ಅದೊಂದು ವೃತ್ತಿ ನಾಟಕ ತಂಡ. ದಿನನಿತ್ಯ ನಾಟಕ ನಡೆಯುತ್ತಲೇ ಇರುತ್ತದೆ ಮತ್ತು ನಡೆಯಲೇ ಬೇಕು. ಯಾಕೆಂದರೆ ಅದು ಹೊಟ್ಟೆಪಾಡಿನ ಕಾಯಕ. ನಾಟಕ ಮಂದಿಯೇನು ಪ್ರೇಮಕ್ಕೆ ಹೊರತೆ..? ಒಮ್ಮೆ ನಾಟಕ ನಡೆಯುತ್ತಿದೆ. ಅದು ರಾಮಾಯಣ ನಾಟಕ. ನಮಗೆ ಗೊತ್ತಿರುವ ರಾಮಾಯಣದಲ್ಲಿ ಸೀತೆಯನ್ನ ಅಪಹರಿಸಿಕೊಂಡು ಹೋಗುವವನು ರಾವಣ. ಆದರೆ ಆ ವೃತ್ತಿ ನಾಟಕ ತಂಡದಲ್ಲಿ ಆಂಜನೇಯನ ಪಾರ್ಟಿನವನಿಗೂ ಸೀತೆ ಪಾರ್ಟಿನಾಕೆಗೂ ಪ್ರೇಮ ಕುದುರಿದೆ. ರಾಮಾಯಣ ನಾಟಕ ನಡೆಯುತ್ತಿದ್ದ ಹೊತ್ತಿಗೆ ಆಂಜನೇಯ ಮತ್ತು ಸೀತೆ ಮಾಯ.
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ

 

ಗೆಳೆಯನ ಜೊತೆ ಹರಟುತ್ತಾ ಕೂತಿದ್ದೆ. ತೆಲಂಗಾಣದಿಂದ ಕಿರಿಯ ಮಿತ್ರ ಫೋನ್ ಮಾಡಿದ. ಆರಂಭದ ಉಭಯ ಕುಶಲೋಪರಿ ಸಾಂಪ್ರತವೆಲ್ಲ ಮುಗಿಯಿತು. ಅವನು ನನ್ನನ್ನ ವಿಚಾರಿಸಿಕೊಂಡ ಬಗೆ ಹೇಗಿತ್ತು ಅಂದರೆ ಕುಶಲೋಪರಿ ನೆಪಕ್ಕೆ ಮಾತ್ರ ಎಂಬಂತಿತ್ತು. ಅವನ ಮನಸ್ಸಿನಲ್ಲಿ ಏನೋ ಸುಳಿ ತಿರುಗುತ್ತಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು.

ಮಿತ್ರ ಕಡೆಗೂ ವಿಚಾರಕ್ಕೆ ಬಂದ. ‘ಬೆಂಗಳೂರಿನ ಸಿನಿಮಾ ಥಿಯೇಟರ್ ಗಳಲ್ಲಿ ಜನ ಫುಲ್ ತುಂಬ್ತಿದಾರಾ..? ಸೋಷಿಯಲ್ ಡಿಸ್ಟನ್ಸ್ ಮೇಂಟೇನ್ ಮಾಡ್ತಿದಾರೋ ಹೇಗೆ?’ ಅಂತ ಕೇಳಿದ. ‘ನನಗೆ ಗೊತ್ತಿಲ್ಲ ಮಾರಾಯ.. ಆ ಬಗ್ಗೆ ಮಾಹಿತಿ ಇಲ್ಲ.. ನಾನು ಹೋಗಿ ನೋಡಿಲ್ಲ’ ಅಂದೆ. ‘ಹೋಗಲಿ ಡ್ರಾಮಾ ಥಿಯೇಟರ್ ಗಳು ಹೇಗೆ? ಅಲ್ಲೂ ಡಿಸ್ಟನ್ಸಾ?’ ಅಂತ ಕೇಳಿದ. ‘ಕೆಲವು ಕಡೆ ಸ್ಟ್ರಿಕ್ಟಾಗಿ ಡಿಸ್ಟನ್ಸ್ ಮೇಂಟೇಂನ್ ಮಾಡ್ತಿದಾರಂತೆ. ಆದರೆ ಈಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ನಾಟಕ ಬೆಂಗಳೂರು’ ಉತ್ಸವ ಶುರುವಾಯ್ತು. ಅದರ ಮೊದಲ ದಿನದ ‘ಮೂಕಜ್ಜಿಯ ಕನಸುಗಳು’ ನಾಟಕಕ್ಕೆ ಹೋಗಿದ್ದೆ. ಜನ ಭರಪೂರ ತುಂಬಿದ್ದರು. ಅಲ್ಲಿ ಡಿಸ್ಟನ್ಸೇನೂ ಇರಲಿಲ್ಲ. ಮಾಸ್ಕ್ ಹಾಕ್ಕೊಂಡು ಕೂತಿದ್ದೆವು ಅಷ್ಟೇ’ ಅಂದೆ.

ಅವನು ಯೋಚನೆಗೆ ಬಿದದ್ದು ಅವನ ಮೌನದಿಂದ ಅರ್ಥವಾಯಿತು. ನಾನು ಅವನ ಮೌನಕ್ಕೆ ಭಂಗ ತರಬೇಕೆಂದು ಆಲೋಚಿಸಿ ‘ಬೆಂಗಳೂರಿಗೆ ಬರೋ ಯೋಚನೆ ಏನಾದರೂ ಇದ್ಯಾ..?’ ಎಂದು ವಿಚಾರಿಸಿದೆ.

ಅವನು ‘ಹೂ’ ಅಂದ. ಜೊತೆಗೆ ಕೊಂಚ ನಾಚಿಕೊಂಡ ಹಾಗೆ ಅನಿಸಿತು. ಇದ್ಯಾಕೆ ಹೀಗೆ ನಾಚಿಕೊಳ್ತಿದಾನೆ ಎಂದು ಚಿಂತಿಸಿದಾಗ ಕಾರಣ ಹೊಳೆಯಿತು.

