ಅನುಭವಕ್ಕೆ ಸ್ವತಃ ಯಾವುದೇ ರೀತಿಯ ಆಕೃತಿ ಇಲ್ಲ. ಆದರೆ ನಾವು ಮಾತ್ರ ಇದು ಸುಖದ ಅನುಭವ, ಇದು ದುಃಖದ ಅನುಭವ, ಇದು ವಿಹ್ವಲತೆ, ತಲ್ಲಣ, ಇದು ವಿಷಾದದ ಅನುಭವ ಎಂದೆಲ್ಲ ಹೆಸರಿಡುತ್ತೇವೆ ಎಂದು  ಹೇಳುವ ಆನಂದ ಝುಂಜರವಾಡ ಮೂಲತಃ ಕಾವ್ಯಶಕ್ತಿಯನ್ನು ಒಲಿಸಿಕೊಂಡ ಕವಿ. ಇತ್ತೀಚೆಗೆ ಅವರ ಹೊಸ ಕವನ ಸಂಕಲನ “ಶಬ್ದ ಸುಪಾರಿ” ಬಿಡುಗಡೆಯಾಯಿತು. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾತಿಗೆ ಸಿಕ್ಕ ಆನಂದ ಝುಂಜರವಾಡ ಅವರೊಡನೆ ಲೇಖಕಿ ಮಾಲಿನಿ ಗುರುಪ್ರಸನ್ನ ಅವರು ನಡೆಸಿದ ಸಂದರ್ಶನ ಇಲ್ಲಿದೆ. 

 

ಮಾಲಿನಿ ಗುರುಪ್ರಸನ್ನ: ನಿಮ್ಮ ಮೊದಲ ದಿನಗಳ ಬಗ್ಗೆ.. ಕಾವ್ಯ ಆರಂಭದ ದಿನಗಳ ಬಗ್ಗೆ ಕೊಂಚ ಹೇಳಬಹುದೇ?

ಆನಂದ ಝುಂಜರವಾಡ: ನಾನು ಬಾಗಲಕೋಟೆಯ ಒಂದು ಕೆಳ ಮಧ್ಯಮ ವರ್ಗದ ಮಾಧ್ವ ಮನೆತನದಲ್ಲಿ ಹುಟ್ಟಿದವನು. ನಮ್ಮ ಮನೆಯೊಳಗೇ ಒಂದು ರೀತಿಯ ಸಂತ ವಾತಾವರಣ ಇತ್ತು, ಧಾರ್ಮಿಕ ವಾತಾವರಣ ಇತ್ತು, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಹಿಂದಿನ ಪೂರ್ವಸೂರಿಗಳೆಲ್ಲರೂ ಆಹಾರ, ನಿದ್ರೆ, ಭಯ, ಮೈಥುನ ಇತ್ಯಾದಿಗಳ ಆಚೆಗೆ ನಮ್ಮ ಅಸ್ತಿತ್ವದ ಏನೋ ಒಂದು ಗುರಿಯನ್ನು ಸಾಧಿಸಲಿಕ್ಕಾಗಿ ನಾವು ಇಲ್ಲಿಗೆ ಬಂದಿದ್ದೇವೆ ಎಂಬ ಒಂದು ನಂಬಿಕೆಯನ್ನು ಇಟ್ಟುಕೊಂಡಿದ್ದರು. ಅದಕ್ಕೆ ಸಂಬಂಧ ಪಟ್ಟಂತೆ ಒಂದಿಷ್ಟು ಪ್ರಶ್ನೆಗಳನ್ನು ತಮ್ಮ ಮುಂದಿಟ್ಟುಕೊಂಡು ಬದುಕಿದವರು.. ಅದಕ್ಕೆ ಪೂರಕವಾದ ಓದು, ಬರಹ, ಅಧ್ಯಯನ, ಚಿಂತನ ಇವೆಲ್ಲವೂ ನಮ್ಮ ಮನೆಯಲ್ಲಿ ಸದಾ ಕಾಲ ನಡೆಯುತ್ತಲೇ ಇದ್ದವು. ಅದು ಎಷ್ಟರಮಟ್ಟಿಗೆಂದರೆ ಅಲ್ಲಿ ಯಾವುದೇ ಜಾತಿ ಮತ ಧರ್ಮಗಳ ವೈಷಮ್ಯವಿಲ್ಲದೆ ಎಲ್ಲ ಜಾತಿಯ ಜನರೂ ಕೂಡಿಕೊಂಡು ತಡರಾತ್ರಿಯವರೆಗೆ ಚರ್ಚಿಸುತ್ತಿದ್ದರು. ಅವು ನಮ್ಮ ಹೊಟ್ಟೆ ಬಟ್ಟೆ ಅನ್ನದ ಪ್ರಶ್ನೆಗಳಾಗಿರಲಿಲ್ಲ.. ಆದರೆ ಅವೂ ತಮ್ಮ ಜೀವನ್ಮರಣದ ಪ್ರಶ್ನೆಗಳೇನೋ ಎಂಬಷ್ಟು ತೀವ್ರವಾಗಿ ಅಲ್ಲಿ ಚಿಂತನ ಮಂಥನ ನಡೆಯುತ್ತಿತ್ತು. ಇಂತಹಾ ಒಂದು ಚಿಂತನಶೀಲವಾದ, ತಾತ್ವಿಕತೆಯಿಂದ ಒಡಗೂಡಿದ, ವಿಚಾರವಾದಿಗಳ ನಡುವೆ ನಾನು ಬೆಳೆದೆ.

