ಗಾಂಧೀಜಿಯವರ ಕುರಿತು ಆಕ್ಷೇಪಗಳು ಬಂದಾಗ ಇದರಲ್ಲಿ ಅವರ ನಡೆ ಆ ಕಾಲದಲ್ಲಿ ಎಷ್ಟು ಸೂಕ್ತವಾಗಿತ್ತು ಎನ್ನುವದನ್ನು ಇಲ್ಲಿ ವಿವರಿಸಲಾಗಿದೆ. ಖಿಲಾಪತ್ ಚಳುವಳಿಯನ್ನು ಗಾಂಧಿ ಸಂಪೂರ್ಣವಾಗಿ ಒಪ್ಪಿಲ್ಲ; ಆದರೆ ಆ ಧರ್ಮದ ಬಗೆಗೆ ಅವರಿಗಿರುವ ಆಳ ದೃಷ್ಟಿಕೋನದಿಂದ ಮುಸಲ್ಮಾನರ ಭಾವನೆಗಳನ್ನು ಗಾಂಧಿ ಅರ್ಥಮಾಡಿಕೊಂಡಿದ್ದರು ಎನ್ನುತ್ತಾರೆ. ಹಾಗೇ ನೋಡಿದರೆ ಖಿಲಾಪತ್ ಚಳುವಳಿಯನ್ನು ಗಾಂಧಿ ಬೆಂಬಲಿಸಿದ ಕಾರಣದಿಂದಲೇ ಗಾಂಧಿ ರಾಷ್ಟ್ರೀಯ ನಾಯಕರಾಗಿ ಹೊಮ್ಮಿದ್ದು ಮತ್ತು 1920ರ ನಾಗಪುರ ಅಧಿವೇಶನದ ನಂತರ ತೀವ್ರವಾದಿಗಳನ್ನು ಬದಿಗೆ ಸರಿಸಿ ಅನಭಿಷಕ್ತ ನಾಯಕರಾಗಿರುವುದು.
ರಾಮಚಂದ್ರ ಹಬ್ಬು ಅನುವಾದಿಸಿರುವ “ಮಹಾತ್ಮ ಗಾಂಧಿ ಜೀವನ ಚರಿತೆ” ಕೃತಿಯ ಕುರಿತು ನಾರಾಯಣ ಯಾಜಿ ವಿಶ್ಲೇಷಣೆ

ಮಹಾತ್ಮಾ ಗಾಂಧಿ ಎನ್ನುವ ಹೆಸರು ಮೂಡಿಸುವ ಭಾವನೆಗಳೇ ಬೇರೆ. ತುಂಡು ಬಟ್ಟೆಯ ಫಕೀರ ತನಗಾಗಿ ಅಂತ ಗಳಿಸಿರುವದು ಏನೂ ಇಲ್ಲ. ಆದರೆ ಆತ ಕೊಟ್ಟುಹೋದ ಮೌಲ್ಯಗಳ ಮೌಲ್ಯವನ್ನು ಮಾತ್ರ ಸರಿಗಟ್ಟಲಾಗದು. ಗಾಂಧಿಯವರ ವಿಷಯವನ್ನು ಓದುವದೆಂದರೆ ಅದೊಂದು ಸೊಗಸು, ಬೆರಗು ಮತ್ತು ಅಚ್ಚರಿಗಳ ಮಿಶ್ರಣದ ಭಾವ. ಅವರ ವ್ಯಕ್ತಿತ್ವದ ಕುರಿತು ಹೇಳುವಾಗ ಸತ್ಯ ಮತ್ತು ಅಹಿಂಸೆಯನ್ನು ಬಿಟ್ಟು ಸಾಗುವುದೇ ಇಲ್ಲ. ಭಾರತಕ್ಕೆ ಸ್ವಾತಂತ್ರ್ಯವನ್ನು ತರಲು ಅವರು ಮಾಡಿದ ಹೋರಾಟಗಳು ಸಾಮಾನ್ಯವೇನಲ್ಲ. 1915ರಲ್ಲಿ ಭಾರತಕ್ಕೆ ಗೋಪಾಲಕೃಷ್ಣ ಗೋಖಲೆಯವರ ಆಗ್ರಹದ ಮೇರೆಗೆ ಗಾಂಧಿ ಮುಂಬಯಿಗೆ ಬಂದು ಇಳಿದು ಇಲ್ಲಿನ ಸ್ವಾತಂತ್ರ್ಯದ ಹೋರಾಟದ ನೇತೃತ್ವವನ್ನು ವಹಿಸಿಕೊಂಡಮೇಲೆ ಕಾಂಗ್ರೆಸ್ಸಿನ ಹೋರಾಟಕ್ಕೆ ಒಂದು ನಿರ್ದಿಷ್ಟಸ್ವರೂಪ ಬಂದಿರುವುದು. ಇಂಥಹ ಗಾಂಧಿಯವರ ಕುರಿತು ನೂರಾರು ಪುಸ್ತಕಗಳು ಪರವಾಗಿ ಮತ್ತು ವಿರೋಧವಾಗಿ ಬಂದಿವೆ. ಕನ್ನಡದಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ ಅನುವಾದಿಸಿದ “ನನ್ನ ಆತ್ಮ ಕಥೆ ಅಥವಾ ನನ್ನ ಸತ್ಯಶೋಧನೆಯ ಕಥೆ” ಗಾಂಧಿಯ ಓದುಗರಿಗೆ ಒಂದು ಕೈಪಿಡಿ. ಗಾಂಧಿಯೆನ್ನುವ ಸಂಕೀರ್ಣ ವ್ಯಕ್ತಿತ್ವವನ್ನು ಸಮಗ್ರವಾಗಿ ಓದಲು ಈ ಕೈಪಿಡಿ ಅಪೂರ್ಣವೆಂದು ಅನೇಕಸಲ ಅನಿಸಿದೆ. ಗಾಂಧಿ ತನ್ನನ್ನು ತಾನು ನೋಡಿಕೊಂಡು ಬರೆದಿರುವುದಕ್ಕೂ ಅವರನ್ನು ಇನ್ನೊಬ್ಬರು ಭೂತಕನ್ನಡಿಯಲ್ಲಿ ನೋಡಿ ಆ ವ್ಯಕ್ತಿತ್ವವನ್ನು ಅಳೆಯುವುದಕ್ಕೂ ವ್ಯತ್ಯಾಸವಿದೆ. ಯಾವ ವ್ಯಕ್ತಿಯೇ ಆಗಲಿ, ಆತ್ಮಕಥೆ ಬರೆಯುವಾಗ ಆತ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಲೇ ಇರುತ್ತಾನೆ. ಇದು ಆತ್ಮ ಕಥೆಯ ಮಿತಿಯೂ ಹೌದು. ಆದರೆ ಇನ್ನೊಬ್ಬರು ಅಳೆಯುವಾಗ ಅದು ಮಾನಸಹಿತವಾಗಿರುತ್ತದೆ. ಮಾನವೆನ್ನುವುದು ಅಳತೆ ಎನ್ನುವ ಅರ್ಥ. ನಾನು ಹೀಗಿದ್ದೇನೆ ಎಂದು ನಮಗೆ ನಾವೇ ಹೇಳಿಕೊಳ್ಳುವುದಕ್ಕಿಂತ ಇನ್ನೊಬ್ಬರು ನಮ್ಮ ಕುರಿತು ಯಾವ ಅಭಿಪ್ರಾಯ ಪಟ್ಟಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಇದು ವ್ಯಕ್ತಿಯ ಮುಖಕ್ಕೆ ಹಿಡಿದ ಕನ್ನಡಿಯೂ ಹೌದು.