ಕೆಲ ವಾರಗಳ ಹಿಂದೆ ಹರೆಯದ ಒಂದು ಹುಡುಗಿಯ ಬಗ್ಗೆ ಸೂಕ್ಷ್ಮವಾಗಿ ಹೇಳಿದ್ದ. ಆಕೆ ಬೆಂಗಳೂರಿನ ಹುಡುಗಿ. ‘ನನ್ನ ಕಡೆಗೆ ಒಲಿಯೊ ಸೂಚನೆ ಕಾಣ್ತಿದೆ..’ ಅಂತೇನೋ ಅವತ್ತೂ ನಾಚಿಕೊಂಡೇ ಹೇಳಿದ್ದದ್ದು ನೆನಪಿಗೆ ಬಂತು. ಈಗ ಮತ್ತೆ ರಾಗ ತೆಗೆದು ಥಿಯೇಟರ್ ನಲ್ಲಿ ಡಿಸ್ಟನ್ಸ್ ಮೇಟೇಂನ್ ಮಾಡ್ತಿದ್ದಾರಾ ಅಂತ ಕೇಳಬೇಕಾದರೆ ಏನು ಕಾರಣವಿದ್ದೀತು ಅಂತ ಅದರ ಸುತ್ತಮುತ್ತ ಯೋಚಿಸುವಾಗ ಫಕ್ಕನೆ ನೆನಪಾದದ್ದು ವ್ಯಾಲೆಂಟೈನ್ಸ್ ಡೇ. ಓ…. ಇದು ಕಾರಣ ಎಂದು ಅರ್ಥ ಮಾಡಿಕೊಂಡ ನಾನು ಇದನ್ನು ಅವನಿಗೆ ಸೂಕ್ಷ್ಮವಾಗಿ ರೇಗಿಸುವ ಧಾಟಿಯಲ್ಲಿ ಹೇಳಿ ‘ಹೌದಾ..?’ ಅಂತ ಕೇಳಿದೆ. ಅವನು ನಾಚಿಕೊಂಡ. ಅಲ್ಲಿಗೆ ನಾನು ಊಹಿಸಿದ್ದು ನಿಜ ಅಂತಾಯಿತಲ್ಲ.

ಇಷ್ಟಾದ ಮೇಲೆ ಮುಜುಗರ ಎಂಥದ್ದು? ನೇರ ಕೇಳಿದೆ- ‘ಈಗ ನೀನು ಸಿನಿಮಾ ಅಥವಾ ನಾಟಕ ನೋಡಬೇಕಾ..? ಅಥವಾ ಆಕೆ ಕೈ ಹಿಡಿದು ಕೂರಬೇಕಾ..?’

ಅದಕ್ಕೂ ಅವನು ನಾಚಿಕೊಂಡ.

ಪ್ರೇಮದಲ್ಲಿ ನಾಚಿಕೆ ಗೀಚಿಕೆ ಎಂಥದ್ದು? ಅವೆಲ್ಲ ಊರಾಚೆಗೆ ಅಂತೇನೋ ಮಾತು ಕೇಳಿದ್ದೆ. ಆಮೇಲೆ ಅವನಿಗೆ ಹೇಳಿದೆ- ‘ನೋಡು ಗುರುವೇ.. ಈ ಸಿನಿಮಾ ಥಿಯೇಟರಗಳನ್ನ ಬಿಟ್ಟಾಕು. ನಿಮ್ಮಿಬ್ಬರನ್ನ ಒಟ್ಟಿಗೆ ಕೂರೋಕೆ ಬಿಟ್ಟರೆ ಚೆಂದ. ಬಿಡದಿದ್ದರೆ ನಿರಾಶೆ ಆಗುತ್ತೆ. ಇನ್ನು ನಾಟಕದ ಥಿಯೇಟರ್ ಮತ್ತು ನಾಟಕ. ಸಿನಿಮಾದಲ್ಲಾದರೂ ಚೂರು ಹಸಿಬಿಸಿ ಪ್ರೇಮ ಇರುತ್ತೆ. ಬೆಂಗಳೂರಲ್ಲಿ ನಡೆಯೋ ನಾಟಕಗಳಲ್ಲಿ ಪ್ರೇಮಾನ ಹುಡುಕೋಕೆ ಆಗಲ್ಲ. ಒಂದು ಗುಂಪು ನಾಟಕಗಳಲ್ಲಿ ಸೀರಿಯಸ್ ಸ್ಟಫ್ ತುಂಬಬೇಕು ಅಂತ ತವಕಿಸ್ತಾನೇ ಇದೆ. ಮತ್ತೊಂದು ಗುಂಪು ಕಾಮಿಡಿ ನಾಟಕ ಮಾಡೋವ್ರ ಕಾಲೆಳೆಯೋಕೆ ಅಂತಲೇ ಮರೆಯಲ್ಲಿ ನಿಂತಿದ್ದಾರೆ. ನಿನ್ನ ಹುಡುಗೀನ ನಾಟಕಕ್ಕೆ ಕರಕೊಂಡು ಹೋದರೆ ಪ್ರೇಮದ ಭಾವ ಮರೆಯಾಗಿ ಎಕ್ಸ್ಟ್ರೀಮ್ ರಾಷನಲಿಸ್ಟ್ ಥಿಂಕಿಂಗ್ ಗೆ ಒಳಪಟ್ಟರೆ ನಿನ್ನ ಕಥೆ ಕಷ್ಟಕ್ಕೆ ತಿರುಗಿಕೊಳ್ಳುತ್ತೆ. ಇಷ್ಟಕ್ಕೂ ನೀನು ಪ್ರೇಮ ನಿವೇದಿಸಿಕೊಳ್ಳಬೇಕು ಅಂತಿರೊ ಹುಡುಗಿ ಹೇಗೆ? ಚೂರು ಇಂಟರಾಕ್ಟಿವ್ ಆಗಿದ್ದಾಳೋ ಹೇಗೆ..?’

