ಅಂಜಲಿ ಒಬ್ಬ ಇಂಡೋ-ಅಮೇರಿಕನ್ ಹುಡುಗಿಯಾಗಿಯೂ, ಚಾಣಾಕ್ಷ, ಸ್ವಾತಂತ್ರ್ಯ ಬಯಸುವ ಆಧುನಿಕ ಮಹಿಳೆಯಾಗಿದ್ದೂ, ವೃತ್ತಿಪರ ಪತ್ರಕರ್ತೆಯಾಗಿರುತ್ತಾಳೆ. ಇವಳೊಬ್ಬ ಭಗ್ನಪ್ರೇಮಿಯಾಗಿದ್ದೂ, ಕುಟುಂಬದವರನ್ನು ಭೇಟಿಮಾಡಲು ಭಾರತಕ್ಕೆ ಬಂದು ಮಲ್ಹೋತ್ರಾ ಕುಟುಂಬದಲ್ಲಿ ತಾನೂ ಒಬ್ಬಳಾಗಿರುತ್ತಾಳೆ. ಪ್ರೇರಣಾಳ ಸಾವಿನ ನಂತರ ಸೌರಬ್ ಮತ್ತು ಕೇಶವ್‍ ಗೆ ಮಲ್ಹೋತ್ರಾ ಕುಟುಂಬದ ಎಲ್ಲಾ ಬೆಚ್ಚಿಬೀಳಿಸುವ ರಹಸ್ಯಗಳನ್ನು ಬಿಚ್ಚಿಟ್ಟವಳು ಇವಳೇ. ಪ್ರೇರಣಾಳ ಸಾವಿನ ತನಿಖೆಯ ಜೊತೆಯಲ್ಲೇ, ಅಂಜಲಿ ಮತ್ತು ಕೇಶವ್ ನಡುವೆ ಒಂದು ರೀತಿಯ ಮೋಹಕ ಆಕರ್ಷಣೆ ಮೊಳಕೆಯೊಡೆದು, ಆ ಆಕರ್ಷಣೆ ಪ್ರೀತಿಗೆ ತಿರುಗುತ್ತದೆ.
ಚೇತನ್‌ ಭಗತ್‌ ಬರೆದ ‘ಒನ್ ಅರೆಂಜ್ಡ್ ಮರ್ಡರ್’ ಇಂಗ್ಲಿಷ್ ಕಾದಂಬರಿ ಕುರಿತು ಭಾಗ್ಯಶ್ರೀ ಎಂ.ಎಸ್. ಬರಹ

 

‘ಹುಟ್ಟು ಸಹಜ, ಸಾವು ಅನಿರೀಕ್ಷಿತ’ ಎಂಬಂತೆ, ಮನುಷ್ಯಾದಿ ಸಕಲ ಜೀವಸಂಕುಲಗಳೂ ಇದಕ್ಕೆ ಹೊರತೇನಿಲ್ಲ. ಇಲ್ಲಿ ಹುಟ್ಟು ನಿರೀಕ್ಷಿತವಾಗಿದ್ದೂ, ಆನಂದವನ್ನುಂಟುಮಾಡುತ್ತದೆ. ಆದರೆ ಸಾವು ಅನಿರೀಕ್ಷಿತವಾದ ದಃಖವನ್ನುಂಟುಮಾಡುತ್ತದೆ. ಒಂದುವೇಳೆ ಇದೇ ಸಾವು ಸಹಜವಾದದ್ದಲ್ಲದೇ ಅಸಹಜವಾದದ್ದಾದರೆ! ಆಗ ಅಲ್ಲಿ ದುಃಖದ ಜೊತೆಗೆ ಆಶ್ಚರ್ಯ, ಅನುಮಾನ, ಕುತೂಹಲಕಾರಿ ರಹಸ್ಯಗಳು ಹಾಗೂ ಬಿಡಿಸಲಾಗದ ಒಗಟುಗಳು ತಲೆಯೆತ್ತುತ್ತವೆ.

ಹೀಗೇ, ನಾವು ಓದುವ ಸಾಹಿತ್ಯ ಕೃತಿಗಳು ರಹಸ್ಯಮಯವಾಗಿದ್ದಾಗ ಓದುಗರಲ್ಲಿ ಒಂದು ರೀತಿಯ ವಿಶೇಷ ಆಸಕ್ತಿಯನ್ನು ಕೆರಳಿಸುತ್ತದೆ. ಇಂತಹದ್ದೇ ಒಂದು ಕುತೂಹಲಕಾರಿ, ರಹಸ್ಯಮಯ, ಇಂಗ್ಲೀಷ್‍ ನ ಚೀಸೀ-ಸ್ವೀಟೀ ಕುಟುಂಬಕ್ಕೆ ಓದುಗರನ್ನು ಲೇಖಕರಾದ ಚೇತನ್ ಭಗತ್ ತಮ್ಮ ಇತ್ತೀಚೆಗಷ್ಟೇ ಬಿಡುಗಡೆಯಾದ ‘ಒನ್ ಅರೆಂಜ್ಡ್ ಮರ್ಡರ್’ ಕೃತಿಯ ಮೂಲಕ ಆಹ್ವಾನಿಸುತ್ತಿದ್ದಾರೆ. ಸಾಹಿತ್ಯ ಪ್ರಿಯರಿಗೆ ಚೇತನ್ ಭಗತ್ ಏನೂ ಅಪರಿಚಿತರಲ್ಲ. ಇವರ ಸರಳ ಮತ್ತು ಶುದ್ಧ ನಿರೂಪಣಾ ಶೈಲಿ, ನೈಜ, ಆಹ್ಲಾದಕ ಮತ್ತು ಸಹಜವೆನಿಸುವ ಕಥಾವಸ್ತುವಿನಿಂದಾಗಿ ಭಾರತದಲ್ಲಷ್ಟೇ ಅಲ್ಲದೆ ಹೊರ ರಾಷ್ಟ್ರಗಳಲ್ಲೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರು ರಚಿಸಿದ ‘ತ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್’ (3 ಈಡಿಯಟ್ಸ್), ‘2 ಸ್ಟೇಟ್ಸ್’ ಹಾಗೂ ‘ಹಾಫ್ ಗರ್ಲ್‍ಫ್ರೆಂಡ್’ ಪುಸ್ತಕ ಪ್ರೇಮಿಗಳಿಗಲ್ಲದೇ, ಸಿನಿಮಾ ರೂಪ ತಾಳಿ ಸಿನಿಪ್ರಿಯರ ಮೆಚ್ಚುಗೆಯನ್ನೂ ಗಳಿಸಿವೆ.

(ಚೇತನ್‌ ಭಗತ್)

