ಈ ಶತಮಾನದ ಅದ್ಭುತ ಕಾದಂಬರಿಕಾರ, ನೊಬೆಲ್ ಬಹುಮಾನ ವಿಜೇತ ಗಾಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್ ತನ್ನ ಬರವಣಿಗೆಯ ಬಗ್ಗೆ, ಬದುಕಿನ ಬಗ್ಗೆ ಹೆಚ್ಚಾಗಿ ಬಹಿರಂಗವಾಗಿ ಮಾತನಾಡಲು ಇಷ್ಟ ಪಡದವನು. ಆದರೆ, ಈ ಅಪರೂಪದ ಸಂದರ್ಶನದಲ್ಲಿ ಮಾರ್ಕ್ವೆಜ್ ತನ್ನ ಆತ್ಮೀಯ ಗೆಳೆಯ, ಪತ್ರಕರ್ತ ಹಾಗೂ ಕಾದಂಬರಿಕಾರ, ಕೊಲಂಬಿಯಾ ಮೂಲದ ಪ್ಲಿನಿಯೋ ಅಪುಲೆಯೋ ಮೆಂಡೋಂಜ್ ಜೊತೆ ತನ್ನೆಲ್ಲಾ ವಿಚಾರಗಳನ್ನು, ಪರದಾಟಗಳನ್ನು, ನೆನಪುಗಳನ್ನು, ಗೀಳುಗಳನ್ನು, ಕನಸುಗಳನ್ನು, ಹುಚ್ಚುಗಳನ್ನು ನಿರಂಬಳವಾಗಿ ತೆರೆದಿಟ್ಟಿದ್ದಾನೆ. ‘The Fragrance of Guava’ ಎಂಬ ಪುಸ್ತಕವಾಗಿ ಪ್ರಕಟವಾಗಿರುವ ಈ ಸಂದರ್ಶನದ  ಸಾಲುಗಳು ಇಲ್ಲಿವೆ. 

ಈ ಮಾತುಕತೆಯ ಕೆಲವು ಭಾಗಗಳನ್ನು  ಕನ್ನಡಕ್ಕೆ ತಂದಿದ್ದಾರೆ ಉಮಾರಾವ್.

 

 ಮೆಂ: ನೀನು ಬರೆಯುವುದು ಒಂದು ಖುಶಿಯ ವಿಷಯವೆಂದು ಹೇಳಿದ್ದೀಯ. ಜೊತೆಗೇ ಬರೆಯುವ ಕ್ರಿಯೆ ಯಾತನಾಮಯವೆಂದೂ ಹೇಳಿದ್ದೀಯಾ. ಯಾವುದು ನಿಜ?
ಮಾ: ಎರಡೂ ನಿಜ. ಮೊದಲು ನಾನು ಬರೆಯುವ ಕಲೆಗಾರಿಕೆಯನ್ನು ಅಭ್ಯಸಿಸುತ್ತಿರುವಾಗ, ಒಂದು ಥರಾ ಸಂಭ್ರಮದಿಂದ ಬರೆಯುತ್ತಿದ್ದೆ. ಬಹಳಷ್ಟು ಬೇಜವಾಬ್ದಾರಿತನದಿಂದಲೇ ಬರೆಯುತ್ತಿದ್ದೆ ಎಂದೂ ಹೇಳಬಹುದು. ಆಗಿನ ದಿನಗಳಲ್ಲಿ, ಬೆಳಗಿನ ಜಾವ ಎರಡು-ಮೂರು ಗಂಟೆಗೆ ನಾನು ಕೆಲಸ ಮಾಡುತ್ತಿದ್ದ ನ್ಯೂಸ್ ಪೇಪರಿನ ಲೇಖನಗಳನ್ನು ಮುಗಿಸಿದಮೇಲೆ ನನ್ನ ಪುಸ್ತಕದ ನಾಲ್ಕು, ಐದು, ಏಕೆ ಒಂದೊಂದು ಸಲ ಹತ್ತು ಪುಟಗಳನ್ನೂ ಬರೆಯುತ್ತಿದ್ದೆ. ಒಂದು ಸಲ ಕೂತವನು ಇಡೀ ಕತೆಯನ್ನು ಬರೆದು ಮುಗಿಸಿದ್ದೆ.

ಮೆಂ: ಈಗ?
ಮಾ: ಈಗ ದಿನವಿಡೀ ಕೂತರೂ ಒಂದು ಪ್ಯಾರಾ ಬರೆದರೆ ನನ್ನ ಅದೃಷ್ಟ. ಕಾಲ ಉರುಳಿದಂತೆ ಬರೆಯುವ ಕ್ರಿಯೆ ತುಂಬಾ ಯಾತನಾಮಯವಾಗುತ್ತಿದೆ.

ಮೆಂ: ಹಾಗೇಕೆ? ಕೌಶಲ್ಯ ಹೆಚ್ಚಾದಷ್ಟೂ ಬರೆಯುವುದು ಸುಲಭವಾಗಬೇಕಲ್ವಾ?
ಮಾ: ಏನಾಗುತ್ತೇ ಅಂದರೆ, ನಮ್ಮ ಜವಾಬ್ದಾರಿಯ ಅರಿವು ಹೆಚ್ಚಾಗುತ್ತಾ ಹೋಗುತ್ತೆ. ಈಗ ನಾನು ಬರೆಯುವ ಪ್ರತಿ ಒಂದು ಪದವೂ ಹೆಚ್ಚು ತೂಕ ಹೊಂದಿರುತ್ತದೆ, ಹೆಚ್ಚು ಹೆಚ್ಚು ಜನರ ಮೇಲೆ ಪ್ರಭಾವ ಬೀರುತ್ತದೆ ಅನ್ನಿಸತೊಡಗುತ್ತದೆ.

ಮೆಂ: ಇದು ಬಹುಶಃ ಯಶಸ್ಸಿನ ಒಂದು ಪರಿಣಾಮ ಎಂದು ಹೇಳಬಹುದು. ಇದರಿಂದ ನಿನಗೆ ಕಿರಿಕಿರಿಯಾಗುತ್ತದೆಯಾ?
ಮಾ: ನನಗೆ ಯೋಚನೆಯಾಗುತ್ತದೆ. ಯಶಸ್ವೀ ಲೇಖಕರಿಗಾಗಿ ಸಿದ್ಧವಿಲ್ಲದ ಒಂದು ಭೂ ಖಂಡದಲ್ಲಿ, ಸಾಹಿತ್ಯಿಕ ಯಶಸ್ಸಿನ ಪರಿಚಯವಿಲ್ಲದ ಒಬ್ಬ ಲೇಖಕನ ಕೃತಿಗಳು ಬಿಸಿ ಕೇಕುಗಳಂತೆ ಮಾರಾಟವಾಗುವುದಕ್ಕಿಂತ ಕೆಟ್ಟದ್ದು ಅವನಿಗೆ ಬೇರೊಂದಿಲ್ಲ. ಆ ರೀತಿಯ ಸಾರ್ವಜನಿಕ ಪ್ರದರ್ಶನ ನನಗೆ ಅಸಹ್ಯ ತರುತ್ತದೆ. ಟೆಲಿವಿಶನ್, ಸಮ್ಮೇಳನಗಳು, ಕಾನ್ಫರೆನ್ಸ್ ಗಳು.,ದುಂಡು ಮೇಜಿನ ಗೋಷ್ಟಿಗಳು ಎಲ್ಲವನ್ನೂ ನಾನು ದ್ವೇಷಿಸುತ್ತೇನೆ.

ಮೆಂ: ಸಂದರ್ಶನಗಳು?
ಮಾ: ಅದೂ ಅಷ್ಟೆ.. ಅದಕ್ಕೇ ಯಾರಿಗೂ ನಾನು ಯಶಸ್ಸು ಸಿಗಲಿ ಅಂತ ಹರಸುವುದಿಲ್ಲ. ಅದು ಒಬ್ಬ ಪರ್ವತಾರೋಹಿಗೆ ಆದಂತೆ. ಅವನು ಶಿಖರ ಮುಟ್ಟಲು ತನ್ನ ಜೀವ ತೇಯುತ್ತಾನೆ. ಆದರೆ ಅಲ್ಲಿ ತಲುಪಿದ ಮೇಲೆ ಅವನು ಮಾಡುವುದಾದರೂ ಏನು? ಇಳಿಯುತ್ತಾನೆ. ಅಥವಾ ಹುಶಾರಾಗಿ ತನ್ನ ಘನತೆ ಕಳೆದುಕೊಳ್ಳದೆಯೇ ಇಳಿಯಲು ಪ್ರಯತ್ನಿಸುತ್ತಾನೆ.

ಮೆಂ: ನೀನು ಯುವಕನಾಗಿದ್ದಾಗ, ಜೀವನೋಪಾಯಕ್ಕಾಗಿ ಬೇರೆ ಕೆಲಸಗಳನ್ನು ಮಾಡಬೇಕಾಗಿದ್ದಾಗ, ರಾತ್ರಿ ಹೊತ್ತು ಬರೆಯುತ್ತಿದ್ದೆ. ತುಂಬಾ ಸಿಗರೇಟು ಸೇದುತ್ತಿದ್ದೆ.
ಮಾ: ದಿನಕ್ಕೆ ನಲವತ್ತು ಸಿಗರೇಟುಗಳು.

ಮೆಂ: ಈಗ?
ಮಾ: ನಾನೀಗ ಸಿಗರೇಟು ಸೇದುವುದಿಲ್ಲ. ದಿನದ ಹೊತ್ತಿನಲ್ಲಿ ಮಾತ್ರ ಕೆಲಸ ಮಾಡುತ್ತೇನೆ. ಬೆಳಗಿನ ಹೊತ್ತು. ಬೆಳಿಗ್ಗೆ ಒಂಭತ್ತು ಗಂಟೆಯಿಂದ ಮಧ್ಯಾಹ್ನ ಮೂರು ಗಂಟೆಯವರೆಗೂ ಸದ್ದಿಲ್ಲದ, ಬೆಚ್ಚನೆಯ ರೂಮಿನಲ್ಲಿ ಬರೆಯಲು ಕೂಡುತ್ತೇನೆ. ಚಳಿ ಮತ್ತು ಮಾತುಗಳು ನನ್ನ ಗಮನವನ್ನು ಬೇರೆಡೆಗೆ ಸೆಳೆಯುತ್ತವೆ.

ಮೆಂ: ಬೇರೆ ಲೇಖಕರಿಗೆ ಆಗುವಂತೆ ನಿನಗೂ ಒಂದು ಖಾಲಿ ಹಾಳೆ ನೋಡಿದಾಗ ಆತಂಕವಾಗುತ್ತದೆಯೇ?
ಮಾ: ಹೌದು. ಖಾಲಿ ಹಾಳೆ ಸೃಷ್ಟಿಸುವ ಆತಂಕವನ್ನು ಮೀರಿಸುವುದು ಕ್ಲಾಸ್ಟ್ರೋಫೋಬಿಯ ಒಂದೇ. ಹೆಮಿಂಗ್ವೇಯ ಬುದ್ಧಿವಾದ ಓದಿದ ಮೇಲೆ ಈ ಚಿಂತೆ ಕಡಿಮೆಯಾಯಿತು. ಅವನು ಹೇಳಿದ್ದೇನೆಂದರೆ ಮಾರನೆಯ ದಿನ ಹೇಗೆ ಹೋಗುತ್ತದೆಂದು ಗೊತ್ತದಾಗ ಮಾತ್ರ ನಿನ್ನ ಕೆಲಸ ನಿಲ್ಲಿಸು ಎಂದು.

ನಾನು ಬರೆಯಲು ಪ್ರಾರಂಭಿಸಿದ್ದೂ ಒಂದು ಆಕಸ್ಮಿಕವೇ. ಬಹುಶಃ ನಮ್ಮ ಪೀಳಿಗೆಗೂ ಬರಹಗಾರರನ್ನು ಸೃಷ್ಟಿಸುವ ಸಾಮರ್ಥ್ಯ ಇದೆಯೆಂದು ರುಜುವಾತು ಪಡಿಸಲಿರಬಹುದು. ನಂತರ ನಾನೊಂದು ರೀತಿ ಖುಶಿಗಾಗಿ ಬರೆಯುವ ಬಲೆಯಲ್ಲಿ ಬಿದ್ದೆ. ಇದೆಲ್ಲಾ ಆದಮೇಲೆ ಜಗತ್ತಿನಲ್ಲಿ ಬರೆಯುವುದಕ್ಕಿಂತ ನಾನು ಪ್ರೀತಿಸುವುದು ಯಾವುದೂ ಇಲ್ಲವೆಂಬುದನ್ನು ಮನಗಾಣತೊಡಗಿದೆ.

 

ಮೆಂ: ಒಂದು ಕೃತಿ ಪ್ರಾರಂಭವಾಗುವ ಘಟ್ಟವನ್ನು ಹೇಗೆ ನಿರ್ಧರಿಸುತ್ತೀಯ?
ಮಾ: ಒಂದು ವಿಶುಯಲ್ ಇಮೇಜ್ ನಿಂದ. ನನಗನ್ನಿಸೋದು ಬೇರೆ ಲೇಖಕರಿಗೆ ಅದು ಒಂದು ವಿಚಾರದಿಂದ, ಪರಿಕಲ್ಪನೆಯಿಂದ ಆಗುತ್ತದೆ. ನಾನು ಯಾವಾಗಲೂ ಪ್ರಾರಂಭ ಮಾಡುವುದು ಒಂದು ಪ್ರತಿಮೆಯಿಂದ. ನನ್ನ ಅತ್ಯುತ್ತಮ ಕತೆಯೆಂದು ನಾನೆಣಿಸುವ ‘ಟ್ಯೂಸ್ ಡೇ ಸಿಯೆಸ್ತಾ’ ದಲ್ಲಿ ನನ್ನ ಕತೆ ಶುರುವಾದದ್ದು ನಾನು ಕಪ್ಪು ಕೊಡೆ ಹಿಡಿದ ಒಬ್ಬ ಹೆಂಗಸು ಮತ್ತು ಒಂದು ಚಿಕ್ಕ ಹುಡುಗಿ ಕಪ್ಪು ಬಟ್ಟೆತೊಟ್ಟು ಖಾಲಿ ಖಾಲಿಯಾಗಿದ್ದ ಆ ಊರಿನಲ್ಲಿ ಉರಿಬಿಸಿಲಿನಲ್ಲಿ ನಡೆದು ಹೋಗುತ್ತಿರುವುದನ್ನು ನೋಡಿದಾಗ. ‘ಲೀಫ್ ಸ್ಟಾರ್ಮ್’ ನಲ್ಲಿ ಒಬ್ಬ ಮುದುಕ ತನ್ನ ಮೊಮ್ಮಗನನ್ನು ಒಂದು ಶವಸಂಸ್ಕಾರಕ್ಕೆ ಕರೆದುಕೊಂಡು ಹೋಗುತ್ತಿದ್ದುದನ್ನು ನೋಡಿದಾಗ. ‘ನೋಬಡಿ ರೈಟ್ಸ್ ಟು ದ ಕರ್ನಲ್ ’ ನಲ್ಲಿ ಪ್ರಾರಂಭವಾಗುವ ಪಾಯಿಂಟ್ ನಲ್ಲಿ ಒಬ್ಬ ಬರಾಂಕಿಲ್ಲಾ ದ ಮಾರುಕಟ್ಟೆಯಲ್ಲಿ ಒಂದು ದೋಣಿಗೋಸ್ಕರ ಕಾಯುತ್ತ ನಿಂತಿರುತ್ತಾನೆ. ಅವನೊಂದು ರೀತಿಯ ಮೂಕ ಆತಂಕದಲ್ಲಿ ಕಾಯುತ್ತಿರುತ್ತಾನೆ. ಎಷ್ಟೋ ವರ್ಷಗಳ ನಂತರ ಒಂದು ದಿನ ಪ್ಯಾರಿಸ್ಸಿನಲ್ಲಿ ನಾನೊಂದು ಪತ್ರಕ್ಕೋಸ್ಕರ ಕಾಯುತ್ತಿದ್ದೆ. ಒಂದು ಮನಿ ಆರ್ಡರ್ ಅಂತ ನೆನಪು, ಆಗ ಅದೇ ಮೂಕ ಆತಂಕ ನನ್ನದಾಗಿತ್ತು. ಆಗ ನಾನು ಆ ಮನುಷ್ಯನ ನೆನಪಿನೊಂದಿಗೆ ಗುರುತಿಸಿಕೊಂಡೆ.