‘ಅಯ್ಯೋ ಪಟಪಟಾಂತ ಮಾತಾಡ್ತಾಳೆ’ ಅಂದ ಅವನು. ಸರಿ ಮುಂದಕ್ಕೆ ನಿನ್ನ ಕಥೆ ಗೋವಿಂದ ಬಿಡು ಎಂದು ಮನಸ್ಸಿನಲ್ಲೇ ಅಂದುಕೊಂಡು ಅವನಿಗೆ. ‘ಹಾಗಿದ್ರೆ ಒಂದು ಕೆಲಸ ಮಾಡು. ಮೊದಲು ನೀನು ಬೆಂಗಳೂರಿಗೆ ಬಾ. ಫೆಬ್ರವರಿ 13 ಮತ್ತು 14 ರಂದು ಸಂಜೆ ಇಬ್ಬರೂ ಬಿಡುವು ಮಾಡ್ಕೊಳ್ಳಿ. ಆಕೇನ ಒಂದು ಚೆಂದದ ರೊಮ್ಯಾಂಟಿಕ್ ಜಾಗಕ್ಕೆ ಕರೆದುಕೊಂಡು ಹೋಗು. ಚೆಂದದ ಅಂದರೆ ಜಾತ್ರೆ ಥರ ಜನ ಇರೊ ಕಲರ್ ಫುಲ್ ಜಾಗ ಅಲ್ಲ. ನಿಮಗೆ ಅಂತಲೇ ಪ್ರೈವೆಸಿ ಇರಬೇಕು. ಅಂಥ ಜಾಗ ನೋಡು. ಪ್ರೇಮದ ಗುಂಗಲ್ಲಿ ಮೊಬೈಲ್ ಚಾರ್ಜ್ ಮಾಡ್ಕೊಳ್ಳೋದನ್ನ ಮರೀಬೇಡಿ. ಫುಲ್ ಚಾರ್ಜ್ ಇಟ್ಕೊಂಡು ಸಂಜೆ 6ಕ್ಕೆ ಆನ್ ಲೈನ್ ನಲ್ಲಿ ಒಂದು ಡ್ರಾಮಾ ನೋಡು.. ನೋಡೋದಷ್ಟೇ ಅಲ್ಲ… ನೀನೂ ಮತ್ತು ನಿನ್ನ ಹುಡುಗಿ ಅದರಲ್ಲಿ ಇಂಟರಾಕ್ಟ್ ಮಾಡಬಹುದು.. ಬೇಕಿದ್ದರೆ ನಿನ್ನ ಹುಡುಗಿ ಕೈ ಹಿಡಿದುಕೊಂಡೇ ಕೂತು ಇಂಟರಾಕ್ಟ್ ಮಾಡು’ ಅಂದೆ.

‘ನಾಟಕ ನಡೆಯೋವಾಗ ಇಂಟರಾಕ್ಟಾ..!’ ಅಂತಂದ. ಅವನಿಗೆ ಆಶ್ಚರ್ಯವಾಗಿತ್ತು. ‘ಹೌದು ಅದೇ ಆ ನಾಟಕದ ಸ್ಪೆಷಾಲಿಟಿ. ಅದರಲ್ಲೂ ನಿಮ್ಮಂಥವರಿಗಂತಲೇ ‘ಬಟರ್ ಫ್ಲೈ ಥಿಯೇಟರ್ ಕಂಪನಿ’ ಅವರು ಫೆಬ್ರವರಿ ಹದಿಮೂರು ಮತ್ತು ಹದಿನಾಲ್ಕರಂದು ಸಂಜೆ ಶೋ ಮಾಡ್ತಿದಾರೆ. ಆ ಶೋ ಹೆಸರು ‘ಟು ಡೇಟ್ ಆರ್ ನಾಟ್ ಟು ಡೇಟ್..’. ಇದು ಬಟರ್ ಫ್ಲೈ ಥಿಯೇಟರ್ ಕಂಪನಿಯ ಸಂಸ್ಥಾಪಕ ಹಾಗೂ ಕಲಾ ನಿರ್ದೇಶಕ ಐಸಲೀನ್ ಗೊನ್ಸಾಲೀವ್ಸ್ ಮಹಾಶಯನ ಆಶಯ ಮತ್ತು ಆಯೋಜನೆ. ಅವರ ಶೋ ನಲ್ಲಿ ನೀವು ಶೇಕ್ಸ್ ಪಿಯರ್ ನ ‘ರೋಮಿಯೋ ಜ್ಯೂಲಿಯಟ್ ಆಗಬಹುದು. ಒಫೀಲಿಯಾ ಆಗಬಹುದು… ಎಲ್ಲ ನಿಮಗೆ ಬಿಟ್ಟದ್ದು…’ ಅಂದೆ.

ಮಿತ್ರ ತುಂಬ ಸೀರಿಯಸ್ಸಾಗಿ ‘ಡೋಂಟ್ ಜೋಕ್..’ ಅಂದ. ನಿಜ ಹೇಳಿದರೂ ಸೀರಿಯಸ್ಸಾಗೋಯ್ತೇ ಅಂದುಕೊಂಡು ಮತ್ತೆ ವಿವರಿಸಿದೆ. ‘ಇಲ್ಲ ಮಾರಾಯ.. ನಿಜ ಹೇಳ್ತಿದ್ದೀನಿ. ಇದು ಇಂಟರಾಕ್ಟಿವ್ ಪ್ರೊಡಕ್ಷನ್. ಇಲ್ಲಿ ಪ್ರೇಕ್ಷಕರು ತಮ್ಮ ಡೇಟಿಂಗ್ ಅನುಭವಗಳನ್ನ ಹಂಚಿಕೊಳ್ತಾ ಒಂದು ಶೋನ ಕೋ-ಕ್ರಿಯೇಟ್ ಮಾಡಿಕೊಳ್ಳಬಹುದು. ಹಾಗೇ ತಮ್ಮ ಡೇಟಿಂಗ್ ಅನುಭವಗಳನ್ನ ಹೇಳ್ತಾ… ಕ್ಯಾರೆಕ್ಟರ್ ಗಳು ಅನ್ ಟ್ಯಾಂಗಲ್ ಆಗೋಕೆ ಸಹಾಯ ಮಾಡಬಹುದು… ನೋಡು ಏನ್ಮಾಡ್ತೀಯಾ ಅಂತ. ಡೇಟಿಂಗ್ ಎಕ್ಸ್ ಪೀರಿಯನ್ಸೇನಾದರೂ ಉಂಟಾ..?’ ಅಂತ ಕೊಂಚ ರೇಗಿಸಿ ಕೇಳಿದೆ.

ಅವನು ಮತ್ತೆ ನಾಚಿಕೊಂಡ. ‘ನಾಚ್ಕೊಳ್ಳೋದು ಸಾಕು. ನೋಡು ಯೋಚನೆ ಮಾಡು. ‘ಟು ಡೇಟ್ ಆರ್ ನಾಟ್ ಟು ಡೇಟ್..’ ಪ್ರೊಡಕ್ಷನ್ ಕೊಂಚ ಯುನೀಕ್ ಆಗಿರೋಥರ ಇದೆ.. ನೀವು ನಿಮ್ಮ ಡೇಟಿಂಗ್ ಅನುಭವ ಹಂಚಿಕೊಂಡರೆ ಹಂಚಿಕೊಳ್ಳಿ.. ಇಲ್ಲ ಬಿಡಿ.. ಆದರೆ ಕೈ ಹಿಡಿದುಕೊಂಡು ಕೂತ್ಕೊಳ್ಳಿ..’ ಅಂತ ನಕ್ಕೆ. ಅವನೂ ನಕ್ಕು ಫೋನಿಟ್ಟ.

