Advertisement
 ಕಾಯಗುಡ್ಡ ಬರೀ ಕಥೆಯಲ್ಲ; ಇದೊಂದು ಚಲನಶೀಲ ಬದುಕಿನ ಪ್ರತಿಬಿಂಬ: ನಾಗಣ್ಣ ಕಿಲಾರಿ ಕಾದಂಬರಿಗೆ ಕಪಿಲ ಪಿ. ಹುಮನಾಬಾದೆ ಮುನ್ನುಡಿ

 ಕಾಯಗುಡ್ಡ ಬರೀ ಕಥೆಯಲ್ಲ; ಇದೊಂದು ಚಲನಶೀಲ ಬದುಕಿನ ಪ್ರತಿಬಿಂಬ: ನಾಗಣ್ಣ ಕಿಲಾರಿ ಕಾದಂಬರಿಗೆ ಕಪಿಲ ಪಿ. ಹುಮನಾಬಾದೆ ಮುನ್ನುಡಿ

ಕಾಯಗುಡ್ಡ ಎಂದರೆ ಕಾಯುವ ಗುಡ್ಡ. ಕುರಿ ಮತ್ತು ಆಡು ಕಾಯುವ ಗುಡ್ಡ ಅಷ್ಟೇ ಅಲ್ಲ. ಬದುಕನ್ನು ನಳನಳಿಸುವ, ಹೊಸತನದ ಗಾಳಿ ಬೀಸುವ, ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಹಕ್ಕಿಯಂತಹ ಎಲ್ಲ ಬಂಧಗಳಿಂದ ಬಿಡುಗಡೆಗೊಳಿಸುವ, ಸಹಜತನ ಮತ್ತು ಕೂತೂಹಲ ಹೃದಯಲ್ಲಿ ಸೃಷ್ಟಿಸುವ ಗುಡ್ಡವೆ ಕಾಯಗುಡ್ಡ. ಬಯಲಿನಂತಹ ಊರಿಂದ ಶುರುವಾಗುವ ಕಥೆ ಕುರಿ-ಆಡುಗಳೊಟ್ಟಿಗೆ ಗುಡ್ಡ ಹತ್ತಿಳಿಸಿ, ಅಲ್ಲಲ್ಲಿ ನಗಿಸಿ, ಬಾವಿಗಳ ಆಳದಿಂದ ಏನನ್ನೋ ಹೊಮ್ಮಿಸಿ, ದವಾಖಾನಿಗಳ ನೋವಿನಲ್ಲೂ ಬಿಸ್ಕತ್‌ ನೆನಪಿಸಿ, ಕತ್ತಲು ಮತ್ತು ಹಲವು ಹಾದಿಗಳ ಮಾತುಗಳು ಕೇಳಿಸಿ, ಓದುಗರಿಗೆ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಕರೆದುಕೊಂಡು ಹೋಗುತ್ತದೆ ಕಾಯಗುಡ್ಡ.
ನಾಗಣ್ಣ ಕಿಲಾರಿ ಕಾದಂಬರಿ “ಕಾಯಗುಡ್ಡ” ಕೃತಿಗೆ ಕಪಿಲ ಪಿ. ಹುಮನಾಬಾದೆ ಬರೆದ ಮುನ್ನುಡಿ

