ಕೆಟ್ಟ ಮೇಲೆ ಬುದ್ಧಿ ಬಂತು ಅಂತಾರಲ್ಲ ಹಾಗೆ ನಾನು ಈ ಘಟನೆಯಾದಮೇಲೆ ಕಾರೊಳಗೆ ಇಂಥಾ ಡೇಂಜರಸ್ ಐಟಮ್ ಗಳನ್ನು ತೆಗೆದುಕೊಂಡು ಹೋಗುತ್ತಿರಲಿಲ್ಲ. ಸಿಕ್ಕಾಪಟ್ಟೆ ಪ್ರೀತಿಯಿಂದ ಇವನು ನೋಡಿಕೊಳ್ಳುತ್ತಿದ್ದ ಕಾರು ನಮ್ಮನ್ನ ಅಕ್ಕ ಪಕ್ಕದ ದೇಶಗಳಿಗೆ ಸುಖವಾಗಿ ಕರೆದುಕೊಂಡು ಹೋಗಿ ಬರುತ್ತಿತ್ತು. ಸ್ವಲ್ಪ ವರ್ಷಗಳಾದಮೇಲೆ ಒಂದು ದಿನ ಬೆಳಗ್ಗೆ ಇವನು ನನ್ನನ್ನು ಸ್ಕೂಲಿಗೆ ಬಿಡುವಾಗ ಕಾರಿನಲ್ಲಿ ಏನೋ ಕಟ್ ಕಟ್ ಕಟ್ ಎಂದು‌ ಸದ್ದಾಯಿತು. “ಏನೋ‌ ಸಮಸ್ಯೆ ಆಗಿದೆ, ನಿನ್ನ ಬಿಟ್ಟಮೇಲೆ ಹಾಗೇ ಸೀದಾ ಟೊಯೋಟಾ ಸರ್ವೀಸ್ ಸೆಂಟರ್ಗೆ ಹೋಗಿ ಬರ್ತಿನಿ. ನೀನು ಕ್ಯಾಬ್ ನಲ್ಲಿ ಮನೆಗೆ ಬಂದು ಬಿಡು.” ಅಂದ.
ಕಾರಿನ ವ್ಯಾಮೋಹದ ಕುರಿತು ಲೇಖನ ಬರೆದಿದ್ದಾರೆ ಸಿರಿ ಹುಲಿಕಲ್

 

ನನ್ನ ತಾತನ ಹತ್ತಿರ ಇದ್ದದ್ದು ಬಿಳಿಯ ಅಂಬಾಸಿಡರ್ ಕಾರು. ಅದರಲ್ಲಿ ನಾವು ಹದಿನಾಲ್ಕು ಜನ ಮೊಮ್ಮಕ್ಕಳೂ ತೋಟದಿಂದ ಟೌನ್ ಗೆ, ಟೌನಿನಿಂದ ತೋಟಕ್ಕೆ ಅದ್ಹೇಗೆ ಓಡಾಡಿಕೊಂಡಿದ್ದೆವು ಅಂತ ಇವತ್ತಿಗೂ ಆ ಕಾರಿನ ಬಗ್ಗೆ ವಿಸ್ಮಯ. ಅಂಬಾಸಿಡರ್, ಫಿಯಟ್ ಕಾರುಗಳನ್ನು ಇವತ್ತಿಗೂ ಚೆನ್ನಾಗಿ ಇಟ್ಟುಕೊಂಡಿರೋರನ್ನ ಕಂಡರೆ ಸಿಕ್ಕಾಪಟ್ಟೆ ಋಷಿ ನನಗೆ. ಇಷ್ಟು ಬಿಟ್ಟರೆ ಕಾರೆಂದರೆ ಒಂದುಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಇರುವ ಸಾಧನವಷ್ಟೇ ಅನ್ನುವ ಭಾವನೆ.

ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳೇ ಜಾಸ್ತಿ. ನಮ್ಮ ಅಪ್ಪನಿಗೆ ನಾವಿಬ್ಬರು ಹೆಣ್ಣು ಮಕ್ಕಳು. ಚಿಕ್ಕಪ್ಪನಿಗೆ, ಇಬ್ಬರು ಅತ್ತೆಯರಿಗೆ, ದೊಡ್ಡಮ್ಮ ಚಿಕ್ಕಮ್ಮಂದಿರಿಗೆ, ಹೀಗೆ ನಮ್ಮ ಅಮ್ಮ-ಅಪ್ಪ ಇಬ್ಬರ ಮನೆ ಕಡೆಯೂ ಹೆಣ್ಣು‌ಮಕ್ಕಳ ಸಂಖ್ಯೆಯೇ ಜಾಸ್ತಿ. ಇದ್ದ ಇಬ್ಬರು ಮೂರು ಗಂಡು ಹುಡುಗರ ಜೊತೆ ರಜಾ ದಿನಗಳಲ್ಲಿ ಆಟವಾಡಿದ್ದರೂ ಈ ಹುಡುಗರ ವಾಹನ ಪ್ರೀತಿಯ ಬಗ್ಗೆ ಅರ್ಥವಾದದ್ದು ಮದುವೆಯಾದಮೇಲೆಯೇ.

ನಾವು ಒಬ್ಬರನ್ನೊಬ್ಬರು ನೋಡಿ ಒಪ್ಪಿಕೊಂಡು ಒಂದು ವರ್ಷದ ನಂತರ ಮದುವೆಯಾಗಿದ್ದು. ಇವನು ಎರಡು-ಮೂರು ತಿಂಗಳಿಗೊಮ್ಮೆ ರಿಯಾದ್ ನಿಂದ ಬರುತ್ತಿದ್ದ. ಆವಾಗ ನಾನು ಬೆಂಗಳೂರಿಗೆ ಬರುತ್ತಿದ್ದೆ. ಇವನು ಪಿ.ಯು.ಸಿಯಲ್ಲಿ ಇದ್ದಾಗ ತೆಗೆದುಕೊಂಡಿದ್ದ ಬೈಕ್ (ಹೋಂಡಾ ೩೫೦), ಸಿಕ್ಕಾಪಟ್ಟೆ ಓಡಿಸಿ ಸಸ್ಪೆನಶನ್ ಎಲ್ಲಾ ಎಗರಿ ಹೋಗಿತ್ತು. ಅದರಲ್ಲೇ ನನ್ನನ್ನ ಬೆಂಗಳೂರು ಸುತ್ತಿಸುತ್ತಿದ್ದ. ಅದೋ ಪೆಟ್ರೋಲು ಇಲ್ಲವೆಂದೋ, ಇನ್ನೇನೋ ತೊಂದರೆಯಿಂದ ಎಲ್ಲೆಲ್ಲೋ ಮಧ್ಯೆ ನಿಂತು ಹೋಗಿಬಿಡೋದು. ನಮ್ಮ ಡೇಟು ಅಲ್ಲಿಗೆ ಗೋತ. ಇವನು ಆ ಗಾಡಿಯನ್ನ ಅತ್ಯಂತ ಜತನದಿಂದ ತಳ್ಳಿಕೊಂಡು ಹತ್ತಿರದ ಪೆಟ್ರೋಲು ಬಂಕಿಗೆ ತೆಗೆದುಕೊಂಡು ಹೋಗಿ ಅದರ ದೇಖರೇಖೆ ಮಾಡಿಸುತ್ತಿದ್ದ.

ಹೀಗೆ‌ ಎರಡು ಮೂರು‌ ಸತಿ‌ ಆದಮೇಲೆ, ನನಗೂ ಸ್ವಲ್ಪ ರೋಸತೊಡಗಿತು. “ಹೋಗ್ಲಿ ಇದನ್ನ ಮಾರಿ ಹೊಸಾದು ತೊಗೋಬಾರ್ದಾ?” ಅಂದೆ. ಇವನು ನನ್ನ “how can you even think about it?” ಅನ್ನೊ ಥರ ನೋಡತೊಡಗಿದನೆಂದರೆ, ನಾನೇನಂದೆನಪ್ಪಾ ಅಂತ ನನಗೇ ಗಾಬರಿಯಾಗತೊಡಗಿತು. ಇವನು ಈ ಬೈಕು ಅವನ ಮೊದಲನೇ ಬೈಕ್ ಎಂದೂ ಇದನ್ನು ಯಾವತ್ತೂ‌ ಮಾರೋಲ್ಲವೆಂದೂ ಈ ಬೈಕು ಯಾವ ಯಾವ ರೀತಿಯಲ್ಲಿ ಇವನಿಗೆ ಜೊತೆಯಾಗಿದೆಯೆಂದೂ ವಿವರಿಸಿದ.
ನಾನಿನ್ನು “ಅದನ್ನು ಮಾರು!” ಎಂದು ಹೇಳುವ ವಿಚಾರ ಬಿಟ್ಟೆ.