ಇಷ್ಟೂ ಮಾತನ್ನ ಕೇಳಿಸಿಕೊಳ್ಳುತ್ತಿದ್ದ ನನ್ನ ಗೆಳೆಯ ತೆಲಂಗಾಣದ ನನ್ನ ಮಿತ್ರನ ಜೊತೆ ನಾನು ಮಾತಾಡುತ್ತಿದ್ದಾಗ ನನ್ನನ್ನೇ ನೋಡುತ್ತಿದ್ದ. ನಾನು ಮೊಬೈಲ್ ಜೇಬಿಗಿರಿಸಿಕೊಂಡು ಹುಬ್ಬು ಎಗರಿಸಿ ಅವನನ್ನ ನೋಡಿ ನಕ್ಕೆ. ಇಷ್ಟೊತ್ತು ನನ್ನ ಜೊತೆ ನವತಾರುಣ್ಯದ ಪ್ರೇಮಿ ಮಾತಾಡಿದರೆ ಈಗ ಸಂದೇಹಿ ಗೆಳೆಯ ಪ್ರಶ್ನೆಗಳನ್ನ ಎತ್ತಲು ಆರಂಭಿಸಿದ.

‘ನಿಜಕ್ಕೂ ಆ ಥರದ ಒಂದು ಥಿಯೇಟರ್ ಕಂಪನಿ ಇದೆಯಾ…? ಅಥವಾ ನೀನು ಅವನನ್ನ ಸುಮ್ಮನೆ ರೇಗಿಸೋಕೆ ಮತ್ತು ಮಿಸ್ ಲೀಡ್ ಮಾಡಿ ಮಜ ತೆಗೆದುಕೊಳ್ಳೋಕೆ ಸುಳ್ಳು ಹೇಳಿದ್ಯಾ..?’ ಅಂತ ಕೇಳಿದ.

ಇದೊಳ್ಳೆ ಕಥೆ ಆಯ್ತಲ್ಲ ಅಂದುಕೊಂಡು.. ‘ಇಲ್ಲಪ್ಪೋ… ನಿಜವೇ ಹೇಳಿದ್ದು. ಹೀಗೊಂದು ಪ್ರಯೋಗ ನಡೆಸ್ತಿದ್ದಾರೆ ಬಟರ್ ಫ್ಲೈ ಥಿಯೇಟರ್ ಕಂಪನಿಯವರು. ಇದಕ್ಕೂ ಮುಂಚೆ ಈ ತರಹದ ಆನ್ ಲೈನ್ ಪ್ರೊಡಕ್ಷನನ್ನ ಕ್ರಿಸ್ಮಸ್ ಸಮಯದಲ್ಲಿ ಕ್ರಿಸ್ಮಸ್ ಕ್ಯಾರೊಲ್ ಅಂತೇನೋ ಮಾಡಿದ್ದರು. ಅದು ಸಕ್ಸಸ್ ಆಯ್ತು. ಇದೇ ಸ್ಫೂರ್ತಿಯಲ್ಲಿ ಈಗ ಪ್ರೇಮಿಗಳಿಗೆ ಅಂತ ಶೋ ಆಯೋಜನೆ ಮಾಡ್ತಿದಾರೆ. ಇದು ಮುಗಿದ ತರುವಾಯ ಮಾರ್ಚ್ ನಲ್ಲಿ ‘ಆಲೀಸ್ ಇನ್ ವಂಡರ್ ಲ್ಯಾಂಡ್..’ ಅಂತ ಶೋ ಮಾಡಬೇಕು ಅಂತ ಯೋಜನೆ ಹಾಕ್ಕೊಂಡಿದ್ದಾರೆ. ಹಾಗೇ ಬೇಸಿಗೆ ಕಾಲದ ಹೊತ್ತಿಗೆ ಇಡೀ ಇಂಗ್ಲೆಂಡಿನಾದ್ಯಂತ ಒಂದು ಓಪನ್ ಏರ್ ಶೋ ಮಾಡಬೇಕು ಅಂತಲೂ ಇದ್ದಾರೆ. ಅದು ಯಾವುದು ಗೊತ್ತಾ..? ಶೇಕ್ಸ್ ಪಿಯರ್ ನ ‘ಮಿಡ್ ಸಮ್ಮರ್ ನೈಟ್ ಡ್ರೀಮ್ಸ್..’. ಮುಖ್ಯ ಅಲ್ಲಿ ಲಾಕ್ ಡೌನ್ ನಿರ್ಬಂಧ ಸಡಿಲ ಆಗಲಿ ಅಂತ ಕಾಯ್ತಿದ್ದಾರೆ..’ ಅಂತ ವಿವರಿಸಿದೆ.

ನನ್ನ ಮಾತಿನಲ್ಲಿ ನಂಬಿಕೆ ತಳೆದ ಗೆಳೆಯ ‘ಅದ್ಯಾಕೆ ಹಾಗೆ ಅವರನ್ನ ರೇಗಿಸ್ತಿದ್ದೆ. ನಿನಗೆ ತಮಾಷೆ ಅಲ್ಲವಾ…?’ ಅಂತ ಕೇಳಿದ.
ರೇಗಿಸದೆ ಏನ್ಮಾಡಲಿ? ಈ ವ್ಯಾಲೆಂಟೈನ್ಸ್ ಡೇ ಮತ್ತು ಪ್ರೇಮದ ಹುರುಪು ನೋಡ್ತಿದ್ದರೇನೇ ನಗು ಬರುತ್ತದೆ. ಇದನ್ನೇ ಗೆಳೆಯನಿಗೆ ಹೇಳಿದೆ. ‘ನಗು ಯಾಕೆ…? ಅದು ಅವರವರ ಇಷ್ಟ. ಏನೋ ಸಂಭ್ರಮಿಸ್ತಾರೆ ಬಿಡು’ ಅಂದ.

