ನನಗೆ ಇದು ಕನಸೊ ನನಸೊ ಎಂಬ ಸಂಶಯ ಶುರುವಾಯ್ತು! ಎಷ್ಟೋ ಜನರು ವಿದೇಶಕ್ಕೆ ಹೊಗಲೇಬೇಕು ಅಂತ ಗುದ್ದಾಡಿದರೂ ಅವರಿಗೆ ಅವಕಾಶ ಸಿಗೋದಿಲ್ಲ. ಆದರೆ ಈ ಅವಕಾಶ ನಾನು ಬೇಡ ಬೇಡ ಅಂದರೂ ನನ್ನನ್ನು ಹುಡುಕಿಕೊಂಡು ಬಂದಿತ್ತು. ಅಪಾಯಿಂಟ್ಮೆಂಟ್ ಲೆಟರ್ ಬರುವವರೆಗೂ ಯಾರಿಗೂ ಹೇಳೋದು ಬೇಡ ಅಂತ ನಿರ್ಧಾರ ಮಾಡಿದ್ದೆ. ಸಾಮಾನ್ಯವಾಗಿ ರಾಜೀನಾಮೆ ಕೊಡಬೇಕಾದರೂ ಕೂಡ ನನ್ನ ಕೈಯಲ್ಲಿ ಲೆಟರ್ ಇರಲೇಬೇಕು. ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಂಬ ಅತಂತ್ರ ಸ್ಥಿತಿ ನಿರ್ಮಾಣವಾದರೆ ಆಮೇಲೆ ಅಧೋಗತಿ!
ಗುರುಪ್ರಸಾದ ಕುರ್ತಕೋಟಿ ಬರೆಯುವ ಅಮೆರಿಕದಲ್ಲಿ ಕಳೆದ ದಿನಗಳ ಕುರಿತ ಹೊಸ ಸರಣಿ “ಅಮೆರಿಕದಲ್ಲಿ ಕುರ್ತಕೋಟಿ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ
“ಜೀವನದಲ್ಲಿ ಯಾವುದನ್ನು ನಾವು ಬೇಡ ಬೇಡ ಅನ್ನುತ್ತೆವೊ ಆವೇ ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಆದರೆ ಎಲ್ಲೋ ಸುಪ್ತ ಮನಸ್ಸಿನಲ್ಲಿ, ನಮಗೆ ಅರಿವಿಲ್ಲದಂತೆ ನಾವದನ್ನು ಈಗಾಗಲೇ ಬಯಸಿರುತ್ತೇವೆಯೇ!?”
ಕಾರ್ಪೊರೇಟ್ ಜೀವನದಲ್ಲಿ ಅದಾಗಲೇ ಹದಿನೇಳು ವರ್ಷಗಳನ್ನು ಕಳೆದಿದ್ದೆ. ಮೊದ ಮೊದಲು ಒಂದು ಹೊಸ ಹುರುಪು ಆವೇಶ ಎಲ್ಲ ಇತ್ತು. ಅದೊಂದು ವಿಚಿತ್ರ ನಶೆಯ ಸುಂದರ ಲೋಕವೆ ನನ್ನೆದುರು ತೆರೆದುಕೊಳ್ಳುತ್ತ ಕೆಲ ವರ್ಷಗಳಲ್ಲಿ ಪೂರ್ತಿಯಾಗಿ ಅವರಿಸಿಕೊಂಡಿತ್ತು. ಇನ್ನೂ ದೂರ ಹೋದಂತೆ ಅದೊಂದು ದೊಡ್ಡ ರಂಗಮಂಟಪ ಅನಿಸಲು ಶುರುವಾಗಿತ್ತು. ಆ ನಾಟಕದಲ್ಲಿ ಒಬ್ಬೊಬ್ಬರು ಒಂದೊಂದು ಪಾತ್ರಗಳನ್ನು ವಹಿಸುತ್ತಿದ್ದಾರೆ ಎಂಬ ಭಾವನೆ ಪದೇ ಪದೇ ಅನಿಸಲು ತೊಡಗಿತ್ತು. ಈಗ ತಿರುಗಿ ನೋಡಿದರೆ ಅವರೆಲ್ಲ ವಿದೂಷಕರಂತೆ ಅನಿಸಿ, ಹಳೆಯ ಸನ್ನಿವೇಶಗಳು ತುಂಬಾ ತಮಾಷೆಯಾಗಿ ಕಂಡರೂ, ಅದನ್ನು ಅನುಭವಿಸುತ್ತಿದ್ದಾಗ ಎಲ್ಲರೂ ವಿಲನ್ಗಳ ಹಾಗೆಯೇ ಕಾಣುತ್ತಿದ್ದರು. ಅದೊಂದು ದುರಂತ ನಾಟಕದ ಹಾಗೆ ಅನಿಸುತ್ತಿತ್ತು. ಒಟ್ಟಿನಲ್ಲಿ ನಾನು ನಟನೆ ಬಾರದ ನಿಷ್ಪ್ರಯೋಜಕ ಪಾತ್ರಧಾರಿ ಅನಿಸಿ ಒದ್ದಾಡತೊಡಗಿದ್ದಂತಹ ಸಂದರ್ಭ ಅದು!