‘ಒನ್ ಅರೆಂಜ್ಡ್ ಮರ್ಡರ್’ ಕಾದಂಬರಿ ಒಂದುರೀತಿ ಸಿಹಿ ತಂಗಾಳಿಯಂತಿದ್ದರೂ, ಆಘಾತಕಾರಿ ಸಿಡಿಲಿನಂಥಾ ರೋಮಾಂಚಕ ಕಥಾ ಹಂದರವುಳ್ಳದ್ದು. ಪ್ರತೀ ಅಂತ್ಯದ ತುದಿಯಲ್ಲೂ ಹೊಸ ಆರಂಭವಿರುತ್ತದೆ. ಈ ಮಾತು ಚೇತನ್ ಭಗತ್‍ ರ ಹಿಂದಿನ ಕಾದಂಬರಿಯನ್ನು ಅಂದರೆ ‘ಎ ಗರ್ಲ್ ಇನ್ ರೂಂ ನಂಬರ್ 105’ ಓದಿದ್ದವರಿಗೆ ಸುಲಭವಾಗಿ ಅರ್ಥವಾಗುತ್ತದೆ. ಏಕೆಂದರೆ ‘ಎ ಗರ್ಲ್ ಇನ್ ರೂಂ ನಂಬರ್ 105’ ಕಾದಂಬರಿಯೂ ಸಹ ಒಂದು ರೀತಿಯ ಪ್ರೇಮ-ಪ್ರಣಯ, ಕೊಲೆ ಹಾಗೂ ರಹಸ್ಯಗಳ ಗೂಡಾಗಿದೆ. ಅಲ್ಲದೇ, ಈ ಕೃತಿಯನ್ನು ಓದಿದವರಿಗೆ ಸಾಮಾನ್ಯವಾಗಿ ಕಥಾನಾಯಕರಾದ ಕೇಶವ್ ಹಾಗೂ ಸೌರಬ್ ಪಾತ್ರಗಳು ಚಿರಪರಿಚಿತವಾಗಿರುತ್ತವೆ. ಈ ಎರೆಡೂ ಪಾತ್ರಗಳು ಭಿನ್ನವಾದ ಕೊಲೆ ರಹಸ್ಯದೊಂದಿಗೆ ‘ಒನ್ ಅರೆಂಜ್ಡ್ ಮರ್ಡರ್ ’ ಕೃತಿಯಲ್ಲಿ ಮತ್ತೆ ಮರುಕಳಿಸುತ್ತವೆ. ಹಾಗಂತ ಈ ಎರಡೂ ಕೃತಿಗಳ ನಡುವೆ ಯಾವುದೇ ರೀತಿಯ ನಿರಂತರತೆಯಾಗಲಿ ಅಥವಾ ‘ಎ ಗರ್ಲ್ ಇನ್ ರೂಂ ನಂಬರ್ 105’ ಕೃತಿಯನ್ನು ಓದಿದರೆ ಮಾತ್ರ ‘ಒನ್ ಅರೆಂಜ್ಡ್ ಮರ್ಡರ್ ’ ಸುಲಭವಾಗಿ ಅರ್ಥೈಸಬಹುದು ಎಂದೇನಿಲ್ಲ. ಕಥಾನಾಯಕರನ್ನು ಹೊರತು ಪಡಿಸಿ ಉಳಿದೆಲ್ಲಾ ವಿಷಯದಲ್ಲೂ ‘ಒನ್ ಅರೆಂಜ್ಡ್ ಮರ್ಡರ್’ ಹೊಸತನ ಸೃಷ್ಟಿಸಿದ್ದೂ, ಓದುಗರ ಮನಸ್ಸನ್ನು ವಶೀಕರಣಕ್ಕೊಳಪಡಿಸುವ ಕಥಾಹಂದರವನ್ನು ಹೊಂದಿದೆ.

ಈ ರೋಮಾಂಚಕ ಕಥೆಯು ಕಥಾನಾಯಕರ ಸರಳ ಸಂಭಾಷಣೆಯೊಂದಿಗೆ ಪ್ರಾರಂಭವಾಗುತ್ತದೆ. ಕೇಶವ್ ಮತ್ತು ಸೌರಬ್ ಇಬ್ಬರೂ ಉತ್ತಮ ಗೆಳೆಯರು, ಸಹೋದ್ಯೋಗಿಗಳು ಮತ್ತು ಪರಸ್ಪರ ಒಂದೇ ಮನೆಯಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುತ್ತಾರೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಈ ಇಬ್ಬರೂ ಒಂದೇ ಕಂಪೆನಿಯಲ್ಲಿ ಅಂದರೆ, ‘ಸೈಬರ್ ಸೆಕ್ಯೂರಿಟಿ ಕಂಪೆನಿ’ಯಲ್ಲಿ ಕೆಲಸ ಮಾಡುವುದರೊಂದಿಗೆ, ತಮ್ಮದೇ ಆದ ‘ಜೆಡ್ ಡಿಟೆಕ್ಟೀವ್’ ಎಂಬ ಖಾಸಗಿ ತನಿಖಾ ಸಂಸ್ಥೆಯನ್ನೂ ಸಹ ಸ್ಥಾಪಿಸಿ ಕೆಲಸ ಮಾಡುತ್ತಿರುತ್ತಾರೆ. ಈ ಕಾದಂಬರಿಯು ಭಾಗಶಃ ಏಕವ್ಯಕ್ತಿ ನಿರೂಪಣೆಯನ್ನು ಹೊಂದಿದ್ದೂ, ಕಾದಂಬರಿಯ ಸುಮಾರು ಶೇಖಡಾ ಐವತ್ತರಷ್ಟು ಭಾಗ ಕೇಶವ್‍ ನ ನಿರೂಪಣೆಯಿಂದಲೇ ಕೂಡಿದೆ.

ಕೇಶವ್ ಒಬ್ಬ ಸುಂದರ, ತೀಕ್ಷ್ಣ ಮತು ಬುದ್ಧಿವಂತ ವ್ಯಕ್ತಿಯಾಗಿದ್ದೂ, ನಿಜವಾದ ಪ್ರೀತಿಯಲ್ಲಿ ನಂಬಿಕೆಯಿಲ್ಲದ ಒಬ್ಬ ಭಗ್ನ ಪ್ರೇಮಿ. ಆದರೆ ಒಂದು ರೀತಿಯ ಸ್ತ್ರೀಲೋಲತನ, ಆಂಗ್ಲ ಸಂಸ್ಕೃತಿಯಲ್ಲಿ ಕಾಣುವ ಹುಕ್‌ ಅಪ್ ಮತ್ತು ಸ್ಲೀಪ್‍ ಓವರ್‍ ನಂತಹ ಸಂಸ್ಕೃತಿಯ ಪರಿಪಾಲಕ. ಕೆಲಸದ ವಿಷಯಕ್ಕೆ ಬಂದರೆ ಬಹಳ ನಿಷ್ಟಾವಂತ, ಬಹಳ ಶ್ರದ್ಧೆಯಿಂದ ಕೆಲಸ ಮಾಡುವ ಶ್ರಮಜೀವಿ. ಆದರೇಕೋ ಇವನಿಗೆ ‘ಸೈಬರ್ ಸೆಕ್ಯೂರಿಟಿ ಕಂಪೆನಿ’ಯ ಮುಖ್ಯಸ್ಥನಾದ ಜಾಕೋಬ್ ಮೇಲೇ ಕೋಪ, ಅಸಮಾಧಾನ ಮತ್ತು ಅವನ ಕೈ ಕೆಳಗೆ ಕೆಲಸ ಮಾಡಲು ನಿರಾಸಕ್ತಿ. ಮೊದಲೇ ತಿಳಿಸಿದಂತೆ, ಕೇಶವ್ ಮತ್ತು ಸೌರಬ್ ಇಬ್ಬರೂ ಒಳ್ಳೆಯ ಗೆಳೆಯರೇನೋ ನಿಜ. ಆದರೆ, ಈ ಇಬ್ಬರು ಕಥಾನಾಯಕರ ನಡುವಿನ ಸ್ನೇಹ, ‘ಎ ಗರ್ಲ್ ಇನ್ ರೂಂ ನಂಬರ್ 105’ ಕಾದಂಬರಿಯಲ್ಲಿದ್ದಂತೆ ಈ ಕಾದಂಬರಿಯಲ್ಲಿ ಗೋಚರವಾದಂತೆ ಕಂಡುಬರುವುದಿಲ್ಲ. ಪರಸ್ಪರ ಈ ಇಬ್ಬರ ಇಷ್ಟ-ಕಷ್ಟಗಳ ಹಾಗೂ ಕೆಲವು ವೈಯಕ್ತಿಕ ಜೀವನದಲ್ಲಾದ ಬದಲಾವಣೆಗಳ ಬಿಕ್ಕಟ್ಟಿನಿಂದಾಗಿ, ಈ ಇಬ್ಬರೂ ಪರಸ್ಪರ ಮೌನಿಗಳಾಗಿದ್ದೂ, ಇಬ್ಬರ ನಡುವೆಯೂ ತಿರಸ್ಕಾರ ಮನೋಭಾವನೆ ಮೂಡಿಬರುತ್ತದೆ. ಆದರೆ, ಕಥೆ ಮುಂದುವರೆದಂತೆ, ಈ ಹುಸಿ ಮೌನ ಹಾಗೂ ಮುನಿಸು ಕಡಿಮೆಯಾಗಿ ತಮ್ಮಿಬ್ಬರ ಮೌನವ್ರತಕ್ಕೆ ತಿಲಾಂಜಲಿಯಿಡುತ್ತಾರೆ.

