ನಾಗರಪಂಚಮಿಯಲ್ಲಿ ತವರು ಮನೆಗೆ ಬಂದ ಹೆಣ್ಣುಮಕ್ಕಳು ಜೋಕಾಲಿ ಆಡುವ ಜೋಷ್ ಬಗ್ಗೆ ಬರೆಯಲು ಶಬ್ದಗಳು ಸಾಲುತ್ತಿಲ್ಲ. ಒಂದು ಜೋಕಾಲಿಯಲ್ಲಿ ಇಬ್ಬರು ಮಹಿಳೆಯರು ಎದುರು ಬದುರಾಗಿ ಜೋಕಾಲಿ ಜೀಕುವಾಗ ಶಕ್ತಿಯ ಜೊತೆಗೇ ಅವರ ಸ್ವಾತಂತ್ರ್ಯದ ಸುಖ ಎದ್ದು ಕಾಣುತ್ತಿತ್ತು. ಹುತ್ತಕ್ಕೆ ಹಾಲೆರೆಯುವ ಮೂಢನಂಬಿಕೆ ಜೊತೆಗೇ ಅದನ್ನು ಮೀರಿ ನಮ್ಮ ಜನರ ಆಶಯಗಳ ಬಗ್ಗೆಯೂ ಚಿಂತಿಸುವ ಶಕ್ತಿಯನ್ನು ನಾವು ಪಡೆದಾಗ ಇವೆಲ್ಲ ಅರ್ಥವಾಗುವವು.
‘ನೆನಪಾದಾಗಲೆಲ್ಲ’ ಸರಣಿಯ 24ನೇ ಕಂತಿನಲ್ಲಿ ಹಬ್ಬಗಳು ಹೇಗೆ ಜನಮನವನ್ನು ಬೆಸೆಯುವಲ್ಲಿ ಸಹಕಾರಿಯಾಗಬಲ್ಲವು ಎಂಬುದನ್ನು ಹೇಳಿದ್ದಾರೆ ರಂಜಾನ್‌ ದರ್ಗಾ

 

ನಾವಿಗಲ್ಲಿಯ ಜನ ಸಮುದಾಯ ಒಂದು ರೀತಿಯಲ್ಲಿ ಮಿನಿ ಭಾರತವನ್ನೇ ಪ್ರತಿನಿಧಿಸುವ ರೀತಿಯಲ್ಲಿತ್ತು. ಎಲ್ಲ ಜಾತಿ ಧರ್ಮಗಳ ಜನರು, ವಿವಿಧ ಭಾಷಿಕರು ಮತ್ತು ಎಲ್ಲ ಧರ್ಮೀಯರು ಯಾರೊಬ್ಬರ ಜೀವನವಿಧಾನವನ್ನು ಪ್ರಶ್ನಿಸದೆ ಗೌರವಿಸುತ್ತ ಬದುಕುತ್ತಿದ್ದರು. ವಿವಿಧ ಹಬ್ಬಗಳು ಮತ್ತು ಆಚರಣೆಗಳ ಹುಟ್ಟಿನ ಬಗ್ಗೆ ಅವರೆಂದೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಅವೆಲ್ಲ ಕೇವಲ ಸಂಪ್ರದಾಯಗಳಾಗಿ ಕಾಣದೆ ತಮ್ಮ ಬದುಕಿನ ಸಂತೋಷದ ಕ್ಷಣಗಳಾಗಿಯೂ ಕಾಣುತ್ತಿದ್ದವು.

ಯುಗಾದಿ, ದೀಪಾವಳಿ, ದಸರಾ, ಹೋಳಿಹುಣ್ಣಿಮೆ, ಗಣೇಶ ಚತುರ್ಥಿ, ನಾಗರಪಂಚಮಿ, ಸಂಕ್ರಮಣ, ರಂಜಾನ್, ಬಕ್ರೀದ್, ಈದಮಿಲಾದ, ಮೊಹರಂ, ಬುರ್ಖೇಪೋಷ್ ದರ್ಗಾದ ಉರುಸ್, ಎರಡು ಕಿಲೊ ಮೀಟರ್ ದೂರದ ಖ್ವಾಜಾ ಅಮೀನ ದರ್ಗಾದ ಉರುಸ್, ಸಿದ್ಧೇಶ್ವರ ಜಾತ್ರೆ, ಬಸವ ಮತ್ತು ಶಿವಾಜಿ ಜಯಂತಿ, ಏಳುಮಕ್ಕಳ ತಾಯಿಯ ಜಾತ್ರೆ, ಮರಗಮ್ಮ ಜಾತ್ರೆ ಮುಂತಾದವುಗಳನ್ನು ಆಚರಿಸುವಲ್ಲಿ ಮತ್ತು ಭಾಗವಹಿಸುವಲ್ಲಿ ಅವರಿಗೆ ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ನಿರ್ಬಂಧಗಳಿರಲಿಲ್ಲ.

