ಈ ಪುಟ್ಟ ವೀಡಿಯೋ ಎತ್ತುವ ಪ್ರಶ್ನೆಗಳು ಅಸೀಮ. ನಾವು ಎಂಥ ವ್ಯವಸ್ಥೆ ಮತ್ತು ಪರಿಸ್ಥಿತಿಯಲ್ಲಿ ಇದ್ದೇವೆ ಎಂದು ನೋವಾಗುತ್ತದೆ. ಆದರೆ ನೋಯುವುದಕ್ಕಿಂತ ಸಧ್ಯದ ಜರೂರತ್ತೆಂದರೆ ನಾವು ನಮ್ಮ ಹೆಣ್ಣುಮಕ್ಕಳ ಬ್ಯಾಗಿನಲ್ಲಿ ಕಸ್ಮೆಟಿಕ್ಸ್ ಗಳಿಗಿಂತಲೂ ಮುಖ್ಯವಾಗಿ ಒಂದು ಬ್ಲೇಡನ್ನೋ ಅಥವಾ ಪೆಪ್ಪರ್‌ ಸ್ಪ್ರೇಯನ್ನೋ ಇಟ್ಟುಕೊಳ್ಳುವ ಅಭ್ಯಾಸ ಮಾಡಿಸಬೇಕಿದೆ. ಮತ್ತದನ್ನು ಸರಿಯಾದ ಸಂದರ್ಭದಲ್ಲಿ ಸರಿಯಾಗಿ ಬಳಸುವುದನ್ನೂ ಕಲಿಸಬೇಕಿದೆ. ಯಾರೋ ಬಂದು ನಮ್ಮನ್ನು ಕಾಪಾಡುತ್ತಾರೆ ಎಂದು ಕಾಯುವ ಬದಲು, ನಮ್ಮನ್ನು ನಾವೇ ಕಾಪಾಡಿಕೊಳ್ಳುವುದು ಒಳಿತಲ್ಲವೇ…
ಆಶಾ ಜಗದೀಶ್‌ ಬರಹ ನಿಮ್ಮ ಓದಿಗೆ

ಬದುಕಿನ ಸುಂದರ ಕ್ಷಣಗಳು ಇನ್ನು ಇಲ್ಲವೇನೋ… ಮುಗಿದೇ ಹೋದವೇನೋ ಎನ್ನುವಲ್ಲಿಗೆ ಬಂದು ನಿಲ್ಲುವ ಹೊತ್ತಿಗೆ ಒಂದು ಅಭದ್ರತೆ, ಒಂದು ತೊಳಲಾಟ ಆವರಿಸುತ್ತದಲ್ಲ ಆ ಕ್ಷಣಗಳ ಆಧಾರಕ್ಕೆ ಯಾವ ಗೂಟ ತಂದು ನೆಡುವುದೋ ತಿಳಿಯುವುದಿಲ್ಲ. ಜಗತ್ತು ಕಾಲೆಳೆಯಲಿಕ್ಕೆಂದೇ ಇದೆ. ಯಾರೂ ಸಹ ಮತ್ತೊಬ್ಬರ ಏಳ್ಗೆಯನ್ನು ಕಂಡು ಸಹಜವಾಗಿ ಖುಷಿಪಡಲಾರರು. ಸಹಜವಾಗಿ ಎನ್ನುವುದನ್ನು ಒತ್ತು ನೀಡಿ ಹೇಳುತ್ತೇನೆ ಇಲ್ಲಿ. ಕಾರಣ ಪ್ರಕೃತಿಯಲ್ಲಿ ಎಲ್ಲವೂ ಸಹಜವಾಗಿಯೇ ನಡೆಯುತ್ತದೆ. ಮರಕ್ಕಿಂತ ಮರ, ಬೆಟ್ಟಕ್ಕಿಂತ ಬೆಟ್ಟ ದೊಡ್ಡದಿವೆ. ಆದರೆ ಅವುಗಳ ನಡುವೆ ದ್ವೇಷ, ಅಸೂಯೆ, ಹೊಟ್ಟೆಕಿಚ್ಚು ಇಲ್ಲ. ಆದರೆ ಮನುಷ್ಯನ ದೃಷ್ಟಿಯಿಂದ ಅದು ಸಹಜವಾಗಿ ವ್ಯಕ್ತವಾಗುವುದು ದುಸ್ತರ. ಮನುಷ್ಯನಿಗೆ ತನ್ನ ಹೊರತಾಗಿ ಯಾರೂ ಮುಖ್ಯರಲ್ಲ. ಪ್ರತಿಯೊಂದು ಉನ್ನತ ಸ್ಥಾನದಲ್ಲೂ ತನ್ನ ಹೊರತಾಗಿ ಅನ್ಯರನ್ನು ಕಲ್ಪಿಸಿಕೊಳ್ಳುವುದು ಅವನಿಂದ ಸಾಧ್ಯವೇ ಇಲ್ಲ.