ಅವತ್ತು ನನ್ನ ಕ್ಯಾಬಿನ್ನಲ್ಲಿ ಒಂದಿಷ್ಟು ಇಮೇಲ್ಗಳನ್ನು ಗಮನಿಸುತ್ತಾ ಕೂತಿದ್ದೆ. ಮ್ಯಾನೇಜರ್ಗಳು ಏನೋ ಗಹನವಾಗಿ ಕೆಲಸ ಮಾಡುತ್ತಿರುವಂತೆ ನಟಿಸುತ್ತಾ ಮಾಡುವ ಘನಂದಾರಿ ಕೆಲಸ ಅದೊಂದೇ! ಆಗ ನನ್ನ ಹಳೆಯ ಕಂಪೆನಿಯ ಸಹೋದ್ಯೋಗಿಯೊಬ್ಬರು ಕರೆ ಮಾಡಿದರು. ಅವರ ಹೆಸರು ಹಾಸಿನಿ ಅಂತ ಇರಲಿ. ತುಂಬಾ ದಿನಗಳ ಮೇಲೆ ಬಂದ ಕರೆ ಅದು. ಅವರು ನನ್ನ ಹಳೆಯ ಕಂಪೆನಿಯಲ್ಲಿ training ವಿಭಾಗದಲ್ಲಿ ಇದ್ದರು. ನಾನು manager ಆಗಿದ್ದ ಕಾರಣ ನನ್ನ ತಂಡಕ್ಕೆ ಹಲವಾರು ತರಬೇತಿ ಕಾರ್ಯಕ್ರಮವನ್ನು ರೂಪಿಸುತ್ತಿದ್ದರು. ಹೀಗಾಗಿ ಅವರ ಜೊತೆಗೆ ಒಂದಿಷ್ಟು ಒಡನಾಟವಿತ್ತು, ಆತ್ಮೀಯತೆಯಿಂದ ಮಾತಾಡುತ್ತಿದ್ದರು. ಅದೊಂದು professional ಸಂಬಂಧ ಆಗಿದ್ದರಿಂದ ಹೊಸ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಅವರ ಜೊತೆಗೆ ಸಂಪರ್ಕ ತಪ್ಪಿಹೋಗಿತ್ತು. ಹೀಗಾಗಿ ಅವರು ಅವತ್ತು ಕರೆ ಮಾಡಿದ್ದು ಒಂದು ಸಣ್ಣ ಅಚ್ಚರಿಯನ್ನು ತಂದಿತ್ತು.
ಉಭಯಕುಶಲೋಪರಿಗಳ ನಂತರ, ಅವರು “ಫ್ರಾನ್ಸ್ಗೆ ಹೊಗತೀರ?” ಎಂಬ ಪ್ರಶ್ನೆ ಕೇಳಿದರು. ಅರೆ ಇದ್ದಕ್ಕಿದ್ದಂತೆ ಕರೆ ಮಾಡಿ ಇದೇನು ತಮಾಷೆ ಮಾಡುತ್ತಿದ್ದಾರಾ ಅನಿಸಿತು. ಅವರು ಮುಂದುವರಿಸಿ..
“ಒಂದು ಒಳ್ಳೆ opportunity ಇದೆ. France ನ ದೊಡ್ಡ ಕಂಪೆನಿಯಲ್ಲಿ ಡೈರೆಕ್ಟರ್ ಹುದ್ದೆ. ಅಲ್ಲಿನ Chairman ಒಬ್ಬರು ನನಗೆ ತುಂಬಾ ಪರಿಚಿತರು. ಅವರದು ಒಂದಿಷ್ಟು quota ಇರುತ್ತೆ. ಅದಕ್ಕಾಗಿ ಒಂದು ಒಳ್ಳೆಯ ಪ್ರೊಫೈಲ್ ಹುಡುಕುತ್ತಾ ಇದಾರೆ. ನೀವೇ ಅದಕ್ಕೆ suitable ಅನಿಸಿತು. ಅದಕ್ಕೆ Call ಮಾಡಿದೆ.” ಅಂದರು.