ಕತೆ ಮುಂದುವರೆದಂತೆ ಇವರಿಬ್ಬರ ವೈಮಸ್ಸಿಗೆ ನಿಜವಾದ ಕಾರಣವೇನೆಂದು ತಿಳಿಯುತ್ತದೆ. ಕಾರಣವಿಷ್ಟೇ, ಕಥಾನಾಯಕ ಸೌರಬ್‍ ಗೆ ಪ್ರಖ್ಯಾತ ಪೋರ್ಷೆ ಕಾರಿನ ವ್ಯಾಪಾರಿ, ಉದ್ಯಮಿಯಾದ ರಮೇಶ್ ಮಲ್ಹೋತ್ರಾನ ಏಕೈಕ ಪುತ್ರಿಯಾದ ಪ್ರೇರಣ ಮಲ್ಹೋತ್ರಾ ಮೇಲೆ ಪ್ರೇಮಾಂಕುರವಾಗಿ, ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ನಿಶ್ಚಿತಾರ್ಥವೂ ಆಗಿ, ಒಂದು ‘ಅರೆಂಜ್ಡ್ ಮ್ಯಾರೇಜ್’ಗೆ ಬೇಕಾದ ಎಲ್ಲಾ ಸಿದ್ಧತೆಗಳೂ ನಡೆದಿರುತ್ತದೆ. ಈ ಸಮಯದಲ್ಲಿ ಕೇಶವ್ ಪ್ರೇರಣಾಳ ದಪ್ಪನೆಯ ಶರೀರದ ಬಗ್ಗೆ ‘ಅವಳೊಂದು ಕೊಬ್ಬಿದ ಹಸು’ ಎಂದು ವ್ಯಂಗ್ಯವಾಡಿದ ಹಾಗೂ ಗೇಲಿ ಮಾಡಿದ ಕಾರಣಕ್ಕಾಗಿ ಸೌರಬ್ ಕೋಪಿತಗೊಳ್ಳತ್ತಾನೆ. ಉದ್ಯಮಿ ರಮೇಶ್ ಅಂದರೆ ಪ್ರೇರಣಾಳ ತಂದೆ ತುಂಬಾ ಭಾವುಕ ಮನುಷ್ಯ. ಕುಟುಂಬದ ಘನತೆ- ಗೌರವಕ್ಕಾಗಿ, ಕುಟುಂಬದ ಏಳಿಗೆಗಾಗಿ ಕಷ್ಟಪಟ್ಟು ದುಡಿಯುತ್ತಿರುವ ಶ್ರಮಜೀವಿ. ಇವರು ತಮ್ಮ ಇಡೀ ಕುಟುಂಬದ ಜೊತೆ ಅಂದರೆ, ತನ್ನ ತಾಯಿ, ಪತ್ನಿ ನೀಲಂ, ಅವರ ಇಬ್ಬರು ಮಕ್ಕಳು, ಸಹೋದರ ಬಿಂದು, ಮತ್ತೊಬ್ಬ ಅಮೇರಿಕಾದಲ್ಲಿ ನೆಲೆಸಿರುವ ಸಹೋದರಿಯ ಮಗಳಾದ ಅಂಜಲಿ ಹಾಗೂ ತಮ್ಮ ನಿಷ್ಪ್ರಯೋಜಕನೂ, ಸಂಗೀತ ಪ್ರಿಯನೂ, ಸದಾ ಏಕಾಂತ ಹಾಗೂ ಸ್ವತಂತ್ರ ಜೀವಿಯಂತೆ ಅಲೆದಾಡುವ ಮುಖ್ಯವಾಗಿ ಮದ್ಯವ್ಯಸನಿ ಅಂದರೆ ಡ್ರಗ್ ಅಡಿಕ್ಟೆಡ್ ಸಹೋದರನಾದ ಆದಿತ್ಯ ಮಲ್ಹೋತ್ರಾ ನೊಂದಿಗೆ, ದೆಹಲಿಯ ಒಂದು ಐಶಾರಾಮಿ ಮೂರಂತಸ್ತಿನ ಮನೆಯಲ್ಲಿ ವಾಸಿಸುತ್ತಿರುತ್ತಾನೆ. ರಮೇಶ್ ಮಲ್ಹೋತ್ರಾಗೆ ಅವನ ಕುಟುಂಬವೇ ಅವನ ಪ್ರಪಂಚವಾಗಿರುತ್ತದೆ ಮತ್ತು ಪ್ರೇರಣ ಅವನ ಹೆಮ್ಮೆಯ ಮಗಳಾಗಿರುತ್ತಾಳೆ.

ಸೌರಬ್ ಮತ್ತು ಪ್ರೇರಣ ಇಲ್ಲಿ ಒಂದು ರೀತಿಯ ಪ್ರಣಯ ಪಕ್ಷಿಗಳಾಗಿ ಹೊರಹೊಮ್ಮಿದ್ದಾರೆ. ಇವರಿಬ್ಬರೂ ದೈಹಿಕವಾಗಿ ಸದೃಢ ಮೈಕಟ್ಟು ಹೊಂದಿದವರಂತೆಯೂ ಹಾಗೂ ಒಂದು ರೀತಿಯ ತಿಂಡಿಪೋತರಂತೆಯೂ ನಿರೂಪಿಸಲ್ಪಟ್ಟಿದ್ದಾರಾದರೂ, ಒಂದು ಅಗಾಧ ಮತ್ತು ಪರಿಶುದ್ಧ ಪ್ರೇಮ ಇವರದ್ದಾಗಿದ್ದೂ, ಯಾವ ಐತಿಹಾಸಿಕ ಪ್ರೇಮಿಗಳಿಗಿಂತಲೂ ಕಡಿಮೆಯಿಲ್ಲದ ಪ್ರೀತಿ ಇವರಲ್ಲಿ ತುಂಬಿತ್ತು. ಇದೊಂದು ರೀತಿಯ ಮುದ್ದಾದ ಜೋಡಿ ‘ಅರೆಂಜ್ಡ್ ಇನ್ ಲವ್, ಅರೆಂಜ್ಡ್ ಇನ್ ಮ್ಯಾರೇಜ್’ ಎನ್ನುವಂತೆ. ಈ ಇಬ್ಬರು ಒಂದು ವಿಧವಾದ ಹುಚ್ಚು ಪ್ರೇಮಿಗಳಾಗಿದ್ದೂ, ಒಬ್ಬರನ್ನೊಬ್ಬರು ಪ್ರೀತಿಯಿಂದ ಸಿಹಿ ತಿನಿಸುಗಳ ಹೆಸರಿಟ್ಟು ‘ಗೋಲು, ರಸಗುಲ್ಲಾ, ಜಿಲೇಬಿ’ ಎಂತೆಲ್ಲಾ ಕರೆದುಕೊಳ್ಳುತ್ತಿದ್ದರು. ಹೀಗಿರುವಾಗ, ತನ್ನ ಪ್ರಿಯಕರನ ಶ್ರೇಯಸ್ಸಿಗಾಗಿ ಪ್ರೇರಣಾ ಎಲ್ಲಾ ವಿವಾಹಿತ ಮಹಿಳೆಯರಂತೆ, ಮದುವೆಗೂ ಮುನ್ನ ತನ್ನ ಭಾವೀ ಪತಿಗಾಗಿ ‘ಕರವಾ ಚೌತಿ’ ವ್ರತವನ್ನು ಕೈಗೊಳ್ಳುತ್ತಾಳೆ. ಅಲ್ಲದೇ ತನ್ನ ಪ್ರಿಯಕರನ ಬರುವಿಕೆಗಾಗಿ ಉಪವಾಸವಿದ್ದರೂ ಹಸಿವನ್ನು ಮರೆತು, ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು, ತನ್ನ ಉಪವಾಸವನ್ನು ಮುರಿಯಲು ಸಹಕರಿಸಲು, ತನ್ನ ಮೂರಂತಸ್ತಿನ ಮಹಡಿ ಮನೆಯ ತಾರಸಿಗೆ ಬರುವಂತೆ ತನ್ನ ಪ್ರಿಯಕರ ಸೌರಬ್‍ ಗೆ ತಿಳಿಸಿರುತ್ತಾಳೆ. ಗಗನದ ಚಂದಿರನೊಟ್ಟಿಗೆ ತನ್ನ ಬಾಳ ಚಂದಿರನ ಆಗಮನದ ನಿರೀಕ್ಷೆಯಲ್ಲಿದ್ದ ಅವಳು, ಹಸಿವಲ್ಲೂ ಸಿಹಿ ನಗು ಬೀರುತ್ತಾ, ಕ್ಷಣಾರ್ಧದಲ್ಲೇ ತನ್ನ ಭವಿಷ್ಯದಲ್ಲಾಗುವ ತೊಡಕಿನ ಬಗ್ಗೆ ಯಾವ ಕಲ್ಪನೆಯೂ ಇಲ್ಲದೇ ಕಾತುರದಿ ಬಕ ಪಕ್ಷಿಯಂತೆ ಸೌರಬ್‌ ಗಾಗಿ ಕಾಯುತ್ತಿರುತ್ತಾಳೆ. ಅವರಿಬ್ಬರ ನಡುವಿನ ಅಗಾಧ ಪ್ರೇಮದ ಮಧುರತೆಯನ್ನು ತಿಳಿಯಲು, ಈ ಒಂದು ಸಣ್ಣ ಮೊಬೈಲ್ ಸಂದೇಶದ ತುಣುಕನ್ನು ಓದಿದರೆ ಸಾಕು :