ಮೆಂ: ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ನಲ್ಲಿ ಯಾವ ಪ್ರತಿಮೆ ಬಳಸಿದೆ?
ಮಾ: ಒಂದು ಸರ್ಕಸ್ಸಿನಲ್ಲಿ ಪ್ರದರ್ಶನಕ್ಕಿದ್ದ ಮಂಜುಗಡ್ಡೆಯನ್ನು ತೋರಿಸಲು ಒಬ್ಬ ಮುದುಕ ತನ್ನ ಮೊಮ್ಮಗನನ್ನು ಕರೆದುಕೊಂಡು ಹೋಗುತ್ತಿರುತ್ತಾನೆ.

ಮೆಂ: ಅದು ನಿನ್ನ ತಾತ ಕರ್ನಲ್ ಮಾರ್ಕ್ವೆಜ್ ಅವರಾ?
ಮಾ: ಹೌದು.

ಮೆಂ: ಅದು ನಿಜವಾಗಿ ನಡೆದ ಘಟನೆಯಾ?
ಮಾ: ಹಾಗೆ ಹೇಳೋಕಾಗೊಲ್ಲ. ಆದರೆ ಅದು ಸ್ಫೂರ್ತಿ ಪಡೆದದ್ದು ಒಂದು ನೈಜ ಘಟನೆಯಿಂದ. ನಾನು ಅರ್ಕಟಕಟಾದಲ್ಲಿ ಚಿಕ್ಕ ಹುಡುಗನಾಗಿದ್ದಾಗ, ನಮ್ಮ ತಾತ ಓಡುವ ಒಂಟೆಯನ್ನು ತೋರಿಸಲು ನನ್ನನ್ನು ಒಂದು ದಿನ ಸರ್ಕಸ್ಸಿಗೆ ಕರೆದುಕೊಂಡು ಹೋಗಿದ್ದರು. ಇನ್ನೊಂದು ದಿನ, ನಾನು ಮಂಜುಗಡ್ಡೆ ನೋಡಿಲ್ಲ ಎಂದು ಅವರಿಗೆ ಹೇಳಿದಾಗ ನನ್ನನ್ನು ಒಂದು ಬಾಳೆಹಣ್ಣಿನ ಕಂಪನಿಯ ವಸತಿಗೆ ಕರೆದುಕೊಂಡು ಹೋಗಿ, ಅಲ್ಲಿ ಹೆಪ್ಪುಗಟ್ಟಿದ್ದ ಮುಲೆಟ್ ಇಟ್ಟಿದ್ದ ಒಂದು ಕ್ರೇಟ್ ತೆರೆಯಲು ಹೇಳಿ, ನನ್ನ ಕೈ ಅದರೊಳಗೆ ಹಾಕಿಸಿದ್ದರು. ಇಡೀ ‘ಒನ್ ಹಂಡ್ರೆದ್ ಇಯರ್ಸ್ ಆಫ್ ಸಾಲಿಟ್ಯೂಡ್’ ಶುರುವಾದದ್ದು ಆ ಒಂದು ಪ್ರತಿಮೆಯಿಂದ.

ಮೆಂ: ಹಾಗಾದರೆ ನೀನು ಈ ಎರಡು ಪ್ರತಿಮೆಗಳನ್ನು ಒಟ್ಟಾಗಿ ಸೇರಿಸಿ, ಪುಸ್ತಕದ ಮೊದಲ ಸಾಲನ್ನು ಬರೆದೆ. ಅದೇನೆಂದು ಹೇಳ್ತೀಯಾ?
ಮಾ: ಏಷ್ಟೋ ವರ್ಷಗಳ ನಂತರ, ಕರ್ನಲ್ ಆರೆಲಿಯಾನೋ ಬ್ಯೂನ್ದಿಯಾ ಫಯರಿಂಗ್ ಸ್ಕ್ವಾಡ್ ಎದುರಿಗೆ ನಿಂತಾಗ ಅವನಿಗೆ ತನ್ನ ತಂದೆ ತನ್ನನ್ನು ಮಂಜುಗಡ್ಡೆ ತೋರಿಸಲು ಕರೆದುಕೊಂಡು ಹೋಗಿದ್ದ ಎಂದಿನದೋ ಮಧ್ಯಾಹ್ನದ ನೆನಪಾಯಿತು.

ಮೆಂ: ನೀನು ಪುಸ್ತಕದ ಮೊದಲ ಸಾಲಿಗೆ ಯಾವಾಗಲೂ ತುಂಬಾ ಪ್ರಾಮುಖ್ಯತೆ ಕೊಡುತ್ತೀಯ. ಒಂದೊಂದು ಸಲ ಪುಸ್ತಕದ ಮೊದಲ ಸಾಲು ಬರೆಯಲು ಉಳಿದ ಇಡೀ ಪುಸ್ತಕ ಬರೆಯುವುದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದಿದೆ ಎಂದು ನೀನು ನನಗೆ ಹೇಳಿದ್ದೆ.
ಮಾ: ಏಕೆಂದರೆ ಪುಸ್ತಕದ ಮೊದಲ ಸಾಲು ಪುಸ್ತಕದ ಶೈಲಿ, ರಚನೆ , ಒಂದೊಂದು ಸಲ ಅದರಲ್ಲಿ ಎಷ್ಟು ಪುಟಗಳಿರುತ್ತವೆ ಎನ್ನುವುದನ್ನು ಕೂಡಾ ಪರೀಕ್ಷಿಸುವ ಪ್ರಯೋಗ ಶಾಲೆಯಾಗಬಹುದು.

ಮೆಂ: ಬರೆಯೋಕೆ ಎಲ್ಲಕ್ಕಿಂತ ಯಾವುದು ಒಳ್ಳೆಯ ಜಾಗ ಅಂತ ನಿನಗನ್ನಿಸುತ್ತದೆ?
ಮಾ: ಇದನ್ನು ನಾನು ಮೊದಲೇ ಎಷ್ಟೋ ಸಲ ಹೇಳಿದ್ದೇನೆ. ಬೆಳಗಿನ ಹೊತ್ತಾದರೆ ಒಂದು ನಿರ್ಜನ ದ್ವೀಪ. ರಾತ್ರಿಯಾದರೆ ದೊಡ್ಡ ಶಹರು. ಬೆಳಗಿನ ಹೊತ್ತು ನನಗೆ ಸದ್ದು ಗದ್ದಲವಿರಬಾರದು. ಸಂಜೆ ಹೊತ್ತು ನನಗೆ ಕೆಲವು ಒಳ್ಳೆಯ ಗೆಳೆಯರು, ಹರಟೆ, ಅದರೊಂದಿಗೆ ಇಷ್ಟು ಮದ್ಯ ಬೇಕು. ನನಗೆ ರಸ್ತೆಯಲ್ಲಿ ಓಡಾಡುವ ಜನರೊಂದಿಗೆ ನಿರಂತರ ಸಂಪರ್ಕಬೇಕು. ಅವರ ಮೂಲಕ ಜಗತ್ತಿನಲ್ಲಿ ಏನೇನಾಗುತ್ತಿದೆ ಎಂಬ ತಿಳುವಳಿಕೆ ಬೇಕು. ಈ ಸಂಬಂಧದಲ್ಲಿ ವಿಲ್ಲಿಯಮ್ ಫಾಕ್ ನರ್ ಹೇಳಿದ್ದು ನೆನಪಾಗುತ್ತದೆ. ಒಬ್ಬ ಲೇಖಕನಿಗೆ ಅತ್ಯುತ್ತಮ ಸ್ಥಳವೆಂದರೆ ಒಂದು ವೇಶ್ಯಾವಾಟಿಕೆ. ಏಕೆಂದರೆ ಅದು ಬೆಳಗಿನ ಹೊತ್ತು ತುಂಬಾ ನಿಶ್ಶಬ್ದವಾಗಿರುತ್ತದೆ. ರಾತ್ರಿ ಹೊತ್ತು ಜನಜಂಗುಳಿ, ಪಾರ್ಟಿಯೋ ಪಾರ್ಟಿ.

ಮೆಂ: ಈಗ ಒಬ್ಬ ಲೇಖಕನ ಬರವಣಿಗೆಯಲ್ಲಿ ಕೌಶಲ್ಯದ ಪಾತ್ರದ ಬಗ್ಗೆ ಮಾತಾಡೋಣ. ನಿನ್ನ ಕಲಿಕೆಯ ದಿನಗಳಲ್ಲಿ ಯಾರ ನೆರವು ಎಲ್ಲಕ್ಕಿಂತ ಮುಖ್ಯವಾಗಿತ್ತು ಹೇಳುತ್ತೀಯಾ?
ಮಾ: ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಅಜ್ಜಿಯದು. ಯಾವ ಮುಜುಗರವೂ ಇಲ್ಲದೆ ಅವಳು ಅದೇ ತಾನೇ ನೋಡಿದಂತೆ ಅತ್ಯಂತ ಅಸಹ್ಯ ವಿಷಯಗಳ ಬಗ್ಗೆ ನನಗೆ ಹೇಳುತ್ತಿದ್ದಳು. ಅವಳ ನಿರ್ಭಾವುಕ ರೀತಿ ಮತ್ತು ಅವಳಲ್ಲಿದ್ದ ಪ್ರತಿಮೆಗಳ ಭಂಡಾರ ಅವಳ ಕತೆಗಳನ್ನು ಅಷ್ಟೊಂದು ನಂಬಲರ್ಹವಾಗಿ ಮಾಡುತ್ತಿದ್ದುವು. ನಾನು ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಬರೆದದ್ದು ನನ್ನ ಅಜ್ಜಿಯ ರೀತಿಯನ್ನು ಅನುಸರಿಸಿಯೇ.

ಮೆಂ: ನೀನು ಬರಹಗಾರನಾಗುವುದು ಸಾಧ್ಯ ಎಂದು ಮನಗಾಣಲು ನಿನ್ನ ಅಜ್ಜಿಯ ಮೂಲಕ ಸಾಧ್ಯವಾಯಿತೇ?
ಮಾ: ಅಲ್ಲ. ಅದಾದದ್ದು ಕಾಫ್ಕಾನ ಮೂಲಕ. ಅವನೂ ನನ್ನ ಅಜ್ಜಿಯಂತೆಯೇ ವಿವರಗಳನ್ನು ಜರ್ಮನ್ ನಲ್ಲಿ ತರುತ್ತಿದ್ದ. ನಾನು ‘ಮೆಟಮಾಫರ್ಸಿಸ್’ ಓದಿದಾಗ ನನಗೆ ಹದಿನೇಳು ವರ್ಷ. ಆಗ ನಾನೂ ಲೇಖಕನಾಗಲ್ಲೆ ಎಂಬ ಅರಿವು ನನಗಾಯಿತು. ಗ್ರೆಗರ್ ಸಂಸಾ ಒಂದು ದಿನ ಬೆಳಗಾಗೆದ್ದಾಗ ಒಂದು ಬೃಹತ್ ಕೀಟವಾಗಿ ಪರಿವರ್ತನೆಯಾಗುವುದನ್ನು ಕಂಡಾಗ, ನನಗನ್ನಿಸಿತು “ಹೀಗೂ ಮಾಡಬಹುದೂಂತ ನನಗೆ ಗೊತ್ತಿರಲಿಲ್ಲ. ಹೀಗೆ ಮಾಡುವುದು ಸಾಧ್ಯವಿದ್ದರೆ, ಖಂಡಿತ ನನಗೆ ಬರೆಯುವುದರಲ್ಲಿ ಆಸಕ್ತಿ ಇದೆ.”

ಮೆಂ: ಕಾಫ್ಕಾ ಅಲ್ಲದೆ ಮತ್ತೆ ಯಾವ ಲೇಖಕರು ನಿಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಲು, ಈ ಉದ್ಯಮದ ರಹಸ್ಯಗಳನ್ನು ತಿಳಿದುಕೊಳ್ಳಲು ನೆರವಾಗಿದ್ದಾರೆ?
ಮಾ: ಹೆಮಿಂಗ್ವೇ.

ಮೆಂ: ಆದರೆ ಅವನು ಅಂಥಾ ಶ್ರೇಷ್ಟ ಕಾದಂಬರಿಕಾರ ಎಂದೇನೂ ನೀವು ತಿಳಿದಿಲ್ಲ.
ಮಾ: ಹೌದು. ಆದರೆ ಅವನು ಸಣ್ಣ ಕತೆಗಳ ಶ್ರೇಷ್ಠ ಲೇಖಕ. ಅವನು ಹೇಳಿದ ಕಿವಿಮಾತುಗಳಲ್ಲಿ ಒಂದೆಂದರೆ, ಸಣ್ಣಕತೆ ಒಂದು ನೀರ್ಗಲ್ಲಿನಂತೆ. ಅಲ್ಲಿ ಕಾಣದಿರುವ ಭಾಗ ಕತೆಗೆ ಒಳ್ಳೆಯ ಬೆಂಬಲ ನೀಡುತ್ತಿರಬೆಕು. ಅದೆಂದರೆ ನೇರವಾಗಿ ಕಥೆಯಲ್ಲಿ ಬಳಸದ ಆದರೆ ನೀನು ಸಂಗ್ರಹಿಸಿರುವ ಎಲ್ಲಾ ವಿಚಾರಗಳು, ಅಧ್ಯಯನಗಳು ಮತ್ತು ಮಾಹಿತಿಗಳು. ಹೌದು. ಹೆಮಿಂಗ್ವೇ ಬಹಳ ಕಲಿಸುತ್ತಾನೆ. ಎಲ್ಲಿಯವರೆಗೆಂದರೆ, ಒಂದು ಕಾರು ತಿರುವಿನಲ್ಲಿ ಹೇಗೆ ತಿರುಗುತ್ತದೆ ಎನ್ನುವವರೆಗೂ.

 ಅದಾದದ್ದು ಕಾಫ್ಕಾನ ಮೂಲಕ. ಅವನೂ ನನ್ನ ಅಜ್ಜಿಯಂತೆಯೇ ವಿವರಗಳನ್ನು ಜರ್ಮನ್ ನಲ್ಲಿ ತರುತ್ತಿದ್ದ. ನಾನು ‘ಮೆಟಮಾಫರ್ಸಿಸ್’ ಓದಿದಾಗ ನನಗೆ ಹದಿನೇಳು ವರ್ಷ. ಆಗ ನಾನೂ ಲೇಖಕನಾಗಲ್ಲೆ ಎಂಬ ಅರಿವು ನನಗಾಯಿತು. ಗ್ರೆಗರ್ ಸಂಸಾ ಒಂದು ದಿನ ಬೆಳಗಾಗೆದ್ದಾಗ ಒಂದು ಬೃಹತ್ ಕೀಟವಾಗಿ ಪರಿವರ್ತನೆಯಾಗುವುದನ್ನು ಕಂಡಾಗ, ನನಗನ್ನಿಸಿತು “ಹೀಗೂ ಮಾಡಬಹುದೂಂತ ನನಗೆ ಗೊತ್ತಿರಲಿಲ್ಲ. ಹೀಗೆ ಮಾಡುವುದು ಸಾಧ್ಯವಿದ್ದರೆ, ಖಂಡಿತ ನನಗೆ ಬರೆಯುವುದರಲ್ಲಿ ಆಸಕ್ತಿ ಇದೆ.”

 

 

ಮೆಂ: ಒಬ್ಬ ಲೇಖಕ ಎಷ್ಟೇ ಕೃತಿಗಳನ್ನು ಬರೆದಿದ್ದರೂ, ನಿಜವಾಗಿ ಅವನ ಬದುಕಿನಲ್ಲಿ ಅವನು ಬರೆದಿರುವುದು ಒಂದೇ ಪುಸ್ತಕ ಎಂದು ಹೇಳುತ್ತೀಯಲ್ಲಾ,   ನೀನು ಇದನ್ನು ನಂಬುತ್ತೀಯಾ?