ನಮ್ಮ ಮದುವೆಯಾಗಿ ಎರಡು ತಿಂಗಳ‌ ನಂತರ ನನಗೆ ವಿಸಾ ಸಿಕ್ಕಿತು. ನಾನು ರಿಯಾದ್ ಸೇರುವ ಹೊತ್ತಿಗೆ ಟಯೊಟಾ ಕ್ಯಾಮ್ರಿ ಕಾರು ನಮ್ಮ ಮನೆಯ ಹೊರಗೆ ನಿಂತಿತ್ತು. ಅದೊಂದು ಜಾಹೀರಾತು ಬರುತ್ತಿತ್ತಲ್ಲಾ, “ಹೊಸ ಮನೆ, ಹೊಸ ಕಾರು, ಹೊಸಾ ಹೆಂಡತಿ” ಆ ರೀತಿ ಇತ್ತು ನಮ್ಮ ಸ್ಥಿತಿ. ಇವನ‌ ಮೊದಲ ಬೈಕಿನ ಬಗ್ಗೆ ಅಷ್ಟು ಪ್ರೀತಿ ತೋರಿಸಿದವನು ಮೊದಲ ಕಾರ್ ಗೆ ಯಾವ ರೀತಿ ಆಡಬಹುದು ಎಂದುಕೊಳ್ಳುತ್ತಿದ್ದವಳಿಗೆ ಹೆಚ್ಚು ದಿನ ಕಾಯಬೇಕಾಗಲಿಲ್ಲ. ತರಾವರಿ ಕಾರು ತೊಳೆಯೋ ಶಾಂಪುಗಳು, ಅದಕ್ಕೇ ಬೇರೆ ಥರದ ಒರಸುವ ಬಟ್ಟೆ ಎಲ್ಲಾ ಇಟ್ಟುಕೊಂಡು ಜತನದಿಂದ ಇವನೇ ಕಾರು ತೋಳೀತಿದ್ದ. ಇವನ ಅತಿರೇಕಕ್ಕೆ ಅಳುವುದೋ ನಗುವುದೋ ತಿಳಿಯಲಿಲ್ಲ. “ಇದೆಲ್ಲಾ ಸ್ವಲ್ಪ ಓವರ್ ಆಯ್ತು ಕೃಷ್ಣಾ,” ಅಂದಿದ್ದಕ್ಕೆ. “ಇದನ್ನೇ ಓವರ್ ಅಂತೀಯ ಎಷ್ಟೋ ಜನ ಅವರ ಕಾರನ್ನ ಬಿಸ್ಲರಿ ನೀರಲ್ಲಿ ತೊಳಿತಾರೆ.” ಎಂದ. ಸಧ್ಯ ಅದೊಂದೇ ಬಾಕಿ ಇರೋದು ಎಂದುಕೊಂಡೆ.

ಇಂಥಪ್ಪಾ ಕಾರಿನಲ್ಲಿ ಹೊರಗೆ ಹೋಗುವಾಗ, ಸುಮ್ಮನೆ ವಾಕಿಂಗು ಮಾಡುವಾಗ, ಕೆಲಸ ಮುಗಿಸಿ ಇಬ್ಬರೂ ಖಾಲಿಯಾಗಿ ಕೂತಿದ್ದಾಗ, ಕಾರಿನ ಎಂಜಿನ್ನು, ಹಾರ್ಸ್‌ ಪವರ್ರು, ಅದರ ಎ.ಸಿ, ಸ್ಪೀಕರ್ ಮುಂತಾದ ವಿಷಯಗಳ ಬಗ್ಗೆ ಎಡಬಿಡದೆ ಕೇಳಿಸಿಕೊಂಡು ನಾನೊಂಥರ ಕಾರಿನ ಎಕ್ಸಪರ್ಟ್ ಆಗಿ ಹೋಗಿದ್ದೆ.