ನಮ್ಮ ಮನೆಯೊಳಗೆ ಧಾರ್ಮಿಕ ವಾತಾವರಣ ಇದ್ದರೂ ಕೂಡ ಖಟ್ಟರ್ ಪಂಥಿ ಮಾಧ್ವರು ನಾವಾಗಿರಲಿಲ್ಲ. ನನ್ನ ತಂದೆಯಂತೂ ಜ್ಞಾನದೇವ್, ತುಕಾರಾಂ, ಜ್ಞಾನೇಶ್ವರ್ ಈ ರೀತಿಯ ಪರಂಪರೆಯಲ್ಲಿ ನಂಬಿಕೆಯಿಟ್ಟವ. ಮಡಿ ಮೈಲಿಗೆ, ಮುಟ್ಟು ತಟ್ಟು, ಇವೆಲ್ಲವೂ ಬಹಳ ಗಂಭೀರವಾದದ್ದು ಎಂದು ಅವನಿಗೆಂದೂ ಅನ್ನಿಸುತ್ತಿರಲಿಲ್ಲ. ಹೀಗಾಗಿ ಒಂದು ರೀತಿಯ ಕನ್ಸರ್ವೇಟಿವ್ ಆದಂತಹ ಮತಧರ್ಮಗಳ ಹಿನ್ನಲೆಯಲ್ಲಿ ನಾನು ಬೆಳೆದೆ.. ಇದರ ಜೊತೆಗೆ ನಮ್ಮ ಮನೆಯೊಳಗೆ ಒಂದು ಕಾವ್ಯ ಬರೆಯುವ ಪರಂಪರೆಯೂ ಇತ್ತು. ನನ್ನ ತಂದೆ ಮರಾಠಿಯಲ್ಲಿ ಕವಿತೆಗಳನ್ನು ಬರೆಯುತ್ತಿದ್ದು ಒಂದು ಕಾವ್ಯ ಸಂಕಲನವೂ ಬಂದಿತ್ತು. ನಮ್ಮ ಹಿರಿಯ ಅಣ್ಣ ಬಹಳ ದೊಡ್ಡ ಕವಿಯಾಗಿದ್ದ, ಒಂದು ಹಂತದ ನಂತರ ಆತ ವರಾಹ ವಿಠ್ಠಲ ಎಂಬ ಅಂಕಿತವನ್ನೂ ಪಡೆದು ಆ ಬಗೆಯ ಅನೇಕ ರಚನೆಗಳನ್ನೂ ಮಾಡಿದ್ದ. ಕಾವ್ಯ ಬರೆಯಲು ಬೇಕಾದ ಒಂದು ಆನುವಂಶಿಕತೆ ನಮ್ಮ ಮನೆಯೊಳಗಿತ್ತು. ಮಧ್ವರ ದ್ವಾದಶ ಸ್ತೋತ್ರ ಓದುವಾಗಲೂ ಭಕ್ತಿಯ ಜೊತೆಗೆ ಅದರಲ್ಲಿ ಬರುವ ಕಾವ್ಯಾಂಶದ ಬಗ್ಗೆ ನಮ್ಮ ಗಮನ ಹೆಚ್ಚಾಗಿರುತ್ತಿತ್ತು. ಹೀಗಾಗಿ ಕಾವ್ಯಕ್ಕೆ ಪೂರಕವಾದ ಒಂದು ಪರಿಸರದಲ್ಲಿ ನಾನು ಬೆಳೆದೆ ಎನ್ನುವುದಕ್ಕಿಂತ ಇಡೀ ಜೀವನವನ್ನು ಕಾವ್ಯದ ಕನ್ನಡಿಯಲ್ಲಿಯೇ ಕಾಣುವ ಒಂದು ಪ್ರವೃತ್ತಿಯೂ ನನ್ನಲ್ಲಿ ಬೆಳೆದು ಬಿಟ್ಟಿತು. ಎಲ್ಲೇ ಹೋಗಲಿ, ಏನೇ ನೋಡಲಿ ಅಲ್ಲೆಲ್ಲ ಒಂದು ರೀತಿಯ ಕಾವ್ಯಾಂಶ ಇದೆಯೇನೋ ಎಂಬ ಪ್ರೇರಣೆ ನನ್ನಲ್ಲಿ ಇರುತ್ತಿತ್ತು. ಇಡೀ ನಮ್ಮ ಝುಂಜರವಾಡ ಮನೆತನದೊಳಗೇ ಈ ಕಾವ್ಯದ ಪ್ರೇರಣೆ ಹಾಸುಹೊಕ್ಕಾಗಿತ್ತು. ಹೀಗಾಗಿ ನಾನು ಕವಿತೆ ಬರೆಯುತ್ತ ಬಂದೆ. ಕೇವಲ ಮೂವತ್ತು ಪುಟಗಳ ನನ್ನ ಮೊದಲ ಕಾವ್ಯಸಂಕಲನ ೧೯೭೪ರಲ್ಲೇ ಬಂತು. ಆ ಕಾವ್ಯ ಸಂಕಲನ ಬರುವ ಮುನ್ನ ನಾನು ಅದೆಷ್ಟೋ ಕವಿತೆಗಳನ್ನು ಬರೆದಿದ್ದೆ. ಆದರೆ ನನಗೆ ಅವು ಕವಿತೆಗಳಾಗಿಲ್ಲ ಎನ್ನಿಸುತ್ತಿದ್ದುದರಿಂದ ಅವುಗಳನ್ನು ಪ್ರಕಟಿಸುವ ಗೋಜಿಗೆ ನಾನು ಹೋಗಲಿಲ್ಲ. ಕಾಲದ ಓಘದೊಳಗೆ ಆ ಕವಿತೆಗಳೂ ಮರೆಯಾಗಿಬಿಟ್ಟವು.

ಮಾಲಿನಿ: ನಿಮ್ಮ ಕಾವ್ಯ ಪಯಣದ ಬಗ್ಗೆ ಹೇಳಿ..

ಆನಂದ: ಯಾವ ಕವಿಗಳನ್ನೂ, ಸಾಹಿತ್ಯ ಜಗತ್ತನ್ನೂ, ಅರಿಯದೆ ನಾನು ಬರೆದ ಒಂದಿಷ್ಟು ಕವಿತೆಗಳನ್ನು ಒಮ್ಮೆ ಚೆನ್ನವೀರ ಕಣವಿಯವರಿಗೆ ಕಳಿಸಿದ್ದೆ. ಅವರು ಅದನ್ನು ಓದಿ ನನಗೆ ಬಹಳ ಗಂಭೀರವಾದ ಒಂದು ಪತ್ರವನ್ನು ಬರೆದಿದ್ದರು. “ನಿಮ್ಮಲ್ಲಿ ರೂಪಕ ಶಕ್ತಿಗಿಂತ ಚಿತ್ರಕ ಶಕ್ತಿ ಹೆಚ್ಚಾಗಿದೆ. ಅದನ್ನು ನೀವು ಹೆಚ್ಚು ಬೆಳೆಸಿಕೊಳ್ಳಿ” ಎಂಬ ಒಕ್ಕಣೆಯಿದ್ದ ಅವರ ಪತ್ರವನ್ನು ಓದುವಾಗ ನನಗೆ ಆ ಪದಗಳ ಅರ್ಥವೇ ಗೊತ್ತಿರಲಿಲ್ಲ. ಅರ್ಥ ಮಾಡಿಕೊಳ್ಳುತ್ತಲೇ ನಾನು ಬೆಳೆಯತೊಡಗಿದೆ.

