ಸೂರ್ಯೋದಯದಲ್ಲೋ, ಸೂರ್ಯಾಸ್ತದಲ್ಲೋ ಆಗಸದಲ್ಲಿ ಚೆಲ್ಲಿ ಹೋದ ಬಣ್ಣಗಳು ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಹೋದಂತೆ, ಗ್ರಹಿಕೆಗಳು ಒಬ್ಬರಿಂದ ಮತ್ತೊಬ್ಬರಿಗೆ ಬದಲಾಗುತ್ತಲೇ ಇರುತ್ತವೆ. ಒಬ್ಬನೇ ವ್ಯಕ್ತಿಯು ಒಂದೊಂದು ಕಾಲದಲ್ಲಿ ಬದುಕನ್ನು ಗ್ರಹಿಸುವ ರೀತಿಯೂ ಬದಲಾಗಿರುತ್ತದೆಯಲ್ಲವೇ. ಹಾಗೆಯೇ ಈ ಕತೆಗಳು ಕೂಡ ಎಂದೆನಿಸುತ್ತದೆ. ಹಾಗೆ ನೋಡಿದರೆ ಎಷ್ಟೊಂದು ಕಲಾತ್ಮಕವಾದ ಕತೆಗಳನ್ನು ಬರೆದರೂ ʻಕತೆಗಾರರುʼ ರೂಪುಗೊಳ್ಳುವುದು ಓದುಗರ ಮನಸ್ಸಿನಲ್ಲಿ ಅಲ್ಲವೇ.
ಕತೆಗಳ ಜಾಡು ಹಿಡಿದ ಬರಹವೊಂದನ್ನು ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.

ಸೂರ್ಯೋದಯದ ಸುಂದರ ಸನ್ನಿವೇಶವನ್ನು ಕಲ್ಪಿಸಿಕೊಳ್ಳೋಣ. ಪಕ್ಕದ ಕಾಲೋನಿಯಲ್ಲಿ ನಿಂತುಕೊಂಡ ಗೆಳತಿ ಫೋನ್ ಮಾಡಿ, ‘ಈಗಿಂದೀಗಲೇ ಆಕಾಶ ನೋಡು, ಎಳೆಸೂರ್ಯನ ಬೆಳಕಿನ ಹಿನ್ನೆಲೆಯಲ್ಲಿ ಕೆಂಪಾದ ಮೋಡಗಳು ತಾವರೆಯಂತೆ ರೂಪಪಡೆದಿವೆ. ಎಷ್ಟೊಂದು ಸುಂದರವಾಗಿ ಕಾಣಿಸುತ್ತಿವೆ, ಇನ್ನೊಂದು ಐದು ಸೆಕೆಂಡು ಈ ರೂಪವಿರಬಹುದು ಬೇಗ ನೋಡು!’ ಎಂದು ಸೂರ್ಯೋದಯವನ್ನು ವರ್ಣಿಸಿದಳು. ಆದರೆ ಆಕಾಶವನ್ನು ನೋಡುವ ನನಗೆ, ಅಲ್ಲಿ ಬೇರೆಯದೇ ಚಿತ್ರವೊಂದು ಕಾಣಿಸುತ್ತಿದೆ. ಮೋಡಗಳ ರಂಗಿನಾಟದ ನಡುವೆ ತೋರುವ ಚಿತ್ರವು ತಾವರೆಯನ್ನು ಹೋಲುವುದಿಲ್ಲವಲ್ಲ ಎಂದು ನಾನು ತಾವರೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ.. ನನ್ನ ಗ್ರಹಿಕೆಗೆ ತೋರುವ ಚಿತ್ರವು ಆಲದೆಲೆಯ ಮೇಲೆ ಮಲಗಿದ ಕೂಸಿನಂತೆ ಕಾಣುತ್ತಿದೆ.

ಜಗತ್ತಿನ ಅನೇಕ ಘಟನೆಗಳು, ನೋಟಗಳು, ಚಿತ್ರಣಗಳು ಹೀಗೆಯೇ ಹತ್ತಾರು ಆಯಾಮಗಳನ್ನು ಹೊಂದಿವೆ. ಕಣ್ಣಿಗೆ ಗೋಚರಿಸುವ ಚಿತ್ರವು ನೋಡುವವನ ಗ್ರಹಿಕೆಯ ಸಾಮರ್ಥ್ಯವನ್ನು ಕೂಡ ಅವಲಂಬಿಸಿರುತ್ತದೆ. ಅಂದರೆ ಈ ಜಗತ್ತಿನಲ್ಲಿ ನಿರ್ದಿಷ್ಟ ಸಮಯದಲ್ಲಿ ಒಬ್ಬ ವ್ಯಕ್ತಿಯು ಯಾವ ಜಾಗದಲ್ಲಿ ನಿಂತು ಒಂದು ಚಿತ್ರವನ್ನು ಗ್ರಹಿಸುವನೋ, ಅದೇ ಚಿತ್ರವನ್ನು ಅದೇ ಜಾಗದಲ್ಲಿ ನಿಂತು ಮತ್ತೊಬ್ಬ ವ್ಯಕ್ತಿಯು ಗ್ರಹಿಸುವುದು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯು ಚಿತ್ರವೊಂದನ್ನು ನೋಡಿದ ಬಳಿಕ ಮತ್ತೊಬ್ಬ ಅದೇ ಜಾಗಕ್ಕೆ ಬಂದು ಅದೇ ಚಿತ್ರವನ್ನು ಗ್ರಹಿಸಲು, ಪ್ರಯತ್ನಿಸಲು ಹಂಬಲಿಸಬಹುದು. ಆದರೆ ಆ ವೇಳೆಗೆ ಸಮಯವು ಜಾರಿರುತ್ತದೆ. ಚಿತ್ರವು ಕೊಂಚವಾದರೂ ಬದಲಾಗಿರುತ್ತದೆ. ನಿರಂತರವಾಗಿ ಚಲಿಸುವ ಮೋಡಗಳ ದೆಸೆಯಿಂದಾಗಿ, ಸೂರ್ಯೋದಯದ ಸಂದರ್ಭದಲ್ಲಿ ಕಾಣುವ ಚಿತ್ರದ ಸ್ವರೂಪವು ಬದಲಾದ ಹಾಗೆ. ಒಟ್ಟಿನಲ್ಲಿ ಬದುಕಿನಲ್ಲಿ ಸಿಗುವ ಕ್ಷಣಗಳು ನಮಗೆ ಕೇವಲ ಒಂದೇ ಬಾರಿ ಲಭ್ಯವಾಗುತ್ತವೆಯಷ್ಟೇ.