(ದುರ್ಗವ್ವ ದ್ಯಾಮವ್ವ)

ನಮ್ಮ ಮನೆ ಈ ವಿವಿಧ ಜಾತಿಗಳವರ ಮನೆಗಳ ಮಧ್ಯೆ ಇದ್ದುದರಿಂದ ನನ್ನ ತಾಯಿ ಎಲ್ಲ ಹಬ್ಬಗಳನ್ನೂ ಆಚರಿಸುತ್ತಿದ್ದಳು. ಅಂದರೆ ಆಯಾ ಹಬ್ಬಗಳಿಗೆ ಸಂಬಂಧಿಸಿದ ಅಡುಗೆಗಳನ್ನು ತಯಾರಿಸುತ್ತಿದ್ದಳು. ಎಲ್ಲವೂ ಆಕೆಯ ಹಬ್ಬಗಳೇ ಆಗಿದ್ದವು. ಮುಸ್ಲಿಮರು ಹೀಗೆ ಇರಬೇಕು, ಹಾಗೆ ಇರಬೇಕು ಎಂಬುದರ ಬಗ್ಗೆ ನನ್ನ ತಾಯಿ ತಂದೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಮನುಷ್ಯರು ಹೇಗೆ ಇರಬೇಕು ಎಂಬುದು ಮಾತ್ರ ಅವರಿಗೆ ಗೊತ್ತಿತ್ತು. ಅವರು ಬದುಕಿದ ರೀತಿಯೆ ನನ್ನ ಜೀವನದ ಬಹುದೊಡ್ಡ ಪಾಠವಾಯಿತು. ಜಾತಿ, ಧರ್ಮ, ದೇಶ ಮತ್ತು ಭಾಷೆಗಳ ಮೂಲಕ ಮನುಷ್ಯರನ್ನು ಅರ್ಥೈಸುವ ಹೀನ ಸ್ಥಿತಿ ನನಗೆಂದೂ ಬರಲಿಲ್ಲ. ‘ಯಾವುದೇ ಧರ್ಮದ ಒಳ್ಳೆಯವರು ಮಾತ್ರ ನನ್ನವರು’ ಎಂಬುದರ ಅರಿವು ನನಗೆ ಬಹಳ ಬೇಗ ಬಂದಿತು. ಇದಕ್ಕಾಗಿ ನನ್ನ ತಂದೆ ತಾಯಿ ಮತ್ತು ನನ್ನ ಪರಿಸರದ ಬಹುಪಾಲು ಜನರಿಗೆ ನಾನು ಸದಾ ಋಣಿಯಾಗಿದ್ದೇನೆ.

ನನ್ನ ತಾಯಿ ಎಲ್ಲ ಹಬ್ಬಗಳನ್ನು ಆಚರಿಸುವುದಕ್ಕೆ ಮುಖ್ಯ ಕಾರಣವೆಂದರೆ ಬೇರೆಯವರ ಮಕ್ಕಳು ಹಬ್ಬದೂಟ ಮಾಡುವಾಗ ನಾವು ಮಕ್ಕಳು ಆ ಊಟದಿಂದ ವಂಚಿತರಾಗಬಾರದು ಎಂಬುದಾಗಿತ್ತು. ಹೀಗಾಗಿ ನನ್ನ ಮತ್ತು ನನ್ನ ತಮ್ಮಂದಿರರಿಗೆ ಡಬಲ್ ಧಮಾಕಾ.

(ಯುಗಾದಿ ಗುಡಿಪಾಡ್ಯ ಧ್ವಜ)

ಒಂದನೇ ಜನವರಿ ಹೊಸ ವರ್ಷದ ಮೊದಲ ದಿನ ಎಂದು ನನಗೆ ಎಂದೂ ಅನಿಸಲಿಲ್ಲ. ‘ಯುಗಾದಿಯೇ ವರ್ಷದ ಮೊದಲ’ ದಿನ ಅನಿಸಿತು. ಗುಡಿಪಾಡ್ಯವೇ ನಿಜವಾದ ವರ್ಷಾರಂಭ ಎಂದು ಇಡೀ ನಿಸರ್ಗವೇ ಸಾರುತ್ತಿತ್ತು. ಸಂತ ಸೇನಾ ರಸ್ತೆಯ ಆರಂಭದಲ್ಲಿರುವ ಅಶ್ವತ್ಥ ವೃಕ್ಷದ ಚಿಗುರೆಲೆಗಳು ಮತ್ತು ರಸ್ತೆಯ ಕೊನೆಯಲ್ಲಿ ಇದ್ದ ದುಂಡನೆಯ ಬೇವಿನ ಮರದ ತುಂಬ ಹಸಿರೆಲೆಗಳನ್ನು ಮೀರಿಸುವಷ್ಟು ತುಂಬಿದ ಬಿಳಿ ಹೂಗಳು ನನ್ನ ಮನಸ್ಸಿನಲ್ಲಿ ಇಂದಿಗೂ ಕಂಗೊಳಿಸುತ್ತಲೇ ಇವೆ. ಈ ಎರಡೂ ಮರಗಳ ಮಧ್ಯದಲ್ಲಿರುವ ಸಂತ ಸೇನಾ ರಸ್ತೆಯ ಎರಡೂ ಕಡೆಗಳಲ್ಲಿನ ಮನೆಗಳು ಮತ್ತು ಚಾಳ (ವಠಾರ)ಗಳಲ್ಲಿ ವಸಂತನ ಆಗಮನಕ್ಕೆ ಗುಡಿತೋರಣವ ಕಟ್ಟಿದ ರೀತಿಯಲ್ಲಿ ಬಣ್ಣ ಬಣ್ಣದ ಗುಡಿ (ಧ್ವಜ)ಗಳನ್ನು ಮನೆ ಮತ್ತು ಕಿಟಕಿಗಳ ಮೇಲೆ ಹಾರಿಸುವುದರಿಂದ ಇಡೀ ಪ್ರದೇಶ ರಂಗುರಂಗಾಗಿ ಕಾಣುತ್ತಿತ್ತು. ಚಿಕ್ಕದಾದ ಬಿದಿರಿನ ಗಳಕ್ಕೆ ವಿವಿಧ ಬಣ್ಣಗಳಿಂದ ಕಂಗೊಳಿಸುವ ರೇಷ್ಮೇ ಬಟ್ಟೆಗಳು ಇಲ್ಲವೆ ಆಕರ್ಷಕವಾದ ಬ್ಲೌಸ್ ಪೀಸ್‌ಗಳನ್ನು ಜೋತುಬಿಟ್ಟನಂತರ, ಬೇವಿನ ಎಸಳು ಮತ್ತು ಸಕ್ಕರೆ ಅಚ್ಚಿನ ಹಾರ ಹಾಕಿ, ಅವುಗಳ ಮೇಲೆ ಸಿಂಗರಿಸಿದ ಪುಟ್ಟ ಗಡಿಗೆ, ಚರಿಗೆ ಅಥವಾ ಮಿಳ್ಳಿಯನ್ನು ಸಿಗಿಸುತ್ತಿದ್ದರು. ವಸಂತನ ಆಗಮನದ ಧ್ವಜ ನಮ್ಮ ಮನೆ ಮೇಲೂ ಹಾರಾಡುತ್ತಿತ್ತು.