‘ನೀನೇ ನನ್ನ ಲಡ್ಡೂ’, ಪ್ರೇರಣಾಳ ಸಂದೇಶ.

‘ನನ್ನ ಜಿಲೇಬಿ’, ಸೌರಬ್ ನ ಉತ್ತರ.

‘ಬಿಟ್ರಾ?’, ಪ್ರೇರಣಾಳ ಈ ಸಂದೇಶ, ನನ್ನ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿತು.

‘ಹೌದು, ಆಟೋದಲ್ಲಿದ್ದೀನಿ, ನಾನು(ಸೌರಬ್) ಉತ್ತರಿಸಿದೆ.

‘ಬೇಗ ಬನ್ನಿ. ನನಗೆ ಹಸಿವಾಗ್ತಿದೆ.’ (ಪ್ರೇರಣಾಳ ಉತ್ತರ)

‘ಏನಾದರೂ ತಿನ್ನು, ನನ್ನ ಮಿಠಾಯಿ’, ನನ್ನ (ಸೌರಬ್) ಉತ್ತರ.

ಇತ್ತ ಸೌರಬ್ ತನ್ನ ಪ್ರೇಯಸಿಯನ್ನು ಕಣ್ತುಂಬಿಕೊಂಡು, ಅವಳ ವ್ರತವನ್ನು ಪೂರ್ಣಗೊಳಿಸುವ ಸಲುವಾಗಿ ಪ್ರೇರಣಾಳ ಸಲಹೆಯಂತೆ ಹಿಂದಿನ ಗೇಟ್‍ ನಿಂದ ಪ್ರವೇಶಿಸಿ, ಟೆರೇಸ್ ತಲುಪಿದಾಗ ಪ್ರೇರಣ ಎಲ್ಲಿಯೂ ಕಾಣಿಸುವುದಿಲ್ಲ. ‘ಪ್ರೇರಣಾ, ಪ್ರೇರಣಾ, ಪ್ರೇರಣಾ….!’ ಎಂದು ಎಷ್ಟೇ ಕಿರುಚಿದರೂ ಅವಳಿಂದ ಉತ್ತರನೂ ಬರುವುದಿಲ್ಲ. ಅಳತೆ ಮೀರಿದಷ್ಟು, ತಾನೆಂದೂ ನಿರೀಕ್ಷಿಸಿರದಷ್ಟು ಅನಿರೀಕ್ಷಿತ ಆಘಾತ ಅವನನ್ನು ಆವರಿಸುತ್ತದೆ. ಹೀಗೆ ರೊಮಾಂಚನಕಾರಿಯಾದ ಇವರಿಬ್ಬರ ಪ್ರೇಮಕಥೆ, ಪ್ರೇರಣಾಳ ಅನಿರೀಕ್ಷಿತ ಸಾವಿನೊಂದಿಗೆ ಆಘಾತಕಾರಿ ತಿರುವನ್ನು ಪಡೆದುಕೊಳ್ಳುತ್ತದೆ. ಈ ಘಟನೆಗೆ ಸಾಕ್ಷಿಯಾದವರಿಗೆಲ್ಲಾ ಇದೊಂದು ಆಕಸ್ಮಿಕ ಘಟನೆ, ಪ್ರೇರಣಾಳ ಉಪವಾಸ ವ್ರತದ ಬಳಲಿಕೆಯಿಂದಾದ ಘಟನೆಯಾಗಿ ಕಾಣುತ್ತದೆ. ಆಶ್ಚರ್ಯವೆಂಬಂತೆ ಅವಳ ಮರಣೋತ್ತರ ವರದಿಗಳೂ ಸಹ ಇದನ್ನು ಒಂದು ಆಕಸ್ಮಿಕ ಘಟನೆಯೆಂದೇ ನಿರೂಪಿಸಿರುತ್ತದೆ. ಆದರೆ, ಸ್ವತಃ ಪತ್ತೇದಾರಿಗಳಾದ ಸೌರಬ್ ಮತ್ತು ಕೇಶವ್‍ಗೆ…! ಹೌದು, ಕಥಾಹಂದರ ತಿರುವು ಪಡೆಯುವುದು ಇಲ್ಲೇ. ಪ್ರೇರಣಾಳ ಸಾವು ಕೇಶವ್ ಮತ್ತು ಸೌರಬ್‍ ರಲ್ಲಿ ಅನೇಕ ಅನುಮಾನಗಳನ್ನು ಹುಟ್ಟುಹಾಕುತ್ತದೆ, ಇದು ಕೇವಲ ಆಕಸ್ಮಿಕ ಸಾವಲ್ಲ, ಕೊಲೆ ಎಂಬ ಗುಮಾನಿಯಿಂದ, ಇಬ್ಬರೂ ಪ್ರೇರಣಾಳ ಕೊಲೆಯ ರಹಸ್ಯ ಬೇಧಿಸಲು ಪಣತೊಡುತ್ತಾರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಕೇಶವ್ ಮತ್ತು ಸೌರಬ್ ನಡುವಿನ ಸ್ನೇಹ ಮತ್ತೆ ಚಿಗುರೊಡೆಯುತ್ತದೆ.