ಇವನ ವಾಹನ ಪ್ರೀತಿ ಬೈಕು, ಜೀಪು ಕಾರಿಗಳಿಗಷ್ಟೇ ಸೀಮಿತವಾಗಿರದೆ, ಮಿಲಿಟರಿಯಲ್ಲಿ ಬಳಸುವ ತರಾವರಿ ವಾಹನಗಳವರೆಗೂ ಹಬ್ಬಿ ಇವನೊಂಥರಾ ಆಟೊಮೋಟಿವ್ ಎನ್ಥೂಸಿಯಾಸ್ಟ್ ಎಂದು ನನಗರಿವಾಗಿತ್ತು.

ನಮ್ಮ‌ ಭಾರತದ ಅರ್ಜುನ್, ಜೊತೆಗೆ ರಷ್ಯನ್ ನಿರ್ಮಿತ ಟಿ ೭೨ಅಜೇಯ, ಟಿ ೯೦ಭೀಷ್ಮ, ಅನ್ನೋ ಬ್ಯಾಟಲ್ ಟ್ಯಾಂಕುಗಳು, ರಷ್ಯನ್ನರು ಮಾಡಿರೋ ಗ್ರಾಡ್ ಅನ್ನೂ, ಮಲ್ಟಿ ಬ್ಯಾರಲ್ ಮಿಸ್ಸೈಲ್ ಲಾಂಚರ್ ಅನ್ನು ಪಿನಾಕಾ ಅಂತ ಭಾರತದ ಡಿ ಆರ್ ಡಿ ಒ ಮಾಡಿದಾರೆ. ರಷ್ಯಾ, ಸ್ವೀಡನ್, ಅಮೇರಿಕಾದಿಂದ ನಮ್ಮ ಆರ್ಮಿಯವರು ಆಮದು ಮಾಡಿಕೊಂಡಿರುವ ಆರ್ಟಿಲರಿ, ಆರ್ಮರ್ಡ್ ಟ್ರಕ್, ಆಕಾಶದಲ್ಲಿ ಹಾರುವ ರಫೇಲ್ ಫೈಟರ್ ವಿಮಾನಗಳು, ಮಿಗ್ 29, ಕಾಮೊವ್ ಕಾ ೨೭, ಎಚ್.ಎ.ಲ್ ಧ್ರುವ್, ಎಚ್.ಎ.ಲ್ ಚೇತಕ್, ರಶ್ಯಾದ ಸುಕೋಯಿ ಯುದ್ಧ ವಿಮಾನಗಳು, ಎಮ್.ಐ ಸೀರೀಸ್, ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಸು, ಚಿನೂಕ್ ಗೆ ಎರಡು ರೌಟರ್ ಇರತ್ತೆ, ಯು.ಎಸ್ ಮೇಡು, ದಾಸ್ತಾನು ತೆಗೆದುಕೊಂಡು ಹೋಗೋಕ್ಕೆ ಬಳಸುತ್ತಾರೆ. ಎಂ.ಐ ೩೧ರಲ್ಲಿ ೧೦೦ ಜನ ಸೈನಿಕರು ಹೋಗಬಹುದು.

ಸಿಕ್ಕಾಪಟ್ಟೆ ಓಡಿಸಿ ಸಸ್ಪೆನಶನ್ ಎಲ್ಲಾ ಎಗರಿ ಹೋಗಿತ್ತು. ಅದರಲ್ಲೇ ನನ್ನನ್ನ ಬೆಂಗಳೂರು ಸುತ್ತಿಸುತ್ತಿದ್ದ. ಅದೋ ಪೆಟ್ರೋಲು ಇಲ್ಲವೆಂದೋ, ಇನ್ನೇನೋ ತೊಂದರೆಯಿಂದ ಎಲ್ಲೆಲ್ಲೋ ಮಧ್ಯೆ ನಿಂತು ಹೋಗಿಬಿಡೋದು. ನಮ್ಮ ಡೇಟು ಅಲ್ಲಿಗೆ ಗೋತ.