ಒಂದು ವ್ಯವಸ್ಥೆ ಸಹಕಾರಿ ನಿಯಮದಡಿ ಸಂಘಟಿತ ರೂಪದಲ್ಲಿ ಕೆಲಸ ಮಾಡಿದಾಗ ಮಾತ್ರ ಅದರ ಗುರಿಯನ್ನು ಅದು ತಲುಪಲು ಸಾಧ್ಯವಾಗುತ್ತದೆ. ಬದಲಾಗಿ ಅದರ ಒಂದು ಕೊಂಡಿ ತನ್ನ ಉದ್ದೇಶ ಮರೆತರೂ ಸರಪಳಿ ತುಂಡಾಗುವುದರೊಂದಿಗೆ ವ್ಯವಸ್ಥೆಯೇ ಕುಸಿಯುತ್ತದೆ. ವ್ಯಸ್ಥೆಯ ಕುಸಿತ ಎಂದರೆ ಅಸ್ತಿತ್ವದ ಅವನತಿ ಅಲ್ಲವೇ. ಮನುಷ್ಯ ಮರೆಯುತ್ತಾನೆ. ಏನನ್ನು ಬೇಕಾದರೂ ಮರೆಯುತ್ತಾನೆ. ತನ್ನ ಕರ್ತವ್ಯ, ನ್ಯಾಯ, ನೀತಿ, ಧರ್ಮ, ಸರಿ, ತಪ್ಪು ಕೊನೆಗೆ ತನ್ನ ಮನಃಸಾಕ್ಷಿಯನ್ನೂ ಮರೆಯುತ್ತಾನೆ. ಆ ವಿಲಕ್ಷಣ ಶಕ್ತಿಯಿಂದಾಗಿಯೇ ಧೂರ್ತನೆನಿಸುತ್ತಾನೆ. ಇಂತಹ ಧೂರ್ತತೆ ಪ್ರಾಣಿಗಳಿಗೆಲ್ಲಿಂದ ಬರಬೇಕು. ಮನುಷ್ಯ ಪ್ರಾಣಿ ವರ್ಗದಲ್ಲಿದ್ದೂ ಪ್ರಾಣಿಗಳಂತಾಗದವನು.

ಮನುಷ್ಯ ತನ್ನ ಭಾವ ವಲಯದ ವ್ಯಾಪ್ತಿಯನ್ನು ತಾನೇ ಬೇಕಾಗಿ ಸೀಮಿತಗೊಳಿಸಿಕೊಳ್ಳುತ್ತಾನೆ. ಅದಕ್ಕೇ ನಾವು ಇಷ್ಟು ಬಗೆಯ ಜನರನ್ನು ಮಾತ್ರ ಕಾಣಬಹುದೆಂದು ಸುಲಭವಾಗಿ ಒಂದು ಅಧ್ಯಯನ ಮಾಡಿ ಗುರುತು ಹಾಕಿಟ್ಟುಕೊಳ್ಳಬಹುದೇನೋ. ಕಾರಣ ಅವನು ಆಯ್ದುಕೊಳ್ಳುವ ಮಾರ್ಗ. ಮನುಷ್ಯ ತನ್ನ ಹಾಗೆ ಇಡೀ ಮಾನವ ಜನಾಂಗದ ಅಭಿವೃದ್ಧಿಗೆ ಕಾರಣವಾಗಬಲ್ಲಂತಹ ಅದೆಷ್ಟೂ ಮಾರ್ಗಗಳು ಅನುಸರಿಸಲು ಇದ್ದರೂ ಅವ ಯಾಕೆ ದುಷ್ಟಬುದ್ಧಿಗಳನ್ನೇ ಆಯ್ದುಕೊಳ್ಳುತ್ತಾನೆ. ವಿಶ್ವವನ್ನು ತನ್ನ ತೆರೆದ ಬಾಹುಗಳಿಂದ ತಬ್ಬುವ ಬದಲು ತಾನೇ ಏಕೆ ಸಂಕುಚಿತಗೊಂಡು ಇಲ್ಲವಾಗುತ್ತಾನೆ?! ಎಲ್ಲವನ್ನೂ ಎಲ್ಲರನ್ನೂ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಅವನ ಸ್ವಾರ್ಥ ಎಲ್ಲವನ್ನೂ ನಾಶ ಮಾಡುತ್ತಿದೆ.