ಪ್ರೇರಣಾಳ ನಿಧನದ ನಂತರ ಕಾನೂನಿನ ರಿವಾಜಿನಂತೆ ತನಿಖಾಧಿಕಾರಿಯಾದ ವಿಜೇಂದ್ರ ಸಿಂಗ್ ತನಿಖೆಯನ್ನು ನಡೆಸುತ್ತಿರುತ್ತಾರೆ. ಈ ಸನ್ನಿವೇಶದಲ್ಲಿ ಲೇಖಕರು ಈ ಕಥೆಗೆ, ‘ಎ ಗರ್ಲ್ ಇನ್ ರೂಂ ನಂಬರ್ 105’ ಕತೆಯ ಸ್ಪರ್ಷ ನೀಡುತ್ತಾ, ಅಲ್ಲಿ ಹೇಗೆ ಕೇಶವ್ ಮತ್ತು ಸೌರಬ್ ಇಬ್ಬರೂ ಕೊಲೆ ಕೇಸೊಂದನ್ನು ಬಗೆಹರಿಸಲು ಎಸಿಪಿ ರಾಣಾಗೆ ನೆರವಾಗಿದ್ದರು ಎಂಬುದನ್ನು ಉಲ್ಲೇಖಿಸುತ್ತಾರೆ. ಇದೇ ಸನ್ನಿವೇಶ ಪ್ರಸ್ತುತ ‘ಒನ್ ಅರೇಂಜ್ಡ್ ಮರ್ಡರ್’ ಕಾದಂಬರಿಯಲ್ಲೂ ಮುಂದುವರೆದು, ಈ ಇಬ್ಬರೂ ಪತ್ತೇದಾರಿಗಳು ಪ್ರೇರಣಾ ಸಾವಿಗೆ ನ್ಯಾಯ ದೊರಕಿಸಿಕೊಡುವ ಸಲುವಾಗಿ ತನಿಖಾ ಕಾರ್ಯದಲ್ಲಿ, ತನಿಖಾಧಿಕಾರಿಯಾದ ವಿಜೇಂದ್ರ ಸಿಂಗ್‍ ಗೆ ನೆರವಾಗುತ್ತಾರೆ. ತನಿಖಾ ಸಮಯದಲ್ಲಿ ಕೇಶವ್‍ ಗೆ ಪ್ರೇರಣಾಳ ಸಹೋದರ ಸಂಬಂಧಿ ಅಂಜಲಿಯ ಪರಿಚಯವಾಗುತ್ತದೆ.

ಅಂಜಲಿ ಒಬ್ಬ ಇಂಡೋ-ಅಮೇರಿಕನ್ ಹುಡುಗಿಯಾಗಿಯೂ, ಚಾಣಾಕ್ಷ, ಸ್ವಾತಂತ್ರ್ಯ ಬಯಸುವ ಆಧುನಿಕ ಮಹಿಳೆಯಾಗಿದ್ದೂ, ವೃತ್ತಿಪರ ಪತ್ರಕರ್ತೆಯಾಗಿರುತ್ತಾಳೆ. ಇವಳೊಬ್ಬ ಭಗ್ನಪ್ರೇಮಿಯಾಗಿದ್ದೂ, ಕುಟುಂಬದವರನ್ನು ಭೇಟಿಮಾಡಲು ಭಾರತಕ್ಕೆ ಬಂದು ಮಲ್ಹೋತ್ರಾ ಕುಟುಂಬದಲ್ಲಿ ತಾನೂ ಒಬ್ಬಳಾಗಿರುತ್ತಾಳೆ. ಪ್ರೇರಣಾಳ ಸಾವಿನ ನಂತರ ಸೌರಬ್ ಮತ್ತು ಕೇಶವ್‍ ಗೆ ಮಲ್ಹೋತ್ರಾ ಕುಟುಂಬದ ಎಲ್ಲಾ ಬೆಚ್ಚಿಬೀಳಿಸುವ ರಹಸ್ಯಗಳನ್ನು ಬಿಚ್ಚಿಟ್ಟವಳು ಇವಳೇ. ಪ್ರೇರಣಾಳ ಸಾವಿನ ತನಿಖೆಯ ಜೊತೆಯಲ್ಲೇ, ಅಂಜಲಿ ಮತ್ತು ಕೇಶವ್ ನಡುವೆ ಒಂದು ರೀತಿಯ ಮೋಹಕ ಆಕರ್ಷಣೆ ಮೊಳಕೆಯೊಡೆದು, ಆ ಆಕರ್ಷಣೆ ಪ್ರೀತಿಗೆ ತಿರುಗುತ್ತದೆ. ಇತ್ತ ಕೇಶವ್‍ ನ ವ್ಯಕ್ತಿತ್ವದ ಬಗ್ಗೆ ಇಂಚಿಂಚೂ ಅರಿತಿದ್ದ ಸೌರಬ್ ಇವನಿಗೆ ಪದೇಪದೆ ‘ನನ್ನ ಕುಟುಂಬದೊಂದಿಗೆ ಆಟವಾಡಬೇಡ’, ‘ಅಂಜಲಿ ಮುಗ್ಧ ಹುಡುಗಿ, ಸಂಪ್ರದಾಯಸ್ಥ ಕುಟುಂಬದವಳು, ಎಂದೆಲ್ಲಾ ಸೂಚನೆಗಳನ್ನು ಕೊಡುತ್ತಿರುತ್ತಾನೆ. ಪಾಪ ಅವನಿಗೇನು ಗೊತ್ತು ‘ಯಾವ ಹುತ್ತದಲ್ಲಿ ಯಾವ ಹಾವಿರುತ್ತೋ!’

ಈ ಇಬ್ಬರ ಇಷ್ಟ-ಕಷ್ಟಗಳ ಹಾಗೂ ಕೆಲವು ವೈಯಕ್ತಿಕ ಜೀವನದಲ್ಲಾದ ಬದಲಾವಣೆಗಳ ಬಿಕ್ಕಟ್ಟಿನಿಂದಾಗಿ, ಈ ಇಬ್ಬರೂ ಪರಸ್ಪರ ಮೌನಿಗಳಾಗಿದ್ದೂ, ಇಬ್ಬರ ನಡುವೆಯೂ ತಿರಸ್ಕಾರ ಮನೋಭಾವನೆ ಮೂಡಿಬರುತ್ತದೆ.

ಹೀಗೆ, ಪ್ರೀತಿಯ ಸಲ್ಲಾಪದಿಂದ ಪ್ರಾರಂಭವಾದ ಕಥೆ- ಪ್ರೇರಣಾಳ ನಿಗೂಢ ಸಾವಿನೊಂದಿಗೆ ಮುಂದುವರೆದು, ಪ್ರೇರಣಾಳ ಚಿಕ್ಕಪ್ಪ (ಸೋದರಮಾವ!)ನ ಅಂದರೆ ಆದಿತ್ಯನ ಆಘಾತಕಾರಿ ಸಾವಿನೊಂದಿಗೆ ಹೊಸ ತಿರುವು ಪಡೆದು ಮತ್ತಷ್ಟು ಜಟಿಲವಾಗುತ್ತದೆ. ಪ್ರೇರಣಾಳ ಕುಟುಂಬದಲ್ಲಿ ನಿಜಕ್ಕೂ ನಡೆದ್ದಾದರೂ ಏನು? ಸಾವಾ? ಆತ್ಮಹತ್ಯೆಯಾ? ಅಥವಾ ಕೊಲೆಯಾ?. ಆತ್ಮಹತ್ಯೆಯಾದರೆ ಅದಕ್ಕೆ ಬಲವಾದ ಕಾರಣವಾದರೂ ಏನು? ಹೋಗಲಿ, ಕೊಲೆ ಎಂದಾದರೆ ಇದ್ದ ಕೆಲವೇ ಕುಟುಂಬಸ್ಥರಲ್ಲಿ ಯಾರನ್ನು ಅಂತ ಅನುಮಾನಿಸೋದು! ಅದರಲ್ಲೂ ಇಂತಹ ಒಗ್ಗಟ್ಟಿನಿಂದ ಕೂಡಿದ ಅವಿಭಕ್ತ ಕುಟುಂಬದಲ್ಲಿ! ಅಸಾಧ್ಯ… ಸೌರಬ್ ಮತ್ತು ಕೇಶವ್‍ ಗೆ ಇದೊಂದು ಜಟಿಲ ಸಮಸ್ಯೆಯೇ ಸರಿ.

