರಾಗಿ ರಾಜ್ಯಭಾರ ಮಾಡುವಂತರಿಗೆ ರಾಯ ಶಬ್ಧ ಪೂರ್ವಕವಾಗಿ ನಾಮಕರಣವಿಟ್ಟು ಸುಖದಿಂದಾ ಧರ್ಮಯುಕ್ತರಾಗಿ ಅಪಯಶಸ್ಸು ಬಾರದಂತೆ ನಡೆಕೊಳ್ಳಿಯಂತ ಅಪ್ಪಣೆಯಾದಲ್ಲಿ ಆಗ್ಯೆ ದೇವರ ಸನ್ನಿಧಾನದಿಂದ ಏನಾದರುವೊಂದು ಧ್ವಜ ಚಿನ್ಹೆಗೆ ಅಪ್ಪಣೆ ಆಗಬೇಕಂತ ಅರಿಕೆಮಾಡಿಕೊಂಡಲ್ಲಿ ನೀವು ನಮ್ಮ ಮಗನೆ ಸರಿಯಂತ ಶಿರಸ್ಸಿನಲ್ಲಿ ಅಭಯ ಹಸ್ತವನ್ನು ಇಟ್ಟು ನಾವು ಹಿರಿಸುವಂಥಾ ಬಿರಿದು ಬಾವಲಿ ನೀವು ಹಿರಿಸಿಕೊಳ್ಳಲಿಯಂತ ಅಪ್ಪಣೆ ಆದ್ದರಿಂದ ಅಪ್ಪಣೆ ತೆಗೆದುಕೊಳ್ಲುವಾಗ್ಯೆ ಮುಂಡಾಸು ಹಚ್ಚಡ ಅಂಗಿ ಶಲ್ಯ ನಡುಕಟ್ಟು ಮುತ್ತಿನ ತುರಾಯಿ ಸರಪದಕ ಹಸ್ತಕಡಗ ಮುಂತಾಗಿ ಉಡುಗೊರೆ ದಯವಿಟ್ಟು ಆ ಬಳಿಕಾ ವಾಹನಯೇನದೆಯಂತ ಪರಾಂಬರಿಶಿ ಪಾಲಕಿಯನ್ನು ದಯವಿಟ್ಟು ಕೊಟ್ಟು ಅಪ್ಪಣೆ ತೆಗೆದುಕೆುಂಡು ಹೊರಡುವಾಗ್ಯೆ ಹಿಡಿಸಿಕೊಂಡು ಬಂದಂತಾ ಬಿರುದು ಬಾವಲಿ ಕುಳಿತುಕೊಂಬಂತಾ ಹಸರು ಸದರು ಹಸರು ಅಲಂಕೃತವಾದ ಪಲಿಕ್ಕೆ ಒಂದು  ಹಸರು ಬಸವನಟ್ಟೀಕೆ ನಿಶಾನಿ ಒಂದು ಹಸರು ಲ್‍ಲ್‍ಖ್ಯ ಎರಡು ಹಸರು ಜಾಲಹತ್ತಿಗೆ ಎರಡು ಹಾಶಸು ರುಮಾಲು ಎರಡು ಹಸರು ಬೀಸಣಿಗೆ ಎರಡು ಹಸರು ಚಉರಿ ಎರಡು ಗಗ್ಗರದಯೀಟ್ಟಿ ಯರಡು ಒಂಟಿಕಶೆ ಇಟ್ಟ 2 ಜಾಡಿ ಹರಗೆ ಎರಡು ಹೊದೆಯದ ಕತ್ತಿ ಹಾಶಸು ರುಮಾಲು ಹಾಕುವವರ ಕೈಯ ಬಗಲಲ್ಲು ಇರುವ ಕತ್ತಿ ಎರಡು