(ರಾಮಚಂದ್ರ ಹಬ್ಬು)

ಗಾಂಧಿಯ ಕುರಿತು ಇಷ್ಟೊಂದು ಆಸಕ್ತಿ ಮತ್ತೆ ಹುಟ್ಟಿಸಿರುವುದಕ್ಕೆ ಕಾರಣ ಗಾಂಧೀಜಿಯ ಕುರಿತಾದ ಹೊಸತೊಂದು ಕೃತಿ “ಮಹಾತ್ಮಾ ಗಾಂಧಿ; ಜೀವನ ಚರಿತೆ”. ಶ್ರೀ. ರಾಮಚಂದ್ರ ಹಬ್ಬು ಅವರು ಈ ಕೃತಿಯನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲ ಬರಹ ಖ್ಯಾತ ಗಾಂಧಿವಾದಿಗಳಾದ ಮತ್ತು ಇತಿಹಾಸ ತಜ್ಞರಾದ ಬಲ ರಾಮ ನಂದಾ ಅವರು 1958ರಲ್ಲಿ ಬರೆದ Mahatma Gandhi: A biography ಎನ್ನುವ ಕೃತಿ. ಬಿ. ಆರ್. ನಂದಾ ಅವರು ಓರ್ವ ಮಹತ್ವದ ಇತಿಹಾಸ ತಜ್ಞರಾಗಿ ಗುರುತಿಸಲ್ಪಡುತ್ತಾರೆ. ಅವರು ನವದೆಹಲಿಯ ನೆಹರು ಸ್ಮಾರಕ ಗ್ರಂಥಾಲಯದ ಮೊದಲ ನಿರ್ದೇಶಕರಾಗಿ ಮಹತ್ವದ ಕೆಲಸಗಳನ್ನು ಮಾಡಿದ್ದಾರೆ. ಇತಿಹಾಸ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮಹತ್ವದ ಸಾಧನೆಗಾಗಿ ಅವರಿಗೆ ಭಾರತಸರ್ಕಾರದಿಂದ ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳು ಲಭಿಸಿದೆ.

ನಂದಾ ಅವರು ಮಾಮೂಲಿನಂತೆ ಗಾಂಧೀಜಿಯವರನ್ನು ವೈಭವೀಕರಿಸಿ ಅಟ್ಟಕ್ಕೇರಿಸಲಿಲ್ಲ. ಹಾಗಂತ ಅವರನ್ನು ಟೀಕಿಸುವ ಸಂದರ್ಭಗಳಲ್ಲಿ ಗಾಂಧಿ ಎನ್ನುವ ಗೌರವವು ಮುಕ್ಕಾಗದಂತೇ ನೋಡಿಕೊಂಡಿದ್ದಾರೆ. 20ನೆಯ ಶತಮಾನರ್ಧದ ಮೊದಲಾರ್ಧದ ಭಾರತೀಯ ಇತಿಹಾಸದ ವಿಹಂಗಮ ನೋಟ ಇಲ್ಲಿದೆ. ಗಾಂಧೀಜಿಯವರ ತತ್ತ್ವಶಾಸ್ತ್ರ ಮತ್ತು ಅಹಿಂಸೆ. ಧರ್ಮ ಲೈಂಗಿಕತೆ, ಅರ್ಥಶಾಸ್ತ್ರ ಮತ್ತು ಕಮ್ಯುನಿಸಂನ ದೃಷ್ಟಿಕೋನಗಳ ಕುರಿತು ಗಾಂಧೀಜಿಯವರಿಗೆ ಇರುವ ದೃಷ್ಟಿಕೋನವನ್ನು ಇಲ್ಲಿ ವಿವರಿಸಲಾಗಿದೆ. ಈ ಕಾರಣದಿಂದ ಹಲ ಗಾಂಧೀಜಿಯವರ ಕೃತಿಗಳ ನಡುವೆ ಇಂತಹದ್ದೊಂದು ಕೃತಿಯ ಅವಶ್ಯಕತೆ ಕನ್ನಡಕ್ಕೆ ಅಗತ್ಯವಿತ್ತು. ಈ ಕಾರ್ಯವನ್ನು ಕನ್ನಡದ ಓರ್ವ ಶ್ರೇಷ್ಠ ವಿದ್ವಾಂಸರಾದ ಮತ್ತು ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಮತ್ತು ಅದರ ಪ್ರಾಚಾರ್ಯರಾಗಿ ನಿವೃತ್ತರಾದ ಶ್ರೀಯುತ ರಾಮಚಂದ್ರ ಹಬ್ಬು ಅವರು ಅಷ್ಟೇ ಸಮರ್ಥವಾಗಿ ಮಾಡಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಹಬ್ಬು ಸಹೋದರರ ಹೆಸರು ಚಿರಪರಿಚಿತ. ಅವರು ಒಟ್ಟೂ ಆರು ಜನ; ಈ ಆರುಮಂದಿ ಸಹೋದರರ ಜೊತೆಗೆ ಇವರ ತಂದೆ ಸಗುಣ ಶಂಕರ ಹಬ್ಬು ಅವರೂ ಸಾಹಿತ್ಯಕ್ಕೆ ಸಂಬಂಧಿಸಿದಂತಹ ಕೃತಿಗಳನ್ನು ತೊಡಗಿಸಿಕೊಂಡಿದ್ದರು. ಅದನ್ನು ವಿವರಿಸ ಹೊರಟರೆ ಅದೇ ಒಂದು ಸಾಹಿತ್ಯಿಕ ವಿಶೇಷವಾಗುತ್ತದೆ. ಶ್ರೀ ರಾಮಚಂದ್ರ ಹಬ್ಬು ನಂದಾ ಅವರ ಕೃತಿಯನ್ನು ಮೂಲತಃ ಕನ್ನಡದ್ದೇನೋ ಎನ್ನುವ ರೀತಿಯಲ್ಲಿ ಅನುವಾದಿಸಿದ್ದಾರೆ.

