ಗಂಟಲೊಳಗಿನ ಮುಳ್ಳು

ಗಂಟಲೊಳಗಿನ ಮುಳ್ಳು
ಅನಾಮತ್ತಾಗಿ ಅನ್ನದ ತಟ್ಟೆಗೆ ಬಿದ್ದಿದೆ

ದೇಶ ಕಟ್ಟುವುದೆಂದರೆ
ಗೋಡೆಯ ಮೇಲಿನ ಹೆಣ್ಣಿನ
ಚಿತ್ರ ಅಳಿಸುವುದೆಂದು
ಇವರಿಗೆಲ್ಲಾ ಹೇಳಿದವರಾರು?

ಅಪರಾತ್ರಿಯ ಕನಸಲ್ಲಿ ಕಾಡುತ್ತಿದ್ದ
ಚೀತ್ಕಾರಗಳೆಲ್ಲಾ
ನಟ್ಟ ಹಗಲಲ್ಲೇ ಕೇಳಿದಂತಾಗುತ್ತದೆ.
ವ್ಯತ್ಯಾಸವಿಷ್ಟೇ
ಹದಿನೈದರ ಹುಡುಗಿಯದೋ
ಅಥವಾ ನಲವತ್ತೈದರ ಹೆಂಗಸದೋ
ಅರ್ಥವಾಗುವುದಿಲ್ಲ

ಬಾಯಿಯೇ ಇಲ್ಲದ ಹೆಣ್ಣಿನ
ಭಿತ್ತಿ ಚಿತ್ರ ಬರೆವ ಕಲಾವಿದೆ
ಅದೆಷ್ಟು ಬಾರಿ ಬಾಯಿ ಕಳೆದುಕೊಂಡಿರಬಹುದು
ನಿಜದಲಿ!
ಎಣಿಕೆಗೂ ದಕ್ಕುವುದಿಲ್ಲ

ಮುರಿದ ಇಟ್ಟಿಗೆ, ಕುರ್ಚಿಗಳ ಮಧ್ಯೆ
ಕಣ್ಣು ಬಾಗಿಲಿಲ್ಲದ ಕಿಟಕಿಯನ್ನು
ಅರಸುತ್ತದೆ
ಮತ್ತಷ್ಟೇ ನಿರಾಶೆಯಿಂದ ಹೊರಳಿಕೊಳ್ಳುತ್ತದೆ

ದೂರದಲ್ಲೊಬ್ಬ ಹುಡುಗ
ಮುರಿದ ಗೋಡೆಯ ಹಿಂದೆ ನಿಂತು
ಪಾಠ ಮಾಡುತ್ತಿರುತ್ತಾನೆ
ತನ್ನದೇ ವಯಸ್ಸಿನ ಮಕ್ಕಳಿಗೆ
ಅವನ ಕಣ್ಣಲ್ಲಿ ಬಮಿಯಾನದ
ಬುದ್ಧನಲ್ಲಿದ್ದ ನಗು

ಅಷ್ಟರಲ್ಲೇ ಮತ್ತೆ ಗುಂಡಿನ ಮೊರೆತ
ಬಹುಶಃ ಮುಳ್ಳುಗಳು
ರಕ್ತ ಬೀಜಾಸುರನ ವಂಶದ್ದೇ ಇರಬೇಕು
ಕಿತ್ತೆಸೆದಷ್ಟೂ ತಟ್ಟೆ ತುಂಬುತ್ತಲೇ ಇದೆ.