ಆದರೆ ಲೋಕವನ್ನು ಸಾಧ್ಯವಾದಷ್ಟು ವಿಸ್ತಾರವಾಗಿ ಕಾಣಬೇಕು, ಇನ್ನಷ್ಟು ವಿಚಾರಗಳನ್ನು ಅರ್ಥಮಾಡಿಕೊಂಡು ನಮ್ಮ ಬದುಕನ್ನು ಚಂದಗಾಣಿಸಿಕೊಳ್ಳಬೇಕು, ನಮ್ಮ ನೋಟವನ್ನು ತಿದ್ದಿಕೊಳ್ಳಬೇಕು ಎಂಬ ಹಂಬಲ ನಮ್ಮ ಅಂತರಂಗದಲ್ಲಿ ಸದಾ ಇರುತ್ತದೆಯಷ್ಟೇ. ಹೀಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಸಂದರ್ಭಗಳಲ್ಲಿ ನಮಗೆ ಕತೆಗಳು ನೆರವಾಗುತ್ತವೆ ಎಂದು ಅನಿಸುತ್ತದೆ. ಹಿಂದೆ ಹೀಗಾಯಿತಂತೆ ಎಂಬ ಕತೆಗಳು, ಎಲ್ಲೋ ಹೀಗೆ ನಡೆದಿದೆಯಂತೆ ಎಂಬ ಕತೆಗಳು, ಹೀಗೆಲ್ಲ ಆಗಿ ಹೋಗುವ ಸಾಧ್ಯತೆಗಳಿವೆ ನೋಡು.. ಎಂದು ವಿವರಿಸುತ್ತ ಬುದ್ಧಿ ಮಾತು ಹೇಳುವ ಕತೆಗಳನ್ನು ಕೇಳಿಯೇ ನಾವು ಬೆಳೆಯುತ್ತೇವೆ. ಹೀಗೆ ಕೇಳಿದ ಕತೆಗಳೇ ಎಷ್ಟೋ ಸಂದರ್ಭಗಳಲ್ಲಿ ಬದುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಒಂದಲ್ಲ ಒಂದು ರೀತಿಯಲ್ಲಿ ಆಧಾರವಾಗಿರುತ್ತವೆ.

ಮನುಷ್ಯನ ಬದುಕಿನಲ್ಲಿ ಎದುರಾಗುವ ಸಂದಿಗ್ಧ ಕ್ಷಣಗಳು, ಅಂತರಂಗದ ಸುಖದುಃಖಗಳು, ತುಮುಲಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವೂ ಇದೇ ಮಾದರಿಯದ್ದು. ಎಲ್ಲ ಭಾವನೆಗಳನ್ನೂ ಸಮಾನ ಗ್ರಹಿಕೆಯಲ್ಲಿ ಅರ್ಥೈಸಿಕೊಳ್ಳುವುದು ಸಾಧ್ಯವಾಗದು. ಕೇವಲ ಅಂತರಂಗದ ತುಮುಲಗಳಷ್ಟೇ ಅಲ್ಲ, ಸಾಮಾಜಿಕ ಆಗುಹೋಗುಗಳು, ವ್ಯವಸ್ಥೆಯ ಓರೆಕೋರೆಗಳು ಮತ್ತು ಅಗಾಧವಾದ ಈ ಪ್ರಾಕೃತಿಕ ವೈಚಿತ್ರ್ಯವನ್ನು ಗ್ರಹಿಸಲು, ಅವುಗಳನ್ನೆಲ್ಲ ತರ್ಕಕ್ಕೆ ನಿಲುಕುವಂತೆ ಮಾಡಲು ಮನುಷ್ಯ ಲೆಕ್ಕಾಚಾರಗಳನ್ನು ಹಾಕುತ್ತಲೇ ಇರುತ್ತಾನೆ. ಅಂತಹ ಸಂದರ್ಭಗಳಲ್ಲಿಯೂ ಈ ಕತೆಗಳೇ ಕೈ ಹಿಡಿದು ನಡೆಸುತ್ತವೆ.

ಜಗತ್ತಿನ ವಿಸ್ಮಯಗಳನ್ನು ಅರ್ಥಮಾಡಿಕೊಳ್ಳಲು ಹೊರಡುವಾಗ, ಸಂದಿಗ್ಧ ಕ್ಷಣಗಳು ಸೃಷ್ಟಿಸುವ ಸವಾಲುಗಳನ್ನು ಗಮನಿಸುವಾಗ ಈ ಗ್ರಹಿಸುವಿಕೆಯು ಎಷ್ಟು ಕಷ್ಟದ್ದೆಂದು ಅರ್ಥವಾಗುತ್ತದೆ ಮತ್ತು ಈ ಕಷ್ಟವೇ ನಮ್ಮನ್ನು ಬದುಕಿನಲ್ಲಿ ‘ವಿನೀತ’ವಾಗಿಸುತ್ತದೆ. ಮನುಷ್ಯನ ಪ್ರಯತ್ನಗಳಲ್ಲಿ ವಿನೀತ ಭಾವವಿದ್ದಾಗ, ಆತ ಹೆಚ್ಚೆಚ್ಚು ಆಪ್ತವಾಗಿರುವ ಮಾನವೀಯವಾಗಿರುವ ಕತೆಗಳನ್ನು ಹುಡುಕಬಹುದೇನೋ.