ಹೇಳಿದೆ- ‘ಅಲ್ಲ ಗುರುವೇ… ನಾನು ಕಾಲದ ವೈಚಿತ್ರ್ಯದ ಬಗ್ಗೆ ಯೋಚಿಸ್ತಿದ್ದೇನೆ ಅಷ್ಟೇ. ಮೊದಲಾಗಿದ್ದರೆ ಮದುವೆ ಸಮಯದವರೆಗೂ ಹೆಣ್ಣಿಗೆ ಗಂಡಿನ ಮುಖ ಮತ್ತು ಗಂಡಿಗೆ ಹೆಣ್ಣಿನ ಮುಖ ಕಾಣಿಸುತ್ತಿರಲಿಲ್ಲ. ಅಥವಾ ಕಾಣಿಸಿದ್ದರೂ ಇದು ತೀರಾ ಅಪರೂಪ. ಆದರೆ ಆ ದಿನಗಳಲ್ಲಿ ಮದುವೆಗಳು ಒಂದು ವಾರ ಕಾಲ ನಡೆಯುತ್ತಿದ್ದವು. ಈಗ ನೋಡು. ಮದುವೆಯನ್ನ ಒಂದು ನಿಮಿಷದಲ್ಲಿ ಹಾರ ಬದಲಿಸಿ ಸಹಿ ಹಾಕಿ ಮಾಡಿಕೊಳ್ಳಬಹುದು. ಆದರೆ ಪ್ರೇಮ ನಿವೇದನೆಗೆ ಹಲವು ಸೋಪಾನಗಳು ನಿರ್ಮಾಣ ಆಗಿವೆ..’

‘ಸೋಪಾನ..?’ ಅಂತ ಗೆಳೆಯ ರಾಗ ತೆಗೆದ. ಸೋಪಾನ ಅಂದರೆ ಅವನಿಗೆ ಅರ್ಥವಾಯಿತೋ ಅಥವಾ ಅವನು ಯಾವ ಅರ್ಥದಲ್ಲಿ ಪ್ರಶ್ನಾರ್ಥಕ ಚಿಹ್ನೆ ಹಾಕಿದನೋ ಅಂದುಕೊಳ್ಳುತ್ತಲೇ ‘ಹು ಸೋಪಾನಗಳೇ. ಅಂದರೆ ಮೆಟ್ಟಿಲುಗಳು. ಈ ವ್ಯಾಲೆಂಟೈನ್ಸ್ ಡೇ ಇದ್ಯಲ್ಲ ಗುರುವೇ… ಅದು ಕಡೆಯ ದಿನ ಈಗ. ಆದರೆ ಅದಕ್ಕೆ ಮುಂಚೆ ಒಂದಷ್ಟು ದಿನಗಳು ಇವೆ…’ ಅಂದೆ.

ಇಲ್ಲಿ ಪ್ರೇಕ್ಷಕರು ತಮ್ಮ ಡೇಟಿಂಗ್ ಅನುಭವಗಳನ್ನ ಹಂಚಿಕೊಳ್ತಾ ಒಂದು ಶೋನ ಕೋ-ಕ್ರಿಯೇಟ್ ಮಾಡಿಕೊಳ್ಳಬಹುದು. ಹಾಗೇ ತಮ್ಮ ಡೇಟಿಂಗ್ ಅನುಭವಗಳನ್ನ ಹೇಳ್ತಾ… ಕ್ಯಾರೆಕ್ಟರ್ ಗಳು ಅನ್ ಟ್ಯಾಂಗಲ್ ಆಗೋಕೆ ಸಹಾಯ ಮಾಡಬಹುದು…

‘ಯಾಕೆ..?’ ಅಂದ ಗೆಳೆಯ. ಹೇಳಿದೆ- ‘ಏನು ಸುಮ್ಮನೆ ಮಾತಾ? ಪ್ರಪೋಸ್ ಮಾಡೋದು ಅಂದ್ರೆ..? ಭಂಡನಾದರೆ ಯದ್ವಾತದ್ವಾ ‘ಪ್ರೀತಿಸ್ತ್ಯಾ ಇಲ್ವಾ..?’ ಅಂತ ಕೇಳಿಬಿಡ್ತಾನೆ. ಮಿಕ್ಕವರು ಹಾಗಲ್ಲ. ಅವರು ಸ್ಲೊ. ದಿನಕ್ಕೆ ಒಂದೇ ಮೆಟ್ಟಲು ಹತ್ತಿ ನಿಂತುಬಿಡ್ತಾರೆ. ಇನ್ನು ನಾಳೇನೇ ಮುಂದಿನ ಮೆಟ್ಟಿಲಿಗೆ ಕಾಲು ಅಲುಗಿಸೋದು. ಹೇಗೆ ಅಂದರೆ… ಈಗ ಫೆಬ್ರವರಿ 7 ಇದ್ಯಲ್ಲ… ಅದು ‘ರೋಸ್ ಡೇ’ ಅಂತೆ. ಕೆಂಪು ರೋಸ್ ಕೊಟ್ಟರೆ ಅದು ಲವ್ವು ಮತ್ತು ಅಫೆಕ್ಷನ್ ಅಂತೆ. ಪಿಂಕ್ ಕೊಡೋದು ಯಾರಿಗೆ ಅಂದರೆ- ಅವರು ಸಾಮಾನ್ಯ ಗೆಳೆಯರಿಗಿಂತ ಹೆಚ್ಚಂತೆ ಮತ್ತು ಲವರ್ ಗಿಂತ ಕೊಂಚ ಕಡಿಮೆ ಅಂತೆ. ಹಳದಿ ರೋಸ್ ಯಾರಿಗೆ ಕೊಡೋದು? ಅದು ಕ್ಲೋಸ್ ಫ್ರೆಂಡ್ಸ್ ಗಂತೆ. ಮಾಡೋಕೆ ಬೇರೆ ಕ್ಯಾಮೆ ಇದೆಯಾ..? ಇಲ್ಲ ಅಲ್ವಾ..? ಈಗ ಫೆಬ್ರವರಿ 8ಕ್ಕೆ ಬಾ. ಅದು ಪ್ರಪೋಸ್ ಡೇ ಅಂತೆ. ರೋಸ್ ಕೊಟ್ಟ ಮೇಲೆ ಪ್ರೇಮ ಅರುಹಬೇಕಲ್ಲ.. ಅದಕ್ಕೊಂದು ದಿನ. ಫೆಬ್ರವರಿ 9 ‘ಚಾಕಲೇಟ್ ಡೇ’ ಅಂತೆ. ಆ ದಿನ ಚಾಕಲೇಟ್ ಕೊಡಿಸಿ ‘ನಿನ್ನ ಎಲ್ಲ ಧಾವಂತ ಬಿಟ್ಟು ಸುಮ್ಮನೆ ಚಾಕಲೇಟ್ ತಿಂತಿರು’ ಅನ್ನಬೇಕಂತೆ. ಎಂಗೆ.. ಮಜ ಅಲ್ವಾ..? ಫೆಬ್ರವರಿ 10 ಟೆಡ್ಡಿ ಡೇ ಅಂತೆ. ಅವತ್ತು ಏನಂದರೆ ಏನೂ ಮಾಡದ ಬಟ್ಟೆ ಕರಡಿ ಕೊಡಿಸಿ ‘ನನಗೆ ನೀನೂ ಹೀಗೆ ಕರಡಿ ಥರ..’ ಅನ್ನಬೇಕಂತೆ..’. ಫೆಬ್ರವರಿ 11 ಪ್ರಾಮಿಸ್ ಡೇ. ಅವತ್ತು ಒಬ್ಬರಿಗೊಬ್ಬರು ‘ಇಬ್ಬರೂ ಕಡೇವರೆಗೂ ಜತೆಗಿರಾಣ’ ಅಂತ ಪ್ರಾಮಿಸ್ ಮಾಡ್ಕಬೇಕಂತೆ. ಫೆಬ್ರವರಿ 12 ಹಗ್ ಡೇ ಅಂತೆ. ಪ್ರಾಮಿಸ್ ಮಾಡಿದ ಮೇಲೆ ಜೀವ ತಡೆಯುತ್ಯೇ..? ತಬ್ಬಿಕೊಳ್ಳೋಕೆ ಏನು? ಅದನ್ನ ಅವತ್ತು ಮಾಡಬೇಕಂತೆ. ಫೆಬ್ರವರಿ 13 ಕಿಸ್ ಡೇ ಅಂತೆ. ಹಗ್ ಮಾಡಿದ ಮೇಲೆ ನಿಯಂತ್ರಣ ತಪ್ಪದಿದ್ದರೆ ಹೇಗೆ? ಮುತ್ತು ಕೊಡೋಕೆ ಒಂದು ದಿನ. ಆಮೇಲೆ ಕಡೆಗೆ ಮುತ್ತು ಕೊಟ್ಟ ಮಾರನೆ ದಿನದ ಹೊತ್ತಿಗೆ ವ್ಯಾಲೆಂಟೈನ್ಸ್ ಡೇ ಫೈನಲಿ ಅದು ‘ಡೇ ಆಫ್ ಲವ್’ ಅಂತೆ.. ಉಫ್…..!’ ಅಂದೆ.