ಸ್ಕಾರ್ಪಿಯನ್ ಅನ್ನೋ ಸಬ್ಮರೀನ್ (ಫ್ರೆಂಚ್ ಮೇಡು) ಡೀಸಲ್ ಆದ್ದರಿಂದ ೨೫ ದಿನಕ್ಕೊಮ್ಮೆ ನೀರಿನಿಂದ ಮೇಲೆ ಬರಬೇಕು. ಆದರೆ ಇಂಡಿಯಾದೇ ಅರಿಹಂತ್ ಅನ್ನೋ ನ್ಯೂಕ್ಲಿಯರ್ ಸಬ್ಮರೀನ್ ಇದೆ, ನ್ಯೂಕ್ಲಿಯರ್ ಸಬ್ಮರೀನ್ ಬರೀ ಐದು ದೇಶದವರ ಹತ್ರ ಮಾತ್ರ ಇರೋದು, ಆಹಾರದ ದಾಸ್ತಾನು ಇದ್ರೆ ವರ್ಷಾನುಗಟ್ಟಲೆ ಒಳಗೇ ಇರಬಹುದು ಮೇಲೆ ಬರುವ ಅವಶ್ಯಕತೆಯೇ ಇಲ್ಲ. ಡೆಸ್ಟ್ರಾಯರ್ಸ ಅನ್ನೋ ಸ್ಟೆಲ್ಥ್ ವಾರ್ ಶಿಪ್ ಗಳು, ಮೊನ್ನೆ ಮೊನ್ನೆ ಕಮಿಷನ್ ಆದ ಐ. ಎನ್. ಎಸ್ ವೇಲ, ಫ್ರಿಜೆಡ್ ಗಳು ಇಂಥವುಗಳ ಬಗ್ಗೆಯೇ ನೋಡುವುದೋ ಹೇಳುವುದೋ ಮಾಡುತ್ತಿದ್ದ.