ಕಾಯಗುಡ್ಡ ನಾಗಣ್ಣ ಕಿಲಾರಿಯವರ ಮೊದಲ ಕಾದಂಬರಿ. ಕವಿತೆಗಳ ಮೂಲಕ ಬರವಣಿಗೆಯ ಪ್ರಯಾಣದಲ್ಲಿದ್ದ ಲೇಖಕ ಸಡನ್‌ ಆಗಿ ಕಾದಂಬರಿ ಊರಿಗೆ ಬಂದರೆ, ಕೈಯಲ್ಲಿ ಹಿಡಿದ ಚಿಟ್ಟೆ ಬಿಟ್ಟ ಮೇಲೂ ಬೆರಳುಗಳಲ್ಲಿ ಬಣ್ಣ ಇರುತ್ತದೆ. ಕಾಯಗುಡ್ಡ ಕಾದಂಬರಿಯಲ್ಲಿರುವ ದಟ್ಟವಾದ ವಿವರಗಳು ಕಾದಂಬರಿಯನ್ನು ಇನ್ನಷ್ಟು ಗಟ್ಟಿಯಾದ ಬಿಗಿ ಬರವಣಿಗೆಯಲ್ಲಿ ಹಿಡಿದಿಟ್ಟಿವೆ. ಹಲವು ಕಾರಣಗಳಿಂದ ಕಾಯಗುಡ್ಡ ಕಾದಂಬರಿ ನನಗೆ ವಿಶೇಷ ಅನಿಸಿದೆ. ಇದೊಂದು ಬರೀ ನೆನಪುಗಳ ಸುಗ್ಗಿ ಅಲ್ಲ. ಆ ನೆನಪುಗಳ ಒಳಗಿನ ಮಿಂಚು ಹಲವು ಹಣತೆಗಳು ಹಚ್ಚಿ ಓದುಗರೆದುರು ಇಡುತ್ತದೆ. ಓದುಗ ಊಹಿಸಿಕೊಂಡದ್ದು ಮತ್ತೆನೋ ಆಗುವ ಬೆರಗು ಈ ಕಾದಂಬರಿಯಲ್ಲಿ ಕಾಣಬಹುದು. ಈ ಕಾದಂಬರಿಯ ಬಾಲಕ ಒಮ್ಮೊಮೆ ನೆನಪಿನೂರಿನಲ್ಲಿ ಓಡಾಡುವ ತುಂಟ ಹುಡುಗ ಮತ್ತೆ, ತುಸು ಹೊತ್ತಿನ ನಂತರ ಕನಸುಗಳ ಮೇಲೆರಿ ಹೊರಟ ಬೆರಗುಗಣ್ಣಿನವನು. ಈ ಕಾದಂಬರಿಯಲ್ಲಿ ಕಥೆ ಹೇಳುವ ಬಾಲಕನೊಬ್ಬ ಇಡೀ ಕಾದಂಬರಿ ನಮ್ಮೆದುರು ಪದರು ಪದರಾಗಿ ಬಿಚ್ಚಿಡುತ್ತಾ ಹೋಗುತ್ತಾನೆ. “ತಾತ ಮೊಮ್ಮಗುವಿನಂತೆ ಇರುವ ಊರು” ಎಂದು ಊರಿನ ಬಗ್ಗೆ ಹೇಳುವ ಕಾದಂಬರಿಕಾರ ಇಡೀ ಕಥೆಯಲ್ಲಿ ತಾತ ಮೊಮ್ಮಗನ ಗಾಢವಾದ ಸಂಬಂಧವನ್ನು ಹಲವು ಸಂಗತಿಗಳ ಮೂಲಕ ವಿವರಿಸಿದ್ದಾರೆ. ಕಥೆ ಸಾಗಿದಂತೆ ಹಲವು ತಿರುವುಗಳು ಮತ್ತು ದಾರಿಯಲ್ಲಿ ಒಮ್ಮಿಂದೊಮ್ಮೆಲೆ ಮಿಂಚು ಹುಳದಂತೆ ಮಿಂಚು ಹೋಗುವ ಪಾತ್ರಗಳು ಹಾಗೂ ಘಟನೆಗಳು ಬರುತ್ತವೆ. ಒಟ್ಟಾರೆ ಕಾದಂಬರಿಯಲ್ಲಿ ಯಾವ ಪಾತ್ರಗಳು ಕೂಡ ಕೇಂದ್ರ ಸ್ಥಾನದಲ್ಲಿ ಇಲ್ಲ. ಕುವೆಂಪು ಅವರ ಸಾಲಿನಂತೆ “ಇಲ್ಲಿ ಯಾವುದು ಮುಖ್ಯವಲ್ಲ, ಯಾವುದು ಅಮುಖ್ಯವಲ್ಲ” ಎಂಬಂತಿವೆ ಇಲ್ಲಿನ ಪಾತ್ರಗಳು.