ಒಳಗನ ಉಳಿಗದವರ ಕೈಯ ಹಿಟನ ಹುಚಿರ ಕತ್ತಿ ಎರಡು ಉಭಯಂ ಕತ್ತಿ ನಾಲ್ಕು ಬೆಳ್ಲಿ ಕಟ್ಟಿದ ಬೆತ್ತ ಎರಡು ನೆಗಳ ಬಾಯಿ ಸಗ್ಗಳೆ ಚಿಂನ್ನದ ಗಿಂಡಿವೊಂದು ಪಟ್ಟೆ ಎರಡು ರಣಗಾಳೆ ಎರಡು ವಂಟೆಮಾಲೆ ನಗಾರಿ ಎರಡು ಪಟ್ಟದ ಆನೆ ಒಂದು ಪಟ್ಟದ ಕುದಿರ ಎರಡು ಪಂಚ ದೀವಟಿಗೆ ಎರಡು ವಾದ್ಯ ಮೇಳ ಹಲಗೆ ಕೊಂಬು ಪಾಟಕ ಜನ 2 ಮುಂತಾದ ತೂರ್ಯ ಇಂತಿ ಸಂಭ್ರಮದಿಂದಾ ವಿಜಯನಗರದಿಂದಾ ಹೊರಟು ತಮ್ಮ ಸ್ಥಳಕ್ಕೆ ಬಂದರು. ಅಲ್ಲಿ ವಿಜಯನಗರದಿಂದ ಹೊರಡುವಾಗ್ಯೆ ಪಲ್ಲಕಿ ಬೊಯರು ತಮ್ಮ ಮಾರಿಯಮ್ಮ  ದೇವರಿಗೆ ಗುಡಿ ಕಟ್ಟಿಶಿ ಕೊಟ್ಟು ಉಂಬಳಿ ಉತ್ತರ ಬಿಟ್ಟು ಕೊಟ್ಟರೆ ಬಂದೇವು ಎಂತ ಹೇಳಿಕೊಂಡದರಿಂದ ಅದೇ ಪ್ರಕಾರ ಆಗಲಿಯಂತ ಹೇಳಿ ಸಂಗಡ ಬಂದ ಬಳಿಕ ಮೂಡಬರಿಯಲ್ಲು ಮಾರಿಯಮ್ಮನ ಗುಡಿ ಕಟ್ಟಿಸಿಕೊಟ್ಟು ಉಂಬಳಿಯನ್ನು ಬಿಟ್ಟುಕೊಟ್ಟರು.

ಇಂತಿ ಸಂಭ್ರದಿಂದಾ ವಿಜಯನಗರದಿಂದಾ ಹೊರಟು ತಮ್ಮ ಸ್ಥಳಕ್ಕೆ ಬಂದರು ಅಲ್ಲಿ ವಿಜಯನಗರದಿಂದ ಹೊರಡುವಾಗ್ಯೆ ಪಲ್ಲಕಿ ಬೊಯರು ತಮ್ಮ ಮಾರಿಯಮ್ಮ ದೇವರಿಗೆಗುಡಿ ಕಟ್ಟಿಶಿ ಕೊಟ್ಟು ಉಂಬಳಿ ಉತ್ತರ ಬಿಟ್ಟು ಕೊಟ್ಟರೆ ಬಂದೇವು ಯಂತ ಹೇಳಿಕೊಂಡದರಿಂದ ಅದೇ ಪ್ರಕಾರ ಆಗಲಿಯಂತ ಹೇಳಿ ಸಂಗಡ ಬಂದ ಬಳಿಕ ಮೂಡಬರಿಯಲ್ಲು ಮಾರಿಯಮ್ಮನ ಗುಡಿ ಕಟ್ಟಿಸಿಕೊಟ್ಟು ಉಂಬಳಿಯನ್ನು ಬಿಟ್ಟುಕೊಟ್ಟರು.