ಮಾ: ಖಂಡಿತ. ನನಗನ್ನಿಸೋದು, ಪ್ರತಿ ಲೇಖಕನೂ ಬರೆಯೋದು ಒಂದೇ ಒಂದು ಪುಸ್ತಕ. ಅದು ಬೇರೆ ಬೇರೆ ಶೀರ್ಷಿಕೆಗಳಡಿ, ಎಷ್ಟೋ ಸಂಪುಟಗಳಲ್ಲಿ ಪ್ರಕಟವಾಗಿರಬಹುದು. ಬಾಲ್ಜಾಕ್, ಕಾನ್ರಾಡ್, ಮೆಲ್ವಿಲ್, ಕಾಫ್ಕಾ, ಫಾಕ್ನರ್ ಎಲ್ಲರಲ್ಲೂ ನೀನು ಈ ವಿಷಯವನ್ನು ಗಮನಿಸಬಹುದು. ಒಂದೊಂದು ಸಲ ಲೇಖಕನ ಒಂದು ಕೃತಿ ಅವನ ಮಿಕ್ಕೆಲ್ಲಾ ಪುಸ್ತಕಗಳಿಗಿಂತ ಎಷ್ಟು ಎದ್ದು ಕಾಣುತ್ತದೆಯೆಂದರೆ ಅದು ಅವನ ಏಕೈಕ, ಆದಿಮ ಕೃತಿ ಎನ್ನಿಸಿಬಿಡುತ್ತದೆ.

ಮೆಂ: ನೀನು ಹೇಳಿದಂತೆ ನೋಡಿದರೆ, ನಿನ್ನ ಕೃತಿಗಳಲ್ಲಿ ಯಾವುದಕ್ಕೆ ಆ ಸ್ಥಾನ ಕೊಡುತ್ತೀಯಾ? ಮಕೋಂಡೋದ ಕತೆಗಾ?
ಮಾ: ಅಲ್ಲ. ಇದು ನಿನಗೂ ಗೊತ್ತು. ನನ್ನ ಏಕೈಕ ಕೃತಿ ಇರುವುದು ಒಂಟಿತನದ ಬಗ್ಗೆ. ಯೋಚಿಸಿ ನೋಡು, ಲೀಫ್ ಸ್ಟಾರ್ಮ್ ನ ಮುಖ್ಯ ಪಾತ್ರ ಸಂಪೂರ್ಣ ಒಂಟಿಯಾಗೇ ಬದುಕುತ್ತಾನೆ, ಸಾಯುತ್ತಾನೆ. ನೋಬಡಿ ರೈಟ್ಸ್ ಟು ದ ಕರ್ನಲ್ ನ ನಾಯಕನನ್ನೂ ಒಂಟಿತನ ಬಿಡದೆ ಕಾಡುತ್ತದೆ. ಪ್ರತಿ ಶುಕ್ರವಾರ ಅವನು ತನ್ನ ಹೆಂಡತಿ ಮತ್ತು ಹುಂಜದೊಂದಿಗೆ  ತನ್ನ ಯುದ್ಧದ ಪಿಂಚಿಣಿಗಾಗಿ ಕಾಯುತ್ತಾನೆ. ಅದು ಕೊನೆಗೂ ಬರುವುದಿಲ್ಲ. ಇನ್ ಈವಿಲ್ ಅವರ್ ನಲ್ಲಿ ಊರಿನ ಜನರ ವಿಶ್ವಾಸ ಗೆಲ್ಲುವುದರಲ್ಲಿ ವಿಫಲನಾದ ಮೇಯರ್ ಕೂಡಾ ತುಂಬಾ ಒಬ್ಬಂಟಿ. ಅವನದೇ ರೀತಿಯಲ್ಲಿ, ಅವನಿಗೆ ಅಧಿಕಾರ ಸೃಷ್ಟಿಸುವ ಒಂಟಿತನದ ಅರಿವಿದೆ. ದ ಆಟಮ್ ಆಫ್ ದ ಪೇಟ್ರಿಯಾರ್ಕ್ ಮತ್ತು ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ನ ಥೀಮ್ ಕೂಡಾ ಏಕಾಂತವೇ.

ಮೆಂ: ಲೀಫ್ ಸ್ಟಾರ್ಮ್ ಬರೆದಾಗ ನೀನು ತುಂಬಾ ಚಿಕ್ಕವನು..
ಮಾ: ಹೌದು. ನನಗಾಗ ಇಪ್ಪತ್ತೆರಡು ವರ್ಷ.

ಮೆಂ: ಹೂಂ. ನೀನಾಗ ಬಾರಾಂಕಿಲಾದಲ್ಲಿ ಇದ್ದೆ. ನನಗೆ ನೆನಪಿರುವಂತೆ, ಆ ಕಾದಂಬರಿ ಬರೆದಾಗ ನೀನು ಒಂದು ನ್ಯೂಸ್ ಪೇಪರಿನ ಆಫೀಸಿನಲ್ಲಿ ಅರ್ಧ ರಾತ್ರಿವರೆಗೂ ದುಡಿದು, ಮಿಕ್ಕೆಲ್ಲರೂ ಮನೆಗೆ ಹೋದ ಮೇಲೆ ಬರೆಯುವ ಕೆಲಸ ಮಾಡುತ್ತಿದ್ದೆ.
ಮಾ: ಅದು ಎಲ್ ಹೆರಾಲ್ಡೋ ಪತ್ರಿಕೆಯಲ್ಲಿದ್ದಾಗ.

ಮೆಂ: ಹೌದು. ನನಗೂ ಆ ಆಫೀಸಿನ ಪರಿಚಯವಿದೆ-ನಿಯಾನ್ ಲೈಟುಗಳು, ಸೀಲಿಂಗ್ ಫ್ಯಾನುಗಳು, ಯಾವಾಗಲೂ ವಿಪರೀತ ಸೆಖೆ. ಅಲ್ಲಿಂದ ಹೊರಗೆ ಬಂದರೆ ಆ ಬೀದಿಯ ತುಂಬಾ ಭೂಗತ ಜಗತ್ತಿನ ಬಾರುಗಳಿದ್ದುವು. ಅದಕ್ಕೆ ಕ್ರೈಮ್ ಸ್ಟ್ರೀಟೆಂಬ ಹೆಸರಿತ್ತು. ಈಗಲೂ ಅದನ್ನು ಹಾಗೇ ಕರೀತಾರಾ?
ಮಾ: ಹೂಂ. ನಾನಲ್ಲೇ ವಾಸಿಸುತ್ತಿದ್ದೆ. ನಿಜವಾಗಿ ವೇಶ್ಯಾವಾಟಿಕೆಗಳಾಗಿದ್ದ ಆ ಹೋಟೆಲಿನಲ್ಲಿ, ನಮ್ಮಂತಹ ಕೆಲವು ಸಾಧಾರಣ ಜನರಿಗೂ ರೂಮುಗಳು ಸಿಗುತ್ತಿದ್ದುವು. ಆ ರೂಮಿನ ಬಾಡಿಗೆ ಒಂದು ರಾತ್ರಿಗೆ ಒಂದೂವರೆ ಪೆಸೋಗಳಾಗಿತ್ತು. ಎಲ್ ಹೆರಾಲ್ಡೋ ನನಗೆ ಒಂದು ಕಾಲಮ್ಮಿಗೆ ಮೂರು ಪೆಸೊ ಕೊಡುತ್ತಿದ್ದರು. ಎಡಿಟೋರಿಯಲ್ ಬರೆದಾಗ ಇನ್ನು ಮೂರು ಪೆಸೋಗಳನ್ನು ಕೊಡುತ್ತಿದ್ದರು. ನನ್ನ ಹತ್ತಿರ ರೂಮಿಗೆ ಕೊಡಲು ಒಂದೂವರೆ ಪೆಸೋ ಇಲ್ಲದಿದ್ದಾಗ, ಲೀಫ್ ಸ್ಟಾರ್ಮ್  ಕಾದಂಬರಿಯ  ಹಸ್ತಪ್ರತಿಯನ್ನು ಹೋಟೆಲ್ ಪೋರ್ಟರ್ ಹತ್ತಿರ ಡಿಪಾಜಿಟ್  ಆಗಿ ಇಡುತ್ತಿದ್ದೆ. ನನಗೆ ಅ ಕಾಗದದ ಕಟ್ಟು ತುಂಬಾ ಅಮೂಲ್ಯವಾದದ್ದು ಎಂದು ಅವನಿಗೆ ಗೊತ್ತಿತ್ತು. ಎಷ್ಟೋ ಸಮಯದ ನಂತರ, ನಾನು ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಕೂಡಾ ಬರೆದಾದ ಮೇಲೆ, ಆ ಪೋರ್ಟರ್ ನನ್ನ ಆಟೋಗ್ರಾಫ್ ಕೇಳಲು ಬಂದ ಜನರ ಗುಂಪಿನಲ್ಲಿ ಬಂದಿದ್ದ. ಅವನಿಗೆ ಪ್ರತಿ ಒಂದು ವಿಷಯವೂ ನೆನಪಿತ್ತು.

ಮೆ: ಲೀಫ್ ಸ್ಟಾರ್ಮ್ ಪ್ರಕಟಿಸುವುದು ನಿನಗೆ ಕಷ್ಟವಾಯಿತಲ್ವಾ?
ಮಾ: ಕೊನೆಗೂ ಒಬ್ಬ ಪ್ರಕಾಶಕನನ್ನು ಹಿಡಿಯಲು ನನಗೆ ಐದು ವರ್ಷಗಳು ಹಿಡಿಯಿತು. ನಾನು ಅರ್ಜೆಂಟೀನಾದಲ್ಲಿರುವ  ಪ್ರಕಾಶನ ಸಂಸ್ಥೆ ಎಡಿಟೋರಿಯಲ್ ಲೊಸಾದಾಗೆ  ಹಸ್ತಪ್ರತಿಯನ್ನು ಕಳಿಸಿದಾಗ, ಅವರದನ್ನು ನನಗೆ ವಾಪಸ್ಸು ಕಳಿಸಿದ್ದರು. ಅದರ ಜೊತೆ ಸ್ಪೇನಿನ ವಿಮರ್ಶಕನೊಬ್ಬ ನೀನು ಬೇರೆ ಯಾವುದಾದರೂ ವಿಷಯಗಳ ಮೇಲೆ ಗಮನ ಕೊಡುವುದು ಒಳ್ಳೆಯದು ಎಂದು  ಬುದ್ಧಿವಾದ ಹೇಳಿ ಬರೆದ ಪತ್ರವೂ ಇತ್ತು. ಆದರೆ, ಜೊತೆಗೆ  ಅದರಲ್ಲಿ -ನಿನ್ನ ಬರವಣಿಗೆಯಲ್ಲಿ ಕಾವ್ಯದ ಸ್ಪಷ್ಟ ಹೊಳಹಿದೆ ಎಂದೂ ಒಂದು ಸಾಲು ಬರೆದಿದ್ದ. ಅದು ನನಗೆ ತುಂಬಾ ಖುಶಿ ಕೊಟ್ಟಿತು.

ಮೆಂ:  ಲೀಫ್ ಸ್ಟಾರ್ಮ್ ಮತ್ತು ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ನಡುವೆ ಬರೆದ ನಿನ್ನ ಕಾದಂಬರಿಗಳು (ಅಂದರೆ ನೋಬಡಿ ರೈಟ್ಸ್ ಟು ದ ಕರ್ನಲ್, ಇನ್ ಈವಿಲ್ ಅವರ್, ಬಿಗ್ ಮಾಮಾಸ್ ಫ್ಯೂನೆರಲ್) ಇದ್ದಕ್ಕಿದಂತೆ ರಿಯಲಿಸ್ಟಿಕ್ ಆಗಿ, ನಿಯಂತ್ರಣಗಳಿಗೆ ಒಳಪಟ್ಟು, ಭಾಷೆಯ ಉಪಯೋಗ ಮತು ರಚನೆಯಲ್ಲೂ ಸೀಮಿತವಾಗಿವಾಗಿ ಬಿಟ್ಟಿದ್ದುವು. ಅವುಗಳಲ್ಲಿ ಮಾಂತ್ರಿಕತೆಯಾಗಲೀ, ಏನಾದರೂ ಕೆರಳಿಸುವಂಥ ಅಂಶಗಳಾಗಲೀ ಕಂಡು ಬರುವುದಿಲ್ಲ. ಇದಕ್ಕೆ ಕಾರಣ?

ಮಾ: ಲೀಫ್ ಸ್ಟಾರ್ಮ್ ಬರೆದಾಗ ನನಗೆ ಪ್ರತಿ ಒಂದು ಒಳ್ಳೆಯ ಕಾದಂಬರಿಯೂ ವಾಸ್ತವದ ಕಾವ್ಯಮಯ ಪರಿವರ್ತನೆಯಾಗಿರಬೇಕು ಎಂಬ ಧೃಡ ನಂಬಿಕೆಯಿತ್ತು. ಆದರೆ, ನಿನಗೂ ನೆನಪಿರಬಹುದು, ಆ ಪುಸ್ತಕ ಹೊರಬಂದಾಗ ಕೊಲಂಬಿಯಾದಲ್ಲಿ ಒಂದು ರಕ್ತಸಿಕ್ತ ರಾಜಕೀಯ ದಬ್ಬಾಳಿಕೆ ನಡೆಯುತ್ತಿತ್ತು. ಆಗ ನನ್ನ ಮಿಲಿಟೆಂಟ್ ಗೆಳೆಯರು ನನ್ನಲ್ಲಿ ಅತೀವ ಪಾಪ ಪ್ರಜ್ಞೆಯನ್ನು ತುಂಬಿದರು. ನಿನ್ನ ಕಾದಂಬರಿ ಏನನ್ನೂ ಖಂಡಿಸುವುದೂ ಇಲ್ಲ, ಬಹಿರಂಗ ಪಡಿಸುವುದೂ ಇಲ್ಲ ಎಂದರು. ಈಗ ನನಗೆ ಅವರ ಅಭಿಪ್ರಾಯ ತೀರ ಸರಳೀಕೃತವಾದದ್ದು, ತಪ್ಪಾದದ್ದು ಎನ್ನಿಸುತ್ತದೆ. ಆದರೆ ಆಗ ನನಗೆ ಅವರು ಹೇಳಿದ್ದು ಸರಿ, ನಾನೂ ದೇಶದ ಆಗಿನ ರಾಜಕೀಯ ಮತ್ತು ಸಾಮಾಜಿಕ ಆಗುಹೋಗುಗಳಲ್ಲಿ ನನ್ನನ್ನು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ಅನ್ನಿಸತೊಡಗಿತು. ಹಾಗಾಗಿ ನಾನು ನನ್ನ ಮೊದಲಿನ ಸಾಹಿತ್ಯಿಕ ವಿಚಾರಗಳಿಂದ ದೂರ ಹೊರಟುಹೋದೆ. ಅದೃಷ್ಟವಶಾತ್, ನಂತರ ನನಗೆ ಅವುಗಳಿಗೆ ಮರಳಿ ಬರುವುದು ಸಾಧ್ಯವಾಯಿತು.