ಗಾಂಧೀಜಿಯಂತಹ ಸಂಕೀರ್ಣ ವ್ಯಕ್ತಿತ್ವವನ್ನು ಬರೆಯುವಾಗ ಲೇಖಕರಿಗೆ ಅನೇಕ ಸವಾಲುಗಳು ಎದುರಾಗುತ್ತದೆ. ಅವರ ಬದುಕಿನ ವಿವಿಧ ಮಜಲುಗಳ ಅರಿವು ಮತ್ತು ಅದಕ್ಕಿರುವ ಗಾಂಧಿಜಿಯವರ ತಾತ್ವಿಕ ನಿಲುವು ಏನಾಗಿತ್ತು ಎನ್ನುವ ಪ್ರಜ್ಞೆಯಿಲ್ಲದೇ ಬರೆಯಲು ಸಾಧ್ಯವಾಗುವುದಿಲ್ಲ. ಈ ಕೆಲಸವನ್ನು ಇಲ್ಲಿ ಅನುವಾದಕರು ತುಂಬಾ ಸುಲಭವಾಗಿ ಮಾಡಿದ್ದಾರೆ. 1885ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ಥಾಪನೆಯಾಗಿದ್ದರೂ ಈ ಸಂಸ್ಥೆ ಭಾರತದ ಜನಸಾಮಾನ್ಯರ ಹೋರಾಟವಾಗಿ ಗುರುತಿಸಿಕೊಂಡಿರಲಿಲ್ಲ. 1917ರವರೆಗೂ ನಗರ ಪ್ರದೇಶದ ಮತ್ತು ನವ ಇಂಗ್ಲೀಷ್‌ ಪ್ರಜೆಗಳನ್ನಷ್ಟೇ ಸೆಳೆಯುವಲ್ಲಿ ಇದು ಯಶಸ್ವಿಯಾಗಿತ್ತು. ಕಾಂಗ್ರೆಸ್ಸಿನಲ್ಲಿ ಸೌಮ್ಯವಾದಿಗಳ ಗುಂಪು ಮತ್ತು ತೀವ್ರವಾದಿಗಳ ಗುಂಪುಗಳಾಗಿ ತಮ್ಮ ತಮ್ಮಲ್ಲೇ ತಿಕ್ಕಾಟವನ್ನು ನಡೆಸಿದ್ದರು. ಇಂಥ ಹೊತ್ತಿನಲ್ಲಿ ದಕ್ಷಿಣ ಆಫ್ರಿಕಾದಿಂದ ಗೋಖಲೆಯವರ ಆಗ್ರಹಕ್ಕೆ ಮಣಿದು ಬಂದ ಗಾಂಧೀಜಿ ಈ ಹೋರಾಟಕ್ಕೆ ಹೊಸ ಅಸ್ಮಿತೆಯನ್ನು ಒದಗಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಕೈಗೊಂಡು ಯಶಸ್ಸನ್ನು ಪಡೆದ ಸತ್ಯಾಗ್ರಹದ ಶಕ್ತಿಯ ಪೂರ್ಣ ಪರಿಚಯವನ್ನು ಈ ದೇಶದ ಜನತೆಗೆ ಪರಿಚಯಿಸಿದರು. ಜನ ಜಾಗ್ರತೆಯೆನ್ನುವುದು ಗಾಂಧಿಯವರಿಗೆ ಸುಲಭದ ಮಾರ್ಗವಾಗಿರಲಿಲ್ಲ.

ಸ್ವತಃ ವಲ್ಲಭಬಾಯಿ ಪಟೇಲರು ತಮ್ಮ ವಕೀಲಿವೃತ್ತಿ ದಿನಗಳಲ್ಲಿ ಗಾಂಧಿಯವರ ಸತ್ಯಾಗ್ರಹದ ಕುರಿತು “ಗಾಂಧಿಯವರ ಭಾಷಣವೆಂದರೆ ಗೋಧಿಯಲ್ಲಿನ ಬೆಣಚುಕಲ್ಲನ್ನು ಆರಿಸಿರಿ; ಅದರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತದೆ” ಎಂದು ಗೇಲಿಮಾಡುತ್ತಿದ್ದರು. ಆಮೇಲೆ ಅವರೇ ಗಾಂಧೀಜಿಯವರ ಅಪ್ಪಟ ಶಿಷ್ಯರಾದರು ಎನ್ನುವುದು ಬೇರೆಯ ವಿಷಯ. ಗಾಂಧೀಜಿಯವರಿಗೆ ಸ್ವಾತಂತ್ರ್ಯ ಮುಖ್ಯವಾಗಿತ್ತು. ಅದು ಅವರ ಗುರಿಯೂ ಆಗಿತ್ತು. ಆದರೆ ಅದನ್ನು ಸಾಧಿಸಲು ಸತ್ಯ ಮತ್ತು ಅಹಿಂಸೆಯ ಹೊರತಾಗಿ ಬೇರೆ ಯಾವ ವಿಧಾನಗಳಿಂದ ಪಡೆಯುಬಹುದಾದ್ದನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ಈ ಕಾರಣಗಳಿಂದಾಗಿ ಅನೇಕ ಬಾರಿ ಅವರು ಟೀಕಾಕಾರರಿಗೆ ಆಹಾರವಾಗಿದ್ದಾರೆ. ಅವರ ಕೆಲ ನಿರ್ಧಾರಗಳು ವಿವಾದಾತ್ಮಕವಾಗಿರುವದೂ ಹೌದು. ಉದಾಹರಣೆಗೆ ಮೋಪ್ಲಾ ದಂಗೆಯಲ್ಲಿ ಮತ್ತು ಭಗತ್ ಸಿಂಗರನ್ನು ಗಲ್ಲಿಗೇರಿಸುವ ಸಂದರ್ಭದಲ್ಲಿನ ಅವರ ಮೌನ, ಚೌರೀ ಚೌರಾ ಹಿಂಸಾಚಾರದ ನಂತರ ಏಕಾಏಕಿ ಹೋರಾಟವನ್ನು ಹಿಂದೆತೆಗೆದುಕೊಂಡಿರುವದು, ದೇಶ ವಿಭಜನೆ ಮತ್ತು ಪಾಕಿಸ್ಥಾನಕ್ಕೆ ನೆರವು ನೀಡುವಕುರಿತು ಉಪವಾಸ ಸತ್ಯಾಗ್ರಹದ ಬೆದರಿಕೆ ಹಾಗೇ ಇನ್ನೂ ಅನೇಕ ವಿಷಯಗಳಿವೆ. ಇವು ಸತ್ಯವೂ ಕೂಡ. ಆದರೆ ಗಾಂಧೀಯೆನ್ನುವ ವ್ಯಕ್ತಿತ್ವ ದೇಶ ಕಾಲವನ್ನು ಮೀರಿ ವ್ಯಾಪಿಸಿರುವ ಒಂದು ದೊಡ್ಡ ಸಂದೇಶ. ಅವರ ಬದುಕೇ ಅನೇಕ ವಿಸ್ಮಯ, ಗೂಢ ಮತ್ತು ಪ್ರಭಾವಳಿಗಳಿಂದ ತುಂಬಿಹೋಗಿದೆ ಎನ್ನುವದೂ ಸಹ ಅಷ್ಟೇ ಸತ್ಯವೂ ಹೌದು.

ಇಂತಹ ಅನೇಕ ಸಂಕೀರ್ಣ ವಿಷಯಗಳನ್ನು ಅದಕ್ಕೆ ಕಾರಣ ಮತ್ತು ಗಾಂಧೀಜಿಯವರು ಯಾವ ಕಾರಣಕ್ಕಾಗಿ ಈ ನಿಲುವುಗಳನ್ನು ತೆಗೆದುಕೊಂಡರು ಎನ್ನುವುದನ್ನು ಅರಿಯಲು ಈ ಪುಸ್ತಕ ಉಪಯುಕ್ತವಾಗಿದೆ. ಒಂದು ಉದಾಹರಣೆಯನ್ನು ಹೇಳಬೇಕೆಂದರೆ ಗಾಂಧೀಜಿಯವರ ಮೇಲೆ ಭಗವದ್ಗೀತೆ ಬೀರಿದ ಪ್ರಭಾವ. ಗಾಂಧೀಜಿಯವರು ಏಕಾಏಕಿ ಗೀತೆಯನ್ನು ಓದಲು ಪ್ರಾರಂಭಿಸಿರಲಿಲ್ಲ. ಲಂಡನ್ನಿನಲ್ಲಿ ಇರುವಾಗ ಅವರಮೇಲೆ ಕೃೈಸ್ತಧರ್ಮದ ಪ್ರಭಾವ ಆಗತೊಡಗಿತು. ಹೊಸ ಒಡಂಬಡಿಕೆಯನ್ನು ಅವರು ಓದತೊಡಗಿದರು. ಕ್ರೈಸ್ತರಾಗುವಂತೆ ಅವರಿಗೆ ಅನೇಕ ಬಗೆಯ ಒತ್ತಡಗಳು ಬರತೊಡಗಿತು. ಈ ಹೊತ್ತಿನಲ್ಲಿ ಅವರಿಗೆ ಅವರ ತಾಯಿ ಪುತಲೀಬಾಯಿಯವರಿಗೆ ಕೊಟ್ಟ ಭಾಷೆ ನೆನಪಿಗೆ ಬಂದು ತೊಳಲಾಡತೊಡಗಿರುತ್ತಾರೆ. ಅದನ್ನು ಬಿಟ್ಟರೆ ಅವರಿಗೆ ಹಿಂದುಧರ್ಮದ ಕುರಿತು ಅತ್ಯಲ್ಪ ಪರಿಚಯವಿತ್ತು. ಈ ಸಂದರ್ಭದಲ್ಲಿ ಸರ್ ಎಡ್ವಿನ್ ಆರ್ನಾಲ್ಡ್‌ ಅವರ “ಸಾಂಗ್ ಆಫ್ ಸೆಲೆಸ್ಟಿಯಲ್” ಓದಲು ಆಮಂತ್ರಿಸಿದಾಗ ಅವರಿಗೆ ಭಗವದ್ಗೀತೆಯನ್ನು ತಾನೂ ಅದುತನಕವೂ ಓದೇ ಇಲ್ಲ ಎನ್ನುವುದು ಅರಿವಾಗಿ ಮುಜುಗರವಾಯಿತು. ಸರ್. ಎಡ್ವಿನ್ ಅವರು ಬುದ್ಧನ ಕುರಿತು ಬರೆದ “ಲೈಟ್ ಆಫ್ ಏಶಿಯಾ” ಕೃತಿಯೂ ಅವರನ್ನು ಮೋಡಿಮಾಡಿತು. ಈ ನಡುವೆ ಗುಜರಾತಿನ ಕವಿ ಶಾಮಲಾಲ್ ಭಟ್ಟರು ಗುಣುಗುಣುಸುತ್ತಿದ್ದ ಕವನಗಳು ನೆನಪಾದವು. ಹೀಗೆ ಬೈಬಲ್, ಬುದ್ಧ ಮತ್ತು ಭಟ್ಟರ ಬೋಧನೆಗಳು ಗಾಂಧಿಯವರ ಮನಸ್ಸಿನಲ್ಲಿ ಒಂದಾದವು. ಈ ಪ್ರಭಾವದ ಹಿಂದೆ ಬೈಬಲ್ಲಿನ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಎನ್ನುವ ಮಾತುಗಳು ಅವರನ್ನು ಕಾಡುತ್ತಿದ್ದವು.

ಕಾಂಗ್ರೆಸ್ಸಿನಲ್ಲಿ ಸೌಮ್ಯವಾದಿಗಳ ಗುಂಪು ಮತ್ತು ತೀವ್ರವಾದಿಗಳ ಗುಂಪುಗಳಾಗಿ ತಮ್ಮ ತಮ್ಮಲ್ಲೇ ತಿಕ್ಕಾಟವನ್ನು ನಡೆಸಿದ್ದರು. ಇಂಥ ಹೊತ್ತಿನಲ್ಲಿ ದಕ್ಷಿಣ ಆಫ್ರಿಕಾದಿಂದ ಗೋಖಲೆಯವರ ಆಗ್ರಹಕ್ಕೆ ಮಣಿದು ಬಂದ ಗಾಂಧೀಜಿ ಈ ಹೋರಾಟಕ್ಕೆ ಹೊಸ ಅಸ್ಮಿತೆಯನ್ನು ಒದಗಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಕೈಗೊಂಡು ಯಶಸ್ಸನ್ನು ಪಡೆದ ಸತ್ಯಾಗ್ರಹದ ಶಕ್ತಿಯ ಪೂರ್ಣ ಪರಿಚಯವನ್ನು ಈ ದೇಶದ ಜನತೆಗೆ ಪರಿಚಯಿಸಿದರು. ಜನ ಜಾಗ್ರತೆಯೆನ್ನುವುದು ಗಾಂಧಿಯವರಿಗೆ ಸುಲಭದ ಮಾರ್ಗವಾಗಿರಲಿಲ್ಲ.