(ನಾಗಣ್ಣ ಕಿಲಾರಿ)

ಕಾಯಗುಡ್ಡ ಕಾದಂಬರಿ ಮುಗ್ಧ ಬಾಲಕನ ಸಹಜ ನಿಸರ್ಗ ಪ್ರೀತಿ, ಶಾಲೆಯೆಂಬ ಜೈಲಿನ ಬೀದಿ ಇವುಗಳಷ್ಟೆ ಹೇಳುತ್ತಿದ್ದೆ ಅಂದುಕೊಳ್ಳುವಷ್ಟರಲ್ಲಿಯೇ ಅನಿರೀಕ್ಷಿತ ತಿರುವುಗಳು ಪಡೆಯುತ್ತ ಸಾಗುತ್ತದೆ. ನಂಬುವ ಜೀವಗಳು ಕಾಳ ರಾತ್ರಿಯಲ್ಲಿ, ಬಿರುಕು ಬಿಟ್ಟ ದಾರಿಯಲ್ಲಿ ತಟ್ಟನೆ ಬಿಟ್ಟು ಹೋಗುವಾಗ ಕಳ್ಳರೆಂದುಕೊಂಡವರು ಜೀವ ಉಳಿಸಿ ನೀರು ಕಾಳು ಕೊಡುವ ಕರುಣೆಯ ಮೂರ್ತಿಗಳು ಆಗುತ್ತಾರೆ. ಮನುಷ್ಯ ಹೀಗೆ ಎಂದು ಗೆರೆ ಕೊರೆದಂತೆ ಹೇಳಲಾಗದು. ಇದು ಸರಿ ಮತ್ತೆನೋ ತಪ್ಪು ಎಂದು ಹುಡುಕುವ ಪ್ರಯತ್ನ ಈ ಕಾದಂಬರಿ ಮಾಡುವುದಿಲ್ಲ. ಸಹಜ ಬದುಕಿನಂತೆ ತಣ್ಣಗೆ ಯಾವುದೋ ಕಾಡಿನ ಮಧ್ಯೆ ಹರಿಯುವ ಕಿರು ಹಳ್ಳದಂತೆ ಕಾದಂಬರಿಯ ಕಥೆ ತನ್ನ ಪಾಡಿಗೆ ತಾನು ಹರಿಯುತ್ತ ಸಾಗುತ್ತದೆ. ಒಟ್ಟಾರೆ ಕಾದಂಬರಿಯ ಯಶಸ್ಸು ಕೂಡ ಇದೆ ಅನಿಸುತ್ತದೆ.