ಕೇಶವ್ ಮತ್ತು ಸೌರಬ್ ಪ್ರೇರಣಾಳ ಸಾವಿನ ನಂತರ ಮಲ್ಹೋತ್ರಾ ಕುಟುಂಬಕ್ಕೆ ಹೊರಗಿನವರಾಗಿಯೇ ಉಳಿದ ಕಾರಣ, ಪ್ರೇರಣಾಳ ಸಾವಿನ ರಹಸ್ಯ ಬೇದಿಸಲು ಕಷ್ಟವಾಗತೊಡಗುತ್ತದೆ. ಆದರೂ, ಹೇಗಾದರೂ ಸರಿಯೇ, ಪ್ರೇರಣಾ ಸಾವಿಗೆ ನ್ಯಾಯ ದೊರಕಿಸಿಯೇ ತೀರುತ್ತೇನೆಂಬ ಸೌರಬ್‍ ನ ಹಠ ಒಂದು ಕಡೆಯಾದರೆ, ಎಷ್ಟೇ ಕಷ್ಟ ಬಂದರೂ ಸರಿಯೇ, ನನ್ನ ಸ್ನೇಹಿತನಿಗಾಗಿ ನಾನೇನೂ ಮಾಡಲು ಸಿದ್ಧ ಎನ್ನುವ ಕೇಶವ್ ಮತ್ತೊಂದು ಕಡೆ. ಕಥೆಯ ನಡುವೆ ಅಲ್ಲಲ್ಲಿ ತಮಾಶೆ, ವ್ಯಂಗ್ಯ, ಉಪಕತೆಗಳು ಹಾಗೂ ಕೇಶವ್-ಅಂಜಲಿಯ ನಡುವಿನ ಪ್ರೀತಿಯ ಒಡನಾಟ ಇವೆಲ್ಲವೂ ಕತೆಗೆ ಮತ್ತಷ್ಟು ಮೆರಗು ನೀಡಿದ್ದೂ, ಚೇತನ್ ಭಗತ್‍ ರ ಓದುಗರನ್ನು ಕತೆಯಲ್ಲಿ ಮಗ್ನರಾಗಿರುವಂತೆ ಮಾಡುವ, ಓದುಗರ ಗಮನವನ್ನು ಕೇಂದ್ರೀಕರಿಸುವ ಕ್ರಿಯಾಶೀಲ ಪ್ರಯತ್ನವನ್ನು ಮೆಚ್ಚಲೇಬೇಕು. ಕಥಾವಸ್ತುವು ಸಂಕೀರ್ಣವಾಗಿದ್ದೂ, ಕುತೂಹಲಯುಕ್ತವಾಗಿದೆಯಲ್ಲದೇ, ಅದರಲ್ಲಿ ಯಾವುದೇ ವಿಚಲನದ ಸುಳಿವಿಲ್ಲ.

ಪುಸ್ತಕದ ಮೊದಲರ್ಧ ಭಾಗಕ್ಕಿಂತ ದ್ವಿತಿಯಾರ್ಧ ಭಾಗವು ಅತ್ಯಂತ ಕುತೂಹಲಕಾರಿಯಾಗಿದ್ದೂ ರೋಮಾಂಚಕ, ರಹಸ್ಯಮಯ ತಿರುವುಗಳನ್ನು ಹೊಂದಿದೆ. ಪ್ರೇರಣಾಳ ಹಂತಕರ ಬೆನ್ನಟ್ಟಿ ಹೊರಟ ಕೇಶವ್ ಮತ್ತು ಸೌರಬ್, ಉದ್ದೇಶ ಪೂರ್ವಕವಾಗಿಯೇ ಪ್ರೇರಣಾಳ ಮನೆಯಲ್ಲಿ ಕೆಲವು ದಿನ ಅತಿಥಿಗಳಾಗಿ ಉಳಿದು, ಕೊಲೆಯ ಜಾಡನ್ನು ಹುಡುಕಲು ಹರಸಾಹಸ ಪಡುತ್ತಾರೆ. ‘ಇದ್ದ ಮೂವರಲ್ಲಿ ಕದ್ದವರು ಯಾರು?’ ಎಂಬ ಗಾದೆ ಮಾತಿನಂತೆ, ಇದ್ದ ಕೆಲವೇ ಮಂದಿ ಕಟುಂಬಸ್ಥರ ನಡುವೆ ಕೊಲೆಗಡುಕರಾರು? ಎಂಬ ಪ್ರಶ್ನೆ ಹುಟ್ಟುತ್ತದೆ.

ಸಾಲಗಾರನಾಗಿದ್ದ ಪ್ರೇರಣಾಳ ತಂದೆ ಮಲ್ಹೋತ್ರಾನಾ? ಪ್ರೇರಣಾಳ ಸಾವಿನ ದಿನ ಅವಳನ್ನು ಭೇಟಿ ಮಾಡಲು ಬಂದ ಅವಳ ಹಳೇ ಪ್ರೇಮಿ ನೀರಜ್‍ ನ? ಅಥವಾ ಹಣ ಮತ್ತು ಅಧಿಕಾರದ ಆಸೆಗಾಗಿ ಪ್ರೇರಣಾ ನಡೆಸುತ್ತಿದ್ದ ‘ಈಟೋಸ್ʼ ಕಂಪೆನಿಯ ಪಾಲುದಾರಳಾದ ನಮ್ರತಾನಾ? ಅಥವಾ ರಮೇಶ್ ಮಲ್ಹೋತ್ರನ ಕಾರ್ ಡ್ರೈವರ್ ಜೊತೆಗಿನ ಅನೈತಿಕ ಸಂಬಂಧದ ಬಗ್ಗೆ ತಿಳಿದಿದ್ದ ಪ್ರೇರಣಾಳು, ಎಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿಬಿಡುತ್ತಾಳೋ ಎಂಬ ಭಯದಿಂದ ಮನೆ ಕೆಲಸದವಳಾದ ಬಿಂದು ಕೈವಾಡವಿರಬಹುದಾ! ಅಥವಾ ಈಗಾಗಲೇ ಪ್ರೇರಣಾಳನ್ನು ಕೊಂದ ಕೊಲೆಗಾರರ ಪಟ್ಟಿಯಲ್ಲಿ ಅಗ್ರಸ್ಥಾನವನ್ನಲಂಕರಿಸಿರುವ, ಸುಳಿವಿನ ಸಮೇತ ಬಲೆಗೆ ಬಿದ್ದ ಮಾದಕ ವ್ಯಸನಿ ಆದಿತ್ಯನ?