ನಾಗರಪಂಚಮಿಯಲ್ಲಿ ತವರು ಮನೆಗೆ ಬಂದ ಹೆಣ್ಣುಮಕ್ಕಳು ಜೋಕಾಲಿ ಆಡುವ ಜೋಷ್ ಬಗ್ಗೆ ಬರೆಯಲು ಶಬ್ದಗಳು ಸಾಲುತ್ತಿಲ್ಲ. ಒಂದು ಜೋಕಾಲಿಯಲ್ಲಿ ಇಬ್ಬರು ಮಹಿಳೆಯರು ಎದುರು ಬದುರಾಗಿ ಜೋಕಾಲಿ ಜೀಕುವಾಗ ಶಕ್ತಿಯ ಜೊತೆಗೇ ಅವರ ಸ್ವಾತಂತ್ರ್ಯದ ಸುಖ ಎದ್ದು ಕಾಣುತ್ತಿತ್ತು. ಹುತ್ತಕ್ಕೆ ಹಾಲೆರೆಯುವ ಮೂಢನಂಬಿಕೆ ಜೊತೆಗೇ ಅದನ್ನು ಮೀರಿ ನಮ್ಮ ಜನರ ಆಶಯಗಳ ಬಗ್ಗೆಯೂ ಚಿಂತಿಸುವ ಶಕ್ತಿಯನ್ನು ನಾವು ಪಡೆದಾಗ ಇವೆಲ್ಲ ಅರ್ಥವಾಗುವವು.

ನಾವಿಗಲ್ಲಿಯ ಹಿಂದಿನ ಮಠಪತಿ ಗಲ್ಲಿಯ ರಸ್ತೆ ಬಹಳ ವಿಶಾಲವಾಗಿದೆ. ರಸ್ತೆಯ ದಂಡೆಯಲ್ಲಿನ ಮನೆಯ ಮುಂದೆ, ದಸರಾ ಸಂದರ್ಭದಲ್ಲಿ ಪೆಂಡಾಲ್ ಹಾಕಿ ನಾಡದೇವಿಯನ್ನು ಕೂಡಿಸುತ್ತಿದ್ದರು. ದಿನವೂ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆ ಸಮಿತಿಯ ಅಧ್ಯಕ್ಷ ಮಹಿಬೂಬಸಾಬ್ ಎಂಬವರು ಇದ್ದರು. ಅವರದು ಸಾರಾಯಿ ವ್ಯವಹಾರವಿದ್ದುದರಿಂದ ಜನರು ‘ಟಿಂಚರ್ ಮಹಿಬೂಬಸಾಬ್’ ಎಂದೇ ಕರೆಯುತ್ತಿದ್ದರು. ಸಾತ್ವಿಕರಾಗಿದ್ದ ಅವರು ಬಹಳ ದಿಲ್‍ದಾರ್ ಆಗಿದ್ದು ಕೋಮುಸೌಹಾರ್ದದ ಸಂಕೇತದಂತಿದ್ದರು. ನಾಡದೇವಿ ಕೂಡಿಸುವ ವೇದಿಕೆಯನ್ನು ಅವರ ಮಾರ್ಗದರ್ಶನದ ಮೇಲೆಯೆ ರಚಿಸಲಾಗುತ್ತಿತ್ತು. ನಾವೆಲ್ಲ ಹುಡುಗರು ವೇದಿಕೆ ನಿರ್ಮಾಣ ಕಾರ್ಯದ ವೇಳೆ ಅಲ್ಲೇ ಓಡಾಡುತ್ತಿದ್ದೆವು. ಅವರು ಪ್ರತಿದಿನ ಸಾಯಂಕಾಲ ಬಂದು ಎಲ್ಲ ಕೆಲಸಗಳನ್ನು ಚೆಕ್ ಮಾಡುತ್ತಿದ್ದರು. ನಾಡದೇವಿ ಉತ್ಸವಕ್ಕಾಗಿ ಅವರು ಎಂದೂ ಲೆಕ್ಕಾಚಾರ ಮಾಡದೆ ಖುಷಿಯಿಂದ ಖರ್ಚು ಮಾಡುತ್ತಿದ್ದರು. ಆ ರೀತಿ ವೈಭವದಿಂದ ಕೂಡಿದ ನಾಡದೇವಿ ಉತ್ಸವ ವಿಜಾಪುರ ನಗರದ ಯಾವುದೇ ಭಾಗದಲ್ಲಿ ನಡೆಯುತ್ತಿರಲಿಲ್ಲ. ಹೀಗಾಗಿ ಪ್ರತಿದಿನ ಸಾಯಂಕಾಲ ಜನಜಾತ್ರೆ ಸೇರುತ್ತಿತ್ತು.