| ವಿ | ವಿಜಯನಗರದಲ್ಲು ಸ್ವಪ್ನಚೂಚಕವಾಗಿ ಬಂದ ಸುಬ್ಬರಾಯ ದೇವರ ಮೂರ್ತಿಯನ್ನು ಸಂಗಡಲೆ ಸಾಗಿಸಿಕೊಂಡು ಬಂದು ಕಡಂದಲೆ ಮಾಗಣೆಯಲ್ಲು ದೇವಸ್ಥಾನ ಕಟ್ಟಿಸಿ ಪ್ರತಿಷ್ಠೆ ಮಾಡಿಸಿ ಉಂಬಳಿ ಉತ್ತರ ಬಿಟ್ಟು ಪೂಜೆ ಪುರಸ್ಕಾರ ನಡೆಸುತ್ತ ಬಂದರು ಈ ಭೊಜರಾಯರು ಅತಿ ಸೌಂದರ್ಯ ಪುರುಷರು ಮಿತಭಾಷಿಗಳು ಮಿತ ಆಹಾರಗಳು ಮಧುರವಾದ ಆಹಾರಪ್ರಿಯರು ಸ್ವಸ್ತ್ರಿವ್ರತರು ದೇವತಾ ಭಕ್ತಿಪರರು ಸತ್ಕಥಾ ಶ್ರವಣಾಸತ್ಕರರು ಸತ್ಪಾತ್ರದಾನಿಗಳು ಪ್ರಚಾಪಾಲಕರ ಪಾಪಭೀತರು ಯಶೊವಂತರು ||
(ಮೂಲ : ಚಉಟ ಅರಸುಗಳ ಕೈಫಿಯತ್ತು (ಒ – 351. P 259-301)
ಇದರಿಂದ ಆಯ್ದ ಭಾಗ)

ಟಿಪ್ಪಣಿ:
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಸರ್ವೇಯರ್ ಜನರಲ್ ಆಗಿದ್ದ ಕರ್ನಲ್ ಕಾಲಿನ್ ಮೆಕೆಂಜಿ (1754 – 1821) ಎಂಬಾತ ದಕ್ಷಿಣ ಭಾರತದ ಎಲ್ಲೆಡೆ ಸಂಚರಿಸಿ ಇಲ್ಲಿನ ಸಾವಿರಾರು ಶಾಸನಗಳನ್ನು, ನಾಣ್ಯಗಳನ್ನು ಹಾಗೂ ಮೂರ್ತಿಗಳನ್ನು ಸಂಗ್ರಹಿಸಿದ್ದ. ಸ್ಥಳೀಯ ಐತಿಹ್ಯಗಳನ್ನು ಅಲ್ಲಲ್ಲಿನ ಹಿರಿಯರಿಂದ ಕೇಳಿ ದಾಖಲು ಮಾಡಿಕೊಂಡ ಬರಹ ರೂಪದ ಹೇಳಿಕೆಗಳೇ ಕೈಫಿಯತ್ತುಗಳು. ಈ ರೀತಿ ದಾಖಲು ಮಾಡಿಕೊಳ್ಳಲು ಮೆಕೆಂಜಿ ಕೆಲವು ಬ್ರಾಹ್ಮಣ ವಿದ್ವಾಂಸರನ್ನು ನೇಮಿಸಿಕೊಂಡಿದ್ದ. ಹಾಗಾಗಿ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿದ ಕೈಫಿಯತ್ತುಗಳ ಭಾಷೆಯಲ್ಲಿ ಏಕರೂಪತೆ ಇದೆ. ಈ ಕೈಫಿಯತ್ತಿನಲ್ಲಿ ಬರುವ ಸಂಗತಿ ಇತಿಹಾಸದಲ್ಲಿ ದಾಖಲಾಗಿರುವ ಸಂಗತಿಯೇ ಆಗಿದೆ.