ಗಾಂಧಿಯವರ ಮೇಲಿನ ಗೀತೆಯ ಪ್ರಭಾವದ ಹಿಂದೆ ಈ ಅಂಶಗಳಿದ್ದವು ಎನ್ನುವುದು ಬೇರೆಲ್ಲಿಯೂ ವ್ಯಕ್ತವಾಗದ ನಿಲುವು. ಮೂಲದ ನಂದಾ ಅವರ ನಿಲುವನ್ನು ಹಬ್ಬು ಅನುವಾದಿಸುವದು ಹೀಗೆ “ಗೀತೆಯ ಕುರಿತಾಗಿ ಗಾಂಧಿಯವರ ತಿಳುವಳಿಕೆಯು, ಸಾಂಪ್ರದಾಯಕ ತಿಳುವಳಿಕೆಗಳಿಗಿಂತ ಮತ್ತು ಟಿಳಕ ಮತ್ತು ಅರಬಿಂದೋ ಘೋಷರಂಥ ಘನ ವಿದ್ವಾಂಸರ ವಿಶ್ಲೇಷಣೆಗಿಂತ ತುಂಬಾ ಭಿನ್ನವಾಗಿತ್ತು. ಕುರುಕ್ಷೇತ್ರದ ಯುದ್ಧದ ಐತಿಹಾಸಿಕ ವಿವರಣೆಯನ್ನು ಅಲ್ಲಗೆಳೆಯುವದೆಂದರೆ, ಸತ್ಯಸಂಗತಿಗಳನ್ನು ನಿರ್ಲಕ್ಷಿಸಿದಂತೆ” (ಪು. 66) ಎಂದು ಅನುವಾದ ಮಾಡಿದ್ದಾರೆ. ಮಹತ್ವದ ಅಂಶವಿದು. ಗಾಂಧಿಯವರ ಗೀತೆಯ ಮೇಲಿನ ವಿಶ್ಲೇಷಣೆ ಕ್ರಿಶ್ಚಿಯನ್ ಪ್ರಭಾವಕ್ಕೆ ಒಳಗಾಗಿರುವುದು ಎನ್ನುವ ವಿರೋಧಿಗಳ ಟೀಕೆಯನ್ನು ಇಲ್ಲಿ ಸ್ಪಷ್ಟವಾಗಿ ನಿರಾಕರಿಸಲಾಗಿದೆ. ಇದಕ್ಕೆ ವಿನ್ಸ್ಂಟ್ ಶೀನ್ ಅವರ ಅಭಿಪ್ರಾಯವನ್ನು ಕೊಟ್ಟು ನಂದಾ ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಅನೇಕ ವಿವರಗಳನ್ನು ಈ ಕೃತಿಯಲ್ಲಿ ಆಧಾರಸಹಿತವಾಗಿ ವಿವರಿಸಲಾಗಿದೆ. ಮೂಲದ ಸೊಗಸನ್ನು ಇಟ್ಟುಕೊಂಡೇ ಹಬ್ಬು ಅವರು ಕನ್ನಡೀಕರಿಸಿದ್ದಾರೆ.

ಈ ಕೃತಿಯಲ್ಲಿ ಗಾಂಧೀಜಿಯ ಜೀವನ ಚರಿತ್ರೆ ತೆರೆದುಕೊಳ್ಳುವುದು ನಾಲ್ಕು ಭಾಗಗಳಲ್ಲಿ. ಮೊದಲ ಭಾಗ ಗಾಂಧಿಯ ಬಾಲ್ಯದಿಂದ. ಇಲ್ಲಿ ತಮ್ಮೆಲ್ಲಾ ಹೋರಾಟದ ಧಾತುಗಳಿಗೆ ಕಾರಣವಾದ ದಕ್ಷಿಣ ಆಫ್ರಿಕಾ-ಒಂದು ಪ್ರಯೋಗಾಲಯ ಎನ್ನುವಲ್ಲಿಂದ. ಅತ್ಯಂತ ಲಜ್ಜೆಯ ಸ್ವಭಾವದ ಮೋಹನದಾಸ ಎನ್ನುವ ಬಾಲಕ, ಬದುಕಿನುದ್ದಕ್ಕೂ ಓರ್ವ ವಿಫಲ ವಕೀಲನಾಗಿ ನಂತರ ಹೋರಾಟಗಾರನಾಗಿ ಬೆಳೆದ ಹಂತಹಂತಗಳೆಲ್ಲವೂ ಕಾವ್ಯಾತ್ಮಕ ಮತ್ತು ವಿಮರ್ಶಾತ್ಮಕವಾಗಿ ವಿವರಿಸಲಾಗಿದೆ. ದಕ್ಷಿಣಾಫ್ರಿಕಾ ಅವರಿಗೆ ನಿರಾಶೆ, ಅವಮಾನ, ಬೇಸರ, ಹೋರಾಟಕ್ಕೆ ಸ್ಪೂರ್ತಿ, ಗುರಿಯೆಡೆಗೆ ಸ್ಪಷ್ಟ ನಿದರ್ಶನ ಎಲ್ಲ ಭಾವನೆಗಳನ್ನೂ ಕೊಟ್ಟ ಮತ್ತು ಕೆಡಕು ಒಳಿತುಗಳೆಡೆಯಲ್ಲಿ ಸಿಲುಕಿಯೂ ಅದರಿಂದ ಹೇಗೆ ಹೊರಬರಬಹುದೆನ್ನುವ ಪಾಠವನ್ನು ಕಲಿಸಿದ ಕುಲುಮೆ. ಇಂಗ್ಲೆಂಡಿನಲ್ಲಿ ಅಪರಿಚಿತನಾದ ಗಾಂಧಿ ಇಲ್ಲಿ ಹೋರಾಟಗಾನಾಗಿ ಬೆಳೆದ ಬಗೆ ಮಹಾದೇವ ದೇಸಾಯಿಯವರ ಆತ್ಮಚರಿತ್ರೆಗಿಂತಲೂ ಭಿನ್ನವಾಗಿವೆ. ಧರ್ಮಗಳ ನಡುವಿನ ತುಲನಾತ್ಮಕ ಅಧ್ಯಯನಕ್ಕೆ ಆಫ್ರಿಕಾ ಒಂದು ವೇದಿಕೆಯಾಯಿತು. ಜಗತ್ತಿನ ಇನ್ನಿತರ ಧರ್ಮಗಳ ತಿರುಳನ್ನು ತೌಲಿನಿಕವಾಗಿ ಅಧ್ಯಯನ ಮಾಡಲು ಸಾಧ್ಯವಾಯಿತು. ಅವರ ಮೇಲೆ ಕ್ರಿಶ್ಚಿಯನ್ ಆಗೆಂದು ಒತ್ತಾಯಿಸಿದವರಿಗೆ “ತಿಜೋರಿಯ ಚಿಕ್ಕ ರಂದ್ರದೊಳಗೆ ತೂರಿಕೊಂಡು, ದೇವರನ್ನು ಸಮೀಪಿಸಲು ಅವನೇನು ಆ ತಿಜೋರಿಯಲ್ಲಿ ಮುಚ್ಚಿಡಲ್ಪಟ್ಟಿಲ್ಲ. ಶುದ್ಧ ಹೃದಯವುಳ್ಳವರಿಗೆ ಮತ್ತು ವಿನೀತರಿಗೆ ದೇವರನ್ನು ಸಮೀಪಿಸಲು ಕೋಟ್ಯಾವದಿ ರಂದ್ರಗಳಿವೆ” ಎನ್ನುವ ಮೂಲಕ ತಾನೋರ್ವ ಸನಾತನಿ ಹಿಂದು ಎನ್ನುವುದನ್ನು ಗಟ್ಟಿಗೊಳಿಸುತ್ತಲೇ ಹಿಂದು ಧರ್ಮದ ನಿಜ ತಿರುಳನ್ನು ತೆರೆದಿಟ್ಟರು. ಇಂಗ್ಲೀಷಿನಲ್ಲಿರುವ ಮೂಲಕ್ಕಿಂತ ಹಬ್ಬು ಕನ್ನಡದಲ್ಲಿ ಗಾಂಧಿಯವರ ಭಾವನೆಯನ್ನು ಅಭಿವ್ಯಕ್ತಿಸಿದ್ದಾರೆ.