ನೋಬಡಿ ರೈಟ್ಸ್ ಟು ದ ಕನಲ್, ಇನ್ ಈವಿಲ್ ಅವರ್, ಬಿಗ್ ಮಾಮಾಸ್ ಫ್ಯೂನೆರಲ್ ಕೊಲಂಬಿಯಾದ ಅಂದಿನ ರಿಯಾಲಿಟಿಯನ್ನು ಪ್ರತಿಬಿಂಬಿಸಿತ್ತು.. ಅದರ ತಿರುಳು ಆ ಪುಸ್ತಕಗಳ ತರ್ಕಸಮ್ಮತವಾದ ರಚನಾ ಕ್ರಮವನ್ನು ನಿರ್ಧರಿಸಿತ್ತು. ಅವುಗಳನ್ನು ಬರೆದಿದ್ದರ ಬಗ್ಗೆ ನನಗೆ ಪಶ್ಚಾತ್ತಾಪವೇನೂ ಇಲ್ಲ. ಆದರೆ ಅವುಗಳು ಒಂದು ರೀತಿಯ ಪೂರ್ವನಿರ್ಧಾರಿತ ಬರವಣಿಗೆಯ ಶ್ರೇಣಿಗೆ ಸೇರುತ್ತವೆ. ಅವು ರಿಯಾಲಿಟಿಯ ಅತ್ಯಂತ ಜಡವಾದ, ವಿಭಿನ್ನವಾದ ವಿಶನ್ ಅನ್ನು ನೀಡುತ್ತದೆ. ಆ ಪುಸ್ತಕಗಳು ಚೆನ್ನಾಗಿರಲಿ, ಇಲ್ಲದಿರಲಿ ಅದು ಬೇರೆ ವಿಷಯ. ಅವುಗಳೆಲ್ಲವೂ  ಕೊನೆಯ ಪುಟದಲ್ಲಿ ಮುಕ್ತಾಯವಾಗುವ ಪುಸ್ತಕಗಳು. ಈಗ ನನಗೆ ಅವು ತುಂಬಾ ಸೀಮಿತವಾದದ್ದು ಎನ್ನಿಸುತ್ತದೆ. ನಾನು ಇನ್ನೂ ಚೆನ್ನಾಗಿ ಬರೆಯಬಲ್ಲೆ ಎಂಬ ನಂಬಿಕೆ ನನ್ನಲ್ಲಿದೆ.

 

 

ಆ ಪುಸ್ತಕ ಹೊರಬಂದಾಗ ಕೊಲಂಬಿಯಾದಲ್ಲಿ ಒಂದು ರಕ್ತಸಿಕ್ತ ರಾಜಕೀಯ ದಬ್ಬಾಳಿಕೆ ನಡೆಯುತ್ತಿತ್ತು. ಆಗ ನನ್ನ ಮಿಲಿಟೆಂಟ್ ಗೆಳೆಯರು ನನ್ನಲ್ಲಿ ಅತೀವ ಪಾಪ ಪ್ರಜ್ಞೆಯನ್ನು ತುಂಬಿದರು. ನಿನ್ನ ಕಾದಂಬರಿ ಏನನ್ನೂ ಖಂಡಿಸುವುದೂ ಇಲ್ಲ, ಬಹಿರಂಗ ಪಡಿಸುವುದೂ ಇಲ್ಲ ಎಂದರು. ಈಗ ನನಗೆ ಅವರ ಅಭಿಪ್ರಾಯ ತೀರ ಸರಳೀಕೃತವಾದದ್ದು, ತಪ್ಪಾದದ್ದು ಎನ್ನಿಸುತ್ತದೆ. ಆದರೆ ಆಗ ನನಗೆ ಅವರು ಹೇಳಿದ್ದು ಸರಿ, ನಾನೂ ದೇಶದ ಆಗಿನ ರಾಜಕೀಯ ಮತ್ತು ಸಾಮಾಜಿಕ ಆಗುಹೋಗುಗಳಲ್ಲಿ ನನ್ನನ್ನು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ಅನ್ನಿಸತೊಡಗಿತು.

 

ಮೆಂ: ನಿನ್ನ  ಹಾದಿ ಹೇಗೆ ಬದಲಾಯಿಸಿಕೊಂಡೆ?

ಮಾ: ನನ್ನ ಬರವಣಿಗೆಯ ಬಗ್ಗೆ  ಗಾಢವಾಗಿ ತುಂಬಾ ದಿನಗಳು ಯೋಚನೆ ಮಾಡಿ, ಕೊನೆಗೆ ಒಂದು ನಿರ್ಧಾರಕ್ಕೆ ಬಂದೆ. ನನ್ನ ಕಮಿಟ್ಮೆಂಟ್ ಇರಬೇಕಾದದ್ದು ಬರೀ ನನ್ನ ದೇಶದ ಸೋಶಿಯಲ್ ಮತ್ತು ಪೊಲಿಟಿಕಲ್ ರಿಯಾಲಿಟಿಗಳಿಗಲ್ಲ, ಇಂದಿನ ಮತ್ತು ನಾಳಿನ ಜಗತ್ತಿನ ಸಮಗ್ರ ರಿಯಾಲಿಟಿಗೆ.

ಮೆಂ: ನೀನು ಆಗಿನ ಪೊಲಿಟಿಕಲ್  ರಿಯಾಲಿಟಿಯಿಂದ ಮುಕ್ತಗೊಳಿಸಿಕೊಂಡ ಮೆಲೆ, ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಅಂಥ ಕೃತಿಯ ಸೃಷ್ಟಿಗೆ ಕಾರಣವಾದ , ಆ ಅನ್ಯವಾದದ್ದೊಂದನ್ನು – ಅದನ್ನು ಮಿಥಿಕಲ್ ಅಪ್ಪ್ರೋಚ್ ಟು ರಿಯಾಲಿಟಿ ಎಂದು ಕರೆಯೋಣ – ಹೇಗೆ ಕಂಡುಕೊಂಡೆ?

ಮಾ: ನಾನಾಗಲೇ ಹೇಳಿರುವಂತೆ ನನ್ನ ಅಜ್ಜಿ ನನಗೆ ಹೇಳುತ್ತಿದ್ದ ಕತೆಗಳು ಬಹುಶಃ ನನಗೆ ಮೊದಲು ಕೆಲವು  ಸುಳಿವುಗಳನ್ನು ಕೊಟ್ಟಿತು. ಅವಳ ಊರಿನ ಜನರಲ್ಲಿ ಪ್ರಚಲಿತವಿದ್ದ ಪುರಾಣಗಳು, ದಂತಕತೆಗಳು, ನಂಬಿಕೆಗಳು ಎಲ್ಲವೂ ಬಹಳ ಸಹಜವಾಗಿ ಅವಳ ದಿನ ನಿತ್ಯದ ಬದುಕಿನ ಭಾಗವಾಗಿ ಹೋಗಿತ್ತು. ಅವಳನ್ನು ಮನಸ್ಸಿನಲ್ಲಿಟ್ಟುಕೊಂಡು ನೋಡಿದಾಗ, ನಾನು ಹೊಸದೇನನ್ನೂ ಕಂಡುಹಿಡಿಯುತ್ತಿಲ್ಲ, ಅಸಲಿಯಾಗಿ ನಮ್ಮದಾಗಿದ್ದ, ನಿಜವಾಗಿ ಲ್ಯಾಟಿನ್ ಅಮೆರಿಕನ್ ಎನ್ನಬಹುದಾದ ಶಕುನಗಳು, ಮುನ್ಸೂಚನೆಗಳು, ಮದ್ದುಗಳು, ಮೂಢನಂಬಿಕೆಗಳ ಜಗತ್ತನ್ನು ಮತ್ತೆ ಸೆರೆ ಹಿಡಿದು ವರ್ಣಿಸುತ್ತಿದ್ದೇನೆ ಎಂಬ ಅರಿವು ಇದ್ದಕ್ಕಿದ್ದಂತೆ ನನಗೆ ಮೂಡಿತು. ಉದಾಹರಣೆಗೆ, ಕೊಲಂಬಿಯಾದಲ್ಲಿರುವ ಆ ವಿಚಿತ್ರ ಆಚರಣೆ ನಿನಗೂ ನೆನಪಿರಬೇಕು, ಅಲ್ಲಿನ ಜನಗಳು ಪ್ರಾರ್ಥನೆ ಮಾಡುವ ಮೂಲಕ ಹಸುಗಳ ಕಿವಿಯಲ್ಲಿರುವ ಹುಳುಗಳು ಹೊರಗೆ ಬರುವಂತೆ ಮಾಡುತ್ತಾರೆ.

ಹಾಗಾಗಿ ಯಾವುದೋ ಕಾಲದಿಂದ ತರ್ಕಬದ್ಧತೆಯಿಂದ, ಸ್ಟ್ಯಾಲಿನ್ ವಾದದಿಂದ ಅರ್ಥ ಮಾಡಿಕೊಳ್ಳಲು ಸುಲಭವಾಗಲು ಅವರು ಹೇರುತ್ತಿದ್ದ ಮಿತಿಗಳಿಲ್ಲದೆಯೇ ನಾನು ರಿಯಾಲಿಟಿಯನ್ನು, ನಮ್ಮ ರಿಯಾಲಿಟಿಯನ್ನು ನೋಡುವುದರ ಮೂಲಕ ನನಗೆ ಒನ್ ಹನ್ಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಬರೆಯುವುದು ಸಾಧ್ಯವಾಯಿತು.

ಮೆಂ: ನಿನ್ನ ಸಮಗ್ರ ಬರವಣಿಗೆಯತ್ತ ನೋಡಿದಾಗ ನಿನಗೇನಿಸುತ್ತೆ? ಅದೂ ನೀನು ಮೊದಮೊದಲ ಬರೆದ ಕೃತಿಗಳ ಬಗ್ಗೆ?
ಮಾ : ಬೆಳೆದು ದೊಡ್ಡವರಾಗಿ ನಮ್ಮನ್ನು ಬಿಟ್ಟು ಮನೆಯಿಂದ ಸ್ವಂತ ಬದುಕಿಗೆ ಹೋದ ಮಕ್ಕಳ ಬಗ್ಗೆ ಒಬ್ಬ ತಂದೆಗೆ ಹುಟ್ಟುವಂಥಾ ಮೃದು ಭಾವನೆ ನನ್ನ ಮೊದಲ ಕೃತಿಗಳ ಬಗ್ಗೆ  ನನಗೆ ಉಂಟಾಗುತ್ತದೆ. ನನ್ನ ಮೊದಲ ಕೃತಿಗಳು ನನಗೆ ಎಲ್ಲೋ ದೂರದಲ್ಲಿರುವಂತೆ, ಅಸಹಾಯಕವಾಗಿರುವಂತೆ ಕಾಣುತ್ತವೆ. ಒಂದು ಕಾಲದಲ್ಲಿ ಅವನ್ನು ಬರೆದ ಯುವಕನಿಗೆ ಅವು ತಂದಿದ್ದ ತಲೆನೋವುಗಳೆಲ್ಲಾ  ನೆನಪಿಗೆ ಬರುತ್ತವೆ.

ಮೆಂ: ಆ ಸಮಸ್ಯೆಗಳನ್ನು ನೀನು ಈಗ ತುಂಬಾ ಸುಲಭವಾಗಿ ಪರಿಹರಿಸಬಲ್ಲೆ ಅಲ್ವಾ?
ಮಾ: ಹೌದು. ಈಗ ನನಗೆ ಅವು ಸಮಸ್ಯೆಗಳೆಂದೇ ಅನ್ನಿಸುವುದಿಲ್ಲ.

ಮೆಂ: ನಿನ್ನ ಅತಿ ಮಹತ್ವದ ಕೃತಿ ಯಾವುದು?
ಮಾ: ಸಾಹಿತ್ಯಿಕ ದೃಷ್ಟಿಯಿಂದ ನೋಡಿದರೆ ಆಟಮ್ ಆಫ್ ದ ಪೇಟ್ರಿಯಾರ್ಕ್ ನನ್ನ ಅತಿ ಮಹತ್ವದ ಕೃತಿ. ಅದೊಂದು ಪುಸ್ತಕ  ನಾನೆಂದೂ ಮರೆಯಾಗದಂತೆ, ಆಬ್ಲಿವಿಯನ್ ಗೆ ಹೋಗದಂತೆ ನನ್ನನ್ನು ರಕ್ಷಿಸಬಲ್ಲದು ಅನ್ನಿಸುತ್ತದೆ.

ಮೆಂ: ಆ ಪುಸ್ತಕ ನಿನಗೆ ಬೇರೆಲ್ಲಾ  ಬರವಣಿಗೆಗಿಂತ ಹೆಚ್ಚು ಖುಶಿ ಕೊಟ್ಟಿತು ಎಂದು ಹೇಳಿದ್ದೀಯಾ. ಯಾಕೆ?
ಮಾ: ನಾನು ಯಾವಾಗಲೂ ಬರೆಯಲೇಬೇಕು ಎಂದುಕೊಳ್ಳುತ್ತಿದ್ದುದು ಆ ಪುಸ್ತಕ. ಅಲ್ಲಿ ನನ್ನ ವೈಯ್ಯಕ್ತಿಕ ಅನುಭವಗಳನ್ನು ಬೇರೆಲ್ಲಾ ಕಡೆಗಿಂತಾ ಹೆಚ್ಚು ತೆರೆದಿಟ್ಟಿದ್ದೇನೆ.

ಮೆಂ: ಆದರೆ ಸಾಕಷ್ಟು ಮರೆಮಾಚಿ ಹೇಳಿದ್ದೀಯಾ.
ಮಾ: ನಿಜ.

ಮೆಂ: ಆ ಪುಸ್ತಕ ಬರೆಯಲು ನಿನಗೆ ಎಲ್ಲಕ್ಕಿಂತಾ ಹೆಚ್ಚು ಸಮಯ ಹಿಡಿಯಿತಲ್ವಾ?
ಮಾ: ಹದಿನೇಳು ವರ್ಷಗಳು ಹಿಡಿಯಿತು. ಕೊನೆಗೆ ನನಗೆ ಸರಿ ಎನ್ನಿಸಿದ ಆವೃತ್ತಿ ತಯಾರು ಮಾಡುವ ಮೊದಲು ಎರಡು ಆವೃತ್ತಿಗಳನ್ನು ಕೈಬಿಟ್ಟಿದ್ದೆ.

ಮೆಂ: ಹಲವಾರು ವಿಮರ್ಶಕರು ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್  ಅನ್ನು ಮೀರಿಸುವ ಕೃತಿ ಇನ್ನೊಂದಿಲ್ಲ ಎಂದು ಹೇಳುತ್ತಾರೆ, ಆದರೆ ನಿನಗೆ ನಿಜವಾಗಿ ಅದರ ಬಗ್ಗೆ ಅಷ್ಟೊಂದು ಅಸಮಾಧಾನ ಇದೆಯೇ?
ಮಾ: ಒಂದು ಸಮಯದಲ್ಲಿ, ಅದು ನನ್ನ ಬದುಕನ್ನೇ ನಾಶ ಮಾಡಿತು ಎನ್ನಿಸತೊಡಗಿತ್ತು. ಆ ಪುಸ್ತಕ ಪ್ರಕಟವಾದ ಮೇಲೆ ಏನೂ ಮೊದಲಿನಂತಿರಲಿಲ್ಲ.

ಮೆಂ: ಅಂದರೆ?
ಮಾ: ಖ್ಯಾತಿ ವಾಸ್ತವದ ಗ್ರಹಿಕೆಯನ್ನೇ ಒಂದು ರೀತಿ ಅಲ್ಲಾಡಿಸಿಬಿಡುತ್ತದೆ. ಬಹುಶಃ ಅಧಿಕಾರದ ರೀತಿಯಲ್ಲೇ ಇದೂ ಸಹ ಮಾಡುತ್ತದೆ. ನಿರಂತರವಾಗಿ ನಮ್ಮ ಖಾಸಗೀ ಬದುಕನ್ನು ಬೆದರಿಸುತ್ತದೆ. ದುರದೃಷ್ಟವಶಾತ್, ಇದನ್ನು ತಾವೇ ಅನುಭವಿಸುವವರೆಗೂ ಯಾರೂ ನಂಬುವುದಿಲ್ಲ.