ನಾನು ಹಳೆಯ ಕಂಪೆನಿ ಯಲ್ಲಿ ಒಳ್ಳೆಯ position ನಲ್ಲಿ ಇದ್ದೆ. ತುಂಬಾ ದೊಡ್ಡ ಅಕೌಂಟ್ ನೋಡಿಕೊಳ್ಳುತ್ತಿದ್ದೆ. ನನಗೆ ಹೆಚ್ಚು ಕಡಿಮೆ 100 ಜನರು ರಿಪೋರ್ಟ್ ಮಾಡುತ್ತಿದ್ದರು. ನನ್ನ ಕಾರ್ಯವೈಖರಿಯನ್ನು ಹತ್ತಿರದಿಂದ ನೋಡಿದ್ದ ಹಾಸಿನಿಗೆ ನಾನೊಬ್ಬ ಸೂಕ್ತ ವ್ಯಕ್ತಿ ಅನಿಸಿರಬಹುದು. ಆದರೆ ಭಾರತ ಬಿಟ್ಟು ಫ್ರಾನ್ಸ್ಗೆ ಹೋಗುವುದೇ? ನಾನೊಬ್ಬ ಅತಿ ಜಿಡ್ಡು ಮನುಷ್ಯ. ಒಂದು ಕಡೆ ಬೇರು ಬಿಟ್ಟರೆ ಅಲ್ಲಿಂದ ಕದಲುವುದು ನನಗೆ ಅಸಾಧ್ಯ. ಅಲ್ಲಿಯೇ ಬೇರೇನೋ ಹೊಸದು ಹುಡುಕಿ ಹೋದೇನು ಆದರೆ ಸ್ಥಳ ಬದಲಾವಣೆ ತುಂಬಾ ಅಪರೂಪ. ಹಲವು ವರ್ಷಗಳ ಹಿಂದೆ ಹುಬ್ಬಳ್ಳಿಯಿಂದ ಬೆಂಗಳೂರಿಗೆನೇ ಬೇಡ ಬೇಡ ಅನ್ನುತ್ತ ಬಂದವನು, ಇನ್ನೂ ಫ್ರಾನ್ಸ್ಗೆ ಹೋಗೋದೇ? ಅದೂ ಈಗ? ಹೊಸ ವಾತಾವರಣ, ಹೊಸ ಭಾಷೆ, ಜೀವನ ಶೈಲಿ ಇದೆಲ್ಲವನ್ನು ಹೊಸದಾಗಿ ರೂಢಿಸಿಕೊಳ್ಳುವುದೇ? ಬೇಡವೇ ಬೇಡ ಅನಿಸಿತು. ಆದರೂ ವಿಚಾರ ಮಾಡಿ ಹೇಳುತ್ತೇನೆ ಅಂತ ಅವರಿಗೆ ಹೇಳಿದೆ.
“ಅಲ್ಲಿ posh locality ಯಲ್ಲಿ ದೊಡ್ಡದೊಂದು ಮನೆ. ಮನೆಯ ಹತ್ತಿರದಲ್ಲೇ ಶಾಲೆ ಇದೆ. ನಿನ್ನ ಮಗಳಿಗೆ ತುಂಬಾ ಅನುಕೂಲ. ಇಲ್ಲಿನ ಎಷ್ಟೋ ಪಟ್ಟು ದೊಡ್ಡ ಸ್ಯಾಲರಿ. ಆರಾಮಾಗಿ ಇದ್ದು ಬರಬಹುದು ಗುರು. ಒಂದೆರಡು ದಿನಗಳಲ್ಲಿ ತಿಳಿಸಿ. ನಾನೂ ಕೂಡ ತುಂಬಾ ದಿನ ಅವರನ್ನು ಕಾಯಿಸೋದು ಸರಿ ಅನಸಲ್ಲ. ಯಾವುದಕ್ಕೂ ನಿಮ್ಮ ಒಂದು updated profile ಕಳಿಸಿ.” ಅಂದರು.