ಹೀಗೆ ಗ್ರಹಿಕೆಯ ಜಾಡು ಹಿಡಿದು ಯೋಚಿಸುವುದಾದರೆ, ಹಿರಿಯ ಕತೆಗಾರ ಶ್ರೀಧರ ಬಳಗಾರ ಅವರು ಹೇಳುವಂತೆ ಒಬ್ಬ ಕತೆಗಾರರು ಓದುಗರ ಓದುವಿಕೆಯಲ್ಲಿ ರೂಪುಗೊಳ್ಳುತ್ತಾರೆ. ಎಷ್ಟೇ ಕಲಾತ್ಮಕವಾದ, ಆಪ್ತವಾದ ಕತೆಗಳನ್ನು ಕತೆಗಾರರು ಬರೆಯಲಿ, ಓದುಗರೊಬ್ಬರು ಅವುಗಳನ್ನು ಓದುವ ‘ಪ್ರಕ್ರಿಯೆ’ಯಲ್ಲಿ ಕತೆಗಾರರು ರೂಪುಗೊಳ್ಳುತ್ತಾ ಹೋಗುತ್ತಾರೆ. ಹಾಗೆ ಓದುಗರು ಗ್ರಹಿಸುವ ವಿಚಾರಗಳ ಮೂಲಕವೇ ಕತೆಗಾರರ ವ್ಯಕ್ತಿತ್ವವೂ ಅನಾವರಣಗೊಳ್ಳುತ್ತ ಸಾಗುತ್ತದೆ. ಯಾಕೆಂದರೆ ಕತೆಗಾರರು ಬದುಕಿನಲ್ಲಿ ನಂಬಿಕೊಂಡ ತಾತ್ವಿಕತೆ, ಆದರ್ಶಗಳು ಕತೆಗಳಲ್ಲಿ ಗೋಚರಿಸದೇ ಇರುವುದು ಸಾಧ್ಯವೇ. ಖಂಡಿತಾ ಇಲ್ಲ. ಹಾಗಾಗಿ ಕತೆಗಾರನ ಅಥವಾ ಕತೆಗಾರ್ತಿಯ ಆಂತರ್ಯದಲ್ಲಿರುವ ವಿಚಾರಗಳು, ಜೀವನಾದರ್ಶಗಳು, ಆಶಯಗಳು ಪರೋಕ್ಷವಾಗಿ ಕತೆಯೊಳಗೆ ಮೇಳೈಸಿಕೊಂಡು, ಅವರು ನಂಬಿದ ತಾತ್ವಿಕತೆಯು ಅಕ್ಷರಗಳ ಮೂಲಕ ಓದುಗನನ್ನು ತಲುಪಬಲ್ಲವು.

ಯಾವುದೋ ತರಗತಿಗಳಲ್ಲಿ ಕತೆಗಾರರನ್ನು ರೂಪಿಸುವುದು ಸಾಧ್ಯವಾಗದೇ ಇರಬಹುದು. ಆದರೆ ಕತೆಗಳ ಕುರಿತು, ಕತೆಗಾರರ ಕುರಿತು ಚರ್ಚಿಸುತ್ತ, ಸಂವಾದಗಳನ್ನು ನಡೆಸುತ್ತ, ಹೊಸ ವಿಚಾರಗಳನ್ನು ಅರಿಯುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬಹುದು. ಹಾಗೆ ನೋಡಿದರೆ ಪಟ್ಟಾಂಗದ ಕಟ್ಟೆಗಳು, ಹಾರ್ದಿಕ ಕುಶಲ ಮಾತುಗಳು, ಅಲ್ಲೆಲ್ಲೋ ಹಾಗಾಯಿತಂತೆ ಎನ್ನುವ ಗಾಸಿಪ್‌ಗಳು ʻಕತೆʼಯೆಂಬ ಗಿಡದ ಮೊಳಕೆಗಳಲ್ಲವೇ. ಹಾಗಾಗಿ ಸಾಹಿತ್ಯವನ್ನು ‘ಸೃಜನಪ್ರಕ್ರಿಯೆ’ಯ ದೃಷ್ಟಿಕೋನದಿಂದ ನೋಡುವವರು, ಕತೆಕಟ್ಟುವ ಈ ವಿವಿಧ ರೀತಿಯನ್ನು ಗಮನಿಸುತ್ತ, ಕಥಾಕುತೂಹಲಿಗರು ತಾವೂ ಸಾಹಿತ್ಯ ಸೃಷ್ಟಿಯ ಲೋಕದೊಳಗೆ ಅಡಿಯಿಡಲು ಯತ್ನಿಸಬಹುದು.

ಅಂತರಂಗ, ಬಹಿರಂಗ ವಿಚಾರಗಳೆಂಬಂತೆ ನಮ್ಮ ವೈಯಕ್ತಿಕ ಜೀವನಾನುಭವಗಳು ಮತ್ತು ಸಾಮಾಜಿಕ ಅನುಭವಗಳು ಬರಹಗಳ ಸೃಷ್ಟಿಗೆ ನೆರವಾಗುತ್ತವೆ. ಸಂಯಮ ಮತ್ತು ತನ್ಮಯತೆಯ ಜೊತೆಗೆ ಈ ಅನುಭವಗಳು ಅಂತರ್ಜಲ ರೂಪದಲ್ಲಿದ್ದಾಗ ಬರವಣಿಗೆ ಹೆಚ್ಚು ಹೊಳಪು ಪಡೆಯುವುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅನುಭವಗಳೆಂಬ ಮೇಲ್ಮೈ ನೀರು ಅಥವಾ ಮಳೆನೀರು, ಕಲಾತ್ಮಕತೆ ಎಂಬ ಅಂತರ್ಜಲವಾಗಿ ಪರಿವರ್ತಿತವಾಗುವುದು ಮುಖ್ಯ.

ಕತೆ ಕಟ್ಟುವ ಪ್ರಯತ್ನದಲ್ಲಿರುವಾಗ, ‘ನಮ್ಮೂರಲ್ಲಿ ನಿಜಕ್ಕೂ ನಡೆದ ಘಟನೆಯನ್ನು ಬರೆದಿದ್ದೇನೆ. ಇದು ನಿಜಾ ಕತೆ’ ಎಂದು ಅನೇಕ ಬಾರಿ ಸಮರ್ಥನೆಗಳು ಬರುವುದುಂಟು. ಆದರೆ ಘಟನೆಗಳು, ದುರಂತಗಳು, ಸುಖ ದುಃಖಗಳ ಜೊತೆಗೆ ಕಲಾತ್ಮಕತೆಯ ಬಂಧನವಿಲ್ಲದೇ ಇದ್ದರೆ ಕತೆಯೆಂಬ ಶಿಲ್ಪ ರೂಪುಗೊಳ್ಳದು. ಆದ್ದರಿಂದ ಅನುಭವವೂ, ಕಾಲ್ಪನಿಕತೆಗೂ ತಳಹದಿಯಾಗಿರುವುದು ಸೂಕ್ಷ್ಮತೆಯ ಬೆಳಕಿನಲ್ಲಿ ನಡೆಯುವ ಗಮನಿಸುವಿಕೆಯ ಪ್ರಕ್ರಿಯೆ.