ಆಗ‌ ನಾನು ಶಾಲೆಯೊಂದರಲ್ಲಿ ಇಂಗ್ಲೀಷ್ ಹೇಳಿಕೊಡುತ್ತಿದ್ದೆ. ಅಲ್ಲೆಲ್ಲಾ ಶಾಲೆ ಬೆಳಗ್ಗೆ ೭ರಿಂದ ಮಧ್ಯಾಹ್ನ ೨ರವರೆಗಿರುತ್ತಿತ್ತು. ಸಾಮಾನ್ಯವಾಗಿ ಶಾಲೆ ಮುಗಿದ ಮೇಲೆ ಕ್ಯಾಬ್ ನಲ್ಲಿ ಹೋಗುತ್ತಿದ್ದ ನನ್ನನ್ನು, ಆಗಾಗ ಇವನಿಗೆ ಆಫೀಸಿನಲ್ಲಿ ಬಿಡುವಾದಾಗ ಇವನು ಬಂದು ಕರೆದುಕೊಂಡು ಹೋಗುತ್ತಿದ್ದ. ಹಾಗೆ ಅವತ್ತು ಬಂದು ಕಾಯುತ್ತಿದ್ದ, ನಾನು ನನ್ನ ಸ್ಕೂಲಿನ ಸಾಮಾನೆಲ್ಲಾ ಹಿಂದಿನ ಸೀಟಿನಲ್ಲಿಟ್ಟು ಮುಂದೆ ಕೂತಿದ್ದೆ. ನನ್ನ ಕಲೀಗ್ ಆಗಿದ್ದ ಕೇರಳದ ಸರಿತಾ, ಅವತ್ತು ಬೆಳಗ್ಗೆಯೇ “ಇವತ್ತು ಅಡುಗೆ ಮಾಡಬೇಡ!” ಎಂದು ಒಂದಷ್ಟು ಇಡ್ಲಿ ಸಾಂಬಾರನ್ನು ತಂದು ಕೊಟ್ಟಿದ್ದರಿಂದ ಮನೆಗೆ ಹೋಗಿ ನೆಮ್ಮದಿಯಾಗಿ ಇಡ್ಲಿ ಬಾರಿಸಿವುದೇ ಅಂದುಕೊಂಡಿದ್ದೆ. ಅದೂ ಹಿಂದಿನ ಸೀಟಿನ ಮೇಲೆಯೇ ಇತ್ತು. ಬೆಳಗ್ಗಿನಿಂದ ಚೆಲ್ಲದ ಆ ಸಾಂಬಾರಿಗೆ‌ ಅದೇನು ದುರ್ಬುದ್ಧಿ ಬಂತೋ ಏನೋ, ಒಂದು ಚುಕ್ಕೆಯೂ‌ ಇಲ್ಲದ ಕಾರಿನ ಸೀಟು ಕಣ್ಣು ಕುಕ್ಕಿತು ಅನ್ನಿಸುತ್ತೆ. ನಾನು ಕಾರು ಇಳಿಯುವಾಗ ಬ್ಯಾಗ್ ಕೈಗೆತ್ತಿಕೊಂಡರೆ ಸಾಂಬಾರಿನ ಡಬ್ಬದ ಮುಚ್ಚಳ ಅದ್ಯಾವುದೋ ಮಾಯದಲ್ಲಿ ತೆರೆದುಕೊಂಡಿತ್ತು, ಸಾಂಬಾರು ಬ್ಯಾಗನ್ನು ನೆನೆಸಿ ಅದರ ಹಳದಿ ಬಣ್ಣವು ಕಾರಿನ ಕೆನೆ ಬಣ್ಣದ ಸೀಟಿಗೆ ಇಳಿಯುತ್ತಿತ್ತು. ಇದನ್ನು ನೋಡಿದ ನನಗೆ ಒಂದೇ ಸಮಯಕ್ಕೆ ಸಿಕ್ಕಾಪಟ್ಟೆ ನಗುವೂ, ಅದಕ್ಕಿಂತ ಹೆಚ್ಚಾಗಿ ಭಯವೂ ಆಗಿ ಇವನ ಮುಖ ನೋಡಿದೆ. ಇವನು ಸ್ಥಂಭೀಭೂತನಾಗಿ ಮಾತು ಹೊರಡದೆ ನಿಂತಿದ್ದ, ಈ ಆಟಂ ಬಾಂಬ್ ಸಿಡಿಯುವ ಮೊದಲು ಇಲ್ಲಿಂದ ಕಾಲು ಕೀಳಬೇಕೆಂದು ಮೆದುಳಿನಿಂದ ಮೆಸೆಜ್ ಬಂತು. ನಾನು ಮನೆಯೊಳಗೆ ಓಡಿ ಹೋದೆ.