ನನ್ನ ಕಾವ್ಯದ ಮೊದಲ ಹಂತದ ಒಂದು ಸನ್ನಿವೇಶ ಏನೆಂದರೆ ನಮ್ಮ ಮನೆಯೊಳಗೆ ಬಹಳ ಬಡತನ ಇತ್ತು, ಸಮಸ್ಯೆಗಳಿದ್ದವು, ದುಃಖಗಳಿದ್ದವು.. ಅಂದರೆ ನನ್ನ ಸುಖಕ್ಕೆ ಅಡ್ಡಿಯಾಗುವ ಎಲ್ಲ ಅಂಶಗಳೂ ಸಮಾಜದಲ್ಲಿವೆ, ಇನ್ನೊಬ್ಬರು ಈ ಎಲ್ಲಕ್ಕೂ ಕಾರಣರಾಗಿದ್ದಾರೆ ಎನ್ನುವಂತಹ ಒಂದು ಭಾವ ನನ್ನ ಕಾವ್ಯವನ್ನೂ ನನ್ನನ್ನೂ ಬಹಳ ಕಾಡುತ್ತಿತ್ತು. ನಾನು ಅನುಭವಿಸಿದ ಕಷ್ಟಗಳಿಗೆ ಯಾರನ್ನೇ ಆದರೂ ಸಿಟ್ಟಿಗೇಳಿಸುವಷ್ಟು ಶಕ್ತಿ ಏನೋ ಇತ್ತು. ನಿಜ ಹೇಳಬೇಕೆಂದರೆ ಇದರಿಂದ ನಾನು ಬಹಳ ಸಿಟ್ಟಿಗೇಳಬೇಕಾಗಿತ್ತು, ಆದರೆ ಸಿಟ್ಟಿಗೇಳುವ ಶಕ್ತಿ ನನ್ನ ಆರ್ಥಿಕ ಸ್ಥಿತಿಗಾಗಲಿ, ನನ್ನ ಕೌಟುಂಬಿಕ ನಂಬಿಕೆಗಾಗಲಿ ಯಾವ ವ್ಯವಸ್ಥೆಗೂ ಇರಲಿಲ್ಲ. ನನ್ನ ಮೊದಲ ಸಂಕಲನ ಓದಿದ ಒಬ್ಬ ಓದುಗರು ನೀವು ಅನುಭವಿಸಿದ ದುಃಖಗಳು ಅಸಂಖ್ಯ. ಆದರೂ ನೀವು ಯಾರ ಮೇಲೂ ಸಿಟ್ಟಿಗೇಳುವುದಿಲ್ಲವಲ್ಲ ಎಂದು ಪ್ರಶ್ನಿಸಿದರು, ದುಃಖ ಎಂಬುದು ಸಿಟ್ಟನ್ನೇ ತರಬೇಕು ಎಂದೆಲ್ಲಿದೆ ಎಂದು ನಾನು ಅವರನ್ನು ಮರು ಪ್ರಶ್ನಿಸಿದ್ದೆ. ಅನುಭವಕ್ಕೆ ಸುಖ ದುಃಖ ಎಂದು ನಾವು ನಾಮರೂಪಗಳನ್ನು ಕೊಡುವುದು ಕೂಡಾ ಸರಿಯಲ್ಲ ಎಂದು ಇಷ್ಟು ವರ್ಷಗಳ ನಂತರ ನನಗೀಗ ಅನ್ನಿಸುತ್ತಿದೆ, ಕೊನೆಗೂ ಅನುಭವ ಎನ್ನುವುದು ಒಂದು ಅನುಭವ, ಸುಖ ದುಃಖ ಎನ್ನುವುದರ ನಿರ್ಣಯ ನಾವೇ ಮಾಡಿಕೊಳ್ಳುವುದು ಅಷ್ಟೇ. ಆದರೆ ಇದು ನನ್ನ ಏಳೆಂಟು ಕವನ ಸಂಕಲನ ಹೊರಬಂದ ನಂತರ ಆದ ಇತ್ತೀಚಿನ ಅಭಿಪ್ರಾಯವೇ ಹೊರತು ಆ ಕಾಲದ ಮೊದಲ ಹಂತದೊಳಗೆ ನನಗೆ ಬರುತ್ತಿದ್ದ ಸಿಟ್ಟಿಗೆ ಸರಿಯಾದ ಸಮರ್ಥನೆಯನ್ನು ಕೊಡಲಾಗುತ್ತಿಲ್ಲ. ಅದನ್ನು ಅಭಿವ್ಯಕ್ತಿ ಮಾಡಿಯೂ ಏನು ಪ್ರಯೋಜನ ಎಂಬ ನಿರಾಸೆಯೂ ನನ್ನ ಕವನಗಳಲ್ಲಿತ್ತು. ಇಂತಹ ಒಂದು ಪರಿಸ್ಥಿತಿಯಲ್ಲಿ ಬರೆದ ಪದ್ಯಗಳು ನನ್ನ ಮೊದಲ ಹಂತದ ಕವಿತೆಗಳು. ಈ ರೀತಿಯ ಪದ್ಯಗಳು ನನ್ನ ಮೊದಲ ಎರಡು ಸಂಕಲನಗಳಲ್ಲಿ ಇವೆ.