ನಾನು ನಿರೂಪಿಸಿದ ಶೈಲಿ ಕೇಳಿ ಗೆಳೆಯ ನಕ್ಕ. ನಿಜ ಮಾರಾಯ ಅಂತ ನಾನೂ ನಕ್ಕೆ. ಪ್ರೇಮ ಎಷ್ಟು ವಿಚಿತ್ರ ಅಲ್ವಾ ಅಂತ ಗೆಳೆಯ ಕೇಳಿದ. ‘ವಿಚಿತ್ರ ಅನ್ನೋದಕ್ಕಿಂತ ತರಾವರಿ ಅನ್ನಬಹುದು. ಪ್ಲೇಟೊ ಪ್ರೇಮವನ್ನ ‘ಗ್ರೇವ್ ಮೆಂಟಲ್ ಡಿಸೀಸ್’ ಅಂದ. If love is the answer, could you please rephrase the question’ ಅಂದಿದ್ದಾಳೆ ಲಿಲಿ ಟಾಮ್ ಲಿನ್ ಅನ್ನೋ ನಟಿ.

ಜನ ಪ್ರೇಮದಲ್ಲಿ ಬೀಳೋಕೆ ಗ್ರಾವಿಟೇಷನ್ ಕಾರಣ ಅಲ್ಲ ಅಂದವರು ಐನ್ ಸ್ಟೈನ್. ‘ಬದುಕು ಒಂದು ಹೂವಿನ ಹಾಗೆ, ಪ್ರೇಮ ಅದರೊಳಗಿನ ಮಧುವಿನ ಹಾಗೆ..’ ಅನ್ನೋದು ವಿಕ್ಟರ್ ಹ್ಯೂಗೊ ಉವಾಚ. ‘ಪ್ರೇಮ ಅನ್ನೋದು ಸಮಗ್ರ. ನಾವುಗಳು ಅದರ ತುಣುಕುಗಳು ಮಾತ್ರ’ ಅಂದಿದಾನೆ ರೂಮಿ. ಆದರೆ ಪ್ರೇಮಿಗಳ ಮಾತಿನ ಧಾಟಿ ಬೇರೆ. ‘ನನಗೆ ಪ್ರೇಮ ಅನ್ನುವುದು ಏನು ಅಂತ ತಿಳಿದಿದ್ರೆ ಅದಕ್ಕೆ ನೀನು ಕಾರಣ..’ ಅಂತಾರೆ. ಮತ್ತೆ ಕೆಲವರು If you live to be hundred, I want to live to be hundred minus one day so I never have to live without you… ಹೀಗೂ ಕೆಲವರು ಮಾತಾಡ್ತಾರೆ…’

ಇಂಥ ಮಾತುಗಳನ್ನ ಕೇಳಿಸಿಕೊಳ್ಳುವಾಗ ನನಗೆ ಇವು ತೀರಾ ನಾಟಕೀಯದ ಮಾತುಗಳು ಅನಿಸುತ್ತವೆ. ಇಂಥವು ನೆನಪಾಗುವಾಗೆಲ್ಲ ನನಗೆ ಬಿಟ್ಟೂಬಿಡದೆ ಹಿಂದೊಮ್ಮೆ ವೃತ್ತಿ ನಾಟಕ ಕಂಪನಿಯಲ್ಲಿ ನಡೆದ ಪ್ರಸಂಗದ ನೆನಪಾಗುತ್ತದೆ. ಇದನ್ನ ನಾನು ಎಲ್ಲೋ ಓದಿದ್ದೆ.