ಮೆಂ: ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ನ ಯಶಸ್ಸು ನಿನ್ನ ಬೇರೆ ಕೃತಿಗಳಿಗೆ ಅನ್ಯಾಯ ಮಾಡಿದೆ ಎನ್ನುತ್ತೀಯಾ?
ಮಾ; ಹೌದು. ಇದು ಅನ್ಯಾಯ. ದ ಆಟಮ್ ಆಫ್ ದ ಪೇಟ್ರಿಯಾರ್ಕ್ ಸಾಹಿತ್ಯಿಕವಾಗಿ ಇನ್ನೂ ಮಹತ್ವದ ಸಾಧನೆ. ಅದು ಅಧಿಕಾರ ಸೃಷ್ಟಿಸುವ ಒಂಟಿತನದ ಬಗ್ಗೆ ಆಗಿದ್ದರೆ, ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ದಿನನಿತ್ಯದ ಬದುಕಿನಲ್ಲಿ ಕಾಡುವ ಒಂಟಿತನದ ಬಗ್ಗೆ. ಇದು ಪ್ರತಿ ಒಬ್ಬನ ಜೀವನ ಚರಿತ್ರೆ. ಅಲ್ಲದೆ, ಅದು ಸರಳವಾದ, ಸುಲಭವಾಗಿ ಹರಿಯುವ ಒಂದೇ ದಿಕ್ಕಿನಲ್ಲಿ ಸಾಗುವ, ಬಹುಮಟ್ಟಿಗೆ ಸೂಪರ್ಫಿಶಿಯಲ್ ಎಂದು ಹೇಳಬಹುದಾದ  ರೀತಿಯಲ್ಲಿದೆ.

ಮೆಂ: ನೀನದನ್ನು ನಿಕೃಷ್ಟವಾಗಿ ಕಾಣುತ್ತಿದಿಯೇನೋ ಅನ್ನಿಸುತ್ತದೆ.
ಮಾ: ಹಾಗಲ್ಲ. ನಾನು ಜಗತ್ತಿನಲ್ಲಿ ಇರಬಹುದಾದ ಎಲ್ಲ ಚಾತುರ್ಯ ಮತ್ತು ಚಾಲಾಕುತನಗಳನ್ನು ಬಳಸಿ ಅದನ್ನು ಬರೆದಿರುವೆನೆಂದು ನನಗೆ ಗೊತ್ತಿದ್ದರಿಂದ, ನಾನು ಅದಕ್ಕಿಂತ ಚೆನ್ನಾಗಿ ಬರೆಯಬಲ್ಲೆ ಎಂದು ಅದನ್ನು ಬರೆಯುವ ಮೊದಲೇ ನನಗೆ ಗೊತ್ತಿತ್ತು.

ಮೆಂ: ಅದನ್ನು ಮೀರಿಸುವಂಥಾದ್ದು.
ಮಾ: ಹೌದು. ಅದರ ತಲೆ ಮೆಲೆ ಹೊಡೆಯುವಂಥಾದ್ದನ್ನು ಬರೆಯಬಲ್ಲೆ.

ಪತ್ನಿ ಮರ್ಸೆಡೀಝ್ ಜೊತೆಯಲ್ಲಿ….

 

ಬೆಳೆದು ದೊಡ್ಡವರಾಗಿ ನಮ್ಮನ್ನು ಬಿಟ್ಟು ಮನೆಯಿಂದ ಸ್ವಂತ ಬದುಕಿಗೆ ಹೋದ ಮಕ್ಕಳ ಬಗ್ಗೆ ಒಬ್ಬ ತಂದೆಗೆ ಹುಟ್ಟುವಂಥಾ ಮೃದು ಭಾವನೆ ನನ್ನ ಮೊದಲ ಕೃತಿಗಳ ಬಗ್ಗೆ  ನನಗೆ ಉಂಟಾಗುತ್ತದೆ. ನನ್ನ ಮೊದಲ ಕೃತಿಗಳು ನನಗೆ ಎಲ್ಲೋ ದೂರದಲ್ಲಿರುವಂತೆ, ಅಸಹಾಯಕವಾಗಿರುವಂತೆ ಕಾಣುತ್ತವೆ. ಒಂದು ಕಾಲದಲ್ಲಿ ಅವನ್ನು ಬರೆದ ಯುವಕನಿಗೆ ಅವು ತಂದಿದ್ದ ತಲೆನೋವುಗಳೆಲ್ಲಾ  ನೆನಪಿಗೆ ಬರುತ್ತವೆ.

 

 

ಮೆಂ: ಈಗ ನಾವು ಮಾತಾಡುವ ವಿಷಯ ನಿನಗೆ ಸ್ವಲ್ಪ ಮುಜುಗರ ಉಂಟು ಮಾಡಬಹುದು. ನೀನು ಇಷ್ಟೊಂದು ಪ್ರಖ್ಯಾತನಾದ ಮೇಲೆ ಆಗಿರುವ ಗೆಳೆತನಗಳು ಮೊದಲಿನವುಗಳಷ್ಟೇ ನಿಕಟವಾದುವು ಎಂದು ನಿನಗನ್ನಿಸುತ್ತದೆಯೇ? ನಿಜವಾಗಿ ಆಪ್ತರಾಗಿರುವವರು ಮತ್ತು ಕೇವಲ ನಿನ್ನ ಖ್ಯಾತಿಯ ವರ್ಚಸ್ಸಿನಿಂದ ಆಕರ್ಷಿತರಾಗಿರುವವರ ನಡುವೆ ನಿನಗೆ ವ್ಯತ್ಯಾಸ ಗೊತ್ತಾಗುತ್ತದೆಯೇ?
ಮಾ: ತುಂಬಾ ವರ್ಷಗಳು ನಾನು ನನ್ನ ಗೆಳೆಯರನ್ನು ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಗಿಂತ ಮೊದಲಿನವರು ಮತ್ತು ನಂತರದವರೆಂದು ಒಂದು ರೀತಿ ವಿಭಜನೆ ಮಾಡಿಕೊಂಡಿದ್ದೆ. ನನಗನ್ನಿಸುತ್ತಿದ್ದುದೇನೆಂದರೆ ಮೊದಲಿನವರು ನನ್ನ ಗೆಳೆಯರಾಗಿದ್ದು ನನ್ನ ಖ್ಯಾತಿಯ ಕಾರಣದಿಂದಲ್ಲ, ಬೇರೆ ಬೇರೆ ಕಾರಣಗಳಿಗಾಗಿ. ಆದ್ದರಿಂದ ಅವರು ಹೆಚ್ಚು ನಂಬಲರ್ಹವಾದವರು ಎಂದು. ಆದರೆ ವರ್ಷಗಳು ಕಳೆದಂತೆ ಇದು ತಪ್ಪು ಎಂದು ಗೊತ್ತಾಗುತ್ತಿದೆ. ಒಂದು ಆತ್ಮೀಯ ಗೆಳೆತನ ಬೆಳೆಯಲು ಹಲವಾರು ಅರ್ಥೈಸಲಾಗದ ಕಾರಣಗಳಿರುತ್ತವೆ. ಅದರಲ್ಲಿ ಖ್ಯಾತಿಯ ಆಕರ್ಷಣೆಯೂ ಬೇರೆ ಕಾರಣಗಳಷ್ಟೇ ಗಟ್ಟಿಯಾದದ್ದು. ಖ್ಯಾತಿ ಎರಡು ರೀತಿ ಕೆಲಸ ಮಾಡಬಲ್ಲದು. ನನಗೂ ಕೂಡಾ ಮೊದಲು ಸಾಧ್ಯವೇ ಇಲ್ಲದಿದ್ದ  ಅನೇಕ ಪ್ರಖ್ಯಾತ ವ್ಯಕ್ತಿಗಳ ಭೇಟಿ ಈಗ ಸಾಧ್ಯವಾಗಿದೆ. ಅದಕ್ಕೆ ಕಾರಣ ಅವರೂ ಖ್ಯಾತರು ಎನ್ನುವುದೊಂದೇ ಹೊರತು ಬೇರಾವುದೂ ಅಲ್ಲ. ನಂತರ ನಾವು ಆಪ್ತರಾಗಿದ್ದು ನನ್ನ ಅಥವಾ ಅವರ ಖ್ಯಾತಿಗೆ ಸಂಬಂಧವೇ ಪಡದ ಯಾವುದೋ ಒಂದು ನಂಟಿನಿಂದ. ಈ ವಿಷಯದಲ್ಲಿ ಖ್ಯಾತಿ ಒಂದು ಸಕಾರಾತ್ಮಕ ಗುಣ. ಯಾವುದೇ ರೀತಿಯಲ್ಲಿ ಸಾಧ್ಯವೇ ಆಗುತ್ತಿರಲಿಲ್ಲವಾದ ಸಂಬಂಧಗಳನ್ನು ಬೆಳೆಸಲು ಇದು ಮೌಲಿಕ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಏನೇ ಆಗಲಿ, ನನ್ನ ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ನಂತರದ ಗೆಳೆಯರೊಂದಿಗೆ ಎಷ್ಟೇ ಆತ್ಮೀಯತೆಯಿದ್ದರೂ, ನನ್ನ ಹಳೆಯ ಗೆಳೆಯರು ಬೇರೆಯೇ ಒಂದು ರೀತಿಯ ಗುಂಪಿಗೆ ಸೇರಿದವರು. ಇದು ನಾವೆಲ್ಲಾ ಹಂಚಿಕೊಂಡಿರುವ ಉತ್ಕಟ ನೆನಪುಗಳು ಒಟ್ಟಾಗಿ ಎಂದೂ ಒಡೆಯದಂತೆ ಕಟ್ಟಿರುವ ಒಂದು ರಹಸ್ಯ ಸಮುದಾಯದಂತೆ .

ಮೆಂ: ನಿನ್ನ ಖ್ಯಾತಿ ಅವರೆಲ್ಲರ ಜೊತೆ ನಿನ್ನ ಸಂಬಂಧವನ್ನು ಬದಲಾಯಿಸಿಲ್ಲವೇ? ಒಂದು ವಿಷಯದ ಬಗ್ಗೆ ನನಗೆ ನೆನಪಿದೆ. ಮೊದಲು ನೀನು ಬರೆಯುತ್ತಿದ್ದಂತೆ ಈಗ ಪತ್ರಗಳನ್ನು ಬರೆಯುವುದಿಲ್ಲ.
ಮಾ: ನಿಜ. ನನಗೆ ಮೊದಲು ಜನರಲ್ಲಿ ಇದ್ದ ಮುಗ್ಧ ನಂಬಿಕೆ ಹೊರಟುಹೋಗಿದೆ. ಏಕೆಂದರೆ ಬದುಕು ನಿಧಾನವಾಗಿ ನಿಮ್ಮ ಮುಗ್ಧತೆಯನ್ನು ಕರಗಿಸಿಬಿಡುತ್ತದೆ. ನಾನು ಸುಮಾರು ೧೨ ವರ್ಷಗಳಿಂದ ಪತ್ರ ಬರೆದಿಲ್ಲ. ಅದಕ್ಕೆ ಕಾರಣವೆಂದರೆ ನನ್ನ ಖಾಸಗಿ ಪತ್ರಗಳನ್ನು ಒಬ್ಬರು ಒಂದು ಅಮೆರಿಕಾ ಯೂನಿವೆರ್ಸಿಟಿಯ ಆರ್ಕೈವ್ಸ್ ಗೆ ಮರಾಟ ಮಾಡಿದ್ದು ನನಗೆ ಆಕಸ್ಮಿಕವಾಗಿ
ತಿಳಿದು ಬಂತು. ಹಾಗಾಗಿ ನಾನು ಈಗ ಬರೀ ನನ್ನ ಸ್ನೇಹಿತರಿಗೇ ಅಲ್ಲ, ಯಾರಿಗೂ ಪತ್ರ ಬರೆಯುವುದಿಲ್ಲ. ನನ್ನ ಪತ್ರಗಳು ಕೂಡ ಮಾರಾಟದ ಸರಕು ಎಂಬ ಅಂಶ ಮನಗಂಡಾಗ ಬಹಳ ಖಿನ್ನನಾಗಿಬಿಟ್ಟೆ. ಅದಾದಮೇಲೆ ನಾನು ಒಂದು ಪತ್ರವನ್ನೂ ಬರೆಯಲಿಲ್ಲ.

ಮೆಂ: ಈಗ ಸ್ನೇಹಿತರಿಗೆ ಬರೀ ಫೋನ್ ಮಾಡುತ್ತೀಯಾ?
ಮಾ: ಇಲ್ಲದಿದ್ದರೆ ಅವರನ್ನು ಭೇಟಿಯಾಗಲು ಹುಚ್ಚುಚ್ಚಾಗಿ ಹಣ ಸುರಿದು ಪ್ರಪಂಚದ ಇನ್ನೊಂದು ಮೂಲೆಗೆ ಪ್ರಯಾಣ ಮಾಡುತ್ತೇನೆ. ನಾನು ಅವರನ್ನು ಎಷ್ಟು ಮೆಚ್ಚುತ್ತೇನೆ ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೆ.

ಮೆಂ: ನಿನ್ನ ಇತ್ತೀಚಿನ ಗೆಳೆಯರಲ್ಲಿ ಕೆಲವು ದೇಶಗಳ ನಾಯಕರೂ ಇದ್ದಾರೆ. ನನಗೆ ತಿಳಿದಿರುವಂತೆ ಅವರಲ್ಲಿ ಕೆಲವರು ನಿನ್ನ ಅಭಿಪ್ರಾಯಗಳಿಗೆ ಕಿವಿ ಗೊಡುತ್ತಾರೆ, ಸಲಹೆ ಕೇಳುತ್ತಾರೆ. ನಿನ್ನಲ್ಲಿ ಒಬ್ಬ ರಾಜಕಾರಣಿಯೂ ಇದ್ದಾನಲ್ಲವೇ? ಅಥವಾ ಅದು ಅಧಿಕಾರದ ಬಗ್ಗೆ ನಿನಗಿರುವ ರಹಸ್ಯ ಆಕರ್ಷಣೆಯಿರಬಹುದೇ?
ಮಾ: ಇಲ್ಲ. ನನಗೆ ಬದುಕಿನ ಬಗ್ಗೆ ಹೇಳಲಾರದಷ್ಟು ಉತ್ಸಾಹವಿದೆ. ಅದರಲ್ಲಿ ರಾಜಕೀಯವೂ ಒಂದು ಮಗ್ಗಲು. ಅದು ನಾನು ಎಲ್ಲಕ್ಕಿಂತಾ ಹೆಚ್ಚು ಇಷ್ಟ ಪಡುವ ಅಂಶವೇನಲ್ಲ. ಲ್ಯಾಟಿನ್ ಅಮೆರಿಕಾಗಿಂತ ಕಡಿಮೆ ರಾಜಕೀಯ ಸಮಸ್ಯೆಗಳಿರುವ ದೇಶದಲ್ಲಿ ನಾನೇನಾದರೂ ಹುಟ್ಟಿದ್ದರೆ, ನನಗೆ ರಾಜಕೀಯದಲ್ಲಿ ಆಸಕ್ತಿ ಇರುತ್ತಿತ್ತೇ ಎನ್ನುವುದೇ ಅನುಮಾನ. ಸುತ್ತಮುತ್ತಲಿನ ಆಗುಹೋಗುಗಳಿಂದ ನಾನು ರಾಜಕೀಯ ಚಟುವಟಿಕೆಯಲ್ಲಿ ತಳ್ಳಲಟ್ಟಿದ್ದೇನೆ ಎಂದು ನನಗನ್ನಿಸುತ್ತಿದೆ. ನಿನಗೆ ಗೊತ್ತೇ ಇರುವಂತೆ, ನನ್ನ ವೈಯಕ್ತಿಕ ಪೊಲಿಟಿಕಲ್ ಛಾಯ್ಸ್ ಬಗ್ಗೆ ಮಾತಾಡುವುದಾದರೆ ನನಗೂ ಒಂದು ಪೊಲಿಟಿಕಲ್ ಕಮಿಟ್ ಮೆಂಟ್ ಇದೆ. ಅದು ಸೋಶಿಯಲಿಸ್ಮ್ ಗೆ. ನನಗೆ ಅನ್ನಿಸುವುದು ಇಡೀ ಜಗತ್ತು ಸೋಶಿಯಲಿಸ್ಟ್ ಆಗಿರಬೇಕು. ಇವತ್ತಲ್ಲ ನಾಳೆ ಅದು ಆಗೇ ತೀರುವುದೆಂಬುದು ನನ್ನ ನಂಬಿಕೆ. ಆದರೆ ಲ್ಯಾಟಿನ್ ಅಮೆರಿಕಾದ ಕಮಿಟೆಡ್ ಲಿಟೆರೇಚರ್ ಎಂದು ಕರೆಯಲ್ಪಡುವ ಸಾಹಿತ್ಯದ ಬಗ್ಗೆ, ಅದೂ ಖಚಿತವಾಗಿ ಹೇಳುವುದಾದರೆ ನೊವೆಲ್ ಆಫ್ ಸೋಶಿಯಲ್ ಪ್ರೊಟೆಸ್ಟ್ ಬಗ್ಗೆ ನನಗೆ ಸ್ವಲ್ಪ ಅನುಮಾನಗಳಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಇದು ಜಗತ್ತಿನ ಬಗ್ಗೆ ಮತ್ತು ಬದುಕಿನ ಬಗ್ಗೆ ಕೊಡುವ ಸೀಮಿತ ದರ್ಶನದಿಂದ ರಾಜಕೀಯ ಕ್ಷೇತ್ರದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇದು ಜಾಗೃತಿಯನ್ನು ಉಂಟುಮಾಡುವ ಕ್ರಿಯೆಯನ್ನು ಚುರುಕುಗೊಳಿಸುವ ಬದಲು ವಾಸ್ತವವಾಗಿ ಅದನ್ನು ನಿಧಾನಗೊಳಿಸುತ್ತದೆ.