ಗ್ರಹಿಕೆಗಳು ಒಬ್ಬರಿಂದ ಮತ್ತೊಬ್ಬರಿಗೆ ಬದಲಾಗುತ್ತದೆ ಎಂದಷ್ಟೇ ಹೇಳುವಂತಿಲ್ಲ. ಒಬ್ಬನೇ ವ್ಯಕ್ತಿಯು ಒಂದೊಂದು ಕಾಲದಲ್ಲಿ ಬದುಕನ್ನು ಗ್ರಹಿಸುವ ರೀತಿಯೂ ಬದಲಾಗಿರುತ್ತದೆಯಲ್ಲವೇ. ‘ನವಿಲುಗಳು’ ಕುಣಿಯುವುದನ್ನು ನೋಡುತ್ತ ಮೈಮರೆಯುವ ಬಾಲಕ, ತನ್ನ ಸುಮಾರು ನಲವತ್ತರ ಪ್ರಾಯದಲ್ಲಿ ಅದೇ ಜಾಗದಲ್ಲಿ ನವಿಲುಗಳ ಕುಣಿತವನ್ನು ನೋಡಿದಾಗ ಆತನ ಮನಸ್ಸಿನಲ್ಲಿ ಏನೆಲ್ಲ ವಿಚಾರಗಳು ಹಾದು ಹೋಗಬಹುದು? ಆ ದೃಶ್ಯದ ಸೌಂದರ್ಯವನ್ನು ತಲ್ಲೀನತೆಯಿಂದ ಆಸ್ವಾದಿಸುವುದು ಎಷ್ಟರ ಮಟ್ಟಿಗೆ ಸಾಧ್ಯ? ಡಾ.ಯು.ಆರ್. ಅನಂತ ಮೂರ್ತಿಯವರ ‘ನವಿಲುಗಳು’ ಕತೆಯಲ್ಲಿ ಬರುವ ಸಂದರ್ಭವಿದು. ಉತ್ತಮ ಪುರುಷ ನಿರೂಪಣೆಯಲ್ಲಿ ಸಾಗುವ ಈ ಕತೆಯು ಅಂತರಂಗದ ವ್ಯಾಪಾರವನ್ನು ಬಹಿರಂಗಗೊಳಿಸುವ, ತನ್ನ ಅಂತರಂಗದೊಳಗೆ ನಿಜವಾಗಿಯೂ ನಡೆಯುವ ಸಂಘರ್ಷವನ್ನು ಸಾಧ್ಯವಾದಷ್ಟು ಪ್ರಾಮಾಣಿಕತೆಯಿಂದ ಮಂಡಿಸಲು ಮಾಡುವ ಪ್ರಯತ್ನ ಕತೆಯಾಗಿದೆ. ಕತೆಯನ್ನು ಓದಿ ಮುಗಿಸುವಷ್ಟರಲ್ಲಿ, ‘ಜೀವನವೆಂದರೆ ಹೀಗೆ ಪ್ರತಿದಿನದ ಜಂಜಾಟವನ್ನು ನಿಭಾಯಿಸುತ್ತ ಸಾಗುವುದಾಗಿದೆ. ಜೀವನಕ್ಕಿಂತ ದೊಡ್ಡದಾದ ಮತ್ತೊಂದು ಸತ್ಯ ಈ ಜಗತ್ತಿನಲ್ಲಿ ಇರಲು ಸಾಧ್ಯವಿಲ್ಲ’ ಎಂಬ ವಿನಯವೊಂದು ಕತೆಯಲ್ಲಿ ಗೋಚರಿಸುತ್ತದೆ.

ಕವನ್ನು ಸಾಧ್ಯವಾದಷ್ಟು ವಿಸ್ತಾರವಾಗಿ ಕಾಣಬೇಕು, ಇನ್ನಷ್ಟು ವಿಚಾರಗಳನ್ನು ಅರ್ಥಮಾಡಿಕೊಂಡು ನಮ್ಮ ಬದುಕನ್ನು ಚಂದಗಾಣಿಸಿಕೊಳ್ಳಬೇಕು, ನಮ್ಮ ನೋಟವನ್ನು ತಿದ್ದಿಕೊಳ್ಳಬೇಕು ಎಂಬ ಹಂಬಲ ನಮ್ಮ ಅಂತರಂಗದಲ್ಲಿ ಸದಾ ಇರುತ್ತದೆಯಷ್ಟೇ. ಹೀಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಸಂದರ್ಭಗಳಲ್ಲಿ ನಮಗೆ ಕತೆಗಳು ನೆರವಾಗುತ್ತವೆ ಎಂದು ಅನಿಸುತ್ತದೆ.

ವ್ಯಕ್ತಿಯು ತನ್ನ ಒಳಗಿನ ತುಮುಲವನ್ನು ಬಹಿರಂಗದಲ್ಲಿ ನಿಭಾಯಿಸಿಕೊಂಡು ಹೋಗುವ ಕುಶಲತೆಯನ್ನೂ ಕಲಾತ್ಮಕ ನಿರೂಪಣೆಯಲ್ಲಿ ನೇಯ್ದ ಕತೆ ‘ನವಿಲುಗಳು’. ಎರಡು ತಲೆಮಾರುಗಳಿಗೆ ಸೇರಿದ ಪಾತ್ರಗಳು, ತಮಗೆ ಒದಗಿದ ಜೀವನವನ್ನು ಸ್ವೀಕರಿಸುವ ವಿಧಾನದಲ್ಲಿ ಇರುವ ವ್ಯತ್ಯಾಸವನ್ನು ಗುರುತಿಸುತ್ತದೆ. ಕತೆಯಲ್ಲಿ ನಿರೂಪಕನೇ ನಾಯಕನಾಗಿ ತನ್ನ ಅಂತರಂಗದ ಯೋಚನೆಯನ್ನೇ ಇನ್ನಷ್ಟು ಒರೆಗೆ ಹಚ್ಚಲು ನಡೆಸುವ ಪ್ರಯತ್ನವೇ ಕತೆಯ ಹೊಳಪನ್ನು ಹೆಚ್ಚಿಸಿದೆ.