ಅದೊಂದು ವೃತ್ತಿ ನಾಟಕ ತಂಡ. ದಿನನಿತ್ಯ ನಾಟಕ ನಡೆಯುತ್ತಲೇ ಇರುತ್ತದೆ ಮತ್ತು ನಡೆಯಲೇ ಬೇಕು. ಯಾಕೆಂದರೆ ಅದು ಹೊಟ್ಟೆಪಾಡಿನ ಕಾಯಕ. ನಾಟಕ ಮಂದಿಯೇನು ಪ್ರೇಮಕ್ಕೆ ಹೊರತೆ..? ಒಮ್ಮೆ ನಾಟಕ ನಡೆಯುತ್ತಿದೆ. ಅದು ರಾಮಾಯಣ ನಾಟಕ. ನಮಗೆ ಗೊತ್ತಿರುವ ರಾಮಾಯಣದಲ್ಲಿ ಸೀತೆಯನ್ನ ಅಪಹರಿಸಿಕೊಂಡು ಹೋಗುವವನು ರಾವಣ. ಆದರೆ ಆ ವೃತ್ತಿ ನಾಟಕ ತಂಡದಲ್ಲಿ ಆಂಜನೇಯನ ಪಾರ್ಟಿನವನಿಗೂ ಸೀತೆ ಪಾರ್ಟಿನಾಕೆಗೂ ಪ್ರೇಮ ಕುದುರಿದೆ. ರಾಮಾಯಣ ನಾಟಕ ನಡೆಯುತ್ತಿದ್ದ ಹೊತ್ತಿಗೆ ಆಂಜನೇಯ ಮತ್ತು ಸೀತೆ ಮಾಯ. ಆಂಜನೇಯ ಸೀತೆಯನ್ನ ಅಪಹರಿಸಿಕೊಂಡು ಹೋದ ಅಂತ ನಿಜದ ಪ್ರಸಂಗವನ್ನ ತಮಾಷೆಯಾಗಿ ವಿವರಿಸಿದ್ದನ್ನು ಒಂದು ಲೇಖನದಲ್ಲಿ ಓದಿದ್ದೆ. ಕಡೆಗೆ ಆಂಜನೇಯ ಮತ್ತು ಸೀತೆ ಪಾತ್ರಧಾರಿಗಳು ಏನಾದರು..? ಮಾಹಿತಿ ಇಲ್ಲ. ಪ್ರೇಮ ಅಂದರೆ ಹೀಗೆ… ಎಂದು ನಗುತ್ತಾ ಗೆಳೆಯನಿಗೆ ವಿವರಿಸಿದೆ. ಮತ್ತೆ ನಕ್ಕೆವು.

‘ನಮ್ಮಲ್ಲಿ ಸೀರಿಯಸ್ ನಾಟಕಗಳೇ ಇರೋದು ಅಂತಿದ್ದೆ ನಿನ್ನ ಫ್ರೆಂಡಿಗೆ. ಲವ್ ಸಬ್ಜೆಕ್ಟ್ ಯಾಕೆ ಟಚ್ ಮಾಡಲ್ಲ… ಇವರುಗಳು..?’ ಅಂತ ಕೇಳಿದ.

‘ಟಚ್ ಮಾಡೇ ಇಲ್ಲ ಅಂತ ಅಲ್ಲ… ಮಾಡಿದ್ದಾರೆ. ಆದರೆ ಶೇಕ್ಸ್ ಪಿಯರ್ ಸೃಷ್ಟಿಸಿದನಲ್ಲ.. ರೋಮಿಯೋ ಜ್ಯೂಲಿಯಟ್… ಆ ರೀತಿ ಭವ್ಯವಾಗಿ ಪ್ರೇಮ ಮೈದಾಳಿದ್ದು ಕಡಿಮೆ. ನಾವು ಪ್ರೇಮದ ಸಬ್ಜೆಕ್ಟ್ ತೆಗೆದುಕೊಂಡರೂ ರೊಮಿಯೋ ಜ್ಯೂಲಿಯಟ್ ಹಾಗೆ ಪ್ರೇಮದ ತೀವ್ರತೆ ಮತ್ತು ದುರಂತ ಕಾಣಿಸೊ ಬದಲು ನಾವು ಪ್ರೇಮದ ಬಗ್ಗೆ ಹೆಚ್ಚು ಚಿಂತಿಸಲಿಕ್ಕೆ ಶುರುಮಾಡ್ತೀವಿ.. ಅದು ನಮ್ಮವೇ ಕೂಡ ಹೌದು ಒಂದು ರೀತಿ ವೀಕ್ನೆಸ್ ಕೂಡ ಹೌದು…’ ಎಂದು ವಿವರಿಸುವಾಗ ನನಗೆ ಪ್ರೇಮದ ಕುರಿತ ಕೆಲವು ರಂಗ ಪ್ರಯೋಗಗಳು ನೆನಪಾದವು.

ಮೊದಲಿಗೆ ನೆನಪಿಗೆ ಬಂದದ್ದು ಟೆರೆನ್ಸ್ ರಾಟಿಗನ್ ಬರೆದ ‘ಇನ್ ಪ್ರೈಸ್ ಆಫ್ ಲವ್..’ ನಾಟಕ. ಇದು ನಟ ರೆಕ್ಸ್ ಹ್ಯಾರಿನ್ಸನ್ ಹಾಗೂ ಪತ್ನಿ ಹಾಗೂ ನಟಿ ಕೆ ಕೆಂಡ್ರಾಲ್ ರ ನಿಜ ಜೀವನವನ್ನ ಸರಿಸುಮಾರಾಗಿ ಅನುಕರಿಸಿ ಬರೆದಿರುವ ನಾಟಕ. ಇದು ಹೊರದೇಶದ್ದಾಯಿತು.

ಭಾರತೀಯ ಸಂದರ್ಭದಲ್ಲಿ ನಾವುಗಳೇನೂ ಪ್ರೇಮದ ಅಭಿವ್ಯಕ್ತಿಯಲ್ಲಿ ಹಿಂದೆ ಉಳಿದಿಲ್ಲ. ಆರ್ ಗುರ್ನೆ ಅವರ ‘ಲವ್ ಲೆಟರ್ಸ್..’ ಶಾಲಾ ದಿನಗಳಲ್ಲಿ ಮೊಳೆಯುವ ಪ್ರೇಮ ಮತ್ತು ಕೈಬರಹದ ಪ್ರೇಮ ಪತ್ರಗಳಲ್ಲಿ ನಾಟಕ ಕಟ್ಟಿಕೊಡುತ್ತದೆ. ನಂತರ ಮನವ್ ಕೌಲ್ ಅವರ ‘ಚುಹಾಲ್’ ನಾಟಕ ಕೂಡ ಪ್ರೇಮಿಸಬೇಕಾ ಬೇಡವಾ ಎನ್ನುವ ತುಮುಲವನ್ನ ಜೋಡಿಯೊಂದರ ಮೂಲಕ ಚಿತ್ರ ಕಟ್ಟಿಕೊಡುತ್ತದೆ.