ಕುರಿ-ಆಡು, ದನಕರುಗಳು, ಗುಡ್ಡದಲ್ಲಿ ದೊರೆಯುವ ಬಗೆ ಬಗೆಯ ಹಣ್ಣುಗಳು, ತಾತನ ಹಿಂದೆ ಓಡಾಡುವ ಖುಷಿ, ಇವೆಲ್ಲದರಾಚೆ ಇಷ್ಟವಿಲ್ಲದ ಶಾಲೆ, ಇವುಗಳ ಮಧ್ಯೆ ದಿನಗಳು ನೂಕುವ ಮುಗ್ಧ ಹುಡುಗನೊಬ್ಬನಿಗೆ ಭಯ ಬೀಳಿಸುವಂತೆ ಕಾಣುವ ತಂದೆ ಮತ್ತು ವಿವರಿಸಲಾಗದ ತಾಯಿಯ ವಿಚಿತ್ರ ಪ್ರೀತಿ ಇವುಗಳ ಮಧ್ಯೆ ಸಿಲುಕಿದ ಹುಡುಗನೊಬ್ಬನ ಕಥೆ ಕೊನೆಯ ಪುಟದವೆರೆಗೆ ಬರುವಷ್ಟರಲ್ಲಿ ಹಲವು ಹಳ್ಳಗಳು ಸೇರಿ ನದಿಯಂತೆ ಆಗುತ್ತದೆ. ಕಾದಂಬರಿಕಾರ ಬಳಸಿರುವ ಭಾಷೆ ವಿಭಿನ್ನವಾಗಿದೆ. ಮರೆವಿನಂಚಿನಲ್ಲಿದ್ದ ಪದಗಳು ಈ ಕಾದಂಬರಿಯಲ್ಲಿ ದಡ ಸೇರಿ ಉಸಿರಾಡುತ್ತವೆ. ಕಾಯಗುಡ್ಡ ಕಾದಂಬರಿ ರಚನೆಯ ದೃಷ್ಟಿಯಿಂದಲೂ ಕೂಡ ವಿಭಿನ್ನವಾಗಿದೆ. ಎಪ್ಪತ್ತು ಪುಟಗಳ ಈ ಕಾದಂಬರಿಯ ಒಂದೊಂದು ಸಾಲಿನಲ್ಲಿ ಭರ್ತಿ ಸುಮಾರು ಸಂಗತಿಗಳು, ವಿವರಗಳು ಬಂದು ಹೋಗುತ್ತವೆ. ನಾಜೂಕಾಗಿ ಬಿಡಿಸಿ ನೋಡಿ ಮುಂದೆ ಓದಲು ಹೋಗಬೇಕು ಇಲ್ಲದಿದ್ದರೆ ಓದುಗರು ಅಭಿಮನ್ಯು ಆಗುತ್ತೇವೆ. ಶ್ರೀ ಕೃಷ್ಣ ಆಲನಹಳ್ಳಿಯವರ ಕಾಡು, ಜಂಬಣ್ಣ ಅಮರಚಿಂತ ಅವರ ಕುರುಮಯ್ಯ ಮತ್ತು ಅಂಕುಶದೊಡ್ಡಿ ಕಾದಂಬರಿಗಳು ನೆನಪಿಸಿಕೊಂಡರೆ, ಕಾಯಗುಡ್ಡ ಕಾದಂಬರಿ ಇವುಗಳಿಗಿಂತ ಕಥನದ ವಸ್ತು ಮತ್ತು ಚದುರಿದಂತೆ ಇರುವ ರಚನೆಯ ದೃಷ್ಟಿಯಿಂದ ಭಿನ್ನವಾಗಿ ನಿಲ್ಲುತ್ತದೆ. ನಾವು ಸಾಮಾನ್ಯವಾಗಿ ನಿರಂತರವಾಗಿ ನೋಡುತ್ತಿರುವ ಕಾದಂಬರಿಯ ರಚನೆಯ ಕ್ರಮ ಇದರಲ್ಲಿ ಮುರಿದು ಕಟ್ಟಿದಂತೆ ಇದೆ. ನಾಗಣ್ಣ ಕಿಲಾರಿಯವರು ಬದುಕಿನ ಪ್ರತಿಬಿಂಬದಂತೆ ಕಾದಂಬರಿ ಕಾಣಿಸಿದ್ದಾರೆ. ಮನುಷ್ಯನ ಹಳಹಳಿಕೆಗಳು, ಬಿಟ್ಟು ಹೋಗುವ ಜೀವಗಳು, ಗಾಯಗಳ ನೆನಪು, ಒಲೆ ಮೇಲಿನ ರೊಟ್ಟಿ ಸುಡುವ ಅವ್ವ, ಬಾವಿ, ಕುರಿ, ಆಡು, ಗುಡ್ಡ ಹೀಗೆ ಇತರೆ ಹತ್ತು ಹಲವು ಸಂಗತಿಗಳು ಕಾದಂಬರಿಯಲ್ಲಿಯೇ ಹುಟ್ಟಿ ಇದರೊಳಗೆ ಕರಗಿ ಒಟ್ಟಾರೆ ಕಾದಂಬರಿಯ ರಚನೆಗೆ ಹಲವು ಚಿತ್ರಗಳು ದೊರಕಿಸಿಕೊಟ್ಟಿವೆ. ಮನೆಯೊಳಗಿನ ಸೆಕೆ ತಾಳಲಾರದೆ ಅಂಗಳದಲ್ಲಿ ತಾತನ ಪಕ್ಕ ಮಲಗುವ ಬಾಲಕನ ಕಣ್ಣುಗಳ ಒಳಗ ಕತ್ತಲಿನ ಮಧ್ಯೆ ಕೂಡ ತನ್ನ ಅನುಭವಗಳು, ಪರಂಪರೆ ಹಾಗೂ ಆಡು ಮತ್ತು ಕುರಿ ಕಾಯುವಾಗಿನ ಸಾಹಸಗಳ ಕನಸುಗಳ ಬಿತ್ತನೆ ತಾತ ಮಾಡುತ್ತಲೆ ಇರುತ್ತಾನೆ. ಈ ಎಲ್ಲಾ ಕಥೆಗಳು ಓದುಗರಿಗೆ ಕೂತೂಹಲ ಹುಟ್ಟಿಸುವಂತೆ ಇವೆ.