ಎರಡನೇ ಭಾಗ ಗಾಂಧಿ ಉತ್ಥಾನ, ಅಪರಿಚಿತ ದೇಶವಾದ ಭಾರತಕ್ಕೆ ಗಾಂಧಿ ಅಪರಿಚಿತರಾಗಿರಲಿಲ್ಲ ಎನ್ನುವ ಮೂಲಕ ಗಾಂಧಿಯವರನ್ನು ಭಾರತಕ್ಕೆ ಬರಮಾಡಿಕೊಳ್ಳುತ್ತಾರೆ. 1915 ರಿಂದ 1920 ರತನಕ ಗಾಂಧಿ ಭಾರತೀಯ ಕಾಂಗ್ರೇಸ್ಸಿನ ಅಗ್ರಪಂಕ್ತಿಯ ನಾಯಕರಾಗಿರಲಿಲ್ಲವೆನ್ನುವ ಸತ್ಯವನ್ನು ಹೊರಹಾಕುತ್ತಾರೆ. ಟಿಳಕರು ಮತ್ತು ಅನಿಬೆಸೆಂಟ್ ಪ್ರಭಾವಶಾಲಿಯಾದ ನಾಯಕರಾಗಿದ್ದರು. ಗೋಪಾಲಕೃಷ್ಣ ಗೋಖಲೆಯವರು ಟಿಳಕರ ಈ ಪ್ರಭಾವವನ್ನು ತಗ್ಗಿಸಲೆಂದೇ ಗಾಂಧಿಯವರನ್ನು ಭಾರತಕ್ಕೆ ಕರೆಸಿರುವದು ಎನ್ನುವುದನ್ನು ಪರೋಕ್ಷವಾಗಿ ಸೂಚಿಸುತ್ತಾರೆ. ಅನಿಬೆಸೆಂಟ್ ಅವರ ಹೋಂರೂಲ್ ಚಳುವಳಿಯಿಂದ ಗಾಂಧಿಯವರನ್ನು ಹೊರಗಿಡುವ ವಿಷಯವನ್ನು ಎತ್ತಿಹೇಳುತ್ತಾರೆ. 1919ರಲ್ಲಿ ಆರಂಭವಾದ ಖಿಲಾಫತ್ ಚಳುವಳಿ ಗಾಂಧಿ ಬೆಂಬಲಿಸಿರುವುದು ಅವರ ವಿರುದ್ಧ ಇರುವ ಪ್ರಬಲ ಟೀಕೆಗಳಲ್ಲೊಂದು. ಇಲ್ಲೆಲ್ಲ ನಂದಾ ಜಾಣ ನಡೆಯನ್ನು ಅನುಸರಿಸಿ “ಹಿಂದುಗಳು ಮುಸಲ್ಮಾನ್ ಬಾಂಧವರ ಪರವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು, ಆ ಸಮುದಾಯದ ದುಃಖವನ್ನು ತಮ್ಮ ದುಃಖವೆಂದೇ ತಿಳಿಯಬೇಕು” ಎನ್ನುವ ಮೂಲಕ ಗಾಂಧಿಯವರನ್ನು ಸಮರ್ಥಿಸಿಕೊಳ್ಳುತ್ತಾರೆ.

ಗಾಂಧೀಜಿಯವರ ಕುರಿತು ಆಕ್ಷೇಪಗಳು ಬಂದಾಗ ಇದರಲ್ಲಿ ಅವರ ನಡೆ ಆ ಕಾಲದಲ್ಲಿ ಎಷ್ಟು ಸೂಕ್ತವಾಗಿತ್ತು ಎನ್ನುವದನ್ನು ಇಲ್ಲಿ ವಿವರಿಸಲಾಗಿದೆ. ಖಿಲಾಪತ್ ಚಳುವಳಿಯನ್ನು ಗಾಂಧಿ ಸಂಪೂರ್ಣವಾಗಿ ಒಪ್ಪಿಲ್ಲ; ಆದರೆ ಆ ಧರ್ಮದ ಬಗೆಗೆ ಅವರಿಗಿರುವ ಆಳ ದೃಷ್ಟಿಕೋನದಿಂದ ಮುಸಲ್ಮಾನರ ಭಾವನೆಗಳನ್ನು ಗಾಂಧಿ ಅರ್ಥಮಾಡಿಕೊಂಡಿದ್ದರು ಎನ್ನುತ್ತಾರೆ. ಹಾಗೇ ನೋಡಿದರೆ ಖಿಲಾಪತ್ ಚಳುವಳಿಯನ್ನು ಗಾಂಧಿ ಬೆಂಬಲಿಸಿದ ಕಾರಣದಿಂದಲೇ ಗಾಂಧಿ ರಾಷ್ಟ್ರೀಯ ನಾಯಕರಾಗಿ ಹೊಮ್ಮಿದ್ದು ಮತ್ತು 1920ರ ನಾಗಪುರ ಅಧಿವೇಶನದ ನಂತರ ತೀವ್ರವಾದಿಗಳನ್ನು ಬದಿಗೆ ಸರಿಸಿ ಅನಭಿಷಕ್ತ ನಾಯಕರಾಗಿರುವುದು. ಅದೇ ರೀತಿ ಮೂರು ಮತ್ತು ನಾಲ್ಕನೆಯ ಭಾಗಗಳಾದ ಯುದ್ಧ ಮತ್ತು ಶಾಂತಿ ಹಾಗೂ ಅಂತಿಮ ಮಜಲಿನಲ್ಲಿಯೂ ಗಾಂಧೀಜಿಯವರ ಜೀವನ ವಿಧಾನಗಳನ್ನು ಚನ್ನಾಗಿ ವಿವೇಚಿಸಲಾಗಿದೆ. ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳನ್ನು ಅದರಲ್ಲಿ ಗಾಂಧೀಜಿ ಹೇಗೆ ತನ್ನ ನಿಲುವನ್ನು ಸ್ವಲ್ಪವೂ ರಾಜಿ ಮಾಡಿಕೊಳ್ಳದೇ ಪಕ್ಷವನ್ನು ತನ್ನತ್ತ ಸೆಳೆದುಕೊಂಡರು ಎನ್ನುವುದರ ವಿವರಣೆ ಇದೆ.