‘ನಾನು ಎಂಥ ದುರ್ಬಲ ಮನುಷ್ಯನೆಂದರೆ ಹೆಂಡತಿಗೆ ಹೀಗೆ ನನ್ನನ್ನು ರೂಪಿಸಲು ಪ್ರೇರಣೆ ಕೊಡುವವನೂ ನಾನೇ. ಮದುವೆಯಾಗುವಾಗ ತೆಳ್ಳಗೆ ಉದ್ದಗೆ ಕಾಣುತ್ತಿದ್ದ ಅವಳಿಗೆ ಈ ಎಲ್ಲ ಆಸೆಯಿರಲಿಲ್ಲ; ಯಾವ ಹೆಣ್ಣಿಗೂ ಇರಲ್ಲ. ಪ್ರಾಯಶಃ ಅವಳು ನನ್ನನ್ನು ಉಪಯೋಗಿಸಿಕೊಂಡಳು ಎನ್ನುವುದಕ್ಕಿಂತ ಹೆಚ್ಚಿನ ಸತ್ಯ ನಾನೇ ಅವಳನ್ನು ಹೀಗೆಲ್ಲ ಮಾಡಿಸಿಕೊಳ್ಳುವಂತೆ ಸೂಕ್ಷ್ಮವಾಗಿ ಉಪಯೋಗಿಸಿಕೊಳ್ಳುತ್ತ ಹೋದೆ ಎಂಬುದೇ ಯಾಕಿರಬಾರದು? ಮನುಷ್ಯನ ಮನಸ್ಸಿಗಿರುವ ದ್ರೋಹದ ಸಾಧ್ಯತೆ ಅಗಾಧವಾದ್ದು.’ ಎಂಬ ಸಾಲುಗಳಲ್ಲಿ ನಿರೂಪಕನು ತನ್ನ ಮನಸ್ಸಿನೊಳಗಿನ ಪದರು ಪದರುಗಳನ್ನು ಶೋಧಿಸುವ ಪ್ರಯತ್ನ ನಡೆಸುತ್ತಿರುವುದು ಕಾಣುತ್ತದೆಯಲ್ಲವೇ.

ಇವು ಕೇವಲ ಗಮನಿಸುವಿಕೆಯಿಂದಷ್ಟೇ ಬರೆದುಬಿಡಬಹುದಾದ ಸಾಲುಗಳಲ್ಲ. ತನ್ನ ಅಂತರಂಗವನ್ನೂ ಸದೂರ ದೃಷ್ಟಿಕೋನದಿಂದ ಗಮನಿಸಿಕೊಳ್ಳುವ ಶಕ್ತಿ ಸುಲಭಕ್ಕೆ ಒಲಿಯುವಂಥದ್ದೂ ಅಲ್ಲ. ಒಲಿಸಿಕೊಂಡ ಬಳಿಕ ಅದನ್ನು ಮಂಡಿಸುವ ಕಲೆಗಾರಿಕೆಯೂ ಅಪರೂಪವಾದುದು. ‘ನವಿಲುಗಳು’ ಎಂಬ ಕತೆಯ ಶೀರ್ಷಿಕೆಯೇ ಒಂದು ರೂಪಕವಾಗಿದೆ. ಇಲ್ಲಿ ಕತೆಗಾರನೇ ನಾಯಕನಾಗಿ ಆತ್ಮವಿಮರ್ಶೆ ಮಾಡಿಕೊಳ್ಳುವ ಈ ಶೈಲಿಯಲ್ಲಿ ಕತೆಯು ಸಾಗುವುದರಿಂದ ಓದುಗನಲ್ಲಿ ಹೆಚ್ಚು ತಾದಾತ್ಮ್ಯತೆಯ ಭಾವವನ್ನು ಮೂಡಿಸುತ್ತದೆ ಮತ್ತು ಓದುಗನೂ ಸ್ವಯಂವಿಮರ್ಶೆಗೆ ತೊಡಗುವಂತೆ ಪ್ರೇರೇಪಿಸುತ್ತದೆ.

ವಿವಿಧ ಪ್ರದೇಶಗಳ, ವಿವಿಧ ನಿಲುವುಗಳ, ಭಾಷೆಯ ವೈವಿಧ್ಯಗಳೊಂದಿಗೆ ಕತೆಗಳು ನಮ್ಮೆಡೆಗೆ ಬಂದು ತಲುಪುತ್ತವೆ. ಅವು ಸಾಮಾಜಿಕವಾದ ಆಯಾಮವೊಂದನ್ನು ಹೊಂದಿರುತ್ತವೆ. ವೈಯಕ್ತಿಕ ಅನುಭವವು ಸಾರ್ವತ್ರಿಕವಾಗಿ, ಅದೊಂದು ಜೀವನದರ್ಶನದಂತೆ ಗೋಚರವಾಗಿರುವುದನ್ನೂ ಕತೆಗಳಲ್ಲಿ ಕಾಣಬಹುದು. ಕತೆಗಾರರ ಸಂವೇದನೆ, ಸೃಜನಶೀಲ ಯೋಚನೆಯ ಸಾಧ್ಯತೆ, ಸುತ್ತಲಿನ ಆಗು ಹೋಗುಗಳು, ಸಾಮಾಜಿಕ ಆಂದೋಲನಗಳು, ಪ್ರತಿರೋಧಗಳು ಕತೆಗಳನ್ನು ಪ್ರಭಾವಿಸುತ್ತವೆ. ಅದಕ್ಕೇ ಅವು ಪ್ರೀತಿಯಿಂದ ನಮ್ಮೆಡೆಗೆ ಬಂದು ಕೈಹಿಡಿದು ಮಾತಿಗೆ ಕುಳಿತಂತೆ ಭಾಸವಾಗುತ್ತವೆ. ಪ್ರಭಾವಿಸುತ್ತವೆ.

ಜಾಗತೀಕರಣ, ಉದಾರೀಕರಣ, ಖಾಸಗಿ ಕ್ಷೇತ್ರಗಳ ದರ್ಬಾರು, ಜಾತಿ ತಾರತಮ್ಯವು ಕೊಡುವ ನೋವು ಎಷ್ಟೋ ಕತೆಗಳ ಹೂರಣವಾಗಿವೆಯಲ್ಲ! ಸಾಮಾಜಿಕ ವ್ಯವಸ್ಥೆಯ ವಿರುದ್ಧದ ಪ್ರತಿರೋಧವನ್ನು ದಾಖಲಿಸುತ್ತ ವ್ಯವಸ್ಥೆಯು ವ್ಯಕ್ತಿಯನ್ನು ಅವಕಾಶಕ್ಕೆ ಬಳಸಿಕೊಳ್ಳುವ ಕ್ರೌರ್ಯವನ್ನು ʻಅಮಾಸʼನಿಗಿಂತ ಚೆನ್ನಾಗಿ ಇನ್ನಾರು ಹೇಳಲು ಸಾಧ್ಯ.