ಇತಿಹಾಸದಲ್ಲಿ ಈ ಮಾಹಿತಿ ಹೀಗಿದೆ : 2 ನೆ ಭೋಜರಾಯ (1470 – 1510) ಬಲಿಷ್ಟ ರಾಜನಾಗಿದ್ದನು; ಇವನು ಕೃಷ್ಣ ದೇವರಾಯನನ್ನು ಭೇಟಿ ಮಾಡಿದನು. ಅವನು ಗೌರವಪೂರ್ವಕವಾಗಿ ಹಿಂದಿನ ಕಪ್ಪವನ್ನು ಮಾಫಿ ಬಿಟ್ಟು ಹೊಸ ಒಪ್ಪಂದ ಮಾಡಿಕೊಂಡು ಭೋಜರಾಯನನ್ನು ಬಿರುದು ಬಾವಲಿಗಳನ್ನು ಕೊಟ್ಟು ಗೌರವಪೂರ್ವಕವಾಗಿ ಕಳಿಸಿದನು. ಆಗ ಸುಬ್ರಾಯ ದೇವರ ವಿಗ್ರಹವನ್ನು ತಂದು ಕಡಂದಲೆಯಲ್ಲಿ ಸ್ಥಾಪಿಸಿದನು. ಬೋವಿ ಜನಾಂಗದವರಿಗೆ ಮೂಡಬಿದಿರೆಯಲ್ಲಿ ಮಾರಿಗುಡಿಯನ್ನು ಕಟ್ಟಿಸಿಕೊಟ್ಟನು. (ಡಾ. ಪೀಟರ್ ವಿಲ್ಸನ್ ಪ್ರಭಾಕರ್, ತುಳು ಕರ್ನಾಟಕದ ಅರಸು ಮನೆತನಗಳು. ಪ್ರಸಾರಾಂಗ, ಕನ್ನಡ ವಿ. ವಿ. ಹಂಪಿ. 2000).
ಈ ಅರಸರ ಹೆಸರುಗಳನ್ನು ರಾಮನಾಯಕರು ತಪ್ಪಾಗಿ ಉಲ್ಲೇಖಿಸಿದ್ದಾರೆ, ಅಲ್ಪ ಸ್ವಲ್ಪ ಬದಲಾವಣೆಗಳಿವೆ ಎನ್ನುವುದು ಬಿಟ್ಟರೆ ಈ ಕತೆಗೆ ಇತಿಹಾಸದ ಆಧಾರವಿದೆ ಎನ್ನುವುದು ಮುಖ್ಯ. ಐತಿಹ್ಯಗಳು ಹೀಗೆ ಬಾಯಿಯಿಂದ ಬಾಯಿಗೆ ಪ್ರಸಾರವಾಗುತ್ತ ಸುಮಾರು ನಾಲ್ಕುನೂರು ವರ್ಷಗಳ ನಂತರವೂ ಮೂಲದ ಆಶಯಕ್ಕೆ ಮತ್ತು ಕಥನದ ತಳಹದಿಗೆ ಧಕ್ಕೆಯಾಗದಂತೆ ಉಳಿದುಕೊಂಡು ಬಂದಿವೆ ಎನ್ನುವುದು ಐತಿಹ್ಯಗಳ ಮಹತ್ವವನ್ನು ಸೂಚಿಸುತ್ತದೆ. ಹೀಗೆ ಇತಿಹಾಸದ ಪ್ರಮುಖ ಘಟನೆಗಳು ಬಹುಶಃ ವೈಭವೀಕರಣಗೊಂಡು ಪ್ರಸಾರಗೊಳ್ಳುವ ರೀತಿ ಹೇಗೆ ಎನ್ನುವ ಬಗ್ಗೆ ಅಧ್ಯಯನವಾದಂತಿಲ್ಲ. ತುಳುನಾಡಿನ ದಕ್ಷಿಣ ತುದಿಯಲ್ಲಿದ್ದ ಬೇಕಲ ರಾಮನಾಯಕರು ಈ ಐತಿಹ್ಯವನ್ನು ಹೇಗೆ ಸಂಗ್ರಹಿಸಿದರೆನ್ನುವುದು ತಿಳಿಯದು. ಆದರೆ ಚೌಟ ರಾಜ್ಯದ ಒಂದು ಗಡಿಯಾಗಿದ್ದ ಕಾರ್ಕಳ ತಾಲೂಕಿನ ಮುಂಡ್ಕೂರು (ಇದು ಕೈಫಿಯತ್ತಿನಲ್ಲಿ ಉಲ್ಲೇಖಗೊಂಡಿರುವ ಕಡಂದಲೆಗೆ ಸಮೀಪವಾಗಿರುವ ಊರು) ಗ್ರಾಮದ ಅಧ್ಯಯನಶೀಲ ಹಿರಿಯರೊಬ್ಬರು ಇದೇ ಕಥೆಯನ್ನು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ನನಗೆ ಹೇಳಿದ್ದುದು ಕುತೂಹಲದ ಸಂಗತಿ.