ಅವರು ಹಾಗೆ ಹೇಳಿದ್ದು ನನ್ನಲ್ಲಿ ಒಂದು ಆಸೆ ಹುಟ್ಟಿಸಿತು. ಈ ಕಾರ್ಪೊರೇಟ್ ಬದುಕೇ ಸಾಕಾಗಿ ಕೆಲಸವನ್ನೇ ಬಿಟ್ಟುಬಿಡುವ ಯೋಚನೆಯಲ್ಲಿ ನಾನಿದ್ದೆ. ಅಂಥದ್ದರಲ್ಲಿ ವಿದೇಶ ಪ್ರಯಾಣದ ಕನಸನ್ನು ನನ್ನ ತಲೆಯಲ್ಲಿ ಬಿತ್ತಿ ಬಿಟ್ಟಿದ್ದರು ಅವರು. ನಾನು ಅವರು ಹೇಳಿದ ಹಾಗೆಯೇ ನನ್ನ ಮನಸ್ಸಿನಲ್ಲಿ ಚಿತ್ರಿಸಲು ತೊಡಗಿದೆ. ವಿದೇಶದಲ್ಲಿ ಒಂದು ದೊಡ್ಡ ಮನೆ.. ಮನೆಯ ಹತ್ತಿರವೇ ಒಂದು ಶಾಲೆ.. ಮಗಳನ್ನು ಶಾಲೆಗೆ ಕರೆದುಕೊಂಡು ಹೋಗುವ ದೃಶ್ಯ, ನಾನು ವಿದೇಶದ ರೋಡ್ನಲ್ಲಿ ಕಾರಿನಲ್ಲಿ ಅಡ್ಡಾಡುತ್ತಿರುವ ದೃಶ್ಯ ನನಗೆ ಅರಿವಿಲ್ಲದಂತೆ ಮನದಲ್ಲಿ ಒಂದು ಕಲರ್ ಸಿನೆಮಾ ಮೂಡಲು ತೊಡಗಿತ್ತು. ಎಲ್ಲಕ್ಕೂ ಮಿಗಿಲಾಗಿ ಇಷ್ಟೊಂದು ವರ್ಷಗಳ ಏಕತಾನತೆಯಿಂದ ಹೊರಬರಲು ಇದೊಂದು ಒಳ್ಳೆಯ ಅವಕಾಶ ಅಂತ ಕೂಡ ಅನಿಸಿತು. ಆಗ ನಾನು ಮಾಡುತ್ತಿದ್ದುದಕ್ಕೂ, ಫ್ರಾನ್ಸ್ಗೆ ಹೋಗಿ ಮಾಡಬೇಕಾದ ಕೆಲಸ ಕಾರ್ಯಗಳಲ್ಲಿ ದೊಡ್ಡ ವ್ಯತ್ಯಾಸ ಏನೂ ಇರಲಿಲ್ಲವಾದರೂ ಸ್ಥಳ ಬದಲಾವಣೆಯೇ ಒಂದು ದೊಡ್ಡ energy ಕೊಡಬಲ್ಲದು ಅಂತ ಅನಿಸಿತು.
ಮೊದ ಮೊದಲು ಒಂದು ಹೊಸ ಹುರುಪು ಆವೇಶ ಎಲ್ಲ ಇತ್ತು. ಅದೊಂದು ವಿಚಿತ್ರ ನಶೆಯ ಸುಂದರ ಲೋಕವೆ ನನ್ನೆದುರು ತೆರೆದುಕೊಳ್ಳುತ್ತ ಕೆಲ ವರ್ಷಗಳಲ್ಲಿ ಪೂರ್ತಿಯಾಗಿ ಅವರಿಸಿಕೊಂಡಿತ್ತು. ಇನ್ನೂ ದೂರ ಹೋದಂತೆ ಅದೊಂದು ದೊಡ್ಡ ರಂಗಮಂಟಪ ಅನಿಸಲು ಶುರುವಾಗಿತ್ತು. ಆ ನಾಟಕದಲ್ಲಿ ಒಬ್ಬೊಬ್ಬರು ಒಂದೊಂದು ಪಾತ್ರಗಳನ್ನು ವಹಿಸುತ್ತಿದ್ದಾರೆ ಎಂಬ ಭಾವನೆ ಪದೇ ಪದೇ ಅನಿಸಲು ತೊಡಗಿತ್ತು. ಈಗ ತಿರುಗಿ ನೋಡಿದರೆ ಅವರೆಲ್ಲ ವಿದೂಷಕರಂತೆ ಅನಿಸಿ, ಹಳೆಯ ಸನ್ನಿವೇಶಗಳು ತುಂಬಾ ತಮಾಷೆಯಾಗಿ ಕಂಡರೂ, ಅದನ್ನು ಅನುಭವಿಸುತ್ತಿದ್ದಾಗ ಎಲ್ಲರೂ ವಿಲನ್ಗಳ ಹಾಗೆಯೇ ಕಾಣುತ್ತಿದ್ದರು.