ಹೀಗೇ ಅನುಮಾನಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲಾ ಅನುಮಾನಗಳು, ಅಸಹಾಯಕತೆ, ಆಶ್ಚರ್ಯ ಹಾಗೂ ಆಘಾತಗಳ ನಡುವೆ ಕೇಶವ್ ಮತ್ತು ಸೌರಬ್, ಪ್ರೇರಣಾಳ ಸಾವಿಗೆ ನ್ಯಾಯ ಒದಗಿಸುತ್ತಾರಾ? ಒದಗಿಸಿದ್ದೇ ಆದರೆ ಕೊಲೆಗಾರ ಯಾರು? ಎಂಬ ಪ್ರಶ್ನೆಗಳಿಗೆಲ್ಲಾ ಕಾದಂಬರಿಯ ಅಂತ್ಯದಲ್ಲಿ ನಿರೀಕ್ಷಿಸಿಲಾರದ ಉತ್ತರ ದೊರೆಯುತ್ತದೆ. ಸೌರಬ್ ಮತ್ತು ಪ್ರೇರಣಾಳ ಬದುಕಲ್ಲಿ ಈ ಘಟನೆ ನಡೆಯದಿದ್ದರೆ ಅವರದ್ದು ನಿಜಕ್ಕೂ ಒಂದು ವ್ಯವಸ್ಥಿತ ಮದುವೆ ಅಂದರೆ ‘ಒನ್ ಅರೆಂಜ್ಡ್ ಮ್ಯಾರೇಜ್’ ಆಗಿರುತ್ತಿತ್ತು. ಆದರೆ, ಇಲ್ಲಿ ವಿಧಿಯಾಟವೇ ಬೇರೆಯಾಗಿ, ಈ ಇಬ್ಬರು ಪ್ರೇಮಿಗಳ ಕಥೆ ‘ಒಂದು ವ್ಯವಸ್ಥಿತ ಕೊಲೆ’ ಅಂದರೆ ‘ಒನ್ ಅರೆಂಜ್ಡ್ ಮರ್ಡರ್’ ರೂಪ ಪಡೆದು ಮುಕ್ತಾಯಗೊಳ್ಳುತ್ತದೆ. ಪ್ರೀತಿ ಎಂಬುದು ಎಷ್ಟು ಮಧುರವೋ, ಸತ್ಯವೂ ಸಹ ಅಷ್ಟೇ ಮಧುರವಾದದ್ದು. ಸತ್ಯಾನ್ವೇಷಣೆಗೆ ಇಂತಹದ್ದೇ ದಾರಿಯೆಂಬುದಿಲ್ಲ, ಬದಲಾಗಿ ಸತ್ಯದ ಮಾರ್ಗ ಯಾವಾಗಲೂ ತೆರೆದೇ ಇರುತ್ತದೆ ಎಂಬುದಕ್ಕೆ ಈ ಕಾದಂಬರಿ ಉದಾಹರಣೆಯಾಗಿದೆ.

‘ಒನ್ ಅರೆಂಜ್ಡ್ ಮರ್ದರ್’ ಕಾದಂಬರಿಯು ಒಂದು ರೀತಿಯ ಮಸಾಲಾ ಡಬ್ಬವಿದ್ದಂತೆ. ಇಲ್ಲಿ ಮಲ್ಹೋತ್ರಾ ಕುಟುಂಬವು ಡಬ್ಬವನ್ನು ಪ್ರತಿನಿಧಿಸಿದರೆ, ಕುಟುಂಬದಲ್ಲಿರುವ ಪ್ರತಿಯೊಬ್ಬ ಸದಸ್ಯರೂ ತಮ್ಮದೇ ಆದ ವಿಭಿನ್ನ ವ್ಯಕ್ತಿತ್ವದ ಘಮಲನ್ನು ಸೂಚಿಸುವ ಮಸಾಲೆಗಳಂತಿದ್ದಾರೆ. ಇಲ್ಲಿ ಪ್ರತಿಯೊಬ್ಬರ ಹಿಂದೆಯೂ ಒಂದೊಂದು ನಂಬಲಸಾಧ್ಯವಾದ ಗುಟ್ಟಿನ ಗೂಡೇ ಇದೆ. ಇಲ್ಲಿ ಹೊರಗಿನಿಂದ ನೋಡಿದರೆ ಎಲ್ಲವೂ ಇದೆ, ಪರಿಪೂರ್ಣ ಕುಟುಂಬ ಎನ್ನುವ ಫಲಕವಿದೆ. ಆದರೆ, ಅತೀ ಸೂಕ್ಷ್ಮವಾಗಿ ಗಮನಿಸಿದಾಗ, ಇಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ರಹಸ್ಯಗಳ ಮೂಟೆ ಹೊತ್ತಿದ್ದಾರೆಂದು ಅರಿವಿಗೆ ಬರುತ್ತದೆ. ಒಟ್ಟಾರೆಯಾಗಿ ಇಲ್ಲಿ ಹಾಸ್ಯ, ವ್ಯಂಗ್ಯ, ಕೊಲೆ, ಸಾಹಸ, ದ್ವೇಶ-ಅಸೂಯೆ, ಸ್ನೇಹ-ಪ್ರೀತಿಯ ನವಿರಾದ ಘಮಲೂ ಇದೆ. ಈ ಪುಸ್ತಕ ಬಹುಷಃ ಓದುಗರ ಮನಮುಟ್ಟಲು ಕಾರಣವೇನೆಂದರೆ :

ಮೊದಲನೆಯದಾಗಿ-ಕತೆಯ ನಿರೂಪಣಾ ಶೈಲಿ. ಕಾದಂಬರಿಯ ಪ್ರಾರಂಭದಲ್ಲಿ ಏಕವ್ಯಕ್ತಿ ನಿರೂಪಣಾ ಶೈಲಿಯನ್ನು ಹೊಂದಿದ್ದರೂ, ಕತೆಯ ಅಗತ್ಯತೆಗೆ ತಕ್ಕಂತೆ ನಿರೂಪಕರು ಬದಲಾಗುತ್ತಾರೆ. ಉದಾಹರಣೆಗೆ: ಕಾದಂಬರಿಯ ಪ್ರಾರಂಭದಲ್ಲಿ ಕೇಶವ್ ನಿರೂಪಕನಾಗಿ ಹೊರಹೊಮ್ಮಿದರೆ, ಕಾದಂಬರಿಯ ದ್ವಿತಿಯಾರ್ಧದ ನಿರೂಪಣೆ ಸೌರಬ್‍ ನದ್ದಾಗಿರುತ್ತದೆ. ಹಾಗೆಯೇ, ಪ್ರೇರಣಾಳ ಕೊಲೆಗೆ ಸಂಬಂಧಿಸಿದ ಪ್ರಾಥಮಿಕ ತನಿಖಾ ಸಮಯದಲ್ಲಿಯೂ ನಿರೂಪಕರು ಬದಲಾಗುತ್ತಾರೆ. ಏಕೆಂದರೆ, ಕೆಲವೊಮ್ಮೆ ಸತ್ಯಾನ್ವೇಷಣೆ ಮಾಡುವಾಗ, ನಾವು ವಿಭಿನ್ನ ಜನರ ಕತೆಯನ್ನು ಅವರವರ ಸ್ವಂತ ದೃಷ್ಟಿಕೋನದಿಂದಲೇ ಕೇಳಿ ಅಳೆಯಬೇಕಾಗುತ್ತದೆ.

ಎರಡನೆಯದಾಗಿ- ಪಾತ್ರವರ್ಗ. ಉಳಿದ ಇಂಗ್ಲೀಷ್ ಕಾದಂಬರಿಗಳಂತೆ ಇಲ್ಲಿ ಜನ(ಪಾತ್ರ)ಸಂಖ್ಯಾ ಒತ್ತಡವಿಲ್ಲ. ಬೆರಳೆಣಿಕೆಯಷ್ಟೇ ಪಾತ್ರಗಳಿದ್ದರೂ, ಪ್ರತೀ ಪಾತ್ರಕ್ಕೂ ತನ್ನದೇ ಆದ ಮೌಲ್ಯವಿದೆ. ಮೇಲುನೋಟಕ್ಕೆ ಸೌರಬ್ ಈ ಕಾದಂಬರಿಯ ನಾಯಕನಂತೆ ಭಾಸವಾದರೂ, ಇವನಷ್ಟೇ ಪ್ರಾಮುಖ್ಯತೆಯನ್ನು ಕೇಶವ್ ಪಾತ್ರಕ್ಕೂ ನೀಡಲಾಗಿದೆ. ಇಲ್ಲಿ ಸೌರಬ್ ಒಂದು ರೀತಿಯ ಅಧಿಕಾರಿಶಾಹಿತ್ವದ, ದರ್ಪದ, ನಿರ್ಲಕ್ಷ್ಯ ಸ್ವಭಾವದ ತಿಂಡಿಪೋತ ಸ್ವರೂಪದ ನಾಯಕನಾಗಿದ್ದೂ ಕೆಲವೊಮ್ಮೆ ನಗೆಪಾಟಲಿಗೆ ಗುರಿಯಾಗುತ್ತಾನೆ :

“ನೀವು ಸೌರಬ್‍ ನಂತಹ ತಿಂಡಿಪೋತನಿರುವಾಗ, ಆಹಾರದ ರುಚಿ ಮತ್ತು ಶುಚಿಯ ಬಗ್ಗೆ ಚಿಂತಿಸುವಹಾಗಿಲ್ಲ”.