ಅಂತಹ ಕುಕೃತ್ಯಗಳಲ್ಲಿ ಹೆಣ್ಣುಮಕ್ಕಳ ಮೇಲಾಗುವ ದೌರ್ಜನ್ಯದ ಪರಮಾವಧಿ ಅತ್ಯಂತ ನೋವಿನ ಸಂಗತಿ. ಇದು ನಿಲ್ಲುವುದು ಯಾವಾಗ. ಯಾರು ಬೇಕಾದರೂ ಹೆಣ್ಣನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಬಹುದಾ?!ಎಲ್ಲಿದೆ ಸುರಕ್ಷತೆ? ಎಲ್ಲಿದೆ ನಿರ್ಭಯತೆ? ಕಾಯುವ ಬೇಲಿಯೇ ಕಾಡಲು ನಿಲ್ಲುತ್ತಿದೆಯಲ್ಲಾ…

ಮೊನ್ನೆ ಒಂದು ವಿಡೀಯೋ ನೋಡುತ್ತಿದ್ದೆ. ಒಬ್ಬ ಬಡ ಹೆಣ್ಣು ಮಗಳು ತನ್ನ ಪುಟ್ಟ ಮಗಳೊಂದಿಗೆ ಲಾರಿಯೊಂದರಲ್ಲಿ ಪ್ರಯಾಣಿಸುತ್ತಿರುತ್ತಾಳೆ. ಒಂದಷ್ಟು ಹೊತ್ತು ಕಳೆದ ಮೇಲೆ, ಲಾರಿಯ ಕ್ಲೀನರ್ ಆಕೆಯ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಲು ಶುರುಮಾಡುತ್ತಾನೆ. ಆಗ ತಾಯಿ ಅದನ್ನು ಪ್ರತಿರೋಧಿಸುತ್ತಾಳೆ. ಲಾರಿಯನ್ನು ನಿಲ್ಲಿಸಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಆದರೆ ಲಾರಿಯಲ್ಲಿದ್ದ ಡ್ರೈವರ್ ಮತ್ತೆ ಅವನ ಮತ್ತೊಬ್ಬ ಸಹಚರನೂ ಬಂದು ಇವನೊಂದಿಗೆ ಸೇರಿ ಆ ಮಹಿಳೆಯನ್ನು ಹೊಡೆದು ಆ ಹೆಣ್ಣುಮಗುವನ್ನು ಎಳೆದೊಯ್ಯಲು ಪ್ರಯತ್ನಿಸುತ್ತಾರೆ. ಆಗ ಅವ ಆ ತಾಯಿಗೆ ಹೇಳುವ ಮಾತೇನೆಂದರೆ, “ನೋಡು ಸುಮ್ಮನೇ ನಿಂತಿದ್ರೆ ಒಂದು ಗಂಟೆ ಕೆಲಸ, ನಂತರ ನಿನ್ ಮಗಳು ನಿನಗೆ ಸಿಗ್ತಾಳೆ, ಇಲ್ಲವಾದರೆ ಅವಳ ಹೆಣ ಸಹ ಸಿಗೋದಿಲ್ಲ” ಎಂದು. (ಒಂದು ಘಂಟೆಯ ಕೆಲಸವಂತೆ?! ಆನಂತರ ಆ ಹುಡುಗಿಯ ಪಾಡು?! ಅದು ತನ್ನ ಜೀವಿತಾವಧಿ ಮರಣಕ್ಕಿಂತಲೂ ತೀವ್ರವಾಗಿ ಅನುಭವಿಸುವ ಯಾತನೆ?! ಇಂತಹ ಕಟುಕರಿಗೆ ಭೂಮಿಯ ಮೇಲೆ ಬದುಕುವ ಯಾವ ಹಕ್ಕೂ ಇಲ್ಲ.) ಆಕೆಯ ಗಂಡ ಭಯಗೊಂಡು ಜನರನ್ನು ಕರೆತರುತ್ತೇನೆ ಎಂದು ಅಲ್ಲಿಂದ ಓಡಿಹೋಗುತ್ತಾನೆ. ಜನರು ಬರುವವರೆಗೂ ಕಾಯುವ ತಾಳ್ಮೆ ಆ ತಾಯಿಗಿಲ್ಲ. ಕಾರಣ ತನ್ನ ಮಗಳಿಗೆ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಭಯ. ಆಕೆ ಯಾರಿಗೂ ಗೊತ್ತಾಗದ ಹಾಗೆ ತನ್ನ ಪರ್ಸಿನಲ್ಲಿ ಇಟ್ಟುಕೊಂಡಿದ್ದ ಬ್ಲೇಡನ್ನು ತೆಗೆಯುತ್ತಾಳೆ. ತನ್ನ ಮಗಳನ್ನು ಹಿಡಿದುಕೊಂಡಿದ್ದ ಮನುಷ್ಯನ ಬಳಿ ಬಂದು ಒಂದೇ ಏಟಿಗೆ ಅವನ ಕೈ ನರ ತುಂಡಾಗುವಂತೆ ಕೊಯ್ದುಬಿಡುತ್ತಾಳೆ. ಅವನ ಹಸಚರ ಅವಳ ಮೇಲೆ ಪ್ರಹಾರ ಮಾಡಲು ಬಂದಾಗ “ನಾನು ಬ್ಲೇಡ್ ಬಳಸಲು ಶುರು ಮಾಡಿ ಬಹಳ ವರ್ಷಗಳೇ ಆಗಿವೆ. ಹತ್ರ ಬಂದು ನೋಡು, ನಿನ್ನ ಮೈಯ್ಯಲ್ಲಿ ಯಾವ ಯಾವ ನರ ಹೇಗೆ ಹೇಗೆ ತುಂಡಾಗ್ತವೆ ಅಂತ ಗೊತ್ತಾಗುತ್ತೆ” ಅಂತ ಹೆದರಿಸುತ್ತಾಳೆ. ಆಗ ಅವರಲ್ಲೊಬ್ಬ ಅವಳ ಮೇಲೆ ದಾಳಿ ಮಾಡಲು ಬರತೊಡಗುತ್ತಾನೆ. ಇವಳೂ ಸಹ ಸನ್ನದ್ಧಳಾಗುತ್ತಾಳೆ. ಆಗ ಮೊದಲು ಅವಳ ದಾಳಿಗೆ ಒಳಗಾಗಿದ್ದವ, “ಬೇಡ ನಡಿ ಅವಳು ಸ್ಟ್ರಾಂಗ್ ಇದಾಳೆ. ನನಗೆ ತಲೆ ಬೇರೆ ಸುತ್ತಲು ಶುರುವಾಗಿದೆ ನಡಿ ನಡಿ ಬೇಗ ಹೊರಟು ಹೋಗೋಣ ಇಲ್ಲಿಂದ” ಎನ್ನುತ್ತಾನೆ. ನಂತರ ಇಬ್ಬರೂ ಅಲ್ಲಿಂದ ಓಡಿಹೋಗುತ್ತಾರೆ. ಎಲ್ಲ ಮುಗಿದ ಮೇಲೆ ಗಂಡ ಅಲ್ಲಿಗೆ ಬರುತ್ತಾನೆ. ಅವಳು ತನ್ನ ಮಗಳನ್ನು ಮಾನ ಮತ್ತು ಪ್ರಾಣದ ಜೊತೆಯೇ ಉಳಿಸಿಕೊಳ್ಳುತ್ತಾಳೆ.

ಈ ಪುಟ್ಟ ವೀಡಿಯೋ ಎತ್ತುವ ಪ್ರಶ್ನೆಗಳು ಅಸೀಮ. ನಾವು ಎಂಥ ವ್ಯವಸ್ಥೆ ಮತ್ತು ಪರಿಸ್ಥಿತಿಯಲ್ಲಿ ಇದ್ದೇವೆ ಎಂದು ನೋವಾಗುತ್ತದೆ. ಆದರೆ ನೋಯುವುದಕ್ಕಿಂತ ಸಧ್ಯದ ಜರೂರತ್ತೆಂದರೆ ನಾವು ನಮ್ಮ ಹೆಣ್ಣುಮಕ್ಕಳ ಬ್ಯಾಗಿನಲ್ಲಿ ಕಸ್ಮೆಟಿಕ್ಸ್ ಗಳಿಗಿಂತಲೂ ಮುಖ್ಯವಾಗಿ ಒಂದು ಬ್ಲೇಡನ್ನೋ ಅಥವಾ ಪೆಪ್ಪರ್‌ ಸ್ಪ್ರೇಯನ್ನೋ ಇಟ್ಟುಕೊಳ್ಳುವ ಅಭ್ಯಾಸ ಮಾಡಿಸಬೇಕಿದೆ. ಮತ್ತದನ್ನು ಸರಿಯಾದ ಸಂದರ್ಭದಲ್ಲಿ ಸರಿಯಾಗಿ ಬಳಸುವುದನ್ನೂ ಕಲಿಸಬೇಕಿದೆ. ಯಾರೋ ಬಂದು ನಮ್ಮನ್ನು ಕಾಪಾಡುತ್ತಾರೆ ಎಂದು ಕಾಯುವ ಬದಲು, ನಮ್ಮನ್ನು ನಾವೇ ಕಾಪಾಡಿಕೊಳ್ಳುವುದು ಒಳಿತಲ್ಲವೇ…

ಮನುಷ್ಯ ತನ್ನ ಹಾಗೆ ಇಡೀ ಮಾನವ ಜನಾಂಗದ ಅಭಿವೃದ್ಧಿಗೆ ಕಾರಣವಾಗಬಲ್ಲಂತಹ ಅದೆಷ್ಟೂ ಮಾರ್ಗಗಳು ಅನುಸರಿಸಲು ಇದ್ದರೂ ಅವ ಯಾಕೆ ದುಷ್ಟಬುದ್ಧಿಗಳನ್ನೇ ಆಯ್ದುಕೊಳ್ಳುತ್ತಾನೆ. ವಿಶ್ವವನ್ನು ತನ್ನ ತೆರೆದ ಬಾಹುಗಳಿಂದ ತಬ್ಬುವ ಬದಲು ತಾನೇ ಏಕೆ ಸಂಕುಚಿತಗೊಂಡು ಇಲ್ಲವಾಗುತ್ತಾನೆ?!