ಲ್ಯಾಟಿನ್ ಅಮೆರಿಕನ್ನರು ತಮಗಾಗಲೇ ಚೆನ್ನಾಗಿ ತಿಳಿದಿರುವ, ಸುತ್ತಲೂ ನಡೆಯುತ್ತಿರುವ ಶೋಷಣೆ ಮತ್ತು ಅನ್ಯಾಯಗಳನ್ನು ಬಹಿರಂಗ ಪಡಿಸುವುದಕ್ಕಿಂತ ಹೆಚ್ಚಾದ್ದನ್ನು ಒಂದು ಕಾದಂಬರಿಯಿಂದ ನಿರೀಕ್ಷಿಸುತ್ತಾರೆ. ಎಷ್ಟೋ ಜನ ನನ್ನ ತೀವ್ರವಾದಿ ಗೆಳೆಯರು ಏನು ಬರೆಯಬೇಕು, ಏನು ಬರೆಯಬಾರದು ಎನ್ನುವುದನ್ನು ಲೇಖಕರಿಗೆ ಆದೇಶಿಸುವ ಅವಶ್ಯಕತೆಯ ಬಗ್ಗೆ ಮತ್ತೆಮತ್ತೆ ಒತ್ತು ಕೊಡುತ್ತಾರೆ. ಬಹುಶಃ ಈ ರೀತಿಯ ನಿಲುವನ್ನು ತೆಗೆದುಕೊಳ್ಳುವುದರಿಂದ ಲೇಖಕರ ಸೃಜನಶೀಲತೆಯ ಸ್ವಾತಂತ್ರ್ಯದ ಮೇಲೇ ಕಟ್ಟುಪಾಡುಗಳನ್ನು ಹೇರುತ್ತಾರೆ. ನನ್ನ ಪ್ರಕಾರ ಪ್ರೇಮದ ಬಗ್ಗೆ ಬರೆದ ಕಾದಂಬರಿಯೂ ಬೇರೆಲ್ಲಾ ಕಾದಂಬರಿಗಳಷ್ಟೇ ಮುಖ್ಯವಾದದ್ದು. ಒಟ್ಟಿನಲ್ಲಿ ಹೇಳಬೇಕಾದರೆ, ಒಬ್ಬ ಲೇಖಕನ ಕರ್ತವ್ಯ ಚೆನ್ನಾಗಿ ಬರೆಯುವುದಷ್ಟೆ.

ಫೆಡೆಲ್ ಕ್ಯಾಸ್ಟ್ರೋ ಅವರೊಂದಿಗೆ ಮಾರ್ಕ್ವೇಜ಼್

ಮುಂದಿನ ಜನ್ಮದಲ್ಲಿ ನನಗೆ ಲೇಖಕನಾಗಬೇಕೆಂದು  ಆಸೆ ಎಂದು ಒಂದು ಸಲ  ಫಿಡೆಲ್ ಕ್ಯಾಸ್ಟ್ರೋ  ಹೇಳಿದಾಗ ಅವನ ದನಿಯಲ್ಲಿ ವಿಷಣ್ಣತೆಯ ಛಾಯೆ ಇತ್ತು.

ಮೆಂ: ಫಿಡೆಲ್ ಕ್ಯಾಸ್ಟ್ರೋ ನಿನ್ನ ಸ್ನೇಹಿತ. ಅವನೊಡನೆ ನಿನ್ನ ಸ್ನೇಹದ ಬಗ್ಗೆ ಏನು ಹೇಳುತ್ತೀಯಾ? ಈ ಗೆಳೆತನದಲ್ಲಿ ನಿನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ್ದು ನಿಮ್ಮಿಬ್ಬರ ರಾಜಕೀಯ ಒಲವುಗಳೇ ಅಥವಾ ಅವನೂ ನಿನ್ನಂತೆಯೇ ಕೆರಿಬಿಯನ್ ಎಂಬ ಸಂಗತಿಯೇ?

ಮಾ:  ಫಿಡೆಲ್ ಕ್ಯಾಸ್ಟ್ರೋ ಜೊತೆ ನನ್ನ ಆತ್ಮೀಯ ಗೆಳೆತನ ಪ್ರಾರಂಭವಾದದ್ದು ಸಾಹಿತ್ಯದ ಮೂಲಕ. ನಾನು, ನೀನು ೧೯೬೦ ರಲ್ಲಿ ಪ್ರೆನ್ಸ್ ಲ್ಯಾಟಿನಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಅವನ ಪರಿಚಯವಾಗಿತ್ತು. ಆದರೆ ನನಗೆ ಆಗ ನಮ್ಮಿಬ್ಬರ ನಡುವೆ ಏನೂ ಕಾಮನ್ ಆದದ್ದಿದೆ ಅನ್ನಿಸಿರಲಿಲ್ಲ. ನಂತರ ನಾನು ತುಂಬಾ ಫೇಮಸ್ ಆಗಿ, ಅವನೂ ಜಗತ್ತಿನಲ್ಲಿ ಅತಿ ಪ್ರಸಿದ್ಧ ರಾಜಕಾರಣಿಯಾದಮೇಲೆ ನಾವು ಬಹಳ ಸಲ ಭೇಟಿಯಾಗಿದ್ದೆವು. ನಮ್ಮಿಬ್ಬರ ನಡುವೆ ಪರಸ್ಪರ ಗೌರವ, ವಿಶ್ವಾಸ ಇದ್ದರೂ ನನಗೆಂದೂ ನಮ್ಮ ಸಂಬಂಧದಲ್ಲಿ ರಾಜಕೀಯ ಒಲವುಗಳನ್ನು ಬಿಟ್ಟರೆ ಅದಕ್ಕಿಂತ ಹೆಚ್ಚಾದ್ದು ಏನಾದರೂ ಸಾಧ್ಯವಿದೆ ಅನ್ನಿಸಿರಲಿಲ್ಲ. ಆದರೆ, ಸುಮಾರು ಆರು ವರ್ಷಗಳ ಹಿಂದೆ ಒಂದು ಬೆಳಗಿನ ಜಾವ ನಾವಿಬ್ಬರೂ ಒಟ್ಟಿಗಿದ್ದಾಗ ತನಗೆ ತುಂಬಾ ಓದುವುದು ಬಾಕಿಯಿದೆಯೆಂದೂ, ಅದಕ್ಕಾಗಿ ಮನೆಗೆ ಹೋಗಬೇಕೆಂದೂ ಹೇಳಿದ. ಆ ಕೆಲಸ ತುಂಬಾ ಬೋರಿಂಗ್  ಮತ್ತು ಟಯರಿಂಗ್ ಆಗಿದ್ದರೂ ಅದನ್ನು ಮುಗಿಸಲೇಬೇಕಾಗಿರುವುದಾಗಿ ಹೇಳಿದ. ಆ ಕಿರಿಕಿರಿಯನ್ನು ಕಡಿಮೆ ಮಾಡಲು ಯಾವುದಾದರೂ ಲೈಟ್ ಆಗಿರುವ ಆದರೆ ಒಳ್ಳೆ ಗುಣಮಟ್ಟವಿರುವ ಪುಸ್ತಕ ಓದಲು ನಾನು ಅವನಿಗೆ ಹೇಳಿದೆ. ನಾನು ಕೆಲವು ಉದಾಹರಣೆಗಳನ್ನು ಕೊಟ್ಟಾಗ  ನನಗೆ ಆಶ್ಚರ್ಯವಾಗಿದ್ದೇನೆಂದರೆ ಅವನು ನಾನು ಹೇಳಿದ ಕೃತಿಗಳನ್ನೆಲ್ಲಾ ಓದಿದ್ದೇ ಅಲ್ಲದೆ ಚೆನ್ನಾಗಿ ಗ್ರಹಿಸಿದ್ದ. ಆ ರಾತ್ರಿ ನನಗೆ ಫಿಡೆಲ್ ಕ್ಯಾಸ್ಟ್ರೋ ಎಲ್ಲಾ ಕಾಲದ ಅಷ್ಟೊಂದು ಪುಸ್ತಕಗಳನ್ನು  ಓದಿದ್ದಾನೆ, ಅವನಿಗೆ ಒಳ್ಳೆಯ ಸಾಹಿತ್ಯವೆಂದರೆ ಪ್ರಾಣ, ಅಲ್ಲದೆ ಅವನು ಸಾಹಿತ್ಯದ ಗಂಭೀರ ಕನೋಷರ್ ಎಂಬ ವಿಷಯ ತಿಳಿಯಿತು. ಅದು ಹೆಚ್ಚು ಜನರಿಗೆ ಗೊತ್ತಿರಲಿಲ್ಲ.

ಎಂಥಾ ಕಠಿಣ ಸಮಯದಲ್ಲೂ, ಅಕಸ್ಮಾತ್ ಯಾವಾಗಲೋ ಎದುರಾಗಬಹುದಾದ ಒಂದು ಅನಿಶ್ಚಿತ ಕ್ಷಣವನ್ನು ತುಂಬಲು ಅವನ ಜೊತೆ ಒಂದು ಒಳ್ಳೆಯ ಪುಸ್ತಕ ಇದ್ದೇ ಇರುತ್ತದೆ. ಅಂದು ನಾನವನಿಗೆ ಗುಡ್ ನೈಟ್ ಹೇಳಿದಾಗ ಅವನಿಗೊಂದು ಪುಸ್ತಕ ಕೊಟ್ಟೆ. ಮಾರನೆಯ ದಿನ ಹನ್ನೆರಡು ಗಂಟೆಗೆ ಅವನನ್ನು ಭೇಟಿಯಾದಾಗ, ಅವನಾಗಲೇ ಅದನ್ನು ಓದಿ ಮುಗಿಸಿದ್ದ. ಅವನೆಂಥಾ ಶ್ರದ್ಧೆಯ ಓದುಗನೆಂದರೆ, ನೈಜ ಘಟನೆಗಳ ಬಗ್ಗೆ ಯಾರಿಗೂ ಕಣ್ಣಿಗೆ ಬೀಳದ ತಪ್ಪುಗಳನ್ನು, ವೈರುಧ್ಯಗಳನ್ನು ಕಂಡುಹಿಡಿಯುತ್ತಾನೆ. ಅವನು ನನ್ನ  ‘ದ ಟೇಲ್ ಆಫ್ ಎ ಶಿಪ್ ರೆಕ್ಡ್ ಸೇಲರ್’ ಓದಿದ ಮೇಲೆ  ಕೇವಲ ಅದರಲ್ಲಿರುವ ಒಂದು ತಪ್ಪನ್ನು ತಿಳಿಸಲು ನನ್ನ ಹೋಟೆಲ್ಲಿಗೆ ಬಂದ. ದೋಣಿಯ ವೇಗ ನೀನು ಲೆಕ್ಕ ಹಾಕಿರುವುದು ತಪ್ಪು, ಅದರ ಪ್ರಕಾರ ಅದು ನೀನು ಹೇಳಿರುವ ವೇಳೆಗೆ ತಲುಪಲು ಸಾಧ್ಯವಿಲ್ಲ ಎಂದು ವಿವರಿಸಿದ. ಅವನು ಹೇಳಿದ್ದು ಸರಿಯಾಗಿತ್ತು. ಹಾಗಾಗಿ ಕ್ರಾನಿಕಲ್ ಆಫ್ ಅ ಡೆತ್ ಫೋರ್ಟೊಲ್ಡ್ ಪ್ರಕಟಣೆಗೆ ಕೊಡುವ ಮೊದಲೇ ಅವನ ಹತ್ತಿರ ಹಸ್ತಪ್ರತಿ ತಗೊಂಡು ಹೋದೆ. ಹಂಟಿಂಗ್ ರೈಫಲ್ ನ ಅಳತೆಯಲ್ಲಿ ಇದ್ದ ತಪ್ಪೊಂದನ್ನು ಅವನು ತೋರಿಸಿದ. ಅವನಿಗೆ ಸಾಹಿತ್ಯದ ಜಗತ್ತು ನಿಜವಾಗಿ ಇಷ್ಟ ಎಂಬ ಭಾವನೆ ಬರುತ್ತದೆ, ಅದರಲ್ಲಿ ಅವನು ನಿರಾಳವಾಗಿ ಇರಬಲ್ಲ, ಅವನು ಬರೆಯುವ ಹಲವಾರು ಭಾಷಣಗಳ ಶೈಲಿಯ ಬಗ್ಗೆಯೂ ತುಂಬಾ ಶ್ರಮವಹಿಸುತ್ತಾನೆ ಅನ್ನಿಸುತ್ತದೆ. ಮುಂದಿನ ಜನ್ಮದಲ್ಲಿ ನನಗೆ ಲೇಖಕನಾಗಬೇಕೆಂದು  ಆಸೆ ಎಂದು ಒಂದು ಸಲ ನನಗೆ ಅವನು ಹೇಳಿದಾಗ ಅವನ ದನಿಯಲ್ಲಿ ವಿಷಣ್ಣತೆಯ ಛಾಯೆ ಇತ್ತು.

 

ಒಂದು ಆತ್ಮೀಯ ಗೆಳೆತನ ಬೆಳೆಯಲು ಹಲವಾರು ಅರ್ಥೈಸಲಾಗದ ಕಾರಣಗಳಿರುತ್ತವೆ. ಅದರಲ್ಲಿ ಖ್ಯಾತಿಯ ಆಕರ್ಷಣೆಯೂ ಬೇರೆ ಕಾರಣಗಳಷ್ಟೇ ಗಟ್ಟಿಯಾದದ್ದು. ಖ್ಯಾತಿ ಎರಡು ರೀತಿ ಕೆಲಸ ಮಾಡಬಲ್ಲದು. ನನಗೂ ಕೂಡಾ ಮೊದಲು ಸಾಧ್ಯವೇ ಇಲ್ಲದಿದ್ದ  ಅನೇಕ ಪ್ರಖ್ಯಾತ ವ್ಯಕ್ತಿಗಳ ಭೇಟಿ ಈಗ ಸಾಧ್ಯವಾಗಿದೆ. ಅದಕ್ಕೆ ಕಾರಣ ಅವರೂ ಖ್ಯಾತರು ಎನ್ನುವುದೊಂದೇ ಹೊರತು ಬೇರಾವುದೂ ಅಲ್ಲ. ನಂತರ ನಾವು ಆಪ್ತರಾಗಿದ್ದು ನನ್ನ ಅಥವಾ ಅವರ ಖ್ಯಾತಿಗೆ ಸಂಬಂಧವೇ ಪಡದ ಯಾವುದೋ ಒಂದು ನಂಟಿನಿಂದ. ಈ ವಿಷಯದಲ್ಲಿ ಖ್ಯಾತಿ ಒಂದು ಸಕಾರಾತ್ಮಕ ಗುಣ.