ಮನೆಯಲ್ಲಿ ಆಶಾಳ ಜೊತೆ ಈ ಕುರಿತು ಚರ್ಚೆ ಮಾಡಿದೆ. ಮಗಳು ಇನ್ನೂ ಚಿಕ್ಕವಳು. ಅವಳಿಗೂ ಅಂತಹ ಸಮಸ್ಯೆ ಆಗಲಾರದು. ಆಗ ಬೆಂಗಳೂರಿನಲ್ಲಿ ಅಪ್ಪ ನಮ್ಮ ಜೊತೆಗೆ ಇದ್ದರು. ಅವರನ್ನು ಬಿಟ್ಟು ಹೋಗಬೇಕಲ್ಲ ಎಂಬ ಚಿಂತೆ ಆವರಿಸಿತಾದರೂ, ಅವರನ್ನು ನನ್ನ ತಮ್ಮ ನೋಡಿಕೊಳ್ಳುತ್ತಾನೆ ಎಂಬ ಭರವಸೆ ಇತ್ತು. ಅದೂ ಅಲ್ಲದೆ ನಾವೇನು ಅಲ್ಲಿಯೇ ಇರಲು ಹೋಗುತ್ತಿದ್ದೇವೆಯೇ? ಒಂದು ಇಲ್ಲವೇ ಎರಡು ವರ್ಷಗಳೊಳಗೆ ಬಂದುಬಿಟ್ಟರಾಯ್ತು ಎಂಬಿತ್ಯಾದಿ ತರ್ಕಗಳೊಂದಿಗೆ ಫ್ರಾನ್ಸ್ಗೆ ಹೋಗೇ ಬಿಡೋಣ ಅಂತ ನಿರ್ಧರಿಸಿ ನನ್ನ ತುಕ್ಕು ಹಿಡಿದು ಹಳಕಲಾಗಿದ್ದ ರೆಸ್ಯೂಮೇ ಎಂಬ ಜಾತಕವನ್ನು ಇತ್ತೀಚೆಗಿನ ಅನುಭವಗಳನ್ನು ಸೇರಿಸಿ update ಮಾಡಿ ಹಾಸಿನಿಗೆ ಕಳಿಸಿದೆ. ಜಾತಕ ಬದಲಾಗುವುದಿಲ್ಲ ಆದರೆ ನಾವು ಕಂಪೆನಿಗಳನ್ನು ಬದಲಿಸಿದಂತೆ ನಮ್ಮ ರೆಸ್ಯೂಮೇಗಳು ಬದಲಾಗುತ್ತಲೇ ಇರುತ್ತವೆ.
ಸಂಜೆಯೇ ಹಾಸಿನಿಯವರ ಫೋನ್ ಮತ್ತೆ ರಿಂಗಿಸಿತು.
“ರೀ ಗುರು! ನಿಮ್ಮ ಪ್ರೊಫೈಲ್ ಅವರಿಗೆ ತುಂಬಾ ಇಷ್ಟ ಆಗಿದೆ ಕಣ್ರೀ! ಅವರು ನಿಮ್ಮ ತರಹದ experience ಇರೋವರನ್ನೇ ಹುಡುಕತಾ ಇದ್ದರಂತೆ. ನಾಳೆನೇ ಅವರ ಜೊತೆ ಒಂದು formal ಆಗಿ interview ಫಿಕ್ಸ್ ಮಾಡಿದೀನಿ. ದಯವಿಟ್ಟು ಮಾತಾಡಿ. ಬ್ಲಾಗ್ಸ್ ರೆಡಿ ಮಾಡಿಕೊಳ್ಳಿಪಾ ..!” ಅಂತ ನನ್ನ ನಿರ್ಧಾರಕ್ಕೂ ಕಾಯದೆ ಪಟ ಪಟ ಅಂತ ಅವರು ಮಾತಾಡುತ್ತಿದ್ದರೆ ನನ್ನ ಹೃದಯದ ಬಡಿತ ಏರುತ್ತಲೇ ಸಾಗಿತು. ಅಯ್ಯೋ ಹೀಗೆ ಧಿಡೀರ್ ಅಂತ ದೇಶ ಬಿಟ್ಟು ಹೋಗೋದು ಹೇಗೆ ಸಾಧ್ಯ? ನಾಳೆ ಅವರ ಜೊತೆಗೆ ಮಾತಾಡುವಾಗ ಸ್ವಲ್ಪ ಸಮಯ ಕೇಳಬೇಕು ಅಂತ ಯೋಚಿಸತೊಡಗಿದೆ. ಆದರೆ ಒಳಗೊಳಗೆ ಖುಷಿ ಆವರಿಸತೊಡಗಿತ್ತು!