ದಲಿತ ಸಮುದಾಯವು ಎದುರಿಸುವ ನೋವು, ಯಾತನೆ, ಅವಮಾನ, ಅಸಹಾಯಕತೆಯನ್ನು ದೇವನೂರು ಮಹಾದೇವ ಸೃಷ್ಟಿಸಿದ ಪಾತ್ರಗಳು ಹೆಚ್ಚೇನೂ ಮಾತನಾಡದೇ ಎಷ್ಟೊಂದು ಸಶಕ್ತವಾಗಿ ವ್ಯಕ್ತಪಡಿಸುತ್ತವೆ!

ಅಮಾಸ ಕತೆಯಲ್ಲಿ ಅಸಮಾನತೆ, ವಿರೋಧಾಭಾಸ, ದೌರ್ಜನ್ಯಗಳ ವಿವರಗಳೇ ಓದುಗನ ಮನಸ್ಸಿನಲ್ಲಿ ಚಿತ್ರಣವೊಂದನ್ನು ಮೂಡಿಸಿ, ‘ಇದು ಅನ್ಯಾಯ’ ಎಂಬ ಭಾವನೆಯನ್ನು ಮೂಡಿಸಬಲ್ಲವು. ಸಮಾಜದ ಅಂಚಿಗೆ ತಳ್ಳಲ್ಪಟ್ಟವರ ಬಗ್ಗೆ ಸಹಾನುಭೂತಿ, ವ್ಯವಸ್ಥೆಯನ್ನು ಕಪಿಮುಷ್ಟಿಯಲ್ಲಿ ಹಿಡಿದುಕೊಂಡ ಆಳುವವರ್ಗದ ಕಡೆಗೆ ವಿಮರ್ಶೆಯ ನೋಟವನ್ನು ಬೀರುವಂತೆ ಮಾಡುವ ಕತೆಯದು. ಮಠದ ಜಗಲಿಯಲ್ಲಿಯೇ ಕುಳಿತಿರುವ ಕುರಿಯಯ್ಯ, ಅವನ ‘ಕಣ್ಣುಮಟಾರ’ದಲ್ಲಿ ಬೆಳೆಯುವ ಅಮಾಸನು ಮಠದ ಬೆಲ್ಲು ಹೊಡೆದ ಕೂಡಲೇ ತಟ್ಟೆ ಲೋಟ ತೆಗೆದುಕೊಂಡು ಓಡುತ್ತಾನೆ. ಅವನು ಓಡುವ ದೃಶ್ಯವೊಂದರ ವಿವರವಿಲ್ಲಿದೆ:

‘ಊರಿಗೆ ಕತ್ತಲು ಇಳಿಯಲು ತೊಡಗಿದಾಲೇ ಅಮಾಸನೂ, ಕುರಿಯಯ್ಯನೂ ಮಠದ ಬೆಲ್ಲು ಆಗುವುದನ್ನೇ ನೆಟ್ಟಗೆ ಕಾಯುವರು. ಮಠದ ಬೆಲ್ಲು ಹೊಡೆದ ತಡವೇ ಅಮಾಸನು, ಕುರಿಯಯ್ಯನ ಕಿದ್ದಂಡೆಯಲ್ಲಿ ಮಡಗಿರುವ ತಟ್ಟೆ, ಗ್ಲಾಸು ತೆಗೆದುಕೊಂಡು ಲಗುಬಗ ಓಡುವನು. ಅಷ್ಟಕ್ಕಾಗಲೇ ಸಂಪೂರ್ಣ ಕತ್ತಲು ಹಿಡಿದು ಗವ್ವಗಿರುವುದರಿಂದ ಅಮಾಸ ಓಡುವುದೇನೂ ಕಾಣಿಸುವುದಿಲ್ಲ. ಕಣ್ಣು ಸೀಳಿಸಿಕೊಂಡು ನೋಡಿದರೆ ಅವ ಓಡುವ ಓಟಕ್ಕೆ ಕತ್ತಲು ಕುಲುಕುತ್ತಿರುವಂತೆ ಹೊಳೆಯುತ್ತದೆ.’ ಎಂಬ ವಿವರಣೆಯಲ್ಲಿ ಕಾಣುವ ‘ಕತ್ತಲು’ ವ್ಯವಸ್ಥೆಗೆ ಹಿಡಿದ ರೂಪಕವಲ್ಲದೆ ಮತ್ತೇನು.

ಇನ್ನು ಊರಿನ ಹಬ್ಬವಾಗಿರುವ ಮಾರಿಹಬ್ಬಕ್ಕೆ ಕೆಮ್ಮಣ್ಣು ಸುಣ್ಣ ಬಳಿಯುವ ಪ್ರಕ್ರಿಯೆ, ಅಮಾಸ ಹುಲಿಯಾಸ ಕುಣಿತ, ರಕ್ತ ಮೆತ್ತಿದ ಹೂವಿನ ಸರವನ್ನು ಅಮಾಸ ಕುತ್ತಿಗೆಗೆ ಹಾಕುವುದು ಮತ್ತು ಅವನ ಕುಣಿತದ ಮೈಮರೆತ.. ಹೀಗೆ ಹೇಳಬೇಕಾದ್ದನ್ನು ನೇರವಾಗಿ ಹೇಳದೆಯೇ ‘ಅಮಾಸ’ ಕತೆಯು ಎಲ್ಲ ನೋವನ್ನೂ ಚೂಪಾದ ಧೋರಣೆಯೊಂದಿಗೆ ಪಾಂಗಿತವಾಗಿ ಪ್ರಸ್ತುತಪಡಿಸುತ್ತದೆ. ನವಿಲುಗಳು ಕತೆಯು ಸ್ವಯಂ ವಿಮರ್ಶೆಯ ಗುಂಗಿನಲ್ಲಿ ಸಾಗಿದರೆ, ಅಮಾಸ ಕತೆ ಸಾಮಾಜಿಕ ವ್ಯವಸ್ಥೆಯೊಂದರ ಕಟು ವಿಮರ್ಶೆಯ ಧಾಟಿಯಲ್ಲಿ ಸಾಗುತ್ತದೆ.