ಇದೇ ವೀಡಿಯೋದ ಮತ್ತೊಂದು ಮಗ್ಗುಲಿನಲ್ಲಿ ಮತ್ತೊಂದು ದೃಶ್ಯ ಬರುತ್ತದೆ. ಮೇಲೆ ಹೇಳಿದ ತಾಯಿಯ ಸಣ್ಣ ಮಗಳೊಂದಿಗೆ ಅದೇ ವಯಸ್ಸಿನ ಸಣ್ಣ ಹುಡುಗನೊಬ್ಬ ಇದ್ದಾನೆ. ಅವ ಅವಳ ಜೊತೆ ಎಲ್ಲಿಯೋ ಹೋಗುತ್ತಿದ್ದಾನೆ. ಆಗ ಈ ತಾಯಿ ಓಡಿ ಬಂದು ಅವನಿಗೆ ಒಂದು ಬಾರಿಸಿ ಹಿಗ್ಗಾ ಮುಗ್ಗಾ ಬಯ್ಯುತ್ತಾಳೆ. ಏನು ಮಾಡುತ್ತಿರುವೆ ನನ್ನ ಮಗಳೊಂದಿಗೆ ಎಂದು ಕೇಳುತ್ತಾಳೆ. ಆಗ ಆ ಹುಡುಗ “ಅವಳಿಗೆ ಸರಿ ದಾರಿ ತೋರಿಸ್ತಿದ್ದೆ. ಈ ದಾರಿಯಲ್ಲಿ ಹೋದ್ರೆನೇ ಊರು ಸಿಗೋದು. ಆ ದಾರಿ ಬೇರೆ ಕಡೆ ಹೋಗುತ್ತೆ” ಎಂದು ಹೇಳುತ್ತಾನೆ. ಆಗ ಆ ತಾಯಿಗೆ ಛೇ ಅಂತನ್ನಿಸಿ ಅವನ ಬಗೆಗೆ ಮೆದುವಾಗುತ್ತಾಳೆ. ಆ ಹುಡುಗನಿಗೆ ಒಂದು ಕಣ್ಣು ಇರುವುದಿಲ್ಲ. ಅದರ ಬಗ್ಗೆ ಕೇಳುತ್ತಾಳೆ. ಆಗ ಹುಡುಗ “ನನ್ನ ಅಮ್ಮ ನಾನು ಹುಟ್ಟಿದ ಕೂಡಲೇ ನನ್ನನ್ನು ಈ ಆಲದ ಮರದ ಕೆಳಗೆ ಬಿಟ್ಟು ಓಡಿ ಹೋದಳಂತೆ. ಆಗ ಈ ಆಲದ ಮರದ ಕೆಳಗೆ ಇದ್ದ ಹುಳುಗಳು ನನ್ನ ಕಣ್ಣನ್ನು ತಿಂದುಬಿಟ್ಟವಂತೆ” ಎನ್ನುತ್ತಾನೆ. “ತಂದೆಯೂ ಸಹ ಅಂದೇ ಓಡಿಹೋದನಂತೆ. ಅನಾಥನಾದ ನನ್ನನ್ನ ಯಾರೋ ಸಾಕುತ್ತಿದ್ದಾರೆ ಮತ್ತೆ ಅವರಿಗೆ ನಾನೆಂದರೆ ಬಹಳ ಇಷ್ಟ” ಅಂತಲೂ ಹೇಳುತ್ತಾನೆ. ಆಗ ಆಕೆ ಓ ನೀನು ಸಾವಿತ್ರಿಯ ಮಗಾನಾ… ಆಕೆ ಇಲ್ಲೆ ಪಕ್ಕದೂರಲ್ಲಿ ಇದಾಳೆ” ಎನ್ನುತ್ತಾಳೆ. ಆಗ ಆ ಹುಡುಗ ನೀವು ಹೇಳ್ತಿರೋದು ಬೇರೆ ಯಾರೋ ಬಗ್ಗೆ ಇರಬಹುದು. ಆಕೆ ನನ್ನ ತಾಯಿಯಾಗಿದ್ದರೆ ನನ್ನನ್ನು ನೋಡಲು ಬರದೇ ಇರುತ್ತಿದ್ದಳೇ…” ಎಂದು ಸಪ್ಪಗೆ ಕೇಳುತ್ತಾನೆ. “ಇಲ್ಲ ಆಕೆಯೇ ನಿನ್ನ ತಾಯಿ. ನಾನೇ ನಿನ್ನ ತಾಯಿಯ ಹೆರಿಗೆ” ಮಾಡಿಸಿದ್ದದ್ದು ಎನ್ನುತ್ತಾಳೆ. ಆಗ ಹುಡುಗನಿಗೆ ಏನೊಂದೂ ತೋಚದೆ ಸುಮ್ಮನಾಗುತ್ತಾನೆ. ಆ ತಾಯಿ ತನಗಾದ ಅನುಭವಗಳಿಂದಾಗಿ ಇಡೀ ಗಂಡು ಸಮೂಹವನ್ನೇ ದ್ವೇಷಿಸುತ್ತಿರುತ್ತಾಳೆ. ಅವಳು ಆ ಹುಡುಗನನ್ನು ನಿನ್ನ ತಾಯಿಯಿಂದಾಗಿ ನಿನಗೆ ಹೆಣ್ಣೆಂದರೆ ದ್ವೇಷ ಹುಟ್ಟುತ್ತಿಲ್ಲವಾ ಎಂದು ಕೇಳುತ್ತಾಳೆ. ಆಗ ಆ ಹುಡುಗ ಇಲ್ಲ. ಈಗ ನಿಮ್ಮನ್ನೇ ನೋಡಿ ಮೊದಲು ಹೊಡೆದ್ರಿ, ಆದ್ರೆ ನಂತ ಎಷ್ಟು ಚಂದ ನಡೆದುಕೊಂಡ್ರಿ, ನೀವು ಎಷ್ಟೊಂದು ಒಳ್ಳೆಯವರಿದ್ದೀರಿ. ನನ್ನ ತಾಯಿ ತಪ್ಪುಮಾಡಿರಬಹುದು. ಆದರೆ ಎಲ್ಲ ಹೆಂಗಸರೂ ಹಾಗಿರುತ್ತಾರೆ ಎನ್ನುವುದು ತಪ್ಪಲ್ಲವಾ ಎನ್ನುತ್ತಾನೆ. ಆ ತಾಯಿ ಆ ಪುಟ್ಟ ಹುಡುಗನಿಂದ ಜೀವನದ ಬಹುದೊಡ್ಡ ಪಾಠವನ್ನು ಕಲಿಯುತ್ತಾಳೆ. ಒಂದೇ ಒಂದು ಘಟನೆಯಿಂದ, ಒಬ್ಬ ಮಾಡುವ ಕೆಟ್ಟ ಕೆಲಸದಿಂದ ನಾವು ಇಡೀ ಸಮೂಹವನ್ನೇ ದ್ವೇಷಿಸಬೇಕಿಲ್ಲ ಎನ್ನುವುದನ್ನು…

ನಂತರ ಒಂದು ದಿನ ಆ ಹುಡುಗ ಹೇಳ್ತಾನೆ, “ನೀವು ಸೈಕಲ್ ಕಲಿಯಬೇಕು, ಆಗ ನಿಮ್ಮ ಕೆಲಸ ಬಹಳ ಸುಲಭ ಆಗ್ತದೆ ಎಂದು. ಆಗ ಆಕೆ, “ನಮಗೆ(ಹೆಣ್ಣುಮಕ್ಕಳಿಗೆ) ಯಾರು ಸೈಕಲ್ ಕಲಿಸ್ತಾರೆ..” ಎನ್ನುತ್ತಾಳೆ. ಆಗ ಆ ಹುಡುಗ “ನಮಗೂ ಯಾರೂ ಕಲಿಸೋದಿಲ್ಲ. ಹಾಗೆ ನೋಡಿದ್ರೆ ಯಾರಿಗೆ ಯಾರೂ ಕಲಿಸೋದಿಲ್ಲ, ನಮಗೆ ನಾವೇ ಕಷ್ಟಪಟ್ಟು ಕಲೀಬೇಕು…” ಎನ್ನುತ್ತಾನೆ. ಆ ಮಾತಿನಿಂದ ಆ ತಾಯಿ ಅದೆಷ್ಟು ಉತ್ತೇಜಿತಳಾಗುತ್ತಾಳೆ ಎಂದರೆ ಮರುದಿನವೇ ತನ್ನ ಪ್ರಯತ್ನದಿಂದ ಸೈಕಲ್ ಕಲಿತೇಬಿಡುತ್ತಾಳೆ. ಇದೇ ಅಲ್ಲವಾ ಬೇಕಿರೋದು… ನಾವು ಮೊದಲು ಸ್ವಾವಲಂಬಿ ಮತ್ತು ಸ್ವತಂತ್ರರಾಗಬೇಕು. ಅದು ನಮ್ಮಿಂದ ಮಾತ್ರ ಸಾಧ್ಯ. ಯಾರೂ ಸ್ವಾತಂತ್ರ್ಯವನ್ನು ಕೊಡುವುದೂ ಇಲ್ಲ ಕೊಡಿಸುವುದೂ ಇಲ್ಲ. ನಮಗೆ ಆ ಇಚ್ಛಾಶಕ್ತಿ ಇದ್ದರೆ ಸಾಕು. ರಕ್ಷಣಾ ತಂತ್ರಗಳು, ಶಿಕ್ಷಣ, ಉದ್ಯೋಗ ಇವು ನಮ್ಮ ಆದ್ಯತೆಯಾಗಬೇಕು.