ಮರುದಿನ ಒಬ್ಬರು ಫೋನ್ ಮಾಡಿ ಅದೇ ಕಂಪೆನಿಯಿಂದ ಮಾತಾಡುತ್ತಿದ್ದೇವೆ ಅಂತಲೂ ಹಾಗೂ ತಾನು director ಅಂತ ಪರಿಚಯಿಸಿಕೊಂಡರು. ಅವರ ಜೊತೆಗೆ ಇನ್ನೊಬ್ಬ ಗಂಡಸು ಕೂಡ ಮಾತನಾಡಿ, ತಾನು ಆ ಪ್ರಸಿದ್ಧ ಕಂಪೆನಿಯ Board of directors ನಲ್ಲಿ ಒಬ್ಬರು ಅಂತ ಹೇಳಿದರು. ಅವರಿಬ್ಬರೂ ನನ್ನ ಜೊತೆ ಒಂದಿಪ್ಪತ್ತು ನಿಮಿಷ ಮಾತಾಡಿದರು ಅಂತ ಅನ್ಸುತ್ತೆ. ತುಂಬಾ ಅನೌಪಚಾರಿಕ ಮಾತುಕತೆ ಅದಾಗಿತ್ತು. ಇದು ದೊಡ್ಡ ಹುದ್ದೆಯಲ್ಲವೇ, ನನ್ನ experience ಕೂಡ ಹೆಚ್ಚು ಇತ್ತು. ಮತ್ತು ಪ್ರತಿಷ್ಟಿತ ಕಂಪೆನಿಯಲ್ಲಿ ಈಗಾಗಲೇ ಕೆಲಸ ಮಾಡುತ್ತಿದ್ದೆ. ಇವೆಲ್ಲ ಕಾರಣಗಳಿಂದ ನನಗೆ ಅಷ್ಟೆಲ್ಲಾ ಪ್ರಶ್ನೆಗಳನ್ನು ಕೇಳಿರಲಿಕ್ಕಿಲ್ಲ ಅಂದುಕೊಂಡೆ. ಅಥವಾ ಮುಂದೆ ಮತ್ತೊಂದು ವಿವರವಾದ ಸಂದರ್ಶನ ಮಾಡುತ್ತಾರೋ ಏನೋ ಅಂತಲೂ ಅನಿಸಿತು. ಆದರೆ ಇವೆಲ್ಲವನ್ನೂ ಸುಳ್ಳು ಮಾಡುವಂತೆ ಮತ್ತೆ ಹಾಸಿನಿಯ ಕರೆ ಬಂತು. ಅವರಿಗೆ ನಿಮ್ಮ ಜೊತೆ ಮಾತಾಡಿ ತುಂಬಾ ಖುಷಿ ಆಗಿದೆಯಂತೆ. ಯಾವಾಗ ರೆಡಿ ಇದ್ದೀರಿ ಅಂತ ಮತ್ತೆ ಶುರು ಮಾಡಿದರು. ಹಾಗೆ ನಾನು ಹೋಗುತ್ತೇನೆ ಅಂದರೆ ಆಗ ಕೆಲಸ ಮಾಡುತ್ತಿದ್ದ ಕಂಪೆನಿ ಸುಮ್ಮನೆ ಬಿಡುತ್ತೆಯೇ? ಅಲ್ಲಿ ಎರಡು ತಿಂಗಳು ಮೊದಲೇ ನಾನು ರಾಜೀನಾಮೆ ಕೊಡಬೇಕು. ಇಲ್ಲವಾದರೆ ನನ್ನ ಎರಡು ತಿಂಗಳ ಸಂಬಳವನ್ನು ದಂಡದ ರೂಪದಲ್ಲಿ ತೆರಬೇಕು. ನಾನು ಎರಡು ತಿಂಗಳಾದರೂ ಸಮಯ ಸಿಗುತ್ತದಲ್ಲ ಅಂತ, ಕೂಡಲೇ ಹೋಗಲು ಒಪ್ಪಲಿಲ್ಲ. ಅದೂ ಅಲ್ಲದೆ ಇಂತಹ ವಿಷಯದಲ್ಲಿ ಗಡಿಬಿಡಿ ಮಾಡಲಾಗುತ್ತೆಯೇ? ಅವರು ನನಗೆ ಏನು ಪ್ಯಾಕೇಜ್ ಕೊಡುತ್ತಿದ್ದಾರೆ ಅಂತ ತಿಳಿಯಬೇಕಲ್ಲ. ಅದಕ್ಕೆ ಹಾಸಿನಿ, ನಿಮಗೆ ಒಂದು ವಾರದಲ್ಲಿ ಅಪಾಯಿಂಟ್ಮೆಂಟ್ ಲೆಟರ್ ಬರುತ್ತೆ. ಪ್ಯಾಕೇಜ್ ಬಗ್ಗೆ ತಲೆ ಕೇಡಿಸಿಕೋಬೇಡಿ. ನೀವು ಯೋಚನೆ ಕೂಡ ಮಾಡಿರಲಿಕ್ಕಿಲ್ಲ ಅಷ್ಟು ಆಫರ್ ಮಾಡ್ತಾರೆ ಅಂತ ಹೇಳಿ ಮತ್ತೆ ನನ್ನನ್ನ ಚಕಿತಗೊಳಿಸಿದರು.