(ನಾಡದೇವಿ ವೇದಿಕೆ ಸ್ಥಳ)

ಕೆಲ ತಿಂಗಳುಗಳ ಹಿಂದೆಯಷ್ಟೇ ಚೈನಾಯುದ್ಧದಿಂದಾಗಿ ದೇಶ ಕಷ್ಟನಷ್ಟ ಅನುಭವಿಸಿತ್ತು. ಆಗ ಯುದ್ಧದ ಪರಿಣಾಮವಾಗಿ ಜೋಳದ ಬೆಲೆ ಸೊಲಗಿಗೆ ಒಂದು ರೂಪಾಯಿ ಆಯಿತು. 25 ರೂಪಾಯಿಗೆ ಒಂದು ಕ್ವಿಂಟಲ್ ಸಿಗುವ ಜೋಳದ ಬೆಲೆ 50 ರೂಪಾಯಿ ಆದರೆ ಬಡವರ ಗತಿ ಏನಾಗಬಹುದು? ಅದುವೆ ನನ್ನ ತಾಯಿಗೆ ಆಯಿತು. ರೂಪಾಯಿಗೆ ಒಂದು ಸೊಲಗಿ ಆಗಿದ್ದಕ್ಕೆ ನನ್ನ ತಾಯಿ ಮನೆಯಂಗಳದಲ್ಲಿ ಕುಳಿತು ‘ಬಡವರು ಹೇಗೆ ಬದುಕಬೇಕು’ ಎಂದು ಅತ್ತದ್ದು ನನ್ನ ಮೇಲೆ ಬಹಳ ಪರಿಣಾಮ ಬೀರಿತ್ತು.

ಯುದ್ಧಗಳು, ಬರಗಾಲ, ಹಸಿಬರ ಮುಂತಾದವುಗಳು ವ್ಯಾಪಾರಿಗಳಿಗೆ ಲಾಭದಾಯಕವಾದ ದಿನಗಳೇ ಆಗಿದ್ದವು. ಸುಗ್ಗಿಯಲ್ಲಿ 25 ರೂಪಾಯಿಗೆ ಒಂದು ಕ್ವಿಂಟಲ್ ಜೋಳ ಸಿಗುತ್ತಿತ್ತು. ಆಗ ನನ್ನ ತಂದೆ 100 ರೂಪಾಯಿ ಕೊಟ್ಟು ನಾಲ್ಕು ಚೀಲ ಜೋಳ ತಂದು ಗಡಗಂಚಿಯ ಮೇಲೆ ಪೇರಿಸಿಡುತ್ತಿದ್ದರು. ಆದರೆ ಯುದ್ಧದ ನಂತರ ಜೋಳದ ಬೆಲೆ ಕ್ವಿಂಟಲ್‌ಗೆ 50 ರೂಪಾಯಿ ಆದರೆ ಬಡವರು ಬದುಕುವುದು ಹೇಗೆ ಎಂಬ ಚಿಂತೆ ಶುರುವಾಯಿತು.

ಮುಸ್ಲಿಮರು ಹೀಗೆ ಇರಬೇಕು, ಹಾಗೆ ಇರಬೇಕು ಎಂಬುದರ ಬಗ್ಗೆ ನನ್ನ ತಾಯಿ ತಂದೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಮನುಷ್ಯರು ಹೇಗೆ ಇರಬೇಕು ಎಂಬುದು ಮಾತ್ರ ಅವರಿಗೆ ಗೊತ್ತಿತ್ತು. ಅವರು ಬದುಕಿದ ರೀತಿಯೆ ನನ್ನ ಜೀವನದ ಬಹುದೊಡ್ಡ ಪಾಠವಾಯಿತು.