ಇನ್ನು ಎರಡನೆಯ ಹಂತ ಎಂದರೆ ನಿಜವಾಗಿಯೂ ಜೀವನಾನುಭವಗಳು ಗಟ್ಟಿಯಾಗಿ, ದಟ್ಟವಾಗಿ ನನ್ನ ನೌಕರಿ, ಸಂಸಾರ ಮುಂತಾದವುಗಳಲ್ಲಿದ್ದ ಸ್ಥಿತಿಗತಿಗಳು, ಅದರಲ್ಲಿ ಆದ ರೂಪಾಂತರಗಳು ಇವುಗಳ ಜೊತೆಜೊತೆಗೆ ನನ್ನ ಅಧ್ಯಯನ, ಚಿಂತನೆಗಳು, ಮನನಗಳು ಇವುಗಳ ಜೊತೆಗೆ ನಾನು ಬೆಳೆದಂತೆ ನನಗೆ ಒಂದು ಬಹಳ ಸ್ಪಷ್ಟವಾಯಿತು: ಕೊನೆಗೂ ಅನುಭವ ಎನ್ನುವುದು ಅದೊಂದು ರೀತಿಯ ನಿರ್ಗುಣವಾದ ರೂಪ, ಅನುಭವಕ್ಕೆ ಸ್ವತಃ ಯಾವುದೇ ರೀತಿಯ ಆಕೃತಿ ಇಲ್ಲ. ಆದರೆ ಆ ಅನುಭವ ಇದು ಸುಖದ ಅನುಭವ, ಇದು ದುಃಖದ ಅನುಭವ, ಇದು ವಿಹ್ವಲತೆ, ತಲ್ಲಣ, ಇದು ವಿಷಾದದ ಅನುಭವ ಅಂತ ನಾವು ಅದಕ್ಕೆ ಹೆಸರಿಡುತ್ತೇವೆಯೋ ಹೊರತು ಅನುಭವಕ್ಕೆ ಸ್ವತಂತ್ರವಾದ ಅರ್ಥ ಇಲ್ಲ ಎನ್ನುವುದು ಬಹಳ ನಿಧಾನವಾಗಿ ಅರಿವಾಗುತ್ತಾ ಹೋಯಿತು. ಇದು ಧಿಡೀರನೆ ಆಗಿದ್ದಲ್ಲ.. ನನ್ನ ಕವಿತೆಯ ಎರಡನೆಯ ಹಂತದೊಳಗೆ ಇದನ್ನು ಒಂದು ರೂಪಕವಾಗಿ ಹೇಳುವುದಾದರೆ ಸಾಮಾನ್ಯವಾಗಿ ಎಲ್ಲರೂ ಹೇಳುವುದು, ಇರುವಿಕೆಯಿಂದ ಅರಿವು ಬೆಳೆಯುತ್ತದೆ, ಆ ಅರಿವಿನ ಬೆಳವಣಿಗೆಯಿಂದ ಇರುವಿನ ರೂಪ ಬದಲಾಗುತ್ತದೆ, ಬದಲಾದ ಇರುವಿನ ರೂಪದಿಂದ ಮತ್ತೆ ಹೊಸ ಅರಿವುಗಳು ಹುಟ್ಟುತ್ತವೆ, ಈ ರೀತಿಯ ಅರಿವುಗಳು ಇರುವನ್ನು ಮತ್ತೆ ಬೆಳೆಸುತ್ತವೆ. ಈ ರೀತಿಯ ಒಂದು ತಾರ್ಕಿಕವಾದ ಲೆಕ್ಕವನ್ನು ನಾವೆಲ್ಲರೂ ಮಾಡಿಕೊಳ್ಳುತ್ತಿರುತ್ತೇವೆ. ಆದರೆ ಇದು ಸರಿಯಲ್ಲ ಎಂದು ನನ್ನ ಕಾವ್ಯ ಚಿಂತನೆ ನನಗೆ ಹೇಳಿಕೊಟ್ಟಿತು (ನನ್ನ ಧರ್ಮ, ತತ್ವ ಚಿಂತನೆ ಹೇಳಿದ್ದಲ್ಲ). ಕವಿಗೆ ತನ್ನ ಇರುವು ಅರಿವಿಗೆ ಬಂದಿರುತ್ತದೆ. ಬದಲಾಗುವ ಹವಾಮಾನಕ್ಕೆ ತಕ್ಕಂತೆ ಆಹಾರ, ವಿಹಾರ, ಹಣದ ಅಗತ್ಯ ಇದೆಲ್ಲದರ ಜೊತೆಗೆ ಅವನ ಕವಿತೆಗಳು ಅವನಿಗೆ ತಂದು ಕೊಡುವ ಗೌರವ, ಹೊಂದಾಣಿಕೆ ಅಂದರೆ ಇರುವಿಕೆ ಎನ್ನುವುದರ ಅನೇಕ ಮಗ್ಗುಲುಗಳು, ಟೊಂಗೆಗಳು, ಟಿಸಿಲುಗಳು, ಇದರೊಟ್ಟಿಗಿನ ಸಂಬಂಧವನ್ನು ಕವಿಗೆ ಮೀರಲಾಗುವುದೇ ಇಲ್ಲ. ಆದರೆ ಅವ ಬಹಳ ಸ್ವ ಪ್ರಜ್ಞೆ ಉಳ್ಳವ, ಪ್ರತಿಯೊಂದನ್ನೂ ಪರಿಶೀಲಿಸಿಯೇ ತನ್ನೊಳಗೆ ತೆಗೆದುಕೊಳ್ಳುವವ ಅಥವಾ ತನ್ನೊಳಗೆ ಏನಾಗುತ್ತದೆ ಅದನ್ನು ಪರಿಶೀಲಿಸಿಯೇ ಹೊರಗೆ ಬಿಡುವವ, ಅದೇನೇ ಆಗಿದ್ದರೂ ಕೂಡಾ ಹಾಗೆ ಹೊರಗೆ ಹೋಗಿದ್ದೋ ಒಳಗೆ ಬಂದಿದ್ದೋ ಏನೋ ಒಂದು ಅರಿವನ್ನು ಅವನಿಗೆ ಹುಟ್ಟಿಸುತ್ತದೆ, ಹುಟ್ಟಿತು ಎನ್ನಿಸಿದರೂ ಕೂಡಾ ಹುಟ್ಟಿದ ಅರಿವಿನಿಂದಲೇ ನನ್ನ ಮುಂದಿನ ಇರುವು ರೂಪಿತ ಆಯಿತು ಎನ್ನುವುದು ಬಹಳ ಅತಾರ್ಕಿಕವಾದ, ಅಗಮ್ಯವಾದ, ಅನೂಹ್ಯವಾದ ನನ್ನ ಊಹೆಯೇ ಹೊರತು, ಆ ಇರುವಿನಿಂದ ಈ ಅರಿವು ಹುಟ್ಟಿತು, ಈ ಅರಿವಿನಿಂದ ನನ್ನ ಇರುವು ಬದಲಾಯಿತು ಎಂದು ಹೇಳಿಕೊಳ್ಳುವುದಕ್ಕೆ ಯಾವುದೇ ರೀತಿಯ ಒಂದು ಸತಾರ್ಕಿಕವಾದ, ಒಂದು ವಾದ ಮಂಡನೆ ನನ್ನ ಕಡೆಯಿಂದ ಕೊನೆಗೂ ಸಾಧ್ಯವಾಗಲಿಲ್ಲ.

ಇದು ಆಗುತ್ತದೆ ಎಂದು ಹೇಳುವ ಕೆಲವು ಸಿದ್ಧಾಂತಗಳು ಇವೆ. ಅದನ್ನು ಹೇಳುವ ಕೆಲವು ಜನರೂ ಇದ್ದಾರೆ ಎಂಬುದು ಬೇರೆ. ನನ್ನ ಕಾವ್ಯ ಕಂಡುಕೊಂಡ ಒಂದು ನಿಜವಾದ ರೂಪಕ ಎಂದರೆ ಅರಿವು ಮತ್ತು ಇರುವುಗಳ ನಡುವೆ ಇರುವ ಸಂಬಂಧ ಯಾವಾಗಲೂ ಅನೂಹ್ಯವಾಗಿರುತ್ತದೆ. ಇದು ನನ್ನ ಕಾವ್ಯದ ಎರಡನೆಯ ಹಂತದ ಮೊದಲ ಗ್ರಹಿಕೆಯಾಗಿತ್ತು.