ಇಡೀ ಕಾದಂಬರಿಯಾದ್ಯಂತ ಛಾಪು ಮೂಡಿಸಿರುವ ಮತ್ತೊಬ್ಬ ನಾಯಕನೇ ಕೇಶವ್. ಪ್ರಾರಂಭದಲ್ಲಿ ಇವನೊಬ್ಬ ಸೋಮಾರಿ, ಸ್ತ್ರೀವ್ಯಾಮೋಹಿ ಎನಿಸಿದರೂ, ಕಾದಂಬರಿಯ ದ್ವಿತಿಯಾರ್ಧದಲ್ಲಿ ಅಂಜಲಿಯ ಮೇಲೆ ಆಕರ್ಷಣೆ ಬೆಳೆದು, ಅಪ್ಪಟ ಪ್ರೇಮಿಯಾಗಿ ಹೊರಹೊಮ್ಮುತ್ತಾನೆ. ಇವನ ಚಾಲಾಕ್ಷತನ ಮತ್ತು ಜಾಣ್ಮೆ ಓದುಗರ ಮನಮುಟ್ಟುವಂತಿದೆ. ಇನ್ನು ಪ್ರೇರಣಾಳ ವಿಷಯಕ್ಕೆ ಬಂದರೆ ಆಕೆ ಒಬ್ಬ ಬುದ್ಧಿವಂತ, ಜವಾಬ್ದಾರಿಯುತ, ಶ್ರಮಜೀವಿಯಾಗಿಯೂ, ಕುಟುಂಬದ ಕಣ್ಮಣಿಯಾಗಿಯೂ ಹಾಗೂ ಸೌರಬ್‌ ನಂತೆ ಇವಳೂ ಸಹ ತಿನಿಸು ಪ್ರಿಯಳಾಗಿಯೂ ಕಂಡುಬರುತ್ತಾಳೆ. ರಮೇಶ್ ಮಲ್ಹೋತ್ರಾ ಒಬ್ಬ ಯಶಸ್ವೀ ಉದ್ಯಮಿಯಾಗಿಯೂ, ಕುಟುಂಬದ ಪಾಲಕ ಮತ್ತು ರಕ್ಷಕನ ಜವಾಬ್ದಾರಿಯನ್ನು ಹೊಂದಿದ್ದೂ, ಕುಟುಂಬದ ಮಾನ ರಕ್ಷಣೆಗಾಗಿ ಏನು ಬೇಕಾದರೂ ಮಾಡಬಲ್ಲ ವ್ಯಕ್ತಿಯಾಗಿದ್ದಾನೆ. ಉಳಿದಂತೆ ಮಿಕ್ಕೆಲ್ಲಾ ಪಾತ್ರಗಳೂ ತನ್ನದೇ ಆದ ನವಿರಾದ ಮೌಲ್ಯಗಳನ್ನು ಹೊಂದಿವೆ.

ಮೂರನೆಯದಾಗಿ- ರಹಸ್ಯಗಳು: ರಹಸ್ಯವೇ ಈ ಕಾದಂಬರಿಯ ಜೀವಾಳವಾಗಿದ್ದು, ಇಡೀ ಮಲ್ಹೋತ್ರಾ ಕುಟುಂಬವೇ ಒಂದು ರಹಸ್ಯ ತಾಣವಾಗಿದೆ. ಇಲ್ಲಿ ಬರುವ ಪ್ರತಿಯೊಂದು ಪಾತ್ರದ ಹಿಂದೆಯೂ ಒಂದೊಂದು ರಹಸ್ಯಾತ್ಮಕ ಕತೆಯಿದೆ. ಒಂದು ರಹಸ್ಯ ಬೇಧಿಸುವಷ್ಟರಲ್ಲಿ ಒನ್ನೊಂದು ರಹಸ್ಯ ತಲೆಯೆತ್ತಿ ನಿಂತಿರುತ್ತದೆ. ಅಲ್ಲಲ್ಲಿ ಸೂಕ್ಷ್ಮ ಸುಳಿವುಗಳನ್ನು ಕಂಡರೂ, ಈ ರಹಸ್ಯಭರಿತ ಕಾದಂಬರಿ ಓದಲು ಕುತೂಹಲಕಾರಿಯಾಗಿಯೂ, ಮನೋರಂಜನಾತ್ಮಕವಾಗಿಯೂ ಇದೆ.

ನಾಲ್ಕನೆಯದಾಗಿ-ಸಾಮಾಜಿಕ ನಿಲುವು. ಈ ಕಾದಂಬರಿಯನ್ನು ಓದುವಾಗ ಓದುಗರು ತಮಗರಿವಿಲ್ಲದಂತೆಯೇ ಈ ಕಾದಂಬರಿಯ ಮೂಲಕ ನೈಜ ಪ್ರಪಂಚಕ್ಕೆ ಕಾಲಿಡುತ್ತಾರೆ. ನಿಜ ಜೀವನದಲ್ಲಿ ನಡೆಯುವ ಅದ್ಧೂರಿ ಮದುವೆಯ ಛಾಯೆ ಇಲ್ಲೂ ಆವರಿಸಿದೆ. ವರದಕ್ಷಿಣಾ ಪದ್ಧತಿಯ ವಿರುದ್ಧದ ದನಿಯಿದೆ (ನಿಶ್ಚಿತಾರ್ಥದ ಸಮಯದಲ್ಲಿ ರಮೇಶ್ ಮಲ್ಹೋತ್ರಾ ಸೌರಬ್‍ ಗೆ, ವೋಕ್ಸ್‍ವ್ಯಾಗನ್ ಕಾರನ್ನು ವರದಕ್ಷಿಣೆಯ ರೂಪದಲ್ಲಿ ಕೊಡಲು ಹೋದಾಗ, ಸೌರಬ್ ಅದನ್ನು ನಿರಾಕರಿಸಿ ಕುಟುಂಬದ ಮೆಚ್ಚುಗೆಗೆ ಪಾತ್ರನಾಗುತ್ತಾನೆ), ಹಾಗೂ ಕುಟುಂಬ ರಕ್ಷಣೆ, ಪ್ರೀತಿ, ದ್ವೇಷ, ವ್ಯವಹಾರ, ನ್ಯಾಯ ಇತ್ಯಾದಿಗಳ ಬಗ್ಗೆಯೂ ಈ ಕಾದಂಬರಿಯಲ್ಲಿ ಉಲ್ಲೇಖವಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ‘ಒನ್ ಅರೆಂಜ್ಡ್ ಮರ್ಡರ್’ ಒಂದು ವಿಭಿನ್ನ ಶೈಲಿಯ, ರೋಮಾಂಚನಕಾರಿ ಕೃತಿಯಾಗಿದ್ದು ಮನೋರಂಜನಾತ್ಮಕವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕತೆಯ ಅಂತ್ಯ ಊಹೆಗೂ ಮೀರಿದಂತೆ ರೋಚಕವಾಗಿದ್ದು, ಎಣಿಸಲಾಗದ ಉತ್ತಮ ತಿರುವನ್ನು ಪಡೆಯುವುದರೊಂದಿಗೆ, ಪ್ರೇರಣಾಳ ಸಾವು ಆಕಸ್ಮಿಕವಲ್ಲ ಇದೊಂದು ಪೂರ್ವನಿಯೋಜಿತ ಕೊಲೆ: ‘ಒನ್ ಅರೆಂಜ್ಡ್ ಮರ್ಡರ್’ ಎಂದು ಸಾಬೀತಾಗಿ ಮುಕ್ತಾಯಗೊಳ್ಳುತ್ತದೆ.