ಕೆಟ್ಟ ಮೇಲೆ ಬುದ್ಧಿ ಬಂತು ಅಂತಾರಲ್ಲ ಹಾಗೆ ನಾನು ಈ ಘಟನೆಯಾದಮೇಲೆ ಕಾರೊಳಗೆ ಇಂಥಾ ಡೇಂಜರಸ್ ಐಟಮ್ ಗಳನ್ನು ತೆಗೆದುಕೊಂಡು ಹೋಗುತ್ತಿರಲಿಲ್ಲ. ಸಿಕ್ಕಾಪಟ್ಟೆ ಪ್ರೀತಿಯಿಂದ ಇವನು ನೋಡಿಕೊಳ್ಳುತ್ತಿದ್ದ ಕಾರು ನಮ್ಮನ್ನ ಅಕ್ಕ ಪಕ್ಕದ ದೇಶಗಳಿಗೆ ಸುಖವಾಗಿ ಕರೆದುಕೊಂಡು ಹೋಗಿ ಬರುತ್ತಿತ್ತು. ಸ್ವಲ್ಪ ವರ್ಷಗಳಾದಮೇಲೆ ಒಂದು ದಿನ ಬೆಳಗ್ಗೆ ಇವನು ನನ್ನನ್ನು ಸ್ಕೂಲಿಗೆ ಬಿಡುವಾಗ ಕಾರಿನಲ್ಲಿ ಏನೋ ಕಟ್ ಕಟ್ ಕಟ್ ಎಂದು‌ ಸದ್ದಾಯಿತು. “ಏನೋ‌ ಸಮಸ್ಯೆ ಆಗಿದೆ, ನಿನ್ನ ಬಿಟ್ಟಮೇಲೆ ಹಾಗೇ ಸೀದಾ ಟೊಯೋಟಾ ಸರ್ವೀಸ್ ಸೆಂಟರ್ಗೆ ಹೋಗಿ ಬರ್ತಿನಿ. ನೀನು ಕ್ಯಾಬ್ ನಲ್ಲಿ ಮನೆಗೆ ಬಂದು ಬಿಡು.” ಅಂದ. ಅವತ್ತು ಮನೆಗೆ ಬಂದಾಗ, ಇವನು ಆಫೀಸಿಗೆ ಹೋಗದೆ ಮನೆಯಲ್ಲೇ ಬೇಜಾರಾಗಿ ಕೂತಿದ್ದ, ನನ್ನನ್ನು ಶಾಲೆಯ ಹತ್ತಿರ ಬಿಟ್ಟು ಒಂದು ಮಾರು ಹೋಗೋ ಹೊತ್ತಿಗೆ ಕಾರು “ಮುಂದೆ ಹೋಗೋಲ್ಲ!” ಎಂದು ನಿಂತಿತಂತೆ. ಕಾರನ್ನ ಟೋ‌ ಮಾಡಿಸಿಕೊಂಡು ಸರ್ವೀಸ್ ಸೆಂಟರ್ ಗೆ ಹೋದಾಗ ತಿಳಿದಿದ್ದು ಎಂಜಿನ್ ಆಯಿಲ್ ಲೀಕ್ ಆಗಿ, ಎಂಜಿನ್ ಸರಿಯಾಗದ ಹಾಗೆ‌ ಕೆಟ್ಟು ಕೂತಿದೆ. “ಬೇರೇನೇ ಎಂಜಿನ್ ಹಾಕಬೇಕು” ಎಂದು ಹೇಳಿದರಂತೆ. “ಇದು ಮನುಷ್ಯನ ಹಾರ್ಟ್‌ ರೀಪ್ಲೇಸ್ ಮಾಡಿದ ಹಾಗೆ. Its no more the same.” ಅಂದ. ಅವತ್ತು ನನಗೂ ಬೇಜಾರೇ ಆಯ್ತು.

ಎಂಜಿನ್ ಬದಲಾದಮೇಲೆ ಇವನೂ ಬದಲಾದ. ತರಾವರಿ ಶಾಂಪುವಿನಲ್ಲಿ ಮೈ ತೊಳೆಸಿಕೊಳ್ಳುತ್ತಿದ್ದ ಕಾರು ಮಾಮೂಲಿ ನೀರಿಗೆ ಬದಲಾಯಿತು. ಇನ್ನು ಸ್ವಲ್ಪ ದಿನದ ನಂತರ ಇವನು ಕಾರು ತೊಳೆಯುವುದನ್ನೂ ನಿಲ್ಲಿಸಿ ಮನೆ ಕೆಲಸದಲ್ಲಿ‌ ಸಹಾಯ ಮಾಡುತ್ತಿದ್ದವನಿಗೇ ಆ ಕೆಲಸವನ್ನೂ ವಹಿಸಿದ.