ನನಗೆ ಇದು ಕನಸೊ ನನಸೊ ಎಂಬ ಸಂಶಯ ಶುರುವಾಯ್ತು! ಎಷ್ಟೋ ಜನರು ವಿದೇಶಕ್ಕೆ ಹೊಗಲೇಬೇಕು ಅಂತ ಗುದ್ದಾಡಿದರೂ ಅವರಿಗೆ ಅವಕಾಶ ಸಿಗೋದಿಲ್ಲ. ಆದರೆ ಈ ಅವಕಾಶ ನಾನು ಬೇಡ ಬೇಡ ಅಂದರೂ ನನ್ನನ್ನು ಹುಡುಕಿಕೊಂಡು ಬಂದಿತ್ತು. ಅಪಾಯಿಂಟ್ಮೆಂಟ್ ಲೆಟರ್ ಬರುವವರೆಗೂ ಯಾರಿಗೂ ಹೇಳೋದು ಬೇಡ ಅಂತ ನಿರ್ಧಾರ ಮಾಡಿದ್ದೆ. ಸಾಮಾನ್ಯವಾಗಿ ರಾಜೀನಾಮೆ ಕೊಡಬೇಕಾದರೂ ಕೂಡ ನನ್ನ ಕೈಯಲ್ಲಿ ಲೆಟರ್ ಇರಲೇಬೇಕು. ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಂಬ ಅತಂತ್ರ ಸ್ಥಿತಿ ನಿರ್ಮಾಣವಾದರೆ ಆಮೇಲೆ ಅಧೋಗತಿ! ಹೀಗಾಗಿ ತಾಳ್ಮೆಯಿಂದ ಕಾಯ್ದೆ. ಅಪ್ಪ ಹಾಗೂ ತಮ್ಮನಿಗೆ ಮಾತ್ರ ಹೀಗೊಂದು ಅವಕಾಶ ಬಂದರೂ ಬಂದೀತು ಅಂತ ಸೂಕ್ಷ್ಮವಾಗಿ ತಿಳಿಸಿದ್ದೆ.
ಮನಸ್ಸು ತುಂಬಾ ಹಗುರವಾಗಿತ್ತು. ಹಿಂದೆ ಎರಡು ಸಲ ತಿಂಗಳ ಮಟ್ಟಿಗೆ ಅಂತ ಅಮೆರಿಕೆಗೆ ಹೋಗಿ ಬಂದಿದ್ದೇನಾದರೂ ಯೂರೋಪಿಗೆ ಯಾವತ್ತೂ ಹೋಗಿರಲಿಲ್ಲ. ಜೀವನದಲ್ಲಿ ಇನ್ನೊಂದು ಘಟ್ಟ ಶುರುವಾಗುವ ಕುರುಹು ಕಾಣುತ್ತಿತ್ತು.
“ಏನ್ರೀ ಗುರು ಮುಖದಲ್ಲಿ ಏನೋ ಲವಲವಿಕೆ ಕಾಣುತ್ತಿದೆ. ಏನು ವಿಶೇಷ?” ಅಂತ ಕೇಳಿದರು ನನ್ನ ಮ್ಯಾನೇಜರ್ ವೆಂಕಟ್…
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.