ಮಹಾತ್ಮಾ ಗಾಂಧೀಜಿಯವರ ಕುರಿತಾದ ಹಲವು ಗ್ರಂಥಗಳಿಗಿಂತ ಈ ಕೃತಿಯು ಭಿನ್ನವಾಗಿರುವುದು ಗಾಂಧಿ ಹಲ ಸವಾಲುಗಳನ್ನು ನಿಭಾಯಿಸಿದ ರೀತಿಯಿಂದಾಗಿ. ಗಾಂಧಿ-ಅಂಬೇಡ್ಕರ ಅವರ ನಡುವಿನ ಚರ್ಚೆಯ ಸಂದರ್ಭಗಳಲ್ಲಿ ಹಿಂದು ಧರ್ಮದ ಕುರಿತು ಅಂಬೇಡ್ಕರರಿಗಿರುವ ಆಕ್ಷೇಪಗಳಿಗೆ ಸಂಯಮದಿಂದಲೇ ಎತ್ತಿ ಅಲ್ಲಿಗೇ ಮುಗಿಸಿಬಿಡುತ್ತಾರೆ. ಇನೊಮ್ಮೆ 1934ರಲ್ಲಿ ಗಾಂಧೀಜಿಯವರು ಗ್ರಾಮೀಣ ಕೈಗಾರಿಕೆಗಳ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೇಸ್ಸಿನೊಡನೆ ಭಿನ್ನಾಭಿಪ್ರಾಯ ಬಂದು ಸ್ವಾತಂತ್ರ್ಯ ಹೋರಾಟದಿಂದ ಸಕ್ರಿಯವಾಗಿ ಹಿಂದೆಸರಿಯುವ ಘೋಷಣೆಗಳಿಗೆ ಸಂಬಂಧಿಸಿದ ಕಾರಣಗಳ ಕುರಿತು ಕಾಂಗ್ರೆಸ್‌ನ ಬಲಪಂಥೀಯ ಪ್ರಭಾವವನ್ನು ವಿವರಿಸದೆ, ಕಾಂಗ್ರೆಸ್‌ನೊಳಗಿನ ಸಮಾಜವಾದಿಗಳು ಮತ್ತು ಗಾಂಧಿಯವರ ನಡುವೆ ಬೆಳೆಯುತ್ತಿರುವ ಭಿನ್ನಾಭಿಪ್ರಾಯವನ್ನು ಒಂದೇ ಸಾಲಿನಲ್ಲಿ ವಿವರಿಸುತ್ತಾರೆ.

(ಬಿ. ಆರ್. ನಂದಾ)

ಸುಭಾಸಚಂದ್ರ ಭೋಸರ ಅಧ್ಯಕ್ಷಗಿರಿಗೆ ಗಾಂಧೀಜಿಯವರಿಗಿರುವ ಸಮಸ್ಯೆಗಳನ್ನು ಇಲ್ಲಿ ವಿವರವಾಗಿ ಚರ್ಚಿಸುವದಿಲ್ಲ. ಹಾಗಂತ ಈ ಕೃತಿಯಲ್ಲಿ ಮಹಾತ್ಮಾಗಾಂಧಿಯವರನ್ನು ದಂತಕಥೆಯಂತೆಯೂ ವೈಭವೀಕರಿಸುವುದಿಲ್ಲ. ಅವರಲ್ಲಿರುವ ಜೀವ ಕಾರುಣ್ಯವನ್ನು ತಪ್ಪದೇ ಪ್ರಸ್ಥಾಪಿಸುತ್ತಾರೆ. ದಕ್ಷಿಣ ಆಫ್ರಿಕಾದ ಪೀಟರ್‌ಮರಿಟ್ಜ್‌ಬರ್ಗ್‌ನಲ್ಲಿನ ರೈಲಿನಿಂದ ಅವರನ್ನು ಹೊರದೂಡಿದ ಪ್ರಕರಣ ಒಂದು ಪ್ರಮುಖವಾದ ವಿಷಯ. ಇಲ್ಲಿ ನಂದಾ ಈ ವಿಷಯವನ್ನು ವಿವರಿಸುವಾಗ ಗಂಧೀಜಿಯವರ ಪ್ರತಿಕ್ರಿಯೆಗಿಂತ ಅದು ಅವರೊಳಗೆ ಅವರು ಮಾಡಿಕೊಂದ ಆತ್ಮಶೋಧನೆಯೆನ್ನುವಂತೆ ವಿವರಿಸುತ್ತಾರೆ. ಇದು ಗಾಂಧಿಯವರ ಪ್ರಕಾರ ಯುರೋಪಿಯನ್ನರ ದುರಹಂಕಾರಕ್ಕಿಂತ ತಾನು ಇತ್ತೀಚೆಗೆ ಲಂಡನ್ನಿನಿಂದ ಹಿಂದಿರಿಗಿದ ಬ್ಯಾರಿಷ್ಟರ್ ಎನ್ನುವ ಅಹಂಕಾರವನ್ನು ತಳೆದಿರುವದೇ ಮುಖ್ಯವಾಗಿರಬಹುದೇ ಎನ್ನುವ ಪ್ರಶ್ನೆಯನ್ನು ಎತ್ತುತ್ತಾರೆ.