ಕಾವ್ಯಕ್ಕೆ ಪೂರಕವಾದ ಒಂದು ಪರಿಸರದಲ್ಲಿ ನಾನು ಬೆಳೆದೆ ಎನ್ನುವುದಕ್ಕಿಂತ ಇಡೀ ಜೀವನವನ್ನು ಕಾವ್ಯದ ಕನ್ನಡಿಯಲ್ಲಿಯೇ ಕಾಣುವ ಒಂದು ಪ್ರವೃತ್ತಿಯೂ ನನ್ನಲ್ಲಿ ಬೆಳೆದು ಬಿಟ್ಟಿತು. ಎಲ್ಲೇ ಹೋಗಲಿ, ಏನೇ ನೋಡಲಿ ಅಲ್ಲೆಲ್ಲ ಒಂದು ರೀತಿಯ ಕಾವ್ಯಾಂಶ ಇದೆಯೇನೋ ಎಂಬ ಪ್ರೇರಣೆ ನನ್ನಲ್ಲಿ ಇರುತ್ತಿತ್ತು.

ಆದರೆ ವಿಚಾರ ಮಾಡುತ್ತಾ ಹೋದ ಹಾಗೆ ಭಾಗವತ ಮಹಾಪುರಾಣದಲ್ಲಿ ಒಂದು ಪ್ರಶ್ನೆ ಬರುತ್ತದೆ. ಸಾವು ನಿಶ್ಚಿತವಾದ ಪರೀಕ್ಷಿತ ರಾಜ ಶುಕಾಚಾರ್ಯರಲ್ಲಿ ಕೇಳಿದ ಪ್ರಶ್ನೆ ಅದು. “ಮ್ರಿಯಮಾಣಃ ಕಿಂಕರ್ತವ್ಯಮ್”. “ಎಂದೋ ಒಂದು ದಿನ ಸಾಯಲೇ ಬೇಕಾದ ಮನುಷ್ಯ ಹೇಗೆ ಬದುಕಬೇಕು”. ಇಡೀ ಭಾಗವತ ಮಹಾಪುರಾಣ ಈ ಪ್ರಶ್ನೆಗೆ ನೀಡಿದ ಉತ್ತರವಾಗಿದೆ.. ಈ ಪ್ರಶ್ನೆ ನನ್ನ ಎರಡನೆಯ ಹಂತದ ಕಾವ್ಯಕ್ಕೆ ಬಹಳ ಮಹತ್ವದ್ದು ಎನ್ನಿಸಿ ನನ್ನ ಇಡೀ ಚಿಂತನೆಯನ್ನು ಅನೇಕ ರೀತಿಯಲ್ಲಿ ಬದಲಾಯಿಸುತ್ತಾ ಹೋಯಿತು. ಆ ರೀತಿ ಬದಲಾವಣೆಯ ಮೊದಲ ಕ್ರಮ ಎಂದರೆ ನನ್ನ ಸಿಟ್ಟು ಬಹಳ ವ್ಯರ್ಥ ಎನ್ನುವುದು ನನಗೆ ಅರಿವಾಯಿತು. ನಮ್ಮಲ್ಲಿ ಸಂಕಲ್ಪ ಮಾಡುವಾಗ ಹೇಳಿಕೊಳ್ಳುವ ಅಕ್ರೌಧನೈ ಶೌಚಪರೈ ಎಂಬುದು ಮಹತ್ವದ ಮಾತು. ಮ್ರಿಯಮಾಣಃ ಕಿಂ ಕರ್ತವ್ಯಮ್ ಎಂಬ ಮನುಷ್ಯ ಆ ಕಾರಣಕ್ಕಾಗಿ ಯಾವ ರೀತಿಯಲ್ಲಿ ಬದುಕಬೇಕು ಎಂಬ ಸಂಕಲ್ಪ ಮಾಡಿಕೊಳ್ಳುವ ಮಾತು ಇದು. ನಾನು ಕವಿಯಾಗಿ ಕವಿತೆಯನ್ನು ಹೇಗೆ ಬರೆಯಬೇಕು ಎನ್ನುವುದೂ ಕೂಡಾ ಆ ಪ್ರಶ್ನೆಯ ಒಡಲೊಳಗೇ ಅಡಗಿರುವ ಪ್ರಶ್ನೆ ಎಂದು ನನಗನ್ನಿಸಿತು. ಆದರೆ ಈ ಪ್ರಶ್ನೆಯ ಒಳಗೆ ಒಂದು ದೋಷವೂ ಇದೆ. ಹಾಗಾದರೆ ನಾನು ಕವಿತೆಯನ್ನು ಬಹಳ ಆಲೋಚನೆ ಮಾಡಿ ಯೋಜಿಸಿ ಬರೆಯುತ್ತೇನೆ ಎಂಬ ಅರ್ಥವನ್ನೂ ಮೇಲ್ನೋಟಕ್ಕೆ ಅದು ಕೊಡಬಹುದು. ಆದರೆ ಸಾವು ಖಚಿತವಾದ ಮನುಷ್ಯ ಹೇಗೆ ಕಾವ್ಯವನ್ನು ಬರೆಯಬೇಕು ಎಂಬುದು ಕಾವ್ಯಸೃಷ್ಟಿಯ ಕಾಲದಲ್ಲಿಯೇ ಆಕ್ಟಿವ್ ಆಗಿರಬಾರದು. ಆದರೆ ಕಾವ್ಯಸೃಷ್ಟಿಯ ಆಕ್ಟಿವ್ ನೆಸ್ ಮುಗಿದ ಮೇಲೆ ಒಂದು ರೀತಿಯ ನಿರಾಳವಾದ, ನಿರಾಮಯವಾದ ಬಿಡುಗಡೆಯ ಒಂದು ಕಾಲದಲ್ಲಿ ಅದು ಧ್ಯಾನಕ್ಕೆ ಒದಗಬೇಕು. ಕಾವ್ಯಸೃಷ್ಟಿಯ ಕಾಲದಲ್ಲಿ ಅದು ನಮ್ಮೊಳಗೇ ಆಳವಾಗಿ ಕೂತು ನಮಗರಿವಿಲ್ಲದೆ ಕೆಲಸ ಮಾಡುತ್ತಿರಬೇಕು.