ಸಜ್ಜನ್ ಸರ್ ತಂಗಿ ಶಾಂತಾ ನನಗಿಂತಲೂ ಒಂದು ಇಯತ್ತೆ ಮುಂದಾಗಿದ್ದರು. ನಾಡಹಬ್ಬದ ಕಾರ್ಯಕ್ರಮಗಳ ಆರಂಭದ ದಿನವೇ ಶಾಂತಾ “ಏ ಮೇರೆ ವತನ್ಕೆ ಲೋಗೋ ಜರಾ ಆಂಕ್‌ಮೇ ಭರಲೋ ಪಾನಿ” ಎಂಬ ಹಾಡನ್ನು ಹೃದಯಸ್ಪರ್ಶಿಯಾಗಿ ಹಾಡಿದರು. ಆ ಹಾಡಿನೊಳಗಿನ ಯುದ್ಧದ ಕ್ರೌರ್ಯದ ಅರಿವಾದಾಗ ನನ್ನ ತಾಯಿ ನೆನಪಾಗುತ್ತಿದ್ದಳು. ಯುದ್ಧದ ದುಷ್ಪರಿಣಾಮದಿಂದಾಗಿ ದಿನಸಿ ವಸ್ತು ಮುಂತಾದವುಗಳ ಬೆಲೆ ಏರಿಕೆಯಾಗಿದ್ದಕ್ಕೆ ನನ್ನ ತಾಯಿ ಅಂಗಳದಲ್ಲಿ ಕುಳಿತು ಅತ್ತಿದ್ದು ಕಣ್ಣ ಮುಂದೆ ಕಟ್ಟಿದಂತಾಗಿ ನಾನು ಅತ್ತಿದ್ದುಂಟು.

(ಖ್ವಾಜಾ ಅಮೀನ್ ದರ್ಗಾ)

ರಂಜಾನ್ ಮತ್ತು ಬಕ್ರೀದ್ ಹಬ್ಬಗಳಲ್ಲಿ ಹೊಸಬಟ್ಟೆಯ ಹುರುಪು ಮತ್ತು ಮನೆಗೆ ಬಂದು ಹಬ್ಬದ ಶುಭಾಶಯಗಳನ್ನು ಹೇಳುವವರ ಭೇಟಿಯ ಖುಷಿ. ಈ ಹಬ್ಬಗಳು ಬಡವರಿಗೆ ಆರ್ಥಿಕವಾಗಿ ಒಂದಿಷ್ಟು ನೆಮ್ಮದಿ ಕೊಡುವಂಥವು. ಯುಗಾದಿ ಕಹಿಬೇವು ಮತ್ತು ಸಿಹಿಬೆಲ್ಲದೊಂದಿಗೆ ಕಹಿಸಿಹಿ ಬದುಕಿನ ಮಹತ್ವ ತಿಳಿಸುವಂಥದ್ದು. ದೀಪಾವಳಿಯಲ್ಲಿ ಕೆಂಪುಬಣ್ಣದ ಪರಪರಿ ಹಾಳೆಯಿಂದ ತಯಾರಿಸಿದ ಆಯತಾಕಾರದ ದೊಡ್ಡದಾದ ಆಕಾಶಬುಟ್ಟಿಯಲ್ಲಿ ಕಕ್ಕಡ ಹಚ್ಚಿ ಹೊಗೆ ತುಂಬಿದಾಗ ಅದು ಬೆಳಕಿನ ಉಂಡೆಯಂತೆ ಕಾಣುತ್ತ ಮೇಲೆ ಮೇಲೆ ಹೋಗಿ ದೂರದಲ್ಲಿ ಚುಕ್ಕೆಯಾಗಿ ಕಾಣುವವರೆಗೂ ನೋಡುವ ಆನಂದ. ಇದನ್ನೆಲ್ಲ ದೊಡ್ಡ ಹುಡುಗರು ಮಾಡುತ್ತಿದ್ದರು. ನನ್ನಂಥ ಬಾಲಕರದು ನೋಡುವ ಖುಷಿ ಮಾತ್ರ.

ನಾನು ಎಲ್ಲಕ್ಕಿಂತ ಹೆಚ್ಚು ಖುಷಿ ಪಡುತ್ತಿದ್ದುದು ದಸರಾ ಮತ್ತು ಸಂಕ್ರಾಂತಿ ಹಬ್ಬಗಳನ್ನು. ಮಾತು ಬಿಟ್ಟವರು ಮಾತನಾಡುವ ಹಬ್ಬಗಳವು. ನಾವು ಶಾಲೆಯಲ್ಲಿ ಫೀ (ಠೂ) ಬಿಟ್ಟಾಗ ಬಹಳ ಚಡಪಡಿಸುತ್ತಿದ್ದೆವು. ಒಂದೇ ಕ್ಲಾಸಿನಲ್ಲಿದ್ದರೂ ಮಾತನಾಡದೆ ಇರುವುದು ಮನದಲ್ಲಿ ಬಹಳ ಚಡಪಡಿಕೆಯನ್ನು ಸೃಷ್ಟಿಸುತ್ತಿತ್ತು. ಇಬ್ಬರಿಗೂ ಗೆಳೆತನ ಬೇಕಾಗಿದ್ದರೂ ಸ್ವಾಭಿಮಾನ ಕಾಡುತ್ತಿತ್ತು.