ಹೀಗೆ ಹೇಳುವಾಗ ‘ವೆಂಕಟಿಗನ ಹೆಂಡತಿ’ ಕತೆಯು ನೆನಪಾಗುತ್ತದೆ. ಸಣ್ಣಕತೆಗಳ ಜನಕ ಎಂಬ ಹೆಗ್ಗಳಿಕೆಯನ್ನು ಪಡೆದ ಮಾಸ್ತಿ ವೆಂಕಟೇಶ ಅಯ್ಯಂಗಾರರ ‘ವೆಂಕಟಿಗನ ಹೆಂಡತಿ’ ಕತೆಯು ಬದುಕು ಹೀಗಿದೆ ಎಂದು ನಿರ್ಲಿಪ್ತವಾಗಿ ಪ್ರಸ್ತುತಪಡಿಸುವ ಕತೆ. ‘ಈ ಲೋಕದ ವ್ಯಾಪಾರವು ಹೀಗಿದೆ, ಅದಕ್ಕೊಂದು ತೀರ್ಪುಕೊಡುವ ಕೆಲಸವನ್ನು ನಾವು ಮಾಡುವುದು ಸರಿಯಲ್ಲ’ ಎಂಬ ಎಚ್ಚರದಲ್ಲಿ ಸಾಗುವ ಕತೆಯದು. ಕತೆಗೆ ಆಯ್ದ ವಸ್ತುವೇ, ಮಾನವೀಯತೆಗಿಂತ ಮಿಗಿಲಾದ ವಿಚಾರವಿಲ್ಲ ಎನ್ನುವುದನ್ನು ಹೇಳುತ್ತದೆ.

ಹೆಂಡತಿಯು ಗಂಡನನ್ನು ತೊರೆದು ಊರ ಗೌಡನ ಹಿಂದೆ ಹೋದಾಗ, ಜನ, ಅವಳನ್ನು ಟೀಕಿಸುವುದಷ್ಟೇ ಅಲ್ಲ, ಹೆಂಡತಿಯನ್ನು ಸಂಭಾಳಿಸಲಾರದವನು ಎಂದು ಅವನನ್ನೂ ಜರೆಯುತ್ತಾರೆ. ಜನರೆಂದರೆ, ಊರಿನ ಪರಜನರಲ್ಲ, ಸ್ವಂತ ಅತ್ತೆ, ತಾಯಿ ಕೂಡ ಹೆಣ್ಣಿನ ನಡೆಯನ್ನು ಟೀಕಿಸಿ, ಗಂಡಿಗೆ ಇರುವ ಅವಕಾಶಗಳನ್ನು ಎಳೆಎಳೆಯಾಗಿ ಬಿಡಿಸಿಡುತ್ತಾರೆ. ಆದರೆ ಅವನ ನಿಲುವು ಕಲ್ಮಷವು ಸೋಕದ ಶುದ್ಧ ಪ್ರೀತಿಯದ್ದು.

‘ಜನ ನನ್ನನ್ನು ಏನು ಹೇಳುತ್ತಾರೆ, ಜನ ಅವಳ ತೌರನ್ನು ಏನು ಹೇಳುತ್ತಾರೆ, ಸಾಹುಕಾರನಿಗೆ ಏನಾಗುತ್ತದೆ, ಇದೆಲ್ಲ ಅವಾಂತರದ ಮಾತು. ನಾನು ಕೈ ಹಿಡಿದ ಹುಡುಗಿ ಮನಚೆದರಿ ಬೇರೆ ಕಡೆ ಹೋದಳು. ನಾನೇನು ಮಾಡಬೇಕು, ಬೈಯ್ಯಲಾ, ಹೊಡೆಯಲಾ, ಬಲವಂತ ಮಾಡಲಾ, ಬಿಟ್ಟುಬಿಟ್ಟೆ ಎನ್ನಲಾ? ಏನು ಮಾಡಲಿ, ನನ್ನ ಸ್ವಭಾವಕ್ಕೆ ನಾನು ಏನು ಮಾಡುತ್ತಿದ್ದೆನೋ ಅದೇ ಸಾಧ್ಯ. ಕೈ ಹಿಡಿದ ಹೆಣ್ಣು ಕೈ ಬಿಟ್ಟಳು. ನನಗೆ ಬೇಸರವಾಯ್ತು, ಕೋಪ ಬರಲಿಲ್ಲ, ಇನ್ನೊಬ್ಬ ಹೆಂಗಸು ಬೇಕೆನಿಸಲಿಲ್ಲ, ಇಲ್ಲದಿದ್ದರೆ ಇನ್ನೊಂದು ದಿನ, ಈ ಜನ್ಮಕ್ಕಲ್ಲದಿದ್ದರೆ ಇನ್ನೊಂದು ಜನ್ಮಕ್ಕಾದರೂ ನಾನು ಇವಳಿಗೆ ದಿಕ್ಕಾಗಿರಬೇಕು ಎಂದೇ ನನ್ನ ತಿಳಿವಳಿಕೆ. ಆದ್ದರಿಂದ ನಾನು ಯಾವ ಮಾತಿಗೂ ಕಿವಿಗೊಡಲಿಲ್ಲ’ ಎನ್ನುವ ವೆಂಕಟಿಗನ ಮಾತಿನಲ್ಲಿ ಅಮ್ಮನ ಪ್ರೀತಿಯಲ್ಲದೆ ಮತ್ತೇನೂ ಕಾಣಿಸದು. ಬದುಕು ತರ್ಕಗಳನ್ನು ಮೀರಿದ್ದು. ಕತೆಗಳೂ ಕೂಡ.