ಮುಧೋಳದಲ್ಲಿ ಸಕ್ಕರಿಯ ಫ್ಯಾಕ್ಟರಿಗಳಿವೆ. ಅಲ್ಲಿ ಕಬ್ಬು ನುರಿಯುವ ಕಾಲಕ್ಕೆ ಯಂತ್ರಗಳು ಆಕ್ಟಿವ್ ಆಗಿರುತ್ತವೆ. ಆದರೆ ನುರಿಕೆಯ ಕಾಲ ಮುಗಿದ ಮೇಲೆ ಯಂತ್ರಗಳು ನುರಿಕೆ ಎನ್ನುವ ಅರ್ಥದಲ್ಲಿ ಮೌನವಾಗಿದ್ದರೂ ಅಲ್ಲಿ ಬೇರೆ ರೀತಿಯ ಕೆಲಸಗಳು ನಡೆಯುತ್ತವೆ. ಅಲ್ಲಿದ್ದ ದೋಷಯುಕ್ತ ಯಂತ್ರಗಳನ್ನು ಸರಿಪಡಿಸುವುದು, ಬೇಡವಾದವುಗಳನ್ನು ಎಸೆದು, ಬೇಕಾದ ಹೊಸತನ್ನು ತಂದು ಜೋಡಿಸುವದು ಈ ಎಲ್ಲ ಕೆಲಸಗಳು ಆಗ ಆಗುತ್ತಿರುತ್ತವೆ.. ಹೀಗೆ ಸಕ್ಕರೆ ನುರಿಸುವ ಕಾಲ, ನುರಿಯುವ ಯಂತ್ರಗಳನ್ನು ಮತ್ತೆ ನುರಿಯಲು ಸಾಧ್ಯವಾಗುವಂತೆ ಸಿದ್ಧಪಡಿಸಿಕೊಳ್ಳುವ ಕಾಲ ಇವೆರಡೂ ಬೇರೆಬೇರೆ ಇರುವಂತೆ ಕವಿಗೂ ಕಾವ್ಯ ಸೃಷ್ಟಿಯೊಳಗೆ ನುರಿಕೆಯ ಕಾಲ, ನುರಿಕೆಯಿಲ್ಲದ ಕಾಲ ಎಂದೂ ಇರುತ್ತವೆ.. ಈ ದೃಷ್ಟಿಯಿಂದ ಸಾವು ಖಚಿತವಾದ ಮನುಷ್ಯ ಹೇಗೆ ಕವಿತೆ ಬರೆಯಬೇಕು ಎನ್ನುವುದು ನುರಿಕೆಯಿಲ್ಲದ ಕಾಲದೊಳಗಿನ ಒಂದು ಕ್ರಿಯೆಯಾಗಿರಬೇಕು ಎಂದು ನನಗನ್ನಿಸಿತು. ಈ ಪ್ರಶ್ನೆ ನನ್ನ ಕಾವ್ಯದ ಎರಡನೆಯ ಹಂತದೊಳಗೆ ಬಹಳ ಗಂಭೀರವಾಗಿ, ಬಹಳ ದೀರ್ಘ ಕಾಲ ನನಗೆ ಚಿಂತನೆಯ ಘಟಕವಾಯಿತು.

ಇತ್ತೀಚಿನ ದಿನಗಳಲ್ಲಿ ಮಗ ಸೊಸೆ ಇದ್ದಾರೆಂದು ಇಂಗ್ಲಂಡ್ ಗೆ ಮತ್ತೆ ಮತ್ತೆ ಹೋಗಬೇಕಾಗಿ ಬಂದದ್ದರಿಂದ, ನನ್ನ ಕಾವ್ಯಕ್ಕೆ ಒದಗಿದ ಚಾಕ್ಷುಷ ರೂಪಕಗಳು ಹಾಗೂ ಶ್ರುತಿ ರೂಪಗಳು ಕೂಡ ಸಾಕಷ್ಟು ವಿಭಿನ್ನ ಆಕೃತಿಗಳನ್ನು ಪಡೆದವು. ಜೀವವು ಪ್ರಜೆಯಾಗಿ ಬದಲಾದ ಚರಿತ್ರೆಯ ವಿಶ್ವರೂಪ ದರ್ಶನವನ್ನು ಈ ಪಡುವಣ ದ ಪಾಡುಗಳು ತೋರಿಸಿದವು. ಈ ನಲವತ್ತು ವರ್ಷಗಳ ಗುದ್ದಾಟ, ತಲ್ಲಣ ಇವುಗಳ ನಂತರ, ಈ ಮ್ರಿಯಮಾಣಃ ಕಿಂ ಕರ್ತವ್ಯಮ್ ಎಂಬುದು ಸಹಜವಾಗಿ, ಸ್ಥಾಯೀ ನೆಲೆಯಾಗಿ ನನ್ನೊಳಗೆ ರೂಪುಗೊಂಡ ಮೇಲೆ ನನ್ನ ಜೀವನ ದೃಷ್ಟಿ, ಕಾವ್ಯ ದೃಷ್ಟಿ ಎರಡೂ ಕೂಡಾ ಕಂಡುಕೊಂಡ ಮುಖ್ಯವಾದ ನೆಲೆ ಏನೆಂದರೆ ಕಾವ್ಯ ಸೃಷ್ಟಿಯಿಂದ ಕೊನೆಗೂ ಕವಿಗೆ ಆಗುವ ಪರಿಣಾಮಗಳಷ್ಟೇ ಮುಖ್ಯವೇ ಹೊರತು, ಆ ಕಾವ್ಯವನ್ನು ಓದಿದವನಿಗಾಗುವ ಕಾವ್ಯದ ಪರಿಣಾಮ ಕವಿಗೆ ಸೃಜನ ಕಾಲದಲ್ಲಿ ಬಹಳ ಮುಖ್ಯವಲ್ಲ ಎನ್ನಿಸಿತು. ಒಂದು ಕವಿತೆ ಬಹಳ ಚೆನ್ನಾಗಿದೆ ಎಂದು ಓದುಗ ಹೇಳಿದರೂ ಯಾವ ವಿಷಯ ಅವನಿಗೆ ಚೆಂದ ಕಾಣಿಸಿತು ಎಂಬುದು ಅವನಿಗೂ, ಕವಿಗೂ ಇಬ್ಬರಿಗೂ ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ಏಕೆಂದರೆ ಆ ಅನುಭವ ಬಹಳ ಸೂಕ್ಷ್ಮವಾದದ್ದು. ಹೀಗಾಗಿ ನನ್ನ ಕವಿತೆಯ ಮೂರನೆಯ ಹಂತದ ಚಿಂತನೆಯೊಳಗೆ ನಾನು ತಿಳಿದುಕೊಂಡಿದ್ದು ಕೊನೆಗೂ ಕಾವ್ಯಸೃಷ್ಟಿ ಎನ್ನುವುದು ನನ್ನ ಸ್ವಂತದ, ಅನಿವಾರ್ಯವಾದ, ಕವಿತೆ ಬರೆಯದೆ ನಾನು ಬದುಕಲಾರೆ ಅನ್ನುವಷ್ಟು ತೀವ್ರವಾದ ಒಂದು ಅನಿವಾರ್ಯ ಪ್ರತಿಕ್ರಿಯೆಯೇ ಹೊರತು ಓದುಗನ ಮೇಲಾಗುವ ಪರಿಣಾಮಗಳ ಬಗ್ಗೆ ಚಿಂತಿಸಿ ಬರೆಯುವುದಲ್ಲ.