ಮಾತುಬಿಟ್ಟವರ ಚಡಪಡಿಕೆಯನ್ನು ಗುರುತಿಸಿದ ಗೆಳೆಯರು ಎರಡು ಗುಂಪುಗಳಾಗಿ ಮಾತುಬಿಟ್ಟ ಇಬ್ಬರನ್ನೂ ಎಳೆದುಕೊಂಡು ತರುತ್ತಿದ್ದರು. ಇಬ್ಬರ ಕೈ ಹಿಡಿದು ಮುಂದೆ ಮಾಡುತ್ತಿದ್ದರು. ಇಬ್ಬರ ತೋರು ಬೆರಳು ಮತ್ತು ಕಿರುಬೆರಳುಗಳನ್ನು ಕೂಡಿಸುತ್ತಿದ್ದರು. ನಂತರ ಹೆಬ್ಬೆರಳನ್ನು ಕೂಡಿಸುತ್ತಿದ್ದರು. ನಂತರ ಇಬ್ಬರೂ ಹೆಬ್ಬೆರಳುಗಳನ್ನು ತಿರುವಿದಾಗ ಅಟೊಮೆಟಿಕ್ ಆಗಿ ಹ್ಯಾಂಡ್‌ಶೇಕ್‌ ಆಗುತ್ತಿತ್ತು. ಹೀಗೆ ಯಾರ ಮೀಸೆಯೂ ಮಣ್ಣಾಗದೆ ಗೆಳೆತನದ ಮರು ಆರಂಭವಾಗುತ್ತಿತ್ತು. ಆಗ ಅವರಿಬ್ಬರಿಗೂ ಸಿಗುವ ಆನಂದ ಹೇಳತೀರದಷ್ಟಿರುತ್ತಿತ್ತು. ಕೆಲವೊಂದು ಸಲ ಇಂಥ ಘಟನೆಗಳು ಘಟಿಸದೆ ಇರುವಾಗ ದಸರಾ ಮತ್ತು ಸಂಕ್ರಾಂತಿಯಂತೂ ಇದ್ದೇ ಇರುತ್ತಿದ್ದವು. ದಸರಾದಲ್ಲಿ ಎಲ್ಲ ಗೆಳೆಯರು ಸೇರಿ ಬನ್ನಿ ಕೊಡಲು ಮೇಷ್ಟ್ರುಗಳ ಮನೆಗೆ ಹೋಗುತ್ತಿದ್ದೆವು. ಆಗ ಮಾತು ಬಿಟ್ಟವರೆಲ್ಲ ಗೆಳೆಯರ ಸಹಾಯದೊಂದಿಗೆ ಒಬ್ಬರಿಗೊಬ್ಬರು ಬನ್ನಿ ಕೊಟ್ಟು ಗೆಳೆಯರಾಗುವ ಮೂಲಕ ಗೆಳೆತನದ ವಿರಹ ವೇದನೆಯಿಂದ ಮುಕ್ತರಾಗುತ್ತಿದ್ದೆವು. ಬನ್ನಿ ಎಲೆಗಳನ್ನು ‘ಬಂಗಾರ’ವಾಗಿ ಹಂಚುತ್ತ ‘ನಾವು ನೀವು ಬಂಗಾರದಂಗ ಇರೋಣ’ ಎಂದು ಹೇಳುವುದು ಆಪ್ಯಾಯಮಾನವಾಗಿ ಮನಸ್ಸಿಗೆ ಮುದ ನೀಡುತ್ತಿತ್ತು.

ಸಂಕ್ರಾಂತಿ ಕೂಡ ಇಂಥದೇ ಸದವಕಾಶವನ್ನು ಒದಗಿಸುತ್ತಿತ್ತು. ಕುಸುರೆಳ್ಳು ಕೊಟ್ಟು ‘ನಾವು ನೀವು ಎಳ್ಳುಬೆಲ್ಲದಂಗ ಇರೋಣ’ ಎನ್ನುತ್ತಿದ್ದೆವು. ಹೀಗೆ ಯುಗಾದಿ ಬದುಕಿನ ಕಹಿಸಿಹಿಗಳ ಬಗ್ಗೆ ತೋರಿಸಿಕೊಟ್ಟರೆ ದಸರಾ ಆತ್ಮೀಯತೆಯ ಬಗ್ಗೆ ಸೂಚಿಸುತ್ತದೆ. ಸಂಕ್ರಾಂತಿ ‘ಎನಗಿಂತ ಕಿರಿಯರಿಲ್ಲ’ ಎಂಬ ಭಾವ ಮೂಡಿಸುತ್ತದೆ. ನಾಗರಪಂಚಮಿಯ ಜೋಕಾಲಿ ಚೇತೋಹಾರಿ ಅನುಭವ ನೀಡುತ್ತದೆ. ನಮ್ಮ ಹಬ್ಬಗಳು ಮೂಲಸ್ವರೂಪದಲ್ಲಿ ಏನೇ ಆಗಿರಬಹುದು. ಅವು ನಮ್ಮ ಜನರ ದೈನಂದಿನ ಬದುಕಿನಲ್ಲಿ ಯಾವ ಅರ್ಥ ಸ್ಫುರಿಸುತ್ತವೆ. ಹೇಗೆ ಅವು ಅವರ ಬದುಕಿಗೆ ನೆರವಾಗುತ್ತವೆ ಎಂಬುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.