 

 

ಮೆಂ: ಒಂದು ಸಲ ನೀನು ಎರಡನೇ ಪೋಪ್ ಜಾನ್ ಪಾಲ್ ರನ್ನು ಭೇಟಿಯಾಗಿದ್ದೆ. ಅದರ ಕಾರಣ?
ಮಾ: ಲ್ಯಾಟಿನ್ ಅಮೆರಿಕಾದಲ್ಲಿ ಕೆಲವು ಮಾನವ ಹಕ್ಕುಗಳ ಪ್ರಚಾರಕಾರ್ಯಗಳಲ್ಲಿ ಸಹಾಯ ಕೇಳಲು ನಾನವರನ್ನು ಭೇಟಿ ಮಾಡಿದ್ದು. ಆದರೆ ಅವರಿಗೆ ಕೇವಲ ಪೂರ್ವ ಯೂರೋಪಿನಲ್ಲಿ ನಡೆಯುತ್ತಿದ್ದ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಮಾತ್ರ ಆಸಕ್ತಿ ಇದ್ದಂತಿತ್ತು. ಆದರೆ, ಕೆಲವು ವಾರಗಳ ನಂತರ ಅವರು ಮೆಕ್ಸಿಕೋಗೆ ಹೋದಾಗ, ಮೊದಲ ಬಾರಿ ತೃತೀಯ ಜಗತ್ತಿನ
ಬಡತನವನ್ನು ಕಂಡಿದ್ದರು. ಆಗ ಅವರಿಗೆ ಇದುವರೆಗೂ ಪರಿಚಯವಿಲ್ಲದಿದ್ದ ಮಾನವ ಕುಲದ ಇನ್ನೊಂದು ಮಗ್ಗಲು ಕಂಡಿತು ಎಂದು ನನಗನ್ನಿಸುತ್ತದೆ. ನಾನು ಅವರ ಜೊತೆ ಇದ್ದಿದ್ದು ಕೇವಲ ಕಾಲು ಗಂಟೆ. ಅವರು ಮೆಕ್ಸಿಕೋಗೆ ಹೋಗುವ ಮುಂಚೆ ಸ್ವಲ್ಪ ಅಭ್ಯಾಸವಾಗಲೆಂದು ಬಯಸಿದ್ದರಿಂದ ನಾವು ಸ್ಪ್ಯಾನಿಶ್ ನಲ್ಲೇ ಮಾತಾಡಿದೆವು. ಅವರು ನನ್ನನ್ನು ಬೀಳ್ಕೊಟ್ಟಾಗ ನಾನು ಯಾರೆಂದು ಒಂದು ಚೂರೂ ಅರಿವೇ ಇಲ್ಲದ ನೆಮ್ಮದಿಯ ಮುದ್ರೆ ಅವರ ಮುಖದ ಮೇಲೆ ಹರಡಿತ್ತು.

ಮೆಂ: ಒಂದು ಸಲ ನೀನು ಪ್ಯಾರಿಸ್ಸಿನ ರೆಸ್ಟೊರಾ ಒಂದರಲ್ಲಿ ಮಾರ್ಗೋ ಹೆಮಿಂಗ್ವೇ ಜೊತೆ ಊಟ ಮಾಡುತ್ತಿರುವುದನ್ನು ನಾನು ನೋಡಿದೆ. ನೀನು ಅವಳ ಜೊತೆ ಮಾತಾಡುವಂಥಾ ವಿಷಯಗಳು ಏನಿವೆ?
ಮಾ: ಅವಳು ತನ್ನ ಅಜ್ಜನ ಬಗ್ಗೆ ತುಂಬಾ ವಿಷಯಗಳನ್ನು ಹೇಳುತ್ತಾಳೆ, ನಾನು ನನ್ನ ಅಜ್ಜನ ಬಗ್ಗೆ ಅವಳಿಗೆ ಹೇಳುತ್ತೇನೆ.

ಮೆಂ: ನಿನ್ನ ಬದುಕಿನಲ್ಲಿ ಬಂದಿರುವ ಅತ್ಯಂತ ಸ್ವಾರಸ್ಯಕರ ವ್ಯಕ್ತಿ ಯಾರು?
ಮಾ:  ನನ್ನ ಹೆಂಡತಿ ಮರ್ಸಡೀಜ್.

ನನಗೆ ಬದುಕಿನ ಬಗ್ಗೆ ಹೇಳಲಾರದಷ್ಟು ಉತ್ಸಾಹವಿದೆ. ಅದರಲ್ಲಿ ರಾಜಕೀಯವೂ ಒಂದು ಮಗ್ಗಲು. ಅದು ನಾನು ಎಲ್ಲಕ್ಕಿಂತಾ ಹೆಚ್ಚು ಇಷ್ಟ ಪಡುವ ಅಂಶವೇನಲ್ಲ. ಲ್ಯಾಟಿನ್ ಅಮೆರಿಕಾಗಿಂತ ಕಡಿಮೆ ರಾಜಕೀಯ ಸಮಸ್ಯೆಗಳಿರುವ ದೇಶದಲ್ಲಿ ನಾನೇನಾದರೂ ಹುಟ್ಟಿದ್ದರೆ, ನನಗೆ ರಾಜಕೀಯದಲ್ಲಿ ಆಸಕ್ತಿ ಇರುತ್ತಿತ್ತೇ ಎನ್ನುವುದೇ ಅನುಮಾನ. ಸುತ್ತಮುತ್ತಲಿನ ಆಗುಹೋಗುಗಳಿಂದ ನಾನು ರಾಜಕೀಯ ಚಟುವಟಿಕೆಯಲ್ಲಿ ತಳ್ಳಲಟ್ಟಿದ್ದೇನೆ ಎಂದು ನನಗನ್ನಿಸುತ್ತಿದೆ.

ಮೆಂ: ದೇವರಲ್ಲಿ ನಂಬಿಕೆಯಿಲ್ಲದಿದ್ದರೆ, ಕನಿಷ್ಠಪಕ್ಷ ಅಂಧಶ್ರದ್ಧೆಗಳನ್ನಾದರೂ ಇಟ್ಟುಕೋ ಎಂದು ನೀನೊಂದು ಸಲ ನನಗೆ  ಹೇಳಿದ್ದೆ. ಇದು ನಿನಗೆ ಒಂದು ಗಂಭೀರ ವಿಷಯ ಅನ್ನಿಸುತ್ತೆ.
ಮಾ: ಹೌದು. ತುಂಬಾ ಗಂಭೀರ ವಿಷಯ.

ಮೆಂ: ಏಕೆ?
ಮಾ: ಜನಗಳು ಸಾಮಾನ್ಯವಾಗಿ ಮೂಢನಂಬಿಕೆಗಳೆಂದು ಯಾವುದನ್ನು ಕರೆಯುತ್ತಾರೋ ಅದು ಪಾಶ್ಚಾತ್ಯರ ತರ್ಕಾಧಾರಿತ ವಿಚಾರಧಾರೆ ತಿರಸ್ಕರಿಸುವ ನೈಸರ್ಗಿಕ ಶಕ್ತಿಗಳಿಗೆ ಸಂಬಂಧ ಪಟ್ಟಿದ್ದು.

ಮೆಂ: ಹೆಚ್ಚು ಚಲಾವಣೆಯಲ್ಲಿರುವ ಉದಾಹರಣೆಗಳನ್ನೇ ತೆಗೆದು ಕೊಳ್ಳೋಣ. ನಂಬರ್ ೧೩.ಇದು ನಿಜವಾಗಿ ದುರಾದೃಷ್ಟವನ್ನು ತರುತ್ತದೆ ಎಂದು ನಿನಗನ್ನಿಸುತ್ತದೆಯೇ?
ಮಾ: ನನ್ನ ನಂಬಿಕೆ ಅದಕ್ಕೆ ವಿರುದ್ಧವಾಗಿದ್ದು. ಹೆಚ್ಚು ಜನ ಅದು ಅಪಶಕುನ ಎನ್ನುತ್ತಾರೆ. ಅಮೆರಿಕನ್ನರಂತು ಇದನ್ನು ಎಷ್ಟು ನಂಬುತ್ತಾರೆಂದರೆ, ಅಲ್ಲಿನ ಹೋಟೆಲ್ಲುಗಳಲ್ಲಿ ಮಹಡಿಯ ನಂಬರ್ ಗಳು ೧೨ರಿಂದ ೧೪ಕ್ಕೆ ಹೋಗುತ್ತದೆ. ಅದರೆ, ಅದು ನಿಜವಾಗಿ ಅದೃಷ್ಟ ಸಂಖ್ಯೆ ಎಂದು ನನ್ನ ಅನಿಸಿಕೆ. ಹಾಗೆಯೇ, ಕಪ್ಪು ಬೆಕ್ಕುಗಳು ಕೆಟ್ಟದ್ದನ್ನು ತರುತ್ತವೆ  ಮತ್ತು ಏಣಿಗಳ ಕೆಳಗೆ ನಡೆಯಬಾರದು ಎನ್ನುವುದನ್ನೂ ನಾನು ನಂಬುವುದಿಲ್ಲ.

ಮೆಂ: ನಿನ್ನ ಮನೆಯಲ್ಲಿ ಯಾವಾಗಲೂ ಹಳದಿ ಬಣ್ಣದ ಹೂಗಳಿರುವುದನ್ನು ನೋಡಿದ್ದೇನೆ. ಇದರ ಮಹತ್ವವೇನು?
ಮಾ: ನನ್ನ ಸುತ್ತಲೂ ಹಳದಿ ಹೂಗಳಿರುವಾಗ ನನಗೆ ಅಂಥಾ ಕೆಟ್ಟದ್ದೇನೂ ಆಗವುದು ಸಾಧ್ಯವೇ ಇಲ್ಲ. ನಾನು ತುಂಬಾ ಸುರಕ್ಷಿತನಾಗಿರಬೇಕಾದರೆ ನನ್ನ ಸುತ್ತಲೂ ಹಳದಿ ಹೂಗಳಿರಬೇಕು – ಅದೂ ಹಳದಿ ಗುಲಾಬಿಗಳಾದರೆ ಇನ್ನೂ ಒಳ್ಳೆಯದು. ಜೊತೆಗೆ ನನ್ನನ್ನು ಹೆಂಗಸರು ಸುತ್ತುವರಿದಿರಬೇಕು.

ಮೆಂ: ಮರ್ಸಡೀಜ್ ಯಾವಾಗಲೂ ನಿನ್ನ ಡೆಸ್ಕ್ ಮೇಲೆ ಒಂದು ಗುಲಾಬಿ ಹೂವನ್ನಿಟ್ಟಿರುತ್ತಾಳೆ.
ಮಾ: ಹೌದು. ಎಷ್ಟೋ ಸಲ ನಾನು ಏನೋ ಬರೆಯಲು ಪ್ರಯತ್ನಿಸುತ್ತಿರುತ್ತೇನೆ, ಆದರೆ ಏನೂ ಸರಿ ಬರುತ್ತಿರುವುದಿಲ್ಲ. ಪೇಜಾದ ಮೇಲೆ ಪೇಜು ಎಸೆಯುತ್ತಿರುತ್ತೇನೆ. ನಾನಾಗ ಹೂ ದಾನಿಯತ್ತ ನೋಡಿದಾಗ ಕಾರಣ ತಿಳಿಯುತ್ತದೆ. ಅದರಲ್ಲಿ ಗುಲಾಬಿಯಿಲ್ಲ. ನಾನಾಗ ಅದಕ್ಕಾಗಿ ಕರೆ ಮಾಡುತ್ತೇನೆ, ಅವರು ಅದನ್ನಿಲ್ಲಿ ತಂದಿಟ್ಟ ತಕ್ಷಣ ಎಲ್ಲಾ ಸರಿ ಹೋಗುತ್ತದೆ.

ಮೆಂ
: ಹಳದಿ ಬಣ್ಣ ನಿನಗೆ ಅದೃಷ್ಟ ತರುತ್ತದೆಯೇ?
ಮಾ: ಹಳದಿ ನನಗೆ ಲಕ್ಕಿ . ಆದರೆ ಚಿನ್ನದ ಬಣ್ಣ ಅಲ್ಲ. ಚಿನ್ನ ನನಗೆ ಯಾವಾಗಲೂ ಮಲದ ನೆನಪು ತರುತ್ತದೆ.

ಮೆಂ: ಅದಕ್ಕೇ ನೀನು ಯಾವಾಗಲೂ ಚಿನ್ನ ಹಾಕಿಕೊಳ್ಳುವುದಿಲ್ಲ.
ಮಾ: ಎಂದಿಗೂ ಇಲ್ಲ. ಚಿನ್ನದ ವಾಚು, ಚೈನು, ಉಂಗುರ, ಬ್ರೇಸ್ ಲೆಟ್ ಯಾವುದನ್ನೂ ಹಾಕಿಕೊಳ್ಳುವುದಿಲ್ಲ. ನನ್ನ ಮನೆಯಲ್ಲಿ ಚಿನ್ನದಿಂದ ಮಾಡಿದ ಏನನ್ನೂ ನೀನು ಕಾಣಲಾರೆ.

ಮೆಂ: ನಾನು, ನೀನು ವೆನೆಜುಲಾದಲ್ಲಿ ಕಲಿತ ಒಂದು ವಿಷಯ  ನಮಗೆ ಬದುಕಿನುದ್ದಕ್ಕೂ ತುಂಬಾ ಉಪಯೋಗವಾಗಿದೆ. ಅದು ಕೆಟ್ಟ ಅಭಿರುಚಿಗೂ ಕೆಟ್ಟ ಅದೃಷ್ಟಕ್ಕೂ ಇರುವ ತಂತು.
ಢಾಂಬಿಕ ಜನ, ವಸ್ತುಗಳು ಮತ್ತು ನಿಲುವುಗಳಿಗೂ ಅವುಗಳಿಂದ  ಉಂಟಾಗ ಬಹುದಾದ ಆಪತ್ತಿಗೂ ವೆವೆಜುಲಾದ ಜನ ಒಂದು ವಿಶೇಷ ಹೆಸರಿಟ್ಟಿದ್ದಾರೆ. ಅವರು ಅದನ್ನು ಪಾವಾ ಎಂದು ಕರೆಯುತ್ತಾರೆ. ನೀನು ಪಾವಾ ಹೊಂದಿರುವ ವಸ್ತುಗಳ ಒಂದು ದೊಡ್ಡ ಪಟ್ಟಿಯನ್ನೇ ತಯಾರಿಸಿ ಇಟ್ಟುಕೊಂಡಿದ್ದೀಯಾ ಅಲ್ವಾ? ನಿನಗೆ ಅವುಗಳ ನೆನಪಿದೆಯಾ?
ಮಾ: ತುಂಬಾ ಸುಲಭವಾಗಿ ಕಣ್ಣಿಗೆ ಬೀಳುವ, ಎದುರಾಗುವ ವಸ್ತುಗಳು – ಬಾಗಿಲ ಹಿಂದೆ ಇಟ್ಟಿರುವ ದೊಡ್ಡ ಶಂಖಗಳು, ಮನೆಯ ಒಳಗೆ ಇರುವ ಅಕ್ವೇರಿಯಮ್ ಗಳು, ಪ್ಲ್ಯಾಸ್ಟಿಕ್ ಹೂಗಳು ಮತ್ತು ನವಿಲುಗಳು, ಕಸೂತಿ ಹಾಕಿದ ಮನಿಲಾ ಶಾಲುಗಳು…ಅದು ತುಂಬಾ ದೊಡ್ಡ ಪಟ್ಟಿ.

ಮೆಂ: ಫಾರ್ಮಲ್ ಡ್ರೆಸ್ ಕೂಡಾ ಅವುಗಳಲ್ಲಿ ಒಂದಲ್ವಾ? ನೀನೆಂದಾದರೂ ಟೈಲ್ ಕೋಟುಗಳನ್ನು ಹಾಕಿಕೊಂಡಿದ್ದೀಯಾ?
ಮಾ: ಎಂದೂ ಇಲ್ಲ.