ನಾವು ನಮ್ಮ ಕಣ್ಣ ಮುಂದೆಯೇ ಅದೆಷ್ಟೋ ಹೆಣ್ಣುಮಕ್ಕಳು ಅಪ್ಪಂದಿರ ಹಟಕ್ಕೆ ಶಾಲೆ ತೊರೆದದ್ದನ್ನು ನೋಡುತ್ತೇವೆ. ಸಣ್ಣ ವಯಸ್ಸಿಗೇ ಓದು ಬರಹವಿಲ್ಲದೆ, ದುಡಿಯುವ ಮಾರ್ಗವಿಲ್ಲದೆ ಮದುವೆಯಾಗಿ ನಂತರ ಬದುಕಿನ ಕಷ್ಟಗಳಲ್ಲಿ ಕೂಲಿ ಮಾಡುತ್ತಾ ಕಷ್ಟ ಪಡುವ ಹೆಣ್ಣು ಮಕ್ಕಳನ್ನೂ ನೋಡುತ್ತೇವೆ. ತಂದೆ ತಾಯಂದಿರು ತಮ್ಮ ಮಕ್ಕಳ ನೈತಿಕ ಶಕ್ತಿಯಾಗದೆ ಅವರನ್ನು ಭಯದಲ್ಲಿಡುತ್ತಾರೆ. ಮಕ್ಕಳು ಸಣ್ಣ ತಪ್ಪಿಗೇ ಪ್ರಾಣಕಳೆದುಕೊಳ್ಳುವ ಮಟ್ಟಕ್ಕೆ ಹೋಗುವುದನ್ನೂ ನಾವು ಕಾಣುತ್ತೇವೆ.

ಒಮ್ಮ ನಮ್ಮ ಶಾಲೆಯಲ್ಲಿ ಒಂದು ಘಟನೆ ನಡೆಯಿತು. ಒಬ್ಬ ಹುಡುಗ ತನ್ನ ತರಗತಿಯ ಒಂದು ಹುಡುಗಿಯ ಬಗ್ಗೆ ಏನೋ ಮಾತಾಡಿದ್ದಾನೆ. ಅದು ಯಾವ ಯಾವುದೋ ರೂಪ ತಾಳಿ ಕೊನೆಗೆ ಆ ಇಬ್ಬರೂ ಲವ್ ಮಾಡುತ್ತಿದ್ದಾರೆ ಎನ್ನುವ ಮಟ್ಟಕ್ಕೆ ಇಡೀ ತರಗತಿಯಲ್ಲಿ ಗಾಸಿಪ್ ಇದ್ದಿದೆ. ಈ ವಿಷಯ ಆ ಹುಡುಗಿಗೆ ತಿಳಿದಾಗ ಅವಳು ಅದೆಂತಹ ಶಾಕ್‌ಗೆ ಒಳಗಾಗಿದ್ದಳು ಎಂದರೆ ಅವಳ ಮೈಕೈ ಎಲ್ಲಾ ನಡುಗುತ್ತಿದೆ. ವಿಪರೀತ ಬೆವರುತ್ತಿದ್ದಾಳೆ. ಒಂದೇ ಸಮ ಅಳುತ್ತಿದ್ದಾಳೆ. ಅವಳು ತನ್ನ ನಿಯಂತ್ರಣವನ್ನೇ ಕಳೆದುಕೊಂಡುಬಿಟ್ಟಿದ್ದಳು. ಶಿಕ್ಷಕರು ಎಷ್ಟೇ ಸಮಾಧಾನ ಮಾಡಿದರೂ ಅವಳು ಸಮಾಧಾನವಾಗುತ್ತಿಲ್ಲ. ಬಹಳ ಹೊತ್ತಿನ ನಂತರ ಅವಳು ಹೇಳುತ್ತಾಳೆ, “ಮಿಸ್ ನಮ್ ಊರಲ್ಲಿ ಒಂದ್ ಅಕ್ಕ ಇದೆ ಮಿಸ್, ಆವಕ್ಕನ ಬಗ್ಗೆ ಯಾರೋ ಅವರ ಅಪ್ಪನಿಗೆ, ಅವಳು ಯಾರನ್ನೋ ಲವ್ ಮಾಡ್ತಿದಾಳೆ ಅಂತ ಸುಳ್ಳು ಹೇಳಿದ್ರಂತೆ ಮಿಸ್. ಅದಕ್ಕೆ ಅವ್ರಪ್ಪ ಆವಕ್ಕನ ಮಾತನ್ನ ಕೇಳದೆ ತುಂಬ ಹೊಡೆದುಬಿಟ್ರಂತೆ ಮಿಸ್. ಅದಕ್ಕೆ ಆವಕ್ಕ ನಮ್ಮಪ್ಪನೆ ನನ್ನ ನಂಬಲಿಲ್ಲ. ನಾನ್ಯಾಕೆ ಬದುಕಿರಬೇಕು ಅಂತ ಕೀಟನಾಶಕವನ್ನ ಕುಡಿದುಬಿಟ್ಟಿತ್ತು ಮಿಸ್. ಸಾಯೋ ಅಷ್ಟು ಸೀರಿಯಸ್ ಆಗ್ಬಿಟ್ಟಿತ್ತು. ಹೇಗೋ ಬದುಕಿತು ಮಿಸ್. ಈಗ್ಲೂ ಆವಕ್ಕ ಸರಿಯಾಗಿ ಊಟ ಮಾಡೋಕಾಗಲ್ಲ. ಯಾವಾಗ್ಲೂ ಡಾಕ್ಟ್ರ ಹತ್ರ ಹೋಗಿ ಬರ್ಬೇಕು. ಅದೆಷ್ಟು ದುಡ್ಡು ಖರ್ಚು ಮಾಡಿದರೋ ಏನೋ ಮಿಸ್ ಅವ್ರು. ಅದನ್ ನೋಡಿ ನಮ್ಮಪ್ಪ ನೀನೇನಾದ್ರು ಹಂಗೆ ಮಾಡಿದ್ರೆ ಮುಗೀತು ಅಷ್ಟೇ ಅಂತ ಹೇಳಿದೆ ಮಿಸ್. ಈಗ ಈ ವಿಷಯ ಏನಾದ್ರು ನಮ್ಮಪ್ಪನ್ ಕಿವಿಗೆ ಬಿದ್ರೆ ಮುಗೀತು ಮಿಸ್ ನನ್ನುನ್ ಉಳ್ಸಲ್ಲ ನಮ್ಮಪ್ಪ” ಅಂತ ಮತ್ತೆ ಜೋರಾಗಿ ಅಳತೊಡಗಿದಳು. ನಾವೆಲ್ಲ ಸಮಾಧಾನ ಮಾಡಿ, ನೀನು ಏನು, ಎಂಥವಳು ಅಂತ ನಮಗೆ ಗೊತ್ತು. ಹೆದರ್ಬೇಡ. ಯಾರೂ ಏನೂ ತಿಳ್ಕೊಳೋದಿಲ್ಲ. ಏನೂ ಆಗೋದಿಲ್ಲ ಅಂತ ಹೇಳಿ ಆ ಹುಡಗರ ತಂದೆ ತಾಯಂದಿರನ್ನ ಕರೆಸಿ ಮಾತಾಡಿದೆವು. ಆಗ ಅವಳ ಭಯ ಆತಂಕ ತಹಬದಿಗೆ ಬಂದು ಸರಿ ಹೋದಳು.

ಆದರೆ ವಿಚಿತ್ರ ಎಂದರೆ ಆ ಹುಡುಗರ ತಂದೆ ತಾಯಂದಿರು ತಮ್ಮ ಮಕ್ಕಳದ್ದು ಏನೂ ತಪ್ಪಿಲ್ಲ ಎಂದಿದ್ದು, ಅವರನ್ನು ದಂಡಿಸದೆ ಪರೋಕ್ಷವಾಗಿ ಬೆಂಬಲಿಸಿದ್ದು ಕಂಡು ನಾವೂ ಹತಾಶರಾದೆವು. ಪರಿಸ್ಥಿತಿಗಳ ಬಗ್ಗೆ ಆಶಾಭಾವ ಸದಾ ಇರುತ್ತದೆ. ಆದರೆ ಅದನ್ನು ಗಟ್ಟಿ ಮಾಡುವ ಬೆಂಬಲಿಸುವ ಕರ್ತವ್ಯ ಕೊನೆಗೂ ಸಮಾಜದ್ದೇ ಆಗಿರುತ್ತದೆ. ಮತ್ತಿದು ನಮ್ಮ ನಮ್ಮ ಆಂತರ್ಯಕ್ಕೆ ಆತ್ಯಂತಿಕ ಪ್ರಶ್ನೆಯಾಗಬೇಕಿದೆ. ನಾವು ನಮ್ಮ ಒಳಗಿಗಾದರೂ ಪ್ರಾಮಾಣಿಕವಾಗಿ ಉಳಿಯಬೇಕು ಅಲ್ಲವಾ…