(ರಂಗಪಂಚಮಿ)

ಮರಗಮ್ಮ, ದುರಗಮ್ಮ, ಏಳುಮಕ್ಕಳತಾಯಿ ಮುಂತಾದ ದೇವತೆಗಳ ಜಾತ್ರೆಗಳಲ್ಲಿ ನನಗೆ ಅಭಿರುಚಿ ಇದ್ದಿದ್ದಿಲ್ಲ. ಅದಕ್ಕೆ ಮುಖ್ಯ ಕಾರಣವೆಂದರೆ ಕುರಿ ಕೋಳಿ ಬಲಿ ಕೊಡುವುದನ್ನು ನನಗೆ ನೋಡಲಿಕ್ಕಾಗುತ್ತಿರಲಿಲ್ಲ. ನಮ್ಮ ಜನರ ಶ್ರದ್ಧೆಯ ಜೊತೆಗೆ ಮೂಢನಂಬಿಕೆಗಳನ್ನು ಕೂಡ ಇಂಥ ಜಾತ್ರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದಾಗಿತ್ತು.

ನಮ್ಮ ತಂದೆಯ ಊರ ಹೆಸರು ದರ್ಗಾ. ನಾವು ಸಣ್ಣವರಿದ್ದಾಗ ಆ ಹಳ್ಳಿ ವಿಜಾಪುರದಿಂದ 2 ಕಿಲೋ ಮೀಟರ್ ದೂರದಲ್ಲಿತ್ತು. ಆ ಕಡೆ ಕೂಡ ವಿಜಾಪುರ ಬೆಳೆದದ್ದರಿಂದ ಈಗ ಅದು ವಿಜಾಪುರದ ಭಾಗವಾದಂತಾಗಿದೆ. ಸೂಫಿಸಂತ ಖ್ವಾಜಾ ಅಮೀನುದ್ದೀನ ದರ್ಗಾ (ಸಮಾಧಿ) ಇಂದಾಗಿ ಆ ಹಳ್ಳಿಯ ಹೆಸರೂ ‘ದರ್ಗಾ’ ಆಗಿದೆ. ದರ್ಗಾದ ಉರುಸ್ (ಸೂಫಿ ಸಂತರ ಪುಣ್ಯತಿಥಿ) ವೇಳೆ ಆ ಹಳ್ಳಿಯ ಜನರೆಲ್ಲ ಒಂದಾಗಿ ಎಲ್ಲ ಕೆಲಸಕಾರ್ಯಗಳಲ್ಲಿ ಕೈಜೋಡಿಸುತ್ತಿದ್ದರು. ದರ್ಗಾಕ್ಕೆ ಸುಣ್ಣ ಹಚ್ಚುವುದು, ಅದರ ಬಂಗಾರದ ಕಳಸವನ್ನು ಸ್ವಚ್ಛಗೊಳಿಸುವುದು, ಉರುಸ್‌ಗೆ ಬರುವ ಜನರು ಉಳಿದುಕೊಳ್ಳಲು ಸಾಮೂಹಿಕ ವ್ಯವಸ್ಥೆ ಮಾಡುವುದು, ಇಡೀ ಪೌಳಿಯನ್ನು ಸ್ವಚ್ಛಗೊಳಿಸುವುದು ಹೀಗೆ ಎಲ್ಲ ಕಾರ್ಯಗಳು ಸಾಂಗವಾಗಿ ಸಾಗುತ್ತಿದ್ದವು.

(ದರ್ಗಾ ಜಹಾಗೀರದಾರ ಮಹಲ್)