ಮೆಂ
: ಕೆಲವು ಸಮಾರಂಭಗಳಲ್ಲಿ ಫಾರ್ಮಲ್ ಡ್ರೆಸ್ ಹಾಕಿಕೊಂಡೇ ಬರಬೇಕೆಂಬ ಕಟ್ಟಳೆಯಿರುತ್ತದೆ. ಆಗೇನು ಮಾಡುತ್ತೀಯಾ?
ಮಾ: ಅಂತಹ ಸಮಾರಂಭ ಗಳ ಅಹ್ವಾನಕ್ಕೆ ಒಪ್ಪಿಕೊಳ್ಳುವ ಮೊದಲೇ ನಾನು ಫಾರ್ಮಲ್ ಬಟ್ಟೆ ಹಾಕಿಕೊಂಡು ಬರುವುದು ಸಾಧ್ಯವಿಲ್ಲ ಎಂಬ ಕಂಡೀಶನ್ ಹಾಕಿ ಬಿಟ್ಟಿರುತ್ತೇನೆ. ನಾನೇನು ಮಾಡಲಿ ಹೇಳು, ನನ್ನ ಪ್ರಕಾರ ಅದು ನನಗೆ ಅಪಶಕುನ.

ಮೆಂ: ಇನ್ನೂ ಸೂಕ್ಷ್ಮ ರೂಪದ ಪಾವಾ ಗಳ ಬಗ್ಗೆಯೂ ಮಾತಾಡೋಣ. ಉದಾಹರಣೆಗೆ, ಬೆತ್ತಲೆಯಾಗಿದ್ದಾಗ ಸಿಗರೇಟು ಸೇದಿದರೆ ಪರವಾಗಿಲ್ಲ, ಆದರೆ ಬೆತ್ತಲೆಯಾಗಿ ನಡೆದಾಡುತ್ತಾ ಸಿಗರೇಟು ಸೇದುವುದು ಆಪತ್ತು ತರುತ್ತದೆ ಎಂದು ನೀನೊಂದು ಸಲ ಹೇಳಿದ್ದೆ.
ಮಾ: ಅಷ್ಟೇ ಅಲ್ಲ, ಕೇವಲ ಶೂ ಧರಿಸಿ ಬೆತ್ತಲೆಯಾಗಿ ಓಡಾಡುವುದೂ ಒಳ್ಳೆಯದಲ್ಲ.

ಮೆಂ: ಹೂಂ.
ಮಾ: ಇನ್ನು ಕಾಲುಚೀಲ ಮಾತ್ರ ಹಾಕಿಕೊಂಡು ಸಂಭೋಗ ಮಾಡುವುದು. ಆಗ ಸತ್ತಂತೆಯೇ! ಅದೆಂದೂ ಒಳ್ಳೆಯದಲ್ಲ.

ಮೆಂ: ನೀನು ಕೆಲವು ಪದಗಳ ಬಗ್ಗೆಯೂ ಅದೇ ರೀತಿ ನಂಬಿಕೆ ಇಟ್ಟುಕೊಡಿದ್ದೀಯಾ. ಅಂದರೆ ನೀನು ಬರೆಯುವಾಗ ಎಂದೂ ಕೆಲವು ಪದಗಳನ್ನು ಬಳಸುವುದಿಲ್ಲ.
ಮಾ: ಹೌದು. ಸಮಾಜಶಾಸ್ತ್ರದ ಪರಿಧಿಯಲ್ಲಿ ಬರುವ ಎಲ್ಲ ಪದಗಳು ಅದರಲ್ಲಿ ಸೇರಿವೆ. ಅಂದರೆ, ಲೆವೆಲ್, ಪ್ಯಾರಾಮೀಟರ್, ಕಾಂಟೆಕ್ಸ್ಟ್, ಸಿಂಬಯಾಸಿಸ್ – ಇವೆಲ್ಲ ಪಾವಾ ಹೊಂದಿರುವ ಪದಗಳು.

ಮೆಂ: ಅಪ್ರೋಚ್ ಆ ರೀತಿಯ ಇನ್ನೊಂದು ಪದ ಅಲ್ವಾ?
ಮಾ: ಹೌದು. ಆಮೇಲೆ ಹ್ಯಾನ್ಡಿಕ್ಯಾಪ್ಡ್? ನಾನೆಂದೂ ಎಂಡ್/ಆರ್ ಅಥವಾ ಇನ್ ಆರ್ಡರ್ ಟು ಅಥವಾ ಒವರ್ ಎಂಡ್ ಅಬೋವ್ – ಗಳನ್ನು ಬಳಸುವುದಿಲ್ಲ.

ಮೆಂ:
ಎಷ್ಟೋ ಜನರೂ ನಿನ್ನ ಮೇಲೆ ಇದೇ ರೀತಿ ಪರಿಣಾಮ ಬೀರುತ್ತಾರಾ?
ಮಾ: ಹೌದು. ಆದರೆ ಆ ಜನರ ಬಗ್ಗೆ ಮಾತಾಡದಿರುವುದು ಒಳ್ಳೆಯದು.

ಮೆಂ: ಜಾಗಗಳು ಕೂಡಾ ನಿನ್ನ ಮೇಲೆ ಇದೇ ರೀತಿ ಪ್ರಭಾವ ಬೀರುತ್ತದೆಯಲ್ಲವಾ?
ಮಾ: ಹೌದು. ಆದರೆ ಅವೇ ಆಪತ್ತನ್ನು ತಂದೊಡ್ಡುತ್ತವೆ ಎಂದಲ್ಲ, ಕೆಲವೆ ಸಲ ನನಗೆ ಕೆಲವು ಕಡೆ ವಿಚಿತ್ರ ಮುನ್ಸೂಚನೆಗಳು ಸಿಕ್ಕಿವೆ.

ಮೆಂ: ನೀನು ಈ ಮುನ್ಸೂಚನೆಗಳನ್ನು ಹೇಗೆ ವಿವರಿಸುತ್ತೀಯಾ?
ಮಾ: ನನ್ನ  ಸಬ್ಕಾನ್ಶಿಯಸ್ ಎತ್ತಿಕೊಂಡ ಕೆಲವು ಮಾಹಿತಿಗಳಿಗೆ ಇವುಗಳು ಸಂಬಂಧ ಪಟ್ಟಿವೆ ಎನ್ನಿಸುತ್ತದೆ.

ಮೆಂ: ನನಗೂ ೧೯೫೮ ರ ಜನವರಿ ೧ನೇ ತಾರೀಕು ನಡೆದಿದ್ದು ನೆನಪಿದೆ. ನಾವು ಕಾರಾಕಾಸ್ ನಲ್ಲಿದ್ದೆವು. ಒಂದು ಕ್ಷಣದಲ್ಲಿ ಏನೋ ಬಹು ಭಯಾನಕ ಘಟನೆ ನಡೆಯಲಿದೆ ಅನ್ನೋ ವಿಷಯ  ನಿನ್ನೊಳಗಿಂದ ಹೊಮ್ಮಿ ಬಂತು. ಅಧ್ಯಕ್ಷರ ಅರಮನೆಯ ಮೇಲೆ ಅತ್ಯಂತ ಅನಿರೀಕ್ಷಿತ ಏರ್ ರೈಡ್ ನಮ್ಮೆದುರೇ ನಡೆಯಿತು. ನಿನಗೆ ಹೇಗೆ ಆ ಮುನ್ಸೂಚನೆ ಸಿಕ್ಕಿತು  ಎಂದು
ನನಗಿವತ್ತಿಗೂ ಆಶ್ಚರ್ಯವಾಗುತ್ತೆ. ನಿನಗೆ ಆಗುವ ಮುನ್ಸೂಚನೆಗಳು ಸ್ಪಷ್ಟವಾಗಿರುತ್ತವೆಯೇ?
ಮಾ: ಇಲ್ಲ. ಅವು ತುಂಬಾ ಅಸ್ಪಷ್ಟವಾಗಿರುತ್ತವೆ. ಆದರೆ ಯಾವುದೊ ಖಚಿತವಾದ ಘಟನೆಗೆ ಅವು ಸಂಬಂಧ ಪಟ್ಟಿರುತ್ತವೆ.

ಮೆಂ: ನಿನ್ನ ಸಹಜ ಸೂಕ್ಷ್ಮತೆ, ಮುನ್ಸೂಚನೆಗಳು ನಿನಗೆ ಯಾವಾಗಲೂ ತುಂಬಾ ಸಹಾಯ ಮಾಡಿವೆ. ನಿನ್ನ ಬದುಕಿನ ಅನೇಕ ಮಹತ್ವದ ನಿರ್ಧಾರಗಳು ಅವುಗಳ ಆಧಾರದ ಮೇಲೆ ಆಗಿದೆ.
ಮಾ: ಬರೀ ಮಹತ್ವ ವಾದುವುಗಳಲ್ಲ. ಎಲ್ಲ ನಿರ್ಧಾರಗಳೂ ಕೂಡಾ.

ಮೆಂ: ನಿಜವಾಗಿ?
ಮಾ: ಹೌದು. ಎಲ್ಲವೂ. ಪ್ರತಿ ದಿನ. ಪ್ರತಿ ಸಲ ನಾನು ಯಾವುದೇ ನಿರ್ಧಾರ  ತೆಗೆದುಕೊಂಡಾಗ ಅದನ್ನು ಇಂಟ್ಯೂಶನ್ ಮೂಲಕವೇ ತೆಗೆದುಕೊಳ್ಳುತ್ತೇನೆ.

ಮೆಂ: ಈಗ ನಿನ್ನ ಹುಚ್ಚುಗಳ ಬಗ್ಗೆ ಮಾತಾಡೋಣ. ನಿನ್ನ ಅತಿ ದೊಡ್ಡ ಹುಚ್ಚು ಯಾವುದು?
ಮಾ: ನನಗೆ ಚಿಕ್ಕಂದಿನಿಂದಲೇ ಎಡಬಿಡದೆ ಇರುವ ಹುಚ್ಚೆಂದರೆ ಪಂಕ್ಚುಯಾಲಿಟಿ. ನಾನು ಚಿಕ್ಕ ಹುಡುಗನಾಗಿದ್ದ ಕಾಲದಿಂದ ಎಂದೂ ಯಾವುದಕ್ಕೂ ವೇಳೆ ಮೀರಿದವನಲ್ಲ.

ಮೆಂ: ನೀನು ಹೇಳುವ ಪ್ರಕಾರ ಟೈಪ್ ಮಾಡುವಾಗ ಒಂದು ತಪ್ಪಾದರೂ ನೀನು ಅ ಪೇಜನ್ನು ಮತ್ತೆ ಪ್ರಾರಂಭಿಸುತ್ತೀಯ. ಇದೂ ಒಂದು ಹುಚ್ಚೇ ಅಥವಾ ಮೂಢನಂಬಿಕೆಯೇ?

ಮಾ: ಅದು ಶೀಟ್ ಮೇನಿಯಾ. ನನಗೆ ಟೈಪಿಂಗಿನಲ್ಲಿ ತಪ್ಪಾಗುವುದು ಅಥವಾ ಏನನ್ನಾದರೂ ಹೊಡೆದು ಹಾಕುವುದು ಶೈಲಿಯಲ್ಲಿನ ದೋಷವೆನ್ನಿಸುತ್ತದೆ. (ಸರಳವಾಗಿ ಹೇಳುವುದಾದರೆ ಅದು ಫಿಯರ್ ಆಫ್ ರೈಟಿಂಗ್ ಇರಬಹುದು)

ಮೆಂ: ಹೆಂಗಸರ ಪತ್ರಿಕೆಗಳಲ್ಲಿ ಮಾಡುವಂತೆ ಈಗ ನಾವು ನಿನಗಿಷ್ಟವಾದ ವಿಷಯಗಳ ಬಗ್ಗೆ ಮಾತಾಡೋಣ. ಕೊಲಂಬಿಯಾದ ಬ್ಯೂಟಿ ಕ್ವೀನ್ ಗಳಿಗೆ ಕೇಳುವ ರೀತಿ ನಿನಗೆ ಪ್ರಶ್ನೆ ಕೇಳುವುದರಲ್ಲಿ ಮಜಾ ಇದೆ. ನೀನು ತುಂಬಾ ಮೆಚ್ಚುವ ಪುಸ್ತಕ ಯಾವುದು?
ಮಾ: ಈಡೀಪಸ್ ರೆಕ್ಸ್.

ಮೆಂ
: ನಿನ್ನ ಪ್ರೀತಿಯ ಚಿತ್ರಕಾರ?
ಮಾ: ಗೋಯಾ.

ಮೆಂ: ನೀನು ತುಂಬಾ ಮೆಚ್ಚುವ ಸಿನೆಮಾ ನಿರ್ದೇಶಕ?
ಮಾ: ದ ಇಮ್ಮಾರ್ಟಲ್ ಸ್ಟೋರಿಗಾಗಿ ಆರ್ಸನ್ ವೆಲ್ಲ್ಸ್. ರೆಡ್ ಬಿಯರ್ಡ್ ಗಾಗಿ ಕುರುಸೋವಾ.

ಮೆಂ; ನಿನ್ನ ಫೇವರಿಟ್ ಫಿಲ್ಮ್?
ಮಾ: ರೋಸೆಲಿನಿಯ ಇಲ್ ಜನರಾಲ್ ದ ಲಾ ರೋವಿಯರ್. ಟ್ರೂಫಫೋನ ಜೂಲ್ಸ್ ಎತ್ ಜಿಮ್.

ಮೆಂ; ಯಾವ ಚಾರಿತ್ರಿಕ ವ್ಯಕ್ತಿ ನಿನಗೆ ತುಂಬಾ ಆಸಕ್ತಿ ಹುಟ್ಟಿಸುತ್ತಾನೆ?
ಮಾ: ಜೂಲಿಯಸ್ ಸೀಜರ್. ಆದರೆ ಕೇವಲ ಸಾಹಿತ್ಯಿಕ ದೃಷ್ಟಿಕೋನ ದಿಂದ.

ಮೆಂ: ನೀನು ತುಂಬಾ ಅಸಹ್ಯ ಪಡುವ ವ್ಯಕ್ತಿ?
ಮಾ:  ಕ್ರಿಸ್ಟೊಫರ್ ಕೊಲಂಬಸ್. ಅವನಿಗೆ ನಿಜವಾಗಿ ಪಾವಾ ಇದೆ. ಆಟಮ್ ಆಫಫ್ ಪೇಟ್ರಿಯಾರ್ಕ್ ನ ಒಂದು ಪಾತ್ರ ಇದನ್ನು ಹೇಳುತ್ತದೆ.

ಮೆಂ: ನಿನ್ನ ಮೆಚ್ಚಿನ ಲಿಟರರಿ ಹೀರೋಗಳು?
ಮಾ: ಗರ್ಗಾನ್ತುವಾ, ಎಡ್ಮಂಡ್ ದಾಂತೆ ಮತ್ತು ಕೌಂಟ್ ಡ್ರಾಕುಲಾ.

ಮೆಂ: ವಾರದಲ್ಲಿ ನಿನಗಿಷ್ಟವಿಲ್ಲದ ದಿನ ಯಾವುದು?
ಮಾ: ಭಾನುವಾರ.

ಮೆಂ: ನೀನು ತುಂಬಾ ಮೆಚ್ಚುವ ಬಣ್ಣ ಕಳದಿ ಎಂದು ನಮಗೆ ಗೊತ್ತು. ಅದು ಹಳದಿಯ ಯಾವ ಛಾಯೆ?
ಮಾ: ಮಧ್ಯಾಹ್ನ ಮೂರು ಗಂಟೆಗೆ  ಜಮೈಕಾ ದಿಂದ ಕೆರಿಬಿಯನ್ ಸಮುದ್ರವನ್ನು ನೋಡಿದಾಗ ಕಾಣುವ ಹಳದಿ ಎಂದು ಅದನ್ನು ಒಂದು ಸಲ ನಾನು ವರ್ಣಿಸಿದ್ದೆ.

(‘The Fragrance of Guava’ ಎಂಬ ಪುಸ್ತಕವಾಗಿ ಪ್ರಕಟವಾಗಿರುವ ಮಾರ್ಕ್ವೆಜ್ ಜೊತೆಗಿನ ಸಂದರ್ಶನದ  ಆಯ್ದ ಭಾಗಗಳು)