ಸಂಪ್ರದಾಯವನ್ನು ನೆಚ್ಚಿಕೊಂಡಿರುವ ಲೋಕ ರೂಢಿಯನ್ನೂ, ಜೀವನ್ಮುಖೀ ಮನಸ್ಸಿನ ವ್ಯಕ್ತಿಯ ನಿಲುವನ್ನೂ ಮುಖಾಮುಖಿಯಾಗಿಸುವ ಈ ಶೈಲಿಯು ವಿಶಿಷ್ಟವಾದುದು ಎಂದೆನಿಸುತ್ತದೆ. ಸರಳವಾಗಿದ್ದುಕೊಂಡೇ ಭಾವನೆಗಳನ್ನು ಸಮರ್ಥವಾಗಿ ದಾಟಿಸುವುದು ಹೆಚ್ಚು ಕಷ್ಟದ ಕೆಲಸ. ಪರಿಶುದ್ಧ ಜೀವನಪ್ರೀತಿಗಿಂತ ಮಿಗಿಲಾದ ನೈತಿಕತೆಯಿಲ್ಲ ಎಂಬುದು ಜೀವಪರ ನಿಲುವಲ್ಲದೆ ಮತ್ತೇನೂ ಆಗದು.

ಕತೆಗಳನ್ನು ಬರೆಯುವ ಶೈಲಿಗಳಲ್ಲಿ ಹೇಗೆ ನೂರಾರು ವೈವಿಧ್ಯತೆಗಳು ಇರುತ್ತವೆಯೋ, ಹಾಗೆಯೇ ಓದುವ ಮತ್ತು ಗ್ರಹಿಸುವ ಶೈಲಿಯು ಒಬ್ಬೊಬ್ಬರದು ಒಂದೊಂದು ರೀತಿಯಾಗಿರುತ್ತದೆ. ʻಇದೋ ನೋಡಿ, ಹೀಗೊಂದು ರೀತಿಯಲ್ಲಿ ಕತೆಗಳನ್ನು ಗ್ರಹಿಸುವಾಗ ಇಂತಹ ವಿಚಾರಗಳು ಗೋಚರಿಸಿ ಅವು ನಮ್ಮ ಬದುಕನ್ನು ಮತ್ತಷ್ಟು ಚಂದಗಾಣಿಸುವುದಕ್ಕೆ ಪೂರಕವಾದ ಕಾಣ್ಕೆಗಳನ್ನು ಕೊಡುತ್ತವೆʼ ಎಂಬ ಮಾತುಗಳನ್ನು ಕೈಕಂಬದಂತೆ ಹೇಳಬಹುದಷ್ಟೇ. ಆದರೆ ಕಾಣ್ಕೆಗೆ ಲಭ್ಯವಾಗಬಹುದಾದ ದಾರಿಗಳು ಅಸಂಖ್ಯ ಇವೆ. ಹಾಗೆ ನೋಡಿದರೆ, ಓದುವ ಅನುಭವ, ಬದುಕನ್ನು ಗ್ರಹಿಸುವ ಸಾಮರ್ಥ್ಯಗಳೇ ಕತೆಗಾರರನ್ನೂ, ಕತೆಗಳನ್ನೂ, ಅಷ್ಟೇ ಏಕೆ ಓದುಗರನ್ನೂ ಕೈ ಹಿಡಿದು ಮುನ್ನಡೆಸುತ್ತವೆ.

ಓದುವ ಮತ್ತು ಬರೆಯುವ ಹುಮ್ಮಸ್ಸೊಂದು ಇದ್ದಾಗ, ಗ್ರಹಿಕೆಯ ಆಳ ಅಗಲಗಳು ಖಂಡಿತ ವಿಸ್ತಾರವಾಗುತ್ತವೆ. ಅಷ್ಟೇ ಅಲ್ಲ, ತನ್ನ ತಿಳಿವಳಿಕೆಯೇ ಶ್ರೇಷ್ಟವೆಂಬ ಅಹಂಗೆ, ಈ ತಿಳಿವಳಿಕೆಯು ಸಣ್ಣ ಸಣ್ಣ ಉಳಿಪೆಟ್ಟುಗಳನ್ನು ಕೊಡುತ್ತ ವಿನಯವೆಂಬ ಶಿಲ್ಪವನ್ನು ಕಡೆಯುತ್ತದೆ.

ಈ ಸಂದರ್ಭದಲ್ಲಿ ಕತೆಗಾರ ಯಶವಂತ ಚಿತ್ತಾಲರ ಮಾತೊಂದನ್ನು ನೆನಪಿಸಿಕೊಳ್ಳುವುದಾದರೆ ‘ಇರವಿನೊಡನೆಯ ಮನುಷ್ಯನ ಮುಖಾಮುಖಿಯನ್ನು ಇಡಿಯಾಗಿ ಗ್ರಹಿಸುವ ಬಲ ಯಾವುದೇ ಒಂದು ಮಾಧ್ಯಮಕ್ಕೂ ಇಲ್ಲ. ಹಾಗೆಂದೇ ಇಷ್ಟೆಲ್ಲ ಮಾಧ್ಯಮಗಳು ಹುಟ್ಟಿಕೊಂಡಿವೆ. ಕಲೆ ಮತ್ತು ಸಾಹಿತ್ಯ, ವಿಜ್ಞಾನ-ದರ್ಶನ; ಧರ್ಮ-ಪುರಾಣ ಇವೆಲ್ಲ ಅಸ್ತಿತ್ವಕ್ಕೆ ಬಂದದ್ದು ನಮ್ಮ ಇರವಿಗೆ ಅಷ್ಟೊಂದು ಆಯಾಮಗಳು ಇವೆಯಾದ್ದರಿಂದ. ಪ್ರತಿಯೊಂದು ಮಾಧ್ಯಮ ಮನಸ್ಸಿನ ಶಕ್ತಿಶಾಲಿ ಇಂದ್ರಿಯವಾಗಿ ಕೆಲಸ ಮಾಡುತ್ತ, ತನ್ನ ಪ್ರತಿಭೆಗೆ ಮೀಸಲಾದ ಇರವಿನ ಮಗ್ಗುಲನ್ನು ಗ್ರಹಿಸುತ್ತದೆ. ಒಂದು ಮಾಧ್ಯಮ ಇನ್ನೊಂದು ಮಾಧ್ಯಮಕ್ಕೆ ಸೇರಿದ ಕಾರ್ಯವನ್ನು ಕಸಿದುಕೊಳ್ಳುವುದಿಲ್ಲ. ಕಣ್ಣಿಗೆ ಸಾಧ್ಯವಿದ್ದದ್ದು ಮೂಗಿಗೂ ಹೇಗೆ ಸಾಧ್ಯವಿದ್ದೀತು? ಸಾಧ್ಯವಿದ್ದಿದ್ದರೆ ನಮಗೇಕೆ ಕಣ್ಣು ಇರುತ್ತಿತ್ತು?