ನಿಮ್ಮ ಹಿಂದಿನ ಸರಣಿ ಗ್ರಾಮ ಡ್ರಾಮಾಯಣ ಇಷ್ಟು ಬೇಗನೆ ಮುಗಿದು ಹೋಯ್ತಲ್ಲ ಅನ್ನಿಸುವಷ್ಟು ಸೊಗಸಾಗಿತ್ತು. ನಮ್ಮಂತಹ ಕಾರ್ಪೊರೇಟ್ ಜಗತ್ತಿನ ಜೀವಿಗಳಿಗೆ ನಿಜಕ್ಕೂ ಹಸಿರುಣ್ಣಿಸುವಂತ ಬರಹಗಳು ಅವು. ಕೊನೆಯ ಕಂತು ಓದಿ ಅಯ್ಯೋ ಗುರುಪ್ರಸಾದ್ ಅವರು ಇದನ್ನು ಇನ್ನಷ್ಟು ಬರೆಯಬೆಕಿತ್ತು ಅಂದುಕೊಳ್ತಿದ್ದೆ ಇದೀಗ ನಿಮ್ಮ ಹೊಸ ಸರಣಿ ಅಷ್ಟೇ ಆಸಕ್ತಿದಾಯಕವಾಗಿ ಶುರುವಾಗಿದೆ. ಮುಂದಿನ ಕಂತುಗಳಿಗೆ ಕಾಯುತ್ತಿರುತ್ತೇನೆ . ಶುಭವಾಗಲಿ
ವೇದಾ, ತಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು! ಗ್ರಾಮ ಡ್ರಾಮಾಯಣ ನಿಮಗೆ ಇಷ್ಟವಾಗಿದ್ದು ಕೇಳಿ ಖುಷಿಯಾಯ್ತು! ಮತ್ತೆ ಶುರು ಮಾಡ್ಬೇಕು… ಇದೊಂಥರಾ triology 🙂
ಚೆನ್ನಾಗಿದೆ!
ಮುಂದಿನ ಕಂತಿನಲ್ಲಿ ನೀವು ನಾಲ್ಕು ದೊಡ್ಡ ಲಗೇಜುಗಳನ್ನು ಹೊತ್ತುಕೊಂಡು ವಿಮಾನ ಹತ್ತುವುದನ್ನು ಕುತೂಹಲದಿಂದ ಎದುರು ನೋಡುತ್ತಿರುವೆ.
ಆನಂದ್ ಸರ್, ನೀವು ಓದಿದ್ದೀರಿ ಎಂಬುದು ತಿಳಿದೇ ಖುಷಿಯಾಯ್ತು. ನಿಮ್ಮ ಪ್ರೋತ್ಸಾಹಕ್ಕೆ ನಾನು ಋಣಿ! ನನ್ನ ಪ್ರಯಾಣದಲ್ಲಿ ಜೊತೆಗಿರಿ 🙂
ಈ ಹೊಸ ಅಂಕಣವನ್ನು ನೋಡಿ ಬಹಳ ಖುಷಿ ಆಯಿತು. ಗ್ರಾಮ ಡ್ರಾಮಾಯಣ ಮುಗಿದಿದ್ದಕ್ಕೆ ತುಂಬಾ ಬೇಸರವಾಗಿತ್ತು. ಇದು ಹೊಸ ಅನುಭವಗಳ ಮೂಟೆ ಅನಿಸ್ತಾ ಇದೆ. ಮುಂದಿನ ಕಂತಿಗೆ ಕಾಯುತ್ತೇನೆ. ಈ ಬಾರಿ ವಾರಕ್ಕೊಂದು ಸಲ ಬರಲಿ. ಶುಭವಾಗಲಿ
ಶಾಂತಾ, ತಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು! ನಿಮ್ಮ ನಿರೀಕ್ಷೆಗಳು ನನಗೆ ಇನ್ನಷ್ಟು ಜವಾಬ್ದಾರಿಯಿಂದ ಬರೆಯುವಂತೆ ಮಾಡುತ್ತಿವೆ. 🙂
Happy to see you back !!
Medha
ತಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು 🙂🙏
ಗುರುಪ್ರಸಾದ ಸರ್, ಕನ್ನಡ ರಾಜ್ಯೋತ್ಸವದ ಈ ದಿನದಂದು ನಿಮ್ಮ ಅನುಭವ ಪಯಣದ ಕನ್ನಡ ಸರಣಿಕೆಗಳನ್ನು ಓದುವದೆ ನಮಗೆ ಒಂದು ದೊಡ್ಡ ಖುಷಿಯ ಸಂಗತಿ.
ಗದಗ ಅವರೆ, ತಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು. 🙂