(ಕಪಿಲ ಪಿ. ಹುಮನಾಬಾದೆ)

ಕಾಯಗುಡ್ಡ ಎಂದರೆ ಕಾಯುವ ಗುಡ್ಡ. ಕುರಿ ಮತ್ತು ಆಡು ಕಾಯುವ ಗುಡ್ಡ ಅಷ್ಟೇ ಅಲ್ಲ. ಬದುಕನ್ನು ನಳನಳಿಸುವ, ಹೊಸತನದ ಗಾಳಿ ಬೀಸುವ, ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಹಕ್ಕಿಯಂತಹ ಎಲ್ಲ ಬಂಧಗಳಿಂದ ಬಿಡುಗಡೆಗೊಳಿಸುವ, ಸಹಜತನ ಮತ್ತು ಕೂತೂಹಲ ಹೃದಯಲ್ಲಿ ಸೃಷ್ಟಿಸುವ ಗುಡ್ಡವೆ ಕಾಯಗುಡ್ಡ. ಬಯಲಿನಂತಹ ಊರಿಂದ ಶುರುವಾಗುವ ಕಥೆ ಕುರಿ-ಆಡುಗಳೊಟ್ಟಿಗೆ ಗುಡ್ಡ ಹತ್ತಿಳಿಸಿ, ಅಲ್ಲಲ್ಲಿ ನಗಿಸಿ, ಬಾವಿಗಳ ಆಳದಿಂದ ಏನನ್ನೋ ಹೊಮ್ಮಿಸಿ, ದವಾಖಾನಿಗಳ ನೋವಿನಲ್ಲೂ ಬಿಸ್ಕತ್‌ ನೆನಪಿಸಿ, ಕತ್ತಲು ಮತ್ತು ಹಲವು ಹಾದಿಗಳ ಮಾತುಗಳು ಕೇಳಿಸಿ, ಓದುಗರಿಗೆ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಕರೆದುಕೊಂಡು ಹೋಗುತ್ತದೆ ಕಾಯಗುಡ್ಡ.

ನಾಗಣ್ಣ ಕಿಲಾರಿಯವರು ಈ ಕಿರಿಯನಿಗೆ ಬಹುದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅನಿಸಿದ್ದು ಪ್ರಾಮಾಣಿಕವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಕಾಯಗುಡ್ಡ ಕಾದಂಬರಿಯ ವಿಶೇಷ ಏನೆಂದರೆ ಇದು ಮನುಷ್ಯರ ಕಥೆ ಮಾತ್ರ ಹೇಳುತ್ತಿಲ್ಲ. ಕಾಯಗುಡ್ಡದ ಸುತ್ತಲು ತನ್ನಷ್ಟಕ್ಕೆ ತಾನೇ ಚಟುವಟಿಕೆಯಿಂದಿರುವ ಪರಿಸರದ ಕಥೆ ಕೂಡ ಹೇಳುತ್ತಿದ್ದಾರೆ. ಬಯಲು, ಹಣ್ಣುಗಳು, ಕೀಟಗಳು, ನಾಯಿ, ಕತ್ತಲು, ಬಾವಿ, ಹೀಗೆ ಹತ್ತು ಹಲವು ಸಂಗತಿಗಳು ಎಲ್ಲವೂ ಕೂಡ ಜೀವ ಮೈದುಂಬಿಕೊಂಡು ಇಡೀ ಕಾದಂಬರಿಗೆ ಬೇರೆಯದೆ ಆದ ಅರ್ಥಸಾಧ್ಯತೆಗಳು ನೀಡುತ್ತವೆ. ಮುಂದಿನ ದಿನಗಳಲ್ಲಿ ಇವರಿಂದ ಇನ್ನಷ್ಟು ಕಾದಂಬರಿಗಳು ಬರಲೆಂದು ಆಶಿಸುತ್ತೇನೆ. ಕಾಯಗುಡ್ಡ ಬರೀ ಕಥೆಯಲ್ಲ. ಇದೊಂದು ಚಲನಶೀಲ ಬದುಕಿನ ಪ್ರತಿಬಿಂಬ.

 (ಕೃತಿ: ಕಾಯಗುಡ್ಡ (ಕಾದಂಬರಿ), ಲೇಖಕರು: ನಾಗಣ್ಣ ಕಿಲಾರಿ, ಪ್ರಕಾಶಕರು: ಕಾವ್ಯಮನೆ ಪ್ರಕಾಶನ (8722039612), ಬೆಲೆ: 140/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