ಇದಾದ ಸ್ವಲ್ಪ ದಿನಗಳಿಗೆ ನಮ್ಮ ಮನೆಗೊಂದು ಪುಟ್ಟ ಕಂದ ಬಂತು. ನಾವು ಅದರ ಲಾಲನೆ ಪಾಲನೆಯಲ್ಲಿ ಕಳೆದೇ ಹೋಗಿದ್ದೆವು. ನನ್ನ ಮಗನಿಗೂ, ಅವನ ಅಪ್ಪನ ಥರ ಸಿಕ್ಕಾಪಟ್ಟೆ ವಾಹನ ಪ್ರೀತಿ ಅನ್ನೋದು ಎಂಟು ತಿಂಗಳಿಗೇ ಸಾಬೀತಾಯಿತು. ಎಂಟು ತಿಂಗಳವರೆಗೂ ಚಿಕ್ಕಮಗಳೂರಿನ ಅಮ್ಮನ ಮನೆಯಲ್ಲಿ ಬಾಣಂತನ ಮಾಡಿಸಿಕೊಂಡ ನಾನು, ರಿಯಾದ್ ಗೆ ವಾಪಾಸ್ಸು ಹೋಗೋಕ್ಕೆ ಮುಂಚೆ ಬೆಂಗಳೂರಿನಲ್ಲಿ ಸ್ವಲ್ಪ ದಿನ ಕಳೆಯೋಣವೆಂದು ಬಂದಿದ್ದೆ. ಒಂದು ನಿಮಿಷ ನಿಲ್ಲದೆ ಪಾದರಸದಂತೆ ಓಡಾಡಿಕೊಂಡಿದ್ದ ಮಗು ಇಲ್ಲಿನ ಟ್ರಾಫಿಕ್ ನೋಡಿ ಹೇಗೆ ಮೂಕ ವಿಸ್ಮಿತವಾಗಿತ್ತೆಂದರೆ, ಟ್ರಾಫಿಕ್ ನೋಡಿಯೂ ಇಷ್ಟೊಂದು ಖುಷಿಪಡುತ್ತದಲ್ಲಾ ಅಂತ ಆಶ್ಚರ್ಯವಾಗಿತ್ತು. ಈಗ ಇವನಿಗೆ ಆರು ವರ್ಷ, ಆಟಾಡುವುದೆಲ್ಲಾ ಹೆಚ್ಚಾಗಿ ವಾಹನ ವಿಷಯವೇ. ಕಪ್ಪು ಆಟೋ ಅಂದರೆ ಸಿಕ್ಕಾಪಟ್ಟೆ ಇಷ್ಟ. ಮುಂದೆ ದೊಡ್ಡವನಾದಮೇಲೆ ಆಟೋ ಡ್ರೈವರ್ ಆಗಬೇಕೆಂಬ ಗುರಿ ಇಟ್ಟು ಕೊಂಡಿದ್ದಾನೆ. ನಾವೂ “ಹೂ ಆಗಪ್ಪಾ!” ಅಂದಿದೀವಿ.

ಎಂಜಿನ್ ಬದಲಿಸಿದ ಮೇಲೂ ಆ ಕಾರು ನಮ್ಮನ್ನ ಬಹಳಷ್ಟು ಕಡೆ ಜೋಪಾನವಾಗಿ ಕರೆದುಕೊಂಡು ಹೋಗಿ ಬಂದಿದೆ‌. ಅಚಿಂತ್ಯನ ರೇಖಾಚಿತ್ರ ಕೌಶಲ್ಯವನ್ನು ಸಹಿಸಿಕೊಂಡಿದೆ, ಅವನ ಪುಟ್ಟ ಕಾಲುಗಳಲ್ಲಿ ತುಳಿಸಿಕೊಂಡಿದೆ‌. ಸಾಕಷ್ಟು ಬಾರಿ “ಇದನ್ನ ಮಾರಿ ಬೇರೆ ತೆಗೆದುಕೊಳ್ಳೋಣ.” ಅಂದುಕೊಂಡರೂ ಯಾವುದೋ ಕಾರಣ ಕೊಟ್ಟು ಮುಂದೂಡಿದ್ದಿದೆ. ವಾಪಾಸ್ಸು ಭಾರತಕ್ಕೆ ಬರುವ ಮುಂಚೆ ವಿಧಿಯಿಲ್ಲದೆ ಕಾರನ್ನು ಮಾರಲೇಬೇಕಾಗಿ ಬಂತು. ಕಾರನ್ನು ಬೇರೆಯವರಿಗೆ ಒಪ್ಪಿಸುವಾಗ ಇವನ ಕಣ್ಣಲ್ಲಿ ನೀರಿತ್ತು, ನನಗೆ ಆಗ ನಗಲಾಗಲಿಲ್ಲ.