ಕವಿತೆಯ ಸೃಷ್ಟಿಯ ಕಾಲದಲ್ಲಿ ನನಗಾಗುವ ಸುಖ, ಅದಕ್ಕೆ ಹತ್ತು ಕೋಟಿಯ ಒಂದು ಪ್ರಶಸ್ತಿ ಸಿಗುವುದಕ್ಕಿಂತ ಬಹಳ ದೊಡ್ಡದು. ಕಾವ್ಯದ ಕುರಿತು ಇರುವ ನೂರೆಂಟು ಸಿದ್ಧಾಂತಗಳಲ್ಲಿ ನಾನು ಈ ಕಾವ್ಯಸಿದ್ಧಾಂತಗಳ ಮಯಸಭೆಯೊಳಗೆ ಬಹಳ ಎಚ್ಚರದಿಂದ ಹೆಜ್ಜೆ ಹಾಕಲಾರಂಭಿಸಿದೆ. ಎಲ್ಲಿ ನೀರಿದೆ, ಎಲ್ಲಿ ನೆಲವಿದೆ ಎಂದು ಗೊತ್ತಾಗದ ಈ ಮಯಸಭೆಗಳು ಬಹಳ ದೊಡ್ಡ ಮಾಯಾಬಜಾರುಗಳಾಗಿ ನನ್ನ ಸುತ್ತ ಹಬ್ಬಬಾರದು ಎನ್ನಿಸಿ ನನ್ನ ಮೂರನೆಯ ಹಂತದ ಕವಿತೆಗಳು ಸೃಷ್ಟಿಯಾದವು.

ಮಾಲಿನಿ: ಕವಿಯಾದವನು ವಹಿಸಬೇಕಾದ ಎಚ್ಚರಗಳ ಬಗ್ಗೆ ಕೊಂಚ ಹೇಳಬಹುದೇ?

ಆನಂದ: ನಾಗರೀಕತೆಯ, ಸಂಸ್ಕೃತಿಯ ಬದಲಾವಣೆ ಎಲ್ಲದರ ನಡುವೆ ನನ್ನನ್ನು ಸಂರಕ್ಷಿಸಿಕೊಳ್ಳಬೇಕು, ಮ್ರಿಯಮಾಣಃ ಕಿಂ ಕರ್ತವ್ಯಮ್ ಈ ಪ್ರಶ್ನೆಯಿಂದ ವಂಚಿತನಾಗಬಾರದು ಇದು ನನ್ನ ಈ ಕಾಲದ ಮುಖ್ಯವಾದ ಕಾಳಜಿಯಾಗಿದೆ. ಪ್ರತಿಯೊಬ್ಬ ಕವಿಗೂ ಕೂಡಾ ನಿಜವಾಗಿಯೂ ತಾನು ಕವಿಯಾಗಬೇಕು ಎಂಬ ಹಠ ಅಥವಾ ಚಟ ಇಲ್ಲದೆ ಒಂದು ಅನಿವಾರ್ಯವಾದ ಹುಟ್ಟುಸಾವಿನ ಪ್ರಶ್ನೆಯಷ್ಟೇ ಅದು ತೀವ್ರವಾಗಿ ಕಾಡುತ್ತಿದ್ದರೆ ಅವನು ಇಟ್ಟುಕೊಳ್ಳಬೇಕಾದ ಪ್ರಶ್ನೆ ಎಂದರೆ ಕಾವ್ಯದಿಂದ ಏನೇನಾಗುತ್ತದೆ ಎಂಬುದಲ್ಲ, ಕಾವ್ಯದಿಂದ ಏನೇನಾಗುವುದಿಲ್ಲ ಎಂಬುದನ್ನು ಮೊದಲು ಅವನು ಗಮನಕ್ಕೆ ತಂದುಕೊಳ್ಳಬೇಕು. ಕಾವ್ಯದಿಂದ ಏನೇನು ಆಗುವುದಿಲ್ಲ ಎಂಬುದು ಗೊತ್ತಾದಮೇಲೆ ಕಾವ್ಯದಿಂದ ನಾವು ಆಗಲಾರದ ಕೆಲಸವನ್ನು ಮಾಡಿಸುವ ಗಡಿಬಿಡಿಗೆ ಹೋಗುವುದಿಲ್ಲ. ಕನಿಷ್ಠ ಪಕ್ಷ ಆ ಎಚ್ಚರವಾದರೂ ಉಳಿಯುತ್ತದೆ. ಆಗ ತನ್ನ ಅಂತರಂಗದ ಸಂಕಟಕ್ಕೆ, ಹಸಿವಿಗೆ, ಪ್ರಾಮಾಣಿಕತೆಗೆ ಸ್ವಲ್ಪವಾದರೂ ಸಮೀಪಹೋಗುವುದು ಅವನಿಂದ ಸಾಧ್ಯವಾದೀತು.

ಮಾಲಿನಿ: ಒಬ್ಬ ಕವಿ ಇಷ್ಟೆಲ್ಲಾ ಬಾಳಿನ ಅರ್ಥ ತಿಳಿದೇ ಬರೆಯಬೇಕಾದ ತುರ್ತು ಇದೆಯೇ?

ಆನಂದ: ಕವಿಯಾದವನು ಬಾಳಿನ ಅರ್ಥ ಏನು ಎಂದು ತಿಳಿಯಲು ಪ್ರಯತ್ನಿಸುವುದು ಅವನ ಕಾವ್ಯೋದ್ಯಮದ ಅನಿವಾರ್ಯವಾದ ಕ್ರಿಯೆ. ಈ ಶೋಧದಲ್ಲಿ ಆತ ತನ್ನ ಸುತ್ತಲಿನ ಅನ್ಯಜೀವಿಗಳ ಜೀವನ ಮಾದರಿಗಳನ್ನು ಸಂಗ್ರಹಿಸಿ, ಅವುಗಳ ಕಾವ್ಯ ಪ್ರಜ್ಞೆಯ ಪ್ರಯೋಗಶಾಲೆಯ ಪರಿಣಾಮಗಳಿಂದ ಇದು ಬದುಕಿನ ಅರ್ಥ ಎಂದು ತಿಳಿಯುವುದು ತಪ್ಪು. ತನಗೆ ದಕ್ಕಿದ ಅನುಭವವೆಂಬ ಮಾಂಸಲ ಭಾಗದ, ಅತ್ಯಂತ ನೋವಿನ ಬಯಾಪ್ಸಿಯನ್ನು ತಾನೇ ಮಾಡಿಕೊಂಡು ಪರೀಕ್ಷೆಗೆ ಒಡ್ಡಿಕೊಂಡಾಗ ಮಾತ್ರ ನನ್ನ ಬಾಳಿನ ಅರ್ಥ ನನಗೆ ಸಿಕ್ಕರೂ ಸಿಕ್ಕೀತು. ಹಾಗಂತ ಸಾಮಾಜಿಕಹೊಣೆ, ಮಾನವೀಯತೆ ಇತ್ಯಾದಿ ಆಧುನಿಕ ಅಗತ್ಯಗಳ ಬಗೆಗೆ ಕವಿಯು ನಿರ್ಲಕ್ಷ್ಯ ಮಾಡಬೇಕು ಎಂದಲ್ಲ. ವೈರುಧ್ಯ ಜೀವನದ ಒಳಗೇ ಇದೆ. ಇಲ್ಲಿ ತೀರ ಅಂತರಂಗಕ್ಕೆ ಕೀಲಿಸಿ ಕೊಂಡವರಷ್ಟೇ ನಿಜವಾದ ಬಹಿರಂಗದ ಹಿತಕ್ಕೂ ಸಲ್ಲಬಹುದು. ಬಹಿರಂಗವಾದಿಗಳು ತಮ್ಮ ಕಾವ್ಯ ಆದಷ್ಟು ಬೇಗ ವೈರಲ್ ಆಗಲಿ ಎಂದು ಹೋರಾಡಬೇಕಾದ ಅನಿವಾರ್ಯತೆ ಇಟ್ಟುಕೊಳ್ಳ ಬೇಕಾಗುತ್ತದೆ. ಆದರೆ ಯಾವ ದೇಶ, ಕಾಲದ ಕವಿತೆಯು ಕೂಡ ಸಂವಹನ ಆಗೋದು, ತೀರಾ ನಿಧಾನವಾಗಿ. ಪ್ರತಿಯೊಂದು ಕವಿತೆ ಒಂದು ರಕ್ತದ ಬಾಟಲ್. ಅದನ್ನು ಕವಿಯೇ ತನ್ನದೇ ಭಾಷಿಕ ಸೂಜಿ, ನಳಿಕೆಗಳ ಮೂಲಕ ನಿಧಾನವಾಗಿ ತನ್ನ ಕವಿತೆಯಲ್ಲಿ ಸಂಗ್ರಹಿಸುತ್ತಾನೆ. ನಂತರ ಅದನ್ನು ಓದುಗ ತನ್ನ ರಕ್ತಕ್ಕೆ ಅದನ್ನು ಸೇರಿಸಿಕೊಳ್ಳಬೇಕು ಎನಿಸಿದರೆ ಆತನೂ ಅದನ್ನು ತನ್ನದೇ ಆದ ಸೂಜಿ, ನಳಿಕೆಗಳ ಮೂಲಕವೇ ಅಷ್ಟೇ ನಿಧಾನವಾಗಿ, ಹನಿ ಹನಿಯಾಗಿ ಒಳಗೆ ಬಿಟ್ಟುಕೊಳ್ಳಬೇಕಾಗುತ್ತದೆ. ಏನಿದ್ದರೂ ಚುಚ್ಚುವ ಸೂಜಿ ಒಳಸೇರಿಸುವ ನಳಿಕೆ, ಇವುಗಳ ಋಣಾನುಬಂಧ ಕಾರಯಿತ್ರೀಗೂ ತಪ್ಪಿದ್ದಲ್ಲ, ಭಾವಯಿತ್ರಿಗೂ ತಪ್ಪಿದ್ದಲ್ಲ.

ಇಷ್ಟಕ್ಕೂ ಎಲ್ಲರ ರಕ್ತ ಎಲ್ಲರಿಗೂ ಹೊಂದುವುದಿಲ್ಲ ಅನ್ನೋ ತಾತ್ವಿಕ ಸತ್ಯವನ್ನಂತು ನಾವು ಗಮನಿಸಲೇ ಬೇಕಾಗುತ್ತದೆ. ನನ್ನ ಮೈಯಲ್ಲಿ ಹರಿಯುವ ರಕ್ತ ನನ್ನದಷ್ಟೇ ಅಲ್ಲ ಅನ್ನೋ ಅರಿವು, ಕಾವ್ಯ ಚರಿತ್ರೆಯ ಸಂಕರಗಳ ಸಂಕಥನಗಳ ಸಂಕಟಗಳಲ್ಲಿಯೆ ನಿಯತವಾಗಿದೆ. ಅದು ಬೇಂದ್ರೆ ಹೇಳೋ ಹಾಗೆ “ಅದು ಪ್ರಾರಬ್ಧ ಕರ್ಮ, ಅವರವರು ಅವರವರ ಬಗೆಯಲ್ಲಿ ಅದನ್ನು ಅನುಭವಿಸಿಯೇ ದಾಟಬೇಕು”

ಮಾಲಿನಿ: ಒಬ್ಬ ಕವಿಯಾಗಿ ಈಗಿನ ಸಧ್ಯದ ನಿಮ್ಮ ಮನಸ್ಥಿತಿ ಯಾವ ಬಗೆಯದು?

ಆನಂದ: “ನಾವೆಲ್ಲ ಕತ್ತಲೆಯಲ್ಲೆ ಬದುಕುತ್ತಿರುವವರು, ಕತ್ತಲೆಯಲ್ಲೇ ಬದುಕುವ ಇನ್ನಿತರರಿಗೆ ಕೈಗೆ ದಕ್ಕಿದ್ದನ್ನೇ ಕತ್ತಲೆಯಲ್ಲೇ ಇರುವ ನಾವು ಕೊಡುತ್ತೇವೆ. ನಮ್ಮ ಸಂಶಯವೇ ನಮ್ಮ ಉನ್ಮಾದ, ನಮ್ಮ ಉನ್ಮಾದವೆ ನಮ್ಮ ಕಲೆ” ಎಂದು ಹೆನ್ರಿ ಜೇಮ್ಸ್ ಹೇಳ್ತಾನೆ. ನಾನೂ ಅದೇ ಸ್ಥಿತಿಯಲ್ಲಿಯೇ ಇದ್ದೇನೆ.