572 ಪುಟಗಳಿರುವ ಈ ಕೃತಿಯಲ್ಲಿ ಗಾಂಧೀಜಿಯವರ ಕುರಿತಂತೆ ವೀಕ್ಷಕರಾಗಿ ನೋಡಿದ ವಿವರಗಳಿವೆ. ಗಾಂಧಿಯವರ ಕುರಿತು ಆಕ್ಷೇಪ ಬರುವ ಸಂದರ್ಭಗಳಲ್ಲಿ ಅದನ್ನು ನವಿರಾಗಿ ನಿಭಾಯಿಸಿ ಹೊಳಪುಕೊಡುವ ಪ್ರಯತ್ನಗಳಾಗಿವೆ. ಮಹಾತ್ಮರ ಬದುಕಿನ ಯಾವ ಮಹತ್ವದ ವಿವರಗಳನ್ನೂ ಈ ಕೃತಿ ಮರೆಮಾಚಲು ಪ್ರಯತ್ನಿಸುವುದಿಲ್ಲ. ಪಾಕಿಸ್ತಾನದ ಹುಟ್ಟು ಎನ್ನುವದು ಈ ಕೃತಿಯಲ್ಲಿನ ತುಂಬಾ ಮಹತ್ವದ ಅಧ್ಯಾಯ. ಕೊನೆಯವರೆಗೂ ದೇಶವಿಭಜನೆಗೆ ಒಪ್ಪದಿರುವ ಗಾಂಧೀಜಿಯವರಿಗೆ ವಿಭಜನೆಯನ್ನುವುದು ಯಾಕೆ ಅನಿವಾರ್ಯವಾದ ವಿಕಲ್ಪವಾಯಿತು ಎನ್ನುವುದನ್ನು ವಿಶ್ಲೇಷಣಾತ್ಮಕವಾಗಿ ಚರ್ಚಿಸಲಾಗಿದೆ. ದೇಶ ವಿಭಜನೆಗೆ ತನ್ನ ಸ್ಪಷ್ಟವಾದ ವಿರೋಧವನ್ನು ವ್ಯಕ್ತಪಡಿಸುತ್ತಿದ್ದ ಗಾಂಧಿ 1940 ಎಪ್ರಿಲ್ 6ರ ಹರಿಜನ ಪತ್ರಿಕೆಯಲ್ಲಿ “ಮುಸಲ್ಮಾನರಿಗೆ ತಮ್ಮದೇ ನಿರ್ಧಾರವನ್ನು ತೆಗೆದುಕೊಳ್ಳಲು ದೇಶದ ಇತರ ಜನರಿಗೆ ಇರುವಷ್ಟೇ ಹಕ್ಕು ಇದೆ. ನಾವು ಈಗ ಒಂದು ಅವಿಭಕ್ತ ಕುಟುಂಬವಾಗಿದ್ದೇವೆ. ಕುಟುಂಬದ ಯಾವುದೇ ಸದಸ್ಯನೂ ಭಾಗವನ್ನು ಕೇಳಬಹುದು” ಎಂದಿರುವುದನ್ನು ಪ್ರಸ್ತಾಪಿಸುವುದರ ಮೂಲಕ ಗಾಂಧಿಯವರಿಗೆ ಮುಂದಿನ ಭಾರತದ ದಿಕ್ಸೂಚಿಯ ಸ್ಪಷ್ಟವಾದ ಅರಿವಿತ್ತು ಎನ್ನುವುದನ್ನು ವಿವರಿಸುತ್ತಾರೆ.

ಮಹಾತ್ಮಾಗಾಂಧಿ ಎನ್ನುವ ಸಂಕೀರ್ಣ ಮತ್ತು ಬೆರಗಿನ ವ್ಯಕ್ತಿತ್ವವನ್ನು ಕನ್ನಡಿಕರಿಸಿರುವ ಪ್ರಾ. ರಾಮಚಂದ್ರ ಹಬ್ಬು ಅವರು ಈ ಕೃತಿಯ ಮೂಲಕ ಕನ್ನದ ಸಾಹಿತ್ಯಕ್ಕೆ ಒಂದು ಹೊಸ ಕೊಡುಗೆಯನ್ನು ನೀಡಿದ್ದಾರೆ. ಗಾಂಧೀಜಿಯವರ ಕುರಿತು ಅನೇಕ ಓದುಗಳಿಲ್ಲದ ವ್ಯಕ್ತಿ ಇಂತಹ ಒಂದು ಪ್ರೌಢವಾದ ಕೃತಿಯೊಂದನ್ನು ಅನುವಾದ ಮಾಡಲು ಸಾಧ್ಯವಿಲ್ಲ. ಈ ಕೃತಿ ಓದುಗರನ್ನು ಆಕರ್ಷಿಸುವುದು ಇಲ್ಲಿ ಉಪಯೋಗಿಸಿರುವ ಕಾವ್ಯಮಯ ಕನ್ನಡ ಭಾಷೆಗಳ ಮೂಲಕ. ಇಲ್ಲಿ ಉಪಯೋಗಿಸಿದ ಕ್ಷಿತಿಜ, ನರಭಕ್ಷರ ರೌದ್ರತೆಯೊಂದಿಗೆ ಹೀಗೆ ಹಲವಾರು ಸಂದರ್ಭಗಳಲ್ಲಿ ಆಯಾ ಘಟನೆಗಳಿಗೆ ಸಂಬಂಧಿಸಿದಂತೆ ಸರಳ ಮತ್ತು ಪ್ರತಿಮಾರೂಪವಾಗಿರಬೇಕಾದ ಶಬ್ಧಗಳನ್ನು ಆಯ್ಕೆಮಾಡಿಕೊಂಡಿದ್ದಾರೆ. ಹಾಗಾಗಿ ಇದೊಂದು ಸ್ವತಂತ್ರ ಕೃತಿಯಾಗಿದೆ. ಸುಂದರ ಮುದ್ರಣ ಮತ್ತು ಹಲವು ಚುಕ್ಕಿಗಳು ಸೇರಿ ಆದ ಮಹಾತ್ಮಾ ಗಾಂಧೀಜಿಯವರ ಮುಖಪುಟ ಅರ್ಥಪೂರ್ಣವಾಗಿದೆ. ಗಾಂಧೀಜಿಯವರ ಜೀವನ ಚರಿತ್ರೆಯನ್ನು ಅಭ್ಯಸಿಸುವವರಿಗೆ ಇದೊಂದು ಮಾರ್ಗದರ್ಶಿ. ಅಭಿನಂದನೆಗಳು ಪ್ರಾ. ರಾಮಚಂದ್ರ ಹಬ್ಬು ಅವರಿಗೆ.

(ಕೃತಿ: ಮಹಾತ್ಮ ಗಾಂಧಿ ಜೀವನ ಚರಿತೆ, ಆಂಗ್ಲ ಮೂಲ: ಬಿ. ಆರ್. ನಂದಾ, ಕನ್ನಡಕ್ಕೆ: ರಾಮಚಂದ್ರ ಹಬ್ಬು, ಪ್ರಕಾಶಕರು : ಗೀತಾಂಜಲಿ ಪಬ್ಲಿಕೇಷನ್ಸ್, ಬೆಂಗಳೂರು, ಬೆಲೆ: 600/-)