ಆ ದರ್ಗಾದ ಉರುಸ್‌ಗೆ ಸಂಬಂಧಿಸಿದಂತೆ ಅನೂಚಾನವಾಗಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡು ಬಂದ ಮನೆತನಗಳು ಇಂದಿಗೂ ಆ ಜವಾಬ್ದಾರಿಗಳನ್ನು ನಿಭಾಯಿಸುವ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿವೆ. ಬೋವಿ ಜನಾಂಗದವರು ದರ್ಗಾದ ಜಹಗೀರದಾರ (ಸಜ್ಜಾದಾ ನಸೀನ್)ರ ಪಲ್ಲಕ್ಕಿಯನ್ನು ದರ್ಗಾದ ಉರುಸ್ ಸಂದರ್ಭದಲ್ಲಿ ಹೊರುತ್ತಾರೆ. ಒಂದು ವಿಶಾಲವಾದ ದಿನ್ನೆಯ ಮೇಲೆ ದರ್ಗಾ ಇದೆ. ಎದುರಿಗೆ ಸ್ವಲ್ಪ ದೂರದಲ್ಲಿ ಜಹಾಗೀರದಾರರ ಮಹಲ್ ಇದೆ. ಮಹಲಿನ ತಳಮನೆಯಲ್ಲಿ ಅವರ ಸಂಸಾರವಿದೆ. ಆದರೆ ನೆಲ ಅಂತಸ್ತಿನಲ್ಲಿ ಅವರ ‘ದರ್ಬಾರ ಹಾಲ್’ ಇದೆ. ಜನರು ಅವರನ್ನು ಭೇಟಿಯಾಗುವುದು ಅದೇ ಸ್ಥಳದಲ್ಲಿ. (ಇದೆಲ್ಲ 60 ವರ್ಷಗಳಷ್ಟು ಹಿಂದಿನ ಮಾತು. ಈಗ ಅದೆಲ್ಲ ಗತವೈಭವವಾಗಿರಬಹುದು.) ಉರುಸ್ ವೇಳೆ ಇದೇ ದರ್ಬಾರದಲ್ಲಿ ಜಹಗೀರದಾರರು ದರ್ಬಾರಿ ಆಸನದಲ್ಲಿ ಕುಳಿತುಕೊಳ್ಳುತ್ತಿದ್ದರು. ಶೇರವಾನಿ ಮತ್ತು ವರ್ಣರಂಜಿತ ರುಮಾಲಿನಲ್ಲಿ ಆ ಸುಂದರ ಪುರುಷ ರಾಜನ ಹಾಗೆ ಕಾಣುತ್ತಿದ್ದರು. ಜನರು ಅವರ ಬಳಿ ಹೋಗಿ ಸಲಾಂ ಮಾಡಿ, ಸಾಂಪ್ರದಾಯಿಕವಾದ ಭಂಗಿಯಲ್ಲಿ ಕೆಳಗಡೆ ಕುಳಿತು ಅವರಿಗೆ ಶುಭಾಶಯ ಹೇಳುತ್ತಿದ್ದರು. ಕೆಲವರು ಕಪ್ಪಕಾಣಿಕೆಯ ಹಾಗೆ ಕಾಣಿಕೆ ಕೊಡುತ್ತಿದ್ದರು. ಅವರ ಮುಂದೆ ಯಾವರೀತಿ ಕುಳಿತು ನಜರಾಣಾ (ಕಾಣಿಕೆ) ಅರ್ಪಿಸಬೇಕು ಎಂಬುದನ್ನು ನನ್ನ ತಂದೆ ದರ್ಬಾರದ ಹೊರಗಡೆ ಕಲಿಸಿಕೊಡಲು ಬಂದರು. ನಾನು ಹಾಗೆಲ್ಲ ಮಾಡುವುದಿಲ್ಲ ಎಂದು ಹೇಳಿದೆ. ‘ಹಾಗಾದರೆ ನೀನು ಇಲ್ಲೇ ಇರು. ನಾನು ಹೋಗಿ ಬರುವೆ’ ಎಂದು ತಿಳಿಸಿ ದರ್ಬಾರ ಒಳಗೆ ಹೋದರು. (ನಾನು ಹತ್ತು ವರ್ಷದ ಬಾಲಕನಾಗಿದ್ದರೂ ಅವರು ಎಂದೂ ಯಾವುದಕ್ಕೂ ಒತ್ತಾಯ ಮಾಡುತ್ತಿರಲಿಲ್ಲ. ನನ್ನ ಸ್ವತಂತ್ರ ವಿಚಾರಧಾರೆಗೆ ನನ್ನ ತಂದೆಯ ಕಾಣಿಕೆ ಬಹಳಷ್ಟಿದೆ.) ಆ ಜಹಾಗೀರದಾರ ಬಹಳ ಸಂಭಾವಿತ ಮತ್ತು ಗಂಭೀರ ಮನುಷ್ಯರಾಗಿದ್ದರು. ಆದರೆ ನನ್ನ ಬಾಲ್ಯದಲ್ಲೇ ಇಂಥ ಫ್ಯೂಡಲ್ ವ್ಯವಸ್ಥೆ ನನ್ನ ಮನಸ್ಸಿಗೆ ಒಪ್ಪುತ್ತಿರಲಿಲ್ಲ. ಉರುಸ್ ವೇಳೆ ರಾತ್ರಿಯಿಡೀ ಅವರ ಪಲ್ಲಕ್ಕಿ ಉತ್ಸವ ವೈಭವಯುತವಾಗಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಬಳಕೆಯಾಗುವ ಬಣ್ಣ ಬಣ್ಣದ ಬಟ್ಟೆಗಳಿಂದ ಕೂಡಿದ ಛತ್ರ, ಚಾಮರ, ಖಿಲ್ಲತ್ತು ಮುಂತಾದವುಗಳಿಂದ ಕೂಡಿದ ಆ ಮೆರವಣಿಗೆಯಲ್ಲಿ ಜನ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಮೆರವಣಿಗೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಆ ಪಲ್ಲಕ್ಕಿ ಹೊರುವುದರಲ್ಲಿ ಉತ್ಸುಕರಾಗಿರುತ್ತಿದ್ದರು. ಬೋವಿಗಳು ಪಲ್ಲಕ್ಕಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

ವಿಜಾಪುರದಲ್ಲಿ ಆಗ ಇನ್ನೂ ಆಟೊ ರಿಕ್ಷಾ ಬಂದಿದ್ದಿಲ್ಲ. ಸಿಟಿ ಬಸ್‌ಗಳೂ ಇರಲಿಲ್ಲ. ಬಹಳ ದಿನಗಳ ನಂತರ ಸೈಕಲ್ ರಿಕ್ಷಾ ಬಂದವು. ಮುಂದೊಂದು ದಿನ ಆ ಜಹಾಗೀರದಾರರನ್ನು ವಿಜಾಪುರದಲ್ಲಿ ಸೈಕಲ್ ರಿಕ್ಷಾದಲ್ಲಿ ನೋಡಿದೆ.

(ಚಿತ್ರಗಳು: ಸುನೀಲಕುಮಾರ ಸುಧಾಕರ)