‘ಪಿಯಾ ಬೆಹುರ್ ಪಿಯಾ..’ ಇದು ತುಂಬ ಪ್ರಸಿದ್ಧಿ ಗಳಿಸಿ ಮನೆಮಾತಾದ ನಾಟಕ. ಇದು ಶೇಕ್ಸ್ ಪಿಯರ್ ನ ‘ಟ್ವೆಲ್ತ್ ನೈಟ್’ ನಾಟಕದ ರೂಪಾಂತರ ರೂಪ. ಇದನ್ನ ನೌಟಂಕಿ ಶೈಲಿಯಲ್ಲಿ ಕಟ್ಟಿದ್ದಾರೆ. ಹಾಗೇ ‘ಕಾಂಸ್ಟಲೇಷನ್ಸ್’ ಎನ್ನುವ ಪ್ರಯೋಗ. ಇದರಲ್ಲಿ ಪಾರ್ಟಿಕಲ್ ಫಿಸಿಕ್ಸ್ ಮತ್ತು ಪ್ರೇಮದ ಸಾಧ್ಯತೆಗಳನ್ನ ಕಾಣಿಸಲಾಗಿದೆ. ಆದರೆ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿರುವ ನಾಟಕ ಜೆರೋಮ್ ಕೆಲ್ಟರ್ ಅವರ ‘ಡಿಯರ್ ಲಯರ್..’. ಇದು ನಾಟಕಕಾರ ಜಾರ್ಜ್ ಬರ್ನಾಡ್ ಷಾ ಹಾಗೂ ಮಿಸಸ್ ಪ್ಯಾಟ್ರಿಕ್ ನಡುವಿನ ನವಿರು ಪ್ರೇಮದ ಅಫೇರ್ ಕುರಿತ ನಾಟಕ. ಸತ್ಯದೇವ್ ದುಬೇ ನಿರ್ದೇಶಿಸಿದ ನಾಟಕದಲ್ಲಿ ನಾಸಿರುದ್ದೀನ್ ಶಾ ಹಾಗೂ ರತ್ನಾ ಪಾಟಕ್ ನಟಿಸಿದ್ದರು. ಪ್ರೇಮ ಪತ್ರಗಳನ್ನ ಓದುವ ಬಗೆಯ ಕೆಲವು ದೃಶ್ಯಗಳು ನೆನಪಾಗತೊಡಗಿದವು…

ಹೀಗೇ ನೆನಪಿಸಿಕೊಳ್ಳುತ್ತಾ ಗೆಳೆಯನಿಗೆ ಹೇಳುತ್ತಾ ಹೋದೆ. ಜೊತೆಗೆ ‘ಈ ನಾಟಕಗಳಲ್ಲಿ ಪ್ರೇಮವಿದ್ದರೂ, ಅದರ ಪ್ರಸ್ತಾಪವಿದ್ದರೂ ಯಾಕೊ ಅದು ಫೀಲ್ ಆಗೋದಿಲ್ಲ. ಅಥವಾ ನನಗೆ ಆಗಲಿಲ್ಲವೋ ಏನೋ. ಈ ಪ್ರಯೋಗಗಳೆಲ್ಲ ಹೇಗೆ ಅಂದರೆ ಈರುಳ್ಳಿಯ ಸಿಪ್ಪೆ ಸುಲಿಯುತ್ತಾ ಸಾಗಿದಂತೆ ಕಡೆಗೆ ಏನೂ ಉಳಿಯುವುದಿಲ್ಲವಲ್ಲ… ಹಾಗೆ ನಮ್ಮಲ್ಲಿ ಏನೂ ಉಳಿಸದೆ ಹಾಗೇ ಬರಿದು ಭಾವ ಉಂಟು ಮಾಡಿಬಿಡುತ್ತವೇನೋ ಅಂತ ಬಹಳ ಸಲ ನನಗೆ ಅನಿಸಿದೆ. ಆದರೆ ಶೇಕ್ಸ್ ಪಿಯರ್ ಪ್ರೇಮದ ಬಗ್ಗೆ ಬರೆದಾಗ ಅದಕ್ಕೆ ವಿಶೇಷ ಮೆರುಗು ಬರುತ್ತದೆ. ಜೊತೆಗೆ ಇಂದಿನ ಪ್ರೇಮಿಗಳು ಮತ್ತು ಅವರ ವ್ಯಾಲೆಂಟೈನ್ಸ್ ಡೇ ಆಚರಣೆ, ಅದರ ಹಿಂದಿನ ಘಟ್ಟಗಳು ಎಲ್ಲ ನೆನಸಿಕೊಂಡರೆ ನಗು ಬರುತ್ತದೆ ಎಂದು ಗೆಳೆಯನಿಗೆ ಹೇಳಿದೆ.

‘ಮತ್ತೆ ಇನ್ನೆಂಗಿರಬೇಕು ಪ್ರೇಮ ಅಂದರೆ..?’ ಅಂತ ಅವನು ಪ್ರಶ್ನೆ ಎಸೆದ.

ಹೇಗೆ ಹೇಳುವುದು..? ಕೆ.ಎಸ್.ನ ತುಂಬ ಚೆನ್ನಾಗಿ ಹೇಳಿರುವುದರಿಂದ ನಾನು ಹೇಗೆ ಹೇಳಿದರೂ ಡಲ್ ಆಗುತ್ತದೆ ಎಂದು ನನಗೆ ಅನೇಕ ಸಲ ಅನಿಸಿದೆ. ಕೆ.ಎಸ್.ನ ಪ್ರಕಾರ ಪ್ರೇಮಾಗಮ ಹೇಗಾಗುತ್ತದೆ ಅಂದರೆ…

ಬದುಕ ಬಳ್ಳಿಯು ದಿವ್ಯಲೀಲೆಯ ಹಿಮಂತದಲಿ
ಹೂವ ಹೆತ್ತವಳಲ್ಲ ತಾನು ಎಂದು
ಬೇಸರದ ಹಸುರುಟ್ಟು ಕೊರಗುತಿರೆ, ಹೂಬನದಿ
ನೂರು ಬಣ್ಣದ ಚಿಟ್ಟೆ ಮೇಲೆ ಬಂದು,

ಎಲೆಗೊಂದು ಹೂವಾಗಿ ಕುಳಿತು, ಬಲುಸೊಗಸಾಗಿ
ಬಡತನದ ಭಂಗವನು ತೊಡೆದುವಂದು.
ಯಾವ ಲೋಕದ ಕನಸೊ ಒಲುಮೆಯಡಿಯಾಳಾಗಿ
ಗಂಭೀರ ಮೌನದಲಿ ಮೆರೆಯಿತಂದು…!

ತೆಲಂಗಾಣದ ಮಿತ್ರ ಮತ್ತು ಆ ಹುಡುಗಿ ‘ಟು ಡೇಟ್ ಆರ್ ನಾಟ್ ಟು ಡೇಟ್..’ ನೋಡಿದರೆ ಇಲ್ಲವೆ? ಮುಂದೊಂದು ದಿನ ಹೇಳ್ತೇನೆ…