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರೂ, ಐತಿಹ್ಯಗಳನ್ನು ಕೇಳಿತಿಳಿಯುವುದರಲ್ಲಿ ಆಸಕ್ತರೂ ಆಗಿದ್ದ ದಿ. ಜಯರಾಮ ಆಚಾರ್ಯರು ಸುಮಾರು 25 ವರ್ಷಗಳ ಹಿಂದೆ ಈ ಕತೆಯನ್ನು ನನಗೆ ನಿರೂಪಿಸಿದ್ದರು. ಆಚಾರ್ಯರು ಕಾಂತಾಬಾರೆ ಬೂದಬಾರೆಯರಿಗೆ ಸಂಬಂಧಿಸಿದ ಐತಿಹ್ಯಗಳನ್ನು ಸಂಗ್ರಹಿಸಲು ಒಬ್ಬ ಪಾರ್ದನಗಾಯಕನನ್ನು ತಮ್ಮ ಊರಿಗೆ ಕರೆಯಿಸಿ, ಕೆಲವುದಿನಗಳ ಕಾಲ ಪಾರ್ದನವನ್ನು ಹಾಡಿಸಿ ಅವರ ಕಥೆಯನ್ನು ಸಂಗ್ರಹಿಸಿ ತಮ್ಮದೇ ಶೈಲಿಯಲ್ಲಿ ಬರೆದಿಟ್ಟಿದ್ದಾರೆ. ಇದೇ ರೀತಿ ಅವರು ಐತಿಹ್ಯಗಳನ್ನು ಸಂಗ್ರಹಿಸಿರಬಹುದು. ಅವರು ಚೌಟ ಅರಸರ ಕೈಫಿಯತ್ತನ್ನು ನೋಡಿರುವ ಸಾಧ್ಯತೆ ಇರಲಿಲ್ಲ. ಆಚಾರ್ಯರು ಹೇಳಿದ ಚೌಟರಸರಿಗೆ ಸಂಬಂಧಿಸಿದ ಐತಿಹ್ಯ ಬೇಕಲ ರಾಮನಾಯಕರ ಐತಿಹ್ಯ ಕಥೆಗಿಂತ ಹೇಗೆ ಭಿನ್ನ ಎನ್ನುವುದನ್ನು ನಾನೀಗ ನನ್ನ ಅಳಿದುಳಿದ ನೆನಪಿನಿಂದಲೇ ದಾಖಲಿಸಬೇಕಲ್ಲದೆ ಆಧಾರಸಹಿತವಾಗಿ ನಿರೂಪಿಸಲಾರೆ. ಆಚಾರ್ಯರು ಚೌಟರಸ ಮತ್ತು ಮಂತ್ರಿ ಇಬ್ಬರೂ ಬಂಧನದಲ್ಲಿದ್ದರು, ಮತ್ತು ಮಂತ್ರಿಯ ಹೆಸರು ನರಸಪ್ಪಯ್ಯ ಎಂದಾಗಿತ್ತು ಎಂದು ಹೇಳಿದ್ದರೆನ್ನುವುದು ನೆನಪು. ಹೀಗಾಗಿ ಆಚಾರ್ಯರ ನಿರೂಪಣೆ ಬೇಕಲ ರಾಮನಾಯಕರ ಐತಿಹ್ಯ ಕಥೆಯಂತೆಯೇ ಇತ್ತೆನ್ನಬಹುದು. ಬೇಕಲ ರಾಮನಾಯಕರು ಬರೆದಿರುವ ಕಥೆಯೇ ಆಚಾರ್ಯರಿಗೂ ಮೂಲವಾಗಿರುವ ಸಾಧ್ಯತೆಯೂ ಇದೆ.

(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)


(ಮುಂದಿನ ಕಂತಿನಲ್ಲಿ: ಬೇಕಲ ರಾಮನಾಯಕ ಬರೆದ ’ದೊಡ್ಡಮನೆ ಈಶ್ವರಯ್ಯ’ ಎಂಬ ಕಥೆ)